Monday, July 31, 2006

'ಮಠ'ದ ಹಿನ್ನೆಲೆಯಲ್ಲಿ ಅನಿವಾಸಿ ಭಾಷೆ

ನಿನ್ನೆ ಜಗ್ಗೇಶ್ ನಟಿಸಿರೋ 'ಮಠ' ಸಿನಿಮಾ ನೋಡಿದ್ ಮೇಲೆ ನಾನು ಕರ್ನಾಟಕ ಬಿಟ್ಟು ಎಷ್ಟೋ ದಶಕಗಳು ಕಳೆದಂತೆನ್ನಿಸಿತು, ಮೊಟ್ಟ ಮೊದಲ್ನೇ ಬಾರಿ ಸಿನಿಮಾದಲ್ಲಿ ಆಡು ಭಾಷೆಯಲ್ಲಿರೋ ನಮ್ಮ್ ಕನ್ನಡ ಅರ್ಥವಾಗದಂತಾ ಪರಿಸ್ಥಿತಿ, ನಾನು ನಿಧಾನವಾಗಿ ಹೋಗಿದ್ದೇನೋ ಅಥವಾ ನನ್ನ ಆಡುಭಾಷೆ ನನ್ನಿಂದ ಆವಿಯಾಗಿ ಹೋಗಿದೆಯೋ ಯಾರಿಗೆ ಗೊತ್ತು?

ಪ್ರತಿಯೊಂದು ಆಡುಭಾಷೆಗೂ ಅದರದ್ದೇ ಆದ ಒಂದು ವೈಶಿಷ್ಟ್ಯ ಇರುತ್ತೆ, ಕೇವಲ ಬೇರೆ-ಬೇರೆ ಭಾಷೆಗಳ ಪದಗಳನ್ನ ಬಳಸಿ ಮಾತನಾಡ್ತಾರೆ ಅಂತಲ್ಲ, ಈ ಆಡುನುಡಿಯನ್ನ ಅದರ ನೇಟಿವ್ ಪರಿಸರದಲ್ಲಿ ಗಮನಿಸಿದಾಗ ಮೂಲಭೂತವಾಗಿ ಅದರಲ್ಲಿ ಒಂದು ಸ್ವಂತಿಕೆ ಇರುತ್ತೆ, ಅದೇ ಅದರ ವಿಶೇಷ. ಈ ಸ್ವಂತಿಕೆಯನ್ನ ಶಾಲೆಯಲ್ಲಿ ಕಲಿತು ನುಡಿಯಲ್ಲಿ ಪ್ರತಿಬಿಂಬಿಸೋದಕ್ಕಾಗಲ್ಲ, ಅದನ್ನ ಆಡಿಯೇ ಅನುಭವಿಸಬೇಕು. ಎಷ್ಟೋ ಜಾತಿ-ಮತ-ಪರಂಪರೆಗಳ ವೈವಿಧ್ಯಮಯ ವಾತಾವರಣದಲ್ಲಿ ನಮ್ಮ ನುಡಿಯ ವೇರಿಯೇಷನ್ನೂ ಸಹ ಅಷ್ಟೇ ಅಲ್ಲಿನ ಮಣ್ಣಿನ-ನೀರಿನ ಗುಣಕ್ಕೆ ಕಟ್ಟುಬಿದ್ದಿರುತ್ತದೆ. ನಾವು ಇಂಗ್ಲೀಷನ್ನ ಎಷ್ಟೇ ಚೆನ್ನಾಗಿ ಮಾತನಾಡಬಲ್ಲವರಾದ್ರೂ ಒಂಥರಾ ರೇಡಿಯೋದಲ್ಲಿ ಸುದ್ದಿ ಓದೋರ್ ಥರಾ ಕಂಡ್ ಬರ್ತೀವೇ ವಿನಾ ಆ ಭಾಷೆಯ ಜೊತೆಯಲ್ಲಿ ಬೆಳೆದು ಬಂದವರ ಹಾಗಾಗೋದಿಲ್ಲ - ಇವತ್ತಿಗೂ ಸಹ ನಮ್ಮ ಭಾರತೀಯ ಅಥವಾ ಇಂಗ್ಲೀಷ್ ಮೂಲಭಾಷೆಯಲ್ಲದ ಬೇರೆಯವರು ಯಾರೇ ಬರೆದ ಸಂದೇಶದಲ್ಲೂ ಸಹ ಆ ಸ್ವಂತಿಕೆ ಇರೋದಿಲ್ಲ, ಪದಗಳ ಬಳಕೆ ನಿರಾಳವಾಗಿರೋದಿಲ್ಲ, ಯಾವುದರ ಕುತ್ತಿಗೆ ಹಿಚುಕಿದ ಅನುಭವವೂ ಆಗೋದಿಲ್ಲ. ಅದೇ ನಾನೇ ಬರೆದ ಪ್ರತಿಯೊಂದು ಸಾಲನ್ನೂ ಗಮನಿಸುತ್ತಾ ಹೋದರೆ ಆ ಸ್ವಂತಿಕೆ ವಿಷಯಗಳ ಗಹನತೆಯಲ್ಲಿ ಮಾಯವಾಗುತ್ತದೆಯೇನೋ ಅನ್ನೋ ಹೆದರಿಕೆ ಹುಟ್ಟುತ್ತದೆ. ಈ ನೇಟಿವ್ ಭಾಷೆಯ ಪರಿಸರದಲ್ಲಿ ಹುಟ್ಟಿ ಬೆಳೆದೋರೆಲ್ಲ ದೊಡ್ಡ ಬರಹಗಾರರಾಗೋದಿಲ್ಲ, ಆದರೆ ಅವರವರು ಮಾತನಾಡಿದಾಗ ಅದರ ಸ್ವಂತಿಕೆ ಅದರಲ್ಲಿ ಇದ್ದೇ ಇರುತ್ತೆ.

'ಮಠ' ಸಿನಿಮಾದಲ್ಲಿ ಮುಖ್ಯವಾಗಿ ಏಳು ಪಾತ್ರಗಳು ಬರುತ್ತವೆ, ಸಿನಿಮಾದ ವಿಮರ್ಶೆ ಅದೂ-ಇದೂ ಅಂತ ಕಾಂಪ್ಲಿಕೇಷನ್ ಮಾಡೋ ಬದಲಿಗೆ, ಈ ಏಳೂ ಪಾತ್ರಗಳು ಬಳಸೋ ಭಾಷೆ ನನಗೆ ಬಹಳವಾಗಿ ಇಷ್ಟವಾಯಿತು, ಅದರಲ್ಲಿ ಆ ವೇರಿಯೇಷನ್ ಇದೆ, ಮೂಲವನ್ನು ಬಿಂಬಿಸೋ ತತ್ವವಿದೆ, ಬುದ್ಧಿವಂತರ ಸೋಗಿನಲ್ಲಿ ಸ್ವಂತಿಕೆಯನ್ನು ಕಳೆದುಕೊಳ್ಳದ ಸಹಜತೆ ಇದೆ. ಚಿತ್ರಕಥೆ ಬರೆಯೋರಿಗೆ ಆ ಪಾತ್ರ ಹೇಳಿದ್ದರಲ್ಲಿ ಏನೂ ಅರ್ಥವಿಲ್ಲ ಎಂದೆನಿಸಿದರೂ ಅಂತಹ ಚಿಕ್ಕ ಡೀಟೈಲನ್ನು ಹಿಡಿದು ಓದುಗರಿಗೆ/ಕೇಳುಗರಿಗೆ ಒಪ್ಪಿಸಿದಾಗಲೇ ಆ ಬರಹಗಾರನಿಗೆ ಜಯ ದೊರಕೋದು. 'ಮಠ'ದ ಪಾತ್ರಗಳು ತಮಗೆ ಒಪ್ಪಿಸಿದ ಪಾತ್ರಗಳ ಚೌಕಟ್ಟಿನಲ್ಲಿ ಅಚ್ಚುಕಟ್ಟಾಗೇ ನಿರ್ವಹಿಸಿದ್ದರೂ ಬಹಳ ದಿನಗಳ ನಂತರ ಕೇಳಿದ ಭಾಷೆಯಾದ್ದರಿಂದಲೋ, ಈ ರೀತಿ ಅನುಭವಗಳು ನಮಗಿಲ್ಲಿ ಪದೇ-ಪದೇ ಆಗದಿದ್ದುದರಿಂದಲೋ ಚಿತ್ರದುದ್ದಕ್ಕೂ ಬೇಕಾದಷ್ಟು ಸಂಭಾಷಣೆಗಳು ನನ್ನ ತಲೆಯ ಮೇಲೆ ಹಾದು ಹೋದವು - ಈ ಬಾರಿ ಮಧ್ಯದಲ್ಲಿ ತೊಂದರೆ ಮಾಡುವ ಯಾವ ಮಕ್ಕಳೂ ಇರಲಿಲ್ಲ, ಚಿತ್ರದಲ್ಲಿ ಎಲ್ಲವೂ ಸರಿಯಾಗಿಯೇ ಕೆಲಸ ಮಾಡುತ್ತಿತ್ತು - ಬಂದ ತೊಂದರೆಯೇನೆಂದರೆ ನಾನು ಚಿತ್ರದ ಸಂಭಾಷಣೆಯ ವೇಗಕ್ಕೆ ಹೊಂದಿಕೊಳ್ಳಲು ತೆಗೆದುಕೊಂಡ ಸಮಯ. ಹೀಗೆ ಬಂದ ಒಂದು ಸಂಭಾಷಣೆಯ ತುಣುಕನ್ನು ಹಿಡಿದು ಅದನ್ನು ಆಸ್ವಾದಿಸುವುದರಲ್ಲಿ ಮತ್ತೊಂದು ಬರುತ್ತಿತ್ತು, ಒಂದು ರೀತಿ ಮಾತಿನ ಮೇಲೆ ಮಾತು ಬಂದು ನನಗೆ ಆ ವೇಗಕ್ಕೆ ಹೊಂದಿಕೊಳ್ಳಲು ಹಲವಾರು ಕಡೆ ಕಷ್ಟವಾಯಿತು.

ನಾನು ದಿನವೂ ಕನ್ನಡವನ್ನು ಓದುತ್ತೀನಿ ಹಾಗೂ ಬರೀತೀನಿ (ಅಲ್ಲ, ಕುಟ್ಟುತ್ತೀನಿ) ನನ್ನಂಥವನಿಗೇ ಹೀಗೇ? ಕರ್ನಾಟಕದ ಉದ್ದಗಲಕ್ಕೆ ಎಷ್ಟೂ ಸಾದ್ಯವೋ ಅಷ್ಟು ಓಡಾಡಿದ್ದೇನೆ, ತುಸು ಕಷ್ಟಪಟ್ಟರೆ ಒಂದೈದು ಡಯಲೆಕ್ಟ್‌ಗಳನ್ನು ಮಾತನಾಡುತ್ತೇನೆ, ನನ್ನಂಥವನಿಗೇ ಹೀಗೇ? ಎಂದು ಕೇಳಿಕೊಂಡಾಗಲೆಲ್ಲ ಆ ಪ್ರಶ್ನೆಗಳಿಗೆ ಉತ್ತರವಾಗಿ ಕನ್ನಡವನ್ನು ಮಾತುಗಳನ್ನಾಗಿ ಕೇಳೋದಿಲ್ಲವಲ್ಲ, ಆ ಕೊರತೆಯನ್ನು ತುಂಬೋದು ಹೇಗೆ? ಎನ್ನುವ ಪ್ರಶ್ನೆಯೇ ಉತ್ತರವಾಗಿ ಬಂತು. ನಮಗಿಲ್ಲಿ ಬರೋದೇ ವರ್ಷಕ್ಕೆ ನಾಲ್ಕೈದು ಸಿನಿಮಾಗಳು, ಅದನ್ನು ಬಿಟ್ಟರೆ ಮನಪೂರ್ತಿಯಾಗಿ ಮಾತನಾಡುವ ಬೆರಳೆಣಿಕೆಯ ಸ್ನೇಹಿತರಿದ್ದರೂ ಅವರದ್ದೆಲ್ಲ ನನ್ನ ಪರಂಪರೆಯೇ - ಮಾತುಗಳು ಗ್ರಂಥಮಯ, ಮಧ್ಯೆ-ಮಧ್ಯೆ ಹಾಳಾದ ಇಂಗ್ಲೀಷು ಬೇರೆ. ಈ ತರಹದ ಭಾಷೆಯ ಹಿನ್ನೆಲೆಯಲ್ಲಿ ಅದ್ಯಾವುದೋ ಚಿತ್ರದಲ್ಲಿ ಒಬ್ಬ ಹೂ ಮಾರುವ ಹೆಂಗಸು ಮಾತನಾಡುವ ಕನ್ನಡ, ಒಬ್ಬ ಕುಡುಕನ ಬಾಯಿಯಿಂದ ಉದುರುವ ಕನ್ನಡ, ಇಮಾಮ್ ಸಾಬಿ ಅವನ ಮಕ್ಕಳಿಗೆ ಬಳಸೋ ಹರಕು ಮುರುಕು ಉರ್ದು ಮಿಶ್ರ್ರಿತ ಬೈಗಳು ತುಂಬಿದ ಕನ್ನಡ, ಅರ್ಚಕರ ಕನ್ನಡ, ಅಡ್ಡಕಸಬಿಗಳ ಕನ್ನಡ, ಇತ್ಯಾದಿಗಳ ದರ್ಶನವಾದರೆ ಅದು ಧಿಡೀರನೆ ಅರ್ಥವಾಗೋದಾದರೂ ಹೇಗೆ?

ಬೇಕಾಗಿಲ್ಲ ಬಿಡಿ, ಇಲ್ಲಿ ಹೇಗೂ ದಿನ ನಿತ್ಯದ ಬದುಕು ಅನ್ನೋ ಬಂಡಿ ನಡೆದೇ ನಡೆಯುತ್ತಲ್ಲ! ಆದರೆ ಸಂವೇದನೆಗಳ ವಿಷಯಕ್ಕೆ ಬಂದಾಗ ಈ ನೆನಪಿನಿಂದ ಹಾರಿ ಹೋಗಿರೋ ಅಗಾಧವಾದ ಶಬ್ದ ಭಂಡಾರವಿರದೇ ಹೋದಲ್ಲಿ ಆ ಸಂವೇದನೆಗಳು ಪೂರ್ತಿಯಾಗೋದಾದರೂ ಹೇಗೆ? ಇದಕ್ಕಾಗಿಯೇ ಇರಬೇಕು ಒಂದು ರೀತಿ ಅನಿವಾಸಿ ಸಾಹಿತ್ಯ ಬಹಳ ಡ್ರೈ ಅನ್ನಿಸೋದು - ಈ ಶುಷ್ಕ ಸಾಹಿತ್ಯ ಅನ್ನೋದು ನನ್ನ ಬರಹಗಳಲ್ಲಿ, ಸಂವಾದಗಳಲ್ಲಿ ಇರುವ ವಿಷಯ ನನ್ನ ಅಂತಃಪ್ರಜ್ಞೆಯ ಯಾವುದೇ ಮೂಲೆಯೊಂದಕ್ಕೆ ಗೋಚರಿಸಿದರೂ, ಆ ಸಾಹಿತ್ಯದ ಮೇಲೆ, ಹಿಂದೆ-ಮುಂದೆ ದೊರೆಯುವ ಉಪಚಾರಗಳು ಶುಷ್ಕ ಪರಿಸರವನ್ನು ಮುಚ್ಚಿ ಮರೆಮಾಡುತ್ತವೆ. ಹೀಗೆ ನನಗಾದಂತೆಯೇ ಇತರರಿಗೂ ಆಗಿ ನಮ್ಮ ಅನಿವಾಸಿ ಸಂವೇದನೆಗಳು ಯಾರಿಗೂ ದಕ್ಕದೇ ಹೋಗೋ ಸಂಭವನೀಯತೆಯೇ ಹೆಚ್ಚು ಎಂದು ಬಿಡಲೇ ಅಥವಾ ಹೀಗೆ ದೊಡ್ಡದಾಗಿ ಬರೆದರೆ ಅದನ್ನು ಕ್ವಾಲಿಫೈ ಮಾಡೋದು ಹೇಗೆ ಎಂದು 'ಮೆಚ್ಚಿಸುವ' ಆಟ ಆಡಲೇ?

'ಮಠ' ಚಿತ್ರದ ಏಳೂ ಭಾಷೆಗಳು ನಿರಂತರವಾಗಿ ನನ್ನ ಕಿವಿಯ ಮೇಲೆ ಆಗಾಗ್ಗೆ ಬೀಳುತ್ತಿದ್ದರೆ ಎಷ್ಟೋ ಚೆನ್ನಾಗಿರುತ್ತಿತ್ತು: ಗಾರೆ ಕಟ್ಟುವವರಿಂದ ಹಿಡಿದು ಬಂಡಿ ಓಡಿಸುವವರ ತನಕ ನನ್ನ ಭಾಷೆಯ ಹರಿವು ಸುತ್ತಿಕೊಳ್ಳುತ್ತಿತ್ತು. ಅದನ್ನು ಬಿಟ್ಟು ಅಪರೂಪಕ್ಕೊಮ್ಮೆ ಆಡುವ ಇಂಗ್ಲೀಷು ಬೆರೆತ ಗ್ರಾಂಥಿಕ ಭಾಷೆಯ ಸೋಗು ನನಗ್ಯಾವ ಅನುಭವವನ್ನೂ ಮಾಡದು, ಬದಲಿಗೆ ಅದು ಒಂದು ರೀತಿ ಮೊನಟನಸ್ ಬಟ್ಟೆಯಿಂದ ಮೈ-ಮನಗಳನ್ನು ಮುಚ್ಚಿ ಇನ್ನೇನೂ ರುಚಿಸದಂತೆ ಮಾಡುವ ಸಾಧ್ಯತೆಯೇ ಹೆಚ್ಚು. ಈ ರೀತಿಯ ಭಾಷೆಯ ಅನುಭವ ಒಂದೆರಡು ಘಂಟೆಗಳ ಮಟ್ಟಿಗೆ ಆಗುವುದೆಂದಾದರೆ ಖಂಡಿತವಾಗಿ ನಾನು ಕನ್ನಡ ಸಿನಿಮಾಗಳನ್ನು ಅದೆಷ್ಟು ಕಷ್ಟವಿದ್ದರೂ ನೋಡಿಯೇ ತೀರುತ್ತೇನೆ - ಸಿನಿಮಾ ಕಥೆ, ಅದನ್ನು ತೆಗೆದ ರೀತಿ ಇವೆಲ್ಲವೂ ಸೆಕೆಂಡರಿ, ಅದು ಆ ಮಟ್ಟಿಗೆ ತರುವ ಭಾಷೆಗಳ ದಿಬ್ಬಣ ಪ್ರೈಮರಿ.

ಈವರೆಗೆ ಜಾಲದಲ್ಲಿ ಕನ್ನಡವನ್ನು ನೋಡುವುದಕ್ಕೆ ಖುಷಿ ಪಟ್ಟುಕೊಳ್ಳುತ್ತಿದ್ದೆ, ಇನ್ನು ಅಲ್ಲಲ್ಲಿ ಬಗೆ-ಬಗೆಯ ಕನ್ನಡವನ್ನು ಕೇಳುವ ಸುಖ ಹುಡುಕಿಕೊಂಡು ಹೋಗಬೇಕಾಗಿದೆ!

2 comments:

sritri said...

ಉದಯ ಟೀವಿ ಹಾಕಿಸಿಕೊಳ್ಳಿ, ಎಲ್ಲಾ ತರದ ಕನ್ನಡ ಅಭ್ಯಾಸ ಆಗುತ್ತದೆ :)

ಮಠದ ಭಾಷೆ ಬಿಟ್ಟು, ಸಿನಿಮಾ ಹೇಗನ್ನಿಸಿತು?

Satish said...

ಒಳ್ಳೆ ಸಲಹೆ!

ಸಿನಿಮಾ ಪರವಾಗಿಲ್ಲ - ಅಲ್ಲಲ್ಲಿ ನಗಿಸೋ ಮಾತುಗಳು ಬೇಕಾದಷ್ಟಿವೆ, ಒಂದೆರಡು ಹಾಡುಗಳೂ ಚೆನ್ನಾಗಿವೆ.
ಚಿತ್ರಕಥೆಯನ್ನು ಮೂರ್ನಾಲ್ಕು ಜನ ಸೇರಿ ಬರೆದಿರೋದರಿಂದ ವೈವಿದ್ಯಮಯವಾಗಿದೆ. ಕೆಲವೊಂದು ಕಡೆ ಸನ್ನಿವೇಶಗಳನ್ನು ಬೇಕಂತಲೇ ತುಂಬಿ ಎಳೆದುಕೊಂಡು ಹೋಗಿರೋದನ್ನ ಬಿಟ್ರೆ, ಜಗ್ಗೇಶ್ ಹಾಗೂ ಇತರ ಕಲಾವಿದರು ತಮ್ಮ ಜವಾಬ್ದಾರಿಯನ್ನು ಚೆನ್ನಾಗೇ ನಿರ್ವಹಿಸಿದ್ದಾರೆ.

ಇಲ್ಲೀವರೆಗೆ ಸಹಾಯಕ ನಿರ್ದೇಶಕರಾಗಿದ್ದವರು, ಈಗ ತಮ್ಮ ನಿರ್ದೇಶನದಲ್ಲೇ ಈ ಚಿತ್ರವನ್ನು ಹೊರತಂದಿರುವುದು ಸರಿ, ಆದರೆ ಬೇಕಾದಷ್ಟು ಕಡೆ ಅನಗತ್ಯವಾಗಿ ಇಂಟರ್‌ಫಿಯರ್ ಆಗಿದ್ದಾರೆ.

ಹಳೆಯ ಸುದರ್ಶನ್ ಮತ್ತಿತರ ಕಲಾವಿದರು ಒಳ್ಳೆಯ ನೆನಪುಗಳನ್ನು ತರುತ್ತಾರೆ.

ಚಿತ್ರದ ಒಳಗೆ ಹೊರಗೆ ಬಹಳಷ್ಟು ಜನ ಕೆಲಸ ಮಾಡಿದ್ದಾರೆ - ಎಷ್ಟೋ ತೊಂದರೆಗಳ ನಡುವೆ ಮಿಂಚಿದ ಈ ಚಿತ್ರಕ್ಕೆ 'ಅಂತರಂಗ'ದಲ್ಲಿ ಎರಡೂವರೆ ಸ್ಟಾರ್ ರೇಟಿಂಗ್ ಕೊಡುತ್ತಿದ್ದೇನೆ!