ಬಡವ-ಬಲ್ಲಿದನೆಂಬ ಬೇಧ ದೇವರಿಗಿಲ್ಲ...
ಮನುಷ್ಯರಿಗಿದೆ, ಈ ದಿನ ಸಂಜೆ ಟಿವಿಯ ವರದಿಯೊಂದರಲ್ಲಿ ತೋರಿಸಿದ ಹಾಗೆ ಒಂದು ಕಡೆ ಬಡತನ-ಸಿರಿತನದ ನಡುವಿನ ಹೆಚ್ಚುತ್ತಿರುವ ಕಂದರ, ಮತ್ತೊಂದು ಕಡೆ ಎಂದಿಗಿಂತಲೂ ಹೆಚ್ಚು ಉತ್ಸಾಹದಿಂದ ಮುನ್ನುಗ್ಗುತ್ತಿರುವ ಆರ್ಥಿಕ ಸ್ಥಿತಿಗತಿ ಮತ್ತು ವಿಶ್ವದೆಲ್ಲೆಡೆ ಒಂದೇ ಮಂತ್ರವನ್ನು ಸಾರುತ್ತೇನೆಂದು ಹಠ ತೊಟ್ಟ ಜಾಗತೀಕರಣ ಬಿತ್ತಿ ಬೆಳೆಸುವ ವ್ಯತ್ಯಾಸ ಹಾಗೂ ದಿಢೀರನೇ ಹುಟ್ಟಿಸುವ ಸವಾಲುಗಳು ಇವೆಲ್ಲವನ್ನು ಕುರಿತು ಯೋಚಿಸತೊಡಗಿದೊಡನೆ ತಲೆ ದಿಮ್ಮೆನ್ನತೊಡಗಿತು.
ಹಲವು ವರ್ಷಗಳ ಹಿಂದೆ ಸರಕಾರಿ ಸ್ವಾಮ್ಯದ ಬ್ಯಾಂಕುಗಳಲ್ಲಿ ಇಂತಿಷ್ಟು ವರ್ಷ ಕೆಲಸ ಮಾಡಿದವರಿಗೆ ಸ್ವಯಂ ನಿವೃತ್ತಿಯನ್ನು ಪಡೆಯಬಹುದಾದ ಸೌಲಭ್ಯವನ್ನು ಸರ್ಕಾರ ಘೋಷಿಸಿತು, ಆಗ ದೊರೆಯುತ್ತಿದ್ದ ಎರಡಂಕಿ ಬಡ್ಡಿ ದರ, ಜೊತೆಯಲ್ಲಿ ಕೈಗೆ ಸಿಗಬಹುದಾದ ಸುಮಾರಾದ ಮೊತ್ತ ಬಹಳಷ್ಟು ಜನರನ್ನು ಆ ನಿಟ್ಟಿನಲ್ಲಿ ಪ್ರಚೋದಿಸಿ ಸ್ವಯಂ ನಿವೃತ್ತಿಯನ್ನು ಪಡೆಯುವಂತೆ ಮಾಡಿತು. ಆಗ ನಿವೃತ್ತಿ ಪಡೆದವರು ಆಶ್ಚರ್ಯಪಡುವಷ್ಟು ವೇಗದಲ್ಲಿ ಸರಕಾರಿ ಬ್ಯಾಂಕುಗಳು, ಅಂಚೆ ಕಛೇರಿಗಳು ಕೊಡಬಹುದಾದ ಬಡ್ಡಿ ದರದಲ್ಲಿ ಸಾಕಷ್ಟು ಇಳಿತವಾಗಿದ್ದರಿಂದಲೂ, ಜೊತೆಯಲ್ಲಿ ಮುಂಬೈಯ ಶೇರು ಮಾರುಕಟ್ಟೆಯಲ್ಲಿ ತಮ್ಮ ಹಣವನ್ನು ಹೆಚ್ಚಿನ ರಿಸ್ಕ್‌ಗೆ ಒಳಪಡಿಸಲಾರದ್ದರಿಂದಲೂ ಬಹಳಷ್ಟು ಬ್ಯಾಂಕ್ ಮ್ಯಾನೇಜರುಗಳು ಸಂಕಷ್ಟಕ್ಕೆ ಸಿಕ್ಕಿಹಾಕಿಕೊಂಡಿದ್ದರು. ಇದೇ ಸಮಯದಲ್ಲೇ ಆದ ಮತ್ತೊಂದು ಬೆಳವಣಿಗೆಯೆಂದರೆ ೨೦೦೦ ರ ಆಸುಪಾಸಿನ ವರ್ಷಗಳಲ್ಲಿ ಪ್ರಪಂಚದೆಲ್ಲೆಡೆಯಿಂದ ಭಾರತಕ್ಕೆ ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಕೆಲಸಗಳು ಹರಿಯತೊಡಗಿದವು - ಆಗ ಅದೇ ತಾನೆ ಪದವಿ ಮುಗಿಸಿ ಹೊರಬಂದವರಿಗೂ ಒಂದೇ ಕಾಲ್‌ಸೆಂಟರ್ ಅಥವಾ ಮಾಹಿತಿ ತಂತ್ರಜ್ಞಾನವನ್ನು ಆಧರಿಸಿದ ಇತರ ಉದ್ಯೋಗಗಳಲ್ಲಿ ತಿಂಗಳಿಗೆ ಕಡಿಮೆ ಎಂದರೆ ಹದಿನೈದು, ಇಪ್ಪತ್ತು ಸಾವಿರ ರೂಪಾಯಿಗಳ ಸಂಬಳ ಬರಲು ಆರಂಭಿಸಿದ್ದು ಈ ಬ್ಯಾಂಕು ಮ್ಯಾನೇಜರುಗಳು ಹಾಗೂ ಕಾಲೇಜು-ವಿಶ್ವವಿದ್ಯಾನಿಲಯಗಳಲ್ಲಿ ಕೆಲಸ ಮಾಡುತ್ತಿದ್ದ ಅನೇಕ ಪ್ರೊಫೆಸರುಗಳು ಹುಬ್ಬೇರಿಸುವಂತೆ ಮಾಡಿತ್ತು - ಇವತ್ತು ನಿನ್ನೆ ನಮ್ಮ ಎದುರು ಆಡಿಕೊಂಡಿದ್ದ ಹುಡುಗ ನಮಗಿಂತ ಹೆಚ್ಚು ಸಂಪಾದಿಸುವಂತಾದನೇ? - ಎನ್ನುವುದನ್ನು ಅರಗಿಸಿಕೊಳ್ಳಲು ಇವರಿಗೆಲ್ಲ ಬಹಳಷ್ಟು ಸಮಯ ಹಿಡಿಯಿತು. ತೊಂಭತ್ತರ ಕೊನೆಯ ವರ್ಷಗಳಲ್ಲಿ ಆರಂಭವಾದ ಈ ಪ್ರಕ್ರಿಯೆ ಇವತ್ತಿಗೂ ಮುಂದುವರೆದಿದ್ದು, ಬೆಂಗಳೂರಿನ ಒಂದು ವಾತಾವರಣವನ್ನೇ ಉದಾಹರಣೆಯನ್ನಾಗಿ ತೆಗೆದುಕೊಂಡರೆ ಒಂದು ರೀತಿಯ ಉಬ್ಬರವನ್ನು ಸೃಷ್ಟಿಸಿದೆ. ಮೊದಲೆಲ್ಲ ಐವತ್ತು ರೂಪಾಯಿಗಳನ್ನು ಕೊಟ್ಟು ಒಂದು ಕಾಫಿಯನ್ನು ಕುಡಿಯುವುದನ್ನು ಯಾವುದೋ ಸಿನಿಮಾದಲ್ಲಿ ತೋರಿಸೋ ಪಂಚತಾರಾ ಹೊಟೇಲಿನ ದೃಶ್ಯವನ್ನಾಗಿ ನೋಡಬಹುದಾಗಿತ್ತು, ಆದರೆ ಇಂದು ಅದು ದಿನ ನಿತ್ಯದ ಬದುಕಾಗಿದೆ.
ನನ್ನ ವೈಯುಕ್ತಿಕ ಅನುಭವಗಳಲ್ಲಿ ನಾನು ಒಂದು ಕಾಫಿಗೆ ಎರಡು-ಎರಡೂವರೆ ಡಾಲರುಗಳನ್ನು ಕೊಟ್ಟು ಕುಡಿದಿದ್ದೇನೆ, ಆದರೆ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅರವತ್ತು ರೂಪಾಯಿಗೆ ಒಂದು ಪ್ಲಾಷ್ಟಿಕ್ ಲೋಟದಲ್ಲಿ ಕಾಫಿಯನ್ನು ಕೊಂಡು ಕುಡಿಯಲು ಮನಸ್ಸು ಸುತಾರಾಂ ಒಪ್ಪದಿರುವ ಕಾರಣ ಸುಮ್ಮನಿದ್ದದ್ದೂ ನನಗೆ ಚೆನ್ನಾಗಿ ನೆನಪಿದೆ, ಇವತ್ತಿಗೂ ಸಹ ಐವತ್ತು ರೂಪಾಯಿಗಳನ್ನು ಕೊಟ್ಟು ಒಂದು ಕಪ್ ಕಾಫಿಯನ್ನು ಕುಡಿಯುವುದು ನನ್ನಿಂದಾಗದ ಕೆಲಸ ಏಕೆಂದರೆ ನನ್ನ ಮನಸ್ಸಿನಲ್ಲಿ ಐವತ್ತು ರೂಪಾಯಿಗಳ ವಿಸ್ತಾರ ಬಹಳಷ್ಟಿದೆ, ಅದು ಇಂದಿನ ಸನ್ನಿವೇಶದಲ್ಲಿ ಹಳತಾಗಿದ್ದರೂ ಆ ಹಳೆಯ ಆಲೋಚನೆಗಳು ಮನಸ್ಸಿನ ರಂಗಸ್ಥಳಕ್ಕೆ ಬಂದಾಗಲೆಲ್ಲ ಒಂದು ರೀತಿಯ ಮುದವನ್ನು ನೀಡುತ್ತವಾದ್ದರಿಂದ ಆ ಸವಿನೆನಪುಗಳ ಸ್ಥಾನದಲ್ಲಿ ನಾನು ಇಂದಿನ ಐವತ್ತು ರೂಪಾಯಿಯನ್ನು ಇಟ್ಟು ನೋಡಲು ಸಾಧ್ಯವಿರದಿದ್ದುದರಿಂದ 'ಮುಂದೆ ನೋಡಿದರಾಯಿತು' ಎಂಬ ಒಂದೇ ಆಲೋಚನೆಯಿಂದ ಹೊಸ ಆಲೋಚನೆಗಳನ್ನು ಬದಿಗಿಟ್ಟು ಹಳಬನಾಗೇ ಉಳಿಬಿಡುತ್ತೇನೆ. ಬಡತನ ಅದು ಹೇಗಾದರೂ, ಎಲ್ಲಾದರೂ ನಮ್ಮನ್ನು ತಗುಲಿಕೊಂಡಿರಲಿ, ಒಂದು ರೀತಿಯ ಶಾಪದ ಹಾಗೆ ಅಥವಾ ಎಷ್ಟು ತೊಳೆದರೂ ಹೋಗದ ಬಟ್ಟೆಗಂಟಿದ ಕಲೆಯ ಹಾಗೆ ಉಳಿದುಕೊಂಡೇ ಬಿಡುತ್ತದೆ. ಇದೇ ಬಡತನವನ್ನು ನೆನೆಸಿಕೊಂಡು ಅಥವಾ ಅದರ ದೆಸೆಯಿಂದ ಒಂದು ರೂಪಾಯಿ ಇಲ್ಲದ ದಿನಗಳಲ್ಲಿ ಅದರ ಬದಲಿಗೆ ಅದೆಷ್ಟೋ ಕಿಲೋಮೀಟರುಗಳನ್ನು ನಡೆದ ನನಗೆ ಇವತ್ತಿಗೂ ಅಲ್ಲಲ್ಲಿ ನೋಡಲೂ ಸಿಗದ ಒಂದು ರೂಪಾಯಿಯ ನೋಟು ಯಾವತ್ತಾದರೂ ಕಣ್ಣಿಗೆ ಬಿದ್ದರೆ ಬಹಳ ಹತ್ತಿರದ ಸ್ನೇಹಿತನಂತೆ ಕಂಡುಬರುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಬಡತನ ಒಂದು ರೀತಿಯ ಮನಸ್ಥಿತಿಯನ್ನು ಸೃಷ್ಟಿಸಿಬಿಡುತ್ತದೆ, ಅದೂ ಚಿಕ್ಕವರಿರುವಾಗದಿಂದಲೂ ಬಂದರಂತೂ ಮುಗಿದೇ ಹೋಯಿತು - ಇಲ್ಲವೆಂದಾದರೆ ನನ್ನಂತಹ ಅನಿವಾಸಿಗಳಲ್ಲಿ ಎಷ್ಟೋ ಜನ ಲಕ್ಷಗಟ್ಟಲೆ ದುಡಿದರೂ ಇವತ್ತಿಗೂ ತಮ್ಮ-ತಮ್ಮ ಮನೆಗಳಲ್ಲಿ ಅನಗತ್ಯವಾಗಿ ಉರಿಯೋ ದೀಪಗಳನ್ನು ಕುದ್ದಾಗಿ ಹೋಗಿ ಆರಿಸಿಬರುವುದೇಕೆ, ಅಲ್ಲದೇ ಪಾರ್ಕಿಂಗ್ ಮೀಟರ್‌ಗೆ ಹಾಕುವಾಗ ಪ್ರತಿಯೊಂದು ನಾಲ್ಕಾಣೆ ಪಾವಲಿಯೂ ತುಂಬಾ ಮೌಲ್ಯದ ಮೊತ್ತವಾಗಿ ಕಂಡುಬರುವುದೇಕೆ?
ಸಿರಿತನಕ್ಕೆ ಅದರದ್ದೇ ಆದ ಇನ್ನೊಂದು ಮುಖವಿದೆ, ಇದರ ಸುಪ್ಪತ್ತಿಗೆಯಲ್ಲಿ ಬೆಳೆದು ಬಂದವರಿಗೆ ಏನಿಲ್ಲವೆಂದರೂ ಗಟ್ಟಿಮುಟ್ಟಾದ ಶರೀರವಂತೂ ಇರುತ್ತದೆ, ಬಾಲ್ಯದಲ್ಲಿದ್ದಾಗ, ಬೆಳವಣಿಗೆಯ ಸಮಯದಲ್ಲಿ ಹೇರಳವಾಗಿ ಸಿಕ್ಕ ಆಹಾರ ಪದಾರ್ಥಗಳು ಜೀವನ ಪರ್ಯಂತ ಬೇಕಾದ ಒಂದು ಶರೀರವನ್ನಂತೂ ಬೆಳೆಸಿಬಂದಿರುತ್ತದೆ, ಅದರ ಜೊತೆಯಲ್ಲಿ ಗತ್ತು, ಗಾಂಭೀರ್ಯ, ಸುಪಿರಿಯಾರಿಟಿ, ಶ್ರೀಮಂತಿಕೆಗೆ ತಕ್ಕ ಒಡನಾಟ, ವಿದ್ಯಾಭ್ಯಾಸ ಇತ್ಯಾದಿಗಳನ್ನೂ ಬಳುವಳಿಯಾಗಿ ಕೊಟ್ಟಿರುತ್ತದೆ, ಶ್ರೀಮಂತರಾಗಿ ಹುಟ್ಟಿ ಬೆಳೆದು ಬಂದವರೆಲ್ಲರೂ ಬಹಳ ಬುದ್ಧಿವಂತರೆಂದು ನಾನು ಹೇಳುತ್ತಿಲ್ಲ, ಏನಿಲ್ಲವೆಂದರೂ ಅವರಿಗೆ ಯಾವುದಕ್ಕೂ ಕಡಿಮೆಯಿರದ ಒಂದು ವಾತಾವರಣದ ಪರಿಚಯವಿರುತ್ತದೆ, ಈ ವಿಪುಲವಾಗಿ ದೊರೆಯುವ ಸಂಪನ್ಮೂಲಗಳು ಒಂದು ರೀತಿಯ ಧಾರಾಳ ಮನಸ್ಸನ್ನೂ ಸೃಷ್ಟಿಸಿರಲಿಕ್ಕೆ ಸಾಕು. ನಾನು ಚಿಕ್ಕವನಿದ್ದಾಗ ಒಂದು ಬಿಳಿ ಹಾಳೆಯನ್ನು ಕೊಟ್ಟು ಒಂದು ಚಿತ್ರವನ್ನು ಬರೆ ಎಂದು ಹೇಳಿದ್ದರೆ ನಾನು ಖಂಡಿತವಾಗಿ ಆ ಹಾಳೆಯ ಮೂಲೆಯೊಂದರಲ್ಲಿ ಸಣ್ಣದಾಗಿ ಬರೆಯುತ್ತಿದ್ದೆ, ಏಕೆಂದರೆ ಯಾವತ್ತೂ ಬರದ ನಾಳೆಗಳಿಗಾಗಿ ಹಾಳೆಯ ಉಳಿದ ಜಾಗವನ್ನು ಉಳಿಸಿಕೊಂಡಿರಬೇಕಾಗಿತ್ತಲ್ಲ ಅದಕ್ಕಾಗಿ, ಅದೇ ಒಂದು ಶ್ರೀಮಂತ ಪರಿಸರದಲ್ಲಿ ಬೆಳೆದುಬಂದಿದ್ದರೆ ಒಂದು ಚಿತ್ರವನ್ನು ಬರೆಯಲು ಏನಿಲ್ಲವೆಂದರೂ ಎರಡು ಹಾಳೆಗಳನ್ನಾದರು ಹರಿದುಹಾಕಿ ಕೊನೆಗೆ ಮೂರನೇ ಹಾಳೆಯ ಮಧ್ಯೆ ಒಂದು ಚಿತ್ರವನ್ನು ಬರೆಯುತ್ತಿದ್ದೆನೇನೋ ಎನ್ನಿಸುತ್ತದೆ - ಈಗ ಇಲ್ಲಿ ಕುಳಿತು ಇಂಟ್ರಾಪೊಲೇಟ್ ಮಾಡಿಕೊಳ್ಳೋದರಿಂದ ಆಗೋದೇನೂ ಇಲ್ಲ ಎಂದು ಗೊತ್ತು, ಆದರೂ ಈಗೆಲ್ಲಾದರೂ ಸಿಕ್ಕ ನನ್ನ ಹಳೆಯ ನೋಟ್ ಪುಸ್ತಕಗಳನ್ನು ನಾನು ನೋಡಿಕೊಂಡರೆ ಬಡತನದ ಛಾಯೆ ಪ್ರತಿಪುಟದಲ್ಲೂ ಸ್ಪಷ್ಟವಾಗಿ ಕಂಡುಬರುತ್ತದೆ - ಯಾವೂಂದು ಸಾಲಿನಲ್ಲೂ ಮಾರ್ಜಿನ್ ಬಿಡದ ಹಾಗೆ ಬರೆದದ್ದೋ, ಅಥವಾ ಒಂದು ಪ್ಯಾರಾದಿಂದ ಮತ್ತೊಂದು ಪ್ಯಾರಕ್ಕೆ ಒಂದು ಸಾಲನ್ನೂ ಬಿಡದೇ ಪುಟದ ಒಂದಿಂಚನ್ನೂ ವ್ಯವಸ್ಥಿತವಾಗಿ ಉಪಯೋಗಿಸಿದ್ದೋ ಕಂಡುಬರುತ್ತದೆ. ಇಷ್ಟು ಹಿಡಿತದಲ್ಲಿ ಬರೆದದ್ದರಿಂದ ಪ್ರತಿ ನೋಟ್‌ಬುಕ್‌ನಲ್ಲಿ ಹಾಳೆಗಳು ಉಳಿದೇ ಉಳಿಯುತ್ತಾವಾದ್ದರಿಂದ ಅವುಗಳನ್ನು ನೀಟಾಗಿ ಹರಿದು ಮುದ್ರಣಾಲಯದಲ್ಲಿ ತೆಗೆದುಕೊಂಡು ಹೋಗಿ ಮತ್ತೊಂದು ನೋಟ್‌ಪುಸ್ತಕವನ್ನಾಗಿ ಪರಿವರ್ತಿಸಿಕೊಂಡು ಎಷ್ಟೋ ಸಾರಿ ಬಂದಿದ್ದೇನೆ - ಆದರೆ ನನ್ನದೃಷ್ಟಕ್ಕೆ ಆಡ್ಡ ಸೂಜಿಯಿಂದ ಹೊಲಿಸಿಕೊಂಡ, ಆಕಾರದಲ್ಲಿ ಇನ್ನಷ್ಟು ಚಿಕ್ಕವಾಗಿ ಹೊರಬರುವ ಈ ನೋಟ್ ಪುಸ್ತಕಗಳಲ್ಲಿ ಮಾರ್ಜಿನ್ ತಾನಾಗೆ ಉಳಿದುಕೊಂಡು ಬಿಡುವುದರ ಜೊತೆಗೆ ಈ ಥರದ ನೋಟ್‌ಬುಕ್‌ಗಳು ತುಂಬಿದ್ದೆಂದೂ ನನಗೆ ನೆನಪಿನಲ್ಲಿಲ್ಲ!
೯೩ ಸೆಂಟಿಗೆ ಒಂದು ಗ್ಯಾಲನ್ ಗ್ಯಾಸೋಲೀನ್ ಹಾಕಿಸಿದ್ದೂ ಇದೆ, ಹಾಗೇ ಇವತ್ತು ಮೂರು ಡಾಲರ್‌ಗೆ ಒಂದು ಗ್ಯಾಲನ್ ಹಾಕಿಸಿದ್ದೂ ಇದೆ, ಆದರೆ ನನ್ನ ಕಾರಿನಲ್ಲಿ ಏರ್‌ಕಂಡೀಷನರ್ ಉಳಿದೆಲ್ಲರ ಕಾರುಗಳಲ್ಲಿ ಚಲಾವಣೆ ಆಗುವಂತೆ ಹೆಚ್ಚು ಆಗುವುದಿಲ್ಲ. ನಾನು ಇದುವರೆಗೆ ಹಾಗೆ ಉಳಿಸಿದ ಗ್ಯಾಸೋಲಿನ್ ಮೊತ್ತ ಹತ್ತು ವರ್ಷಗಳಲ್ಲಿ ಸುಮಾರು ನೂರು ಡಾಲರ್ ಇದ್ದಿರಬಹುದು - ಹೀಗೆ ಬಡತನದಲ್ಲಿ ಓಡುವ ಬದುಕು, 'ಆನೆಯನ್ನು ಹೋಗಲಿಕ್ಕೆ ಬಿಟ್ಟು, ಬಾಲವನ್ನು ಹಿಡಿದು ಎಳೆದಂತೆ' ಎಷ್ಟೋ ಸಾರಿ ಕಂಡುಬರುತ್ತದೆ. ನನ್ನ ಪ್ರತಿ ಭಾರತದ ಟ್ರಿಪ್ಪುಗಳು ಏನಿಲ್ಲವೆಂದರೂ ಕನಿಷ್ಟವೆಂದರೆ ಹತ್ತು ಅಥವಾ ಹನ್ನೆರಡು ಸಾವಿರ ಡಾಲರಿನ ಮೊತ್ತವನ್ನು ತಲುಪಿಯೇ ತಲುಪುತ್ತದೆ, ಅಲ್ಲಲ್ಲಿ ಬೇಕಾಬಿಟ್ಟಿ ಚೆಲ್ಲುವ ಹಣಬೇರೆ. ಬಡತನದ ಮತ್ತೊಂದು ಮುಖವಾಗಿ ನಾನು ಎಷ್ಟು ಒದ್ದಾಡಿ ಬೇಡಿಕೊಂಡರೂ ಸುಖಾಸುಮ್ಮನೇ ಅನ್ನವನ್ನು ಚೆಲ್ಲುತ್ತಿದ್ದರೆಂದು ನನ್ನ ಹಿಂದಿನ ರೂಮ್‌ಮೇಟ್‌ಗಳ ಜೊತೆಯಲ್ಲಿ ಜಗಳವಾಡಿದ್ದಿದೆ - ಅಕ್ಕಿ ಅಥವಾ ಅನ್ನದ ವಿಷಯ ಬಂದಾಗ ಅದು ಏಳು ಡಾಲರ್‌ಗೆ ಹತ್ತು ಕೆಜಿಯ ವಿಷಯವಾಗಿ ನನಗೆಂದೂ ಕಂಡಿದ್ದಿಲ್ಲ - ಇವತ್ತಿಗೂ ಸಹ ಅನ್ನವನ್ನು ಯಾವುದೋ ಕಾರಣಕ್ಕೆ ಎಸೆಯುವಾಗ ನಮ್ಮಲ್ಲಾದರೆ ದನವೋ, ನಾಯಿಯೋ ತಿನ್ನುತ್ತಿತ್ತು ಎನಿಸದೇ ಇರೋದಿಲ್ಲ.
ಶ್ರೀಮಂತಿಕೆ ಮೆರುಗು ಒಂದು ರೀತಿ ಮುಖಕ್ಕೆ ಹಚ್ಚಿದ ಮೇಕಪ್ಪಿನ ಬಣ್ಣದ ಹಾಗೆ ಒಳ್ಳೆಯ ಬಿಸಿಲಿನ ಜಳದಲ್ಲಿ ಹಣೆಮೇಲೆ ಕಟ್ಟಿದ ಬೆವರಿನ ಹನಿಗಳ ಜೊತೆಯಲ್ಲಿ ಹರಿದುಬರಬಲ್ಲದು, ಆದರೆ ಬಡತನದ ಬವಣೆ ಚರ್ಮದ ಒಳಗೆ ತೋರಿಕೊಂಡು ಒತ್ತರಿಸಿ ಬರುವ ಒಂದು ರೀತಿ ಪಾದದ ಮೇಲೆ ಕಾಣುವ ರಕ್ತನಾಳಗಳ ಹಾಗೆ, ಯಾವತ್ತೂ ಹೋಗೋದಿಲ್ಲ. ಬಡತನದಿಂದ ಸಿರಿತನಕ್ಕೆ ಹೋಗೋದು ಸುಲಭವೆಂದು ನನಗೆಂದೂ ಅನ್ನಿಸಿಲ್ಲ, ತಮ್ಮ-ತಮ್ಮ ಮಕ್ಕಳಿಗೆ ಬೆಲೆಬಾಳುವ ಆಟಿಕೆಗಳನ್ನು ತೆಗೆದುಕೊಂಡು ಬರುವ ನನ್ನಂತಹವರು ಅವುಗಳ ಜೊತೆಯಲ್ಲಿ ಆಟವಾಡಿದ್ದಿದೆ ಜೊತೆಯಲ್ಲಿ ಅವುಗಳು ನನಗೋಸ್ಕರವೇ ತಂದವೇನೋ ಎನ್ನುವಂತೆ ಮುತುವರ್ಜಿಯಿಂದ ಕಾಪಾಡಿಕೊಂಡದ್ದೂ ಇದೆ. ಆದರೆ ತಂದೆ-ತಾಯಿಯರು ಕಂಡು ಅನುಭವಿಸಿದ ಬಡತನದ ಮುಖಗಳನ್ನು ಕಾಣದ ಮಗು ಅದನ್ನು ಕುಟ್ಟಿ ಪುಡಿಮಾಡಿದಾಗ ಅದಕ್ಕೇನೂ ಅನ್ನಿಸದಿದ್ದರೂ, ತಂದೆ ತಾಯಿಗಳಿಗೆ ತಮ್ಮ ದುಡ್ಡಿಗೆ ಸರಿಯಾದ ನ್ಯಾಯ ಸಿಗಲಿಲ್ಲವೆಂದು ಅನ್ನಿಸಿದರೆ ಅದು ಬಡತನದ ಕಿರೀಟದಲ್ಲಿರೋ ರತ್ನವೆಂದೇ ನನಗೆ ತೋರಿಬರುತ್ತದೆ.
ಜಗತ್ತನ್ನು ಒಂದು ರೀತಿಯ ರಬ್ಬರ್ ಬ್ಯಾಂಡಿನಂತೆ ಹಿಂಜಿದಾಗ ಆಗುವಂತೆ ಒಂದು ಕಡೆ ಕಡು ಬಡುವರೂ ಮತ್ತೊಂದು ಕಡೆ ಅತಿ ಶ್ರೀಮಂತರೂ ಹೆಚ್ಚುತ್ತಾ ಹೋಗುವುದನ್ನು ನೋಡುತ್ತಿದ್ದೇನೆ, ಪ್ರತಿಯೊಂದಕ್ಕೂ ಅದರ ಮಿತಿ ಇರುವ ಹಾಗೆ ಈ ಹಿಂಜುವಿಕೆ ಎಲಾಸ್ಟಿಸಿಟಿಯ ನಿಯಮಗಳನ್ನು ಮೀರಿ ಮುಂದಕ್ಕೆ ಹೋದಾಗ ಅದು ವ್ಯವಸ್ಥೆಯನ್ನು ಮುಖ ಅಡಿಯಾಗಿ ಬೀಳುವಂತೆ ಮಾಡುತ್ತದೆ, ಇಲ್ಲಿ ಪ್ರಕೃತಿ ತನ್ನನ್ನು ತಾನು ಕಾಯ್ದುಕೊಳ್ಳುತ್ತದೆ, ಆದ್ದರಿಂದಲೇ ಬಡವ-ಬಲ್ಲಿದನೆಂಬ ಮನುಷ್ಯ ನಿರ್ಮಿತ ಪ್ರಪಂಚದಲ್ಲಿ ಪ್ರಕೃತಿ ಎನ್ನೋ ದೇವರು ತನ್ನನ್ನು ತಾನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಈ ವ್ಯತ್ಯಾಸಗಳನ್ನು ಮೀರಿದ ವ್ಯವಸ್ಥೆಯನ್ನು ಒಂದು ಮಟ್ಟದಲ್ಲಿ ಇಡಬಲ್ಲನೆಂಬ ನಂಬಿಕೆ ಇತ್ತೀಚೆಗೆ ಬಲವಾಗಿದೆ.
2 comments:
ಬಡವ ಬಲ್ಲಿದನೆಂಬ ಭೇದ ಭಾವ ಅಳಿಸಿಹೋಗುವುದು ದೂರದ ಮಾತೇ.
ನನಗೂ ಕೂಡ ಒಮ್ಮೊಮ್ಮೆ ಅನ್ನ ಚೆಲ್ಲುವಾಗ ಹಸಿವಿನಿಂದ ಒದ್ದಾಡೊ ನಮ್ಮ ದೇಶದ
ಮುಗ್ಧ ಜನಗಳ ನೆನಪಾಗುತ್ತೆ.
ಟಿವಿಯಲ್ಲಿ ನೋಡಿದ ಸೂಡಾನ್ ಮಕ್ಕಳ ಒಣಗಿದ ದೇಹ ನನ್ನನ್ನು ಕಾಡಿದ್ದಿದೆ.
ನಾವು ಚೆಲ್ಲುವ ಈ ಅನ್ನ ಇನ್ನೆಷ್ಟೋ ಜೀವಗಳ ಹೊಟ್ಟೆ ತುಂಬಿಸತ್ತೊ ಅಂತ ಅನ್ನಿಸೊದೆ ಇರೊದಿಲ್ಲ.
Medini
ಹೌದು, ಈ ಆಫ್ರಿಕದಾವರದ್ದು ಬಹಳ ಕಷ್ಟ, ಅಲ್ಲಿನ ಸೊರಗಿದ ಮಕ್ಕಳನ್ನು ನೋಡೋಕೇ ಸಾಧ್ಯವಿಲ್ಲ. ಆಹಾರ-ನೀರಿನ ಕೊರತೆ ಇರುವಲ್ಲಿಯೇ ಕೊಲೆ-ಸುಲಿಗೆಗಳು, ದಿನಬೆಳಗಾದರೆ ಅದೇ ರಾಮಾಯ್ಣ ಅನ್ನೋ ರೀತಿ ಆಗಿ ಹೋಗಿ ಯಾರೂ ಕೇರ್ ಮಾಡ್ತಾ ಇಲ್ಲವೇನೋ ಅನ್ನಿಸಿಬಿಡುತ್ತೆ. ಇಂಥಾ ರಾಷ್ಟ್ರಗಳಿಗೆ ಸಹಾಯ ಮಾಡೋಣ ಅನ್ನೋ ವಿಶ್ವಸಂಸ್ಥೆಗೆ ತಲೆಬಿಸಿ ಮಾಡಲು ಅಗಾಗ್ಗೆ ಹುಟ್ಟಿಕೊಳ್ಳುವ ಈ ಮಿಡ್ಲ್ ಈಸ್ಟ್ ಕದನಗಳು ಬೇರೆ.
Post a Comment