Monday, July 17, 2006

ಇಸ್ರೇಲ್-ಲೆಬನಾನ್

ಇತ್ತೀಚೆಗೆ ನಡೆಯುವ ಎಷ್ಟೊಂದು ಅಂತಾರಾಷ್ಟ್ರೀಯ ವಿದ್ಯಮಾನಗಳ ದೆಸೆಯಿಂದ ನಮ್ಮ ಲೋಕಲ್ ಚಾನೆಲ್‌ಗಳಲ್ಲಿ ಬರುವ ನೆರೆಹೊರೆಯ ಸುದ್ದಿಗಳೇ ಇರೋ ವರ್ಲ್ಡ್ ನ್ಯೂಸ್ ಸಹ ನಿಜವಾದ ವರ್ಲ್ಡ್ ನ್ಯೂಸ್ ಆಗಿ ಬದಲಾವಣೆ ಹೊಂದಿದೆಯಲ್ಲಾ ಎಂದು ಒಮ್ಮೆ ಖುಷಿಯಾದರೂ, ಸಾಮಾನ್ಯವಾಗಿ ಮೈ ಕೊಡವಿಕೊಳ್ಳುವ ಅಮೇರಿಕನ್ನರೂ ತಡವರಿಸುವಂತೆ ಮಾಡುವ ಹಲವಾರು ಸುದ್ದಿಗಳು ಬರುತ್ತಲೇ ಇವೆ. ಏತನ್ಮದ್ಯೆ ಯಾವಾಗಲೂ ಮೊದಲ ಸುದ್ದಿಯಾಗೇ ಮೆರೆಯುತ್ತಿದ್ದ ಇರಾಕ್ ಸುದ್ದಿಗಳೂ ಸಹ ಈಗ ಮೂರನೆಯ ಸ್ಥಾನವನ್ನು ಪಡೆದಿವೆ. ಇಂದು ನಾನು ನೋಡಿದ ಹಾಗೆ ಇಸ್ರೇಲ್-ಲೆಬನಾನ್, ಇಂಡೋನೇಸಿಯಾದ ತ್ಸುನಾಮಿ, ಜಿ-೮ ಸಮ್ಮಿಟ್ ವರದಿಗಳು, ಡಿಸ್ಕವರಿ ಷಟಲ್ ಸುರಕ್ಷೆಯಿಂದ ಹಿಂತಿರುಗಿದ್ದು ಇವೆಲ್ಲೆದರ ಮುಂದೆ ಇರಾಕ್‌ನಲ್ಲಿ ಎಪ್ಪತ್ತೈದು ಜನಕ್ಕೂ ಹೆಚ್ಚು ಸತ್ತ ಸುದ್ದಿ 'ದಿನಾ ಸಾಯೋರಿಗೆ ಅಳೋರ್ ಯಾರು?' ಎನ್ನುವಂತೆ ಗೌಣವಾಗಿತ್ತು.

ಇಸ್ರೇಲ್-ಲೆಬನಾನ್ ಕುರಿತು ಹಲವಾರು ವರದಿಗಳು ಬರ್ತಾ ಇವೆ, ಅಲ್ಲಲ್ಲಿ ಓದಿ, ಕೇಳಿ ನೋಡಿದ ಮೇಲೆ ಸುದ್ದಿಯ ಮೇಲೆ ಪ್ರತಿಕ್ರಿಯಿಸದೇ ಸುಮ್ಮನಿರೋದಾದರೂ ಹ್ಯಾಗೆ? ಅಷ್ಟಕ್ಕೂ ಉಳಿದೆಲ್ಲ ಮಾಧ್ಯಮಗಳಲ್ಲಿ ಪ್ರಕಟವಾಗದಿರುವ ವಿಷಯವನ್ನು ನಾನೇನೂ ಬರೆಯುತ್ತಿಲ್ಲವಲ್ಲ ಎಂದೆನಿಸಿದರೂ ಇಂತಹ ಮಹತ್ವಪೂರ್ಣ ಸುದ್ದಿಯನ್ನು ಕುರಿತ ನನ್ನ ನಿಲುವನ್ನು ಆದಷ್ಟು ಬೇಗ ಹೊರಹಾಕಿದರೆ ಒಳ್ಳೆಯದು ಎನಿಸಿದ್ದರಿಂದ ಈ ಲೇಖನವನ್ನು ಬರೆಯಬೇಕಾಗಿ ಬಂದಿತು, ಎದೆ ಮೇಲೆ ಚಪ್ಪಡಿ ಹೊತ್ತುಕೊಂಡು ಎಷ್ಟೊತ್ತೂ ಅಂತ ನಿರಾಳವಾಗಿ ಮಲಗಿರಲು ಸಾಧ್ಯ, ಹಾಗಂತ ಈ ಲೇಖನ ಬರೆದ ನಂತರ ಚಪ್ಪಡಿ ಇಳಿಸಿಕೊಂಡು ಕೈ ತಟ್ಟಿಕೊಳ್ಳುತ್ತೆನೆಂದು ಅರ್ಥವಲ್ಲ, ಮತ್ತೆ ಇದೇ ವಿಷಯದ ಮೇಲೆ ಬೇರೆ ಯಾವುದಾರೂ ದೃಷ್ಟಿಕೋನ ಬಲವಾಗುವ ಸಾಧ್ಯತೆಗಳೂ ಇವೆ, ಅಥವಾ ಈ ವಿಷಯ ಮುಂದೆ ಹೇಗೆ ಬೆಳೆಯಬಲ್ಲದು ಎನ್ನುವ ಕುತೂಹಲವೂ ಇದೆ.

ಲೆಬನಾನ್ ಮೇಲೆ ಧಾಳಿ ನಡೆಸಿದ ಇಸ್ರೇಲ್‌ನವರಿಗೆ ತಮ್ಮ ಎರಡು ಸೈನಿಕರನ್ನು ಹಿಜ್‌ಬುಲ್ಲಾ ಉಗ್ರಗಾಮಿಗಳು ಅಪಹರಿಸಿದ್ದು ಒಂದು ನೆಪ ಮಾತ್ರ, ಹಿಜ್‌ಬುಲ್ಲಾ ಹೋರಾಟಗಾರರನ್ನು ಹತ್ತಿಕ್ಕುವುದು ಇಸ್ರೇಲ್‌ನ ದೂರದೃಷ್ಟಿಗಳಲ್ಲೊಂದಾಗಿತ್ತು. ಲೆಬನಾನ್ ಆಗಲಿ, ಹಿಜ್‌ಬುಲ್ಲಾ ಉಗ್ರಗಾಮಿಗಳಾಗಲೀ ಇಸ್ರೇಲ್‌ನ ಮಿಲಿಟರಿ ಶಕ್ತಿಯ ಮುಂದೆ ಯಾವ ಲೆಕ್ಕಕ್ಕೂ ಇಲ್ಲ. ಬಲಿಷ್ಠವಾದ ಇಸ್ರೇಲ್‌ಗೂ ಲೆಬನಾನ್ ದೇಶದಲ್ಲೇ ಪೂರ್ಣ ಬೆಂಬಲ ಇರದ ಹಿಜ್‌ಬುಲ್ಲಾ ಹೋರಾಟಗಾರರಿಗೂ ಎಲ್ಲಿಯ ಸಮ? ಹಿಜ್‌ಬುಲ್ಲಾ ಹೋರಾಟವನ್ನು ಹುಟ್ಟಡಗಿಸುತ್ತೇವೆ ಎನ್ನುವುದು ಇಸ್ರೇಲ್‌ನವರಿಗೆ ಒಂದ ದೊಡ್ಡ ಸ್ಲೋಗನ್ ಆಗಿ ಹೋಗಿದೆ, ನಮ್ಮ ಸೈನಿಕರನ್ನು ಬಿಡುವವರೆಗೆ ಹಾಗೂ ನಮ್ಮ ಮೇಲೆ ರಾಕೆಟ್ ಧಾಳಿಗಳನ್ನು ನಿಲ್ಲಿಸುವವರೆಗೆ ನಾವು ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎನ್ನುವುದು ಇಸ್ರೇಲ್‌ನವರ ಹಾಡು. ಇಸ್ರೇಲ್‌ನವರು ಈಗಾಗಲೇ ಲೆಬನಾನ್ ಗಡಿಯ ಪ್ರದೇಶಗಳಲ್ಲಿ ತಮ್ಮ ಶಕ್ತಿಯನ್ನು ಪ್ರದರ್ಶನಕ್ಕಿಟ್ಟಿರುವುದರ ಜೊತೆಗೆ ಉಳಿದೆಲ್ಲ ಗಡಿಗಳಲ್ಲೂ ಏನಾಗುತ್ತಿದೆ ಎಂದು ಬಿಟ್ಟಕಣ್ಣು ಮುಚ್ಚದೇ ನೋಡುತ್ತಿದ್ದಾರೆ.

ಲೆಬನಾನ್‌ನ ಸ್ಥಳೀಯ ಸರ್ಕಾರದಲ್ಲಿ ಭಾಗವಹಿಸಿರುವ ಹಿಜ್‌ಬುಲ್ಲಾ ಉಗ್ರಗಾಮಿಗಳದ್ದು ಇಸ್ರೇಲ್‌ನವರ ಹುಟ್ಟಡಗಿಸಬೇಕು ಎನ್ನುವುದು ಯಾವತ್ತಿದ್ದರೂ ಹಿಂಗದ ದಾಹ. ಪದೇ-ಪದೇ ಇಸ್ರೇಲ್ ಗಡಿಯಲ್ಲಿ ನುಗ್ಗಿ ವಿಧ್ವಂಸಕ ಕೃತ್ಯಗಳಲ್ಲಿ ತೊಡಗುವುದರ ಜೊತೆಗೆ ಹಲವಾರು ಮಾಧ್ಯಮಗಳು ಹೇಳುವಂತೆ ಸಿರಿಯಾ, ಇರಾನ್‌ನಲ್ಲಿ ತಯಾರಾದ ಹಲವಾರು ರಾಕೆಟ್‌ಗಳನ್ನು ಹಾರಿಸಿ ಎಷ್ಟು ಸಾಧ್ಯವೋ ಅಷ್ಟು ನಷ್ಟವನ್ನು ಇಸ್ರೇಲ್‌ನವರಿಗೆ ಮಾಡಬೇಕು ಎನ್ನುವುದು ಅವರ ಇಂಗಿತ. ಇಸ್ರೇಲ್‌ನಿಂದ ಹಿಡಿದುಕೊಂಡು ಹೋಗಿರುವ ಇಬ್ಬರು ಸೈನಿಕರನ್ನು ಬಿಡುವ ಮಾತಿರಲಿ, ಈಗಂತು ಇಸ್ರೇಲ್ ನೇರವಾಗಿ ಯುದ್ಧಕ್ಕೇ ಇಳಿದಿರುವುದರಿಂದ ಅವರು ಇನ್ನೂ ಜೀವಂತವಿದ್ದರೇ ಹೆಚ್ಚು. ತಮ್ಮ ನೆಲೆಗಳ ಮೇಲೆ ನಡೆದ ಧಿಡೀರ್ ಆಕ್ರಮಣದಿಂದ ಸಾಕಶ್ಟು ಹೊಡೆತ ತಿಂದೂ, ಮುಖ್ಯ ರಸ್ತ್ರೆ, ಸೇತುವೆಗಳು ಹಾಗೂ ಏರ್‌ಪೋರ್ಟಿನ ಮೇಲೂ ಆದ ಧಾಳಿಯಿಂದ ಸ್ವಲ್ಪ ಕಂಗಾಲಾದಂತೆ ಕಂಡುಬಂದರೂ ಹಿಜ್‌ಬುಲ್ಲಾ ಹೋರಾಟ ಆಗಾಗ್ಗೆ ನಡೆಸೋ ಧಾಳಿಯ ರೂಪದಲ್ಲಿ ಗಡಿಯ ಹತ್ತಿರವಿರುವ ಹಲವಾರು ಸೌಕರ್ಯಗಳನ್ನು ಉರುಳಿಸುವಲ್ಲಿ ಸಫಲವಾಗಿದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಮೇರಿಕ, ಬ್ರಿಟನ್, ಜರ್ಮನಿ ಮುಂತಾದ ದೇಶಗಳು ಇಸ್ರೇಲ್ ಪರವಹಿಸಿಕೊಂಡೇ ವಿಶ್ವಸಂಸ್ಥೆಯವರಿಗೆ 'ಆದಷ್ಟು ಬೇಗ ಹೋಗಿ ಮಧ್ಯಸ್ಥಿಕೆ ವಹಿಸಿ' ಎಂದು ಸೂಚಿಸುತ್ತಿವೆ. ವ್ಯಾಟಿಕನ್ನೂ ಸೇರಿ ರಷ್ಯಾ ಮೊದಲಾದ ದೇಶಗಳು ಇಸ್ರೇಲ್‌ನವರ ಧಾಳಿ ದುಡುಕಿದ ನಿರ್ಧಾರ, ಹೀಗೆ ಮಾಡಬಾರದಿತ್ತು ಎಂದು ಹೇಳಿಕೆಕೊಟ್ಟಿವೆ. ಅಮೇರಿಕದವರಿಗೆ ಒಂದು ಕಡೆ ಎಲ್ಲಿ ಈ ಉರಿ ದೊಡ್ಡ ಕಾಡ್ಗಿಚ್ಚಾಗಿ ಹಬ್ಬಿ ಮೊದಲೇ ಹೊತ್ತಿಕೊಂಡಿರೋ ಮಿಡ್ಲ್ ಈಸ್ಟ್ ಬೆಂಕಿಯನ್ನು ಇನ್ನಷ್ಟು ಉರಿಸುತ್ತೋ ಎಂದು ಭಯ ಒಂದುಕಡೆಯಾದರೆ ಇದೇ ಸಮಯದಲ್ಲಿ ಸಾಧ್ಯವಾದರೆ ಸಿರಿಯಾ ಹಾಗೂ ಇರಾನಿಗೆ ಬುದ್ದಿ ಕಲಿಸಬೇಕು ಅನ್ನಿಸಿದ್ದು ಅಲ್ಲಲ್ಲಿ ಕಂಡುಬಂತು.

* ತಮ್ಮ-ತಮ್ಮ ದೇಶ, ಗಡಿಗಳ ಭದ್ರತೆಯ ದೃಷ್ಟಿಯಿಂದ ನೆರೆಹೊರೆಯವರ ಮೇಲೆ ಆಕ್ರಮಣ ಮಾಡುವುದು ಎಷ್ಟರ ಮಟ್ಟಿಗೆ ಸರಿ? ನಮ್ಮ ದೇಶದ ಉದಾಹರಣೆ ತೆಗೆದುಕೊಂಡರೆ, ಪಾಕಿಸ್ತಾನದ ಸರ್ಕಾರದಲ್ಲಿ ನೇರವಾಗಿ ಪಾಲ್ಗೊಳ್ಳದಿದ್ದರೂ ಎಷ್ಟೋ ಇಸ್ಲಾಮಿಕ್ ಸಂಘಟನೆಗಳು ಪಾಕಿಸ್ತಾನದಲ್ಲಿದ್ದುಕೊಂಡು ಭಾರತದ ಮೇಲೆ ಹಲವಾರು ವರ್ಷಗಳ ಕಾಲ ಆಕ್ರಮಣ ನಡೆಸುತ್ತಿಲ್ಲವೇ? ಇವೆಲ್ಲವನ್ನೂ ನೋಡಿಕೊಂಡು ಪಾಕಿಸ್ತಾನದ ಶಹರಗಳಿರಲಿ, ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮೇಲಾದರೂ ಭಾರತ ಇಷ್ಟೊಂದು ವರ್ಷಗಳಲ್ಲಿ ಆಕ್ರಮಣವನ್ನು ಮಾಡಿದೆಯೇ?

* ಸಹನೆ ಎಂದೂ ದೌರ್ಭಲ್ಯವಾಗೋದಿಲ್ಲ, ಸಹನೆಯ ಬೆಲೆ ದಿಡೀರನೆ ಧಾಳಿಗೆ ಹೋಗುವ ದೇಶಗಳಿಗೆ ಗೊತ್ತೇ? ಇಬ್ಬರು ಸೈನಿಕರನ್ನು ಕಳೆದುಕೊಂಡು ಆಕ್ರಮಣಕ್ಕೆ ತೊಡಗಿದ ದೇಶ ನೂರಾರು ಅಮಾಯಕರನ್ನು ಗಡಿಯ ಆಚೀಚೆ ಕಳೆದುಕೊಳ್ಳಲು ಹೇಗೆ ಮನಸ್ಸು ಮಾಡುತ್ತದೆ? ಅಲ್ಲದೇ ಈ ಎರಡೂ ದೇಶಗಳನ್ನು ಬೆಂಬಲಿಸುವ ಹಲವಾರು ಮುಂದುವರಿದ ದೇಶಗಳು ತಮ್ಮ ದೇಶದ ಪ್ರಜೆಗಳನ್ನು ಉಪಾಯವಾಗಿ ಸಾಗ ಹಾಕುತ್ತಿರುವುದು ಏಕೆ? ಯಾವುದೋ ದೇಶದಲ್ಲಿ ಪಡೆದ ಪಾಸ್‌ಪೋರ್ಟ್ ಅನ್ನೋ ಪುಸ್ತಕ ಜನ ಸಾಮಾನ್ಯರ ಜೀವನದಲ್ಲಿ ಎಷ್ಟೊಂದು ಬದಲಾವಣೆಗಳನ್ನು ಮಾಡಬಲ್ಲದು?

* ಅಮೇರಿಕದವರು ಖುಷಿ ಪಡಲೇ ಬೇಕು, ಪ್ರತಿನಿತ್ಯ ಹೊರಬರೋ ವೃತ್ತ ಪತ್ರಿಕೆಗಳ ಮುಖ ಪುಟದಲ್ಲಿರೋ ಸೀಮಿತ ಸ್ಥಳದಲ್ಲಿ ಇತ್ತೀಚೆಗೆ ಇರಾಕ್‌ನ ಸುದ್ದಿ ಯಾವುದೋ ಮೂಲೆ ಸೇರಿಕೊಳ್ಳುತ್ತಲ್ಲ ಅದಕ್ಕೆ. ತಮ್ಮ ಮಾತು ಕೇಳದವರ ಮೇಲೆ ಆಕ್ರಮಣಕ್ಕೆ ಎಲ್ಲ ದೇಶಗಳೂ ಯುದ್ಧಕ್ಕೆ ಇಳಿದವೆಂದರೆ ಅಲ್ಲಿಗೆ ಪ್ರಪಂಚದ ಕೊನೆಯಾಯಿತೆಂದೇ ಲೆಕ್ಕ - ಈ ತರ್ಕ ಅಮೇರಿಕದವರಿಗೆ ಏಕೆ ಹೊಳೆಯುವುದಿಲ್ಲವೋ?

* ನನಗೆ ಕಾಲಿನ್ ಪವೆಲ್ ಮೇಲಾದರೂ ಅಲ್ಪಸ್ವಲ್ಪ ವಿಶ್ವಾಸವಿತ್ತು, ಆದರೆ ಕಾಂಡೋಲೀಸಾ ರೈಸ್ ಮೇಲೆ ನನಗೆ ಏಕೋ ವಿಶ್ವಾಸವೇ ಮೂಡುತ್ತಿಲ್ಲ, ಇದು ನನ್ನ ಮಿತಿ ಇದ್ದರೂ ಇರಬಹುದು, ಅಥವಾ ತನ್ನ ಮಾತುಗಳನ್ನು ಮಾತ್ರ ಹೋದಲ್ಲಿ ಬಂದಲ್ಲಿ ಸಾಧಿಸಿಕೊಳ್ಳುವ ಆಕೆಯ ನಿಲುವಿದ್ದರೂ ಇರಬಹುದು.

ಅದು ಹೇಗಾದರೂ ನಡೆದುಕೊಂಡು ಹೋಗುತ್ತಿರಲಿ ನೆಟ್ಟಗಿರುವ ದೇಶವನ್ನು ಕಲಕಿದಾಗ ಅಲ್ಲಿ ಅಮಾಯಕರಿಗೆ ಹೊಡೆತ ಬೀಳುತ್ತದೆ, ಅರಾಜಕತೆ ತಾಂಡವವಾಡುತ್ತದೆ. ತಮ್ಮ ಪ್ರಾಸೆಸ್ಸುಗಳ ಮೇಲೆ ವಿಶೇಷ ಒಲವನ್ನು ಇಟ್ಟುಕೊಂಡು ಮುಂದೆ ನಡೆಯುತ್ತಿರುವ ಮುಂದುವರಿದ ರಾಷ್ಟ್ರಗಳಿಗೆ ಯಾವ ಸಮಯೋಚಿತ ಪ್ರಾಸೆಸ್ಸುಗಳೂ, ವೈಜ್ಞಾನಿಕ ನೆಲಗಟ್ಟೂ ಇರದ ಒಂದು ಧರ್ಮೀಯರು ಮಾತ್ರ ಶತ್ರುಗಳು. ಈ ಶತ್ರುಗಳ ಹೆಸರಿನಲ್ಲಿ ಏನು ಮಾಡಿದರೂ ನಡೆಯುತ್ತದೆ ಎಂದು ಸಾಧಿಸಿಕೊಳ್ಳುವ ಹೊತ್ತಿನಲ್ಲೇ ಇಂತಹ ಶತ್ರುಗಳ ಮತ್ತೊಂದು ಮುಖವನ್ನು ಹೊತ್ತುಕೊಂಡಿರುವ ಎಷ್ಟೋ ರಾಷ್ಟ್ರದವರ ಕೈ ಕುಲುಕುವ ಕೆಲಸವೂ ಹಾಡ ಹಗಲೇ ನಡೆಯುತ್ತದೆ. ಸೌದಿ ಅರೇಬಿಯಾ, ಪಾಕಿಸ್ತಾನಗಳಿಗೆ ಒಂದು ಉತ್ತರ - ಇರಾನ್, ಲೆಬನಾನ್‌ಗಳಿಗೆ ಇನ್ನೊಂದು. ಒಂದು ಸೈನ್ಯದಲ್ಲಿ ಬದುಕಿನ ಬಗ್ಗೆ ಹಲವಾರು ಆಸೆಗಳನ್ನಿಟ್ಟುಕೊಂಡ ಯುವ ಸೈನಿಕರು ತಮ್ಮ ದೇಶದ ಮುಖಂಡರ ಮಾತನ್ನು ನಂಬಿ ಇನ್ಯಾವುದೋ ದೇಶವನ್ನು ರಕ್ಷಿಸೋದಕ್ಕೆ ತಮ್ಮ ಪ್ರಾಣಗಳನ್ನು ತೆತ್ತರೆ, ಮತ್ತೊಂದು ಗೆರಿಲ್ಲಾ ಗುಂಪಿನಲ್ಲಿ ಮುಲ್ಲಾಗಳಿಂದಲೋ ಮತ್ಯಾರಿಂದಲೋ ಪ್ರಭಾವಿತರಾಗಿ, ತಮ್ಮ ಜೀವ-ದೇಹಗಳನ್ನೂ ಯಾವುದೋ ದಿವ್ಯ ಕಾರಣಕ್ಕೆ ಬಲಿಕೊಡುವ ಕಾಯಕ ನಿರಂತರವಾಗಿ ನಡೆಯುತ್ತದೆ. ಈ ರಾಷ್ಟ್ರಗಳ ಧುರೀಣರಿಗೆ ಅಥವಾ ಮದರಸಗಳ ಮುಲ್ಲಾಗಳಿಗೆ ಈ ಯುವಕರು ಚದುರಂಗದಾಟದ ಕಾಯಿಗಳಂತೆ ಕಂಡುಬರುತ್ತಾರೆ.

ನನಗೆ ನೆನಪಿರೋ ಹಾಗೆ ತೊಂಬತ್ತೊಂದರಲ್ಲಿ ನಡೆದ ಮೊದಲ ಇರಾಕ್ ಕದನದ ಸಮಯದಲ್ಲಿ ಒಂಭತ್ತು ರೂಪಾಯಿಗೆ ಒಂದು ಲೀಟರ್ ಪೆಟ್ರೋಲ್ ಇದ್ದದ್ದು, ಕದನ ಮುಗಿಯುವ ಹೊತ್ತಿಗೆ ಹದಿನೆಂಟು ರೂಪಾಯಿಗೆ ಬಂದಿತ್ತು. ಅಪ್ಪ ಬುಷ್‌ನ ಕಾಲ ಮುಗಿದು ಮಗ ಬುಷ್‌ನ ಕಾಲ ಇನ್ನೇನು ಮುಗಿಯುತ್ತಾ ಬಂತು ಎನ್ನುವಾಗ ಹಾಗೂ-ಹೀಗೂ ಒಂದು ಲೀಟರ್ ಪೆಟ್ರೋಲ್‌ಗೆ ಅರವತ್ತು ರೂಪಾಯಿ ಹತ್ತಿರವಾಯಿತು. ಇಸ್ರೇಲ್ ಆಗಲಿ, ಲೆಬನಾನ್ ಆಗಲಿ ತೈಲವನ್ನೇನೂ ಹೊರತೆಗೆಯೋದಿಲ್ಲ, ಆದರೂ ಈ ಗಲಾಟೆ ಹೀಗೆ ಮುಂದುವರೆದರೆ ಇನ್‌ಫ್ಲಮೆಬಲ್ ತೈಲವನ್ನು ಮಾರುವ ಪಕ್ಕದಲ್ಲಿರುವ ದೇಶಗಳೂ ಹೊತ್ತಿಕೊಂಡು ಉರಿದರೆ ಅಲ್ಲಿಗೆ ಒಂದು ಲೀಟರ್ ಪೆಟ್ರೋಲ್ ಬೆಲೆ ನೂರು ರೂಪಾಯಿ ಆದಂತೆಯೇ ಲೆಕ್ಕ. ನಾನು ಇಲ್ಲಿ ಅಮೇರಿಕದಲ್ಲಿ ಕುಳಿತು ಇವರೆಲ್ಲರ ಜಗಳದಲ್ಲಿ ಹುಟ್ಟಿದ ಬೆಂಕಿಯ ಜಳದ ಚುರುಕು ಮುಟ್ಟಿದವನಂತೆ ಪೆಟ್ರೋಲ್ ಬೆಲೆಯನ್ನು ಚರ್ಚಿಸಿದರೆ ಅದು ನನ್ನ ಅಮೇರಿಕನ್ ಮನಸ್ಥಿತಿಯನ್ನು ಪ್ರತಿಬಿಂಬಿಸೀತು, ಆದರೆ ನಮ್ಮೂರಿನ ಮೆಷ್ಟ್ರುಗಳಿಗಾಗಲೀ, ಕೂಲಿನಾಲಿ ಮಾಡಿ ಜೀವಿಸೋರಿಗಾಗಲೀ ಹೀಗೆ ದಿಢೀರನೆ ಹೆಚ್ಚುವ ಪೆಟ್ರೋಲ್ ಬೆಲೆ ಹುಟ್ಟಿಸಬಹುದಾದ ಉಳಿದೆಲ್ಲ ಪದಾರ್ಥಗಳ ಹೆಚ್ಚಿನ ಬೆಲೆ ಹಾಗೂ ಹಣದುಬ್ಬರವನ್ನು ಎದುರಿಸುವ ಶಕ್ತಿ ಅಷ್ಟೇ ವೇಗವಾಗಿ ಬರೋದಿಲ್ಲವಲ್ಲ, ಅದಕ್ಕೇನು ಮಾಡೋದು?

ಅಮೇರಿಕದವರು ಇರಾಕ್ ಯುದ್ಧಕ್ಕೆ ಹೋಗಬಾರದಿತ್ತು, ಇಸ್ರೇಲ್‌ನವರು ಲೆಬನಾನ್ ಮೇಲೆ ಈ ರೀತಿ ಧಾಳಿ ನಡೆಸಬಾರದಿತ್ತು ಎನ್ನುವ ನನ್ನ ತರ್ಕಕ್ಕೆ ಎಲ್ಲೂ ಯಾವ ಮಾನ್ಯತೆಯೂ ಸಿಗೋದಿಲ್ಲ, ಏಕೆಂದರೆ ಇಂದು ಇಸ್ರೇಲ್‌ನ ಧಾಳಿಯನ್ನು ಬೆಂಬಲಿಸಿದಂತೆಯೇ ಅಂದು ಇರಾಕ್ ಯುದ್ಧವನ್ನು ಬೆಂಬಲಿಸಿದ ಹೆಚ್ಚಿನ ರಾಷ್ಟ್ರಗಳು - ಬ್ರಿಟನ್, ಅಮೇರಿಕ, ಆಸ್ಟ್ರೇಲಿಯಾ, ಇತ್ಯಾದಿ - ಇವುಗಳಲ್ಲೆದರ ಮುಖಂಡರು ಮತ್ತೆ ಆರಿಸಿ ಬಂದಿದ್ದನ್ನು ನೋಡಿದರೆ ನನ್ನ ಲೆಕ್ಕದಲ್ಲೇ ಎಲ್ಲೋ ತಪ್ಪಿದೆ ಎನ್ನಿಸುವುದರ ಗುಟ್ಟು ನನಗೆ ಇನ್ನೂ ಹೊಳೆದಿಲ್ಲ!

2 comments:

Rajesh said...

ಅಂತರಂಗಿಗಳೇ,

ನಿಮ್ಮ ಈ ವಿಚಾರಕ್ಕೆ ಸಮಕಾಲೀನವಾಗಿ ನನ್ನ ತಲೆಯಲ್ಲೂ ಇದು ಸುಳಿದಿತ್ತು. ಯಾರು ತಪ್ಪೋ ಯಾರು ಸರಿಯೋ ! ಆದರೆ ಇಸ್ರೇಲ್‍ನ ಧೈರ್ಯ ಮಾತ್ರ ಮೆಚ್ಚಬೇಕಾದ್ದೇ ! ಯಾಕೆಂದರೆ ಸುತ್ತುವರಿದ ಅರಬ್ ದೇಶಗಳ ಗಣನೆಯೇ ಇಲ್ಲದೇ ಈ ಹಿಸಬುಲ್ಲಾಗಳ ಮೇಲೆ ಬಾಂಬು ಸುರಿಯುವುದು ಅಂದರೆ ಸಾಮಾನ್ಯವೇ? ಸರಿ, ನಮ್ಮ ಭಾರತ ಈ ಕಾಶ್ಮೀರಿ ಭಯೋತ್ಪಾದಕರ ಮೇಲೆ ಪಾಕಿಸ್ತಾನದ ಒಳಗೆ ಹೋಗಿ ಏನಾದರೂ ಮಾಡುವ ಧೈರ್ಯ ಬಂದೀತೇ?

ಚೆನ್ನಾಗಿ ಬರೆಯುತ್ತೀರಿ, ಮುಂದುವರೆಸಿ

ರಾಜೇಶ್
ಸಿಂಗಪುರ

Anonymous said...

ಹೌದು. ಇಸ್ರೇಲ್ ಸ್ವಲ್ಪ aggressive ಆಗೆ ಇರಬೇಕು. ಇಸ್ರೇಲಿಗಳಿಗೆ ಚೆನ್ನಾಗಿ ಗೊತ್ತು 'ನಾವು ಶಾಂತಿ ಗೀಂತಿ ಅಂತ ಹೋದರೆ ಈ ಮುಲ್ಲಾಗಳು ಮುಗಿಸಿಬಿಡ್ತಾರಂತ'. ಆದರೂ ಒಮ್ಮೆ ಲೆಬೆನಾನ್ ಆ ಅಮಾಯಕ ಜೀವಗಳ ಕುರಿತು ಸ್ವಲ್ಪ ಕನಿಕರ ಇರಬೇಕಿತ್ತು.

ಇನ್ನು ಕಾಶ್ಮೀರದ ವಿಷಯಕ್ಕೆ ಬಂದರೆ ಭಾರತ ನಿಜವಾಗಿಯೂ ಚೈನಾದ ಹೆದರಿಕೆಯಿಂದ ಮತ್ತು ದೇಶದಲ್ಲಿ ಸಂಭವಿಸಬಹುದಾದ civil war ಗಳ ಬಗ್ಗೆ ಹೆದರಿದಂತಿದೆ. ಇಲ್ಲವಾದಲ್ಲಿ ಇಷ್ಟೊಂದು ಧನ, ಹಣ ವ್ಯಯಿಸಬೇಕಾದ್ದಿರಲಿಲ್ಲ.