Wednesday, July 19, 2006

antarangi fired!

'ಅಂತರಂಗ' ನೂರನೇ ಬರಹವನ್ನು ಮುಟ್ಟುತ್ತಿರುವ ಹಿನ್ನೆಲೆಯಲ್ಲಿ ಸಂತೋಷ ಸಮಾರಂಭಗಳನ್ನು ಏರ್ಪಡಿಸಬೇಕಾಗಿದ್ದ ಜವಾಬ್ದಾರಿಯನ್ನು ಹಗುರವಾಗಿ ತೆಗೆದುಕೊಂಡ 'ಅಂತರಂಗಿ'ಯನ್ನು ಈ ಕೂಡಲೇ ಕೆಲಸದಿಂದ ವಜಾ ಮಾಡಲಾಗಿದೆ!

ಹೀಗೆ ದಿಢೀರನೆ ತೆಗೆದುಕೊಂಡ ಮ್ಯಾನೇಜ್‌ಮೆಂಟ್ ನಿರ್ಣಯದಿಂದ ಮಾಡುವ ದಿನನಿತ್ಯದ ಕೆಲಸಗಳಿಗೆ ತೊಂದರೆಯಾಗಲಿದೆ ಎಂದು ಗೊತ್ತಿದ್ದರೂ ಈ ರೀತಿ ಮಾಡಬೇಕಾದ್ದು ಅನಿವಾರ್ಯವಾಗಿರೋದನ್ನು ವಿಷಾದಿಸುತ್ತೇವೆ. ಏನೇ ಆದರೂ 'ಕಾಯಕವೇ ಕೈಲಾಸ'ವಾದ್ದರಿಂದ ಕೆಲಸ ಕಾರ್ಯಗಳು ಎಂದಿನಂತೆ ಮುಂದುವರೆಯುವುದು ಅಗತ್ಯ - ನಾಳೆ, ಅಂದರೆ ಗುರುವಾರ, ಈಸ್ಟರ್ನ್ ಡೇ ಲೈಟ್ ಟೈಮ್‌, ಮುಂಜಾನೆ ೮ ಘಂಟೆಗೆ ಅಂತರಂಗಿಯೊಂದಿಗೆ ಒಂದು ಬ್ರೌನ್ ಬ್ಯಾಗ್ ಸೆಷನ್ ಅನ್ನು ಇಟ್ಟುಕೊಳ್ಳಲಾಗಿದೆ, ಅಲ್ಲಿ ಅಂತರಂಗಿಯವರು ತಮ್ಮ ಕೆಲಸ ಕಾರ್ಯಗಳ ಬಗ್ಗೆ ವಿವರವಾಗಿ ತಿಳಿಸುವುದೂ ಅಲ್ಲದೆ, ತಮ್ಮ ಎಲ್ಲ ಪ್ರಶ್ನೆಗಳಿಗೂ ಉತ್ತರವನ್ನು ಕೊಡುವವರಿದ್ದಾರೆ, ಈ ಸೆಷನ್ ಅನ್ನು ತಪ್ಪದೇ ಅಟೆಂಡ್ ಮಾಡುವಂತೆ ಈ ಮೂಲಕ ಕೋರಲಾಗಿದೆ.

ಅಂತರಂಗಿಯವರ ಕೊಡುಗೆ ಅಪಾರವಾದದ್ದು, ಈ ನಮ್ಮ ಸಂಸ್ಥೆಗೆ ಅವರ ಅಪರಿಮಿತ ಸೇವೆ ಬಹಳ ದೊಡ್ಡ ಹೆಸರನ್ನು ತಂದುಕೊಟ್ಟಿದೆ, 'ನಿಮ್ಮವ'ನಿಂದ ಕಾರ್ಯವನ್ನು ವಹಿಸಿಕೊಂಡ ಮೇಲೆ, ತಿಣುಕಿ-ತಿಣುಕಿ ಬರೆದ ಪರಿಣಾಮವಾಗಿ ಗೂಗಲ್ ಪೇಜ್ ರ್ಯಾಂಕ್‌ನಲ್ಲಿ ಅಂತರಂಗಕ್ಕೆ ನಾಲ್ಕನೇ ಸ್ಥಾನ ದೊರೆತಿದೆ. ಇದು ಶ್ಲಾಘನೀಯ ವಿಚಾರ. ಅಂತರಂಗಿಯವರ ಡಿಪಾರ್ಚರ್ ಅನ್ನು ಸೆಲೆಬ್ರೇಟ್ ಮಾಡಲು, ಶುಕ್ರವಾರ ಸಂಜೆ ಏಳು ಘಂಟೆಗೆ 'ಐರಿಷ್ ಕಾರ್ನರ್' ನಲ್ಲಿ ಹ್ಯಾಪ್ಪಿ ಅವರ್ ಏರ್ಪಡಿಸಲಾಗಿದೆ, ನಿಮ್ಮ ಅನುಕೂಲಕ್ಕೆ ತಕ್ಕಂತೆ ಭಾಗವಹಿಸಿ, drinks are on us!
***

ನಾಳೆ ನಮ್ಮ ಬ್ಯೂರೋಗೆ ಬಿಡುವು, ಶುಕ್ರವಾರದಿಂದ 'ಅಂತರಂಗ' ಮ್ಯಾನೇಜ್‌ಮೆಂಟ್‌ನವರ ನಿಜವಾದ ಹೆಸರಿನಲ್ಲಿ ಮುಂದುವರೆಯಲಿದೆ. ಅಲ್ಲದೇ 'ಅಂತರಂಗ'ದ ಸಂಪೂರ್ಣ ಸೈಟೂ ಸಹ ಒಂದು ಹೊಸ ರೂಪವನ್ನು ಪಡೆಯಲಿದೆ.

ನೂರನೇ ಲೇಖನವನ್ನು ಬರೆಯಲು ಅಂತರಂಗಿಯವರು ಇಲ್ಲದಿರುವುದನ್ನು ವಿಷಾದಿಸಲಾಗಿದೆ ಎಂದು ಬರೆಯುವುದರ ಮೂಲಕ ಮ್ಯಾನೇಜ್‌ಮೆಂಟ್ ನವರು ತಮ್ಮ ಅತೀವ ದುಃಖವನ್ನು ತೋರ್ಪಡಿಸಿಕೊಂಡಿದ್ದಾರೆ.

***

ಸೂಚನೆ: ಈ ಗುಟ್ಟು ನಮ್ಮನಮ್ಮಲ್ಲೇ ಇರಲಿ, ಈ ಕೆಳಗಿನ ಸಾಲುಗಳನ್ನು ಬೇರೆ ಯಾರಿಗೂ ಕಳಿಸುವಂತಿಲ್ಲ, ಹಾಗೆ ಕಳಿಸಿದರೂ ಅದರ ಸಾಧ್ಯತೆ-ಬಾಧ್ಯತೆಗಳಿಗೆ ನಾವು ಹೊಣೆಗಾರರಲ್ಲ. ಈ ಕೆಳಗಿನ ಸಾಲುಗಳು ಈ ಮೆಮೋದ ರಿಸಿಪಿಯಂಟ್‌ಗಳಿಗೆ ಮಾತ್ರ ಸೀಮಿತವಾದದ್ದು.

ಅಂತರಂಗಿ ಕಷ್ಟಜೀವಿಯೇನೋ ನಿಜ, ಆದರೆ ಅವರ ನೈತಿಕತೆ ಹಾಗೂ ಸಮಯ ಪರಿಪಾಲನೆಯ ಬಗ್ಗೆ ನಮಗೆ ಯಾವಾಗಲೂ ಸಂಶಯವಿದ್ದೇ ಇತ್ತು. ಉದಾಹರಣೆಗೆ:

- ಆಫೀಸಿನಲ್ಲಿ ಕೆಲಸ ಮಾಡುವುದರ ಬದಲು ಕಾರ್ಪೋರೇಟ್ ಸಂಪನ್ಮೂಲಗಳನ್ನು ತಮ್ಮ ವೈಯಕ್ತಿಕ ಬಳಕೆಗೆ ಬಳಸುವುದು, ಪದೇ-ಪದೇ ಯಾಹೂ ಇ-ಮೇಲ್‌ಗಳನ್ನು ನೋಡುವುದು, ಕನ್ನಡ ದಿನಪತ್ರಿಕೆಗಳ ಮೇಲೆ ಆಗಾಗ್ಗೆ ಕಣ್ಣಾಡಿಸುವುದು, ಪ್ರಿಂಟರುಗಳನ್ನು ಯಥಾಇಚ್ಛೆ ಬಳಸುವುದು.

- ತನ್ನ ೧೨೮೦ X ೮೦೦ ರೆಸೋಲ್ಯೂಷನ್ ಇರುವ ಆಧುನಿಕ ಲ್ಯಾಪ್‌ಟಾಪ್ ಬಳಕೆಯ ಹೆಮ್ಮೆಯಲ್ಲಿ ಅದು ಎಷ್ಟೋ ಜನ ಬಳಕೆದಾರರನ್ನು ಕಡೆಗಣಿಸಿದ್ದು, ನಾವು ಪದೇಪದೇ ಎಲ್ಲ ತರಹದ ಬಳಕೆದಾರರನ್ನು ಪರಿಗಣಿಸಿ ಎಂದು ಹೇಳಿದ್ದರೂ ನಮ್ಮ ಮಾತಿಗೆ ಯಾವ ಬೆಲೆಯೂ ಇರುತ್ತಿರಲಿಲ್ಲ.

- ಗಹನವಾದ ವಿಷಯಗಳ ಬಗ್ಗೆ ಪರಿಪೂರ್ಣವಾದ ಲೇಖನಗಳನ್ನು ಬರೆಯಿರಿ ಎಂದು ಎಷ್ಟೇ ಬಾಯಿಬಾಯಿ ಬಡಿದುಕೊಂಡರೂ ಇತ್ತೀಚೆಗೆ ಅವರ ಮನಸ್ಸು ಎಮ್ಮೆಯ ಚರ್ಮವಾಗಿ ಹೋಗಿತ್ತು, ಯಾವುದಕ್ಕೂ ಸಂವೇದಿಸುವ ಲಕ್ಷಣಗಳು ತೋರಲಿಲ್ಲ.ಇತ್ಯಾದಿ, ಇತ್ಯಾದಿ...

ಅವರ ಕೊಡುಗೆ ಏನೇ ಇರಲಿ, ಹೇಗೇ ಇರಲಿ, ಅಮೇರಿಕನ್ ಪರಂಪರೆಯಲ್ಲಿ ಅವರನ್ನು 'ಕಮ್ಮ್ಯೂನಿಕೇಷನ್ ಸ್ಕಿಲ್ಸ್' ಇಲ್ಲದಿರುವುದಕ್ಕೆ ಫೈರ್ ಮಾಡಲಾಗಿದೆ ಎಂದು ತಿಳಿಸಲು ವಿಷಾದಿಸುತ್ತೇವೆ.

ನಿಮ್ಮ ಪ್ರಶ್ನೆ, ಸಲಹೆಗಳಿಗೆ ಸ್ವಾಗತ.

----

ವಿಶೇಷ ಸೂಚನೆ: ಈ ಹಣಕಾಸಿನ ಒತ್ತಡದ ಸಂದರ್ಭದಲ್ಲಿ ಬೇರೆ ಯಾರನ್ನೂ ಅಂತರಂಗಿಗಳ ಬದಲಿಗೆ ಕೆಲಸಕ್ಕೆ ತೆಗೆದುಕೊಳ್ಳುತ್ತಿಲ್ಲ, ನಿಮ್ಮ ನಿಮ್ಮಲ್ಲೇ ಅವರ ಕೆಲಸಗಳನ್ನು ಹಂಚುವುದಾಗಿ ತೀರ್ಮಾನಿಸಲಾಗಿದೆ. ಶುಕ್ರವಾರದಿಂದ ಮ್ಯಾನೇಜ್‌ಮೆಂಟ್ ನವರು ಒಂದು ಹೊಸ ಟೈಮ್‌ಟೇಬಲ್ ಅಥವಾ ಟಾಸ್ಕ್ ಲಿಸ್ಟ್ ತಯಾರಿಸಲಿದ್ದಾರೆ ಅದರ ಪ್ರಕಾರ 'ಅಂತರಂಗ'ದ ಕೆಲಸಗಳನ್ನು ಮುಂದುವರಿಸುವಂತೆ ಈ ಮೂಲಕ ತಿಳಿಸುತ್ತಿದ್ದೇವೆ.

ಅಂತರಂಗಿಯವರ ಲಾಗಿನ್, ಆಕ್ಸೆಸ್‌ಗಳನ್ನು ಈಗಾಗಲೇ ಡಿಸೇಬಲ್ ಮಾಡಲಾಗಿದ್ದು, ಕೇವಲ ಯಾಹೂ ಮೆಸ್ಸೇಜ್, ಇ-ಮೇಲ್, ಚಾಟ್‌ಗೆ ಮಾತ್ರ ಅವಕಾಶ ಕೊಡಲಾಗಿದೆ, ಉಳಿದೆಲ್ಲ ಸಿಸ್ಟಮ್ ಪಾಸ್‌ವರ್ಡ್‌ಗಳನ್ನು ಈಗಾಗಲೇ ಬದಲಾಯಿಸಲಾಗಿದೆ.

-ಮ್ಯಾನೇಜ್‌ಮೆಂಟ್

5 comments:

Anveshi said...

ಅಂತರಂಗಿಗಳೇ,
ಗೊಂದಲದ ಗೂಡಲ್ಲಿ ಕಳವಳಿಸುತ್ತಾ ಕುಳಿತಿದ್ದೇನೆ.

ಕೂಡಲೇ ನಿಮ್ಮ ಲಾಗಿನ್ ಹೆಸರು ಮತ್ತು ಪಾಸ್ವರ್ಡ್ ಕಳುಹಿಸುವುದು, ತಪ್ಪಿದಲ್ಲಿ.... ಬಹಿರಂಗವಾದದ್ದನ್ನೆಲ್ಲಾ ಮತ್ತೆ ಅಂತರಂಗದೊಳಗೆ ಇರಿಸಿಕೊಳ್ಳಲಾಗುವುದು.


ನಿಮ್ಮ ಬ್ರೌನ್ ಬ್ಯಾಗು ಶೇಷನ್ ಎಲ್ಲಿ ಎಂದು ತಿಳಿಸುವುದು, ಇಲ್ಲವಾದಲ್ಲಿ, ಮೀಟಿಂಗ್‌ಗೆ ಅಟೆಂಡ್ ಆಗಲು ಸಾಧ್ಯವಿಲ್ಲವಾದ್ದರಿಂದ ಈಟಿಂಗನ್ನು ಕಳುಹಿಸಿಕೊಡಲು ಕೋರಲಾಗಿದೆ.

Anonymous said...

ಅಷ್ಟು ಚೆನ್ನಾಗಿ ಬರೆಯುತ್ತಿದ್ದ ಅಂತರಂಗಿಯನ್ನು ಅನ್ಯಾಯದಿಂದ ಕೆಲಸದಿಂದ ತೆಗೆದಿದ್ದಕ್ಕಾಗಿ ನಿಮ್ಮ ಕಛೇರಿ ಮುಂದೆ ಧರಣಿ ನಡೆಸಲಿದ್ದೇವೆ. ಎಚ್ಚರಿಕೆ!!

Rajesh said...
This comment has been removed by a blog administrator.
Rajesh said...

ಅಲ್ರೀ...

ಒಳ್ಳೆ ಅಡ್ದಗೋಡೆ ಮೇಲೆ ದೀಪ ಇಟ್ಟ ಹಾಗೆ ಮಾತಾಡ್ತೀರಲ್ರೀ ? ಅಂತರಂಗಿಯನ್ನು ಹೊಡೆದೋಡಿಸಲು ನೀವು ಯಾರು, ನಿಮ್ಮ ಹಕ್ಕೇನು? ಹಂ.....

Satish said...

ಬರೀ ಮೋಸ, ನೋಡಿದ್ರಾ ನನ್ನನ್ನೇ ಎತ್ತಿ ಬಿಸಾಕಿದಾರೆ! ಯಾಕೆ ಏನು ಅಂತ ಕೇಳಿದ್ರೆ ಮೇಲ್ಗಡೆ ಕೈ ತೋರಿಸ್ತಾರೆ...
ಜನಗಳು ಹಿಂಗೇ ನೋಡಿ, ದುಡಿಸ್ಕೊಳೋದು ಅಮೇಲೆ ರಸಬಿಟ್ಟ ಕಬ್ಬಿನ ಜಲ್ಲೆ ಥರ ಬಿಸಾಕೋದು.

ಅನ್ವೇಷಿಗಳೇ, ಲೋಕದ ಈ ಅಸತ್ಯದ ಹಿಂದಿರೋ ಮರ್ಮಾನಾ ಏನಾದ್ರೂ ಶೋಧನೇ ಮಾಡ್ತಾ ಇದ್ದೀರೋ ಹ್ಯಾಗೆ?
(ಅಲ್ದೇ, ನಿಮ್ ಬ್ಯೂರೋದಲ್ಲಿ ಕೆಲ್ಸಾನೂ ಕೊಟ್ಟಿದ್ರೆ ಎಷ್ಟೋ ಚೆನ್ನಾಗಿತ್ತು)

ತ್ರಿವೇಣಿ ಅವರೇ, ಹೋಗ್ಲಿ ಬಿಡಿ, ಧರಣೀ-ಗಿರಣಿ ಎಲ್ಲಾ ನಮ್ಮಂಥೋರಿಗಲ್ಲ!

ರಾಜೇಶ್ ಅವರೇ, ಈ ಮ್ಯಾನೇಜ್‌ಮೆಂಟ್‌ನೋರೇ ಹಾಗೆ, ಯಾವತ್ತೂ ನೇರವಾದ ಉತ್ರ ಕೊಡಲ್ಲ, ಹೊಟ್ಟೆಗದೇನ್ ತಿಂತಾರೋ ಯಾರಿಗ್ಗೊತ್ತು!