ಮುಖವಾಡಗಳ ಹಿಂದೆ, ಮುಂದೆ
ನಾವೆಲ್ಲರೂ ದಿನನಿತ್ಯದ ಕೆಲಸ ಕಾರ್ಯಗಳಲ್ಲಿ, ಸಮಯ ಸಂದರ್ಭಕ್ಕೆ ತಕ್ಕಂತೆ ಮುಖವಾಡಗಳನ್ನು ತೊಟ್ಟುಕೊಳ್ಳುತ್ತೇವೆ. ಅದೂ ಒಂದು ರೀತಿಯ ಪ್ರಯೋಗವೇ, ಮೊದಮೊದಲು ಹೀಗೆ ಮಾಡಿದರೆ ಹೇಗೆ, ಹೀಗಿದ್ದರೆ ಏನಾದೀತು, ಹೀಗಂದರೆ ಏನಾಗುತ್ತೋ ನೋಡೋಣ ಎನ್ನುವ ಚಿಕ್ಕಚಿಕ್ಕ ದಿನನಿತ್ಯದ ಕನ್‌ವೆನ್‍ಷನ್‌ಗಳು ಅನಂತರ ನಮ್ಮ ಕ್ಯಾರೆಕ್ಟರ್ ಆಗಿಬಿಡುತ್ತವೆ, ಒಮ್ಮೆ ನಮ್ಮ ವ್ಯಕ್ತಿತ್ವವನ್ನು ರೂಪಿಸಿಬಿಟ್ಟ ಮುಖವಾಡಗಳು ನಮ್ಮನ್ನು ಬಿಟ್ಟು ಹೋಗೋದೇ ಇಲ್ಲ! ಹೀಗೆ ಮುಖವಾಡಗಳ ಮೇಲೆ ಮುಖವಾಡ, ಬಣ್ಣದ ಮೇಲೆ ಬಣ್ಣ ಹಚ್ಚಿ-ಹಚ್ಚಿ ಮೂಲ ರೂಪ ಮರೆಯಾಗುವುದೂ ಅಲ್ಲದೇ ಯಾವುದು ಮೂಲ, ಯಾವುದು ಸುಮ್ಮನೇ ಹುಟ್ಟಿಸಿದ್ದು (pretentious) ಎನ್ನುವ ಗೊಂದಲ ನನಗಂತೂ ಆಗಿದೆ.
ನಾವು ಯಾವ ಅಕ್ಷರಗಳನ್ನು ಹೇಗೆ ಬರೆಯುತ್ತೇವೆ, ಯಾವ ರೀತಿ ಹಾವ ಭಾವಗಳನ್ನು ಬೆಳೆಸಿಕೊಳ್ಳುತ್ತೇವೆ ಅನ್ನೋದು ನಮ್ಮ ನೆರೆಹೊರೆಯ ಮೇಲೆ ಹೆಚ್ಚಾಗಿ ಅವಲಂಭಿತವಾಗಿದೆ, ನಮ್ಮ ಇಂಗ್ಲೀಷ್ ಮೇಷ್ಟ್ರು ಬೋರ್ಡಿನ ಮೇಲೆ ಬಳ್ಳಿಯ ಹಾಗೆ ಸುತ್ತಿ 'A' ಅಕ್ಷರವನ್ನು script ನಲ್ಲಿ ಬರೆಯುತ್ತಿದ್ದುದನ್ನು ನಾನೂ ಹಚ್ಚಿಕೊಂಡೆ ಎನ್ನುವ ಸರಳ ಅನುಕರಣೆಯಾಗಿರಬಹುದು, ಅಥವಾ ಯಾವುದೋ ಒಂದು ಸಿನಿಮಾದಲ್ಲಿ ಮೈಕಲ್ ಡಗ್ಲಾಸ್ ಅಥವಾ ರಾಜ್‌ಕುಮಾರ್ ಪಾತ್ರ ಯಾವುದೋ ಒಂದು ಸಂದರ್ಭಕ್ಕೆ ವಿಶೇಷವಾಗಿ ತೋರಿಸಿದ ಪ್ರತಿಕ್ರಿಯೆ ಇದ್ದಿರಬಹುದು. ಹೀಗೆ ದಿನನಿತ್ಯವೂ ಅಲ್ಲಲ್ಲಿ ನಮ್ಮ ಮೇಲೆ ಹೊರಗಿನ influence ಗಳು ತಮ್ಮ ಛಾಪನ್ನು ಒತ್ತುತ್ತಲೇ ಇರುತ್ತವೆ, ಇನ್ನು ಮನಸ್ಸಿನ ಒಳಗೂ ನಡೆಯುವ ಹಲವಾರು ತಾಲೀಮುಗಳು ಪ್ರತಿಯೊಂದು ಕ್ರಿಯೆಗೆ ಇದೇ ರೀತಿ ಉತ್ತರ ಕೊಡುವಂತೆ ಪ್ರಚೋದಿಸುತ್ತವೆ. ಎಲ್ಲೋ ಹುಟ್ಟಿ, ಈ ಒಳ-ಹೊರಗಿನ ವ್ಯಾಪಾರದಲ್ಲಿ ಪಳಗಿ, ದಿನನಿತ್ಯವೂ ತಕ್ಕ ಮಟ್ಟಿಗೆ ಬದಲಾಗುವ ನಡತೆಯಾಗಿಬಿಡುತ್ತದೆ.
ನನಗೆ ಇನ್ನೂ ಚೆನ್ನಾಗಿ ನೆನಪಿರೋ ಹಾಗೆ, ನಾನು ಏಳನೇ ಕ್ಲಾಸಿನಲ್ಲಿದ್ದಾಗ ಒಂದು ದಿನ ಹೀಗೇ ಮಧ್ಯಾಹ್ನ ನಿದ್ದೆಯಿಂದ ಎದ್ದವನೇ, ಇನ್ನೂ ನಿದ್ದೆಗಣ್ಣಿನಲ್ಲಿಯೇ ನನ್ನ ಅಕ್ಕನನ್ನು ಕೇಳಿದ ಪ್ರಶ್ನೆಯೊಂದು ನನ್ನನ್ನು ಬಹಳಷ್ಟು ಸತಾಯಿಸಿತ್ತು. ಅವಳು ಹೊರಗಡೆ ಅವಳ ಸ್ನೇಹಿತೆಯ ಜೊತೆ ಮಾತನಾಡುತ್ತಿದ್ದಳು, ನಾನು ಇನ್ನೂ ಕಣ್ಣು ಉಜ್ಜಿಕೊಳ್ಳುತ್ತಲೇ, 'ನನ್ನ ಮುಖವಾಡ ಎಲ್ಲಿದೆ? ಎಲ್ಲಿಟ್ಟಿದ್ದೀ...' ಎಂದು ಒಂದು ರೀತಿಯ ಕೋಪ ಮಿಶ್ರಿತ ಧ್ವನಿಯಲ್ಲಿ ಕೇಳಿದಾಗ ಅವಳೂ, ಆಕೆಯ ಸ್ನೇಹಿತೆಯೂ ಕಕ್ಕಾಬಿಕ್ಕಿಯಾಗಿ ನನ್ನನ್ನೇ ನೋಡಿ 'ಯಾವ ಮುಖವಾಡ?' ಎಂದು ಕೇಳಿದ್ದರು, ಆದರೆ ಅದರ ನಂತರ ನಮ್ಮಿಬ್ಬರ ನಡುವೆ ಒಂದು ರೀತಿಯ ಮೌನ ಹುಟ್ಟಿ, ನಾನು ಕುರ್ಚಿಯ ಮೇಲೆ ಪ್ರಪಂಚವೆಲ್ಲ ನನ್ನ ತಲೆಯ ಮೇಲೆ ಬಿದ್ದಿದೆ ಎನ್ನೋ ಹಾಗೆ ಬಹಳಷ್ಟು ಹೊತ್ತು ಕುಳಿತದ್ದು ನನಗೆ ಇನ್ನೂ ಚೆನ್ನಾಗಿ ನೆನಪಿದೆ. ನಾನು ಆಗ ಮುಖವಾಡ ಹುಡುಕಿದ್ದು ಏಕೆಂದರೆ ಆಗ ಓದುತ್ತಿದ್ದ ಕನ್ನಡ ಪತ್ತೇದಾರಿ ಕಾದಂಬರಿಗಳ ಪರಿಣಾಮವೋ ಮತ್ತೊಂದೋ ಎನ್ನೋ ಹಾಗೆ ನನ್ನ ಮುಖದ ತುಂಬೆಲ್ಲ ಆಸಿಡ್ ಬಿದ್ದ ಹಾಗೆ, ಹಾಗೂ ನಾನು ಮುಖವಾಡವಿಲ್ಲದೇ ಎಲ್ಲೂ ಹೋಗದ ಹಾಗೆ ಕನಸೊಂದು ಬಿದ್ದಿದ್ದು. ಆ ಕನಸು ನನ್ನ ಮೇಲೆ ಎಷ್ಟು ಗಾಢವಾದ ಪರಿಣಾಮವನ್ನು ಬೀರಿತ್ತು ಎಂದರೆ ಅದರಿಂದ ಹೊರಬರಲು ಬಹಳಷ್ಟು ಸಮಯ ಹಿಡಿಯಿತು, ಅಲ್ಲದೇ ನಾನು ಮುಖವಾಡ ಕೇಳಿದೆನೆಂದು ನನ್ನ ಅಕ್ಕ ಬಹಳಷ್ಟು ದಿನ ನನ್ನನ್ನು ತಮಾಷೆ ಮಾಡಿ ಸತಾಯಿಸುತ್ತಲೇ ಇದ್ದಳು.
ನನ್ನ ಸ್ನೇಹಿತರೊಬ್ಬರನ್ನು ವಾಷಿಂಗ್ಟನ್ ಡಿಸಿಯಲ್ಲಿ ಕಾರಿನಲ್ಲಿ ತಿರುಗಾಡಿಸುತ್ತಿದ್ದೆ, ನನ್ನ ಬಯಲು ಸೀಮೆಯ ಕನ್ನಡದ ದೆಸೆಯಿಂದ ಆಗ ಮಾತಿನಲ್ಲಿ ಬಹಳಷ್ಟು ಆ ಮಗ..., ಈ ಮಗ... ಎನ್ನೋ ಬೈಗಳು ಹೊರಬರುತ್ತಲೇ ಇದ್ದವು. ನನ್ನ ಸ್ನೇಹಿತರು ಬಹಳಷ್ಟು ಹೊತ್ತು ನೋಡಿ 'ನೀವೇಕೆ ಅಷ್ಟೊಂದು ಬೈಗಳವನ್ನು ಮಾತಿನಲ್ಲಿ ಬಳಸೋದು!' ಎಂದು ಕೇಳಿಯೇ ಬಿಟ್ಟರು, ನಾನು ಕಕ್ಕಾಬಿಕ್ಕಿಯಾದೆ, ಅದು ನನ್ನ ನೇಚರ್ ಆಗಿರಬಹುದು, ಅಥವಾ ಆ ಬೈಗಳುಗಳಿಗೆ ನಿರ್ಧಿಷ್ಟ ಅರ್ಥವಿರದ ಸುಮ್ಮನೇ ಆಡುವ ಮಾತಿನ ಒಂದು ಭಾಗವಾಗಿರಬಹುದು, ಅಥವಾ ನಾನು ಬೆಳೆದು ಬಂದ ನೆರೆಹೊರೆಯ ಪರಿಣಾಮವಿರಬಹುದು. ಏನೇ ಆದರೂ ಒರಟು ಕನ್ನಡವನ್ನು ಮಾತನಾಡುತ್ತ tough looking ಮುಖವಾಡವನ್ನು ಹಾಕಿಕೊಂಡಿದ್ದೆನೆ ಎಂದುಕೊಂಡವನಿಗೆ ಅದು ನನ್ನ ಮುಖವಾಡವಲ್ಲ, ಮುಖ ಎಂದು ತಿಳಿದದ್ದು ಬಹಳ ಚಿಂತೆಗೆ ಈಡು ಮಾಡಿತು. ನನ್ನ ಸಹೋದ್ಯೋಗಿಗಳಲ್ಲಿ ನ್ಯೂ ಯಾರ್ಕ್ ಮೂಲದವರಿಗೆ ಒಂದು ರೀತಿಯ ಮಾತಿನ ಶೈಲಿಯಿದೆ, ಅವುಗಳಲ್ಲಿ ಬೈಗಳವೂ ಪ್ರಾದಾನ್ಯತೆ ಪಡೆಯುತ್ತವೆ, ಎಷ್ಟೋ ಬಾರಿ 'f' ಪದಗಳು ಎಗ್ಗಿಲ್ಲದೆ ಎಲ್ಲಿ ಬೇಕಂದರಲ್ಲಿ ಹರಿದು ಬರುತ್ತವೆ, ಹಲವಾರು ಹಿನ್ನೆಲೆಯಿಂದ ಬಂದ ಕೇಳುಗರಿಗೆ ಮುಜುಗರವಾದರೂ ನ್ಯೂ ಯಾರ್ಕ್ ಮೂಲದ ಸಹೋದ್ಯೋಗಿಗಳಿಗೆ ಇದರ ಬಗ್ಗೆ ಏನೇನೂ ಅನ್ನಿಸುವುದೇ ಇಲ್ಲ! ಅದು ಒಂದು ರೀತಿಯಲ್ಲಿ ಒಳ್ಳೆಯದೇ ಏಕೆಂದರೆ ಅವರ ನೇಚರ್ ಹಾಗಿರುತ್ತದೆ, ಅವರು ಎಲ್ಲಿ ಹೋದರೂ ಹಾಗೆಯೇ ಇರೋದು, ಅದರ ಬದಲಿಗೆ ನನ್ನಂತೆ ಸೆಲೆಕ್ಟೆಡ್ ಆಗಿ ಮಾತುಗಳನ್ನು ಬದಲಾಯಿಸುವ ಗೋಜಿಗೆ ಹೋದರೆ ಮುಖ ಹಾಗೂ ಮುಖವಾಡಗಳ ನಡುವೆ ಗೊಂದಲವಾಗಿ ಹಾಸ್ಯಾಸ್ಪದವಾಗುವ ಸಾಧ್ಯತೆಗಳೇ ಹೆಚ್ಚು. ಬೈಗಳವನ್ನು ಅಲ್ಲಲ್ಲಿ ಉದ್ದೇಶ ಪೂರ್ವಕವಾಗಿ ತುರುಕುವ ನಾನು ಕೆಲವೊಮ್ಮೆ ಯಾರಾದರೂ ಮಾತಿನ ಮಧ್ಯೆ 'damn' ಎಂದು ಹೇಳಿದಾಗಲೆಲ್ಲ ಅದನ್ನು 'darn' ಎಂದು ಬದಲಾಯಿಸಿ ಸಂಭಾಷಣೆಯಲ್ಲಿ ಒಂದು ಒಳ್ಳೆಯ ಎಳೆಯನ್ನು ನೇಯ್ದು ಬಿಡುತ್ತೇನೆ.
ಮುಖವಾಡ ನಮಗೆ ಒಂದು ರೂಪವನ್ನು ತತ್ಕಾಲಕ್ಕೆ ತಂದುಕೊಡಬಲ್ಲದು, ಹೊಸದಾಗಿ ಕೇಳುವವರ/ನೋಡುವವರ ಮನಸ್ಸಿನಲ್ಲಿ ಒಂದು ಮೂರ್ತಿಯನ್ನು ನಿಲ್ಲಿಸಬಹುದು ಆದರೆ ಧರಿಸುವ ಮುಖವಾಡಗಳನ್ನು ಹತೋಟಿಯಲ್ಲಿಡದೇ ಹೋದರೆ ಒಂದು ರೀತಿಯಲ್ಲಿ multiple personalityಯನ್ನು ಸದಾಕಾಲ ನಿಲ್ಲಿಸಿಬಿಡುವ ಸಾಧ್ಯತೆಗಳೇ ಹೆಚ್ಚಾಗಿ ಕೊನೆಗೆ ಮುಖವಾಡವೇ ಮುಖವಾಗಿ ಬಿಡುವ ಅನಾಹುತವಾಗಿ ಹೋಗುತ್ತದೆ. ನನ್ನ ಹಾಗೆಯೇ ಎಲ್ಲರೂ ಒಂದಲ್ಲ ಒಂದು ಮುಖವಾಡವನ್ನು ತೊಡುತ್ತಾರಾದರೂ ಅವುಗಳನ್ನು ಉಳಿದವರು ಹೇಗೆ ನಿಭಾಯಿಸುತ್ತಾರೆ, ಈ ಮುಖವಾಡಗಳ ಹಿಂದಿನ ವ್ಯಕ್ತಿಯ ಪರಿಚಯವಾಗುವುದಾದರೂ ಹೇಗೆ, ಮುಖವಾಡಗಳ ಹಿನ್ನೆಲೆಯಲ್ಲಿ ಯಾವ ರೀತಿಯ ನಡತೆ ಯಾವ ರೀತಿಯ ಪ್ರತಿಕ್ರಿಯೆಯನ್ನು ಹುಟ್ಟಿಸಬಲ್ಲದು, ಮುಖವಾಡಗಳನ್ನು ತೊಟ್ಟುಕೊಂಡವರ ಇಂಥ ಪ್ರತಿಕ್ರಿಯೆಗಳಿಗೆ ಅದರ ಮುನ್ನೆಲೆಯಲ್ಲಿ ಎಂತೆಂಥಹ ನಿರೀಕ್ಷೆಗಳು ಹುಟ್ಟಬಲ್ಲವು ಎಂಬ ಯೋಚನೆ ಯಾವತ್ತಿಗೂ ನನ್ನನ್ನು ಸುತ್ತಿಕೊಳ್ಳುತ್ತಲೇ ಇರುತ್ತೆ.
ನೀವು ತೊಟ್ಟ ಮುಖವಾಡಗಳ ಹಿನ್ನೆಲೆ ಏನು ಎಂದು ಆಲೋಚಿಸುವುದಕ್ಕೆ ಒಂದು ಎಳೆ ಸಿಕ್ಕಂತಾಯಿತೇ?
No comments:
Post a Comment