Monday, July 10, 2006

ವೇಗವಾಗಿ ಇಂಗ್ಲೀಷ್ ಓದಲಾರದ ಸಂಕಟ

ಇತ್ತೀಚೆಗೆ ನಾನು ರೇಡಿಯೋ/ಟಿವಿಯಲ್ಲಿ ಬರೋ ಯಾವ್ದೇ ಕಾರ್ಯಕ್ರಮ ಕೇಳಿ/ನೋಡಿದ್ರೂ ಅದರಲ್ಲಿ ಬರೋ ಅತಿಥಿಗಳಾಗ್ಲಿ, ಅಥವಾ ಪ್ರತಿನಿಧಿಗಳಾಗ್ಲಿ ಎಲ್ಲರೂ ಒಂದಲ್ಲಾ ಪುಸ್ತಕವನ್ನು ಬರೆದವರೆ. ನಾನು ಇಂಗ್ಲೀಷ್ ಆಡೋ ದೇಶದಲ್ಲಿ ಇದ್ದೇನೆ ಅನ್ನೋ ವಿಷ್ಯಾ ಮಾತ್ರವಲ್ಲ ಅಂತಾರಾಷ್ಟ್ರೀಯ ಮಟ್ಟದಲ್ಲೂ ಬಹಳಷ್ಟು ಜನ ಪುಸ್ತಕಗಳನ್ನು ಬರೆದಿರೋದು ನನ್ನ ಗಮನಕ್ಕೆ ಬರ್ತಾಲೇ ಇದೆ. ಎಲ್ಲಿ ನೋಡಿದ್ರೂ ಭಯೋತ್ಪಾದಕರ ಕುರಿತಾಗಿರಲಿ, ಪಾಲಿಸಿ/ಪ್ರೊಸೆಸ್‌ಗಳನ್ನು ವಿವರಿಸಿಯೋ, ಅರ್ಥಶಾಸ್ತ್ರ, ಅಥವಾ ಇತ್ತೀಚಿನ ವಿದ್ಯಮಾನಗಳನ್ನು ಕುರಿತೋ ಒಂದಲ್ಲ ಒಂದು ಪುಸ್ತಕವನ್ನು ತಮ್ಮ ಬಯೋಡೇಟಾದಲ್ಲಿ ಸೇರಿಸಿಕೊಂಡೋರೇ ಕಾಣಿಸುತ್ತಿದ್ದಾರೆ. ನನಗೆ ಆಶ್ಚರ್ಯವಾಗುವಂತೆ ಹೆಚ್ಚಿನವರು ಒಂದೇ ಪುಸ್ತಕವನ್ನು ಬರೆದು, ಅದರಿಂದಲೇ ಹೆಸರು ಮಾಡಿದವರೋ ಅಥವಾ ನ್ಯೂ ಯಾರ್ಕ್ ಟೈಮ್ಸ್ ಬೆಸ್ಟ್ ಸೆಲ್ಲರ್ ಎಂಬ ಟೈಟಲ್ ಪಡೆದೋ ಖ್ಯಾತನಾಮರಾಗುತ್ತಿದ್ದಾರೆ. ಇಂತಹ ದಿಗ್ಗಜರ ನಡುವೆ ನನ್ನ ಅಳಲೇನೆಂದರೆ ನನಗೆ ಮೊದಲೇ ಇವನ್ನೆಲ್ಲ ಓದಿ, ಅವುಗಳನ್ನು ಅರ್ಥ ಮಾಡಿಕೊಳ್ಳುವಷ್ಟು ಪುರುಸೊತ್ತಿಲ್ಲ, ಅದರ ಜೊತೆಯಲ್ಲಿ 'ಗಂಡ್ ಸತ್ ದುಕ್ಕ ಒಂದ್ ಕಡೆ, ಬಡ್ ಕೂಪಿನ ಉರಿ ಮತ್ತೊಂದ್ ಕಡೆ' ಅನ್ನೋ ಹಾಗೆ ನನ್ನ ಇಂಗ್ಲೀಷ್ ಓದಿನ ವೇಗ ಅಂದ್ರೆ ಬಸವನ ಹುಳಕ್ಕೂ ಬೇಸರ ಬಂದು ಬಿಡೋ ಹಾಗಿದೆ!

ನಮ್ಮನೆಯಲ್ಲೆಲ್ಲ ಕನ್ನಡ ಭಕ್ತರ ಸಂಖ್ಯೆ ಹೆಚ್ಚಿತ್ತೇ ವಿನಾ ಯಾರೊಬ್ಬರಾಗಲಿ ಇಂಥಾ ಒಂದು ಇಂಗ್ಲೀಷ್ ಪುಸ್ತಕ ಇದೆ ಓದು ಎಂದು ಯಾವತ್ತೂ ತಿವಿದಿದ್ದು ನನಗೆ ನೆನಪಿಲ್ಲ. ನಾನು ಶಾಲಾ ದಿನಗಳಲ್ಲಿ ಓದಿದ ಪದ್ಯ, ಪಾಠಗಳು ಏನಿದ್ದರೂ ಇಂಗ್ಲೀಷ್ ಪಠ್ಯ ಪುಸ್ತಕದ ಮಿತಿಯಲ್ಲಿ ಮಾತ್ರ ಇತ್ತು. ಮುಂದೆ ಕಾಲೇಜಿನ ನಂತರದ ದಿನಗಳಲ್ಲಿ ಅವರಿವರು ಸೂಚಿಸದರೆಂದು ಹಾಗೂ ಅಲ್ಲಲ್ಲಿ ಇಂಗ್ಲೀಷ್ ಮೇಷ್ಟ್ರುಗಳಿಂದ ಪ್ರಭಾವಿತನಾಗಿ ಚೂರೂಪಾರೂ ಇಂಗ್ಲೀಷ್ ಓದಿದ್ದಿದೆ, ಆದರೆ ನನ್ನ ಕನ್ನಡದ ಓದಿನ ವಾಲ್ಯೂಮ್ ಹಾಗೂ ವೇಗದ ಮುಂದೆ ಇಂಗ್ಲೀಷ್ ಏನೇನೂ ಇಲ್ಲ. ಚೂರೂಪಾರೂ ಹಿಂದಿ ಸಾಹಿತ್ಯವನ್ನು ಓದಿದ್ದೇನಾದರೂ ಅದು ಇಂಗ್ಲೀಷಿನ ಹಾಗೆ ಕಷ್ಟ, ಅದರಲ್ಲೂ ಅವರು ಉರ್ದು, ಪಾರಸಿ ಶಬ್ದಗಳ ಬಳಕೆಯನ್ನೇನಾದರೂ ಹೆಚ್ಚು ಮಾಡಿದರೆ ಪೇಟೆಯಲ್ಲಿ ಕಳೆದುಕೊಂಡ ಗುಬ್ಬಿ ಮರಿಯಾಗಿ ಬಿಡುತ್ತೇನೆ. ಅಲ್ಲಲ್ಲಿ ಕಷ್ಟಪಟ್ಟು ಇಂಗ್ಲೀಷ್ ಓದುವಾಗಲೂ ಭಯಂಕರ ವೇದನೆಯಾಗುತ್ತಿತ್ತು ಏಕೆಂದರೆ ಒಂದು ಡಿಕ್ಷನರಿ ಹತ್ತಿರವಿರಲೇಬೇಕಲ್ಲ ಅದಕ್ಕೆ! ಉದಾಹರಣೆಗೆ ನಾನು ಲಂಕೇಶ್ ಪತ್ರಿಕೆಯನ್ನು ಬಸ್ಸು ಹತ್ತುವಾಗ ಕೊಂಡರೆ ಅದನ್ನು ಅರ್ಧ-ಮುಕ್ಕಾಲು ಘಂಟೆ ಒಳಗೆ, ಅಥವಾ ಬಸ್ಸಿಳಿಯುವುದರ ಒಳಗೆ ಓದಿ ಬಿಸಾಡುತ್ತಿದ್ದೆ, ಅದೇ ಇಲ್ಲಸ್ಟ್ರೇಟೆಡ್ ವೀಕ್ಲಿಯನ್ನು ಕೊಂಡುಕೊಂಡಾಗೆಲ್ಲ, ಬಸ್ಸಿಳಿದು, ಮನೆಮುಟ್ಟಿ, ಮುಂದಿನವಾರದ ಪತ್ರಿಕೆ ಪ್ರಕಟವಾದರೂ ಆ ಪತ್ರಿಕೆಯನ್ನು ಓದಿ ಮುಗಿಸಲಾಗುತ್ತಿರಲಿಲ್ಲ. ಇಂಗ್ಲೀಷ್ ಓದುವ ವೇಗ ಓದೋದರಿಂದಲೇ ಬೆಳೆಯುತ್ತದೆ ಎಂದು ಯಾರೋ ಹೇಳಿದರೆಂದು ಒಂದಾರು ತಿಂಗಳು ಇಂಡಿಯನ್ ಎಕ್ಸ್‌ಪ್ರೆಸ್ ಓದಿದವನಿಗೆ ಜೋಳದ ರೊಟ್ಟಿ ಬದಲು ಒಣಗಿದ ಬ್ರೆಡ್ಡಿನ ತುಂಡನ್ನು ಜಗಿದಂತಾಗುತ್ತಿತ್ತು, ಆದರೂ ಕಷ್ಟ ಪಟ್ಟು ಓದುತ್ತಿದ್ದುದರಿಂದಲೇ ಇವತ್ತು ಸ್ವಲ್ಪವಾದರೂ ವೇಗ ಉಳಿದುಕೊಂಡಿರೋದು.

ಈ ಪುಸ್ತಕ ಬರೆಯೋರ ಯಾದಿಯಿಂದಷ್ಟೇ ಅಲ್ಲ, ಇತ್ತೀಚೆಗೆ ಬೆಂಗಳೂರು ಮುಂತಾದ ಸ್ಥಳಗಳಲ್ಲಿ ಕೆಲಸ ಮಾಡುತ್ತಿರೋ, ನಗರದ ವಾತಾವರಣದಲ್ಲೇ ಹೆಚ್ಚು ಸಮಯವನ್ನು ಕಳೆದ ಯುವ ಮಿತ್ರರ ಸಹವಾಸದಿಂದಲೂ ನನ್ನ ಇಂಗ್ಲೀಷನ್ನು ನಾನು ಪ್ರಶ್ನಿಸಿಕೊಳ್ಳಬೇಕಾಗಿ ಬಂದಿದೆ. ಇವರೆಲ್ಲ ನನಗಿಂತ ಒಂದು ಹತ್ತು ವರ್ಷಗಳ ವಯಸ್ಸಿನ ಅಂತರದಲ್ಲಿ ಕಡಿಮೆ ಇರಬಹುದು ಆದರೆ ಇವರೆಲ್ಲರ ಇಂಗ್ಲೀಷ್ ಓದು, ಬರಹ ಬಹಳ ಸುದಾರಿಸಿದೆ, ವೇಗವಿದೆ, ಪದ ಭಂಡಾರವಿದೆ, ಜೊತೆಯಲ್ಲಿ ಅಲ್ಪಸ್ವಲ್ಪ ಕನ್ನಡದ ತಿಳುವಳಿಕೆಯೂ ಇದೆ, ಆದರೆ ಇವರೆಲ್ಲರ ಬ್ಲಾಗ್‌ಗಳನ್ನು ಓದುವಾಗ, ಮತ್ತೆ ನನ್ನ ಇಂಗ್ಲೀಷ್ ವೇಗ ನನ್ನನ್ನು ಹಿಡಿತದಲ್ಲಿಡುತ್ತೆ. ನಾನು ನೋಡಿದ ಕಾರ್ಯಕ್ರಮಗಳಲ್ಲಿ ಬರೋ ಅತಿಥಿಗಳ ಆಯ್ದ ಪುಸ್ತಕಗಳನ್ನು ಓದಿದರೆ, ಹಾಗೂ ಈ ಯುವ ಸ್ನೇಹಿತರ ಬ್ಲಾಗ್‌ಗಳನ್ನು ಕಾಲಕ್ರಮೇಣ ಓದಿ ಅಲ್ಲಲ್ಲಿ ಕಾಮೆಂಟುಗಳನ್ನು ಬಿಟ್ಟು ಸಂವಹನದಲ್ಲಿ ತೊಡಗಿದರೆ ಅದರಿಂದ ಅನುಕೂಲವಾಗಬಹುದೇನೋ ಎಂಬ ಮಹದಾಸೆ ಇದೆ, ಆದರೆ ಇಂಗ್ಲೀಷ್ ಓದದೇ ವೇಗ ಬೆಳೆಯೋಲ್ಲ, ವೇಗ ಬೆಳೆಯದೇ ಇಂಗ್ಲೀಷ್ ಓದೋಕ್ಕಾಗಲ್ಲ ಅನ್ನೋ ಕ್ಯಾಚ್-೨೨ ನಲ್ಲಿ ಸಿಕ್ಕಿಹಾಕಿಕೊಳ್ಳುತ್ತೇನೆ.

ನನ್ನ ಬಸವನ ಹುಳುವಿನ ಇಂಗ್ಲೀಷ್ ಓದಿನ ವೇಗ ನನ್ನಲ್ಲಿರುವ ಕೀಳರಿಮೆಯಲ್ಲ, ನಾನು ಓದಿದ್ದರ ಬಗ್ಗೆ ಆಲೋಚಿಸುವುದು ಹೆಚ್ಚು, ಕನ್ನಡದಲ್ಲಿ ಓದಿದಾಗ ಆಲೋಚನಾ ಸರಣಿ ಹಾಗೂ ಓದುವಿಗೆ ಒಂದು ರೀತಿಯ ಸಾಂಗತ್ಯವಿದ್ದು, ಅದು ಕೃತಕ ಅನ್ನಿಸೋದಿಲ್ಲ, ಆದರೆ ಇಂಗ್ಲೀಷ್‌ನಲ್ಲಿ ಬರೆದದ್ದನ್ನು ಓದಿದಾಗ ಅಲ್ಲಿ ಸ್ವಲ್ಪ 'ನನ್ನದಲ್ಲದ' ಭಾವನೆ ಅನುರಣಿಸತೊಡಗುತ್ತದೆ. ಉದಾಹರಣೆಗೆ ಒಂದು ಇಂಗ್ಲೀಷ್ ಮೂಲದ ಸಣ್ಣಕಥೆಯನ್ನು ಕನ್ನಡದಲ್ಲಿ ಅನುವಾದಗೊಳಿಸಿದ್ದನ್ನು ನಾನು ಓದಿದಾಗ ಅಲ್ಲಿ ನನ್ನ ಕನ್ನಡದ ಓದೂ ಸಹ ಸ್ವಲ್ಪ ನಿಧಾನವಾಗುತ್ತದೆ, ಏಕೆಂದರೆ ಅವರು ಬರ್ಲಿನ್, ಇಂಗ್ಲೆಂಡ್, ಜಪಾನ್‌ನಲ್ಲಿ ನಡೆದ ಕಥೆಯನ್ನು ಅಲ್ಲಿಯ ಪಾತ್ರ, ಪರಿಸರಗಳಿಂದ ಮೂಡಿಸತೊಡಗಿದರೆ ಅದರಲ್ಲಿ ನನ್ನನ್ನು ನಾನು ಹುಡುಕಿಕೊಳ್ಳುವಾಗ ಕೆಲಕಾಲ ಹಿಡಿಯುತ್ತದೆ, ಅದೇ ನಮ್ಮ ಕನ್ನಡದ ಪರಿಸರದ ಯಾವುದೇ ಕಥೆಯಾಗಲೀ, ಯಾವುದೇ ಆಡುಭಾಷೆಯಲ್ಲಿರಲಿ ಒಳ್ಳೇ ಅನ್ನ-ಸಾರು ಊಟಮಾಡಿದಷ್ಟು ಸರಳವಾಗಿ ಇಳಿಯತೊಡಗುತ್ತದೆ, ಓದುವಿಕೆ ಪುಟದಿಂದ ಪುಟಕ್ಕೆ ಬಿದ್ದ ಮಳೆ ನೀರಿನಂತೆ ಹರಿಯತೊಡಗುತ್ತದೆ.

ಇವತ್ತಲ್ಲ ನಾಳೆ, ನಾನು ಈ ಹೊಸದಾಗಿ ಪರಿಚಯವಾದ ಯುವ ಮಿತ್ರರ ಇಂಗ್ಲೀಷ್ ಬರಹ, ಭಾವನೆಗಳನ್ನು ಅರ್ಥ ಮಾಡಿಕೊಳ್ಳುತ್ತೇನೆ, ಜೊತೆಯಲ್ಲಿ ಈ ಟಿವಿ, ರೇಡಿಯೋದಲ್ಲಿ ಬರೋ ಒಂದಲ್ಲ ಒಂದರ ಬಗ್ಗೆ ಪುಸ್ತಕವನ್ನು ಬರೆದ ಪ್ರಭೃತಿಗಳನ್ನೂ ಒಂದು ಕೈ ನೋಡಿಕೊಳ್ಳುತ್ತೇನೆ, ಆ ಕಾಲ ಆದಷ್ಟು ಬೇಗ ಬರಲಿ ಎಂದು ಕನ್ನಡದಲ್ಲೇ ಮೊರೆ ಇಡುತ್ತೇನೆ!

3 comments:

mavinayanasa said...

ನಿಮ್ಮ ಬ್ಲಾಗು ಓದುತ್ತಿದ್ದರೆ ಎಲ್ಲ ತರಹದ ವಿಷಯಗಳೂ ತಿಳಿಯುತ್ತವೆ. ಯಾಕೆ ನೀವೊಂದು ಪತ್ರಿಕೆಯನ್ನಾಗಿ ಮಾಡಬಾರದು? ವಿಷಯ ಹಳಸಲಾದರೂ ಪರವಾಗಿಲ್ಲ, ನಿಮ್ಮ ಧಾಟಿಯಲ್ಲಿಯೇ ವಿಷಯಗಳನ್ನು ನಿರೂಪಿಸಿದರೆ ಓದಲು ಬಹಳ ಚಂದವಿರುತ್ತದೆ.

ಬರಹ ಕ್ರಾಂತಿ ಮುಂದುವರೆಯಲಿ. ಆಗಾಗ ಬಂದು ಇಣುಕಿ ನೋಡುವೆ.

Satish said...

ಪತ್ರಿಕೆ ಮಾಡೋದು ಬಹಳ ಕಷ್ಟಾ ಸ್ವಾಮಿ, ಅಷ್ಟಿಷ್ಟು ಬರೆಯುವಾಗ್ಲೇ ಉಸಿರು ಕಟ್ಟುತ್ತೆ :-)

ಅದಿರ್ಲಿ, ನೀವು ಬಾಂಬೆಯಲ್ಲಿ ಸೌಖ್ಯವಾಗಿದ್ದೀರಿ ತಾನೆ? ಸರಣಿ ಬಾಂಬ್ ಸ್ಪೋಟದ ಬಗ್ಗೆ ಕೇಳಿ ಒಂದು ಕ್ಷಣ ನಿಮ್ಮ ನೆನಪು ಬಂತು.

sritri said...

ಅಂತರಂಗಿಗಳೇ, ನೀವು ವೇಗವಾಗಿ ಇಂಗ್ಲೀಷ್ ಓದದಿದ್ದರೂ ಚಿಂತೆಯಿಲ್ಲ. ದಿನಕ್ಕೊಂದು ಹೊಸ ವಿಷಯವನ್ನು ಬರೆದು ಬ್ಲಾಗಿನಲ್ಲಿ ಹಾಕುತ್ತಿರುವ ನಿಮ್ಮ ವೇಗವನ್ನಂತೂ ಮೆಚ್ಚಲೇಬೇಕು.