ಶ್ರಾವಣ ತರೋ ಸಂಭ್ರಮ
ಇಂದು ನಾಗರ ಪಂಚಮಿ, ಹೆಚ್ಚೂ ಕಡಿಮೆ ಇಂದಿನಿಂದಲೇ ನಮ್ಮೂರಲ್ಲೆಲ್ಲ ಶ್ರಾವಣ ಶುರುವಾಗೋದು, ಹೌದು ಶ್ರಾವಣ ತರೋ ಸಂಭ್ರಮಕ್ಕೆ ತಯಾರಾಗೋದಕ್ಕೆ ಕೊನೇಪಕ್ಷ ಮೊದಲ ನಾಲ್ಕು ದಿನಗಳಾದರೂ ಬೇಡವೇ?
ಎಂಥವರಿಗೂ ನಮ್ಮೂರಲ್ಲೆಲ್ಲ ಶ್ರಾವಣದ ಅನುಭವ ಬಂದೇ ಬರುತ್ತದೆ, ಯಾವಾಗ ಬೇಕಂದರೆ ಆಗ ಸುರಿಯೋ ಜಿಟಿಪಿಟಿ ಮಳೆ, ಅಲ್ಲಲ್ಲಿ ರಾಚೋ ಕಿಚಿಪಿಚಿ ಕೆಸರು, ಕೈಗಳಲ್ಲೆಲ್ಲ ಒಂದೊಂದು ಕೊಡೆ, ಕಾಲಿಗೆ ಅಡರಿಕೊಳ್ಳೋ ಪ್ಲಾಸ್ಟಿಕ್ ಬೂಟು-ಚಪ್ಪಲಿಗಳು, ಹಿರಿಯರು ಕಟ್ಟಿದ ಹಳೆಯ ಮಾಡಿಗೆ ತೂಗಿಬಿದ್ದು ಕಿರ್-ಗುರ್ ಎಂದು ಸದ್ದು ಮಾಡುವ ಮಾಡಿನ ಮರದ ಹಿನ್ನೆಲೆಯ ಸಂಗೀತದಲ್ಲಿ ಕಿರಿಯರು ಜೀಕಿದಂತೆಲ್ಲ ಪೆಂಡುಲಮ್ ನೆನಪಿಸುವ ಜೋಕಾಲಿಗಳು, ಥರಾವರಿ ತಿನಿಸುಗಳು, ಉಂಡೆಗಳು, ತಳಿರು ತೋರಣಗಳು, ಇವುಗಳ ಜೊತೆಯಲ್ಲಿ ಹೊಸದಾಗಿ ಮದುವೆಯಾದ ಜೋಡಿಗಳು, ಶ್ರಾವಣಕ್ಕೆ ಕಡ್ಡಾಯವಾಗಿ ರಜೆ ತೆಗೆದುಕೊಳ್ಳೋ ಮೀನು ಮಾರುವ ಇಮಾಮ್ ಸಾಬಿ ಮತ್ತು ಅವನ ಮಕ್ಕಳು ಎಲ್ಲರೂ ಒಂದಲ್ಲ ಒಂದು ರೀತಿಯಿಂದ ಸಂಭ್ರಮವನ್ನು ಸೃಷ್ಟಿಸುತ್ತಲೇ ಇರುತ್ತಾರೆ.
ತವರು ಮನೆಯಿಂದ ಹೊರಟ ಹೆಣ್ಣು ಮಕ್ಕಳಿಗೆ ತವರನ್ನು ಬಿಟ್ಟ ನೋವು ಅವರು ತೊಟ್ಟ ಬಣ್ಣಬಣ್ಣದ ಸೀರೆ-ಕುಪ್ಪುಸಗಳ ರಂಗಿನಲ್ಲಿ ಮಾಸಿ ಹೋಗುತ್ತದೆ, ಹೊಸ ಮನೆಯಲ್ಲಿ ಹಾಗಿರಬೇಕು, ಹೀಗೆ ಮಾಡಬೇಕು ಎನ್ನುವ ಆಲೋಚನೆ ತುಂಬಿಕೊಂಡಿರುತ್ತದೆ. ಆಟವಾಡುವ ಮಕ್ಕಳೇನೋ ಜೋಕಾಲಿ ಜೀಕಿಕೊಂಡು ಹಾಯಾಗಿ ಇದ್ದರೆ ಬರೋ ಪುಷ್ಯಾ, ಆಶ್ಲೇಷ ಮಳೆಗಳೋ ಹೇಗೋ, ಈ ವರ್ಷಾನಾದ್ರೂ ಕೆರೆ ತುಂಬಿ ಕೋಡಿಬಿದ್ದಿದ್ದ್ರೆ ಎನ್ನುವ ಆಲೋಚನೆಯ ಗೆರೆ ಹಿರಿಯರ ಮುಖದಲ್ಲಿ ಕಂಡು ಬರುತ್ತದೆ. ಇವರ ನಲಿವಿನ ಹಿಂದುಗಡೆ ಮೊನ್ನೆ ಮೊನ್ನೆ ಬಂದು ಹೋದ ಅಮಾವಾಸ್ಯೆಯ ನೆರಳು ಸ್ವಲ್ಪವಾದರೂ ಇದೆ, ಇನ್ನೇನು ಹತ್ತೇ ದಿನಗಳಲ್ಲಿ ನೂಲು ಹುಣ್ಣಿಮೆ ಬರಬಹುದಾದರೂ ಐದು ದಿನಗಳ ಹಿಂದಿನ ಕತ್ತಲೆ ಹತ್ತು ದಿನಗಳ ನಂತರ ಬರುವ ಬೆಳಕಿನ ಮುಂದೆ ಮೆರೆದಂತೆ ಅನ್ನಿಸುತ್ತದೆ.
ನಿಮ್ಮನೆಗಳೆಲ್ಲೆಲ್ಲ ಹೇಗೋ ಏನೋ, ನಮ್ಮನೆಗಳಲ್ಲಿ ನಾವು ಬಲವಂತವಾಗಿ ಜೋಕಾಲಿ ಕಟ್ಟಿಸಿಕೊಳ್ಳುತ್ತಿದ್ದೆವು, ಅತ್ತೋ-ಕರೆದೋ ಇನ್ನೊಂದೋ ಮಾಡಿ. ಏನಿಲ್ಲವೆಂದರೂ ಕೊನೇಪಕ್ಷ ಎರಡು ರೀತಿಯ ಉಂಡೆಗಳನ್ನಾದರೂ ಮನೆಯಲ್ಲಿ ಮಾಡಿದ್ದರೆ, ಮೆಷ್ಟ್ರು ಮಕ್ಕಳಾದ್ದರಿಂದ ನಮ್ಮ ಅಪ್ಪ-ಅಮ್ಮ ಶಾಲೆ ಬಿಟ್ಟು ಬರೋವಾಗ ಏನಿಲ್ಲವೆಂದರೂ ಹತ್ತಿಪ್ಪತ್ತು ತರದ ಉಂಡೆಗಳನ್ನಾದರೂ ತರುತ್ತಿದ್ದರು, ಅಂಟುಂಡೆ, ಸುಕ್ಕಿನುಂಡೆ, ಶೇಂಗಾಉಂಡೆ, ರವೆಉಂಡೆ, ಮಂಡಕ್ಕಿ ಉಂಡೆ, ಎಳ್ಳುಂಡೆ, ಕೊಬ್ಬರಿ ಉಂಡೆ...ಹೀಗೆ ಹಲವಾರು ಬಗೆಯ ಉಂಡೆಗಳು - ತಿನ್ನುವ ಪದಾರ್ಥಗಳನ್ನೆಲ್ಲ ಬೆಲ್ಲದ ಪಾಕದಲ್ಲಿ ಹಾಕಿ ಅಂಟದಂತೆ ಹದಕ್ಕೆ ಬಂದಮೇಲೆ ಉಂಡೆ ಕಟ್ಟುವ ಪೈಪೋಟಿಗೆ ಉತ್ತರದಂತೆ. ಆದರೆ ಪಂಚಮಿ ಹಬ್ಬವೆಂದರೆ ಅದರಲ್ಲಿ ತಲೆಮಾರಿನಿಂದ ತಲೆಮಾರಿಗೆ ಬೆಳೆದುಬಂದ ಒಂದು ಸಂದೇಶವೂ ಇತ್ತು, ಅದೇ ನಾಗನಿಗೆ ಹಾಲೆರೆಯುವುದು.
ನಮ್ಮೂರ ಪೋಲೀಸ್ ಸ್ಟೇಷನ್ ಆವರಣದಲ್ಲಿ ಇರೋ ಹಾಗೆ ಒಂದು ದೊಡ್ಡ ಹುತ್ತವಿತ್ತು, ಅಲ್ಲಿಗೆ ಊರಿನವರು ಹೆಚ್ಚಿನ ಪ್ರಮಾಣದಲ್ಲಿ ಹೋಗಿ ಹಾಲನ್ನೆರೆದರೆ ನಾವು ನಮ್ಮ ಮನೆಯಲ್ಲಿಯೇ ಒಂದು ಬೆಳ್ಳಿಯ ನಾಗನಿಗೆ ಹಾಲನ್ನೆರೆಯುತ್ತಿದ್ದೆವು. ನಾನು ಪೋಲೀಸ್ ಸ್ಟೇಷನ್ ಆವರಣದಲ್ಲಿರೋ ಹುತ್ತದಲ್ಲಿ ನಾಗನ್ನೆಂದೂ ನೋಡಿದ್ದಿಲ್ಲ, ಆದರೂ ಅಲ್ಲಿ ಹಾವಿನ 'ನಡೆ' ಇದೆ ಎಂದು ಬಲ್ಲವರು ಹೇಳಿದ್ದನ್ನು ಕೇಳಿದ್ದೇನೆ. ಕನ್ನಡದ ಕವಿ ಹೇಳೋ ಹಾಗೆ 'ಉಳ್ಳೆಯದು ಉಳ್ಳೆಯೇ ಕಾಳಿಯ ನಾಗ ನಾಗಲಾರದು...' ಎಂಬಂತೆ ನಮ್ಮ ಮನೆಯ ಐದು ಇಂಚು ಎತ್ತರದ ಬೆಳ್ಳಿಯ ನಾಗ ನಿಜವಾದ ನಾಗ ನೆಂದೂ ಆಗಿದ್ದಿಲ್ಲ, ಗಣಪತಿಯಂತೆ ಹಾಲನ್ನೆಂದೂ ಹೀರಿದ್ದಿಲ್ಲ, ಆದರೂ ನಾವು ಪ್ರತೀ ವರ್ಷ, ಇದ್ದವರು, ಇಲ್ಲದವರು ಎಲ್ಲರ ಹೆಸರಿನಲ್ಲಿ - 'ಅಮ್ಮನ ಪಾಲು, ಅಪ್ಪನ ಪಾಲು, ಅಣ್ಣನ ಪಾಲು...' ಎಲ್ಲವನ್ನೂ ನಾಗನ ತಲೆಗೆ ಅರ್ಪಿಸುತ್ತಿದ್ದೆವು. ಅಪರೂಪಕ್ಕೆ ಒಮ್ಮೆ ಅವರಿವರ ಮನೆಯಲ್ಲಿ ನಿಜವಾದ ನಾಗ ಬಂದು ಹಾಲನ್ನು ಹೀರಿದ ಕಥೆಯೂ ಕೇಳಿ ಬರುತ್ತಿತ್ತು. ಇದು ಬಹಳ ಭಕ್ತಿ ಹಾಗೂ ಸಂಭ್ರಮದ ವಿಷಯ ನಮಗೆಲ್ಲರಿಗೂ. ನಮ್ಮ ಮನೆಯ ಹಿತ್ತಿಲಿನಲ್ಲಿ ಇದ್ದ ಬಾವಿಯ ಕಟ್ಟೆಯ ಹತ್ತಿರ ಒಂದು ನಾಗನ ಮೂರ್ತಿ ಇದೆ, ನಮ್ಮ ಮನೆಯವರ ಪ್ರಕಾರ ಅಲ್ಲೂ ನಾಗನ ನೆಡೆಯಿದೆ, ನಾಗನನ್ನು ನಾವು ಯಾವಾಗಲೂ ಪೂಜಿಸಬೇಕು, ಗೌರವಿಸಬೇಕು ಇತ್ಯಾದಿ, ಇತ್ಯಾದಿಗಳು ಪದೇಪದೇ ಕೇಳಿ ಬಂದು ನಮ್ಮ ಮನದಲ್ಲಿ ಭಕ್ತಿ, ಗೌರವ ಹಾಗೂ ಹೆದರಿಕೆಗಳನ್ನು ಹುಟ್ಟಿಸುವಲ್ಲಿ ಯಶಸ್ವಿಯಾಗಿತ್ತು.
ಅಲ್ಲಲ್ಲಿ ಒಂದಿಷ್ಟು ಓದಿ ತಿಳಿದುಕೊಂಡ ಮೇಲೆ, ಇಲ್ಲಿಗೆ ಬಂದ ನಂತರ ಡಿಸ್ಕವರಿ ಚಾನೆಲ್‌ನಲ್ಲಿ ಸ್ಟೀವ್ ಇರ್ವಿನ್‌ನ ಹಾವನ್ನಾಧರಿಸಿದ ಕಾರ್ಯಕ್ರಮಗಳನ್ನು ನೋಡಿದ ಮೇಲೆ, ನಾಗನ ಇತಿ-ಮಿತಿಗಳು ಅರಿವಿಗೆ ಬಂದರೂ, ರಾಮಾಚಾರಿ ಹಾಡಿದ 'ಹಾವಿನ ದ್ವೇಷ ಹನ್ನೆರಡು ವರುಷ...' ಹಾಡು ಮನದಲ್ಲಿ ಘರ್ಷಣೆಯನ್ನು ಸೃಷ್ಟಿಸಿದರೂ ನನಗೆ ನಾಗನ ಮೇಲೆ ಗೌರವ ಕಿಂಚಿತ್ತೂ ಕಡಿಮೆಯಾಗುವುದಿಲ್ಲ. ಕೊನೇಪಕ್ಷ ಏನಿಲ್ಲವೆಂದರೂ ನಮ್ಮೂರಿನ ರೈತರಿಗೆ ರಾತ್ರಿ ಹೊತ್ತು ಜಮೀನಲ್ಲಿ ಉಪದ್ರವ ಕೊಡುವ ಇಲಿಗಳ ಕಾಟವನ್ನು ಹತೋಟಿಯಲ್ಲಿಡಲು ಸಹಾಯವಾಗುವ, ಆಹಾರ ಸರಪಳಿಯಲ್ಲಿ ಮುಖ್ಯ ಸ್ಥಾನದಲ್ಲಿರುವ ಈ ಸರೀಸೃಪಗಳ ಮೇಲೆ ನನಗೆ ಯಾವಾಗಲೂ ಗೌರವವಿದ್ದೇ ಇರುತ್ತೆ.
ಇಲ್ಲಿನ ಪಾರ್ಕಿನಲ್ಲಿ, ಅಥವಾ ಉಳ್ಳವರ ಮನೆಗಳ ಹಿತ್ತಲಿನಲ್ಲಿ ಸದಾ ತೂಗುಬಿದ್ದಿರೋ ಕಬ್ಬಿಣದ ಸರಪಳಿಯ ಜೋಕಾಲಿಗಳಲ್ಲಿ ನಮ್ಮೂರಿನ ನಾರು ಹಗ್ಗದ ಗರಿಗರಿತನವಿಲ್ಲ, ತೆಂಗಿನ ನಾರಿನ ಹಗ್ಗದಿಂದ ಮಾಡಿ, ಮಾಡಿನ ಮರಕ್ಕೆ ತೂಗುಬಿದ್ದ ಕುಣಿಕೆಗಳಲ್ಲಿ, ಗೋಣಿಚೀಲದ ಆಸನದಲ್ಲಿ ಜೀಕೋ ಮಕ್ಕಳಲ್ಲಿ ಕಾಣೋ ಸ್ವಾಭಾವಿಕ ಸಂಭ್ರಮ ಇಲ್ಲಿನ ಮಕ್ಕಳಲ್ಲಿ ನಾನು ನೋಡಿಲ್ಲ, ಅಲ್ಲಿನ ವರ್ಷಕ್ಕೊಮ್ಮೆ ಬರುವ ಜೋಕಾಲಿ ಹಬ್ಬದ ಸಂಭ್ರಮದ ಮುಂದೆ ಇಲ್ಲಿನ ವರ್ಷದ ಬಿಸಿಲಿನ ದಿನಗಳಲ್ಲೆಲ್ಲ ಸಿಗುವ ಜೋಕಾಲಿ ಜೋರು ಏನೇನೂ ಇಲ್ಲ.
ಇಲ್ಲಿನ ಕಬ್ಬಿಣದ ಸರಪಳಿಗಳು ಸವೆಯುತ್ತವೆಯೋ ಬಿಡುತ್ತವೆಯೋ ಅಲ್ಲಿ ನಾವು ಬೆಳೆದಂತೆ ಮಾಡಿನಿಂದ ತೂಗುಬಿಡುವ ಎಳೆಗಳು ಸವೆದು ಕೃಶವಾಗುತ್ತಿದ್ದವು, ನಾವು ನಮ್ಮ ಕಿರಿಯರಿಗೆ ಜೋಕಾಲಿ ಕಟ್ಟಿಕೊಡುವ ಪರಂಪರೆ ಎಂದಿಗೂ ಮುಂದುವರೆಯುತ್ತಿತ್ತು.
1 comment:
ಸತೀಶ್ ಅವರೇ,
ನಿಮ್ಮ ಲೇಖನ ಓದಿ ಶ್ರಾವಣದ ಸಡಗರ ಇಲ್ಲಿಗೆ ಬಂದಾಯಿತು.
ಜೋಕಾಲಿಯ ಆ ಗೋಣಿಚೀಲದ ಆಸನದ ಬಗ್ಗೆ ಓದುತ್ತಿದ್ದರೆ ಮನ ಆ ದಿನಗಳಿಗೆ ಜಾರಿತು.
ಇನ್ನು ಉಂಡಿ ಬಗ್ಗೆ ಮಾತಾಡಿ ನೀವು ಸುಮ್ಮನೆ ಬಾಯಿಯಲ್ಲಿ ನೀರು ಬರಿಸಿದಿರಿ :(
Post a Comment