Saturday, July 15, 2006

ಮನೆಗೊಂದೇ ಮಗುವೇ? ಛೇ!

'ಹುಟ್ಟಿದರೇ ಕನ್ನಡ ನಾಡಲ್ ಹುಟ್ಟಬೇಕು', well, I don't know about that for sure, ಚೀನಾದಲ್ಲಂತೂ ಹುಟ್ಟಲೇ ಬಾರದು ಎನ್ನಿಸಿ ಬಿಟ್ಟಿದೆ, ಮತ್ತಿನ್ನೆನು? ಅಲ್ಲಿ ಮನೆಗೆ ಒಂದೊಂದೇ ಮಗುವಂತೆ - ಛೇ, ಸಾಧ್ಯವೇ ಇಲ್ಲಪ್ಪಾ, ಒಡಹುಟ್ಟಿದವರು, ಅಕ್ಕ-ತಂಗಿ, ಅಣ್ಣ-ತಮ್ಮ ಇವರ ನಡುವೆ ಬದುಕಿ ಬೆಳೆಯದೇ ಇದ್ದರೆ ಆ ಬದುಕಾದರೂ ಏಕೆ?

ನನ್ನ ಬಾಲ್ಯವನ್ನು ನೆನಪಿಸಿಕೊಂಡಾಗಲೆಲ್ಲ ನಮ್ಮ ಕುಟುಂಬದ ಚಿತ್ರಣ ಕಣ್ಣ ಮುಂದೆ ಬರುತ್ತದೆ, ಎಷ್ಟೋ ಸಂತೋಷದ ಘಳಿಗೆಗಳು ಕಣ್ಣ ಮುಂದೆ ಸುಳಿಯುತ್ತವೆ. ನಾವೆಲ್ಲರೂ ಇದ್ದ ಚಿಕ್ಕ ಮನೆಯಲ್ಲಿಯೇ ಎಷ್ಟೊಂದು ಚೆನ್ನಾಗಿ ಹೊಂದಿಕೊಂಡಿದ್ದೆವು, ಒಬ್ಬೊಬ್ಬರ ಕಷ್ಟ ಸುಖಗಳಿಗೆ ಇನ್ನೊಬ್ಬರಾಗುತ್ತಿದ್ದೆವು. ಕೆಲವರು ಹೇಳುವಂತೆ ತಂದೆ-ತಾಯಂದಿರು ಬೆಳೆಸುವುದು ಮೊದಲ ಎರಡು ಮಕ್ಕಳನ್ನು ಮಾತ್ರ, ಇನ್ನು ಉಳಿದವರು ಈ ಹಿರಿಯ ಮಕ್ಕಳ ನೆರಳಿನಲ್ಲಿಯೇ ಬೆಳೆದು ಬಿಡೋದು ಒಂದು ರೀತಿ ದೊಡ್ಡ ಮಕ್ಕಳಿಗೆ ಸಂಬಳ ಸಿಗದ 'ಬೇಬಿ ಸಿಟ್ಟಿಂಗ್' ಅವಕಾಶ, ಚಿಕ್ಕವರಿಗೆ ಯಾವತ್ತಿದ್ದರೂ ಆಟವಾಡಲು ಒಂದಿಷ್ಟು ಜನ, ಇಷ್ಟಂತೂ ಗ್ಯಾರಂಟಿ. ಕೆಲವರು ಹೇಳುತ್ತಾರೆ ಸ್ನೇಹಿತರನ್ನು ನಾವು ಆರಿಸಿಕೊಳ್ಳಬಹುದು ಆದರೆ ಒಡಹುಟ್ಟಿದವರನ್ನು ನಾವು ಪಡೆದುಕೊಂಡು ಬರುತ್ತೇವೆ ಎಂಬುದಾಗಿ, ನನಗೆ ಅದರಲ್ಲೇನೂ ವಿಶೇಷ ಎನ್ನಿಸುವುದಿಲ್ಲ - ನಿಮ್ಮದು ಅವಿಭಕ್ತ ಕುಟುಂಬ ಅಥವಾ ದೊಡ್ಡ ಪರಿವಾರವಾದರೆ ಬದುಕಿನಲ್ಲಿ ಎಲ್ಲ ಥರದವರ ಜೊತೆಗೆ ಹೊಂದಿಕೊಂಡು ಹೋಗುವ ಪಾಠ ಮನೆಯಲ್ಲಿಯೇ ಆರಂಭವಾಗುತ್ತದೆ, ಅದು ಮುಂಜಾನೆ ಬಚ್ಚಲು ಮನೆಯಲ್ಲಿ ಸರತಿಗಾಗಿ ಕಾಯುವ ಸಹನೆ ಇರಬಹುದು ಅಥವಾ 'ಅವನಿಗಿದೆ, ನನಗಿಲ್ಲ' ಎನ್ನುವ ಸಹಬಾಳ್ವೆ ಇರಬಹುದು, ಅವೆಲ್ಲವೂ ಮನೆಯಲ್ಲಿಯೇ ಆರಂಭವಾದರೇ ಒಳ್ಳೆಯದಲ್ಲವೇ?

ಮನೆಯಲ್ಲಿ ಹೆಚ್ಚು ಮಕ್ಕಳು ಇರಬೇಕೆಂದಾಕ್ಷಣ ನನಗೆ ಕುಟುಂಬ ಯೋಜನೆಯ ಮೇಲೆ ನಂಬಿಕೆ ಇಲ್ಲವೆಂದೇನು ಹೇಳುತ್ತಿಲ್ಲ, ನನ್ನ ಪ್ರಕಾರ ಕುಟುಂಬ ಯೋಜನೆಯೆಂದರೆ ಕಡಿಮೆ ಮಕ್ಕಳು ಎಂದು ಆಲೋಚಿಸಿಕೊಳ್ಳುವುದಕ್ಕಿಂತಲೂ 'ಸಂಪೂರ್ಣ ಪರಿವಾರ' ಎಂದು ಆಲೋಚಿಸಿಕೊಂಡರೆ ಹೆಚ್ಚು ಅರ್ಥವೆನಿಸುತ್ತದೆ, ನನ್ನ ತಂದೆ-ತಾಯಿ ಇಬ್ಬರೂ ಪೂರ್ಣಾವಧಿ ಕೆಲಸ ಮಾಡಿ ಕೆಳ-ಮಧ್ಯಮ ವರ್ಗದಲ್ಲಿಯೇ ನಾವು ಆರು ಜನರನ್ನು ಸಾಕಿ ಸಲಹಲಿಲ್ಲವೇ? ನಮಗೆಲ್ಲ ಐಶಾರಾಮವಿಲ್ಲದಿದ್ದರೇನಂತೆ ಬೇಕಾದ ವಿದ್ಯಾಭ್ಯಾಸವನ್ನು ನೀಡಲಿಲ್ಲವೇ, ಬದುಕುವುದನ್ನು ಕಲಿಸಲಿಲ್ಲವೇ? ಇಂತಹ ಪೋಷಕರು ಕಲಿಸಿದ ಪಾಠಗಳೇ ಸಾಕು ಒಂದು ರೀತಿ ಬ್ಯಾಂಕಿನಲ್ಲಿ ಮಿಲಿಯನ್ ಡಾಲರ್ ಇದ್ದ ಹಾಗೆ ಅವುಗಳ ಸಹದರ್ಶನದಲ್ಲಿ ಯಾವ ಹಾದಿಯನ್ನು ಬೇಕಾದರೂ ಸವೆಸಬಹುದು, ಎಲ್ಲಿ ಬೇಕಾದರೂ ಬೆಳೆಯಬಹುದು. ಅದನ್ನು ಬಿಟ್ಟು 'ಮನೆಗೊಂದೇ ಮಗು' ಎನ್ನುವುದನ್ನು ನನ್ನ ಕೈಯಲ್ಲಿ ಊಹಿಸಿಕೊಳ್ಳಲೂ ಸಾಧ್ಯವಿಲ್ಲ, ಶಾಲೆಯಿಂದ ಮನೆಗೆ ಬಂದ ಮಗುವಿಗೆ ತಂದೆ-ತಾಯಿಯರನ್ನು ಬಿಟ್ಟು ಒಡನಾಡುವುದಕ್ಕೆ ಬೇರೆ ಯಾರೂ ಇರುವುದಿಲ್ಲವೆಂದರೆ ಇಂತಹ ವ್ಯವಸ್ಥೆಯಲ್ಲಿ ಕೊರತೆಯಿದೆ ಎನ್ನೋದೇ ನನ್ನ ಭಾವನೆ. ಎಷ್ಟೋ ಸಾರಿ ಚೀನಾದ ಬಗ್ಗೆ ತೋರಿಸೋ ಸಾಕ್ಷ್ಯಚಿತ್ರಗಳಲ್ಲಿ ಮನೆಗೊಂದು ಮಗುವಿನ ಚಿತ್ರಣವನ್ನು, ಅದರ ಮುಂದಾಗುವ ಪರಿಣಾಮಗಳನ್ನು ಊಹಿಸಿಯೇ ಹೆದರಿಕೆಯಾಗುತ್ತದೆ ಏಕೆಂದರೆ ಮಿಲಿಯನ್‌ಗಟ್ಟಲೆ ಮಕ್ಕಳಿಗೆ ಮನೆಯಲ್ಲಿ 'ಹಂಚಿ ಕೊಳ್ಳುವುದು' ಎಂದರೆ ಏನು ಎಂದೇ ಗೊತ್ತಿಲ್ಲ - ಅವರಿವರ ಜೊತೆಯಲ್ಲಿ ಜಗಳವಾಡಿಯೂ ತಿಳಿದಿಲ್ಲ, ಹಾಗಿದ್ದ ಮೇಲೆ ಇನ್ನು ಅಂತಹ ಮನಸ್ಥಿತಿ ಪರಿಪೂರ್ಣವಾಗಿ ಬೆಳೆಯುವುದಾರೂ ಹೇಗೆ?

ನನಗೆ ಸ್ನೇಹಿತರ ಬಗ್ಗೆ ಅಪಾರ ಗೌರವವಿದೆ ಆದರೆ ಅವರು ಒಡಹುಟ್ಟಿದವರ ಸ್ಥಾನವನ್ನು ತುಂಬಲಾರರು, '...ಬರಬೇಕ ತಂಗಿ ನೀ ಮದುವೀಗೆ...', 'ತವರೂರಾ ಹಾದ್ಯಾಗೆ ಅಣ್ಣಾ ಬರುವುದಾ ಕಂಡೆ...' ಎನ್ನುವ ಜಾನಪದದಲ್ಲಾಗಲೀ, ಅಥವಾ ನೆರೆಹೊರೆಯವರನ್ನು 'ಸಹೋದರ-ಸಹೋದರಿಯರಂತೆ ಕಾಣುವ' ನಮ್ಮ ಭಾವನೆಗಳಲ್ಲಾಗಲೀ ಬಹಳಷ್ಟು ಅರ್ಥವಿದೆ. ನಮ್ಮ ಕಲಹಗಳನ್ನು ನಾವು ಮನೆಯಲ್ಲಿ ಬಗೆ ಹರಿಸಿಕೊಳ್ಳುತ್ತಿರುವಾಗ ನಾನೂ, ನನ್ನ ಎರಡನೇ ಅಣ್ಣನೂ ಬಹಳಷ್ಟು ಹೊದೆದಾಡಿದ್ದಿದೆ, ಅವೆಲ್ಲವೂ ಶಾಲೆಯ ಹಂತಕ್ಕೆ ಮಾತ್ರ ಇತ್ತು, ಮುಂದೆ ಹೈ ಸ್ಕೂಲಿಗೆ ಹೋಗೋದಕ್ಕೆ ಶುರುಮಾಡಿದ ಮೇಲೆ ಫಿಸಿಕಲ್ ಫೈಟಿಂಗ್ ನಿಂತು ಹೋಯಿತು, ನಾವಿಬ್ಬರೂ ಎಷ್ಟು ಹೊಡೆದಾಡುತ್ತಿದ್ದೆವೆಂದರೆ ಉಳಿದವರೂ 'ಈಗ ಏಕೆ ಬಡಿದಾಡೋಲ್ಲ' ಎಂದು ಕೇಳುವಷ್ಟರ ಮಟ್ಟಿಗಿತ್ತು. ಅವನು ನನಗಿಂತ ಬಲಶಾಲಿಯೇ, ಆದರೆ ನನ್ನ ಕಪಿಮುಷ್ಟಿಯ ಹಿಡಿತದಿಂದ ಬಿಡಿಸಿಕೊಳ್ಳಲು ಅವನಿಗೆ ಕಷ್ಟವಾಗುತ್ತಿತ್ತು, ಆದರೂ ಕೊನೆಯಲ್ಲಿ ಅವನೇ ಗೆಲ್ಲುತಿದ್ದನು. 'ಹೀಗಲ್ಲ, ಹಾಗೆ ಮಾಡು' ಎನ್ನುವ ಬೇಕಾದಷ್ಟು ಮಾರ್ಗದರ್ಶನಗಳು ನನಗೆ ನಮ್ಮನೆಯವರಿಂದ ಬೇಕಾದಷ್ಟು ಸಿಕ್ಕಿದೆ, ಇಷ್ಟೆಲ್ಲ ಜನರ ನಡುವೆ ಬೆಳೆದು ಬಂದ ನಾನು ಸ್ವಲ್ಪ ಅಂತರ್ಮುಖಿಯಾಗಿರೋದನ್ನ ಗಮನಿಸಿದರೆ ಇನ್ನು ಮನೆಗೊಂದೇ ಮಗುವಾಗಿದ್ದರೆ ಸದಾ ಮೌನಿಯಾಗೇ ಇರುತ್ತಿದ್ದೆನೇನೋ ಎನ್ನಿಸಿ ಭಯವಾಗುತ್ತದೆ.

ಸಂಪನ್ಮೂಲ, ಜನಜಂಗುಳಿ, ಜನಸಂಖ್ಯೆ ಸಮಸ್ಯೆ ಇತ್ಯಾದಿಯಾಗಿ ಏನು ಬೇಕಾದರೂ ವಾದ ಮಾಡಬಹುದು, ಅದರೆ ನನ್ನ ಮನಸ್ಸಿನ್ನಲ್ಲಿ ಪ್ರತಿಯೊಬ್ಬರಿಗೂ ಕೊನೇ ಪಕ್ಷ ಒಬ್ಬ ಸಹೋದರ-ಸಹೋದರಿ ಇದ್ದರೆ ಅದರ ಅನುಭವವೇ ಬೇರೆ ಎನ್ನುವ ಭಾವನೆ ಬಲವಾಗಿ ನಿಂತಿದೆ. ಆ ಬಾಲ್ಯದ ನೆನಪುಗಳು ಒಂದು ಒಳ್ಳೆಯ ಮನಸ್ಸಿನ ಭವ್ಯ ಭವಿತವ್ಯದ ಭದ್ರ ಬುನಾದಿಯನ್ನು ಹಾಕಬಲ್ಲವು. ಕೈ ಬೆರಳುಗಳು ಭಿನ್ನವಾಗಿರೋ ಹಾಗೆ ಸಹೋದರ-ಸಹೋದರಿಯರೂ ನಮಗಿಂತ ಬಹಳ ಭಿನ್ನರಾಗಿರೋದು ಸ್ವಾಭಾವಿಕ, ಈ ಭಿನ್ನತೆಯೇ ವಿಶೇಷವಾಗಿರೋದು, ಎಲ್ಲರೂ ನನ್ನ ಹಾಗೇ ಇದ್ದರೆ ಪ್ರಪಂಚವೇ ಮುಳುಗಿ ಹೋದೀತು. ಆದ್ದರಿಂದಲೇ 'ಹುಟ್ಟಿದರೇ ಕನ್ನಡ ಮಾತಾಡೋ ನಮ್ಮೂರಲ್ಲ್ ಹುಟ್ಟಬೇಕು' ಎಂದು ಬದಲಾಯಿಸಿಕೊಳ್ಳುತ್ತೇನೆ, ಇಷ್ಟೇ ಜನ ಒಡಹುಟ್ಟಿದವರಿದ್ದರಂತೂ ಬದುಕು ಇನ್ನೂ ಚೆನ್ನಾಗಿರುತ್ತೆ!

3 comments:

Sandeepa said...

ಒಳ್ಳೆಯ ವಿಷಯವನ್ನೇ ಆಯ್ದುಕೊಂಡಿದ್ದೀರ.

ನೀವು ಹೇಳಿದಂತೆ, ಒಡ ಹುಟ್ಟಿದವರ ಒಡನಾಟದಲ್ಲಿ ಬೆಳೆದ ನಮೆಗೆ ಒಂಟಿಯಾಗಿ ಬೆಳೆಯುವುದನ್ನು, ಬದುಕುವುದನ್ನು ಊಹಿಸಿಕೊಳ್ಳುವುದು ಕಷ್ಟ.

ನನಗೇ ಅಕ್ಕ ಅಣ್ಣಂದಿರಿರದಿದ್ದರೆ ನಾನು ಹೇಗಿರುತ್ತಿದ್ದೆ ?
ಏನಾಗುತ್ತಿದ್ದೆ ?

ಗೊತ್ತಿಲ್ಲ.
ಈ ಕುರಿತಾಗಿ ನಾನು ಹಿಂದೆದೂ ಹೆಚ್ಚು ಯೋಚಿಸದಿದ್ದರೂ, ಇದೇ ರೀತಿಯ ವಿಷಯಗಳ ಬಗ್ಗೆ ಬಹಳ ಯೋಚಿಸಿದ್ದಿದೆ.

ಆದರೆ ಈ ಎಲ್ಲಾ ಚಿಂತನೆಗಳು ಕೊನೆಗೊಂಡದ್ದು ಒಂದೇ ತೀರ್ಮಾನದಲ್ಲಿ.

"ನಮ್ಮ ಜೀವನದಲ್ಲಿ ಯಾವಾಗಲು 'ನಡೆಯದಿರುವ ಹಾದಿ'ಗಳು ಹಲವಿರುತ್ತವೆ. ಪ್ರತಿಬಾರಿ ನಾವು ಒಂದು ತೀರ್ಮಾನ ತೆಗೆದು ಕೊಂಡಾಗ, ಇಂತಹ ದಾರಿಗಳು ಸೃಷ್ಟಿಯಾಗುತ್ತವೆ."

ಆದರೆ ಆ ದಾರಿಯಲ್ಲಿ ನಡೆದರೆ ಹೇಗಿರುತ್ತಿತ್ತು? ಎಂಬ ಪ್ರಶ್ನೆ ಒಂದಲ್ಲಾ ಒಂದು ಸಮಯದಲ್ಲಿ ಕಾಡುತ್ತದೆ.

ನಾನು ಇವತ್ತು ಬೆಳಿಗ್ಗೆ ಇಡ್ಲಿಯ ಬದಲು ಮಸಾಲೆ ದೋಸೆ ತಿಂದರೆ ಹೇಗಿರುತ್ತಿತ್ತು?
ನನಗೆ ಹೆಚ್ಚಿನ ಆನಂದ ಉಂಟಾಗುತ್ತಿತ್ತೆ?
ನಾನು ಇಂಜಿನಿಯರಿಂಗ್ ಮಾಡದೇ ಒಂದು ಉದ್ಯಮ ಪ್ರಾರಂಭಿಸಿದ್ದರೆ ಚೆನ್ನಾಗಿರುತ್ತಿತ್ತೆ?
ಇನ್ನೂ ಉನ್ನತಮಟ್ಟದ ಜೀವನ ನಡೆಸಬಹುದಿತ್ತೇ?

ಗೊತ್ತಿಲ್ಲ.

ಹೀಗೆ, 'ಮನೆಗೊಂದೇ ಮಗು' ಎಂಬ ವ್ಯವಸ್ಥೆಯಲ್ಲಿ ಹುಟ್ಟಿ ಬೆಳೆದ ಮಗು ದೊಡ್ಡವನಾದಮೇಲೆ ಮುಂದೊಂದು ದಿನ ಯೋಚಿಸಬಹುದು.
"ಒಂದೇ ತಾಯ ಹೊಟ್ಟೆಯಲ್ಲಿ ಇಬ್ಬರು ಮಕ್ಕಳೇ?"
"ಅದು ಹೇಗೆ ಬದುಕುತ್ತಾರೆ ಜನ, ಮನೆತುಂಬಾ ಮಕ್ಕಳಿದ್ದರೆ?"
ಇತ್ಯಾದಿಯಾಗಿ....

admin said...

ಅದೆಲ್ಲಾ ಓಕೆ, ಆದರೆ ಗೂಗಲ್ ಜಾಹಿರಾತು ನಿಮ್ಮ ಅಂತರಂಗದ ಮಾತುಗಳನ್ನು ಕೆಲವೊಮ್ಮೆ ನುಂಗಿ ಬಿಡುತ್ತಲ್ಲಾ, ಯಾಕೆ? ಅಂದರೆ ಅದು ಅಕ್ಷರಗಳ ಮೇಲೆ ಮೂಡುತ್ತದೆ.

Anveshi said...

ಅಂತರಂಗಿಗಳೇ,
ಕುಟುಂಬ ಯೋಜನೆ ಬಗ್ಗೆ ನಮ್ಮೂರಿನ ರಿಕ್ಷಾ ಚಾಲಕರು ತೀವ್ರವಾಗಿ ಗಮನ ಹರಿಸುತ್ತಿದ್ದಾರೆ, ಹೇಗೆ ಗೊತ್ತೇ?

One family
One child
For Hire
ಅಂತ ರಿಕ್ಷಾ ಹಿಂದುಗಡೆ ಪಕ್ಕಪಕ್ಕದಲ್ಲೇ ಬರೆದಿರುತ್ತಾರೆ!