Sunday, July 09, 2006

ಅನಿವಾಸಿ ಮನಸ್ಸು

ನಮ್ಮೂರಿನ ಬಸ್ಸುಗಳಲ್ಲಿ ಬೇಕಾದಷ್ಟು ಅಣಿಮುತ್ತುಗಳನ್ನು ಅಲ್ಲಲ್ಲಿ ಬರೆದಿರುವುದು ಕಾಣಸಿಗುತ್ತದೆ - ಸರ್ಕಾರಿ ಬಸ್ಸುಗಳಿಂದ ಹಿಡಿದು ಖಾಸಗಿ ಬಸ್ಸುಗಳಲ್ಲೆಲ್ಲ ಕೊಟೇಷನ್ನುಗಳು ಧಾರಾಳವಾಗಿ ಸಿಗುತ್ತವೆ. ಈ ಕೊಟೇಷನ್ನುಗಳ ವ್ಯಾಪ್ತಿ, ವಿಸ್ತಾರ ಕುಟುಂಬ ಯೋಜನೆಯಿಂದ ಹಿಡಿದು ಕುಟುಂಬ ಕಲಹದವರೆಗೆ ಒಂದಲ್ಲ ಒಂದು ರೀತಿಯಲ್ಲಿ ಓದಿಸಿಕೊಳ್ಳುತ್ತದೆ. ಅವುಗಳಲ್ಲಿ ನನ್ನನ್ನು ಸ್ವಲ್ಪ ಮಟ್ಟಿಗೆ ಯೋಚಿಸುವಂತೆ ಮಾಡಿದ್ದು - 'ಮಾತು ಬೆಳ್ಳಿ, ಮೌನ ಬಂಗಾರ'. ಯಾವ ಪುಣ್ಯಾತ್ಮ ಈ ಹೇಳಿಕೆಯನ್ನು ಕೊಟ್ಟನೋ, ಗಾದೆಯನ್ನಾಗಿ ಮಾಡಿದನೋ, ನನಗಂತೂ ಇದರ ಮೇಲೆ ಸ್ವಲ್ಪವೂ ನಂಬಿಕೆ ಇಲ್ಲ. ಎಷ್ಟೋ ಸಾರಿ 'ಮೌನ ಬಂಗಾರ'ದ ಕೆಳಗೆ 'ನಿಮ್ಮ ಬಂಗಾರವನ್ನು ನೀವೇ ಇಟ್ಟುಕೊಳ್ಳಿ' ಎಂದು ಸೇರಿಸಿಬಿಟ್ಟರೆ ಹೇಗೆ ಎನ್ನಿಸಿದೆ. ನನ್ನ ಪ್ರಕಾರ ಮನುಷ್ಯರ ನಡುವೆ ಮಾತುಕಥೆಗಳಾಗುತ್ತಿದ್ದರೇನೇ ಚೆನ್ನ, ಮನಬಿಚ್ಚಿ ಮಾತನಾಡುವ ಸಹೋದ್ಯೋಗಿ ಅಥವಾ ನೆರೆಹೊರೆಯವರು ಅಥವಾ ಯಾವಾಗಲೂ ಬಾಯಿಗೆ ಬೀಗ ಜಡಿದುಕೊಂಡಿರುವ ಪ್ರಾಕ್ಟಿಕಲ್ ಜನರು ಇವರ ನಡುವೆ ನನಗೆ ಮೊದಲನೆಯವರೇ ಇಷ್ಟ. ನನ್ನ ಸ್ನೇಹಿತರಲ್ಲಿ ಕೆಲವರಿಗೆ ಅಮೇರಿಕದ ನೀರು ಕುಡಿಯುತ್ತಿದ್ದ ಹಾಗೆ ಪ್ರಯೋಗಶೀಲತೆ ಒಕ್ಕರಿಸಿಕೊಂಡು ಬಿಟ್ಟಿದೆ. ಒಂದು ರೀತಿ ಎಸ್.ಎಮ್. ಕೃಷ್ಣರ ತರಹ ಮಿತಭಾಷಿಗಳಾಗಿ ಬಿಟ್ಟಿದ್ದಾರೆ - ಎಷ್ಟು ಬೇಕಷ್ಟೇ ಮಾತನಾಡುತ್ತಾರೆ, ಇಲ್ಲವಾದರೆ ಮೌನದ ಸೋಗನ್ನು ಧರಿಸಿಕೊಳ್ಳುತ್ತಾರೆ. ಬರೀ ಏನನ್ನೋ ಯೋಚಿಸುವವರ ಹಾಗೆ ಮುಖ ಮಾಡಿಕೊಂಡು ಮಾತನಾಡದೇ ಇದ್ದು ಬಿಟ್ಟರೆ ಎಲ್ಲದಕ್ಕೂ ಉತ್ತರ ಸಿಕ್ಕಂತಾಯಿತೇ? ಈ ಅಣಿಮುತ್ತುಗಳು, ಸುಭಾಷಿತಗಳು, ಸೂಕ್ತಿಗಳು, ಕೋಲ್ಮಿಂಚುಗಳು - ಸುಮ್ಮನೇ ಹೀಗೆ ಬಂದು ಹಾಗೆ ಹೋಗುತ್ತವೆಯೇ ವಿನಾ ಅವುಗಳಿಂದ ಯಾವ ರಾಜ್ಯ ಉರುಳೋದೂ ಇಲ್ಲ, ಯಾವ ರಾಜ್ಯ ಕಟ್ಟೋದೂ ಇಲ್ಲ. ಈ ಕೊಟೇಷನ್ನುಗಳು ಒಂದು ರೀತಿ ಮಿಂಚಿನ ಹಾಗೆ, ಆದರೆ ಮಿಂಚಿನ ಬೆಳಕಿನಲ್ಲಿ ಯಾವ ಸತ್ಯವೂ ಗೋಚರಿಸೋದಿಲ್ಲ, ಹಾಗೆ ಗೋಚರಿಸಿದರೂ ಅದರ ತೀವ್ರತೆ ಒಂದು ರೀತಿಯ ಅಂಧಕಾರವನ್ನು ತಂದುಬಿಡುತ್ತದೆ, ಅದಕ್ಕೋಸ್ಕರವೇ ಮಿಂಚಿನ ತೀವ್ರತೆಯಲ್ಲಿರುವ ಬೆಳಕನ್ನು ಹತ್ತಿರದಿಂದ ನೋಡಿದರೆ, ನೋಡಿದ ನಂತರ ಎಲ್ಲವೂ ಅಂಧಕಾರವೇ ಆಗಿ ಹೋಗೋದು.

ನಮ್ಮ ಅನಿವಾಸಿ ಮನಸ್ಸು ಒಂದು ರೀತಿ ಸಣ್ಣಕಥೆಗಳಲ್ಲಿ ಬರುವ ಪಾತ್ರಗಳ ಹಾಗೆ. ಕಾದಂಬರಿಯ ಪಾತ್ರಗಳಲ್ಲಿ ಅವುಗಳು ತಮ್ಮ ನಿಲುವು-ನಡತೆಗಳನ್ನು ಪ್ರಶ್ನಿಸಿಕೊಂಡು ಒಂದು ಮನಸ್ಥಿತಿಯ ಹಿಂದಿನ ಹುನ್ನಾರವನ್ನು ಹೊರತೆಗೆಯುವ ಸಾಹಸಕ್ಕೆ ಒಡಮಾಡಿಕೊಂಡರೆ, ಈ ಸಣ್ಣಕಥೆಗಳಲ್ಲಿನ ಪಾತ್ರಗಳು ಒಂದು ರೀತಿ ಶೀಘ್ರಸ್ಖಲನದ ಸುಖಕ್ಕೆ ಜೋತುಬಿದ್ದುಕೊಳ್ಳುತ್ತವೆ. 'ನಾನು ಈ ದಿನ ಉಪವಾಸವಿದ್ದೇನೆ' ಎಂದು ಒಂದು ಅರೆಬೆಂದ ಹೇಳಿಕೆಯನ್ನು ಮಾತ್ರ ಸೃಷ್ಟಿಸಿ ಹೋಮ್‌ವರ್ಕ್ ಮಾಡಿರದ ಹುಡುಗ ಮೇಷ್ಟ್ರನ್ನು ನೋಡಿ ಹಲ್ಲುಗಿಂಜುವಂತೆ ಒಂದು ರೀತಿ ತಮ್ಮ ಎಡಬಿಡಂಗಿತನವನ್ನು ಅಚ್ಚುಕಟ್ಟಾಗಿ ಪ್ರದರ್ಶಿಸಿ, ಮಿಂಚಿ ಮರೆಯಾಗುತ್ತವೆ - ಇಂಥವುಗಳಿಂದ ಪ್ರಯೋಜನ ಎಲ್ಲಿದೆ ಎಂದು ಯಾರಿಗೆ ಗೊತ್ತು?

ನಮ್ಮ ಅನಿವಾಸಿ ಸಮೂಹ ತಮ್ಮನ್ನು ತಾವು ಪೋಷಿಸಿಕೊಳ್ಳಲು ಮೊರೆ ಹೋಗುವ ಅಥವಾ ಹಗುರವಾಗಿ ಬಳಸುವ 'ಗ್ರೇಟ್', 'ಎಕ್ಸಲೆಂಟ್' ಎನ್ನುವ ಪದಗಳ ಬಳಕೆಯಲ್ಲಿ ನನಗೆ ಬಹಳಷ್ಟು ಅಸಮಧಾನವಿದೆ - ಉದಾಹರಣೆಗೆ ನನ್ನ ಬರಹಗಳಲ್ಲಿ ಕೆಟ್ಟದಾದ ಬರಹವೊಂದನ್ನು ಆಯ್ದು ನನ್ನ ಗುರುತು-ಪರಿಚಯವಿರುವವರಿಗೆ ಕಳಿಸಿದೆನೆನ್ನಿ - ಆ ಮುಖಗಳೆಲ್ಲ ಕೊಡುವ 'ಗ್ರೇಟ್ ಆರ್ಟಿಕಲ್', 'ಎಕ್ಸಲೆಂಟ್' ಅನ್ನೋದು ನನ್ನನ್ನು ಬಲವಾಗಿ ಕಾಡಿಸಿ ಇನ್ನೊಮ್ಮೆ ಬರೆಯದಿರುವ ಹಾಗೆ ಮಾಡಿಬಿಡುವ ಸಂಭವವೇ ಹೆಚ್ಚು. ಭಾರತದಲ್ಲಿ ನನ್ನ ಬರಹಗಳು ನೇರವಾಗಿ ಎಷ್ಟೋ ಸಲ ಸಂಪಾದಕರ ಕಸದ ಬುಟ್ಟಿಗೆ ಹೋಗಿವೆ, ಕೆಲವೊಮ್ಮೆ ವಿಶಾದ ಪತ್ರವೂ ಬಂದಿದೆ, ಆದರೆ ನನ್ನ ಅನಿವಾಸಿ ನೆಲೆಗಟ್ಟಿನಿಂದ ಬರೆದ ಬರಹಗಳೆಲ್ಲವೂ ಲಂಗುಲಗಾಮಿಲ್ಲದೇ ಅಚ್ಚಾಗುವುದನ್ನು ನೋಡಿ ನನಗೆ ಆಶ್ಚರ್ಯಕ್ಕಿಂತ ಹೆಚ್ಚಾಗಿ ಖೇದವಾಗಿದೆ. ಇಲ್ಲಿ ಎರಡು ವಿಚಾರಗಳಿವೆ - ಒಂದು ಬರೆಯುವ ಪ್ರತಿಭೆ ಇದೆ/ಇಲ್ಲ ಎನ್ನುವ ವಿಚಾರ, ಮತ್ತೊಂದು ತುಲನೆ. ಪ್ರತಿಭೆ ಇದ್ದವರು ಸಾಣೆಕಲ್ಲಿಗೆ ತಿಕ್ಕಿದ ಬಂಗಾರ ಮಿನುಗುವ ಹಾಗೆ ಒಳ್ಳೆಯ ಮಾರ್ಗದರ್ಶನದಲ್ಲಿ ಬೆಳೆಯಬಲ್ಲರು, ಅಲ್ಲದೇ ತುಲನೆ ಮಾಡಿ ಹೇಳಿದಾಗ ಒಂದು ಮೌಲ್ಯಮಾಪನದ ನೆಲೆಗಟ್ಟನ್ನೂ ಸೃಷ್ಟಿಸಿದಂತಾಗಿ ಬರೆಯುವವರಿಗೆ ಹಾಗೂ ಓದುವವರಿಗೂ ಇಬ್ಬರಿಗೂ ಅನುಕೂಲವಾಗುತ್ತದೆ. ಅದನ್ನು ಬಿಟ್ಟು ಬರೆದದ್ದೆಲ್ಲ 'ಗುಡ್ ಒನ್' ಆಗಿಬಿಟ್ಟರೆ ಬರೆದವರೂ ಬೆಳೆಯಲಾರರು, ಹಾಗೂ ಆ ರೀತಿಯ ಹೇಳಿಕೆ ಕೊಡುವವರ ತಿಳುವಳಿಕೆಯೂ ಸ್ಪಷ್ಟವಾಗಿ ಗೊತ್ತಾಗಿಹೋಗುತ್ತದೆ. ಅದರ ಬದಲಿಗೆ ಇಂತದ್ದು ಇಷ್ಟವಾಯಿತು, ಏಕೆ/ಹೇಗೆ, ಇದು ಇಷ್ಟವಾಗಲಿಲ್ಲ - ಏಕೆ/ಹೇಗೆ ಎಂದು ತಿಳಿಸಿಹೇಳಿದರೆ ಎಷ್ಟೋ ಅನುಕೂಲವಾಗುತ್ತದೆ. ನನ್ನ ಇನ್‌ಬಾಕ್ಸ್‌ನಲ್ಲಿ ಬಂದ ಕೆಲವು ಇ-ಮೇಲ್‌ಗಳಿಗೆ ನಾನು ನನ್ನ ಶಕ್ತ್ಯಾನುಸಾರ ಉತ್ತರಕೊಡುತ್ತೇನೆ, ಹೆಚ್ಚಿನ ಪಾಲು ನನ್ನ ಉತ್ತರ ಅದನ್ನು ನಿರೀಕ್ಷಿಸಿದವರಿಗೆ ನಿರಾಶೆಯನ್ನುಂಟು ಮಾಡುತ್ತದೆಯೆಂದೇ ಹೇಳಬೇಕು.

ಕಷ್ಟ ಅನ್ನೋದು ಅವರವರಿಗೆ ಇದ್ದೇ ಇರುತ್ತೆ, ಆದರೆ ಕಷ್ಟಗಳು ಅನಿವಾಸಿಗಳಿಗೇ ಇರೋದು ಅನ್ನೋ ಮಾತನ್ನು ನಾನು ಸುತಾರಾಂ ಒಪ್ಪೋದಿಲ್ಲ. ನಮ್ಮೂರುಗಳಲ್ಲಿ ದಿನವಿಡೀ ಕೆಲಸ ಮಾಡಿಯೂ ಅಲ್ಲಿಂದಲ್ಲಿಗೆ ಆಗಿ ಹೋಗುವಂಥವರನ್ನೂ, ತಮ್ಮ ಮಕ್ಕಳಿಗೆ ಯಾವುದೋ ಆಪರೇಷನ್ ಮಾಡಿಸಲು ಹಣವಿರದೇ ಆ ಮಕ್ಕಳನ್ನು ಅವರ ಕಣ್ಣೆದೆರೇ ಕಳೆದುಕೊಳ್ಳಬೇಕಾದ, ಇನ್ನಿತರ ಜೀವನ್ಮರಣದ ಅಸಹಾಯಕತೆಗಳ ಮುಂದೆ ಅನಿವಾಸಿಗಳ ಕಷ್ಟ ಏನೇನೂ ಅಲ್ಲ. ಬೇಕಾದಷ್ಟು ಅಸಹಾಯಕತೆಗಳನ್ನು ಅಲ್ಲಿ-ಇಲ್ಲಿ ನೋಡಿದ ಮೇಲೆ ಅವುಗಳನ್ನು ಕುರಿತು ಓದಿದ ಮೇಲೆ ಇಲ್ಲಿಯವರಿಗೆ ಕಷ್ಟವೆಂದರೇನು ಎಂದೇ ತಿಳಿಯದು ಎಂದು ಹೇಳಿದರೆ ತಪ್ಪೇನೂ ಆಗದು. ಉದಾಹರಣೆಗೆ ನ್ಯೂ ಆರ್ಲೀನ್ಸ್‌ಗೆ ನೀರು ನುಗ್ಗಿದಾಗ ಟಿವಿಯಲ್ಲಿ ತೋರಿಸಿದ ರೋಧನ ನಮ್ಮ ದೇಶದ ದಿನನಿತ್ಯ ಬದುಕಿನ ಒಂದು ಭಾಗದಂತೆ ಕಂಡುಬಂತು. ಬರಿ ಇದು ಶ್ರೀಮಂತ ದೇಶವೆಂದು ಈ ಮಾತನ್ನು ಹೇಳುತ್ತಿಲ್ಲ, ಇಲ್ಲಿಯವರ ಶ್ರೀಮಂತ ಮನಸ್ಥಿತಿಯನ್ನು ಅಲ್ಲಿಯ ಬಡವರ ಮನಸ್ಥಿತಿಗೆ ಹೋಲಿಸಿದರೆ ಇಲ್ಲಿನವರದ್ದು ಸಾವಿರ ಪಾಲು ಉತ್ತಮ ಎನ್ನಿಸಿದ್ದರಿಂದ ಹೀಗೆ ಹೇಳಬೇಕಾಯಿತು. ಆದರೆ ನಮ್ಮ ಸಂಸ್ಕೃತಿಯ ರಾಯಭಾರಿಗಳಾಗಿ ಪ್ರತಿಕ್ಷಣವೂ ಅಲ್ಲಿ-ಇಲ್ಲಿ ತುಲನೆಯ ಅಭಿಶಾಪಕ್ಕೆ ಸಿಕ್ಕಬೇಕಾದ ಪ್ರತಿಯೊಂದು ಅನಿವಾಸಿ ಮನಸ್ಥಿತಿಯನ್ನು ಕುರಿತು, ತಮ್ಮ ಮಕ್ಕಳು-ಮರಿಗಳು ತಮಗಿಂತ ಭಿನ್ನರಾಗಿ ಬೆಳೆಯುತ್ತಿದ್ದಾರಲ್ಲ ಎನ್ನುವ ಗೊಂದಲ, ಕುತೂಹಲಗಳನ್ನು ಕುರಿತು ಹೇಳಬೇಕಾದಲ್ಲಿ ಅನಿವಾಸಿ ಮನಸ್ಸು ವಿಶೇಷ ಸ್ಥಾನವನ್ನು ಪಡೆದು ಎಂಥವರಿಂದಲೂ ಸ್ವಲ್ಪ ಕರುಣೆಯನ್ನು ಬೇಡುತ್ತದೆ. ಈ 'ಅಯ್ಯೋ' ಮನೋಭಾವನೆಯೇ ನಮಗೆ ನಮ್ಮ ದೇಶದಲ್ಲಿ ವಿಶೇಷ ಸ್ಥಾನವನ್ನು ತಂದುಕೊಡೋದು, 'ಪಾಪ, ಎಷ್ಟೋ ದಿನದ ಮೇಲೆ ಬಂದಿದ್ದಾರೆ, ಅಲ್ಲಿ ಹೇಗೋ-ಏನೋ' ಎನ್ನುವ ಸವಲತ್ತು ಸ್ಥಳೀಯರಿಗೆ ಸಿಕ್ಕಿದ್ದನ್ನು ನಾನು ನೋಡಿಲ್ಲ.

ಅನಿವಾಸಿಗಳ ಮನಸ್ಸಿನಲ್ಲಿ ಕಳೆದುಕೊಂಡಿದ್ದರ ಪಟ್ಟಿ ಉದ್ದುದ್ದಕ್ಕೆ ಬೆಳೆದು ಎಲ್ಲೋ ಒಮ್ಮೆ ನಿಂತುಹೋಗುತ್ತದೆ - ಮುಂದೆ ಅದು ದಶಕಗಳ ಕೊಡುಗೆಯಾಗಿ ಕ್ರಮೇಣ ಸಹಜವಾಗುತ್ತದೆ. ಅಲ್ಲಿ-ಇಲ್ಲಿಯ ಮನಸ್ಥಿತಿಯಲ್ಲಿ ಸದಾ ತೊಳಲಾಡುವ ಭ್ರಮೆ ಇದ್ದೇ ಇರುತ್ತೆ, ಇಲ್ಲಿದ್ದಾಗ ಅಲ್ಲಿ, ಅಲ್ಲಿದ್ದಾಗ ಇಲ್ಲಿ ಎಲ್ಲವೂ ವಿಶೇಷವಾಗಿ ಕಾಣತೊಡಗುತ್ತೆ. ಈ ಕಳೆದುಕೊಂಡಿದ್ದರ ಪಟ್ಟಿ, ಗಳಿಸಿಕೊಂಡಿದ್ದರ ಪಟ್ಟಿಗಿಂತ ಮೊದಮೊದಲು ದೊಡ್ಡದಾಗಿ ಕಂಡುಬಂದರೂ ಕೊನೆಗೆ ಗಳಿಸಿಕೊಂಡಿದ್ದು ಹುಟ್ಟಿಸುವ ಬಲವಾದ ಆಕರ್ಷಣೆ ಕಳೆದುಕೊಂಡಿದ್ದನ್ನು ಲಘುವಾಗಿ ಪರಿಗಣಿಸುವಂತೆ ಮಾಡುವುದರ ಮೂಲಕ, ಸ್ವಲ್ಪ ಸಮಯದ ಸಹಾಯದಿಂದಲೂ, ಹೆಚ್ಚಿನವರಲ್ಲಿ ಇಲ್ಲೆ ವಾಸವಾಗುವ ಹವಣಿಕೆ ಹುಟ್ಟುತ್ತದೆ.

No comments: