Saturday, July 08, 2006

ಕಿರುಗಥೆ: ತುಂಬದ-ತುಂಬಿದ ನಡುವಿನ ಆಯಾಮ

ಕಥೆ ಬರೀದೇ ತುಂಬಾ ದಿನ ಆಯ್ತು, ಒಂದು ಕಿರುಗಥೆ ಬರೀಬೇಕು ಅನ್ನಿಸ್ತಾ ಇದ್ದಿದ್ರಿಂದ ಅದೂ ಬ್ಲಾಗ್‌ನಲ್ಲಿ ನೇರವಾಗಿ ಬರಹ ಪ್ಯಾಡ್‌ನಲ್ಲಿ ಬರೆದ್ರೆ ಹೇಗಿರತ್ತೆ ಅಂತ ಬರೀತಾ ಹೋಗಿದ್ದಕ್ಕೆ ಹೀಗೆ ಬರೆಯೋ ಹಾಗಾಯ್ತು, ಇದನ್ನ ತಿದ್ದಿಲ್ಲ, ತೀಡಿಲ್ಲ, ಸುಮ್ನೇ ಹೊಳೆದ ಹಾಗೆ ಬರೆದುಕೊಂಡು ಹೋಗಿದ್ದೇನೆ - ಇಲ್ಲಿ ಪಾತ್ರಗಳೇನಾದ್ರೂ ಬಂದಿವೆ ಅಂತ ನಿಮಗನ್ನಿಸಿದ್ರೆ, ಅವೆಲ್ಲ ಸುಮ್ನೇ ಕಾಲ್ಪನಿಕ ಅಂದುಕೊಳ್ಳಿ!

***

'ಒಬ್ಬ ಕಲಾವಿದನಾಗೋದು ಅಂದ್ರೆ ಹುಡುಗಾಟಾನ?' ಎಂದು ಮೆಷ್ಟ್ರು ಹೇಳಿದ್ದ ಮಾತುಗಳು ತೆರೆಗಳು ಬಂದು ಅಪ್ಪಳಿಸೋ ಹಾಗೆ ಹೊಡೀತಲೇ ಇತ್ತು, ಇದು ಇನ್ನು ಕೊರೆಯೋ ಭೂತವಾಗಿ ಬೆಳೆಯೋದಕ್ಕಿಂತ ಮೊದಲು ಮನೆ ಬಿಟ್ಟು ಎಲ್ಲಾದರೂ ಹೋಗಬೇಕು, ಏನಾದರೂ ಸಾಧನೆ ಅನ್ನೋದನ್ನು ಮಾಡದೇ ಹೋದ್ರೆ ಬದುಕಿದ್ದಾದ್ರೂ ಏನ್ ಪ್ರಯೋಜನ ಎಂದು ಅನ್ನಿಸತೊಡಗಿದ ಕೂಡ್ಲೇ ಹಿಂದೂ-ಮುಂದೂ ನೋಡ್ದೇ ಮನೆ ಬಿಟ್ಟು ಬಂದೆ ಬಿಟ್ಟೆ -- ಆದ್ರೆ ಈ ಪ್ರಪಂಚ ಇಷ್ಟೊಂದ್ ಕೆಟ್ಟದು ಅಂಥ ಅನ್ನಿಸಿರಲಿಲ್ಲ.

ರಂಗಾಯಣದ ಕಟ್ಟೆ ಹತ್ತ ಬೇಕು, ಮುಸುಡಿಗೆ ಬಣ್ಣ ಬಳಕೊಂಡು ನನ್ನ ಪಾತ್ರಗಳ ಜೀವಾಳನ ನನ್ನ ಜೀವಾಳವನ್ನಾಗಿ ತೆಗೆದಿಡಬೇಕು ಎಂದು ಪೇಚಾಡಿಕೊಂಡಾಗೆಲ್ಲ, ಈ ಹಸಿವು ದುತ್ತನೆ ಕಾಡಲಿಕ್ಕೆ ಶುರುಮಾಡಿಕೊಂಡಿದೆ. ಮೇಷ್ಟ್ರು ಹೇಳಿದ್ರು 'ಹೊಟ್ಟೆ ತುಂಬಿದ್ ಮೇಲೆ ಕಲಾವಿದನಾಗೋದಕ್ಕೆ ಹೇಗೆ ಸಾಧ್ಯ?', ಹಂಗಾದ್ರೆ ಹಸಗೊಂಡ್ ಇರೋದೇ ಬದುಕೇ? ದುಡ್ಡು ಮುಖ್ಯ, ಅದಕ್ಕಿಂತಲೂ ಹೆಚ್ಚಿಗೆ ಬದುಕೋದ್ ಮುಖ್ಯ ಅದರ ನಂತರವೇ ಏನಿದ್ರೂ - ನಾಟಕ ಆಡೋದು, ಅನುಭವಿಸೋದು ಎಲ್ಲ ನನ್ನಂತೋರಿಗಲ್ಲ, ಒಂದು ಪಾತ್ರಾನ ಅನುಭವಿಸಿ ಆಡಬೇಕು, ನನ್ನೆಲ್ಲ ನೋವನ್ನೂ ಹತ್ತಿಕ್ಕಬೇಕು, ನೋಡುಗರಿಗೆ ಅದರಿಂದ ತುಂಬ ಖುಷಿ ಆಗಬೇಕು, ನಾನು ನಾಳೆ ದೊಡ್ಡ ಮನುಷ್ಯನಾಗಬೇಕು: ಈ ಹಗಲು ಕನ್ಸುಗಳೇ ಇಷ್ಟು ಒಂದು ರೀತಿಯಲ್ಲಿ ದಿನವಿಡೀ ಮನೆಯಲ್ಲಿ ಕಟ್ಟಿಹಾಕಿ ಸಂಜೆ ಹೊರಬಿಟ್ಟ ನಾಯಿಯ ಹಾಗೆ ಒಂದು ರೀತಿಯ ಸ್ವಾತಂತ್ರ್ಯವನ್ನು ಅನುಭವಿಸೋದು. ಮನುಷ್ಯನನ್ನು ಯಾವುದರಿಂದ ಅಳೀತಾರೆ ಈ ಜನ, ಅವರವರ ಹತ್ರ ಇರೋ ಪ್ರತಿಭೆ ಇಂದಾನೋ, ದುಡ್ಡಿಂದಾನೋ ಅಥವಾ ಇವೆರಡೂ ಇರೋದ್ರಿಂದ ಬರೋ ತಾಕತ್ತಿನ ಮೇಲೋ? ನಾನು ಕಲಾವಿದನಾಗಬೇಕು ಅಂತ ಹಣೇಲ್ ಬರೆದಿದ್ರೆ ಆಗೇ ಆಗುತ್ತೆ, ಅದನ್ನ ನಿಲ್ಸಕ್ಕಾಗುತ್ತಾ, ಆದ್ರೆ ನಾನು ಕಲಾವಿದ ಆಗೋ ಹೊತ್ತಿಗೆ ಊರಲ್ಲೆಲ್ಲ ಸಂಜೆ ದೀಪಗಳು ಅದಾಗ್ಲೇ ಹತ್ತಿಕೊಂಡ್ ಉರೀಯೋ ಹೊತ್ತಾಗಿರುತ್ತೆ, ಅದರಿಂದ ಏನ್ ಪ್ರಯೋಜನಾ? ಒಂದು ರೀತಿ ನಾಯೀ ಬಾಳ್ವೆನಪ್ಪಾ ಇದು.

ಕೆರೆನೀರಿಗೆ ಕಲ್ಲು ಹೊಡೆದ್ರೆ ಅಲೆಗಳು ಏಳುದೇನೋ ನಿಜ, ಆದ್ರೆ ಉಗುಳು ನುಂಗಿದ್ರೆ ಹೊಟ್ಟೆ ತುಂಬಲ್ಲಾ ಅನ್ನೋ ಹಾಗೆ ನಾನು ಈ ಕೆರೆಗೆ ಕಲ್ಲನ್ನು ಹಾಕ್ತಾ ಇರೋ ಕೆಲ್ಸದಿಂದ ಏನ್ ಪ್ರಯೋಜನ ಇದೆ, ಅದರಿಂದೇನಾದ್ರೂ ನೀರು ಕೋಡಿ ಬೀಳುತ್ತೇನು? ಹನಿಹನಿಗೂಡಿದ್ರೆ ಹಳ್ಳವೇನೋ ನಿಜ, ಆದ್ರೆ ಹನಿಗಳು ಒಂದುಗೂಡಿ ದೊಡ್ಡ ಹನಿ ಆಗಿ, ಆ ದೊಡ್ಡ ಹನಿ ಇನ್ನೂ ದೊಡ್ಡ ಹನಿ ಆಗಿ ಹರಿಯೋ ಹೊತ್ತಿಗೆ ಎಂಥೋರ ಸಹನೆಯ ಕಟ್ಟೇನೂ ಒಡೆದ್ ಹೋಗುತ್ತೆ.

ಒಬ್ಬೊಬ್ಬರ ಮನಸ್ಸಿನ ಚಿತ್ರ ಅವರವರ ಕಾಲಿನ ಹೆಜ್ಜೆ ಗುರುತು ಇದ್ದ ಹಾಗೆ ವಿಶೇಷ ಹಾಗೂ ಭಿನ್ನವಾಗಿರುತ್ತೆ, ನಾನು ನೋಡುನೋಡುತ್ತಿದ್ದಂತೇ ನನ್ನ ಕಣ್ಣ ಮುಂದೆ ಎಷ್ಟೋ ಜನ ಕಲಾವಿದರು ಹೀಗೆ ಬಂದರು ಹಾಗೆ ಹೋದರು. ಅವರನ್ನೆಲ್ಲ ನಿಮ್ಮ ಯಶಸ್ಸಿನ ರಹಸ್ಯ ಏನು ಅಂತ ಕೇಳಿದ್ರೆ 'ನಾವೂ ಬಹಳ ಕಷ್ಟ ಪಟ್ಟಿದ್ದೀವಿ' ಅಂತ ಸುಳ್ಳು ಹೇಳ್ತಿದ್ದಾರೇನೋ ಅನ್ನಿಸ್ತಿದೆ. ಯಾವ್ದೋ ಒಂದು ಗುರಿ ಹಿಡಿದು ಮುಂದೆ ನುಗ್ಗಬೇಕಾದ್ರೆ ಅದಕ್ಕೆ ಪಡಬೇಕಾದ ಪರಿಶ್ರಮವನ್ನು ಕಷ್ಟ ಅಂತ ಹೇಗೆ ಹೇಳೋಕ್ ಸಾಧ್ಯ? ಅದು ಕಷ್ಟ ಅಂತ ಗೊತ್ತಿರಲಿಲ್ಲವೋ ಅಥವಾ ಗೊತ್ತಿದ್ದೂ ಗೊತ್ತಿದ್ದೂ ಈ ಕೆಲ್ಸಕ್ಕೆ ಬಂದರೋ, ಹಾಗೆ ಬಂದವರು ತಮ್ಮ ಉನ್ನತಿಗೆ ಇಂಥೋರ ಸಹಾಯ ಇದೆ ಅಂತ ನೇರವಾಗಿ ಏಕೆ ಹೇಳೋದಿಲ್ಲ - ನಾನು ನೋಡಿದ ಹಾಗೆ ಎಲ್ಲಾ ದೊಡ್ಡ ಮನುಷ್ಯರ ಹಿಂದೇನೋ ಒಬ್ಬೊಬ್ಬ ಗಾಡ್‌ಫಾದರ್ ಇರ್ತಾರಪ್ಪ, ಯಾವಂದೋ ಮರ್ಜಿಯಲ್ಲಿ ಮಾಡಿದ್ದನ್ನೇ ಆಟ ಅಂತ ಮಾಡಿಕೊಂಡು ಮುಂದೆ ಬರೋ ಜನ ಈ ಗಾಡ್‌ಫಾದರ್‌ಗಳಿಗೆ ಸರಿಯಾದ ಕ್ರೆಡಿಟ್ಟೂ ಕೊಡೋದಿಲ್ವಲ್ಲ. ಹಾಗಂತ ಪ್ರತಿಭಾವಂತರೇ ಇಲ್ಲಾ ಅಂತ ನನ್ನ ಯೋಚ್ನೇ ಅಲ್ಲ, ಪ್ರತಿಭೆಗೂ ಮುಂದ್ ಬರೋದಕ್ಕೂ ಒಂದಕ್ಕೊಂದ್ ಸಂಬಂಧ ಅಷ್ಟೇನೋ ಗಾಢವಾಗಿರೋದಿಲ್ಲ, ಯಾವನಿಗೆ ಎಷ್ಟೋ ಪ್ರತಿಭೆ ಇದ್ರೂ ಇನ್ನೊಬ್ರ ಬೂಟ್ ನೆಕ್ಕೋದಕ್ಕೇನೂ ಕಡಿಮೆ ಇರೋದಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ದುಡ್ಡೇ ತಾನೇ ಬರೋದು, ಹಾಗಿದ್ದ ಮೇಲೆ ನನ್ನನ್ನ ನಂಬಿಕೊಂಡು ಲಕ್ಷಾಂತರ ರೂಪಾಯಿಯನ್ನ್ ಯಾವನ್ ಸುರೀತಾನೆ? ಯಾಕ್ ಸುರೀಬೇಕು?

ಇಲ್ಲಪ್ಪಾ ನನ್ ಕೈಯಲ್ಲಿ ಆಗಲ್ಲ, ಇವತ್ತಲ್ಲ ನಾಳೆ ನಾನು ಇದನ್ನೆಲ್ಲ ಬಿಟ್ಟು ಹೋಗೇ ತೀರ್ತೀನಿ, ಮುಸುಡಿಗೆ ಬಣ್ಣ ಹಚ್ಚಿಕೊಳ್ಳೋದ್ ಯಾರು, ಇವರೆಲ್ಲರ ಕೈಯಲ್ಲಿ ಬೈಸಿಕೊಳ್ಳೋನ್ ಯಾರು? ನಾನು ಈ ನನ್ ಮಕ್ಳ ಕೈಯಲ್ಲಿ ಪಳಗಿ ಮುಂದೆ ಬಂದು ದೊಡ್ಡ ಹೀರೋ ಅಗೋದು ಆಷ್ಟರಲ್ಲೆ ಇದೆ, ನನ್ನ ಕನಸುಗಳಿಗೆ ನನ್ನ ಮೇಲೆ ನಂಬಿಕೆ ಇಲ್ಲ, ಇನ್ನು ಯಾರಾದರೂ ನನ್ನನ್ನ ಏಕೆ ನಂಬಿಯಾರು? ಅದೂ ಅಲ್ದೇ ಈ ರಂಗಭೂಮಿಯಲ್ಲಿ ನನ್ನದಾದ್ರೂ ಎಷ್ಟು ದೊಡ್ಡ ಪ್ರಪಂಚವಿದೆ, ನಾನು ಯಾವ ಶಿಫಾರಸ್ಸಿನ ಕುಳವಂತೂ ಅಲ್ಲ, ಮೇಲಾಗಿ ಹೇಳಿಕೊಳ್ಳೋ ಪ್ರತಿಭೇನೂ ಇಲ್ಲ, ಹಂಗಿದ್ದ ಮೇಲೆ ನಾನು ಊರು ಬಿಡೋ ಮೊದಲು ಇವನ್ನೆಲ್ಲ ಯಾಕೆ ಯೋಚಿಸ್‌ಲಿಲ್ವೋ. ಈಗ ಊರಿಗೆ ಹೋಗ್ಲೋ, ಎಲ್ಲಿಗೆ ಹೋಗ್ಲಿ? ನಾಳೆಯಿಂದ ಊಟಕ್ಕೇನು ಮಾಡೋದು, ಯಾವ ಹೋಟ್ಲಿನಲ್ಲಿ ಹೋಗಿ ಯಾವ ಮುಖ ಇಟ್‌ಕೊಂಡು ಏನಂತ ಕೆಲ್ಸ ಕೇಳ್ಲಿ. ಇದನ್ನೆಲ್ಲ ಬಿಟ್ಟು ಹೋಗೋಕೇ ಆಗೋದಿಲ್ವೇನೋ ಅನ್ನೋ ಸ್ಥಿತಿಗೆ ಬಂದ್ ಬಿಟ್ನೇ? ನನ್ನನ್ನ ನಾನೇ ಆಳಿಕೊಳ್ಳಲಾಗದ ಸ್ಥಿತಿಯನ್ನೂ ತಲುಪಿಬಿಟ್ನೇ - ಅಯ್ಯೋ, ಏಕ್ ಹೀಗಾಯ್ತು, ಎಂತಾ ಕಷ್ಟಾ ತಂದ್ ಬಿಟ್ಟೆಯಪ್ಪಾ ದೇವ್ರೇ... ಅದಿರ್ಲಿ ನಾನು ಊರ್ ಬಿಡೋ ಮೊದ್ಲು ಎಷ್ಟೋ ಜನ ನನ್ನನ್ನ ಅಲ್ಲಿಗ್ ಹೋಗು, ಇಲ್ಲಿಗ್ ಹೋಗು ಅಂದಿದ್ರಲ್ಲ, ಅವರೆಲ್ಲಾ ಈಗ ಎನಂತಾರೆ? ದಿನಾ ಹೋದಂಗೆ ಎಲುಬಿನ ಗೂಡಾಗೋ ಅವ್ವನಿಗೆ ನನ್ನ ಮುಖ ಹೆಂಗ್ ತೋರುಸ್ಲಿ? ನಾನೇನಾದ್ರೂ ಜೀವ ಕಳಕಂಡ್ರು ಅದಕ್ಕೊಂದು ಅರ್ಥ ಅನ್ನೋದೂ ಇಲ್ಲಾ ಅನ್ನೋ ಸ್ಥಿತಿಗೆ ಬಂದೆನಲ್ಲ, ಈ ಸಾವು-ಬದುಕಿನ ಸ್ಥಿತಿ ಅಂದ್ರೆ ಹೀಗೆ ಇರಬೇಕು, ಥೂ ಯಾವನಿಗ್ ಬೇಕಪ್ಪಾ ಈ ಸ್ಥಿತಿ?

ಇರ್ಲಿ, ನಾನು ಎಲ್ಲಿಗೂ ಹೋಗೋದಿಲ್ಲ, ನಾಳೆ ಮತ್ತೆ ಆ ಸತ್ತವರ ನೆರಳನ್ನ ಆಡೋದಕ್ಕೆ ನಾನು ಇರದೇ ಹೋದ್ರೆ ಆ ಬಡಪಾಯಿ ಮೇಷ್ಟ್ರು ಗತಿ ಏನು, ಒಳ್ಳೇ ಕೊನೇ ಕಾಲಕ್ಕೆ ಕೈ ಕೊಟ್ಟ ಅನ್ನೋ ಕೆಟ್ಟ ಮಾತು ನನಗೆ ತಗುಲಿಕೊಳ್ಳೋದ್ ಬೇಡ...ಸೀದಾ ವಾಪಾಸ್ ಹೋಗ್ತೀನಿ, ಏನೋ ಬೇಯಿಸಿಕೊಂಡು ತಿಂದ ಹಾಗೆ ಇದ್ರೆ ಸಾಕು, ಇನ್ನೇನಂತೆ...ಎಲ್ಲಾ ಸರಿ, ಈ ನಾಟಕಗಳನ್ನೆಲ್ಲ ಏತಕ್ ಆಡಬೇಕು? ಬದುಕಲ್ಲಿ ಬರೋ ನಾಟಕಗಳು ಸಾಲ್ದು ಆಂತ್ಲೇ? ಅಥವಾ ನಮಗೆ ಅಲ್ಲಲ್ಲಿ ಸಿಗೋ ನೀತಿಪಾಠಗಳು ಕಡಿಮೆ ಆದ್ವು ಅಂತ್ಲೇ? ಈ ನಾಟಕದಿಂದ ಯಾವನ್ಯಾವನು ಏನೇನ್ ಕಲಿತೋರೇ, ಈ ನಾಟಕದಿಂದ ಯಾವ ಕಷ್ಟ ಮರೆಯಾಗಿ ಹೋಗಿದೆ, ಹೊಟ್ಟೆ ತುಂಬದ ಒಂದಿಷ್ಟು ಜನ ಆಡೋ ದೊಂಬರಾಟವನ್ನು ಹೊಟ್ಟೆ ತುಂಬಿದ ಒಂದಿಷ್ಟು ಜನ ನೋಡಿ ಬಾಯಿ ಚಪ್ಪರಿಸಿದರೆ ತುಂಬದ ಹಾಗೂ ತುಂಬದ ಜನರ ನಡುವಿನ ಅಂತರವನ್ನು ತುಂಬುವವರು ಯಾರು? ನಮ್ಮ ಹೊಟ್ಟೆ ಬೆನ್ನಿಗೆ ಹತ್ತಿದ್ದರೆ ಅದನ್ನು ಬೇರ್ಪಡಿಸೋರು ಯಾರು? ಹೊಟ್ಟೆ ತುಂಬಿದ್ ಜನ ನಾಟಕ ಏಕ್ ಆಡೋದಿಲ್ಲ? ಅದನ್ನೆಲ್ಲ ನಾವು ನೋಡಿ ನಗುವಂತಿದ್ರೆ - ಹೊಟ್ಟೆ ತುಂಬಿದವರು ಬರೀ ನಗೋ ನಾಟಕಾನೇ ಆಡ್ತಾರೇ ಅನ್ನೋ ಗ್ಯಾರಂಟೀನಾದ್ರೂ ಏನು?

ನೋಡೇ ಬಿಡ್ತೀನಿ, ಈ ಸಾರಿ ನನ್ನ ಪಾತ್ರಾನಾ ಜೀವಂತವಾಗಿ ತರ್ತೀನಿ, ಸತ್ತೋರ್ ನೆರಳನ್ನ ನೋಡಿ ಜನ ಒಂದಿಷ್ಟು ನೆಮ್ಮದಿಯಿಂದ್ಲಾದ್ರೂ ಇರಲಿ - ನಮ್ ನಮ್ ಕೆಲ್ಸ ನಾವ್ ಮಾಡೋದೇ ಚೆಂದ - ಉಳಿದ ದೊಡ್ಡ ವಿಷ್ಯಾನೆಲ್ಲ ಚಿಂತಿಸಿ ಏನ್ ಫಲ, ಅದೂ ನನ್ನೋಂಥೋರಿಂದ ಯಾವ ಚಿಂತನೆ ಹುಟ್ಟಬಲ್ಲದು, ಅದೂ ಹೊಟ್ಟೆ ತುಂಬದವನ ಅರಣ್ಯರೋಧನದಿಂದ ಹುಟ್ಟೋದಲ್ವೇ ಅಲ್ಲ. ಈ ಚಿಂತೆ-ಚಿಂತನೆ ಎರಡೂ ಕೆರದ ಗಾಯದ ಹಾಗೆ ಮಾಸೋದಿಲ್ಲ, ಇನ್ನೂ ಬಲೀತಾ ಹೋಗುತ್ತೆ, ಬಲಿತ ಗಾಯ ಅಗಲವಾಗುತ್ತೆ, ಒಂದು ರೀತಿ ಕೆರೆಯಲ್ಲಿ ಏಳೋ ಅಲೆಗಳ ಥರಾ...ಏಳಲಿ, ಇನ್ನೂ ಅಲೆಗಳು ಏಳಲಿ, ಅದರಿಂದ ಇನ್ನೇನು ಆಗದೇ ಹೋದ್ರೂ ಒಂದಿಷ್ಟು ಕಂಪನಗಳಾದ್ರೂ ಹುಟ್ಟತ್ತಲ್ಲಾ ಅಷ್ಟೇ ಸಾಕು!

No comments: