ಮೀಸಲಾತಿ ಸಿಗಬೇಕಾದವರಿಗೆ ಸಿಕ್ಕಿದ್ದರೆ...
ಈ ಮೀಸಲಾತಿ ಇಂಥವರಿಗೆ ಸಿಗಬೇಕು, ಅಂಥವರಿಗೆ ಸಿಗಬೇಕು, ಇಂತಿಂಥವರಿಗೆ ಸಿಗಬಾರದು ಎಂದು ಯಾರು ಎಷ್ಟೇ ಲಾಬಿ ಮಾಡಿದರೂ ಕೊನೆಯಲ್ಲಿ ಅದು ತಲುಪಬೇಕಾದವರಿಗೆ ತಲುಪುವ ಹೊತ್ತಿಗೆ ಮತ್ತಿನ್ನೇನೋ ಆಗಿರುತ್ತದೆ. ಒಟ್ಟಿನಲ್ಲಿ ಫಲವನ್ನು ಯಾರನ್ನು ಉದ್ದೇಶದಲ್ಲಿಟ್ಟುಕೊಂಡು ಮಾಡಲಾಗಿದೆಯೋ ಅವರಿಗೂ ಹಾಗೂ ಫಲಾನುಭವಿಗಳಿಗೂ ವ್ಯತ್ಯಾಸವಿದ್ದಾಗ ಮೀಸಲಾತಿ ದೊರಕಿಸಿಕೊಡಬಹುದು ಎನ್ನುವ ಸಾಮಾಜಿಕ ನ್ಯಾಯಕ್ಕೆ ಒಂದು ಅರ್ಥ ಬರೋದಾದರೂ ಹೇಗೆ?
ಸುಮಾರು ೧೯೮೭-೮೮ ರ ಹೊತ್ತಿಗೆ ಶಿವಮೊಗ್ಗ ಜಿಲ್ಲೆಯಲ್ಲಿರುವ ಎರಡು ಟಿಸಿಎಚ್ ಕಾಲೇಜುಗಳಲ್ಲಿ ನನ್ನ ಕಣ್ಣ ಮುಂದೆ ನಡೆದ ಗೊಂದಲ ಇವತ್ತಿಗೂ ನಡೆಯುತ್ತಲೇ ಇದೆ, ಎಷ್ಟೇ ಮೀಸಲಾತಿ ಸೌಲಭ್ಯ ದೊರೆತರು ಅದು ತಲೆಮಾರುಗಳನ್ನು ದಾಟಿ ತಲುಪುವವರಿಗೆ ತಲುಪುವ ಹೊತ್ತಿಗೆ ಹಲವಾರು ವರ್ಷಗಳು ಬೇಕಾಗುವುದಂತೂ ನಿಜ. ೧೯೮೭ ಕ್ಕಿಂತ ಮೊದಲು ಆನವಟ್ಟಿಯಲ್ಲಿ ಟಿಸಿಎಚ್ ಸೇರಬೇಕಾಗಿದ್ದರೆ ಕೇವಲ ಮೆರಿಟ್ ಆಧಾರದ ಮೇಲೆ ಮಾತ್ರ ಸೀಟುಗಳನ್ನು ಹಂಚುತ್ತಿದ್ದರು, ಇಡೀ ಜಿಲ್ಲೆಗೆ ಇರೋದೇ ಎರಡು ಸಂಸ್ಥೆಗಳು, ಒಂದಿರೋದು ಶಿವಮೊಗ್ಗ ಪೇಟೆಯಲ್ಲಿ, ಮತ್ತೊಂದು ಆನವಟ್ಟಿ ಹೋಬಳಿ ಅನ್ನೋ ಕುಗ್ರಾಮದಲ್ಲಿ. ಇವೆರಡೂ ಕಾಲೇಜುಗಳನ್ನು ಸೇರಿಸಿದರೆ ಒಟ್ಟು ನೂರು ಜನರು ಪ್ರತಿವರ್ಷ ಶಿಕ್ಷಕರಾಗಲು ಅರ್ಹತೆ ಪಡೆಯುತ್ತಿದ್ದರು. ಆದರೆ ಟಿಸಿಎಚ್ ಕೋರ್ಸನ್ನು ಮುಗಿಸಿದರೆ ಕೆಲಸ ಸಿಗುವದಂತೂ ಗ್ಯಾರಂಟಿಯಾದ್ದರಿಂದಲೂ ಹಾಗೂ ಹಳ್ಳಿಯ ವಲಯದಲ್ಲಿ ಅತ್ಯಂತ ಪ್ರಭಾವೀ ವೃತ್ತಿಯಾಗಿ ಶಿಕ್ಷಕರನ್ನು ನೋಡುತ್ತಿದ್ದರಿಂದಲೂ ಬಹಳಷ್ಟು ಜನರು ಈ ಕೋರ್ಸುಗಳಿಗೆ ಮುಗಿಬೀಳುತ್ತಿದ್ದರು. ಜನರಲ್ಲಿ ಹೆಚ್ಚಾದ ಬೇಡಿಕೆಯಿಂದಲೂ ಹಾಗೂ ಬದಲಾದ ಶಿಕ್ಷಣ ನಿಯಮಗಳಿಗೆ ತಕ್ಕಂತೆ ಮೊದಲೆಲ್ಲ ಹತ್ತನೇ ತರಗತಿಯನ್ನು ಮುಗಿಸಿದವರಿಗೆ ಸಿಗುತ್ತಿದ್ದ ಟಿಸಿಎಚ್ ಪ್ರವೇಶಕ್ಕೆ ಪಿಯುಸಿಯನ್ನು ಮಾಡುವಂತೆ ಕಡ್ಡಾಯವಾಯಿತು, ಇದೇ ಸಮಯಕ್ಕೆ ಬಂದ ಮೀಸಲಾತಿ ನಿಯಮಗಳಿಗನುಗುಣವಾಗಿ ಟಿಸಿಎಚ್ ಸೀಟುಗಳನ್ನು ಹಂಚಲು ಮೊದಲು ಮಾಡಿದರು.
ನಮ್ಮ ಮನೆಯಲ್ಲಿ ಈಗಾಗಲೇ ಟಿಸಿಎಚ್ ಮಾಡಿ ಒಂದಿಬ್ಬರಾದರೂ ಮೇಷ್ಟ್ರರಾದ್ದರಿಂದ ಹಾಗೂ ನಾವು ಆನವಟ್ಟಿಯಲ್ಲೇ ಇದ್ದುದರಿಂದಲೂ ಮೊದಲಿಂದ ನಮಗೆ ಟಿಸಿಎಚ್ ಶಿಕ್ಷಕರು, ಹಳೆ-ಹೊಸ ವಿದ್ಯಾರ್ಥಿಗಳು ಎಲ್ಲರೂ ಪರಿಚಯವೇ. ಹೀಗೇ ಒಂದು ವರ್ಷ, ಮೀಸಲಾತಿ ಹಾಗೂ ಪಿಯುಸಿ ವಿದ್ಯಾಭ್ಯಾಸ ಕಡ್ಡಾಯವಾದ ಮೇಲೆ ಆ ವರ್ಷ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯನ್ನು ನೋಡಲು ನಾನೂ ಹೋಗಿದ್ದೆ, ಅಲ್ಲಿ ಬಂದಿದ್ದವರಿಗೆ, ಹಾಗೂ ಟಿಸಿಎಚ್ ನಲ್ಲಿ ಪಾಠಮಾಡುವ ಮೇಷ್ಟ್ರುಗಳಿಗೂ ಆಶ್ಚರ್ಯವಾಗುವಂತೆ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಗಳಲ್ಲಿ (ಪಜಾಪವ) ವಿದ್ಯಾರ್ಥಿಗಳ ಯಾದಿಯಲ್ಲಿ ಜನರಲ್ ಮೆರಿಟ್‌ಗಿಂತಲೂ ಹೆಚ್ಚು ಅಂಕ ತೆಗೆದವರಿದ್ದರು, ಉದಾಹರಣೆಗೆ ಪಜಾಪವ ದಲ್ಲಿ ಕಡಿಮೆ ಎಂದರೆ ೮೫ ಪರ್ಸೆಂಟ್ ಅಂಕಕ್ಕೆ ಸೀಟು ದೊರೆತಿದ್ದರೆ, ಅದು ಜನರಲ್ ಮೆರಿಟ್‌ನಲ್ಲಿ ೭೨ ಕ್ಕೆ ನಿಂತಿತ್ತು. ನಿರೀಕ್ಷೆಗಿಂತಲೂ ಹೆಚ್ಚಾಗಿ ಬಂದ ಅರ್ಜಿಗಳು, ಅದೇ ವರ್ಷ ಅನ್ವಯವಾದ ಹೊಸ ರೀತಿ-ವಿಧಾನಗಳು ಈ ಬದಲಾವಣೆಯನ್ನು ನಂಬಲು ಕಷ್ಟವನ್ನಾಗಿಸಿದ್ದವು. ಜನರಲ್ ಮೆರಿಟ್‌ನಲ್ಲಿ ಹೆಚ್ಚು ಅಂಕ ತೆಗೆದ ವಿದ್ಯಾರ್ಥಿಗಳು ಟಿಸಿಎಚ್ ಗೆ ಅರ್ಜಿ ಹಾಕುತ್ತಾರೋ ಬಿಡುತ್ತಾರೋ, ಅಥವಾ ಪಜಾಪವ ದವರಲ್ಲಿ ಹೆಚ್ಚು ಅಂಕಗಳನ್ನು ತೆಗೆದವರೆಲ್ಲರು ಟಿಸಿಎಚ್ ಗೆ ಮುಗಿ ಬೀಳುತ್ತಾರೋ ಒಂದಂತೂ ಖಂಡಿತ - ಈ ಮೇಲಿನ ಉದಾಹರಣೆಯಲ್ಲಿ ೮೪ ಪರ್ಸೆಂಟ್ ಅಂಕಗಳನ್ನು ತೆಗೆದ ಪಜಾಪವ ವಿದ್ಯಾರ್ಥಿಗೆ ಸೀಟು ಸಿಗೋದಿಲ್ಲ, ಅಲ್ಲದೇ ಆತ ಜನರಲ್ ಮೆರಿಟ್ ವಿದ್ಯಾರ್ಥಿಗಳಿಗಿಂತಲೂ ಹೆಚ್ಚಿನ ಸ್ಪರ್ಧೆಯನ್ನು ಎದುರಿಸಬೇಕಾಗುತ್ತದೆ.
ಮೀಸಲಾತಿ ಕೇವಲ ಜಾತಿಯ ಆಧಾರದ ಮೇಲಿದ್ದರೆ ಮಾತ್ರ ಕೆಲಸ ಮಾಡುವುದಾದರೂ ಹೇಗೆ? ಪ್ರತಿಯೊಂದು ಜಾತಿ, ವರ್ಗಗಳಲ್ಲು ಬಡವರು-ಬಲ್ಲಿದರು ಇದ್ದೇ ಇರುತ್ತಾರೆ, ಯಾವ ವರ್ಗದಲ್ಲೇ ಇರಲಿ, ಖಾಸಗೀ ಟ್ಯೂಷನ್ ಹೇಳಿಸಿಕೊಂಡು, ಸಿಗುವ ಎಲ್ಲ ಸೌಲತ್ತುಗಳಲ್ಲಿ ಸ್ಪರ್ಧೆಗಿಳಿಯುವ ಉಳ್ಳವರಿಗೂ, ಏನೂ ಗತಿ ಇರದೆ ಸುಮ್ಮನೇ ಸ್ಪರ್ಧೆಯಲ್ಲಿ ತಗುಲಿಕೊಳ್ಳುವವರಿಗೂ ಎಲ್ಲಿಯ ಸಮ? ಸರ್ಕಾರದ ವ್ಯವಸ್ಥೆ ಪ್ರತಿವರ್ಷ ಜಾತಿ ಆಧಾರಿತ ಪಟ್ಟಿಯನ್ನು ಬದಲಾಯಿಸುತ್ತದೆಯೇ ವಿನಾ ಜನರ ಆದಾಯವನ್ನು ಪರಿಗಣಿಸಿ ಬಡವರನ್ನು ಎಣಿಸುವುದಿಲ್ಲ. ನಾನು ಸ್ನಾತಕೋತ್ತರ ಪದವಿ ಮುಗಿಸುವವರೆಗೂ ವರ್ಷಕ್ಕೆ ೩೬೦೦ ರೂಪಾಯಿಯ ಆದಾಯದಲ್ಲಿದ್ದೇವೆಂದು ಆದಾಯ ಪತ್ರವನ್ನು ಪಡೆಯುತ್ತಿದ್ದವರು ಎಷ್ಟೋ ಜನರು ನನಗೆ ಗೊತ್ತಿತ್ತು. ಅಂದರೆ ಆಗಿನ ಕಾಲದಲ್ಲೇ ತಿಂಗಳಿಗೆ ಮುನ್ನೂರು ರೂಪಾಯಿ ಆದಾಯ ಯಾವ ಲೆಕ್ಕಕ್ಕೂ ಇರದಿದ್ದಾಗ, ಇಂದಿಗೂ ಕನಿಷ್ಠ ಆದಾಯ ಎಷ್ಟಿದೆಯೋ, ಆದರೆ ಅದಂತೂ ಹಣದುಬ್ಬರಕ್ಕೆ ತಕ್ಕಂತೆ ಬದಲಾಗದೇ ಹೋದರೆ ಅದು ಇದ್ದರೂ ಒಂದೇ ಇಲ್ಲದಿದ್ದರೂ ಒಂದೇ - ದಿನವೂ ತಾಲೂಕ್ ಆಫೀಸುಗಳಲ್ಲಿ ಜನರು ಸುಳ್ಳು ಹೇಳುತ್ತಲೇ ಇರಬೇಕಾಗುತ್ತದೆ.
ವಿದ್ಯಾರ್ಥಿಗಳು ತೆಗೆದ ಅಂಕಗಳ ಮೇಲೆ ಮಾತ್ರವೇ ವ್ಯವಸ್ಥೆಯ ನಿರ್ಣಯವಾಗುವುದಾದರೆ ಬಡತನದಲ್ಲಿ ಬರುವ ಯೋಗ್ಯರನ್ನು ಕಡೆಗಣಿಸಿದಂತಾಗುತ್ತದೆ, ಜಾತಿ ಆಧಾರದಲ್ಲಿ ಮಾಡಿದರೆ ಇನ್ನೇನೋ ಅರ್ಥ ಬರುತ್ತದೆ. ಆದರೆ ಒಂದಂತೂ ನಿಜ, ಎಂಥ ಐಎಎಸ್ ಆಫೀಸರರ ಮಕ್ಕಳೂ ತಮಗೆ ಅನ್ವಯವಾಗುವ ಎಲ್ಲ ಸೌಲಭ್ಯಗಳನ್ನೂ ಪಡೆದೇ ತೀರುತ್ತಾರೆ, ಲಕ್ಷಾಧೀಶ್ವರರ ಮಕ್ಕಳಿಗೆ ಜಾತಿಯ ಆಧಾರದಲ್ಲಿ ಒಂದು ಸೀಸದ ಕಡ್ಡಿ ಸಿಕ್ಕರೂ ಅದನ್ನು ಅವರು ಹೊಂದೇ ಹೊಂದುತ್ತಾರೆ - ಅದು ಇಲ್ಲೂ ನಿಜ, ಎಲ್ಲೂ ನಿಜ - ನನ್ನ ಸಹೋದ್ಯೋಗಿ ಒಬ್ಬರು ಇತ್ತೀಚೆಗೆ ಹಲವಾರು ಮಿಲಿಯನ್ ಡಾಲರ್‌ಗಳ ಮೊತ್ತವನ್ನು ಪಡೆದು ನಿವೃತ್ತರಾದರು, ತಾನು ಹಲವಾರು ರೀತಿಯಲ್ಲಿ ಉಳಿಸಿದ ಹಣ, ರಿಟೈರ್‌ಮೆಂಟ್ ಹಣ, 401K ಹಣ, ಎಲ್ಲವೂ ಸೇರಿ ಬಹಳಷ್ಟು ಬಂದಿತ್ತು, ಆದರೆ ನಮ್ಮ ಕಂಪನಿಯ ಜೊತೆಗೆ ಮಾಡಿಕೊಂಡ ಒಪ್ಪಂದದ ಪ್ರಕಾರ ಆಕೆ ತನ್ನನ್ನು ತಾನು ಕೆಲಸದಿಂದ ತೆಗೆಸಿಕೊಂಡ ಹಾಗೆ ಮಾಡಿರೋದರಿಂದ ಇನ್ನೂ ಹಲವು ಹಣಕಾಸಿನ ಅನುಕೂಲವಾಯಿತು, ಇಷ್ಟೆಲ್ಲಾ ಆದರೂ ಆಕೆ ನನ್ನ ಜೊತೆಯಲ್ಲಿ ಮಾತನಾಡುತ್ತಾ ತಾನು Unemployment benefits ಗೆ ಅರ್ಜಿ ಗುಜರಾಯಿಸುತ್ತಿದ್ದೇನೆಂದು ಕೇಳಿ ನನಗೆ ಮೈ ಉರಿದು ಹೋಯಿತು. ಸರ್ಕಾರದ ಬೊಕ್ಕಸದಿಂದ, ತೆರಿಗೆದಾರರು ಕೊಟ್ಟ ಹಣದಲ್ಲಿ ಹತ್ತು ಸಾವಿರ ಡಾಲರ್ ಬರುವುದಾದರೆ ಬರಲಿ ಎಂಬ ಆಸೆ ಅಕೆಯದು. ನಾನು ಪದೇ ಪದೇ ಹಾಗೆ ಮಾಡುತ್ತಿರುವುದು ಸರಿಯಲ್ಲ ಎಂದು ಹೇಳಿದರೂ ಆಕೆ ತನ್ನ ನಿಲುವನ್ನೇ 'ನಾನು ಟ್ಯಾಕ್ಸ್ ಕಟ್ಟುವುದಿಲ್ಲವೇ?' ಎಂದು ಸಾಧಿಸಿಕೊಳ್ಳಲು ಆರಂಭಿಸಿದ್ದನ್ನು ಕೇಳಿ ನನಗಂತೂ ಇಷ್ಟು ವರ್ಷಗಳ ಕಾಲ ಆಕೆಯ ಮೇಲೆ ಇಟ್ಟಿದ್ದ ಭರವಸೆಯೇ ಹೊರಟು ಹೋಯಿತು - ಈ ವಿಷಯವನ್ನು ನನ್ನ ಮತ್ತೊಬ್ಬ ಸಹೋದ್ಯೋಗಿಗೆ ಹೇಳಿದೆ, ಆಕೆ ಒಂದೇ ಮಾತಿನಲ್ಲಿ ಅಂದರು - more you have it, more you want.
ಆಗೆಲ್ಲ ಮೀಸಲಾತಿ ಎನ್ನುವುದು ಬೇಡ, ಅಕಸ್ಮಾತ್ ಇದ್ದರೂ ಆದಾಯದ ನೆಲೆಗಟ್ಟಿನ ಮೇಲಿರಲಿ ಎಂದು ವಾದ ಮಾಡುತ್ತಿದ್ದೆ, ಅಂದು ಮಧ್ಯಮ ವರ್ಗದ ನೆಲೆಯಲ್ಲಿ ಅದೇ ಸತ್ಯವೆನಿಸುತ್ತಿತ್ತು, ಈಗ ಪರಿಸ್ಥಿತಿ ಹೇಗಿದೆಯೋ ಯಾರಿಗೆ ಗೊತ್ತು, but you keep me honest here!
1 comment:
ನೀವು ಕೊಟ್ಟ ಮೀಸಲಾತಿಯ ಉದಾಹರಣೆ - ಮೀಸಲು ಅಭ್ಯರ್ಥಿಗಳಲ್ಲಿ ೮೪% ಪಡೆದವನು ಅವಕಾಶ ವಂಚಿತನಾಗಿ, ಸಾಮಾನ್ಯ ವರ್ಗದವನು ೭೬% ಪಡೆದರೂ ಅವಕಾಶ ಪಡೆದನೆಂಬುದು - ನಿಜವಾದರೆ, ಅದೊಂದು "ಆಡಳಿತಾತ್ಮಕ ತಪ್ಪು (administrative error )".
ಮೀಸಲಾತಿಯನ್ನು ತಪ್ಪಾಗಿ ಅರ್ಥೈಸಿಕೊಂಡಿರುವ ಕೆಲವರು ಮಾಡುವ ತಪ್ಪುಗಳು ಇವು.
ಮೀಸಲಾತಿಯ ಅಭ್ಯರ್ಥಿಗಳನ್ನು ಮೊದಲು "ಸಾಮಾನ್ಯ ವರ್ಗದಲ್ಲಿ ಪರಿಗಣಿಸಿ", ಆಮೇಲೆ "ಮೀಸಲು ವರ್ಗ" ದಲ್ಲಿ ಪರಿಗಣಿಸಬೇಕು.
ಮೀಸಲಾತಿ "ಮಿನಿಮಮ್ ಅವಕಾಶ" ಗಳನ್ನು ನಿಗದಿ ಪಡಿಸುತ್ತದೆ, "ಮ್ಯಾಕ್ಷಿಮಮ್" ಅವಕಾಶಗಳನ್ನಲ್ಲ.
ಉದಾಹರಣೆಗೆ, ಪರಿಶಿಷ್ಟರಿಗೆ ೨೨% ಮೀಸಲಾತಿ ಅಂದರೆ, ಮಿನಿಮಮ್ ೨೨% ಅವರಿಗೆ ಸಿಗಬೇಕು, ಮ್ಯಾಕ್ಷಿಮಮ್ ೧೦೦% ಕೂಡಾ ಆಗಬಹುದು (ಬೇರಾವ ಗುಂಪಿಗೂ ಮೀಸಲಾತಿ ಇಲ್ಲದಿದ್ದರೆ.)
ಎರಡು ಅವಕಾಶಗಳಿದ್ದು, ಒಂದು ಪರಿಶಿಷ್ಟರಿಗೆ ಮೀಸಲಿದ್ದರೆ, ಪ೧=೯೦%; ಪ೨=೭೦%; ಸಾ೧=೮೯%; ಸಾ೨=೮೮% ಇದ್ದರೆ, ಪ೧ ಮತ್ತು ಪ೨ ಅದನ್ನು ಪಡೆಯುತ್ತಾರೆ. ಪ೧ - ಸಾಮಾನ್ಯ ವರ್ಗದಲ್ಲಿ, ಪ೨ - ಮೀಸಲು ವರ್ಗದಲ್ಲಿ.
ಇತೀ,
ಉಉನಾಶೆ
Post a Comment