Monday, July 03, 2006

ಒಂದು ಸುಂದರ ಮುಂಜಾವು

ರಜಾದಿನದ ಮುನ್ನಾದಿನವಾದ್ದರಿಂದ ರಸ್ತೆಯ ಮೇಲೆ ಕಾಣಿಸಿದವರೆಲ್ಲರಲ್ಲಿ ಯಾವ ಗಡಿಬಿಡಿಯೂ ಕಾಣದೇ ಸೋಜಿಗವಾಯಿತು, ಎಲ್ಲಾದರೂ ನಮ್ಮ ಸಮಯದ ವ್ಯವಸ್ಥೆಯನ್ನು ಇಪ್ಪತ್ತೈದು ವರ್ಷಗಳೇನಾದರೂ ಹಿಂದಕ್ಕೆ ತಳ್ಳಿಬಿಟ್ಟರೆ ಎಂದು ನನ್ನನ್ನು ನಾನೇ ಚಿವುಟಿಕೊಂಡೆ ಎಲ್ಲವೂ ಮಾಮೂಲಿನ ದಿನದಂತೆ ಕಂಡುಬಂದರೂ ನನ್ನ ಸೋಜಿಗಕ್ಕೂ ಮೀರಿ ನಿಂತ ಮೌನ ಅಥವ ನಿಶ್ಶಬ್ದ ಎಲ್ಲ ಕಡೆ ತಾಂಡವವಾಡುತ್ತಿತ್ತು, ಆ ಮೌನವನ್ನು ಸೀಳಿಕೊಂಡು ಎನ್ನುವಂತೆ ಎದುರಿನಲ್ಲಿ ಬರುವ ವಾಹನದ ಚಕ್ರಗಳು ರಸ್ತೆಯನ್ನು ತಿಕ್ಕಿ ಮುಂದೆ ಹೋಗುವ ರಭಸ ಕಿವಿಗೆ ಅಲ್ಲಲ್ಲಿ ರಾಚುತ್ತಿತ್ತು. ಅಪರೂಪಕ್ಕೆ ಬಡಿಸಿದ ಮೌನ ರುಚಿಸಲಾರದವನಂತೆ ಮುಖಮಾಡಿಕೊಂಡು ಕಿಟಕಿಯ ಗಾಜನ್ನು ಇಳಿಸಿದರೆ ತೇವವಾದ ಹವೆ ದಿನಕ್ಕಿಂತಲೂ ತಂಪಾಗಿ ಕಂಡು ಬಂತು, ಹಿಂದಿನ ಕೆಲವು ದಿನಗಳ ಮಳೆಯಲ್ಲಿ ನೆಂದ ಮಣ್ಣಿನಿಂದ ಇನ್ನೂ ಹಗುರವಾಗಿ ಇನ್ನೂ ವಾಸನೆಯ ಗಮಲು ಹೊಮ್ಮಿ ತೀಡುವ ಗಾಳಿಯ ಮಡಿಲಿನಲ್ಲಿ ಆಸರೆ ಪಡೆದಿತ್ತು. ದಿನದ ಕಾಯಕವನ್ನು ನೆನಪಿಸುವ ಸೂರ್ಯ ಆದ್ಯಾವಾಗಲೋ ತನ್ನ ಅಂಗಡಿಯನ್ನು ತೆರೆದು ಹಾದು ಹೋಗುವ ಮೋಡಗಳಿಗೆ ಸಾಮಾನುಗಳನ್ನು ವಿತರಿಸುವುದರ ಜೊತೆಗೆ ಬೆಳ್ಳಿ ಕಿರಣಗಳ ಮೆರುಗನ್ನು ಬಳಿದು ಅವುಗಳ ಓರೆಕೋರೆ ಮುಖವನ್ನೂ ತಿದ್ದಿ ತೀಡುವ ನಾಟಕದಲ್ಲಿ ಬಣ್ಣ ಹಚ್ಚುವವನಂತೆ ಕಂಡುಬಂದ. ರಸ್ತೆ ಬದಿಯಲ್ಲಿ ನೀರು ಈ ಕಡೆ ಆವಿಯಾಗದೇ ಆ ಕಡೆ ಬತ್ತಿ ಹೋಗದೇ ಯಾರಿಗೂ ಬೇಡವಾಗಿ ಕುಳಿತಿದ್ದೇನಲ್ಲ ಎಂದು ಯೋಚಿಸುವವನಂತೆ ಕಂಡು ಬಂತು. ಖಾಲಿ ರಸ್ತೆಗಳನ್ನು ಬಲ್ಲವನಂತೆ ಕಾರು ಎಂದಿಗಿಂತಲೂ ಹೆಚ್ಚಿನ ಮೊನಚಿನಲ್ಲಿ ರಸ್ತೆಯ ಸೆರಗನ್ನು ತೀಡಿಕೊಂಡು ಅಗಲವಾದ ಟಾನ್ ಶೀಟ್‌ನಲ್ಲಿ ಬಟ್ಟೆ ಕತ್ತರಿಸುವವನ ಹಾಗೆ ಲೀಲಾಜಾಲವಾಗಿ ತನ್ನ ದಾರಿಯನ್ನು ಹುಡುಕಿಕೊಂಡು ಹೋಗುವ ಕತ್ತರಿಯಂತೆ ಆಫೀಸಿಗೆ ತಲುಪಲು ಹವಣಿಸುತ್ತಿತ್ತು.

ಯಾರ ಬಳಿ ಇದೆ ಈ ಆತ್ಮವಿಶ್ವಾಸ? ಏಕೆ? ಹೇಗೆ? ಎನ್ನುವ ಪ್ರಶ್ನೆಗಳು ಉತ್ತರಗಳಿಗೆ ರೂಪವಾಗಿ ಬರುವ ಬದಲು ಪ್ರಶ್ನೆಗಳಾಗೇ ಬಂದು ಇನ್ನೂ ಗೊಂದಲವಾಯಿತು. ಈ ರೇಡಿಯೋ ಕಾರ್ಯಕ್ರಮಗಳು ಅಂದ್ರೆ ಇಷ್ಟೇ, ಬರೀ ಕೇಳೋರ ಮೂಗಿಗೆ ತುಪ್ಪ ಸವರೋ ಜಾತಿ ಇವರೆದ್ದೆಲ್ಲ, ಸುಮ್ನೇ ಪ್ರಶ್ನೆಗಳನ್ನ ಕೇಳ್ತಾರೇ ವಿನಾ ಉತ್ತರ ಸಿಗೋದಿಲ್ಲ! ಉತ್ತರ ಇದ್ದಿದ್ರೆ ಬೆಳಬೆಳಗ್ಗೆ ಎದ್ದು ಅವರೆಲ್ಲ ಈ ಸ್ಟುಡಿಯೋದಲ್ಲ್ಯಾಕ್ಕೆ ಕುಳಿತುಕೊಳ್ಳುತ್ತಿದ್ದರು. ಯಾವುದೋ ಒಬ್ಬ ಸೈನಿಕನನ್ನು ಯುದ್ಧಭೂಮಿ ಹೇಗಿರುತ್ತೆ ಎಂದು ತಣ್ಣಗಿನ ಹವಾನಿಯಂತ್ರಿತ ಕೋಣೆಯಲ್ಲಿ ಕುಳಿತು ವಿವರಣೆ ಕೇಳುವ ಇವರೆನ್ನೆಲ್ಲ ಒಂದು ಗೋಣೀಚೀಲದಲ್ಲಿ ಕಟ್ಟಿ ಯಾವುದಾದರೊಂದು ಯುದ್ಧಭೂಮಿಯಲ್ಲಿ ಬಿಟ್ಟು ಬಂದರೆ ಗೊತ್ತಾದೀತು, ಅದು ಹೇಗಿರುತ್ತೇ ಅಂತ. ತಿಳಿದವರು ದೇಶ ನೋಡು, ಇಲ್ಲಾ ಕೋಶಾ ಓದು ಹೇಳಿದ್ದಾರೆಯೇ ವಿನಾ, ರೇಡಿಯೋ ಕೇಳು ಎಂದು ನಾನು ಯಾರೂ ಹೇಳಿದ್ದನ್ನು ಕೇಳಿದ್ದಿಲ್ಲ. ಇವರನ್ನು ಕೇಳಿ ಕೊಳೆಯ ಬೇಕಾದ ನನ್ನ ಹಣೆಬರಹವನ್ನು ಕಂಡು ಒಳಗೊಳಗೇ ಮರುಗುತ್ತಾ ಇವತ್ತೊಂದಿನ ರೇಡಿಯೋ ಕೇಳದಿದ್ರೆ ಏನಂತೆ ಎಂದು ಅಂಗೈಯ ಕೆಳಗಿನ ಭಾಗದಿಂದ ತುಸು ಗಟ್ಟಿಯಾಗೇ ಎನ್ನುವಂತೆ ಗುಂಡಿಯನ್ನು ಅದುಮಿದೆ, ಯಾರಿಂದಲೋ ಗಂಟಲು ಹಿಚುಕಿಸಿಕೊಂಡವರಂತೆ ಅದರಿಂದ ಹೊರಡುವ ಧ್ವನಿ ನಿಂತು ಹೋಯಿತು. ಯುದ್ಧ ಭೂಮಿಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ಮಾಡುವವನಿಗೆ ಇರೋದೇನಿದ್ದರೆ ಕೆಚ್ಚೆದೆ, ಅಂತಹ ಹೆಚ್ಚುಗಾರಿಕೆ ಇರುವಲ್ಲಿ ಆತ್ಮವಿಶ್ವಾಸ ಇದ್ದರೆಷ್ಟು ಬಿಟ್ಟರೆಷ್ಟು? ಯಾವುದೋ ಊಹಾ ರೇಖೆ ಎನ್ನುವಂತೆ ಭೂಪಟಗಳಲ್ಲಿ ಬರೆದಿಟ್ಟ ಗಡಿರೇಖೆಯ ಅತ್ತಿತ್ತ ಇದ್ದವರಲ್ಲಿ ಅದೆಂತಹ ಕಾದಾಟವಿದ್ದಿರಬಹುದು, ದಶಕ-ಶತಮಾನಗಳ ಕಾಲ ನಡೆಯುವಷ್ಟು. ಎಲ್ಲೋ ಯಾರನ್ನೋ ಹಿಡಿದುಕೊಂಡು ಹೋದರಂತೆ, ಅದರ ಪರಿಣಾಮವಾಗಿ ಹಿಡಿದುಕೊಂಡು ಹೋದವರನ್ನು ಬಿಡುವವರೆಗೂ ಅಮಾಯಕರ ಮೇಲೆ ವಿಮಾನ ಧಾಳಿ ನಡೆಯುತ್ತದೆಯಂತೆ, ಸಾವು-ನೋವು ಏನಿದ್ದರೂ ಸಾಮಾನ್ಯ ಜನರೇ ಹೆಚ್ಚಾಗಿ ಅನುಭವಿಸುತ್ತಾರಂತೆ. ಈ ಮನುಷ್ಯರ, ಅಲ್ಲ ಗಡಿಯಿಂದಾಚೀಚೆಗೆ ಇರುವ ಮೃಗಗಳ ಈ ವರ್ತನೆಗೆ ಉಳಿದವರೇಕೆ ಬೆಲೆ ತೆರಬೇಕು, ಉಳಿದವರೆಂದರೆ ಬರೀ ನರಸಂತಾನವಷ್ಟೇ ಅಲ್ಲ, ಅಲ್ಲಿನ ಜಾನುವಾರುಗಳೇನಾಗಬೇಕು, ಗಿಡ-ಮರ, ಜಲಚರಗಳ ಕಥೆಯೇನು? ಹಕ್ಕಿ-ಪಕ್ಷಿಗಳನ್ನು ಕೇಳುವವರ್ಯಾರು? ಯಾವುದೋ ಅಂಬ್ಯುಲೆನ್ಸ್ ಮಾಡಿದ ಸದ್ದಿನಿಂದ ಒಮ್ಮೆ ರಾತ್ರಿ ಎಚ್ಚರವಾದರೆ ನಿದ್ದೆ ಬರುವ ಮೊದಲು ಶಾಪ ಹಾಕುವ ನಾವು ರಾತ್ರಿ-ಹಗಲೂ ಯುದ್ಧ ವಿಮಾನಗಳನ್ನು ಜನರ ತಲೆಯ ಮೇಲೆ ಹಾರಿಸಿ ಹಲವಾರು ತರದ ಮಾಲಿನ್ಯವನ್ನು ಸೃಷ್ಟಿಸುತ್ತೇವಲ್ಲ, ಅದಕ್ಕೆಲ್ಲ ಪರವಾನಗಿ ಯಾರು ಕೊಟ್ಟರು? ರೇಡಿಯೋ ಮುಚ್ಚಿ ಕುಳಿತರೂ ಅದರ ತರಂಗಾಂತರಗಳು ಹುಟ್ಟಿಸಿದ ಅಲೆಗಳು ಇನ್ನೂ ಹುಟ್ಟುತ್ತಲೇ ಹೋದವು, ಈ ಸುಂದರ ಮುಂಜಾವನ್ನು ಒಂದು ಸುಂದರ ಮುಂಜಾವನ್ನೇ ಆಗಿ ಇಡಬಾರದೇಕೆ ಎಂದು ಮತ್ತೆ ರೇಡಿಯೋವನ್ನು ಹಚ್ಚಿದೆ, ಆದರೆ ಈ ಬಾರಿ ಪಕ್ಕಾ ಶಾಸ್ತ್ರೀಯ ಸಂಗೀತಕ್ಕೆ ಮೊರೆ ಹೋದೆ.

ಓಹ್, ಅದ್ಭುತವಾದ ಪಿಟೀಲಿನ ಧ್ವನಿ ಸುತ್ತಲಿನ ತಲ್ಲೀನತೆಯನ್ನು ಕೊರೆದುಕೊಂಡು ಜಲಪಾತದಂತೆ ಭೋರ್ಗರೆಯುವುದರ ಮೂಲಕ ನನ್ನ ಮನದ ಅಧೀರತೆಯನ್ನು ಹೋಗಲಾಡಿಸುವ ಯಾವುದೋ ಒಂದು ಅವ್ಯಕ್ತ ಶಪಥವನ್ನು ತೊಟ್ಟು ಪುಂಖಾನುಪುಂಖವಾಗಿ ಹೊರಹೊಮ್ಮತೊಡಗಿತು. ಕಾರಿನಲ್ಲಿ ನನ್ನ ಸುತ್ತಲಿದ್ದ ಸ್ಪೀಕರುಗಳು ನನ್ನ ತಲೆಯ ಮೇಲಿನಿಂದ ಶಬ್ದ ಬಂದಂತೆ ಹುಟ್ಟಿಸುವ ಒಂದು ಅಗೋಚರ ರಂಗದಲ್ಲಿ ಅದೆಷ್ಟೋ ಜನರು ತಾಳಮೇಳಗಳ ಶುದ್ಧತೆಯ ಉಚ್ಛ್ರಾಯದಲ್ಲಿ ಹೊರ ಹೊಮ್ಮುವ ನಾದ ಎಂಥವರ ಮನೋ ವೈಕಲ್ಯಗಳನ್ನು ತಕ್ಕ ಮಟ್ಟಿಗೆ ನಿವಾರಿಸುವುದೂ ಅಲ್ಲದೆ ಕಣ್ಣು ಬಿಟ್ಟುಕೊಂಡು ಮಾಡುವ ಅರೆ ಮನಸ್ಸಿನ ಧ್ಯಾನದ ತಳಪಾಯವನ್ನೂ ಹಾಕಬಲ್ಲದು. ನಾನು ಎಲ್ಲಿಯೂ ಸಂಗೀತವನ್ನು ಶಾಸ್ತ್ರೀಯವಾಗಿ ಕಲಿತಿಲ್ಲ, ಇಲ್ಲಿನವರ ಬಿ. ಮೈನರ್, ಮೇಜರ್ ಸ್ವರಗಳ ಕಲ್ಪನೆ ನನಗಿಲ್ಲ, ನನ್ನಂತಹವರಿಗೇ ಈ ಸಂಗೀತ ಇಷ್ಟೊಂದು ಹಿಡಿಸಬಲ್ಲುದಾದರೆ, ನನ್ನಲ್ಲಿಯೇ ಹಲವಾರು ಅರ್ಥವನ್ನು ಹುಟ್ಟಿಸಬಲ್ಲುದಾದರೆ ಇನ್ನು ಶಾಸ್ತ್ರೀಯವಾಗಿ ಸಂಗೀತ ಕಲಿತು ಅದನ್ನು ತಮ್ಮ ಬದುಕಿನ ಒಂದು ಅಂಗವಾಗಿ ಮಾಡಿಕೊಂಡವರಿಗೆ ಒಂದು ರೀತಿಯ ರಸದೌತಣವೆಂದೇ ಹೇಳಬೇಕು. ನನ್ನ ಪ್ರಕಾರ ಈ ಶಾಸ್ತ್ರೀಯ ಸಂಗೀತ ಕಲಿತು ಅದನ್ನು ತಮ್ಮ ಬದುಕಿನ ಅಂಗವನ್ನಾಗಿ ಒಂದಲ್ಲ ಒಂದು ರೀತಿಯಲ್ಲಿ ಮಾಡಿಕೊಂಡವರೆಲ್ಲ ದೇವರುಗಳು, ಏಕೆಂದರೆ ಸಾಹಿತ್ಯ ಸೇವೆಯಲ್ಲಿ ಅದೇನೇನೋ ಮಾಡಬಹುದು ಆದರೂ ಈ ಸಂಗೀತ ಸೇವೆ ದೊಡ್ಡದು, ನಮ್ಮ ಗುರುಗಳು ಹೇಳಿದ ಹಾಗೆ ಎಷ್ಟು ಮೊಗೆದರೂ ಅದು ಬತ್ತದ ಸಾಗರ, ಅಂತೆಯೇ ಅದರಲ್ಲಿರುವ ಅತಿಲವಣ ನೀರನ್ನು ಕುಡಿದು ಜೀರ್ಣಿಸಿಕೊಂಡು, ಧ್ಯಾನಿಸಿ, ಅದರ ಸಿಂಚನವನ್ನು ಪುನರುಜ್ಜೀವನಗೊಳಿಸುವ ಕ್ರಿಯೆಯೇನು ಕಡಿಮೆಯೇ? ಆದ್ದರಿಂದಲೇ ಈ ಸಂಗೀತಗಾರರನ್ನೆಲ್ಲ ನಾನು ದೇವರಿಗೆ ಹೋಲಿಸೋದು. ನೀವು ಯಾವ ಗುಡಿಗೆ ಹೋಗದಿದ್ದರೇನಂತೆ ಒಂದು ಸಿಂಫನಿಗೋ ಅಥವಾ ಒಂದು ಸಂಗೀತ ಕಛೇರಿಗೋ ಹೋಗಿ ಅದರಲ್ಲಿ ತಲ್ಲೀನರಾಗಿ ಬಂದು ನೋಡಿ, ನೀವು ಹೊಸಬರಾಗಿರುತ್ತೀರಿ.

ಸುಂದರ ಮುಂಜಾವು, ಅಥವಾ ಹಾಗೆ ಶುರುವಾದ ದಿನ ಅರ್ಧ ದಿನದ ಸಫಲತೆಯನ್ನು ತಂದುಕೊಡಬಲ್ಲದು, ಅದು ಮೂಡಿಸುವ ಚೇತನ, ನವಿರಾಗಿ ತೀಡೋ ಗಾಳಿ, ಹಿತವಾದ ಸೂರ್ಯನ ಕಿರಣಗಳು, ಈಗಲೋ ಇನ್ನೊಂದು ಘಳಿಗೆಗೋ ಕಳಚಿಕೊಳ್ಳುತ್ತೇವೆಂದು ಹಠತೊಟ್ಟ ಎಲೆ ಮೇಲಿನ ಹನಿಗಳು, ರಸ್ತೆಗಳನ್ನು ಯಥಾಶಕ್ತಿ ತೀಡುವ ವಾಹನದ ಚಕ್ರಗಳು ಇವುಗಳೆಲ್ಲವೂ ಒಂದು ಧನಾತ್ಮಕ ಪ್ರಕ್ರಿಯೆಗೆ ಚಾಲನೆಯನ್ನು ಕೊಡುತ್ತವೆ. ಹೊರಗಿನ ಸೃಷ್ಟಿ ನೋಡುವವರ ದೃಷ್ಟಿಯಲ್ಲಿದೆ ಎಂದು ಯಾರೋ ಸುಳ್ಳು ಹೇಳಿದ್ದಾರೆ - ಅವರಿಗೇನು ಗೊತ್ತು ಎರಡು ದಿನಗಳಲ್ಲಿ ಅಂದೆಂತೆಂತಹ ಬದಲಾವಣೆಗಳಾಗಬಲ್ಲದು ಎಂದು? ಇವತ್ತಿನಂತಹ ಮುಂಜಾವಿಗೆ ಎಂತಹ ತಲೆನೋವನ್ನು ಶಮನಗೊಳಿಸುವ ಲಾಲಿತ್ಯವಿದೆ, ಸದಾ ಬಾಯಿಗೆ ಬೀಗ ಹಾಕಿಕೊಳ್ಳದಿರುವ ಬಾಯಿಬಡುಕ ರೇಡಿಯೋವನ್ನೂ ಮುಚ್ಚಿಸುವ ತಾಕತ್ತಿದೆ, ನನ್ನಂತಹವರೆಲ್ಲರಲ್ಲಿ ಲವಲವಿಕೆಯನ್ನು ತುಂಬಿ ಈ ದಿನ ಕಾಫಿ ಕುಡಿಯುವುದಕ್ಕೂ ರಜಾ ಹಾಕಿಸುವ ಒಳ್ಳೆ ಬುದ್ಧಿಯನ್ನು ಮೂಡಿಸುವ ಹುನ್ನಾರವಿದೆ, ಎಲ್ಲಕ್ಕಿಂತಲೂ ಮುಖ್ಯವಾಗಿ ನಿಮ್ಮ ನಗೆಯ ಅಂಟಿನಿಂದ ಹುಟ್ಟಬಹುದಾದ ಹಲವಾರು ಮಂದಹಾಸಗಳನ್ನು ಆಳುವ ತಾಕತ್ತಿದೆ.

ಯುದ್ಧ ಭೂಮಿಯಲ್ಲಿ ಕಾದುವವನಿಗೆ ಬೇಕಾಗೋದು ಆತ್ಮವಿಶ್ವಾಸವೋ, ಕೆಟ್ಟ ಧೈರ್ಯವೋ, ಅಥವಾ ಯಾವತ್ತೋ ಸಹಿ ಹಾಕಿಕೊಟ್ಟ ಒಂದಿಷ್ಟು ಪೇಪರುಗುಚ್ಚದ ಒತ್ತಡವೋ, ಅಥವಾ ಮನೆಯಲ್ಲಿ ಹಿಂದೆ ಬರಬಹುದು ಎಂದು ಕಾಯುವ ಕಣ್ಣುಗಳೋ? ಹಾಗೆಯೇ ಇವತ್ತಿನ ಸುಂದರ ಮುಂಜಾವಿನ ಇರವನ್ನು ನಿಜಮಾಡಿ ಅದನ್ನು ಅನುಭವಿಸಲು ಇರಬೇಕಾದುದು ಮನಸ್ಥಿತಿಯೋ, ನೋಡುವವರ ಕಣ್ಣುಗಳೋ ಅಥವಾ ನೋಡಲಿ-ಬಿಡಲಿ ದೈವ ತಂದು ಬಿಸಾಕುವ ಬಡಪಾಯಿಗಳ ಮಿಲಿಯನ್ ಡಾಲರ್ ಉಡುಗೊರೆಯೋ ಯಾರು ಬಲ್ಲವರು? ಪ್ರಶ್ನೆಗಳಿಂದ ಹುಟ್ಟಿದ ಪ್ರಶ್ನೆಗಳಿಗೆ ಉತ್ತರ ಕೊಡಬೇಕೆಂಬುದು ಯಾವ ನ್ಯಾಯ!

3 comments:

Unknown said...

ಮಲ್ಲಿಗೆ ಹೂವು ಮಾರುವಾಕೆಗೆ ಮೀನು ಮಾರುವವಳ ಮನೆಯಲ್ಲಿ ನಿದ್ದೆ ಬರದಿರುವಂತೆಯೇ....

ಮೀನು ಮಾರುವವಳಿಗೆ ಮಲ್ಲಿಗೆ ಹೂವು ಮಾರುವಾಕೆಯ ಮನೆಯಲ್ಲಿ ನಿದ್ದೆ ಬಾರದು....

ಎಂಬ ಮಾತು ಕೇಳಿದ್ದೆ....
ನಿಮ್ಮ ಬ್ಲಾಗ್ ಓದಿ ಅದೀಗ ಮತ್ತೆ ನೆನಪಿಸಿಕೊಂಡೆ.

ನಿಮ್ಮ ಅಂತರಂಗದ ಮಾತುಗಳಿಗೀಗ ಕಾವ್ಯ ಸ್ಪರ್ಶವಾಗತೊಡಗಿದೆ.
ಹೀಗೇ ಮುಂದುವರಿಸಿ...
:)

Anonymous said...

Nice post! I still envy you for being able to get up so early and enjoy the all that the early morning offers :-)

Anonymous said...

runescape money
runescape gold
runescape money
runescape gold