ಕನ್ಸಲ್‌ಟೆಂಟುಗಳು ಅಂದ್ರೆ ಹಿಂಗಿರಬೇಕು!
ಇನ್ಯಾರನ್ನ ನೋಡಿ ಬರ್ದಿರೋದು, ಅದೇ Accenture ನವರನ್ನ! ಈಜಿಪ್ಟಿನ ಪಿರಮಿಡ್ ಇರ್ಲಿ, ಬರ್ಲಿನ್ ಗೋಡೇನೇ ಇರ್ಲಿ ಯಾವ್ದುನ್ ತೋರಿಸಿದ್ರೂ ಎಲ್ಲಾ ನಮ್ಮ್ ಪ್ರಾಸೆಸ್ಸಿಂದ್ಲೇ ಅಂತಾರಲ್ಲ ಇನ್ನೇನ್ ಮಾಡೋದು ಇಂಥೋರನ್ನ ಕಟ್ಗೊಂಡು?
***
ನಾನು ಕಳೆದ ಹತ್ತು ವರ್ಷಗಳಲ್ಲಿ ನಾಲ್ಕು ವರ್ಷ ಕನ್ಸಲ್‌ಟಂಟ್ ಆಗಿಯೂ ಇನ್ನಾರು ವರ್ಷ ಎಂಪ್ಲಾಯಿ ಆಗಿಯೂ ದುಡಿದು ಎರಡೂ ಲೋಕದ ಸುಖ ದುಃಖಗಳನ್ನು ಕಂಡೋನು. ಆಗ ಹೆಚ್ಚಿನ ನನ್ ಸ್ನೇಹಿತರು ಎಲ್ಲರೂ ಸಾಧ್ಯವಾದಷ್ಟು ಟಾಪ್ ೫ ಕಂಪನಿಗಳಲ್ಲಿ - ಅವೇ ಕೆಪಿಎಮ್‌ಜಿ, ಆಂಡೆರ್‌ಸನ್/ಅಕ್ಸೆಂಚರ್, ಪ್ರೈಸ್‌ವಾಟರ್‌ಕೂಪರ್, ಇತ್ಯಾದಿ - ಕೆಲಸ ಮಾಡಿಕೊಂಡು ಹೆಸರು ತಗೋಬೇಕು ಎಂದು ಹವಣಿಸುತ್ತಿದ್ದರು, thank goodness ನನಗೆ ಆ ಭಾಗ್ಯ ಬರಲಿಲ್ಲ. ನಾನೊಂದು ಸಣ್ಣ ಕಂಪನಿಯಲ್ಲೇ ಇದ್ದೆ. ಆದರೆ ಉಳಿದೆಲ್ಲ ಕಂಪನಿಯವರ ಕನ್ಸಲ್‌ಟೆಂಟ್‌ಗಳ ವ್ಯವಹಾರಕ್ಕೂ ಈ ಟಾಪ್ ೫ ಕಂಪನಿಗಳ ವ್ಯವಹಾರಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಈ ಕೆಳಗೆ ಬರೆಯೋ ವಿಷಯಗಳು ನಾನು ಕಣ್ಣಾರೆ ಕಂಡು ಅನುಭವಿಸಿದ ವಿಷಯಗಳು, ಆದರೆ ಅವು ಈ ಕಂಪನಿಯ ಎಲ್ಲ ಕನ್ಸಲ್‌ಟಂಟುಗಳಿಗೆ ಅನ್ವಯವಾಗಬೇಕೆಂದೇನೂ ಇಲ್ಲ, ಹಾಗೆ ನಾನು ಜನರಲೈಸ್ ಮಾಡುವ ಪ್ರಯತ್ನವನ್ನೂ ಇಲ್ಲಿ ಮಾಡುತ್ತಿಲ್ಲ. ದಯವಿಟ್ಟು ಯಾರೂ ಇಲ್ಲಿ ತಮ್ಮ ಪ್ರತಿಬಿಂಬಗಳನ್ನು ಹುಡುಕಿಕೊಳ್ಳಬಾರದಾಗಿ ವಿನಂತಿ.
***
೨೦೦೪ ರ ಜೂನ್ ೨೧ ನೇ ತಾರೀಖು, ಹೀಗೇ ವ್ಯವಹಾರದ ನಿಮಿತ್ತ ಆರ್ಲಿಂಗ್ಟನ್ ಆಫೀಸಿಗೆ ಹೋಗಿದ್ದೆ, ಅಲ್ಲಿ ನಮ್ಮ ಆರ್ಡರ್ ಪ್ರಾಸೆಸಿಂಗ್ ಸಿಸ್ಟಮ್ ಬಗ್ಗೆ ತಿಳಿದುಕೊಳ್ಳೋದಿತ್ತು. ನಾನು ಅದುವರೆಗೆ SQL Server ಉಪಯೋಗಿಸಿರಲಿಲ್ಲವಾದ್ದರಿಂದ ತಂತ್ರಜ್ಞಾನದ ವಿಷಯದಲ್ಲಿ ಹೊಸತಾಗಿದ್ದರೂ ಬೇರೆ RDBMS ಗಳಿಗಿಂತ ಭಿನ್ನವೇನೂ ಅಲ್ಲದಿದ್ದುದರಿಂದ ಅದನ್ನು ಕಲಿಯಲು ಹೆಚ್ಚಿಗೆ ಸಮಯವೇನೂ ಬೇಕಾಗಿರಲಿಲ್ಲ. ಆ ವಾರ ಅಕ್ಸೆಂಚರ್ ಕನ್ಸಲ್‌ಟೆಂಟ್ ಒಬ್ಬ ಈ ಪ್ರಾಜೆಕ್ಟಿನ ಕೆಲಸವನ್ನು ಬಿಟ್ಟು ಬೇರೆ ಪ್ರಾಜೆಕ್ಟಿಗೆ ಹೋಗುತ್ತಿದ್ದುದರಿಂದ ಇದ್ದ ಅಲ್ಪಸ್ವಲ್ಪ ಸಮಯದಲ್ಲೇ ಸಾಧ್ಯವಾದಷ್ಟು ತಿಳಿದುಕೊಳ್ಳುವ ಸವಾಲು ನನ್ನದಾಗಿತ್ತು. ತಂತ್ರಜ್ಞಾನಕ್ಕಿಂತಲೂ ಮಾಡುವ ಕೆಲಸದ ಹಿಂದಿನ ಬ್ಯುಸಿನೆಸ್ ಪ್ರಾಸೆಸ್ಸುಗಳನ್ನು ತಿಳಿದುಕೊಳ್ಳುವುದು ಮುಖ್ಯವಾಗಿತ್ತು ಹಾಗೂ ಅದು ಕ್ಲಿಷ್ಟಕರವಾಗಿತ್ತು. ಆ ಕನ್ಸಲ್‌ಟೆಂಟ್ ಆರ್ಡರ್ ಪ್ರಾಸೆಸ್ಸಿಂಗ್ ಸಿಸ್ಟಂ ಬಗ್ಗೆ ವಿವರಿಸುತ್ತಾ ಎಲ್ಲವನ್ನೂ ನೀರು ಕುಡಿದವರ ಹಾಗೆ ಹೇಳುತ್ತಾ ಬಂದಿದ್ದನ್ನೂ, ನಾನು ಕೇಳಿದ ಪ್ರಶ್ನೆಗಳಿಗೆಲ್ಲ ಉತ್ತರವನ್ನುಕೊಡುತ್ತಿದ್ದುದನ್ನೂ ನಾನು ಗುರುತಿಸಿಕೊಂಡೆ, ಆದರೆ ಮಾತಿನ ಮಧ್ಯೆ ಆತನೇ ಅದರ ಹಿಂದಿನ ರಹಸ್ಯವನ್ನು ಹೇಳಿಬಿಟ್ಟನು. ಅವನು ಈ ಪ್ರಾಜೆಕ್ಟಿನ ಮೇಲೆ ಅಫಿಷಿಯಲ್ ಆಗಿ ಕೆಲವೇ ತಿಂಗಳು ಕೆಲಸ ಮಾಡಿದ್ದರೂ ಆತನಿಗೆ ಅವನ ಕಂಪನಿಯಲ್ಲಿ ನಮ್ಮ ಕಂಪನಿಯ ವ್ಯವಹಾರ ವಿಷಯಗಳ ಬಗ್ಗೆ ನಮ್ಮ ಕಂಪನಿಯನ್ನು ಸೇರುವುದಕ್ಕೆ ಮೊದಲೇ ತರಬೇತಿ ದೊರೆತಿತ್ತೆಂತಲೂ, ನಮ್ಮ ಕಂಪನಿಯ ಡೇಟಾಬೇಸುಗಳು, ಸರ್ವರ್, ಫೈಲುಗಳ ಯಥಾನಕಲುಗಳು ಅವರ ಕಂಪನಿಯಲ್ಲೂ ಇದ್ದು, ಅದರ ಮೂಲಕ ನಮ್ಮ ಆಫೀಸಿನೊಳಗೆ ಕಾಲಿಡುವುದಕ್ಕೆ ಮೊದಲೇ ಅವರಿಗೆಲ್ಲ ಗೊತ್ತಿರುತ್ತದೆಂತಲು ತಿಳಿದು ಹೋಯಿತು.
ಅಲ್ಲದೇ, ಇಂಥ ಕನ್ಸಲ್‌ಟೆಂಟ್ ಪ್ರತಿಯೊಬ್ಬರ ಬಳಿಯೂ ಒಂದೊಂದು ಲ್ಯಾಪ್‌ಟಾಪ್ ಇದ್ದು, ನಮ್ಮ ಆಫೀಸಿನ್ ಇ-ಮೇಲುಗಳನ್ನು ತಮ್ಮ ಆಕ್ಸೆಂಚರ್ ವಿಳಾಸಕ್ಕೆ ಕಳಿಸಿಕೊಳ್ಳುವುದೇನು, ಅವರು ತಮ್ಮ-ತಮ್ಮಲೇ AOL ಮೆಸ್ಸೆಂಜರ್ ಮೂಲಕ ಹಾಗೂ ಅಲ್ಲಲ್ಲಿ ಗುಂಪುಗೂಡಿ ಚರ್ಚಿಸಿ ಸ್ಟ್ರ್ಟಾಟೆಜಿಯನ್ನು ಸಿದ್ಧಪಡಿಸುವುದೇನು, ಇವೆಲ್ಲವೂ ಬಹಳ ವ್ಯವಸ್ಥಿತವಾಗಿ ನಡೆಯುತ್ತಲೇ ಬಂದಿದೆ. ಇವೆಲ್ಲಕ್ಕೂ ಹೆಚ್ಚಾಗಿ ಪ್ರತಿಯೊಂದು ಆಕ್ಸೆಂಚರ್ ಕನ್ಸಲ್‌ಟೆಂಟ್ ಗುಂಪಿಗೆ ಒಬ್ಬೊಬ್ಬ ಬಿಸಿನೆಸ್ ಮ್ಯಾನೇಜರ್ ಇದ್ದು, ಈ ಮನುಷ್ಯನಿಗೆ ನಮ್ಮ ಕಂಪನಿಯ ದೊಡ್ಡ-ದೊಡ್ಡ ಎಕ್ಸಿಕ್ಯೂಟಿವ್‌ಗಳ ಸಂಪರ್ಕವಂತೂ ಬೇಕಾದಷ್ಟಿರುತ್ತದಾದ್ದರಿಂದ ನನ್ನಂತಹ ಎಂಪ್ಲಾಯಿಗಳಿಗೆ ತಲುಪಬೇಕಾದ ಸುದ್ದಿಗಳು ಈ ಕನ್ಸಲ್‌ಟೆಂಟುಗಳಿಗೆ ಯಾವತ್ತೋ ತಲುಪಿರುತ್ತದೆ!
ಮೊದಲೆಲ್ಲ, ಈ ಆಕ್ಸೆಂಚರ್ ಕನ್ಸಲ್‌ಟೆಂಟುಗಳು ಯಾವತ್ತೂ ನನಗಿಂತ ಟೆಕ್ನಾಲಜಿಯಲ್ಲಿ ಒಂದು ಹೆಜ್ಜೆ ಮುಂದೇ ಇರುತ್ತಿದ್ದರು, ಅವರ ಲ್ಯಾಪ್‌ಟಾಪ್‌ಗಳು, ಅದರಲ್ಲಿರುವ ಸಾಫ್ಟ್‌ವೇರ್‌ಗಳು ಯಾವತ್ತೂ ಇತ್ತೀಚಿನವಾಗಿರುತ್ತಿದ್ದವು, ಆದರೆ ನಮ್ಮ ಕಂಪನಿಯಲ್ಲಿ ಇತ್ತೀಚೆಗೆ ತೆಗೆದುಕೊಂಡ ಹೊಸ ಇನಿಷಿಯೇಟಿವ್ ಪ್ರಕಾರ ಈಗ ನಮಗೂ ಹೊಸತರ ಸೌಲಭ್ಯವಿದ್ದು, ಒಂದು ಸಣ್ಣ ಗ್ಯಾಪ್ ಮುಚ್ಚಿದಂತಾಗಿದೆ. ನಾವು ಎಂಪ್ಲಾಯಿಗಳಿಗೆ ಯಾವತ್ತಿದ್ದರೂ ಚೈನ್ ಆಫ್ ಕಮ್ಯಾಂಡ್ ಪಾಲಿಸುವಂತೆ ಸೂಚಿಸಲಾಗುತ್ತೆ, ಆದರೆ ಈ ಕನ್ಸಲ್‌ಟಂಟುಗಳ ಮಾತು ಬಹಳಷ್ಟು ದೂರ ಬೆಳಕಿನ ವೇಗದಲ್ಲಿ ಹೋಗುತ್ತದೆ. ಇವರುಗಳೆಲ್ಲ ಒಟ್ಟುಗೂಡಿಕೊಂಡು ಇನ್ನೊಬ್ಬರಿಗೆ ಕೈ ಮಾಡಿ ತೋರಿಸುವಂತಹ ಹಲವಾರು ಸನ್ನಿವೇಶಗಳನ್ನು ನಾನು ನೆನಪಿಸಿಕೊಳ್ಳಬಲ್ಲೆ.
ಇನ್ನೂ ಬೇಸರ ತರಿಸುವ ಸಂಗತಿಯೆಂದರೆ, ಅದು ಒರಿಜಿನಲ್ ಪ್ರಾಜೆಕ್ಟ್ ಪ್ಲಾನಿರಬಹುದು, ಅಥವಾ ಒಂದು ಡಾಕ್ಯುಮೆಂಟಿರಬಹುದು ನಾವು ಕೇಳಿದರೆ 'ಕೊಡುವುದಿಲ್ಲ' ಎಂಬ ಅರ್ಥ ಬರುವ ಪರ್ಯಾಯವಾದ ಉತ್ತರ ಸಿಗುತ್ತದೆ, ಅದೇ ನಮ್ಮ ಬಳಿಯಲ್ಲಿ ಏನಾದರು ಮಾಹಿತಿ ಇದ್ದರೆ ಇವರುಗಳು ಅದನ್ನು ಕಿತ್ತುಕೊಳ್ಳುವ ಪರಿಯನ್ನು ನೋಡಬೇಕು.
ಹೀಗೆ ನಮ್ಮಲ್ಲಿನ ಎಷ್ಟೋ ಡೇಟಾಬೇಸುಗಳು, ಸರ್ವರ್‌ಗಳು, ಫೈಲುಗಳು ಕಾಪಿಯಾಗಿ ಆಕ್ಸೆಂಚರ್ ಸಿಸ್ಟಂನಲ್ಲಿ ಕೂತಿರುವುದ್ದನ್ನು ನೋಡಿದ್ದೇನೆ. ಕೆಲವೊಂದು ಕೀ ಪೊಸಿಷನ್ನುಗಳಲ್ಲಿ ಪ್ರೊಪರೈಟರಿ ಹೆಸರಿನಿಂದಲೋ ಅಥವಾ ಯಾವತ್ತೂ ಅಳಿಯದ ಕಾಂಟ್ರಾಕ್ಟ್ ಹೆಸರಿನಿಂದಲೋ ಹದಿನೈದು ವರ್ಷಗಳಿಂದ ಒಂದೇ ಕಡೆಯಲ್ಲಿ ಒಂದೇ ಸಿಸ್ಟಂ ಮೇಲೆ ಕೆಲಸ ಮಾಡುವ ಆಕ್ಸೆಂಚರ್ ಕನ್ಸಲ್‌ಟೆಂಟುಗಳನ್ನು ನಾನು ಹತ್ತಿರದಿಂದ ಬಲ್ಲೆ.
ಅಂದರೆ ನಾನು, ಒಬ್ಬ ಏಕ ವ್ಯಕ್ತಿ ಪಡೆ ಏನನ್ನಾದರೂ ಮಾಡಿ ಸಾಧಿಸುವುದಾದರೆ ನನಗೆ ಇರೋ ಸಂಪನ್ಮೂಲಗಳಲ್ಲಿ, ಇರೋ ಅಡೆತಡೆಗಳನ್ನೆದುರಿಸಿ ಕೆಲಸ ಮಾಡಬೇಕು, ಅದರಲ್ಲಿ ಜಯಗಳಿಸಬೇಕು. ಆದರೆ ನನ್ನ ಪ್ರತಿಯಾಗಿ ನೇರವಾಗಿ ಹೋರಾಟಕ್ಕೆ ನಿಲ್ಲದೇ ಪದೇ-ಪದೇ ನನ್ನನ್ನು ತಮ್ಮ ಜೊತೆ ತೂಗಿಕೊಳ್ಳುವಂತೆ ಮಾಡುವ ಪ್ರತಿಯೊಬ್ಬ ಆಕ್ಸೆಂಚರ್ ಕನ್ಸಲ್‌ಟೆಂಟ್ ಹಿಂದೆಯೂ ಒಂದು ವ್ಯವಸ್ಥಿತ ಜಾಲವಿದೆ, ಹಲವಾರು ತಲೆಗಳಿವೆ ಹಾಗೂ ಅವರಿಗೆ ಬರದದ್ದನ್ನು ತಿಳಿಸುವ ವ್ಯವಸ್ಥೆ ಇದೆ, ತಮ್ಮ ತನವನ್ನು ಕಾಯ್ದುಕೊಳ್ಳುವ ಗುಟ್ಟಿದೆ. ಈ ಕನ್ಸಲ್‌ಟೆಂಟ್‌ಗಳು ಕೆಲಸ ಹಾಗೂ ಮಾತಿನಲ್ಲೂ ಮಹಾ ನಿಪುಣರು ಹಾಗೂ ಜಾಣರು, ಅದರಲ್ಲಿ ಎರಡು ಮಾತಿಲ್ಲ - ಅದರ ಜೊತೆಯಲ್ಲಿ ಒಂದು ವ್ಯವಸ್ಥಿತವಾದ ಯೋಜನೆಯೂ ಸೇರಿ ಒಂದು ರೀತಿ ಬ್ರಿಟೀಷರು ಆಗಿನ ಕಾಲದ ಭಾರತವನ್ನು ಆಳಿದ ಹಾಗೆ ಇವರುಗಳು ತಮ್ಮ ಬೇಳೆ ಕಾಳನ್ನು ಬೇಯಿಸಿಕೊಳ್ಳುತ್ತಲೇ ಇದ್ದಾರೆ.
ಒಂದು ಕಡೆ ಇಂಥ ವ್ಯವಸ್ಥಿತವಾದ ಅಕ್ಸೆಂಚರ್ ಕನ್ಸಲ್‌ಟೆಂಟನ್ನು ನನ್ನ ಬಾಸು ಕೊಂಡಾಡುತ್ತಿದ್ದರೆ ಮತ್ತೊಂದು ಕಡೆ ಹೇಳುವರಿಲ್ಲದೆ ಕೇಳುವರಿಲ್ಲದೇ ಎಷ್ಟೋ ಬಾರಿ ನನ್ನಲ್ಲೇ ನಾನು ಕೊರಗಿದ್ದೇನೆ, ಮರುಗಿದ್ದೇನೆ.
2 comments:
ಹೆ ಹೆ. ನೀವೂ ಆಕ್ಸೆಂಚ್ಯುರ್ ಸೇರಿಬಿಡಿ. ಅಲ್ಲಿಗೆ ಸರಿಹೋಗತ್ತೆ ;)
ಒಳ್ಳೆಯ ಲೇಖನಗಳು ಬರುತ್ತಿವೆ. ಹೀಗೆಯೇ ಮುಂದುವರೆಸಿ. ತಾಂತ್ರಿಕತೆಯ ಬಗ್ಗೆ ನನಗೆ ಅಷ್ಟು ಗೊತ್ತಿಲ್ಲ. ಆದರೂ ನಿಮ್ಮ ಲೇಖನಗಳನ್ನು ಓದಿದ ಮೇಲೆ ಅಲ್ಪ ಸ್ವಲ್ಪ ಅರ್ಥವಾಗುತ್ತಿದೆ.
ವಂದನೆಗಳು.
Post a Comment