Tuesday, July 11, 2006

ಅಮಾಯಕರು ಸತ್ತರೆ ದುಷ್ಕರ್ಮಿಗಳಿಗೇನು ಸಿಕ್ಕಿತು?

ಇವತ್ತು ಮಧ್ಯಾಹ್ನ ನಮ್ ಆಫೀಸ್‌ನಲ್ಲಿ ನನ್ನ ಸಹೋದ್ಯೋಗಿ ಒಬ್ರು ಬಾಂಬೆಯಲ್ಲಿ ನಮ್ಮ ಆಫೀಸಿನ ಬ್ರಾಂಚ್ ಇದೆಯೇ ಎಂದರು, ನಾನು ಇಲ್ಲ ಎಂದು ಹೇಳಿ ಸುಮ್ಮನಿದ್ದೆ. ಅದಾದ ಕೆಲವೇ ನಿಮಿಷಗಳಲ್ಲಿ ನನ್ನ ಸ್ನೇಹಿತನೊಬ್ಬ ಮುಂಬೈಯಲ್ಲಿ ಸರಣಿ ಬಾಂಬುಗಳ ಸ್ಫೋಟಗೊಂಡಿರುವ ಬಗ್ಗೆ ಇನ್ಸ್ಟಂಟ್ ಮೆಸ್ಸೇಜು ಕಳಿಸಿದ, ನಾನು ಕಂಡ ಕಂಡ ಪತ್ರಿಕೆಗಳನ್ನೆಲ್ಲ ನೋಡಿದವನೆ ಒಂದು ಕ್ಷಣ ತತ್ತರಿಸಿ ಹೋದೆ. ಎಲ್ಲವನ್ನು ವ್ಯವಸ್ಥಿತವಾಗಿ ಆಯೋಜಿಸಿ ಒಂದಾದ ಮೇಲೆ ಒಂದರಂತೆ ಏಳು ಬಾಂಬುಗಳನ್ನು ಸ್ಫೋಟಿಸಿದವರನ್ನು ಕುರಿತು ಏನೆಂದು ಹೇಳೋದು, ಅವರ ಉದ್ದೇಶಗಳು ಏನಿರುತ್ತವೆಯೋ ಯಾರಿಗೆ ಗೊತ್ತು, ಆದರೆ ಅವರಿಗೆ ಇಂಥಹ ಕೆಲಸಗಳನ್ನು ಮಾಡುವ ಮನಸ್ಸಾದರೂ ಹೇಗೆ ಬರುತ್ತದೆ ಎನ್ನುವ ಯೋಚನೆಯ ಹಿಂದೆಯೇ ಅಗಾಧವಾದ ಸಿಟ್ಟೂ ಬಂತು.

ಮೊದಲೇ ಜನರ ಮನಸ್ಸಿನಲ್ಲಿ ೯/೧೧ ಎಂದು ಭೀತಿ ಹುಟ್ಟಿಸಿದ್ದರು, ಅದಾದ ಮೇಲೆ ಮ್ಯಾಡ್ರಿಡ್, ಲಂಡನ್ನಲ್ಲೂ ಟ್ರೈನ್‌ನಲ್ಲಿ ಬಾಂಬುಗಳನ್ನು ಸ್ಪೋಟಿಸಿ ನೂರಾರು ಜನರನ್ನು ಕೊಂದಿದ್ದರು, ಈಗ ಅದರ ಯಾದಿಗೆ ಭಾರತದ ೭/೧೧ ಘಟನೆಯೂ ಸೇರಿಹೋಯ್ತು. ಇವೆಲ್ಲದರ ಜೊತೆಗೆ ಮೊನ್ನೆ-ಮೊನ್ನೆ ನ್ಯೂ ಯಾರ್ಕ್ ನಗರದ ಡೌನ್‌ಟೌನ್‌ ಅನ್ನು ಹಾಲೆಂಡ್ ಟನಲ್ ಬ್ಲಾಸ್ಟ್ ಮಾಡುವುದರ ಮೂಲಕ ನೀರಿನಲ್ಲಿ ಮುಳುಗಿಸುವ ಯತ್ನ ಮಾಡಿದವರನ್ನು ಹಿಡಿದಿದ್ದಾರೆಂದು ಕೇಳಿದೆ. ಈ ದುಷ್ಕರ್ಮಿಗಳು ತಮ್ಮ ಇಂಥಹ ಕೃತ್ಯಗಳಿಂದ ಅದೇನನ್ನು ಪಡೆಯುತ್ತಾರೋ, ಬಿಡುತ್ತಾರೋ - ಆದರೆ ಸಾಮಾನ್ಯ ಜನ ಅನಾವಶ್ಯಕವಾಗಿ ಬೆಲೆ ತೆರಬೇಕು.

ನಮ್ಮ ದೇಶ ಈ ವಾರ ಎದ್ದ ಘಳಿಗೆಯೇ ಸರಿ ಇಲ್ಲ ಎಂದು ಕಾಣುತ್ತೆ - ಮೊದಲು ಅಗ್ನಿ ಕ್ಷಿಪಣಿಯ ವಿಫಲ ಉಡಾವಣೆಯ ಬಗ್ಗೆ ಓದಿದೆ, ಏನೋ ಉತ್ತರ ಕೊರಿಯಾದವರು ಎಬ್ಬಿಸಿದ ಗಲಾಟೆಯ ನಡುವೆ ತಮಗೇಕೆ ತೊಂದರೆ ಎಂದು ಯಶಸ್ವಿಯಾಗಿ ನಡೆದ ಉಡಾವಣೆಯನ್ನು ವಿಫಲವಾಯಿತೆಂದು ಸುಳ್ಳುಸುದ್ದಿಯಾಗಿ ಹಬ್ಬಿಸಿದ್ದಾರೆಂದುಕೊಂಡೆ. ಆದರೆ ಮುಂದೆ ಇನ್ಸಾಟ್ ಉಪಗ್ರಹದ ಉಡಾವಣೆಯೂ ನೆಗೆದು ಬಿದ್ದಾಗ ಎಲ್ಲೋ ಏನೋ ಎಡವಟ್ಟಾಗಿದೆ ಎಂದು ಕೊಳ್ಳುತ್ತಿದ್ದಾಗ ಮೂರನೇ ಮುಕ್ತಾಯ ಅನ್ನೋ ಹಾಗೆ ಸರಣಿ ಬಾಂಬುಗಳ ಸುದ್ದಿ ನಿಜಕ್ಕೂ ಬೇಸರ ತರಿಸಿತು. ಮೊದಲೇ ಮಳೆಯ ಹಾವಳಿಯಿಂದ ತತ್ತರಿಸಿ ಹೋಗಿದ್ದ ಮಹಾನಗರ ಈಗ ಮತ್ತೊಮ್ಮೆ ತನ್ನ ಎಮರ್ಜೆನ್ಸಿ ಮ್ಯಾನೇಜ್‌ಮೆಂಟ್ ಸಿಸ್ಟಮ್ಮನ್ನು ಪರೀಕ್ಷೆಗೆ ಒಳಪಡಿಸಿದಂತಾಯಿತು.

ಫಸ್ಟ್‌ಕ್ಲಾಸ್ ಪ್ರಯಾಣಿಕರಿರಲಿ, ಅಥವಾ ಯಾರೇ ಇರಲಿ ಸಾವು-ನೋವಿನಲ್ಲಿ ಎಲ್ಲರೂ ಸಮರೇ. ಪ್ರಪಂಚದಾದ್ಯಂತ ಇಂಥಹ ದುಷ್ಕೃತ್ಯದಿಂದ ಈ ಭಯೋತ್ಪಾದಕರ ಮೇಲೆ ಯಾರಿಗೂ ಅಂದು ಚಿಟಿಕೆಯಷ್ಟೂ ವಿಶ್ವಾಸವಿಲ್ಲದೇ ಹೋಯಿತು. ಅದನ್ನು ಬಿಟ್ಟರೆ ಈ ಅವರಿಗೆ ಮತ್ಯಾವ ಪ್ರಯೋಜನವೂ ಇಲ್ಲ - ಏಕೆಂದರೆ ಮುಂಬೈ ಆಗಲಿ, ಅಥವಾ ನ್ಯೂ ಯಾರ್ಕ್ ಆಗಲಿ ಇಂತಹ ಹೊಡೆತಗಳನ್ನು ಸಾಕಷ್ಟು ತಿಂದು, ಇವತ್ತಲ್ಲ ನಾಳೆ ತಮ್ಮ ದುರಂತವನ್ನು ಭೂತದ ಮಡಿಲಿಗೆ ಕಟ್ಟಿ ಹಾಕಿ ಮುಂದೆ ನೋಡುತ್ತವೆ. ಒಂದು ಕ್ಷಣ ವಿಶ್ವದ ಮಾರುಕಟ್ಟೆಗಳು ತಮ್ಮ-ತಮ್ಮ ಮುಖಗಳನ್ನು ಭಾರತದತ್ತ ಮುಖ ಮಾಡಿದರೂ ಮತ್ತೆ ತಮ್ಮ ಕೆಲಸಗಳಲ್ಲಿ ತೊಡಗಿಕೊಳ್ಳುತ್ತವೆ.

ಒಂದು ಒಳ್ಳೆಯ ಕೆಲಸ ಮಾಡುವುದಕ್ಕೆ ಸಾವಿರಾರು ಅಡಚಣೆಗಳು ಬರುತ್ತವೆ, ಆದರೆ ಈ ಕುಕೃತ್ಯವನ್ನು ಮಾಡುವವರಿಗೆ ಎಲ್ಲವೂ ಅದು ಹೇಗೆ ಹೊಂದಿಬರುತ್ತದೆ ಎನ್ನುವ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ.

1 comment:

Anonymous said...

ಬಹಳ ನೋವುಂಟುಮಾಡಿದ ಸಂಗತಿ. ಮುಂಬಯಿ ನಗರಕ್ಕೆ ಪ್ರಕೃತಿ ವಿಕೋಪದ ಜೊತೆಗೆ ಉಗ್ರರ ಈ ಉಪಟಳ ಬೇರೆ. ತವಿಶ್ರೀಯವರು ಕ್ಷೇಮವಾಗಿದ್ದಾರೆಂದು ತಿಳಿದಿದೆ.