Wednesday, July 05, 2006

ಉತ್ತರ ಕೊರಿಯಾದ ಕಥೆಯೇ ಬೇರೆ...

ಅಂತಾರಾಷ್ಟ್ರೀಯ ಸಮೂಹ ಎಷ್ಟು ಬೇಡವೆಂದರೂ ಉತ್ತರ ಕೊರಿಯಾದವರು ಕ್ಷಿಪಣಿಗಳನ್ನು ಹಾರಿಸಿ ತಮ್ಮ ನಿಲುವನ್ನು ಸಾಧಿಸಿಕೊಂಡು ಬಿಟ್ಟರು, ಜಪಾನ್, ಚೀನ, ದಕ್ಷಿಣ ಕೊರಿಯಾ, ರಷ್ಯಾ ಹಾಗೂ ಅಮೇರಿಕ ದೇಶಗಳು ಏನು ಮಾಡಬಹುದು ಎಂದು ಒಬ್ಬರನ್ನೊಬ್ಬರು ಪ್ರಶ್ನೆ ಕೇಳಿಕೊಂಡರೆ ಮುಂದೆ ಇನ್ನೂ ಹಲವಾರು ಕ್ಷಿಪಣಿಗಳನ್ನು ಹಾರಿಸುವ ಪ್ರಯತ್ನದಲ್ಲಿ ಉತ್ತರ ಕೊರಿಯಾದವರು ಕಂಡು ಬರುತ್ತಾರೆಯೇ ವಿನಾ ಯಾವುದಕ್ಕೂ ಬಗ್ಗುವಂತೇನೂ ಕಾಣುತ್ತಿಲ್ಲ.

ಹಲವಾರು ವರ್ಷಗಳ ಹಿಂದೆ ಯಾವುದೋ ಅನ್ಯಭಾಷಾ ಸಿನಿಮಾವೊಂದರಲ್ಲಿ ಒಂದು ದೊಡ್ಡ ಕುಟುಂಬದ ಚಿತ್ರಣವನ್ನು ತೋರಿಸುವಾಗ ಬಂದ ಒಂದು ರೂಪಕ - ಆ ಕುಟುಂಬದಲ್ಲಿ ಇರುವ ಹತ್ತು-ಹನ್ನೆರಡು ಮಕ್ಕಳಿಗೆಲ್ಲ ಅಗಾಧವಾದ ಹಸಿವಿರುತ್ತದೆ, ಕೊನೆಗೊಂದು ದಿನ ತಿನ್ನಲಿಕ್ಕೆ ಏನೋ ಸಿಕ್ಕಾಗ ಮಕ್ಕಳೆಲ್ಲರೂ ತಮ್ಮ-ತಮ್ಮ ಶಕ್ಯಾನುಸಾರ ಆಹಾರವನ್ನು ಕೊಡುತ್ತಿರುವವರ ಸುತ್ತಲೂ ಮುತ್ತಿಗೆ ಹಾಕಿದಾಗ ಎಲ್ಲರಿಗಿಂತಲೂ ಚಿಕ್ಕದಾದ ಹುಡುಗನೊಬ್ಬ ಒಂಟಿಯಾಗಿ ಅಳತೊಡಗುತ್ತಾನೆ, ಅವನು ಎಷ್ಟು ಕೂಗಾಡಿ, ಚೀರಾಡಿದರೂ ಯಾರೂ ಅವನ ಗೋಜಿಗೆ ಹೋಗುವುದಿಲ್ಲ, ಕೊನೆಗೆ ಹಸಿವನ್ನು ತಾಳಲಾರದೇ ಹಾಗೂ ತನಗೆ ಸಿಗಬೇಕಾದ ಅಟೆನ್ಷನ್ ದೊರೆಯದೇ ಆ ಹುಡುಗ ಸಮೀಪವಿರುವ ನೀರಿನ ಹೂಜಿಯೊಂದನ್ನು ಕೆಳಕ್ಕೆ ಬೀಳಿಸುವುದರ ಮೂಲಕ ದೊಡ್ಡ ಸದ್ದು ಮಾಡುತ್ತಾನೆ, ಆ ಸದ್ದಿಗೆ ಎಲ್ಲರೂ ಒಂದು ಕ್ಷಣ ಸ್ತಬ್ಧರಾಗಿ ತಿರುಗಿ ನೋಡಿದಾಗ ಈ ಹುಡುಗ ಆ ಗುಂಪಿನೊಳಗೆ ತೂರಿಕೊಂಡು ಎಲ್ಲರಿಗಿಂತ ಮೊದಲಿನವನಾಗುತ್ತಾನೆ. ಹೂಜಿಯು ಒಡೆದ ಸದ್ದಿಗೆ ಒಂದು ಕ್ಷಣ ಸ್ಥಗಿತಗೊಂಡ ಕೋಲಾಹಲ ಮತ್ತೆ ಹಾಗೇ ಮುಂದುವರೆಯುತ್ತದೆ, ಆದರೆ ಈ ಬಾರಿ ಆ ಚಿಕ್ಕ ಹುಡುಗನಿಗೆ ಎಲ್ಲರಿಗಿಂತ ಮೊದಲು ಸ್ಥಾನ ಸಿಕ್ಕಿರುತ್ತದೆ.

ಈ ನಿದರ್ಶನಕ್ಕೆ ಉತ್ತರ ಕೊರಿಯಾದ ಚಿತ್ರಣ ಹೊಂದದಿರಬಹುದು, ಆದರೆ ವಿಶ್ವ ಸಮೂಹದಲ್ಲಿ ಬೇಕಾದ ಅಟೆನ್ಷನ್ ಅಂತೂ ಅದಕ್ಕೆ ಈ ಬೆಳವಣಿಗೆಯಿಂದ ಸಿಕ್ಕಿ ಹೋಗಿದೆ. ಸ್ವಲ್ಪ ದಿನಗಳ ಹಿಂದೆ ವಿಶ್ವದ ಹಿರಿಯಣ್ಣರ ನಿದ್ದೆ ಕೆಡಿಸಿದ್ದ ಇರಾನ್ ಸ್ವಲ್ಪ ತಣ್ಣಗಾಗುತ್ತಿರುವಂತೆಯೇ ಈಗ ತನ್ನ ರೆಕ್ಕೆ ಬಿಚ್ಚಿಕೊಂಡ ಉತ್ತರ ಕೊರಿಯಾದ ಕೋಲಾಹಲ ಹೀಗೇ ಮುಂದುವರೆದರೆ ಏಷ್ಯಾ ಮಾರುಕಟ್ಟೆಗಳು ತಕ್ಕ ಶಾಸ್ತಿಯನ್ನು ಅನುಭವಿಸಿ ಎಲ್ಲರೂ ಕಷ್ಟಕ್ಕೆ ಸಿಲುಕಬೇಕಾಗಿ ಬಂದೀತು.

ಆದರೆ ಒಂದಂತೂ ನಿಜ, ಉತ್ತರ ಕೊರಿಯಾ ಇರಾಕ್ ಅಂತೂ ಅಲ್ಲ, ಅಮೇರಿಕದವರಾಗಲೀ ಮತ್ಯಾರಾದರಾಗಲಿ ಮಾಡಬಹುದಾದ ಆಕ್ರಮಣದ ಮಾತು ಸಾಧ್ಯವೇ ಇಲ್ಲ ಎನ್ನಬಹುದು. ಮೊದಲನೆಯದಾಗಿ, ಉತ್ತರ ಕೊರಿಯಾ ಈಗಾಗಲೇ ನ್ಯೂಕ್ಲಿಯರ್ ತಂತ್ರಜ್ಞಾನವನ್ನು (ತಾನೇ ಹೇಳಿಕೊಂಡಂತೆ) ಹೊಂದಿದ್ದು, ನ್ಯೂಕ್ಲಿಯರ್ ಆಯುಧಗಳೂ ಆದರ ಬತ್ತಳಿಕೆಯಲ್ಲಿವೆ. ಅಲ್ಲದೇ ತನ್ನ ಯಶಸ್ವಿ ಉಡಾವಣೆಗಳಾದ ಚಿಕ್ಕ ಹಾಗೂ ಮಧ್ಯಮ ದೂರದ ಕ್ಷಿಪಣಿಗಳಿಂದ ಅದೂ ಬೇಕಾದಷ್ಟು ರಾಷ್ಟ್ರಗಳನ್ನು ತಲುಪಬಲ್ಲದು. ಇನ್ನೇನಾದರೂ ಅದರ ಹೆಚ್ಚಿನ ದೂರದ (ಲಾಂಗ್ ರೇಂಜ್) ಕ್ಷಿಪಣಿಗಳು ಯಶಸ್ವಿಯಾದವೆಂದಾದರೆ ಅಮೇರಿಕದ ಪಶ್ಚಿಮ ತೀರಕ್ಕೂ ಬಂದು ಅಪ್ಪಳಿಸಬಹುದು. ಎರಡನೆಯದಾಗಿ, ಉತ್ತರ ಕೊರಿಯಾದ ಸೈನಿಕರೂ ಇರಾಕ್ ನವರಿಗಿಂತ ಬಲಶಾಲಿಗಳು, ಹಿಂದಿನ ಬೇಕಾದಷ್ಟು ಯುದ್ಧಗಳಲ್ಲಿ ತರಬೇತಿ ಪಡೆದ ಇವರನ್ನು ಎದುರು ಹಾಕಿಕೊಳ್ಳುವುದು ಇರಾಕ್ ಸೈನಿಕರನ್ನು ಎದುರು ಹಾಕಿಕೊಂಡಷ್ಟು ಸುಲಭದ ಮಾತಲ್ಲ. ಮೂರನೆಯದಾಗಿ, ಇರಾಕ್ ಯುದ್ಧದ ನಂತರ ಹಣಕಾಸಿನ ಬವಣೆಯಲ್ಲಿ ಸಿಕ್ಕಿರುವ ದೇಶಗಳೆಲ್ಲವೂ ಮತ್ತೊಂದು ಅನಾಹುತಕ್ಕೆ ಎಡೆ ಮಾಡಿಕೊಡುವ ಮುನ್ನ ಮತ್ತೊಮ್ಮೆ ಯೋಚಿಸುವ ಪರಿಸ್ಥಿತಿ ಬಂದಿದೆ. ವಿಶ್ವದವರೆಲ್ಲರೂ ಬೇಡ-ಬೇಡವೆಂದರೂ ಇರಾಕ್ ಆಕ್ರಮಣಕ್ಕೆ ಇಳಿದ ಅಮೇರಿಕ-ಯುಕೆ ದೇಶದವರಿಗೆ ಈಗ ವಿಶ್ವದವರೆಲ್ಲರ ಬಲ, ಬೆಂಬಲವಿದ್ದರೂ ಉತ್ತರ ಕೊರಿಯಾದವರನ್ನು ಎದುರು ಹಾಕಿಕೊಳ್ಳುವುದು ಬಹಳ ಕಷ್ಟ ಸಾಧ್ಯ. ಇವು, ಇನ್ನೂ ಹಲವಾರು ಕಾರಣಗಳಿಂದಾಗಿಯೇ ಎಲ್ಲರೂ ಡಿಪ್ಲೋಮ್ಯಾಟಿಕ್ ಮಾತುಕಥೆಗಳಿಂದ ಸಾಧ್ಯವಾದಷ್ಟು ವಿವಾದವನ್ನು ಪರಿಹರಿಸಿಕೊಳ್ಳಲು ಯತ್ನಿಸುತ್ತಿರುವುದು. ಈಗ ಉತ್ತರ ಕೊರಿಯಾವನ್ನು ಮಾತುಕಥೆಗೆ ಒತ್ತಾಯಿಸುವ ಎಷ್ಟೋ ದೇಶಗಳು ಆಗ ನ್ಯೂಕ್ಲಿಯರ್ ಟೆಕ್ನಾಲಜಿಯನ್ನು ತನ್ನದಾಗಿಸಿಕೊಳ್ಳುತ್ತಿದೆ ಎಂಬ ಅಪವಾದಕ್ಕೊಳಗಾದ ಇರಾಕ್‌ಗೂ ಒಂದು ಮಾತುಕಥೆಯ ಅವಕಾಶವನ್ನು ನೀಡಿದ್ದರೆ ಎನ್ನಿಸುವುದರಿಂದ ಎಷ್ಟೋ ಜನರ ಕಣ್ಣಿಗೆ ಈ ದೇಶಗಳ ನೀತಿ ಡಬಲ್ ಸ್ಟ್ಯಾಂಡರ್ಡ್ ಆಗಿ ಕಂಡರೂ ತಪ್ಪೇನಿಲ್ಲ.

ಉತ್ತರ ಕೊರಿಯಾದವರ ದೃಷ್ಟಿಯಲ್ಲಿ ತಮ್ಮನ್ನು ತಾವು ಸಂರಕ್ಷಿಸಿಕೊಳ್ಳುತ್ತಿರುವ ಮಾತಿನಲ್ಲಿ ಹುರುಳೆಷ್ಟಿದೆಯೋ ಅಷ್ಟೇ ಗಾಜಿನ ಮನೆಯಲ್ಲಿ ಇರುವ ಕೆಲವರು ತಮ್ಮ ಮೇಲೆ ಕಲ್ಲು ತೂರದಿರಲಿ ಎಂಬ ದೂರದೃಷ್ಟಿಯಿಂದ ಮಾಡುತ್ತಿರುವ ನಾಟಕದಲ್ಲೂ ಸತ್ಯವಿದೆ. ಹಿಂದೆ ಭಾರತ ನ್ಯೂಕ್ಲಿಯರ್ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರೈಸಿದಾಗ ವಿಶ್ವದೆಲ್ಲ ದೇಶಗಳು ಪಾಕಿಸ್ತಾನಕ್ಕೆ ನ್ಯೂಕ್ಲಿಯರ್ ಪರೀಕ್ಷೆಯನ್ನು ಮಾಡದಂತೆ ಬಲವಾದ ಒತ್ತಡವನ್ನು ಹೇರಿದಾಗ್ಯೂ ಮುಷಾರಫ್ ಆಡಳಿತ ಆಂತರಿಕ ಒತ್ತಡಗಳ ನಡುವೆ ಯಶಸ್ವಿಯಾಗಿ ನ್ಯೂಕ್ಲಿಯರ್ ಪರೀಕ್ಷೆಗಳನ್ನು ಮಾಡಿಯೇ ತೀರಿತ್ತು. ಸರ್ವಾಧಿಕಾರಿಗಳಿಗೆ ಹೇಳುವವರು ಕೇಳುವವರು ಯಾರೂ ಇರೋದಿಲ್ಲ ಎಂಬ ಮಾತು ಅಷ್ಟೇನೂ ಸತ್ಯವಲ್ಲ. ಹಾಗೆಯೇ ಈ ದಿನ ಆಂತರಿಕವಾಗಿ ಉತ್ತರ ಕೊರಿಯಾಕ್ಕೆ ಯಾವ ಒತ್ತಡಗಳಿವೆಯೋ ಗೊತ್ತಿಲ್ಲ. ಆರ್ಥಿಕವಾಗಿ ಹಿಂದುಳಿದಿರೋ ದೇಶಗಳು ತಮ್ಮ-ತಮ್ಮ ಅಸ್ಥಿತ್ವದ ಉಳಿವಿಗೆ ಹೀಗೆ ಒಂದಲ್ಲ ಒಂದು ನಾಟಕವನ್ನು ಆಡಬೇಕಾದ ಅನಿವಾರ್ಯತೆ ಬಂದಿದೆ, ಇಲ್ಲವೆಂದಾದರೆ ಸದ್ದು ಮಾಡದವರನ್ನು ಕೇಳುವವರು ಯಾರು?

ತಮ್ಮ-ತಮ್ಮ ಆಂತರಿಕ ಭದ್ರತೆಗಳ ದೃಷ್ಟಿಯಿಂದ ಜಪಾನ್, ಚೀನಾ, ದಕ್ಷಿಣ ಕೊರಿಯಾ ಹಾಗೂ ಅಮೇರಿಕ ದೇಶಗಳಿಗೆ ಉತ್ತರ ಕೊರಿಯಾದವರು ಬಹಳಷ್ಟು ನಡುಕವನ್ನು ಹುಟ್ಟಿಸಿದ್ದಾರೆ, ಈ ನಡುಕವೇ ಮುಂದೆ ಉತ್ತರ ಕೊರಿಯಾದವರ ಮೇಲೆ ಯುದ್ಧವನ್ನು ಸಾರುವ ಸಂಭವನೀಯತೆಯನ್ನು ಕಡಿಮೆ ಮಾಡುತ್ತದೆ. ಈಗ ಉತ್ತರ ಕೊರಿಯಾದವರ ಜೊತೆ ಮಾತುಕಥೆಯಲ್ಲಿ ತೊಡಗದೇ ಮತ್ತೇನು ದಾರಿ ನನಗಂತೂ ಕಾಣದು. ಈ ಎಲ್ಲ ನಾಟಕದಲ್ಲಿ ಎಷ್ಟೋ ದೇಶಗಳಿಗೆ ತಮ್ಮ-ತಮ್ಮ ಆಂತರಿಕ ಸುರಕ್ಷೆ ಮುಖ್ಯ ಹಾಗೂ ಎಷ್ಟೋ ದೇಶಗಳು ತಮ್ಮ ವಿದೇಶಾಂಗ ನೀತಿಯನ್ನೂ ಮತ್ತೊಮ್ಮೆ ಪರಿಶೀಲನೆ ಮಾಡಿಕೊಳ್ಳುವ ಅಗತ್ಯ ಎಂದಿಗಿಂತಲೂ ಹೆಚ್ಚಾಗಿದೆ. ಉತ್ತರ ಕೊರಿಯಾವೇನು ಇರಾನ್ ದೇಶದವರು ನಾಳೆ ನ್ಯೂಕ್ಲಿಯರ್ ಅಸ್ತ್ರಗಳನ್ನು ಹುಟ್ಟಿಸುತ್ತೇವೆಂದು ಹೊರಟರೂ ಅವರ ಜೊತೆ ಮಾತಕಥೆಗೆ ತೊಡಗದೇ ಬೇರೆ ದಾರಿಯೇ ಇಲ್ಲ. ಹೇರಬಹುದಾದ ಸ್ಯಾಂಕ್ಷನ್‌ಗಳಿಂದ ಆಗಬಹುದಾದ ನಷ್ಟವನ್ನು ಪಾಕಿಸ್ತಾನದಂತಹವರು, ಇರಾನ್ ನಂತಹವರು, ಉತ್ತರ ಕೊರಿಯಾದಂತಹವರು ತಮ್ಮೆಲ್ಲ ಕೊರೆತಗಳ ನಡುವೆಯೂ ಸುಲಭವಾಗಿ ಕೊಡವಿಕೊಳ್ಳಬಲ್ಲರು, ಈ ದೇಶಗಳನ್ನಾಳುವವರಿಗೆ ಮುಖ್ಯವಾಗಿ ದೂರದರ್ಶಿತ್ವ ಹಾಗೂ ತಮ್ಮ ಜನಹಿತವಿದ್ದರೆ ಹೀಗೇಕಾದರೂ ಆಗುತ್ತಿತ್ತು?

ಏನೇ ಇರಲಿ, ಇರಾಕ್ ಯುದ್ಧ ಅಮೇರಿಕದವರಿಗೆ ಮರೆಯಲಾಗದ ಪಾಠವನ್ನು ಈಗಾಗಲೇ ಕಲಿಸಿಬಿಟ್ಟಿದೆ. ವಿಶ್ವಸಂಸ್ಥೆಯನ್ನು ಅಂದು ಧಿಕ್ಕರಿಸಿ ನಡೆದಿದ್ದ ದೇಶಗಳು ಇಂದು ಮತ್ತೆ ಅದರ ಬುಡಕ್ಕೇ ಬಂದು ಬೀಳುವಂತಾಗಿದೆ. ನನ್ನ ಪ್ರಕಾರ ಅದು ಬಹಳ ಮಹತ್ವದ ಬೆಳವಣಿಗೆ - ಈ ಬೆಳವಣಿಗೆ ಒಂದು ಆಶಾವಾದವನ್ನ ಹುಟ್ಟಿಸುತ್ತದೆ, ನಾಳೆ ಉತ್ತರ ಕೊರಿಯಾದವರೂ ಶಾಂತಿದೂತರಾಗುವುದಕ್ಕೆ ವಿಶ್ವಸಂಸ್ಥೆಯ ಮಧ್ಯಸ್ಥಿಕೆಯೇ ದಾರಿ.

2 comments:

Shrilatha Puthi said...

i dont quite agree with u on this. why can't a country like Iran, N. Korea, or even India go nuclear? just because US doesn't want them to? who is US to decide other countries' defence strategies? who gave that power to US?

USನ ಈ ವಾದ 'ನಾನು ನಿನ್ಗೆ ಯಾವಾಗ ಬೇಕಾದ್ರೂ ಹೊಡಿತೀನಿ, ಆದ್ರೆ ನೀನು ಮಾತ್ರ ಮನೇಲಿ ಒಂದು ದೊಣ್ಣೆ ಕೂಡ ಇಟ್ಕೊಬಾರ್ದು' ಅನ್ನೊ ತರ..

'ಈ ದೇಶಗಳನ್ನಾಳುವವರಿಗೆ ದೂರದರ್ಶಿತ್ವ ಹಾಗೂ ಜನಹಿತವಿದ್ದಿದ್ದರೆ ಹೀಗೇಕಾದರೂ ಆಗುತ್ತಿತ್ತು?' ಅನ್ನುವ ವಾಕ್ಯ ಕೂಡ ಇಷ್ಟವಾಗಲಿಲ್ಲ. did u think the same abt India when we became nuclear? do u remember the sanctions we got after that? those sanctions cud do nothing to India; like that even other countries will survive, it's no big deal.. it's high time US learn to mind their own business.

Satish said...

It is not a question about US decision to have a country to possess nuclear technology both for constructive and distructive purposes. It is individual country's responsibility to safegaurd the interests of humankind. In India's case yes because India has been safe over a period of 3 decades having nuclear technology.

ಉತ್ತರ ಕೊರಿಯಾದ ಆರ್ಥಿಕ ಸ್ಥಿತಿಗತಿ, ಜನಹಿತಗಳನ್ನು ಸದಾಕಾಲ ದೂರವಿಟ್ಟ ತಲತಲಾಂತರದ ಸರ್ವಾಧಿಕಾರಿ ಆಡಳಿತ, ತನ್ನ ರಕ್ಷಣೆಯ ಹೆಸರಿನಲ್ಲಿ ನೆರೆಹೊರೆಯ ರಾಷ್ಟ್ರಗಳ ಮೇಲೆ ಹೇರುವ ಒತ್ತಡ, ಇನ್ನೂ ಮುಂತಾದವುಗಳನ್ನು ಆಲೋಚಿಸಿಕೊಂಡು - ಈ ದೇಶವನ್ನಾಳುವವರಿಗೆ ದೂರದರ್ಶಿತ್ವ ಹಾಗೂ ಜನಹಿತವಿಲ್ಲ - ಎಂದು ಬರೆಯಬೇಕಾಯಿತು, ಪಿತ್ತನೇರಿಗೇರಿದ ಒಂದು ಘಳಿಗೆಯಲ್ಲಿ ಅಕ್ಕಪಕ್ಕದ ರಾಷ್ಟ್ರಗಳ ಮೇಲೆ ಒಂದೇ ಒಂದು ನ್ಯೂಕ್ಲಿಯರ್ ಬಾಂಬ್‌ನ್ನು ಹಾರಿಸಿದ್ದೇ ಆದರೆ ಅದರ ಪರಿಣಾಮಗಳನ್ನು ಊಹಿಸುವುದೂ ಅಸಾಧ್ಯ. ಇನ್ನೂ ನ್ಯೂಕಿಯರ್ ತಂತ್ರಜ್ಞಾನವನ್ನು (ಉ.ಕೊರಿಯಾ, ಭಾರತ ಈ ಪಟ್ಟಿಗೆ ಸೇರೋದಿಲ್ಲ) ಪಡೆಯದ ದೇಶಗಳ ಮೇಲೆ ಯು.ಎನ್. ನವರು ಒಂದು ಕಣ್ಣು ಇಟ್ಟಿರುವುದು ಲೋಕದ ಹಿತದಿಂದ ಒಳ್ಳೆಯದೇ ಎನ್ನುವುದು ನನ್ನ ಅಭಿಪ್ರಾಯ.

ಇನ್ನು ಅಮೇರಿಕದವರಿಗೆ ತಮ್ಮ ಪಶ್ಚಿಮ ತೀರವನ್ನು ಉ.ಕೊರಿಯಾದವರು ಲಾಂಗ್ ರೇಂಜ್ ಕ್ಷಿಪಣಿಗಳಿಂದ ತಲುಪಬಲ್ಲರು ಎಂಬುದಾದರೆ ಅವರಿಗೆ ಹೆದರಿಕೆ ಏಕಾಗಬಾರದು? ಉ.ಕೊರಿಯಾದ ಆಡಳಿತಗಾರನನ್ನು 'ಮ್ಯಾಡ್ ಮ್ಯಾನ್' ಎಂದೇ ಎಲ್ಲರೂ ಪರಿಗಣಿಸಿರುವಾಗ ಅಮೇರಿಕವಷ್ಟೇ ಅಲ್ಲ, ಪ್ರತಿಯೊಂದು ದೇಶದವರೂ ಕಳವಳಪಡಬೇಕಾದ್ದೇ ಅಲ್ಲವೇ?

ಇನ್ನು ಆರ್ಥಿಕ ದಿಗ್ಬಂಧನ (ಸ್ಯಾಂಕ್ಷನ್ಸ್)ಅನ್ನೋದು ನಂತರದ ಪರಿಣಾಮ - ಅದರ ಪರಿಣಾಮವನ್ನು ಪ್ರತಿಯೊಂದು ದೇಶದ ಜನರೂ ಅನುಭವಿಸಬೇಕಾಗುತ್ತದೆ. ಇವತ್ತಿಗೂ ನಮ್ಮ ದೇಶದಿಂದ ಮಾವಿನಹಣ್ಣುಗಳು ಅಮೇರಿಕವನ್ನೇಕೆ ತಲುಪುವುದಿಲ್ಲವೆಂದುಕೊಂಡಾಗ ಬೇಸರವಾಗುತ್ತದೆ.

US have had differences in international stretegy, but at least I am happy now UN is playing a major role.