ಚಾಟ್ ವಿಂಡೋನಲ್ಲಿ ಜೀವಂತವಾಗಿರಬಯಸುವ ಸಂಬಂಧಗಳು
ಇತ್ತೀಚೆಗಂತೂ ವೈಯುಕ್ತಿಕವಾಗಿಯೂ ಹಾಗೂ ಅಫೀಸಿನ ಕೆಲಸಕ್ಕೆ ಸಂಬಂಧಿಸಿದಂತೆಯೂ ಮಾಡುವ ಮಾತುಕತೆಯ ಮುಖ್ಯ ಅಂಗವಾಗಿ ಇನ್ಸ್ಟಂಟಂಟ್ ಮೆಸ್ಸೇಜುಗಳು ಹೆಚ್ಚಾಗಿವೆಯೇನೋ ಎನ್ನಿಸಿ ಬೇರೆ ಎಲ್ಲ ಕಮ್ಮ್ಯೂನಿಕೇಷನ್ ಡಿವೈಸ್‌ಗಳಿಗಿಂತ ಅದೇ ಮುಖ್ಯವಾಗಿ ಕಂಡುಬರುತ್ತಿದೆ. ಈ ಚಿಕ್ಕ ಚಿಕ್ಕ ಮೆಸ್ಸೇಜ್ ವಿಂಡೋಗಳಲ್ಲಿ ತೆರೆದುಕೊಳ್ಳುವ ಸಂಬಂಧಗಳು, ಅವುಗಳು ಬೆಳೆಯುವ ಬಗೆ, ಅವುಗಳನ್ನು ನಿಭಾಯಿಸುವ ಜಾಣತನ ಇವುಗಳೆಲ್ಲವೂ ನನ್ನೊಬ್ಬನ ಸವಾಲುಗಳು ಮಾತ್ರವಲ್ಲ, ಹೆಚ್ಚೂಕಡಿಮೆ ಎಲ್ಲರದ್ದೂ ಆಗಿದ್ದರಿಂದ ಈ ಕುರಿತು ಬರೆಯೋಣವೆಂದುಕೊಂಡೆ.
ಉಳಿದ ಆಫೀಸುಗಳಲ್ಲೂ ಹೀಗೆ ಇರಬಹುದು, ನಮ್ಮ ಆಫೀಸಿನಲ್ಲಂತೂ ಈ ಇನ್ಸ್ಟಂಟ್ ಮೆಸ್ಸೇಜುಗಳ ಮೂಲಕವೇ ಜನರ ನಡುವೆ ವಿಚಾರ ವಿನಿಮಯಗಳು ಹೆಚ್ಚು ಆಗೋದು. ಮುಂಜಾನೆ ಒಮ್ಮೆ ಲಾಗಿನ್ ಆದರೆ ಆಯಿತು, ಮೇಲಿಂದ ಮೇಲೆ ಬಂದು ಹೋಗುವ ಈ ಮೆಸ್ಸೆಜುಗಳಿಗೆ ಬಿಡುವೆಂಬುದಿಲ್ಲ. ಇಂತಹ ಮೆಸ್ಸೇಜುಗಳನ್ನು ಹೊತ್ತುಕೊಂಡ ಪುಟ್ಟ ಪುಟ್ಟ ವಿಂಡೋಗಳಿಗೂ ತರಾವರಿ ಆಯುಷ್ಯವಿದೆ. ಕೆಲವೊಂದು ಹೀಗೆ ಇಣುಕಿ ಹಾಗೆ ಮಾಯವಾದರೆ ಮತ್ತೆ ಕೆಲವು ದಿನಪೂರ್ತಿ ಪರದೆಯ ಮೇಲೆ ಇರುತ್ತವೆ. ದಿನದ ಕೊನೆಯಲ್ಲಿ ಕಂಪ್ಯೂಟರ್‌ನ್ನು ನಿಲ್ಲಿಸಬೇಕಾದ ಸಂದರ್ಭ ಬಂದರೂ ಜೀವಂತವಾಗಿರಬೇಕಾದ ಸಂದೇಶಗಳಿಗೋಸ್ಕರ ಕೆಲವನ್ನು ಮತ್ತ್ಯಾವಾಗಲೋ ಬಳಸುವ ಆಲೋಚನೆಯಿಂದ ಉಳಿಸಿಕೊಂಡಿದ್ದೇನೆ. ಒಂದಂತೂ ನಿಜ - ನಮ್ಮ ನಡುವಿನ ಜನರು, ಅವರ ಭಾವನೆಗಳು ಎಷ್ಟು ಭಿನ್ನವೋ, ಈ ಮೆಸ್ಸೇಜುಗಳೂ ಅಷ್ಟೇ ಭಿನ್ನ. ಪ್ರತಿ ಕ್ಷಣದಲ್ಲಿ ತರಾವರಿ ಅವತಾರಗಳನ್ನು ಬದಲಾಯಿಸಿಕೊಳ್ಳುವ ಈ ಸಂದೇಶಗಳು ಆ ಕಡೆಯಿಂದ ಎಷ್ಟೋ ದೂರ (ಅಥವಾ ಹತ್ತಿರ)ದಿಂದ ಮಾತುಕಥೆಯಲ್ಲಿ ತೊಡಗಿದ ವ್ಯಕ್ತಿಯನ್ನು ಹತ್ತಿರ ತರದಿದ್ದರೂ, ಎಲ್ಲವೂ ಒಂದೇ ಪರದೆಯ ಮೇಲೆ ಹುಟ್ಟಿ ಮಾಯವಾಗುವ ಪ್ರಕ್ರಿಯೆಯಲ್ಲಂತೂ ಸಮಾನತೆಯಿದೆ.
ಮಾನವೀಯ ಸಂಬಂಧಗಳನ್ನು ಮೇಂಟೇನ್ ಮಾಡಿದ ಹಾಗೆ ಈ ಚಿಕ್ಕ ಚಿಕ್ಕ ವಿಂಡೋಗಳಲ್ಲಿ ಹುಟ್ಟಿ ಮಾಯವಾಗುವ ಸಂದೇಶಗಳನ್ನೂ ಮೇಂಟೇನ್ ಮಾಡಬೇಕಾಗುತ್ತದೆ. ನಾನು ಚಾಟ್ ಮಾಡುವುದು ಅನಿವಾರ್ಯವಾದ ಮೇಲಂತೂ, ಎಲ್ಲೋ ವರ್ಚುವಲ್ ಪ್ರಪಂಚದಲ್ಲಿ ಯಾರೋ ಮಾತನಾಡುತ್ತಿದ್ದಾರೆ ಎಂಬ ಭಾವನೆಯಿಂದ ಯಾವುದನ್ನೂ ನೆಗ್ಲೆಕ್ಟ್ ಮಾಡಲಾಗುವುದಿಲ್ಲ. ವೈಯುಕ್ತಿಕ ವಿಷಯಗಳನ್ನು, ಅದಕ್ಕೆ ಸಂಬಂಧಿಸಿದ ಸಂದೇಶಗಳನ್ನು ಹೇಗಾದರೂ ನಿಭಾಯಿಸಿಕೊಂಡರೂ ಪರವಾಗಿಲ್ಲ, ಆದರೆ ಅಫೀಸಿನ ವಿಷಯದಲ್ಲಿ ಮಾತ್ರ ಹೀಗಾಗದೆ ಎಷ್ಟೋ ಕಂಪನಿಗಳಲ್ಲಿ ಚಾಟ್ ಮಾಡುವುದಕ್ಕೆ ಹಲವಾರು ಗ್ರೌಂಡ್ ರೂಲ್ಸುಗಳನ್ನು ಬರೆದೂ ಇಟ್ಟಿದ್ದಾರಾದ್ದರಿಂದ ನಾವು ಬರೆಯುವ, ಪ್ರತಿಕ್ರಿಯಿಸುವ ರೀತಿಯ ಮೇಲೆ ಒಂದು ಕಣ್ಣಿಡಬೇಕಾಗುತ್ತದೆ. ಒಂದು ಕಾಲದಲ್ಲಿ ಚಾಟ್ ಅನ್ನುವುದು ನನಗೆ ದೂರದ ಸ್ನೇಹಿತರನ್ನು ಅಪರೂಪಕ್ಕೆ ಮಾತನಾಡಿಸುವ ಸಾಧನವಾಗಿ ಕಂಡುಬಂದಿತ್ತು, ಆದರೆ ಈ ದಿನಗಳಲ್ಲಿ ಅದರ ವ್ಯಾಖ್ಯೆ ಸಂಪೂರ್ಣ ಬದಲಾಗಿ ನನ್ನಿಂದ ಕೆಲವೇ ಅಡಿಗಳ ದೂರದಲ್ಲಿ ಕುಳಿತವರಿಂದಲೂ ಹಿಡಿದು, ಗ್ಲೋಬಲ್ ಮಟ್ಟದಲ್ಲಿ ಕೆಲಸ ಮಾಡುವ ನಮ್ಮ ಕಂಪನಿಯ ವಿಷಯಗಳಿಗಾಗಿ ಸಾವಿರಾರು ಮೈಲುಗಳ ದೂರವಿರುವವರನ್ನೂ ಚಾಟ್ ಮೂಲಕವೇ ಸಂಪರ್ಕಿಸಬೇಕಾಗಿ ಬಂದಿದೆ.
ಈ ಚಾಟ್‌ಗೆ ಸಂಬಂಧಿಸಿದಂತೆ ನಾನು ಬರೆಯುವ ಸಂದೇಶಗಳಲ್ಲಿ ನನ್ನ ಪ್ರೊಫೆಷನಲಿಸಮ್, ಕಮ್ಮ್ಯೂನಿಕೇಷನ್ ಸ್ಕಿಲ್ಸ್, ನಯ-ನಾಜೂಕುತನ, ಫಾರ್ಮಾಲಿಟಿ ಇವುಗಳನ್ನೆಲ್ಲ ಯಾರಾದರೂ ಗಮನಿಸಿ ಅದಕ್ಕೆಲ್ಲ ಅಷ್ಟೊಂದು ಮಹತ್ವವನ್ನು ಕೊಡುತ್ತಾರೆ ಎಂದು ಐದು ವರ್ಷಗಳ ಹಿಂದೆ ನಾನು ಎಣಿಸಿರಲಿಲ್ಲ. ಆದರೆ ಇಂದು ನಾನು ಚಾಟ್ ಮಾಡುತ್ತಿರುವ ವ್ಯಕ್ತಿಯ ಸಂವೇದನೆಗಳಿಗೆ ತಕ್ಕಂತೆ, ಅವರ ಲೆವೆಲ್‌ಗೆ ತಕ್ಕಂತೆ, ಅವರ ಬ್ಯಾಕ್‌ಗ್ರೌಂಡಿಗೆ ತಕ್ಕಂತೆ ಹಾಗೂ ಅವರು ಇರುವ ಊರು/ದೇಶ/ಟೈಮ್ ಝೋನ್‌ಗಳಿಗೆ ತಕ್ಕಂತೆ ಬರೆಯುವಲ್ಲಿ ಬದಲಾಯಿಸಿಕೊಳ್ಳುತ್ತೇನೆ ಎಂದುಕೊಂಡಿರಲಿಲ್ಲ. ನಮ್ಮ ಆಫೀಸಿನಲ್ಲಿ ಕೆಲವರು ಏನೋ ಸಹಾಯ ಮಾಡಿದರೆಂದು 'ಥ್ಯಾಂಕ್ಯೂ' ಎಂದು ಬರೆದರೆ 'ದಯವಿಟ್ಟು ಹಾಗೆ ಬರೆಯಬೇಡ, ವೇಸ್ಟ್ ಆಫ್ ಟೈಮ್' ಎಂದು ಹೇಳಿದವರೂ ಇದ್ದಾರೆ, ಇನ್ನು ಕೆಲವರು ನಾನು ಒಂದು ಚಿಕ್ಕ ಥ್ಯಾಂಕ್ಯೂವನ್ನೂ ಬರೆಯಲ್ಲಿಲ್ಲವೆಂದು ನನ್ನನ್ನು ಸತಾಯಿಸಲು, ಅಥವಾ ನನಗೆ ಶಿಷ್ಟಾಚಾರದ ಪಾಠವೊಂದನ್ನು ಕಲಿಸಲು ಅವರೇ 'ಯೂ ಆರ್ ವೆಲ್‌ಕಮ್!' ಎಂದು ಬರೆದುಕೊಂಡಿದ್ದೂ ಇದೆ! ಹೆಚ್ಚಿನ ಪಕ್ಷ, ಯುವ ಜನರು ಶಿಷ್ಟಾಚಾರಕ್ಕೆ ಅಷ್ಟೊಂದು ಗಮನ ಕೊಡದಿದ್ದಂತೆ ಕಂಡುಬಂದರೆ ಅದೇ ಸ್ವಲ್ಪ ವಯಸ್ಸಾದವರಿಗೆ 'ಮಾನ ಮರ್ಯಾದೆ'ಯ ವಿಷಯ ಬಹಳ ಮುಖ್ಯವಾಗುತ್ತದೆ. ನಮ್ಮ ಆಫೀಸಿನಲ್ಲಿ ಕೆಲವರು 'ಗುಡ್ ಮಾರ್ನಿಂಗ್' ಎಂದು ಸಂದೇಶವನ್ನು ಆರಂಭಿಸಿದರೆ ಇನ್ನು ಕೆಲವರು ಬರೀ 'ಜಿ.ಎಮ್.' ಎಂದು ಬರೆಯುತ್ತಾರೆ, ಇಂಥವರುಗಳಿಗೆ ಅವರ ಮನಸ್ಥಿತಿಗೆ ತಕ್ಕಂತೆ ನೀವು ಸ್ಪಂದಿಸದೇ ಹೋದರೆ ದೊಡ್ಡ ಅನಾಹುತವೇನೂ ಆಗದಿದ್ದರೂ ಸ್ವಲ್ಪ ಇರಿಸುಮುರಿಸಾಗುವುದಂತೂ ಗ್ಯಾರಂಟಿ.
ಆದರೆ ಇಂತಹ ಇರಿಸು-ಮುರಿಸುಗಳನ್ನು ಹಗುರಗೊಳಿಸಲೆಂದೇ ಹುಟ್ಟಿದವುಗಳು ಎಂದು ಕರೆಯಬಹುದಾದ ಸ್ಮೈಲೀ ಪ್ಯಾರಂಥೀಸೀಸುಗಳನ್ನು ಕಂಡರೆ ನನಗೆ ಬಹಳ ಇಷ್ಟ, ಅವುಗಳಿಗೆ ಎಂತಹ ಕೆಟ್ಟ ಸನ್ನಿವೇಶವನ್ನೂ ತಿಳಿಮಾಡುವ ತಾಕತ್ತಿದೆ - ಮೆಸ್ಸೇಜಿನಲ್ಲಿ ಏನನ್ನು ಬೇಕಾದರೂ ಬರೆದು ಕೊನೆಗೆ :-) ಎಂದು ಸೇರಿಸಿದರೆ, ಆ ಕಡೆಯಿಂದ ಓದುವ ವ್ಯಕ್ತಿಗೆ ಏನು ಸುಳಿವು ಸಿಗುತ್ತದೆಯೋ ಯಾರಿಗೆ ಗೊತ್ತು, ಒಂದು ಥರಾ ಮಾದಕ ವಸ್ತುಗಳನ್ನು ಸೇವಿಸಿದಾಗ ಅಥವಾ ಮದ್ಯಪಾನ ಮಾಡಿದಾಗ ಆಗುವ ಅನುಭವದ ಹಾಗೆ ನೋವಿದ್ದದ್ದೂ ಹೆಚ್ಚು ನೋವಾಗಿಯೂ ನಲಿವಿದ್ದದ್ದು ಹೆಚ್ಚಿನ ನಗೆಯನ್ನೂ ಉಕ್ಕಿಸುತ್ತದೆ. ಬೇರೇನು ಆಗದಿದ್ದರೂ ಟೇಕ್ ಇಟ್ ಈಸಿ ಎಂದು ಘಂಟಾಘೋಷವಾಗಿ ಈ ಪ್ಯಾರಂಥೀಸೀಸುಗಳು ಅದೆಷ್ಟೋ ವರ್ಷಗಳಿಂದ ಸಾರುತ್ತಲೇ ಇವೆ, ಯಾರು ಯಾರು ಎಷ್ಟು ಹಗುರವಾಗಿ ತೆಗೆದುಕೊಳ್ಳುತ್ತಾರೋ ಬಿಡುತ್ತಾರೋ ನನ್ನಂತೂ ಬಹಳಷ್ಟು ಬಾರಿ ಸಂಕಷ್ಟದಿಂದ ಈ ಸ್ಮೈಲೀ ಮುಖಗಳು ಪಾರು ಮಾಡಿವೆ. ಈ ಚಾಟ್ ವಿಂಡೋಗಳಿಂದ ನನ್ನ ಓದುವಿಕೆಯ ಪರಿಧಿ, ಪದಗಳ ವ್ಯಾಪ್ತಿ ವಿಸ್ತಾರವಾಗಿದೆ, ಯಾರು ಎಷ್ಟೇ ಕೆಟ್ಟ ಸ್ಪೆಲ್ಲಿಂಗನ್ನು ಉಪಯೋಗಿಸಿಬರೆದರೂ, ಯಾರು ಎಷ್ಟೇ ಚಿಕ್ಕ ಅಥವಾ ಚೊಕ್ಕದಾಗಿ ಬರೆದರೂ ಹಾಗೆ ಬರೆದದ್ದನ್ನು ಆಕಡೆಯಿರುವ ವ್ಯಕ್ತಿ ಅರ್ಥ ಮಾಡಿಕೊಂಡೇ ತೀರುತ್ತಾನೆ ಅನ್ನೋದು ಎಲ್ಲೂ ಬರೆಯದ ಸತ್ಯವೆಂದು ಎಲ್ಲರೂ ನಂಬಿಕೊಂಡಿರುವುದರಿಂದ ಆ ವಿಂಡೋಗಳಲ್ಲಿ ಬಂದಂತಹ ಸಂದೇಶಗಳನ್ನೇ ಹೇಗಾದರೂ ಮಾಡಿ ಅರ್ಥಮಾಡಿಕೊಳ್ಳುವ ಸಂಕಷ್ಟಕ್ಕೆ ಬೀಳುತ್ತೇನೇ ವಿನಾ 'ಅರ್ಥವಾಗಲಿಲ್ಲ, ಮತ್ತೊಮ್ಮೆ ಹೇಳಿ' ಎಂದಿದ್ದು ಕಡಿಮೆ.
ಹೀಗೆ ಈ ಚಾಟ್ ವಿಂಡೋಗಳು ತಮ್ಮಲ್ಲಿನ ವಿಸೃತವಾದ ವರ್ಚುವಲ್ ಪ್ರಪಂಚದಲ್ಲೇ ಹಲವಾರು ರೀತಿಯ ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸಿಕೊಂಡು ನನಗೆ ಬೇಕಾದಷ್ಟು ಜನ ಅಪ್ತರನ್ನು ಹತ್ತಿರ ತಂದುಕೊಟ್ಟಿವೆ. ಕೆಲವೊಂದು ಹೀಗೆ ಹುಟ್ಟಿ ಹಾಗೆ ಸಾಯುತ್ತವೆ, ಇನ್ನು ಕೆಲವು ಎಂದಿಗೂ ಜೀವಂತವಾಗಿರುತ್ತವೆ. ಆ ಕಡೆಯಿರುವ ವ್ಯಕ್ತಿ ಹೇಗೇ ಇರಲಿ ಅವರು ಬಳಸುವ ಸಾಧನಗಳಲ್ಲಿ ಹೆಚ್ಚು ವ್ಯತ್ಯಾಸವಿರದಿದ್ದುದರಿಂದ ಒಂದು ಕಡೆ ಸಮಾನತೆಯ ವಕ್ತಾರನಂತೆ ಕಾಣಿಸಿಕೊಳ್ಳುವ ಈ ಚಾಟ್ ವಿಂಡೋಗಳು ಮೇಲು ನೋಟಕ್ಕೆ ಮನಸ್ಸಿಗೆ ಅನ್ನಿಸಿದ್ದನ್ನೆಲ್ಲ ಹೇಳಿಬಿಡಬಹುದಾದ ವೇದಿಕೆಯನ್ನು ಸೃಷ್ಟಿಸಿದಂತೆ ಕಂಡುಬಂದರೂ ಎಷ್ಟೇ ಮಾಡಿದರೂ ಪದಗಳ ಬಳಕೆಯಲ್ಲೇ ಸೆಣೆಸಬೇಕಾದ ಮಿತಿಯಲ್ಲಿ ಒಂದು ಅವ್ಯಕ್ತವಾದ ಚೌಕಟ್ಟನ್ನು ಹಾಕಿಕೊಂಡುಬಿಡುತ್ತವೆ. ಈ ಚಾಟ್ ಮೆಸ್ಸೇಜುಗಳಲ್ಲಿ ಬಂದು ಹೋಗಬಹುದಾದ ಹಲವಾರು ಸಂದೇಶಗಳೇನೇ ಇದ್ದರೂ ಯಾರಾದರೊಬ್ಬರನ್ನು ಮೊಟ್ಟ ಮೊದಲಬಾರಿಗೆ ಭೇಟಿಯಾಗುವ ಅಥವಾ ಕೊನೆಯಬಾರಿಗೆ ನೋಡಿ ಬೀಳ್ಕೊಡುವ ಸಂವೇದನೆಗಳಲ್ಲಿ ಕೆಟ್ಟದಾಗಿ ಸೋತುಬಿಡುತ್ತವೆ.
ಪ್ರತಿ ದಿನವೂ ಒಂದಲ್ಲ ಒಂದು ಚಾಟ್ ಮೆಸ್ಸೇಜು ಬಂದು ವಿಂಡೋ ಟಾಸ್ಕ್‌ಬಾರ್‌ನಲ್ಲಿ ಬ್ಲಿಂಕ್ ಆಗುತ್ತಲೇ ಇರುವುದು ಈ ವಿಂಡೋನಲ್ಲೇ ಹುಟ್ಟಿ ಆ ಕ್ಷಣದಲ್ಲೇ ಸಾಯಬಹುದಾದ ಸಂಬಂಧದ ಪಲ್ಸ್‌ನ ಹಾಗೆ ಕಂಡುಬರುತ್ತದೆ, ಆದರೆ ಆಗಾಗೆ ಸತ್ತು ಮತ್ತೆ ಹುಟ್ಟುವ ಅವೇ ಸಂಬಂಧಗಳು ನಿಜವಾಗಿಯೂ ಜೀವಂತವಾಗಿರಬೇಕೆಂದು ಶ್ರಮಿಸುವ ನನ್ನಂತಹವರಿಗೆ ಕ್ಷಣ-ಕ್ಷಣಕ್ಕೂ ಬದಲಾಗುವ ಒಂದು ದೊಡ್ಡ ಸವಾಲನ್ನು ಒಡ್ಡುತ್ತವೆ - ಈ ಸವಾಲಿನಲ್ಲಿ ಭಾಗವಹಿಸುವುದು ಹಾಗೂ ಜಯಿಸುವುದು ದಿನನಿತ್ಯದ ಇತರ ಕೆಲಸಗಳಂತೆ ಮಾಮೂಲಿಯಾಗಿಬಿಟ್ಟಿವೆ!