Sunday, August 10, 2025

ಸು ಫ಼್ರಮ್ ಸೋ (ಸುಲೋಚನ ಫ಼್ರಮ್ ಸೋಮೇಶ್ವರ)

ಸು ಫ಼್ರಮ್ ಸೋ, ಪೂರ್ತಿ ಚಲನಚಿತ್ರ ಮರ್ಲೂರು ಮತ್ತು ಸೋಮೇಶ್ವರ, ಈ ಎರಡು ಊರುಗಳಲ್ಲಿ ನಡೆಯುವ ಪ್ರಸಂಗ. ಇದರಲ್ಲಿ, ಹಾಸ್ಯ, ಸಂಭಾಷಣೆ, ಒಂದು ಸಾಮಾಜಿಕ ಪರಿಸರದ ಕಲ್ಪನೆಯ ಮೂಲಕ ಚುಟುಕಾಗಿ ಮಾನವೀಯ ಮೌಲ್ಯದ ಸಂದೇಶವನ್ನು ಕಟ್ಟಿಕೊಡಲಾಗಿದೆ. ಜೊತೆಗೆ, ಒಂದು ಊರಿನ ಪರಿಸರದಲ್ಲಿ, ಮೌಢ್ಯ ಮತ್ತು ದೌರ್ಜನ್ಯ ಹೇಗೆ ಕೆಲಸ ಮಾಡುತ್ತದೆ ಎನ್ನುವುದಕ್ಕೂ ಬೆಳಕು ಚೆಲ್ಲಲಾಗಿದೆ.

ಜೆ.ಪಿ. ತೂಮಿನಾಡು (ಜೆಪಿ) ಎಂದಾಕ್ಷಣ, ಇವರನ್ನೆಲ್ಲೋ ನೋಡಿದ್ದೇವೆಲ್ಲ ಎಂದು ನೆನಪಾಗುವಷ್ಟು ಆತ್ಮೀಯವಾದ ಪರ್ಸನಾಲಿಟಿ ಅವರದ್ದು. ಮುಖದಲ್ಲಿ, ಸಹಜವಾಗಿ ಮುಗ್ದತೆಯನ್ನು ಪ್ರದರ್ಶಿಸುವ ಇವರು, ಕೆಲವೇ ವರ್ಷಗಳ ಹಿಂದೆ, "ಒಂದು ಮೊಟ್ಟೆಯ ಕಥೆ"ಯಲ್ಲಿ ತನ್ನ ಕನ್ನಡ ಉತ್ತರ ಪತ್ರಿಕೆಗೆ 35 ಅಂಕಗಳನ್ನು ಬೇಡುವ ವಿದ್ಯಾರ್ಥಿಯಾಗಿ, ಆ ಚಿಕ್ಕ ಪಾತ್ರದ ಮುಖೇನ ನೋಡುಗರ ಮನದಲ್ಲಿ ಉಳಿಯುವಂತೆ ಮಾಡುವ ಮುಗ್ಧ ಪ್ರತಿಭೆ.

ಈ ಯುವ ಪ್ರತಿಭೆ, ಪಳಗಿದ ರಾಜ್ ಶೆಟ್ಟಿ ಅವರ ಜೊತೆ ಕೈ ಸೇರಿಸಿ, ಬರೆದು ನಿರ್ದೇಶಿಸಿ ನಿರ್ಮಿಸಿದ ಚಿತ್ರವೇ ಸು ಫ಼್ರಮ್ ಸೋ.


ರಾಜ್ ಶೆಟ್ಟಿ ಅವರು ತಮ್ಮ ಸಂದರ್ಶನವೊಂದರಲ್ಲಿ ಹೇಳಿದಂತೆ, ಒಂದು ಸುಂದರವಾದ ಚಿತ್ರಕ್ಕೆ ಮೂಲವೇ, ಸುಂದರವಾದ ಕಥೆ. ಅದರ ಆಂತರ್ಯವನ್ನು, ನೋಡುಗರಿಗೆ ತಲುಪಿಸುವುದೇ ಚಿತ್ರಕಥೆ ಹಾಗೂ ಸಂಭಾಷಣೆ. ಜೆ.ಪಿ. ಈ ವಿಚಾರದಲ್ಲಿ ನೋಡುಗರಿಗೆ ಯಾವುದೇ ಮೋಸವಾಗದಂತೆ ಮೊನಚಾದ ಮತ್ತು ಅಗತ್ಯವಾದ ಸಂಭಾಷಣೆಯನ್ನು ಚಿತ್ರದುದ್ದಕ್ಕೂ ಸೇರಿಸಿದ್ದಾರೆ. ಆದರೆ,  ಅಲ್ಲಲ್ಲಿ ಸಂಭಾಷಣೆಯೇ ಅತಿ ಎನ್ನುವಷ್ಟು ಇದೆ. ಕೆಲವೊಂದು ಕಡೆ ಮೌನಕ್ಕೂ ಅದ್ಯತೆ ಕೊಟ್ಟು, ಆ ಮೂಲಕ ಕಲಾವಿದರ ಮುಖಾಭಿನಯಕ್ಕೆ ಒತ್ತುಕೊಡಬಹುದಿತ್ತು.

ಭಾಷೆ: ಶುದ್ಧ ದಕ್ಷಿಣ ಕನ್ನಡದ್ದು. ನೀವು ಅಲ್ಲಿನ ನೇಟಿವ್ ಪರಿಸರದವರಾಗಿರದಿದ್ದರೆ, ಅರ್ಥ ಮಾಡಿಕೊಳ್ಳಲು ಸ್ವಲ್ಪ ಕಷ್ಟವಾಗುತ್ತದೆ. ಆದರೆ, ಸಬ್ ಟೈಟಲ್ ಇರೋದರಿಂದ ಸಹಾಯವಾದೀತು. ಸಬ್ ಟೈಟಲ್ ಇಂಗ್ಲೀಷ್ ಅನುವಾದ ಇನ್ನಷ್ಟು ಚೆನ್ನಾಗಿರಬಹುದಿತ್ತು. ಇಲ್ಲಿ, ಅನುವಾದಕರಿಗೆ ಖಂಡಿತ ಕಷ್ಟವಾಗುತ್ತದೆ, ಆದರೆ, ಆಯಾ ಮಾತಿನ ತೂಕಕ್ಕೆ ತಕ್ಕಂತೆ ಇಂಗ್ಲೀಷಿನ ಬದಲಾವಣೆಗೆ ಅವಕಾಶವಿದೆ.

ಹಿನ್ನೆಲೆ ಸಂಗೀತ, ಸುಮಾರಾಗಿದೆ. ಕೆಲವೊಂದು ಸನ್ನಿವೇಶಗಳಲ್ಲಿ, ಇನ್ನೂ ಗಂಭೀರ, ರೌದ್ರ, ಕರುಣಾ ರಸಗಳನಾಧರಸಿ, ಇನ್ನಷ್ಟು ಪ್ರಯೋಗಗಳನ್ನು ಮಾಡಬಹುದಿತ್ತು. ಭಾನು ಪಾತ್ರ, ತನ್ನ ನೋವುಗಳನ್ನು ಎಳೆಎಳೆಯಾಗಿ ಬಿಡಿಸುತ್ತಾ ಹೋಗುವಾಗ, ಆ ಭಾವನೆಗಳಿಗೆ ಇನ್ನಷ್ಟು ಒತ್ತನ್ನು ಕೊಟ್ಟು ಆ ಮಾತು, ಅಭಿನಯಗಳನ್ನು "ಭಾರ"ವಾಗಿಸಬಹುದಿತ್ತು. ಹಾಡುಗಳಲ್ಲಿ, ಪ್ರಾಸಕ್ಕೆ ಜೋತು ಬಿದ್ದು, ಒಂದಿಷ್ಟು ಪದಗಳನ್ನು ತುಂಬಿ ಕಸರತ್ತು ಮಾಡಿದ ಹಾಗಿದೆ. ಹಾಸ್ಯವಿರಲಿ, ಗಂಭೀರ ಸನ್ನಿವೇಶವಿರಲಿ - ಒಂದೆರಡು ಸಾಲುಗಳನ್ನು ಹಿನ್ನೆಲೆಯಲ್ಲಿ ಹಾಡಿಸಬಹುದಿತ್ತು. "ಹೂ ತೆರೆಯುತಿದೆ ಹೊರಟಿರುವ ನಸುಕಿನಲಿ, ಹಾತೊರೆಯದೆ ಕುಣಿಯುತಿದೆ ಮನಸಿನಲಿ"... ಅರ್ಧ ಬೆಂದ ಈ ಹಾಡಿನ ಸಾಹಿತ್ಯದಲ್ಲಿ ಬಹಳ ಕಷ್ಟ ಪಟ್ಟು ಪದಗಳನ್ನು ಜೋಡಿಸಿದ ಹಾಗೆ ಕಾಣಿಸುತ್ತದೆ. ಹಾಗೆಯೇ, ಹಿನ್ನೆಲೆ ಸಂಗೀತದಲ್ಲಿ ಉಪಯೋಗಿಸಿದ ವಾದ್ಯ ಮತ್ತು ಅವುಗಳ ಧ್ವನಿಯಲ್ಲಿ ಪಕ್ವತೆ ಇದ್ದಂತೆ ಅನಿಸಲಿಲ್ಲ. ಮದುವೆ ಮನೆಯ ಕುಡಿತದ ಹಾಡು, ಮನದಲ್ಲಿ ನಿಲ್ಲದು. ಒಂದು ಐಟಂ ಸಾಂಗು, ಒಂದು ಫ಼ೈಟು ಇರುವ ಸಿನಿಮಾ ಎನ್ನುವುದಕ್ಕೆ ಇಂಬು ಕೊಡಲಾಗಿದೆಯೇನೋ ಎಂದು ಅನುಮಾನ ಹುಟ್ಟುತ್ತದೆ. ಮೈ ಮುರಿಯುವಂತೆ ಹೊಡೆದಾಡಿಕೊಂಡ ಜನ, ಕೊನೆಗೆ ಎಲ್ಲ ಎದ್ದು ಸರಿ ನಿಲ್ಲುವುದು ನಾಟಕೀಯವಾದಂತೆ ಕಾಣುತ್ತದೆ.

ಹೆಂಡ-ಸರಾಯಿ ಸಹವಾಸ: ನಿಜವಾಗಿ ಜನ ಅಷ್ಟೊಂದು ಕುಡಿಯುತ್ತಾರೆಯೇ? ಒಂದಿಷ್ಟು ಕುಡುಕರು ಇರಬಹುದು. ಊರಿಗೆ ಊರೇ ಟೈಟ್ ಆಗುವ ಇಂಥ ವಾತಾವರಣ, ನಿಜವಾಗಿಯೂ ಇರುವುದಾದರೆ ಅದು ನಮ್ಮ ದುರ್ದೆಸೆ. ಮದುವೆಯ ಮನೆಯ ವಾತಾವರಣವನ್ನು ಕಥೆಯ ಬೆಳವಣಿಗೆಗೆ ಬಳಸಿಕೊಳ್ಳಲಾಗಿದೆಯೋ, ಅಥವಾ ಕ್ಯಾರಕ್ಟರ್ ಬಿಲ್ಡ್ ಮಾಡಲಾಗಿದೆಯೋ ಗೊತ್ತಿಲ್ಲ.

ಈ ಚಿತ್ರದ ಮುಖ್ಯ ಅಂಶ ಎಂದರೆ ಸಹ ಕಲಾವಿದರಿಂದ ಒಳಗೊಂಡ ಕಥಾ ಹಂದರ. ಆ ಪಾತ್ರಗಳೆಲ್ಲವೂ, ಈ ಅಭಿನಯ ತಮ್ಮ ನಿಜವಾದ ಜೀವನದ ಭಾಗ ಎನ್ನುವಂತೆ ಈ ಚಿತ್ರದಲ್ಲಿ ಒಳಗೊಂಡಿರುವುದು ಬಹಳ ಮುಖ್ಯವಾದ ಅಂಶ. ಈ ಹೈಲೈಟ್ ಒಂದರಿಂದಲೇ, ಚಿತ್ರ ಏಕೆ ಇಷ್ಟೊಂದು ಜನಪ್ರಿಯತೆಯನ್ನು ಗಳಿಸಿತು, ಎನ್ನುವುದಕ್ಕೆ ಉತ್ತರ ಕೊಡಬಹುದು. ಅವರೆಲ್ಲರ ಅಭಿನಯ ಸಹಜವಾಗಿದೆ. ಪೋಷಕ ಮತ್ತು ಸಹನಟರ ಪಾತ್ರಗಳಲ್ಲಿ, ಬಾವನಾಗಿ ಪುಷ್ಪರಾಜ್ ಬೋಳಾರ್, ಚಂದ್ರನಾಗಿ ಪ್ರಕಾಶ್ ತೂಮಿನಾಡು, ಸತೀಶನಾಗಿ ದೀಪಕ್ ರೈ ಮತ್ತು ಚಿತ್ರದ ಕಥಾ ನಾಯಕಿ"ಯಾಗಿ ಭಾನು ಪಾತ್ರವನ್ನು ನಿರ್ವಹಿಸಿದ ಸಂಧ್ಯಾ ಅರೆಕೆರೆ ಅವರ ಪಾತ್ರಗಳು ನಿಮ್ಮನ್ನು ಚಿತ್ರ ಮುಗಿದ ನಂತರವೂ ಕಾಡುತ್ತವೆ.

ಆದರೆ, ವಸ್ತ್ರವಿನ್ಯಾಸ (ಕಾಸ್ಟ್ಯೂಮ್) ಮತ್ತು ಮೇಕಪ್‌ಗಳಲ್ಲಿ ಈ ಚಿತ್ರ ಸ್ವಲ್ಪ ಕಡಿಮೆ  ಅಂಕಗಳಿಸುತ್ತದೆ. ಕೆಲವೊಂದು ಫ಼್ರೇಮ್‌ನಲ್ಲಿ 20, 30, 40 ಜನರಿರುವ ಕಡೆ - ಸುಮ್ಮ ಸುಮ್ಮನೇ ಊರಿನವರನ್ನೆಲ್ಲ ಕರೆದು ಕೂರಿಸಿದಂತೆ ಕಂಡುಬರುತ್ತದೆ, ಅವರಿಗೆ ಸರಿಯಾದ ಕ್ಯಾಮೆರಾ ಓರಿಯೆಂಟೇಶನ್ ಕೂಡ ಇರುವಂತೆ ಕಂಡು ಬರುವುದಿಲ್ಲ.

ಕರುಣಾಕರ ಗುರೂಜಿಯ ಪಾತ್ರದಲ್ಲಿ ಇನ್ನಷ್ಟು ಆಳ ಮತ್ತು ಅನುಭವವನ್ನು ನಿರೀಕ್ಷಿಸಿದ್ದೆವು. ರೌದ್ರ, ಕರುಣೆ, ದಯೆ, ಮೊದಲಾದ ಅನುಭವವನ್ನು ಧಾರಾಳವಾಗಿ ತಮ್ಮ ಸಹಜ ಅಭಿನಯದಲ್ಲಿ ಹೆಣೆಯುವ ರಾಜ್ ಶೆಟ್ಟಿ, ಇಲ್ಲಿ ಡೋಂಗಿ ಬಾಬಾ ಆಗಿ ಅಷ್ಟೊಂದು ಪರಿಣಾಮಕಾರಿಯಾಗಿ ಅವರ ನಟನೆ ಕಾಣುವುದಿಲ್ಲ. ಅಸಹಾಯಕತೆಯ ಅವರ ನಗುವಿನಲ್ಲಿ ಏಕತಾನತೆ ಇಲ್ಲದೇ, ಒಂದು ಕಡೆ ಬಾಲಿಶವೂ ಅಲ್ಲ, ಮತ್ತೊಂದು ಕಡೆ ಅನುಭವ ಜನ್ಯ ಅಭಿನಯವೂ ಇಲ್ಲದೇ ಸಪ್ಪೆಯಾಗಿ ಕಾಣುತ್ತದೆ. ರಾಜ್ ಅವರಿಂದ, ಇನ್ನಷ್ಟು ಗಹನವಾದ ಮತ್ತು ಮನೋಜ್ಞವಾದ ಅಭಿನಯವನ್ನು ನಿರೀಕ್ಷಿಸಿದವರಿಗೆ ಸ್ವಲ್ಪ ನಿರಾಸೆಯಾಗಬಹುದು.

ಒಂದು ಭಯವನ್ನು(horror) ಆದರಿಸಿದ ಕಥಾ ಹಂದರದಲ್ಲಿ ಹಾಸ್ಯ ಪ್ರದಾನವಾದ ಕಥೆಯನ್ನು ಜನರಿಗೆ ಉಣಬಡಿಸುವುದು ಅಷ್ಟೊಂದು ಸುಲಭವಲ್ಲ. ಚಿತ್ರದ ಪಾತ್ರಗಳ ಸಹಜವಾದ ಸಂಭಾಷಣೆ, ಜನರಲ್ಲಿ ನಲಿವು ಹುಟ್ಟಿಸಿ, ನಗುವನ್ನು ಸಹಜವಾಗಿ ಮೂಡಿಸುತ್ತದೆ. ಚಿತ್ರದ ಪಾತ್ರಗಳ ಮೇಲೆಯೇ ಫ಼ೋಕಸ್ ಮಾಡಿ, ಚಿತ್ರವನ್ನು ನೋಡುವುದಾದರೆ, ಕೊನೇಪಕ್ಷ ಮೂರು ಸಲವಾದರೂ ಚಿತ್ರವನ್ನು ನೋಡುವಷ್ಟು ಉತ್ತಮ ಅಂಶಗಳಿವೆ. ಎಲ್ಲೂ ಅಶ್ಲೀಲತೆ ಎದ್ದು ಕಾಣುವುದಿಲ್ಲ, ಕೆಲವು ಕಡೆ ಕಂಡರೂ ಸಹಜವಾಗಿ ಬಿಂಬಿತವಾಗಿರುವುದುರಿಂದ ಅದು ಸಹ್ಯವಾಗುತ್ತದೆ. ಈ ಎಲ್ಲ ದೃಷ್ಟಿಯಿಂದ ಪೂರ್ಣ ಪರಿವಾರ ನೋಡಿ ಆನಂದಿಸಬಹುದಾದ ಸಿನಿಮಾ ಇದು ಎನ್ನಬಹುದು.

ಚಿತ್ರದಲ್ಲಿ ಜನರು ಅತಿ ಹೆಚ್ಚು ಇಷ್ಟ ಪಡುವ ಹಾಸ್ಯ ಬೇಕಾದಷ್ಟಿದೆ. ಆದರೆ, ಹೆಣ್ಣಿನ ಮೇಲಿನ ದೌರ್ಜನ್ಯ, ಮದ್ಯ-ಮದಿರೆಯ ಮೇಲಿನ ಯುವ ಜನರ ಅವಲಂಬನೆ, ಒಂದು ಹಳ್ಳಿ-ಊರು-ಜನರ ಪ್ರವೃತ್ತಿ, ಅವರ ತಿಳುವಳಿಕೆ ಹಾಗೂ ಸಾಮಾಜಿಕ ಆರೋಗ್ಯದ ಮೇಲೆಯೂ ಈ ಚಿತ್ರ ಬೆಳಕು ಚೆಲ್ಲುತ್ತದೆ. ಆದರೆ, ಅವೆಲ್ಲ, ಹಾಸ್ಯದ ನೆರಳಿನಲ್ಲಿ ಗೌಣವಾಗಿ ಹೋಗಬಹುದು. ಮಂಗಳೂರು ಪ್ರಾಂತ್ಯಕ್ಕೆ ನೇಟಿವ್ ಅಲ್ಲದವರು ಈ ಚಿತ್ರವನ್ನು ನೋಡಿದರೆ, ಕೆಲವು ಕಡೆ "ಜನ ಹೀಗೂ ಬದುಕುತ್ತಾರೆಯೇ" ಎಂದು ಅಸಹ್ಯವಾಗಲೂ ಬಹುದು. ಎಲ್ಲಿ ಹೋದರೂ, ಬಂದರೂ ನಾವು-ನಮ್ಮವರನ್ನು ಒಂದು ಒಳ್ಳೆಯ ಬೆಳಕಿನಲ್ಲಿ ತೋರಿಸುವ ಆಂತರಿಕ ಜವಾಬ್ದಾರಿ ಎಲ್ಲರ ಮೇಲೆಯೂ ಸಹಜವಾಗಿ ಇರೋದಿಲ್ಲವೇ? ಇಲ್ಲವೆಂದರೆ, ಇತ್ತೀಚಿನ ದಿನಗಳಲ್ಲಿ ಅದ್ಯಾವ ಮದುವೆ ಮನೆ  ಊಟದ ಪಂಕ್ತಿಗಳಲ್ಲಿ, ಹಿಂದೆ ಊಟ ಮಾಡಿದವರ ಎಂಜಲನ್ನು ಒರೆಸದೇ, ಸ್ವಚ್ಛಮಾಡದೇ ಮುಂದಿನ ಪಂಕ್ತಿಯವರಿಗೆ ಊಟಕ್ಕೆ ಹಾಕಬಹುದು? ಹೀಗೆ, (ಜನರಿಗೆ ಕಲ್ಚರ್ ಇಲ್ಲವೇನೋ ಎಂಬುವಂತೆ, )ಊಟಮಾಡಿದ ಟೇಬಲ್ಲನ್ನೂ ನೆಟ್ಟಗೆ ಒರೆಸದೆ ಊಟಕ್ಕೆ ಕೂರುವ ಜನರನ್ನು ಕಂಡರೆ ಅಸಹ್ಯ ಹುಟ್ಟುತ್ತದೆ.

ಛಾಯಾಚಿತ್ರಗ್ರಹಣ: ಎಸ್. ಚಂದ್ರಶೇಖರನ್ ಅವರು, ಕರಾವಳಿಯ ಸೊಬಗನ್ನು ಇನ್ನಷ್ಟು ಸೇರಿಸಬಹುದಿತ್ತು, ಆದರೆ ಅವಕಾಶಗಳು ಕಡಿಮೆ. ಚಿತ್ರದ ಹೆಚ್ಚು ಭಾಗ ಒಂದೆರಡು ಹೊರಾಂಗೀಣ ಫ಼್ರೇಮುಗಳಲ್ಲಿ ನಡೆಯುವುದರಿಂದ ಕ್ಯಾಮೆರಾ ಕಣ್ಣಿಗೆ ಪರಿಸರದ ಸೊಬಗನ್ನು ಅಸ್ವಾದಿಸಲು ಅವಕಾಶ ಕಡಿಮೆ. ಆದರೆ, ಪಾತ್ರಗಳ ಕ್ಲೋಸ್ ಅಪ್, ಚೆನ್ನಾಗಿ ಬಂದಿದೆ. ಜೆ.ಪಿ ಮತ್ತು ಸಂಧ್ಯಾ ಅವರ ಪಾತ್ರಗಳ ಮುಖಾಭಿನಯ, ಕೆಲವೊಂದು ಭಾವನೆಗಳ ಬಣ್ಣನೆ ಇನ್ನಷ್ಟು ಗಾಢವಾಗಬಹುದಿತ್ತು. ಹತ್ತಿರದಿಂದ ಸೆರೆಯಾದ ಮುಖಗಳಲ್ಲಿ, ಕೆಲವು ಕಡೆ, ನೆರಳು-ಬೆಳಕನ್ನು ಉಪಯೋಗಿಸಿ ಪರಿಸ್ಥಿತಿಯ ಗಂಭೀರತೆಯನ್ನು ಇನ್ನಷ್ಟು ಗಟ್ಟಿಗೊಳಿಸಬಹುದಿತ್ತು.

ರವಿಯಣ್ಣ: ಈ ಪಾತ್ರದಲ್ಲಿ ಶನೀಲ್ ಗೌತಮ್ ಅವರ ಸಹಜ ಅಭಿನಯ, ಮಾತು, ಹಾವ-ಭಾವ ಪಾತ್ರಕ್ಕೆ ಹೇಳಿ ಮಾಡಿಸಿದಂತಿದೆ. ಪ್ರತಿ ಊರಿಗೆ ಒಬ್ಬ ರವಿಯಣ್ಣ ಇರಬೇಕು ಎನ್ನುವಂತೆ ಅವರು ತಮ್ಮ ಅಭಿನಯದ ಮೂಲಕ ತೋರಿಸಿಕೊಟ್ಟಿದ್ದಾರೆ. ಈ ಕಥೆಗೆ ಜೆಪಿ ಮತ್ತು ಶನೀಲ್ ಅವರು ಎರಡು ಮುಖ್ಯ ಆಧಾರ ಸ್ಥಂಭಗಳು ಎನ್ನಬಹುದು. 

ಒಂದು ಮನೋಜ್ಞ ಕಥೆಯನ್ನು ಆಧರಿಸಿ, ಜೆಪಿ ತೂಮಿನಾಡು, ಒಂದು ಒಳ್ಳೆಯ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಒಬ್ಬ ಉದಯೋನ್ಮುಖ ನಿರ್ದೇಶಕ ಮತ್ತು ಕಲಾವಿದನಾಗಿ ಜೆಪಿ ಸಂಪೂರ್ಣ ಅಂಕ ಗಿಟ್ಟಿಸಿದ್ದಾರೆ. ರಾಜ್ ಅವರು 2017 ರಲ್ಲಿ ಒಂದು ಮೊಟ್ಟೆಯ ಕಥೆಯ ಮೂಲಕ ಕನ್ನಡಿಗರನ್ನು ತಲುಪಿದಂತೆ, ಜೆಪಿ ಅವರು ಈ ಚಿತ್ರ, ಕತೆ ಮತ್ತು ನಿರ್ದೇಶನದ ಮೂಲಕ ಕನ್ನಡಿಗರಿಗೆ ಬಹಳ ಆತ್ಮೀಯರಾಗುತ್ತಾರೆ. ಇವರಿಂದ ಇನ್ನಷ್ಟು ಪ್ರಬುದ್ಧತೆಯ ಚಿತ್ರಗಳನ್ನು ನಿರೀಕ್ಷಿಸಿಸಬಹುದು.

No comments: