ನಾನು ಇಷ್ಟೊಂದು ಒಳ್ಳೆಯವನಾಗಬಾರದಿತ್ತು!
'ನೋಡಿದ್ರಾ ಎಂಥಾ ಕೊಬ್ಬು ಇವನಿಗೆ, ತನ್ನನ್ನು ತಾನೇ ಒಳ್ಳೆಯವನೆಂದು ಸಾರಿ ಕೊಳ್ಳುತ್ತಿದ್ದಾನಲ್ಲಾ' ಅಂತ ಅಂದುಕೋತೀರೋ, ಅಂದುಕೊಳ್ಳಿ, ನನಗೇನಂತೆ!?
ನಾನು ಸಾಗರದಲ್ಲಿ ಐದು ವರ್ಷ ರೂಮು ಮಾಡಿಕೊಂಡು ಇದ್ದಿರುವಾಗ, ನನಗೆ ರೂಮ್‌ಮೇಟ್‌ಗಳಾಗಿ, ನೆರೆಹೊರೆಯವರಾಗಿ ಸಿಕ್ಕವರಲ್ಲಿ ನನ್ನ ಹಾಗಿನ ವಿದ್ಯಾರ್ಥಿಗಳು ಅತಿ ಕಡಿಮೆ, ಬದಲಿಗೆ ಖಾಸಗೀ ಬಸ್ಸ್‌ಗಳ ಡ್ರೈವರುಗಳು, ಕಂಡಕ್ಟರುಗಳು, ಗಜಾನನ ಸಾರಿಗೆ ಸಂಸ್ಥೆಯ ಸಿಬ್ಬಂದಿಗಳು (ಮೆಕ್ಯಾನಿಕ್, ಇತ್ಯಾದಿ), ಪಿ.ಡಬ್ಲು.ಡಿ ಗ್ಯಾಂಗ್‌ಮನ್‌ಗಳು (ಗ್ಯಾಂಗ್‌ಮನ್ ಅಂದ್ರೆ ಕೆಲಸಗಾರರ ಮುಖ್ಯಸ್ಥ ಅನ್ನೋ ಅರ್ಥದಲ್ಲಿ), ಟೈಲರ್‌ಗಳು ಮುಂತಾದವರು ನನ್ನ ದೋಸ್ತರು. ಕಾಲೇಜು ಮುಗಿಯುತ್ತಿದ್ದಂತೆ ಇವರ ಜೊತೆಯಲ್ಲಿ ಅಲ್ಲಿಲ್ಲಿ ತಿರುಗಾಡುವುದೇನು, ಹೊಟೇಲಿಗೆ ಹೋಗುವುದೇನು, ನನ್ನ ಸ್ವಾತ್ರಂತ್ರ್ಯವನ್ನು ಎಂಥವರೂ ಕರುಬುವ ಹಾಗಿದ್ದೆ. ಈ ಜೊತೆಗಾರರಿಗೆ ತರಾವರಿ ಹವ್ಯಾಸಗಳು, ಹುಡುಗಿಯರ ಹುಚ್ಚೇನು, ಬೀಡಾ, ಸಿಗರೇಟು, ಮಧ್ಯಪಾನದ ವ್ಯಸನವೇನು, ಯಾವುದಕ್ಕೂ ಎಲ್ಲೂ ಕಡಿಮೆ ಇರಲಿಲ್ಲ. ಇಂತಹ ವಾತಾವರಣದಲ್ಲಿ ನಾನು ಐದು ವರ್ಷ ಬೆಳೆದಿದ್ದನ್ನು ನೆನಸಿಕೊಂಡರೆ ಇಷ್ಟು ಹೊತ್ತಿಗೆ ಕೆಟ್ಟು ಕುಲಗೆಟ್ಟು ಹೋಗಬೇಕಿತ್ತು ಆದರೆ ಇವತ್ತಿಗೂ ನಾನು ಒಂದು ಸಿಗರೇಟನ್ನೂ ಬಾಯಿಗೆ ಇಟ್ಟವನಲ್ಲ, ಮದ್ಯಪಾನವನ್ನು ಮೂವತ್ತು ವರ್ಷದ ಮೇಲೆ ಮಾಡಿದವನು, ಹಾಗೂ ಹೆಣ್ಣು ಮಕ್ಕಳು ಅಂದ್ರೆ ಅಪಾರ ಸಂಕೋಚವೇ!
ಹಾಗಂತ ನನ್ನ ಇಬ್ಬರು ಅಣ್ಣಂದಿರು ತಮ್ಮ ಊರಿನ ಅಗಸೀ ಬಾಗಿಲನ್ನು ಬಿಟ್ಟು ಈವರೆಗೆ ಎಲ್ಲೂ ಹೋಗದಿದ್ದರೂ, ಅವರು ಆಡದ ಆಟವಿಲ್ಲ - ಮಾಡದ ಮಾಟವಿಲ್ಲ, ಚಲಿಸುವುದನೆಲ್ಲವನ್ನೂ ತಿಂದು, ಕುಡಿಯುವುದನ್ನೆಲ್ಲ ಕುಡಿದು, ಸುಡುವುದನೆಲ್ಲವನ್ನೂ ಸುಟ್ಟಿದ್ದಾರೆ! (ಉತ್ಪ್ರೇಕ್ಷೆ)
ಸರಿ, ನಾನು ಇಷ್ಟು "ಒಳ್ಳೆಯವ"ನಾಗಿರುವುದರ ಗುಟ್ಟೇನೋ ಎಂದು ಯೋಚಿಸುತ್ತಿದ್ದ ನನಗೆ ಮೊನ್ನೆ-ಮೊನ್ನೆ ತಾನೇ ಉತ್ತರ ಹೊಳೆಯಿತು. ನನ್ನ ಸ್ನೇಹಿತನೊಬ್ಬ ಒಂದು ಲೇಖನವನ್ನು ತಂದುಕೊಟ್ಟ, ಅದರ ಸಾರ ಹೀಗಿತ್ತು - ದೇವರು ಕರುಣಾಮಯಿ, ಆದರೂ ನಾವು ನಮಗೆ ಬೇಕಾದುದನ್ನು ಬೇಡಲೇ ಬೇಕು, ಕೊಡುವುದೂ ಬಿಡುವುದೂ ಅವನಿಗೆ ಬಿಟ್ಟದ್ದು, ಮುಂತಾಗಿ. ನನ್ನ ಅಮ್ಮ ನನಗೆ ಚಿಕ್ಕವನಿರುವಾಗ ದೇವರ ಮುಂದೆ ಕುಳಿತು ಬೇಡುವುದಕ್ಕೆ ಹೇಳಿಕೊಟ್ಟದ್ದು ಒಂದೇ ಮಾತು 'ದೇವರೇ ನನಗೆ ಒಳ್ಳೇ ಬುದ್ಧಿ ಕೊಡಪ್ಪಾ!', ಹೀಗೆ ಸುಮಾರು ಹದಿನೈದು ವರ್ಷ (ಅಂದ್ರೆ ಹತ್ತನೇ ಕ್ಲಾಸು ಪಾಸಾಗಿ ಊರು ಬಿಟ್ಟು ಸಾಗರ ಸೇರುವವರೆಗೆ) ಪ್ರತಿ ನಿತ್ಯ ಎಡಬಿಡದೇ ಬೇಡಿದೆನೆಂತಲೋ ಏನೋ ನನಗೆ ಈ ಬುದ್ಧಿ!
ನನ್ನ ಅಪ್ಪ-ಅಮ್ಮ ಇಬ್ಬರೂ ಮೇಷ್ಟ್ರು (ನನಗೆ ಕೊರೆಯುವ ಕಲೆ ಎಲ್ಲಿಂದ ಬಂದಿತೆಂದುಕೊಂಡಿರಿ?), ಅಮ್ಮ ಹೇಳೋ ಒಂದು ಮಾತು ಯಾವಾಗಲೂ ನನ್ನ ನೆನಪಿನಲ್ಲಿರುತ್ತೆ - 'ನೋಡೋ, ಕೆಟ್ಟ ಗುಣ ಅನ್ನೋದು ಬೆಂಕಿ ಇದ್ದ ಹಾಗೆ, ಅದು ತಾನು ಇರೋ ಜಾಗವನ್ನೇ ಮೊದಲು ಸುಡೋದು!'
ನನ್ನಮ್ಮ ನನಗೆ ಯಾವಾಗಲೂ 'ಚಿರಂಜೀವಿ ...ನಿಗೆ ನನ್ನ ಆಶಿರ್ವಾದಗಳು' ಅಂತಾನೇ ಪತ್ರ ಬರೆಯೋಳು, ನಾನು ಮದುವೆಯಾದ ನಂತರ ಬರೆದ ಮೊದಲ ಪತ್ರದಲ್ಲಿ 'ಶ್ರೀ ...ನಿಗೆ ನನ್ನ ಆಶಿರ್ವಾದಗಳು' ಎಂದು ಶುರು ಮಾಡಿದ್ದಳು! ನಾನು 'ಏನಮ್ಮಾ, ನಾನು ಮದುವೆ ಆದಮೇಲೆ ಚಿರಂಜೀವಿ ಆಗೋದು ಬ್ಯಾಡಾ ಅಂತ ನಿರ್ಧಾರ ಮಾಡಿದ ಹಾಗಿದೆ...' ಎಂದು ನಕ್ಕು ಕೇಳಿದಾಗ, 'ಹಂಗಲ್ವೋ, ನಿನ್ನ ಮದುವೆ ಆದ ಮೇಲೆ ನಿನಗೆ ನಿನ್ನ ಕುಟುಂಬ, ಪರಿವಾರ ಮೊದಲು ಬರುತ್ತೆ, ನೀನು ಒಬ್ಬ ಸಂಸಾರಸ್ಥನಾಗಿದ್ದೀಯೆ...ಉಳಿದವರಿಗೆ ಮರ್ಯಾದೆ ಕೊಡೋ ಹಾಗೆ ನಿನಗೂ ಮರ್ಯಾದೆ ಸಲ್ಲ ಬೇಕು, ನಾನೇ ಪತ್ರ ಬರೀಲಿ, ಇನ್ಯಾರೇ ಬರೀಲಿ, ಶ್ರೀ ಎಂದೇ ಬರೀ ಬೇಕು' ಎಂದು ಸೀರಿಯಸ್ಸಾಗಿ ಉತ್ತರ ಕೊಟ್ಟಳು.
ಹಳ್ಳಿಯಲ್ಲಿ ಹುಟ್ಟಿ ಬೆಳೆದ ಹೆಣ್ಣು ಮಗಳಿಗೆ ಇಂತಾ ಬುದ್ಧಿ ಹೆಂಗೆ ಬಂತು ಎಂದು ನನಗೇ ಆಶ್ಚರ್ಯವಾಗಿದೆ.
ನೀವೇ ಹೇಳಿ ಇಂಥಾ ಅಮ್ಮನ ಮಗನಾಗಿ ನಾನು ಕೆಟ್ಟವನಾಗೋದಕ್ಕೆ ಹೇಗೆ ಸಾಧ್ಯ?
ಆದರೆ ಹೊರಗಿನ ಬದುಕು ಹಲವಾರು ಸವಾಲುಗಳನ್ನು ಒಡ್ಡುತ್ತೆ - ನೀವು ಟ್ರ್ಯಾಫಿಕ್‌ನಲ್ಲಿ ಸಿಕ್ಕಿ ಹಾಕಿಕೊಂಡಾಗ ನಿಮಗೆ ಸಿಟ್ಟು ಬರಿಸುವ ಅಕ್ಕ-ಪಕ್ಕದ ಡ್ರೈವರುಗಳಿರಬಹುದು, ಆಫೀಸ್‌ನಲ್ಲಿ ನಿಮ್ಮ ತಲೆ ತಿನ್ನೋ ಸಹೋದ್ಯೋಗಿಗಳಿರಬಹುದು, ಮನೆಯಲ್ಲಿ ನೀವು ಅದೇ ತಾನೇ ಹಾಕಿದ ಬಿಳಿ ಅಂಗಿಯ ಮೇಲೆ ಕೆಚಪ್ ಸಿಂಪಡಿಸೋ ಮಕ್ಕಳಿರಬಹುದು, ನಿಮ್ಮ ಕಣ್ಣ ಮುಂದೆಯೇ ನಿಮ್ಮನ್ನು ಏಮಾರಿಸೋ ವರ್ತಕರಿರಬಹುದು...ಇವರೆಲ್ಲರಿಗೂ ತೋರಿಸೋದಕ್ಕೆ ಒಂದು ಮುಖವಾಡವನ್ನು ಧರಿಸಲೇ ಬೇಕಾಗುತ್ತೆ. ಎಲ್ಲೀವರೆಗೆ ನೀವು ಈ ಮುಖವಾಡಗಳ ಹಿಂದಿನ ಮರ್ಮವನ್ನು ಅರಿತುಕೊಳ್ಳುವ ಪ್ರಯತ್ನ ಮಾಡ್ತೀರೋ ಅಲ್ಲೀವರೆಗೆ ನಾನು ಕೆಟ್ಟವನೆಂದೂ ಆಗೋದಕ್ಕೆ ಸಾಧ್ಯವೇ ಇಲ್ಲ!
ಸರಿ, ನಾನು ದೊಡ್ಡ ಮನುಷ್ಯ, ಬಹಳ ಒಳ್ಳೆಯವನು ಎಂದೆಲ್ಲಾ ಬೊಗಳೆ ಕೊಚ್ಚಿಕೊಂಡೆನಲ್ಲವೇ - ಆದರೆ, ಕೆಲವು ಪ್ರಶ್ನೆಗಳಿಗೆ ಉತ್ತರ ಸಿಗುವವರೆಗೆ ಈ 'ಒಳ್ಳೆಯ-ಕೆಟ್ಟದ್ದರ' ಜಿಜ್ಞಾಸೆನಿಲ್ಲುವುದಿಲ್ಲ: ನಾನು ಎಷ್ಟೇ ಹೊತ್ತು ನಿದ್ರೆ ಮಾಡಿದರೂ, ಮದ್ಯಪಾನದಿಂದ ಮೈಲು ದೂರವಿದ್ದು ಎಲ್ಲಿ-ಹೇಗೇ ಇದ್ದರೂ ನನ್ನ ಕಣ್ಣುಗಳು ಕುಡುಕರ ಹಾಗೆ ಯಾವಾಗಲೂ ಕೆಂಪಾಗಿರುತ್ತವೆ - ನಾನು ತೋರಿಸಿದ ಯಾವ ಕಣ್ ಡಾಕ್ಟ್ರಿಗೂ ಇದಕ್ಕೆ ಉತ್ತರ ಈ ವರೆಗೆ ದೊರಕಿಲ್ಲ. ಇನ್ನು ಎರಡನೆಯದಾಗಿ ನನಗೆ ನಾಟಕಗಳಲ್ಲಿ ಪಾತ್ರ ಮಾಡುವ ಅವಕಾಶ ಸಿಕ್ಕಲ್ಲೆಲ್ಲ ಈ ವರೆಗೆ ಕುಡುಕನ, ಕೊಲೆಗಡುಕನ ಪಾತ್ರಗಳೇ ಏಕೆ ಸಿಗುತ್ತವೋ? ಯಾರಿಗೆ ಗೊತ್ತು?
ನನ್ನ ಸ್ನೇಹಿತರು ಕೆಲವರು ನನ್ನನ್ನು ಕುರಿತು 'ನೀನು ಹಿಂಗೆ ಗಾಂಧಿಯಾಗಿ ಬದುಕೋದೇ ದಂಡಕ್ಕೆ' ಎಂದು ಅಪಹಾಸ್ಯ ಮಾಡಿದಾಗಲೆಲ್ಲ, ನನ್ನ ಸಹನೆಯನ್ನು ನನ್ನ ದೌರ್ಬಲ್ಯವೆಂದು ತಮ್ಮಷ್ಟಕ್ಕೇ ತಾವೇ ದೊಡ್ಡ ಸಿದ್ಧಾಂತವನ್ನು ಮಾಡಿಕೊಂಡು ನನ್ನೊಡನೆ ಜಗಳ ಕಾಯ್ದು ಗೆದ್ದಂತೆ ಬೀಗಿದ ಬಾಯ್‌ಬಡುಕರ ಮುಂದೆ, ಪಕ್ಕದ ಮನೆಯ ಹುಡುಗರು ನಾಲ್ಕಾರು ಜನ ಒಟ್ಟಾಗಿ ನನ್ನ ಅಣ್ಣನನ್ನು ಹೊಡೆದು ಹಾಕುತ್ತಿದ್ದಾಗ ನಾನು ಸುಮ್ಮನೇ ಅಳುತ್ತಾ ನಿಂತ ಸಂದರ್ಭದಲ್ಲಿ, ಅಹಮದಾಬಾದಿನ ರೈಲು ನಿಲ್ದಾಣದಲ್ಲಿ ರಿಸರ್‌ವೇಷನ್ ಕೊಡಿಸುತ್ತೇನೆಂದು ಕಣ್ಣೆದುರೇ ಮೋಸ ಮಾಡಿ ಯಾವನೋ ಓಡಿಹೋಗುತ್ತಿದ್ದಾಗ, ಸಿನಿಮಾ ನೋಡಿಕೊಂಡು ನನ್ನ ಅಕ್ಕನ ಜೊತೆ ಬರುತ್ತಿರುವಾಗ ಯಾವನೋ ಒಬ್ಬ ಅವಳ ಜಡೆಯನ್ನು ಎಳೆದು ಕಿಚಾಯಿಸಿದ ಸಂದರ್ಭದಲ್ಲಿ ನಾನು ಕೆಟ್ಟವನಾಗಬೇಕಿತ್ತು ಎಂದು ಬಲವಾಗಿ ಅನಿಸಿದೆ, ಆದರೆ ಏನು ಮಾಡಲಿ, ವರ್ಷಗಳ 'ದೇವರೇ ನನಗೆ ಒಳ್ಳೇ ಬುದ್ಧಿ ಕೊಡಪ್ಪಾ!' ಎಂಬ ಮೊರೆ ಹಾಗೂ ಅಗಾಧವಾದ ಅದರ ಪರಿಣಾಮ ನನ್ನನ್ನು ಇವತ್ತು ಈ ಸ್ಥಿತಿಯಲ್ಲಿರಿಸಿದೆ.
ಪ್ರಪಂಚದ ಒಳ್ಳೆಯವರಿಗೆಲ್ಲ ಜಯವಾಗಲಿ!