About Raj
ರಾಜ್ ಬಗ್ಗೆ ಬರೀದೇ ಇದ್ರೆ ಹ್ಯಾಗೆ!?
ನಿನ್ನೆ ರಾಜ್‌ಕುಮಾರ್ ತೀರಿಕೊಂಡ್ರೂ ಅಂಥ ಗೊತ್ತಾದ ತಕ್ಷಣ ನನಗೆ ಗೊತ್ತಿರೋ ಕನ್ನಡ ಅಂತರ್ಜಾಲ ತಾಣಗಳೆಲ್ಲ busy ಆಗಿ ಹೋದವು. (ಈ busy ಅನ್ನೋ ಪದಕ್ಕೊಂದು ಕನ್ನಡ ಪದ suggest ಮಾಡ್ತೀರಾ? ನನಗೆ ಗೊತ್ತಿರೋ ಹಾಗೆ - ಕಾರ್ಯ ನಿರತ, ಅತಿಯಾದ ಕೆಲಸ, ಮಿತಿ ಮೀರಿದ ಕೆಲಸ, ವಿಪರೀತ ಚಟುವಟಿಕೆ, ಇತ್ಯಾದಿಗಳನ್ನು ಬಳಸಿದಾಗ ಸಮಾಧಾನವೇ ಆಗೋದಿಲ್ಲ, ಒಂಥರಾ ಬಹಳ ನೀರಡಿಸಿ ದಾಹವಾದಾಗ ನೀರಿನ ಬದಲು ಕೋಕ್ ಕುಡಿದಂತೆ ದಾಹ ಭಂಗವಾಗುತ್ತಿದೆ!). ಸರಿ, ನಾನೂ ರಾಜ್‌ಕುಮಾರ್ ಅವರ ಬಗ್ಗೆ ಬರೆಯಲೇ ಬೇಕು ಎಂದು ಸಂಕಲ್ಪ ತೊಟ್ಟಿದ್ದೇನೆ, ಆದರೆ ಉಳಿದವರು ಬರೆದವರಿಗಿಂತ ಭಿನ್ನವಾಗಿ ಬರೆದರೆ ಮಾತ್ರ ನೀವು ಈ ಬರಹವನ್ನು ಮೆಚ್ಚೋದು ಅಂತ ಚೆನ್ನಾಗಿ ಗೊತ್ತು, ಈಗಾಗ್ಲೇ ನಿಮಗೆ ಗೊತ್ತಿರೋ ವಿಷ್ಯಾನ ಮತ್ತೊಮ್ಮೆ ಹೇಳಿ ಏನು ಪ್ರಯೋಜನ, ನೀವೇ ಹೇಳಿ.
ನಾನು ರಾಜ್‌ಕುಮಾರರ ಕಟ್ಟಾ ಅಭಿಮಾನಿ, ಒಬ್ಬ ನಟನಾಗಿ ಅವರನ್ನು ನಾನು ಬಹಳ ಎತ್ತರದಲ್ಲಿಡುತ್ತೇನೆ, ಒಂದೇ ಮಾತಿನಲ್ಲಿ ಹೇಳೋದಾದರೆ ಅವರು ಕನ್ನಡ ಚಿತ್ರರಂಗ ಕಂಡ ಅತ್ಯುನ್ನತ ನಟ. ನಮ್ಮೂರಿನ ಟೂರಿಂಗ್ ಟಾಕೀಸ್‌ಗಳಲ್ಲಿ ಪ್ರತೀ ಸಿನಿಮಾಕ್ಕೆ ಒಂದೊಂದು ರೂಪಾಯಿಕೊಟ್ಟು, ೧೯೮೦ ರಿಂದ ೧೯೯೦ ರವಗೆ ಎಲ್ಲ ಸಿನಿಮಾಗಳನ್ನೂ ನೋಡಿದ್ದೇನೆ, ನಂತರ ಬಂದ ಸಿನಿಮಾಗಳನ್ನೂ ತಪ್ಪಿಸಿಲ್ಲ.
ನಾನೂ ನಮ್ಮ ಅಣ್ಣ ಇಬ್ಬರೂ ರಾಜ್‌ಕುಮಾರ್ ಅಭಿಮಾನಿಗಳು, ಆದರೆ ನಮ್ಮ ತಾಯಿಗೆ 'ಅವನನ್ನು ಕಂಡರೆ ಅಷ್ಟಕಷ್ಟೇ'! ಎಷ್ಟೋ ಸಾರಿ ರೇಡಿಯೋದಲ್ಲಿ ರಾಜ್‌ಕುಮಾರ್ ಹಾಡು ಕೇಳಿದಾಕ್ಷಣ 'ಇವನೊಬ್ಬ ದೊಡ್ಡದಾಗಿ ಬಾಯಿಬಿಟ್ಟ, ನೋಡು' ಅಂತ ಬೇಕಾದಷ್ಟು ಸಲ ರಾಜ್‌ಕುಮಾರ್‌ನ್ನು ಹೀಯಾಳಿಸಿದ್ದಿದೆ. ನಮ್ಮ ತಾಯಿಗೆ ಸುಮಾರು ಈಗ ಎಪ್ಪತ್ತರ ಹತ್ತಿರ ವಯಸ್ಸು, ಆಗಿನ ಕಾಲದಲ್ಲಿ ಪಿ.ಬಿ. ಶ್ರೀನಿವಾಸ್‌ರವರ ಕಂಠಕ್ಕೆ ಮಾರು ಹೋದ ಅನೇಕರಿಗೆ ರಾಜ್‌ಕುಮಾರ್ ಸಂಗೀತ ರುಚಿಸಿರಲಿಕ್ಕಿಲ್ಲ. ಎಮ್ಮೇ ಹಾಡಿನಿಂದ ಮುಂದೆ ಬಂದ ರಾಜ್ ಸಂಗೀತದಲ್ಲಿ ಮಹಾನ್ ಸಾಧನೆಯನ್ನೇ ಮಾಡಿದರು, ನೀವು ಎಂಭತ್ತರ ದಶಕದ ಅವರ ಹಾಡುಗಳನ್ನು ಅವರ ನಂತರದ ಹಾಡುಗಳಿಗೆ ಹೋಲಿಸಿದರೆ ನಿಮಗೇ ಗೊತ್ತಾಗುತ್ತದೆ ಅವರ ಕಂಠ ಸಿರಿಯಲ್ಲಿನ ಬದಲಾವಣೆ. ನಮ್ಮ ಅಮ್ಮನ ನಿಲುವು ಇಂದಿಗೂ ಬಹಳಷ್ಟು ಬದಲಾದಂತೇನಿಲ್ಲ, ಆದರೂ ಬಂಗಾರದ ಮನುಷ್ಯ, ಕಸ್ತೂರಿ ನಿವಾಸ ಇಂದಿಗೂ ಅವರ ಮೆಚ್ಚಿನ ಚಿತ್ರಗಳು. ಸಿನಿಮಾ ನಿರ್ದೇಶಕ-ನಿರ್ಮಾಪಕರ ಮಾತಿನಂತೆ ೫೫-೬೦ ವರ್ಷದ ರಾಜ್ 'ಹಾವಿನ ಹೆಡೆ' ಚಿತ್ರದಲ್ಲಿ ೧೮ ವರ್ಷದ ಸುಲಕ್ಷಣಳ ಜೊತೆ My name is Raj, what is your name please? ಎಂದು ಹಾಡಿದರೆ ನನ್ನ ಅಮ್ಮನಂಥವರಿಗೆ ಹೇಗೆ ತಾನೆ ರುಚಿಸೀತು ನೀವೇ ಹೇಳಿ. (ಇನ್ನು ರಾಜ್ ಅವರ ಕುಣಿತಕ್ಕೂ ಬೇರೆ ಬೇರೆ ಕಾಮೆಂಟ್‌ಗಳನ್ನು ಹೇಳಬಹುದು, ಅನಂತ್ ನಾಗ್ ಹಾಡಿನಲ್ಲಿ ಅವರು ಒಂದು ಕಡೆಯಿಂದ ಮತ್ತೊಂದು ಕಡೆ ಓಡೋದೇ ನೃತ್ಯವಾದರೆ, ರಾಜ್ ಹಾಡುಗಳಲ್ಲಿ ಕುಣಿದ ಹಾಗೆ ಮಾಡುತ್ತಾರೆ ಅಂತ).
ರಾಜ್ ಇಮೇಜ್‌ಗೆ ಸಿಕ್ಕಿ ಹಾಕ್ಕೊಂಡಿದ್ದು ಇತ್ತೀಚೆಗೆ ಅಂಥಾ ಕಾಣ್ಸುತ್ತೆ - ಮೊದಲೆಲ್ಲ ಖಳನಾಯಕನ ಕೈಯಲ್ಲಿ ಒದೆ ತಿನ್ನೋರು, ಆದ್ರೆ ಇತ್ತೀಚೆಗೆ ಯಾರೋ ಅವರನ್ನು (ಸಿನಿಮಾದಲ್ಲಿ) ತುಳಿದರು ಅನ್ನೋದು ದೊಡ್ಡ ವಿಷಯವಾಗಿತ್ತು. ನಾನು ೧೯೭೯ ರಲ್ಲಿ ಬೆಂಗಳೂರಿನ ಉಮಾ ಟಾಕೀಸಿನಲ್ಲಿ 'ನಾನೊಬ್ಬ ಕಳ್ಳ' ಚಿತ್ತ್ರವನ್ನು ನೋಡಿದ್ದೆ, ಅಲ್ಲಿನ ಅವರ ಕಳ್ಳನ ಇಮೇಜ್ ಅವರಿಗೆ ತುಂಬಾ ಕಷ್ಟ ಕೊಟ್ಟಿತ್ತು, ಆದರೂ ಆ ಪಾತ್ರಕ್ಕೆ ಸಮರ್ಥನೆ ನೀಡಿದಂತವರು ರಾಜ್. ಆದರೂ ರಾಜ್‌ನ್ನು ಬರೀ (ಅಥವಾ ಹೆಚ್ಚಾಗಿ) ನಾಯಕನ ಪಾತ್ರದಲ್ಲಿ ನಿರೀಕ್ಷಿಸಿದ್ದು ಅವರ ಅಭಿಮಾನಿ ದೇವರುಗಳ ತಪ್ಪು - ಒಬ್ಬ ನಟ ಅರವತ್ತು ವಸಂತಗಳನ್ನು ದಾಟಿದ ಮೇಲೂ ಪೋಷಕನ ಪಾತ್ರಗಳಲ್ಲಿ ಬರುವುದನ್ನು ನಾವು ಏಕೆ ಒಪ್ಪುವುದಿಲ್ಲ - ಪೋಷಕನ ಪಾತ್ರವೆಂದರೆ ಪೋಷಕ-centric ಪಾತ್ರವಲ್ಲ, ನಿಜವಾದ ಅರ್ಥದಲ್ಲಿ ತೆರೆಯ ಮೇಲೆ ಅಲ್ಪಕಾಲ ಬಂದು ಹೋಗುವಂತದ್ದು. ಅವರು ತಮ್ಮ ಕಂಠವನ್ನು ಇತರರಿಗೆ ಬಳುವಳಿಯಾಗಿ ಕೊಟ್ಟಿಲ್ಲ, ಹಿನ್ನೆಲೆ ಹಾಡುಗಳಲ್ಲಿ ಅಗೋಚರವಾಗಿ ಹಾಡಿದ್ದನ್ನು ಬಿಟ್ಟರೆ.
ನನಗೆ ಅತ್ಯಂತ ಇಷ್ಟವಾದ ಸನ್ನಿವೇಶಗಳಲ್ಲಿ ಇದೂ ಒಂದು:
ಯಾವುದೋ ಚಿತ್ರದಲ್ಲಿ (ಹೆಸರು ಮರೆತು ಹೋಗಿದೆ), ವಜ್ರಮುನಿ ಮಗುವನ್ನೊಂದನ್ನು ಅಪಹರಿಸಿರುತ್ತಾನೆ...
ರಾಜ್ ಕೇಳುತ್ತಾರೆ 'ಏನೋ ಮಾಡ್ದೇ ಮಗೂನಾ'
ವಜ್ರಮುನಿ 'ಕೊಂದು ಬಿಟ್ಟೆ!'
ರಾಜ್ 'ಆ... ಕೊಂ...ದು...ಬಿಟ್ಟೇ...' ಎಂದು ಹಲ್ಲು ಕಚ್ಚಿ ಹೇಳೋ ದೃಶ್ಯ ತುಂಬಾ ಮಾರ್ಮಿಕವಾಗಿ ಬಂದಿದೆ, ಎಂದೆಂದೂ ನೆನಪಿನಲ್ಲಿರುವಂತದ್ದು.
ರಾಜ್‌ಗೆ ಮುಖ್ಯವಾಗಿ ಅಸ್ಥೆ ಇತ್ತು, ಅವರ ಶಿಸ್ತು, ಅವರು ದೇಹವನ್ನು ಕಾಪಾಡಿಕೊಂಡ ಬಗೆ, ಮನಸ್ಸನ್ನು ನೋಡಿಕೊಂಡ ರೀತಿ ಅವರನ್ನೆಂದೂ ಕೈ ಬಿಡಲಿಲ್ಲ, ಅವರು ತೊಟ್ಟ ಪಾತ್ರಗಳಲ್ಲಿ ಅವರನ್ನು ವಿಶೇಷವಾಗಿ ನಿಲ್ಲಿಸುತ್ತಿದ್ದವು.
ರಾಜ್ ಒಂದು ಸಂಸ್ಥೆಯಂತೆ - ಅವರ ಉನ್ನತಿಯಲ್ಲಿ ಅವರ ಕುಟುಂಬದವರೂ, ಉದಯಶಂಕರ್‌ರಂಥಹ ಪ್ರತಿಭಾನ್ವಿತ ಬರಹಗಾರರೂ, ಆಗಿನ ಕಾಲದ ಕಥೆಗಳೂ, ಪಿ.ಬಿ.ಶ್ರೀನಿವಾಸರ ಕಂಠವೂ, ಕನ್ನಡಿಗರ ಒಲವೂ ಸಮಭಾಗಿಗಳು. ನಾನು ಈ ವರೆಗೆ ಇಬ್ಬರು ನಟರು ತೀರಿಕೊಂಡಾಗ ಕಣ್ಣೀರು ಹಾಕಿದ್ದೇನೆ, ಶಂಕರ್ ನಾಗ್ ಸತ್ತಾಗ ನನಗೆ ಅಪಾರ ದುಃಖವಾಗಿತ್ತು, ಇಂದೂ ಹಾಗೇ ಆಗಿದೆ.
ಕೊನೇ ಮಾತು - ನಮ್ಮ ಕನ್ನಡದಲ್ಲಿ ಅತ್ಯಂತ ಪ್ರೀತಿ ಪಾತ್ರರನ್ನೂ, ದೇವರನ್ನೂ, ದೊಡ್ಡ ಮನುಷ್ಯರನ್ನೂ ಏಕ ವಚನದಲ್ಲಿ ಕರೆಯುವ ಪರಿಪಾಠವಿದೆ, ನಾನು ರಾಜ್‌ಕುಮಾರ್ ನ್ನು ಏಕವಚನದಲ್ಲಿ ಕರೆದಿರೋದು ದಾರ್ಷ್ಟ್ಯ ಅಲ್ಲ, ಅವರ ಬಗ್ಗೆ ಇರೋ ಪ್ರೀತಿ ಅಷ್ಟೇ!