Friday, March 17, 2006

ಎತ್ತಣ ಮಾಮರ ಎತ್ತಣ ಕೋಗಿಲೆ?

ನಾನು ಹೀಗೆ ಮಾಹಿತಿ ತಂತ್ರಜ್ಞಾನದಲ್ಲಿ ಕೆಲಸ ಮಾಡುತ್ತೇನೆಂದು ಯಾವ ಡೆಸ್ಟಿನಿ ಎಲ್ಲಿ ಬರೆದಿತ್ತೋ ಯಾರಿಗೆ ಗೊತ್ತು? ಇಂದು ಹಿಂತಿರುಗಿ ನೋಡಿದರೆ ನಾನು ಬೆಳೆದು ಬಂದ ಬಗೆಯಲ್ಲಿ ಒಂದಲ್ಲ ಒಂದು ರೀತಿಯ ಸುಳಿವು ಸಿಗುತ್ತೆ. ಇಲ್ಲವೆಂದಾದರೆ ಕನ್ನಡ ಮತ್ತು ಇಂಗ್ಲೀಷ್‌ನಲ್ಲಿ ಟೈಪಿಂಗ್ ಕ್ಲಾಸಿಗೆ ಸೇರಿಕೊಂಡು ಜ್ಯೂನಿಯರ್ ಪರೀಕ್ಷೆಗಳನ್ನು ಮುಗಿಸುತ್ತಿದ್ದೆನೇ? ಅಥವಾ ಆಪ್ಟೆಕ್‌ನಲ್ಲಿ ಆಗಿನ ಕಾಲದಲ್ಲಿ ನನ್ನ ಸಹೋದ್ಯೋಗಿಗಳೂ ಮೂಗಿನ ಮೇಲೆ ಬೆರಳಿಡುವಷ್ಟು ಹಣವನ್ನು ಪ್ರತಿ ತಿಂಗಳೂ ಕೊಟ್ಟು ಕೋರ್ಸುಗಳನ್ನು ಮುಗಿಸುತ್ತಿದ್ದೆನೇ?

ಇವೆಲ್ಲವೂ ಕಟ್ಟಿ ಹಾಕಿದ ಬಾಂದವ್ಯವೆಂಬಂತೆ ಬನಾರಸ್ಸಿನಲ್ಲಿ ಭಾರತೀಯ ಸರ್ಕಾರದ ಪ್ರಾಜೆಕ್ಟ್‌ನಲ್ಲಿ ಜ್ಯೂನಿಯರ್ ರಿಸರ್ಚ್ ಫೆಲ್ಲೋ ಆಗಿ ಸೇರಿಕೊಂಡಾಗ ನನಗಾದ ಸಂತೋಷ ಅಪರಿಮಿತ. ಬರೀ ಬೆಂಗಳೂರು, ಮೈಸೂರು, ಶಿವಮೊಗ್ಗಗಳಂತಹ ನಗರಗಳನ್ನು ನೋಡಿದ್ದ ನನಲ್ಲಿ ಕಾಶಿಯಂಥ ಮಹಾ ಪಟ್ಟಣ ಹಲವು ರೀತಿಯ ಸೋಜಿಗಳನ್ನು ಮೂಡಿಸಿತ್ತು. ಕಾಶಿಯಲ್ಲಿನ ನನ್ನ ಬದುಕಿನ ಬಗ್ಗೆ ಬರೆದರೆ ಅದೊಂದು ಮಹಾ ಪುರಾಣವೇ ಆದೀತೇನೋ, ಆದರೂ ಇವತ್ತಿಗೂ ನನ್ನ ಹುಟ್ಟೂರಾದ ಆನವಟ್ಟಿಯನ್ನು ಬಿಟ್ಟರೆ ಕಾಶಿ ಅಥವಾ ಬನಾರಸ್ ಎಂದಿಗೂ ನನಗೆ ಅಪ್ಯಾಯಮಾನ. ಅಲ್ಲಿನ ಬದುಕನ್ನು ನೆನೆದಾಗಲೆಲ್ಲ ಹಲವಾರು ರೀತಿಯ ಸಂತಸಗಳು ನನ್ನ ಮನಸಲ್ಲಿ ಹರಿದಾಡುತ್ತವೆ.

ಬನಾರಸ್ಸಿನಲ್ಲಿ ನನ್ನ ಸುಪರ್ದಿಯಲ್ಲಿ ಮೂರು ಕಂಪ್ಯೂಟರ್‌ಗಳಿದ್ದವು: ಒಂದು, ಇಂಟೆಲ್ ೨೮೬ ಪ್ರೋಸೆಸ್ಸರ್, ಹಾರ್ಡ್ ಡಿಸ್ಕ್ ರಹಿತ, ಐದೂ ಕಾಲು ಇಂಚು ಪ್ಲಾಪಿಯನ್ನು ಮಾತ್ರ ಓದುವಂಥದ್ದು, ಎರಡನೆಯದ್ದು, ಇಂಟೆಲ್ ೪೮೬ ಪ್ರೊಸೆಸ್ಸರ್, ೫೦ ಎಮ್.ಬಿ. ಹಾರ್ಡ್ ಡಿಸ್ಕ್ ಇದ್ದು, ಐದೂ ಕಾಲು ಇಂಚು ಪ್ಲಾಪಿಯನ್ನು ಓದಬಲ್ಲದ್ದು, ಮತ್ತು ಮೂರನೆಯದು HP Magnum Multi RISC Unix ಸಿಸ್ಟಮ್. ಇವೆಲ್ಲದರಲ್ಲಿ ನನಗೆ ೨೮೬ ಕಂಪ್ಯೂಟರ್ ತುಂಬಾ ಮೆಚ್ಚುಗೆಯಾದದ್ದು ಅದರಲ್ಲಿ (ಇದ್ದುದರಲ್ಲಿಯೇ) ಒಳ್ಳೆಯ ಸ್ಪೀಕರ್ ಸಿಸ್ಟಮ್ ಇತ್ತು, ನಮ್ಮ ಪ್ರೊಫ಼ೆಸರ್ ಇಲ್ಲದ ಹಲವಾರು ನಿಶಾಚರ ಘಳಿಗೆಗಳನ್ನು ನಾನು ಇದರ ಮುಂದೆ ಕಳೆದದ್ದು ಇದೆ - ಪ್ರಾಜೆಕ್ಟ್ ಕೆಲಸಕ್ಕು, ಹಾಗೂ ಪ್ಯಾಕ್‌ಮ್ಯಾನ್ ಆಟವಾಡುವುದಕ್ಕೂ, ಇದರಲ್ಲೇ ನಾನು ಅತಿ ಹೆಚ್ಚು ಸ್ಕೋರ್ ಮಾಡಿದ್ದು (ಸ್ಥಳೀಯ ದಾಖಲೆಗಳನ್ನು ಮೀರಿಸಿ!). ಈ ಕಂಪ್ಯೂಟರ್‌ನ ಒಂದು ವಿಶೇಷವೆಂದರೆ ಅದು ಭಯಂಕರ ನಿಧಾನ! ಅದು ನಿಧಾನವಾದರೇನಂತೆ, ಬನಾರಸ್ಸಿನ ಬದುಕಿಗೆ ಅದು ಸರಿಯಾಗೇ ಹೊಂದಿಕೊಂಡಿತ್ತು - ಉದಾಹರಣೆಗೆ ನಾವು ಯಾವುದಾದರೊಂದು ಗ್ರಾಫ್‌ನ್ನು ಪ್ರಿಂಟ್ ಮಾಡಬೇಕಾಗಿದ್ದರೆ, ಈ ಕಂಪ್ಯೂಟರ್‌ಗೆ ಡೇಟಾ ಕೊಟ್ಟು ಸುಮಾರು ೧೫-೧೬ ಸಾರಿ ಎಂಟರ್ ಬಟನ್ ಅನ್ನು ಒತ್ತಿ ಹೋಗಿ ಟೀ ಕುಡಿದು ಸಮೋಸಾ ತಿಂದು ಬರುವುದರೊಳಗೆ ಗ್ರಾಫ್ ರೆಡಿ!

ನಮ್ಮ ೪೮೬ ಕಂಪ್ಯೂಟರ್‌ನಲ್ಲಿ ಇರುವ ಕೈ (Chi) ರೈಟರ್ ಎನ್ನೋ ವರ್ಡ್ ಪ್ರಾಸೆಸ್ಸರ್ ಬಳಸಿ, ಬನಾರಸ್ಸಿನಲ್ಲಿ ದೊರೆವ ಸಂಪನ್ಮೂಲಗಳ ಸಹಾಯದಿಂದ ನಾವು ನಮ್ಮ ರಿಸರ್ಚ್ ಪೇಪರ್‌ಗಳನ್ನು ತಯಾರಿಸಿ ಅದನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಕಟಿಸುವುದೆಂದರೆ ಅದೊಂದು ಮಹತ್ಸಾಧನೆಯೇ ಸರಿ. ನಾನು ಓದಿದ್ದು ಭೌತಶಾಸ್ತ್ರ, ಮಾಡುತ್ತಿದ್ದ ಸಂಶೋಧನೆ ಪಾಲಿಮರ್ ಮೇಲೆ, ಬಳಸುತ್ತಿದ್ದ ತಂತ್ರಜ್ಞಾನ ಕಂಪ್ಯೂಟರ್ ಸಿಮಿಲೇಷನ್ - ಎತ್ತಣ ಮಾಮರ, ಎತ್ತಣ ಕೋಗಿಲೆ. ಮಾಂಟೇಕಾರ್‍ಲೋ ಸಿಮಿಲೇಷನ್ ಮೆಥಡ್‌ನಲ್ಲಿ ನಾನು ನ್ಯೂ ಯಾರ್ಕ್ ಯೂನಿವರ್ಸಿಟಿಯವರನ್ನು ಮೀರಿಸಿ ರ್‍ಯಾಂಡಮ್ ನಂಬರ್ ಜೆನರೇಟರ್‌ನ್ನು ಬರೆಯುತ್ತೇನೆಂದು ಅವಿರತ ಪ್ರಯತ್ನಿಸಿದ್ದು ವಿಫಲವಾಯಿತು - ಕೊನೆಯಲ್ಲಿ ನ್ಯೂ ಯಾರ್ಕ್‌ನವರ ಮೆಥಡ್ ನಮ್ಮ ಥಿಯರಿಗಿಂತ ತುಂಬಾ ಉನ್ನತ ಮಟ್ಟದಲ್ಲಿತ್ತು. ಆದರೆ ನಾವು ಪ್ರಯತ್ನ ಮಾಡಿದ್ದೆವು ಅನ್ನೋದು ಎಲ್ಲಕ್ಕಿಂತ ಸಂತೋಷದ ವಿಷಯ.

ಆದರೆ, ಇಂದು ನ್ಯೂ ಯಾರ್ಕ್ ಯೂನಿವರ್ಸಿಟಿಯಿಂದ ಕೆಲವೇ ಮೈಲುಗಳ ದೂರದಲ್ಲಿ ಕುಳಿತು, ಇದ್ದವುಗಳಲ್ಲಿ ಒಳ್ಳೆಯ ಕಂಪ್ಯೂಟರ್ ಸಿಸ್ಟಮ್ (Pentium 4, dual CPU 3.00 MHZ each, 1GB RAM, 80 GB Hard drive, XP Professional) ಇರುವ ನಾನು ೧೧ ವರ್ಷಗಳ ನಂತರ ಬನಾರಸ್ಸಿನ ೨೮೬ ಕಂಪ್ಯೂಟರಿಗಿಂತಲೂ ನಿಧಾನವಾಗಿದ್ದೇನೆಂದೆನಿಸುತ್ತೆ. ವಿಷಾದವೆಂದರೆ ಹೆಚ್ಚು-ಹೆಚ್ಚು ಬ್ಯಾಂಡ್‍ವಿಡ್ತ್ ಆಗಲಿ, ವೇಗವಾಗಲಿ ನನಲ್ಲಿ ಯಾವುದೇ ದಕ್ಷತೆಯನ್ನು ಹೆಚ್ಚಿಸಿಲ್ಲ. ಈ ಎಲ್ಲ ಬದಲಾವಣೆಗಳಿಗೆ ನನ್ನ ವೈಯುಕ್ತಿಕ ನಿಲುವುಗಳು, ಮುಖ್ಯವಾಗಿ ನನ್ನ ಬೆಳೆಯುತ್ತಿರುವ ಪ್ರಬುದ್ಧತೆ, ಬದಲಾದ ಗುರಿ-ಧೋರಣೆಗಳು ಮಹತ್ವವಾದ ಪರಿಣಾಮವನ್ನು ಬೀರಿವೆ.

ಆದ್ದರಿಂದಲೇ ಇತ್ತೀಚೆಗೆ ಏನಾದರೂ ಮಾಡಬೇಕಾದ ಮನಸ್ಸು, ಒಂದು ಚಿಕ್ಕ ಕೆಲಸವಾದರೂ ಅದನ್ನು ಶ್ರದ್ಧೆಯಿಂದ ಮಾಡಿ ಮುಗಿಸುವ ಶಿಸ್ತು ಎಲ್ಲವುಗಳಿಗಿಂತ ಹೆಚ್ಚಿನವಾಗಿ ಕಂಡು ಬರುತ್ತಿವೆ. ಎಲ್ಲರೂ ಪುಸ್ತಕ ಬರೆಯ ಬೇಕೆನ್ನುವವರೇ, ಆದರೆ ಕೆಲವೇ ಕೆಲವು ಜನ ಅದನ್ನು ಮೊದಲಿನಿಂದ ಕೊನೆಯವರೆಗೆ ನಿಭಾಯಿಸಿಕೊಂಡು ಹೋಗಬಲ್ಲರು. Moore ಅನ್ನೋ ಪುಣ್ಯಾತ್ಮನೇನೋ ಕಂಪ್ಯೂಟರ್, ಟೆಕ್ನಾಲಜಿ ಬಗ್ಗೆ ಏನೋ ಹೇಳಿಬಿಟ್ಟ, ಇವೆಲ್ಲದರ ಎದುರು ಸದಾ ಕುಗ್ಗುವ ಮನಸ್ಸಿನ ಸ್ಥಿತಿಯನ್ನು ವಿವರಿಸುವವರ್‍ಯಾರು? Moore's law ಗೆ ಯಾರಾದರೂ ಕರೋಲ್ಲರಿ ಬರೆಯುತ್ತಾರೇನೋ ನೋಡೋಣ!

No comments: