Tuesday, March 21, 2006

ವಯಸ್ಸಾದಂಗೆ ಕನ್ನಡ ಮಾಯವಾಗುತ್ತಾ?

ಹುಟ್ಟಿದಾಗಿಂದ ಸಾಯೋವರೆಗೆ ಕನ್ನಡ ನಾಡಲ್ಲೇ ಇರ್‍ತಾರ್ ನೋಡಿ ಅವರ ಹತ್ರ ನನ್ನದೊಂದು ಪ್ರಶ್ನೆ ಇದೆ - ಏನೂ ಅಂದ್ರೆ, ನಮಗೆ ವಯಸ್ಸಾದಂತೆಲ್ಲಾ ನಮ್ಮ ಮಾತೃ ಭಾಷೆಯಲ್ಲಿರೋ ಪದಗಳ ಸಂಖ್ಯೆ ಹೆಚ್ಚಾಗುತ್ತೋ, ಅಷ್ಟೇ ಇರುತ್ತೋ ಅಥವಾ ಕುಗ್ಗತ್ತೋ ಅಂತ. ಮನೆ ಬಿಟ್ಟು ಮಾರು ಬಿಟ್ಟು ವಿದ್ಯಾಭ್ಯಾಸಕ್ಕೋ, ನೌಕರಿಯ ಸಲುವಾಗೋ ನಾನಂತೂ ಊರು ಬಿಟ್ಟು, ದೇಶ ಬಿಟ್ಟು ಬಂದದ್ದಾಯ್ತು - ನಮ್ ದೇಶದ majorityಲ್ಲಿ ಒಬ್ಬನಾಗಿ ಬಿದ್ದಿದ್ರೂ ಕೀಳರಿಮೆ ಕೊರೀತಲೇ ಇತ್ತು, ಆದೇ ದೇಶ ಬಿಟ್ಟಮೇಲಂತೂ ಕೀಳರಿಮೆಯೇ ಬದುಕಾಗಿ ಹೋಗಿದೆ. ಆಫೀಸ್ ಬಿಟ್ರೆ ಮನೆ ಮುಟ್ಟೋವರೆಗೆ ಯಾವ್ದೂ ಪರಿಚಯದ ಮುಖವೂ ಸಿಗೋಲ್ಲ, ಮಾತೂ ಕೇಳೋಲ್ಲ. ನಾನಾಯ್ತು, ನನ್ನ ಪಾಡಾಯ್ತು ಅಂತ ಇದ್ದು ಎಷ್ಟು ಬೆಳೆಯೋಕಾಗುತ್ತೆ?

ಇವೆಲ್ಲ ಕಡಿಮೆ ಅನ್ನೋ ಹಾಗೆ ಇತ್ತೀಚೆಗೆ ಇನ್ನೊಂದು ರೋಗ ಶುರುವಾಗಿದೆ - ಕನ್ನಡ ಪದಗಳು ನಿಧಾನವಾಗಿ ಮರೆತು ಹೋಗ್ತಾ ಇರೋದು. ಮುಂಚೆಲ್ಲಾ ಆಗಿದ್ರೆ interaction ಅನ್ನೋ ಪದಕ್ಕೆ ತಟ್ಟಂತ ಕನ್ನಡ ಪದ ಹೊಳೀತಿತ್ತು, ಈಗ ತಿಣುಕಿದ್ರೂ ಸಿಗೋಲ್ಲ. ಕನ್ನಡ ಕಸ್ತೂರಿನೋ ಮತ್ತೊಂದೋ ಸೈಟ್‌ಗೆ ಹೋದ್ರೂ ಸಮಾಧಾನ ಆಗೋಲ್ಲ. ಈ internet ಅನ್ನೋದು ದೊಡ್ಡ ಸಾಗರವೇ ಇರಬಹುದು, ಆದ್ರೆ ಅದರಲ್ಲಿರೋ ಉಪ್ಪು ನೀರನ್ನ ಎಷ್ಟೂ ಅಂತ ಗಾಳಸ್ತೀರೋ ನೀವೇ ಹೇಳಿ?

ದೇಶ ಬಿಟ್ಟು ಭಾಷೆ ಬಿಟ್ಟು ಎಷ್ಟೋ ವರುಷಾ ಆದ್ರೂ ಪುಸ್ತಕ ಬರೆಯೋರಿದ್ದಾರೆ - ಕಾಂಜೀಪೀಂಜಿ ಬರಹಗಾರರ ಬಗ್ಗೆ ಹೇಳ್ತಾ ಇಲ್ಲಾ ನಾನು - ದೊಡ್ಡ ಮನುಷ್ಯರ ಬಗ್ಗೆ ಹೇಳ್ತಾ ಇರೋದು, ಅವರಿಗೆಲ್ಲಾ ಪದಗಳ ಸಮಸ್ಯೆ ಬರುತ್ತೋ ಇಲ್ವೋ ನನ್ನಂಥ ಸಾಮಾನ್ಯನ ಕಥೆ ಆರಕ್ಕೂ ಏರಲ್ಲ ಮೂರಕ್ಕೂ ಇಳಿಯಲ್ಲ ಅಂತಾರಲ್ಲ ಹಾಗೆ. ಈ mediocre ಆಗಿ ಬದುಕೋದು ಬಹಳ ಕಷ್ಟ ಸ್ವಾಮಿ, ಅದೂ ತಾನು mediocre ಅಂಥ ಗೊತ್ತಾದಮೇಲೂ ಇನ್ನೂ ಕಷ್ಟ!

ಹಂಗಂತ ನನ್ನ ಕನ್ನಡ ಪದಗಳಿಗೇನೂ ಕೊರತೆ ಇಲ್ಲ - ಆಫೀಸ್ ಅನ್ನೋ ಪದದ ಬದಲಿಗೆ ಕಛೇರಿ ಅನ್ನಬಹುದು, afternoon ಅನ್ನೋ ಬದಲಿಗೆ ಮಧ್ಯಾಹ್ನ ಎನ್ನಬಹುದು. ಹೀಗೆಲ್ಲ ಮಾತಾಡೋದ್ರಿಂದ ನನ್ನ ಕನ್ನಡ ನನ್ನನ್ನ ಹಳ್ಳಿಯವನನ್ನಾಗಿ ಎಲ್ಲಿ ಮಾಡಿಬಿಡುತ್ತೋ ಅನ್ನೋ ಹೆದರಿಕೆ ಬೇರೆ - ಒಂಥರಾ ಈ ಧಾರವಾಡದ್ ಮಂದಿ ಮಂಗಳೂರ್‌ನೋರ್ ಜೋಡಿ ತಮ್ಮ ಶೈಲಿನಲ್ಲಿ ಮಾತಾಡಕ್ ಹೆದರ್‌ತಾರ್ ನೋಡ್ರಿ ಹಂಗೆ. ಇಲ್ಲಾ ಅಂದ್ರೆ ನಾನು ಪ್ರತೀಸಾರಿ ironing table ಅನ್ನು ಇಸ್ತ್ರಿ ಮೇಜು ಅಂಥ ಕರೆದಾಗಲೂ, socks ಅನ್ನು ಕಾಲ್‌ಚೀಲ ಎಂದು ಹೇಳಿದಾಗಲೂ ನಮ್ ಮನೆಗೆ ಬಂದಿರೋ visitors ನನ್ನನ್ನ ದುರ್‌ಗುಟ್‌ಗೊಂಡು ಯಾಕೆ ನೋಡ್ತಿದ್ರು? ಈ ಬಗ್ಗೆ ನನ್ನ ಹೆಂಡತೀನೋ, ಮೊದಲಿಗೆ ನಕ್ಕೂ-ನಕ್ಕೂ ತಾನೇ ಈಗ ಕಾಲ್‌ಚೀಲ ಅನ್ನುವಂಗೆ ಆಗಿದ್ದಾಳೆ!

ನನ್ನ ಕನ್ನಡ ಪದಗಳು ನನ್ನಿಂದ ಈ ರೀತಿ evoparate ಆಗ್ದೇ ಹೋಗಿದ್ರೆ ಈ ಮೇಲಿನ ಪ್ರತೀ ಪ್ಯಾರಾದಲ್ಲೂ ಒಂದಲ್ಲ ಒಂದು ಇಂಗ್ಲೀಷ್ ಪದಗಳನ್ನ ಬಳಸ್ತಿದ್ನೇ? ಅಕಸ್ಮಾತ್ ಬಳಸದೇ ತಿಣುಕಿ-ಇಣುಕಿ ಬರೆದಿದ್ರೂ ಈ ಬರಹ ನಿಮ್ಮನ್ನ ಇಲ್ಲಿವರೆಗೂ ಓದಿಸ್‌ಕೊಂಡು ಹೋಗ್ತಿತ್ತೇ? ಆಫೀಸ್ ಎನ್ನುವಲ್ಲಿ ಕಛೇರಿ ಎಂದೋ, ಇಂಟರ್‌ನೆಟ್ ಎನ್ನುವಲ್ಲಿ ಅಂತರ್ಜಾಲ ಎಂದೋ, ಇವಾಪರೇಟ್ ಅನ್ನೋ ಬದಲಿಗೆ ಆವಿ ಎಂಥಲೋ ಬರೆದಿದ್ರೆ ಚೆನ್ನಾಗಿರೋದಾ? ಅಥವಾ ಆಗ ಕನ್ನಡದ ನಡುವೆ ಸಂಸ್ಕೃತ ಪದಗಳನ್ನ ಸೇರಿಸ್ತಿದ್ವಿ, ಅದರ ಬದಲಿಗೆ ಈಗ ಇಂಗ್ಲೀಷ್ ಸೇರುಸ್ತೀವಿ, ಅದರಲ್ಲೇನು ವ್ಯತ್ಯಾಸವಿಲ್ಲ ಅಂತೀರೋ?

ಏನೇ ಹೇಳಿ, ನನ್ನ ಕೇಳಿದ್ರೆ ನಾವು ಬೆಳೆದಂಗೆ (ಯಾವ ದಿಕ್ಕಿನಲ್ಲಿ, ಹೇಗೆ ಅನ್ನೋದು ಇನ್ನೊಂದು ದಿನದ ಮಾತಾಗಲಿ) ನಮ್ಮ-ನಮ್ಮ ಭಾಷೇನೂ ಬೆಳೀಬೇಕು. ಆದರೆ ನಮ್ಮ ಭಾಷೇ ಅಂದ್ರೆ ಯಾವ್ದು ಅನ್ನೋದು ಒಳ್ಳೇ ಪ್ರಶ್ನೆ! ನಮಗೆ ಗೊತ್ತಿರೋ ಎಲ್ಲ ಭಾಷೆಗಳನ್ನು ಕಲಸು-ಮೇಲೋಗರ ಮಾಡಿ ಏನೋ ಒಂದು ಮಾತಾಡ್‌ಬಹುದು ಬರೀ ಬಹುದು. ಆದ್ರೆ ಅದನ್ನ ಓದೋರೂ ಅದೇ ಮಟ್ಟದಲ್ಲಿ ಇರಬೇಕಾಗುತ್ತೋ ಏನೋ? ಸರಿ ನಾನು ಬೆಳೆಯೋದರ (ಅಥವಾ ಕುಗ್ಗೋದರ) ಜೊತೆಗೆ ನನ್ನ ಬರಹವನ್ನು ಓದುವವರನ್ನು ಏಕೆ ಸಂಕುಚಿತರನ್ನಾಗಿ ಮಾಡಬೇಕು? (ಸದ್ಯ, ಈ ಮೇಲಿನ ವಾಕ್ಯಗಳಲ್ಲಾದರೂ ಕನ್ನಡ ಪದಗಳೇ ಇವೆಯಲ್ಲ!)

ಒಂದು ವಿಷ್ಯಾ ಅಂತೂ ಗ್ಯಾರಂಟಿ, ಇಂಗ್ಲೀಷ್ ಮಾತಾಡೋ ದೇಶದಲ್ಲಿ ಕೆಲಸ ಮಾಡಿದಾಕ್ಷಣ ನಮ್ ಇಂಗ್ಲೀಷೂ improve ಆಗುತ್ತೆ ಅನ್ನೋದು ಬರೀ ಭ್ರಮೆ!

1 comment:

Venkatesh said...

ವಯಸ್ಸಾದಂತೆ ಕನ್ನಡ.....

ಈ ಅನುಭವ ನಾನಂತೂ ಇದುವರೆಗೂ ಅನುಭವಿಸಿಲ್ಲಪ್ಪ ! ನನ್ನ ೪೦ ವರ್ಷದ ಕರ್ನಾಟಕದಿಂದ ಹೊರಗಡೆ ಇದ್ದಾಗ ಆದ ಕನ್ನಡದ ಪದಗಳ ಉಪಯೋಗ ಬಹುಶಃ ನಾನು ಅಲ್ಲೇ ಇದ್ದಿದ್ದರೂ ಆಗ್ತಿರಲಿಲ್ಲ ಎನ್ನುವುದು ನನ್ನ ಮಟ್ಟಿಗಂತೂ ನಿಜ ! ನಾನಿರೋದು ಮುಂಬೈನಲ್ಲಿ. ಕೀರ್ತಿನಾಥ ಕುರ್ತುಕೋಟಿಗಳು, ಬೇಂದ್ರೆ, ಕಾರ್ನಾಡ್,ಎಸ್.ಕೆ.ರಾಮಚಂದ್ರರಾಯರು,ಚಿದಂಬರ ದೀಕ್ಷಿತರು, ಲಕ್ಷ್ಮೀನಾರಾಯಣಭಟ್ಟರು,ಇನ್ನೂ ಹಲವರನ್ನು ಕೇಳುವ ನೋಡುವ ಭಾಗ್ಯ ನನಗಾಯಿತು ! ಯಾಕೋ ಕುವೆಂಪು ಅವರನ್ನು ನೋಡಲಾಗಲಿಲ್ಲ. ಇದೊಂದು ಕೊರಗು !
ಈಗ ಕನ್ನಡ್ ದಲ್ಲಿ ಅಲ್ಪ ಸ್ವಲ್ಪ ಬರೆಯಲೂ ಶುರು ಮಾಡ್ಕೊಂಡಿದೀನಿ !! ಏನಂತೀರಿ ?