ಕಾಂತಾರ:ಚಾಪ್ಟರ್1 (ವಿಮರ್ಶೆಯಲ್ಲ, ಅನಿಸಿಕೆ)
ಒಬ್ಬ ಸಿನಿಮಾ ರಚನೆಕಾರ, ತನ್ನ ಕಥೆಯೊಳಗಿನ ತನ್ಮಯತೆ, ತನ್ನಲ್ಲಡಗಿದ ಭಕ್ತಿ-ಭಾವಗಳ ಉತ್ತುಂಗ ನಿಲುವಿನ ಅಭಿವ್ಯಕ್ತಿಯಿಂದ ಸ್ವಲ್ಪ ಸರಿದು, ವೈಭವ, ವ್ಯಾಪಾರಗಳ ವಿಪರೀತಗಳಲ್ಲಿ ಸಿಲುಕಿಕೊಂಡಾಗ ಅದರಿಂದ ಹೊರ ಬರುವ ಉತ್ಪನ್ನವನ್ನ ಇತ್ತೀಚೆಗೆ ಬಿಡುಗಡೆಗೊಂಡ "ಕಾಂತಾರ:ಚಾಪ್ಟರ್1"ಗೆ ಹೋಲಿಸಬಹುದು.
ಮೊದಲಿನ ಕಾಂತಾರದಲ್ಲಿ (2022) ಭಕ್ತಿ, ಭಾವುಕತೆ, ಭಯಗಳೆಲ್ಲ ಮೇಳೈಸಿ ಒಂದು ಸುಂದರವಾದ ಕತೆಯ ಹಂದರದಡಿ ಒಂದು ಚಿತ್ರ ಎಲ್ಲರ ಮನಸ್ಸಿನಲ್ಲಿ ಬೆಳೆದು ಬಳ್ಳಿಯಾಗಿ ನಿಂತಿತ್ತು. ಒಮ್ಮೆ ಕನ್ನಡ ಚಿತ್ರವನ್ನು ನೋಡಿದ ಕನ್ನಡೇತರರು, ತರುವಾಯ ತಮ್ಮ ತಮ್ಮ ಭಾಷೆಯಲ್ಲೂ ಈ ಚಿತ್ರವನ್ನು ಡಬ್ ಮಾಡಿ ಬಿಡುಗಡೆಗೊಳಿಸಿ, ಇಡೀ ಚಿತ್ರ ತಂಡಕ್ಕೆ ಅಭೂತಪೂರ್ವ ಯಶಸ್ಸನ್ನು ತಂದಿದ್ದರು.
ಆದರೆ, ಈ ವರ್ಷ ಬಿಡುಗಡೆಗೊಂಡ, ಈ ಹೊಸ ಚಿತ್ರದಲ್ಲಿ, ದೈವದ ಜೊತೆಗೆ ದೊಡ್ಡದಾಗಿ "ಸುದ್ದಿ" ಮಾಡಬೇಕು ಎನ್ನುವ ದಾವಂತವೂ ಇರುವುದು ಮೊದಲಿನಿಂದಲೂ ಗೊತ್ತಾಗುತ್ತದೆ. ಒಂದು ಕಡೆ, ಅದ್ದೂರಿ ಸೆಟ್‌ಗಳಿಂದ, ನೂರಾರು ತಂತ್ರಜ್ಞರ ನೆರವಿನಿಂದ ಬೃಹತ್ ಮೊತ್ತದ ಸಿನಿಮಾ ತಯಾರಾಗಿ ಹೊರಬರುತ್ತದೆ. ಆದರೆ, ಇದು ಅದ್ದೂರಿಯ ದ್ಯೋತಕವಾಗಿ ನಿಲ್ಲುತ್ತದೆಯೇ ವಿನಾ ದೈವ-ದೈವತ್ವದ ಸಂದೇಶದ ಪೂರಕವಾಗಿ ನೆನಪಿನಲ್ಲುಳಿಯದೇ ಹೋಗಬಹುದು ಎಂದು ಸಂಶಯ ಹುಟ್ಟುತ್ತದೆ.
***
ಕಾಂತಾರ:ಚಾಪ್ಟರ್ 1 ನಮ್ಮನ್ನು 4ನೇ ಶತಮಾನದ ಕದಂಬರ ಆಳ್ವಿಕೆಯ ಸಮಯಕ್ಕೆ ಕರೆದೊಯ್ಯುತ್ತದೆ. ಇಲ್ಲೆಲ್ಲಾ ಸಂಪೂರ್ಣ ಮಾಯಾಲೋಕ. ಹಳೆಯ ಕಾಂತಾರದ ಅಂತ್ಯದಿಂದ ಮುಂದುವರೆಸಿ, ದೈವ ಬಂದವರು, ವೇಷ ತೊಟ್ಟವರು, ಏಕೆ ಕಾಡಿನಲ್ಲಿ ಮಾಯವಾಗುತ್ತಿದ್ದರು, ಇದೇ ಜಾಗದಲ್ಲಿ ಏಕೆ, ಎನ್ನುವ ಪ್ರಶ್ನೆಗಳಿಂದ ಜನರನ್ನು ಚಿತ್ರದ ಹಿನ್ನೆಲೆಗೆ ಕರೆದುಕೊಂಡು ಹೋಗುತ್ತದೆ.
ಅಲ್ಲಿಂದ, ಈಶ್ವರನ ಹೂದೋಟದ ಅಮಾಯಕ ಜನರಿಗೂ, ಬಾಂಗ್ರಾ ರಾಜ್ಯದ ಜನ-ಅಧಿಕಾರಿಗಳಿಗೂ ಸಂಘರ್ಷ ಆರಂಭವಾಗಿ, ನಂತರ ದೈವದ ಅಪರಾವತಾರ "ಬೆರ್ಮೆ" (ನಾಯಕ), ಮತ್ತು ಅವನ ಸಂಗಡಿಗರು ಕಾಡಿನಿಂದ ನಾಡಿಗೆ, ನಾಡಿನಿಂದ ಕಾಡಿಗೆ ಬಂದು ಹೋಗುವ ದೃಶ್ಯಗಳ ಹಾಸುಹೊಕ್ಕಾಗಿಸಿಕೊಂಡು, ಚಿತ್ರ ಮುಂದುವರೆಯುತ್ತದೆ.
ಈ ಮುನ್ನೆಲೆಯ ಜೊತೆ ಜೊತೆಗೆ ಒಂದು ಹಳೆಯ ಪ್ರಪಂಚವೂ ಇದರ ಜೊತೆಗೆ ತಳುಕು ಹಾಕಿಕೊಂಡಿರುತ್ತದೆ. ಅದೇ, ಮುಖಕ್ಕೆ, ಮೈಗೆ ಕಪ್ಪು ಬಳಿದುಕೊಂಡು, ಕಾಡುಪಾಪಗಳನ್ನು ಪೋಷಿಸಿ, ಅವುಗಳ ಸಹಾಯದಿಂದ ಆಗಾಗ್ಗೆ ಆಕ್ರಮಣ ಮಾಡಿಕೊಂಡು ಮತ್ತೆ, ಕಾಡು-ನಾಡುಗಳ ನಡುವೆ ತಮ್ಮ ಅಸ್ತಿತ್ವವನ್ನು ಗುರುತಿಸಿಕೊಳ್ಳುವ ಮತ್ತೊಂದು ತಂಡ, ಅವರಿಗೊಂದು ಹೆಸರಿರಬಹುದು, ಅದೇನು ಎಂಬುದನ್ನು ಓದುಗರು ಗೊತ್ತಿದ್ದರೆ ಸೂಚಿಸಿ.
***
ನಮ್ಮ ಕನ್ನಡ ಸಿನಿಮಾಗಳನ್ನು ರೂಪಿಸಲು, ಬಾಹುಬಲಿ ಸಿನಿಮಾ, ಪದ್ಮಾವತಿ ಸಿನಿಮಾಗಳಿಂದ ಪ್ರೇರಣೆಯನ್ನು ಪಡೆಯಬೇಕು ಎಂದೇನೂ ಇಲ್ಲ. ಮೊದಲಿನ ಕಾಂತಾರದಲ್ಲಿ ಯಾವ ಅಬ್ಬರವೂ, ಆಡಂಬರವೂ ಇಲ್ಲದೇ, ಎಂತಹ ರೋಚಕವಾದ ಯಶಸ್ಸು ಸಿಕ್ಕಿತ್ತು? ಕನ್ನಡದ ಕೆಜಿಎಫ಼್, ಅದರದ್ದೇ ಆದ ಅಬ್ಬರದಲ್ಲಿ ಜನರನ್ನು ಮುಟ್ಟಿರಲಿಲ್ಲವೇ? ಈ ಚಿತ್ರಗಳ ಹಾಡುಗಳು, ಹಲವು ವರ್ಷವಾದರೂ ನಮ್ಮ ಮನಸ್ಸಿನಲ್ಲಿ ಗುನುಗುನಿಸುತ್ತಿಲ್ಲವೇ? ಆದರೆ, ಕಾಂತಾರ:ಚಾಪ್ಟರ್ 1 ನ ಹಾಡುಗಳನ್ನೇನಾದರೂ ಮನಸ್ಸಿನಲ್ಲಿಟ್ಟುಕೊಳ್ಳುತ್ತೇವೆ ಎಂದುಕೊಂಡರೆ, ಅದು ದುಸ್ಸಾಧ್ಯ ಎಂದು ಮೊದಲೇ ಹೇಳಿಬಿಡುತ್ತೇನೆ.
ವಿಪರೀಟ ಹೊಡೆದಾಟ, ಮಾಸ್ ಬಿಲ್ಡ್ ಅಪ್, ದೊಡ್ಡ ದೊಡ್ಡ ಸೆಟ್‌ಗಳು ನಮ್ಮ ಮಣ್ಣಿನ ಸೊಗಡನ್ನು ಪ್ರತಿನಿಧಿಸಲಾರವು. ಆದರೆ, ಕೆಜಿಎಫ಼್‌ನಲ್ಲಿ ಅದು ಬಂದಾಗ, ಅದಕ್ಕೊಂದು ನೇಟಿವಿಟಿ ಸಹಜವಾಗಿ ಹುಟ್ಟಿತ್ತು. ಆದರೆ, ಇಲ್ಲಿ ಭಕ್ತಿ, ಭಾವನೆಗಳ ಸಮಾಗಮದಲ್ಲಿ ಮಿಂದು ಪುಳಕಗೊಳ್ಳುವ ನಿರೀಕ್ಷೆಯ ಪ್ರೇಕ್ಷಕನಿಗೆ, ಕಾಂತಾರ:ಚಾಪ್ಟರ್ 1 ನಲ್ಲಿ, ಅತಿಯಾದ ತೆಲುಗು, ಹಿಂದಿ ಸಿನಿಮಾಗಳ ಮಸಾಲೆಯನ್ನು ಹಾಕಿ, ಕನ್ನಡತನವನ್ನು ಪೋಷಿಸಿದಂತಿದೆ, ಅಷ್ಟೆ.
***
ನಿರ್ದೇಶನ-ನಟನೆ: ಈ ಎರಡು ವಿಭಾಗಗಳಲ್ಲಿ ರಿಷಬ್ ಶೆಟ್ಟಿಯವರಿಗೆ ಪೂರ್ಣ ಅಂಕಗಳನ್ನು ಕೊಡಬಹುದು. ತಮ್ಮ ಸಂಪೂರ್ಣ ಸಾಮರ್ಥ್ಯವನ್ನು, ನಿರೀಕ್ಷೆಗೂ ಮೀರಿ ಸುಮಾರು ಮೂರು ವರ್ಷಗಳ ಪಟ್ಟ ಕಷ್ಟಕ್ಕೆ ತಕ್ಕಂತೆ ಇಡೀ ಸಿನಿಮಾದುದ್ದಕ್ಕೂ ಅವರ ಛಾಪು ಮೂಡಿದೆ. ಭಾವನಾತ್ಮಕ ಅಭಿನಯವಿರಲಿ, ಹೊಡೆದಾಟವಿರಲಿ, ಕ್ರೌರ್ಯ, ವೀರ, ಕರುಣಾ ರಸಗಳನ್ನು ಪೋಷಿಸುವ ಎಲ್ಲ ಸಂದರ್ಭಗಳಲ್ಲೂ ಅವರು ತಮ್ಮನ್ನು ತಾವು ಪ್ರಶ್ನಿಸಿಕೊಂಡಿದ್ದಾರೆ.
ಒಂದು ಮಹಾನ್ ಸೆಟ್, ನೂರಾರು ತಂತ್ರಜ್ಞರು, ಸಾವಿರಾರು ಕಲಾವಿದರು ಇವರೆಲ್ಲರ ಪೋಷಣೆ, ಬೆಳವಣಿಗೆ ಮತ್ತು ಸಹಕಾರಗಳ ನಡುವೆ ಕಾಂತಾರ:ಚಾಪ್ಟರ್ 1 ಅನ್ನೋ ಸಿನಿಮಾವನ್ನು ತರುವುದು ನಿಜಕ್ಕೂ ಕಷ್ಟಕರವಾದುದು. ಅವರೇ ನಂಬಿಕೊಂಡ ದೈವ ಅವರನ್ನು ಈ ನಿಟ್ಟಿನಲ್ಲಿ ಕೈ ಬಿಟ್ಟಿಲ್ಲ. ಈ ಚಿತ್ರದ ಮೂಲಕ ಕರಾವಳಿ ಪ್ರಾಂತ್ಯಕ್ಕೆ ಒಂದು ಸಿನಿಮಾ "ಸ್ಟುಡಿಯೋ" ಹಾಗೆಯೇ ಅದನ್ನು ನಂಬಿಕೊಂಡ ಒಂದು ಸಂಪೂರ್ಣ ಇಂಡಸ್ಟ್ರಿಯನ್ನು ಬಳುವಳಿಯಾಗಿ ನೀಡಿದ ಶ್ರೇಯ ಅವರಿಗೆ ಸೇರಬೇಕು. ಚಿತ್ರದ ಪ್ರತಿಯೊಂದು ಫ಼್ರೇಮ್ ಅನ್ನು ಹಾಸುಹೊಕ್ಕಾಗಿ ಬೆಸೆದು, ತಂತ್ರಜ್ಞರ ಜೊತೆಗೆ ಕೈ ಜೋಡಿಸಿ ಅತಿಸಹಜ ಎನ್ನುವ ವಿಎಫ಼್‌ಎಕ್ಸ್ ಗ್ರಾಫ಼ಿಕ್ಸ್‌ಗಳನ್ನು ನೋಡುಗರಿಗೆ ಕೊಟ್ಟಿರುವುದು ಬಹಳ ದೊಡ್ಡ ವಿಷಯ.
ಅಂತೆಯೇ, ಸ್ವಯಂ ತಲ್ಲೀನನಾಗುವ ಹಲವಾರು ಸಂದರ್ಭಗಳನ್ನು ಚಿತ್ರದುದ್ದಕ್ಕೂ ಹೊಸೆದು ತನ್ನದೊಂದು ಅಚ್ಚನ್ನು ಜನಮಾನಸದಲ್ಲಿ ನಿಲ್ಲಿಸುವ ಪ್ರಯತ್ನಗಳನ್ನು ನೋಡಬಹುದು. ಉದಾಹರಣೆಗೆ, ಚಿತ್ರದ ಅಂತ್ಯಕ್ಕೂ ಮೊದಲು, ನಾಯಕ ದೈವಾಂಶ ಸಂಭೂತನಾಗಿ ವರಾಹರೂಪಿ (ಬ್ರಹ್ಮರಾಕ್ಷಸ) ಬೃಹತ್ ಮಾನವನ ಜೊತೆಗೆ ಹೋರಾಡುವಾಗ, ಅದರ ಅಂತ್ಯದಲ್ಲಿ ತ್ರಿಶೂಲಧಾರಿಯಾದ ಶಿವನಿಗೆ, ತನ್ನ ಸುತ್ತಲೂ ಕಾಳಿಂಗ ಸುತ್ತಿಕೊಂಡು ಒಂದು ಅನುರೂಪವಾದ ವಿಶುವಲ್ ಅನ್ನು ತೋರಿಸುವ ಅಗತ್ಯವಿತ್ತೇ ಎಂದೂ ಪ್ರಶ್ನಿಸಿಕೊಳ್ಳಬೇಕಾಗುತ್ತದೆ.
ಸುಮಾರು ಎರಡು ಗಂಟೆ, ನಲವತ್ತೈತು ನಿಮಿಷದ ಸಿನಿಮಾವನ್ನು ಕತ್ತರಿಸಿ, ಇನ್ನಷ್ಟು ಮೊನಚುಗೊಳಿಸಬಹುದಿತ್ತು. ಅನಗತ್ಯವಾದ ದೃಶ್ಯ ಮತ್ತು ಹೋರಾಟಗಳನ್ನು ಕಡಿಮೆ ಮಾಡಬಹುದಿತ್ತು.
ಭಾಷೆ: ಚಿತ್ರದ ಕತೆ ಮತ್ತು ಚಿತ್ರಕತೆ ಚೆನ್ನಾಗಿ ಮೂಡಿಬಂದಿದೆ. ಹಾಸ್ಯವನ್ನು ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ ತುರುಕಿ ಬಿಡುತ್ತೇವೆ ಎಂದು ಸಂಕಲ್ಪಗೊಂಡ ಬರಹಗಾರರ ಸಾಹಸ ಚಿತ್ರದುದ್ದಕ್ಕೂ ಎದ್ದು ಕಾಣುತ್ತದೆ. ನಿಮಗೆ ಎಂತಹ ಸೀರಿಯಸ್ ಸನ್ನಿವೇಶಗಳೇ ಇರಲಿ, ಅವುಗಳಲ್ಲಿ ಒಂದಿಷ್ಟು ಹಾಸ್ಯದ ಎಳೆಗಳು ಗೋಜಲು ಗೋಜಲಾಗಿ ಕಾಣುತ್ತವೆ.
ಚಿತ್ರದ ಪರಿಪೂರ್ಣತೆ ದಕ್ಷಿಣ ಕನ್ನಡ ಸಾಂಸ್ಕೃತಿಕ ವೈಭವವನ್ನು ಅಲ್ಲಿನ ನಡೆನುಡಿಗಳಲ್ಲಿ ಹೇಳುವುದೇ ಮುಖ್ಯವಾದುದರಿಂದ, ಚಿತ್ರದ ಸಂಭಾಷಣೆ ಸ್ಥಳೀಯ ಕನ್ನಡವನ್ನು ಧಾರಾಳವಾಗಿ ಒಳಗೊಂಡಿದೆ. ಆದರೆ, ಪಾತ್ರಗಳ ಮಾತುಕತೆಗಳಲ್ಲಿ ಒಂದು ಸಾಮಂಜಸ್ಯ (consistency), ಸಾಮರಸ್ಯ ತೋರುವುದಿಲ್ಲ. ಉದಾಹರಣೆಗೆ, ಕನಕವತಿಯಾಗಿ ನಟಿಸಿದ ರುಕ್ಮಿಣಿ ವಸಂತ್ ಅವರ ಮಾತಿನ ಶೈಲಿ, ಸಂದರ್ಭಕ್ಕೆ ಅನುಸಾರವಾಗಿ ಬದಲಾಗುವುದನ್ನು ನೀವು ನೋಡಬಹುದು.
ಇನ್ನು ಹಾಸ್ಯವನ್ನು ಎಷ್ಟು ಹೆಣೆಯಬೇಕು, ಎಷ್ಟು ಎಳೆಯಬೇಕು ಎಂಬುದನ್ನು ಚಿತ್ರಕಥೆಯಲ್ಲಿ ಮರೆತಂತಿರುವುದರಿಂದ ಅಲ್ಲಲ್ಲಿ ಅಸ್ಖಲಿತವಾಗಿ ಹಾಸ್ಯವಾಗಿ ಮೂಡಿ ಮರೆಯಾಗಿ, ಇಡೀ ಥಿಯೇಟರಿನಲ್ಲಿ ಎಲ್ಲೋ ಒಂದೆರೆಡು ಕಡೆಗಳಿಂದ ಅದಕ್ಕೆ ಪ್ರತಿಕ್ರಿಯೆ ಸಿಗುವುದನ್ನು ನೀವು ಗಮನಿಸಬಹುದು.
ಸಂಗೀತ, ಹಾಡುಗಳು: ಅಜನೀಶ್ ಲೋಕನಾಥ್ ಅವರ ಹಿನ್ನೆಲೆ ಸಂಗೀತ, ಅವರ ಅನನುಭವವನ್ನು ಎದ್ದು ತೋರಿಸುತ್ತದೆ. ಹಿನ್ನೆಲೆ ಸಂಗೀತಕ್ಕೆ ದೃಶ್ಯಗಳ ವೈಭವ ಮತ್ತು ಸಂದರ್ಭದ ಘನತೆಯನ್ನು ಎತ್ತಿಹಿಡಿಯುವ ಶಕ್ತಿ ಇದೆ, ಅದನ್ನು ಇಲ್ಲಿ ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಲಾಗಿದೆ. ಆದರೆ, ಚಿತ್ರದ ಸಂಗೀತದ ಅಬ್ಬರದಲ್ಲಿ ಹಾಡುಗಳು ಕಳೆದುಹೋಗಿವೆ. ಒಂದು ಸಾಲು ಕೂಡ ನೆನಪಿನಲ್ಲಿ ಉಳಿಯದಂತೆ ಆಗಿ ಹೋಗುತ್ತದೆ. ನನ್ನಂಥ ನೇಟಿವ್ ಕನ್ನಡಿಗರೂ ಕೂಡ, ಇಂಗ್ಲೀಷ್ ಸಬ್‌ಟೈಟಲ್ ಅನ್ನು ಬಳಸಿ ಯಾವ ಹಾಡಿನಲ್ಲಿ ಏನು ಸಂದೇಶವನ್ನು ತಲುಪಿಸುತ್ತಿದ್ದಾರೆ ಎಂದು ಯೋಚಿಸುವ ಪರಿಸ್ಥಿತಿ ಸೃಷ್ಟಿಯಾಗಿದೆ. ನಿರಂತರ ಮೊರೆಯುವ ಸಂಗೀತೋಪಕರಣಗಳ ನಾದದ ನಡು ನಡುವೆ ಮಿಂಚಿ ಮರೆಯಾಗುವ ನಿಶ್ಶಬ್ಧವೂ ಕೂಡ ಸಂಗೀತದ ಒಂದು ಭಾಗ ಎಂದು ಅಜನೀಶ್ ಯೋಚಿಸಿಕೊಂಡರೆ, ಅವರ ಮುಂದಿನ ಸಿನಿಮಾಗಳಲ್ಲಿ ಬಹಳಷ್ಟನ್ನು ನಿರೀಕ್ಷಿಸಬಹುದು. ಪ್ರತಿಭಾನ್ವಿತ ಅಜನೀಶ್ ಅವರು, ದೃಶ್ಯಕಾವ್ಯದ ಅಂತರ್ಯಗಳಲ್ಲಿ ಒಳಹೊಕ್ಕು, ಪ್ರೇಕ್ಷಕರ ಅಂತಃಕರಣವನ್ನು ಅಲುಗಾಡಿಸುವ ಪೂರಕ ಮತ್ತು ಪೋಷಕ ಹಿನ್ನೆಲೆ ಸಂಗೀತವನ್ನು ಖಂಡಿತವಾಗಿ ಕೊಡಬಲ್ಲರು.
ಕನ್ನಡದಲ್ಲೆ ಬೇಕಾದಷ್ಟು ಜನಪದ, ವಚನ, ಭಾವಗೀತೆಗಳಿವೆ, ಅವುಗಳನ್ನು ಬಳಸಿಕೊಳ್ಳಿ. ಇಲ್ಲವಾದರೆ ವೈಭವದ ದೃಶ್ಯಗಳಿಗೆ ಅದೆಷ್ಟು ಆದ್ಯತೆಯನ್ನು ಕೊಡುತ್ತೀರೋ ಅಷ್ಟೇ ಆದ್ಯತೆಯನ್ನು ಯೋಗ್ಯ ಸಂಭಾಷಣೆ ಮತ್ತು ಹಾಡುಗಳನ್ನು ಬರೆದು ಅದನ್ನು ಸುಂದರವಾಗಿ ಮತ್ತು ಮನೋಜ್ಞವಾಗಿ ಹಾಡುವವರಿಂದ ಹಾಡಿಸಿ. ಕನ್ನಡನಾಡಿನಲ್ಲಿ ಬೇಕಾದಷ್ಟು ಒಳ್ಳೆಯ ಗಾಯಕ-ಗಾಯಕಿಯರು ಸಿಗುತ್ತಾರೆ, ಹುಡುಕಿನೋಡಿ.
ಛಾಯಚಿತ್ರಗ್ರಹಣ: ವೈಭವದ ಚಿತ್ರಗಳಲ್ಲಿ, ಆ ಚಿತ್ರಗಳ ಜೀವಾಳವೇ ಅದರ ಚಿತ್ರಗ್ರಹಣ. ಈ ನಿಟ್ಟಿನಲ್ಲಿ ಅರವಿಂದ್ ಕಶ್ಯಪ್ ಅವರ ಪರಿಶ್ರಮ ಎದ್ದು ಕಾಣುತ್ತದೆ. ಡ್ರೋನ್ ಬಳಸಿ, ನಾನಾ ಕೋನಗಳಿಂದ, ಎತ್ತರ-ಇಳಿಜಾರು, ನೆಳಲು-ಬೆಳಕಿನ ಈ ಒಂದು ಸಂಕೀರ್ಣ ಸಿನಿಮಾವನ್ನು, ಕಾಡಿನ ಮಡಿಲಲ್ಲಿ ವ್ಯವಸ್ಥಿತವಾಗಿ ಶೂಟ್ ಮಾಡಲಾಗಿದೆ. ಚಿತ್ರದ ಎಡಿಟರ್ ಯಾರು ಎಂದು ಗೊತ್ತಿಲ್ಲ, ಆದರೆ, ಇಡೀ ಚಿತ್ರತಂಡದ ಪರಿಶ್ರಮ ಸುಂದರವಾದ ಎಡಿಟಿಂಗ್‌ನಿಂದ ಅದ್ದೂರಿಯಾಗಿ ಮೂಡಿಬಂದಿದೆ. ಹಲವಾರು ಹೋರಾಟ, ಹೊಡೆದಾಟಗಳ ಆಕ್ಷನ್ ಸೀಕ್ವೆನ್ಸ್‌ಗಳನ್ನು ಚೆನ್ನಾಗಿ ಶೂಟ್ ಮಾಡಿ, ಸುಂದರವಾಗಿ ಪೋಣಿಸಲಾಗಿದೆ. ಈ ಎರಡು ವಿಭಾಗಗಳಲ್ಲಿ ಈ ಚಿತ್ರ ಪೂರ್ಣ ಅಂಕಗಳನ್ನು ಪಡೆದುಕೊಳ್ಳುತ್ತದೆ.
ಇನ್ನೂ ಉತ್ತರಿಸದೇ ಉಳಿದ ಪ್ರಶ್ನೆಗಳು: ಗುರುವ ಬಂದ ಗುರುವ ಹೋದ ಅಂತ ಅನ್ನಿಸಿದ್ದು, ಈ ಚಿತ್ರದ ಅಂತ್ಯದಲ್ಲಿ. ಅದಕ್ಕಿಂತ ಮೊದಲು ಗುರುವ ಕಂಡನೇ? ಈಗಾಗಲೇ ಹತರಾಗಿ ಹೋದ ಮಕ್ಕಳು, ಮತ್ತೆ ಕೊನೆಯಲ್ಲಿ ಪುನಃ ಬಂದು ಬಿಡುತ್ತಾರೆ ಏಕೆ ಹೀಗೆ? "ಬೆರ್ಮ" ಮತ್ತು ಅವನ ಸಂಗಡಿಗರು ಒಟ್ಟು ಎಷ್ಟು ಜನ? ಅವರು ಒಂದು ಸಂಪೂರ್ಣ ಸೈನ್ಯದ ವಿರುದ್ಧ ಹೋರಾಡುವುದು ನಿಜವೇ? ಕಾಡು ಜನ, ನಾಡಿನ ಜನರ ವಿರುದ್ಧದ ಸಂಘರ್ಷಗಳಲ್ಲಿ ನೀವು ಭಾಹುಬಲಿ ಸಿನಿಮಾದ ತಂತ್ರಗಳನ್ನು ಎರವಲು ಪಡೆದವರ ಹಾಗೆ ಕಾಣುತ್ತೀರಿ. ರಾತ್ರೋ ರಾತ್ರಿ, ಅದೆಲ್ಲವನ್ನು ನಿರ್ಮಿಸಲು, ಕಾಡಿನ ಜನರಿಗೆ ಸಾಧ್ಯವಾದದ್ದಾರೂ ಹೇಗೆ? ಬಾಂಗ್ರಾ ರಾಜರಿಗೂ ಕದಂಬರ ಸಾಮ್ರಾಜ್ಯಕ್ಕೂ ಕೇವಲ ಒಬ್ಬ ರಾಜತಾಂತ್ರಿಕನ ಸಂಬಂಧ ಮಾತ್ರವೇ?
ಹೊಬಾಳೆ ಫ಼ಿಲ್ಮ್ಸ್‌ನವರು ಒಂದು ರೋಚಕ ಕಥೆಯನ್ನು ನಿರ್ಮಿಸಿ, ಗಟ್ಟಿಗೊಳಿಸಿ, ಇಡೀ ಭಾರತದ ಉದ್ದಕ್ಕಷ್ಟೇ ಅಲ್ಲದೇ, ಹೊರದೇಶಗಳಲ್ಲೂ ಬೆಳೆಸುವ ನಿಟ್ಟಿನಲ್ಲಿ ತಮ್ಮ ಸಾಮರ್ಥ್ಯವನ್ನು ಮತ್ತೆ ಪ್ರದರ್ಶಿಸಿದ್ದಾರೆ. ನೀವು ಚಿತ್ರವನ್ನು ನೋಡುತ್ತೀರೋ ಬಿಡುತ್ತೀರೋ, ಈ ಚಿತ್ರ ಈಗಾಗಲೇ ತನ್ನ ಬಂಡವಾಳದ ಹತ್ತರಷ್ಟನ್ನು ದುಡಿದಾಗಿದೆ. ಮೊದಲ ಕಾಂತಾರದ ದೈವ ನಿಮ್ಮನ್ನು ಸದಾ ಹೇಗೆ ಕಾಡುತ್ತದೆಯೋ ಹಾಗೆಯೇ ಎರಡನೆಯ ಕಾಂತಾರ (ಈ ಚಿತ್ರ) ತನ್ನ ವೈಭವಗಳ ಸಹಾಯದಿಂದ ಬೆಳೆದು ನಿಂತಿದೆ. ಮತ್ತೊಂದು ಚಾಪ್ಟರ್ ಮುಂದೆ ಇದೆ, ಎಂದು ತೋರಿಸಿಕೊಳ್ಳುತ್ತ.
***
ರಿಷಬ್ ಶೆಟ್ಟಿಯವರಿಗೆ ಒಂದು ಮಾತು: ನೀವು ನಮ್ಮ ಕರ್ನಾಟಕ ಅಪ್ರತಿಮ ಕಲಾವಿದರು ಮತ್ತು ಆಯೋಜಕ ನಿರ್ದೇಶಕರ ನಿಟ್ಟಿನಲ್ಲಿ ಒಬ್ಬರು. ಈ ಮಾತನ್ನು ನಿಮ್ಮ ಸುಂದರವಾದ ಚಿತ್ರಗಳ ಮೂಲಕ ನೀವು ಈಗಾಗಲೇ ಸರ್ಮರ್ಥಿಸಿಕೊಂಡಿದ್ದೀರಿ. ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಯಂತಹ ಸಿನಿಮಾ ಒಂದೇ ಸಾಕು - ನಿಮ್ಮ ಕನ್ನಡ ಪರ ನಿಲುವು, ನಿಮ್ಮ ಕಳಕಳಿ, ನಿಮ್ಮ ಕರಾವಳಿಯ ಸಾಂಸ್ಕೃತಿಕ ಅವಲೋಕನ ಹಾಗೂ ನಾಡಿನ ಬಗ್ಗೆ ನಿಮ್ಮ ಕಳಕಳಿಯನ್ನು ಸಾರಲು. ವೈಭವೋಪೇತ ಸನ್ನಿವೇಶ, ದೃಶ್ಯಗಳಿಗೆ ಕಟ್ಟು ಬೀಳದೆ, ನಿಮ್ಮ ಆಂತರ್ಯದಲ್ಲಿರುವ ಕತೆಗೆ ಒಂದು ಸಮರ್ಥನೆ ಮತ್ತು ಸಾರ್ಥಕತೆಯನ್ನು ಹುಟ್ಟುಹಾಕಿ. ಮೊದಲ ಸಲ ಕಾಂತರದಲ್ಲಿ ಬಂತಲ್ಲ, ಹಾಗೆ. ನಿಮ್ಮ ಸಿನಿಮಾ, ಕತೆ ಮತ್ತು ನಟನೆ-ನಿರ್ದೇಶನಗಳ ಪೋಷಣೆಗೆ ತಂತ್ರಜ್ಞಾನ, ವ್ಯವಸ್ಥಿತಿತವಾದ ಸೆಟ್‌ಗಳು ಮತ್ತು ದುಡ್ಡು ಹಾಕಿ ತಾವು ಬೆಳೆಯುವ ನಿರ್ಮಾಪಕರು ಇರುವುದು. (Not the other way around.) ಅದು ಹಾಗೆಯೇ ಇರಲಿ. ನಿಮ್ಮ ಹಳೆಯ ಚಿತ್ರಗಳು, ಮತ್ತೆ ಮತ್ತೆ ನೋಡುವಂತೆ ಮಾಡುತ್ತವೆ. ಹಾಗೂ ನಮ್ಮ ಜನಮಾನಸದಲ್ಲಿ ತಮ್ಮ ಆಂತರ್ಯದ ಕಾಳಜಿಗಳಿಂದ ಕಾಡುತ್ತವೆ. ಹೀಗೆ, ನಿಮ್ಮಿಂದ ಇನ್ನೂ ಅನೇಕಾನೇಕ ಸುಂದರವಾದ ಚಿತ್ರಗಳನ್ನ ನಿರ್ಮಿಸುವ ಭರವಸೆಯನ್ನು ಇಟ್ಟುಕೊಂಡಿದ್ದೇವೆ. ದಯವಿಟ್ಟು ನಮ್ಮಿಂದ ಅದನ್ನು ಕಸಿಕೊಳ್ಳಬೇಡಿ.
No comments:
Post a Comment