ಸ್ಯಾಮ್ ಹಾಲ್‌ಗೆ ವಿದಾಯ
ಈ ದಿನ ಮುಂಜಾನೆ ೯೬.೩ WQXR ಸ್ಟೇಷನ್‌ನ ಅಲಾರಾಂಗೆ ಕಿವಿಕೊಟ್ಟು ಏಳುತ್ತಿದ್ದಾಗ ಅನೌನ್ಸರ್ ಜೆಫ್ ಸ್ಪುರ್ಜೆನ್ ೨೦೦೬ ರ ಅರ್ಧ ವರ್ಷ ಕಳೆದು ಹೋಗಿದ್ದನ್ನು ಹೇಳುವುದರ ಜೊತೆಗೆ ದಶಕಗಳಿಂದ ರೇಡಿಯೋದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಕೆಲಸ ಮಾಡಿ ಕಳೆದ ಹದಿಮೂರು ವರ್ಷಗಳಿಂದ ನ್ಯೂ ಯಾರ್ಕ್ ಟೈಮ್ಸ್ ಸುದ್ದಿಗಳನ್ನು ಅವರದೇ ಆದ ರೇಡಿಯೋದಲ್ಲಿ ಪ್ರತಿದಿನವು ಓದುತ್ತಿದ್ದ ಸ್ಯಾಮ್ ಹಾಲ್ ಸಹ ಇವತ್ತು ನಿವೃತ್ತನಾಗುತ್ತಾನೆ ಎಂದು ಹೇಳಿದ್ದನ್ನು ಕೇಳಿದ ಮೇಲೆ ಇನ್ನು ಮುಂದೆ ಸ್ಯಾಮ್ ಅನ್ನು ಮಿಸ್ ಮಾಡಿಕೊಳ್ಳುತ್ತೇನೆ ಎಂದು ಬಲವಾಗಿ ಅನ್ನಿಸತೊಡಗಿತು. ಅಲ್ಲದೆ ನಮ್ಮ ಆಫೀಸ್‌ನಲ್ಲೂ ಇದೇ ದಿನ ಬೇಕಾದಷ್ಟು ಜನರು ನನಗೆ ಗೊತ್ತಿರೋ ಹಾಗೆ ನಿವೃತ್ತಿಯನ್ನು ಪಡೆಯುತ್ತಿರುವುದೂ ನೆನಪಿಗೆ ಬಂತು. ಈ ದಿನ ಏನಾದರಾಗಲಿ ಎಷ್ಟು ಸಾಧ್ಯವೋ ಅಷ್ಟು ಜನರಿಗೆ ಫೋನ್ ಮಾಡಿ ವಿದಾಯವನ್ನು ಹೇಳಬೇಕು ಎಂದುಕೊಳ್ಳುತ್ತಲೇ ನಿವೃತ್ತರಾಗುತ್ತಿರುವವರ ಹೆಸರುಗಳನ್ನು ನೆನಪಿಗೆ ತಂದುಕೊಳ್ಳುತ್ತಾ ಹೋದೆ.
ಸ್ಯಾಮ್ ಹಾಲ್, ಆರು ಅಡಿ ಐದು ಅಂಗುಲದ ಎತ್ತರದ ನಿಲುವಿನ ಮನುಷ್ಯ, ಕಳೆದ ಐದು ದಶಕಳಿಂದ ಒಂದಲ್ಲ ಒಂದು ರೇಡಿಯೋ ಸ್ಟೇಷನ್‌ನಲ್ಲಿ ಕೆಲಸ ಮಾಡಿ, ಕಳೆದ ಹದಿಮೂರು ವರ್ಷಗಳಿಂದ ಸಾವಿರಾರು ಜನರಿಗೆ ಸುದ್ದಿ, ಹವಾಮಾನ ಮುಂತಾದ ವರದಿಗಳನ್ನು ಪ್ರತಿದಿನವೂ ನೀಡುತ್ತಾ ನ್ಯೂ ಯಾರ್ಕ್ ಸುತ್ತಮುತ್ತಲಿನಲ್ಲಿ ಒಬ್ಬ ದೊಡ್ಡ ರೇಡಿಯೋ ಸೆಲೆಬ್ರಿಟಿ. ಸ್ಯಾಮ್ ತನ್ನ ನಿಧಾನವಾದ ಧ್ವನಿಯಲ್ಲಿ ಒಂದೊಂದೇ ಸುದ್ದಿಯ ತುಣುಕುಗಳನ್ನು ಹೆಕ್ಕಿ ತನ್ನದೇ ಆದ ಗಾಂಭೀರ್ಯತೆಯಲ್ಲಿ ಅದನ್ನು ಓದುವುದು ನನಗಂತೂ ಇಷ್ಟವಾಗುತ್ತಿತ್ತು. ಕೆಲವು ವರ್ಷಗಳಿಂದ ನಾನು ಪ್ರತಿದಿನವೂ ಸ್ಯಾಮ್ ಧ್ವನಿಯನ್ನು ಕೇಳಿಯೇ ಏಳೋದು. ಅದೇ ದಿನದ ನ್ಯೂ ಯಾರ್ಕ್ ಟೈಮ್ಸ್‌ನಲ್ಲಿ ಪ್ರಕಟವಾದ ಸುದ್ದಿಗಳನ್ನು ಎಷ್ಟು ಸಾಧ್ಯವೋ ಅಷ್ಟು ಸಂಕ್ಷಿಪ್ತವಾಗಿ ಹಾಗು ಸೂಕ್ಷ್ಮವಾಗಿ ಶೋತೃಗಳಿಗೆ ಹಂಚುವ ಸಾಮರ್ಥ್ಯ ಒಂದು ಅಸಾಧಾರಣ ಪ್ರತಿಭೆ - ನಾನೂ ಸುದ್ದಿಗಳನ್ನು ಓದಬಲ್ಲೆ, ಅದರಲ್ಲೇನಿದೆ ಮಹಾ ಎಂದುಕೊಂಡರೆ ಅದರಲ್ಲಿ ಆಶ್ಚರ್ಯ ಕಾದಿರುತ್ತದೆ. ಮೊದಲೆಲ್ಲ ಆದರೆ ಧಾರವಾಡ ಆಕಾಶವಾಣಿಯ ತರಂಗಾಂತರಗಳ ಸ್ಪೂರ್ತಿಗೆ ಹಾಸಿಗೆ ಬಿಡುತ್ತಿದ್ದವನಿಗೆ ಇಲ್ಲಿ ಬಂದ ಮೇಲೆ ಸ್ಯಾಮ್ ಹಾಲ್ ಅಂಥವರು ನನ್ನ ರೇಡಿಯೋ ಸಮಯವನ್ನು ತುಂಬಿಕೊಳ್ಳಲು ಹೆಚ್ಚು ಹೊತ್ತು ಹಿಡಿಯಲಿಲ್ಲ. ಅಲ್ಲಾದರೆ ಪ್ರತಿದಿನವೂ ಮುಂಜಾನೆ ಐದೂ ಐವತ್ತೈದಕ್ಕೆ ಮೋಹನ ರಾಗದಲ್ಲಿ ಆರಂಭವಾಗುವ ಕೊಳಲಿನ ಧ್ವನಿ, ಆರು ಘಂಟೆಗೆಲ್ಲ ಇಂಗ್ಲೀಷ್ ಸುದ್ದಿ, ಮುಂದೆ ಸಂಸ್ಕೃತ ವಾರ್ತೆ, ಭಕ್ತಿಗೀತೆ, ಸುಗಮ ಸಂಗೀತ, ಚಿಂತನ, ಇತ್ಯಾದಿಗಳ ನಂತರ ಏಳೂ ಹದಿನೈದಕ್ಕೆ ಪ್ರದೇಶ ಸಮಾಚಾರ, ಏಳೂ ಮೂವತ್ತೈದಕ್ಕೆ ಕನ್ನಡವಾರ್ತೆಗಳು ಇತ್ಯಾದಿಯಾಗಿ ಹೇಗಾದರೂ ಎಂಟು ಘಂಟೆ ಹೊಡೆದು ಹೋಗುತ್ತಿತ್ತು. ಇಲ್ಲಿ ಅದರ ಬದಲಿಗೆ ಸ್ಯಾಮ್ ಹಾಲ್ ಸುದ್ದಿ ಸಿಗುತ್ತಿತ್ತು, ಜೆಫ್ ಸ್ಪುರ್ಜೆನ್ ಅಥವಾ ಆನ್ನಿ ಬರ್ಗನ್ ಇವರಲ್ಲೊಬ್ಬರ ಮಧುರವಾಣಿಯಲ್ಲಿ ವಿವರಗಳ ಜೊತೆ ಬಿತ್ತರವಾಗುವ ಶಾಸ್ತ್ರೀಯ ಸಂಗೀತ ಜೊತೆಯಾಗಿದೆ.
ಇಂದಿನ ಜೂನ್ ಮೂವತ್ತು ಹಲವರು ನಿವೃತ್ತರಾಗುವ ವರ್ಷವಾಗಿದೆ. ಈ ವರ್ಷವೂ ಸೇರಿ ಮುಂದೆ ಬರುವ ವರ್ಷಗಳು ಒಂದು (ಬೇಬಿ ಬೂಮರ್) ಸಂತತಿಯನ್ನು ನಿವೃತ್ತರನ್ನಾಗಿ ಮಾಡಲಿವೆ. ನಮ್ಮ ಆಫೀಸ್‌ನಲ್ಲಿ ಕಡಿಮೆ ಎಂದರೆ ಇಪ್ಪತ್ತೈದು ವರ್ಷಗಳಿಂದ ಹಿಡಿದು ಮೂವತ್ತೈದು ವರ್ಷಗಳವರೆಗೂ ಕಂಪನಿಯಲ್ಲಿ ಕೆಲಸ ಮಾಡಿ ತಮ್ಮ ಅಗಾಧವಾದ ಅನುಭವಗಳನ್ನು ತಮ್ಮ ಜೊತೆಯಲ್ಲಿ ಕೊಂಡೊಯ್ಯುತ್ತಿರುವ ಕೆಲವರನ್ನು ನೋಡಿದರೆ ಇವರು ಇನ್ನಷ್ಟು ವರ್ಷ ಇಲ್ಲಿಯೇ ದುಡಿಯಬಾರದಿತ್ತೇ ಎನ್ನಿಸಿತು. ನಾವು ಇತ್ತೀಚೆಗೆ ಸೇರಿಕೊಂಡವರಿಗಂತೂ ನನ್ನ ಆಪ್ತವಲಯದಲ್ಲಿ ಎಷ್ಟೋ ಜನ ದಾರಿದೀಪಗಳಾಗಿದ್ದರು, ನನಗೆ ಏನೇನೋ ವಿಷಯಗಳನ್ನು ತಿಳಿಸಿ ಹೇಳಿದ್ದರು, ಇನ್ನು ಇವರೆಲ್ಲರೂ ಇರದೆ ಎದುರಿಗಿರುವ ದಾರಿಯಲ್ಲಿ ಸ್ವಲ್ಪ ಕತ್ತಲು ಹೆಚ್ಚೇ ಎಂದೆನಿಸಿತು.
ಇಲ್ಲಿ ನಿವೃತ್ತರಾಗುವವರ ಪಟ್ಟಿಯನ್ನು ನೆನೆದುಕೊಂಡು ಅಲ್ಲಿಲ್ಲಿ ಹುಡುಕುತ್ತಿರುವಾಗ ನ್ಯಾಯಮೂರ್ತಿ ವೆಂಕಟಾಚಲ ಅವರೂ ಕೂಡ ನಿವೃತ್ತರಾದರು ಎಂದು ಓದಿದೆ. ಲೋಕಾಯುಕ್ತರಾಗಿ ಬಹಳಷ್ಟು ಹುಳುಕನ್ನು ಹೊರಗಡೆ ತೋರಿಸಿಕೊಟ್ಟ ಇವರು ಕೊನೆಯಲ್ಲಿ ಹೇಳಿದ ಮಾತುಗಳಲ್ಲಿ ಒಂದು ಅಂಶ ಬಹಳ ಮಾರ್ಮಿಕವಾಗಿತ್ತು, "ನನ್ನ ಅವಧಿಯಲ್ಲಿ ಮೂವರು ಮುಖ್ಯಮಂತ್ರಿಗಳನ್ನು (ಎಸ್. ಎಂ. ಕೃಷ್ಣ, ಧರಂ ಸಿಂಗ್ ಮತ್ತು ಕುಮಾರ ಸ್ವಾಮಿ) ನೋಡಿದ್ದೇನೆ. ಆದರೆ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಬೇಕೆಂಬ ಆಸಕ್ತಿ ಯಾರಲ್ಲೂ ಕಾಣಿಸಿಲ್ಲ." ಎಂಬುದರಲ್ಲೇ ಅವರ ಅನುಭವದ ಸಾರವಿದೆ. ಯಾರೇ ಮುಖ್ಯಮಂತ್ರಿಗಳಾಗಲಿ, ಮೇಲಿನವರಿಗೆ ಬೇಕಾದ ಧೈರ್ಯ, ದಿಟ್ಟತನವಿದ್ದರೆ ಎಂತಹ ಭ್ರಷ್ಟಾಚಾರಕ್ಕಾದರೂ ಕಡಿವಾಣ ಹಾಕಬಹುದು, ಆದರೆ ಅದು ಮೇಲಿನವರಿಗೇ ನಗಣ್ಯವಾದಾಗ ಕೆಳಗಿನವರಿಗೆ ಏನೇ ಮಾಡಿದರೂ ಅವರಿಗೆ ತಪ್ಪಿಸಿಕೊಳ್ಳುವ ಉಪಾಯಗಳು ಹಲವಾರು ಇರೋದರಿಂದ ಲೋಕಾಯುಕ್ತರ ಕೈಯಲ್ಲಿ ಹೆಚ್ಚೇನನ್ನು ಸಾಧಿಸಲು ಸಾಧ್ಯವಾಗದೇ ಹೋಗಬಹುದು. ವೆಂಕಟಾಚಲ ಅವರ ಅವಧಿಯನ್ನು ವಿಸ್ತರಿಸಲು ಅಥವಾ ಅವರಿಗೆ ಹೆಚ್ಚಿನ ಅಧಿಕಾರವನ್ನು ಕೊಡುವುದರ ಬಗ್ಗೆ ಚರ್ಚೆ ನಡೆದಿದ್ದರೂ ಇನ್ನೂ ಯಾವುದೂ ತೀರ್ಮಾನಗೊಂಡಿಲ್ಲವಾದ್ದರಿಂದ ವೆಂಕಟಾಚಲ ಅವರಿಗೆ ಕನ್ನಡಿಗರು ವಿದಾಯ ಹೇಳಲೇಬೇಕಾಗಿ ಬಂದಿದೆ. ಸುದ್ದಿಗಳಲ್ಲಿ ಇವರನ್ನೂ ನಾನು ಬಹುವಾಗಿ ಮಿಸ್ ಮಾಡಿಕೊಳ್ಳುತ್ತೇನೆ.
ನಮ್ಮ ತಲೆಮಾರುಗಳಲ್ಲಿ ಆರೇಳು ವರ್ಷಗಳ ಕಾಲ ಒಂದೇ ಕಂಪನಿಯಲ್ಲಿ ಕೆಲಸ ಮಾಡಿದರೆ ಅದು ದೊಡ್ಡ ವಿಷಯವಾಗುತ್ತದೆ. ಅದೇ ನಮ್ಮ ಹಿಂದಿನ ತಲೆಮಾರುಗಳಲ್ಲಿ ಒಂದು ಬಗೆಯ ಲಾಯಲ್ಟಿ ಇತ್ತು, ನಾನು ಕಂಡ ಹಾಗೆ ಹೆಚ್ಚಿನವರು ನಿವೃತ್ತರಾದವರು ಒಂದೇ ಕಡೆ/ಕಂಪನಿಯಲ್ಲಿ ಕೆಲಸ ಮಾಡಿದವರು. ನಾನು ಮೊದಮೊದಲು ಎರಡು ವರ್ಷಕ್ಕೊಮ್ಮೆ ಕೆಲಸ ಬದಲಾಯಿಸುವುದನ್ನು ಇಂಥವರಿಗೆ ವಿವರಿಸುವಾಗ ಅವರ ಮುಖದಲ್ಲಿ ಆಶ್ಚರ್ಯ ಹಾಗೂ ದುಃಖವನ್ನು ಗುರುತಿಸುತ್ತಿದ್ದೆ. ಆದರೆ ಐದಾರು ವರ್ಷ ಕೆಲಸ ಮಾಡಿದ ನನ್ನಂತಹವರೇ ಈ ಕಂಪನಿಯಲ್ಲಿ ಬಹಳಷ್ಟು ಸೀನಿಯರ್ ಆಗಿ ಕಂಡಿದ್ದೂ ಇದೆ. ನನ್ನ ಪ್ರಕಾರ ಒಂದು ಕಂಪನಿಯಲ್ಲಿ ಐದು ವರ್ಷಗಳಿಗಿಂತ ಹೆಚ್ಚಿದ್ದರೆ ನಿಧಾನವಾಗಿ ಕಂಪನಿಯ ಸಂಸ್ಕೃತಿಯೇ ನಮ್ಮ ಸಂಸ್ಕೃತಿಯ ಒಂದು ಅಂಗವಾಗಿ ಹೋಗುತ್ತದೆ. ಕೊನೆಯಲ್ಲಿ ಹತ್ತು-ಇಪ್ಪತ್ತು-ಮುವತ್ತು ವರ್ಷಗಳನ್ನು ಕಳೆದ ಮೇಲೆ ಹೆಚ್ಚೂ ಕಡಿಮೆ ಒಂದಲ್ಲ ಒಂದು ಅನುಭವದಲ್ಲಿ ನಮ್ಮೆಲ್ಲ ತಿಳುವಳಿಕೆಯನ್ನೂ ಕಂಪನಿಯ ವ್ಯವಹಾರ ತುಂಬಿಕೊಂಡುಬಿಡುತ್ತದೆ. ಆದ್ದರಿಂದಲೇ ನಮ್ಮ ತಲೆಮಾರಿನಲ್ಲಿ ಯಾರಿಗಾದರೂ ತಾವು ಮಾಡುತ್ತಿದ್ದ ಕೆಲಸ ಇಷ್ಟವಿಲ್ಲವೆಂದಾದರೆ ತಕ್ಷಣ ಅದನ್ನು ಬದಲಾಯಿಸಿಕೊಳ್ಳುವಂತೆ ಹೇಳುತ್ತೇನೆ, ಅದನ್ನು ಬಿಟ್ಟು, ಒಂದೈದು ವರ್ಷಗಳಾದ ಮೇಲೆ ನೋಡೋಣ ಎಂದರೆ, ಅಲ್ಲಿಗೆ ಕಥೆ ಮುಗಿದಂತೆಯೇ.
ಸೋಮವಾರದಿಂದ ಮುಂಜಾನೆ ಸ್ಯಾಮ್ ಹಾಲ್ ಧ್ವನಿ ಕೇಳೋದಿಲ್ಲ, ಅವನ ಬದಲಿಗೆ ಮತ್ಯಾರೋ ಬರುತ್ತಾರೆ, ನಿಧಾನವಾಗಿ ಅವರ ಧ್ವನಿಗೆ ಹೊಂದಿಕೊಳ್ಳುತ್ತೇನೆ. ಆದರೂ, ೨೦೦೪ರಲ್ಲಿ ಹತ್ತುವರ್ಷಗಳ ನಂತರ ಮಾರ್ಕೆಟ್ ಪ್ಲೇಸ್ ಆವೃತ್ತಿಯಿಂದ ನಿವೃತ್ತನಾದ ಡೇವಿಡ್ ಬ್ರಾಂಕಾಚಿಯೋ ಧ್ವನಿ, ಸ್ಪುಟತೆ, ಕಾರ್ಯಕ್ರಮ ವೈವಿಧ್ಯತೆ, ಪ್ರಶ್ನೆಗಳನ್ನು ಕೇಳುವ-ಉತ್ತರಿಸುವ ಹುರುಪು ಇವುಗಳನ್ನೆಲ್ಲ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎನ್ನಿಸುತ್ತಿರುವುದರಿಂದ, ಸ್ಯಾಮ್ ಹಾಲ್ ಬಿಟ್ಟು ಹೋದ ಜಾಗೆಯನ್ನು ನನ್ನ ಮನಸ್ಸಿನಲ್ಲಿ ಯಾರೂ ತುಂಬಲಾರರು ಎಂದೇ ಹೇಳಬೇಕು. ಜೂನ್ ಇಪ್ಪತ್ತೊಂದರಂದು ಹೆಚ್ಚು ಹೊತ್ತು ಹಗಲಿರುವ ದಿನವೆಂದು ನೆನಪಿಗೆ ತಂದುಕೊಟ್ಟ ಕೆಲವೇ ದಿನಗಳಲ್ಲಿ ಹೆಚ್ಚು ಜನರು ನಿವೃತ್ತರಾಗುವುದೇಕೆ ಎನ್ನುವುದು ಇನ್ನೂ ನಿಗೂಢವಾಗುತ್ತಾ ಹೋಗುತ್ತದೆ.