Wednesday, July 26, 2006

ಮತ್ತೊಂದ್ ಎಲೆಕ್ಷನ್‌ಗೆ ತಯಾರಾಗೋಣ್ವಾ ಹೇಗೆ?

ಕುಮಾರಸ್ವಾಮಿಯ ಗತ್ತು ಗೈರತ್ತು ಸ್ವಲ್ಪ ಮೆತ್ತಗೆ ಆದಂಗೆ ಕಾಣ್ಸುತ್ತೆ, ಅವರು ಗಣಿಯಿಂದ ಅಗಿದ ಮಣ್ಣೆಲ್ಲ ಮೈ ಮೇಲೆ ಬಿದ್ದಷ್ಟು ಕುಬ್ಜರಾಗಿ ಹೋಗಿರೋದು ಅಲ್ಲಲ್ಲಿ ಕಂಡ ಫೋಟೋಗಳಲ್ಲೂ ಗಮನಕ್ಕೆ ಬರುತ್ತೆ. ರಾಜ್ಯಪಾಲ ಚತುರ್ವೇದಿ ಕೊಟ್ಟಿರೋ ವರದಿಯಲ್ಲಿ ಏನಿರುತ್ತೋ ಬಿಡುತ್ತೋ, ನಮ್ಮ್ ಜನ ಅಂತೂ ಕುಮಾರಸ್ವಾಮಿ ಹಾಗೂ ಅವರ ಸರ್ಕಾರದ ಮೇಲೇನೇ ವಿಶ್ವಾಸ ಕಳಕಂಡೋರ್ ಹಾಗೆ ಕಾಣುಸ್ತಾರೆ.

ಒಂದ್ ಕಡೆ ದೇವೇಗೌಡ್ರು ಮಗನ ಸಪೋರ್ಟಿಗೆ ಬಂದಿರೋ ಹಾಗೆ ಹೇಳಿಕೆ ಕೊಡ್ತಾ ಇದ್ದಾರೆ, ಅವರ ಐದು ದಶಕಗಳ ರಾಜಕೀಯ ಅನುಭವವನ್ನೂ ಕೆಲಸಕ್ಕೆ ಹಚ್ಚಿದ ಹಾಗೆ ಕಾಣ್ಸುತ್ತೆ. ಅವರು ಮಾಡ್ತಾ ಇರೋ ತಪ್ಪು ಏನು ಅಂದ್ರೆ ನೇರವಾಗಿ ಬಿಜೆಪಿಯೋರ್ನ ಬೈಯ್ಯೋದು, ಅವರ ಬಗ್ಗೆ ಆಡಿಕೊಳ್ಳೋದು. ಒಂದ್ ಕಡೆ ಕಾಂಗ್ರೇಸ್‌ನವರು ಹಳೆ ದ್ವೇಷಾ ತೀರಿಸಿಕೊಳ್ಳೋ ಹಾಗೆ ಕಾಣ್ತಿದ್ದಾರೆ, ಮತ್ತೊಂದ್ ಕಡೆ ತಮ್ಮ ದಳದ ಬಣಗಳಲ್ಲೇ ಒಡಕು ಬರ್ತಾ ಇರೋದು ದೊಡ್ಡ ಗೌಡರಿಗಂತೂ ಬಾಳಾ ಕಷ್ಟವಾಗಿ ಹೋಗಿದೆ. ಏನು ಮಾಡೋದು ಅವರು ಬೈದು ಬಿಸಾಕೋಕೇ ಇತ್ಲಾಗೆ ಸಿದ್ಧರಾಮಯ್ಯನೂ ಇಲ್ಲ, ಅತ್ಲಾಗೆ ಹೆಗಡೆಯೂ ಇಲ್ಲ!

ದೊಡ್ಡ ಗೌಡ್ರು ಬಿಜೆಪಿಯವರ್ನ ಅಂದುಕಂಡಂಗೆಲ್ಲ, ಮರಿಗೌಡ್ರು ಅದೆಲ್ಲ ಸರಿ ಅಲ್ಲ, ದೊಡ್ಡೋರ್ ಹೇಳಿದ್ ಮಾತ್ನೆಲ್ಲ ಕೇಳ್ ಬೇಡಿ ಅಂತ ಓಪನ್ ಆಗೆ ಹೇಳ್ಕೆ ಕೊಡ್ತಾ ಇರೋದ್ ನೋಡಿದ್ರೆ, ಇಂಥದ್ದರಲ್ಲೆಲ್ಲ ಬಹಳಷ್ಟ್ ಪಳಗಿರೋ ಅಪ್ಪನಿಗೆ ಮುಂದೆ ಏನಾಗುತ್ತೆ ಅನ್ನೋದು ಚೆನ್ನಾಗಿ ಗೊತ್ತಾಗಿ ಮಗನನ್ನ ರಕ್ಷಣೆ ಮಾಡೋಣ ಅಂತ ಅಪ್ಪ ಬಂದ್ರೆ, ಮಗನಿಗೆ ನಮ್ ಉಸಾಬರಿಗೆ ನೀವ್ ಬರಬೇಡಿ, ನಾವೇನಾದ್ರೂ ಮಾಡಿಕೊಳ್ತೀವಿ ಅಂತ ಹೇಳೋ ಉಮ್ಮೇದು ಬಂದ ಹಾಗೆ ಕಾಣ್ಸುತ್ತೆ.

ನಮ್ಮ್ ಜನ ಸ್ವಲ್ಪ ಮಟ್ಟಿಗಾದ್ರೂ ವಿಶ್ವಾಸ್ ಇಟ್ಟಿದ್ರು ಕುಮಾರ್‌ಸ್ವಾಮೀ ಮೇಲೆ. ಒಂದ್ ಥರಾ ಶಂಕರ್‌ದಯಾಳ್ ಶರ್ಮ್‌ರ ರೀತಿ ನಡೆಯೋ ಧರಮ್ ಸಿಂಗ್ ಆಡಳಿತದಿಂದ ಬೇಸತ್ತ ಜನ, ಈ ಹೊಸ ಸರ್ಕಾರದ ಮೇಲೆ ಸ್ವಲ್ಪನಾದ್ರೂ ನಿರೀಕ್ಷೆ ಇಟ್ಕೊಂಡಿದ್ರು. ಈ ಮನುಷ್ಯ ಬಂದ್ ಬಂದೋರೆ, ರಾಜ್ಯ ಹಾಗೂ ರಾಷ್ಟ್ರದ ಮಟ್ಟದಲ್ಲಿ ಸ್ವಲ್ಪಕಾಲ ಹೆಸರು ಮಾಡಿದ್ದಂತೂ ನಿಜ - ಲೈಟ್ ರೇಲು, ನಕ್ಸಲ್ ಸಮಸ್ಯೆಯ ಪುನರ್ ಚಿಂತನೆ, ಹಾಗೂ ಹಲವಾರು ಮುಖ್ಯ ಯೋಜನೆಗಳ ಮೂಲಕ ಮೇಲ್ ಬರಬಹುದಾದ ಅವಕಾಶ ಬಹಳ ಇತ್ತು. ಅವರಿಗಿಂತ ಹಳೆಯ ಸರ್ಕಾರದವರು ಯಾವ್ಯಾವ್ ವಿಷಯಕ್ಕೆ ಗಮನ ಕೊಡಲಿಲ್ಲವೋ ಅದೆಲ್ಲದ್ದಕ್ಕೂ ಗಮನಕೊಡೋ ಹಾಗೆ ಕಂಡ್ ಬಂದ್ರು. ಜೊತೆಯಲ್ಲಿ ಅಗಾಧವಾದ ಹಸಿವು ಇರೋ ಬಿಜೆಪಿ ಶಾಸಕರ ಗುಂಪನ್ನ ಮಡಿಲಲ್ಲಿಟ್ಟಿರೋ ಕೆಂಡದ ಹಾಗೆ ಜೋಪಾನ ಮಾಡಿಕೊಂಡ್ ಹೋಗೋ ಜವಾಬ್ದಾರಿ ಇರೋ ಮನುಷ್ಯ, ಪಾರ್ಟಿ ಈ ರೀತಿ ಹೇಗ್ ಮಾಡೋಕ್ ಸಾಧ್ಯ. ಆರೋಪ ನಿಜಾನೋ ಸುಳ್ಳೋ, ಅದು ನಿಜವಾಗೋದ್ರೊಳಗೆ ಪ್ರತಿಪಕ್ಷದವರು ರಾಜೀನಾಮೆ ಕೊಡಿ ಅಂತ ಏನಾದ್ರೂ ಒತ್ತಾಯ ಮಾಡಿದ್ರೆ, ಅಥವಾ ಕೆಲವು ಶಾಸಕ್ರು ಅಸಮಧಾನ ಅಂತ ಹಿಂದಕ್ ಸರದ್ರೆ - ಇದೆಲ್ಲದರ ಬೆಲೆಯನ್ನ ನಮ್ ಜನ ಯಾಕೆ ಮತ್ತೊಂದ್ ಎಲೆಕ್ಷನ್ ಹೆಸರ್ನಲ್ಲಿ ತೆರಬೇಕು ಅಂತೀನಿ.

ಸಿದ್ದರಾಮಯ್ಯ ಸಮಯಕ್ಕೆ ತಕ್ಕಂತೆ ಒಳ್ಳೇದನ್ನೇ ಮಾಡಿದ್ರು, ದಳ ತಂದುಕೊಡಲಾರದ ಅಧಿಕಾರವನ್ನ ಕಾಂಗ್ರೇಸ್ ಆದ್ರೂ ತಂದ್ ಕೊಡುತ್ತಾ ಅಂತ ನೋಡೋಣ. ಆ ಮನುಷ್ಯನಿಗೆ ಇನ್ನೇನು ಇಲ್ಲ, ಒಂದು ದಿನದ ಮಟ್ಟಿಗಾದ್ರೂ ಅವರು ಮುಖ್ಯಮಂತ್ರಿ ಆಗಬೇಕು ಅನ್ನೋದು ಅವರ ಆಶಯ ಅಂತ ಎಲ್ಲರಿಗೂ ಗೊತ್ತು.

ನಮ್ ನಿಜವಾದ ಸಮಸ್ಯೆ ಏನೂ ಅಂದ್ರೆ ನಾಯಕರ ಕೊರತೆ. ಈ ಗಣಿ ವಿವಾದ ಹೇಗಾದ್ರೂ ಬೇಕಾದ್ರೆ ಬಗೆ ಹರೀಲಿ, ಆದ್ರೆ ಮುಂದೆ ಬರೋ ಸರ್ಕಾರ ಯಾವ ಪಕ್ಷದ್ದೇ ಆಗಲಿ ಅಲ್ಲಿ ಯಶಸ್ವಿಯಾದ ನಾಯಕರು ಯಾರು? ಪಕ್ಷಕ್ಕೆ ಸರಿಯಾದ ನಾಯಕ, ರಾಜ್ಯಕ್ಕೆ ಸರಿಯಾದ ಆಡಳಿತಗಾರರು ಇಲ್ದೇ ಹೋದ್ರೆ ನಮ್ ಕರ್ನಾಟಕದ ಗತಿ ಏನೂ ಅಂತ ಒಮ್ಮೆ ಊಹಿಸಿಕೊಂಡಾಗಿನಿಂದ ಹೆಸರಿಕೆಯಾಗತೊಡಗುತ್ತೆ. ಸುಮ್ನೇ ಸೇಡ್ ತೀರಿಸ್‌ಕೊಳ್ಳೋಕೋ ಅಥವಾ ತಮ್ಮ ಬೇಳೇ ಬೇಯಿಸ್‌ಕೊಳ್ಳೋಕೋ ಲಂಚದ ಆರೋಪ ಹೊರಿಸಿದೋರ ಆಟ ಬಿಟ್ಟು ನಿಜವೇನಾದ್ರೂ ಬಯಲಿಗೆ ಬಂದು ತಪ್ಪಿತಸ್ಥರಿಗೆ ಶಿಕ್ಷೆ ಏನಾದ್ರೂ ಆಯ್ತು ಅಂತಂದ್ರೆ ಅದೇ ಜನಗಳಿಗೆ ಸಿಗೋ ಜಯ. ಇಲ್ಲಾ ಅಂತ ಅಂದ್ರೆ ಮುಂದೆ ಬರೋ ಒಂದೇನು ಹತ್ತು ಚುನಾವಣೆಯಿಂದ್ಲೂ ಯಾವ ಅನುಕೂಲಾನೂ ಆಗೋದಿಲ್ಲ. ಆರೋಪ, ಪ್ರತ್ಯಾರೋಪಗಳಿಂದ ಜನ ಅಧಿಕಾರ ಕಳಕೊಂಡ ಹಾಗೆ ಜೈಲೂ ಸೇರಿದ್ರೆ ಇವತ್ತು ಅದರ ಕಥೇನೇ ಬೇರೆ ಇರ್ತಿತ್ತು.

Tuesday, July 25, 2006

ಕನ್ಸಲ್‌ಟೆಂಟುಗಳು ಅಂದ್ರೆ ಹಿಂಗಿರಬೇಕು!

ಇನ್ಯಾರನ್ನ ನೋಡಿ ಬರ್ದಿರೋದು, ಅದೇ Accenture ನವರನ್ನ! ಈಜಿಪ್ಟಿನ ಪಿರಮಿಡ್ ಇರ್ಲಿ, ಬರ್ಲಿನ್ ಗೋಡೇನೇ ಇರ್ಲಿ ಯಾವ್ದುನ್ ತೋರಿಸಿದ್ರೂ ಎಲ್ಲಾ ನಮ್ಮ್ ಪ್ರಾಸೆಸ್ಸಿಂದ್ಲೇ ಅಂತಾರಲ್ಲ ಇನ್ನೇನ್ ಮಾಡೋದು ಇಂಥೋರನ್ನ ಕಟ್ಗೊಂಡು?

***

ನಾನು ಕಳೆದ ಹತ್ತು ವರ್ಷಗಳಲ್ಲಿ ನಾಲ್ಕು ವರ್ಷ ಕನ್ಸಲ್‌ಟಂಟ್ ಆಗಿಯೂ ಇನ್ನಾರು ವರ್ಷ ಎಂಪ್ಲಾಯಿ ಆಗಿಯೂ ದುಡಿದು ಎರಡೂ ಲೋಕದ ಸುಖ ದುಃಖಗಳನ್ನು ಕಂಡೋನು. ಆಗ ಹೆಚ್ಚಿನ ನನ್ ಸ್ನೇಹಿತರು ಎಲ್ಲರೂ ಸಾಧ್ಯವಾದಷ್ಟು ಟಾಪ್ ೫ ಕಂಪನಿಗಳಲ್ಲಿ - ಅವೇ ಕೆಪಿಎಮ್‌ಜಿ, ಆಂಡೆರ್‌ಸನ್/ಅಕ್ಸೆಂಚರ್, ಪ್ರೈಸ್‌ವಾಟರ್‌ಕೂಪರ್, ಇತ್ಯಾದಿ - ಕೆಲಸ ಮಾಡಿಕೊಂಡು ಹೆಸರು ತಗೋಬೇಕು ಎಂದು ಹವಣಿಸುತ್ತಿದ್ದರು, thank goodness ನನಗೆ ಆ ಭಾಗ್ಯ ಬರಲಿಲ್ಲ. ನಾನೊಂದು ಸಣ್ಣ ಕಂಪನಿಯಲ್ಲೇ ಇದ್ದೆ. ಆದರೆ ಉಳಿದೆಲ್ಲ ಕಂಪನಿಯವರ ಕನ್ಸಲ್‌ಟೆಂಟ್‌ಗಳ ವ್ಯವಹಾರಕ್ಕೂ ಈ ಟಾಪ್ ೫ ಕಂಪನಿಗಳ ವ್ಯವಹಾರಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಈ ಕೆಳಗೆ ಬರೆಯೋ ವಿಷಯಗಳು ನಾನು ಕಣ್ಣಾರೆ ಕಂಡು ಅನುಭವಿಸಿದ ವಿಷಯಗಳು, ಆದರೆ ಅವು ಈ ಕಂಪನಿಯ ಎಲ್ಲ ಕನ್ಸಲ್‌ಟಂಟುಗಳಿಗೆ ಅನ್ವಯವಾಗಬೇಕೆಂದೇನೂ ಇಲ್ಲ, ಹಾಗೆ ನಾನು ಜನರಲೈಸ್ ಮಾಡುವ ಪ್ರಯತ್ನವನ್ನೂ ಇಲ್ಲಿ ಮಾಡುತ್ತಿಲ್ಲ. ದಯವಿಟ್ಟು ಯಾರೂ ಇಲ್ಲಿ ತಮ್ಮ ಪ್ರತಿಬಿಂಬಗಳನ್ನು ಹುಡುಕಿಕೊಳ್ಳಬಾರದಾಗಿ ವಿನಂತಿ.

***

೨೦೦೪ ರ ಜೂನ್ ೨೧ ನೇ ತಾರೀಖು, ಹೀಗೇ ವ್ಯವಹಾರದ ನಿಮಿತ್ತ ಆರ್ಲಿಂಗ್ಟನ್ ಆಫೀಸಿಗೆ ಹೋಗಿದ್ದೆ, ಅಲ್ಲಿ ನಮ್ಮ ಆರ್ಡರ್ ಪ್ರಾಸೆಸಿಂಗ್ ಸಿಸ್ಟಮ್ ಬಗ್ಗೆ ತಿಳಿದುಕೊಳ್ಳೋದಿತ್ತು. ನಾನು ಅದುವರೆಗೆ SQL Server ಉಪಯೋಗಿಸಿರಲಿಲ್ಲವಾದ್ದರಿಂದ ತಂತ್ರಜ್ಞಾನದ ವಿಷಯದಲ್ಲಿ ಹೊಸತಾಗಿದ್ದರೂ ಬೇರೆ RDBMS ಗಳಿಗಿಂತ ಭಿನ್ನವೇನೂ ಅಲ್ಲದಿದ್ದುದರಿಂದ ಅದನ್ನು ಕಲಿಯಲು ಹೆಚ್ಚಿಗೆ ಸಮಯವೇನೂ ಬೇಕಾಗಿರಲಿಲ್ಲ. ಆ ವಾರ ಅಕ್ಸೆಂಚರ್ ಕನ್ಸಲ್‌ಟೆಂಟ್ ಒಬ್ಬ ಈ ಪ್ರಾಜೆಕ್ಟಿನ ಕೆಲಸವನ್ನು ಬಿಟ್ಟು ಬೇರೆ ಪ್ರಾಜೆಕ್ಟಿಗೆ ಹೋಗುತ್ತಿದ್ದುದರಿಂದ ಇದ್ದ ಅಲ್ಪಸ್ವಲ್ಪ ಸಮಯದಲ್ಲೇ ಸಾಧ್ಯವಾದಷ್ಟು ತಿಳಿದುಕೊಳ್ಳುವ ಸವಾಲು ನನ್ನದಾಗಿತ್ತು. ತಂತ್ರಜ್ಞಾನಕ್ಕಿಂತಲೂ ಮಾಡುವ ಕೆಲಸದ ಹಿಂದಿನ ಬ್ಯುಸಿನೆಸ್ ಪ್ರಾಸೆಸ್ಸುಗಳನ್ನು ತಿಳಿದುಕೊಳ್ಳುವುದು ಮುಖ್ಯವಾಗಿತ್ತು ಹಾಗೂ ಅದು ಕ್ಲಿಷ್ಟಕರವಾಗಿತ್ತು. ಆ ಕನ್ಸಲ್‌ಟೆಂಟ್ ಆರ್ಡರ್ ಪ್ರಾಸೆಸ್ಸಿಂಗ್ ಸಿಸ್ಟಂ ಬಗ್ಗೆ ವಿವರಿಸುತ್ತಾ ಎಲ್ಲವನ್ನೂ ನೀರು ಕುಡಿದವರ ಹಾಗೆ ಹೇಳುತ್ತಾ ಬಂದಿದ್ದನ್ನೂ, ನಾನು ಕೇಳಿದ ಪ್ರಶ್ನೆಗಳಿಗೆಲ್ಲ ಉತ್ತರವನ್ನುಕೊಡುತ್ತಿದ್ದುದನ್ನೂ ನಾನು ಗುರುತಿಸಿಕೊಂಡೆ, ಆದರೆ ಮಾತಿನ ಮಧ್ಯೆ ಆತನೇ ಅದರ ಹಿಂದಿನ ರಹಸ್ಯವನ್ನು ಹೇಳಿಬಿಟ್ಟನು. ಅವನು ಈ ಪ್ರಾಜೆಕ್ಟಿನ ಮೇಲೆ ಅಫಿಷಿಯಲ್ ಆಗಿ ಕೆಲವೇ ತಿಂಗಳು ಕೆಲಸ ಮಾಡಿದ್ದರೂ ಆತನಿಗೆ ಅವನ ಕಂಪನಿಯಲ್ಲಿ ನಮ್ಮ ಕಂಪನಿಯ ವ್ಯವಹಾರ ವಿಷಯಗಳ ಬಗ್ಗೆ ನಮ್ಮ ಕಂಪನಿಯನ್ನು ಸೇರುವುದಕ್ಕೆ ಮೊದಲೇ ತರಬೇತಿ ದೊರೆತಿತ್ತೆಂತಲೂ, ನಮ್ಮ ಕಂಪನಿಯ ಡೇಟಾಬೇಸುಗಳು, ಸರ್ವರ್, ಫೈಲುಗಳ ಯಥಾನಕಲುಗಳು ಅವರ ಕಂಪನಿಯಲ್ಲೂ ಇದ್ದು, ಅದರ ಮೂಲಕ ನಮ್ಮ ಆಫೀಸಿನೊಳಗೆ ಕಾಲಿಡುವುದಕ್ಕೆ ಮೊದಲೇ ಅವರಿಗೆಲ್ಲ ಗೊತ್ತಿರುತ್ತದೆಂತಲು ತಿಳಿದು ಹೋಯಿತು.

ಅಲ್ಲದೇ, ಇಂಥ ಕನ್ಸಲ್‌ಟೆಂಟ್ ಪ್ರತಿಯೊಬ್ಬರ ಬಳಿಯೂ ಒಂದೊಂದು ಲ್ಯಾಪ್‌ಟಾಪ್ ಇದ್ದು, ನಮ್ಮ ಆಫೀಸಿನ್ ಇ-ಮೇಲುಗಳನ್ನು ತಮ್ಮ ಆಕ್ಸೆಂಚರ್ ವಿಳಾಸಕ್ಕೆ ಕಳಿಸಿಕೊಳ್ಳುವುದೇನು, ಅವರು ತಮ್ಮ-ತಮ್ಮಲೇ AOL ಮೆಸ್ಸೆಂಜರ್‍ ಮೂಲಕ ಹಾಗೂ ಅಲ್ಲಲ್ಲಿ ಗುಂಪುಗೂಡಿ ಚರ್ಚಿಸಿ ಸ್ಟ್ರ್ಟಾಟೆಜಿಯನ್ನು ಸಿದ್ಧಪಡಿಸುವುದೇನು, ಇವೆಲ್ಲವೂ ಬಹಳ ವ್ಯವಸ್ಥಿತವಾಗಿ ನಡೆಯುತ್ತಲೇ ಬಂದಿದೆ. ಇವೆಲ್ಲಕ್ಕೂ ಹೆಚ್ಚಾಗಿ ಪ್ರತಿಯೊಂದು ಆಕ್ಸೆಂಚರ್ ಕನ್ಸಲ್‌ಟೆಂಟ್ ಗುಂಪಿಗೆ ಒಬ್ಬೊಬ್ಬ ಬಿಸಿನೆಸ್ ಮ್ಯಾನೇಜರ್ ಇದ್ದು, ಈ ಮನುಷ್ಯನಿಗೆ ನಮ್ಮ ಕಂಪನಿಯ ದೊಡ್ಡ-ದೊಡ್ಡ ಎಕ್ಸಿಕ್ಯೂಟಿವ್‌ಗಳ ಸಂಪರ್ಕವಂತೂ ಬೇಕಾದಷ್ಟಿರುತ್ತದಾದ್ದರಿಂದ ನನ್ನಂತಹ ಎಂಪ್ಲಾಯಿಗಳಿಗೆ ತಲುಪಬೇಕಾದ ಸುದ್ದಿಗಳು ಈ ಕನ್ಸಲ್‌ಟೆಂಟುಗಳಿಗೆ ಯಾವತ್ತೋ ತಲುಪಿರುತ್ತದೆ!

ಮೊದಲೆಲ್ಲ, ಈ ಆಕ್ಸೆಂಚರ್ ಕನ್ಸಲ್‌ಟೆಂಟುಗಳು ಯಾವತ್ತೂ ನನಗಿಂತ ಟೆಕ್ನಾಲಜಿಯಲ್ಲಿ ಒಂದು ಹೆಜ್ಜೆ ಮುಂದೇ ಇರುತ್ತಿದ್ದರು, ಅವರ ಲ್ಯಾಪ್‌ಟಾಪ್‌ಗಳು, ಅದರಲ್ಲಿರುವ ಸಾಫ್ಟ್‌‌ವೇರ್‌ಗಳು ಯಾವತ್ತೂ ಇತ್ತೀಚಿನವಾಗಿರುತ್ತಿದ್ದವು, ಆದರೆ ನಮ್ಮ ಕಂಪನಿಯಲ್ಲಿ ಇತ್ತೀಚೆಗೆ ತೆಗೆದುಕೊಂಡ ಹೊಸ ಇನಿಷಿಯೇಟಿವ್ ಪ್ರಕಾರ ಈಗ ನಮಗೂ ಹೊಸತರ ಸೌಲಭ್ಯವಿದ್ದು, ಒಂದು ಸಣ್ಣ ಗ್ಯಾಪ್ ಮುಚ್ಚಿದಂತಾಗಿದೆ. ನಾವು ಎಂಪ್ಲಾಯಿಗಳಿಗೆ ಯಾವತ್ತಿದ್ದರೂ ಚೈನ್ ಆಫ್ ಕಮ್ಯಾಂಡ್ ಪಾಲಿಸುವಂತೆ ಸೂಚಿಸಲಾಗುತ್ತೆ, ಆದರೆ ಈ ಕನ್ಸಲ್‌ಟಂಟುಗಳ ಮಾತು ಬಹಳಷ್ಟು ದೂರ ಬೆಳಕಿನ ವೇಗದಲ್ಲಿ ಹೋಗುತ್ತದೆ. ಇವರುಗಳೆಲ್ಲ ಒಟ್ಟುಗೂಡಿಕೊಂಡು ಇನ್ನೊಬ್ಬರಿಗೆ ಕೈ ಮಾಡಿ ತೋರಿಸುವಂತಹ ಹಲವಾರು ಸನ್ನಿವೇಶಗಳನ್ನು ನಾನು ನೆನಪಿಸಿಕೊಳ್ಳಬಲ್ಲೆ.

ಇನ್ನೂ ಬೇಸರ ತರಿಸುವ ಸಂಗತಿಯೆಂದರೆ, ಅದು ಒರಿಜಿನಲ್ ಪ್ರಾಜೆಕ್ಟ್ ಪ್ಲಾನಿರಬಹುದು, ಅಥವಾ ಒಂದು ಡಾಕ್ಯುಮೆಂಟಿರಬಹುದು ನಾವು ಕೇಳಿದರೆ 'ಕೊಡುವುದಿಲ್ಲ' ಎಂಬ ಅರ್ಥ ಬರುವ ಪರ್ಯಾಯವಾದ ಉತ್ತರ ಸಿಗುತ್ತದೆ, ಅದೇ ನಮ್ಮ ಬಳಿಯಲ್ಲಿ ಏನಾದರು ಮಾಹಿತಿ ಇದ್ದರೆ ಇವರುಗಳು ಅದನ್ನು ಕಿತ್ತುಕೊಳ್ಳುವ ಪರಿಯನ್ನು ನೋಡಬೇಕು.

ಹೀಗೆ ನಮ್ಮಲ್ಲಿನ ಎಷ್ಟೋ ಡೇಟಾಬೇಸುಗಳು, ಸರ್ವರ್‌ಗಳು, ಫೈಲುಗಳು ಕಾಪಿಯಾಗಿ ಆಕ್ಸೆಂಚರ್ ಸಿಸ್ಟಂ‌ನಲ್ಲಿ ಕೂತಿರುವುದ್ದನ್ನು ನೋಡಿದ್ದೇನೆ. ಕೆಲವೊಂದು ಕೀ ಪೊಸಿಷನ್ನುಗಳಲ್ಲಿ ಪ್ರೊಪರೈಟರಿ ಹೆಸರಿನಿಂದಲೋ ಅಥವಾ ಯಾವತ್ತೂ ಅಳಿಯದ ಕಾಂಟ್ರಾಕ್ಟ್ ಹೆಸರಿನಿಂದಲೋ ಹದಿನೈದು ವರ್ಷಗಳಿಂದ ಒಂದೇ ಕಡೆಯಲ್ಲಿ ಒಂದೇ ಸಿಸ್ಟಂ ಮೇಲೆ ಕೆಲಸ ಮಾಡುವ ಆಕ್ಸೆಂಚರ್ ಕನ್ಸಲ್‌ಟೆಂಟುಗಳನ್ನು ನಾನು ಹತ್ತಿರದಿಂದ ಬಲ್ಲೆ.

ಅಂದರೆ ನಾನು, ಒಬ್ಬ ಏಕ ವ್ಯಕ್ತಿ ಪಡೆ ಏನನ್ನಾದರೂ ಮಾಡಿ ಸಾಧಿಸುವುದಾದರೆ ನನಗೆ ಇರೋ ಸಂಪನ್ಮೂಲಗಳಲ್ಲಿ, ಇರೋ ಅಡೆತಡೆಗಳನ್ನೆದುರಿಸಿ ಕೆಲಸ ಮಾಡಬೇಕು, ಅದರಲ್ಲಿ ಜಯಗಳಿಸಬೇಕು. ಆದರೆ ನನ್ನ ಪ್ರತಿಯಾಗಿ ನೇರವಾಗಿ ಹೋರಾಟಕ್ಕೆ ನಿಲ್ಲದೇ ಪದೇ-ಪದೇ ನನ್ನನ್ನು ತಮ್ಮ ಜೊತೆ ತೂಗಿಕೊಳ್ಳುವಂತೆ ಮಾಡುವ ಪ್ರತಿಯೊಬ್ಬ ಆಕ್ಸೆಂಚರ್ ಕನ್ಸಲ್‌ಟೆಂಟ್ ಹಿಂದೆಯೂ ಒಂದು ವ್ಯವಸ್ಥಿತ ಜಾಲವಿದೆ, ಹಲವಾರು ತಲೆಗಳಿವೆ ಹಾಗೂ ಅವರಿಗೆ ಬರದದ್ದನ್ನು ತಿಳಿಸುವ ವ್ಯವಸ್ಥೆ ಇದೆ, ತಮ್ಮ ತನವನ್ನು ಕಾಯ್ದುಕೊಳ್ಳುವ ಗುಟ್ಟಿದೆ. ಈ ಕನ್ಸಲ್‌ಟೆಂಟ್‌ಗಳು ಕೆಲಸ ಹಾಗೂ ಮಾತಿನಲ್ಲೂ ಮಹಾ ನಿಪುಣರು ಹಾಗೂ ಜಾಣರು, ಅದರಲ್ಲಿ ಎರಡು ಮಾತಿಲ್ಲ - ಅದರ ಜೊತೆಯಲ್ಲಿ ಒಂದು ವ್ಯವಸ್ಥಿತವಾದ ಯೋಜನೆಯೂ ಸೇರಿ ಒಂದು ರೀತಿ ಬ್ರಿಟೀಷರು ಆಗಿನ ಕಾಲದ ಭಾರತವನ್ನು ಆಳಿದ ಹಾಗೆ ಇವರುಗಳು ತಮ್ಮ ಬೇಳೆ ಕಾಳನ್ನು ಬೇಯಿಸಿಕೊಳ್ಳುತ್ತಲೇ ಇದ್ದಾರೆ.

ಒಂದು ಕಡೆ ಇಂಥ ವ್ಯವಸ್ಥಿತವಾದ ಅಕ್ಸೆಂಚರ್ ಕನ್ಸಲ್‌ಟೆಂಟನ್ನು ನನ್ನ ಬಾಸು ಕೊಂಡಾಡುತ್ತಿದ್ದರೆ ಮತ್ತೊಂದು ಕಡೆ ಹೇಳುವರಿಲ್ಲದೆ ಕೇಳುವರಿಲ್ಲದೇ ಎಷ್ಟೋ ಬಾರಿ ನನ್ನಲ್ಲೇ ನಾನು ಕೊರಗಿದ್ದೇನೆ, ಮರುಗಿದ್ದೇನೆ.

Monday, July 24, 2006

ಮೀಸಲಾತಿ ಸಿಗಬೇಕಾದವರಿಗೆ ಸಿಕ್ಕಿದ್ದರೆ...

ಮೀಸಲಾತಿ ಇಂಥವರಿಗೆ ಸಿಗಬೇಕು, ಅಂಥವರಿಗೆ ಸಿಗಬೇಕು, ಇಂತಿಂಥವರಿಗೆ ಸಿಗಬಾರದು ಎಂದು ಯಾರು ಎಷ್ಟೇ ಲಾಬಿ ಮಾಡಿದರೂ ಕೊನೆಯಲ್ಲಿ ಅದು ತಲುಪಬೇಕಾದವರಿಗೆ ತಲುಪುವ ಹೊತ್ತಿಗೆ ಮತ್ತಿನ್ನೇನೋ ಆಗಿರುತ್ತದೆ. ಒಟ್ಟಿನಲ್ಲಿ ಫಲವನ್ನು ಯಾರನ್ನು ಉದ್ದೇಶದಲ್ಲಿಟ್ಟುಕೊಂಡು ಮಾಡಲಾಗಿದೆಯೋ ಅವರಿಗೂ ಹಾಗೂ ಫಲಾನುಭವಿಗಳಿಗೂ ವ್ಯತ್ಯಾಸವಿದ್ದಾಗ ಮೀಸಲಾತಿ ದೊರಕಿಸಿಕೊಡಬಹುದು ಎನ್ನುವ ಸಾಮಾಜಿಕ ನ್ಯಾಯಕ್ಕೆ ಒಂದು ಅರ್ಥ ಬರೋದಾದರೂ ಹೇಗೆ?

ಸುಮಾರು ೧೯೮೭-೮೮ ರ ಹೊತ್ತಿಗೆ ಶಿವಮೊಗ್ಗ ಜಿಲ್ಲೆಯಲ್ಲಿರುವ ಎರಡು ಟಿಸಿಎಚ್ ಕಾಲೇಜುಗಳಲ್ಲಿ ನನ್ನ ಕಣ್ಣ ಮುಂದೆ ನಡೆದ ಗೊಂದಲ ಇವತ್ತಿಗೂ ನಡೆಯುತ್ತಲೇ ಇದೆ, ಎಷ್ಟೇ ಮೀಸಲಾತಿ ಸೌಲಭ್ಯ ದೊರೆತರು ಅದು ತಲೆಮಾರುಗಳನ್ನು ದಾಟಿ ತಲುಪುವವರಿಗೆ ತಲುಪುವ ಹೊತ್ತಿಗೆ ಹಲವಾರು ವರ್ಷಗಳು ಬೇಕಾಗುವುದಂತೂ ನಿಜ. ೧೯೮೭ ಕ್ಕಿಂತ ಮೊದಲು ಆನವಟ್ಟಿಯಲ್ಲಿ ಟಿಸಿಎಚ್ ಸೇರಬೇಕಾಗಿದ್ದರೆ ಕೇವಲ ಮೆರಿಟ್ ಆಧಾರದ ಮೇಲೆ ಮಾತ್ರ ಸೀಟುಗಳನ್ನು ಹಂಚುತ್ತಿದ್ದರು, ಇಡೀ ಜಿಲ್ಲೆಗೆ ಇರೋದೇ ಎರಡು ಸಂಸ್ಥೆಗಳು, ಒಂದಿರೋದು ಶಿವಮೊಗ್ಗ ಪೇಟೆಯಲ್ಲಿ, ಮತ್ತೊಂದು ಆನವಟ್ಟಿ ಹೋಬಳಿ ಅನ್ನೋ ಕುಗ್ರಾಮದಲ್ಲಿ. ಇವೆರಡೂ ಕಾಲೇಜುಗಳನ್ನು ಸೇರಿಸಿದರೆ ಒಟ್ಟು ನೂರು ಜನರು ಪ್ರತಿವರ್ಷ ಶಿಕ್ಷಕರಾಗಲು ಅರ್ಹತೆ ಪಡೆಯುತ್ತಿದ್ದರು. ಆದರೆ ಟಿಸಿಎಚ್ ಕೋರ್ಸನ್ನು ಮುಗಿಸಿದರೆ ಕೆಲಸ ಸಿಗುವದಂತೂ ಗ್ಯಾರಂಟಿಯಾದ್ದರಿಂದಲೂ ಹಾಗೂ ಹಳ್ಳಿಯ ವಲಯದಲ್ಲಿ ಅತ್ಯಂತ ಪ್ರಭಾವೀ ವೃತ್ತಿಯಾಗಿ ಶಿಕ್ಷಕರನ್ನು ನೋಡುತ್ತಿದ್ದರಿಂದಲೂ ಬಹಳಷ್ಟು ಜನರು ಈ ಕೋರ್ಸುಗಳಿಗೆ ಮುಗಿಬೀಳುತ್ತಿದ್ದರು. ಜನರಲ್ಲಿ ಹೆಚ್ಚಾದ ಬೇಡಿಕೆಯಿಂದಲೂ ಹಾಗೂ ಬದಲಾದ ಶಿಕ್ಷಣ ನಿಯಮಗಳಿಗೆ ತಕ್ಕಂತೆ ಮೊದಲೆಲ್ಲ ಹತ್ತನೇ ತರಗತಿಯನ್ನು ಮುಗಿಸಿದವರಿಗೆ ಸಿಗುತ್ತಿದ್ದ ಟಿಸಿಎಚ್ ಪ್ರವೇಶಕ್ಕೆ ಪಿಯುಸಿಯನ್ನು ಮಾಡುವಂತೆ ಕಡ್ಡಾಯವಾಯಿತು, ಇದೇ ಸಮಯಕ್ಕೆ ಬಂದ ಮೀಸಲಾತಿ ನಿಯಮಗಳಿಗನುಗುಣವಾಗಿ ಟಿಸಿಎಚ್ ಸೀಟುಗಳನ್ನು ಹಂಚಲು ಮೊದಲು ಮಾಡಿದರು.

ನಮ್ಮ ಮನೆಯಲ್ಲಿ ಈಗಾಗಲೇ ಟಿಸಿಎಚ್ ಮಾಡಿ ಒಂದಿಬ್ಬರಾದರೂ ಮೇಷ್ಟ್ರರಾದ್ದರಿಂದ ಹಾಗೂ ನಾವು ಆನವಟ್ಟಿಯಲ್ಲೇ ಇದ್ದುದರಿಂದಲೂ ಮೊದಲಿಂದ ನಮಗೆ ಟಿಸಿಎಚ್ ಶಿಕ್ಷಕರು, ಹಳೆ-ಹೊಸ ವಿದ್ಯಾರ್ಥಿಗಳು ಎಲ್ಲರೂ ಪರಿಚಯವೇ. ಹೀಗೇ ಒಂದು ವರ್ಷ, ಮೀಸಲಾತಿ ಹಾಗೂ ಪಿಯುಸಿ ವಿದ್ಯಾಭ್ಯಾಸ ಕಡ್ಡಾಯವಾದ ಮೇಲೆ ಆ ವರ್ಷ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯನ್ನು ನೋಡಲು ನಾನೂ ಹೋಗಿದ್ದೆ, ಅಲ್ಲಿ ಬಂದಿದ್ದವರಿಗೆ, ಹಾಗೂ ಟಿಸಿಎಚ್ ನಲ್ಲಿ ಪಾಠಮಾಡುವ ಮೇಷ್ಟ್ರುಗಳಿಗೂ ಆಶ್ಚರ್ಯವಾಗುವಂತೆ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಗಳಲ್ಲಿ (ಪಜಾಪವ) ವಿದ್ಯಾರ್ಥಿಗಳ ಯಾದಿಯಲ್ಲಿ ಜನರಲ್ ಮೆರಿಟ್‌ಗಿಂತಲೂ ಹೆಚ್ಚು ಅಂಕ ತೆಗೆದವರಿದ್ದರು, ಉದಾಹರಣೆಗೆ ಪಜಾಪವ ದಲ್ಲಿ ಕಡಿಮೆ ಎಂದರೆ ೮೫ ಪರ್ಸೆಂಟ್ ಅಂಕಕ್ಕೆ ಸೀಟು ದೊರೆತಿದ್ದರೆ, ಅದು ಜನರಲ್ ಮೆರಿಟ್‌ನಲ್ಲಿ ೭೨ ಕ್ಕೆ ನಿಂತಿತ್ತು. ನಿರೀಕ್ಷೆಗಿಂತಲೂ ಹೆಚ್ಚಾಗಿ ಬಂದ ಅರ್ಜಿಗಳು, ಅದೇ ವರ್ಷ ಅನ್ವಯವಾದ ಹೊಸ ರೀತಿ-ವಿಧಾನಗಳು ಈ ಬದಲಾವಣೆಯನ್ನು ನಂಬಲು ಕಷ್ಟವನ್ನಾಗಿಸಿದ್ದವು. ಜನರಲ್ ಮೆರಿಟ್‌ನಲ್ಲಿ ಹೆಚ್ಚು ಅಂಕ ತೆಗೆದ ವಿದ್ಯಾರ್ಥಿಗಳು ಟಿಸಿಎಚ್ ಗೆ ಅರ್ಜಿ ಹಾಕುತ್ತಾರೋ ಬಿಡುತ್ತಾರೋ, ಅಥವಾ ಪಜಾಪವ ದವರಲ್ಲಿ ಹೆಚ್ಚು ಅಂಕಗಳನ್ನು ತೆಗೆದವರೆಲ್ಲರು ಟಿಸಿಎಚ್ ಗೆ ಮುಗಿ ಬೀಳುತ್ತಾರೋ ಒಂದಂತೂ ಖಂಡಿತ - ಈ ಮೇಲಿನ ಉದಾಹರಣೆಯಲ್ಲಿ ೮೪ ಪರ್ಸೆಂಟ್ ಅಂಕಗಳನ್ನು ತೆಗೆದ ಪಜಾಪವ ವಿದ್ಯಾರ್ಥಿಗೆ ಸೀಟು ಸಿಗೋದಿಲ್ಲ, ಅಲ್ಲದೇ ಆತ ಜನರಲ್ ಮೆರಿಟ್ ವಿದ್ಯಾರ್ಥಿಗಳಿಗಿಂತಲೂ ಹೆಚ್ಚಿನ ಸ್ಪರ್ಧೆಯನ್ನು ಎದುರಿಸಬೇಕಾಗುತ್ತದೆ.

ಮೀಸಲಾತಿ ಕೇವಲ ಜಾತಿಯ ಆಧಾರದ ಮೇಲಿದ್ದರೆ ಮಾತ್ರ ಕೆಲಸ ಮಾಡುವುದಾದರೂ ಹೇಗೆ? ಪ್ರತಿಯೊಂದು ಜಾತಿ, ವರ್ಗಗಳಲ್ಲು ಬಡವರು-ಬಲ್ಲಿದರು ಇದ್ದೇ ಇರುತ್ತಾರೆ, ಯಾವ ವರ್ಗದಲ್ಲೇ ಇರಲಿ, ಖಾಸಗೀ ಟ್ಯೂಷನ್ ಹೇಳಿಸಿಕೊಂಡು, ಸಿಗುವ ಎಲ್ಲ ಸೌಲತ್ತುಗಳಲ್ಲಿ ಸ್ಪರ್ಧೆಗಿಳಿಯುವ ಉಳ್ಳವರಿಗೂ, ಏನೂ ಗತಿ ಇರದೆ ಸುಮ್ಮನೇ ಸ್ಪರ್ಧೆಯಲ್ಲಿ ತಗುಲಿಕೊಳ್ಳುವವರಿಗೂ ಎಲ್ಲಿಯ ಸಮ? ಸರ್ಕಾರದ ವ್ಯವಸ್ಥೆ ಪ್ರತಿವರ್ಷ ಜಾತಿ ಆಧಾರಿತ ಪಟ್ಟಿಯನ್ನು ಬದಲಾಯಿಸುತ್ತದೆಯೇ ವಿನಾ ಜನರ ಆದಾಯವನ್ನು ಪರಿಗಣಿಸಿ ಬಡವರನ್ನು ಎಣಿಸುವುದಿಲ್ಲ. ನಾನು ಸ್ನಾತಕೋತ್ತರ ಪದವಿ ಮುಗಿಸುವವರೆಗೂ ವರ್ಷಕ್ಕೆ ೩೬೦೦ ರೂಪಾಯಿಯ ಆದಾಯದಲ್ಲಿದ್ದೇವೆಂದು ಆದಾಯ ಪತ್ರವನ್ನು ಪಡೆಯುತ್ತಿದ್ದವರು ಎಷ್ಟೋ ಜನರು ನನಗೆ ಗೊತ್ತಿತ್ತು. ಅಂದರೆ ಆಗಿನ ಕಾಲದಲ್ಲೇ ತಿಂಗಳಿಗೆ ಮುನ್ನೂರು ರೂಪಾಯಿ ಆದಾಯ ಯಾವ ಲೆಕ್ಕಕ್ಕೂ ಇರದಿದ್ದಾಗ, ಇಂದಿಗೂ ಕನಿಷ್ಠ ಆದಾಯ ಎಷ್ಟಿದೆಯೋ, ಆದರೆ ಅದಂತೂ ಹಣದುಬ್ಬರಕ್ಕೆ ತಕ್ಕಂತೆ ಬದಲಾಗದೇ ಹೋದರೆ ಅದು ಇದ್ದರೂ ಒಂದೇ ಇಲ್ಲದಿದ್ದರೂ ಒಂದೇ - ದಿನವೂ ತಾಲೂಕ್ ಆಫೀಸುಗಳಲ್ಲಿ ಜನರು ಸುಳ್ಳು ಹೇಳುತ್ತಲೇ ಇರಬೇಕಾಗುತ್ತದೆ.

ವಿದ್ಯಾರ್ಥಿಗಳು ತೆಗೆದ ಅಂಕಗಳ ಮೇಲೆ ಮಾತ್ರವೇ ವ್ಯವಸ್ಥೆಯ ನಿರ್ಣಯವಾಗುವುದಾದರೆ ಬಡತನದಲ್ಲಿ ಬರುವ ಯೋಗ್ಯರನ್ನು ಕಡೆಗಣಿಸಿದಂತಾಗುತ್ತದೆ, ಜಾತಿ ಆಧಾರದಲ್ಲಿ ಮಾಡಿದರೆ ಇನ್ನೇನೋ ಅರ್ಥ ಬರುತ್ತದೆ. ಆದರೆ ಒಂದಂತೂ ನಿಜ, ಎಂಥ ಐಎ‌ಎಸ್ ಆಫೀಸರರ ಮಕ್ಕಳೂ ತಮಗೆ ಅನ್ವಯವಾಗುವ ಎಲ್ಲ ಸೌಲಭ್ಯಗಳನ್ನೂ ಪಡೆದೇ ತೀರುತ್ತಾರೆ, ಲಕ್ಷಾಧೀಶ್ವರರ ಮಕ್ಕಳಿಗೆ ಜಾತಿಯ ಆಧಾರದಲ್ಲಿ ಒಂದು ಸೀಸದ ಕಡ್ಡಿ ಸಿಕ್ಕರೂ ಅದನ್ನು ಅವರು ಹೊಂದೇ ಹೊಂದುತ್ತಾರೆ - ಅದು ಇಲ್ಲೂ ನಿಜ, ಎಲ್ಲೂ ನಿಜ - ನನ್ನ ಸಹೋದ್ಯೋಗಿ ಒಬ್ಬರು ಇತ್ತೀಚೆಗೆ ಹಲವಾರು ಮಿಲಿಯನ್ ಡಾಲರ್‌ಗಳ ಮೊತ್ತವನ್ನು ಪಡೆದು ನಿವೃತ್ತರಾದರು, ತಾನು ಹಲವಾರು ರೀತಿಯಲ್ಲಿ ಉಳಿಸಿದ ಹಣ, ರಿಟೈರ್‌ಮೆಂಟ್ ಹಣ, 401K ಹಣ, ಎಲ್ಲವೂ ಸೇರಿ ಬಹಳಷ್ಟು ಬಂದಿತ್ತು, ಆದರೆ ನಮ್ಮ ಕಂಪನಿಯ ಜೊತೆಗೆ ಮಾಡಿಕೊಂಡ ಒಪ್ಪಂದದ ಪ್ರಕಾರ ಆಕೆ ತನ್ನನ್ನು ತಾನು ಕೆಲಸದಿಂದ ತೆಗೆಸಿಕೊಂಡ ಹಾಗೆ ಮಾಡಿರೋದರಿಂದ ಇನ್ನೂ ಹಲವು ಹಣಕಾಸಿನ ಅನುಕೂಲವಾಯಿತು, ಇಷ್ಟೆಲ್ಲಾ ಆದರೂ ಆಕೆ ನನ್ನ ಜೊತೆಯಲ್ಲಿ ಮಾತನಾಡುತ್ತಾ ತಾನು Unemployment benefits ಗೆ ಅರ್ಜಿ ಗುಜರಾಯಿಸುತ್ತಿದ್ದೇನೆಂದು ಕೇಳಿ ನನಗೆ ಮೈ ಉರಿದು ಹೋಯಿತು. ಸರ್ಕಾರದ ಬೊಕ್ಕಸದಿಂದ, ತೆರಿಗೆದಾರರು ಕೊಟ್ಟ ಹಣದಲ್ಲಿ ಹತ್ತು ಸಾವಿರ ಡಾಲರ್ ಬರುವುದಾದರೆ ಬರಲಿ ಎಂಬ ಆಸೆ ಅಕೆಯದು. ನಾನು ಪದೇ ಪದೇ ಹಾಗೆ ಮಾಡುತ್ತಿರುವುದು ಸರಿಯಲ್ಲ ಎಂದು ಹೇಳಿದರೂ ಆಕೆ ತನ್ನ ನಿಲುವನ್ನೇ 'ನಾನು ಟ್ಯಾಕ್ಸ್ ಕಟ್ಟುವುದಿಲ್ಲವೇ?' ಎಂದು ಸಾಧಿಸಿಕೊಳ್ಳಲು ಆರಂಭಿಸಿದ್ದನ್ನು ಕೇಳಿ ನನಗಂತೂ ಇಷ್ಟು ವರ್ಷಗಳ ಕಾಲ ಆಕೆಯ ಮೇಲೆ ಇಟ್ಟಿದ್ದ ಭರವಸೆಯೇ ಹೊರಟು ಹೋಯಿತು - ಈ ವಿಷಯವನ್ನು ನನ್ನ ಮತ್ತೊಬ್ಬ ಸಹೋದ್ಯೋಗಿಗೆ ಹೇಳಿದೆ, ಆಕೆ ಒಂದೇ ಮಾತಿನಲ್ಲಿ ಅಂದರು - more you have it, more you want.

ಆಗೆಲ್ಲ ಮೀಸಲಾತಿ ಎನ್ನುವುದು ಬೇಡ, ಅಕಸ್ಮಾತ್ ಇದ್ದರೂ ಆದಾಯದ ನೆಲೆಗಟ್ಟಿನ ಮೇಲಿರಲಿ ಎಂದು ವಾದ ಮಾಡುತ್ತಿದ್ದೆ, ಅಂದು ಮಧ್ಯಮ ವರ್ಗದ ನೆಲೆಯಲ್ಲಿ ಅದೇ ಸತ್ಯವೆನಿಸುತ್ತಿತ್ತು, ಈಗ ಪರಿಸ್ಥಿತಿ ಹೇಗಿದೆಯೋ ಯಾರಿಗೆ ಗೊತ್ತು, but you keep me honest here!

Sunday, July 23, 2006

ಮುಖವಾಡಗಳ ಹಿಂದೆ, ಮುಂದೆ

ನಾವೆಲ್ಲರೂ ದಿನನಿತ್ಯದ ಕೆಲಸ ಕಾರ್ಯಗಳಲ್ಲಿ, ಸಮಯ ಸಂದರ್ಭಕ್ಕೆ ತಕ್ಕಂತೆ ಮುಖವಾಡಗಳನ್ನು ತೊಟ್ಟುಕೊಳ್ಳುತ್ತೇವೆ. ಅದೂ ಒಂದು ರೀತಿಯ ಪ್ರಯೋಗವೇ, ಮೊದಮೊದಲು ಹೀಗೆ ಮಾಡಿದರೆ ಹೇಗೆ, ಹೀಗಿದ್ದರೆ ಏನಾದೀತು, ಹೀಗಂದರೆ ಏನಾಗುತ್ತೋ ನೋಡೋಣ ಎನ್ನುವ ಚಿಕ್ಕಚಿಕ್ಕ ದಿನನಿತ್ಯದ ಕನ್‌ವೆನ್‍ಷನ್‌ಗಳು ಅನಂತರ ನಮ್ಮ ಕ್ಯಾರೆಕ್ಟರ್ ಆಗಿಬಿಡುತ್ತವೆ, ಒಮ್ಮೆ ನಮ್ಮ ವ್ಯಕ್ತಿತ್ವವನ್ನು ರೂಪಿಸಿಬಿಟ್ಟ ಮುಖವಾಡಗಳು ನಮ್ಮನ್ನು ಬಿಟ್ಟು ಹೋಗೋದೇ ಇಲ್ಲ! ಹೀಗೆ ಮುಖವಾಡಗಳ ಮೇಲೆ ಮುಖವಾಡ, ಬಣ್ಣದ ಮೇಲೆ ಬಣ್ಣ ಹಚ್ಚಿ-ಹಚ್ಚಿ ಮೂಲ ರೂಪ ಮರೆಯಾಗುವುದೂ ಅಲ್ಲದೇ ಯಾವುದು ಮೂಲ, ಯಾವುದು ಸುಮ್ಮನೇ ಹುಟ್ಟಿಸಿದ್ದು (pretentious) ಎನ್ನುವ ಗೊಂದಲ ನನಗಂತೂ ಆಗಿದೆ.

ನಾವು ಯಾವ ಅಕ್ಷರಗಳನ್ನು ಹೇಗೆ ಬರೆಯುತ್ತೇವೆ, ಯಾವ ರೀತಿ ಹಾವ ಭಾವಗಳನ್ನು ಬೆಳೆಸಿಕೊಳ್ಳುತ್ತೇವೆ ಅನ್ನೋದು ನಮ್ಮ ನೆರೆಹೊರೆಯ ಮೇಲೆ ಹೆಚ್ಚಾಗಿ ಅವಲಂಭಿತವಾಗಿದೆ, ನಮ್ಮ ಇಂಗ್ಲೀಷ್ ಮೇಷ್ಟ್ರು ಬೋರ್ಡಿನ ಮೇಲೆ ಬಳ್ಳಿಯ ಹಾಗೆ ಸುತ್ತಿ 'A' ಅಕ್ಷರವನ್ನು script ನಲ್ಲಿ ಬರೆಯುತ್ತಿದ್ದುದನ್ನು ನಾನೂ ಹಚ್ಚಿಕೊಂಡೆ ಎನ್ನುವ ಸರಳ ಅನುಕರಣೆಯಾಗಿರಬಹುದು, ಅಥವಾ ಯಾವುದೋ ಒಂದು ಸಿನಿಮಾದಲ್ಲಿ ಮೈಕಲ್ ಡಗ್ಲಾಸ್ ಅಥವಾ ರಾಜ್‌ಕುಮಾರ್ ಪಾತ್ರ ಯಾವುದೋ ಒಂದು ಸಂದರ್ಭಕ್ಕೆ ವಿಶೇಷವಾಗಿ ತೋರಿಸಿದ ಪ್ರತಿಕ್ರಿಯೆ ಇದ್ದಿರಬಹುದು. ಹೀಗೆ ದಿನನಿತ್ಯವೂ ಅಲ್ಲಲ್ಲಿ ನಮ್ಮ ಮೇಲೆ ಹೊರಗಿನ influence ಗಳು ತಮ್ಮ ಛಾಪನ್ನು ಒತ್ತುತ್ತಲೇ ಇರುತ್ತವೆ, ಇನ್ನು ಮನಸ್ಸಿನ ಒಳಗೂ ನಡೆಯುವ ಹಲವಾರು ತಾಲೀಮುಗಳು ಪ್ರತಿಯೊಂದು ಕ್ರಿಯೆಗೆ ಇದೇ ರೀತಿ ಉತ್ತರ ಕೊಡುವಂತೆ ಪ್ರಚೋದಿಸುತ್ತವೆ. ಎಲ್ಲೋ ಹುಟ್ಟಿ, ಈ ಒಳ-ಹೊರಗಿನ ವ್ಯಾಪಾರದಲ್ಲಿ ಪಳಗಿ, ದಿನನಿತ್ಯವೂ ತಕ್ಕ ಮಟ್ಟಿಗೆ ಬದಲಾಗುವ ನಡತೆಯಾಗಿಬಿಡುತ್ತದೆ.

ನನಗೆ ಇನ್ನೂ ಚೆನ್ನಾಗಿ ನೆನಪಿರೋ ಹಾಗೆ, ನಾನು ಏಳನೇ ಕ್ಲಾಸಿನಲ್ಲಿದ್ದಾಗ ಒಂದು ದಿನ ಹೀಗೇ ಮಧ್ಯಾಹ್ನ ನಿದ್ದೆಯಿಂದ ಎದ್ದವನೇ, ಇನ್ನೂ ನಿದ್ದೆಗಣ್ಣಿನಲ್ಲಿಯೇ ನನ್ನ ಅಕ್ಕನನ್ನು ಕೇಳಿದ ಪ್ರಶ್ನೆಯೊಂದು ನನ್ನನ್ನು ಬಹಳಷ್ಟು ಸತಾಯಿಸಿತ್ತು. ಅವಳು ಹೊರಗಡೆ ಅವಳ ಸ್ನೇಹಿತೆಯ ಜೊತೆ ಮಾತನಾಡುತ್ತಿದ್ದಳು, ನಾನು ಇನ್ನೂ ಕಣ್ಣು ಉಜ್ಜಿಕೊಳ್ಳುತ್ತಲೇ, 'ನನ್ನ ಮುಖವಾಡ ಎಲ್ಲಿದೆ? ಎಲ್ಲಿಟ್ಟಿದ್ದೀ...' ಎಂದು ಒಂದು ರೀತಿಯ ಕೋಪ ಮಿಶ್ರಿತ ಧ್ವನಿಯಲ್ಲಿ ಕೇಳಿದಾಗ ಅವಳೂ, ಆಕೆಯ ಸ್ನೇಹಿತೆಯೂ ಕಕ್ಕಾಬಿಕ್ಕಿಯಾಗಿ ನನ್ನನ್ನೇ ನೋಡಿ 'ಯಾವ ಮುಖವಾಡ?' ಎಂದು ಕೇಳಿದ್ದರು, ಆದರೆ ಅದರ ನಂತರ ನಮ್ಮಿಬ್ಬರ ನಡುವೆ ಒಂದು ರೀತಿಯ ಮೌನ ಹುಟ್ಟಿ, ನಾನು ಕುರ್ಚಿಯ ಮೇಲೆ ಪ್ರಪಂಚವೆಲ್ಲ ನನ್ನ ತಲೆಯ ಮೇಲೆ ಬಿದ್ದಿದೆ ಎನ್ನೋ ಹಾಗೆ ಬಹಳಷ್ಟು ಹೊತ್ತು ಕುಳಿತದ್ದು ನನಗೆ ಇನ್ನೂ ಚೆನ್ನಾಗಿ ನೆನಪಿದೆ. ನಾನು ಆಗ ಮುಖವಾಡ ಹುಡುಕಿದ್ದು ಏಕೆಂದರೆ ಆಗ ಓದುತ್ತಿದ್ದ ಕನ್ನಡ ಪತ್ತೇದಾರಿ ಕಾದಂಬರಿಗಳ ಪರಿಣಾಮವೋ ಮತ್ತೊಂದೋ ಎನ್ನೋ ಹಾಗೆ ನನ್ನ ಮುಖದ ತುಂಬೆಲ್ಲ ಆಸಿಡ್ ಬಿದ್ದ ಹಾಗೆ, ಹಾಗೂ ನಾನು ಮುಖವಾಡವಿಲ್ಲದೇ ಎಲ್ಲೂ ಹೋಗದ ಹಾಗೆ ಕನಸೊಂದು ಬಿದ್ದಿದ್ದು. ಆ ಕನಸು ನನ್ನ ಮೇಲೆ ಎಷ್ಟು ಗಾಢವಾದ ಪರಿಣಾಮವನ್ನು ಬೀರಿತ್ತು ಎಂದರೆ ಅದರಿಂದ ಹೊರಬರಲು ಬಹಳಷ್ಟು ಸಮಯ ಹಿಡಿಯಿತು, ಅಲ್ಲದೇ ನಾನು ಮುಖವಾಡ ಕೇಳಿದೆನೆಂದು ನನ್ನ ಅಕ್ಕ ಬಹಳಷ್ಟು ದಿನ ನನ್ನನ್ನು ತಮಾಷೆ ಮಾಡಿ ಸತಾಯಿಸುತ್ತಲೇ ಇದ್ದಳು.

ನನ್ನ ಸ್ನೇಹಿತರೊಬ್ಬರನ್ನು ವಾಷಿಂಗ್ಟನ್ ಡಿಸಿಯಲ್ಲಿ ಕಾರಿನಲ್ಲಿ ತಿರುಗಾಡಿಸುತ್ತಿದ್ದೆ, ನನ್ನ ಬಯಲು ಸೀಮೆಯ ಕನ್ನಡದ ದೆಸೆಯಿಂದ ಆಗ ಮಾತಿನಲ್ಲಿ ಬಹಳಷ್ಟು ಆ ಮಗ..., ಈ ಮಗ... ಎನ್ನೋ ಬೈಗಳು ಹೊರಬರುತ್ತಲೇ ಇದ್ದವು. ನನ್ನ ಸ್ನೇಹಿತರು ಬಹಳಷ್ಟು ಹೊತ್ತು ನೋಡಿ 'ನೀವೇಕೆ ಅಷ್ಟೊಂದು ಬೈಗಳವನ್ನು ಮಾತಿನಲ್ಲಿ ಬಳಸೋದು!' ಎಂದು ಕೇಳಿಯೇ ಬಿಟ್ಟರು, ನಾನು ಕಕ್ಕಾಬಿಕ್ಕಿಯಾದೆ, ಅದು ನನ್ನ ನೇಚರ್ ಆಗಿರಬಹುದು, ಅಥವಾ ಆ ಬೈಗಳುಗಳಿಗೆ ನಿರ್ಧಿಷ್ಟ ಅರ್ಥವಿರದ ಸುಮ್ಮನೇ ಆಡುವ ಮಾತಿನ ಒಂದು ಭಾಗವಾಗಿರಬಹುದು, ಅಥವಾ ನಾನು ಬೆಳೆದು ಬಂದ ನೆರೆಹೊರೆಯ ಪರಿಣಾಮವಿರಬಹುದು. ಏನೇ ಆದರೂ ಒರಟು ಕನ್ನಡವನ್ನು ಮಾತನಾಡುತ್ತ tough looking ಮುಖವಾಡವನ್ನು ಹಾಕಿಕೊಂಡಿದ್ದೆನೆ ಎಂದುಕೊಂಡವನಿಗೆ ಅದು ನನ್ನ ಮುಖವಾಡವಲ್ಲ, ಮುಖ ಎಂದು ತಿಳಿದದ್ದು ಬಹಳ ಚಿಂತೆಗೆ ಈಡು ಮಾಡಿತು. ನನ್ನ ಸಹೋದ್ಯೋಗಿಗಳಲ್ಲಿ ನ್ಯೂ ಯಾರ್ಕ್ ಮೂಲದವರಿಗೆ ಒಂದು ರೀತಿಯ ಮಾತಿನ ಶೈಲಿಯಿದೆ, ಅವುಗಳಲ್ಲಿ ಬೈಗಳವೂ ಪ್ರಾದಾನ್ಯತೆ ಪಡೆಯುತ್ತವೆ, ಎಷ್ಟೋ ಬಾರಿ 'f' ಪದಗಳು ಎಗ್ಗಿಲ್ಲದೆ ಎಲ್ಲಿ ಬೇಕಂದರಲ್ಲಿ ಹರಿದು ಬರುತ್ತವೆ, ಹಲವಾರು ಹಿನ್ನೆಲೆಯಿಂದ ಬಂದ ಕೇಳುಗರಿಗೆ ಮುಜುಗರವಾದರೂ ನ್ಯೂ ಯಾರ್ಕ್ ಮೂಲದ ಸಹೋದ್ಯೋಗಿಗಳಿಗೆ ಇದರ ಬಗ್ಗೆ ಏನೇನೂ ಅನ್ನಿಸುವುದೇ ಇಲ್ಲ! ಅದು ಒಂದು ರೀತಿಯಲ್ಲಿ ಒಳ್ಳೆಯದೇ ಏಕೆಂದರೆ ಅವರ ನೇಚರ್ ಹಾಗಿರುತ್ತದೆ, ಅವರು ಎಲ್ಲಿ ಹೋದರೂ ಹಾಗೆಯೇ ಇರೋದು, ಅದರ ಬದಲಿಗೆ ನನ್ನಂತೆ ಸೆಲೆಕ್ಟೆಡ್ ಆಗಿ ಮಾತುಗಳನ್ನು ಬದಲಾಯಿಸುವ ಗೋಜಿಗೆ ಹೋದರೆ ಮುಖ ಹಾಗೂ ಮುಖವಾಡಗಳ ನಡುವೆ ಗೊಂದಲವಾಗಿ ಹಾಸ್ಯಾಸ್ಪದವಾಗುವ ಸಾಧ್ಯತೆಗಳೇ ಹೆಚ್ಚು. ಬೈಗಳವನ್ನು ಅಲ್ಲಲ್ಲಿ ಉದ್ದೇಶ ಪೂರ್ವಕವಾಗಿ ತುರುಕುವ ನಾನು ಕೆಲವೊಮ್ಮೆ ಯಾರಾದರೂ ಮಾತಿನ ಮಧ್ಯೆ 'damn' ಎಂದು ಹೇಳಿದಾಗಲೆಲ್ಲ ಅದನ್ನು 'darn' ಎಂದು ಬದಲಾಯಿಸಿ ಸಂಭಾಷಣೆಯಲ್ಲಿ ಒಂದು ಒಳ್ಳೆಯ ಎಳೆಯನ್ನು ನೇಯ್ದು ಬಿಡುತ್ತೇನೆ.

ಮುಖವಾಡ ನಮಗೆ ಒಂದು ರೂಪವನ್ನು ತತ್ಕಾಲಕ್ಕೆ ತಂದುಕೊಡಬಲ್ಲದು, ಹೊಸದಾಗಿ ಕೇಳುವವರ/ನೋಡುವವರ ಮನಸ್ಸಿನಲ್ಲಿ ಒಂದು ಮೂರ್ತಿಯನ್ನು ನಿಲ್ಲಿಸಬಹುದು ಆದರೆ ಧರಿಸುವ ಮುಖವಾಡಗಳನ್ನು ಹತೋಟಿಯಲ್ಲಿಡದೇ ಹೋದರೆ ಒಂದು ರೀತಿಯಲ್ಲಿ multiple personalityಯನ್ನು ಸದಾಕಾಲ ನಿಲ್ಲಿಸಿಬಿಡುವ ಸಾಧ್ಯತೆಗಳೇ ಹೆಚ್ಚಾಗಿ ಕೊನೆಗೆ ಮುಖವಾಡವೇ ಮುಖವಾಗಿ ಬಿಡುವ ಅನಾಹುತವಾಗಿ ಹೋಗುತ್ತದೆ. ನನ್ನ ಹಾಗೆಯೇ ಎಲ್ಲರೂ ಒಂದಲ್ಲ ಒಂದು ಮುಖವಾಡವನ್ನು ತೊಡುತ್ತಾರಾದರೂ ಅವುಗಳನ್ನು ಉಳಿದವರು ಹೇಗೆ ನಿಭಾಯಿಸುತ್ತಾರೆ, ಈ ಮುಖವಾಡಗಳ ಹಿಂದಿನ ವ್ಯಕ್ತಿಯ ಪರಿಚಯವಾಗುವುದಾದರೂ ಹೇಗೆ, ಮುಖವಾಡಗಳ ಹಿನ್ನೆಲೆಯಲ್ಲಿ ಯಾವ ರೀತಿಯ ನಡತೆ ಯಾವ ರೀತಿಯ ಪ್ರತಿಕ್ರಿಯೆಯನ್ನು ಹುಟ್ಟಿಸಬಲ್ಲದು, ಮುಖವಾಡಗಳನ್ನು ತೊಟ್ಟುಕೊಂಡವರ ಇಂಥ ಪ್ರತಿಕ್ರಿಯೆಗಳಿಗೆ ಅದರ ಮುನ್ನೆಲೆಯಲ್ಲಿ ಎಂತೆಂಥಹ ನಿರೀಕ್ಷೆಗಳು ಹುಟ್ಟಬಲ್ಲವು ಎಂಬ ಯೋಚನೆ ಯಾವತ್ತಿಗೂ ನನ್ನನ್ನು ಸುತ್ತಿಕೊಳ್ಳುತ್ತಲೇ ಇರುತ್ತೆ.

ನೀವು ತೊಟ್ಟ ಮುಖವಾಡಗಳ ಹಿನ್ನೆಲೆ ಏನು ಎಂದು ಆಲೋಚಿಸುವುದಕ್ಕೆ ಒಂದು ಎಳೆ ಸಿಕ್ಕಂತಾಯಿತೇ?

Saturday, July 22, 2006

'ದಾರಿ-ದೀಪ'ದ ಆರಂಭ

'ಅಂತರಂಗ'ದಲ್ಲಿ ಪರ್ಸನಲ್ ಡೆವಲಪ್‌ಮೆಂಟ್ ಬಗ್ಗೆ ಬರೆಯುವುದಕ್ಕಿಂತ ಅದಕ್ಕಾಗಿಯೇ ಬೇರೊಂದು ಬ್ಲಾಗನ್ನು ಸೃಷ್ಟಿಸಿದರೆ ಹೇಗೆ ಎನ್ನಿಸಿ ನನ್ನ ಮಿತ್ರರೊಬ್ಬರು ಹೇಳಿದ್ದರಿಂದ 'ದಾರಿ-ದೀಪ'ವನ್ನು ಆರಂಭಿಸಿದ್ದೇನೆ. ಇದರಿಂದ 'ಅಂತರಂಗ'ದ ಒರಿಜಿನಾಲಿಟಿ ಉಳಿಯುವುದೂ ಅಲ್ಲದೇ 'ದಾರಿ-ದೀಪ'ವನ್ನು ಯಾವ ರೀತಿಯಲ್ಲಿ ಬೇಕಾದರೂ ಬೆಳೆಸುವ ಸ್ವಾತಂತ್ರ್ಯ ದೊರೆತಂತಾಗುತ್ತದೆ.

ಆದ್ದರಿಂದ ಪರ್ಸನಲ್ ಡೆವಲಪ್‌ಮೆಂಟ್ ಕುರಿತ ಲೇಖಗಳನ್ನು http://daari-deepa.blogspot.com/ ದಲ್ಲಿ ನೋಡಬೇಕಾಗಿ ವಿನಂತಿ.

Friday, July 21, 2006

ನಿಜವಾದ ಪಯಣ ಇದೀಗ ಆರಂಭವಾಗಿದೆ...

ಬರೆಯೋದನ್ನ ರೂಢಿಸಿಕೊಳ್ಳಬೇಕು ಎಂದುಕೊಂಡು ಹಲವಾರು ಬಾರಿ ಅಲ್ಲಲ್ಲಿ ಏನೇನನ್ನೋ ಬರೆದು ಮಧ್ಯದಲ್ಲಿ ನಿಲ್ಲಿಸಿದ್ದು, ಮತ್ತೆ ಯಾವತ್ತೋ ಒಂದು ದಿನ ಉತ್ಸಾಹ ಬಂದು ಸ್ವಲ್ಪ ದಿನಗಳ ಕಾಲ ಬರೆದು ಮತ್ತೆ ನಿಲ್ಲಿಸಿದ್ದು, ಹೀಗೆ ಬರೆಯುವ-ನಿಲ್ಲಿಸುವ-ಬರೆಯುವ ಪ್ರಕ್ರಿಯೆ ಒಂದು ರೀತಿ ನಮ್ಮೂರಿನ ಲೋಕಲ್ ಬಸ್ಸುಗಳಲ್ಲಿ ಪ್ರಯಾಣ ಮಾಡಿದ ಅನುಭವದ ಹಾಗಿತ್ತು. ಈ ಪ್ರಯಾಣಕ್ಕೆ ಚಾಲನೆ ಸಿಕ್ಕಿದ್ದು ೨೦೦೫ ರ ನವೆಂಬರ್ ತಿಂಗಳಿನಲ್ಲಿ ನಾನೂ ಒಂದು ಬ್ಲಾಗ್ ಬರೆಯೋಣ ಎಂದುಕೊಂಡಾಗಿನಿಂದ. ಅಲ್ಲಿ ಒಂದು ತುಣುಕನ್ನು ಸೇರಿಸಿ ನಿದ್ರೆಗೆ ಶರಣು ಹೋದವನಿಗೆ ಮತ್ತೆ ಎಚ್ಚರವಾದದ್ದು ಮಾರ್ಚ್ ೨೦೦೬ ರಲ್ಲಿ ನನ್ನ ಸ್ನೇಹಿತ ಕೃಪೇಶ ತಿವಿದಾಗಲೇ. ಅಲ್ಲಿಂದ ಇಲ್ಲಿಯವರೆಗೆ ದಿನನಿತ್ಯವೂ ಒಂದಲ್ಲ ಒಂದು ರೀತಿಯಿಂದ 'ಅಂತರಂಗ'ದ ಬಗ್ಗೆ ಯೋಚನೆ ಮಾಡುತ್ತೇನಾದ್ದರಿಂದ ಇದು ಬದುಕಿನ ಒಂದು ಭಾಗವಾಗಿದೆ ಎಂದು ಹೇಳಲು ಸಂತೋಷಪಡುತ್ತೇನೆ. ಎಲ್ಲರಿಗೂ ಒಂದು ಹವ್ಯಾಸ ಅನ್ನೋದು ಬೆಳೆಯೋದಕ್ಕೆ ಸುಮಾರು ೨೧ ದಿನಗಳಾದರೂ ಬೇಕಂತೆ, ನನಗೆ ಕೊನೇಪಕ್ಷ ಐದು ತಿಂಗಳಾದರೂ ಹಿಡಿಯಿತು.

ಇವತ್ತಿಗೆ ಇದು ನನ್ನ ನೂರನೇ ಬರಹ. ಈ ಮೈಲಿಗಲ್ಲನ್ನು ತಲುಪುವ ಪ್ರಯಾಣದಲ್ಲಿ ಹಲವಾರು ವಿಷಯಗಳು ನನ್ನ ಸಹ ಪ್ರಯಾಣಿಕರಾಗಿವೆ, ಅವುಗಳಲ್ಲಿ ಕೆಲವು ಇನ್ನೂ ಮುಂದುವರೆಯಲಿವೆ. ನೂರು ಬರಹ ದೊಡ್ಡ ವಿಷಯವೇನಲ್ಲ, ಆದರೂ ನನ್ನ ಮಟ್ಟಿಗೆ ಹೇಳೋದಾದರೆ ಒಂದು ಕಡೆ ಕನ್ನಡ ಟೈಪ್ ಮಾಡುವ ಅಥವಾ ಬರೆಯುವ ವ್ಯವಧಾನವಿರದೇ ಇರುವುದೂ ಮತ್ತೊಂದು ಕಡೆ ನನ್ನ ಪ್ರಚಂಡ ಮೈಗಳ್ಳತನವೂ ಇವುಗಳ ನಡುವೆ ನಾನು ಏನನ್ನಾದರೂ ಬರೆದಿದ್ದೇನೆಂದು ಹೇಳಿಕೊಳ್ಳೋದೇ ಒಂದು ಸಂಭ್ರಮ.

'ಅಂತರಂಗ'ದಲ್ಲಿ ಬರೆಯಲು ತೊಡಗಿದ ಮೊದಮೊದಲು ಹಲವಾರು ಧ್ವನಿಗಳು ಬಂದು ಇಣುಕಿ ಹೋದವು:
೧) ನನ್ನಲ್ಲಿರುವ ಹತಾಶೆಗಳನ್ನು ತೋಡಿಕೊಳ್ಳಬೇಕು, ಅವಕಾಶ ಸಿಕ್ಕಲ್ಲೆಲ್ಲ ಸೂಚ್ಯವಾಗಿ ಮನಸಾ ಇಚ್ಛೆ ಬಯ್ಯಬೇಕು, ನನ್ನ ಕಣ್ಣಿಗೆ ಕಂಡ ರೀತಿಯಲ್ಲಿ ಅನ್ಯಾಯವನ್ನು ಪ್ರತಿಭಟಿಸಬೇಕು ಎಂಬುದಾಗಿ ಒಂದು ಧ್ವನಿ

೨) ಜೀವನ ಬಹಳ ಸುಂದರವಾದದ್ದು, ನನ್ನಲ್ಲಿರುವ ಕವಿಯ ಮನಸ್ಸಿಗೆ ಒಂದು ಜಾಗೃತಿಯನ್ನು ಕೊಟ್ಟು ಸುತ್ತಲನ್ನು ಕಾವ್ಯಮಯವಾಗಿ ನೋಡಿದರೆ ಹೇಗೆ ಎಂಬ ಮತ್ತೊಂದು ಧ್ವನಿ

೩) ನಮ್ಮೂರಿನ ಭಾಷೆಯಲ್ಲಿ ಹಲವಾರು 'ಸಂವಾದ'ಗಳನ್ನು ಹುಟ್ಟಿಸಿಕೊಂಡು ಬದುಕಿಗೆ ಹತ್ತಿರವಾಗಿ ನಡೆಯುವ ಮಾತುಕಥೆಗಳನ್ನು ಸೆರೆಹಿಡಿದರೆ ಹೇಗೆ ಎಂಬ ಇನ್ನೊಂದು ಧ್ವನಿ

೪) ನನ್ನ ಮನಸ್ಸಿನಲ್ಲಿ ದ್ವಿಗುಣಗೊಂಡ ಅವಕಾಶದಲ್ಲಿ ಪುಂಖಾನುಪುಂಖವಾಗಿ ಏಳುವ ಹಲವಾರು ಆಲೋಚನೆಗಳನ್ನು ಹೊರಹೊಮ್ಮಿಸಿ ಅವುಗಳ ಮೂಲಕ ನನ್ನನ್ನು ನಾನು ಅವಿಷ್ಕರಿಸಿಕೊಳ್ಳುವುದು ಎಂಬ ಮುಂತಾದ ಆಲೋಚನೆಗಳು ಮಧ್ಯೆ ಮಧ್ಯೆ ಬಂದವು, ಹೋದವು.

ಹೀಗೆ ಹಲವಾರು ಸಂವಾದಗಳು ಹುಟ್ಟಿಕೊಂಡವು, ಧಾರವಾಡ ಜಿಲ್ಲೆಯ ಗಡಿಯಿಂದ ಎಂಟು ಕಿಲೋ ಮೀಟರ್ ದೂರದಲ್ಲಿರುವ ಅರೆಮಲೆನಾಡಿನ ವಾತಾವರಣದ ಆನವಟ್ಟಿಯ ಭಾಷೆಯಲ್ಲಿ ಹಲವು ಸಂವಾದಗಳನ್ನು ಹಿಡಿದಿಟ್ಟದ್ದಾಯಿತು. ಅಲ್ಲಲ್ಲಿ ವೈಯುಕ್ತಿಕ ವಿಷಯಗಳನ್ನು ಹಂಚಿಕೊಂಡು ಇಷ್ಟು ಬೇಗನೇ ಆತ್ಮಚರಿತ್ರೆಯನ್ನು ಎಲ್ಲಿ ಬರೆದು ಬಿಡುತ್ತೇನೋ ಎನ್ನುವ ಭಯವನ್ನು ಹುಟ್ಟಿಸಿಕೊಂಡಿದ್ದೂ ಆಯಿತು, ಆದರೂ ನಾನು ಈ ಬರಹಗಳನ್ನು ವರ್ಗೀಕರಿಸಿಕೊಂಡ ಹಾಗೆ ಇಪ್ಪತ್ತಕ್ಕೂ ಹೆಚ್ಚು ಬರಹಗಳು 'ವಿಸ್ಮಯ' ಯಾದಿಯಲ್ಲಿ ಸೇರಿ ಹೋಗಿ - ಐ ವಂಡರ್ ಹೌ - ಎನ್ನುವಂತೆ ಹೊರಹೊಮ್ಮಿದೆ.

ಬರಹಗಳಲ್ಲಿ ಈ ಹಿಂದೆ ನಿಜವಾದ ಹೆಸರನ್ನು ಬಳಸುತ್ತಿರಲಿಲ್ಲ, ಈಗ ನಿಜವಾದ ಹೆಸರನ್ನು ಬಳಸಿ ಬರೆಯಲು ಹಲವಾರು ಕಾರಣಗಳಿವೆ - 'ಅಂತರಂಗಿ' ಬರೆದ ಬರಹಗಳಲ್ಲಿ ತೂಕವಿರುತ್ತಿರಲಿಲ್ಲವೋ ಏನೋ, ಕ್ರೆಡಿಬಿಲಿಟಿಯೂ ಅಷ್ಟಕಷ್ಟೇ ಇರುವಂತೆ ಭಾಸವಾಯಿತು, ಕೆಲವೊಮ್ಮೆ ವಿವರಗಳನ್ನು ಕೇಳಿದ ಕೆಲವರು ಅಂದುಕೊಂಡಂತೆ 'ಅಂತರಂಗಿ'ಯ ಹೆಸರಿನಲ್ಲಿ ಬಚ್ಚಿಟ್ಟುಕೊಂಡಂತೆ ಕಾಣಿಸಿರಬಹುದು. ಎಲ್ಲಕ್ಕಿಂತ ಮುಖ್ಯವಾಗಿ ನನ್ನ ಕ್ರಿಯೆಗಳಿಗೆ ನಾನೇ ಜವಾಬ್ದಾರನಾಗುವುದು ಒಳ್ಳೆಯದು ಎನಿಸಿದ್ದರಿಂದ ನಿಜವಾದ ಹೆಸರನ್ನು ತೋರಿಸಿಕೊಳ್ಳಬೇಕಾಯಿತು.

'ಅಂತರಂಗ'ದಿಂದ ಏನಾಯಿತೋ ಬಿಟ್ಟಿತೋ, ನನಗಂತೂ ಬರೆಯುವ ಹವ್ಯಾಸವೊಂದು ಹುಟ್ಟಿತು, ಬರೆಯುವ ವಿಷಯದಲ್ಲಿ ಮೊದಲಿದ್ದ ಹಾಗೆಲ್ಲ ಮೈಗಳ್ಳತನವಿಲ್ಲ, ಹೆಚ್ಚಿನ ಬರಹಗಳು ಒಂದೇ ಭೈಠಕ್‌ನಲ್ಲಿ ಹುಟ್ಟುತ್ತಿವೆ, ಕೆಲವಕ್ಕೆ ಅರ್ಧ ಘಂಟೆಗಳಿಗಿಂತ ಹೆಚ್ಚು ತೆಗೆದುಕೊಂಡರೂ ಹೆಚ್ಚಿನವು ಅರ್ಧ ಘಂಟೆಯ ಒಳಗೆ ಬರೆಯಬಹುದಾಗಿರುವುದರಿಂದ ದಿನಕ್ಕೊಂದು ಅರ್ಧ ಘಂಟೆ ಈ ನಿಟ್ಟಿನಲ್ಲಿ ವ್ಯಯಿಸಲಾರೆನೇ ಎಂದು ಸ್ವಯಂ ತೃಪ್ತಿಪಟ್ಟುಕೊಂಡಿದ್ದೇನೆ.

'ಅಂತರಂಗ'ವನ್ನು ಮೊದಲಿನಿಂದಲೂ ಓದಿ, ಅಲ್ಲಲ್ಲಿ ನನ್ನನ್ನು ತಿದ್ದಿ, ನನ್ನ ಜೊತೆಯಲ್ಲಿ ಕಳಕಳಿಯನ್ನು ವ್ಯಕ್ತಪಡಿಸಿ, ಹೀಗೆ ಬರೆಯಿರಿ, ಹಾಗೆ ಬರೆಯಬಾರದಿತ್ತು ಎಂದೆಲ್ಲಾ ಸ್ಪಂದಿಸಿದವರಿಗೆ ನನ್ನ ದೊಡ್ಡ ನಮನಗಳು, ಅವರ ಹೆಸರುಗಳನ್ನೆಲ್ಲಾ ಹೇಳುತ್ತಾ ಹೋದರೆ ಪಟ್ಟಿ ಉದ್ದವಾಗುವುದರ ಜೊತೆಗೆ, ಕೆಲವರ ಹೆಸರನ್ನು ಮರೆವಿನಿಂದ ಬರೆಯದೇ ಅಪಚಾರಮಾಡಿದಂತಾಗುವುದು ಎನ್ನುವ ಹೆದರಿಕೆ ಇರುವುದರಿಂದ ಇಲ್ಲಿ ಯಾರ ಹೆಸರನ್ನೂ ಬರೆಯುತ್ತಿಲ್ಲ. 'ಅಂತರಂಗ'ವನ್ನು ಎಷ್ಟೋ ಜನ ತಮ್ಮ ಬ್ಲಾಗ್‌ಗಳಲ್ಲಿ, ವೆಬ್‌ಸೈಟ್‌ಗಳಲ್ಲಿ ಲಿಂಕ್ ಕೊಡುವುದರ ಮೂಲಕ ಪರಿಚಯಿಸಿದ್ದಾರೆ, ಅಲ್ಲದೇ ಕನ್ನಡಸಾಹಿತ್ಯ.ಕಾಂ ಎಡಿಟೋರಿಯಲ್‌ನಲ್ಲೂ ಶೇಖರ್ ಅವರು ಪರಿಚಯಿಸಿದ್ದಾರೆ - ಇವರೆಲ್ಲರಿಗೂ ನನ್ನ ನಮನಗಳು.

'ಅಂತರಂಗ'ವನ್ನು ನ್ಯೂ ಝೀಲ್ಯಾಂಡಿನಿಂದ ಹಿಡಿದು ಹವಾಯಿಯವರೆಗೆ ಪ್ರತಿದಿನವೂ ಸುಮಾರು ಜನ ಓದುತ್ತಾರೆ, ಅವರಲ್ಲಿ ಕೆಲವರು ಆಗಾಗ್ಗೆ ತಮ್ಮ ಅನಿಸಿಕೆಗಳನ್ನು ಬರೆಯುತ್ತಿರುತ್ತಾರೆ, ಇನ್ನು ಕೆಲವರು ನೇರವಾಗಿ ಇ-ಮೇಲ್‌ಗಳನ್ನು ಕಳಿಸುತ್ತಿರುತ್ತಾರೆ ಇವರೆಲ್ಲರಿಗೂ ನನ್ನ ನಮನಗಳು.

ನನ್ನ ಆಸೆ ಇಷ್ಟೇ - ನಾನು ಹೀಗೆ ಕನ್ನಡದಲ್ಲಿ ಬರೆಯುತ್ತಲೇ ಇರಬೇಕು, ಬರೆಯುವುದಕ್ಕಿಂತ ಹತ್ತು ಪಟ್ಟು ಓದಬೇಕು, ಓದುವುದಕ್ಕಿಂತ ಹತ್ತು ಪಟ್ಟು ನೆರೆಹೊರೆಯನ್ನು ಗಮನಿಸಬೇಕು, ಆಗು-ಹೋಗುಗಳಿಗೆ ಸ್ಪಂದಿಸಬೇಕು. ಕನ್ನಡ ಬರಹ ಬ್ಲಾಗ್‌ಪ್ರಪಂಚದಲ್ಲಿ ಈಗಷ್ಟೇ ಅಂಬೆಗಾಲಿಡುತ್ತಿದೆ, ಇದು ಹೀಗೇ ಬೆಳೆಯಬೇಕು, ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ಯುವ ಸ್ನೇಹಿತ-ಸ್ನೇಹಿತೆಯರು (ತರುಣ ಮಿತ್ರರು) ಹೆಚ್ಚು ಹೆಚ್ಚು ಕನ್ನಡದಲ್ಲೇ ಓದಿ-ಬರೆಯಬೇಕು.

ಇದುವರೆಗೆ ಬರೆದದ್ದನ್ನೆಲ್ಲ ನಾನು ಬರಿ ವಾರ್ಮ್‌ಅಪ್ ಎಂದುಕೊಳ್ಳೋದರಿಂದ ನಿಜವಾದ ಪಯಣ ಇದೀಗ ಆರಂಭವಾಗಿದೆ...ನೋಡೋಣ ಇದು ಎಲ್ಲಿಯವರೆಗೆ ಬರುತ್ತೋ ಎಂದು!

Wednesday, July 19, 2006

antarangi fired!

'ಅಂತರಂಗ' ನೂರನೇ ಬರಹವನ್ನು ಮುಟ್ಟುತ್ತಿರುವ ಹಿನ್ನೆಲೆಯಲ್ಲಿ ಸಂತೋಷ ಸಮಾರಂಭಗಳನ್ನು ಏರ್ಪಡಿಸಬೇಕಾಗಿದ್ದ ಜವಾಬ್ದಾರಿಯನ್ನು ಹಗುರವಾಗಿ ತೆಗೆದುಕೊಂಡ 'ಅಂತರಂಗಿ'ಯನ್ನು ಈ ಕೂಡಲೇ ಕೆಲಸದಿಂದ ವಜಾ ಮಾಡಲಾಗಿದೆ!

ಹೀಗೆ ದಿಢೀರನೆ ತೆಗೆದುಕೊಂಡ ಮ್ಯಾನೇಜ್‌ಮೆಂಟ್ ನಿರ್ಣಯದಿಂದ ಮಾಡುವ ದಿನನಿತ್ಯದ ಕೆಲಸಗಳಿಗೆ ತೊಂದರೆಯಾಗಲಿದೆ ಎಂದು ಗೊತ್ತಿದ್ದರೂ ಈ ರೀತಿ ಮಾಡಬೇಕಾದ್ದು ಅನಿವಾರ್ಯವಾಗಿರೋದನ್ನು ವಿಷಾದಿಸುತ್ತೇವೆ. ಏನೇ ಆದರೂ 'ಕಾಯಕವೇ ಕೈಲಾಸ'ವಾದ್ದರಿಂದ ಕೆಲಸ ಕಾರ್ಯಗಳು ಎಂದಿನಂತೆ ಮುಂದುವರೆಯುವುದು ಅಗತ್ಯ - ನಾಳೆ, ಅಂದರೆ ಗುರುವಾರ, ಈಸ್ಟರ್ನ್ ಡೇ ಲೈಟ್ ಟೈಮ್‌, ಮುಂಜಾನೆ ೮ ಘಂಟೆಗೆ ಅಂತರಂಗಿಯೊಂದಿಗೆ ಒಂದು ಬ್ರೌನ್ ಬ್ಯಾಗ್ ಸೆಷನ್ ಅನ್ನು ಇಟ್ಟುಕೊಳ್ಳಲಾಗಿದೆ, ಅಲ್ಲಿ ಅಂತರಂಗಿಯವರು ತಮ್ಮ ಕೆಲಸ ಕಾರ್ಯಗಳ ಬಗ್ಗೆ ವಿವರವಾಗಿ ತಿಳಿಸುವುದೂ ಅಲ್ಲದೆ, ತಮ್ಮ ಎಲ್ಲ ಪ್ರಶ್ನೆಗಳಿಗೂ ಉತ್ತರವನ್ನು ಕೊಡುವವರಿದ್ದಾರೆ, ಈ ಸೆಷನ್ ಅನ್ನು ತಪ್ಪದೇ ಅಟೆಂಡ್ ಮಾಡುವಂತೆ ಈ ಮೂಲಕ ಕೋರಲಾಗಿದೆ.

ಅಂತರಂಗಿಯವರ ಕೊಡುಗೆ ಅಪಾರವಾದದ್ದು, ಈ ನಮ್ಮ ಸಂಸ್ಥೆಗೆ ಅವರ ಅಪರಿಮಿತ ಸೇವೆ ಬಹಳ ದೊಡ್ಡ ಹೆಸರನ್ನು ತಂದುಕೊಟ್ಟಿದೆ, 'ನಿಮ್ಮವ'ನಿಂದ ಕಾರ್ಯವನ್ನು ವಹಿಸಿಕೊಂಡ ಮೇಲೆ, ತಿಣುಕಿ-ತಿಣುಕಿ ಬರೆದ ಪರಿಣಾಮವಾಗಿ ಗೂಗಲ್ ಪೇಜ್ ರ್ಯಾಂಕ್‌ನಲ್ಲಿ ಅಂತರಂಗಕ್ಕೆ ನಾಲ್ಕನೇ ಸ್ಥಾನ ದೊರೆತಿದೆ. ಇದು ಶ್ಲಾಘನೀಯ ವಿಚಾರ. ಅಂತರಂಗಿಯವರ ಡಿಪಾರ್ಚರ್ ಅನ್ನು ಸೆಲೆಬ್ರೇಟ್ ಮಾಡಲು, ಶುಕ್ರವಾರ ಸಂಜೆ ಏಳು ಘಂಟೆಗೆ 'ಐರಿಷ್ ಕಾರ್ನರ್' ನಲ್ಲಿ ಹ್ಯಾಪ್ಪಿ ಅವರ್ ಏರ್ಪಡಿಸಲಾಗಿದೆ, ನಿಮ್ಮ ಅನುಕೂಲಕ್ಕೆ ತಕ್ಕಂತೆ ಭಾಗವಹಿಸಿ, drinks are on us!
***

ನಾಳೆ ನಮ್ಮ ಬ್ಯೂರೋಗೆ ಬಿಡುವು, ಶುಕ್ರವಾರದಿಂದ 'ಅಂತರಂಗ' ಮ್ಯಾನೇಜ್‌ಮೆಂಟ್‌ನವರ ನಿಜವಾದ ಹೆಸರಿನಲ್ಲಿ ಮುಂದುವರೆಯಲಿದೆ. ಅಲ್ಲದೇ 'ಅಂತರಂಗ'ದ ಸಂಪೂರ್ಣ ಸೈಟೂ ಸಹ ಒಂದು ಹೊಸ ರೂಪವನ್ನು ಪಡೆಯಲಿದೆ.

ನೂರನೇ ಲೇಖನವನ್ನು ಬರೆಯಲು ಅಂತರಂಗಿಯವರು ಇಲ್ಲದಿರುವುದನ್ನು ವಿಷಾದಿಸಲಾಗಿದೆ ಎಂದು ಬರೆಯುವುದರ ಮೂಲಕ ಮ್ಯಾನೇಜ್‌ಮೆಂಟ್ ನವರು ತಮ್ಮ ಅತೀವ ದುಃಖವನ್ನು ತೋರ್ಪಡಿಸಿಕೊಂಡಿದ್ದಾರೆ.

***

ಸೂಚನೆ: ಈ ಗುಟ್ಟು ನಮ್ಮನಮ್ಮಲ್ಲೇ ಇರಲಿ, ಈ ಕೆಳಗಿನ ಸಾಲುಗಳನ್ನು ಬೇರೆ ಯಾರಿಗೂ ಕಳಿಸುವಂತಿಲ್ಲ, ಹಾಗೆ ಕಳಿಸಿದರೂ ಅದರ ಸಾಧ್ಯತೆ-ಬಾಧ್ಯತೆಗಳಿಗೆ ನಾವು ಹೊಣೆಗಾರರಲ್ಲ. ಈ ಕೆಳಗಿನ ಸಾಲುಗಳು ಈ ಮೆಮೋದ ರಿಸಿಪಿಯಂಟ್‌ಗಳಿಗೆ ಮಾತ್ರ ಸೀಮಿತವಾದದ್ದು.

ಅಂತರಂಗಿ ಕಷ್ಟಜೀವಿಯೇನೋ ನಿಜ, ಆದರೆ ಅವರ ನೈತಿಕತೆ ಹಾಗೂ ಸಮಯ ಪರಿಪಾಲನೆಯ ಬಗ್ಗೆ ನಮಗೆ ಯಾವಾಗಲೂ ಸಂಶಯವಿದ್ದೇ ಇತ್ತು. ಉದಾಹರಣೆಗೆ:

- ಆಫೀಸಿನಲ್ಲಿ ಕೆಲಸ ಮಾಡುವುದರ ಬದಲು ಕಾರ್ಪೋರೇಟ್ ಸಂಪನ್ಮೂಲಗಳನ್ನು ತಮ್ಮ ವೈಯಕ್ತಿಕ ಬಳಕೆಗೆ ಬಳಸುವುದು, ಪದೇ-ಪದೇ ಯಾಹೂ ಇ-ಮೇಲ್‌ಗಳನ್ನು ನೋಡುವುದು, ಕನ್ನಡ ದಿನಪತ್ರಿಕೆಗಳ ಮೇಲೆ ಆಗಾಗ್ಗೆ ಕಣ್ಣಾಡಿಸುವುದು, ಪ್ರಿಂಟರುಗಳನ್ನು ಯಥಾಇಚ್ಛೆ ಬಳಸುವುದು.

- ತನ್ನ ೧೨೮೦ X ೮೦೦ ರೆಸೋಲ್ಯೂಷನ್ ಇರುವ ಆಧುನಿಕ ಲ್ಯಾಪ್‌ಟಾಪ್ ಬಳಕೆಯ ಹೆಮ್ಮೆಯಲ್ಲಿ ಅದು ಎಷ್ಟೋ ಜನ ಬಳಕೆದಾರರನ್ನು ಕಡೆಗಣಿಸಿದ್ದು, ನಾವು ಪದೇಪದೇ ಎಲ್ಲ ತರಹದ ಬಳಕೆದಾರರನ್ನು ಪರಿಗಣಿಸಿ ಎಂದು ಹೇಳಿದ್ದರೂ ನಮ್ಮ ಮಾತಿಗೆ ಯಾವ ಬೆಲೆಯೂ ಇರುತ್ತಿರಲಿಲ್ಲ.

- ಗಹನವಾದ ವಿಷಯಗಳ ಬಗ್ಗೆ ಪರಿಪೂರ್ಣವಾದ ಲೇಖನಗಳನ್ನು ಬರೆಯಿರಿ ಎಂದು ಎಷ್ಟೇ ಬಾಯಿಬಾಯಿ ಬಡಿದುಕೊಂಡರೂ ಇತ್ತೀಚೆಗೆ ಅವರ ಮನಸ್ಸು ಎಮ್ಮೆಯ ಚರ್ಮವಾಗಿ ಹೋಗಿತ್ತು, ಯಾವುದಕ್ಕೂ ಸಂವೇದಿಸುವ ಲಕ್ಷಣಗಳು ತೋರಲಿಲ್ಲ.ಇತ್ಯಾದಿ, ಇತ್ಯಾದಿ...

ಅವರ ಕೊಡುಗೆ ಏನೇ ಇರಲಿ, ಹೇಗೇ ಇರಲಿ, ಅಮೇರಿಕನ್ ಪರಂಪರೆಯಲ್ಲಿ ಅವರನ್ನು 'ಕಮ್ಮ್ಯೂನಿಕೇಷನ್ ಸ್ಕಿಲ್ಸ್' ಇಲ್ಲದಿರುವುದಕ್ಕೆ ಫೈರ್ ಮಾಡಲಾಗಿದೆ ಎಂದು ತಿಳಿಸಲು ವಿಷಾದಿಸುತ್ತೇವೆ.

ನಿಮ್ಮ ಪ್ರಶ್ನೆ, ಸಲಹೆಗಳಿಗೆ ಸ್ವಾಗತ.

----

ವಿಶೇಷ ಸೂಚನೆ: ಈ ಹಣಕಾಸಿನ ಒತ್ತಡದ ಸಂದರ್ಭದಲ್ಲಿ ಬೇರೆ ಯಾರನ್ನೂ ಅಂತರಂಗಿಗಳ ಬದಲಿಗೆ ಕೆಲಸಕ್ಕೆ ತೆಗೆದುಕೊಳ್ಳುತ್ತಿಲ್ಲ, ನಿಮ್ಮ ನಿಮ್ಮಲ್ಲೇ ಅವರ ಕೆಲಸಗಳನ್ನು ಹಂಚುವುದಾಗಿ ತೀರ್ಮಾನಿಸಲಾಗಿದೆ. ಶುಕ್ರವಾರದಿಂದ ಮ್ಯಾನೇಜ್‌ಮೆಂಟ್ ನವರು ಒಂದು ಹೊಸ ಟೈಮ್‌ಟೇಬಲ್ ಅಥವಾ ಟಾಸ್ಕ್ ಲಿಸ್ಟ್ ತಯಾರಿಸಲಿದ್ದಾರೆ ಅದರ ಪ್ರಕಾರ 'ಅಂತರಂಗ'ದ ಕೆಲಸಗಳನ್ನು ಮುಂದುವರಿಸುವಂತೆ ಈ ಮೂಲಕ ತಿಳಿಸುತ್ತಿದ್ದೇವೆ.

ಅಂತರಂಗಿಯವರ ಲಾಗಿನ್, ಆಕ್ಸೆಸ್‌ಗಳನ್ನು ಈಗಾಗಲೇ ಡಿಸೇಬಲ್ ಮಾಡಲಾಗಿದ್ದು, ಕೇವಲ ಯಾಹೂ ಮೆಸ್ಸೇಜ್, ಇ-ಮೇಲ್, ಚಾಟ್‌ಗೆ ಮಾತ್ರ ಅವಕಾಶ ಕೊಡಲಾಗಿದೆ, ಉಳಿದೆಲ್ಲ ಸಿಸ್ಟಮ್ ಪಾಸ್‌ವರ್ಡ್‌ಗಳನ್ನು ಈಗಾಗಲೇ ಬದಲಾಯಿಸಲಾಗಿದೆ.

-ಮ್ಯಾನೇಜ್‌ಮೆಂಟ್

Monday, July 17, 2006

ಇಸ್ರೇಲ್-ಲೆಬನಾನ್

ಇತ್ತೀಚೆಗೆ ನಡೆಯುವ ಎಷ್ಟೊಂದು ಅಂತಾರಾಷ್ಟ್ರೀಯ ವಿದ್ಯಮಾನಗಳ ದೆಸೆಯಿಂದ ನಮ್ಮ ಲೋಕಲ್ ಚಾನೆಲ್‌ಗಳಲ್ಲಿ ಬರುವ ನೆರೆಹೊರೆಯ ಸುದ್ದಿಗಳೇ ಇರೋ ವರ್ಲ್ಡ್ ನ್ಯೂಸ್ ಸಹ ನಿಜವಾದ ವರ್ಲ್ಡ್ ನ್ಯೂಸ್ ಆಗಿ ಬದಲಾವಣೆ ಹೊಂದಿದೆಯಲ್ಲಾ ಎಂದು ಒಮ್ಮೆ ಖುಷಿಯಾದರೂ, ಸಾಮಾನ್ಯವಾಗಿ ಮೈ ಕೊಡವಿಕೊಳ್ಳುವ ಅಮೇರಿಕನ್ನರೂ ತಡವರಿಸುವಂತೆ ಮಾಡುವ ಹಲವಾರು ಸುದ್ದಿಗಳು ಬರುತ್ತಲೇ ಇವೆ. ಏತನ್ಮದ್ಯೆ ಯಾವಾಗಲೂ ಮೊದಲ ಸುದ್ದಿಯಾಗೇ ಮೆರೆಯುತ್ತಿದ್ದ ಇರಾಕ್ ಸುದ್ದಿಗಳೂ ಸಹ ಈಗ ಮೂರನೆಯ ಸ್ಥಾನವನ್ನು ಪಡೆದಿವೆ. ಇಂದು ನಾನು ನೋಡಿದ ಹಾಗೆ ಇಸ್ರೇಲ್-ಲೆಬನಾನ್, ಇಂಡೋನೇಸಿಯಾದ ತ್ಸುನಾಮಿ, ಜಿ-೮ ಸಮ್ಮಿಟ್ ವರದಿಗಳು, ಡಿಸ್ಕವರಿ ಷಟಲ್ ಸುರಕ್ಷೆಯಿಂದ ಹಿಂತಿರುಗಿದ್ದು ಇವೆಲ್ಲೆದರ ಮುಂದೆ ಇರಾಕ್‌ನಲ್ಲಿ ಎಪ್ಪತ್ತೈದು ಜನಕ್ಕೂ ಹೆಚ್ಚು ಸತ್ತ ಸುದ್ದಿ 'ದಿನಾ ಸಾಯೋರಿಗೆ ಅಳೋರ್ ಯಾರು?' ಎನ್ನುವಂತೆ ಗೌಣವಾಗಿತ್ತು.

ಇಸ್ರೇಲ್-ಲೆಬನಾನ್ ಕುರಿತು ಹಲವಾರು ವರದಿಗಳು ಬರ್ತಾ ಇವೆ, ಅಲ್ಲಲ್ಲಿ ಓದಿ, ಕೇಳಿ ನೋಡಿದ ಮೇಲೆ ಸುದ್ದಿಯ ಮೇಲೆ ಪ್ರತಿಕ್ರಿಯಿಸದೇ ಸುಮ್ಮನಿರೋದಾದರೂ ಹ್ಯಾಗೆ? ಅಷ್ಟಕ್ಕೂ ಉಳಿದೆಲ್ಲ ಮಾಧ್ಯಮಗಳಲ್ಲಿ ಪ್ರಕಟವಾಗದಿರುವ ವಿಷಯವನ್ನು ನಾನೇನೂ ಬರೆಯುತ್ತಿಲ್ಲವಲ್ಲ ಎಂದೆನಿಸಿದರೂ ಇಂತಹ ಮಹತ್ವಪೂರ್ಣ ಸುದ್ದಿಯನ್ನು ಕುರಿತ ನನ್ನ ನಿಲುವನ್ನು ಆದಷ್ಟು ಬೇಗ ಹೊರಹಾಕಿದರೆ ಒಳ್ಳೆಯದು ಎನಿಸಿದ್ದರಿಂದ ಈ ಲೇಖನವನ್ನು ಬರೆಯಬೇಕಾಗಿ ಬಂದಿತು, ಎದೆ ಮೇಲೆ ಚಪ್ಪಡಿ ಹೊತ್ತುಕೊಂಡು ಎಷ್ಟೊತ್ತೂ ಅಂತ ನಿರಾಳವಾಗಿ ಮಲಗಿರಲು ಸಾಧ್ಯ, ಹಾಗಂತ ಈ ಲೇಖನ ಬರೆದ ನಂತರ ಚಪ್ಪಡಿ ಇಳಿಸಿಕೊಂಡು ಕೈ ತಟ್ಟಿಕೊಳ್ಳುತ್ತೆನೆಂದು ಅರ್ಥವಲ್ಲ, ಮತ್ತೆ ಇದೇ ವಿಷಯದ ಮೇಲೆ ಬೇರೆ ಯಾವುದಾರೂ ದೃಷ್ಟಿಕೋನ ಬಲವಾಗುವ ಸಾಧ್ಯತೆಗಳೂ ಇವೆ, ಅಥವಾ ಈ ವಿಷಯ ಮುಂದೆ ಹೇಗೆ ಬೆಳೆಯಬಲ್ಲದು ಎನ್ನುವ ಕುತೂಹಲವೂ ಇದೆ.

ಲೆಬನಾನ್ ಮೇಲೆ ಧಾಳಿ ನಡೆಸಿದ ಇಸ್ರೇಲ್‌ನವರಿಗೆ ತಮ್ಮ ಎರಡು ಸೈನಿಕರನ್ನು ಹಿಜ್‌ಬುಲ್ಲಾ ಉಗ್ರಗಾಮಿಗಳು ಅಪಹರಿಸಿದ್ದು ಒಂದು ನೆಪ ಮಾತ್ರ, ಹಿಜ್‌ಬುಲ್ಲಾ ಹೋರಾಟಗಾರರನ್ನು ಹತ್ತಿಕ್ಕುವುದು ಇಸ್ರೇಲ್‌ನ ದೂರದೃಷ್ಟಿಗಳಲ್ಲೊಂದಾಗಿತ್ತು. ಲೆಬನಾನ್ ಆಗಲಿ, ಹಿಜ್‌ಬುಲ್ಲಾ ಉಗ್ರಗಾಮಿಗಳಾಗಲೀ ಇಸ್ರೇಲ್‌ನ ಮಿಲಿಟರಿ ಶಕ್ತಿಯ ಮುಂದೆ ಯಾವ ಲೆಕ್ಕಕ್ಕೂ ಇಲ್ಲ. ಬಲಿಷ್ಠವಾದ ಇಸ್ರೇಲ್‌ಗೂ ಲೆಬನಾನ್ ದೇಶದಲ್ಲೇ ಪೂರ್ಣ ಬೆಂಬಲ ಇರದ ಹಿಜ್‌ಬುಲ್ಲಾ ಹೋರಾಟಗಾರರಿಗೂ ಎಲ್ಲಿಯ ಸಮ? ಹಿಜ್‌ಬುಲ್ಲಾ ಹೋರಾಟವನ್ನು ಹುಟ್ಟಡಗಿಸುತ್ತೇವೆ ಎನ್ನುವುದು ಇಸ್ರೇಲ್‌ನವರಿಗೆ ಒಂದ ದೊಡ್ಡ ಸ್ಲೋಗನ್ ಆಗಿ ಹೋಗಿದೆ, ನಮ್ಮ ಸೈನಿಕರನ್ನು ಬಿಡುವವರೆಗೆ ಹಾಗೂ ನಮ್ಮ ಮೇಲೆ ರಾಕೆಟ್ ಧಾಳಿಗಳನ್ನು ನಿಲ್ಲಿಸುವವರೆಗೆ ನಾವು ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎನ್ನುವುದು ಇಸ್ರೇಲ್‌ನವರ ಹಾಡು. ಇಸ್ರೇಲ್‌ನವರು ಈಗಾಗಲೇ ಲೆಬನಾನ್ ಗಡಿಯ ಪ್ರದೇಶಗಳಲ್ಲಿ ತಮ್ಮ ಶಕ್ತಿಯನ್ನು ಪ್ರದರ್ಶನಕ್ಕಿಟ್ಟಿರುವುದರ ಜೊತೆಗೆ ಉಳಿದೆಲ್ಲ ಗಡಿಗಳಲ್ಲೂ ಏನಾಗುತ್ತಿದೆ ಎಂದು ಬಿಟ್ಟಕಣ್ಣು ಮುಚ್ಚದೇ ನೋಡುತ್ತಿದ್ದಾರೆ.

ಲೆಬನಾನ್‌ನ ಸ್ಥಳೀಯ ಸರ್ಕಾರದಲ್ಲಿ ಭಾಗವಹಿಸಿರುವ ಹಿಜ್‌ಬುಲ್ಲಾ ಉಗ್ರಗಾಮಿಗಳದ್ದು ಇಸ್ರೇಲ್‌ನವರ ಹುಟ್ಟಡಗಿಸಬೇಕು ಎನ್ನುವುದು ಯಾವತ್ತಿದ್ದರೂ ಹಿಂಗದ ದಾಹ. ಪದೇ-ಪದೇ ಇಸ್ರೇಲ್ ಗಡಿಯಲ್ಲಿ ನುಗ್ಗಿ ವಿಧ್ವಂಸಕ ಕೃತ್ಯಗಳಲ್ಲಿ ತೊಡಗುವುದರ ಜೊತೆಗೆ ಹಲವಾರು ಮಾಧ್ಯಮಗಳು ಹೇಳುವಂತೆ ಸಿರಿಯಾ, ಇರಾನ್‌ನಲ್ಲಿ ತಯಾರಾದ ಹಲವಾರು ರಾಕೆಟ್‌ಗಳನ್ನು ಹಾರಿಸಿ ಎಷ್ಟು ಸಾಧ್ಯವೋ ಅಷ್ಟು ನಷ್ಟವನ್ನು ಇಸ್ರೇಲ್‌ನವರಿಗೆ ಮಾಡಬೇಕು ಎನ್ನುವುದು ಅವರ ಇಂಗಿತ. ಇಸ್ರೇಲ್‌ನಿಂದ ಹಿಡಿದುಕೊಂಡು ಹೋಗಿರುವ ಇಬ್ಬರು ಸೈನಿಕರನ್ನು ಬಿಡುವ ಮಾತಿರಲಿ, ಈಗಂತು ಇಸ್ರೇಲ್ ನೇರವಾಗಿ ಯುದ್ಧಕ್ಕೇ ಇಳಿದಿರುವುದರಿಂದ ಅವರು ಇನ್ನೂ ಜೀವಂತವಿದ್ದರೇ ಹೆಚ್ಚು. ತಮ್ಮ ನೆಲೆಗಳ ಮೇಲೆ ನಡೆದ ಧಿಡೀರ್ ಆಕ್ರಮಣದಿಂದ ಸಾಕಶ್ಟು ಹೊಡೆತ ತಿಂದೂ, ಮುಖ್ಯ ರಸ್ತ್ರೆ, ಸೇತುವೆಗಳು ಹಾಗೂ ಏರ್‌ಪೋರ್ಟಿನ ಮೇಲೂ ಆದ ಧಾಳಿಯಿಂದ ಸ್ವಲ್ಪ ಕಂಗಾಲಾದಂತೆ ಕಂಡುಬಂದರೂ ಹಿಜ್‌ಬುಲ್ಲಾ ಹೋರಾಟ ಆಗಾಗ್ಗೆ ನಡೆಸೋ ಧಾಳಿಯ ರೂಪದಲ್ಲಿ ಗಡಿಯ ಹತ್ತಿರವಿರುವ ಹಲವಾರು ಸೌಕರ್ಯಗಳನ್ನು ಉರುಳಿಸುವಲ್ಲಿ ಸಫಲವಾಗಿದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಮೇರಿಕ, ಬ್ರಿಟನ್, ಜರ್ಮನಿ ಮುಂತಾದ ದೇಶಗಳು ಇಸ್ರೇಲ್ ಪರವಹಿಸಿಕೊಂಡೇ ವಿಶ್ವಸಂಸ್ಥೆಯವರಿಗೆ 'ಆದಷ್ಟು ಬೇಗ ಹೋಗಿ ಮಧ್ಯಸ್ಥಿಕೆ ವಹಿಸಿ' ಎಂದು ಸೂಚಿಸುತ್ತಿವೆ. ವ್ಯಾಟಿಕನ್ನೂ ಸೇರಿ ರಷ್ಯಾ ಮೊದಲಾದ ದೇಶಗಳು ಇಸ್ರೇಲ್‌ನವರ ಧಾಳಿ ದುಡುಕಿದ ನಿರ್ಧಾರ, ಹೀಗೆ ಮಾಡಬಾರದಿತ್ತು ಎಂದು ಹೇಳಿಕೆಕೊಟ್ಟಿವೆ. ಅಮೇರಿಕದವರಿಗೆ ಒಂದು ಕಡೆ ಎಲ್ಲಿ ಈ ಉರಿ ದೊಡ್ಡ ಕಾಡ್ಗಿಚ್ಚಾಗಿ ಹಬ್ಬಿ ಮೊದಲೇ ಹೊತ್ತಿಕೊಂಡಿರೋ ಮಿಡ್ಲ್ ಈಸ್ಟ್ ಬೆಂಕಿಯನ್ನು ಇನ್ನಷ್ಟು ಉರಿಸುತ್ತೋ ಎಂದು ಭಯ ಒಂದುಕಡೆಯಾದರೆ ಇದೇ ಸಮಯದಲ್ಲಿ ಸಾಧ್ಯವಾದರೆ ಸಿರಿಯಾ ಹಾಗೂ ಇರಾನಿಗೆ ಬುದ್ದಿ ಕಲಿಸಬೇಕು ಅನ್ನಿಸಿದ್ದು ಅಲ್ಲಲ್ಲಿ ಕಂಡುಬಂತು.

* ತಮ್ಮ-ತಮ್ಮ ದೇಶ, ಗಡಿಗಳ ಭದ್ರತೆಯ ದೃಷ್ಟಿಯಿಂದ ನೆರೆಹೊರೆಯವರ ಮೇಲೆ ಆಕ್ರಮಣ ಮಾಡುವುದು ಎಷ್ಟರ ಮಟ್ಟಿಗೆ ಸರಿ? ನಮ್ಮ ದೇಶದ ಉದಾಹರಣೆ ತೆಗೆದುಕೊಂಡರೆ, ಪಾಕಿಸ್ತಾನದ ಸರ್ಕಾರದಲ್ಲಿ ನೇರವಾಗಿ ಪಾಲ್ಗೊಳ್ಳದಿದ್ದರೂ ಎಷ್ಟೋ ಇಸ್ಲಾಮಿಕ್ ಸಂಘಟನೆಗಳು ಪಾಕಿಸ್ತಾನದಲ್ಲಿದ್ದುಕೊಂಡು ಭಾರತದ ಮೇಲೆ ಹಲವಾರು ವರ್ಷಗಳ ಕಾಲ ಆಕ್ರಮಣ ನಡೆಸುತ್ತಿಲ್ಲವೇ? ಇವೆಲ್ಲವನ್ನೂ ನೋಡಿಕೊಂಡು ಪಾಕಿಸ್ತಾನದ ಶಹರಗಳಿರಲಿ, ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮೇಲಾದರೂ ಭಾರತ ಇಷ್ಟೊಂದು ವರ್ಷಗಳಲ್ಲಿ ಆಕ್ರಮಣವನ್ನು ಮಾಡಿದೆಯೇ?

* ಸಹನೆ ಎಂದೂ ದೌರ್ಭಲ್ಯವಾಗೋದಿಲ್ಲ, ಸಹನೆಯ ಬೆಲೆ ದಿಡೀರನೆ ಧಾಳಿಗೆ ಹೋಗುವ ದೇಶಗಳಿಗೆ ಗೊತ್ತೇ? ಇಬ್ಬರು ಸೈನಿಕರನ್ನು ಕಳೆದುಕೊಂಡು ಆಕ್ರಮಣಕ್ಕೆ ತೊಡಗಿದ ದೇಶ ನೂರಾರು ಅಮಾಯಕರನ್ನು ಗಡಿಯ ಆಚೀಚೆ ಕಳೆದುಕೊಳ್ಳಲು ಹೇಗೆ ಮನಸ್ಸು ಮಾಡುತ್ತದೆ? ಅಲ್ಲದೇ ಈ ಎರಡೂ ದೇಶಗಳನ್ನು ಬೆಂಬಲಿಸುವ ಹಲವಾರು ಮುಂದುವರಿದ ದೇಶಗಳು ತಮ್ಮ ದೇಶದ ಪ್ರಜೆಗಳನ್ನು ಉಪಾಯವಾಗಿ ಸಾಗ ಹಾಕುತ್ತಿರುವುದು ಏಕೆ? ಯಾವುದೋ ದೇಶದಲ್ಲಿ ಪಡೆದ ಪಾಸ್‌ಪೋರ್ಟ್ ಅನ್ನೋ ಪುಸ್ತಕ ಜನ ಸಾಮಾನ್ಯರ ಜೀವನದಲ್ಲಿ ಎಷ್ಟೊಂದು ಬದಲಾವಣೆಗಳನ್ನು ಮಾಡಬಲ್ಲದು?

* ಅಮೇರಿಕದವರು ಖುಷಿ ಪಡಲೇ ಬೇಕು, ಪ್ರತಿನಿತ್ಯ ಹೊರಬರೋ ವೃತ್ತ ಪತ್ರಿಕೆಗಳ ಮುಖ ಪುಟದಲ್ಲಿರೋ ಸೀಮಿತ ಸ್ಥಳದಲ್ಲಿ ಇತ್ತೀಚೆಗೆ ಇರಾಕ್‌ನ ಸುದ್ದಿ ಯಾವುದೋ ಮೂಲೆ ಸೇರಿಕೊಳ್ಳುತ್ತಲ್ಲ ಅದಕ್ಕೆ. ತಮ್ಮ ಮಾತು ಕೇಳದವರ ಮೇಲೆ ಆಕ್ರಮಣಕ್ಕೆ ಎಲ್ಲ ದೇಶಗಳೂ ಯುದ್ಧಕ್ಕೆ ಇಳಿದವೆಂದರೆ ಅಲ್ಲಿಗೆ ಪ್ರಪಂಚದ ಕೊನೆಯಾಯಿತೆಂದೇ ಲೆಕ್ಕ - ಈ ತರ್ಕ ಅಮೇರಿಕದವರಿಗೆ ಏಕೆ ಹೊಳೆಯುವುದಿಲ್ಲವೋ?

* ನನಗೆ ಕಾಲಿನ್ ಪವೆಲ್ ಮೇಲಾದರೂ ಅಲ್ಪಸ್ವಲ್ಪ ವಿಶ್ವಾಸವಿತ್ತು, ಆದರೆ ಕಾಂಡೋಲೀಸಾ ರೈಸ್ ಮೇಲೆ ನನಗೆ ಏಕೋ ವಿಶ್ವಾಸವೇ ಮೂಡುತ್ತಿಲ್ಲ, ಇದು ನನ್ನ ಮಿತಿ ಇದ್ದರೂ ಇರಬಹುದು, ಅಥವಾ ತನ್ನ ಮಾತುಗಳನ್ನು ಮಾತ್ರ ಹೋದಲ್ಲಿ ಬಂದಲ್ಲಿ ಸಾಧಿಸಿಕೊಳ್ಳುವ ಆಕೆಯ ನಿಲುವಿದ್ದರೂ ಇರಬಹುದು.

ಅದು ಹೇಗಾದರೂ ನಡೆದುಕೊಂಡು ಹೋಗುತ್ತಿರಲಿ ನೆಟ್ಟಗಿರುವ ದೇಶವನ್ನು ಕಲಕಿದಾಗ ಅಲ್ಲಿ ಅಮಾಯಕರಿಗೆ ಹೊಡೆತ ಬೀಳುತ್ತದೆ, ಅರಾಜಕತೆ ತಾಂಡವವಾಡುತ್ತದೆ. ತಮ್ಮ ಪ್ರಾಸೆಸ್ಸುಗಳ ಮೇಲೆ ವಿಶೇಷ ಒಲವನ್ನು ಇಟ್ಟುಕೊಂಡು ಮುಂದೆ ನಡೆಯುತ್ತಿರುವ ಮುಂದುವರಿದ ರಾಷ್ಟ್ರಗಳಿಗೆ ಯಾವ ಸಮಯೋಚಿತ ಪ್ರಾಸೆಸ್ಸುಗಳೂ, ವೈಜ್ಞಾನಿಕ ನೆಲಗಟ್ಟೂ ಇರದ ಒಂದು ಧರ್ಮೀಯರು ಮಾತ್ರ ಶತ್ರುಗಳು. ಈ ಶತ್ರುಗಳ ಹೆಸರಿನಲ್ಲಿ ಏನು ಮಾಡಿದರೂ ನಡೆಯುತ್ತದೆ ಎಂದು ಸಾಧಿಸಿಕೊಳ್ಳುವ ಹೊತ್ತಿನಲ್ಲೇ ಇಂತಹ ಶತ್ರುಗಳ ಮತ್ತೊಂದು ಮುಖವನ್ನು ಹೊತ್ತುಕೊಂಡಿರುವ ಎಷ್ಟೋ ರಾಷ್ಟ್ರದವರ ಕೈ ಕುಲುಕುವ ಕೆಲಸವೂ ಹಾಡ ಹಗಲೇ ನಡೆಯುತ್ತದೆ. ಸೌದಿ ಅರೇಬಿಯಾ, ಪಾಕಿಸ್ತಾನಗಳಿಗೆ ಒಂದು ಉತ್ತರ - ಇರಾನ್, ಲೆಬನಾನ್‌ಗಳಿಗೆ ಇನ್ನೊಂದು. ಒಂದು ಸೈನ್ಯದಲ್ಲಿ ಬದುಕಿನ ಬಗ್ಗೆ ಹಲವಾರು ಆಸೆಗಳನ್ನಿಟ್ಟುಕೊಂಡ ಯುವ ಸೈನಿಕರು ತಮ್ಮ ದೇಶದ ಮುಖಂಡರ ಮಾತನ್ನು ನಂಬಿ ಇನ್ಯಾವುದೋ ದೇಶವನ್ನು ರಕ್ಷಿಸೋದಕ್ಕೆ ತಮ್ಮ ಪ್ರಾಣಗಳನ್ನು ತೆತ್ತರೆ, ಮತ್ತೊಂದು ಗೆರಿಲ್ಲಾ ಗುಂಪಿನಲ್ಲಿ ಮುಲ್ಲಾಗಳಿಂದಲೋ ಮತ್ಯಾರಿಂದಲೋ ಪ್ರಭಾವಿತರಾಗಿ, ತಮ್ಮ ಜೀವ-ದೇಹಗಳನ್ನೂ ಯಾವುದೋ ದಿವ್ಯ ಕಾರಣಕ್ಕೆ ಬಲಿಕೊಡುವ ಕಾಯಕ ನಿರಂತರವಾಗಿ ನಡೆಯುತ್ತದೆ. ಈ ರಾಷ್ಟ್ರಗಳ ಧುರೀಣರಿಗೆ ಅಥವಾ ಮದರಸಗಳ ಮುಲ್ಲಾಗಳಿಗೆ ಈ ಯುವಕರು ಚದುರಂಗದಾಟದ ಕಾಯಿಗಳಂತೆ ಕಂಡುಬರುತ್ತಾರೆ.

ನನಗೆ ನೆನಪಿರೋ ಹಾಗೆ ತೊಂಬತ್ತೊಂದರಲ್ಲಿ ನಡೆದ ಮೊದಲ ಇರಾಕ್ ಕದನದ ಸಮಯದಲ್ಲಿ ಒಂಭತ್ತು ರೂಪಾಯಿಗೆ ಒಂದು ಲೀಟರ್ ಪೆಟ್ರೋಲ್ ಇದ್ದದ್ದು, ಕದನ ಮುಗಿಯುವ ಹೊತ್ತಿಗೆ ಹದಿನೆಂಟು ರೂಪಾಯಿಗೆ ಬಂದಿತ್ತು. ಅಪ್ಪ ಬುಷ್‌ನ ಕಾಲ ಮುಗಿದು ಮಗ ಬುಷ್‌ನ ಕಾಲ ಇನ್ನೇನು ಮುಗಿಯುತ್ತಾ ಬಂತು ಎನ್ನುವಾಗ ಹಾಗೂ-ಹೀಗೂ ಒಂದು ಲೀಟರ್ ಪೆಟ್ರೋಲ್‌ಗೆ ಅರವತ್ತು ರೂಪಾಯಿ ಹತ್ತಿರವಾಯಿತು. ಇಸ್ರೇಲ್ ಆಗಲಿ, ಲೆಬನಾನ್ ಆಗಲಿ ತೈಲವನ್ನೇನೂ ಹೊರತೆಗೆಯೋದಿಲ್ಲ, ಆದರೂ ಈ ಗಲಾಟೆ ಹೀಗೆ ಮುಂದುವರೆದರೆ ಇನ್‌ಫ್ಲಮೆಬಲ್ ತೈಲವನ್ನು ಮಾರುವ ಪಕ್ಕದಲ್ಲಿರುವ ದೇಶಗಳೂ ಹೊತ್ತಿಕೊಂಡು ಉರಿದರೆ ಅಲ್ಲಿಗೆ ಒಂದು ಲೀಟರ್ ಪೆಟ್ರೋಲ್ ಬೆಲೆ ನೂರು ರೂಪಾಯಿ ಆದಂತೆಯೇ ಲೆಕ್ಕ. ನಾನು ಇಲ್ಲಿ ಅಮೇರಿಕದಲ್ಲಿ ಕುಳಿತು ಇವರೆಲ್ಲರ ಜಗಳದಲ್ಲಿ ಹುಟ್ಟಿದ ಬೆಂಕಿಯ ಜಳದ ಚುರುಕು ಮುಟ್ಟಿದವನಂತೆ ಪೆಟ್ರೋಲ್ ಬೆಲೆಯನ್ನು ಚರ್ಚಿಸಿದರೆ ಅದು ನನ್ನ ಅಮೇರಿಕನ್ ಮನಸ್ಥಿತಿಯನ್ನು ಪ್ರತಿಬಿಂಬಿಸೀತು, ಆದರೆ ನಮ್ಮೂರಿನ ಮೆಷ್ಟ್ರುಗಳಿಗಾಗಲೀ, ಕೂಲಿನಾಲಿ ಮಾಡಿ ಜೀವಿಸೋರಿಗಾಗಲೀ ಹೀಗೆ ದಿಢೀರನೆ ಹೆಚ್ಚುವ ಪೆಟ್ರೋಲ್ ಬೆಲೆ ಹುಟ್ಟಿಸಬಹುದಾದ ಉಳಿದೆಲ್ಲ ಪದಾರ್ಥಗಳ ಹೆಚ್ಚಿನ ಬೆಲೆ ಹಾಗೂ ಹಣದುಬ್ಬರವನ್ನು ಎದುರಿಸುವ ಶಕ್ತಿ ಅಷ್ಟೇ ವೇಗವಾಗಿ ಬರೋದಿಲ್ಲವಲ್ಲ, ಅದಕ್ಕೇನು ಮಾಡೋದು?

ಅಮೇರಿಕದವರು ಇರಾಕ್ ಯುದ್ಧಕ್ಕೆ ಹೋಗಬಾರದಿತ್ತು, ಇಸ್ರೇಲ್‌ನವರು ಲೆಬನಾನ್ ಮೇಲೆ ಈ ರೀತಿ ಧಾಳಿ ನಡೆಸಬಾರದಿತ್ತು ಎನ್ನುವ ನನ್ನ ತರ್ಕಕ್ಕೆ ಎಲ್ಲೂ ಯಾವ ಮಾನ್ಯತೆಯೂ ಸಿಗೋದಿಲ್ಲ, ಏಕೆಂದರೆ ಇಂದು ಇಸ್ರೇಲ್‌ನ ಧಾಳಿಯನ್ನು ಬೆಂಬಲಿಸಿದಂತೆಯೇ ಅಂದು ಇರಾಕ್ ಯುದ್ಧವನ್ನು ಬೆಂಬಲಿಸಿದ ಹೆಚ್ಚಿನ ರಾಷ್ಟ್ರಗಳು - ಬ್ರಿಟನ್, ಅಮೇರಿಕ, ಆಸ್ಟ್ರೇಲಿಯಾ, ಇತ್ಯಾದಿ - ಇವುಗಳಲ್ಲೆದರ ಮುಖಂಡರು ಮತ್ತೆ ಆರಿಸಿ ಬಂದಿದ್ದನ್ನು ನೋಡಿದರೆ ನನ್ನ ಲೆಕ್ಕದಲ್ಲೇ ಎಲ್ಲೋ ತಪ್ಪಿದೆ ಎನ್ನಿಸುವುದರ ಗುಟ್ಟು ನನಗೆ ಇನ್ನೂ ಹೊಳೆದಿಲ್ಲ!

Saturday, July 15, 2006

ಮನೆಗೊಂದೇ ಮಗುವೇ? ಛೇ!

'ಹುಟ್ಟಿದರೇ ಕನ್ನಡ ನಾಡಲ್ ಹುಟ್ಟಬೇಕು', well, I don't know about that for sure, ಚೀನಾದಲ್ಲಂತೂ ಹುಟ್ಟಲೇ ಬಾರದು ಎನ್ನಿಸಿ ಬಿಟ್ಟಿದೆ, ಮತ್ತಿನ್ನೆನು? ಅಲ್ಲಿ ಮನೆಗೆ ಒಂದೊಂದೇ ಮಗುವಂತೆ - ಛೇ, ಸಾಧ್ಯವೇ ಇಲ್ಲಪ್ಪಾ, ಒಡಹುಟ್ಟಿದವರು, ಅಕ್ಕ-ತಂಗಿ, ಅಣ್ಣ-ತಮ್ಮ ಇವರ ನಡುವೆ ಬದುಕಿ ಬೆಳೆಯದೇ ಇದ್ದರೆ ಆ ಬದುಕಾದರೂ ಏಕೆ?

ನನ್ನ ಬಾಲ್ಯವನ್ನು ನೆನಪಿಸಿಕೊಂಡಾಗಲೆಲ್ಲ ನಮ್ಮ ಕುಟುಂಬದ ಚಿತ್ರಣ ಕಣ್ಣ ಮುಂದೆ ಬರುತ್ತದೆ, ಎಷ್ಟೋ ಸಂತೋಷದ ಘಳಿಗೆಗಳು ಕಣ್ಣ ಮುಂದೆ ಸುಳಿಯುತ್ತವೆ. ನಾವೆಲ್ಲರೂ ಇದ್ದ ಚಿಕ್ಕ ಮನೆಯಲ್ಲಿಯೇ ಎಷ್ಟೊಂದು ಚೆನ್ನಾಗಿ ಹೊಂದಿಕೊಂಡಿದ್ದೆವು, ಒಬ್ಬೊಬ್ಬರ ಕಷ್ಟ ಸುಖಗಳಿಗೆ ಇನ್ನೊಬ್ಬರಾಗುತ್ತಿದ್ದೆವು. ಕೆಲವರು ಹೇಳುವಂತೆ ತಂದೆ-ತಾಯಂದಿರು ಬೆಳೆಸುವುದು ಮೊದಲ ಎರಡು ಮಕ್ಕಳನ್ನು ಮಾತ್ರ, ಇನ್ನು ಉಳಿದವರು ಈ ಹಿರಿಯ ಮಕ್ಕಳ ನೆರಳಿನಲ್ಲಿಯೇ ಬೆಳೆದು ಬಿಡೋದು ಒಂದು ರೀತಿ ದೊಡ್ಡ ಮಕ್ಕಳಿಗೆ ಸಂಬಳ ಸಿಗದ 'ಬೇಬಿ ಸಿಟ್ಟಿಂಗ್' ಅವಕಾಶ, ಚಿಕ್ಕವರಿಗೆ ಯಾವತ್ತಿದ್ದರೂ ಆಟವಾಡಲು ಒಂದಿಷ್ಟು ಜನ, ಇಷ್ಟಂತೂ ಗ್ಯಾರಂಟಿ. ಕೆಲವರು ಹೇಳುತ್ತಾರೆ ಸ್ನೇಹಿತರನ್ನು ನಾವು ಆರಿಸಿಕೊಳ್ಳಬಹುದು ಆದರೆ ಒಡಹುಟ್ಟಿದವರನ್ನು ನಾವು ಪಡೆದುಕೊಂಡು ಬರುತ್ತೇವೆ ಎಂಬುದಾಗಿ, ನನಗೆ ಅದರಲ್ಲೇನೂ ವಿಶೇಷ ಎನ್ನಿಸುವುದಿಲ್ಲ - ನಿಮ್ಮದು ಅವಿಭಕ್ತ ಕುಟುಂಬ ಅಥವಾ ದೊಡ್ಡ ಪರಿವಾರವಾದರೆ ಬದುಕಿನಲ್ಲಿ ಎಲ್ಲ ಥರದವರ ಜೊತೆಗೆ ಹೊಂದಿಕೊಂಡು ಹೋಗುವ ಪಾಠ ಮನೆಯಲ್ಲಿಯೇ ಆರಂಭವಾಗುತ್ತದೆ, ಅದು ಮುಂಜಾನೆ ಬಚ್ಚಲು ಮನೆಯಲ್ಲಿ ಸರತಿಗಾಗಿ ಕಾಯುವ ಸಹನೆ ಇರಬಹುದು ಅಥವಾ 'ಅವನಿಗಿದೆ, ನನಗಿಲ್ಲ' ಎನ್ನುವ ಸಹಬಾಳ್ವೆ ಇರಬಹುದು, ಅವೆಲ್ಲವೂ ಮನೆಯಲ್ಲಿಯೇ ಆರಂಭವಾದರೇ ಒಳ್ಳೆಯದಲ್ಲವೇ?

ಮನೆಯಲ್ಲಿ ಹೆಚ್ಚು ಮಕ್ಕಳು ಇರಬೇಕೆಂದಾಕ್ಷಣ ನನಗೆ ಕುಟುಂಬ ಯೋಜನೆಯ ಮೇಲೆ ನಂಬಿಕೆ ಇಲ್ಲವೆಂದೇನು ಹೇಳುತ್ತಿಲ್ಲ, ನನ್ನ ಪ್ರಕಾರ ಕುಟುಂಬ ಯೋಜನೆಯೆಂದರೆ ಕಡಿಮೆ ಮಕ್ಕಳು ಎಂದು ಆಲೋಚಿಸಿಕೊಳ್ಳುವುದಕ್ಕಿಂತಲೂ 'ಸಂಪೂರ್ಣ ಪರಿವಾರ' ಎಂದು ಆಲೋಚಿಸಿಕೊಂಡರೆ ಹೆಚ್ಚು ಅರ್ಥವೆನಿಸುತ್ತದೆ, ನನ್ನ ತಂದೆ-ತಾಯಿ ಇಬ್ಬರೂ ಪೂರ್ಣಾವಧಿ ಕೆಲಸ ಮಾಡಿ ಕೆಳ-ಮಧ್ಯಮ ವರ್ಗದಲ್ಲಿಯೇ ನಾವು ಆರು ಜನರನ್ನು ಸಾಕಿ ಸಲಹಲಿಲ್ಲವೇ? ನಮಗೆಲ್ಲ ಐಶಾರಾಮವಿಲ್ಲದಿದ್ದರೇನಂತೆ ಬೇಕಾದ ವಿದ್ಯಾಭ್ಯಾಸವನ್ನು ನೀಡಲಿಲ್ಲವೇ, ಬದುಕುವುದನ್ನು ಕಲಿಸಲಿಲ್ಲವೇ? ಇಂತಹ ಪೋಷಕರು ಕಲಿಸಿದ ಪಾಠಗಳೇ ಸಾಕು ಒಂದು ರೀತಿ ಬ್ಯಾಂಕಿನಲ್ಲಿ ಮಿಲಿಯನ್ ಡಾಲರ್ ಇದ್ದ ಹಾಗೆ ಅವುಗಳ ಸಹದರ್ಶನದಲ್ಲಿ ಯಾವ ಹಾದಿಯನ್ನು ಬೇಕಾದರೂ ಸವೆಸಬಹುದು, ಎಲ್ಲಿ ಬೇಕಾದರೂ ಬೆಳೆಯಬಹುದು. ಅದನ್ನು ಬಿಟ್ಟು 'ಮನೆಗೊಂದೇ ಮಗು' ಎನ್ನುವುದನ್ನು ನನ್ನ ಕೈಯಲ್ಲಿ ಊಹಿಸಿಕೊಳ್ಳಲೂ ಸಾಧ್ಯವಿಲ್ಲ, ಶಾಲೆಯಿಂದ ಮನೆಗೆ ಬಂದ ಮಗುವಿಗೆ ತಂದೆ-ತಾಯಿಯರನ್ನು ಬಿಟ್ಟು ಒಡನಾಡುವುದಕ್ಕೆ ಬೇರೆ ಯಾರೂ ಇರುವುದಿಲ್ಲವೆಂದರೆ ಇಂತಹ ವ್ಯವಸ್ಥೆಯಲ್ಲಿ ಕೊರತೆಯಿದೆ ಎನ್ನೋದೇ ನನ್ನ ಭಾವನೆ. ಎಷ್ಟೋ ಸಾರಿ ಚೀನಾದ ಬಗ್ಗೆ ತೋರಿಸೋ ಸಾಕ್ಷ್ಯಚಿತ್ರಗಳಲ್ಲಿ ಮನೆಗೊಂದು ಮಗುವಿನ ಚಿತ್ರಣವನ್ನು, ಅದರ ಮುಂದಾಗುವ ಪರಿಣಾಮಗಳನ್ನು ಊಹಿಸಿಯೇ ಹೆದರಿಕೆಯಾಗುತ್ತದೆ ಏಕೆಂದರೆ ಮಿಲಿಯನ್‌ಗಟ್ಟಲೆ ಮಕ್ಕಳಿಗೆ ಮನೆಯಲ್ಲಿ 'ಹಂಚಿ ಕೊಳ್ಳುವುದು' ಎಂದರೆ ಏನು ಎಂದೇ ಗೊತ್ತಿಲ್ಲ - ಅವರಿವರ ಜೊತೆಯಲ್ಲಿ ಜಗಳವಾಡಿಯೂ ತಿಳಿದಿಲ್ಲ, ಹಾಗಿದ್ದ ಮೇಲೆ ಇನ್ನು ಅಂತಹ ಮನಸ್ಥಿತಿ ಪರಿಪೂರ್ಣವಾಗಿ ಬೆಳೆಯುವುದಾರೂ ಹೇಗೆ?

ನನಗೆ ಸ್ನೇಹಿತರ ಬಗ್ಗೆ ಅಪಾರ ಗೌರವವಿದೆ ಆದರೆ ಅವರು ಒಡಹುಟ್ಟಿದವರ ಸ್ಥಾನವನ್ನು ತುಂಬಲಾರರು, '...ಬರಬೇಕ ತಂಗಿ ನೀ ಮದುವೀಗೆ...', 'ತವರೂರಾ ಹಾದ್ಯಾಗೆ ಅಣ್ಣಾ ಬರುವುದಾ ಕಂಡೆ...' ಎನ್ನುವ ಜಾನಪದದಲ್ಲಾಗಲೀ, ಅಥವಾ ನೆರೆಹೊರೆಯವರನ್ನು 'ಸಹೋದರ-ಸಹೋದರಿಯರಂತೆ ಕಾಣುವ' ನಮ್ಮ ಭಾವನೆಗಳಲ್ಲಾಗಲೀ ಬಹಳಷ್ಟು ಅರ್ಥವಿದೆ. ನಮ್ಮ ಕಲಹಗಳನ್ನು ನಾವು ಮನೆಯಲ್ಲಿ ಬಗೆ ಹರಿಸಿಕೊಳ್ಳುತ್ತಿರುವಾಗ ನಾನೂ, ನನ್ನ ಎರಡನೇ ಅಣ್ಣನೂ ಬಹಳಷ್ಟು ಹೊದೆದಾಡಿದ್ದಿದೆ, ಅವೆಲ್ಲವೂ ಶಾಲೆಯ ಹಂತಕ್ಕೆ ಮಾತ್ರ ಇತ್ತು, ಮುಂದೆ ಹೈ ಸ್ಕೂಲಿಗೆ ಹೋಗೋದಕ್ಕೆ ಶುರುಮಾಡಿದ ಮೇಲೆ ಫಿಸಿಕಲ್ ಫೈಟಿಂಗ್ ನಿಂತು ಹೋಯಿತು, ನಾವಿಬ್ಬರೂ ಎಷ್ಟು ಹೊಡೆದಾಡುತ್ತಿದ್ದೆವೆಂದರೆ ಉಳಿದವರೂ 'ಈಗ ಏಕೆ ಬಡಿದಾಡೋಲ್ಲ' ಎಂದು ಕೇಳುವಷ್ಟರ ಮಟ್ಟಿಗಿತ್ತು. ಅವನು ನನಗಿಂತ ಬಲಶಾಲಿಯೇ, ಆದರೆ ನನ್ನ ಕಪಿಮುಷ್ಟಿಯ ಹಿಡಿತದಿಂದ ಬಿಡಿಸಿಕೊಳ್ಳಲು ಅವನಿಗೆ ಕಷ್ಟವಾಗುತ್ತಿತ್ತು, ಆದರೂ ಕೊನೆಯಲ್ಲಿ ಅವನೇ ಗೆಲ್ಲುತಿದ್ದನು. 'ಹೀಗಲ್ಲ, ಹಾಗೆ ಮಾಡು' ಎನ್ನುವ ಬೇಕಾದಷ್ಟು ಮಾರ್ಗದರ್ಶನಗಳು ನನಗೆ ನಮ್ಮನೆಯವರಿಂದ ಬೇಕಾದಷ್ಟು ಸಿಕ್ಕಿದೆ, ಇಷ್ಟೆಲ್ಲ ಜನರ ನಡುವೆ ಬೆಳೆದು ಬಂದ ನಾನು ಸ್ವಲ್ಪ ಅಂತರ್ಮುಖಿಯಾಗಿರೋದನ್ನ ಗಮನಿಸಿದರೆ ಇನ್ನು ಮನೆಗೊಂದೇ ಮಗುವಾಗಿದ್ದರೆ ಸದಾ ಮೌನಿಯಾಗೇ ಇರುತ್ತಿದ್ದೆನೇನೋ ಎನ್ನಿಸಿ ಭಯವಾಗುತ್ತದೆ.

ಸಂಪನ್ಮೂಲ, ಜನಜಂಗುಳಿ, ಜನಸಂಖ್ಯೆ ಸಮಸ್ಯೆ ಇತ್ಯಾದಿಯಾಗಿ ಏನು ಬೇಕಾದರೂ ವಾದ ಮಾಡಬಹುದು, ಅದರೆ ನನ್ನ ಮನಸ್ಸಿನ್ನಲ್ಲಿ ಪ್ರತಿಯೊಬ್ಬರಿಗೂ ಕೊನೇ ಪಕ್ಷ ಒಬ್ಬ ಸಹೋದರ-ಸಹೋದರಿ ಇದ್ದರೆ ಅದರ ಅನುಭವವೇ ಬೇರೆ ಎನ್ನುವ ಭಾವನೆ ಬಲವಾಗಿ ನಿಂತಿದೆ. ಆ ಬಾಲ್ಯದ ನೆನಪುಗಳು ಒಂದು ಒಳ್ಳೆಯ ಮನಸ್ಸಿನ ಭವ್ಯ ಭವಿತವ್ಯದ ಭದ್ರ ಬುನಾದಿಯನ್ನು ಹಾಕಬಲ್ಲವು. ಕೈ ಬೆರಳುಗಳು ಭಿನ್ನವಾಗಿರೋ ಹಾಗೆ ಸಹೋದರ-ಸಹೋದರಿಯರೂ ನಮಗಿಂತ ಬಹಳ ಭಿನ್ನರಾಗಿರೋದು ಸ್ವಾಭಾವಿಕ, ಈ ಭಿನ್ನತೆಯೇ ವಿಶೇಷವಾಗಿರೋದು, ಎಲ್ಲರೂ ನನ್ನ ಹಾಗೇ ಇದ್ದರೆ ಪ್ರಪಂಚವೇ ಮುಳುಗಿ ಹೋದೀತು. ಆದ್ದರಿಂದಲೇ 'ಹುಟ್ಟಿದರೇ ಕನ್ನಡ ಮಾತಾಡೋ ನಮ್ಮೂರಲ್ಲ್ ಹುಟ್ಟಬೇಕು' ಎಂದು ಬದಲಾಯಿಸಿಕೊಳ್ಳುತ್ತೇನೆ, ಇಷ್ಟೇ ಜನ ಒಡಹುಟ್ಟಿದವರಿದ್ದರಂತೂ ಬದುಕು ಇನ್ನೂ ಚೆನ್ನಾಗಿರುತ್ತೆ!

Thursday, July 13, 2006

ಬಡವ-ಬಲ್ಲಿದನೆಂಬ ಬೇಧ ದೇವರಿಗಿಲ್ಲ...

ಮನುಷ್ಯರಿಗಿದೆ, ಈ ದಿನ ಸಂಜೆ ಟಿವಿಯ ವರದಿಯೊಂದರಲ್ಲಿ ತೋರಿಸಿದ ಹಾಗೆ ಒಂದು ಕಡೆ ಬಡತನ-ಸಿರಿತನದ ನಡುವಿನ ಹೆಚ್ಚುತ್ತಿರುವ ಕಂದರ, ಮತ್ತೊಂದು ಕಡೆ ಎಂದಿಗಿಂತಲೂ ಹೆಚ್ಚು ಉತ್ಸಾಹದಿಂದ ಮುನ್ನುಗ್ಗುತ್ತಿರುವ ಆರ್ಥಿಕ ಸ್ಥಿತಿಗತಿ ಮತ್ತು ವಿಶ್ವದೆಲ್ಲೆಡೆ ಒಂದೇ ಮಂತ್ರವನ್ನು ಸಾರುತ್ತೇನೆಂದು ಹಠ ತೊಟ್ಟ ಜಾಗತೀಕರಣ ಬಿತ್ತಿ ಬೆಳೆಸುವ ವ್ಯತ್ಯಾಸ ಹಾಗೂ ದಿಢೀರನೇ ಹುಟ್ಟಿಸುವ ಸವಾಲುಗಳು ಇವೆಲ್ಲವನ್ನು ಕುರಿತು ಯೋಚಿಸತೊಡಗಿದೊಡನೆ ತಲೆ ದಿಮ್ಮೆನ್ನತೊಡಗಿತು.

ಹಲವು ವರ್ಷಗಳ ಹಿಂದೆ ಸರಕಾರಿ ಸ್ವಾಮ್ಯದ ಬ್ಯಾಂಕುಗಳಲ್ಲಿ ಇಂತಿಷ್ಟು ವರ್ಷ ಕೆಲಸ ಮಾಡಿದವರಿಗೆ ಸ್ವಯಂ ನಿವೃತ್ತಿಯನ್ನು ಪಡೆಯಬಹುದಾದ ಸೌಲಭ್ಯವನ್ನು ಸರ್ಕಾರ ಘೋಷಿಸಿತು, ಆಗ ದೊರೆಯುತ್ತಿದ್ದ ಎರಡಂಕಿ ಬಡ್ಡಿ ದರ, ಜೊತೆಯಲ್ಲಿ ಕೈಗೆ ಸಿಗಬಹುದಾದ ಸುಮಾರಾದ ಮೊತ್ತ ಬಹಳಷ್ಟು ಜನರನ್ನು ಆ ನಿಟ್ಟಿನಲ್ಲಿ ಪ್ರಚೋದಿಸಿ ಸ್ವಯಂ ನಿವೃತ್ತಿಯನ್ನು ಪಡೆಯುವಂತೆ ಮಾಡಿತು. ಆಗ ನಿವೃತ್ತಿ ಪಡೆದವರು ಆಶ್ಚರ್ಯಪಡುವಷ್ಟು ವೇಗದಲ್ಲಿ ಸರಕಾರಿ ಬ್ಯಾಂಕುಗಳು, ಅಂಚೆ ಕಛೇರಿಗಳು ಕೊಡಬಹುದಾದ ಬಡ್ಡಿ ದರದಲ್ಲಿ ಸಾಕಷ್ಟು ಇಳಿತವಾಗಿದ್ದರಿಂದಲೂ, ಜೊತೆಯಲ್ಲಿ ಮುಂಬೈಯ ಶೇರು ಮಾರುಕಟ್ಟೆಯಲ್ಲಿ ತಮ್ಮ ಹಣವನ್ನು ಹೆಚ್ಚಿನ ರಿಸ್ಕ್‌ಗೆ ಒಳಪಡಿಸಲಾರದ್ದರಿಂದಲೂ ಬಹಳಷ್ಟು ಬ್ಯಾಂಕ್ ಮ್ಯಾನೇಜರುಗಳು ಸಂಕಷ್ಟಕ್ಕೆ ಸಿಕ್ಕಿಹಾಕಿಕೊಂಡಿದ್ದರು. ಇದೇ ಸಮಯದಲ್ಲೇ ಆದ ಮತ್ತೊಂದು ಬೆಳವಣಿಗೆಯೆಂದರೆ ೨೦೦೦ ರ ಆಸುಪಾಸಿನ ವರ್ಷಗಳಲ್ಲಿ ಪ್ರಪಂಚದೆಲ್ಲೆಡೆಯಿಂದ ಭಾರತಕ್ಕೆ ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಕೆಲಸಗಳು ಹರಿಯತೊಡಗಿದವು - ಆಗ ಅದೇ ತಾನೆ ಪದವಿ ಮುಗಿಸಿ ಹೊರಬಂದವರಿಗೂ ಒಂದೇ ಕಾಲ್‌ಸೆಂಟರ್ ಅಥವಾ ಮಾಹಿತಿ ತಂತ್ರಜ್ಞಾನವನ್ನು ಆಧರಿಸಿದ ಇತರ ಉದ್ಯೋಗಗಳಲ್ಲಿ ತಿಂಗಳಿಗೆ ಕಡಿಮೆ ಎಂದರೆ ಹದಿನೈದು, ಇಪ್ಪತ್ತು ಸಾವಿರ ರೂಪಾಯಿಗಳ ಸಂಬಳ ಬರಲು ಆರಂಭಿಸಿದ್ದು ಈ ಬ್ಯಾಂಕು ಮ್ಯಾನೇಜರುಗಳು ಹಾಗೂ ಕಾಲೇಜು-ವಿಶ್ವವಿದ್ಯಾನಿಲಯಗಳಲ್ಲಿ ಕೆಲಸ ಮಾಡುತ್ತಿದ್ದ ಅನೇಕ ಪ್ರೊಫೆಸರುಗಳು ಹುಬ್ಬೇರಿಸುವಂತೆ ಮಾಡಿತ್ತು - ಇವತ್ತು ನಿನ್ನೆ ನಮ್ಮ ಎದುರು ಆಡಿಕೊಂಡಿದ್ದ ಹುಡುಗ ನಮಗಿಂತ ಹೆಚ್ಚು ಸಂಪಾದಿಸುವಂತಾದನೇ? - ಎನ್ನುವುದನ್ನು ಅರಗಿಸಿಕೊಳ್ಳಲು ಇವರಿಗೆಲ್ಲ ಬಹಳಷ್ಟು ಸಮಯ ಹಿಡಿಯಿತು. ತೊಂಭತ್ತರ ಕೊನೆಯ ವರ್ಷಗಳಲ್ಲಿ ಆರಂಭವಾದ ಈ ಪ್ರಕ್ರಿಯೆ ಇವತ್ತಿಗೂ ಮುಂದುವರೆದಿದ್ದು, ಬೆಂಗಳೂರಿನ ಒಂದು ವಾತಾವರಣವನ್ನೇ ಉದಾಹರಣೆಯನ್ನಾಗಿ ತೆಗೆದುಕೊಂಡರೆ ಒಂದು ರೀತಿಯ ಉಬ್ಬರವನ್ನು ಸೃಷ್ಟಿಸಿದೆ. ಮೊದಲೆಲ್ಲ ಐವತ್ತು ರೂಪಾಯಿಗಳನ್ನು ಕೊಟ್ಟು ಒಂದು ಕಾಫಿಯನ್ನು ಕುಡಿಯುವುದನ್ನು ಯಾವುದೋ ಸಿನಿಮಾದಲ್ಲಿ ತೋರಿಸೋ ಪಂಚತಾರಾ ಹೊಟೇಲಿನ ದೃಶ್ಯವನ್ನಾಗಿ ನೋಡಬಹುದಾಗಿತ್ತು, ಆದರೆ ಇಂದು ಅದು ದಿನ ನಿತ್ಯದ ಬದುಕಾಗಿದೆ.

ನನ್ನ ವೈಯುಕ್ತಿಕ ಅನುಭವಗಳಲ್ಲಿ ನಾನು ಒಂದು ಕಾಫಿಗೆ ಎರಡು-ಎರಡೂವರೆ ಡಾಲರುಗಳನ್ನು ಕೊಟ್ಟು ಕುಡಿದಿದ್ದೇನೆ, ಆದರೆ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅರವತ್ತು ರೂಪಾಯಿಗೆ ಒಂದು ಪ್ಲಾಷ್ಟಿಕ್ ಲೋಟದಲ್ಲಿ ಕಾಫಿಯನ್ನು ಕೊಂಡು ಕುಡಿಯಲು ಮನಸ್ಸು ಸುತಾರಾಂ ಒಪ್ಪದಿರುವ ಕಾರಣ ಸುಮ್ಮನಿದ್ದದ್ದೂ ನನಗೆ ಚೆನ್ನಾಗಿ ನೆನಪಿದೆ, ಇವತ್ತಿಗೂ ಸಹ ಐವತ್ತು ರೂಪಾಯಿಗಳನ್ನು ಕೊಟ್ಟು ಒಂದು ಕಪ್ ಕಾಫಿಯನ್ನು ಕುಡಿಯುವುದು ನನ್ನಿಂದಾಗದ ಕೆಲಸ ಏಕೆಂದರೆ ನನ್ನ ಮನಸ್ಸಿನಲ್ಲಿ ಐವತ್ತು ರೂಪಾಯಿಗಳ ವಿಸ್ತಾರ ಬಹಳಷ್ಟಿದೆ, ಅದು ಇಂದಿನ ಸನ್ನಿವೇಶದಲ್ಲಿ ಹಳತಾಗಿದ್ದರೂ ಆ ಹಳೆಯ ಆಲೋಚನೆಗಳು ಮನಸ್ಸಿನ ರಂಗಸ್ಥಳಕ್ಕೆ ಬಂದಾಗಲೆಲ್ಲ ಒಂದು ರೀತಿಯ ಮುದವನ್ನು ನೀಡುತ್ತವಾದ್ದರಿಂದ ಆ ಸವಿನೆನಪುಗಳ ಸ್ಥಾನದಲ್ಲಿ ನಾನು ಇಂದಿನ ಐವತ್ತು ರೂಪಾಯಿಯನ್ನು ಇಟ್ಟು ನೋಡಲು ಸಾಧ್ಯವಿರದಿದ್ದುದರಿಂದ 'ಮುಂದೆ ನೋಡಿದರಾಯಿತು' ಎಂಬ ಒಂದೇ ಆಲೋಚನೆಯಿಂದ ಹೊಸ ಆಲೋಚನೆಗಳನ್ನು ಬದಿಗಿಟ್ಟು ಹಳಬನಾಗೇ ಉಳಿಬಿಡುತ್ತೇನೆ. ಬಡತನ ಅದು ಹೇಗಾದರೂ, ಎಲ್ಲಾದರೂ ನಮ್ಮನ್ನು ತಗುಲಿಕೊಂಡಿರಲಿ, ಒಂದು ರೀತಿಯ ಶಾಪದ ಹಾಗೆ ಅಥವಾ ಎಷ್ಟು ತೊಳೆದರೂ ಹೋಗದ ಬಟ್ಟೆಗಂಟಿದ ಕಲೆಯ ಹಾಗೆ ಉಳಿದುಕೊಂಡೇ ಬಿಡುತ್ತದೆ. ಇದೇ ಬಡತನವನ್ನು ನೆನೆಸಿಕೊಂಡು ಅಥವಾ ಅದರ ದೆಸೆಯಿಂದ ಒಂದು ರೂಪಾಯಿ ಇಲ್ಲದ ದಿನಗಳಲ್ಲಿ ಅದರ ಬದಲಿಗೆ ಅದೆಷ್ಟೋ ಕಿಲೋಮೀಟರುಗಳನ್ನು ನಡೆದ ನನಗೆ ಇವತ್ತಿಗೂ ಅಲ್ಲಲ್ಲಿ ನೋಡಲೂ ಸಿಗದ ಒಂದು ರೂಪಾಯಿಯ ನೋಟು ಯಾವತ್ತಾದರೂ ಕಣ್ಣಿಗೆ ಬಿದ್ದರೆ ಬಹಳ ಹತ್ತಿರದ ಸ್ನೇಹಿತನಂತೆ ಕಂಡುಬರುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಬಡತನ ಒಂದು ರೀತಿಯ ಮನಸ್ಥಿತಿಯನ್ನು ಸೃಷ್ಟಿಸಿಬಿಡುತ್ತದೆ, ಅದೂ ಚಿಕ್ಕವರಿರುವಾಗದಿಂದಲೂ ಬಂದರಂತೂ ಮುಗಿದೇ ಹೋಯಿತು - ಇಲ್ಲವೆಂದಾದರೆ ನನ್ನಂತಹ ಅನಿವಾಸಿಗಳಲ್ಲಿ ಎಷ್ಟೋ ಜನ ಲಕ್ಷಗಟ್ಟಲೆ ದುಡಿದರೂ ಇವತ್ತಿಗೂ ತಮ್ಮ-ತಮ್ಮ ಮನೆಗಳಲ್ಲಿ ಅನಗತ್ಯವಾಗಿ ಉರಿಯೋ ದೀಪಗಳನ್ನು ಕುದ್ದಾಗಿ ಹೋಗಿ ಆರಿಸಿಬರುವುದೇಕೆ, ಅಲ್ಲದೇ ಪಾರ್ಕಿಂಗ್ ಮೀಟರ್‌ಗೆ ಹಾಕುವಾಗ ಪ್ರತಿಯೊಂದು ನಾಲ್ಕಾಣೆ ಪಾವಲಿಯೂ ತುಂಬಾ ಮೌಲ್ಯದ ಮೊತ್ತವಾಗಿ ಕಂಡುಬರುವುದೇಕೆ?

ಸಿರಿತನಕ್ಕೆ ಅದರದ್ದೇ ಆದ ಇನ್ನೊಂದು ಮುಖವಿದೆ, ಇದರ ಸುಪ್ಪತ್ತಿಗೆಯಲ್ಲಿ ಬೆಳೆದು ಬಂದವರಿಗೆ ಏನಿಲ್ಲವೆಂದರೂ ಗಟ್ಟಿಮುಟ್ಟಾದ ಶರೀರವಂತೂ ಇರುತ್ತದೆ, ಬಾಲ್ಯದಲ್ಲಿದ್ದಾಗ, ಬೆಳವಣಿಗೆಯ ಸಮಯದಲ್ಲಿ ಹೇರಳವಾಗಿ ಸಿಕ್ಕ ಆಹಾರ ಪದಾರ್ಥಗಳು ಜೀವನ ಪರ್ಯಂತ ಬೇಕಾದ ಒಂದು ಶರೀರವನ್ನಂತೂ ಬೆಳೆಸಿಬಂದಿರುತ್ತದೆ, ಅದರ ಜೊತೆಯಲ್ಲಿ ಗತ್ತು, ಗಾಂಭೀರ್ಯ, ಸುಪಿರಿಯಾರಿಟಿ, ಶ್ರೀಮಂತಿಕೆಗೆ ತಕ್ಕ ಒಡನಾಟ, ವಿದ್ಯಾಭ್ಯಾಸ ಇತ್ಯಾದಿಗಳನ್ನೂ ಬಳುವಳಿಯಾಗಿ ಕೊಟ್ಟಿರುತ್ತದೆ, ಶ್ರೀಮಂತರಾಗಿ ಹುಟ್ಟಿ ಬೆಳೆದು ಬಂದವರೆಲ್ಲರೂ ಬಹಳ ಬುದ್ಧಿವಂತರೆಂದು ನಾನು ಹೇಳುತ್ತಿಲ್ಲ, ಏನಿಲ್ಲವೆಂದರೂ ಅವರಿಗೆ ಯಾವುದಕ್ಕೂ ಕಡಿಮೆಯಿರದ ಒಂದು ವಾತಾವರಣದ ಪರಿಚಯವಿರುತ್ತದೆ, ಈ ವಿಪುಲವಾಗಿ ದೊರೆಯುವ ಸಂಪನ್ಮೂಲಗಳು ಒಂದು ರೀತಿಯ ಧಾರಾಳ ಮನಸ್ಸನ್ನೂ ಸೃಷ್ಟಿಸಿರಲಿಕ್ಕೆ ಸಾಕು. ನಾನು ಚಿಕ್ಕವನಿದ್ದಾಗ ಒಂದು ಬಿಳಿ ಹಾಳೆಯನ್ನು ಕೊಟ್ಟು ಒಂದು ಚಿತ್ರವನ್ನು ಬರೆ ಎಂದು ಹೇಳಿದ್ದರೆ ನಾನು ಖಂಡಿತವಾಗಿ ಆ ಹಾಳೆಯ ಮೂಲೆಯೊಂದರಲ್ಲಿ ಸಣ್ಣದಾಗಿ ಬರೆಯುತ್ತಿದ್ದೆ, ಏಕೆಂದರೆ ಯಾವತ್ತೂ ಬರದ ನಾಳೆಗಳಿಗಾಗಿ ಹಾಳೆಯ ಉಳಿದ ಜಾಗವನ್ನು ಉಳಿಸಿಕೊಂಡಿರಬೇಕಾಗಿತ್ತಲ್ಲ ಅದಕ್ಕಾಗಿ, ಅದೇ ಒಂದು ಶ್ರೀಮಂತ ಪರಿಸರದಲ್ಲಿ ಬೆಳೆದುಬಂದಿದ್ದರೆ ಒಂದು ಚಿತ್ರವನ್ನು ಬರೆಯಲು ಏನಿಲ್ಲವೆಂದರೂ ಎರಡು ಹಾಳೆಗಳನ್ನಾದರು ಹರಿದುಹಾಕಿ ಕೊನೆಗೆ ಮೂರನೇ ಹಾಳೆಯ ಮಧ್ಯೆ ಒಂದು ಚಿತ್ರವನ್ನು ಬರೆಯುತ್ತಿದ್ದೆನೇನೋ ಎನ್ನಿಸುತ್ತದೆ - ಈಗ ಇಲ್ಲಿ ಕುಳಿತು ಇಂಟ್ರಾಪೊಲೇಟ್ ಮಾಡಿಕೊಳ್ಳೋದರಿಂದ ಆಗೋದೇನೂ ಇಲ್ಲ ಎಂದು ಗೊತ್ತು, ಆದರೂ ಈಗೆಲ್ಲಾದರೂ ಸಿಕ್ಕ ನನ್ನ ಹಳೆಯ ನೋಟ್ ಪುಸ್ತಕಗಳನ್ನು ನಾನು ನೋಡಿಕೊಂಡರೆ ಬಡತನದ ಛಾಯೆ ಪ್ರತಿಪುಟದಲ್ಲೂ ಸ್ಪಷ್ಟವಾಗಿ ಕಂಡುಬರುತ್ತದೆ - ಯಾವೂಂದು ಸಾಲಿನಲ್ಲೂ ಮಾರ್ಜಿನ್ ಬಿಡದ ಹಾಗೆ ಬರೆದದ್ದೋ, ಅಥವಾ ಒಂದು ಪ್ಯಾರಾದಿಂದ ಮತ್ತೊಂದು ಪ್ಯಾರಕ್ಕೆ ಒಂದು ಸಾಲನ್ನೂ ಬಿಡದೇ ಪುಟದ ಒಂದಿಂಚನ್ನೂ ವ್ಯವಸ್ಥಿತವಾಗಿ ಉಪಯೋಗಿಸಿದ್ದೋ ಕಂಡುಬರುತ್ತದೆ. ಇಷ್ಟು ಹಿಡಿತದಲ್ಲಿ ಬರೆದದ್ದರಿಂದ ಪ್ರತಿ ನೋಟ್‌ಬುಕ್‌ನಲ್ಲಿ ಹಾಳೆಗಳು ಉಳಿದೇ ಉಳಿಯುತ್ತಾವಾದ್ದರಿಂದ ಅವುಗಳನ್ನು ನೀಟಾಗಿ ಹರಿದು ಮುದ್ರಣಾಲಯದಲ್ಲಿ ತೆಗೆದುಕೊಂಡು ಹೋಗಿ ಮತ್ತೊಂದು ನೋಟ್‌ಪುಸ್ತಕವನ್ನಾಗಿ ಪರಿವರ್ತಿಸಿಕೊಂಡು ಎಷ್ಟೋ ಸಾರಿ ಬಂದಿದ್ದೇನೆ - ಆದರೆ ನನ್ನದೃಷ್ಟಕ್ಕೆ ಆಡ್ಡ ಸೂಜಿಯಿಂದ ಹೊಲಿಸಿಕೊಂಡ, ಆಕಾರದಲ್ಲಿ ಇನ್ನಷ್ಟು ಚಿಕ್ಕವಾಗಿ ಹೊರಬರುವ ಈ ನೋಟ್ ಪುಸ್ತಕಗಳಲ್ಲಿ ಮಾರ್ಜಿನ್ ತಾನಾಗೆ ಉಳಿದುಕೊಂಡು ಬಿಡುವುದರ ಜೊತೆಗೆ ಈ ಥರದ ನೋಟ್‌ಬುಕ್‌ಗಳು ತುಂಬಿದ್ದೆಂದೂ ನನಗೆ ನೆನಪಿನಲ್ಲಿಲ್ಲ!

೯೩ ಸೆಂಟಿಗೆ ಒಂದು ಗ್ಯಾಲನ್ ಗ್ಯಾಸೋಲೀನ್ ಹಾಕಿಸಿದ್ದೂ ಇದೆ, ಹಾಗೇ ಇವತ್ತು ಮೂರು ಡಾಲರ್‌ಗೆ ಒಂದು ಗ್ಯಾಲನ್ ಹಾಕಿಸಿದ್ದೂ ಇದೆ, ಆದರೆ ನನ್ನ ಕಾರಿನಲ್ಲಿ ಏರ್‌ಕಂಡೀಷನರ್ ಉಳಿದೆಲ್ಲರ ಕಾರುಗಳಲ್ಲಿ ಚಲಾವಣೆ ಆಗುವಂತೆ ಹೆಚ್ಚು ಆಗುವುದಿಲ್ಲ. ನಾನು ಇದುವರೆಗೆ ಹಾಗೆ ಉಳಿಸಿದ ಗ್ಯಾಸೋಲಿನ್ ಮೊತ್ತ ಹತ್ತು ವರ್ಷಗಳಲ್ಲಿ ಸುಮಾರು ನೂರು ಡಾಲರ್ ಇದ್ದಿರಬಹುದು - ಹೀಗೆ ಬಡತನದಲ್ಲಿ ಓಡುವ ಬದುಕು, 'ಆನೆಯನ್ನು ಹೋಗಲಿಕ್ಕೆ ಬಿಟ್ಟು, ಬಾಲವನ್ನು ಹಿಡಿದು ಎಳೆದಂತೆ' ಎಷ್ಟೋ ಸಾರಿ ಕಂಡುಬರುತ್ತದೆ. ನನ್ನ ಪ್ರತಿ ಭಾರತದ ಟ್ರಿಪ್ಪುಗಳು ಏನಿಲ್ಲವೆಂದರೂ ಕನಿಷ್ಟವೆಂದರೆ ಹತ್ತು ಅಥವಾ ಹನ್ನೆರಡು ಸಾವಿರ ಡಾಲರಿನ ಮೊತ್ತವನ್ನು ತಲುಪಿಯೇ ತಲುಪುತ್ತದೆ, ಅಲ್ಲಲ್ಲಿ ಬೇಕಾಬಿಟ್ಟಿ ಚೆಲ್ಲುವ ಹಣಬೇರೆ. ಬಡತನದ ಮತ್ತೊಂದು ಮುಖವಾಗಿ ನಾನು ಎಷ್ಟು ಒದ್ದಾಡಿ ಬೇಡಿಕೊಂಡರೂ ಸುಖಾಸುಮ್ಮನೇ ಅನ್ನವನ್ನು ಚೆಲ್ಲುತ್ತಿದ್ದರೆಂದು ನನ್ನ ಹಿಂದಿನ ರೂಮ್‌ಮೇಟ್‌ಗಳ ಜೊತೆಯಲ್ಲಿ ಜಗಳವಾಡಿದ್ದಿದೆ - ಅಕ್ಕಿ ಅಥವಾ ಅನ್ನದ ವಿಷಯ ಬಂದಾಗ ಅದು ಏಳು ಡಾಲರ್‌ಗೆ ಹತ್ತು ಕೆಜಿಯ ವಿಷಯವಾಗಿ ನನಗೆಂದೂ ಕಂಡಿದ್ದಿಲ್ಲ - ಇವತ್ತಿಗೂ ಸಹ ಅನ್ನವನ್ನು ಯಾವುದೋ ಕಾರಣಕ್ಕೆ ಎಸೆಯುವಾಗ ನಮ್ಮಲ್ಲಾದರೆ ದನವೋ, ನಾಯಿಯೋ ತಿನ್ನುತ್ತಿತ್ತು ಎನಿಸದೇ ಇರೋದಿಲ್ಲ.

ಶ್ರೀಮಂತಿಕೆ ಮೆರುಗು ಒಂದು ರೀತಿ ಮುಖಕ್ಕೆ ಹಚ್ಚಿದ ಮೇಕಪ್ಪಿನ ಬಣ್ಣದ ಹಾಗೆ ಒಳ್ಳೆಯ ಬಿಸಿಲಿನ ಜಳದಲ್ಲಿ ಹಣೆಮೇಲೆ ಕಟ್ಟಿದ ಬೆವರಿನ ಹನಿಗಳ ಜೊತೆಯಲ್ಲಿ ಹರಿದುಬರಬಲ್ಲದು, ಆದರೆ ಬಡತನದ ಬವಣೆ ಚರ್ಮದ ಒಳಗೆ ತೋರಿಕೊಂಡು ಒತ್ತರಿಸಿ ಬರುವ ಒಂದು ರೀತಿ ಪಾದದ ಮೇಲೆ ಕಾಣುವ ರಕ್ತನಾಳಗಳ ಹಾಗೆ, ಯಾವತ್ತೂ ಹೋಗೋದಿಲ್ಲ. ಬಡತನದಿಂದ ಸಿರಿತನಕ್ಕೆ ಹೋಗೋದು ಸುಲಭವೆಂದು ನನಗೆಂದೂ ಅನ್ನಿಸಿಲ್ಲ, ತಮ್ಮ-ತಮ್ಮ ಮಕ್ಕಳಿಗೆ ಬೆಲೆಬಾಳುವ ಆಟಿಕೆಗಳನ್ನು ತೆಗೆದುಕೊಂಡು ಬರುವ ನನ್ನಂತಹವರು ಅವುಗಳ ಜೊತೆಯಲ್ಲಿ ಆಟವಾಡಿದ್ದಿದೆ ಜೊತೆಯಲ್ಲಿ ಅವುಗಳು ನನಗೋಸ್ಕರವೇ ತಂದವೇನೋ ಎನ್ನುವಂತೆ ಮುತುವರ್ಜಿಯಿಂದ ಕಾಪಾಡಿಕೊಂಡದ್ದೂ ಇದೆ. ಆದರೆ ತಂದೆ-ತಾಯಿಯರು ಕಂಡು ಅನುಭವಿಸಿದ ಬಡತನದ ಮುಖಗಳನ್ನು ಕಾಣದ ಮಗು ಅದನ್ನು ಕುಟ್ಟಿ ಪುಡಿಮಾಡಿದಾಗ ಅದಕ್ಕೇನೂ ಅನ್ನಿಸದಿದ್ದರೂ, ತಂದೆ ತಾಯಿಗಳಿಗೆ ತಮ್ಮ ದುಡ್ಡಿಗೆ ಸರಿಯಾದ ನ್ಯಾಯ ಸಿಗಲಿಲ್ಲವೆಂದು ಅನ್ನಿಸಿದರೆ ಅದು ಬಡತನದ ಕಿರೀಟದಲ್ಲಿರೋ ರತ್ನವೆಂದೇ ನನಗೆ ತೋರಿಬರುತ್ತದೆ.

ಜಗತ್ತನ್ನು ಒಂದು ರೀತಿಯ ರಬ್ಬರ್ ಬ್ಯಾಂಡಿನಂತೆ ಹಿಂಜಿದಾಗ ಆಗುವಂತೆ ಒಂದು ಕಡೆ ಕಡು ಬಡುವರೂ ಮತ್ತೊಂದು ಕಡೆ ಅತಿ ಶ್ರೀಮಂತರೂ ಹೆಚ್ಚುತ್ತಾ ಹೋಗುವುದನ್ನು ನೋಡುತ್ತಿದ್ದೇನೆ, ಪ್ರತಿಯೊಂದಕ್ಕೂ ಅದರ ಮಿತಿ ಇರುವ ಹಾಗೆ ಈ ಹಿಂಜುವಿಕೆ ಎಲಾಸ್ಟಿಸಿಟಿಯ ನಿಯಮಗಳನ್ನು ಮೀರಿ ಮುಂದಕ್ಕೆ ಹೋದಾಗ ಅದು ವ್ಯವಸ್ಥೆಯನ್ನು ಮುಖ ಅಡಿಯಾಗಿ ಬೀಳುವಂತೆ ಮಾಡುತ್ತದೆ, ಇಲ್ಲಿ ಪ್ರಕೃತಿ ತನ್ನನ್ನು ತಾನು ಕಾಯ್ದುಕೊಳ್ಳುತ್ತದೆ, ಆದ್ದರಿಂದಲೇ ಬಡವ-ಬಲ್ಲಿದನೆಂಬ ಮನುಷ್ಯ ನಿರ್ಮಿತ ಪ್ರಪಂಚದಲ್ಲಿ ಪ್ರಕೃತಿ ಎನ್ನೋ ದೇವರು ತನ್ನನ್ನು ತಾನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಈ ವ್ಯತ್ಯಾಸಗಳನ್ನು ಮೀರಿದ ವ್ಯವಸ್ಥೆಯನ್ನು ಒಂದು ಮಟ್ಟದಲ್ಲಿ ಇಡಬಲ್ಲನೆಂಬ ನಂಬಿಕೆ ಇತ್ತೀಚೆಗೆ ಬಲವಾಗಿದೆ.

Tuesday, July 11, 2006

ಅಮಾಯಕರು ಸತ್ತರೆ ದುಷ್ಕರ್ಮಿಗಳಿಗೇನು ಸಿಕ್ಕಿತು?

ಇವತ್ತು ಮಧ್ಯಾಹ್ನ ನಮ್ ಆಫೀಸ್‌ನಲ್ಲಿ ನನ್ನ ಸಹೋದ್ಯೋಗಿ ಒಬ್ರು ಬಾಂಬೆಯಲ್ಲಿ ನಮ್ಮ ಆಫೀಸಿನ ಬ್ರಾಂಚ್ ಇದೆಯೇ ಎಂದರು, ನಾನು ಇಲ್ಲ ಎಂದು ಹೇಳಿ ಸುಮ್ಮನಿದ್ದೆ. ಅದಾದ ಕೆಲವೇ ನಿಮಿಷಗಳಲ್ಲಿ ನನ್ನ ಸ್ನೇಹಿತನೊಬ್ಬ ಮುಂಬೈಯಲ್ಲಿ ಸರಣಿ ಬಾಂಬುಗಳ ಸ್ಫೋಟಗೊಂಡಿರುವ ಬಗ್ಗೆ ಇನ್ಸ್ಟಂಟ್ ಮೆಸ್ಸೇಜು ಕಳಿಸಿದ, ನಾನು ಕಂಡ ಕಂಡ ಪತ್ರಿಕೆಗಳನ್ನೆಲ್ಲ ನೋಡಿದವನೆ ಒಂದು ಕ್ಷಣ ತತ್ತರಿಸಿ ಹೋದೆ. ಎಲ್ಲವನ್ನು ವ್ಯವಸ್ಥಿತವಾಗಿ ಆಯೋಜಿಸಿ ಒಂದಾದ ಮೇಲೆ ಒಂದರಂತೆ ಏಳು ಬಾಂಬುಗಳನ್ನು ಸ್ಫೋಟಿಸಿದವರನ್ನು ಕುರಿತು ಏನೆಂದು ಹೇಳೋದು, ಅವರ ಉದ್ದೇಶಗಳು ಏನಿರುತ್ತವೆಯೋ ಯಾರಿಗೆ ಗೊತ್ತು, ಆದರೆ ಅವರಿಗೆ ಇಂಥಹ ಕೆಲಸಗಳನ್ನು ಮಾಡುವ ಮನಸ್ಸಾದರೂ ಹೇಗೆ ಬರುತ್ತದೆ ಎನ್ನುವ ಯೋಚನೆಯ ಹಿಂದೆಯೇ ಅಗಾಧವಾದ ಸಿಟ್ಟೂ ಬಂತು.

ಮೊದಲೇ ಜನರ ಮನಸ್ಸಿನಲ್ಲಿ ೯/೧೧ ಎಂದು ಭೀತಿ ಹುಟ್ಟಿಸಿದ್ದರು, ಅದಾದ ಮೇಲೆ ಮ್ಯಾಡ್ರಿಡ್, ಲಂಡನ್ನಲ್ಲೂ ಟ್ರೈನ್‌ನಲ್ಲಿ ಬಾಂಬುಗಳನ್ನು ಸ್ಪೋಟಿಸಿ ನೂರಾರು ಜನರನ್ನು ಕೊಂದಿದ್ದರು, ಈಗ ಅದರ ಯಾದಿಗೆ ಭಾರತದ ೭/೧೧ ಘಟನೆಯೂ ಸೇರಿಹೋಯ್ತು. ಇವೆಲ್ಲದರ ಜೊತೆಗೆ ಮೊನ್ನೆ-ಮೊನ್ನೆ ನ್ಯೂ ಯಾರ್ಕ್ ನಗರದ ಡೌನ್‌ಟೌನ್‌ ಅನ್ನು ಹಾಲೆಂಡ್ ಟನಲ್ ಬ್ಲಾಸ್ಟ್ ಮಾಡುವುದರ ಮೂಲಕ ನೀರಿನಲ್ಲಿ ಮುಳುಗಿಸುವ ಯತ್ನ ಮಾಡಿದವರನ್ನು ಹಿಡಿದಿದ್ದಾರೆಂದು ಕೇಳಿದೆ. ಈ ದುಷ್ಕರ್ಮಿಗಳು ತಮ್ಮ ಇಂಥಹ ಕೃತ್ಯಗಳಿಂದ ಅದೇನನ್ನು ಪಡೆಯುತ್ತಾರೋ, ಬಿಡುತ್ತಾರೋ - ಆದರೆ ಸಾಮಾನ್ಯ ಜನ ಅನಾವಶ್ಯಕವಾಗಿ ಬೆಲೆ ತೆರಬೇಕು.

ನಮ್ಮ ದೇಶ ಈ ವಾರ ಎದ್ದ ಘಳಿಗೆಯೇ ಸರಿ ಇಲ್ಲ ಎಂದು ಕಾಣುತ್ತೆ - ಮೊದಲು ಅಗ್ನಿ ಕ್ಷಿಪಣಿಯ ವಿಫಲ ಉಡಾವಣೆಯ ಬಗ್ಗೆ ಓದಿದೆ, ಏನೋ ಉತ್ತರ ಕೊರಿಯಾದವರು ಎಬ್ಬಿಸಿದ ಗಲಾಟೆಯ ನಡುವೆ ತಮಗೇಕೆ ತೊಂದರೆ ಎಂದು ಯಶಸ್ವಿಯಾಗಿ ನಡೆದ ಉಡಾವಣೆಯನ್ನು ವಿಫಲವಾಯಿತೆಂದು ಸುಳ್ಳುಸುದ್ದಿಯಾಗಿ ಹಬ್ಬಿಸಿದ್ದಾರೆಂದುಕೊಂಡೆ. ಆದರೆ ಮುಂದೆ ಇನ್ಸಾಟ್ ಉಪಗ್ರಹದ ಉಡಾವಣೆಯೂ ನೆಗೆದು ಬಿದ್ದಾಗ ಎಲ್ಲೋ ಏನೋ ಎಡವಟ್ಟಾಗಿದೆ ಎಂದು ಕೊಳ್ಳುತ್ತಿದ್ದಾಗ ಮೂರನೇ ಮುಕ್ತಾಯ ಅನ್ನೋ ಹಾಗೆ ಸರಣಿ ಬಾಂಬುಗಳ ಸುದ್ದಿ ನಿಜಕ್ಕೂ ಬೇಸರ ತರಿಸಿತು. ಮೊದಲೇ ಮಳೆಯ ಹಾವಳಿಯಿಂದ ತತ್ತರಿಸಿ ಹೋಗಿದ್ದ ಮಹಾನಗರ ಈಗ ಮತ್ತೊಮ್ಮೆ ತನ್ನ ಎಮರ್ಜೆನ್ಸಿ ಮ್ಯಾನೇಜ್‌ಮೆಂಟ್ ಸಿಸ್ಟಮ್ಮನ್ನು ಪರೀಕ್ಷೆಗೆ ಒಳಪಡಿಸಿದಂತಾಯಿತು.

ಫಸ್ಟ್‌ಕ್ಲಾಸ್ ಪ್ರಯಾಣಿಕರಿರಲಿ, ಅಥವಾ ಯಾರೇ ಇರಲಿ ಸಾವು-ನೋವಿನಲ್ಲಿ ಎಲ್ಲರೂ ಸಮರೇ. ಪ್ರಪಂಚದಾದ್ಯಂತ ಇಂಥಹ ದುಷ್ಕೃತ್ಯದಿಂದ ಈ ಭಯೋತ್ಪಾದಕರ ಮೇಲೆ ಯಾರಿಗೂ ಅಂದು ಚಿಟಿಕೆಯಷ್ಟೂ ವಿಶ್ವಾಸವಿಲ್ಲದೇ ಹೋಯಿತು. ಅದನ್ನು ಬಿಟ್ಟರೆ ಈ ಅವರಿಗೆ ಮತ್ಯಾವ ಪ್ರಯೋಜನವೂ ಇಲ್ಲ - ಏಕೆಂದರೆ ಮುಂಬೈ ಆಗಲಿ, ಅಥವಾ ನ್ಯೂ ಯಾರ್ಕ್ ಆಗಲಿ ಇಂತಹ ಹೊಡೆತಗಳನ್ನು ಸಾಕಷ್ಟು ತಿಂದು, ಇವತ್ತಲ್ಲ ನಾಳೆ ತಮ್ಮ ದುರಂತವನ್ನು ಭೂತದ ಮಡಿಲಿಗೆ ಕಟ್ಟಿ ಹಾಕಿ ಮುಂದೆ ನೋಡುತ್ತವೆ. ಒಂದು ಕ್ಷಣ ವಿಶ್ವದ ಮಾರುಕಟ್ಟೆಗಳು ತಮ್ಮ-ತಮ್ಮ ಮುಖಗಳನ್ನು ಭಾರತದತ್ತ ಮುಖ ಮಾಡಿದರೂ ಮತ್ತೆ ತಮ್ಮ ಕೆಲಸಗಳಲ್ಲಿ ತೊಡಗಿಕೊಳ್ಳುತ್ತವೆ.

ಒಂದು ಒಳ್ಳೆಯ ಕೆಲಸ ಮಾಡುವುದಕ್ಕೆ ಸಾವಿರಾರು ಅಡಚಣೆಗಳು ಬರುತ್ತವೆ, ಆದರೆ ಈ ಕುಕೃತ್ಯವನ್ನು ಮಾಡುವವರಿಗೆ ಎಲ್ಲವೂ ಅದು ಹೇಗೆ ಹೊಂದಿಬರುತ್ತದೆ ಎನ್ನುವ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ.

Monday, July 10, 2006

ವೇಗವಾಗಿ ಇಂಗ್ಲೀಷ್ ಓದಲಾರದ ಸಂಕಟ

ಇತ್ತೀಚೆಗೆ ನಾನು ರೇಡಿಯೋ/ಟಿವಿಯಲ್ಲಿ ಬರೋ ಯಾವ್ದೇ ಕಾರ್ಯಕ್ರಮ ಕೇಳಿ/ನೋಡಿದ್ರೂ ಅದರಲ್ಲಿ ಬರೋ ಅತಿಥಿಗಳಾಗ್ಲಿ, ಅಥವಾ ಪ್ರತಿನಿಧಿಗಳಾಗ್ಲಿ ಎಲ್ಲರೂ ಒಂದಲ್ಲಾ ಪುಸ್ತಕವನ್ನು ಬರೆದವರೆ. ನಾನು ಇಂಗ್ಲೀಷ್ ಆಡೋ ದೇಶದಲ್ಲಿ ಇದ್ದೇನೆ ಅನ್ನೋ ವಿಷ್ಯಾ ಮಾತ್ರವಲ್ಲ ಅಂತಾರಾಷ್ಟ್ರೀಯ ಮಟ್ಟದಲ್ಲೂ ಬಹಳಷ್ಟು ಜನ ಪುಸ್ತಕಗಳನ್ನು ಬರೆದಿರೋದು ನನ್ನ ಗಮನಕ್ಕೆ ಬರ್ತಾಲೇ ಇದೆ. ಎಲ್ಲಿ ನೋಡಿದ್ರೂ ಭಯೋತ್ಪಾದಕರ ಕುರಿತಾಗಿರಲಿ, ಪಾಲಿಸಿ/ಪ್ರೊಸೆಸ್‌ಗಳನ್ನು ವಿವರಿಸಿಯೋ, ಅರ್ಥಶಾಸ್ತ್ರ, ಅಥವಾ ಇತ್ತೀಚಿನ ವಿದ್ಯಮಾನಗಳನ್ನು ಕುರಿತೋ ಒಂದಲ್ಲ ಒಂದು ಪುಸ್ತಕವನ್ನು ತಮ್ಮ ಬಯೋಡೇಟಾದಲ್ಲಿ ಸೇರಿಸಿಕೊಂಡೋರೇ ಕಾಣಿಸುತ್ತಿದ್ದಾರೆ. ನನಗೆ ಆಶ್ಚರ್ಯವಾಗುವಂತೆ ಹೆಚ್ಚಿನವರು ಒಂದೇ ಪುಸ್ತಕವನ್ನು ಬರೆದು, ಅದರಿಂದಲೇ ಹೆಸರು ಮಾಡಿದವರೋ ಅಥವಾ ನ್ಯೂ ಯಾರ್ಕ್ ಟೈಮ್ಸ್ ಬೆಸ್ಟ್ ಸೆಲ್ಲರ್ ಎಂಬ ಟೈಟಲ್ ಪಡೆದೋ ಖ್ಯಾತನಾಮರಾಗುತ್ತಿದ್ದಾರೆ. ಇಂತಹ ದಿಗ್ಗಜರ ನಡುವೆ ನನ್ನ ಅಳಲೇನೆಂದರೆ ನನಗೆ ಮೊದಲೇ ಇವನ್ನೆಲ್ಲ ಓದಿ, ಅವುಗಳನ್ನು ಅರ್ಥ ಮಾಡಿಕೊಳ್ಳುವಷ್ಟು ಪುರುಸೊತ್ತಿಲ್ಲ, ಅದರ ಜೊತೆಯಲ್ಲಿ 'ಗಂಡ್ ಸತ್ ದುಕ್ಕ ಒಂದ್ ಕಡೆ, ಬಡ್ ಕೂಪಿನ ಉರಿ ಮತ್ತೊಂದ್ ಕಡೆ' ಅನ್ನೋ ಹಾಗೆ ನನ್ನ ಇಂಗ್ಲೀಷ್ ಓದಿನ ವೇಗ ಅಂದ್ರೆ ಬಸವನ ಹುಳಕ್ಕೂ ಬೇಸರ ಬಂದು ಬಿಡೋ ಹಾಗಿದೆ!

ನಮ್ಮನೆಯಲ್ಲೆಲ್ಲ ಕನ್ನಡ ಭಕ್ತರ ಸಂಖ್ಯೆ ಹೆಚ್ಚಿತ್ತೇ ವಿನಾ ಯಾರೊಬ್ಬರಾಗಲಿ ಇಂಥಾ ಒಂದು ಇಂಗ್ಲೀಷ್ ಪುಸ್ತಕ ಇದೆ ಓದು ಎಂದು ಯಾವತ್ತೂ ತಿವಿದಿದ್ದು ನನಗೆ ನೆನಪಿಲ್ಲ. ನಾನು ಶಾಲಾ ದಿನಗಳಲ್ಲಿ ಓದಿದ ಪದ್ಯ, ಪಾಠಗಳು ಏನಿದ್ದರೂ ಇಂಗ್ಲೀಷ್ ಪಠ್ಯ ಪುಸ್ತಕದ ಮಿತಿಯಲ್ಲಿ ಮಾತ್ರ ಇತ್ತು. ಮುಂದೆ ಕಾಲೇಜಿನ ನಂತರದ ದಿನಗಳಲ್ಲಿ ಅವರಿವರು ಸೂಚಿಸದರೆಂದು ಹಾಗೂ ಅಲ್ಲಲ್ಲಿ ಇಂಗ್ಲೀಷ್ ಮೇಷ್ಟ್ರುಗಳಿಂದ ಪ್ರಭಾವಿತನಾಗಿ ಚೂರೂಪಾರೂ ಇಂಗ್ಲೀಷ್ ಓದಿದ್ದಿದೆ, ಆದರೆ ನನ್ನ ಕನ್ನಡದ ಓದಿನ ವಾಲ್ಯೂಮ್ ಹಾಗೂ ವೇಗದ ಮುಂದೆ ಇಂಗ್ಲೀಷ್ ಏನೇನೂ ಇಲ್ಲ. ಚೂರೂಪಾರೂ ಹಿಂದಿ ಸಾಹಿತ್ಯವನ್ನು ಓದಿದ್ದೇನಾದರೂ ಅದು ಇಂಗ್ಲೀಷಿನ ಹಾಗೆ ಕಷ್ಟ, ಅದರಲ್ಲೂ ಅವರು ಉರ್ದು, ಪಾರಸಿ ಶಬ್ದಗಳ ಬಳಕೆಯನ್ನೇನಾದರೂ ಹೆಚ್ಚು ಮಾಡಿದರೆ ಪೇಟೆಯಲ್ಲಿ ಕಳೆದುಕೊಂಡ ಗುಬ್ಬಿ ಮರಿಯಾಗಿ ಬಿಡುತ್ತೇನೆ. ಅಲ್ಲಲ್ಲಿ ಕಷ್ಟಪಟ್ಟು ಇಂಗ್ಲೀಷ್ ಓದುವಾಗಲೂ ಭಯಂಕರ ವೇದನೆಯಾಗುತ್ತಿತ್ತು ಏಕೆಂದರೆ ಒಂದು ಡಿಕ್ಷನರಿ ಹತ್ತಿರವಿರಲೇಬೇಕಲ್ಲ ಅದಕ್ಕೆ! ಉದಾಹರಣೆಗೆ ನಾನು ಲಂಕೇಶ್ ಪತ್ರಿಕೆಯನ್ನು ಬಸ್ಸು ಹತ್ತುವಾಗ ಕೊಂಡರೆ ಅದನ್ನು ಅರ್ಧ-ಮುಕ್ಕಾಲು ಘಂಟೆ ಒಳಗೆ, ಅಥವಾ ಬಸ್ಸಿಳಿಯುವುದರ ಒಳಗೆ ಓದಿ ಬಿಸಾಡುತ್ತಿದ್ದೆ, ಅದೇ ಇಲ್ಲಸ್ಟ್ರೇಟೆಡ್ ವೀಕ್ಲಿಯನ್ನು ಕೊಂಡುಕೊಂಡಾಗೆಲ್ಲ, ಬಸ್ಸಿಳಿದು, ಮನೆಮುಟ್ಟಿ, ಮುಂದಿನವಾರದ ಪತ್ರಿಕೆ ಪ್ರಕಟವಾದರೂ ಆ ಪತ್ರಿಕೆಯನ್ನು ಓದಿ ಮುಗಿಸಲಾಗುತ್ತಿರಲಿಲ್ಲ. ಇಂಗ್ಲೀಷ್ ಓದುವ ವೇಗ ಓದೋದರಿಂದಲೇ ಬೆಳೆಯುತ್ತದೆ ಎಂದು ಯಾರೋ ಹೇಳಿದರೆಂದು ಒಂದಾರು ತಿಂಗಳು ಇಂಡಿಯನ್ ಎಕ್ಸ್‌ಪ್ರೆಸ್ ಓದಿದವನಿಗೆ ಜೋಳದ ರೊಟ್ಟಿ ಬದಲು ಒಣಗಿದ ಬ್ರೆಡ್ಡಿನ ತುಂಡನ್ನು ಜಗಿದಂತಾಗುತ್ತಿತ್ತು, ಆದರೂ ಕಷ್ಟ ಪಟ್ಟು ಓದುತ್ತಿದ್ದುದರಿಂದಲೇ ಇವತ್ತು ಸ್ವಲ್ಪವಾದರೂ ವೇಗ ಉಳಿದುಕೊಂಡಿರೋದು.

ಈ ಪುಸ್ತಕ ಬರೆಯೋರ ಯಾದಿಯಿಂದಷ್ಟೇ ಅಲ್ಲ, ಇತ್ತೀಚೆಗೆ ಬೆಂಗಳೂರು ಮುಂತಾದ ಸ್ಥಳಗಳಲ್ಲಿ ಕೆಲಸ ಮಾಡುತ್ತಿರೋ, ನಗರದ ವಾತಾವರಣದಲ್ಲೇ ಹೆಚ್ಚು ಸಮಯವನ್ನು ಕಳೆದ ಯುವ ಮಿತ್ರರ ಸಹವಾಸದಿಂದಲೂ ನನ್ನ ಇಂಗ್ಲೀಷನ್ನು ನಾನು ಪ್ರಶ್ನಿಸಿಕೊಳ್ಳಬೇಕಾಗಿ ಬಂದಿದೆ. ಇವರೆಲ್ಲ ನನಗಿಂತ ಒಂದು ಹತ್ತು ವರ್ಷಗಳ ವಯಸ್ಸಿನ ಅಂತರದಲ್ಲಿ ಕಡಿಮೆ ಇರಬಹುದು ಆದರೆ ಇವರೆಲ್ಲರ ಇಂಗ್ಲೀಷ್ ಓದು, ಬರಹ ಬಹಳ ಸುದಾರಿಸಿದೆ, ವೇಗವಿದೆ, ಪದ ಭಂಡಾರವಿದೆ, ಜೊತೆಯಲ್ಲಿ ಅಲ್ಪಸ್ವಲ್ಪ ಕನ್ನಡದ ತಿಳುವಳಿಕೆಯೂ ಇದೆ, ಆದರೆ ಇವರೆಲ್ಲರ ಬ್ಲಾಗ್‌ಗಳನ್ನು ಓದುವಾಗ, ಮತ್ತೆ ನನ್ನ ಇಂಗ್ಲೀಷ್ ವೇಗ ನನ್ನನ್ನು ಹಿಡಿತದಲ್ಲಿಡುತ್ತೆ. ನಾನು ನೋಡಿದ ಕಾರ್ಯಕ್ರಮಗಳಲ್ಲಿ ಬರೋ ಅತಿಥಿಗಳ ಆಯ್ದ ಪುಸ್ತಕಗಳನ್ನು ಓದಿದರೆ, ಹಾಗೂ ಈ ಯುವ ಸ್ನೇಹಿತರ ಬ್ಲಾಗ್‌ಗಳನ್ನು ಕಾಲಕ್ರಮೇಣ ಓದಿ ಅಲ್ಲಲ್ಲಿ ಕಾಮೆಂಟುಗಳನ್ನು ಬಿಟ್ಟು ಸಂವಹನದಲ್ಲಿ ತೊಡಗಿದರೆ ಅದರಿಂದ ಅನುಕೂಲವಾಗಬಹುದೇನೋ ಎಂಬ ಮಹದಾಸೆ ಇದೆ, ಆದರೆ ಇಂಗ್ಲೀಷ್ ಓದದೇ ವೇಗ ಬೆಳೆಯೋಲ್ಲ, ವೇಗ ಬೆಳೆಯದೇ ಇಂಗ್ಲೀಷ್ ಓದೋಕ್ಕಾಗಲ್ಲ ಅನ್ನೋ ಕ್ಯಾಚ್-೨೨ ನಲ್ಲಿ ಸಿಕ್ಕಿಹಾಕಿಕೊಳ್ಳುತ್ತೇನೆ.

ನನ್ನ ಬಸವನ ಹುಳುವಿನ ಇಂಗ್ಲೀಷ್ ಓದಿನ ವೇಗ ನನ್ನಲ್ಲಿರುವ ಕೀಳರಿಮೆಯಲ್ಲ, ನಾನು ಓದಿದ್ದರ ಬಗ್ಗೆ ಆಲೋಚಿಸುವುದು ಹೆಚ್ಚು, ಕನ್ನಡದಲ್ಲಿ ಓದಿದಾಗ ಆಲೋಚನಾ ಸರಣಿ ಹಾಗೂ ಓದುವಿಗೆ ಒಂದು ರೀತಿಯ ಸಾಂಗತ್ಯವಿದ್ದು, ಅದು ಕೃತಕ ಅನ್ನಿಸೋದಿಲ್ಲ, ಆದರೆ ಇಂಗ್ಲೀಷ್‌ನಲ್ಲಿ ಬರೆದದ್ದನ್ನು ಓದಿದಾಗ ಅಲ್ಲಿ ಸ್ವಲ್ಪ 'ನನ್ನದಲ್ಲದ' ಭಾವನೆ ಅನುರಣಿಸತೊಡಗುತ್ತದೆ. ಉದಾಹರಣೆಗೆ ಒಂದು ಇಂಗ್ಲೀಷ್ ಮೂಲದ ಸಣ್ಣಕಥೆಯನ್ನು ಕನ್ನಡದಲ್ಲಿ ಅನುವಾದಗೊಳಿಸಿದ್ದನ್ನು ನಾನು ಓದಿದಾಗ ಅಲ್ಲಿ ನನ್ನ ಕನ್ನಡದ ಓದೂ ಸಹ ಸ್ವಲ್ಪ ನಿಧಾನವಾಗುತ್ತದೆ, ಏಕೆಂದರೆ ಅವರು ಬರ್ಲಿನ್, ಇಂಗ್ಲೆಂಡ್, ಜಪಾನ್‌ನಲ್ಲಿ ನಡೆದ ಕಥೆಯನ್ನು ಅಲ್ಲಿಯ ಪಾತ್ರ, ಪರಿಸರಗಳಿಂದ ಮೂಡಿಸತೊಡಗಿದರೆ ಅದರಲ್ಲಿ ನನ್ನನ್ನು ನಾನು ಹುಡುಕಿಕೊಳ್ಳುವಾಗ ಕೆಲಕಾಲ ಹಿಡಿಯುತ್ತದೆ, ಅದೇ ನಮ್ಮ ಕನ್ನಡದ ಪರಿಸರದ ಯಾವುದೇ ಕಥೆಯಾಗಲೀ, ಯಾವುದೇ ಆಡುಭಾಷೆಯಲ್ಲಿರಲಿ ಒಳ್ಳೇ ಅನ್ನ-ಸಾರು ಊಟಮಾಡಿದಷ್ಟು ಸರಳವಾಗಿ ಇಳಿಯತೊಡಗುತ್ತದೆ, ಓದುವಿಕೆ ಪುಟದಿಂದ ಪುಟಕ್ಕೆ ಬಿದ್ದ ಮಳೆ ನೀರಿನಂತೆ ಹರಿಯತೊಡಗುತ್ತದೆ.

ಇವತ್ತಲ್ಲ ನಾಳೆ, ನಾನು ಈ ಹೊಸದಾಗಿ ಪರಿಚಯವಾದ ಯುವ ಮಿತ್ರರ ಇಂಗ್ಲೀಷ್ ಬರಹ, ಭಾವನೆಗಳನ್ನು ಅರ್ಥ ಮಾಡಿಕೊಳ್ಳುತ್ತೇನೆ, ಜೊತೆಯಲ್ಲಿ ಈ ಟಿವಿ, ರೇಡಿಯೋದಲ್ಲಿ ಬರೋ ಒಂದಲ್ಲ ಒಂದರ ಬಗ್ಗೆ ಪುಸ್ತಕವನ್ನು ಬರೆದ ಪ್ರಭೃತಿಗಳನ್ನೂ ಒಂದು ಕೈ ನೋಡಿಕೊಳ್ಳುತ್ತೇನೆ, ಆ ಕಾಲ ಆದಷ್ಟು ಬೇಗ ಬರಲಿ ಎಂದು ಕನ್ನಡದಲ್ಲೇ ಮೊರೆ ಇಡುತ್ತೇನೆ!

Sunday, July 09, 2006

ಅನಿವಾಸಿ ಮನಸ್ಸು

ನಮ್ಮೂರಿನ ಬಸ್ಸುಗಳಲ್ಲಿ ಬೇಕಾದಷ್ಟು ಅಣಿಮುತ್ತುಗಳನ್ನು ಅಲ್ಲಲ್ಲಿ ಬರೆದಿರುವುದು ಕಾಣಸಿಗುತ್ತದೆ - ಸರ್ಕಾರಿ ಬಸ್ಸುಗಳಿಂದ ಹಿಡಿದು ಖಾಸಗಿ ಬಸ್ಸುಗಳಲ್ಲೆಲ್ಲ ಕೊಟೇಷನ್ನುಗಳು ಧಾರಾಳವಾಗಿ ಸಿಗುತ್ತವೆ. ಈ ಕೊಟೇಷನ್ನುಗಳ ವ್ಯಾಪ್ತಿ, ವಿಸ್ತಾರ ಕುಟುಂಬ ಯೋಜನೆಯಿಂದ ಹಿಡಿದು ಕುಟುಂಬ ಕಲಹದವರೆಗೆ ಒಂದಲ್ಲ ಒಂದು ರೀತಿಯಲ್ಲಿ ಓದಿಸಿಕೊಳ್ಳುತ್ತದೆ. ಅವುಗಳಲ್ಲಿ ನನ್ನನ್ನು ಸ್ವಲ್ಪ ಮಟ್ಟಿಗೆ ಯೋಚಿಸುವಂತೆ ಮಾಡಿದ್ದು - 'ಮಾತು ಬೆಳ್ಳಿ, ಮೌನ ಬಂಗಾರ'. ಯಾವ ಪುಣ್ಯಾತ್ಮ ಈ ಹೇಳಿಕೆಯನ್ನು ಕೊಟ್ಟನೋ, ಗಾದೆಯನ್ನಾಗಿ ಮಾಡಿದನೋ, ನನಗಂತೂ ಇದರ ಮೇಲೆ ಸ್ವಲ್ಪವೂ ನಂಬಿಕೆ ಇಲ್ಲ. ಎಷ್ಟೋ ಸಾರಿ 'ಮೌನ ಬಂಗಾರ'ದ ಕೆಳಗೆ 'ನಿಮ್ಮ ಬಂಗಾರವನ್ನು ನೀವೇ ಇಟ್ಟುಕೊಳ್ಳಿ' ಎಂದು ಸೇರಿಸಿಬಿಟ್ಟರೆ ಹೇಗೆ ಎನ್ನಿಸಿದೆ. ನನ್ನ ಪ್ರಕಾರ ಮನುಷ್ಯರ ನಡುವೆ ಮಾತುಕಥೆಗಳಾಗುತ್ತಿದ್ದರೇನೇ ಚೆನ್ನ, ಮನಬಿಚ್ಚಿ ಮಾತನಾಡುವ ಸಹೋದ್ಯೋಗಿ ಅಥವಾ ನೆರೆಹೊರೆಯವರು ಅಥವಾ ಯಾವಾಗಲೂ ಬಾಯಿಗೆ ಬೀಗ ಜಡಿದುಕೊಂಡಿರುವ ಪ್ರಾಕ್ಟಿಕಲ್ ಜನರು ಇವರ ನಡುವೆ ನನಗೆ ಮೊದಲನೆಯವರೇ ಇಷ್ಟ. ನನ್ನ ಸ್ನೇಹಿತರಲ್ಲಿ ಕೆಲವರಿಗೆ ಅಮೇರಿಕದ ನೀರು ಕುಡಿಯುತ್ತಿದ್ದ ಹಾಗೆ ಪ್ರಯೋಗಶೀಲತೆ ಒಕ್ಕರಿಸಿಕೊಂಡು ಬಿಟ್ಟಿದೆ. ಒಂದು ರೀತಿ ಎಸ್.ಎಮ್. ಕೃಷ್ಣರ ತರಹ ಮಿತಭಾಷಿಗಳಾಗಿ ಬಿಟ್ಟಿದ್ದಾರೆ - ಎಷ್ಟು ಬೇಕಷ್ಟೇ ಮಾತನಾಡುತ್ತಾರೆ, ಇಲ್ಲವಾದರೆ ಮೌನದ ಸೋಗನ್ನು ಧರಿಸಿಕೊಳ್ಳುತ್ತಾರೆ. ಬರೀ ಏನನ್ನೋ ಯೋಚಿಸುವವರ ಹಾಗೆ ಮುಖ ಮಾಡಿಕೊಂಡು ಮಾತನಾಡದೇ ಇದ್ದು ಬಿಟ್ಟರೆ ಎಲ್ಲದಕ್ಕೂ ಉತ್ತರ ಸಿಕ್ಕಂತಾಯಿತೇ? ಈ ಅಣಿಮುತ್ತುಗಳು, ಸುಭಾಷಿತಗಳು, ಸೂಕ್ತಿಗಳು, ಕೋಲ್ಮಿಂಚುಗಳು - ಸುಮ್ಮನೇ ಹೀಗೆ ಬಂದು ಹಾಗೆ ಹೋಗುತ್ತವೆಯೇ ವಿನಾ ಅವುಗಳಿಂದ ಯಾವ ರಾಜ್ಯ ಉರುಳೋದೂ ಇಲ್ಲ, ಯಾವ ರಾಜ್ಯ ಕಟ್ಟೋದೂ ಇಲ್ಲ. ಈ ಕೊಟೇಷನ್ನುಗಳು ಒಂದು ರೀತಿ ಮಿಂಚಿನ ಹಾಗೆ, ಆದರೆ ಮಿಂಚಿನ ಬೆಳಕಿನಲ್ಲಿ ಯಾವ ಸತ್ಯವೂ ಗೋಚರಿಸೋದಿಲ್ಲ, ಹಾಗೆ ಗೋಚರಿಸಿದರೂ ಅದರ ತೀವ್ರತೆ ಒಂದು ರೀತಿಯ ಅಂಧಕಾರವನ್ನು ತಂದುಬಿಡುತ್ತದೆ, ಅದಕ್ಕೋಸ್ಕರವೇ ಮಿಂಚಿನ ತೀವ್ರತೆಯಲ್ಲಿರುವ ಬೆಳಕನ್ನು ಹತ್ತಿರದಿಂದ ನೋಡಿದರೆ, ನೋಡಿದ ನಂತರ ಎಲ್ಲವೂ ಅಂಧಕಾರವೇ ಆಗಿ ಹೋಗೋದು.

ನಮ್ಮ ಅನಿವಾಸಿ ಮನಸ್ಸು ಒಂದು ರೀತಿ ಸಣ್ಣಕಥೆಗಳಲ್ಲಿ ಬರುವ ಪಾತ್ರಗಳ ಹಾಗೆ. ಕಾದಂಬರಿಯ ಪಾತ್ರಗಳಲ್ಲಿ ಅವುಗಳು ತಮ್ಮ ನಿಲುವು-ನಡತೆಗಳನ್ನು ಪ್ರಶ್ನಿಸಿಕೊಂಡು ಒಂದು ಮನಸ್ಥಿತಿಯ ಹಿಂದಿನ ಹುನ್ನಾರವನ್ನು ಹೊರತೆಗೆಯುವ ಸಾಹಸಕ್ಕೆ ಒಡಮಾಡಿಕೊಂಡರೆ, ಈ ಸಣ್ಣಕಥೆಗಳಲ್ಲಿನ ಪಾತ್ರಗಳು ಒಂದು ರೀತಿ ಶೀಘ್ರಸ್ಖಲನದ ಸುಖಕ್ಕೆ ಜೋತುಬಿದ್ದುಕೊಳ್ಳುತ್ತವೆ. 'ನಾನು ಈ ದಿನ ಉಪವಾಸವಿದ್ದೇನೆ' ಎಂದು ಒಂದು ಅರೆಬೆಂದ ಹೇಳಿಕೆಯನ್ನು ಮಾತ್ರ ಸೃಷ್ಟಿಸಿ ಹೋಮ್‌ವರ್ಕ್ ಮಾಡಿರದ ಹುಡುಗ ಮೇಷ್ಟ್ರನ್ನು ನೋಡಿ ಹಲ್ಲುಗಿಂಜುವಂತೆ ಒಂದು ರೀತಿ ತಮ್ಮ ಎಡಬಿಡಂಗಿತನವನ್ನು ಅಚ್ಚುಕಟ್ಟಾಗಿ ಪ್ರದರ್ಶಿಸಿ, ಮಿಂಚಿ ಮರೆಯಾಗುತ್ತವೆ - ಇಂಥವುಗಳಿಂದ ಪ್ರಯೋಜನ ಎಲ್ಲಿದೆ ಎಂದು ಯಾರಿಗೆ ಗೊತ್ತು?

ನಮ್ಮ ಅನಿವಾಸಿ ಸಮೂಹ ತಮ್ಮನ್ನು ತಾವು ಪೋಷಿಸಿಕೊಳ್ಳಲು ಮೊರೆ ಹೋಗುವ ಅಥವಾ ಹಗುರವಾಗಿ ಬಳಸುವ 'ಗ್ರೇಟ್', 'ಎಕ್ಸಲೆಂಟ್' ಎನ್ನುವ ಪದಗಳ ಬಳಕೆಯಲ್ಲಿ ನನಗೆ ಬಹಳಷ್ಟು ಅಸಮಧಾನವಿದೆ - ಉದಾಹರಣೆಗೆ ನನ್ನ ಬರಹಗಳಲ್ಲಿ ಕೆಟ್ಟದಾದ ಬರಹವೊಂದನ್ನು ಆಯ್ದು ನನ್ನ ಗುರುತು-ಪರಿಚಯವಿರುವವರಿಗೆ ಕಳಿಸಿದೆನೆನ್ನಿ - ಆ ಮುಖಗಳೆಲ್ಲ ಕೊಡುವ 'ಗ್ರೇಟ್ ಆರ್ಟಿಕಲ್', 'ಎಕ್ಸಲೆಂಟ್' ಅನ್ನೋದು ನನ್ನನ್ನು ಬಲವಾಗಿ ಕಾಡಿಸಿ ಇನ್ನೊಮ್ಮೆ ಬರೆಯದಿರುವ ಹಾಗೆ ಮಾಡಿಬಿಡುವ ಸಂಭವವೇ ಹೆಚ್ಚು. ಭಾರತದಲ್ಲಿ ನನ್ನ ಬರಹಗಳು ನೇರವಾಗಿ ಎಷ್ಟೋ ಸಲ ಸಂಪಾದಕರ ಕಸದ ಬುಟ್ಟಿಗೆ ಹೋಗಿವೆ, ಕೆಲವೊಮ್ಮೆ ವಿಶಾದ ಪತ್ರವೂ ಬಂದಿದೆ, ಆದರೆ ನನ್ನ ಅನಿವಾಸಿ ನೆಲೆಗಟ್ಟಿನಿಂದ ಬರೆದ ಬರಹಗಳೆಲ್ಲವೂ ಲಂಗುಲಗಾಮಿಲ್ಲದೇ ಅಚ್ಚಾಗುವುದನ್ನು ನೋಡಿ ನನಗೆ ಆಶ್ಚರ್ಯಕ್ಕಿಂತ ಹೆಚ್ಚಾಗಿ ಖೇದವಾಗಿದೆ. ಇಲ್ಲಿ ಎರಡು ವಿಚಾರಗಳಿವೆ - ಒಂದು ಬರೆಯುವ ಪ್ರತಿಭೆ ಇದೆ/ಇಲ್ಲ ಎನ್ನುವ ವಿಚಾರ, ಮತ್ತೊಂದು ತುಲನೆ. ಪ್ರತಿಭೆ ಇದ್ದವರು ಸಾಣೆಕಲ್ಲಿಗೆ ತಿಕ್ಕಿದ ಬಂಗಾರ ಮಿನುಗುವ ಹಾಗೆ ಒಳ್ಳೆಯ ಮಾರ್ಗದರ್ಶನದಲ್ಲಿ ಬೆಳೆಯಬಲ್ಲರು, ಅಲ್ಲದೇ ತುಲನೆ ಮಾಡಿ ಹೇಳಿದಾಗ ಒಂದು ಮೌಲ್ಯಮಾಪನದ ನೆಲೆಗಟ್ಟನ್ನೂ ಸೃಷ್ಟಿಸಿದಂತಾಗಿ ಬರೆಯುವವರಿಗೆ ಹಾಗೂ ಓದುವವರಿಗೂ ಇಬ್ಬರಿಗೂ ಅನುಕೂಲವಾಗುತ್ತದೆ. ಅದನ್ನು ಬಿಟ್ಟು ಬರೆದದ್ದೆಲ್ಲ 'ಗುಡ್ ಒನ್' ಆಗಿಬಿಟ್ಟರೆ ಬರೆದವರೂ ಬೆಳೆಯಲಾರರು, ಹಾಗೂ ಆ ರೀತಿಯ ಹೇಳಿಕೆ ಕೊಡುವವರ ತಿಳುವಳಿಕೆಯೂ ಸ್ಪಷ್ಟವಾಗಿ ಗೊತ್ತಾಗಿಹೋಗುತ್ತದೆ. ಅದರ ಬದಲಿಗೆ ಇಂತದ್ದು ಇಷ್ಟವಾಯಿತು, ಏಕೆ/ಹೇಗೆ, ಇದು ಇಷ್ಟವಾಗಲಿಲ್ಲ - ಏಕೆ/ಹೇಗೆ ಎಂದು ತಿಳಿಸಿಹೇಳಿದರೆ ಎಷ್ಟೋ ಅನುಕೂಲವಾಗುತ್ತದೆ. ನನ್ನ ಇನ್‌ಬಾಕ್ಸ್‌ನಲ್ಲಿ ಬಂದ ಕೆಲವು ಇ-ಮೇಲ್‌ಗಳಿಗೆ ನಾನು ನನ್ನ ಶಕ್ತ್ಯಾನುಸಾರ ಉತ್ತರಕೊಡುತ್ತೇನೆ, ಹೆಚ್ಚಿನ ಪಾಲು ನನ್ನ ಉತ್ತರ ಅದನ್ನು ನಿರೀಕ್ಷಿಸಿದವರಿಗೆ ನಿರಾಶೆಯನ್ನುಂಟು ಮಾಡುತ್ತದೆಯೆಂದೇ ಹೇಳಬೇಕು.

ಕಷ್ಟ ಅನ್ನೋದು ಅವರವರಿಗೆ ಇದ್ದೇ ಇರುತ್ತೆ, ಆದರೆ ಕಷ್ಟಗಳು ಅನಿವಾಸಿಗಳಿಗೇ ಇರೋದು ಅನ್ನೋ ಮಾತನ್ನು ನಾನು ಸುತಾರಾಂ ಒಪ್ಪೋದಿಲ್ಲ. ನಮ್ಮೂರುಗಳಲ್ಲಿ ದಿನವಿಡೀ ಕೆಲಸ ಮಾಡಿಯೂ ಅಲ್ಲಿಂದಲ್ಲಿಗೆ ಆಗಿ ಹೋಗುವಂಥವರನ್ನೂ, ತಮ್ಮ ಮಕ್ಕಳಿಗೆ ಯಾವುದೋ ಆಪರೇಷನ್ ಮಾಡಿಸಲು ಹಣವಿರದೇ ಆ ಮಕ್ಕಳನ್ನು ಅವರ ಕಣ್ಣೆದೆರೇ ಕಳೆದುಕೊಳ್ಳಬೇಕಾದ, ಇನ್ನಿತರ ಜೀವನ್ಮರಣದ ಅಸಹಾಯಕತೆಗಳ ಮುಂದೆ ಅನಿವಾಸಿಗಳ ಕಷ್ಟ ಏನೇನೂ ಅಲ್ಲ. ಬೇಕಾದಷ್ಟು ಅಸಹಾಯಕತೆಗಳನ್ನು ಅಲ್ಲಿ-ಇಲ್ಲಿ ನೋಡಿದ ಮೇಲೆ ಅವುಗಳನ್ನು ಕುರಿತು ಓದಿದ ಮೇಲೆ ಇಲ್ಲಿಯವರಿಗೆ ಕಷ್ಟವೆಂದರೇನು ಎಂದೇ ತಿಳಿಯದು ಎಂದು ಹೇಳಿದರೆ ತಪ್ಪೇನೂ ಆಗದು. ಉದಾಹರಣೆಗೆ ನ್ಯೂ ಆರ್ಲೀನ್ಸ್‌ಗೆ ನೀರು ನುಗ್ಗಿದಾಗ ಟಿವಿಯಲ್ಲಿ ತೋರಿಸಿದ ರೋಧನ ನಮ್ಮ ದೇಶದ ದಿನನಿತ್ಯ ಬದುಕಿನ ಒಂದು ಭಾಗದಂತೆ ಕಂಡುಬಂತು. ಬರಿ ಇದು ಶ್ರೀಮಂತ ದೇಶವೆಂದು ಈ ಮಾತನ್ನು ಹೇಳುತ್ತಿಲ್ಲ, ಇಲ್ಲಿಯವರ ಶ್ರೀಮಂತ ಮನಸ್ಥಿತಿಯನ್ನು ಅಲ್ಲಿಯ ಬಡವರ ಮನಸ್ಥಿತಿಗೆ ಹೋಲಿಸಿದರೆ ಇಲ್ಲಿನವರದ್ದು ಸಾವಿರ ಪಾಲು ಉತ್ತಮ ಎನ್ನಿಸಿದ್ದರಿಂದ ಹೀಗೆ ಹೇಳಬೇಕಾಯಿತು. ಆದರೆ ನಮ್ಮ ಸಂಸ್ಕೃತಿಯ ರಾಯಭಾರಿಗಳಾಗಿ ಪ್ರತಿಕ್ಷಣವೂ ಅಲ್ಲಿ-ಇಲ್ಲಿ ತುಲನೆಯ ಅಭಿಶಾಪಕ್ಕೆ ಸಿಕ್ಕಬೇಕಾದ ಪ್ರತಿಯೊಂದು ಅನಿವಾಸಿ ಮನಸ್ಥಿತಿಯನ್ನು ಕುರಿತು, ತಮ್ಮ ಮಕ್ಕಳು-ಮರಿಗಳು ತಮಗಿಂತ ಭಿನ್ನರಾಗಿ ಬೆಳೆಯುತ್ತಿದ್ದಾರಲ್ಲ ಎನ್ನುವ ಗೊಂದಲ, ಕುತೂಹಲಗಳನ್ನು ಕುರಿತು ಹೇಳಬೇಕಾದಲ್ಲಿ ಅನಿವಾಸಿ ಮನಸ್ಸು ವಿಶೇಷ ಸ್ಥಾನವನ್ನು ಪಡೆದು ಎಂಥವರಿಂದಲೂ ಸ್ವಲ್ಪ ಕರುಣೆಯನ್ನು ಬೇಡುತ್ತದೆ. ಈ 'ಅಯ್ಯೋ' ಮನೋಭಾವನೆಯೇ ನಮಗೆ ನಮ್ಮ ದೇಶದಲ್ಲಿ ವಿಶೇಷ ಸ್ಥಾನವನ್ನು ತಂದುಕೊಡೋದು, 'ಪಾಪ, ಎಷ್ಟೋ ದಿನದ ಮೇಲೆ ಬಂದಿದ್ದಾರೆ, ಅಲ್ಲಿ ಹೇಗೋ-ಏನೋ' ಎನ್ನುವ ಸವಲತ್ತು ಸ್ಥಳೀಯರಿಗೆ ಸಿಕ್ಕಿದ್ದನ್ನು ನಾನು ನೋಡಿಲ್ಲ.

ಅನಿವಾಸಿಗಳ ಮನಸ್ಸಿನಲ್ಲಿ ಕಳೆದುಕೊಂಡಿದ್ದರ ಪಟ್ಟಿ ಉದ್ದುದ್ದಕ್ಕೆ ಬೆಳೆದು ಎಲ್ಲೋ ಒಮ್ಮೆ ನಿಂತುಹೋಗುತ್ತದೆ - ಮುಂದೆ ಅದು ದಶಕಗಳ ಕೊಡುಗೆಯಾಗಿ ಕ್ರಮೇಣ ಸಹಜವಾಗುತ್ತದೆ. ಅಲ್ಲಿ-ಇಲ್ಲಿಯ ಮನಸ್ಥಿತಿಯಲ್ಲಿ ಸದಾ ತೊಳಲಾಡುವ ಭ್ರಮೆ ಇದ್ದೇ ಇರುತ್ತೆ, ಇಲ್ಲಿದ್ದಾಗ ಅಲ್ಲಿ, ಅಲ್ಲಿದ್ದಾಗ ಇಲ್ಲಿ ಎಲ್ಲವೂ ವಿಶೇಷವಾಗಿ ಕಾಣತೊಡಗುತ್ತೆ. ಈ ಕಳೆದುಕೊಂಡಿದ್ದರ ಪಟ್ಟಿ, ಗಳಿಸಿಕೊಂಡಿದ್ದರ ಪಟ್ಟಿಗಿಂತ ಮೊದಮೊದಲು ದೊಡ್ಡದಾಗಿ ಕಂಡುಬಂದರೂ ಕೊನೆಗೆ ಗಳಿಸಿಕೊಂಡಿದ್ದು ಹುಟ್ಟಿಸುವ ಬಲವಾದ ಆಕರ್ಷಣೆ ಕಳೆದುಕೊಂಡಿದ್ದನ್ನು ಲಘುವಾಗಿ ಪರಿಗಣಿಸುವಂತೆ ಮಾಡುವುದರ ಮೂಲಕ, ಸ್ವಲ್ಪ ಸಮಯದ ಸಹಾಯದಿಂದಲೂ, ಹೆಚ್ಚಿನವರಲ್ಲಿ ಇಲ್ಲೆ ವಾಸವಾಗುವ ಹವಣಿಕೆ ಹುಟ್ಟುತ್ತದೆ.

Saturday, July 08, 2006

ಕಿರುಗಥೆ: ತುಂಬದ-ತುಂಬಿದ ನಡುವಿನ ಆಯಾಮ

ಕಥೆ ಬರೀದೇ ತುಂಬಾ ದಿನ ಆಯ್ತು, ಒಂದು ಕಿರುಗಥೆ ಬರೀಬೇಕು ಅನ್ನಿಸ್ತಾ ಇದ್ದಿದ್ರಿಂದ ಅದೂ ಬ್ಲಾಗ್‌ನಲ್ಲಿ ನೇರವಾಗಿ ಬರಹ ಪ್ಯಾಡ್‌ನಲ್ಲಿ ಬರೆದ್ರೆ ಹೇಗಿರತ್ತೆ ಅಂತ ಬರೀತಾ ಹೋಗಿದ್ದಕ್ಕೆ ಹೀಗೆ ಬರೆಯೋ ಹಾಗಾಯ್ತು, ಇದನ್ನ ತಿದ್ದಿಲ್ಲ, ತೀಡಿಲ್ಲ, ಸುಮ್ನೇ ಹೊಳೆದ ಹಾಗೆ ಬರೆದುಕೊಂಡು ಹೋಗಿದ್ದೇನೆ - ಇಲ್ಲಿ ಪಾತ್ರಗಳೇನಾದ್ರೂ ಬಂದಿವೆ ಅಂತ ನಿಮಗನ್ನಿಸಿದ್ರೆ, ಅವೆಲ್ಲ ಸುಮ್ನೇ ಕಾಲ್ಪನಿಕ ಅಂದುಕೊಳ್ಳಿ!

***

'ಒಬ್ಬ ಕಲಾವಿದನಾಗೋದು ಅಂದ್ರೆ ಹುಡುಗಾಟಾನ?' ಎಂದು ಮೆಷ್ಟ್ರು ಹೇಳಿದ್ದ ಮಾತುಗಳು ತೆರೆಗಳು ಬಂದು ಅಪ್ಪಳಿಸೋ ಹಾಗೆ ಹೊಡೀತಲೇ ಇತ್ತು, ಇದು ಇನ್ನು ಕೊರೆಯೋ ಭೂತವಾಗಿ ಬೆಳೆಯೋದಕ್ಕಿಂತ ಮೊದಲು ಮನೆ ಬಿಟ್ಟು ಎಲ್ಲಾದರೂ ಹೋಗಬೇಕು, ಏನಾದರೂ ಸಾಧನೆ ಅನ್ನೋದನ್ನು ಮಾಡದೇ ಹೋದ್ರೆ ಬದುಕಿದ್ದಾದ್ರೂ ಏನ್ ಪ್ರಯೋಜನ ಎಂದು ಅನ್ನಿಸತೊಡಗಿದ ಕೂಡ್ಲೇ ಹಿಂದೂ-ಮುಂದೂ ನೋಡ್ದೇ ಮನೆ ಬಿಟ್ಟು ಬಂದೆ ಬಿಟ್ಟೆ -- ಆದ್ರೆ ಈ ಪ್ರಪಂಚ ಇಷ್ಟೊಂದ್ ಕೆಟ್ಟದು ಅಂಥ ಅನ್ನಿಸಿರಲಿಲ್ಲ.

ರಂಗಾಯಣದ ಕಟ್ಟೆ ಹತ್ತ ಬೇಕು, ಮುಸುಡಿಗೆ ಬಣ್ಣ ಬಳಕೊಂಡು ನನ್ನ ಪಾತ್ರಗಳ ಜೀವಾಳನ ನನ್ನ ಜೀವಾಳವನ್ನಾಗಿ ತೆಗೆದಿಡಬೇಕು ಎಂದು ಪೇಚಾಡಿಕೊಂಡಾಗೆಲ್ಲ, ಈ ಹಸಿವು ದುತ್ತನೆ ಕಾಡಲಿಕ್ಕೆ ಶುರುಮಾಡಿಕೊಂಡಿದೆ. ಮೇಷ್ಟ್ರು ಹೇಳಿದ್ರು 'ಹೊಟ್ಟೆ ತುಂಬಿದ್ ಮೇಲೆ ಕಲಾವಿದನಾಗೋದಕ್ಕೆ ಹೇಗೆ ಸಾಧ್ಯ?', ಹಂಗಾದ್ರೆ ಹಸಗೊಂಡ್ ಇರೋದೇ ಬದುಕೇ? ದುಡ್ಡು ಮುಖ್ಯ, ಅದಕ್ಕಿಂತಲೂ ಹೆಚ್ಚಿಗೆ ಬದುಕೋದ್ ಮುಖ್ಯ ಅದರ ನಂತರವೇ ಏನಿದ್ರೂ - ನಾಟಕ ಆಡೋದು, ಅನುಭವಿಸೋದು ಎಲ್ಲ ನನ್ನಂತೋರಿಗಲ್ಲ, ಒಂದು ಪಾತ್ರಾನ ಅನುಭವಿಸಿ ಆಡಬೇಕು, ನನ್ನೆಲ್ಲ ನೋವನ್ನೂ ಹತ್ತಿಕ್ಕಬೇಕು, ನೋಡುಗರಿಗೆ ಅದರಿಂದ ತುಂಬ ಖುಷಿ ಆಗಬೇಕು, ನಾನು ನಾಳೆ ದೊಡ್ಡ ಮನುಷ್ಯನಾಗಬೇಕು: ಈ ಹಗಲು ಕನ್ಸುಗಳೇ ಇಷ್ಟು ಒಂದು ರೀತಿಯಲ್ಲಿ ದಿನವಿಡೀ ಮನೆಯಲ್ಲಿ ಕಟ್ಟಿಹಾಕಿ ಸಂಜೆ ಹೊರಬಿಟ್ಟ ನಾಯಿಯ ಹಾಗೆ ಒಂದು ರೀತಿಯ ಸ್ವಾತಂತ್ರ್ಯವನ್ನು ಅನುಭವಿಸೋದು. ಮನುಷ್ಯನನ್ನು ಯಾವುದರಿಂದ ಅಳೀತಾರೆ ಈ ಜನ, ಅವರವರ ಹತ್ರ ಇರೋ ಪ್ರತಿಭೆ ಇಂದಾನೋ, ದುಡ್ಡಿಂದಾನೋ ಅಥವಾ ಇವೆರಡೂ ಇರೋದ್ರಿಂದ ಬರೋ ತಾಕತ್ತಿನ ಮೇಲೋ? ನಾನು ಕಲಾವಿದನಾಗಬೇಕು ಅಂತ ಹಣೇಲ್ ಬರೆದಿದ್ರೆ ಆಗೇ ಆಗುತ್ತೆ, ಅದನ್ನ ನಿಲ್ಸಕ್ಕಾಗುತ್ತಾ, ಆದ್ರೆ ನಾನು ಕಲಾವಿದ ಆಗೋ ಹೊತ್ತಿಗೆ ಊರಲ್ಲೆಲ್ಲ ಸಂಜೆ ದೀಪಗಳು ಅದಾಗ್ಲೇ ಹತ್ತಿಕೊಂಡ್ ಉರೀಯೋ ಹೊತ್ತಾಗಿರುತ್ತೆ, ಅದರಿಂದ ಏನ್ ಪ್ರಯೋಜನಾ? ಒಂದು ರೀತಿ ನಾಯೀ ಬಾಳ್ವೆನಪ್ಪಾ ಇದು.

ಕೆರೆನೀರಿಗೆ ಕಲ್ಲು ಹೊಡೆದ್ರೆ ಅಲೆಗಳು ಏಳುದೇನೋ ನಿಜ, ಆದ್ರೆ ಉಗುಳು ನುಂಗಿದ್ರೆ ಹೊಟ್ಟೆ ತುಂಬಲ್ಲಾ ಅನ್ನೋ ಹಾಗೆ ನಾನು ಈ ಕೆರೆಗೆ ಕಲ್ಲನ್ನು ಹಾಕ್ತಾ ಇರೋ ಕೆಲ್ಸದಿಂದ ಏನ್ ಪ್ರಯೋಜನ ಇದೆ, ಅದರಿಂದೇನಾದ್ರೂ ನೀರು ಕೋಡಿ ಬೀಳುತ್ತೇನು? ಹನಿಹನಿಗೂಡಿದ್ರೆ ಹಳ್ಳವೇನೋ ನಿಜ, ಆದ್ರೆ ಹನಿಗಳು ಒಂದುಗೂಡಿ ದೊಡ್ಡ ಹನಿ ಆಗಿ, ಆ ದೊಡ್ಡ ಹನಿ ಇನ್ನೂ ದೊಡ್ಡ ಹನಿ ಆಗಿ ಹರಿಯೋ ಹೊತ್ತಿಗೆ ಎಂಥೋರ ಸಹನೆಯ ಕಟ್ಟೇನೂ ಒಡೆದ್ ಹೋಗುತ್ತೆ.

ಒಬ್ಬೊಬ್ಬರ ಮನಸ್ಸಿನ ಚಿತ್ರ ಅವರವರ ಕಾಲಿನ ಹೆಜ್ಜೆ ಗುರುತು ಇದ್ದ ಹಾಗೆ ವಿಶೇಷ ಹಾಗೂ ಭಿನ್ನವಾಗಿರುತ್ತೆ, ನಾನು ನೋಡುನೋಡುತ್ತಿದ್ದಂತೇ ನನ್ನ ಕಣ್ಣ ಮುಂದೆ ಎಷ್ಟೋ ಜನ ಕಲಾವಿದರು ಹೀಗೆ ಬಂದರು ಹಾಗೆ ಹೋದರು. ಅವರನ್ನೆಲ್ಲ ನಿಮ್ಮ ಯಶಸ್ಸಿನ ರಹಸ್ಯ ಏನು ಅಂತ ಕೇಳಿದ್ರೆ 'ನಾವೂ ಬಹಳ ಕಷ್ಟ ಪಟ್ಟಿದ್ದೀವಿ' ಅಂತ ಸುಳ್ಳು ಹೇಳ್ತಿದ್ದಾರೇನೋ ಅನ್ನಿಸ್ತಿದೆ. ಯಾವ್ದೋ ಒಂದು ಗುರಿ ಹಿಡಿದು ಮುಂದೆ ನುಗ್ಗಬೇಕಾದ್ರೆ ಅದಕ್ಕೆ ಪಡಬೇಕಾದ ಪರಿಶ್ರಮವನ್ನು ಕಷ್ಟ ಅಂತ ಹೇಗೆ ಹೇಳೋಕ್ ಸಾಧ್ಯ? ಅದು ಕಷ್ಟ ಅಂತ ಗೊತ್ತಿರಲಿಲ್ಲವೋ ಅಥವಾ ಗೊತ್ತಿದ್ದೂ ಗೊತ್ತಿದ್ದೂ ಈ ಕೆಲ್ಸಕ್ಕೆ ಬಂದರೋ, ಹಾಗೆ ಬಂದವರು ತಮ್ಮ ಉನ್ನತಿಗೆ ಇಂಥೋರ ಸಹಾಯ ಇದೆ ಅಂತ ನೇರವಾಗಿ ಏಕೆ ಹೇಳೋದಿಲ್ಲ - ನಾನು ನೋಡಿದ ಹಾಗೆ ಎಲ್ಲಾ ದೊಡ್ಡ ಮನುಷ್ಯರ ಹಿಂದೇನೋ ಒಬ್ಬೊಬ್ಬ ಗಾಡ್‌ಫಾದರ್ ಇರ್ತಾರಪ್ಪ, ಯಾವಂದೋ ಮರ್ಜಿಯಲ್ಲಿ ಮಾಡಿದ್ದನ್ನೇ ಆಟ ಅಂತ ಮಾಡಿಕೊಂಡು ಮುಂದೆ ಬರೋ ಜನ ಈ ಗಾಡ್‌ಫಾದರ್‌ಗಳಿಗೆ ಸರಿಯಾದ ಕ್ರೆಡಿಟ್ಟೂ ಕೊಡೋದಿಲ್ವಲ್ಲ. ಹಾಗಂತ ಪ್ರತಿಭಾವಂತರೇ ಇಲ್ಲಾ ಅಂತ ನನ್ನ ಯೋಚ್ನೇ ಅಲ್ಲ, ಪ್ರತಿಭೆಗೂ ಮುಂದ್ ಬರೋದಕ್ಕೂ ಒಂದಕ್ಕೊಂದ್ ಸಂಬಂಧ ಅಷ್ಟೇನೋ ಗಾಢವಾಗಿರೋದಿಲ್ಲ, ಯಾವನಿಗೆ ಎಷ್ಟೋ ಪ್ರತಿಭೆ ಇದ್ರೂ ಇನ್ನೊಬ್ರ ಬೂಟ್ ನೆಕ್ಕೋದಕ್ಕೇನೂ ಕಡಿಮೆ ಇರೋದಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ದುಡ್ಡೇ ತಾನೇ ಬರೋದು, ಹಾಗಿದ್ದ ಮೇಲೆ ನನ್ನನ್ನ ನಂಬಿಕೊಂಡು ಲಕ್ಷಾಂತರ ರೂಪಾಯಿಯನ್ನ್ ಯಾವನ್ ಸುರೀತಾನೆ? ಯಾಕ್ ಸುರೀಬೇಕು?

ಇಲ್ಲಪ್ಪಾ ನನ್ ಕೈಯಲ್ಲಿ ಆಗಲ್ಲ, ಇವತ್ತಲ್ಲ ನಾಳೆ ನಾನು ಇದನ್ನೆಲ್ಲ ಬಿಟ್ಟು ಹೋಗೇ ತೀರ್ತೀನಿ, ಮುಸುಡಿಗೆ ಬಣ್ಣ ಹಚ್ಚಿಕೊಳ್ಳೋದ್ ಯಾರು, ಇವರೆಲ್ಲರ ಕೈಯಲ್ಲಿ ಬೈಸಿಕೊಳ್ಳೋನ್ ಯಾರು? ನಾನು ಈ ನನ್ ಮಕ್ಳ ಕೈಯಲ್ಲಿ ಪಳಗಿ ಮುಂದೆ ಬಂದು ದೊಡ್ಡ ಹೀರೋ ಅಗೋದು ಆಷ್ಟರಲ್ಲೆ ಇದೆ, ನನ್ನ ಕನಸುಗಳಿಗೆ ನನ್ನ ಮೇಲೆ ನಂಬಿಕೆ ಇಲ್ಲ, ಇನ್ನು ಯಾರಾದರೂ ನನ್ನನ್ನ ಏಕೆ ನಂಬಿಯಾರು? ಅದೂ ಅಲ್ದೇ ಈ ರಂಗಭೂಮಿಯಲ್ಲಿ ನನ್ನದಾದ್ರೂ ಎಷ್ಟು ದೊಡ್ಡ ಪ್ರಪಂಚವಿದೆ, ನಾನು ಯಾವ ಶಿಫಾರಸ್ಸಿನ ಕುಳವಂತೂ ಅಲ್ಲ, ಮೇಲಾಗಿ ಹೇಳಿಕೊಳ್ಳೋ ಪ್ರತಿಭೇನೂ ಇಲ್ಲ, ಹಂಗಿದ್ದ ಮೇಲೆ ನಾನು ಊರು ಬಿಡೋ ಮೊದಲು ಇವನ್ನೆಲ್ಲ ಯಾಕೆ ಯೋಚಿಸ್‌ಲಿಲ್ವೋ. ಈಗ ಊರಿಗೆ ಹೋಗ್ಲೋ, ಎಲ್ಲಿಗೆ ಹೋಗ್ಲಿ? ನಾಳೆಯಿಂದ ಊಟಕ್ಕೇನು ಮಾಡೋದು, ಯಾವ ಹೋಟ್ಲಿನಲ್ಲಿ ಹೋಗಿ ಯಾವ ಮುಖ ಇಟ್‌ಕೊಂಡು ಏನಂತ ಕೆಲ್ಸ ಕೇಳ್ಲಿ. ಇದನ್ನೆಲ್ಲ ಬಿಟ್ಟು ಹೋಗೋಕೇ ಆಗೋದಿಲ್ವೇನೋ ಅನ್ನೋ ಸ್ಥಿತಿಗೆ ಬಂದ್ ಬಿಟ್ನೇ? ನನ್ನನ್ನ ನಾನೇ ಆಳಿಕೊಳ್ಳಲಾಗದ ಸ್ಥಿತಿಯನ್ನೂ ತಲುಪಿಬಿಟ್ನೇ - ಅಯ್ಯೋ, ಏಕ್ ಹೀಗಾಯ್ತು, ಎಂತಾ ಕಷ್ಟಾ ತಂದ್ ಬಿಟ್ಟೆಯಪ್ಪಾ ದೇವ್ರೇ... ಅದಿರ್ಲಿ ನಾನು ಊರ್ ಬಿಡೋ ಮೊದ್ಲು ಎಷ್ಟೋ ಜನ ನನ್ನನ್ನ ಅಲ್ಲಿಗ್ ಹೋಗು, ಇಲ್ಲಿಗ್ ಹೋಗು ಅಂದಿದ್ರಲ್ಲ, ಅವರೆಲ್ಲಾ ಈಗ ಎನಂತಾರೆ? ದಿನಾ ಹೋದಂಗೆ ಎಲುಬಿನ ಗೂಡಾಗೋ ಅವ್ವನಿಗೆ ನನ್ನ ಮುಖ ಹೆಂಗ್ ತೋರುಸ್ಲಿ? ನಾನೇನಾದ್ರೂ ಜೀವ ಕಳಕಂಡ್ರು ಅದಕ್ಕೊಂದು ಅರ್ಥ ಅನ್ನೋದೂ ಇಲ್ಲಾ ಅನ್ನೋ ಸ್ಥಿತಿಗೆ ಬಂದೆನಲ್ಲ, ಈ ಸಾವು-ಬದುಕಿನ ಸ್ಥಿತಿ ಅಂದ್ರೆ ಹೀಗೆ ಇರಬೇಕು, ಥೂ ಯಾವನಿಗ್ ಬೇಕಪ್ಪಾ ಈ ಸ್ಥಿತಿ?

ಇರ್ಲಿ, ನಾನು ಎಲ್ಲಿಗೂ ಹೋಗೋದಿಲ್ಲ, ನಾಳೆ ಮತ್ತೆ ಆ ಸತ್ತವರ ನೆರಳನ್ನ ಆಡೋದಕ್ಕೆ ನಾನು ಇರದೇ ಹೋದ್ರೆ ಆ ಬಡಪಾಯಿ ಮೇಷ್ಟ್ರು ಗತಿ ಏನು, ಒಳ್ಳೇ ಕೊನೇ ಕಾಲಕ್ಕೆ ಕೈ ಕೊಟ್ಟ ಅನ್ನೋ ಕೆಟ್ಟ ಮಾತು ನನಗೆ ತಗುಲಿಕೊಳ್ಳೋದ್ ಬೇಡ...ಸೀದಾ ವಾಪಾಸ್ ಹೋಗ್ತೀನಿ, ಏನೋ ಬೇಯಿಸಿಕೊಂಡು ತಿಂದ ಹಾಗೆ ಇದ್ರೆ ಸಾಕು, ಇನ್ನೇನಂತೆ...ಎಲ್ಲಾ ಸರಿ, ಈ ನಾಟಕಗಳನ್ನೆಲ್ಲ ಏತಕ್ ಆಡಬೇಕು? ಬದುಕಲ್ಲಿ ಬರೋ ನಾಟಕಗಳು ಸಾಲ್ದು ಆಂತ್ಲೇ? ಅಥವಾ ನಮಗೆ ಅಲ್ಲಲ್ಲಿ ಸಿಗೋ ನೀತಿಪಾಠಗಳು ಕಡಿಮೆ ಆದ್ವು ಅಂತ್ಲೇ? ಈ ನಾಟಕದಿಂದ ಯಾವನ್ಯಾವನು ಏನೇನ್ ಕಲಿತೋರೇ, ಈ ನಾಟಕದಿಂದ ಯಾವ ಕಷ್ಟ ಮರೆಯಾಗಿ ಹೋಗಿದೆ, ಹೊಟ್ಟೆ ತುಂಬದ ಒಂದಿಷ್ಟು ಜನ ಆಡೋ ದೊಂಬರಾಟವನ್ನು ಹೊಟ್ಟೆ ತುಂಬಿದ ಒಂದಿಷ್ಟು ಜನ ನೋಡಿ ಬಾಯಿ ಚಪ್ಪರಿಸಿದರೆ ತುಂಬದ ಹಾಗೂ ತುಂಬದ ಜನರ ನಡುವಿನ ಅಂತರವನ್ನು ತುಂಬುವವರು ಯಾರು? ನಮ್ಮ ಹೊಟ್ಟೆ ಬೆನ್ನಿಗೆ ಹತ್ತಿದ್ದರೆ ಅದನ್ನು ಬೇರ್ಪಡಿಸೋರು ಯಾರು? ಹೊಟ್ಟೆ ತುಂಬಿದ್ ಜನ ನಾಟಕ ಏಕ್ ಆಡೋದಿಲ್ಲ? ಅದನ್ನೆಲ್ಲ ನಾವು ನೋಡಿ ನಗುವಂತಿದ್ರೆ - ಹೊಟ್ಟೆ ತುಂಬಿದವರು ಬರೀ ನಗೋ ನಾಟಕಾನೇ ಆಡ್ತಾರೇ ಅನ್ನೋ ಗ್ಯಾರಂಟೀನಾದ್ರೂ ಏನು?

ನೋಡೇ ಬಿಡ್ತೀನಿ, ಈ ಸಾರಿ ನನ್ನ ಪಾತ್ರಾನಾ ಜೀವಂತವಾಗಿ ತರ್ತೀನಿ, ಸತ್ತೋರ್ ನೆರಳನ್ನ ನೋಡಿ ಜನ ಒಂದಿಷ್ಟು ನೆಮ್ಮದಿಯಿಂದ್ಲಾದ್ರೂ ಇರಲಿ - ನಮ್ ನಮ್ ಕೆಲ್ಸ ನಾವ್ ಮಾಡೋದೇ ಚೆಂದ - ಉಳಿದ ದೊಡ್ಡ ವಿಷ್ಯಾನೆಲ್ಲ ಚಿಂತಿಸಿ ಏನ್ ಫಲ, ಅದೂ ನನ್ನೋಂಥೋರಿಂದ ಯಾವ ಚಿಂತನೆ ಹುಟ್ಟಬಲ್ಲದು, ಅದೂ ಹೊಟ್ಟೆ ತುಂಬದವನ ಅರಣ್ಯರೋಧನದಿಂದ ಹುಟ್ಟೋದಲ್ವೇ ಅಲ್ಲ. ಈ ಚಿಂತೆ-ಚಿಂತನೆ ಎರಡೂ ಕೆರದ ಗಾಯದ ಹಾಗೆ ಮಾಸೋದಿಲ್ಲ, ಇನ್ನೂ ಬಲೀತಾ ಹೋಗುತ್ತೆ, ಬಲಿತ ಗಾಯ ಅಗಲವಾಗುತ್ತೆ, ಒಂದು ರೀತಿ ಕೆರೆಯಲ್ಲಿ ಏಳೋ ಅಲೆಗಳ ಥರಾ...ಏಳಲಿ, ಇನ್ನೂ ಅಲೆಗಳು ಏಳಲಿ, ಅದರಿಂದ ಇನ್ನೇನು ಆಗದೇ ಹೋದ್ರೂ ಒಂದಿಷ್ಟು ಕಂಪನಗಳಾದ್ರೂ ಹುಟ್ಟತ್ತಲ್ಲಾ ಅಷ್ಟೇ ಸಾಕು!

Friday, July 07, 2006

ನಮ್ಮ ದೇವರು

ನಮ್ಮಲ್ಲಿ ಎಷ್ಟೊಂದು ವೈವಿಧ್ಯತೆ ಇದೆ ಎಂದರೆ ದೇವರು-ದಿಂಡರಿನ ವಿಚಾರದಲ್ಲೂ ಸುಲಭವಾಗಿ ಹೀಗೇ ಎಂದು ಹೇಳದಿರುವಷ್ಟರ ಮಟ್ಟಿಗೆ ನನಗೆ ಹಲವಾರು ಬಾರಿ ಕಸಿವಿಸಿಯಾಗಿದೆ. ನಮ್ಮ ದೇವಾನುದೇವತೆಗಳನ್ನು, ನಮ್ಮ ಧರ್ಮ-ಜಾತಿ ವ್ಯವಸ್ಥೆಯನ್ನು (ಗೊತ್ತಿರದ) ಯಾರಿಗಾದರೂ ಒಂದೈದು ನಿಮಿಷದಲ್ಲಿ ವಿವರಿಸುತ್ತೇನೆಂದುಕೊಂಡರೆ ಎಲ್ಲಿಂದ ಆರಂಭಿಸಬೇಕು, ಎಲ್ಲಿ ನಿಲ್ಲಿಸಬೇಕು ಎಂದು ಗೊಂದಲವಾಗಿದೆ.

ನಾನು ಕಂಡುಕೊಂಡ ಹಾಗೆ ನಮ್ಮ ದೇವರುಗಳ ಪ್ರತೀಕ ಒಂದು ರೀತಿಯಲ್ಲಿ ಸೂಪರ್ ಹ್ಯೂಮನ್ ಎಂದೇ ಹೇಳಬೇಕು, ಚಿತ್ರಗಳಲ್ಲಿ ಅಭಿವ್ಯಕ್ತವಾದ ಹಾಗೆ ಕೆಲವೊಂದಕ್ಕೆ ಹಲವಾರು ಕೈಗಳು, ತಲೆಗಳು, ರೂಪಗಳು. ಕೆಲವೊಮ್ಮೆ ನಿಸರ್ಗವನ್ನು ಆಧರಿಸಿ ಬೆಂಕಿ, ನೀರು, ಗಾಳಿ, ಭೂಮಿ, ಇತ್ಯಾದಿಯಾಗಿ ವರ್ಣಿಸಬಹುದು, ಇನ್ನು ಕೆಲವೊಮ್ಮೆ ಪೌರಾಣಿಕ, ಐತಿಹಾಸಿಕವಾಗಿಯೂ ವಿವರಿಸಬಹುದು. ಪುರಾಣಗಳನ್ನು ಚೆನ್ನಾಗಿ ತಿಳಿದುಕೊಂಡವರಿಗೆ ಹೆಚ್ಚಿನವು 'ಕಥೆ'ಗಳಾಗಿ ಕಂಡುಬಂದರೆ ಇನ್ನು ಕೆಲವು ತಮ್ಮ ತಮ್ಮಲ್ಲೇ ಎಂತೆಂಥ ತಿರುವುಗಳನ್ನು ಮೂಡಿಸುತ್ತವೆಯೆಂದರೆ ಅದನ್ನು ಬೇರೆ ಧರ್ಮ ಅಥವಾ ಮನೋಭಾವನೆಯವರಿಗೆ ವಿವರಿಸುವಾಗ ನಮಗೆ ಗೊಂದಲವಾಗುವುದಂತೂ ನಿಜ - ಉದಾಹರಣೆಗೆ ಮೊನ್ನೆ-ಮೊನ್ನೆ ಅಯ್ಯಪ್ಪಸ್ವಾಮಿ ಹೆಸರಿನಲ್ಲಿ ಅವರಿವರು ದೇವಸ್ಥಾನಕ್ಕೆ ಭೇಟಿ ನೀಡಿದ ಹಿನ್ನೆಲೆಯಲ್ಲಿ ನಮ್ಮ ಧರ್ಮೀಯರಲ್ಲದವರಿಗೆ ಅಯ್ಯಪ್ಪಸ್ವಾಮಿ ಅಥವಾ ಹರಿಹರ ಪುತ್ರನ ಹುಟ್ಟಿನ ಬಗ್ಗೆ ವಿವರಿಸಲು ಪ್ರಯತ್ನಿಸಿ ನೋಡಿ ಅದರ ಕಷ್ಟದ ಅರಿವಾಗುತ್ತದೆ. ನಮ್ಮ ನಂಬಿಕೆಗಳನ್ನು ನಾವು ಬೇರೊಂದು ನೆಲೆಗಟ್ಟಿನಲ್ಲಿ ನಿಂತು ನೋಡಿದಾಗ ಕೆಲವೊಮ್ಮೆ ಸಾವಿರಾರು ವರ್ಷಗಳಿಂದ ಕೋಟ್ಯಾಂತರ ಜನ ನಂಬಿಕೊಂಡು ಬಂದ ಆಚರಣೆ/ವ್ಯವಸ್ಥೆ ಕೇವಲ 'ಟ್ರೈಬಲ್' ಅನ್ನಿಸಿಬಿಡುತ್ತದೆ. ಅಯ್ಯಪ್ಪಸ್ವಾಮಿಯ ಕಥೆ ಕೇವಲ ದಕ್ಷಿಣಭಾರತದಲ್ಲಿ ಮಾತ್ರ ಪ್ರಚಲಿತವೇಕಿದೆ ಎಂದು ನನಗೆ ಅನುಮಾನ ಬಂದಿದ್ದು ಕೇವಲ ಇತ್ತೀಚೆಗಷ್ಟೇ, ಆದರೆ ನಾನು ಅದೆಷ್ಟೋ ಸಾರಿ ಮೋಹಿನಿ ಭಸ್ಮಾಸುರ ಆಟ (ಯಕ್ಷಗಾನ)ವನ್ನು ನೋಡಿದ್ದರೂ ಅದು ಮನೋರಂಜನೆಯಾಗಿ ಕಂಡಿದೆಯೇ ವಿನಾ ಅದರ ಮೂಲವನ್ನು ಹುಡುಕಿಕೊಂಡು ಹೋಗುವ ವ್ಯವಧಾನ ಒಮ್ಮೆಯೂ ಬಂದಿದ್ದಿಲ್ಲ.

ಇಲ್ಲಿಯ ಮೂಲ ನಿವಾಸಿಗಳ ಹಾಗೆ ನಾವೂ ಸಹ ನಿಸರ್ಗವನ್ನು ಬಹುವಾಗಿ ಪೂಜಿಸುವವರು ಎಂದುಕೊಂಡಾಗಲೆಲ್ಲ ನನ್ನ 'ದೇವರ' ವ್ಯಾಖ್ಯೆಗಳಿಗೆ ಒಂದು ಅರ್ಥ ಬಂದಿದೆ. ನಾವು ನೀರನ್ನು ಪೂಜಿಸುತ್ತೇವೆ, ಭೂಮಿಯನ್ನು ಪೂಜಿಸುತ್ತೇವೆ, ಆಹಾರ ಸರಪಳಿಯಲ್ಲಿ ಬರುವ ಹಲವಾರು ಪ್ರಾಣಿ ಪಕ್ಷಿಗಳನ್ನು ನಾವು ದೇವರ 'ವಾಹನ'ವಾಗಿ ಪೂಜಿಸುವುದನ್ನು ಸಾಧಿಸಿಕೊಳ್ಳಬಲ್ಲೆ. ಸೂರ್ಯನನ್ನು ನಕ್ಷತ್ರವೆಂದು ಅದೆಷ್ಟೋ ವರ್ಷಗಳಿಂದ ವಿಜ್ಞಾನ ಹೇಳಿಕೊಂಡು ಬಂದಿದ್ದರೂ ನಾವು ಅವನನ್ನು ಒಂದು 'ಗ್ರಹ'ವನ್ನಾಗಿ ಪೂಜಿಸಿಕೊಂಡು ಬಂದಿದ್ದನ್ನು ನೋಡಿ-ನೋಡಿಯೂ ಸುಮ್ಮನಿರಬಲ್ಲೆ. ಇನ್ನು ರಾಹು-ಕೇತುಗಳ ವಿಷಯಕ್ಕೆ ಬಂದಾಗ ಅವುಗಳನ್ನು ಅಸೆಂಡಿಂಗ್ ನೋಡ್, ಡಿಸೆಂಡಿಂಗ್ ನೋಡ್ ಎಂದೋ ಇಲ್ಲಾ ನೆಪ್ಚೂನ್, ಪ್ಲೂಟೋಗಳೆಂದೂ ಅಲ್ಲಲ್ಲಿ ವಿವರಣೆಯನ್ನು ಓದಿಕೊಂಡಿದ್ದೇನೆ.

ನನ್ನಲ್ಲಡಗಿದ ಗೊಂದಲಗಳಿಗೆ ಮುಖ್ಯವಾದ ಕಾರಣವೆಂದರೆ ನನ್ನ ತಿಳುವಳಿಕೆಯ ಮಿತಿ - ನಾವು ತಳಿರು ತೋರಣಗಳನ್ನು ಕಟ್ಟುವುದರಿಂದ ಹಿಡಿದು ಹಬ್ಬ-ಹರಿದಿನಗಳಿಗೆ ಸಂಬಂಧಿಸಿದ ಅದೆಷ್ಟೋ ಆಚರಣೆಗಳಿಗೆ ನನಗೆ ವೈಜ್ಞಾನಿಕವಾಗಿ ವಿವರಣೆ ಅಲ್ಲಲ್ಲಿ ಓದಿ ಗೊತ್ತಿದ್ದರೂ ನನ್ನ ನೆನಪಿನಲ್ಲಿ ಇನ್ನೊಬ್ಬರಿಗೆ ವಿವರಿಸುವಷ್ಟರ ಮಟ್ಟಿಗೆ ಏನೋ ಉಳಿಯೋದಿಲ್ಲ, ಹೀಗೆ ಕೇಳಿದರೆ ಹಾಗೇ ಹೋಗಿಬಿಟ್ಟಿದೆ. ಆದರೆ ನಾವು ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಬಂದಾಗ ಒಬ್ಬರಲ್ಲ ಒಬ್ಬರು ನಮ್ಮ ಆಚರಣೆಗಳನ್ನಾಗಲಿ, ಹಬ್ಬಗಳನ್ನಾಗಲೀ ಪ್ರಶ್ನಿಸದೇ ಇರೋದಿಲ್ಲ, ಆ ಸಂದರ್ಭಗಳಲ್ಲಿ ನಮ್ಮ ಧರ್ಮ, ರೀತಿ-ನೀತಿಗಳಿಗೆ ನಾವೇ ರಾಯಭಾರಿಗಳಾಗಿ ಬಿಡುತ್ತೇವಾದ್ದರಿಂದ ಕೆಲವೊಂದನ್ನು ಇಲ್ಲಿ ಬಂದ ಮೇಲೆ ಇಲ್ಲಿನವರ ದೃಷ್ಟಿಯಲ್ಲಿ ಪ್ರಶ್ನಿಸಿಕೊಂಡು ಅದಕ್ಕೆ ಉತ್ತರವನ್ನು ಹುಡುಕಿಕೊಂಡಿದ್ದಾಗಿದೆ. ನನ್ನ ಸಹೋದ್ಯೋಗಿಗಳಿಗೂ ಸಹ ನನಗಿರುವ ಹಾಗೆಯೇ ಅವರವರ ಆಚರಣೆಗಳಲ್ಲಿ ಮಿತವಾದ ತಿಳುವಳಿಕೆಯೂ ಇರುವುದನ್ನು ನೋಡಿದ್ದೇನೆ, ಆದರೂ ಸಹ ಕೆಲವೊಮ್ಮೆ ನಮ್ಮ ರೀತಿ-ನೀತಿಗಳ ಬಗ್ಗೆ ನಾನು ತಿಳಿದುಕೊಂಡಿದ್ದು ಕಡಿಮೆ ಎನ್ನಿಸಿಬಿಡುತ್ತದೆ.

ನಾವು ಆಚರಿಸಿಕೊಂಡು ಹೋಗುವ ಎಷ್ಟೋ ದಿನನಿತ್ಯದ ಕ್ರಮಗಳ ಮೂಲ ಸಿದ್ಧಾಂತ ನಮಗೆ ತಿಳಿದಿಲ್ಲವೆಂದಾದರೆ, ಅದರ ಐತಿಹ್ಯವನ್ನು ಇನ್ನೊಬ್ಬರಿಗೆ ತಿಳಿಸಿ ಹೇಳಲಾರದವರಾದರೆ ಆ ನಂಬಿಕೆಗಳು ಎಲ್ಲಿ 'ಮೂಢ'ನಂಬಿಕೆಗಳಾಗಿ ಬಿಡುತ್ತವೋ ಎಂದು ಹೆದರಿಕೆಯಾಗುತ್ತದೆ. ನಮ್ಮ ಪರಂಪರೆ ಬರಿ ಚರ್ಮದ ಮೇಲಿನ ತಿಳುವಳಿಕೆಯಾಗದೇ ಇನ್ನೂ ಸ್ವಲ್ಪ ಆಳವಾಗಿದ್ದರೆ ಎನ್ನುವ ಆಶಯ ನನ್ನದು.