ಎಕ್ಸಿಟ್ ಇಂಟರ್ವ್ಯೂವೂ, ಅದರಿಂದ ಹೊರಬಂದ ಸತ್ಯಗಳೂ...
ಕಳೆದ ವಾರ ನಮ್ಮ ಅತ್ತೆಯವರು ಇಲ್ಲಿಂದ ಭಾರತಕ್ಕೆ ಹಿಂತಿರುಗಿದರು, ಆರು ತಿಂಗಳು ಅವರು ನಮ್ಮ ಮನೆಯಲ್ಲಿ ಇದ್ದು ಹಿಂತಿರುಗುವ ತಯ್ಯಾರಿ ನಡೆಸುತ್ತಿರುವಾಗ ಮ್ಯಾನೇಜ್ಮೆಂಟ್ ಶೈಲಿಯಲ್ಲಿ ಒಂದು ಎಕ್ಸಿಟ್ ಇಂಟರ್ವ್ಯೂವ್ ಮಾಡಿದರೆ ಹೇಗೆ ಎಂದು ಅನ್ನಿಸಿದ್ದೇ ತಡ ಅವರಿಗೆ ನೋವಾಗದ ಹಾಗೆ ಏನೇನು ಪ್ರಶ್ನೆಗಳನ್ನು ಕೇಳಬಹುದು, ಅವರಿಂದ ಏನೇನು ಉತ್ತರ ಬರಬಹುದು ಎಂದೆಲ್ಲಾ ಮೊದಲೇ ಯೋಚಿಸಿಕೊಂಡಿದ್ದೆ. ನನಗೆ ಅನಿಸಿದ ಎಲ್ಲಾ ಪ್ರಶ್ನೆಗಳನ್ನೂ ಒಂದೇ ದಿನ ಕೇಳದೇ ಸುಮಾರು ಒಂದು ವಾರದಲ್ಲಿ ಬಿಡುವು ಸಿಕ್ಕಾಗ ಅಲ್ಲಲ್ಲಿ ಅವರ ಜೊತೆ ಮಾತನಾಡಲು ತೊಡಗಿದೆ. ನಮ್ಮ ಮಾವನವರು ಛಳಿಗೆ ಹೆದರಿ ಬರದೇ ಇದ್ದುದರಿಂದ ಅವರೊಬ್ಬರೇ ಬಂದಿದ್ದರು, ಬರೀ ವಾರಾಂತ್ಯದಲ್ಲಿ ಮಾತ್ರ ಪುರುಸೊತ್ತು ಸಿಗುವ ನಾವು ಅವರಿಗೆ ಅಮೇರಿಕವನ್ನು ಹೊರಗಡೆ ತೋರಿಸಿದ್ದಕ್ಕಿಂತ ಹೆಚ್ಚಾಗಿ ಟಿವಿಯಲ್ಲೇ ಕಂಡುಕೊಂಡಿದ್ದರು. ಆದರೂ ಅವರ ಕಲ್ಪನೆಯಲ್ಲಿದ್ದ ನಮ್ಮ ಅಮೇರಿಕನ್ ಬದುಕು ವಾಸ್ತವಕ್ಕಿಂತ ಬಹಳ ಭಿನ್ನವಾಗಿತ್ತು!
ನನಗೆ ಕೆಲವು ತಿಂಗಳುಗಳ ಕಾಲ ಅಮೇರಿಕೆಗೆ ಪ್ರವಾಸಿಗಳಾಗಿ ಬಂದು ಪೂರ್ತಿ ಅಮೇರಿಕನ್ ಬದುಕನ್ನೇ ಕಂಡವರ ಥರಾ ಜೆನರಲೈಸ್ ಮಾಡಿಕೊಂಡು ಮಾತನಾಡುವವರೆಂದರೆ ಬಹಳ ಸಿಟ್ಟು. ಪ್ಯಾರಿಸ್ ಏರ್ಪೋರ್ಟಿನಲ್ಲಿ ಏನೇನನ್ನು ಮಾಡಬಹುದು, ಲಿಬರ್ಟಿ ಅಮ್ಮನ ಪ್ರತಿಮೆ ಎಷ್ಟು ಎತ್ತಿರವಿದೆ, ವೈಟ್ಹೌಸ್ ಯಾವ ವರ್ಷದಲ್ಲಿ ಕಟ್ಟಿದ್ದು... ಮುಂತಾದ ವಿಷಯಗಳುಳ್ಳ ಪ್ರವಾಸಕಥನಗಳನ್ನು ಬರೆದರೆ ನನಗೆ ಯಾವ ದುಃಖವೂ ಇಲ್ಲ, ಅದರ ಬದಲಿಗೆ 'ಈ ಅನಿವಾಸಿಗಳ ಬದುಕೇ ಇಷ್ಟು!', 'ಅಮೇರಿಕನ್ನರೆಂದರೆ ಹೀಗೆ...' ಎಂದು ಜನರಲೈಸ್ ಮಾಡಿ ಏನಾದರೊಂದು ಮಾತನ್ನಾಡಿದರೆ ಮಾತ್ರ ನಾನು ಅದನ್ನು ಖಂಡಿತವಾಗಿ ವಿರೋಧಿಸುತ್ತೇನೆ. ನನ್ನ ಅತ್ತೆಯವರಿಗೆ ಮೊದಲೇ ಈ ಬಗ್ಗೆ ಹೇಳಿದ್ದೆ, 'ಏನಾದರೂ ಗೊತ್ತಾಗದಿದ್ದರೆ ಕೇಳಿ' ಎಂದೂ ಸಹ ಹೇಳಿದ್ದೆ, ಅವರು ಈ ರೀತಿಯ ಯಾವುದೇ ಜನರಲೈಸೇಶನ್ಗೂ ಹೋಗಲಿಲ್ಲ, ಮೇಲಾಗಿ ಅವರು ನಾವು ಇಲ್ಲಿ ಬದುಕುವ ರೀತಿಯನ್ನು ಕಂಡು ಅವರಿಗೇನನ್ನಿಸಿತು ಎಂದು ಹೇಳಲು ಯಾವ ಸಂಕೋಚವನ್ನೂ ಪಡಲಿಲ್ಲ - ನನ್ನ ದೃಷ್ಟಿಯಲ್ಲಿ ಅದು ಸರಿಯಾದ ವಿಚಾರ, ಏಕೆಂದರೆ ಅನಿವಾಸಿಯಾಗಿ ಇಲ್ಲಿ ನನ್ನ ಬದುಕು ಭಿನ್ನವಾದದ್ದು, ಅವರು ನಮ್ಮನ್ನು ಹತ್ತಿರದಿಂದ ನೋಡಿದ್ದಾರೆಯೇ ವಿನಾ, ಅನಿವಾಸಿಗಳೆಲ್ಲರೂ ಹೀಗೇ ಎನ್ನುವುದಕ್ಕೆ ಬರುವುದಿಲ್ಲ. ಇಲ್ಲಿಗೆ ಬ್ಯುಸಿನೆಸ್ ವೀಸಾದ ಮೇಲೋ, ಪ್ರವಾಸೀ ವೀಸಾದ ಮೇಲೋ ಬಂದವರು 'ಈ ಬದುಕಿನ ಬಗ್ಗೆ ನಾನೊಂದು ಪುಸ್ತಕವನ್ನು ಬರೆದು ಬಿಡುತ್ತೇನೆ' ಅಥವಾ 'ಈಗಾಗಲೇ ಕೆಲವು ಪುಟಗಳನ್ನು ಬರೆದಾಗಿದೆ' ಎಂದೋ ಹೇಳುತ್ತಾರೆ, ನಾನು ಅವರನ್ನು ಕೆಣಕಲೆಂದೇ 'ಏನು ಪ್ರವಾಸೀ ಕಥನವೋ?' ಎನ್ನುತ್ತೇನೆ, ಅವರು 'ಇಲ್ಲಾ, ಇಲ್ಲಿಗೆ ಬಂದ ಮೇಲೆ ಬಹಳ ಬೇಸರವಾಯಿತು, ಅದು ಸರಿ ಇಲ್ಲ, ಇದು ಸರಿ ಇಲ್ಲ...' ಎಂದು ದೂರುಗಳ ಯಾದಿಯನ್ನೇ ಶುರು ಮಾಡುತ್ತಾರೆ, ಅಥವಾ 'ಎಲ್ಲವೂ ಭಯಂಕರ ಚೆನ್ನಾಗಿದೆ' ಎಂದು ಹೊಗಳಲು ಮುಂದಾಗುತ್ತಾರೆ. ಅವರೇ ಮಾಡಿದ ಪ್ರತಿಯೊಂದು ಕಾಮೆಂಟಿನ ಬಗ್ಗೆ ವಿವರವನ್ನು ಕೇಳಿದರೆ, ಅವರು ಹಾಗೆ ಅಂದುಕೊಂಡಿರುವುದರ ಹಿಂದಿನ ಕಾರಣವನ್ನು ಬಿಡಿಸಲು ನೋಡಿದರೆ ಹೆಚ್ಚೇನೂ ಇರುವುದಿಲ್ಲ - ಹೆಚ್ಚಿನವುಗಳು ಪೂರ್ವಾಗ್ರಹ ಪೀಡಿತ ಅನಿಸಿಕೆಗಳಾಗಿರುತ್ತವೆ, ಇನ್ನು ಕೆಲವು ಅವರವರ ದೃಷ್ಟಿಕೋನದ ಮಿತಿಯಲ್ಲಿರುತ್ತದೆ, ಮತ್ತೆ ಕೆಲವು ಯಾವುದೋ ಒಂದು ಅಜೆಂಡಾದ ಪ್ರತಿಯಂತೆ ಕಂಡುಬರುತ್ತವೆ.
ಸರಿ, ನಾನು ಪ್ರಶೆಗಳನ್ನು ಒಂದಾದ ಮೇಲೊಂದರಂತೆ ಕೇಳಲು ತೊಡಗಿದೆ - ನಮ್ಮ ಬದುಕನ್ನು ನೋಡಿ ನಿಮಗೇನನ್ನಿಸುತ್ತದೆ, ನಾವಿಲ್ಲಿ ಸಂತೋಷವಾಗಿದ್ದೇವೆಂದು ಅನ್ನಿಸುತ್ತದೆಯೇ? ನಮ್ಮ ಊಟ-ತಿಂಡಿ-ಉಪಚಾರಗಳನ್ನು ನೋಡಿ ಏನನ್ನಿಸಿತು? ಹೇಗೋ ಹತ್ತು ವರ್ಷದ ವೀಸಾ ಕೊಟ್ಟಿದ್ದಾರೆ ಮತ್ತೆ ಇಲ್ಲಿಗೆ ಯಾವಾಗ ಬರುತ್ತೀರಿ? ಇಲ್ಲಿನ ಅನುಕೂಲಗಳೇನು, ಅನಾನುಕೂಲಗಳೇನು? ಯಾವುದು ಇಷ್ಟವಾಯಿತು, ಏಕೆ? ಯಾವುದು ಇಷ್ಟವಾಗಲಿಲ್ಲ, ಏಕೆ? ಇತ್ಯಾದಿ.
ಕೆಳಗೆ ಅವರು ಕೊಟ್ಟ ಉತ್ತರವನ್ನೆಲ್ಲ ಹೀಗೆ ಕ್ರೋಡೀಕರಿಸಿದ್ದೇನೆ: ನಾವು ಇಲ್ಲಿ ತಿಂಡಿ ತಿನ್ನುವ ರೀತಿ, ವಿಧಾನ ಅವರಿಗೆ ಇಷ್ಟವಾಗಲಿಲ್ಲವಂತೆ, ಇಲ್ಲಿನ ಬ್ರೆಡ್ಡು ಅಲ್ಲಿಗಿಂತ ಒಳ್ಳೆಯದಾದರೂ ಈ ಓಟ್ಮೀಲ್ ಪುಡಿ, ಕಾರ್ನ್ಪ್ಲೇಕ್ಸ್, ಬ್ರೆಡ್ಡುಗಳು ಅಷ್ಟೊಂದು ಆರೋಗ್ಯಕ್ಕೆ ಒಳ್ಳೆಯದಲ್ಲವಂತೆ, ಸಾಧ್ಯವಾದಷ್ಟೂ ನಾವು ಭಾರತೀಯ ತಿಂಡಿಗಳನ್ನೇ ಮಾಡಿಕೊಳ್ಳಬೇಕಂತೆ. ಇಲ್ಲಿ ಎಲ್ಲದಕ್ಕೂ ಮೆಷೀನುಗಳು ಇರುವುದು ತುಂಬಾ ಇಷ್ಟವಾದ ವಿಚಾರವಂತೆ, ಪಾತ್ರೆ ತೊಳೆದು ಒಣಗಿಸುವುದೂ, ಮೈಕ್ರೋವೇವ್ ಅವನ್ನಿನಲ್ಲಿ ಕೂಡಲೇ ಚಹಾ-ಕಾಫಿ ಮಾಡುವುದೂ ಇವೆಲ್ಲವೂ ಬಹು ಇಷ್ಟವಾಯ್ತುಂತೆ. ನಮ್ಮ ಇಲ್ಲಿನ ದೊಡ್ಡ ಅನಾನುಕೂಲಗಳ ಪಟ್ಟಿಯಲ್ಲಿ 'ನಮಗೇನಾದರೂ ಹೆಚ್ಚೂ ಕಡಿಮೆ ಆದರೆ ನೋಡೋರು ಯಾರೂ ಇಲ್ಲ' ಅನ್ನೋದು ಮೊದಲು ಬಂದಿತು. ಅನುಕೂಲಗಳ ಪಟ್ಟಿಯಲ್ಲಿ 'ನಮ್ಮಲ್ಲಿನ ಹಾಗೆ ನೆಂಟರೂ-ಇಷ್ಟರೂ ದಿಢೀರಂತ ನುಗ್ಗಿ ತೊಂದರೆ ಕೊಡೋದಿಲ್ಲ' ಎನ್ನುವುದನ್ನೂ ಕೇಳಿ ಆಶ್ಚರ್ಯವಾಯಿತು. ಮತ್ತೆ ಬರುತ್ತೀರಾ ಎಂದದ್ದಕ್ಕೆ 'ಬರುವುದಿಲ್ಲ, ಅಥವಾ ಕಷ್ಟವಿದೆ ನೋಡೋಣ' ಎಂದಿದ್ದೂ ಹಾಗೂ ಎಲ್ಲಕ್ಕೂ ಮುಖ್ಯವಾಗಿ 'ನೀವು ಇಲ್ಲಿ ಬಹಳ ಹೆದರಿಕೆಯಿಂದ ಬದುಕುತ್ತೀರಿ' ಎಂದದ್ದೂ ನನ್ನನ್ನು ಬಹಳ ಯೋಚಿಸುವಂತೆ ಮಾಡಿದವು. ಕೊನೆಯಲ್ಲಿ 'ನೀವು ಇಲ್ಲಿ ಖುಷಿಯಾಗಿಯೇ ಇದ್ದೀರಿ, ಇಲ್ಲಿ ಎಲ್ಲವೂ ಸಿಗುತ್ತೆ, ಏನೂ ತೊಂದರೆಯಿಲ್ಲ' ಎನ್ನುವ ಮಾತುಗಳು ನನಗೆ ಬಹಳ ಇಷ್ಟವಾದವು.
ಭಾರತದಿಂದ ಒಬ್ಬೊಬ್ಬರೇನು ಇಬ್ಬಿಬ್ಬರು ಜೊತೆ-ಜೊತೆಯಲ್ಲಿ ಬಂದರೂ ಅವರಿಗೆ ಇಲ್ಲಿ ಸಾಕಷ್ಟು ಬೇಸರವನ್ನು ಸಹಿಸಿಕೊಳ್ಳುವ ಶಕ್ತಿ ಇರಬೇಕಾಗುತ್ತದೆ, ಮನೆಯಲ್ಲಿ ಗಂಡ-ಹೆಂಡತಿ ಇಬ್ಬರೂ ಕೆಲಸಕ್ಕೆ ಹೋಗಿ ತಂದೆ-ತಾಯಿ, ಅತ್ತೆ-ಮಾವಂದಿರನ್ನು ಮನೆಯಲ್ಲೇ ಕೂಡಿಹಾಕಿ 'ವೀಕೆಂಡ್ ಬಂದಾಗ ನೋಡೋಣ' ಅನ್ನೋದು ನಮಗೆ ಸುಲಭವಾದರೂ ಅವರಿಗೆ ಬಹಳ ಪ್ರಯಾಸದಾಯಕವಾಗುತ್ತದೆ. ಇಲ್ಲಿನ ಟಿವಿಯಲ್ಲಿ ಅಲ್ಲಿನ ಕಾರ್ಯಕ್ರಮಗಳು ಬರೋದಿಲ್ಲ, ಅಲ್ಲಿನ ಧಾರಾವಾಹಿಗಳು ಸಿಗೋದಿಲ್ಲ, ಅಲ್ಲಿನ ನೆರೆಹೊರೆಯವರ ಜೊತೆಗೆ ಎಂತಹ ನಗರ ಜೀವನಕ್ಕೆ ಹೊಂದಿಕೊಂಡವರಿಗೂ ಒಂದು ರೀತಿಯ ಸಂಬಂಧವೇರ್ಪಟ್ಟಿರುತ್ತೆ, ಅಂಥಾದ್ದರಲ್ಲಿ ಒಂದಲ್ಲ, ಎರಡಲ್ಲ ಆರು ತಿಂಗಳುಗಳ ಕಾಲ ಮನೆಯಲ್ಲೇ ವಾರ ಪೂರ್ತಿ ಇರಬೇಕು ಎಂದರೆ ಯಾರಿಗೆ ತಾನೇ ಬೇಸರವಾಗೋದಿಲ್ಲ. ಅಲ್ಲದೇ ಹೆಚ್ಚಿನ ಹಿಂದಿನ ತಲೆಮಾರಿನವರು ನಮ್ಮ ಹಾಗೆ ಘಂಟೆಗಟ್ಟಲೆ ಅಂತರ್ಜಾಲದ ಮುಂದೆ ಕುಳಿತೋ, ಯಾವುಯಾವುದೋ ಟಿವಿ ಕಾರ್ಯಕ್ರಮಗಳನ್ನು ನೋಡಿಯೋ ಕಾಲ ಕಳೆಯುವವರಲ್ಲ, ಅದೂ-ಇದೂ ಕೆಲಸ ಮಾಡಿಕೊಂಡು ಓಡಾಡಿಕೊಂಡಿದ್ದವರಿಗಂತೂ ಇನ್ನೂ ಕಷ್ಟವಾಗುತ್ತದೆ. ಅದರಲ್ಲೂ ಬೇಸಿಗೆಯಲ್ಲಿ ಬಂದರೆ ಸುಖ, ಇನ್ನು ಛಳಿಗಾಲದಲ್ಲಿ ಬಂದರೆ ಕಥೆಯೇ ಮುಗಿಯಿತು. ಬೇರೇನೂ ಬೇಡ, ನಾವು ಇಲ್ಲಿ ಅದ್ಯಾವುದೇ ಪುಡಿಯಿಂದ ಹೇಗೇ ಕಾಫಿ ಮಾಡಿಕೊಟ್ಟರೂ ಅವರಿಗೆ 'ಮನೆಯ ಕಾಫಿ'ಯ ಸಮಾಧಾನ ಬರುವ ಹೊತ್ತಿಗೆ ಸಾಕುಸಾಕಾಗಿ ಹೋಗಿರುತ್ತದೆ - ದಿನ ನಿತ್ಯದ ಸಣ್ಣ-ಸಣ್ಣ ಬದಲಾವಣೆಗಳನ್ನ ನಾವೇ ಎಷ್ಟೊಂದು ಎದುರಿಸಲು ಹೋರಾಡುತ್ತಿರುವಾಗ ಯಾವುದೋ ದೇಶದ ಯಾವುದೋ ಊರಿಗೆ ಹೋಗಿ ಆರು ತಿಂಗಳು 'ಕೊಳೆಯುವುದನ್ನು' ಊಹಿಸಿಕೊಳ್ಳುವುದು ನನ್ನಂಥವರಿಗೆ ಹಿಂದೆ ಕಷ್ಟವಾಗುತ್ತಿತ್ತು, ಆದರೆ ಇತ್ತೀಚೆಗೆ ಸ್ವಲ್ಪ ತಿಳಿದುಕೊಂಡಿದ್ದೇನೆ. ಇನ್ನು 'ನೀವು ಇಲ್ಲಿ ಬಹಳ ಹೆದರಿಕೆಯಿಂದ ಬದುಕುತ್ತೀರಿ' ಎಂಬುದರ ಬಗ್ಗೆ ಹೀಗೆ ಅನ್ನಿಸಿತು. ಇಲ್ಲಿ ತಳ ಊರಬಯಸುವ ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯಲ್ಲಿ ಹಣಕಾಸಿನ ಮುಗ್ಗಟ್ಟಿನಲ್ಲಿ ಸಿಲುಕಿಕೊಂಡಿರುತ್ತಾರೆಂತಲೇ ಹೇಳಬೇಕು - ಭಾರತದಲ್ಲಿ ಇತ್ತೀಚೆಗೆ ಮನೆ ಸಾಲ, ವಾಹನ ಸಾಲವೆಂಬ ಪ್ರತೀತಿ ಚಾಲ್ತಿಗೆ ಬಂದಿದ್ದರೂ, ಉದಾಹರಣೆಗೆಂದು ಇಲ್ಲಿನ ನಮ್ಮ ಮನೆಯನ್ನು ಖರೀದಿಸಿದ ಹಣವನ್ನು ರೂಪಾಯಿಗೆ ಬದಲಾಯಿಸಿ, ಅದರಲ್ಲಿ ನಮ್ಮ ತಲೆಯ ಮೇಲಿರುವ ಸಾಲವನ್ನು ಕೋಟಿಯಲ್ಲಿ ಹೇಳಿದಾಗ ಮಧ್ಯಮ ವರ್ಗದ ನನ್ನ ಅತ್ತೆಯಂತವರಿಗೆ ದಿಗಿಲಾಗುವುದು ಸಹಜವೇ. ಅಲ್ಲದೇ ಎಷ್ಟೇ ದುಡಿದರೂ ಪೇಚೆಕ್ನಿಂದ ಪೇಚೆಕ್ಗೆ ಬಹಳ ಜನರು ಬದುಕುತ್ತಾರಾದ್ದರಿಂದ 'ಅಕಸ್ಮಾತ್ ಕೆಲಸವೇನಾದರೂ ಹೋದರೆ...ಈ ಸಾಲವನ್ನೆಲ್ಲ ಹೇಗೆ ತೀರಿಸುತ್ತೀರಿ' ಎಂದೂ ಅವರು ಭಯ ಪಡುತ್ತಾರೆ. ಎಲ್ಲಕ್ಕೂ ಮೂಲದಲ್ಲಿ 'ನಮ್ಮ ಫ್ಯಾಮಿಲಿಯಲ್ಲಿ ಸಾಲ ಅನ್ನೋದೇ ಇರಲಿಲ್ಲ...' ಎನ್ನುವ ಮಾತಿಗೆ ನಾನಾದರೂ ಏನು ಹೇಳಲಿ? ಇಲ್ಲಿ ಮನೆಕೊಳ್ಳುವಾಗ ಇಪ್ಪತ್ತು ಪ್ರತಿಶತ ಡೌನ್ ಪೇಮೆಂಟನ್ನು ಕೊಟ್ಟು ಇನ್ನುಳಿದದ್ದನ್ನು ಮಾರ್ಟ್ಗೇಜ್ ಆಗಿ ಪ್ರತೀ ತಿಂಗಳು ಅಸಲೂ-ಬಡ್ಡಿ ಕೊಟ್ಟು ಕೊನೆಯಲ್ಲಿ ಟ್ಯಾಕ್ಸ್ ಕಟ್ಟುವಾಗ ಆದಾಯವಿದೆಯೆಂದು ಹೇಳಿದರೂ 'ಏನೇ ಹೇಳಿ, ಸಾಲ ಸಾಲವೇ' ಎನ್ನುತ್ತಾರೆ. ಸಾಲದ ಹಂಗು, ಕೆಲಸ ಹೋದರೆ ಎನ್ನುವ ಗುಂಗುಗಳನ್ನು ಹೊರತು ಪಡಿಸಿದರೆ ಮುಖ್ಯವಾಗಿ ಕಾಣುವುದು 'ವಾಹನ ಅಪಘಾತ', ಹೆಚ್ಚು ವೇಗದಲ್ಲಿ ಇಲ್ಲಿ ಚಲಿಸೋದರಿಂದ ಹೆಚ್ಚು ಅಪಘಾತಗಳಾಗುತ್ತವೆ ಎನ್ನುವ ಸ್ವಯಂ ನಿರ್ಣಯಕ್ಕೆ ಬಂದು ಬಿಡುತ್ತಾರೆ ಅದರಲ್ಲಿರುವ ಸತ್ಯಾಸತ್ಯತೆಯನ್ನು ವಿವೇಚಿಸುವುದಕ್ಕೆ ಹೋಗುವುದಿಲ್ಲ. ನನ್ನನ್ನು ಕೇಳಿದರೆ ನಾನು ಭಾರತದಲ್ಲೇ ಹೆಚ್ಚು ವಾಹನ ಅಫಘಾತದ ಹೆಚ್ಚಿನ ರಿಸ್ಕ್ನಲ್ಲಿದ್ದೆ, ಇಲ್ಲಿ ವೇಗವಾಗಿ ಹೋಗುತ್ತೇನಾದರೂ ನನಗೆ ಇವತ್ತಿಗೂ ಅಲ್ಲಿಯ ವಾಹನಗಳ ಭಯವೇ ಹೆಚ್ಚು, ವಾಹನ ಅಫಘಾತವಾದ ನಂತರ ತ್ವರಿತವಾಗಿ ಸಿಗದ ವೈದ್ಯಕೀಯ ಸೇವೆ, ನಾನು ಕಣ್ಣಾರೆ ಕಂಡ ಹಲವಾರು ವಾಹನ ಅಫಘಾತಗಳ ಸಾವು-ನೋವು ನನ್ನನ್ನು ಹೀಗೆ ಯೋಚಿಸುವಂತೆ ಮಾಡಿರಬಹುದು ಅಥವಾ ಇದು ಕೇವಲ ನನ್ನ ಅಭಿಪ್ರಾಯ ಮಾತ್ರವಾಗಿರಬಹುದು.
ಪುಣ್ಯಕ್ಕೆ ನನ್ನ ಅತ್ತೆಯವರು ನನ್ನ ಹಾಗೆ ಅಲ್ಲಿ-ಇಲ್ಲಿನದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಲು ಹೋಗಲಿಲ್ಲ, ಆದರೆ ಅವರ ಮಾತಿನ ಮಧ್ಯೆ 'ಆ ದರಿದ್ರ ದೇಶದಲ್ಲಿ ಜನ ಬಾರೀ ಮೋಸ ಮಾಡ್ತಾರೆ!' ಅನ್ನೋ ವಾಕ್ಯದಲ್ಲಿ 'ದರಿದ್ರ ದೇಶ' ಬಳಕೆಯನ್ನು ಕುರಿತು ನಮ್ಮ ದೇಶಕ್ಕೆ ದಯವಿಟ್ಟು 'ದರಿದ್ರ ದೇಶ' ಅನ್ನುವ ಪದವನ್ನು ಹಿಂದಕ್ಕೆ ತೆಗೆದುಕೊಳ್ಳಿ ಹಾಗೆ ಹೇಳಬೇಡಿ, ನಮ್ಮ ದೇಶ ದರಿದ್ರವೆಂದರೆ ಅದಕ್ಕೆ ನಾವೂ-ನೀವು ಎಲ್ಲರೂ ಕಾರಣರು ಎಂದೆ - ಅವರಿಗೆ ಏನನ್ನಿಸಿತೋ ಗೊತ್ತಿಲ್ಲ, ಸುಮ್ಮನಂತೂ ಆದರು!