ನಮ್ಮ ದೇವರು
ನಮ್ಮಲ್ಲಿ ಎಷ್ಟೊಂದು ವೈವಿಧ್ಯತೆ ಇದೆ ಎಂದರೆ ದೇವರು-ದಿಂಡರಿನ ವಿಚಾರದಲ್ಲೂ ಸುಲಭವಾಗಿ ಹೀಗೇ ಎಂದು ಹೇಳದಿರುವಷ್ಟರ ಮಟ್ಟಿಗೆ ನನಗೆ ಹಲವಾರು ಬಾರಿ ಕಸಿವಿಸಿಯಾಗಿದೆ. ನಮ್ಮ ದೇವಾನುದೇವತೆಗಳನ್ನು, ನಮ್ಮ ಧರ್ಮ-ಜಾತಿ ವ್ಯವಸ್ಥೆಯನ್ನು (ಗೊತ್ತಿರದ) ಯಾರಿಗಾದರೂ ಒಂದೈದು ನಿಮಿಷದಲ್ಲಿ ವಿವರಿಸುತ್ತೇನೆಂದುಕೊಂಡರೆ ಎಲ್ಲಿಂದ ಆರಂಭಿಸಬೇಕು, ಎಲ್ಲಿ ನಿಲ್ಲಿಸಬೇಕು ಎಂದು ಗೊಂದಲವಾಗಿದೆ.
ನಾನು ಕಂಡುಕೊಂಡ ಹಾಗೆ ನಮ್ಮ ದೇವರುಗಳ ಪ್ರತೀಕ ಒಂದು ರೀತಿಯಲ್ಲಿ ಸೂಪರ್ ಹ್ಯೂಮನ್ ಎಂದೇ ಹೇಳಬೇಕು, ಚಿತ್ರಗಳಲ್ಲಿ ಅಭಿವ್ಯಕ್ತವಾದ ಹಾಗೆ ಕೆಲವೊಂದಕ್ಕೆ ಹಲವಾರು ಕೈಗಳು, ತಲೆಗಳು, ರೂಪಗಳು. ಕೆಲವೊಮ್ಮೆ ನಿಸರ್ಗವನ್ನು ಆಧರಿಸಿ ಬೆಂಕಿ, ನೀರು, ಗಾಳಿ, ಭೂಮಿ, ಇತ್ಯಾದಿಯಾಗಿ ವರ್ಣಿಸಬಹುದು, ಇನ್ನು ಕೆಲವೊಮ್ಮೆ ಪೌರಾಣಿಕ, ಐತಿಹಾಸಿಕವಾಗಿಯೂ ವಿವರಿಸಬಹುದು. ಪುರಾಣಗಳನ್ನು ಚೆನ್ನಾಗಿ ತಿಳಿದುಕೊಂಡವರಿಗೆ ಹೆಚ್ಚಿನವು 'ಕಥೆ'ಗಳಾಗಿ ಕಂಡುಬಂದರೆ ಇನ್ನು ಕೆಲವು ತಮ್ಮ ತಮ್ಮಲ್ಲೇ ಎಂತೆಂಥ ತಿರುವುಗಳನ್ನು ಮೂಡಿಸುತ್ತವೆಯೆಂದರೆ ಅದನ್ನು ಬೇರೆ ಧರ್ಮ ಅಥವಾ ಮನೋಭಾವನೆಯವರಿಗೆ ವಿವರಿಸುವಾಗ ನಮಗೆ ಗೊಂದಲವಾಗುವುದಂತೂ ನಿಜ - ಉದಾಹರಣೆಗೆ ಮೊನ್ನೆ-ಮೊನ್ನೆ ಅಯ್ಯಪ್ಪಸ್ವಾಮಿ ಹೆಸರಿನಲ್ಲಿ ಅವರಿವರು ದೇವಸ್ಥಾನಕ್ಕೆ ಭೇಟಿ ನೀಡಿದ ಹಿನ್ನೆಲೆಯಲ್ಲಿ ನಮ್ಮ ಧರ್ಮೀಯರಲ್ಲದವರಿಗೆ ಅಯ್ಯಪ್ಪಸ್ವಾಮಿ ಅಥವಾ ಹರಿಹರ ಪುತ್ರನ ಹುಟ್ಟಿನ ಬಗ್ಗೆ ವಿವರಿಸಲು ಪ್ರಯತ್ನಿಸಿ ನೋಡಿ ಅದರ ಕಷ್ಟದ ಅರಿವಾಗುತ್ತದೆ. ನಮ್ಮ ನಂಬಿಕೆಗಳನ್ನು ನಾವು ಬೇರೊಂದು ನೆಲೆಗಟ್ಟಿನಲ್ಲಿ ನಿಂತು ನೋಡಿದಾಗ ಕೆಲವೊಮ್ಮೆ ಸಾವಿರಾರು ವರ್ಷಗಳಿಂದ ಕೋಟ್ಯಾಂತರ ಜನ ನಂಬಿಕೊಂಡು ಬಂದ ಆಚರಣೆ/ವ್ಯವಸ್ಥೆ ಕೇವಲ 'ಟ್ರೈಬಲ್' ಅನ್ನಿಸಿಬಿಡುತ್ತದೆ. ಅಯ್ಯಪ್ಪಸ್ವಾಮಿಯ ಕಥೆ ಕೇವಲ ದಕ್ಷಿಣಭಾರತದಲ್ಲಿ ಮಾತ್ರ ಪ್ರಚಲಿತವೇಕಿದೆ ಎಂದು ನನಗೆ ಅನುಮಾನ ಬಂದಿದ್ದು ಕೇವಲ ಇತ್ತೀಚೆಗಷ್ಟೇ, ಆದರೆ ನಾನು ಅದೆಷ್ಟೋ ಸಾರಿ ಮೋಹಿನಿ ಭಸ್ಮಾಸುರ ಆಟ (ಯಕ್ಷಗಾನ)ವನ್ನು ನೋಡಿದ್ದರೂ ಅದು ಮನೋರಂಜನೆಯಾಗಿ ಕಂಡಿದೆಯೇ ವಿನಾ ಅದರ ಮೂಲವನ್ನು ಹುಡುಕಿಕೊಂಡು ಹೋಗುವ ವ್ಯವಧಾನ ಒಮ್ಮೆಯೂ ಬಂದಿದ್ದಿಲ್ಲ.
ಇಲ್ಲಿಯ ಮೂಲ ನಿವಾಸಿಗಳ ಹಾಗೆ ನಾವೂ ಸಹ ನಿಸರ್ಗವನ್ನು ಬಹುವಾಗಿ ಪೂಜಿಸುವವರು ಎಂದುಕೊಂಡಾಗಲೆಲ್ಲ ನನ್ನ 'ದೇವರ' ವ್ಯಾಖ್ಯೆಗಳಿಗೆ ಒಂದು ಅರ್ಥ ಬಂದಿದೆ. ನಾವು ನೀರನ್ನು ಪೂಜಿಸುತ್ತೇವೆ, ಭೂಮಿಯನ್ನು ಪೂಜಿಸುತ್ತೇವೆ, ಆಹಾರ ಸರಪಳಿಯಲ್ಲಿ ಬರುವ ಹಲವಾರು ಪ್ರಾಣಿ ಪಕ್ಷಿಗಳನ್ನು ನಾವು ದೇವರ 'ವಾಹನ'ವಾಗಿ ಪೂಜಿಸುವುದನ್ನು ಸಾಧಿಸಿಕೊಳ್ಳಬಲ್ಲೆ. ಸೂರ್ಯನನ್ನು ನಕ್ಷತ್ರವೆಂದು ಅದೆಷ್ಟೋ ವರ್ಷಗಳಿಂದ ವಿಜ್ಞಾನ ಹೇಳಿಕೊಂಡು ಬಂದಿದ್ದರೂ ನಾವು ಅವನನ್ನು ಒಂದು 'ಗ್ರಹ'ವನ್ನಾಗಿ ಪೂಜಿಸಿಕೊಂಡು ಬಂದಿದ್ದನ್ನು ನೋಡಿ-ನೋಡಿಯೂ ಸುಮ್ಮನಿರಬಲ್ಲೆ. ಇನ್ನು ರಾಹು-ಕೇತುಗಳ ವಿಷಯಕ್ಕೆ ಬಂದಾಗ ಅವುಗಳನ್ನು ಅಸೆಂಡಿಂಗ್ ನೋಡ್, ಡಿಸೆಂಡಿಂಗ್ ನೋಡ್ ಎಂದೋ ಇಲ್ಲಾ ನೆಪ್ಚೂನ್, ಪ್ಲೂಟೋಗಳೆಂದೂ ಅಲ್ಲಲ್ಲಿ ವಿವರಣೆಯನ್ನು ಓದಿಕೊಂಡಿದ್ದೇನೆ.
ನನ್ನಲ್ಲಡಗಿದ ಗೊಂದಲಗಳಿಗೆ ಮುಖ್ಯವಾದ ಕಾರಣವೆಂದರೆ ನನ್ನ ತಿಳುವಳಿಕೆಯ ಮಿತಿ - ನಾವು ತಳಿರು ತೋರಣಗಳನ್ನು ಕಟ್ಟುವುದರಿಂದ ಹಿಡಿದು ಹಬ್ಬ-ಹರಿದಿನಗಳಿಗೆ ಸಂಬಂಧಿಸಿದ ಅದೆಷ್ಟೋ ಆಚರಣೆಗಳಿಗೆ ನನಗೆ ವೈಜ್ಞಾನಿಕವಾಗಿ ವಿವರಣೆ ಅಲ್ಲಲ್ಲಿ ಓದಿ ಗೊತ್ತಿದ್ದರೂ ನನ್ನ ನೆನಪಿನಲ್ಲಿ ಇನ್ನೊಬ್ಬರಿಗೆ ವಿವರಿಸುವಷ್ಟರ ಮಟ್ಟಿಗೆ ಏನೋ ಉಳಿಯೋದಿಲ್ಲ, ಹೀಗೆ ಕೇಳಿದರೆ ಹಾಗೇ ಹೋಗಿಬಿಟ್ಟಿದೆ. ಆದರೆ ನಾವು ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಬಂದಾಗ ಒಬ್ಬರಲ್ಲ ಒಬ್ಬರು ನಮ್ಮ ಆಚರಣೆಗಳನ್ನಾಗಲಿ, ಹಬ್ಬಗಳನ್ನಾಗಲೀ ಪ್ರಶ್ನಿಸದೇ ಇರೋದಿಲ್ಲ, ಆ ಸಂದರ್ಭಗಳಲ್ಲಿ ನಮ್ಮ ಧರ್ಮ, ರೀತಿ-ನೀತಿಗಳಿಗೆ ನಾವೇ ರಾಯಭಾರಿಗಳಾಗಿ ಬಿಡುತ್ತೇವಾದ್ದರಿಂದ ಕೆಲವೊಂದನ್ನು ಇಲ್ಲಿ ಬಂದ ಮೇಲೆ ಇಲ್ಲಿನವರ ದೃಷ್ಟಿಯಲ್ಲಿ ಪ್ರಶ್ನಿಸಿಕೊಂಡು ಅದಕ್ಕೆ ಉತ್ತರವನ್ನು ಹುಡುಕಿಕೊಂಡಿದ್ದಾಗಿದೆ. ನನ್ನ ಸಹೋದ್ಯೋಗಿಗಳಿಗೂ ಸಹ ನನಗಿರುವ ಹಾಗೆಯೇ ಅವರವರ ಆಚರಣೆಗಳಲ್ಲಿ ಮಿತವಾದ ತಿಳುವಳಿಕೆಯೂ ಇರುವುದನ್ನು ನೋಡಿದ್ದೇನೆ, ಆದರೂ ಸಹ ಕೆಲವೊಮ್ಮೆ ನಮ್ಮ ರೀತಿ-ನೀತಿಗಳ ಬಗ್ಗೆ ನಾನು ತಿಳಿದುಕೊಂಡಿದ್ದು ಕಡಿಮೆ ಎನ್ನಿಸಿಬಿಡುತ್ತದೆ.
ನಾವು ಆಚರಿಸಿಕೊಂಡು ಹೋಗುವ ಎಷ್ಟೋ ದಿನನಿತ್ಯದ ಕ್ರಮಗಳ ಮೂಲ ಸಿದ್ಧಾಂತ ನಮಗೆ ತಿಳಿದಿಲ್ಲವೆಂದಾದರೆ, ಅದರ ಐತಿಹ್ಯವನ್ನು ಇನ್ನೊಬ್ಬರಿಗೆ ತಿಳಿಸಿ ಹೇಳಲಾರದವರಾದರೆ ಆ ನಂಬಿಕೆಗಳು ಎಲ್ಲಿ 'ಮೂಢ'ನಂಬಿಕೆಗಳಾಗಿ ಬಿಡುತ್ತವೋ ಎಂದು ಹೆದರಿಕೆಯಾಗುತ್ತದೆ. ನಮ್ಮ ಪರಂಪರೆ ಬರಿ ಚರ್ಮದ ಮೇಲಿನ ತಿಳುವಳಿಕೆಯಾಗದೇ ಇನ್ನೂ ಸ್ವಲ್ಪ ಆಳವಾಗಿದ್ದರೆ ಎನ್ನುವ ಆಶಯ ನನ್ನದು.