ಸಿದ್‌ರಾಮೀನ ಇಡ್ಲಿ ದೇಶಕ್ಕ್ ಕಳಿಸಿದ್ರೆ ಹೆಂಗೆ?
ಇವರಿದ್ದ ಕಡೆ ಚಿಕನ್ ಗುನ್ಯಾ ತಗುಲಿಕೊಂಡಂದಿನಿಂದ ಕುಂಟೋದನ್ನ ನಿಲ್ಲಿಸದೇ ಅದೇ ಅವನ ನಿಜವಾದ ನಡೆಯೋ ಭಂಗಿ ಅನ್ನೋ ಹಂಗೆ ಮೈಲಾರಿ ಕಾಲೆಳೆದುಕೊಂಡು ಬರೋದನ್ನ ನೋಡಿ ಧರಮ್ಯಾ, ಹೇಮ್ಲ್ಯಾ ಇಬ್ರೂ ತಮ್ ತಮ್ಮಲ್ಲೇ ಪಿಸ್ ಪಿಸನೆ ಮಾತಾಡೋಕೆ ಶುರು ಹಚ್ಚಿಕೊಂಡ್ರು. ಮೈಲಾರಿ ಬಂದೋನೆ, 'ಏನ್ರೋ, ಏನೋ ಕುಸುಕುಸು ಹಚ್ಚಿಕೊಂಡ್ ಕುತಗಂಡಂಗ್ ಕಾಣ್ತೀರಲ್ಲ, ನಾನೇನೂ ನೋಡ್‌ಬಾರ್ದು ನೋಡಿಕ್ಯಂಡ್ ಬರ್ಲಿಲ್ಲ ಬಿಡು!' ಎಂದು ಒದರಿದವನೆ ಇವರ ಜೊತೆ ಅವನ ಕರೆದರೂ ಬಂದವನ ಹಾಗೆ ಬಂದು ಸೇರಿಕೊಂಡು ಗುಂಪಿನಳೊಗೊಂದಾಗಿ ಬಿಟ್ಟ.
ಧರಮ್ಯಾ ಇದ್ದೋನ್, ಸುಮ್ಕಿರಲಾರ್ದೆ 'ಅದೇ ಆ ನಿಂಗಣ್ಣನ ಮಗಳು ಆ ವಾಲ್ಗದೋರ್ ಹುಡುಗುನ್ ಕಟ್ಕೊಂಡ್ ಹೋದ್ಲಂತೆ ವಿಷ್ಯಾ ತಿಳೀತಿಲ್ಲೋ' ಎಂದು ಮೈಲಾರಿಯನ್ನು ಕೆಣಕಿದ.
ಮೈಲಾರಿ 'ಅದಾ, ಅದು ಆಗ್ಲೆ ಹಳೆ ಹಳಸಿದ್ ವಿಷ್ಯಾಗಿ ಹೋತು,ಆ ನಿಂಗಣ್ಣನ ಮಗಳು ಬಾಣಂತನ ಅಂತ ಊರಿಗ್ ಬಂದ್ರೆ ನೋಡು, ಅದು ಬೇಕಾದ್ರೆ ಹೊಸಾ ವಿಷ್ಯಾನಪ್ಪ' ಎಂದು ಜೋರಾಗಿ ನಗಾಡಿದ್ದನ್ನು ನೋಡಿ ಹೇಮ್ಯ್ಲಾನೂ ಅವನ ಜೊತೆ ಸೇರಿಕೊಂಡು ನಗುತ್ತಲೇ ಪ್ರಶ್ನೆ ಹಾಕಿದ...
'ಅಲ್ಲಾ ಕಾಕ, ನೀನು ಬಿಡು, ಎಲ್ಲಾರಿಗಿಂತ್ಲೂ ಪ್ರಚಂಡ್ನೇ, ಅದಿರ್ಲಿ, ನಿನಗೆ ಚಿಕನ್ ಗುನ್ಯಾ ಬಂದು ಅದ್ಯಾವ್ ಕಾಲಾ ಆತು, ಇನ್ನೂವೆ ಅದ್ಯಾಕ್ ಕಾಲೆಳೀತಿ ಮತ್ತ?'
ಇನ್ನೂ ಮೈಲಾರಿ ಉಸುರೂ ತೆಗೆದಿರ್ಲಿಲ್ಲ, ಅಷ್ಟರೊಳಗೆ ಆಗ್ಲೇ ಧರಮ್ಯಾ ಇದ್ದೋನು 'ಅದೇನ್ ಬಿಡು, ಅವನ ಹೂಟಿ ನಂಗೊತ್ತಿಲ್ಲೇನು? ಕುಮಾರ ಸ್ವಾಮಿ ಸರಕಾರ್‌ದೋರು ಇವತ್ತು ಅದೇನೋ ದೊಡ್ಡ ಸಭೆ ಕರದಾರಂತೆ, ಹಿಂಗೇ ಒಂದಿನ ರೋಗ ಬಂದೋರಿಗೆಲ್ಲ ಒಂದ್ ಒಂದ್ ಸಾವ್ರ ರೊಕ್ಕ ಕೊಟ್ರೂ ಅಂದ್ರೆ ತಾನೂ ಅದರಾಗ್ ಇರ್ಲಿ ಅಂತ, ಮೈಲಾರಿ ಅದರ ನೆನಪಾರ ಇರಲಿ ಅಂತ ಕಾಲೆಳಿಯೋದು' ಎಂದು ಕಿಚಾಯಿಸಿದ.
ಮೈಲಾರಿ ಸ್ವಲ್ಪ ಜೋರಾಗಿ ಉಸುರು ತೆಗೆದು 'ಅದೇನ್ ಖಾಯ್ಲೇನೋ, ಏನೋ, ಎಲ್ಲರಿಗೂ ಬಂದು ಬಡಕಂತು, ಒಂದಿಷ್ಟು ಮಂದೀನಾದ್ರೂ ತಂಗೊಂಡ್ ಹೋಗಿದ್ರೆ ಎಷ್ಟೋ ಚೆನ್ನಾಗಿತ್ತು, ಸ್ವಲ್ಪ ಭೂತಾಯಿ ಭಾರಾನಾದ್ರೂ ಕಮ್ಮಿ ಮಾಡಕ್ಯಂತಿದ್ಲು ಅಂತೀನಿ' ಎಂದೊಡನೆ ಇವನಿಗೇನಾತು ಧಾಡಿ ಎನ್ನುವಂತೆ ಧರಮ್ಯಾ, ಹೇಮ್ಲ್ಯಾ ಇಬ್ಬರೂ ಮೈಲಾರಿ ಮುಖ ನೋಡುತ್ತಾರೆ. ಧರಮ್ಯಾ 'ಅಲ್ಲಾ, ಏನಾಗಿತ್ತು ಆ ತಾಯಿಗೆ, ಹೋಗಿ ಹೋಗಿ ಆ ವಾಲ್ಗದೋನ್ ಮಗನ ಮಗನ ಕಟಗಂಡ್ ಓಡಾದಾ, ಈ ಹೆಣ್ ಮಕ್ಳಿಗ್ ಸ್ಕೂಲೂ ಮತ್ತೊಂದು ಕಳ್ಸಿದ್ದ್ದೇ ತಪ್ಪಾತ್ ನೋಡು, ಅಲ್ಲೀ-ಇಲ್ಲೀ ಸಿನಿಮಾ ನೋಡಿಕ್ಯಂಡ್ ಬರ್ತಾವೆ, ಇಲ್ಲಿ ಬಂದು ಹಂಗೇ ಮಾಡಬೇಕು ಅಂತಾವೆ'.
ಮೈಲಾರಿ ಸ್ವಲ್ಪ ಸಿಟ್ಟು ನಟಿಸಿ 'ಸುಮಿರ್ ಲಾ, ಆ ವಾಲ್ಗದೋರ್ ಹುಡ್ಗಾ ಅಂದ್ರೆ ಸನಾದಿ ಅಪ್ಪಣ್ಣ ಅಂತ ತಿಳಕಂಡೀಯೇನು? ಸಿನಿಮಾದಾಗ್ ಏನಾರ ತೋರಿಸ್ಲಿ, ಅಲ್ಲೀಗೂ-ಇಲ್ಲೀಗೂ ಬಾಳ ಫರಕ್ ಐತಿ. ಅಲ್ಲಿ ಮೆಟ್‌ತಗಂಡ್ ಹೊಡಿಯದ್ ತೋರಿಸಂಗಿಲ್ಲಾ ಅಂತ ಇಲ್ಲಿ ಬಿಡತಾರೇನೂ?' ಎಂದೊಡನೆ ಹೇಮ್ಲ್ಯಾ 'ಬಾಳ್ ಚೋಲೋ ಅಂದಿ ನೋಡು ಕಾಕಾ ನೀನು, ನಿನ್ ತಲಿ ಅಂದ್ರ ತಲೀನಪಾ, ಅವನೌನ, ಈ ಉಪಗ್ರಾ ಎಲ್ಲಾ ಹಾರುಸ್ತಾರ್ ನೋಡು ಅದಕ್ಕಾರೂ ಕಟ್ಟಿ ಕಳಿಸಿದ್ರೆ ನಿನ್ನನ್ನ, ಇಷ್ಟೊತ್ತಿಗೆ ಟಿವಿನಾಗೆ ಬರತಿದ್ದಿ ನೋಡು!' ತನ್ನ ವಾಚಿನ ಕಡೆ ನೋಡಿ 'ಇನ್ನೇನು ಐದೂವರೆ ಲಕ್ಷ್ಮೀ ಬಸ್ಸು ಬರೋ ಹೊತ್ತಾತು, ನಮ್ ಹುಡುಗ ಬರ್ತಾನಪ್ಪೋ ಇವತ್ತು, ಬಾಳ್ ದಿನಾ ಆತು ಹೆಂಗಿದಾನೋ ಏನೋ ಯಾವನಿಗ್ ಗೊತ್ತು?' ಬಸ್ಸು ಬರುವ ದಿಕ್ಕಿನ ಕಡೆ ನೋಡೋಕ್ ಶುರು ಮಾಡಿಕೊಳ್ಳುವನು.
ಮೈಲಾರಿ 'ಉಪಗ್ರಾ ಪಪಗ್ರಾ ಎಲ್ಲಾ ಬಿಟ್ ನೆಟ್ಟಗೆ ಮನ್ಯಾಗಿನ ಕೆಲ್ಸಾ ನೋಡಿಕ್ಯಂಡ್ ಇದ್ರು ಸಾಕಾಗೇತ್ ಹೋಗ್!' ಎನ್ನೋಷ್ಟರಲ್ಲಿ ಲಕ್ಷ್ಮೀ ಬಸ್ಸು ಬರುತ್ತೆ, ಅದರಿಂದ ಹೇಮ್ಲ್ಯಾನ ಮಗ ಮಾರನೂ ತನ್ನ ಒಂದು ಬಗಲಿನ ಚೀಲದೊಂದಿಗೆ ಇಳಿಯುತ್ತಾನೆ.
ಬಸ್ಸು ಇಳಿದವನೇ ಅಲ್ಲಿ ಸೇರಿರೋ ಇವರನ್ನೆಲ್ಲ ನೋಡಿ ಹಲ್ಲು ಕಿರಿಯೋ ಹೊತ್ತಿಗೆ ಮೈಲಾರಿ ಮಾರನ ಮೈ ತಡವಲು ಶುರು ಮಾಡಿರುತ್ತಾನೆ, 'ಏನೋ ಒಳ್ಳೇ ಪಟ್ಣದ್ ನೀರ್ ಸರಿಯಾಗೇ ಸೇರದಂಗಿದೆ?..., ಎಷ್ಟನೇ ಕ್ಲಾಸು ಇವಾಗಾ' ಎಂದು ಹುಬ್ಬೇರಿಸುತ್ತಾನೆ. ಮಾರ ತನ್ನ ಬೆರಳುಗಳನ್ನು ಜೋಡಿಸಿ, ಬಗಲಿನ ಚೀಲಕ್ಕೆ ಆತುಕೊಂಡೇ ಕೈಯಲ್ಲಿ ಎಂಟನ್ನು ತೋರಿಸುತ್ತಾನೆ. ಮೈಲಾರಿ ಮತ್ತೆ ಮುಂದುವರೆಸಿ, 'ಓಹೋಹೊ, ಅದೇನು ಇಲ್ಲೆಲ್ಲೂ ಹೈ ಸ್ಕೂಲು ಇಲ್ಲಾ ಅಂತ ಸಾಗರಕ್ಕೆ ಸೇರಿಸವ್ನೋ ನಿಮ್ಮಪ್ಪಾ, ಸರಿಹೋಯ್ತು, ಮೊದಲೆಲ್ಲ ಯಾವಾಗ್ಲೂ ಮೈ ಮೇಲೆ ಏರಿಸಿಕೊಂಡು ನಡೀತಿದ್ದ ಈಗ ದೊಡ್ಡ ಪೇಟೆ ಸೇರ್ಸಿ ಕಲೆಕ್ಟ್ರು ಮಾಡಕ್ ಹೊಂಟವ್ನೋ'... ದೊಡ್ಡದಾಗಿ ಉಸಿರು ಬಿಟ್ಟು, 'ಏನೋ, ನಿಮ್ಮಪ್ಪನ್ನ ನಡುರಾತ್ರೀನಾಗ್ ಏಳಿಸಿ, ನಿನ್ ಮಗ ಸಾಗರ್‌ದಾಗ್ ಏನ್ ಮಾಡ್ತಾನಲೇ ಅಂದ್ರೆ, ಓದ್ತಾನ ಅಂತಾನ, ನೀನೇನ್ ಓದ್‌ತೀಯೋ ಬಿಡ್ತೀಯೋ!'
ಹೇಮ್ಲ್ಯಾ ಮಗನನ್ನು ಕುರಿತು 'ಕೈ ಕಾಲ್ ಮುಕ ತೊಳ್‌ದು ಪಡಸಾಲೀನಾಗ ಓದಾಕ್ ಕುಂದುರು, ಇದೇ ಬಂದೆ' ಎಂದು ಆಜ್ಞೆ ಮಾಡಿದ್ದೇ ತಡ ಮಾರ ಕೋಲ್ ಬಸವನ ಥರಾ ಗೋಣಾಡಿಸಿ ಮನೆಕಡೆ ಹೊರಡುತ್ತಾನೆ.
ಇಷ್ಟೊದ್ದು ಸುಮ್ನಿದ್ದ ಧರಮ್ಯಾ 'ಅಲ್ಲಾ, ಸುದ್ದೀ ತಿಳೀತಾ, ಆ ಸಿದ್ದರಾಮೀದೂ ಬಾಳಾ ಒದ್ದಾಟನಪ್ಪಾ, ಇತ್ಲಾಗ್ ಜನ್ತಾ ದಳ್ ದಾಗ್ ಮುಖ್ಯಮಂತ್ರಿ ಆಗಲಿಲ್ಲ, ಅತ್ಲಾಗ್ ಗೌಡ್ರ ಮನ್ಯಾಗ ಒಳಗ್ ಸೇರಸ್‌ಲಿಲ್ಲ, ಹೋಗೀ-ಹೋಗಿ ಕಾಂಗ್ರೇಸ್ ಸೇರ್‌ಕ್ಯಾತನಂತ...'
ಹೇಮ್ಲ್ಯಾ ಮೀಸೆ ಮೇಲೆ ಕೈ ಆಡಿಸಿಕೊಂಡು 'ಆ ಇಡ್ಲಿ ದೇವತೆ ಬುದ್ಧಿನಾಗ್ಲೀ, ಈ ಜಯಲಲಿತಾ ಜಾಡನ್ನಾಗಲೀ ಯಾರ್ ಕಂಡೋರೋ? ಸಿದ್ಧರಾಮಣ್ಣ ಪ್ರದೇಶ್ ಕಾಂಗ್ರೇಸ್ ಅಧ್ಯಕ್ಷ ಆಗ್ಲೀ ಅಂತ ಹವಣಿಕಿ ನಡದತಿ ಆಷ್ಟೆ'
ಮೈಲಾರಿ 'ಓಹೋಹೋ, ಅದೇ ನಮ್ಮ ಸಿದ್ದರಾಮಿ, ನಿಮಗೆಲ್ಲ ವಿಷ್ಯ ಗೊತ್ತಿಲ್ಲ, ಸಿದ್ದರಾಮಿ ಇಡ್ಲಿ ದೇಶಕ್ಕೋಗಿ, ಅದೇನೋ ವಿದ್ಯೆ ಕಲ್‌ತಗ ಬಂದು ದೇವೇಗೌಡ್ರೂ ಮುಖಕ್ಕೆ ಮಸೀ ಬಳಸ್ ಬಕು ಅಂತ ಪ್ಲಾನಂತೆ, ನಿಮಗ್ಗೊತ್ತಿಲ್ಲಾ ಮತ್ತ!' ಎಂದು ಜೋರಾಗಿ ನಗತೊಡಗುತ್ತಾನೆ.
ಹೇಮ್ಲ್ಯಾ 'ಸುಮ್ಕಿರು ಕಾಕಾ, ಆ ಮನ್ಷಾ ಇವತ್ತಲ್ಲ ನಾಳಿ ಅದೆಂಗರ ಮಾಡಿ ಮುಖ್ಯಮಂತ್ರಿ ಆಗದಿದ್ರೆ ಕೇಳು'
ಧರಮ್ಯಾ 'ಯಾವನ್ಲಾ ಇವ, ಸುಮ್ ಸುಮ್ಕೆ ಮಾತಾಡ್‌ಬಾರ್ದು, ಮಲ್ಲಿಕಾರ್ಜುನ್ ಖರ್ಗೆ, ಸಿಂಧ್ಯ ಇವರೆಲ್ಲ ಏನ್ ಬಾಯಾಗ್ ಕಡಬ್ ತುಂಬಿಕ್ಯಂಡ್ ಕುತಗಂತಾರಾ ಮತ್ತ? ಕೆಲಸಿಲ್ಲ, ಬಗಸಿಲ್ಲ, ನಡಿ-ನಡಿ.'
ಮೈಲಾರಿ 'ಸಿದ್ದರಾಮಿ ಎತ್ಲಾಗರ ಹೋಗ್ಲಿ, ಇತ್ಲಾಗ್ ಬಿದ್ದರಾಮಿ ಆಗಿ ಮತ್ತ ಜೋಲ್ ಮೋರಿ ತೋರಿಸ್‍ದಿದ್ರೆ ಸಾಕ್ ನೋಡು' ಎಂದು ಹೇಳುವಷ್ಟರಲ್ಲಿ ಬಸ್ ಸ್ಟಾಂಡಿನಿಂದ ಲಕ್ಷ್ಮಿ ಬಸ್ಸು ಜನರನ್ನು ತುಂಬಿಸಿಕೊಂಡು ಮತ್ತೆ ವಾಪಾಸ್ ಹೊರಡುತ್ತದೆ. ಹೇಮ್ಲ್ಯಾ 'ಕಡೆಸಾಲಿಗೆ ಮನಿ ಕಡಿ ಬಂದ್ ಹೋಗ್ ಕಾಕಾ' ಎಂದು ಮೈಲಾರಿಗೆ ಹೇಳುತ್ತಲೇ ಎಲ್ಲರೂ ಒಂದೊಂದು ದಿಕ್ಕಿಗೆ ಚದುರತೊಡಗುತ್ತಾರೆ.