ಉಪ್ಪಿಟ್ಟಿನಲ್ಲಿ ಬಲವಿದೆ!
ಎಸ್.ಎಸ್.ಎಲ್.ಸಿ ಪಾಸಾದ ನಂತರ ಸಾಗರದ ಚಳಿಗೆ (ತಣ್ಣೀರು ಸ್ನಾನ ಮಾಡಬೇಕಲ್ಲ ಎಂದು) ಹೆದರಿಕೊಂಡು, ನಾನೇ ಅಡುಗೆ ಮಾಡಿಕೊಂಡು ತಿನ್ನಬೇಕಲ್ಲಪ್ಪಾ ಎಂಬ ಚಿಂತೆಯಿಂದ ಮನೆಬಿಟ್ಟು ಬಂದವನಿಗೆ ಇದ್ದಲಿ ಒಲೆ, ಸೀಮೆ ಎಣ್ಣೆ ಒಲೆ ಹಾಗೂ ನಾನು ತಂದ ಒಂದಿಷ್ಟು ಪಾತ್ರೆ, ತಟ್ಟೆ, ಲೋಟಾಗಳು ಬಹಳ ವರ್ಷಗಳವರೆಗೆ ಬಂದವು. ಸಾಗರದಲ್ಲಿ ಕಳೆದ ಐದು ವರ್ಷಗಳಲ್ಲಿ ಕ್ರಮೇಣ ಅಡುಗೆ ಮಾಡುವುದನ್ನು ಕಲಿತೆನಾದರೂ, ಇವತ್ತಿಗೂ ಹಲವಾರು ಫುಡ್ ನೆಟ್ವರ್ಕ್ಸ ಕಾರ್ಯಕ್ರಮಗಳನ್ನು ಲಾಗಾಯ್ತಿನಿಂದ ಬಾಯಿಬಿಟ್ಟುಕೊಂಡು ನೋಡುತ್ತಾ ಬಂದಿದ್ದರೂ, ನನಗೆ ಅಡುಗೆ ಮಾಡುವುದು ಹಾಗೂ ತಿನ್ನುವುದು ಎಂದರೆ ಅಷ್ಟಕಷ್ಟೇ. ಕೆಲವರಿಗೆ ಆಗುವಂತೆ ನನ್ನ ಕನಸಿನಲ್ಲಿಯೂ ಯಾವತ್ತೂ ಅಂತದ್ದನ್ನು ತಿನ್ನಬೇಕು, ಇಂತದ್ದನ್ನು ತಿನ್ನಬೇಕು ಎಂದೆನಿಸಿದ್ದಿಲ್ಲ. ಎಣಗಾಯಿ-ರೊಟ್ಟಿ ನನ್ ಮೆಚ್ಚಿನ ತಿಂಡಿಯಾದ್ರೂ ಅದು ನನಗೆ ವರ್ಷಕ್ಕೊಮ್ಮೆಯೂ ಸಿಗೋದಿಲ್ಲ. ಹಾಗಂತ ನಾನು ಉಪವಾಸ ಮಲಗೋದಿಲ್ಲ, ಎಲ್ಲೇ ಹೋಗಲಿ ಬರಲಿ, ಊಟವಂತೂ ನನಗೆ ಕಟ್ಟಿಟ್ಟ ಬುತ್ತಿ, ಹೇಗಾದರೂ ಮಾಡಿ ಅವತ್ತಿನ ಊಟ-ತಿಂಡಿ ದೊರೆತೇ ತೀರುತ್ತಾದ್ದರಿಂದ ನಾನು ಊಟ-ತಿಂಡಿಗಳನ್ನು ಉಪಚರಿಸುವುದಕ್ಕಿಂತಲೂ ಅವೇ ನನ್ನನ್ನು ಚೆನ್ನಾಗಿ ನೋಡಿಕೊಂಡಿವೆ. ಬೇಕಾದರೆ ಇವತ್ತಿನ ಉದಾಹರಣೆಯನ್ನೇ ತೆಗೆದುಕೊಳ್ಳಿ - ನಾನು ಆಫೀಸಿನಲ್ಲಿ ತಿಂಡಿ ತಿಂದರಾಯಿತು ಎಂದು ಹೊರಟೆ, ನನ್ನ ಸಹೋದ್ಯೋಗಿಯೊಬ್ಬ ತಾನು ತಿನ್ನಬೇಕೆಂದುಕೊಂಡು ಕ್ಯಾಫೆಟೇರಿಯಾದಿಂದ ಮಫಿನ್ ಒಂದನ್ನು ತಂದವನು ಅದನ್ನು ತಾನು ತಿನ್ನದೆ ನನಗೇ ಕೊಟ್ಟ! ಹೀಗೆ ಹಲವಾರು ವರ್ಷಗಳಿಂದ ಎಲ್ಲೆಲ್ಲಿ ಎಷ್ಟು ಸಿಗಬೇಕೋ ಅಷ್ಟಷ್ಟು ತಿನ್ನಲು ಸಿಗುತ್ತಿರುವುದರಿಂದ ಕಳೆದ ಹತ್ತು-ಹದಿನೈದು ವರ್ಷಗಳಲ್ಲಿ ನನ್ನ ತೂಕದಲ್ಲಿ ಬಹಳಷ್ಟು ವ್ಯತ್ಯಾಸವೇನೂ ಆಗಿಲ್ಲ.
ಊಟ ತಿಂಡಿಯ ವಿಷಯ ಹೇಳಿ ಉಪ್ಪಿಟ್ಟಿನ ಬಗೆಗೆ ಹೇಳದಿದ್ದರೆ ಈ ಬರಹವೇ ಅಪೂರ್ಣ: ಏಕೆಂದರೆ ನಾನು ಕೆಲವರು ಅನ್ನವನ್ನು ತಿನ್ನುವುದಕ್ಕಿಂತಲೂ ಹೆಚ್ಚಾಗಿ ಉಪ್ಪಿಟ್ಟನ್ನು ತಿಂದಿದ್ದೇನೆ - ಈ ಉಪ್ಪಿಟ್ಟನ್ನು ಹಲವಾರು ರೀತಿಯಲ್ಲಿ ಅವಲೋಕನ ಮಾಡಿಕೊಂಡಿದ್ದೇನೆ - ಆದ್ದರಿಂದಲೇ ಉಪ್ಪಿಟ್ಟು ನಾನು ದ್ವೇಷಿಸುವ ತಿಂಡಿಗಳಲ್ಲೊಂದು. ಸಾಗರದಲ್ಲಿ ಅಪರೂಪಕ್ಕೊಮ್ಮೆ ಹೊಟೇಲಿನಲ್ಲಿ ತಿಂಡಿ ತಿನ್ನುತ್ತಿದ್ದವನಿಗೆ ನನ್ನ ರೂಮಿನಲ್ಲಿ ಮಾಡುತ್ತಿದ್ದ ತಿಂಡಿಗಳೆಂದರೆ ಮೂರ್ಏ ಮೂರು - ಅವಲಕ್ಕಿ, ಉಪ್ಪಿಟ್ಟು ಅಥವಾ ಚಿತ್ರಾನ್ನ. ನನ್ನ ರೂಮಿನ ಮೆನ್ಯು ತುಂಬಾ ಸಿಂಪಲ್ಲು, ಸೋಮವಾರ ಬೆಳಗ್ಗೆ ಉಪ್ಪಿಟ್ಟಾದರೆ, ಮಂಗಳವಾರವೂ ಉಪ್ಪಿಟ್ಟೇ, ಬುಧವಾರ-ಗುರುವಾರಗಳೆರಡರೊಂದರಲ್ಲಿ ಅವಲಕ್ಕಿ ಸೇರಿಕೊಂಡರೆ, ಶುಕ್ರವಾರ-ಶನಿವಾರ-ಭಾನುವಾರಗಳಲ್ಲೂ ಉಪ್ಪಿಟ್ಟಿನ ಮಹಿಮೆಯೇ ಹೆಚ್ಚು. ಈ ಅವಲಕ್ಕಿಯನ್ನು ಹಲವು ತರಗಳಲ್ಲಿ ಮಾಡಿದಂತೆ ಉಪ್ಪಿಟ್ಟನ್ನಾಗಲೀ-ಚಿತ್ರನ್ನವನ್ನಾಗಲಿ ಹೆಚ್ಚು ವಿಧದಿಂದ ಮಾಡಲಾಗದು - ಹೆಚ್ಚೆಂದರೆ ಒಂದಿಷ್ಟು ಮಾವಿನಕಾಯಿಯ ತುರಿಯನ್ನು ಹಾಕಬಹುದು, ಅಥವಾ ಪೇಟೆಗಳಲ್ಲಿ ಮಾಡುವಂತೆ ಅನಾನಸ್ಸಿನ ತುಂಡುಗಳನ್ನು ಸೇರಿಸಬಹುದು, ಅದಿಲ್ಲವಾದರೆ ವಿಧಾನ ಬಹಳ ಸುಲಭ: ಮೀಡಿಯಂ ರವೆಯನ್ನು ಬಂಗಾರದ ಬಣ್ಣ ಬರುವವರೆಗೆ ಹುರಿದು, ಒಗ್ಗರಣೆಯನ್ನು ಶಾಸ್ತ್ರೋಕ್ತವಾಗಿ ಹಾಕಿ, ರವೆಗೆ ತಕ್ಕಷ್ಟು ನೀರನ್ನು ಒಗ್ಗರಣೆಯೊಂದಿಗೆ ಕುದಿಸಿ, ಅದಕ್ಕೆ ರವೆಯನ್ನು ಸುರಿಯುತ್ತಾ ಹಾಗೇ ಚಮಚೆಯಿಂದ ಎಲ್ಲೂ ಗಟ್ಟಿಯಾಗದಂತೆ ತಿರುವುತ್ತಾ ಬಂದರೆ ಹೊರಬರುವ ಎಂಡ್ ಪ್ರಾಡಕ್ಟ್ ಏನಿದೆಯೋ ಅದನ್ನೇ ಉಪ್ಪಿಟ್ಟು ಎಂದು ನಾನು ಕರೆಯುವುದು (ನಾನೇನು ಆಲ್ಟನ್ ಬ್ರೌನ್ ಕೆಟ್ಟೋದ್ನೇ ವೈಜ್ಞಾನಿಕವಾಗಿ ವಿವರಿಸೋಕೆ!). ನೀವು ನನಗೆ ರವೆಯನ್ನು ತೋರಿಸಿ, ನಾನು ಅದರಿಂದ ಇಂತದ್ದೇ ಉಪ್ಪಿಟ್ಟು ಆಗುತ್ತದೆ ಎಂದು ಹೇಳುತ್ತೇನೆ. ಇದೇ ಉಪ್ಪಿಟ್ಟನ್ನು ವಿಧವಿಧವಾದ ಆಡುಗೆ ಪದಾರ್ಥಗಳಿಂದ ಮಾಡಿಯೂ ಗೊತ್ತು, ಏನೂ ಇಲ್ಲದೇ ಬರೀ ಎಣ್ಣೆ, ಉಪ್ಪು, ಈರುಳ್ಳಿ, ರವೆಯಿಂದ ಮಾಡಿಯೂ ಗೊತ್ತು. ಹೀಗೆ ನಾನು ಮಾಡುತ್ತಿದ್ದ ಉಪ್ಪಿಟ್ಟನ್ನು ನನ್ನ ಬದಿಯ ರೂಮಿನವರಿಗೂ ಕೊಡುತ್ತಿದ್ದೆ, ಒಮ್ಮೆ ತಿಂಡಿಯ ಸಮಯಕ್ಕೆ ನನ್ನ ರೂಮಿಗೆ ಬಂದವರು ಮತ್ತೊಮ್ಮೆ ಆ ಕಡೆ ತಲೆಹಾಕಿ ಮಲಗುತ್ತಲೂ ಇರದುದ್ದರಿಂದ 'ಮಾಡಿದ್ದುಣ್ಣೋ ಮಹರಾಯ' ಎಂಬಂತೆ ನಾನು ಮಾಡಿದ್ದನ್ನು ನಾನೇ ತಿಂದುಕೊಂಡು ಮಾಡಿನೆಡೆಗೆ ನೋಡುತ್ತಾ ಕನಸು ಕಾಣಲು ಬಹಳಷ್ಟು ಸಮಯ ಸಿಗುತ್ತಿತ್ತು. ಎಷ್ಟೋ ಸಾರಿ, ನನ್ನ ಬಾಯಿಗೆ ಹೆದರಿ, ನನ್ನ ಕೈ ರುಚಿಯನ್ನು ಪ್ರಶ್ನಿಸುವ ಧೈರ್ಯ ಯಾರಿಗೂ ಬಂದಿದ್ದಿಲ್ಲ - ನನ್ನ ಎರಡನೇ ಅಕ್ಕ ನನ್ನನ್ನು 'ವೇದಾಂತಿ' ಎಂದು ಅಡ್ಡ ಹೆಸರಿನಿಂದ ಕರೆಯುತ್ತಿದ್ದುದೂ ಇದೇ ಕಾರಣಕ್ಕೆ - ಯಾವುದೇ ಒಂದು ವಿಷಯವನ್ನಾದರೂ ಕೊಡಿ, ಅದನ್ನು ಸಿದ್ಧಾಂತವನ್ನಾಗಿ ಮಾಡಿಬಿಡುತ್ತೇನೆ (ಅರ್ಥಾಥ್ ಕೊರೆಯುತ್ತೇನೆ), ಇನ್ನು ನಾನು ಮಾಡಿದ ಉಪ್ಪಿಟ್ಟನ್ನು ಹೀಯಾಳಿಸಿದರೆ ಸುಮ್ಮನೇ ಬಿಟ್ಟು ಬಿಡುತ್ತೇನೆಯೇ?
ಈ ರೀತಿ ತಿಂದ ಉಪ್ಪಿಟ್ಟೇ ನನಗೆ ಕಷ್ಟವನ್ನು ಸಹಿಸಿಕೊಳ್ಳೋ ಗುಣವನ್ನು ತಂದುಕೊಟ್ಟಿದೆ - ಬಾಯಿಗೆ ಇಟ್ಟಕೂಡಲೇ ಆಹಾರದ ನಿಜ ಬುದ್ದಿ ತಿಳಿಯುತ್ತದಾದರೂ ನಾನು ಈವರೆಗೆ ಯಾರಿಗೂ 'ಕೆಟ್ಟದಾಗಿ ಅಡುಗೆ ಮಾಡಿದ್ದೀರಿ' ಎಂದು ದೂರಿಲ್ಲ - ರೆಸ್ಟೋರಂಟ್ಗಳಲ್ಲಿ ಧಾರಾಳವಾಗಿ ಕ್ವಾಲಿಟಿ ನಿರೀಕ್ಷಿಸಿದಷ್ಟಿಲ್ಲವೆಂದು ಕಂಪ್ಲೇಂಟ್ ಮಾಡಿದ್ದೇನೆ!
ಮುಂದೆ ಸಾಗರ ಬಿಟ್ಟು ಮೈಸೂರು ಸೇರಿದರೆ ಅಲ್ಲೂ ಉಪ್ಪಿಟ್ಟೇ ಗಂಟು ಬೀಳುವುದೇ? ಕೆಲವು ತಿಂಗಳು ಹಾಸ್ಟೆಲಿನಲ್ಲಿ ಇದ್ದುದನ್ನು ಬಿಟ್ಟರೆ, ಇನ್ನು ಮಿಕ್ಕುಳಿದ ಸಮಯದಲ್ಲಿ ಗಂಗೋತ್ರಿಯ ಕ್ಯಾಂಟೀನಿನಲ್ಲಿ ನನ್ನ ಗೆಳೆಯ ರಾಜೇಶ 'ಕಾಂಕ್ರೀಟು' ಎಂದು ಕರೆಯುತ್ತಿದ್ದ ಉಪ್ಪಿಟ್ಟು-ಕೇಸರಿಬಾತ್ ಎರಡರ ಸಹವಾಸ ಆರಂಭವಾಯಿತು. ಆಗಲೇ ನನಗೆ ಮದುವೆ ಮನೆಗಳಲ್ಲಿ ಉಪ್ಪಿಟ್ಟು-ಕೇಸರಿಬಾತನ್ನು ಜೊತೆಯಾಗಿ ಏಕೆ ಕೊಡುತ್ತಾರೆ ಎಂದು ತಿಳಿದದ್ದು - ಒಮ್ಮೆ ತಿಂದರೆ ಕಾಂಕ್ರೀಟಿನೋಪಾದಿಯಲ್ಲಿ ಹೊಟ್ಟೆಯನ್ನು ಆವರಿಸಿಕೊಳ್ಳುವುದರಿಂದ ಕೊನೆಗೆ ಮಧ್ಯಾಹ್ನ ಜನ ಊಟ ಕಡಿಮೆ ಮಾಡಲಿ ಎಂದಿದ್ದಿರಬಹುದು!
***
ಹೀಗೆ ಉಪ್ಪಿಟ್ಟಿಗೆ ಸಂದ ಕೀರ್ತಿಯ ಬಹುಪಾಲು ನನ್ನ ಭುಜಗಳ ಮೇಲೆ ದಶಕಗಳಿಂದ ಮನೆಮಾಡಿರೋ ಸೋಮಾರಿತನ ಹಾಗೂ ಮೈಗಳ್ಳತನಗಳಿಗೆ ಸೇರಬೇಕು, ಇಂತಹ ಸೋಂಬೇರಿತನದ ದೆಸೆಯಿಂದ ಕೈಗೆ ಸಿಕ್ಕಿದ್ದನ್ನು ತಿಂದು 'ಬದುಕುವುದಕ್ಕಾಗಿ ತಿನ್ನಬೇಕು' ಎಂದು ವಾದ ಬದಲಾಯಿಸಿ ಬಡಪಾಯಿಕೊಚ್ಚುವ ನನ್ನ 'ವೇದಾಂತಿ'ತನಕ್ಕೂ ಅದರ ಕ್ರೆಡಿಟ್ಟು ದೊರೆಯಬೇಕು. ಹೈಸ್ಕೂಲು-ಕಾಲೇಜುಗಳಲ್ಲಿ ಬರೀ ಪ್ರೈಜ್ಗಳಿಸುವುದಕ್ಕೆಂದೇ ಚರ್ಚಾಸ್ಪರ್ಧೆಯಲ್ಲಿಟ್ಟಿದ್ದ ವಿಷಯಗಳ ಪರ ಅಥವಾ ವಿರೋಧವಾಗಿ ವಾದ ಮಾಡಿ ಮಾತನಾಡುವ ಅಭ್ಯಾಸ ಬದುಕಿನುದ್ದಕ್ಕೂ ಹೀಗೆ ಬರಬಾರದಿತ್ತು - ಮನುಷ್ಯನಾದವನು ಸರಿಯೋ-ತಪ್ಪೋ, ಒಳ್ಳೆಯದೋ-ಕೆಟ್ಟದ್ದೋ, ಪರವೋ-ವಿರೋಧವೋ ಎಂಬ ತರ್ಕಕ್ಕೆ ತನ್ನನ್ನು ಮೊದಲು ತೊಡಗಿಸಿಕೊಂಡು ಯಾವುದಾದರೊಂದನ್ನು ಹಚ್ಚಿಕೊಳ್ಳುತ್ತಾನೋ, ಅಥವಾ ಮೊದಲೇ ವಿಷಯವನ್ನು ಮನಸ್ಸಿಗೆ ತಂದುಕೊಂಡು ಕೊನೆಗೆ ಅದನ್ನು ಇಷ್ಟಪಟ್ಟಿದ್ದಕ್ಕೆ ಕಾರಣಗಳನ್ನು ಹುಡುಕುತ್ತಾನೋ ಎನ್ನುವ ಪ್ರಶ್ನೆಯ ಉತ್ತರವನ್ನು ನನಗಿಂತ ದೊಡ್ಡ 'ವೇದಾಂತಿ'ಗಳಿಗೆ ಬಿಡುತ್ತೇನೆ. ಎಲ್ಲಿಯವರೆಗೆ ಚರ್ಚಾಸ್ಪರ್ಧೆಯಲ್ಲಿ ಬಹುಮಾನಗಳಿಸುವುದು ಗುರಿಯಾಗುತ್ತದೆಯೋ, ಎಲ್ಲಿಯವರೆಗೆ ಮಾಡಿದ್ದನ್ನು ಸಾಧಿಸಿಕೊಳ್ಳುವ ಅಥವಾ ಅದಕ್ಕೊಂದು ವಿವರಣೆಯನ್ನು ಹೊಂಚಿಹಾಕುವ ಕುಹಕತನವಿರುತ್ತದೆಯೋ ಅಲ್ಲಿಯವರೆಗೆ ದಿನವೂ ಉಪ್ಪಿಟ್ಟು ತಿನ್ನುವ ಕಾಯಕ ಶಿಕ್ಷೆಯಾಗಲಿ!
***
ಬೋಲೋ ಬ್ಯಾಚೆಲರ್ ಲೈಫ್ ಕೀ...ಜೈ...ಉಪ್ಪಿಟ್ಟಿನಲ್ಲಿ ಬಲವಿದೆ! (ನಾವು ಶಾಲಾ ದಿನಗಳಲ್ಲಿ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ದಿನಗಳಂದು ಪ್ರಭಾತ್ಪೇರಿ ಹೋಗುತ್ತಿದ್ದಾಗ ಕೂಗುತ್ತಿದ್ದ 'ಬೋಲೋ ಭಾರತ್ ಮಾತಾ ಕೀ...ಜೈ...ಒಗ್ಗಟ್ಟಿನಲ್ಲಿ ಬಲವಿದೆ!' ಎಂಬುದನ್ನು ಅನುಕರಣೆ ಮಾಡುತ್ತಾ...)