ವಯಸ್ಸಾದವರ ಸಂಘಕ್ಕೆ - ಜೈ!
ಒಂದಂತೂ ನಿಜ, ನನ್ನ ತಲೆ ಜಡ್ಡು ಬಿದ್ದು ಹೋಗಿರೋದು. ಮೊದಲೆಲ್ಲಾ ಎಂಥಾ ಲೆಕ್ಕಗಳೂ ತಲೆಯಲ್ಲಿ ಹೊಳೆದು ಮಿಂಚಿ ಮಾಯವಾಗುತ್ತಿದ್ದರೆ ಈಗ ಎರಡರ ಮಗ್ಗಿಗೂ ಕ್ಯಾಲ್ಕುಲೇಟರ್ ಹಿಡಿಯುವ ಪರಿಸ್ಥಿತಿ! ಛೇ, ಛೇ, ಅಮೇರಿಕಕ್ಕೆ ಬಂದು ಹೀಗಾಯ್ತು ಅಂತ ಅಂದ್ರೆ ಅದು ನನ್ನ ತಪ್ಪಾಗಿ ಹೋದೀತು, ಬದಲಿಗೆ ನನ್ನನ್ನು ನಾನೇ ತಪ್ಪಿತಸ್ಥನನ್ನಾಗಿ ಮಾಡ್ಕೊಂಡ್ರೇ ಎಷ್ಟೋ ಚೆನ್ನ.
ನಿಮಗೂ ಹೀಗಾಗಿರಬಹುದು ಅಂತ ಕೇಳ್ದೆ ಅಷ್ಟೇ - ಮೊದಲೆಲ್ಲ ಎಷ್ಟೊಂದು ಕಷ್ಟ ಪಡ್ತಾ ಇದ್ದ ನೀವುಗಳು ಈಗೀಗ ಸುಲಭದ ದಾರಿ ಹಿಡಿಯೋದೂ ಅಲ್ದೇ ಬೆಚ್ಚಗಿನ ತಾಣ ಸಿಕ್ಕಿದ್ದನ್ನ ಬದಲಿಸಲಿಕ್ಕೆ ಹಿಂಜರಿತೀರೇನೋ? ಬರೀ ಬದಲಾವಣೆಯನ್ನಷ್ಟೇ ದ್ವೇಷಿಸದೇ ಬದಲಾವಣೆಯನ್ನು ಹೇರುವವರನ್ನೂ ಸಹ ನಿಮ್ಮ ಶತ್ರುಗಳ ಯಾದಿಗೆ ಸೇರಿಸಿಕೊಳ್ತೀರಾ? ಅಷ್ಟೇ ಅಲ್ಲ, ಅವರೆಲ್ಲರ ಹೆಸರಿನಲ್ಲಿ ಆಗಾಗ್ಗೆ ಶತನಾಮಾವಳಿಯನ್ನು ಉದುರಿಸುತ್ತಲೇ ಇರ್ತೀರಾ?
ಮೇಲಿನ ಪ್ರಶ್ನೆಗಳಿಗೆ ನಿಮ್ಮ ಉತ್ತರ ಹೌದು ಅಂತ ಆಗ್ಲೇ ಬೇಕು ಅಂತ ಏನಿಲ್ಲ, ಆ ವಾಕ್ಯಗಳನ್ನು ಓದುತ್ತಾ ಇರೋವಾಗ ಸ್ವಲ್ಪ ಸಿಂಪತಿ ತೋರ್ಸಿದ್ರೂನೂ ನಿಮ್ಮನ್ನ ನಮ್ಮ ಗುಂಪಿಗೆ ಸೇರಿಸಿಕೊಳ್ಳೋ ಹುನ್ನಾರವೊಂದು ನಮ್ಮ ಮನದಲ್ಲಿ ಮಿಂಚಿ ಮಾಯವಾಗ್ತಾ ಇರುತ್ತೆ - ಅಂದ್ರೆ ’ವಯಸ್ಸಾದವರ ಪ್ರಪಂಚದ’ ಸದಸ್ಯತ್ವ - ನಿಮಗೋಸ್ಕರ ಕಾಯ್ತಾ ಇರುತ್ತೆ. ಎಪ್ಪತ್ತರ ದಶಕದಲ್ಲಿ ಹುಟ್ಟಿದ ನಾವುಗಳು ಈಗಾಗ್ಲೇ ನಮ್ಮ ಎದುರಿನಲ್ಲಿ ಶೋಕಿ ಮಾಡೋ ಎಂಭತ್ತು ತೊಂಭತ್ತರ ದಶಕದವರನ್ನು ನೋಡಿ ’ಛೇ, ಅನುಭವವಿಲ್ಲದ ಜನ!’ ಎಂದು ಲೇವಡಿ ಮಾಡೋ ಹಾಗೆ ಮೇಲ್ನೋಟಕ್ಕೆ ಕಂಡ್ರೂನೂವೇ ಒಳಗೊಳಗೆ ಹೊಟ್ಟೇಕಿಚ್ಚು ಇರೋದೇ ಎಂದು ನಮ್ಮ ಸಂಘದ ಕರಾರುಗಳನ್ನು ಗಾಳಿಗೆ ತೂರಿ ನಿಮ್ಮ ನಡುವೆ ರಹಸ್ಯವನ್ನು ಓಪನ್ ಆಗಿ ಹಂಚಿಕೊಳ್ತಾ ಇದ್ದೀನ್ ನೋಡಿ, ನನ್ನ ಭಂಡ ಧೈರ್ಯಾನಾ. ಯಾಕೆ ಗೊತ್ತಾ, ಇವತ್ತಲ್ಲ ನಾಳೆ ನಮ್ಮ ಸಂಘವನ್ನು ಸೇರೋ ನಿಮಗೂ ಮೂಗಿನ ಮೇಲೆ ಒಂದಿಷ್ಟು ತುಪ್ಪಾ ಅಂತ ಹಚ್ಚದೇ ಇದ್ರೆ ಹೇಗೆ!
ಈ ’ವಯಸ್ಸಾದವರ ಪ್ರಪಂಚ’ದಲ್ಲಿ ಇನ್ನೇನೇನಿದೆ ಎಂದು ನಿಮಗೇನಾದ್ರೂ ಅನ್ಸಿರಬಹುದು - ಒಂದು ರೀತಿ ಪೀಕ್ ಪ್ರಿವ್ಯೂವ್ ಕೊಟ್ತೀನ್ ನೋಡಿ - ಈ ಪ್ರಪಂಚದಲ್ಲಿ ಬರೀ ಕೆಲ್ಸಾ ಸಾರ್. ಕೆಲ್ಸಾ ಇಲ್ದೇ ಹೋದ್ರೂ ಬರೀ ಜವಾಬ್ದಾರಿ. ಯಾರಿಗಪ್ಪಾ ಬೇಕು ಇದು ಅಂತ ಎಷ್ಟೋ ಸರ್ತಿ ಅನ್ಸಿ ಎಲ್ಲಾದ್ರೂ ಓಡ್ ಹೋಗೋಣ ಅನ್ನೋಷ್ಟರ ಮಟ್ಟಿಗೆ ಬೇಸರ ಹುಟ್ಟೋಷ್ಟು ಕೆಲ್ಸ, ಅದರ ಜೊತೆಗೆ ಜವಾಬ್ದಾರಿ. ನಿಮಗೋಸ್ಕರ ಒಂದು ಸ್ಪೆಷಲ್ ಉದಾಹರಣೆ ಕೊಡ್ತೀನ್ ನೋಡಿ - ಎಲ್ಲಿ ಜೋರಾಗಿ ಕಾರ್ ಓಡ್ಸಿದ್ರೆ ಮಾಮಾ ಬೆನ್ನ ಹಿಂದೆ ಬಿದ್ದು ಟಿಕೇಟ್ ಕೊಡ್ತಾನೋ ಅನ್ನೋ ಹೆದರಿಕೆ ಯಾಕೆ ಬರುತ್ತೇ ಅಂದ್ರೆ ಒಂದು ಆ ಟಿಕೆಟ್ಟಿಗೆ ಕಟ್ಟೋ ದುಡ್ಡನ್ನ ಹೇಗೆ ಹೊಂದಿಸೋದು ಅನ್ನೋ ಕಷ್ಟದಿಂದ ಮತ್ತೆ ನಮ್ಮ ಮನೆಯ ಸಣ್ಣವರೆದುರು ನಮಗೆ ಶಿಕ್ಷೆ ವಿಧಿಸಿದ್ದನ್ನ ಒಪ್ಪಿಕೊಳ್ಳಬೇಕಲ್ಲಾ ಅಂತ - ಗಂಡ್ ಸತ್ತ ದುಕ್ಕಾ ಒಂದ್ ಕಡೆ, ಬೊಡ್ ಕೂಪಿನ್ ಉರಿ ಮತ್ತೊಂದು ಕಡೆ ಅಂತಾರಲ್ಲ ಹಾಗೆ. ಆದ್ರೆ, ಜೀವನದಲ್ಲಿ ಸುಮಾರಾಗಿ ಎಲ್ಲ ಅಡ್ರಿನಲಿನ ಅಗತ್ಯಗಳನ್ನು ಪೂರೈಸಿಕೊಂಡ ನಮಗೆ ಕಾರನ್ನು ಜೋರಾಗಿ ಓಡಸಲೇ ಬೇಕಾದ್ದು ಮತ್ತೊಂದು ಅಗತ್ಯ ಏಕೆಂದ್ರೆ ಅವರೂ-ಇವರೂ ಇವರೆಲ್ಲರನ್ನೂ ಸಂತೈಸಿ ಖುಷಿ ಪಡಿಸಿ ನಾವ್ ಹೊರಡೋ ಅಷ್ಟರಲ್ಲಿ ಯಾವತ್ತೂ ನಿಧಾನ-ತಡ-ಲೇಟ್ ಅನ್ನೋದು ಕಾಮನ್ನಾಗಿ ಹೋಗಿಬಿಟ್ಟಿದೆ.
ಮೊನ್ನೆ ಪಾರ್ಕಿನಲ್ಲಿ ನಮ್ಮ ಸಂಘದ ಹಿರಿಯ ವ್ಯಕ್ತಿ ಒಬ್ಬ - ನಾಲ್ಕು ಮಕ್ಕಳ ತಂದೆ ಸಿಕ್ಕಿದ್ದ. ಅವನ ಕಷ್ಟಾ ನೋಡಲಾರ್ದೆ ನನಗೇ ಕರುಳು ಚುರುಕ್ ಅಂದು ಹೋಗಿ ಕರಕೊಂಡ್ ಹೋಗಿ ಒಂದು ಕಾಫಿ ಕುಡಿಸಿದೆ. ’ಬೇಜಾರ್ ಮಾಡ್ಕೋಬೇಡ ಕಣಣ್ಣಾ!’ ಎಂದು ನನ್ನ ಸಂತಾಪದ ಮಾತು ಕೇಳ್ಸಿಕೊಂಡು ಇನ್ನೇನು ಅಳೋ ಮುಸುಡಿ ಮಾಡಿಕೊಂಡಿದ್ದ ಪುಣ್ಯಾತ್ಮ. ಒಂದು ಕಾಲದಲ್ಲಿ ಗರಿಗರಿ ಇಸ್ತ್ರಿ ತಾಗಿಸಿಕೊಂಡ ಬಟ್ಟೆ ಹಾಕುತ್ತಿದ್ದ ಅವನು ಇವತ್ತು ಕೇವಲ ಡ್ರೈಯರಿನಿಂದ ಕೊರಳಿಗೆ ಇಳಿಯೋ ಟೀಶರ್ಟುಗಳಿಗೆ ಮೊರೆ ಹೊಕ್ಕಿದ್ದಾನೆ. ಒಂದು ಕಾಲದಲ್ಲಿ ಒಳ್ಳೇ ಹಳೇ ಕನ್ನಡ ಸಿನಿಮಾದ ಹೀರೋ ಥರ ಕ್ರಾಪು ತೆಗೆದು ಬಾಚುತ್ತಿದ್ದವನು ಇವತ್ತು ಕಪ್ಪು ಕೂದಲಿಗಿಂತ ಬಿಳಿ ಕೂದಲು ಹೆಚ್ಚಾದ ತಲೆಯನ್ನು ಕಾಲು ಇಂಚಿಗಿಂತ ತುಸು ಎತ್ತರದಲ್ಲಿ ಕೂದಲು ಇರುವಂತೆ ಎಲ್ಲ ಕಡೆ ಒಂದೇ ಎತ್ತರಕ್ಕೆ ಚೀಪ್ ಹೇರ್ ಕಟಿಂಗ್ ಮಾಡಿಸಿಕೊಂಡಿದ್ದಾನೆ. ಇನ್ನು ಅವನು ಹಾಕಿದ ಶೂ ಮೇಲೆಲ್ಲ ಮಕ್ಕಳ ಆಹಾರದ ಕಲೆಗಳಿದ್ದವು, ಜೊತೆಗೆ ಅವನ ಪ್ಯಾಂಟೂ-ಸಾಕ್ಸು ಮ್ಯಾಚ್ ಆಗುವುದಿರಲಿ ಸದ್ಯ ಎರಡೂ ಒಂದೇ ಬಣ್ಣದವನ್ನು ಹಾಕಿಕೊಂಡಿದ್ದಾನೇ ಅನ್ನೋದೇ ನಮ್ಮ ಮಾತಿನ ನಡುವೆ ದೊಡ್ಡ ಸಮಾಧಾನದ ವಿಷಯವಾಗಿತ್ತು. ’ಬಾ, ನಮ್ಮನೇಗೇ...’ ಎಂದು ಅವನು ಕೊಟ್ಟ ಔತಣದ ಹಿಂದಿನ ಸ್ವಗತ ’ಇನ್ನು ಇವನು ಬಂದ್ರೆ ಮನೆ ಕ್ಲೀನ್ ಮಾಡಬೇಕಲ್ಲಪ್ಪಾ ನಾನು...’ ಎನ್ನೋದು ನನಗೂ ಕೇಳಿಸಿತ್ತು. ನಾನು ಹೇಳಿದ ’ಇರು ಗುರೂ, ಇನ್ನೂ ಸ್ವಲ್ಪ ಹೊತ್ತು ಮಾತಾಡೋಣ...’ ಎನ್ನೋ ಮಾತುಗಳು ಕೇಳಿದ್ರೂ ಕೇಳಿಸದ ಹಾಗೆ ’ನನ್ನ ಚಿಕ್ಕ ಮಗಳಿಗೆ ಅದೇನೋ ಪ್ರಾಕ್ಟೀಸ್ ಇದೆ...’ ಎಂದು ಗೊಗ್ಗರು ಧ್ವನಿಯಲ್ಲಿ ಹೇಳಿಕೊಳ್ಳುತ್ತಲೇ ಅವನ ಕಾರಿನ ಹತ್ತಿರ ಹೋದ. ನಾನು ’ಬೈ’ ಹೇಳೋಣವೆಂದು ಅವನ ಕಾರಿನ ಹತ್ತಿರ ಹೋದರೆ ಅಲ್ಲಿ ಹಿಂದಿನ ಸೀಟಿನಲ್ಲಿ ಹಲವು ಶತಮಾನದ ಆಹಾರದ ಪದಾರ್ಥಗಳ ಪುಡಿ-ಸ್ಯಾಂಪಲ್ಲು-ವಾಸನೆ ಇವೆಲ್ಲ ಸೇರಿಕೊಂಡು ಬಿಸಿಲಿಗೆ ಮೀಟಿಂಗ್ ನಡೆಸುತ್ತಿದ್ದವು. ಅವನ ಕಾರಿನ ಸೀಟುಗಳು ಎಷ್ಟು ಕೊಳೆಯಾಗಿದ್ದವೆಂದರೆ ಒಂದೊಂದು ಸೀಟಿನ ಫ್ಯಾಬ್ರಿಕ್ ಅದರ ಒದರ ಒರಿಜಿನಲ್ ಕಲರ್ ಕಳೆದುಕೊಂಡು ಜವರಕ್ಕನ ಮನೆಯ ಕೌದಿಯಂತೆ ಬಿಸಿಲ ಕಾಯಿಸಿಕೊಳ್ಳುತ್ತಿದ್ದವು. ನಾನು ಹತ್ರ ಹೋದ್ರೆ ಇನ್ನೆಲ್ಲಿ ಕಾಯ್ಲೆ ಬರುತ್ತೋ ಅಂತ ದೂರದಿಂದಲೇ ’ನಮಸ್ಕಾರ ಸಿಗೋಣ ಮತ್ತೆ!’ ಎಂದು ಗಟ್ಟಿಯಾಗೇನೋ ಅಂದ್ರೆ, ಆದರೆ ’ಮತ್ತೆ...’ ಎಂದು ಹೇಳಿದ್ದನ್ನು ಮತ್ತೆ-ಮತ್ತೆ ನನ್ನ ಮನಸ್ಸು ಪ್ರಶ್ನಿಸಿಕೊಳ್ಳುತ್ತಲೇ ಇತ್ತು ಎಷ್ಟೋ ಹೊತ್ತು.
ನೋಡಿ ಎಂಥಾ ಅದ್ಭುತ - ಬ್ರಾಡ್ವೇ ಶೋಗಳನ್ನು ನೋಡಿ ಬದುಕನ್ನು ಸಾಗಿಸಬೇಕಾದವರು ’ಬಾರ್ನಿ ಅಂಡ್ ಫ್ರೆಂಡ್ಸ್’ ನೋಡೋ ಹಾಗಾಯ್ತು. ದಿನಾ ಸ್ಟಾರ್ಬಕ್ಸ್ ಕಾಫಿ ಕುಡಿಯೋರು ಸ್ಯಾಮ್ಸ್ ಕ್ಲಬ್ಬಿನ ಮೆಂಬರ್ಸ್ ಮಾರ್ಕ್ ಕಾಫಿಗೆ ಜೋತು ಬಿದ್ದಾಯ್ತು. ರೇಟೆಡ್ R ಇರಲಿ, PG-13 ಕಥೆ/ಸಿನಿಮಾಗಳನ್ನೂ ನೋಡೋಕೆ ಟೈಮೇ ಸಿಗದೇ, ಬರೀ G ರೇಟೇಡ್ ಕಾರ್ಟೂನುಗಳನ್ನು ನೋಡೋದೇ ಬದುಕಾಯ್ತು. ಇನ್ನೊಂದೇನ್ ಗೊತ್ತಾ ಈ ಸಂಘದಲ್ಲಿ ಹೆಚ್ಚು ಹೆಚ್ಚು ಸೀನಿಯಾರಿಟಿ ದೊರೆತಂತೆಲ್ಲಾ ಯಾರೂ ಯಾರಿಗೂ ಸಿಂಪತಿ ಹೇಳೋದೇ ಇಲ್ಲಾ! ನಮ್ಮ್ ನಮ್ಮ್ ಮೀಟಿಂಗ್ಗಳಲ್ಲಿ ಯಾವ್ದೇ ಅಜೆಂಡಾ ಅಂತ ಇರೋದೇ ಇಲ್ಲ. ಮೀಟಿಂಗುಗಳಿಗೆ ಕೆಲವರು ಹಲವು ನಿಮಿಷ ಲೇಟಾಗಿ ಬರೋದು ಖಾಯಂ, ಇನ್ನು ಕೆಲವರು ಸೋಮವಾರದ ಮೀಟಿಂಗ್ಗೆ ಮಂಗಳವಾರ ಬಂದಿದ್ದೂ ಉಂಟು! ಮರ್ಸೇಡಿಸ್ಸೂ, ಬಿಎಮ್ಡಬ್ಲೂ ಕಾರುಗಳನ್ನು ಹೊಡೀ ಬೇಕು ಅನ್ನೋ ಆಸೆ ಇರೋ ನಮಗೆಲ್ಲಾ ಸಿಗೋದು ಯಾವ್ದೋ ತಗಡು ಮಿನಿವ್ಯಾನುಗಳು. ನಮ್ಮನ್ನು ದಾರಿಯಲ್ಲಿ ನೋಡೋ ಜನಗಳೂ ಸಹ ದೂರವೇ ಇರ್ತಾರೆ. ಪೋಲೀಸ್ನೋರೂ ಸಹ ಟಿಕೇಟ್ ಕೊಡಬೇಕಾದ್ರೆ ಯೋಚಿಸ್ತಾರೆ - Poor soul - ಅಂತ ಸಂತಾಪ ಸೂಚಿಸ್ತಾರೆ. ಟಿಕೇಟ್ ಕೊಡೋದ್ ಹಾಗಿರ್ಲಿ ನೀವ್ ಯಾವತ್ತಾದ್ರೂ ಒಂದು ಮಿನಿವ್ಯಾನ್ ಹಿಂದೆ ಪೋಲೀಸ್ ಚೇಸ್ ಮಾಡಿಕೊಂಡು ಹೋಗಿದ್ದನ್ನ ನೋಡಿದಿರೇನು? ಉಳಿದೆಲ್ಲ ಕಾರುಗಳು ಝೀರೋದಿಂದ ಅರವತ್ತಕ್ಕೆ ಹೋಗೋಕೆ ಆರು ಸೆಕೆಂಡ್ ತಗೊಂಡ್ರೆ ಈ ಮಿನಿವ್ಯಾನುಗಳು ಅದರಲ್ಲಿ ಕೂತಿರೋರ ಸಂಕಷ್ಟವನ್ನು ಅರವತ್ತು ಮೈಲಿ ವೇಗದಲ್ಲಿ ಓಡಿಸೋಕೆ ಅರವತ್ತು ನಿಮಿಷಗಳಾದ್ರೂ ಬೇಕು - ಅಂತಾ ಪರಿಸ್ಥಿತಿ.
ನಾನು ಈ ಲೇಖನವನ್ನು ಯಂಗ್ ಅಂಡ್ ಎನರ್ಜೆಟಿಕ್ ಆಗಿರೋ ಓದುಗರಿಗೆ ಬರೆದಿರೋದು ಅನ್ನೋದರಲ್ಲಿ ಸಂಶಯವೇನೂ ಇಲ್ಲ. ಆದ್ರೆ ನಮ್ಮ ಸಂಘದ ಯಾರಾದ್ರೂ ಇದನ್ನ ಓದಿ ನನ್ನ ಮೇಲೆ ಕಂಪ್ಲೇಂಟ್ ಮಾಡಿದ್ರೆ ಅನ್ನೋ ಹೆದರಿಕೆ ನನಗೆ ಇಲ್ಲವೇ ಇಲ್ಲ. ಏಕೆಂದ್ರೆ ಒಂದು - ಅವರ ಮನೆಯ ಕಂಪ್ಯೂಟರ್ಗೆ ಅವರು ಲಾಗಿನ್ ಆಗಿ ಈ ಕನ್ನಡವನ್ನು ಓದೋದು ಅಷ್ಟರಲ್ಲೇ ಇದೆ, ಎರಡು - ಅಕಸ್ಮಾತ್ ಅವರು ಓದಿದ್ರೂ ’ಸರಿಯಾಗೇ ಹೇಳ್ದ’ ಅನ್ನೋ ಸಾಂತ್ವನದ ಮುಂದೆ ಅವರು ನಮ್ಮ ಸಂಘಕ್ಕೆ ಹೋಗಿ ಕಂಪ್ಲೇಂಟ್ ಮಾಡೋದೇ ಇಲ್ಲ ಅನ್ನೋ ಭರವಸೆ ನನಗಂತೂ ಖಂಡಿತ ಇದೆ.
ನೀವ್ ಯಾವ ಸಂಘಕ್ಕೆ ಸೇರಿದವರು? ನಿಮ್ಮ ಸಂಘದ ಬಗ್ಗೆ ಒಂದಿಷ್ಟು ಬರೀತೀರಾ ತಾನೆ?