Sunday, September 30, 2007

ನಿತ್ಯ ಹರಿದ್ವರ್ಣ ಕಾಡುಗಳಲ್ಲಿನ ಸವಾಲುಗಳೇ ಬೇರೆ...

ಇಷ್ಟು ದಿನ ಎಲ್ಲಿತ್ತೋ ಏನೋ ಈಗ ದಿಢೀರನೇ ಬಂದ ಸ್ನೇಹಿತನ ಹಾಗೆ ಸೆಪ್ಟೆಂಬರ್ ಕೊನೇ ಹಾಗೂ ಅಕ್ಟೋಬರ್ ಮೊದಲ ವಾರದಲ್ಲಿ ನಾವು ಮುಂಗಾರು ನಿರೀಕ್ಷಿಸೋ ಹಾಗೆ ಮುಂಬರುವ ಛಳಿಗಾಲವನ್ನು ನಿರೀಕ್ಷಿಸೋದು ಅಭ್ಯಾಸವಾಗಿ ಹೋಗಿಬಿಟ್ಟಿದೆ. ಕಳೆದ ವರ್ಷದ ಛಳಿ ಹಾಗಿತ್ತು ಹೀಗಿತ್ತು, ಇನ್ನು ಮುಂಬರುವ ಛಳಿ ಹೇಗಿರುತ್ತೋ ಏನೋ ಎಂಬುದು ಕೆಲವು ಮಾತುಕಥೆಗಳನ್ನು ಆರಂಭಗೊಳಿಸಬಲ್ಲ ವಾಕ್ಯವಾಗಬಹುದು.

ನಾನು ಈ ದೇಶಕ್ಕೆ ಬಂದ ಹೊಸತರಲ್ಲಿ ಮೊದಮೊದಲು ಆಫೀಸಿನ ಎಲಿವೇಟರುಗಳಲ್ಲಿ ಯಾರಾದರೂ What a nice day! ಅಥವಾ Its very nice outside! ಎಂದು ಉದ್ಗಾರವೆತ್ತಿದಾಗೆಲ್ಲ ’ಅಯ್ಯೋ, ಇವರೆಲ್ಲ ಬದುಕಿನಲ್ಲಿ ಬಿಸಿಲನ್ನೇ ನೋಡದವರ ಹಾಗೆ ಆಡುತ್ತಿದ್ದಾರಲ್ಲ!’ ಎಂದು ಸ್ವಗತವನ್ನಾಡಿಕೊಳ್ಳುತ್ತಿದ್ದೆ. ಆದರೆ ನಾನೂ ಈಗ ಅವರಂತೆಯೇ ಆಗಿ ಹೋಗಿದ್ದೇನೆ. ಚೆನ್ನಾಗಿ ಬಿಸಿಲು ಇದ್ದಾಗ ಅದೇನು ಮಾಡುತ್ತೇವೋ ಬಿಡುತ್ತೇವೋ ಆದರೆ ಕೆಟ್ಟ ಛಳಿ ಇದ್ದಾಗೆಲ್ಲ ರಜೆ ಇದ್ದರೂ ಇರದಿದ್ದರೂ ಗೂಡು ಸೇರಿಕೊಂಡು ಬಿಡೋದು ಕೊನೇಪಕ್ಷ ನನ್ನ ಅನುಭವ. ಹೀಗೆ ಬರೋ ಛಳಿ, ವಾತಾವರಣದ ಉಷ್ಣತೆಯನ್ನಷ್ಟೇ ಕಡಿಮೆ ಮಾಡಿದ್ದರೆ ಪರವಾಗಿರಲಿಲ್ಲ, ದಿನದಲ್ಲಿ ಸೂರ್ಯನ ಬೆಳಕು ಬೀಳುವ ಅವಧಿಯನ್ನೂ ಕುಗ್ಗಿಸುವುದು ಕೂಡ ಮನಸ್ಸಿಗೆ ಸಾಕಷ್ಟು ಹಿಂಸೆಯನ್ನು ಉಂಟು ಮಾಡಬಲ್ಲದು. ಡಿಸೆಂಬರ್ ಇಪ್ಪತ್ತೊಂದರ ಹೊತ್ತಿಗೆಲ್ಲಾ ದಿನದ ಸೂರ್ಯನ ಬೆಳಕು ಕೆಲವೇ ಕೆಲವು ಘಂಟೆಗಳಿಗೆ ಸೀಮಿತವಾಗಿ ಇನ್ನೇನು ಪ್ರಪಂಚವೇ ಛಳಿಯಲ್ಲಿ ಸೋಲುತ್ತಿರುವ ಅನುಭವವನ್ನು ಉತ್ತರ ಅಮೇರಿಕಾ ಖಂಡದವರಿಗೆ ಹುಟ್ಟಿಸುತ್ತದೆ.

ಛಳಿ ತನ್ನ ಬೆನ್ನ ಹಿಂದೆ ಹೊತ್ತು ತರುವ ವ್ಯವಹಾರಗಳ ಯಾದಿ ದೊಡ್ಡದು - ಹಿಮ ಬೀಳುವುದನ್ನು ತೆಗೆಯಲು, ಬೆಚ್ಚಗಿನ ಬಟ್ಟೆಗಳನ್ನು ಹೊದೆಯಲು, ಮುಖ-ಮೈ ಚರ್ಮ ಒಡೆದು ಹೋಗದ ಹಾಗೆ ಕ್ರೀಮ್ ಅನ್ನು ಮೆತ್ತಿಕೊಳ್ಳಲು, ಕಾರು-ಮನೆಗಳಲ್ಲಿ ಬೆಚ್ಚಗಿನ ವಾತಾವರಣವನ್ನು ಇಟ್ಟುಕೊಳ್ಳಲು - ವ್ಯಕ್ತಿಯ ಮಟ್ಟದಲ್ಲಿ ಹಾಗೂ ಸಂಸ್ಥೆಗಳಿಗೂ ಅನುಗುಣವಾಗುವಂತೆ ಇನ್ನೂ ಅನೇಕ ರೀತಿಗಳಲ್ಲಿ ಛಳಿ ಇನ್‌ಫ್ಲೂಯೆನ್ಸ್ ಮಾಡುತ್ತದೆ. ಬಿಸಿಲಿನಲ್ಲಿ ಒಂದು ರೀತಿಯ ಸಮಾನತೆಯ ಮಟ್ಟವನ್ನು ಗುರುತಿಸಿದರೂ ಛಳಿಯಲ್ಲಿ ಜನ ತಮ್ಮ ಅನುಕೂಲಕ್ಕೆ ತಕ್ಕಂತೆ ಬದಲಾದ ಹಾಗೆ ಕಂಡು ಬಂದಿದ್ದು ನನ್ನ ಭ್ರಮೆ ಇದ್ದಿರಬಹುದಾದರೂ, ವರ್ಷದ ಆರು ತಿಂಗಳು ಭಾರತದ ಉದ್ದಗಲಕ್ಕೂ ಇದೇ ರೀತಿ ಛಳಿ/ಹಿಮ ಬಿದ್ದು ಹೋಗಿದ್ದರೆ ಏನೇನೆಲ್ಲ ಬದಲಾಗುತ್ತಿತ್ತು ಎಂದು ನಾನು ಬಹಳಷ್ಟು ಯೋಚಿಸಿದ್ದಿದೆ. ಬಿಸಿಲಿನಲ್ಲಿ ಕಂಬಳಿ ಹೊರುವ ನಮ್ಮೂರಿನ ಗ್ವಾರಪ್ಪಗಳಿಂದ ಹಿಡಿದು ರಸ್ತೆ-ರಸ್ತೆಗಳಲ್ಲಿ ಭಿಕ್ಷೆ ಬೇಡುವವರಿಂದ ಹಿಡಿದು ಉಳ್ಳವರ ವರೆಗೆ ಏನೇನೇಲ್ಲ ಬದಲಾಗುತ್ತಿತ್ತು. ಇಲ್ಲಿನ ರಸ್ತೆಗಳು ಅಗಲವಾಗಿರುವುದಕ್ಕೆ ಕಾರಣ ವರ್ಷದ ಮೂರು ತಿಂಗಳು ಬೀಳುವ ಹಿಮ ಎಂದು ಹೇಳಲು ಯಾವ ಸಮೀಕರಣವನ್ನು ಹುಡುಕಲಿ? ಇಲ್ಲಿನ ಜನರು ವ್ಯವಸ್ಥಿತವಾದ ಮನೆಗಳಲ್ಲಿ ಇದ್ದು, ಪ್ರಪಂಚದ ಎಲ್ಲರಿಗಿಂತ ಹೆಚ್ಚು ಸಂಪನ್ಮೂಲ ಹಾಗೂ ಶಕ್ತಿಯನ್ನು ಬಳಸುವುದನ್ನು ಯಾವ ತತ್ವದಿಂದ ದೃಢೀಕರಿಸಲಿ? ವರ್ಷದಲ್ಲಿ ಮೂರು-ನಾಲ್ಕು ತಿಂಗಳು ಬೀಳುವ ಹಿಮ ಜನರ ಜೀವನದಲ್ಲಿ ಬಹಳಷ್ಟು ಬದಲಾವಣೆಗಳು ಹುಟ್ಟಿಸುತ್ತದೆ ಎನ್ನುವುದಾದರೆ, ಅಂತಹ ಬದಲಾವಣೆಗಳು ಎಲ್ಲರ ದೃಷ್ಟಿಯಲ್ಲಿ ಒಳ್ಳೆಯವು ಎಂದು ಹೇಳಲು ಬಾರದಿದ್ದರೂ ನಾನಂತೂ ಅವುಗಳನ್ನು ಮುಕ್ತ ಮನಸ್ಸಿನಿಂದ ಸ್ವಾಗತಿಸುತ್ತೇನೆ.

ನಿತ್ಯ ಹರಿದ್ವರ್ಣ ಕಾಡುಗಳಲ್ಲಿನ ಸವಾಲುಗಳು ಬೇರೆ - ಅಲ್ಲಿನ ಮರಗಳಿಗೆ ಒಂದಕ್ಕಿಂತ ಒಂದು ಹೆಚ್ಚು ಎತ್ತರಕ್ಕೆ ಬಲಶಾಲಿಯಾಗಿ ಬೆಳೆದು ಸೂರ್ಯನ ಕಿರಣಗಳನ್ನು ತಾವೇ ಮೊದಲು ಮುಟ್ಟಬೇಕು ಎಂಬ ಮಹದಾಸೆ, ತಮ್ಮ ಎಲೆಗಳು ವರ್ಷದಲ್ಲಿ ಎಲ್ಲ ದಿನಗಳೂ ದ್ಯುತಿಸಂಶ್ಲೇಷಣೆಯಿಂದ ಬೇಕಾದ ಶಕ್ತಿಯನ್ನು ಪೂರೈಸುವ ಎಂದೂ ನಿಲ್ಲದ ಕಾರ್ಖಾನೆಗಳಿದ್ದ ಹಾಗೆ. ಆದರೆ ಈ ಛಳಿ ಪ್ರದೇಶದ ಮರಗಳೋ ವರ್ಷಕ್ಕೊಮ್ಮೆ ತಮ್ಮ ತಮ್ಮ ಎಲೆಗಳ ಸಂತತಿಯನ್ನು ರಿ ನ್ಯೂ ಮಾಡದೇ ವಿಧಿಯೇ ಇಲ್ಲ, ವರ್ಷದಲ್ಲಿ ಕೆಲವೊಮ್ಮೆ ಆರು ತಿಂಗಳು ಎಲೆಗಳಿಲ್ಲ ಬೋಳು ಮರಗಳು ಒಣ ಕಟ್ಟಿಗೆಗಳ ಹಾಗೆ ಕೊನೆ ಕೊನೆಗೆ ಗಾಳಿ ಬೀಸಿದರೂ ತೊನೆದಾಡದ ಸ್ಥಿತಿಯನ್ನು ತಲುಪಿಹೋಗುತ್ತವೆ. ಸೂರ್ಯನ ಬೆಳಕು ಬಿದ್ದರೂ ಅದು ನೇರವಾಗಿ ತಮ್ಮ ಮೇಲೆ ಬೀಳದ ಹಾಗೆ ಹಿಮ ಮುಸುಕಿದ್ದರೂ ಎಂತಹ ಕೆಟ್ಟ ಛಳಿಯಲ್ಲಿ ಬದುಕುಳಿಯುವ ದಿಟ್ಟತನವನ್ನು ಹುಟ್ಟಿನಿಂದ ಪಡೆದುಕೊಂಡು ಬರುತ್ತವೆ. ಈ ಹೊರಗಿನ ಮರಗಳ ಕಷ್ಟವನ್ನು ನೋಡಲಾರದೇ ನಮ್ಮಂತಹವರ ಮನೆಯ ಒಳಗೆ ಬೇಸಿಗೆಯಲ್ಲಿ ಸೊಂಪಾಗಿ ಬೆಳೆಯುವ ಮಲ್ಲಿಗೆ-ತುಳಸಿ-ಬಾಳೆ ಗಿಡಗಳು ಛಳಿಗಾಲದಲ್ಲಿ ಸುರುಟಿಕೊಂಡಿದನ್ನು ನಾನು ಕಣ್ಣಾರೆ ನೋಡಿದ್ದೇನೆ. ಛಳಿ ಪ್ರದೇಶದ ಪ್ರಾಣಿ ಪಕ್ಷಿಗಳು ಖಂಡಿತವಾಗಿ ಭಿನ್ನವಾದವುಗಳು. ನಮ್ಮೂರಿನ ಪಾರಿವಾಳ-ಕಾಗೆ-ಗುಬ್ಬಿಗಳ ಹಾಗೆ ಇಲ್ಲಿಯವುಗಳಲ್ಲ, ನಮ್ಮೂರಿನ ಕೆರೆಗಳಲ್ಲಿ ಈಜು ಹೊಡೆಯುವ ಹಂಸಗಳು ಇಲ್ಲಿಯವಲ್ಲ, ಇಲ್ಲಿನ ಅಳಿಲುಗಳೂ ಸಹ ಭಿನ್ನವಾದವುಗಳೇ. ಅವುಗಳ ಪ್ರಬೇಧ ಒಂದೇ ಇರಬಹುದು ಆದರೆ ಅವುಗಳ ನಡತೆ, ಅವು ವಾತಾವರಣಕ್ಕೆ ಹೊಂದಿಕೊಳ್ಳುವ ರೀತಿ ಖಂಡಿತ ಭಿನ್ನವಾದದ್ದು.

ಈ ಸೃಷ್ಟಿಯಲ್ಲಿನ ಭಿನ್ನತೆ ಇಲ್ಲಿನವರ ಮೈ-ಮನ-ಚರ್ಮದಲ್ಲಿ ಅಡಕವಾಗಿದೆ, ಆದರೆ ನಮ್ಮಂತಹವರಿಗೆ ಅದು ನಮ್ಮ ಚರ್ಮದಿಂದ ಕೆಳಕ್ಕೆಂದೂ ಇಳಿಯುವುದೇ ಇಲ್ಲ. ನಾವೆಂದೂ ಛಳಿಗಾಲವನ್ನು ಒಂದು ಹೀಗೆ ಬಂದು ಹೋಗುವ ಹಂತವನ್ನಾಗಿ ಗುರುತಿಸಿಕೊಂಡಿದ್ದೇವೆಯೋ ಹೊರತು ಬದುಕಿನ ಅಂಗವಾಗಿ ಅಲ್ಲ. ಬೇಕೆಂದರೆ ನಾಳೆ ಆಫೀಸಿನಲ್ಲಿನ ಸ್ಥಳೀಯರನ್ನು ನೋಡಿ, ಅವರುಗಳಲ್ಲಿ ತೊಡುವ ಬಟ್ಟೆಗಳಲ್ಲಿ ಫಾಲ್ ಇನ್‌ಫ್ಲುಯೆನ್ಸ್ ಇದ್ದೇ ಇರುತ್ತದೆ, ಆದರೆ ನಾನು ತೊಡುವ ಬಟ್ಟೆಗಳಲ್ಲಿ ಅಂತಹ ವ್ಯತ್ಯಾಸವಿರೋದಿಲ್ಲ. ಇದೊಂದು ಅಂಶವೇ ಸಾಕು ದಕ್ಷಿಣ ಭಾರತದ ನಾನು ಎಂದಿಗೂ ಇಲ್ಲಿ ಭಿನ್ನವಾಗಿ ಇರಲು - ಹಾಗಿರುವುದು ಒಳ್ಳೆಯದೋ ಕೆಟ್ಟದ್ದೋ ಯಾರಿಗೆ ಗೊತ್ತು?

4 comments:

Anonymous said...

>>"What a nice day! ಅಥವಾ Its very nice outside! ಎಂದು ಉದ್ಗಾರವೆತ್ತಿದಾಗೆಲ"
ನನಗೂ ಇದೇ ಅನುಭವ!!. "What a nice day, isn't it?" ಅಂತ ಪ್ರಶ್ನಾರ್ಥ‍ಕ ನೋಟ ಬೀರಿದಾಗೆಲ್ಲ, "oh yeah, its wonderful" ಅಂತ ಹೇಳಿ ಸುಮ್ಮನಾದ್ರೂ, ಯೇನಪ್ಪ ಈ ಜನ, ಬಿಸಿಲು ಬಂದ್ರು ಅದನ್ನೆ ದೊಡ್ಡ ವಿಷಯ ಮಾಡಿ ಕೊರಿತಾರಲ್ಲ, ನಮ್ಮ ದೇಶದ ತರ ಸಮಸ್ಯೆಗಳಿಲ್ಲ, ಇಂತ ಚಿಕ್ಕ ವಿಷಯಗಳೂ ಇವ್ರಿಗೆ discussion topicಗಳಾಗುತ್ತವೆ ಅಂದ್ಕೊಂಡು ಸುಮ್ಮನಾಗ್ತಿದ್ದೆ.
ಈಗ ಫಾಲ್ ಶುರು ಆಗದೆ, seattleನ ಜಡಿಮಳೆ ಹಾಗು ಚಳಿಯ ಚಿಕ್ಕ trailor ಕೂಡ ದಿನನಿತ್ಯದ ನೋಟ. ನನಗೂ ಅನ್ನಿಸ್ತಾ ಇದೆ, "what a woderful days it used to be" ಅಂತ. ಒಂತರಾ ಆಲಸ್ಯ ರೀ, ತಲೆ ಓಡಲ್ಲ ಅನ್ನುತ್ತೆ. ನನಗೆ ಈ ತರ ಚಳಿಗಾಲ ಹೊಸತಲ್ಲದಿದ್ರು, ಈ ಸಾರಿ ಮನೆಯಲ್ಲಿ ಒಬ್ಬನೇ ವಾಸವಾಗಿರೋದ್ರಿಂದ್ ಏನೋ, ಬೇಸಿಗೆನ ತುಂಬಾ miss ಮಾಡ್ತಾ ಇದಿನಿ :(

Anonymous said...

ಚಿಕ್ಕ ದೋಷ. "ಫಾಲ್ ಶುರು ಆಗದೆ" ಅಲ್ಲ, "ಫಾಲ್ ಶುರು ಆಗಿದೆ" ಅಂತ ಆಗ್ಬೇಕಿತ್ತು!!

Satish said...

ಮನೋಜ್,

ನಿಮ್ಮ ಸಿಯಾಟಲ್ ನಲ್ಲಿ ಯಾವಾಗ್ಲೂ ಮಳೆ ಸುರಿತಾ ಇರುತ್ತೇನೋ ಅನ್ನೋ ಹಾಗಿರುತ್ತೆ ಅಲ್ಲಿಯ ಮಳೆ ಅಲ್ವಾ? ಇನ್ನೇನು ಕೇವಲ ಆರೇ ತಿಂಗಳಿನಲ್ಲಿ ಮತ್ತೆ ಬಿಸಿಲು ಬರುತ್ತೆ ಯೋಚಿಸ್ಬೇಡಿ :-)

Anonymous said...

Conan Barbarian
Conan the Barbarian Wallpapers
Age of Conan Classes


Game multiplayer online rpg
multiplayer online game like runescape
free online multiplayer game

age of conan gold
aoc gold

Age of Conan Torrent
Age of Conan Trial
Age of Conan Free Trial

Hibernia
Midgard
Albion

DAOC 3 Accounts
DAOC How to Run 3 Accounts
DAOC Triple Log

daoc plat
daoc platinum
wow gold

DAOC Emissary Broken Visions
DAOC Champ Exp Quest

DAOC Artifacts
DAOC templates
Dark Ages of Camelot

EQ2 Plat
EQ2 Gold
EverQuest ii platinum Venekor

Sea Salt EQ2
EQ2 Tradeskill Seasalt
EQ2 recipie
Tier 8 EQ2 Food
Tier 9 EQ2 Food

Fading memories Everquest
Mentor everquest
eq2 guild permafrost

free warcraft servers
world of warcraft private servers

world of warcraft gold exploit
making wow gold
world of warcraft easy gold
gold wow fastest guide
free world of warcraft gold farming guides
world warcraft gold farming

wow pvp
wow arena season 4
wow s3 arena power leveling service