Monday, September 24, 2007

ಏನು ರೋಷ, ಏಕೀ ವೈಭವೀಕರಣ?

ಈಗ್ಗೆ ಮೂರ್ನಾಲ್ಕು ತಿಂಗಳಿನಿಂದ ಉದಯ ಟಿವಿ ಸಬ್‌ಸ್ಕ್ರೈಬ್ ಮಾಡಿಕೊಂಡು ಕನ್ನಡ ಕಾರ್ಯಕ್ರಮಗಳನ್ನು ಬಿಡುವಿನಲ್ಲೋ ಅಥವಾ ಡಿವಿಆರ್ ಕೃಪಾಕಟಾಕ್ಷದಿಂದಲೋ ನೋಡಿ ಒಂದು ಹೆಜ್ಜೆ ನಮ್ಮೂರಿಗೆ ಹತ್ತಿರವಾಗುತ್ತೇನೆ ಎಂದುಕೊಂಡಿದ್ದ ನನಗೆ ಸಂತೋಷಕ್ಕಿಂತಲೂ ಭ್ರಮನಿರಸನವಾದದ್ದೇ ಹೆಚ್ಚು ಎಂದರೆ ತಪ್ಪಾಗಲಾರದು. ನನ್ನ ಈ ಮಾನಸಿಕ ಜಾಗೃತಿಯ ಹಿಂದೆ ಕನ್ನಡಿಗರದ್ದಾಗಲೀ, ಉದಯ ಟಿವಿಯವರದ್ದಾಗಲೀ ತಪ್ಪು ಇದೆ ಎನ್ನುವುದಕ್ಕಿಂತಲೂ ನನ್ನಲ್ಲಿನ ಬದಲಾವಣೆಯನ್ನು ಒರೆಗೆ ಹಚ್ಚಿ ಸುತ್ತಲನ್ನು ವಿಶೇಷವಾಗಿ ನೋಡುವ ಪ್ರಯತ್ನವಿದು ಅಷ್ಟೇ.

ನನಗೆ ಬುದ್ಧಿ ತಿಳಿದಾಗಿನಿಂದಲೂ ಕನ್ನಡ ನಾಟಕ, ಸಿನಿಮಾ, ದೊಡ್ಡಾಟ, ಬಯಲಾಟ, ವೀರಗಾಸೆ, ಯಕ್ಷಗಾನ, ಜಾನಪದ ಗಾಯನ/ನೃತ್ಯ ಮುಂತಾದವುಗಳನ್ನು ಸಹಜವಾಗಿ ನೋಡಿ ಬೆಳೆದವನು ನಾನು. ಇವತ್ತಿಗೂ ಯಕ್ಷಗಾನದ ಒಂದು ಪದವಾಗಲೀ ಸಂಭಾಷಣೆಯಾಗಲಿ ಮೈನವಿರೇಳುವಂತೆ ಮಾಡುವುದು ಖಂಡಿತ. ಅದೇ ರೀತಿ ಹಳೆಯ ಜಾನಪದ ಹಾಡುಗಳಾಗಲೀ, ಮಟ್ಟಾಗಲೀ ಮತ್ತೊಂದಾಗಲೀ ಅವುಗಳನ್ನು ಕೇಳುವುದೇ ಮನದಲ್ಲಿ ಬಹಳಷ್ಟು ಉತ್ಸಾಹವನ್ನು ಉಂಟು ಮಾಡುತ್ತವೆ. ಕೆರೆಗೆಹಾರದ ಕಥೆಯಾಗಿರಬಹುದು, ಗೋವಿನ ಹಾಡಾಗಿರಬಹುದು, ಮಾಯದಂಥ ಮಳೆಯಾಗಿರಬಹುದು, ಹಳೆಯ ಸಿನಿಮಾ ಹಾಡುಗಳಾಗಿರಬಹುದು - ಇವುಗಳಲ್ಲಿ ಏಕತಾನತೆ ಇದೆ, ಒರಿಜಿನಾಲಿಟಿ ಇದೆ, ಮೂಲವಿದೆ ಹಾಗೂ ಶೋಧಿಸುವ ಮನಸ್ಸಿಗೆ ಮುದ ನೀಡುವ ಗುಂಗಿದೆ. ಹಲವಾರು ಸಾಮಾಜಿಕ ನಾಟಕಗಳಲ್ಲಿ, ತಾಳಮದ್ದಳೆಗಳಲ್ಲಿ, ನಮ್ಮ ಜನರ ನಡುವೆ ಹಾಸುಹೊಕ್ಕಾದ ಯಾವುದೊಂದು ಮನೋರಂಜನಾ ಪ್ರಬೇಧದಲ್ಲಿಯೂ ನಮ್ಮದೇ ಆದ ಒಂದು ಸೊಗಡಿದೆ. ಕ್ಷಮಿಸಿ, ನಮ್ಮ ಜನರ ನಡುವೆ ಹಾಸುಹೊಕ್ಕಾದ ಮನೋರಂಜನಾ ಪ್ರಬೇಧದ ಜೀವ ಸಂಕುಲದಲ್ಲಿ ಸಿನಿಮಾ ಪ್ರಪಂಚವಾಗಲೀ, ಅಥವಾ ಇಂದಿನ ಕಿರುತೆರೆಯ ಕಣ್ಣೀರಿನ ಕೋಡಿಗಳಾಗಲೀ ಇವೆಯೇ ಅನ್ನೋದು ಬಹು ದೊಡ್ಡ ಪ್ರಶ್ನೆ. ಆದರೆ ನೀವೇ ನೋಡಿದಂತೆ ನನಗೆ ಅಪ್ಯಾಯಮಾನವಾಗುವಂತಹ ಯಾವುದೇ ಮಾಧ್ಯಮದ ಹತ್ತಿರಕ್ಕೂ ಸಿನಿಮಾ ಬಂದಿಲ್ಲ, ಅದರಲ್ಲಿಯೂ ಇತ್ತೀಚಿನ ಸಿನಿಮಾಗಳಾಗಲೀ ಹಾಗೂ ಅನೇಕ ಕಿರುತೆರೆಯ ಕಾರ್ಯಕ್ರಮಗಳಾಗಲೀ ಬಹು ದೂರ.

ನಾವು ಹೈ ಸ್ಕೂಲು ಕಾಲೇಜುಗಳಲ್ಲಿ ಅನೇಕ ಚರ್ಚಾಸ್ಪರ್ಧೆಗಳಲ್ಲಿ ವಾದ ಮಾಡುತ್ತಿದ್ದುದು ಇನ್ನೂ ನನಗೆ ಚೆನ್ನಾಗಿ ನೆನಪಿದೆ - ಭಾರತದ ಸುದ್ದಿ ಮಾಧ್ಯಮಗಳು ಸ್ವಾಯುತ್ತವಾಗಬೇಕು, ಶಾಲಾ ಕಾಲೇಜುಗಳಲ್ಲಿ ಮುಕ್ತವಾಗಿ ಲೈಂಗಿಕತೆಯ ಬಗ್ಗೆ ಪಾಠ ಹೇಳಿಕೊಡಬೇಕು, ವಿದೇಶಿ ಮಾಧ್ಯಮಗಳ ನಡೆನುಡಿ ಸಂಸ್ಕೃತಿಗಳ ಅನುಕರಣೆ ಸಲ್ಲ - ಮುಂತಾಗಿ. ಇಂದಿಗೂ ನಮ್ಮಲ್ಲಿನ ಸುದ್ದಿ ಮಾಧ್ಯಮಗಳು (ಟಿವಿ, ರೆಡಿಯೋ ಹಾಗೂ ವೃತ್ತಪತ್ರಿಕೆಗಳು) ಸ್ವಾಯುತ್ತವಾಗಿವೆ ಎಂದೇನೂ ನನಗನ್ನಿಸೋದಿಲ್ಲ, ಆದರೆ ಯಾವುದಾದರೊಂದು ಕ್ರೈಮ್ ಸಂಗತಿಯನ್ನು ವರದಿ ಮಾಡುವಾಗ ನಮ್ಮಲ್ಲಿನ ಮಾಧ್ಯಮಗಳಿಗೆ ಯಾವುದೇ ರೀತಿಯ ಸಾಮಾಜಿಕ ಜವಾಬ್ದಾರಿ ಎಂಬುದೇ ಇಲ್ಲ ಎನ್ನಿಸಿದೆ. ರಕ್ತದ ಹೊಳೆ, ಕೊಳೆತು ಕೃಶವಾಗುತ್ತಿರುವ ಹೆಣಗಳು, ಸತ್ತ ಮಕ್ಕಳು, ಛಿದ್ರವಿಛಿದ್ರವಾದ ಜಾನುವಾರುಗಳು, ಮುಖದ ಮೇಲೆ ಬ್ಲೇಡಿನಿಂದ ಕೊಯಿಸಿಕೊಂಡು ಹತ್ಯೆಗೊಳಗಾದ ರೌಡಿಗಳು, ಗುಂಡಿನೇಟು ತಿಂದು ರಕ್ತದ ಮಡುವಿನಲ್ಲಿ ಬಿದ್ದ ದೇಹಗಳು ಇತ್ಯಾದಿ - ಇವುಗಳನ್ನೆಲ್ಲ ವಾರ್ತಾ ಮಾಧ್ಯಮದಲ್ಲಿ ನೋಡಿ ನನಗಂತೂ ಸಾಕಾಗಿ ಹೋಗಿದೆ. ನಿಜವಾಗಿಯೂ ಕೇಳುಗರಿಗೆ ಆ ಪ್ರಮಾಣದ ಡೀಟೈಲ್‌ನ ಅವಶ್ಯಕತೆ ಇದೆಯೇ? ನಮ್ಮಲ್ಲಿನ ಸುದ್ಧಿ ಮಾಧ್ಯಮಗಳ ಕಾರ್ಯಕ್ರಮ ಹಾಗೂ ಬರಹ ಯಾವ ರೇಟಿಂಗ್‌ಗೆ ಒಳಪಡುತ್ತವೆ? ಶಾಲಾ ಮಕ್ಕಳಿಂದ ಹಿಡಿದು ವಯಸ್ಸಾದವರ ವರೆಗೆ ಓದಿ/ನೋಡಲು ಅವು ಲಾಯಕ್ಕೇ ಎನ್ನುವ ಪ್ರಶ್ನೆ ನನಗಂತೂ ಪದೇಪದೇ ಮನಸ್ಸಿನಲ್ಲಿ ಏಳುತ್ತಿರುತ್ತದೆ. ಆದರೆ ಅವುಗಳಿಗೆಲ್ಲಾ ಇನ್ನೂ ಉತ್ತರ ಸಿಕ್ಕಿಲ್ಲ. ಈ ಮಾಧ್ಯಮಗಳ ತಂತ್ರಜ್ಞಾನ ಏನೇ ಬದಲಾದರೂ ಅವು ಹುಟ್ಟಿದಾಗಿನಿಂದ ಇಲ್ಲಿಯವರೆಗೆ ಕಾರ್ಯಕ್ರಮಗಳನ್ನು, ಸುದ್ದಿಗಳನ್ನು, ವರದಿಗಳನ್ನು ಹೀಗೆಯೇ ತೋರಿಸಿಕೊಂಡು ಬಂದಿದ್ದರೆ ಇಂದು ಅಂತಹ ಕಾರ್ಯಕ್ರಮಗಳನ್ನು ವಿಶೇಷವಾಗಿ ನೋಡುತ್ತಿರುವ ನನ್ನಲ್ಲಿನ ಬದಲಾವಣೆಗಳನ್ನೇ ದೂರಲೇ? ಅಥವಾ ಸದಾ ವಿದೇಶಿ ಸೋಗನ್ನು ಹಾಕಿಕೊಂಡಿರುವ ದೇಶಿಗಳಿಗೆ ಬೇಕಾದಷ್ಟು ವಿದೇಶಿ ಚಾನೆಲ್ಲುಗಳ ಕಾರ್ಯಕ್ರಮಗಳ ರೂಪುರೇಶೆಯನ್ನು ನೋಡಿ ಕಲಿಯುವುದಾಗಲೀ, ತಮಗೆ ಅನ್ವಯಿಸಿಕೊಳ್ಳುವುದಾಗಲೀ ಏನೂ ಇಲ್ಲವೇ?

ನಾನು ಹಿಂದಿ ಸಿನಿಮಾಗಳನ್ನು ನೋಡದೇ ಹಲವಾರು ವರ್ಷಗಳೇ ಕಳೆದು ಹೋದವು, ಇತ್ತೀಚಿನ ಅನೇಕ ಕನ್ನಡ ಚಲನ ಚಿತ್ರಗಳನ್ನು ನೋಡಿ ನನಗಂತೂ ಪರಿಸ್ಥಿತಿ ಬಹಳಷ್ಟು ಗಂಭೀರವಾಗಿದೆ ಹಾಗೂ ಬಿಗಡಾಯಿಸಿದೆ ಎನ್ನಿಸಿಬಿಟ್ಟಿತು. ಇಂದಿನ ಸಿನಿಮಾಗಳು ಜನಪ್ರಿಯತೆಯ ಸೋಗಿಗೆ ಕಟ್ಟುಬಿದ್ದು ಅನೇಕ ರಂಗುರಂಗಿನ ಅಂಶಗಳನ್ನು ಒಳಗೊಂಡು ಈಗಿನ ಟಿವಿ-ವಿಸಿಡಿ ಕಾಲದಲ್ಲೂ ಪ್ರೇಕ್ಷಕ ಪರಮಾತ್ಮನನ್ನು ಥಿಯೇಟರಿಗೆ ಹೊರಡಿಸುವ ಯಾವುದೋ ಒಂದು ಮಹಾನ್ ಪ್ರಯತ್ನವಿದ್ದಿರಬಹುದು, ನನ್ನಂತಹವರು ಥಿಯೇಟರಿಗೆ ಹೊಕ್ಕು ಕೊಡುವ ರೂಪಾಯಿಯನ್ನು ನಂಬದೇ ಇದ್ದಿರಬಹುದಾದ ಒಂದು ವ್ಯವಸ್ಥಿತ ಇಂಡಸ್ಟ್ರಿಯಾಗಿರಬಹುದು. ಆದರೆ, ಇಂದು ಥಿಯೇಟರಿನಲ್ಲಿ ಬಿಡುಗಡೆಯಾದದ್ದು ನಾಳೆ ಪುಕ್ಕಟೆಯಾಗಿ ಟಿವಿ ಮುಂತಾದ ಮಾಧ್ಯಮಗಳ ಮೂಲಕ ಬಿಕರಿಯಾಗಿ ಸಮಾಜವನ್ನು ಅಲ್ಲೋಲಕಲ್ಲೋಲಗೊಳಿಸುತ್ತಲ್ಲಾ, ಅದಕ್ಕ್ಯಾರು ಜವಾಬ್ದಾರರು? ಇಂದಿನ ಹೀರೋಗಳಿಗೆ ಅದೇನು ರೋಷ, ಅದೇನು ಆವೇಶ, ಸಿನಿಮಾಗಳಲ್ಲಿ ಸೇಡು-ರೋಷದ ಅದೇನು ವೈಭವಿಕರಣ? ಪ್ರೇಕ್ಷಕರನ್ನು ಕುರಿಗಳೆಂದು ಭಾವಿಸಿ ಸಿನಿಮಾದಲ್ಲಿ ಹೀರೋಗಳ ರೂಪುರೇಶೆಯನ್ನು ಅವರ ನಡತೆಯನ್ನು ಯದ್ವಾತದ್ವಾ ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುವ ಕಲಾವಿದರ ಹೆಸರಿನಲ್ಲಿ ಕಳಪೆಯನ್ನು ಮಾರಿ ಹೊಟ್ಟೆ ಹೊರೆದುಕೊಳ್ಳುತ್ತಿರುವ ತಂಡದವರಿಗೆ ಧಿಕ್ಕಾರವಿರಲಿ. ಕಾನೂನನ್ನು ಕೈಗೆತ್ತಿಕೊಳ್ಳುವುದು ಅದು ಹೇಗೆ ತಾನೇ ನ್ಯಾಯವಾದೀತು? ಇವರ ಮನೆಯಲ್ಲಿರೋ ಶಾಲೆಗೆ ಹೋಗೋ ಮಕ್ಕಳು ಆ ರೀತಿಯ ಪ್ರಶ್ನೆಗಳನ್ನು ಕೇಳೋದಿಲ್ಲವೇ? ಒಬ್ಬನನ್ನು ಕೊಲೆಗೈದವನು ಕೊಲೆಗಡುಕನೇ - ಯಾವ ಕಾರಣಕ್ಕಾದರೇನಂತೆ, ಅದಕ್ಕೆ ನ್ಯಾಯಾನ್ಯಾಯ ಹೇಳುವುದು ಎರಡೂವರೆ ಘಂಟೆ ನಂತರ ಸಿನಿಮಾದ ಕರ್ಕಶ ಶಬ್ದಗಳಿಗೆ ಅಲ್ಲಿ ಹುಟ್ಟಿ ಹೊರಬರುವ ಧ್ವನಿಗಳಿಗೆ ಕಂಗಾಲಾದ ಪ್ರೇಕ್ಷಕನ ಮನಸ್ಥಿತಿಯಲ್ಲ. ಸಾಮಾಜಿಕ ನ್ಯಾಯ ಎಂದಿಗೂ ಸಾಮಾಜಿಕ ನ್ಯಾಯವೇ ಎನ್ನುವ ಸರಳ ಸಮೀಕರಣ ನಮ್ಮ ಪರಂಪರೆಗೆ ಏಕೆ ಸಿದ್ಧಿಸದೋ ಕಾಣೆ. ಗಟ್ಟಿ ಇದ್ದವನು ಬದುಕುತ್ತಾನೆ ಅನ್ನೋದು ಹೊಡೆದಾಡಿ ಬಡಿದಾಡಿ ಬದುಕುವುದು ಎನ್ನುವ ಮಟ್ಟಿಗೆ ಸಂದು ಹೋಗಿರೋದು ನಮ್ಮವರ ಸಮಸ್ಯೆ ಅಲ್ಲ, ನನ್ನ ಸಮಸ್ಯೆ - ಏಕೆಂದರೆ ಮೊದಲೆಲ್ಲ ಈ ರೀತಿಯ ವಿಷಯಗಳು ಕಾಣಿಸುತ್ತಿರಲಿಲ್ಲ, ಕಾಣಿಸಿದ್ದರೂ ಅವು ಎಲ್ಲೋ ಹುಟ್ಟಿ ಕರಗುವ ಧ್ವನಿಗಳಾಗುತ್ತಿದ್ದವು, ಆದರೆ ಇಂದು ಅಂತಹ ಧ್ವನಿಗಳೇ ಮುಖ್ಯವಾಹಿನಿಗಳಾಗಿವೆ ನನ್ನ ಮನಸ್ಸಿನಲ್ಲಿ.

ನಮ್ಮ ಸಂಗೀತ ಸಾಹಿತ್ಯ ಸಾಂಸ್ಕೃತಿಕ ಪರಂಪರೆಗೆ ಬೇಕಾದಷ್ಟು ಸೃಜನಶೀಲತೆ ಇದೆ. ಇವತ್ತಿಗೂ ಒಂದು ಪ್ರೇಮಗೀತೆಯಿಂದ ಹಿಡಿದು, ಧಾರುಣ ಕಥೆಯವರೆಗೆ ಹೆಣಿಗೆಯನ್ನು ನೇಯಬಲ್ಲ ಒರಿಜಿನಾಲಿಟಿ ನಮ್ಮಲ್ಲೂ ಇದೆ. ಹಾಗಿದ್ದಾಗ ಹೊರಗಿನಿಂದ ಕದ್ದು ತಂದು ತಮ್ಮದನ್ನಾಗಿ ಮಾಡಿ ತೋರಿಸುವ ಅವಸ್ಥೆ ಯಾರಿಗೂ ಬೇಡ. ನಮ್ಮಲ್ಲಿನ ಯುವಕರಾಗಲೀ, ವೃತ್ತಿಕರ್ಮಿಗಳಾಗಲೀ ತಟ್ಟನೆ ಪ್ರತಿಫಲವನ್ನು ಹುಡುಕಿ ಹೀಗಾಯಿತೋ ಎಂದು ಎಷ್ಟೋ ಸಾರಿ ಯೋಚಿಸಿದ್ದೇನೆ. ಹತ್ತು-ಹದಿನೈದು ವರ್ಷ ಸಂಗೀತ ಸಾಧನೆ ಮಾಡಿ ಮುಂದೆ ಬರಲಿ - ಆಗ ಒಡಲೊಳಗಿನ ಪ್ರತಿಭೆಗೆ ಒಂದು ಒರೆಹಚ್ಚಿ ತೀಡಿದಂತಾಗಿ ಪ್ರಭೆ ಹೊರ ಸೂಸುತ್ತಿತ್ತೋ ಏನೋ ಆದರೆ ನಮ್ಮಲ್ಲಿನ ವಜ್ರದ ಹರಳುಗಳು ಅದರಿನ ರೂಪದಲ್ಲೇ ಹೊಳೆಯಲು ಹೊರಟು ಯಾವುದೋ ವಕ್ರಕಿರಣ-ವರ್ಣಗಳನ್ನು ಸೂಸುವುದನ್ನು ನೋಡಲು ಸಾಧ್ಯವೇ ಇಲ್ಲ ಎನ್ನಿಸಿದೆ. ಮನೋರಂಜನೆಗೆ ಸೀಮಿತವಾದ ಯಾವುದೇ ಅಂಗವಿರಲಿ - ನಿರ್ದೇಶನವಿರಲಿ, ವಸ್ತ್ರವಿನ್ಯಾಸವಿರಲಿ, ಚಿತ್ರಕಥೆ ಬರೆಯುವುದಿರಲಿ, ಸಂಕಲನ ಮಾಡುವುದಿರಲಿ - ಇವುಗಳಿಗೆ ತಕ್ಕ ಮಟ್ಟಿನ ತರಬೇತಿ ಇಲ್ಲದೇ ನಾನೂ ಕೆಲಸ ಮಾಡುತ್ತೇನೆ ಎಂದು ಮೀಡಿಯೋಕರ್ ಕೆಲಸ ಮಾಡಿ ಅದರ ಮೇಲೆ ಜೀವನವನ್ನಾಧರಿಸುವುದಿದೆ ನೋಡಿ - ಅದು ಬಹಳ ಕಷ್ಟದ ಕೆಲಸ. ವಿದೇಶದ ಸಿಂಫನಿ ಆರ್ಕೇಷ್ಟ್ರಾಗಳಲ್ಲಿ ದಿನಕ್ಕೆ ಹತ್ತು ಘಂಟೆಗಳಿಗಿಂತ ಹೆಚ್ಚು ನಿರಂತರವಾಗಿ ದುಡಿದು ಅದರ ಮೇಲೇ ಜೀವನವನ್ನಾಧರಿಸುವ ಸಾಮಾಜಿಕ ನೆಲೆಗಟ್ಟು ನಮ್ಮಲ್ಲಿ ಇಲ್ಲದಿರಬಹುದು, ಕಲಾವಿದರಿಗೆ ಅವರ ಪ್ರತಿಭೆಗೆ ತಕ್ಕ ಪೋಷಣೆ ಸಿಗದೇ ಇರಬಹುದು ಆದರೆ ನನ್ನಂತಹ ಸಾಮಾನ್ಯನಿಗೂ ಗೊತ್ತಾಗುವಷ್ಟು ಕಳಪೆ ಗುಣಮಟ್ಟದ ಕಾರ್ಯಕ್ರಮಗಳನ್ನು ಹೊರತರುವುದಾದರೂ ಏಕೆ? ಅದರಿಂದ ಯಾರಿಗೇನು ಲಾಭವಿದೆ ಹೇಳಿ ನೋಡೋಣ.

ಮಚ್ಚೂ-ಲಾಂಗು ಸಂಸ್ಕೃತಿ ನಮ್ಮದೇ, ಇಲ್ಲವೆಂದಾದರೆ ಎಲ್ಲಿಂದ ಬಂತು? ಒಂದು ಕಾಲದಲ್ಲಿ ರಿವಾಲ್ವರ್‌ನಿಂದ ಗುಂಡು ಹೊಡೆಸಿಕೊಂಡು ಸಾಯುವುದೇ ಅಪರೂಪವಾಗಿರುವಂಥ ಕನ್ನಡ ನಾಡಿನಲ್ಲಿ ಇಂದು ಎಷ್ಟೋ ಜನರ ಕೊಲೆಯನ್ನು ಗುರುತು ಸಿಗದ ಮುಸುಕುಧಾರಿಗಳು ಮಾಡಿ ತಪ್ಪಿಸಿಕೊಳ್ಳುವುದಕ್ಕೆ ಏನು ಕಾರಣ? ಸಿನಿಮಾದಿಂದ ಸಮಾಜ ಪ್ರೇರಣೆ ಪಡೆಯುತ್ತದೆಯೋ, ಅಥವಾ ಸಮಾಜ ಇರುವುದನ್ನು ಸಿನಿಮಾ ಹೀಗೆ ಎಂದು ಗುರುತಿಸುತ್ತದೆಯೋ? ಕಾಲೇಜ್‌ಗೆ ಚಕ್ಕರ್ ಹೊಡೆದು ಮನೆಯಲ್ಲಿ ಅಪ್ಪ ಅಮ್ಮರಿಗೆ ತಿನ್ನೋಕೆ ಗತಿ ಇರದ ಪರಿಸ್ಥಿತಿಯಲ್ಲಿನ ನಾಯಕನನ್ನು ವೈಭವೀಕರಿಸಿ ನಮ್ಮ ಸಿನಿಮಾ ಕಥೆಗಳು ಯಾವ ನ್ಯಾಯವನ್ನು ಸಾರುತ್ತಿವೆ? ಸಿನಿಮಾ ಹೀರೋಗಳೆಲ್ಲಾ ಗೆಲ್ಲಲೇ ಬೇಕೆಂದರೆ ಹಾಗಾದರೆ ಅವು ಸಮಾಜದ ನಿಜವಾದ ಪ್ರತಿಬಿಂಬವಲ್ಲ ಎಂದಂತಾಗಲಿಲ್ಲವೇ? ಬುದ್ಧಿವಂತರು ಕಳಪೆ ಸಿನಿಮಾವನ್ನೇಕೆ ನೋಡಬೇಕು, ಅವುಗಳಿಗೆ ನಮ್ಮ ಭಾಷೆ, ಭಾವನೆ, ಹಾಗೂ ನಾವು ನೆಚ್ಚುವ ನಾಯಕರನ್ನೇಕೆ ಬಲಿಕೊಡಬೇಕು?

ನೀವು ಏನೇ ಹೇಳಿ ಕಳಪೆಯನ್ನು, ಕಡಿಮೆ ಗುಣಮಟ್ಟದ್ದನ್ನು ಹೀಗಿದೆ ಎಂದು ಹೇಳುವ ಸ್ಪಷ್ಟತೆ ನಮ್ಮಲ್ಲಿನ್ನೂ ಬರಲೇ ಇಲ್ಲ - ನಾನೋದುವ ಸಿನಿಮಾ ವಿಮರ್ಶೆಗಳಿಗೆ ಜೀವವೇ ಇರೋದಿಲ್ಲ. ವಿಮರ್ಶೆಗೆ ಒಳಪಡದ ಮಾಧ್ಯಮಕ್ಕೆ ಒಂದು ರೀತಿ ಲಂಗುಲಗಾಮು ಎನ್ನುವ ಪ್ರಶ್ನೆಯೇ ಬರೋದಿಲ್ಲ. ಒಂದು ಕಾಲದಲ್ಲಿ ನಾನೋದುತ್ತಿದ್ದ ’ವಿಜಯಚಿತ್ರ’ ವಾರಪತ್ರಿಕೆಯಲ್ಲಿ ’ಮೆಚ್ಚದ್ದು-ಮೆಚ್ಚಿದ್ದು’ ಎಂಬ ಅಂಕಣದಲ್ಲಾದರೂ ನಮ್ಮಂತಹವರು ಒಂದಿಷ್ಟು ಸಂಕಷ್ಟಗಳನ್ನು ತೋಡಿಕೊಳ್ಳುತ್ತಿದ್ದೆವು. ಇಂದಿನ ಮುಂದುವರೆದ ಮಾಧ್ಯಮಗಳಲ್ಲಿ ಅಂತಹ ಸುಲಭವಾದ ಸಾಧನಗಳು ಪ್ರೇಕ್ಷಕನಿಗೆ ಇವೆಯೋ ಇಲ್ಲವೋ, ಇದ್ದರೂ ಅಲ್ಲಿಂದ ಅಣಿಮುತ್ತುಗಳನ್ನು ಆರಿಸಿ ತಮ್ಮನ್ನು ತಾವು ಬೆಳೆಯಲು ಬಳಸಿಕೊಳ್ಳುವ ಮಹಾನ್ ಕಲಾವಿದರ ಕಾಲವಂತೂ ಇದ್ದಂತಿಲ್ಲ...

ಕ್ಷಮಿಸಿ, ಇವೆಲ್ಲವೂ ನನ್ನಲ್ಲಿನ ಬದಲಾವಣೆಯಿಂದ ಹುಟ್ಟಿಬಂದವುಗಳು - ನಮ್ಮ ಮಾಧ್ಯಮಗಳು ಹೇಗಿವೆಯೋ ಹಾಗೇ ಇರಲಿ!

7 comments:

ಭೂಮಿ-ಸಾಗರ said...

ನಮಸ್ಕಾರ ಸತೀಶ್,

ಬಹಳ ಚೆನ್ನಾಗಿ ಬರೆದಿದೀರಾ. ಓದುಗರನ್ನು ಚಿಂತನೆಗೆ ಹಚ್ಚುವ ನಿಮ್ಮ ಬರಹಗಳು ಬಹಳ ಇಷ್ಟವಾಗುತ್ತದೆ. ಹೀಗೇ ಬರೆಯುತ್ತಿರಿ.

ದಟ್ಸ್ ಕನ್ನಡದಲ್ಲಿ ತಪ್ಪಿಸಿಕೊಂಡಿದ್ದ ಸುಬ್ಬನ ಅಂತರಂಗ ಇನ್ನು ಜಾಲಾಡಬೇಕು :-)

ವಂದನೆಗಳು

Satish said...

ನಮಸ್ಕಾರ ಪೂರ್ಣಿಮಾ,

’ಅಂತರಂಗ’ವನ್ನು ಇತ್ತೀಚೆಗೆ ನೋಡುತ್ತಿಲ್ಲ ನೀವು ಎಂದುಕೊಂಡಿದ್ದೆ, ನನ್ನ ಊಹೆಯನ್ನು ಹುಸಿಮಾಡಿದ್ದಕ್ಕೆ ಧನ್ಯವಾದಗಳು!

ಹೊಸ ಸುಬ್ಬನ ಲೇಖನಗಳು ಇಲ್ಲಿವೆ ನೋಡಿ, ಜೊತೆಗೆ ನಮ್ ಮೇಷ್ಟ್ರು, ನಂಜ ಹಾಗೂ ತಿಮ್ಮಕ್ಕರ ಮಾತಿನ ವರಸೆಯನ್ನೂ ನೋಡಿ.

:-)

ಭೂಮಿ-ಸಾಗರ said...

ನಾನು ಅಂತರಂಗ ನೋಡಿದ್ದೇ ಇತ್ತೀಚೆಗೆ. ನೀವು ಬೇರೆ ಪೂರ್ಣಿಮಾ ಎಂದುಕೊಂಡಿರಬಹುದು. ನಾನು ಪೂರ್ಣಿಮಾ ಸುಬ್ರಹ್ಮಣ್ಯ. ನೀವು ದಟ್ಸ್ ಕನ್ನಡದಲ್ಲಿ ಬರೆಯುತ್ತಿದ್ದ ಸುಬ್ಬನ ಲೇಖನಗಳು ನಮ್ಮ ಮನೆ ಸುಬ್ಬಣ್ಣನ ಹಾಗೂ ನನ್ನ ಮೆಚ್ಚಿನವು. ಖಂಡಿತ ನಿಮ್ಮ ಲೇಖನಗಳನ್ನು ಓದುತ್ತೇನೆ.

Satish said...

ಓಹ್, ಈಗ ಗೊತ್ತಾಯ್ತು, ನಮ್ಮ ಸುಬ್ಬನ ಫ್ಯಾನ್ ಒಬ್ರು ವರ್ಜೀನಿಯಾದಲ್ಲಿದ್ದಾರೆ ಅಂತ ನನಗೂ ಗೊತ್ತಿತ್ತು. ನಿಮ್ಮನೇ ಸುಬ್ಬ ಅವರಿಗೆ ನಮ್ಮ ಸುಬ್ಬನ ನಮಸ್ಕಾರಗಳನ್ನು ತಿಳಿಸಿ.

ಲೇಖನಗಳನ್ನು ಬರೆಯೋಕೇ ಪುರುಸೊತ್ತು ಸಿಗಲ್ಲ, ಅಂತಹದರಲ್ಲಿ TK ಗೆ ಕಳಿಸಿ, ಅವರು ಪ್ರಕಟಿಸುವವರೆಗೆ ಕಾಯ್ದು ಅದಕ್ಕೆ ಪ್ರತಿಕ್ರಿಯಿಸುವವರಿಗೆ ಉತ್ತರಕೊಡುವಷ್ಟು ವ್ಯವಧಾನವಂತೂ ಖಂಡಿತ ಇರಲಿಲ್ಲವಾದ್ದರಿಂದ ನನ್ನ ಬರಹಗಳು ಬ್ಲಾಗಿನ ಹಾದಿ ಹಿಡಿದು ಸುಮಾರು ಒಂದೂವರೆ ವರ್ಷದ ಮೇಲಾಯ್ತು, ಕ್ಷಮಿಸಿ ನಿಮಗೆ ಸುಬ್ಬನ ಲೇಖನಗಳಿಂದ ದೂರವಿರುವಂತಾಗಿದ್ದಕ್ಕೆ. ಪ್ರತೀ ಸೋಮವಾರ ಹೊಸ ಸುಬ್ಬನ ಲೇಖನ ಬರೆಯಬೇಕು ಎನ್ನುವುದು ನನ್ನ ಆಸೆ, ಆದರೆ ಅದಕ್ಕಡ್ಡಿ ಬರುವುದು ಮಿತಿಯಿಲ್ಲದ ಸೋಮಾರಿತನ ಮಾತ್ರ! :-)

ಭೂಮಿ-ಸಾಗರ said...

ಹೇಗೆ ಮೊದಲೇ ಗೊತ್ತಿತ್ತು ವರ್ಜೀನಿಯಾ ಫ್ಯಾನ್ ಅಂತ... ಯಾರೋ ಇಬ್ಬರಿಗೂ ಗೊತ್ತಿರುವವರು ಇರಬೇಕು, ವಿಚಿತ್ರಾನ್ನ ಭಟ್ಟರಾ? ಅಥವಾ...ಕಳೆದ ವರ್ಷ ಕನ್ನಡದವರೊಬ್ಬರು ದುರ್ಗಾಮಂದಿರದಲ್ಲಿ ಸಿಕ್ಕಿದ್ರು. ಹಾಗೇ ಮಾತಾಡ್ತಾ ಮಾತಾಡ್ತಾ ನಿಮ್ಮ ಸ್ನೇಹಿತರು/ಸಹಪಾಠಿ ಅಂತ ಗೊತ್ತಾಯ್ತು. ಅವರ ಹೆಸರು ನೆನಪಾಗ್ತಿಲ್ಲ, ಕ್ಷಮಿಸಿ. ಅವರಿರಬಹುದು.

ನೀವು ಮೊದಲು ಅಲೆಕ್ಸಾಂಡ್ರಿಯಾದಲ್ಲಿ ಇದ್ರಲ್ವಾ ?

Satish said...

ನನಗೆ ಜೋಶಿ ನಿಮ್ಮ ಬಗ್ಗೆ ಹೇಳಿದ ನೆನಪು, ದುರ್ಗಾಮಂದಿರದಲ್ಲಿ ಸಿಕ್ಕ ಸಾಗರದವರು ಕೃಪೇಶ-ಮೇದಿನಿ ಇರಬಹುದು, ಅವರು ನಿಮ್ಮ ರಾಜ್ಯದಲ್ಲೇ ಇರೋದು...ಹೌದು, ಮೊದಲು ನಾವು ಅಲೆಕ್ಸಾಂಡ್ರಿಯಾದಲ್ಲಿ ಇದ್ವಿ, ನಮಗೂ ಆ ರಾಜ್ಯಕ್ಕೂ ಏಕೋ ಸರಿಬರದ ಕಾರಣ ಜರ್ಸೀ ಸೇರಿಕೊಂಡಿದ್ದೇವೆ! :-)

Anonymous said...

Conan Barbarian
Conan the Barbarian Wallpapers
Age of Conan Classes


Game multiplayer online rpg
multiplayer online game like runescape
free online multiplayer game

age of conan gold
aoc gold

Age of Conan Torrent
Age of Conan Trial
Age of Conan Free Trial

Hibernia
Midgard
Albion

DAOC 3 Accounts
DAOC How to Run 3 Accounts
DAOC Triple Log

daoc plat
daoc platinum
wow gold

DAOC Emissary Broken Visions
DAOC Champ Exp Quest

DAOC Artifacts
DAOC templates
Dark Ages of Camelot

EQ2 Plat
EQ2 Gold
EverQuest ii platinum Venekor

Sea Salt EQ2
EQ2 Tradeskill Seasalt
EQ2 recipie
Tier 8 EQ2 Food
Tier 9 EQ2 Food

Fading memories Everquest
Mentor everquest
eq2 guild permafrost

free warcraft servers
world of warcraft private servers

world of warcraft gold exploit
making wow gold
world of warcraft easy gold
gold wow fastest guide
free world of warcraft gold farming guides
world warcraft gold farming

wow pvp
wow arena season 4
wow s3 arena power leveling service