Wednesday, October 03, 2007

ಸೋಮವಾರದ ಆಚರಣೆಗಳು

’Oh, its a Gandhi holiday in India!' ಅನ್ನೋ ಅಮೇರಿಕದವರಿಗೇನು ಗೊತ್ತು ನಮ್ಮ ಗಾಂಧೀ ಮಹಾತ್ಮನ ಬಗ್ಗೆ? ಮಾರ್ಟಿನ್ ಲೂಥರ್ ಕಿಂಗ್ ಡೇ, ಪ್ರೆಸಿಡೆಂಟ್ಸ್ ಡೇ, ಕೊಲಂಬಸ್ ಡೇ, ಕ್ರಿಸ್‌ಮಸ್ ಎಂದು ಆಚರಿಸೋ ಒಂದೋ ಎರಡೋ ಬರ್ಥ್‌ಡೇಗಳಲ್ಲೂ ಕ್ರಿಸ್‌ಮಸ್ ಒಂದನ್ನು ಬಿಟ್ಟು ಉಳಿದೆಲ್ಲವನ್ನೂ ವೀಕ್‌ಎಂಡ್ ಗೆ ಅಡ್ಜಸ್ಟ್ ಮಾಡ್ಕೊಂಡು ಅದನ್ನು ಶಾಪ್ಪಿಂಗ್ ದಿನಗಳಿಗೆ ಹೋಲಿಸಿಕೊಳ್ಳುವ ಸಂಸ್ಕೃತಿಯವರಿಗೆ ನಾವು ಆಚರಿಸುವ ನೂರಾರು ’ದಿನ’, ’ಜಯಂತಿ’, ’ಮಹೋತ್ಸವ’, ’ಆರಾಧನೆ’ ಮುಂತಾದವುಗಳ ಬೆಲೆ ಹಾಗೂ ಪ್ರತೀಕವಾದರೂ ಏನು ಗೊತ್ತಿರಬಹುದು? ಐದು ಸಾವಿರ ವರ್ಷದ ಸಂಸ್ಕೃತಿಗೂ ಇನ್ನೂರೈವತ್ತು ವರ್ಷಗಳ ಸ್ಮರಣೆಗೂ ಎಲ್ಲಿಂದೆಲ್ಲಿಯ ಸಂಬಂಧ?

ಈ ಮೇಲಿನ ವಾಕ್ಯಗಳು ಅಮೇರಿಕದೆಡೆಗಿನ ದ್ವೇಷವನ್ನು ಹೆಚ್ಚಿಸಲು ಬರೆದ ವಾಕ್ಯಗಳಲ್ಲ, ಬದಲಿಗೆ ಇಂದಿನ ಗ್ಲೋಬಲ್ ವ್ಯಾಪಾರ-ವ್ಯವಹಾರದ ನೆಲೆಗಟ್ಟಿನಲ್ಲಿ ಇಲ್ಲಿ ಕುಳಿತು ಪ್ರಪಂಚದ ಚಲನವಲನಗಳನ್ನು ಯಾರು ಹೇಗೆ ಗಮನಿಸುತ್ತಾರೆ, ಇತರ ರಾಷ್ಟ್ರಗಳ ವಿಧಿ-ವಿಧಾನ, ಆಚಾರ-ವಿಚಾರ ಮುಂತಾದವುಗಳಿಗೆ ಯಾವ ರೀತಿಯ ಗ್ಲೋಬಲ್ ಸ್ವರೂಪವನ್ನು ಕಟ್ಟಲಾಗುತ್ತದೆ ಎಂಬ ಪ್ರಯತ್ನ ಮಾತ್ರ. ಕೇವಲ ಸ್ಟಾಕ್ ಮಾರ್ಕೆಟ್ ವರ್ತುಲದಲ್ಲಿ ಮಾತ್ರವಲ್ಲ, ಬಹುರಾಷ್ಟ್ರೀಯ ಕಂಪನಿಗಳು, ಅಲ್ಲಿನ ಕೆಲಸಗಾರರು ತಮ್ಮನ್ನು ಹೇಗೆ ಬದಲಾವಣೆಗಳಿಗೆ ಒಡ್ಡಿಕೊಳ್ಳುತ್ತಾರೆ ಎಂಬ ಸ್ಥೂಲ ನೋಟ ಕೂಡ.

ನನ್ನ ತಲೆಮಾರಿನವರು ಹುಟ್ಟಿ ಬೆಳೆದಂದಿನಿಂದ ನಾವು ಶಾಲಾ-ಕಾಲೇಜು-ಕೆಲಸಗಳಲ್ಲೆಲ್ಲ ಸೆಕ್ಯುಲರಿಸಮ್ ಅನ್ನು ಗೊತ್ತಿದ್ದೋ ಗೊತ್ತಿರದೆಯೋ ಹಂಚಿಕೊಂಡೇ ಬಂದಿದ್ದೆವು. ಇದುಲ್ ಫಿತರ್, ರಮ್‌ಜಾನ್, ಗುಡ್‌ಫ್ರೈಡೇ, ಕ್ರಿಸ್ಮಸ್, ಬುದ್ಧ ಪೂರ್ಣಿಮಾ, ಜೈನ ತೀರ್ಥಂಕರರ ದಿನ ಮುಂತಾದ ರಜಾ ದಿನಗಳಿಗೆ ನಾವೆಲ್ಲರೂ ಸಾಕಷ್ಟು ಹೊಂದಿಕೊಂಡಿದ್ದೆವು. ಯಾವ ಯಾವ ಮೈನಾರಿಟಿಗಳು ಅದೆಷ್ಟೇ ಕಡಿಮೆ ಅಥವಾ ಹೆಚ್ಚಿದ್ದರೂ ಭಾರತದ ಸಂವಿಧಾನದ ನೆಲೆಗಟ್ಟಿನಲ್ಲಿ ಎಲ್ಲರಿಗೂ ಒಂದು ಧ್ವನಿಯಿತ್ತು, ಅವರವರಿಗೆ ಅವರದ್ದೇ ಆದ ಒಂದು ವೈಚಾರಿಕತೆ ಇದ್ದುದನ್ನು ನಾವು ಹುಟ್ಟಿದಂದಿನಿಂದ ಗಮನಿಸಿಕೊಂಡೇ ಇದ್ದೆವು. ’ಭಾರತ ವೈವಿಧ್ಯಮಯವಾದ ದೇಶ...’ ಎಂದೇ ನಮ್ಮಲ್ಲಿಯ ಸಮಾಜಶಾಸ್ತ್ರ ಪಾಠಗಳು ಆರಂಭವಾಗುತ್ತಿದ್ದುದು ಇಂದಿಗೂ ನೆನಪಿದೆ. ನಮ್ಮಲ್ಲಿಯ ಪಠ್ಯಪುಸ್ತಕಗಳಲ್ಲಿ ’ಭಾವೈಕ್ಯತೆ ಎಂದರೇನು?’ ಎಂಬ ಪ್ರಶ್ನೆಗಳು ಇರುತ್ತಿದ್ದವು. ಅಮೇರಿಕಕ್ಕೆ ಬಂದ ಹೊಸತರಲ್ಲಿ ಉಳಿದೆಲ್ಲದರ ಜೊತೆಗೆ ನನ್ನ ಗಮನಕ್ಕೆ ಬಂದ ವಸ್ತುಗಳಲ್ಲಿ ಇಲ್ಲಿನ ರಜಾ ದಿನಗಳ ಸ್ವರೂಪವೂ ಒಂದು. ಹೊಸ ವರ್ಷದ ದಿನ, ಸ್ವಾತ್ರಂತ್ರ್ಯ ದಿನ ಹಾಗೂ ಕ್ರಿಸ್‌ಮಸ್ ದಿನಗಳನ್ನು ಬಿಟ್ಟರೆ ಮತ್ತಿನ್ನೆಲ್ಲವೂ ಪ್ಲೋಟಿಂಗ್ ರಜಾದಿನಗಳೇ, ಅಂದರೆ ಅವು ಕ್ಯಾಲೆಂಡರಿನಲ್ಲಿ ಯಾವ ದಿನದಲ್ಲೇ ಬಂದರೂ ಅದನ್ನ ಹತ್ತಿರದ ಸೋಮವಾರಗಳಿಗೆ ಪರಿವರ್ತಿಸಿ ಲಾಂಗ್ ವೀಕ್‌ಎಂಡ್ ಮಾಡುತ್ತಿರುವುದು. ಇದನ್ನು ತಪ್ಪು-ಸರಿ ಎಂದು ನೋಡುವ ಬದಲು, ಅದನ್ನು ಇಲ್ಲಿಯ ಪದ್ಧತಿ, ಆಚರಣೆ, ಸಂಸ್ಕ್ರುತಿಯ ಪ್ರತೀಕವೆಂದು ತಿಳಿದುಕೊಳ್ಳೋಣ. ಈ ರೀತಿಯ ವ್ಯವಸ್ಥೆ ಭಾರತದ ಮೂಲದವರಿಗೆ ಹೊಸತು, ನಮ್ಮಲ್ಲಿನ ಜಯಂತಿ-ದಿನಾಚರಣೆಗಳು ಇವತ್ತಿಗೂ ಕ್ಯಾಲೆಂಡರಿನ ಅದೇ ದಿನ ಆಚರಿಸಿಕೊಳ್ಳಲ್ಪಡುತ್ತವೆ.

ದಿನೇ ದಿನೇ ಗ್ಲೋಬಲ್ ವ್ಯವಸ್ಥೆ ಬೆಳೆದಂತೆಲ್ಲ ಪ್ರಪಂಚ ಕುಗ್ಗಿ ವರ್ಕ್ ಫೋರ್ಸ್ ಪ್ರಪಂಚದ ಮೂಲೆ ಮೂಲೆಗಳಲ್ಲಿ ಗರಿಗೆದರಿಕೊಂಡು ನಿಂತಾಗಲೇ ಕ್ಯಾಪಿಟಲಿಷ್ಟಿಕ್ ವ್ಯವಸ್ಥೆ ಉಳಿದ ಸಂಸ್ಕೃತಿ-ಆಚಾರ-ವಿಚಾರಗಳ ಮೇಲೆ ಕಣ್ಣು ತೆರೆದಿದ್ದು ಎಂದು ತೋರುತ್ತದೆ. ಒಂದಿಷ್ಟು ಜನರಿಗೆ ಅವರ ಹಿತ್ತಲಿನಲ್ಲಿ ಬೆಳೆದ ಆಲದ ಮರವೇ ದೊಡ್ಡದು, ಅದೇ ದೇವರು. ಇನ್ನೊಂದಿಷ್ಟು ಜನರಿಗೆ ವಸ್ತುಗಳು, ತಮ್ಮ ನೆರೆಹೊರೆ ಇವೆಲ್ಲವೂ ಕಮಾಡಿಟಿಗಳು ತಮ್ಮ ಅನುಕೂಲಕ್ಕೆ ತಕ್ಕ ಹಾಗೆ ಬಳಸಿಕೊಂಡು ಬಿಸಾಡಬಹುದಾದವುಗಳು. ಭಾರತದಂತಹ ರಾಷ್ಟ್ರಗಳಲ್ಲಿ ಸಾದು-ಸಂತರು, ದೇವರು-ದಿಂಡರುಗಳು, ಪ್ರತಿಮೆಗಳು, ಉಲ್ಲೇಖಗಳು, ಜಾತಿ-ಮತ-ಧರ್ಮ, ದೇವರ ರೂಪದ ಅನೇಕ ಪ್ರಾಣಿ-ಪಕ್ಷಿಗಳು ಇವೆಲ್ಲವೂ ಹೆಚ್ಚೇ, ಜನರೂ ಹೆಚ್ಚು, ಭಾಷೆ-ಸಂಸ್ಕೃತಿಗಳೂ ಹೆಚ್ಚು. ಅದೇ ಯುರೋಪ್, ಏಷ್ಯಾ, ಅಮೇರಿಕಾ ಖಂಡಗಳ ಮುಂದುವರಿದ ದೇಶಗಳಲ್ಲಿ ಇವೆಲ್ಲದರ ವೈರುಧ್ಯ. ಹಿಂದೆ ನಮ್ಮನ್ನೆಲ್ಲ ಆಳುತ್ತಿದ್ದ ಬ್ರಿಟೀಷರು ಇವೆಲ್ಲವನ್ನೂ ಗಮನಿಸಿ ಇಂತಹ ವ್ಯತ್ಯಾಸಗಳಿಗೆ ಸ್ಪಂದಿಸುತ್ತಿದ್ದರೋ ಇಲ್ಲವೋ ಆದರೆ ಇಂದಿನ ವ್ಯವಸ್ಥೆಯಲ್ಲಿ ಇಂಥ ವ್ಯತ್ಯಾಸಗಳು ಗಮನೀಯವಾಗಿವೆ. ಗಾಂಧೀ ಮಹಾತ್ಮನ ಹೆಸರಿರಲಿ, ಭಾರತವೆಂದರೆ ಎಲ್ಲಿ ಎಂದು ಕೇಳುತ್ತಿದ್ದ ಜನರಿಗೆ ಭಾರತದ ತುದಿ ಬುಡಗಳು ಭಾರತದವರಿಗಿಂತ ಚೆನ್ನಾಗಿ ಗೊತ್ತಾಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರೆ ಅತಿಶಯೋಕ್ತಿಯಾದರೂ ಅದರ ಹಿಂದಿನ ಧ್ವನಿ ನಿಮಗೆ ಸ್ಪಷ್ಟವಾಗಬಹುದು.

ಹಿಂದೊಮ್ಮೆ ವರ್ಷ ಪೂರ್ತಿ ಬಿಸಿಲಿನಲ್ಲಿ ಬೇಯುವ ಸಮಭಾಜಕ ವೃತ್ತದವರೂ ಸೂಟ್-ಬೂಟ್ ಸಂಸ್ಕೃತಿಗೆ ಹೊಂದಿಕೊಂಡಿರುವುದರ ಬಗ್ಗೆ ಬರೆದಿದ್ದೆ, ಇಂದಿನ ಬಹುರಾಷ್ಟ್ರೀಯ ಕಂಪನಿಗಳು ತಮ್ಮ ತಮ್ಮ ಪ್ರಾಸೆಸ್ ಫಾರ್ಮಾಲಿಟಿಯನ್ನು ತರುವುದರ ಜೊತೆಗೆ ತಮ್ಮ ಸಂಸ್ಕೃತಿಯನ್ನೂ ಧಾರಾಳವಾಗಿ ಕೊಡುಗೆಯನ್ನಾಗಿ ನೀಡಿವೆ. ಬರೀ ಕೊಕಾಕೋಲದ ಅಡ್ವರ್‌ಟೈಸ್‌ಮೆಂಟ್ ನೋಡಿಯೇ ಎನರ್‌ಜೈಸ್ಡ್ ಆಗೋ ಸ್ಥಳೀಯ ಜನಗಳ ಮೇಲೆ ಈ ಬಹುರಾಷ್ಟ್ರೀಯ ಕಂಪನಿಗಳು ಧಾರಾಳವಾಗಿ ಹಂಚುವ ’ವ್ಯವಸ್ಥೆ’ ಒಳ್ಳೆಯ ಹಾಗೂ ಕೆಟ್ಟ ಪರಿಣಾಮಗಳನ್ನೂ ಮಾಡಿದೆ. ನಮ್ಮಲ್ಲಿನ ಯುವ ಜನ ರಾತ್ರಿ ಪಾಳಿಯ ಮೇಲೆ ಕೆಲಸ ಮಾಡಿ ಯಾವುದೋ ಕಣ್ಣು ಕಾಣದ ದೇಶದ ರೈಲು ವೇಳಾಪಟ್ಟಿಯನ್ನೋ, ಕ್ರೆಡಿಟ್‌ಕಾರ್ಡ್‌ಗೆ ಸಂಬಂಧಿಸಿದ ವ್ಯವಸ್ಥೆಯನ್ನು ಕಂಠಪಾಠ ಮಾಡಿ ಕಲಿಯುವಂತಾಯ್ತು. ಉದ್ಯೋಗ ಹೆಚ್ಚಿತು, ಉತ್ಪನ್ನ ಹೆಚ್ಚಿತು. ಗಾಂಧೀ ಜಯಂತಿಯಂತಹ ದಿನಗಳು ದೂರವಾದವು. ಭಾರತದಲ್ಲಿ ಕೆಲವರು ಆಚರಿಸುವ ದೀಪಾವಳಿಗಳು ಅನಿವಾಸಿಗಳ ದೀಪಾವಳಿಯ ಆಚರಣೆಯ ಹಾದಿ ಹಿಡಿಯಿತು. ಜಾತ್ರೆ, ಮಹೋತ್ಸವ, ಆರಾಧನೆಗಳು ಅರ್ಥ ಕಳೆದುಕೊಂಡವು. ’ಓಹ್, ಭಾರತದಲ್ಲಿ ವಿಪರೀತ ರಜೆಗಳಪ್ಪಾ...’ ಎಂದು ಯುವಕರು ಮೂಗು ಮುರಿಯುವಂತಾದರು.

ಕಡಿಮೆ ಜನರು ಅನುಸರಿಸುವ ಸಂಸ್ಕ್ರುತಿಯೇ ಹೆಚ್ಚು ಜನರಿಗೆ ಸೂಕ್ತವೇ ಎಂಬ ಪ್ರಶ್ನೆಯನ್ನು ನಾನು ಕೇಳಿಕೊಳ್ಳುತ್ತಲೇ ಬಂದಿದ್ದೇನೆ. ಆರ್ಥಿಕವಾಗಿ ಮುಂದುವರೆದ ರಾಷ್ಟ್ರಗಳ ಸಾಮಾಜಿಕ ಪದ್ಧತಿ, ನಡೆ-ನುಡಿಗಳು ಹೆಚ್ಚಿನವೇ ಅಲ್ಲವೇ ಎಂದು ತುಲನೆ ಮಾಡುವುದೂ ಸರಿಯಾದುದೇ ಎಂದು ಕೇಳಿಕೊಳ್ಳಬೇಕಾಗಿದೆ. ಅಮೇರಿಕದ ಒಳಗಡೆ ತುಂಬ ದೂರ ಹೋಗುವುದೇ ಬೇಡ - ಬಾಲ್ಟಿಮೋರ್ ನಗರದ ಒಂದಿಷ್ಟು ಭಾಗ, ನ್ಯೂ ಯಾರ್ಕ್ ನಗರದ ಒಂದಿಷ್ಟು ಭಾಗ, ದೇಶದ ರಾಜಧಾನಿಯ ಒಂದಿಷ್ಟು ಭಾಗವನ್ನು ತೆಗೆದುಕೊಂಡು ನೋಡಿದರೆ ಮುಂದುವರೆದ ಅಮೇರಿಕ ಹೊಟ್ಟೆಯೊಳಗಿನ ಪಂಖವೂ ಕಣ್ಣಿಗೆ ರಾಚೀತು, ವೈಭವದ ಫೈವ್ ಸ್ಟಾರ್ ಹೊಟೇಲಿನ ಯಾವುದೇ ಪ್ರಾಸೆಸ್ಸುಗಳಿಗೂ ಮೀರಿದ ಹಿಂಬಾಗಿಲಿನ ನೆರೆಹೊರೆಯ ಹಾಗೆ.

ಭಾರತದ ಸ್ವಾತಂತ್ರ್ಯೋತ್ತರ ಈ ಅರವತ್ತು ವರ್ಷಗಳಲ್ಲಿ ಚಲಾವಣೆಗೆ ಬಂದ ಬರುತ್ತಿರುವ ಪಂಚವಾರ್ಷಿಕ ಯೋಜನೆಗಳ ಸವಾಲುಗಳ ಮೂಲದಲ್ಲಿ ಬಹಳಷ್ಟೇನು ವ್ಯತ್ಯಾಸವಾದಂತಿಲ್ಲ. ಅದೇ ಕುಡಿಯುವ ನೀರು, ಅದೇ ಯೋಜನೆ; ಅದೇ ಬಡತನ, ಮತ್ತದೇ ಸಮೀಕರಣ; ಅದೇ ಉದ್ಯೋಗ ನಿವಾರಣೆ, ಅದೇ ಆದೇಶ; ಅದೇ ನೀರಾವರಿ ಯೋಜನೆ, ಮತ್ತದೇ ಫಲಿತಾಂಶ. ನಾವು ಬುದ್ಧ, ಗಾಂಧಿ, ರಾಮ, ಕೃಷ್ಣ, ಜೈನ, ಏಸು ಎಂದುಕೊಂಡು ಹಿತ್ತಲಿನ ಆಲದ ಮರಕ್ಕೆ ನಾಗರಪಂಚಮಿ ಹಬ್ಬದಂದು ಜೋಕಾಲಿ ಕಟ್ಟಿ ಜೀಕುವುದೋ ಅಥವಾ ನಮ್ಮೆಲ್ಲ ಜಯಂತಿ-ದಿನಾಚರಣೆ-ಮಹೋತ್ಸವ ಮುಂತಾದವುಗಳನ್ನು ಹತ್ತಿರದ ಸೋಮವಾರಕ್ಕೆ ಹೊಂದಿಸಿಕೊಂಡು ಲಾಂಗ್ ವೀಕ್‌ಎಂಡ್ ಮಾಡಿಕೊಂಡು ಹಬ್ಬ ಹರಿದಿನಗಳಂದು ತಡವಾಗಿ ಎದ್ದು ಹಲ್ಲುಜ್ಜುವುದಕ್ಕಿಂತ ಮೊದಲು ತಿಂಡಿ ತಿನ್ನುವುದೋ? ಹಬ್ಬ, ಸಾಮಾಜಿಕ, ಧಾರ್ಮಿಕ ಆಚರಣೆಗಳಂದು ನಾವು ಕಷ್ಟ ಪಟ್ಟು ನಮ್ಮಲ್ಲಿರುವವುಗಳನ್ನು ಹಂಚಿಕೊಂಡು ದೈಹಿಕವಾಗಿ ಕಷ್ಟಪಟ್ಟು ಸುಖವಾಗಿರುವುದಕ್ಕೆ ಪ್ರಯತ್ನಿಸುವುದೋ, ಅಥವಾ ನಾವು ಗಳಿಸಿದ ರಜಾ ದಿನಗಳನ್ನು ತಕ್ಕ ಮಟ್ಟಿಗೆ ಅನುಭವಿಸಿ ನಮ್ಮ ಐಷಾರಾಮಗಳಲ್ಲಿ ರಿಲ್ಯಾಕ್ಸ್ ಮಾಡುವುದೋ? ಗಾಂಧೀ ಜಯಂತಿಯೇನೋ ಅಕ್ಟೋಬರ್ ಎರಡಕ್ಕೇ ಬರುತ್ತದೆ ವರ್ಷಾ ವರ್ಷಾ, ಆದರೆ ಬೇಕಾದಷ್ಟು ಉಳಿದ ಜಯಂತಿ-ಮಹೋತ್ಸವಗಳು ಹಿಂದೂ ಕ್ಯಾಲೆಂಡರಿಗೆ ಅನುಗುಣವಾಗಿ ಬರುತ್ತವಾದ್ದರಿಂದ ಅವುಗಳನ್ನೆಲ್ಲ ಕೂಡಿಸಿ ಭಾಗಿಸಿ ಗುಣಿಸಿ ಕಳೆದು ಹತ್ತಿರದ ಸೋಮವಾರಕ್ಕೆ ಹೊಂದಿಸುವ ಕೈಂಕರ್ಯ ನನಗಂತೂ ಬೇಡ.

5 comments:

ಸಿಂಧು sindhu said...

ಪ್ರಿಯ ಸತೀಶ್,

ಬೇಕೋ ಬೇಡವೋ, ಮಲ್ಟಿನ್ಯಾಷನಲ್ ಕಂಪನಿಗಳ ಕಾರ್ಪೊರೇಟ್ ರಜಾಗಳನ್ನೇ ತಗೋಬೇಕು ಅಲ್ಲಿ ಕೆಲಸ ಮಾಡುವಾಗ. ಈ ವಿಷಯದ ಬಗ್ಗೆ ಚೆನ್ನಾಗಿ ಬರೆದಿದ್ದೀರ. ಎಲ್ಲದರಲ್ಲೂ ಕಂಫರ್ಟ್ ಹುಡುಕಿ ಕೂತು, ಆಮೇಲೆ ಭಾರವಿಳಿಸಲು ಜಿಮ್'ಗೆ ಹೋಗಲೇಬೇಕಾದ ದಿನಚರಿಗೆ ಹೊಂದಿಕೊಂಡಿದ್ದೇವೆ. ಆ ಮನಸ್ಥಿತಿಗೂ ಹೊಂದಿಕೊಳ್ಳುವ ಮೊದಲು ಎಚ್ಚೆತ್ತುಕೊಳ್ಳಬೇಕು.

ಒಳ್ಳೆಯ ವಿಚಾರಪ್ರಚೋದಕ ಲೇಖನ.

Satish said...

ಪ್ರಿಯ ಸಿಂಧು,

ಮಲ್ಟಿನ್ಯಾಷನಲ್ ಕಂಪನಿಯಲ್ಲಿ ಕೆಲಸ ಮಾಡುವ ನಾವೂ ನಮ್ಮ ನಮ್ಮ ಸಂಸ್ಕೃತಿಯಲ್ಲಿ ಬದುಕೋ ಹಾಗೆ ನಮಗೆ ಬೇಕಾದ ರಜಾ ದಿನಗಳನ್ನು ತೆಗೆದುಕೊಳ್ಳುವುದೇ ಸೂಕ್ತ. ಪ್ರಾಜೆಕ್ಟೂ-ಡೆಡ್‌ಲೈನೂ ಎಲ್ಲದರ ಮಧ್ಯೆ ನಮ್ಮತನವನ್ನು ನಾವು ಕಳೆದುಕೊಳ್ಳದಿದ್ದರೆ ಸಾಕಷ್ಟೇ.

ಧನ್ಯವಾದಗಳು.

VENU VINOD said...

ಸತೀಶ್,
ಅಲ್ಲಿ ರಜೆಗಳನ್ನು ವೀಕೆಂಡಿಗೆ ಹೊಂದಿಸಿಕೊಳ್ಳುವುದು ತಿಳಿದು ಅಚ್ಚರಿಯಾಯಿತು. ಏನೇ ಹೇಳಿ, ಭಾರತಲ್ಲಿ ಇನ್ನೂ ಹಬ್ಬ ಹರಿದಿನಗಳನ್ನು ಎಲ್ಲಾ ಧರ್ಮೀಯರೂ ಆಚರಿಸುತ್ತಿರುವುದು ಸಮಾಧಾನದ ಸಂಗತಿ. ಚಿಂತಿಸಬೇಕಾದ ವಿಷಯ ಬರೆದಿದ್ದೀರಿ

Satish said...

ವೇಣು ವಿನೋದ್,

ಸೆಕ್ಯುಲರ್ ಆಗಿರೋ ನಿಟ್ಟಿನಲ್ಲಿ ನಮ್ಮ ದೇಶ ಮುಂದೆ ಇದೆ ಎಂದು ಕೆಲವೊಮ್ಮೆ ಅನ್ನಿಸಿದರೆ ಇನ್ನೊಂದಿಷ್ಟು ಯೋಚನೆ ಮಾಡಿದಾಗೆಲ್ಲ ಹಾಗೆಲ್ಲವೇನೋ ಎನ್ನಿಸುತ್ತೆ. ಮೈನಾರಿಟಿಯವರಿಗೆ ಒಂದು ಧ್ವನಿಯೆನ್ನುವುದು ಇದೆ ಎಂಬುದನ್ನು ಬಹಳ ಮೊದಲೇ ಕಂಡುಕೊಂಡಿರೋ ದೇಶ ನಮ್ಮದು.

Anonymous said...

Conan Barbarian
Conan the Barbarian Wallpapers
Age of Conan Classes


Game multiplayer online rpg
multiplayer online game like runescape
free online multiplayer game

age of conan gold
aoc gold

Age of Conan Torrent
Age of Conan Trial
Age of Conan Free Trial

Hibernia
Midgard
Albion

DAOC 3 Accounts
DAOC How to Run 3 Accounts
DAOC Triple Log

daoc plat
daoc platinum
wow gold

DAOC Emissary Broken Visions
DAOC Champ Exp Quest

DAOC Artifacts
DAOC templates
Dark Ages of Camelot

EQ2 Plat
EQ2 Gold
EverQuest ii platinum Venekor

Sea Salt EQ2
EQ2 Tradeskill Seasalt
EQ2 recipie
Tier 8 EQ2 Food
Tier 9 EQ2 Food

Fading memories Everquest
Mentor everquest
eq2 guild permafrost

free warcraft servers
world of warcraft private servers

world of warcraft gold exploit
making wow gold
world of warcraft easy gold
gold wow fastest guide
free world of warcraft gold farming guides
world warcraft gold farming

wow pvp
wow arena season 4
wow s3 arena power leveling service