ಕನಸುಗಾರರು ಬೇಕಾಗಿದ್ದಾರೆ...
ರಾಜಕೀಯದ ಬಗ್ಗೆ ಬರೆಯೋದ್ ಏನಿದೆ, ಬರೆಯೋಕ್ ಏನಿದೆ ಅಂತ ಯೋಚಿಸ್ತಾ ಇರಬೇಕಾದ್ರೆ ಏನು ಬರೆದ್ರೂ ಯಾರಿಗಾದ್ರೂ ಒಬ್ರಿಗ್ ಬೈಯಲೇ ಬೇಕು, ಹಾಗೆ ಬೈಯದೆ ಇದ್ರೆ ನನಗಂತೂ ಸಮಾಧಾನವೇ ಇರೋದಿಲ್ಲ. ನಮ್ ದೇಶದ ರಾಜಕಾರಣವಾಗ್ಲೀ, ನಮ್ ರಾಜ್ಯದ ರಾಜಕಾರಣವಾಗ್ಲೀ ಹೊಲಸೆದ್ದು ಹೋಗಿದೆ ಅಂತ್ಲೇ ನಾನು ನಂಬಿರೋನು. ಇನ್ನೇನು ಹೇಳೋದು, ಈ ತಿಂಗಳುಗಳನ್ನು ನಂಬಿದ ಸರ್ಕಾರಗಳನ್ನು ಕುರಿತು ಓದ್ತಾ ಇರಬೇಕಾದ್ರೆ? ಜನತಾ ನ್ಯಾಯಾಲಯಕ್ಕಾದ್ರೂ ಯಾವ ಆಪ್ಷನ್‌ಗಳು ಉಳಿದಿವೆ ಈ ಮಂಕುದಿಣ್ಣೆಗಳನ್ನೇ ಮತ್ತೆ ಮತ್ತೆ ಆರಿಸಿ ತರೋದನ್ನು ಬಿಟ್ರೆ?
ನನ್ನ ಒಡಲಿನಲ್ಲಿ ಬೇಕಾದಷ್ಟು ಬೈಗಳುಗಳನ್ನು ತುಂಬಿಕೊಂಡಿದ್ರೂ ದಳ, ಬಿಜೆಪಿ, ಕಾಂಗ್ರೆಸ್ಸಿನವರನ್ನು ನೋಡಿ ಬೈಯದೇ ಇರುವಷ್ಟು ಸುಮ್ಮನಾಗಿ ಹೋಗಿರೋದನ್ನು ನೋಡಿ ನನಗೇ ಆಶ್ಚರ್ಯ ಆಗ್ತಾ ಇದೆ. ಈ ಸಮ್ಮಿಶ್ರ ಸರಕಾರ ಮೊಟ್ಟ ಮೊದಲ್ನೆ ಬಾರಿಗೆ ಅಧಿಕಾರ ಬರೋಕ್ಕಿಂತ ಮೊದಲೇ ಚುನಾವಣೆ ಫಲಿತಾಂಶ ನೋಡಿ ಯಾರಿಗೂ ನಿಚ್ಚಳ ಬಹುಮತ ಬಾರದಿದ್ದುದನ್ನು ಕಂಡಾಗಲೇ ಈ ಹೊಂದಾಣಿಕೆ ಹತ್‌ಹತ್ರ ನಲವತ್ತು ತಿಂಗಳು ಬಂದಿದ್ದೇ ಹೆಚ್ಚು ಅನ್ಸಿದ್ದು ನಿಜ. ಕಳೆದ ಚುನಾವಣೆಯಲ್ಲಿ ಹೆಚ್ಚು ಶಾಸಕರನ್ನು ಪಡೆದವರಿಗೆ ಅಧಿಕಾರ ಸಿಗದಿದ್ದುದೂ, ಕಡಿಮೆ ಶಾಸಕರನ್ನು ಪಡೆದವರು ಮುಖ್ಯಮಂತ್ರಿಗಳಾಗಿ ಮೆರೆದದ್ದೂ ವಿಶೇಷ. ಇಪ್ಪತ್ತು ತಿಂಗಳ ಹಿಂದೆ ಅಪ್ಪ-ಮಗನ ವಿರಸ ಪ್ರಕಟವಾಗಿತ್ತು, ಈಗ ಎಲ್ಲರೂ ಒಂದಾದ ಹಾಗಿದೆ. ಅಧಿಕಾರದ ಆಸೆಗೋಸ್ಕರ ಕೈ ಜೋಡಿಸಿ ಒಪ್ಪಂದ ಮಾಡಿಕೊಳ್ಳುವಾಗ ಬುದ್ಧಿ ಇರಲಿಲ್ಲವೇ ಎಂದೂ ಅನೇಕಾನೇಕ ಪ್ರಶ್ನೆಗಳು ಇನ್ನೂ ಹುಟ್ಟುತ್ತಲೇ ಇವೆ.
ಜನಾದೇಶ, ಚುನಾವಣೆ, ಜನತಾ ನ್ಯಾಯಾಲಯ ಎಂದೇನೇ ಕರೆದರೂ ರಾಜ್ಯವನ್ನು ಸರಿಯಾಗಿ ನಡೆಸಿಕೊಂಡು ಹೋಗುವ ನಾಯಕರ ಕೊರತೆ ಬಹಳ ದೊಡ್ಡದು. ನಾನು ಕಂಡ ಹಾಗೆ ಯಾವ ಪಕ್ಷದಲ್ಲಿಯೂ ಸರಿಯಾದ ನಾಯಕರು, ಮುಂದಾಳುಗಳು ನನ್ನ ಕಣ್ಣಿಗಂತೂ ಬೀಳುತ್ತಿಲ್ಲ. ಹಾಳೂರಿಗೆ ಉಳಿದವನೇ ಗೌಡ ಎಂದು ಯಾರನ್ನು ಬೇಕಾದರೂ ಆರಿಸುವುದಾದರೆ ಜನತೆಯ ಮತಕ್ಕಾದರೂ ಎಲ್ಲಿಯ ಬೆಲೆ ಬಂದೀತು? ಹಾಗಾದರೆ ಕರ್ನಾಟಕದ ರಾಜಕಾರಣದಲ್ಲಿ ಯಾವ ಮುತ್ಸದ್ದಿಗಳೂ ಇಲ್ಲವೇ? ಮುವತ್ತು ನಲವತ್ತು ವರ್ಷಗಳ ರಾಜಕಾರಣ ಮಾಡಿದವರೆಲ್ಲರೂ ’ಕಾದು ನೋಡುತ್ತೇವೆ, ಹೈ ಕಮಾಂಡಿನ ಆದೇಶದಂತೆ ನಡೆಯುತ್ತೇವೆ’ ಎನ್ನುವುದು ಯಾವ ನ್ಯಾಯ? ಪಕ್ಷದ ಅಧ್ಯಕ್ಷರಿಗೆ ಬೆಲೆ ಇರಬೇಕೋ ಬೇಡವೋ, ಪಕ್ಷ ಹೆಚ್ಚೋ ವ್ಯಕ್ತಿ ಹೆಚ್ಚೋ ಮುಂತಾದ ಪ್ರಶ್ನೆಗಳು ನಾಳೆ ನಡೆಯುವ ಚರ್ಚಾಸ್ಪರ್ಧೆಗೆ ತಯಾರು ನಡೆಸುತ್ತಿರುವ ಹೈ ಸ್ಕೂಲು ಹುಡುಗನ ಮನದಲ್ಲಿ ಸುಳಿಯುವ ಹಾಗೆ ಸುಳಿದು ಹೋದವು.
***
ನೀವು ಸ್ವಲ್ಪ ಯೋಚಿಸಿ ನೋಡಿ - ಇದರಿಂದ ಒಂದಂತೂ ಒಳ್ಳೆಯದಾಗಿದೆ. ಕುಮಾರಸ್ವಾಮಿ ತಮ್ಮ ಅತ್ಯಂತ ಕಡಿಮೆ ಅನುಭವವಿದ್ದಾಗ್ಯೂ ಚಿಕ್ಕ ವಯಸ್ಸಿನಲ್ಲಿ ಮುಖ್ಯಮಂತ್ರಿಯಾಗಿದ್ದು ನೋಡಿದರೆ, ಮುಂದೆ ಅವರ ಪಕ್ಷ ಮೆಜಾರಿಟಿಗೆ ಬಂದರೆ ಅವರು ಮತ್ತೆ ಮುಖ್ಯಮಂತ್ರಿಯಾಗುತ್ತಾರೇ ಹೊರತು ಬೇರೆ ಯಾವ ಮಂತ್ರಿ ಪದವಿಯೂ ಅವರಿಗೆ ತಕ್ಕುದಾದಂತೆ ಕಾಣುವುದಿಲ್ಲ, ವಿರೋಧಪಕ್ಷದಲ್ಲಿ ಕುಳಿತು ಚಿಂತಿಸುವುದನ್ನು ಬಿಟ್ಟರೆ. ದೇವೇಗೌಡರಂತೂ ಈಗಾಗಲೇ ತಮ್ಮ ಮುಖ್ಯಮಂತ್ರಿ ಹಾಗೂ ಪ್ರಧಾನಮಂತ್ರಿ ಹುದ್ದೆಗಳ ಕೋಟಾವನ್ನು ಪೂರೈಸಿದಂತೆ ಕಾಣುವುದರಿಂದ ಹಿನ್ನೆಲೆಯಲ್ಲಿ ಕುಳಿತು ಏನೇ ಮಾಡಿದರೂ ಮತ್ತೆ ಅವರು ಆಡಳಿತ ಗದ್ದುಗೆ ಹತ್ತುವಂತೆ ತೋರದು. ಬಿಜೆಪಿಯ ಯಡಿಯೂರಪ್ಪನವರದೂ ಅದೇ ಕಥೆ - ಉಪಮುಖ್ಯಮಂತ್ರಿ ಆದವರು ಮುಖ್ಯಮಂತ್ರಿಗಳಾಗ ಬೇಕಷ್ಟೇ? ನಿಚ್ಚಳ ಬಹುಮತ ಬಾರದ ಹೊರತು ಅವರು ಕಾಂಗ್ರೆಸ್ ಒಂದಿಗಾಗಲೀ, ಜನತಾದಳದೊಂದಿಗಾಗಲೀ ಸಂಧಿ ಮಾಡಿಕೊಳ್ಳುವುದು ಸಾಧ್ಯವೇ ಇಲ್ಲ. ಕಾಂಗ್ರೇಸಿನವರು ಯಾಕೋ ಸಪ್ಪಗಾಗಿ ಹೋಗಿದ್ದಾರೆ. ಧರಮ್ ಸಿಂಗ್ ಮುಂದಾಳತ್ವದಲ್ಲಿ ಅದೇಕೋ ಅಷ್ಟೊಂದು ಚುರುಕು ಕಾಣಿಸುತ್ತಲೇ ಇಲ್ಲ.
ಆದ್ದರಿಂದಲೇ, ಚುನಾವಣೆ ನಡೆದು ಯಾವ ರೀತಿಯ ಫಲಿತಾಂಶ ಬಂದರೂ ಹಳೆ ತಲೆಗಳು ಮತ್ತೆ ಗದ್ದುಗೆ ಹತ್ತುವುದು ಕಷ್ಟಸಾಧ್ಯ ಎಂದು ನನ್ನ ಅನಿಸಿಕೆ. ಹಾಗಾದರೆ, ಹೊಸ ನಾಯಕರಿಲ್ಲ, ಹಳೆಯವರ ಕಾಲ ಮುಗಿದಿದೆ - ಹೀಗಿರುವಾಗ ಚುನಾವಣೆಯ ಫಲಿತಾಂಶ ಯಾವ ದಿಕ್ಕಿಗೆ ಸಾಗಬಹುದು? ಕಳೆದ ಸಾರಿ ಬಿಜೆಪಿ ಹೆಚ್ಚು ಶಾಸಕರನ್ನು ಗಳಿಸಿತ್ತು, ಎರಡನೆಯ ಸ್ಥಾನದಲ್ಲಿ ಕಾಂಗ್ರೆಸ್, ಮೂರನೆಯ ಸ್ಥಾನದಲ್ಲಿ ದಳ ಬಂದಿದ್ದವು. ಈಗ ಮುಂದಿನ ಚುನಾವಣೆಯಲ್ಲಿ (ನಡೆದರೆ), ಈ ಪಕ್ಷಗಳು ಅಷ್ಟಷ್ಟೇ ಮತಗಳನ್ನು/ಶಾಸಕರನ್ನು ಗಳಿಸಿ ಮುಂದೆ ಇದೇ ರೀತಿ ಹಂಗ್ ಅಸೆಂಬ್ಲಿ ಬಂದರೆ ಏನು ಮಾಡುತ್ತಾರಂತೆ? ಜಾತಿಯ ಅಲೆ, ಸಂವೇದನೆಯ ಅಲೆ, ಸುಮ್ಮನೇ ಕುಳಿತು ಏನೂ ಮಾಡದಿರುವ ಸೋಮಾರಿಗಳ ಅಲೆಗಳಾಗಲೀ ಯಾವ ರೀತಿಯಲ್ಲಿ ಯಾರು ಯಾರಿಗೆ ಸಹಾಯ ಮಾಡುತ್ತವೆ ಎನ್ನೋದು ಬಹಳ ಕುತೂಹಲಕಾರಿ ವಿಷಯ.
***
ನಮ್ಮ ಸ್ನೇಹಿತರೊಬ್ಬರು, ಕನ್ನಡಿಗರೇ - ಅನಿವಾಸಿಯಾಗಿ ಸುಮಾರು ಎಂಟು ವರ್ಷಗಳಿಂದ ಅಮೇರಿಕದಲ್ಲಿ ಇರುವವರೊಬ್ಬರು ಕರ್ನಾಟಕ/ಭಾರತದ ರಾಜಕಾರಣದಲ್ಲಿ ಧುಮುಕ ಬೇಕು ಎನ್ನುವ ಆಸೆಯನ್ನು ಒಮ್ಮೆ ವ್ಯಕ್ತಪಡಿಸಿದ್ದರು. ಅವರೊಬ್ಬ ವಿದ್ಯಾವಂತ ಮಹಿಳೆ, ಇಲ್ಲಿ ಒಳ್ಳೆಯ ಕೆಲಸದಲ್ಲಿರುವವರು, ಅಂತಹವರಿಗೆ ರಾಜಕೀಯ ಕಾಳಜಿ ಆ ಮೂಲಕ ಜನರ ಸೇವೆ ಮಾಡುವ ಗುರಿ ಅಥವಾ ಕನಸು ಇರುವುದು ಬಹಳ ದೊಡ್ಡ ವಿಷಯ. ಅದೂ ಇತ್ತೀಚಿನ ವಿದ್ಯಾವಂತ ಜನತೆ ಹಾಳು ರಾಜಕೀಯದಿಂದ ದೂರವೇ ಇರೋಣ ಎನ್ನುವಂತಹ ಸಂದರ್ಭದಲ್ಲಿ ಅಮೇರಿಕದ ಉನ್ನತ ಎಮ್‌ಬಿಎ ಪದವಿ ಪಡೆದಿರುವ ಹಾಗೂ ಇಲ್ಲಿನ ಕಾರ್ಪೋರೇಷನ್ನುಗಳಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿಗಳು, ಆಡಳಿತವರ್ಗದ ಆಗುಹೋಗುಗಳನ್ನು ಬಲ್ಲವರಿಗೆ ಕರ್ನಾಟಕದ ರಾಜಕೀಯದಲ್ಲಿ ಸಕ್ರಿಯ ಪಾತ್ರವನ್ನು ವಹಿಸುವುದು ಕಷ್ಟವೇ? ಎನ್ನುವ ಪ್ರಶ್ನೆಯನ್ನು ನಾನೂ ಕೇಳಿಕೊಂಡಿದ್ದೆ.
ಕಳೆದ ವರ್ಷ ಭಾರತಕ್ಕೆ ಹೋದಾಗ ನನ್ನ ಸಹಪಾಠಿ ಹಾಗೂ ಬಾಲ್ಯ ಸ್ನೇಹಿತ ಶ್ರೀಕಾಂತನ ಬಳಿ ಈ ಬಗ್ಗೆ ವಿಚಾರಿಸಿದಾಗ ಅವನು ನಾನೇ ಎಲ್ಲಿ ಎಮ್‌ಎಲ್‌ಎ ಸೀಟಿಗೆ ಸ್ಪರ್ಧಿಸಿಬಿಡುತ್ತೇನೋ ಎಂದು ತಿಳಿದುಕೊಂಡು ನನ್ನ ಪ್ರಶ್ನೆಗೆ ಗಹಗಹಿಸಿ ನಗತೊಡಗಿದ. ಅವನ ಮುಗ್ಧ ಉತ್ತರದ ಪ್ರಕಾರ ನನ್ನಂತಹ ಹುಂಬ ಮತ್ತೊಬ್ಬನಿಲ್ಲವೆಂದೂ, ತಲೆ ಸರಿ ಇರುವವನು ಯಾರೂ ರಾಜಕೀಯದ ಸಹವಾಸಕ್ಕೆ ಹೋಗುವುದಿಲ್ಲವೆಂತಲೂ, ಒಂದು ವೇಳೆ ಹೋದರೂ ಒಂದು ಎಮ್ಎಲ್ಎ ಸೀಟಿಗೆ ಟಿಕೆಟ್ ತೆಗೆದುಕೊಳ್ಳಲು ಮಾಡಬೇಕಾದ ಕಸರತ್ತುಗಳನ್ನೆಲ್ಲ ನಿಧಾನವಾಗಿ ವಿವರಿಸಿದ. ನಮ್ಮ ಸೊರಬಾ ತಾಲ್ಲೂಕಿನ ಕುಮಾರ್ ಬಂಗಾರಪ್ಪ, ಬಂಗಾರಪ್ಪನವರ ಉದಾಹರಣೆಯಿಂದ ಹಿಡಿದು ನೆರೆಯ ತಾಲ್ಲೂಕಿನ ಶಿಕಾರಿಪುರದ ಯಡಿಯೂರಪ್ಪ ಹಾಗೂ ರಾಜ್ಯ ಮಟ್ಟದಲ್ಲಿ ಅಂದು ಜೆಎಚ್ ಪಟೇಲ್, ದೇವೇಗೌಡರ ಇವರ ಬಗ್ಗೆ ತಿಳಿಸಿದ. ಒಂದು ಎಮ್ಎಲ್ಎ ಸೀಟಿಗೆ ಐವತ್ತು ಲಕ್ಷದಿಂದ ಹಿಡಿದು ಸರಿಸುಮಾರು ಕೋಟಿಯವರೆಗೆ ಸುರಿಯುವ ಬಗ್ಗೆ ಕೇಳಿ ನನಗಂತೂ ಆಶ್ಚರ್ಯವಾಯಿತು. ಇತ್ತೀಚೆಗೆ ಚುನಾವಣಾ ಅಭ್ಯರ್ಥಿಗಳು ತಮ್ಮ ಆಸ್ತಿ ಅಂತಸ್ತುಗಳ ಬಗ್ಗೆ ಸಾರ್ವಜನಿಕವಾಗಿ ಲೆಕ್ಕಪತ್ರಗಳನ್ನು ಕೊಡಬೇಕೆಂಬ ಕಾನೂನಿದ್ದರೂ ಅದೆಲ್ಲಿಂದ ಈ ಶಾಸಕ ಸ್ಪರ್ಧಿಗಳು ಅಷ್ಟೊಂದು ದುಡ್ಡನ್ನು ತರುತ್ತಾರೋ ಎಂದು ಜಿಲ್ಲಾ ಪರಿಷತ್ ಡೇಟಾಬೇಸನ್ನು ಹುಡುಕಿಕೊಂಡು ಹೋಗಿ ನನಗೆ ಬೇಕಾದ ಪ್ರತಿಯೊಬ್ಬ ಮುತ್ಸದ್ದಿ, ದುರೀಣ, ನಾಯಕ, ಪುಡಾರಿಗಳ ಆಸ್ತಿ ವಿವರಗಳನ್ನು ನಾನೇ ಓದಿ ನೋಡಿದೆ. ಆದರೆ ಎಲ್ಲೂ ಉತ್ತರ ಸಿಕ್ಕ ಹಾಗೆ ಕಾಣಿಸಲಿಲ್ಲ. ಶ್ರೀಕಾಂತನ ಜೊತೆಯ ಮಾತುಕಥೆಯಿಂದ ಒಂದಂತೂ ಸ್ಪಷ್ಟವಾಯಿತು - ಸಕ್ರಿಯವಾಗಿ ರಾಜಕಾರಣದಲ್ಲಿ (ದೇಶದ ಮಟ್ಟದಲ್ಲಿ ಅಥವಾ ರಾಜ್ಯ ಮಟ್ಟದಲ್ಲಿ) ಪಾಲುಗೊಳ್ಳಲು ಬೇಕಾದುದು ruthlessness - ವಿದ್ಯಾವಂತರ, ಮುಂದುವರಿದವರ ವೀಕ್‌ನೆಸ್ ಅದೇ ಆಗಬಲ್ಲದು, ಜೊತೆಯಲ್ಲಿ ಜಾತಿ, ದುಡ್ಡು, ಶಿಫಾರಸ್ಸು ಮುಂತಾದವುಗಳ ಬಲ ಇಲ್ಲದಿದ್ದರೆ ಏನೂ ಪ್ರಯೋಜನವಾಗದು ಎಂದೂ ತಿಳಿಯಿತು.
ಭಾರತ/ಕರ್ನಾಟಕದ ಚುನಾವಣೆಯಲ್ಲಿ ಆಸಕ್ತಿ ಇರುವ ನನ್ನ ಸ್ನೇಹಿತರಿಗೆ ನಾನು ಅವರ ಗುರಿಯನ್ನು ನೋಡಿ ಪ್ರಸಂಶಿಸಲೂ ಇಲ್ಲ, ಅವರ ಉತ್ಸಾಹಕ್ಕೆ ತಣ್ಣೀರೆರಚಲೂ ಇಲ್ಲ. ಆದರೆ, ಅವರ ಕನಸಿನ ಪ್ರಕಾರ ನಡೆದಿದ್ದೇ ಆದಲ್ಲಿ ಸಾಕಷ್ಟು ಕಷ್ಟ-ನಷ್ಟಗಳನ್ನು ಅನುಭವಿಸಬೇಕು ಎನ್ನುವುದಂತೂ ಖಚಿತ. ಅವರು ಮುಂದೆ ಏನಾಗುತ್ತಾರೋ ಬಿಡುತ್ತಾರೋ ನಮ್ಮ ಹಾರೈಕೆ ಸದಾ ಅವರ ಜೊತೆ ಇರಲಿ.
***
ಹೌದು, ಕನಸುಗಾರರು ಬೇಕಾಗಿದ್ದಾರೆ! ನಮ್ಮ ಈಗಿನ ಪೀಳಿಗೆ ಹಾಗೂ ಮುಂಬರುವ ಪೀಳಿಗೆಗಳನ್ನು ದಾಸ್ಯದಿಂದ ಬಿಡುಗಡೆ ಮಾಡಲು. ಜಾತಿ ರಾಜಕೀಯದಿಂದ ದೂರವಿದ್ದು ಕರ್ನಾಟಕದ ಸುವರ್ಣ ಪುಟಗಳನ್ನು ಮತ್ತೆ ತೆರೆಯಲು. ಯಾವುದೇ ಅರ್ಹತೆ ಇಲ್ಲದೇ ಕುರ್ಚಿ ಏರುವ ಖದೀಮರನ್ನು ಬದಿಗೊತ್ತಿ ನಮ್ಮೆಲ್ಲರ ಮುಖಂಡರಾಗಿ ಮೆರೆದು ದೇಶದಲ್ಲಿ ಕರ್ನಾಟಕ ತಲೆ ಎತ್ತುವಂತೆ ಮಾಡಲು. ನಮ್ಮ ನಡುವಿನ ಕಚ್ಚಾಟಗಳನ್ನು ದುರುಪಯೋಗಪಡಿಸಿಕೊಂಡು ತಮ್ಮ ಬೇಳೆ ಕಾಳುಗಳನ್ನು ಬೇಯಿಸಿಕೊಳ್ಳುವ ನೆರೆ ಹೊರೆಯವರಿಗೂ ಹಾಗೂ ದೂರದವರಿಗೂ ಬುದ್ಧಿ ಕಲಿಸಲು. ಐವತ್ತು ಮಿಲಿಯನ್‍ಗೂ ಮಿಕ್ಕಿರುವ ಕನ್ನಡಿಗರಿಗೆ ಒಂದು ನೆಲೆ ಕಾಣಿಸಲು. ಹಸಿವು-ಹಾಹಾಕಾರ ಇನ್ನಿಲ್ಲದಂತೆ ಮಾಡಲು. ಲಂಚ ಭ್ರಷ್ಟಾಚಾರ ತಾಂಡವವಾಡದಂತೆ ಮಾಡಲು. ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ಹಳೆಯ ಕಾನೂನನ್ನು ಬದಿಗೊತ್ತಿ ಅದರ ಬದಲಿಗೆ ಹೊಸತೊಂದನ್ನು ಸ್ಥಾಪಿಸುವ ಹರಿಕಾರರು ಬೇಕಾಗಿದ್ದಾರೆ.
ನೂರಾರು ವರ್ಷಗಳಿಂದ ಕನ್ನಡ ನಾಡನ್ನು ಆಳಿಕೊಂಡು ಬಂದ ರಕ್ತಕ್ಕೆ ಇಂದು ನಿರ್ವೀರ್ಯತೆ ಅನಿವಾರ್ಯವೇ? ಅಥವಾ ನಮ್ಮಲ್ಲೂ ಹೊಸ ಹುರುಪಿನ ನಾಯಕರ ಅವಿಷ್ಕಾರವಾಗಲಿದೆಯೇ?
ಕಾದು ನೋಡೋಣ...ಇವತ್ತಲ್ಲ ನಾಳೆ ಕನಸುಗಾರರು ಬರುತ್ತಾರೆ ತಮ್ಮ ನನಸಾದ ಕನಸುಗಳ ಸವಾರಿ ಮಾಡಿಕೊಂಡು.