ಶನಿವಾರದ ಕಾರ್ಯಕ್ರಮಗಳು ಎಸ್.ಪಿ.ಬಾಲಸುಬ್ರಮಣ್ಯಂ ಅವರ ಕಾರ್ಯಕ್ರಮದೊಂದಿಗೆ ಮುಕ್ತಾಯವಾಗುವಾಗ ಭಾನುವಾರವಾಗಲೇ ಬಂದಿತ್ತು. ಭಾನುವಾರ ಮುಖ್ಯ ವೇದಿಕೆಯ ಮೇಲೆ ಏನೇ ಕಾರ್ಯಕ್ರಮಗಳಿದ್ದರು ದಿನವಿಡೀ ಸಾಹಿತ್ಯಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ನೋಡುವುದರಲ್ಲೇ ಕಾಲಕಳೆಯಬಹುದಾಗಿತ್ತು. ಮೊದಲು ಕನ್ನಡದಲ್ಲಿ ತಾಂತ್ರಿಕ ಮತ್ತು ವೈಜ್ಞಾನಿಕ ಬರವಣಿಗೆಯ ಬಗ್ಗೆ ವಿಚಾರ ಸಂಕಿರಣ, ನಂತರ ಬಿಡುಗಡೆಯಾದ ಪುಸ್ತಕಗಳ ಕುರಿತು ಆಯ್ದ ಭಾಷಣಕಾರರು ಮಂಡಿಸಿದ ಕಿರು ಪರಿಚಯ ಅಥವಾ ಅನಿಸಿಕೆ, ಮಧ್ಯಾಹ್ನ ಕಾದಂಬರಿಕಾರ ಭೈರಪ್ಪನವರೊಂದಿಗೆ ಸಂವಾದ, ಇವೆಲ್ಲವೂ ಮನಸ್ಸಿನಲ್ಲಿದ್ದುದರಿಂದ ನನ್ನಂತೆ ಬೇಕಾದಷ್ಟು ಜನರಿಗೆ ಉಳಿದ ಕಾರ್ಯಕ್ರಮಗಳಿಗೆ ಹೋಗುವುದೋ ಬೇಡವೋ ಅನ್ನಿಸಿರಲಿಕ್ಕೂ ಸಾಕು.
ಭೈರಪ್ಪನವರೊಂದಿಗಿನ ಸಂವಾದವನ್ನು ಹೊರತುಪಡಿಸಿ ಮಿಕ್ಕೆಲ್ಲ ಸಾಹಿತ್ಯ ಸಂಬಂಧಿ ಕಾರ್ಯಕ್ರಮಗಳಿಗೆ ಬಹಳ ಕಡಿಮೆ ಜನರು ಸೇರಿದ್ದರು ಎಂಬುದು ಅತಿಶಯೋಕ್ತಿಯೇನಲ್ಲ. ಹಿಂದಿನ ದಿನದ ಹಾಸ್ಯ ಸಂಬಂಧಿ ಕಾರ್ಯಕ್ರಮಗಳಿಗೆ ಸಭಾಂಗಣ ಕಿಕ್ಕಿರಿದು ತುಂಬಿದ್ದರೆ ಸಾಹಿತ್ಯ ಸಮಾರಂಭಗಳು ಸೊರಗಿದಂತೆ ಕಂಡುಬರುತ್ತಿದ್ದವು, ಎಷ್ಟೋ ಕಾರ್ಯಕ್ರಮಗಳಲ್ಲಿ ಸೇರಿದವರೆಲ್ಲ ಒಂದಲ್ಲ ಒಂದು ರೀತಿಯಲ್ಲಿ ಕಾರ್ಯಕ್ರಮಕ್ಕೆ ನೇರವಾಗಿ ಸಂಬಂಧಿಸಿದವರೇ ಆಗಿದ್ದರು. ಸಮನಾಂತರ ವೇದಿಕೆಯ ಮೇಲೆ ನಿರಂತರವಾಗಿ ನಡೆಯುತ್ತಿದ್ದ ಕಾರ್ಯಕ್ರಮಗಳು ಹಾಗೂ ನಮ್ಮ ಜನರ ಅಭಿರುಚಿ ಇವೆರಡೂ ಕಾರಣವಾಗಿರಬಹುದು. ಏನೇ ಹೇಳಿ, ಪುತ್ತೂರಾಯರ ಹಾಗೂ ಅ.ರಾ.ಮಿತ್ರರ ಹಾಸ್ಯಗೋಷ್ಠಿಯಲ್ಲಿ ಜನರು ಪ್ರತಿಯೊಂದು ಜೋಕಿಗೂ ಪ್ರತಿಕ್ರಿಯಿಸಿದ ರೀತಿ ವಿಶೇಷವಾಗಿತ್ತು. ಕನ್ನಡದಲ್ಲಿ ಸ್ಟ್ಯಾಂಡ್‌ಅಪ್ ಕಾಮಿಡಿಯನ್ನು ಇದೇ ಮೊದಲ ಸಲ ಹತ್ತಿರದಿಂದ ನೋಡಿದ ನನಗೆ, ನವಿರಾದ ಹಾಸ್ಯವನ್ನು ವಿಶೇಷವಾಗಿ ಹೇಳುವ ಅವರ ಶೈಲಿ ಹಲವಾರು ಜನರನ್ನು ಅಯಸ್ಕಾಂತದಂತೆ ಆಕರ್ಷಿಸುವ ಸಮೂಹ ಸನ್ನಿಯಂತೆ ಕಂಡುಬಂತು. ಪುತ್ತೂರಾಯರು ಹಾಗೂ ಮಿತ್ರರು ಈ ದಿಸೆಯಲ್ಲಿ ಬಹಳ ಕೌಶಲಪೂರ್ಣರೆಂದೇ ಹೇಳಬೇಕು.
ನಾನು ಇದೇ ಸಮ್ಮೇಳನದಲ್ಲಿ ಮೊಟ್ಟಮೊದಲ ಬಾರಿಗೆ ಭೈರಪ್ಪನವರನ್ನು ನೋಡುತ್ತಿರುವುದು. ಮೊಟ್ಟ ಮೊದಲು ನೋಡಿದಾಗ ಈ ಮನುಷ್ಯನಿಗೆ ನಗುವುದೇ ಗೊತ್ತಿಲ್ಲವೇ ಎನ್ನಿಸಿ ಬಿಟ್ಟಿತ್ತು, mostly ಜೀವನದ ಗಹನವಾದ ಸಮಸ್ಯೆಗಳಿಗೆ ಕಾದಂಬರಿಯ ರೂಪವನ್ನು ಕೊಡುವುದರಲ್ಲಿ ತಮ್ಮ ಮುಗುಳ್ನಗೆಯನ್ನೇ ಕಳೆದುಕೊಂಡುಬಿಟ್ಟರೇನೋ ಎಂದು ಅನುಮಾನವೂ ಆಗಿತ್ತು, ಆದರೆ ಸಂವಾದದಲ್ಲಿ ಕೆಲವು ಪ್ರಶ್ನೆಗಳಿಗೆ ಅವರು ನಕ್ಕು ಉತ್ತರಿಸುತ್ತಿದ್ದುದರಿಂದ ನನ್ನ ಅನುಮಾನ ತೊರೆದುಹೋಯಿತು. ಭೈರಪ್ಪನವರಿಗೆ 'ನಮಸ್ಕಾರ, ಚೆನ್ನಾಗಿದೀರ' ಎಂದು ಪರಿಚಯ ಹೇಳಿಕೊಂಡು ಮಾತನಾಡಿಸಿದಾಗ ಭೈರಪ್ಪನವರ ಪ್ರತಿಕ್ರಿಯೆ ಇತ್ತೀಚೆಗೆ ಅಮೇರಿಕಕ್ಕೆ ಬಂದ ಕನ್ನಡಿಗನೊಬ್ಬ ವಿಮಾನ ನಿಲ್ದಾಣದಲ್ಲಿ ಯಾರೋ ಒಬ್ಬರು ಕನ್ನಡಿಗರಂತೆ ಕಂಡುಬಂದರೆಂದು ಕನ್ನಡದಲ್ಲಿ ಮಾತನಾಡಿಸಿದಾಗ ಎದುರಿನವರು so what? ಎಂದು look ಕೊಟ್ಟ ಹಾಗೆ ಇತ್ತು! ಕಣವಿಯವರನ್ನಾಗಲೀ, ಚಂಪಾ, ಅಮೂರ, ಭಟ್ಟರನ್ನಾಗಲೀ ನನ್ನಂತಹ ಸಾಮಾನ್ಯರು ಮಾತನಾಡಿಸಿದಾಗ ಸಾಮಾನ್ಯರು ಕೊಡಬಹುದಾದ ಮುಗಳ್ನಗೆಯ ಉತ್ತರವೇ ಬಂತು.
ಭೈರಪ್ಪನವರ ಸಂವಾದದ ಬಗ್ಗೆ ಹಿಂದೆಲ್ಲೋ ಓದಿದ್ದೆ, ಆದರೆ ನನ್ನ ನಿರೀಕ್ಷೆಗೆ ಮೀರಿ ಭೈರಪ್ಪನವರ ವಾಗ್ಝರಿ ಸುಮಾರು ೯೦ ನಿಮಿಷಗಳಿಗಿಂತಲೂ ಮೀರಿ ಹರಿದಿತ್ತು. ಜನರು ತಮ್ಮೆಡೆಗೆ ಎಸೆದ ಪ್ರತಿಯೊಂದು ಪ್ರಶ್ನೆಯನ್ನೂ ನಿಧಾನವಾಗಿ ಕೇಳಿಕೊಂಡು ಅದಕ್ಕೆ ತಕ್ಕಂತೆ ಹಾಗೂ ಅದನ್ನು ವಿಸ್ತರಿಸಿ ಉತ್ತರವನ್ನು ಕೊಡುತ್ತಿದ್ದರು. ತಮ್ಮೆಲ್ಲ ಕಾದಂಬರಿಯ ಪಾತ್ರ, ನಿಲುವುಗಳನ್ನು ಸಮರ್ಥವಾಗಿ ವಿವರಿಸಿ ಪ್ರತಿಯೊಂದನ್ನು ವಿವರವಾಗಿ ತಿಳಿಸಿಕೊಡುತ್ತಿದ್ದ ರೀತಿ ಬಹಳ ಸೊಗಸಾಗಿತ್ತು. ಹಿಂದೆ ಎಷ್ಟೋ ವರ್ಷಗಳ ಹಿಂದೆ ಬಾಂಬೆಯಲ್ಲಿ ಭೈರಪ್ಪನವರಿಗೆ ಪ್ರಶ್ನೆಗಳನ್ನು ಎದುರಿಸೋದಕ್ಕೆ ಬರೋದಿಲ್ಲ ಎಂದು ಯಾರೋ ಬರೆದದ್ದನ್ನು ಓದಿ ಇನ್ನೇನನ್ನೋ ಅಂದುಕೊಂಡಿದ್ದ ನನ್ನ ಊಹೆ ಸುಳ್ಳಾಯಿತು. ಧರ್ಮಶ್ರೀಯಿಂದ ಹಿಡಿದು, ಮಂದ್ರದವರೆಗೆ ಸುಮಾರು ಇಪ್ಪತ್ತಕ್ಕೂ ಹೆಚ್ಚು ಕಾದಂಬರಿಗಳನ್ನು ಬರೆಯುವುದರ ಮೂಲಕ ಕನ್ನಡಿಗರಿಗೆ ಚಿರಪರಿಚಿತವಾಗಿರುವ ಭೈರಪ್ಪನವರು ತಮ್ಮ ಹಲವಾರು ಗುಟ್ಟುಗಳನ್ನು ಹಂಚಿಕೊಂಡರು - ಭೈರಪ್ಪನವರು ಹಿರಿಯರು ಹೇಳಿದ 'ದೇಶವನ್ನು ನೋಡು, ಕೋಶವನ್ನು ಓದು' ಎಂಬ ಮಾತಿನಲ್ಲಿ ಅಕ್ಷರಷಃ ನಂಬಿಕೆಯುಳ್ಳವರು - ಅವರೇ ಈ ಸಂವಾದದಲ್ಲಿ ತಿಳಿಸಿದ ಹಾಗೆ ಸುಮಾರು ಹನ್ನೊಂದು ಬಾರಿ ಅಮೇರಿಕೆಗೆ ಬಂದುಹೋಗಿದ್ದಾರೆ, ಯೂರೋಪು, ಏಷ್ಯಾಗಳಲ್ಲಿ ಹೆಚ್ಚಾಗಿ ಪ್ರವಾಸಿ ತಿರುಗಾಡಿದ ಅವರು ದೂರದ ಅಂಟಾರ್ಟಿಕಾಕ್ಕೂ ಹೋಗಿಬಂದಿದ್ದಾರೆ ಎಂಬುದು ಎಷ್ಟೋ ಜನರಿಗೆ ಗೊತ್ತಿರಲಾರದು. ಜೊತೆಯಲ್ಲಿ ಅವರು ಸಾಕಷ್ಟು ಪುಸ್ತಕಗಳನ್ನು ಓದಿದ್ದಾರೆ - ಸಂಶೋಧಕನಾಗಿ, ವಿದ್ಯಾರ್ಥಿಯಾಗಿ, ಸಾಹಿತ್ಯಾರಾಧಕನಾಗಿ ಹಾಗೂ ಪ್ರವಾಸಿಯಾಗಿ ಅವರು ಓದಿದ ಪುಸ್ತಕಗಳನ್ನು ಮಾತು-ಮಾತಿಗೆ ಉದಾಹರಣೆಯಾಗಿ ನೀಡುತ್ತಿದ್ದರು. ಕೆಲವೊಂದು ಪುಸ್ತಕಗಳ ಬಗ್ಗೆ ಅದರ ಪ್ರಕಾಶಕರ ವಿಳಾಸವನ್ನು ತಿಳಿಸುವ ಮೂಲಕ ಪ್ರೇಕ್ಷಕರಲ್ಲಿ ಕೆಲವರನ್ನು ಬೆರಗುಗೊಳಿಸಿದರು.
ಇನ್ನು ಪ್ರಶ್ನೋತ್ತರಗಳಲ್ಲೂ ಸಹ ಲವಲವಿಕೆಯಿಂದ ಮಾತನಾಡಿದರು. ಧರ್ಮಶ್ರೀಯಿಂದ ಹಿಡಿದು ಮಂದ್ರದವರೆಗೆ ತಮ್ಮ ಕಾದಂಬರಿಗಳಲ್ಲಿ ಬರುವ ಪಾತ್ರಗಳ ಲೈಂಗಿಕತೆಯ ಬೆಳವಣಿಗೆಯ ಕುರಿತು ಪ್ರಶ್ನೆಯೊಂದನ್ನು ಉತ್ತರಿಸುತ್ತಾ ಸಂದರ್ಬೋಚಿತವಾಗಿ ಪಾತ್ರಗಳಿಗೆ ತಕ್ಕಂತೆ ಲೈಂಗಿಕತೆಯನ್ನು ಬಳಸಿದ್ದೇನೆಯೇ ಹೊರತು ಅದನ್ನು ಬಲವಂತವಾಗೆಲ್ಲೂ ಹೇರಿಲ್ಲ ಎಂದು ಸಾಧಿಸಿಕೊಂಡರು. ರಾಮಾಯಣದ ಬಗ್ಗೆ ತಾವೇಕೆ ಬರೆದಿಲ್ಲ ಎಂಬುದಕ್ಕೆ ಉತ್ತರವಾಗಿ ಮಹಾಭಾರತ ಇತಿಹಾಸವಿದ್ದ ಹಾಗೆ, ಆದರೆ ರಾಮಾಯಣ ಒಂದು ಮಹಾಕಾವ್ಯ, ಅದನ್ನು ಮರುಸೃಷ್ಟಿ ಮಾಡುವುದನ್ನು ಬಿಟ್ಟು ಹೆಚ್ಚಿನದೇನನ್ನೂ ಸಾಧಿಸಾಗುವುದಿಲ್ಲ, ಮಹಾಭಾರತದಲ್ಲಿನ ಪಾತ್ರಗಳಲ್ಲಿ ತಿರುಚಲು ಬೇಕಾದಷ್ಟು ಅವಕಾಶವಿದೆ ಎಂದರು.
ಧರ್ಮದಂತಹ ಕಟ್ಟುಪಾಡುಗಳು ಹುಟ್ಟಿಸಿದ ಹೊಯ್ದಾಟವನ್ನು ಭೈರಪ್ಪನವರು ವಿವರಿಸುವಾಗ ಮುಸ್ಲಿಮ್, ಕ್ರಿಶ್ಚಿಯನ್ ಧರ್ಮಗಳ ಬಗ್ಗೆ ಓದಿಕೊಂಡು, ಅದರ ವಿಸ್ತಾರವನ್ನು ತಿಳಿದುಕೊಂಡು ಮಾತನಾಡುತ್ತಿದ್ದರೂ ವಿಗ್ರಹ, ದೇವಸ್ಥಾನಗಳನ್ನು ಧ್ವಂಸಮಾಡುವುದರ ಬಗ್ಗೆ, ಹಿಂಸೆಯ ಬಗ್ಗೆ ಅವರ ಧರ್ಮಗಳಲ್ಲೇ ಹಾಗೆ ಹೇಳಿದೆ ಎಂದು ದೊಡ್ಡ ಹೇಳಿಕೆಯನ್ನು ನೀಡಿದ್ದು ನನ್ನಂತಹ ಕೆಲವರಿಗೆ ಅಷ್ಟು ರುಚಿಸಲಿಲ್ಲ. ಅವರು ಹೇಳಿದ ಹೇಳಿಕೆಗಳು ಹೇಗಿದ್ದವೆಂದರೆ ಭಾರತದಲ್ಲೇನಾದರೂ ಈ ರೀತಿ ಹೇಳಿದ್ದರೆ ಅದು ಕಮ್ಯೂನಲ್ ಹಿಂಸೆಯನ್ನು ಸೃಷ್ಟಿಸುವ ಹಾಗಿತ್ತು. ಕೆಲವೊಂದು ಪ್ರಚೋದನಕಾರಿ ಹೇಳಿಕೆಗಳಲ್ಲಿ ಅವರು ಮತಾಂತರಗೊಳಿಸುವ ತಂತ್ರ, ಹೆಣ್ಣುಮಕ್ಕಳಿಗೆ ಸಮಾಜದಲ್ಲಿ ಕೊಡುವ ಸ್ಥಾನಮಾನ ಹಾಗೂ ಒಂದು ದೇಶದವರು ಮತ್ತೊಂದು ದೇಶವನ್ನು ಧಾಳಿಮಾಡಿದಾಗ ಆಗಿಹೋಗುವ ವಿಷಯಗಳನ್ನು ಒಂದು ಜೆನರಲ್ ವ್ಯಾಖ್ಯಾನದಿಂದ ನೋಡಿದಂತಿತ್ತು. ಅವರು ಕುರ್ ಆನ್ ಅನ್ನು ಸಾಕಷ್ಟು ಅಧ್ಯಯನ ಮಾಡಿಕೊಂಡೂ ಪದೇ ಪದೇ 'ಅವರ ಧರ್ಮವೇ ಹಾಗೆ ಹೇಳುತ್ತೆ' ಎನ್ನುವ ವಿಚಾರದಲ್ಲಿ ನನಗೆ ಅವರೊಬ್ಬ ವಾದ ಮಾಡುವ ಹೈ ಸ್ಕೂಲ್ ವಿದ್ಯಾರ್ಥಿಯಂತೆ ಕಂಡುಬಂದರು. ಸಾಕಷ್ಟು ಸಾರಿ ಅಮೇರಿಕವನ್ನು ಪ್ರವಾಸಿಯಾಗಿ ನೋಡಿದ ಅವರಿಗೆ ಕಂಡ ಹಾಗೆ ಇಲ್ಲಿನ ಕಪ್ಪು ಜನರನ್ನು ಇಸ್ಲಾಮಿಗೆ ಮತಾಂತರ ಮಾಡಿಕೊಳ್ಳುವ ಹುನ್ನಾರ ನನಗೆ ತಿಳಿದಿಲ್ಲ, ಅದು ನನ್ನ ಮಿತಿ ಇದ್ದಿರಬಹುದು.
ಇನ್ನು ಪ್ರಶ್ನೆ ಕೇಳಿದ ಹೆಚ್ಚಿನವರು ಭೈರಪ್ಪನವರ ಕಾದಂಬರಿಗಳನ್ನು ವಿವರವಾಗಿ ಓದಿಕೊಂಡಿದ್ದು, ಹಲವಾರು ಪಾತ್ರ ಹಾಗೂ ಸನ್ನಿವೇಶಗಳನ್ನು ಮನನ ಮಾಡಿಕೊಂಡು ಆಸಕ್ತಿಕರವಾಗಿ ಉತ್ತಮವಾದ ಪ್ರಶ್ನೆಗಳನ್ನು ಕೇಳಿದ್ದು ನನಗೆ ಬಹಳ ಇಷ್ಟವಾಯಿತು.
***
ಭೈರಪ್ಪನವರ ಎಲ್ಲಾ ಕಾದಂಬರಿಗಳನ್ನು ನೀವು ಓದಿದ್ದರೂ ನಿಮ್ಮ ಓದು "ಅಪೂರ್ಣ"ವಾಗಿರಬಹುದು ಎಂದು ನಿನ್ನೆ ಹೇಳಿದ್ದೆ - ಭೈರಪ್ಪನವರು ತಮ್ಮ ಸೀನಿಯರ್ ಇಂಟರ್‌ಮೀಡಿಯೆಟ್ ದಿನಗಳಲ್ಲಿ ಭೀಮಕಾಯ ಎನ್ನುವ ಕಾದಂಬರಿಯನ್ನು ಬರೆದು ಪ್ರಕಟಿಸಿದ್ದಾರಂತೆ. ಇದರ ಪ್ರತಿಯನ್ನು ನಾನೆಲ್ಲೂ ನೋಡಿಲ್ಲ, ಇದನ್ನು ಓದಿ ಮುಗಿಸುವವರೆಗೆ ನೀವು ಅವರ ಎಲ್ಲಾ ಕಾದಂಬರಿಗಳನ್ನೂ ಓದಿದಂತಾಗದು...ಆದ್ದರಿಂದಲೇ ನಿಮ್ಮ ಓದು "ಅಪೂರ್ಣ"ವಾಗಿದ್ದಿರಬಹುದು ಎಂದಿದ್ದು - ಭೀಮಕಾಯವನ್ನು ಓದುವುದರ ಜೊತೆಗೆ ಭೈರಪ್ಪನವರ ನಗು ಇರುವ ಫೋಟೋವನ್ನು ನೀವೆಲ್ಲಾದರೂ ನೋಡಿದ್ದರೆ ಅಲ್ಲಿಗೆ ನಿಮ್ಮ ಓದು "ಸಂಪೂರ್ಣ"ಎಂದುಕೊಳ್ಳಿ!
***
ಸಂಜೆ ಹತ್ತು ಘಂಟೆಗೆಲ್ಲಾ ಆರಂಭವಾಗಬೇಕಾಗಿದ್ದ ಗುರುಕಿರಣ್ ಸಂಗೀತಸಂಜೆ ರಾತ್ರಿ ಹನ್ನೊಂದಾದರೂ ಆರಂಭವಾಗದಿದ್ದುದು ಬಹಳ ಜನರಿಗೆ ನಿರಾಶೆ ಉಂಟುಮಾಡಿತ್ತು. ಸಮಯ ಕಡಿಮೆಯಾದ ಗಡಿಬಿಡಿಯಲ್ಲಿ ಭಾನುವಾರ ರಾತ್ರಿ ಒಂಭತ್ತರ ನಂತರದ ಕಾರ್ಯಕ್ರಮಗಳೆಲ್ಲಾ ಏರುಪೇರಾಗಿದ್ದವು. ರಾತ್ರಿ ಹನ್ನೊಂದು ಘಂಟೆಯಿಂದ ಬೆಳಗ್ಗಿನ ಜಾವ ಒಂದು ಘಂಟೆಯವರೆಗೆ ಗುರುಕಿರಣ್ ತಂಡದವರಿಂದ ಮನೋರಂಜನಾ ಕಾರ್ಯಕ್ರಮ ಸೊಗಸಾಗಿತ್ತು. ಕೆಲವು ಹಳೆಯ ಹಾಗೂ ಹೊಸ ಹಾಡುಗಳು ಪ್ರೇಕ್ಷಕರನ್ನು ರಂಜಿಸಿದವು - ಸಂಗೀತಾ ಕಟ್ಟಿ, ಪಲ್ಲವಿ, ಮಾಲ್ಗುಡಿ, ಮುಂತಾದವರೊಂದಿಗೆ ಗುರುಕಿರಣ್ ಯಾವುದೇ ತೊಂದರೆಯಿಲ್ಲದೇ ಕಾರ್ಯಕ್ರಮ ಪ್ರಸ್ತುತಪಡಿಸಿದರು.
***
ನನ್ನ ಅನಿಸಿಕೆಯಂತೆ ಮುಂಬರುವ ಕನ್ನಡ ಸಮ್ಮೇಳನಗಳಲ್ಲಿ ಸಾಕಷ್ಟು ಬದಲಾವಣೆಗಳಾಗುವುದು ಒಳ್ಳೆಯದು. ಸಮಯ ಪರಿಪಾಲನೆಯಂತಹ ಸರಳ ವಿಷಯವಿದ್ದಿರಬಹುದು, ಸುಮಾರು ನಾಲ್ಕು ಸಾವಿರ ಜನಕ್ಕೆ ಊಟ-ತಿಂಡಿ ಬಡಿಸುವುದಿರಬಹುದು, ಎಲ್ಲದಕ್ಕೂ ಒಂದು ದೂರದೃಷ್ಟಿ, ಯೋಜನೆ ಹಾಗೂ ಶಿಸ್ತು ಬಹಳ ಮುಖ್ಯ. ಈ ವರ್ಷದ ಸಮ್ಮೇಳನದಲ್ಲಿ ಇವುಗಳಿಗೆ ಕೊರತೆ ಇರಲಿಲ್ಲವೆಂದಲ್ಲ, ಆದರೂ ಮುಂದೆ ಹೇಗೆ ನಾವು ಸುಧಾರಿಸಬಹುದು ಎಂಬುದಕ್ಕೆ ನನ್ನ ಕೆಲವು ಅನಿಸಿಕೆಗಳು:
- ಲೇಬರ್ ಡೇ (ಸೆಪ್ಟೆಂಬರ್) ವೀಕೆಂಡ್‌ಗಿಂತಲೂ ಮೆಮೋರಿಯಲ್ ಡೇ (ಮೇ) ವೀಕೆಂಡ್‌ನಲ್ಲಿ ಸಮ್ಮೇಳನವನ್ನಿಟ್ಟುಕೊಂಡರೆ ಮುಂಬರುವ ಚಂಡಮಾರುತಗಳಿಂದ ತಪ್ಪಿಸಿಕೊಳ್ಳಬಹುದು
- ಪ್ಯಾರಲಲ್ ವೇದಿಕೆಯನ್ನು ನಿರ್ಮಿಸಲಿ, ಆದರೆ ಎರಡು ಹೆಚ್ಚೆಂದರೆ ಮೂರಕ್ಕಿಂತ ಹೆಚ್ಚು ವೇದಿಕೆಗಳನ್ನು ನಿರ್ಮಿಸಿ ಹಲವಾರು ಕಾರ್ಯಕ್ರಮಗಳನ್ನು ಒಟ್ಟೊಟ್ಟಿಗೇ ನಡೆಸಿದರೆ ಪ್ರೇಕ್ಷಕರು ತಮ್ಮನ್ನು ತಾವು ಕಳೆದುಕೊಳ್ಳುವುದೇ ಹೆಚ್ಚು
- ಸುಮಾರು ನಾಲ್ಕು-ಐದು ಸಾವಿರ ಜನರು ಸೇರುವಲ್ಲಿ ಕಾರ್ಯಕ್ರಮಗಳನ್ನು ಆಸ್ವಾದಿಸುವುದರ ಜೊತೆಗೆ socialization ಮಾಡಿಕೊಳ್ಳುವುದಕ್ಕೂ ಆಸ್ಪದವಿರಲಿ, ಅಥವಾ ಬ್ಯಾಕ್ ಟು ಬ್ಯಾಕ್ ಪ್ರೋಗ್ರಾಮ್ ಇಟ್ಟು ಜನರು ಬೆರೆಯದೇ ಇರುವಂತಾಗದಿರಲಿ
- ಕನ್‌ವೆನ್‌ಷನ್ ಸೆಂಟರ್ ಇರುವಲ್ಲಿಯೇ ಊಟ-ಉಪಚಾರದ ವ್ಯವಸ್ಥೆ ಇರಲಿ, ನಾಲ್ಕು ಸಾವಿರ ಜನ ಬೇರೆ ಕಡೆಗೆ ಊಟಕ್ಕೆ ಹೋಗಿ-ಬಂದು ಮಾಡುವುದು ಅನವಶ್ಯಕವಾಗಿ ಜನರ ಸಮಯವನ್ನು ಹಾಳುಮಾಡುತ್ತದೆ
- ಮುಂದಿನ ಸಮ್ಮೇಳನ ಎಲ್ಲಾದರೂ ನಡೆಯಲಿ ಅದಕ್ಕಿಂತ ಮೊದಲು ಊಟ-ತಿಂಡಿ ವ್ಯವಸ್ಥೆ ಮಾಡುವವರು ಬಂದು ಹೋಗುವ ಜನರನ್ನು triage ಮಾಡಿ, ಒಬ್ಬೊಬ್ಬ ವ್ಯಕ್ತಿ ಊಟ ಬಡಿಸಿಕೊಂಡು, ಊಟ ಮುಗಿಸಿ ಹೋಗುವುದಕ್ಕೆ ಎಷ್ಟು ಸಮಯವಾಗುತ್ತದೆ ಎನ್ನುವ dry run ಅಭ್ಯಾಸ ಮಾಡಿಕೊಂಡು ಅದಕ್ಕೆ ತಕ್ಕಂತೆ ಆಹಾರ, ಮೇಜು, ಖುರ್ಚಿ, ನೀರು-ನಿಡಿಗಳನ್ನು ಹೊಂದಿಸಿಕೊಳ್ಳಲಿ
- ಸ್ಥಳೀಯ ಪೋಲೀಸ್ presence ಇರಲಿ, ಜನರಿಗೆ ಅದರಿಂದ ನೆಮ್ಮದಿ ಇರುತ್ತದೆ, ಸಾವಿರಾರು ಜನರು ಸೇರುವಲ್ಲಿ ಹೊರಗಿನ ಒಂದಿಷ್ಟು ಕಣ್ಣುಗಳು ಜನರ ಸುರಕ್ಷತೆಯನ್ನು ಕಾಯ್ದುಕೊಂಡಿರಲಿ
- ಎಲ್ಲಾ ತರಹದ ಕಾರ್ಯಕ್ರಮಗಳಿಗೂ ಸರಿಯಾದ representation ಸಿಗಲಿ, ನಾಟ್ಯ, ಯಕ್ಷಗಾನ, ಸಂಗೀತ, ಇತ್ಯಾದಿಗಳಿಗೆ ಸಮನಾದ ಅವಕಾಶ ಸಿಗಲಿ
- ಯಾವುದೇ ಕಾರಣಕ್ಕೂ ಆಹಾರ ಪದಾರ್ಥಗಳನ್ನು ವೇಷ್ಟ್ ಮಾಡದಿರುವಂತೆ ನೋಡಿಕೊಳ್ಳಲಿ, ನಾನು ನೋಡಿದಂತೆ ೨೦೦೬ ರ ವಿಶ್ವ ಕನ್ನಡ ಸಮ್ಮೇಳನದಲ್ಲಿ ಮಾಂಸಾಹಾರಿ ಖಾದ್ಯಗಳನ್ನು ಹೆಚ್ಚು ಜನರು ಬಡಿಸಿಕೊಳ್ಳುತ್ತಿರಲಿಲ್ಲ
- ಕರ್ನಾಟಕದಿಂದ ಬಂದ ಕಲಾವಿದರನ್ನು ಮುಖ್ಯ ವೇದಿಕೆಯಲ್ಲಿ ಕರೆದು ಪರಿಚಯಿಸಿ, ಸನ್ಮಾನಿಸುವ ಸೌಜನ್ಯವಿರಲಿ
- ಒಂದು ಕಾರ್ಯಕ್ರಮ ಸಮಯವನ್ನು ಮೀರಿ ನಡೆದರೆ ಅದಕ್ಕೆ ಶಿಕ್ಷೆ ಕೊಡಬೇಕೇ ವಿನಾ ಮುಂದಿನ ಕಾರ್ಯಕ್ರಮಗಳನ್ನು ಮೊಟಕುಗೊಳಿಸುವುದು ಸರಿಯಲ್ಲ
- ಹಗಲೂ-ರಾತ್ರಿ ದುಡಿಯುವ ಕಾರ್ಯಕರ್ತರಿಗೆ ಒಳ್ಳೆಯ ಸಪೋರ್ಟ್ ವ್ಯವಸ್ಥೆ ಇರಲಿ, ಇಲ್ಲವೆಂದಾದರೆ ದುಡಿಯುವವರು ದುಡಿಯುತ್ತಲೇ ಇರಬೇಕಾದೀತು.
- ತಿಂಡಿ, ಊಟಗಳನ್ನು ಬಿಟ್ಟು ಮಧ್ಯೆ ಅಂದರೆ ಮುಂಜಾನೆ ಊಟದ ಸ್ವಲ್ಪ ಹೊತ್ತಿನ ಮೊದಲು (ಸುಮಾರು ಹನ್ನೊಂದು ಘಂಟೆ ಹೊತ್ತಿಗೆ), ಮಧ್ಯಾಹ್ನ ಊಟದ ನಂತರ (ಸಂಜೆ ನಾಲ್ಕು ಅಥವಾ ಐದು ಘಂಟೆಯ ಹೊತ್ತಿಗೆ) ಲಘು ಪಾನೀಯ (ಕಾಫಿ, ಟೀ) ಸರಬರಾಜು ಆಗಲಿ
- ವೇದಿಕೆಯ ಮೇಲೆ ಒಬ್ಬರು ಮಾತನಾಡುತ್ತಾ ನಿಂತಿದ್ದರೆ ಅವರ ಪಕ್ಕದಲ್ಲಿ ಜನರು ಸುಮ್ಮನೇ ನಿಲ್ಲುವುದು ತಪ್ಪಲಿ
***
ಹೀಗೆ ಸೆಪ್ಟೆಂಬರ್ ಒಂದರಿಂದ ಮೂರರವರೆಗೆ ನಡೆದ ೨೦೦೬ ರ ಕಾರ್ಯಕ್ರಮಗಳು ನನಗಂತು ಖುಷಿಯನ್ನು ತಂದುಕೊಟ್ಟಿವೆ, ಹಲವಾರು ಸ್ನೇಹಿತರನ್ನು ಮಾಡಿಕೊಟ್ಟಿವೆ, ಮುಖ್ಯವಾಗಿ ಒಂದಿಷ್ಟು ಕನ್ನಡತನವನ್ನು ಬೆಳೆಸಿವೆ. ಮುಂಬರುವ ಸಮ್ಮೇಳನಗಳಲ್ಲಿ ಕನ್ನಡಿಗರ ಉದಾರತೆ, ನಿಪುಣತೆ ಹಾಗೂ ದೂರದೃಷ್ಟಿಗಳ ಧ್ಯೋತಕವಾದ ಯಶಸ್ವೀ ಕಾರ್ಯಕ್ರಮವನ್ನು ಎದುರು ನೋಡುತ್ತಿರುತ್ತೇನೆ. ೨೦೦೬ ಸಮ್ಮೇಳನವನ್ನು ಅದ್ದೂರಿಯಾಗಿ ನೆರವೇರಿಸಿ, ಪೂರೈಸಿದ ಕಾವೇರಿ-ಅಕ್ಕಾದ ಪದಾಧಿಕಾರಿಗಳಿಗೆ, ಕಾರ್ಯಕರ್ತರಿಗೆ ನನ್ನ ಅಭಿನಂದನೆಗಳು.