ತುಣುಕು ಮಿಣುಕು
ನಟಿ ಮೋನಿಕಾ ಬೇಡಿಗೆ ಒಂದಲ್ಲ ಎರಡಲ್ಲ ಐದು ವರ್ಷ ಜೈಲಂತೆ, ಜೊತೆಗೆ ಒಂದ್ ಸಾವಿರ ರೂಪಾಯಿ ದಂಡವನ್ನೂ ವಿಧಿಸಿದ್ದಾರಂತೆ! ನಮ್ ದೇಶದ ಈ ಹಣಕಾಸಿನ ವಿಚಾರದಲ್ಲಿ ಬಹಳ ಹಿಂದುಳಿದಿರೋ ದಂಡದ ವಿಚಾರ ಪರಿಗಣನೆಗೆ ಬರೋದ್ ಯಾವಾಗಾ? ಮೋನಿಕಾಗೆ ಒಂದ್ ಸಾವಿರ ರೂಪಾಯಿ ಅಂದ್ರೆ ಅದು ಯಾವ ಲೆಕ್ಕ, ಬಹುಷಃ ಅದು ಆಕೆಯ ಒಂದು ಲಿಪ್‌ಸ್ಟಿಕ್ ಬೆಲೆಗಿಂತಲೂ ಕಡಿಮೆ ಇದ್ದಿರಬಹುದು.
***
ಕುಮಾರ ಸ್ವಾಮಿ ಅಧಿಕಾರದಲ್ಲಿ ಬೆಂಗಳೂರಿನಲ್ಲಿ ಇಂಗ್ಲೀಷ್ ಶಾಲೆಗಳನ್ನು ಮುಚ್ಚೋದರಿಂದ ಬೆಂಗಳೂರು ಸಿಲಿಕಾನ್‌ವ್ಯಾಲಿ ಆಗಿರೋ ಹೆಸರನ್ನ ಕಳೆದುಕೊಳ್ಳುತ್ತೇ ಅಂತ ಇವತ್ತು ಮುಂಜಾನೆ ಮಾರ್ಕೇಟ್‌ಪ್ಲೇಸ್ ಮಾರ್ನಿಂಗ್ ರಿಪೋರ್ಟ್‌ನಲ್ಲಿ ವರದಿ ಬಂದಿತ್ತು! ಅಲ್ವಾ, ಬೆಂಗಳೂರಿನಲ್ಲಿ ಈ ಇಂಗ್ಲೀಷ್ ಶಾಲೆಗಳು ಮುಚ್ಚಿ ನಾಳೆ ಇಂಗ್ಲೀಷ್ ಮಾತನಾಡೋ ಗ್ರ್ಯಾಜುಯೇಟ್‌ಗಳ ಕೊರತೆಯಾಗಿ ಬಿಟ್ರೆ ಏನ್ ಮಾಡೋದು? ಅಷ್ಟೊತ್ತಿಗಾಗ್ಲೇ ಅಮೇರಿಕ ಚೈನಾ ಭಾಯಿ-ಭಾಯಿ ಆಗಿರುತ್ತೆ ಬಿಡಿ ಅದು ಬೇರೆ ಪ್ರಶ್ನೆ!
***
ಬೆಂಗಳೂರು ಬಿಟ್ರೂ ಮಂಗಗಳ ಥರ ವ್ಯವಹರಿಸೋದನ್ನ ನಮ್ ಕರ್ನಾಟಕದ ರಾಜಕಾರಣಿಗಳು ಯಾಕ್ ಬಿಡೋದಿಲ್ಲ ಅಂತ ಇವತ್ತು ಹೊಳೀತು - ಹೇಳಿ ಕೇಳಿ ಆಂಜನೇಯ ಕನ್ನಡಿಗನೇ ತಾನೆ? ಹೀಗೇ 'ಶರಣು ಶರಣು ಓ ಭಾಗವತೋತ್ತಮ ಕನ್ನಡ ಕುಲಪುಂಗವ ಹನುಮ...' ಅಂತಾ ಹಾಡ್‌ತಾ ಇರಬೇಕಾದರೆ ತಟ್ಟನೆ ಈ ಬಲ್ಬು ಹೊತ್ತಿಕೊಂಡಿತು. ಬೆಂಗಳೂರ್ ಬಿಟ್ಟು ಬೆಳಗಾವಿ ಸೇರಿದ್ರೂ ಕಚ್ಚಾಡೋದೂ ಕೂಗಾಡೋದು ನಮ್ಮವರ ಜನ್ಮ ಸಿದ್ಧ ಹಕ್ಕು, ಅಲ್ಲಲ್ಲ, ಜನ್ಮ ಸಿದ್ಧ ಪರಂಪರೆ, ಮತ್ತಿನ್ನೇನ್ ಆಗುತ್ತೆ?
***
ಮೊನ್ನೆ ಎನ್‌ಪಿಆರ್ ನಲ್ಲಿ ಸಾರ್ವಭೌಮ ಪರ್ವೇಜ್ ಮುಷಾರಫ್ ಸಂದರ್ಶನ ನೀಡ್ತಾ ನೀಡ್ತಾ ತಮ್ಮ ಇಂಟಲಿಜೆನ್ಸ್ ಏಜನ್ಸಿ (ಐಎಸ್‌ಐ) ಗೆ ತಮಗೆ ಲಾಯಲ್ ಆದವರನ್ನು ಮಾತ್ರವೇ ನೇಮಕ ಮಾಡಿದ್ದೇನೆ ಎನ್ನುವುದನ್ನು ಅದು ಸಹಜವಾದುದು ಎನ್ನುವಂತೆ ಹೇಳಿದರು. ಮೊದಲೇ ಸರ್ವಾಧಿಕಾರಿ ತಾನು ಆಡಿದ್ದೇ ಆಟ, ಮಾಡಿದ್ದೇ ಮಾಟ, ಅಂತಾದ್ಧರಲ್ಲಿ ಇವರಿಗೆ ತಿರುಗಿ ಬೀಳೋದಾದರೂ ಯಾರು? ಲಾಯಲ್ ಇರಲಿ ಇಲ್ಲದಿರಲಿ ಅವರ ಕೆಳಗಿರೋ ಎಲ್ಲಾ ಚಮಚಾಗಳನ್ನೂ ಬಗ್ಗಿಸಿದ್ದಾರಂತೆ! ಅವರ ಪುಸ್ತಕದ ಹೆಸರು 'ಇನ್ ದಿ ಲೈನ್ ಆಫ್ ಫಯರ್' ನನ್ನ ಕಿವಿಗೆ 'ಇನ್ ದಿ ಲೈ ಆಫ್ ಫೈಯರ್' ಕೇಳಿಸಿದ ಹಾಗಾಯಿತು, ಪಾಕಿಸ್ತಾನ ಬಿಟ್ಟು ಅಮೇರಿಕಕ್ಕೆ ಬಂದ್ರೂ ಆ ಮನುಷ್ಯಾ ಹೇಳೋ ಸುಳ್ಳೇನೂ ಕಡಿಮೆಯಾದಂತಿಲ್ಲ.
No comments:
Post a Comment