Monday, September 04, 2006

ವಿಶ್ವ ಕನ್ನಡ ಸಮ್ಮೇಳನ ೨೦೦೬ - ಭಾಗ ೨

ಒಂದು ಕಡೆ ಸರಿ ಮಧ್ಯರಾತ್ರಿಯವರೆಗೆ ಹಮ್ಮಿಕೊಂಡ ಕಾರ್ಯಕ್ರಮಗಳು, ಮತ್ತೊಂದು ಕಡೆ ಮುಂಜಾನೆ ಏಳೂವರೆಗೆಲ್ಲ ಆರಂಭವಾಗುವ ಇತರ ಕಾರ್ಯಕ್ರಮಗಳ ಆಕರ್ಷಣೆ, ಹಾಗೂ ಕನ್‌ವೆನ್‌ಷನ್ ಸೆಂಟರ್ ತುಂಬೆಲ್ಲಾ ನಾನಾ ತೆರನ ಕಾರ್ಯಕ್ರಮಗಳು - ಇವುಗಳಲ್ಲಿ ಯಾವುದನ್ನು ನೋಡುವುದು, ಎಷ್ಟು ಹೊತ್ತಿಗೆ ನೋಡುವುದು? ಈ ಪ್ರಶ್ನೆ ನನಗೊಬ್ಬನಿಗೇ ಅಲ್ಲ, ಸಮ್ಮೇಳನಕ್ಕೆ ಬಂದವರಲ್ಲಿ ಬೇಕಾದಷ್ಟು ಜನರಿಗೂ ಹೀಗೆಯೇ ಆಗಿರಬಹುದು. ಆದರೆ ನಾನು ಯಾವುದೇ ಕಾರ್ಯಕ್ರಮಕ್ಕೆ ಹೋದರೂ ಅಲ್ಲಿನ ಶೋತೃಗಳಲ್ಲಿ ಲವಲವಿಕೆ ಕಡಿಮೆಯಾದಂತೆ ನನಗೆ ಎಂದೂ ಕಂಡುಬರಲಿಲ್ಲ. ಪ್ರತಿಯೊಂದು ಕಾರ್ಯಕ್ರಮಕ್ಕೂ ಜನರು ತಮ್ಮ ಕಷ್ಟ ಸುಖಗಳ ನಡುವೆ ಸಾಧ್ಯವಾದಷ್ಟು ಭಾಗವಹಿಸುತ್ತಿದ್ದುದು ನಿಜಕ್ಕೂ ಶ್ಲಾಘನೀಯ.

ಮುಂಜಾನೆ ನಾನು ಪ್ರತಿ ಜಿಲ್ಲೆಯ ಮೆರವಣಿಗೆ ಹಾಗೂ ಸ್ತಬ್ಧ ಚಿತ್ರಗಳನ್ನು ನೋಡಲಾಗಲಿಲ್ಲ. ನಾನು ಸಮ್ಮೇಳನಕ್ಕೆ ಹೋಗುವ ಹೊತ್ತಿಗಾಗಲೇ ಕಾರ್ಯಕ್ರಮಗಳು ಆರಂಭವಾಗಿ ಎಷ್ಟೋ ಹೊತ್ತು ಆಗಿ ಹೋಗಿತ್ತು. ಒಂದು ಕಡೆ ಸಾಹಿತ್ಯ ಗೋಷ್ಠಿಯಲ್ಲಿ ಮುಂಜಾನೆ ಹತ್ತು ಘಂಟೆಗೆ ಆರಂಭವಾಗಿ ಹಲವಾರು ಮುಖ್ಯ ಕಾರ್ಯಕ್ರಮಗಳು ಜರುಗಿದರೆ, ಅದೇ ವೇದಿಕೆಯ ಎಡಮಗ್ಗುಲಿನಿಂದ ಇಂಪಾದ ಕರ್ನಾಟಕ ಶಾಸ್ತ್ರೀಯ ಸಂಗೀತ ಹೊಮ್ಮಿ ಬರುತ್ತಿತ್ತು. ಸಾಹಿತ್ಯ ಗೋಷ್ಠಿಯ ಬಲಭಾಗದ ವೇದಿಕೆಯಲ್ಲಿ ಆಧ್ಯಾತ್ಮ ಗೋಷ್ಠಿ ನಡೆಯುತ್ತಿತ್ತು. ಹತ್ತೂವರೆಯಿಂದ ಮುಖ್ಯ ವೇದಿಕೆ - ರಾಜ್‌ಕುಮಾರ್ ಸಭಾಂಗಣದಲ್ಲಿ ಎಂ.ಡಿ. ಪಲ್ಲವಿ ತಂಡದವರಿಂದ ಸುಗಮ ಸಂಗೀತ ಬೇರೆ. ನಾನು ಸಾಹಿತ್ಯ ಗೋಷ್ಠಿಯಲ್ಲಿ ಲಕ್ಷ್ಮೀ ನಾರಾಯಣ ಭಟ್ಟರ 'ತೀನಂಶ್ರೀ ಮತ್ತು ಡಿ.ಎಲ್.ಎನ್. ಶತಾಬ್ಧಿಯ ಸ್ಮರಣೆ', ಸರೋಜಾ ನಾರಾಯಣ ರಾವ್ ಅವರ 'ಟಿ. ಸುನಂದಮ್ಮ ನೆನಪು', ಹಾಗೂ ಉಷಾದೇವಿ ಅವರ 'ಆಧುನಿಕ ಕನ್ನಡ ಕವಯಿತ್ರಿಯರು' ಭಾಷಣಗಳನ್ನು ಕೇಳಿಕೊಂಡು ಆಧ್ಯಾತ್ಮ ವೇದಿಕೆಯಲ್ಲಿ ಸೋಮಯಾಜಿಯವರ 'ಆಧ್ಯಾತ್ಮ ಮತ್ತು ವಾಸ್ತು'ವಿನ ಬಗ್ಗೆ, ಲಕ್ಷ್ಮೀದೇವಿಯವರ 'ದಾಸ ಸಾಹಿತ್ಯ'ದ ಬಗ್ಗೆ ಹಾಗೂ ಅಶ್ವಥ್ ನಾರಾಯಣರವರ 'ಕರ್ನಾಟಕದಲ್ಲಿ ಜೈನ ಧರ್ಮ' ದ ಬಗ್ಗೆ ಮಾತನ್ನು ಕೇಳಿಕೊಂಡು ಮುಖ್ಯ ವೇದಿಕೆಯ ಬಳಿ ಓಡುವಷ್ಟರಲ್ಲಿ ಆಗಲೇ ಎಂ.ಡಿ. ಪಲ್ಲವಿ ತಂಡದವರಿಂದ ಸುಗಮ ಸಂಗೀತ ಕಾರ್ಯಕ್ರಮ ಮುಗಿದುಹೋಗಿತ್ತು. ಸಂಗೀತ ಕಾರ್ಯಕ್ರಮದ ನಂತರ ಮುಖ್ಯವೇದಿಕೆಯಲ್ಲಿ 'ಕುಜದೋಶವೋ ಶುಕ್ರದೆಸೆಯೋ' ಎಂಬ ನಾಟಕ ಹೆಚ್ಚಿನವರನ್ನು ಹಾಸ್ಯದಲ್ಲಿ ತೇಲಿಸಿತು.

ಹೀಗೆ ಹಲವಾರು ಪ್ಯಾರಲಲ್ ವೇದಿಕೆಗಳ ಮೇಲೆ ನಡೆಯುತ್ತಿದ್ದ ಸಮಾರಂಭಗಳಲ್ಲಿ ಶ್ರೋತೃಗಳು ತಮ್ಮ ತಮ್ಮ ಅನುಕೂಲಕ್ಕೆ ತಕ್ಕಂತೆ ತಾವು ನೋಡಬೇಕಾದ ಕಾರ್ಯಕ್ರಮಗಳನ್ನು ಆರಿಸಿಕೊಳ್ಳುತ್ತಿದ್ದರು. ಕನ್‌ವೆನ್‌ಷನ್ ಸೆಂಟರ್ ಮೆಟ್ಟಿಲುಗಳನ್ನು ಹತ್ತುತ್ತಿದ್ದಂತೇ ದೊಡ್ಡ ಪರದೆಯ ಮೇಲೆ ಆಯಾ ದಿನಗಳ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸುವ ವ್ಯವಸ್ಥೆಯನ್ನು ಮಾಡಿದ್ದೂ ಅಲ್ಲದೇ, ಮೈಕಿನಲ್ಲಿ ನಿರಂತರವಾಗಿ ಮುಂಬರುವ ಕಾರ್ಯಕ್ರಮಗಳನ್ನೂ, ಯಾವುದೇ ಬದಲಾವಣೆಗಳನ್ನೂ, ಹಾಗೂ ಇತರ ಪ್ರಕಟಣೆಗಳನ್ನೂ ತಿಳಿಸುವ ವ್ಯವಸ್ಥೆಯನ್ನು ಮಾಡಿರುವುದರ ಜೊತೆಗೆ ಪ್ರತಿದಿನದ ಕಾರ್ಯಕ್ರಮಗಳ ಸಮಯ ಹಾಗೂ ವೇದಿಕೆಯ ಹೆಸರಿನ ಕೋಷ್ಟಕದಲ್ಲಿ ಮುದ್ರಿಸಿ ಜನರಿಗೆ ಹಂಚಲಾಗುತ್ತಿತ್ತು. ಈ ದಿಸೆಯಲ್ಲಿ ನಿರಂತರವಾಗಿ ಕಾರ್ಯಕ್ರಮದ ಉದ್ದಕ್ಕೂ ಶ್ರಮಿಸಿದ ಕಾರ್ಯಕರ್ತರ ಕೆಲಸವನ್ನು ಮೆಚ್ಚಲೇ ಬೇಕು.

ಶುಕ್ರವಾರದ ದಿನದಂದು ಮುನಿಸಿಕೊಂಡಿದ್ದ ಮಳೆರಾಯ ಸ್ವಲ್ಪ ಬಿಡುವು ನೀಡಿದ್ದರಿಂದಲೂ, ಹಿಂದಿನ ದಿನದ ಕಾರ್ಯಕ್ರಮಗಳ ಅನುಭವ ಹಾಗೂ ಜನರ ಅಭಿಪ್ರಾಯಗಳಿಂದ ಆಯೋಕರು ಅಗತ್ಯಕ್ಕೆ ತಕ್ಕಂತೆ ಅಲ್ಲಲ್ಲಿ ಬದಲಾವಣೆಗಳನ್ನು ಮಾಡಿದ್ದರಿಂದಲೂ ಶನಿವಾರದ ಕಾರ್ಯಕ್ರಮಗಳು ಹೆಚ್ಚು ಸಹನೀಯವಾಗಿದ್ದವು.

ಶನಿವಾರ ಮುಂಜಾನೆ ನಾನು ನೋಡಿದ ಅಥವಾ ನನಗೆ ಇಷ್ಟವಾದ ಕಾರ್ಯಕ್ರಮವೆಂದರೆ ನ್ಯೂ ಯಾರ್ಕ್ ಕನ್ನಡ ಕೂಟದವರು ಪ್ರಸ್ತುತ ಪಡಿಸಿದ 'ಎತ್ತಲೋ ಮಾಯವಾದ "ಮುತ್ತು" ರಾಜ್‌ಕುಮಾರ್'. ಇದರಲ್ಲಿ ರಾಜ್ ಅವರು ನಟಿಸಿದ ಹಲವಾರು ಹಾಡು ಹಾಗೂ ಸನ್ನಿವೇಶಗಳ ಹಿನ್ನೆಲೆಗೆ ರಂಗದ ಮೇಲೆ ಅಭಿನಯಿಸಿ ರಾಜ್‌ಕುಮಾರ್ ಅವರ ನಟನೆಯ ಹಲವಾರು ಮುಖಗಳನ್ನು ಶ್ರೋತೃಗಳಿಗೆ ನೆನಪಿಸಿಕೊಟ್ಟ ಹೆಗ್ಗಳಿಕೆ ಇದರಲ್ಲಿ ಭಾಗವಹಿಸಿದ ಕಲಾವಿದರದು. ನಿಜವಾಗಿಯೂ ಈ ಕಾರ್ಯಕ್ರಮ ರಾಜ್‌ಕುಮಾರ್ ಅವರನ್ನು ನಾವೆಲ್ಲರೂ ಎಷ್ಟು ಕಳೆದುಕೊಂಡಿದ್ದೇವೆ ಎಂದು ತೋರಿಸಿಕೊಟ್ಟಿತಲ್ಲದೇ, ಹಳೆಯ ಚಿತ್ರಗಳ ಎಷ್ಟೋ ಗೀತೆ-ಸನ್ನಿವೇಶಗಳನ್ನು ಆರಿಸಿ ಅದಕ್ಕೆ ತಕ್ಕ ಅಭಿನಯವನ್ನು ನೀಡಿದ ಕಲಾವಿದರ ಕೌಶಲ್ಯ ಹಾಗೂ ತಯಾರಿಯನ್ನು ಮೆಚ್ಚಬೇಕಾದದ್ದೇ.

ಶನಿವಾರ ಸಂಜೆಯ ಎರಡು ಮುಖ್ಯ ಕಾರ್ಯಕ್ರಮಗಳೆಂದರೆ ಸಂಗೀತಾ ಕಟ್ಟಿ ಹಾಗೂ ನಾಗವಲ್ಲಿ ನಾಗರಾಜ್ ಅವರ ಜುಗಲ್‌ಬಂದಿ ಸಂಗೀತ ಹಾಗೂ ಅದರ ನಂತರ ಎಸ್.ಪಿ. ಬಾಲಸುಬ್ರಮಣ್ಯಂ ಅವರ ರಸಮಂಜರಿ. ಸಂಗೀತಾ ಕಟ್ಟಿ ಅವರ ಸಂಗೀತವನ್ನು ನಾನು ಈ ಹಿಂದೆ ಹಲವಾರು ಬಾರಿ ಕೇಳಿದ್ದರೂ ವಿಸ್ತಾರವಾದ ರಾಜ್‌ಕುಮಾರ್ ಹಾಲ್‌ನಲ್ಲಿ ಅವರ ಧ್ವನಿ ತರಂಗಗಳು ಎಂತಹವರಿಗೂ ತನ್ಮತೆಯನ್ನು ಮೂಡಿಸಿ, ಆಯಾ ರಾಗದ ಉತ್ತುಂಗಕ್ಕೆ ಕರೆದೊಯುತ್ತಿದ್ದವು. ಕಣ್ಣುಮುಚ್ಚಿಕೊಂಡು ಸಂಗೀತ ಆಸ್ವಾದಿಸಿದ ನನ್ನಂತಹ ಕೆಲವರಿಗೆ ಇದೊಂದು ಬಹಳ ವಿಶೇಷವಾದ ಅನುಭವವಾಗಿತ್ತು. ನಂತರ ಪ್ರೇಕ್ಷಕರನ್ನು ಹೆಚ್ಚಾಗಿ ಕಾಯಿಸದೇ ಎಸ್.ಪಿ. ಶೈಲಜಾ, ಮಲ್ಲಿಕಾರ್ಜುನ್ ಅವರ ಸಹಾಯದೊಂದಿಗೆ ಜನರನ್ನು ರಂಜಿಸಿದವರು ಬಾಲಸುಬ್ರಮಣ್ಯಂ. ಈ ಕಾರ್ಯಕ್ರಮಕ್ಕೆಂದೇ ವಿಶೇಷವಾಗಿ ಹಾಡುಗಳನ್ನು ಆಯ್ದುಕೊಂಡು ಬಂದು, ಒಂದು ಚೂರೂ ಸಮಯವನ್ನು ವ್ಯಯಿಸದೇ ಪ್ರೇಕ್ಷಕರಿಗೆ ತಮ್ಮ ಸಿರಿಕಂಠದ ಸವಿಯನ್ನು ಉಣಬಡಿಸಿದವರು ಎಸ್.ಪಿ.ಬಿ. ಅವರ ಧ್ವನಿ ಎಷ್ಟು ಆಳವಾಗಿದೆಯೆಂದರೆ ಈ ಮೂರ್ನಾಲ್ಕು ದಶಕಗಳಲ್ಲಿ ಅವರು ಬಹಳಷ್ಟು ಬೆಳೆದಿದ್ದಾರೆ ಎನಿಸಿತು. ತಮ್ಮ ಮೇಲೆ ವಿಶೇಷ ಪ್ರೀತಿಯನ್ನು ತೋರಿಸಿದ ಕನ್ನಡಿಗರನ್ನು ಘಳಿಗೆ-ಘಳಿಗೆಗೆ ನೆನೆಸಿಕೊಳ್ಳುತ್ತಿದ್ದ ಅವರು, ಎಷ್ಟೋ ಜನ ಹಿನ್ನೆಲೆ ಸಂಗೀತ ನಿರ್ದೇಶಕರನ್ನೂ ನಟ-ನಟಿಯರನ್ನೂ ಸ್ಮರಿಸಿದರು. ಜೊತೆಗೆ ಪ್ರತಿಯೊಂದು ಹಾಡಿಗೂ ತಮ್ಮ ವಿಶೇಷವಾದ ನಿರೂಪಣೆಯಿಂದ ರಂಜಿಸಿದರು. ಕನ್ನಡ ಹಿನ್ನೆಲೆಗಾಯನಕ್ಕೆ ಎಸ್.ಪಿ.ಬಿ. ಅವರ ಕೊಡುಗೆಯನ್ನು ನೆನೆದು ಇದೆ ಸಮಾರಂಭದಲ್ಲಿ ಅವರಿಗೆ 'ಸಂಗೀತ ಸೌರಭ' ಎಂಬ ಬಿರುದನ್ನು ಪ್ರದಾನ ಮಾಡಲಾಯಿತು.

***

ಕಾರ್ಯಕ್ರಮದ ಸುಧೀರ್ಘ ವಿವರವನ್ನು ಇಲ್ಲಿ ಕೊಡಲಾಗದಿದ್ದುದಕ್ಕೆ ಹಾಗೂ ಪ್ರತಿಯೊಂದು ಕಾರ್ಯಕ್ರಮವನ್ನೂ ಇಲ್ಲಿ ನಿಖರವಾಗಿ ವಿವರಿಸಲಾಗದಿದ್ದುದಕ್ಕೆ ಕ್ಷಮೆ ಇರಲಿ.

ನಾಳೆ ಮೂರನೇ ಹಾಗೂ ಕೊನೆಯ ಭಾಗವನ್ನು ಬರೆಯುವಾಗ ಅದರಲ್ಲಿ ನಾನು ನೋಡಿದ ಇತರ ಮುಖ್ಯ ಕಾರ್ಯಕ್ರಮಗಳ ಪರಿಚಯ ಮಾಡಿಕೊಡುವುದರೊಂದಿಗೆ ಮುಂದಿನ ಸಮ್ಮೇಳನ ಹೇಗಿರಬೇಕು, ನಾವು ಏನನ್ನು ಮಾಡಬಹುದು ಎಂಬುದರ ಬಗ್ಗೆ ಸೂಚ್ಯವಾಗಿ ಬರೆಯಲು ಪ್ರಯತ್ನಿಸುತ್ತೇನೆ. ನಾಳೆ ನಾನು ತೆಗೆದ ಒಂದಿಷ್ಟು ಚಿತ್ರಗಳ ಪೈಕಿ ಉತ್ತಮವಾದದ್ದನ್ನು ಆರಿಸಿ ಹಾಕುವುದರ ಜೊತೆಗೆ ನೀವು ಭೈರಪ್ಪನವರ ಕಾದಂಬರಿಗಳೆಲ್ಲವನ್ನೂ ಈವರೆಗೆ ಓದಿದ್ದರೆ ನಿಮ್ಮ ಓದು ಏಕೆ "ಅಪೂರ್ಣ"(ವಾಗಿದ್ದಿರಬಹುದು)ಎಂಬುದನ್ನೂ ತಿಳಿಸುತ್ತೇನೆ...ಕಾದು ನೋಡಿ!

2 comments:

Anonymous said...

ಸಮ್ಮೇಳನದ ಗಡಿಬಿಡಿಯ ನಡುವೆಯೂ ಬಿಡುವು ಮಾಡಿಕೊಂಡು ಕಾರ್ಯಕ್ರಮಗಳ ಬಗ್ಗೆ ವಿವರವಾಗಿ ಬರೆದಿದ್ದೀರಿ. ಧನ್ಯವಾದಗಳು. ಮುಂದಿನ ಭಾಗಕ್ಕಾಗಿ ಕಾಯುವಂತೆ ಮಾಡಿದ್ದೀರಿ :)

Satish said...

ಸಮ್ಮೇಳನದಲ್ಲಿ ಯಾವ ಗಡಿಬಿಡಿಯೂ ಇರಲಿಲ್ಲ, ಗಡಿಬಿಡಿ ಎಲ್ಲಾ ಈಗ ಶುರುವಾಗಿದೆ ನೋಡಿ...

ಈ ಬರಹಗಳು ನನಗೇ ಖುಷಿಯನ್ನು ಕೊಟ್ಟಿಲ್ಲ, ನಾನು ಕಾರ್ಯಕ್ರಮಗಳು ನಡೆದ ಹಾಗೆ ನೋಟ್ಸ್ ತೆಗೆದುಕೊಂಡಿದ್ದರೆ ಚೆನ್ನಾಗಿತ್ತು.

ಸಾಧ್ಯವಾದರೆ ಈ ರಾತ್ರಿ ಕೊನೆಯ ಭಾಗವನ್ನು ಬರೆಯುತ್ತೇನೆ, ಇಲ್ಲವೆಂದಾದರೆ ನನ್ನ ಬಾಸನ್ನು ಬೈದುಕೊಳ್ಳಿ!