Tuesday, September 19, 2006

ಮಾನವ ನಿರ್ಮಿತ ಗಡಿ

ತಮ್ಮ ದೇಶದಿಂದ ಹೊರಕ್ಕೆ ವಲಸೆ ಬಂದವರಿಗೆ ತಮ್ಮ ಮಕ್ಕಳನ್ನು ಯಾವ ಪರಿಸರ-ಸಂಸ್ಕೃತಿಯಲ್ಲಿ ಬೆಳೆಸಬೇಕು ಎನ್ನುವ ಪ್ರಶ್ನೆ ಒಂದಲ್ಲ ಒಂದು ಹಂತದಲ್ಲಿ ಕಾಡಿಯೇ ಕಾಡಿರುತ್ತದೆ. ಮಕ್ಕಳು ಇನ್ನೂ ಚಿಕ್ಕವರಿದ್ದಾಗ ಒಂದು ರೀತಿಯ ಆಲೋಚನೆಗಳು ಬಂದರೆ ಮಕ್ಕಳು ಶಾಲೆಗೆ ಹೋಗುವ ವಯಸ್ಸು ಬಂದಂತೆ, ಹಾಗೆ ಮುಂದೆ ಪ್ರತಿಯೊಂದು ಹಂತದಲ್ಲಿಯೂ ಪ್ರತಿಯೊಬ್ಬ ತಂದೆ-ತಾಯಂದಿರಿಗೂ ಎರಡು ಸಂಸ್ಕೃತಿಗಳ ಸಂಘರ್ಷ ಒಂದಲ್ಲ ಒಂದು ರೀತಿಯಿಂದ ಅನುಭವಕ್ಕೆ ಬಂದಿರುತ್ತದೆ. ಮಕ್ಕಳು ಅವರವರ ನೇಟಿವ್ ಸಂಪ್ರದಾಯದಲ್ಲಿ ಬೆಳೆಯಲಿ ಎನ್ನುವ ದೃಷ್ಟಿಕೋನದಿಂದ ಹಿಡಿದು ಪೋಷಕರ ಕಟ್ಟಾ ಸಂಪ್ರದಾಯ ನೆಲೆಗಟ್ಟಿನಲ್ಲಿಯೇ ಬೆಳೆಯಬೇಕು ಎನ್ನುವ ತನಕ ಹಲವಾರು ರೀತಿಯ ಮನಸ್ಥಿತಿಗಳು ನಮಗೆ ದೊರೆಯುತ್ತವೆ.

ನನ್ನ ಪರಿಚಯದವರೊಬ್ಬರು ಪಾಕೀಸ್ತಾನೀ ಮೂಲದ ಡಾಕ್ಟರು ಇತ್ತೀಚೆಗಷ್ಟೇ ಅಮೇರಿಕದಲ್ಲಿ ಎಂ.ಡಿ. ಪದವಿ ಮುಗಿಸಿ ಅಲ್ಲಿಲ್ಲಿ ಕೆಲಸ ಹುಡುಕುತ್ತಿದ್ದಾರೆ. ಅವರು ಮುಸ್ಲಿಮ್ ಸಂಪ್ರದಾಯವನ್ನು ಪಾಲಿಸಿಕೊಂಡು ಬಂದವರು, ತಮ್ಮ ಮಕ್ಕಳನ್ನೂ ಸಹ ಅದೇ ನೆಲೆಗಟ್ಟಿನಲ್ಲಿಯೇ ಬೆಳೆಸಬೇಕು ಎಂದು ನಿರ್ಧರಿಸಿದವರು. ಅವರಿಗೆ ಕೆಲಸ ಹುಡುಕಲು ಇರುವ ತೊಂದರೆಗಳಲ್ಲಿ ತಾವು ಕೆಲಸ ಮಾಡುತ್ತಿರುವ ಊರಿನಲ್ಲಿ ಮಸೀದಿಯೂ ಇರಬೇಕು ಎನ್ನುವುದು ಅವರ ಅಗತ್ಯಗಳಲ್ಲಿ ಒಂದು. ಆದ್ದರಿಂದ ಹೆಚ್ಚು ಅವಕಾಶಗಳು ಕೈಗೆ ಬಂದರೂ ಬಾಯಿಗೆ ಬರುತ್ತಿಲ್ಲ ಎನ್ನುವಂತಾಗಿ ಇದ್ದುದರಲ್ಲಿಯೇ ಹೊಂದಿಕೊಂಡು ಹೋಗಲು ಅವರು ತೀರ್ಮಾನಿಸಿದ್ದಾರೆಂದು ತಿಳಿಯಿತು. ಅವರಿಗಿರುವ ಇಬ್ಬರು ಮಕ್ಕಳು, ಒಬ್ಬ ಹುಡುಗ, ಒಬ್ಬ ಹುಡುಗಿ - ಬಹಳ ಸೌಮ್ಯ ಮುಖಗಳು ಹಾಗೂ ಮನಸ್ಥಿತಿ - ಸುಮಾರು ಹತ್ತು ವರ್ಷದ ಆಜುಬಾಜು ಇರಬಹುದಾದ ವಯಸ್ಸು. ಈ ಡಾಕ್ಟರ್ ಕುಟುಂಬ ಯಾವುದೋ ಸಂಬಂಧಿಕರ ಮದುವೆಗೆಂದು ವರ್ಜೀನಿಯಾಕ್ಕೆ ಹೋಗಿದ್ದರಂತೆ, ಅಲ್ಲಿ ಪಕ್ಕಾ ದೇಸೀ ವಾತಾವರಣ ಇತ್ತೆಂದು ಈ ಡಾಕ್ಟರ್ ಮೂಲಕವೇ ನನಗೆ ತಿಳಿಯಿತು, ಅವರೇ ಹೇಳಿದ ಹಾಗೆ ಅವರ ಮಗಳು ಅಲ್ಲಿ ನಡೆಯುತ್ತಿದ್ದ ಆಚರಣೆಗಳನ್ನು ನೋಡಿ, ಕಾರಿನಲ್ಲಿ ಕುಳಿತು ಎಲ್ಲಿಂದ ಎಲ್ಲಿಗೆ ಬಂದೆವೊ ಎಂದುಕೊಂಡು, 'ಅಪ್ಪಾ ಇದು ಪಾಕಿಸ್ತಾನವೇ?' ಎಂದು ಕೇಳಿದ್ದಳಂತೆ. ನನಗೆ ಈ ವಿಷಯವನ್ನು ಡಾಕ್ಟರು ತಮಾಷೆಯಾಗಿ ಹೇಳಿದರೂ ಅದರಲ್ಲಿನ ತಮಾಷೆಯ ಜೊತೆಗೆ ಆ ಮುಗ್ಧ ಮನಸ್ಸಿನಲ್ಲಾಗುವ ವ್ಯಾಪಾರಗಳೂ ಸಹ ಸ್ಪಷ್ಟವಾದಂತೆನಿಸಿತು. ಬಹುಷಃ ಆ ಮಕ್ಕಳು ಅವರ ಜೀವನದಲ್ಲಿ ನೋಡಿದ ಮೊದಲನೇ ಮದುವೆ ಇರಬೇಕು, ಅಮೇರಿಕನ್ ನೆಲೆಗಟ್ಟಿನಲ್ಲಿ ಅವರಿಗೆ ಎಲ್ಲವೂ ಹೊಸದಾಗಿ ಕಂಡಿರಬೇಕು. ಈ ಡಾಕ್ಟರ್ ಕುಟುಂಬ ಇನ್ಯಾವತ್ತೂ ಹಿಂತಿರುಗಿ ಪಾಕಿಸ್ತಾನಕ್ಕೆ ಹೋಗುವಂತಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ - ಅದಕ್ಕೆ ಕಾರಣ ಅವರ ಎಕ್ಸೈಲ್ ಸಿಚುವೇಷನ್ ಇರಬಹುದು, ಅಥವಾ ಪಾಕಿಸ್ತಾನ, ಅಫಘಾನಸ್ತಾನದ ಗಡಿಯಲ್ಲಿನ ಊರಿಗೆ ಹೋಗಿ ಅವರು ಮಾಡುವುದಾದರೂ ಏನು ಎಂಬುದಿರಬಹುದು. ಒಂದು ಕಡೆ ತಂದೆ-ತಾಯಿಗಳಿಗೆ ಹೊರಗಿನ ವಾತಾವರಣಕ್ಕೆ ಹೊಂದಿಕೊಳ್ಳುತ್ತಲೇ ತಮ್ಮ ನೇರಕ್ಕೆ ತಕ್ಕ ವಾತಾವರಣವನ್ನು ಹುಟ್ಟುಹಾಕಿಕೊಳ್ಳುವ ಸವಾಲು, ಮತ್ತೊಂದು ಕಡೆ ಈ ಪರಿಸರದಲ್ಲಿ ಬೆಳೆದ ಮಕ್ಕಳು ಎರಡೂ ಕಡೆಯಲ್ಲಿ ಹೊಂದಿಕೊಳ್ಳುವ ಅನಿವಾರ್ಯತೆ. ಹೀಗೆ ನಮ್ಮಲ್ಲಿ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಹಂತದಲ್ಲಿ ಈ ದ್ವಂದ್ವದ ಅನುಭವವಾಗುವುದು ಸಹಜ, ಈ ಅನುಭವ ನಾವು ಬೆಳೆದಂತೆಲ್ಲ ಹಲವಾರು ರೀತಿಯಲ್ಲಿ ಹರಡಿಕೊಳ್ಳುತ್ತದೆ, ಮೂಲಭೂತವಾಗಿ ನೋಡುವುದಕ್ಕೆ ಎರಡೇ ಎನ್ನುವಂತಿದ್ದರೂ ನಮ್ಮ ಮನಸ್ಸಿನ ವ್ಯಾಪಾರಗಳು ಹಲವಾರು ನೆಲೆಗಟ್ಟಿನಲ್ಲಿ ಕೆಲಸ ಮಾಡತೊಡುಗುತ್ತವೆ.

ಕಾಮಿಡಿ ಸೆಂಟ್ರಲ್‌ನಲ್ಲಿ ಒಬ್ಬರು ತಮಾಷೆ ಮಾಡುತ್ತಾ 'ಈ ಹರಿಕೇನ್, ಸುಂಟರಗಾಳಿಗಳು ಬರುವ ಊರಿನಲ್ಲಿ ಜನರು ಏಕಿರುತ್ತಾರೆ, ಅವರೆಲ್ಲರೂ ಬೇರೆ ಊರುಗಳಿಗೆ ಏಕೆ ಹೋಗೋದಿಲ್ಲ - ಒಂದು ವೇಳೆ ಊರು ಬಿಟ್ಟು ಹೋಗದಿದ್ದರೆ ಕೊನೆಗೆ ನೀರು ಬಂತು, ಗಾಳಿ ಬಂತು ಎಂದು ಬೊಬ್ಬೆ ಹಾಕುವುದು ಏಕೆ?' ಎನ್ನುವ ಮಾತುಗಳನ್ನು ಆಡಿದರು. ಅದಕ್ಕೆ ತಕ್ಕ ಮಟ್ಟಿಗೆ ನಗುವೂ ಹುಟ್ಟಿತು, ಚಪ್ಪಾಳೆ ಸದ್ದೂ ಕೇಳಿತು. ಆದರೆ, ನಿಜವಾಗಿಯೂ ಈ ಚಂಡಮಾರುತ, ಸುಂಟರಗಾಳಿ ಬರುವ ಪ್ರದೇಶದಿಂದ ಜನರು ಊರುಬಿಟ್ಟು ಹೊರಡಲು ಸಾಧ್ಯವೇ? ಹಾಗೆ ಯೋಚಿಸಲು ಸಾಧ್ಯವೇ ಇಲ್ಲ, ಊರು ಬಿಟ್ಟು ಎಲ್ಲರೂ ಹೋಗುವುದಾದರೂ ಎಲ್ಲಿಗೆ? 'ಬೆಟ್ಟದಾ ಮೇಲೊಂದು ಮನೆಯ ಮಾಡಿ ಮೃಗಗಳಿಗೆ ಅಂಜಿದೊಡೆ ಎಂತಯ್ಯಾ' ಎಂಬಂತೆ ಅಲ್ಲಿ ವಾಸಿಸುವ ಕುಟುಂಬಗಳು ತಲತಲಾಂತರದಿಂದ ನೆಲೆಸಿವೆ, ಇನ್ನು ಮುಂದೆಯೂ ಹಾಗೆಯೇ ಇರುತ್ತದೆ. ಬದಲಾಗಬೇಕಾದವರು ಅವರಲ್ಲ, ತಾವು ಸುರಕ್ಷಿತ ಸ್ಥಳದಲ್ಲಿ ಕುಳಿತುಕೊಂಡಿದ್ದೇವೆ ಎಂದುಕೊಂಡವರು ನಿಜವಾಗಿಯೂ ಮತ್ತೊಮ್ಮೆ ಯೋಚಿಸಬೇಕು. ನಮ್ಮ ನ್ಯೂ ಜೆರ್ಸಿ-ನ್ಯೂ ಯಾರ್ಕ್ ಏರಿಯಾಗಳಲ್ಲಿ ವಾಹನ ಅಫಘಾತಗಳಲ್ಲಿ ವರ್ಷಕ್ಕೆ ಸಾಯುವವರ ಸಂಖ್ಯೆ ಉಳಿದ ಪ್ರದೇಶಗಳಲ್ಲಿ ನೈಸರ್ಗಿಕ ಪ್ರಕೋಪಗಳಿಂದ ಸಾಯುವವರ ಸಂಖ್ಯೆಗಿಂತ ಹೆಚ್ಚಿರಬಹುದು. ನಮ್ಮಲ್ಲಿ ಅಗತ್ಯವಾಗಿ ಕಾಣೋ (pseudo) ಮಿಥ್ಯ-ಟೈಪ್ ಎ ಮೆಂಟಾಲಿಟಿಗಳು, ನಗರದ ಬದುಕಿಗೆ ಹೊಂದಿಕೊಂಡೇ ಬರುವ ಯಾಂತ್ರಿಕ ಜೀವನ ಇವೆಲ್ಲವೂ ನಮ್ಮನ್ನು ಅಸ್ವಸ್ಥರನ್ನಾಗಿ ಮಾಡಬಹುದು, ಅಥವಾ ಧೀರ್ಘಕಾಲ ಮಾನಸಿಕ ಒತ್ತಡದಲ್ಲಿ ಬದುಕುವಂತೆ ಮಾಡಿ ಸಮಾಧಾನದ ಬದುಕು ಎಂದರೇನು ಎಂದು ಆಲೋಚಿಸುವಂತೆ ಮಾಡಬಹುದು. ಹೀಗೆ ಪ್ರತಿಯೊಂದು ಪ್ರದೇಶಗಳಲ್ಲೂ ಅದರ ಅನುಕೂಲ-ಅನಾನುಕೂಲಗಳು ಇದ್ದೇ ಇರುತ್ತವೆ.

ನಾವು ನಮ್ಮದು ಎಂದುಕೊಂಡ ಊರುಗಳ ಬಗ್ಗೆ ಇರಲಿ, ನಾವು ನಮ್ಮದು ಎಂದುಕೊಂಡ ದೇಶದ ಬಗ್ಗೆಯೇ ಎಷ್ಟೋ ಸಾರಿ ಯೋಚಿಸತೊಡಗುತ್ತೇನೆ. ಇಲ್ಲೇ ಹುಟ್ಟಿದ ಮಕ್ಕಳನ್ನು ಯಾವ ಯಾವ ತಂದೆ-ತಾಯಂದಿರು ಯಾವ ರೀತಿ ಬೆಳೆಸುತ್ತಾರೆ, ಹೇಗೆ ಬೆಳೆಸಿದರೆ ಸರಿ ಎಂಬ ಜಿಜ್ಞಾಸೆಗೊಳಗಾಗಿದ್ದೇನೆ. ಈ ಮಕ್ಕಳು ಬೆಳೆಯುವ ಪರಿಸರ ಅವರ ನೈಸರ್ಗಿಕ ಹಕ್ಕೇ ಅಥವಾ ತಂದೆತಾಯಂದಿರ ವಿಚಾರ-ಆಯ್ಕೆಗಳಿಗೆ ಬಿಟ್ಟದ್ದೇ? ನಮ್ಮ ಮಕ್ಕಳು ಏಕೆ ನಮ್ಮ ಭಾಷೆ/ಪರಂಪರೆಯನ್ನು ಕಲಿಯಬೇಕು, ಹಾಗೆ ಕಲಿಯದಿದ್ದರೆ ಅದರ ಬದಲಿಗೆ ಇನ್ನೇನನ್ನು ಕಲಿಯಬೇಕು ಕಲಿಯುತ್ತಾರೆ ಎನ್ನುವುದು ಮತ್ತಷ್ಟು ಗೋಜಲಾದ ವಿಚಾರ. ಪೋಷಕತ್ವದ ಬಗ್ಗೆ ನಾನು ಓದಿರುವ ಪುಸ್ತಕಗಳಿಗೂ ನಾನು ಬೆಳೆದು ಬಂದ ಬಗೆಗೂ ಪೂರ್ವ-ಪಶ್ಚಿಮದಷ್ಟು ವ್ಯತ್ಯಾಸವಿರುವಾಗ ಯಾರೋ ಒಬ್ಬರು ಸ್ಟ್ಯಾಂಡರ್ಡ್ ಎಂದು ಕರೆದಿರುವ ನಿದರ್ಶನಗಳನ್ನು ಎಷ್ಟರ ಮಟ್ಟಿಗೆ ನನ್ನಂತಹವರು ಕೈಗೊಂಡು ಧೀರ್ಘಕಾಲೀನವಾಗಿ ನಡೆಸಿಕೊಂಡು ಬರಬಹುದು?

ನಮ್ಮ ಹುಟ್ಟೂರು, ಅದರ ನೆನಪು ನಮಗೆಲ್ಲರಿಗೂ ಒಂದು ಹಿತವಾದ ವಾತಾವರಣದ ಗುಂಗನ್ನು ಹುಟ್ಟಿಸುತ್ತದೆ. ಆ ಊರಿನ ಉದ್ದಗಲಗಳ ಅಪಾರವಾದ ಮಾಹಿತಿ ಯಾವಾಗ ಬೇಕೋ ಆಗ ಕಣ್ಣ ಮುಂದೆ ಬರುವಂತಹ ಅಪಾರವಾದ ಸ್ಟೋರೇಜ್ ಹಾಗೂ ರಿಟ್ರೀವಲ್ ಮಾಡಬಹುದಾದ ನರಮಂಡಲವನ್ನು ನಿಸರ್ಗ ನಮಗೆ ನೀಡಿದೆ. ಊರಿನ ನೆನಪು ಒಂದು ರೀತಿಯ ಅಕ್ಷಯ ಪಾತ್ರೆಯ ಹಾಗೆ, ಮೊಗೆದಷ್ಟೂ ಬರಿದಾಗುವ ಪ್ರಶ್ನೆಯೇ ಇಲ್ಲ. ಹೀಗಿರುವ ಊರನ್ನು ಬಿಟ್ಟು ಬಂದದ್ದಾಯಿತು, ದೇಶವನ್ನು ಬಿಟ್ಟು ಬಂದದ್ದಾಯಿತು - ನನ್ನ ಪಾಕಿಸ್ತಾನದಿಂದ ಬಂದ ಡಾಕ್ಟರ್ ಸ್ನೇಹಿತರ ಹಾಗೆ, ಕ್ಯೂಬಾ ಅಥವಾ ಚೈನಾದಿಂದ ಬಂದ ಕೆಲವರಿಗೆ ಇರುವ ಹಾಗೆ ಇನ್ಯಾವತ್ತೂ ಹಿಂತಿರುಗಿ ಹೋಗದ ಪರಿಸ್ಥಿತಿಯೇ ಹುಟ್ಟಿತೆನ್ನಿ, ಅದರ ಕಲ್ಪನೆ ಹೇಗಿದ್ದಿರಬಹುದು? ನಮ್ಮ ದೇಶಕ್ಕೇ ನಾವು ಹೋಗದೇ ಇರುವ ಹಾಗಿದ್ದರೆ ಅದರ ಊಹೆಯೇ ಬಹಳಷ್ಟು ಸಂಕಷ್ಟವನ್ನು ಹುಟ್ಟಿಸಬಲ್ಲದು ಇನ್ನು ನಿಜಸ್ಥಿತಿಯ ಮಾತೇ ದೂರ. ಅಥವಾ ಇದು ಕೇವಲ ನನ್ನ ಅನುಭವ, ಅನಿಸಿಕೆ ಅಥವಾ ಸ್ಪಂದನ ಮಾತ್ರ. ತಮ್ಮ ದೇಶದ ಮೂಲ ಪಾಸ್‌ಪೋರ್ಟನ್ನು ಬ್ಯಾಂಕ್ ಪಾಸ್‌ಬುಕ್ಕಿನ ಹಾಗೆ ಬಿಸಾಡಿ ಇನ್ನೊಂದು ದೇಶವನ್ನು ಅಪ್ಪಿ ಹಿಡಿದವರನ್ನೂ ಬಲ್ಲೆ, ತಮ್ಮ ದೇಶದ ನಾಗರಿಕತೆಯನ್ನು ಕಳೆದುಕೊಳ್ಳಲಿಚ್ಛಿಸದೇ ಹಲವಾರು ತೊಂದರೆಗಳಿಗೆ ಎಡೆ ಮಾಡಿಕೊಂಡ ಭಾವುಕರನ್ನೂ ನಾನು ಬಲ್ಲೆ. ಹಾಗಾದರೆ ನಮ್ಮ ಊರು, ರಾಜ್ಯ, ದೇಶ ಇವೆಲ್ಲವೂ ಒಂದು ಭೋಗೋಳಿಕ ಗೆರೆಗಳು ಮಾತ್ರವೇನು? ಅಥವಾ ನಾವೆಂದೂ ಹೃದಯದಲ್ಲಿ ಜಾಗವಿಟ್ಟುಕೊಂಡಿರುವ ಹಾಗೆ ಮಾಡುವ ನಮ್ಮ ನಂಬಿಕೆಗಳ ಒರತೆಗಳೇ?

ನಾಡು-ನುಡಿ, ದೇಶ-ಭಾಷೆಗಳನ್ನೆಲ್ಲ ಬಿಟ್ಟು ಬಂದ ಮೇಲೆ, ನಮಗೆ ವಯಸ್ಸಾದಂತೆಲ್ಲ ಅಲ್ಲಿನ ನಮ್ಮವರೆಲ್ಲ ಅತ್ತಿತ್ತ ಚದುರಿಯೋ ಇಲ್ಲಾ ಕಾಲನ ಆಜ್ಞೆಗೆ ಮಣಿದೋ ಮರೆಯಾಗಿ ಹೋದ ಮೇಲೆ ನಮ್ಮ ಪರಂಪರೆಯ ಸ್ಮರಣೆ ಏಕಿರಬೇಕು, ಎಷ್ಟಿರಬೇಕು? ಇಷ್ಟರ ಮೇಲೆ ನಮ್ಮ ಅಂಗಳದಲ್ಲಿ ಆಟವಾಡುವ ಚಿಣ್ಣರು ಗೋಲಿ, ಬುಗುರಿ, ಚಿಣ್ಣಿದಾಂಡುಗಳನ್ನು ಆಡಲಿ ಎನ್ನುವ ಯೋಚನೆ ಏಕಿರಬೇಕು? ಹಿಂದೆಲ್ಲಾ ಯೂರೋಪಿನಿಂದಲೋ ಮತ್ತೆಲ್ಲಿಂದಲೋ ರಾಜಕೀಯವಾಗಿ, ಸಾಮಾಜಿಕವಾಗಿ, ಧಾರ್ಮಿಕವಾಗಿ ನೆಲೆಗಟ್ಟನ್ನು ಕಳೆದುಕೊಂಡು ಬಂದವರ ಬಗ್ಗೆಯಾಗಲೀ, ಅಥವಾ ಕ್ಯೂಬಾದಿಂದಲೋ, ಚೀನಾದಿಂದಲೋ ಹಿಂದೆ ತಿರುಗಿ ಹೋಗದ ಹಾಗೆ ಬಂದವರ ಬಗ್ಗೆಯಾಗಲೀ ಹೇಳದೇ, ಕೇವಲ ವ್ಯಾಪಾರ ಹಾಗೂ ಉದ್ಯೋಗವನ್ನು ಅರಸಿಕೊಂಡು ಬಂದವರನ್ನು ಕುರಿತು ಯೋಚಿಸಿದರೆ ಸಮಸ್ಯೆ ಸ್ವಲ್ಪ ಹಗುರವಾದಂತೆ ಕಾಣಿಸಿದರೂ, ನಮಗೆ ಯಾವುದೋ ಗೊತ್ತಿಲ್ಲ ಎಂಬ ಕಾರಣ ಇನ್ಯಾರನ್ನೋ ನಮ್ಮ ನಂಬಿಕೆಗಳಿಗೆ ಸೀಮಿತವಾಗಿರುವಂತೆ ಇರಿಸುವ ಬಂಧನ ಇವರೆಡನ್ನೂ ತುಲನೆ ಮಾಡಿ ನೋಡಬೇಕಾದ ಅನಿವಾರ್ಯತೆ ಹುಟ್ಟುತ್ತದೆ.

***

ಮಾನವ ನಿರ್ಮಿತ ಗಡಿಗಳಿಗಿಂತ ನಿಸರ್ಗ ನಿರ್ಮಿತ ನಿಲುವುಗಳು ದೊಡ್ಡವು ಎಂದುಕೊಂಡು ಸುಮ್ಮನಿರುವುದೋ ಅಥವಾ ಬಹುದೊಡ್ಡ ಸಂದೇಶವನ್ನು ಸಾರುವ ಮುಖ ಮಾಡಿಕೊಳ್ಳುವುದೋ ಲೇಸು!

2 comments:

sritri said...

ನನ್ನನ್ನು ಕಾಡುವ ಪ್ರಶ್ನೆಗಳೆಲ್ಲಾ ಮತ್ತೊಮ್ಮೆ ನಿಮ್ಮ ಈ ಬರಹದ ರೂಪ ತಾಳಿ ಬಂದಂತಿದೆ !

ಈ ರೀತಿಯ ಮಾನಸಿಕ ತಳಮಳಗಳೆಲ್ಲ ಇರುವುದು ಯಾರಿಗೆ ಗೊತ್ತಾ? ಮತ್ತೆ ಹಿಂದಿರುಗಿ ಹೋಗುತ್ತೇವೆ/ಹೋಗಲಿದ್ದೇವೆ ಎಂದು ಭಾವಿಸುವವರಿಗೆ ಮಾತ್ರ!

ಮರಳಿ ಹೋಗುವ ಪ್ರಶ್ನೆಯೇ ಇಲ್ಲ, ಕಷ್ಟವೋ, ಸುಖವೋ, ಬಂದುದ್ದನ್ನು ಅನುಭವಿಸಿಕೊಂಡು ಇಲ್ಲೇ ಇರುತ್ತೇವೆ ಎಂದು ನಿಶ್ಚಿಂತೆಯಿಂದ ಇರುವ ಹಲವಾರು ಜನರನ್ನು ನೋಡಿದ ಮೇಲೆ ಹೀಗನ್ನಿಸಿತು.

Satish said...

ಪರವಾಗಿಲ್ಲ ನನ್ನ ಹಾಗೆ ಕೊನೇಪಕ್ಷ ಒಬ್ಬರಾದರೂ ಈ ರೀತಿ ಆಲೋಚನೆಗಳಿಗೆ ಬಾಧ್ಯಸ್ಥರಾಗಿದ್ದಾರೆ ಎಂದು ಹೇಳಿಕೊಂಡರಲ್ಲ!

ನಿಶ್ಚಿಂತೆಯಿಂದಿರುವಂತೆ ಕಾಣುವ ಜನರಿಗೂ ಒಂದಲ್ಲಾ ಒಮ್ಮೆ ಹಲವಾರು ವಿಷಯಗಳು ಬಾಧಿಸಿರುತ್ತವೆ, ಕೊನೆಕೊನೆಗೆ they get used to it ಅನ್ನಿಸುತ್ತದೆ.