Tuesday, September 26, 2006

ನಾವು ಮತ್ತು ನಮ್ಮ ವಸ್ತುನಿಷ್ಟ ನಿಲುವುಗಳು

ಅವರವರ ಸ್ಪಂದನಶೀಲತೆಯ ಮೇಲೆ ಆಗುಹೋಗುಗಳ ಕುರಿತು ಒಂದಲ್ಲಾ ಒಂದು ನಿಲುವು ನಮ್ಮೆಲ್ಲರಲ್ಲಿರೋದು ಸರ್ವೇ ಸಾಮಾನ್ಯ. ವೃತ್ತಿಪರರಾಗಿ ಯೋಚಿಸಿ ನಮ್ಮ ಅನುಭವಗಳ ಹಿನ್ನೆಲೆಯಲ್ಲಿ ಒಂದು ಸಂದರ್ಭವನ್ನು ಕುರಿತು ನಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುವುದರಲ್ಲಿ ಹಲವಾರು ಸಂದರ್ಭಗಳು ನಮ್ಮನ್ನು ಕಟ್ಟಿಹಾಕುವುದು ಸಾಮಾನ್ಯ. ಈ ಸಾಮಾನ್ಯವನ್ನು ಮೀರಿ ನಿಂತು ಇರುವ ಆಯಾ ವಿಷಯವನ್ನು ವಸ್ತುವಿನ ನೆಲೆಯಲ್ಲಿ ಕುರಿತು ಆಲೋಚಿಸಿ ಅದರ ಮೇಲೆ ನಮ್ಮ ಅನಿಸಿಕೆ, ದೃಷ್ಟಿಕೋನವನ್ನು ಹಂಚಿಕೊಳ್ಳೋದನ್ನ ನಾವೇಕೆ ರೂಢಿಸಿಕೊಳ್ಳೋದಿಲ್ಲ ಎಂಬ ಆಲೋಚನೆ ಬಂತು.

ಇತ್ತೀಚೆಗೆ ಓದಿದ ಪುಸ್ತಕವಿರಬಹುದು, ಅಥವಾ ಪತ್ರಿಕೆಗಳಲ್ಲಿ ದಿನವೂ ಓದುವ ವರದಿಗಳಿರಬಹುದು, ಅಥವಾ ಸ್ನೇಹಿತರು ಬರೆದ ಕಥೆ-ಕವನವನ್ನು ಕುರಿತು ನಾವು ನೀಡುತ್ತಿರುವ ಅನಿಸಿಕೆಯಾಗಿರಬಹುದು, ಅಥವಾ ಯಾರದ್ದೋ ಲೇಖನಕ್ಕೆ ಬರೆಯುತ್ತಿರುವ ಕಾಮೆಂಟ್ ಇದ್ದಿರಬಹುದು ಇವೆಲ್ಲವನ್ನೂ ಸೂಕ್ಷ್ಮವಾಗಿ ಆಲೋಚಿಸುತ್ತಾ ಬಂದಾಗ ಬಹಳಷ್ಟು ಜನ ಸಮಯದ ಅಭಾವವನ್ನೋ ಮತ್ತೇನನ್ನೋ ನೆಪವಾಗಿ ಒಡ್ಡಿ ಒಂದೇ ನುಣುಚಿಕೊಂಡು ಹೋಗುತ್ತಾರೆ, ಇಲ್ಲಾ ತಿಪ್ಪೆಸಾರಿಸಿದ ಹಾಗೆ ಏನೋ ಒಂದು ಹೇಳಿಬಿಡುತ್ತಾರೆ, ಹೀಗೆ ಮಾಡುವಲ್ಲಿ ನಾನೂ ಹೊರತಲ್ಲ ಅನ್ನಿಸಿತು. ನಮಗೆ ರಚನಾತ್ಮಕವಾಗಿ (constructive) ಫೀಡ್‌ಬ್ಯಾಕ್ ಕೊಡೋದಕ್ಕೆ ಬರೋದಿಲ್ಲವೋ ಅಥವಾ ಒಂದು ವೇಳೆ ನಿಜವನ್ನೇ ಹೇಳಿದರೆ ಅದರಿಂದ ಇನ್ನೇನು ಪರಿಣಾಮಗಳಾಗುತ್ತವೆಯೋ ಎಂಬ ಹೆದರಿಕೆಯೋ ಯಾರಿಗೆ ಗೊತ್ತು? ಇರಾಕ್ ಕದನವಾಗಲೀ, ಇಸ್ರೇಲ್‌ನವರು ಹಿಜಬುಲ್ಲಾ ಮೇಲೆ ನಡೆಸಿದ ಧಾಳಿಯಂತಹ ದೊಡ್ಡ ವಿಷಯಗಳನ್ನು ತೆಗೆದುಕೊಂಡು ದೊಡ್ಡ ವಾದವಿವಾದಗಳಾಗಲೀ ಎಂದೇನೂ ಹೇಳುತ್ತಿಲ್ಲ (ಹಾಗೆ ಆಗುವುದು ಒಂದು ಲೆಕ್ಕದಲ್ಲಿ ಒಳ್ಳೆಯದೆ, ಅದು ಬೇರೆ ಪ್ರಶ್ನೆ), ನಮ್ಮ ನಡುವೆ ನಡೆಯುವ ಸಣ್ಣಪುಟ್ಟ ಘಟನೆಗಳಿಗೂ ನಾವು ಸ್ವಂದಿಸಬಹುದು, ನಮ್ಮ ನಮ್ಮ ನಿಲುವುಗಳನ್ನು ಸ್ಪಷ್ಟಪಡಿಸಿಕೊಳ್ಳಬಹುದು. ಆದರೆ ಅವರವರ ಅಭಿಪ್ರಾಯಗಳು ಅವರದ್ದೇ ಆದರೂ ಅದರ ಹಿಂದೆ ಸ್ಪಷ್ಟತೆ ಇದೆಯೇ, ಸರಿಯಾದ ಕಾರಣಗಳಿವೆಯೇ, ಆಧಾರಗಳಿವೆಯೇ, ಅನಿಸಿಕೆ ಬೇರೆ, ನಂಬಿಕೆ ಬೇರೆ ಎನ್ನುವ ಪ್ರಜ್ಞೆ ಇದೆಯೇ ಎಂದೆಲ್ಲಾ ಯೋಚಿಸಬೇಕಾಗುತ್ತದೆ.

ನನ್ನ ಪ್ರಕಾರ ಯಾವುದಾದರೊಂದು ಪ್ರಶ್ನೆಗೆ 'ಹೌದು' ಅಥವಾ 'ಇಲ್ಲ' ಎಂಬ ಚಿಕ್ಕ ಉತ್ತರಗಳಷ್ಟೇ ಸಾಲದು, ಅಂತಹ ಉತ್ತರಗಳ ಜೊತೆ 'ಏಕೆ?' ಎನ್ನುವುದನ್ನೂ ಸೇರಿಸಿಕೊಳ್ಳಬೇಕಾಗುತ್ತದೆ, ಎಷ್ಟೋ ಜನರು ಈ 'ಏಕೆ' ಯನ್ನು ಹಗುರವಾಗಿ ತೆಗೆದುಕೊಳ್ಳುತ್ತಾರೆ, ಹಾಗೆ ಮಾಡುವುದರಿಂದ ಅವರ ಅನಿಸಿಕೆ/ಅಭಿಪ್ರಾಯಗಳು ಇದ್ದರೂ ಇಲ್ಲದಂತೆ ಎನ್ನುವ ಸಣ್ಣ ಸತ್ಯವೂ ಅವರನ್ನು ತಲುಪೋದಿಲ್ಲ. ಆದರೆ 'ಏಕೆ' ಎನ್ನುವ ಪ್ರಶ್ನೆಯನ್ನು ಉತ್ತರಿಸುವುದು ಅಷ್ಟು ಸುಲಭದ ಮಾತಲ್ಲ, ಅದಕ್ಕೆ ಸಾಧ್ಯವಾದಷ್ಟು ಆಧಾರವನ್ನು ನೀಡಬೇಕಾಗುತ್ತದೆ, ಯಾವುದಕ್ಕಾದರೂ ಹೋಲಿಕೆ ಮಾಡಿ ನೋಡಿರಬೇಕಾಗುತ್ತದೆ, ಏನಿಲ್ಲವೆಂದರೂ ಹಲವಾರು ಕೋನಗಳಿಂದ ಒಂದೇ ವಿಷಯವನ್ನು ಅಳೆದಿರಬೇಕಾಗುತ್ತದೆ. ನಿಮಗೆ George Bush ಕಂಡರೆ ಇಷ್ಟವೇ ಎಂದು ಯಾರನ್ನಾದರೂ ಕೇಳಿ ನೋಡಿ, ಆಗ ತಟ್ಟನೆ ಉತ್ತರ ಹೊರಗೆ ಬರುತ್ತದೆ, ಅವರ ಉತ್ತರದ ಬೆನ್ನ ಹಿಂದೆ 'ಏಕೆ' ಎಂದು ಕೇಳಿ ನೋಡಿ, ಕೆಲವರಿಗೆ ಸ್ವಲ್ಪ ತಡವರಿಕೆ ಶುರುವಾಗುತ್ತದೆ, ಇನ್ನೂ ಮುಂದಕ್ಕೆ ಹೋಗಿ, ವಾದ ಮಾಡಲಿಕ್ಕೋಸ್ಕರವೆಂದೇ ಅವರು ಹೇಳಿದ ಉತ್ತರಕ್ಕೆ ವಿರೋಧವಾಗಿ ವಾದಿಸಿ ನೋಡಿ, ಅವರ ಉತ್ತರದ ಆಳ ಸ್ಪಷ್ಟವಾಗುತ್ತದೆ. ಬೇಸರದ ಸಂಗತಿಯೆಂದರೆ ನಮ್ಮ ಅನುಭವಗಳನ್ನು ನಮ್ಮ ಗತ ಇತಿಹಾಸ ಆವರಿಸಿಕೊಂಡಂತೆ ನಮ್ಮ ಅಭಿಪ್ರಾಯ-ಅನಿಸಿಕೆಗಳು ಹೆಚ್ಚು ಸಮಯ ಉದ್ಭವಿಸೋದು, ಬೆಳೆಯೋದು ಈ ರೀತಿ ಅರ್ಧ ಬೆಂದ ಹೇಳಿಕೆಗಳಿಂದಲೇ, ಅಥವಾ ಅಲ್ಲಿಲ್ಲಿ ಕೇಳಿ ಬರುವ ಎಷ್ಟೋ ಸಾರಿ ಸತ್ಯವಲ್ಲದ ವರದಿಗಳಿಂದಲೇ. ಯಾವುದೇ ಒಂದು ವಿಷಯವನ್ನು ತೆಗೆದುಕೊಂಡು ಎರಡೂ ಕಡೆಯವರ ಹಾಗೆ ವಾದ ಮಂಡಿಸುವುದು ಬೇರೆ, ಆಂತರ್ಯದಲ್ಲಿ ನಮ್ಮನ್ನು ನಾವು ನಂಬಿಸಲು ನಡೆಸುವ ಸಂವಾದ, ಸಂಘರ್ಷಗಳು ಬೇರೆ - ಇಂತಹ ಆಂತರಿಕ ಹಣಾಹಣಿಗಳು ಆದಷ್ಟು ಪಕ್ವವಾಗಿರಲಿ ಅನ್ನೋದು ನನ್ನ ಆಶಯ.

No comments: