Tuesday, September 12, 2006

ಹೀಗೊಬ್ಬ ಧನಂಜಯಣ್ಣ

ಸಾಗರ ಪಟ್ಣಾ ಬಿಟ್ಟು ಕಾರ್ಗಲ್-ಜೋಗಾದ್ ಕಡೆ ಹೋಗೋ ಬಿಎಚ್ ರಸ್ತೆ ಹಿಡಿದು ಹೊರಟರೆ, ಎಲ್.ಬಿ.ಕಾಲೇಜು, ಕುಗ್ವೆ, ತಾಳಗುಪ್ಪಾ, ಹಿರೇಮನೆ ಮುಂತಾದ ಸಣ್ಣ-ಪುಟ್ಟ ಹಳ್ಳಿಗಳನ್ನೆಲ್ಲ ದಾಟಿ ರಸ್ತೆಗಳ ಅಂಕು-ಡೊಂಕು ಹೆಚ್ಚುತ್ತಾ ಕೆಲವೊಮ್ಮೆ ನಾವು ಬಂದ ದಾರಿಯನ್ನು ತೋರಿಸುವಷ್ಟರ ಮಟ್ಟಿಗೆ ತಿರುವುಗಳು ಬರಬೇಕು ಎನ್ನುವಷ್ಟರಲ್ಲಿ ಇಡುವಾಣಿ ಎಂಬ ಪುಟ್ಟ ಗ್ರಾಮ ಇರುವ ಕುರುಹಿನಂತೆ ರಸ್ತೆಯ ಪಕ್ಕದಲ್ಲೊಂದು ತಂಗುದಾಣ, ಅದರ ಇಕ್ಕೆಲಗಳಲ್ಲಿ ಕೆಲವು ಮನೆಗಳು ಕಾಣಸಿಗುತ್ತವೆ. ಇಲ್ಲಿಂದ ಹೆಚ್ಚೇನಿಲ್ಲ, ಕೆಲವೇ ಕೆಲವು ಮೈಲಿಗಳ ಪ್ರಯಾಣದಲ್ಲೇ ವಿಶ್ವಪ್ರಸಿದ್ಧ ಜೋಗ ಜಲಪಾತ ಇರೋದು. ಆದರೆ ನಾನು ಬಹಳಷ್ಟು ಬಾರಿ ಇಡುವಾಣಿಗೆ ಹೋಗಿ ಅಲ್ಲೇ ಎಷ್ಟೋ ದಿನಗಳ ವಾಸ್ತವ್ಯವನ್ನು ಹೂಡಿ ಇದ್ದಾಗ ನನ್ನ ಕೈಗೆ ನಿಲುಕುವಷ್ಟು ತತ್ವವನ್ನು ಹಂಚಿ ನನ್ನ ಸಂಸ್ಕಾರಗಳನ್ನು ತಿದ್ದುತ್ತಿದ್ದ ನನ್ನ ಸ್ನೇಹಿತ ಸದಾನಂದ ಹಾಗೂ ಅವನ ಸ್ನೇಹಿತ ಧನಂಜಯ ಹೀಗೇ ಈ ದಿನ ಒಡನೆಯೇ ನೆನಪಾದರು. ಹೌದಲ್ಲ, ನಾನು ಇಷ್ಟು ದಿನ ಬರೆದರೂ ಒಮ್ಮೆಯೂ ಈ ಪುಣ್ಯಾತ್ಮರನ್ನು ನೆನಪಿಸಿಕೊಳ್ಳದ ನನ್ನ ಮರೆವಿನ ಮೇಲೆ ನನಗೆ ಅಸಮಧಾನವಾದರೂ ಸದ್ಯ ಈ ದಿನವಾದರೂ ನೆನಪಿಸಿಕೊಂಡೆನಲ್ಲ ಅನ್ನೋ ಸಮಾಧಾನ ಗೆದ್ದಂತೆನಿಸಿತು. ಪ್ರತೀಬಾರಿ ಅವರನ್ನು ಭೇಟಿಯಾಗಿ ಬಂದಾಗಲೂ ಒಂದು ರೀತಿ ಧ್ಯಾನದ ಶಾಲೆಗೆ ಹೋಗಿ ಮನಸ್ಸಿನ ಮಡಿವಂತಿಕೆಯನ್ನು ರಿಪ್ರೆಶ್ ಮಾಡಿಕೊಂಡ ಹಾಗೆ ಅನ್ನಿಸುತ್ತಿತ್ತು.

ಸದಾನಂದ ನನ್ನ ಎರಡನೇ ಅಣ್ಣನ ಸಹಪಾಠಿ, ಆದರೆ ನನ್ನ ಅವನ ಸ್ನೇಹ ಬಹಳ ವಿಶೇಷವಾದದ್ದು. ಹೀಗೆ ನಾನು ಇಡುವಾಣಿಗೆ ಹೋಗಿ ಇರುತ್ತಿದ್ದುದು ಸದಾನಂದನ ಮನೆಯಲ್ಲೇ. ಅವರದೂ ಮೇಷ್ಟ್ರರ ಕುಟುಂಬವಾದ್ದರಿಂದ ನನಗೆ ಹೊಂದಿಕೊಳ್ಳಲು ಯಾವ ಹಿಂಜರಿಕೆಯೂ ಇರುತ್ತಿರಲಿಲ್ಲ. ಸದಾನಂದನದು ತಾಳಮದ್ದಳೆ, ಪುರಾಣ ಶಾಸ್ತ್ರದಲ್ಲಿ ಎತ್ತಿದ ಕೈ, ಮಹಾವಾದಿ, ಇಂಗ್ಲೀಷ್ ಅಷ್ಟೊಂದು ಸರಿಯಾಗಿ ಬರುತ್ತಿರಲಿಲ್ಲ, ಆದರೆ ಕನ್ನಡ ಸಂಸ್ಕೃತದಲ್ಲಿ ಬಹಳ ಮೆರೆದವನು. ಅವನ ಮನೆಯಿಂದ ಒಂದು ಗಾವುದ ದೂರದ ತೋಟಗಳ ಮಧ್ಯೆ ತೋಟವನ್ನು ನೋಡಿಕೊಂಡು ಆರಾಮವಾಗಿ ಇದ್ದವನು ಧನಂಜಯ, ಇಡುವಾಣಿಯಲ್ಲಿ ದೊಡ್ಡವರು-ಚಿಕ್ಕವರಾದಿಯಾಗಿ ಎಲ್ಲರಿಗೂ ಆತ ಧನಂಜಯಣ್ಣ. ಆದರೆ ಧನಂಜಯನ ಕಥೆ, ಕಥೆಯಲ್ಲ ನಿಜಜೀವನ ಬಹಳ ಸ್ವಾರಸ್ಯಕರವಾದುದು.

ಹವ್ಯಕರ ಸಂಪ್ರದಾಯದಲ್ಲಿ 'ನಮ್ಮನೇಗೂ ಬನ್ನಿ' ಎಂದು ಪರಿಚಯವಾದವರನ್ನು ಕರೆಯೋ ವಿನಯವಿದೆ, ಈ ಮಾತಿನಂತೆಯೇ ನಾನು ಇಡುವಾಣಿಯಲ್ಲಿ ಇದ್ದಷ್ಟು ದಿನಗಳಲ್ಲಿ ಬೇಕಾದಷ್ಟು ಜನರ ಮನೆಗೆ ಹೋಗಿದ್ದೇನೆ. ಸದಾನಂದ ಧನಂಜಯನ ಪರಿಚಯ ಮಾಡಿಕೊಡುವಾಗಲೇ ಹೇಳಿದ್ದ - ಬಹಳ ವಿಶೇಷವಾದ ವ್ಯಕ್ತಿಯೊಬ್ಬನನ್ನು ಪರಿಚಯ ಮಾಡಿಕೊಡುತ್ತೇನೆಂದು, ಅಂತೆಯೇ ಅದು ನಿಜವೂ ಕೂಡಾ. ಧನಂಜಯ ತೋಟವನ್ನು ನೋಡಿಕೊಂಡು ಬದುಕನ್ನು ಕಳೆಯುವ ಬಗೆಯನ್ನು ಆರಿಸಿಕೊಳ್ಳುವ ಮೊದಲು ಬೆಂಗಳೂರಿನಲ್ಲಿದ್ದವನು. ಕನ್ನಡ, ಇಂಗ್ಲೀಷ್, ಹಾಗೂ ಸಂಸ್ಕೃತದಲ್ಲಿ ಬಹಳ ಚೆನ್ನಾಗಿ ಓದಿ-ಬರೆದು-ಮಾತನಾಡಬಲ್ಲವನು, ತತ್ವಶಾಸ್ತ್ರ, ಜ್ಯೋತಿಷ್ಯಶಾಸ್ತ್ರ, ಪುರಾಣವನ್ನು ಅಸ್ಥೆಯಿಂದ ಅಭ್ಯಾಸಮಾಡಿದವನು. ಅವನ ಪಾಂಡಿತ್ಯಕ್ಕೆ ಎಂತಹವರೂ ಬೆರಗಾಗಬೇಕು, ಅವನ ಮುಖಾಂತರವೇ ನಾನು ಎಡ್ಗರ್ ಕೇಸಿಯ ಕರ್ಮ ಸಿದ್ಧಾಂತ, ಭಾಗವತ, ಅರ್ಥಶಾಸ್ತ್ರ ಮುಂತಾದವುಗಳನ್ನು ತಿಳಿದುಕೊಂಡಿದ್ದು. ಒಂದು ಸಣ್ಣ ವಿಷಯದ ಬಗ್ಗೆ ವೈಜ್ಞಾನಿಕವಾಗಿ ವಿವರಿಸುವುದರ ಜೊತೆಗೆ ಟಿವಿಯಲ್ಲೇನಾದರೂ ರಾಜ್‌ಕುಮಾರ್ ನಟಿಸಿದ 'ಎರಡು ಕನಸು' ಸಿನಿಮಾ ಬರುತ್ತಿದ್ದರೆ ಅದರಲ್ಲಿ ಕಲ್ಪನಾಳ ಪಾತ್ರಕ್ಕೆ ವಿಶೇಷವಾದ ವಿವರಣೆಗಳನ್ನು ಕೊಡುವವನು, ಹೀಗೆ ಬೇಕಾದಷ್ಟು ವಿಷಯಗಳ ಆಳವನ್ನು ಅರಿಯುವಲ್ಲಿ ನಾನು ಅವನೊಂದಿನ ಒಡನಾಟವನ್ನು ಸಂಭ್ರಮಿಸಿದ್ದಿದೆ. ಅವನ ಇಂಗ್ಲೀಷ್ ಓದು ಹಾಗೂ ಬರಹದ ಆಳವನ್ನು ಕಂಡರೆ ಎಂಥವರೂ ಮೂಗಿನ ಮೇಲೆ ಬೆರಳಿಡುವಂತಿತ್ತು.

ಒಂದು ದಿನ ಅವನೇ ಹೇಳಿದ ಹಾಗೆ 'ನಿಮಗ್ಗೊತ್ತಾ, ನಾನು ಒಂದ್ ಕಾಲದಲ್ಲಿ ಈ ಆಕ್ಸ್‌ಫರ್ಡ್ ಡಿಕ್ಷನರಿಯನ್ನು ಪೂರ್ತಿ ಕಂಠಪಾಟ ಮಾಡಿದ್ದೆ, ಅದರಿಂದ ಇಂಗ್ಲೀಷ್ ಚೆನ್ನಾಗಿಬರುತ್ತೆ ಅನ್ನೋ ಒಂದೇ ಕಾರಣದಿಂದ!' ಎಂದಾಗ ನನಗೆ ನಂಬಲಾಗಲಿಲ್ಲ, ಆತ ನಿಜವಾಗಿಯೂ ಡಿಕ್ಷನರಿಯ ಯಾವುದೇ ಪದವನ್ನು ಕೇಳಿದರೂ ಅರ್ಥವನ್ನು ಹೇಳಬಲ್ಲವನಾಗಿದ್ದನಂತೆ. ಅಷ್ಟೇ ಅಲ್ಲ, ಯಶವಂತ ಚಿತ್ತಾಲರ 'ಮೂರು ದಾರಿಗಳು' ಕಾದಂಬರಿಯನ್ನು ಆದರಿಸಿ ಮಾಡಿದ ಚಲನ ಚಿತ್ರದಲ್ಲಿ ಧನಂಜಯನೇ ಹೀರೋ ಕೂಡಾ. ಹೀಗೆ ಪಟ್ಟಣದ ಸಹಪಾಸ, ಚಿತ್ರಲೋಕದ ಬೆರಗು-ಮೆರುಗಳನ್ನು ಕಂಡೂ ಹಳ್ಳಿಯ ಹಾದಿ ಹಿಡಿದು ತೋಟವನ್ನು ನೋಡಿಕೊಂಡು ತಾನಾಯಿತು ತನ್ನ ಓದಾಯಿತು ಎಂದು ತತ್ವಶಾಸ್ತ್ರವನ್ನು ಮುಖ್ಯವಾಗಿ ಆಧರಿಸಿದ ಎಲ್ಲ ಹೊತ್ತಿಗೆಗಳನ್ನೂ ಕರತಾಮಲಕ ಮಾಡಿಕೊಳ್ಳುತ್ತಿದ್ದವನು. ಮನೆಗೆ ಯಾರೇ ಬಂದರೂ ಅವರನ್ನು ಫಿಲಾಸಫಿಯ ಸೌಂದರ್ಯವನ್ನು ಆಸ್ವಾದಿಸುವಂತೆ ಮಾಡುವ ಮಾತನಾಡುವ ಕಲೆ ಧನಂಜಯನದು, ಆದರೆ ಇಡುವಾಣಿಯಲ್ಲಿ ಕೆಲವರಿಗೆ ಅದು ಅತಿಯಾಗಿ ಕಂಡು ಬೇರೇನೋ ರಾದ್ಧಾಂತಗಳನ್ನು, ಊಹೆಗಳನ್ನೂ ಹುಟ್ಟಿಸಿದ್ದಿದೆ.

ಧನಂಜಯ ಒಂದು ಸಣ್ಣ ಪುಸ್ತಕವನ್ನು ಓದೋದಕ್ಕೂ ತಿಂಗಳುಗಟ್ಟಲೆ ತೆಗೆದುಕೊಳ್ಳುತ್ತಿದ್ದ, ಅವನು ಸಾಲಿನಿಂದ ಸಾಲಿಗೆ, ಪುಟಗಳಿಂದ ಪುಟಕ್ಕೆ ಓದಿ, ಅದರ ಕುರಿತು ಚಿಂತನವನ್ನು ನಡೆಸುವುದೋ ಅಥವಾ ಆ ಪುಸ್ತಕದಲ್ಲಿ ಉಲ್ಲೇಖಿಸಿದ ಪರಾಮರ್ಶೆಗಳನ್ನು ಹುಡುಕಿಕೊಂಡು ಹೋಗುವುದೋ, ಅಥವಾ ಒಟ್ಟಿಗೇ ಒಂದಿಷ್ಟು ವಿಷಯಗಳನ್ನು ಕಲೆಹಾಕಿಕೊಂಡು ಮನನ ಮಾಡಿಕೊಳ್ಳುವುದೋ ನಿರಂತರವಾಗಿ ನಡೆದೇ ಇರುತ್ತಿತ್ತು. ಅವನು ನನಗೆ ಓದಲು ಎಷ್ಟೋ ಪುಸ್ತಕಗಳನ್ನು ಕೊಟ್ಟು ನನ್ನಲ್ಲಿ ಭಾರತೀಯ ತತ್ವಶಾಸ್ತ್ರದ ಬಗ್ಗೆ ಹಾಗೂ ಪಾಶ್ಚಾತ್ಯ ತಿಳುವಳಿಕೆಯ ಬಗ್ಗೆ ಒಲವನ್ನು ಹುಟ್ಟಿಸಿದ ಕೀರ್ತಿ ಸದಾನಂದ ಹಾಗೂ ಧನಂಜಯಣ್ಣನಿಗೆ ಸೇರಬೇಕು. ನಾನು ರಜಾ ದಿನಗಳಲ್ಲಿ ಹೋದಾಗಲೆಲ್ಲ ನನ್ನನ್ನು ತಮ್ಮ ಮನೆಯವನಂತೆಯೇ ಸಾಕಿ ಸಲಹಿ ಜೊತೆಗೆ ನನಗೆ ಬೇಕಾದ ಎಲ್ಲ 'ಆಹಾರ'ಗಳನ್ನೂ ಒದಗಿಸಿ ನನ್ನಲ್ಲಿ ಸ್ವಲ್ಪವಾದರೂ ಓದುವ ತಿಳುವಳಿಕೆಯನ್ನು ಮೂಡಿಸಿ, ಇಡುವಾಣಿಯ ಡೊಂಕಿನ ರಸ್ತೆಗಳ ನಡುವೆ ಇರುವ ಹಳ್ಳಿಯ ಮನೆಗಳಲ್ಲಿ ಉದಾತ್ತ ಚಿಂತನೆಯ ಕಿಡಿಯನ್ನು ಹತ್ತಿಸಿದವರಿಬ್ಬರನ್ನು ಇಂದು ಎಷ್ಟು ನೆನೆದರೂ ಕಡಿಮೆಯೇ. 'ನೀವಿಲ್ಲಿ ಎಷ್ಟು ದಿನವಾದರೂ ಬೇಕಾದರೂ ಇರಿ' ಎಂದು ತೆರೆದ ಆಮಂತ್ರಣ ಕೊಟ್ಟವರನ್ನು ನಾನು ನೋಡದೇ ಅದೆಷ್ಟೋ ವರ್ಷಗಳಾದವು... ಇಲ್ಯಾರಾದರೂ ನನ್ನ ನಡುವೆ ಧನಂಜಯ ನಂತಹವರು ಇರಬಾರದಿತ್ತೇ ಎಂದು ಈಗ ಅನ್ನಿಸುತ್ತೆ. ಅಲ್ಲಿ ಅಂತಹ ಉತ್ತಮ ವ್ಯಾಖ್ಯಾನಗಳನ್ನು ಕೇಳಿದ ನನಗೆ ಇದುವರೆಗೂ ಯಾರೂ ತತ್ವಶಾಸ್ತ್ರದ ಮೇಲೆ ಅಷ್ಟೊಂದು ಅಥಾರಿಟಿಯಿಂದ ಮಾತನಾಡಿದವರು ಕಂಡಿಲ್ಲ ಎಂದರೆ ಅತಿಶಯೋಕ್ತಿಯೇನಲ್ಲ.

ಧನಂಜಯನ ಇನ್ನೊಂದು ಮುಖವೆಂದರೆ ಸಂಗೀತ ಪ್ರೇಮ - ಹಿಂದೂಸ್ತಾನೀ ಹಾಗೂ ಕರ್ನಾಟಕ ಸಂಗೀತ ಇವೆರಡರಲ್ಲೂ ಎತ್ತಿದ ಕೈ. ರೆಡಿಯೋದಲ್ಲಿ ಯಾವುದೇ ಹಾಡು ಬರಲಿ, ಇದು ಇಂತಹ ರಾಗ, ದಕ್ಷಿಣಾದಿಯಲ್ಲಿ ಇದನ್ನು ಈ ರಾಗದಿಂದಲು ಉತ್ತರಾದಿಯಲ್ಲಿ ಇದನ್ನು ಈ ರಾಗದಿಂದಲೂ ಹಾಡುತ್ತಾರೆ ಎಂದು ತಟ್ಟನೆ ಹೇಳಿಬಿಡೋನು. ಬರೀ ರಾಗದ ಹೆಸರಿನ ಪರಿಚಯವಷ್ಟೇ ಅಲ್ಲ, ಅದರ ಅರೋಹಣ-ಅವರೋಹಣಗಳನ್ನು ಹಾಡಿ ತೋರಿಸೋನು. ರಾಗದ ಹಿನ್ನೆಲೆಯನ್ನು ವಿವರಿಸೋನು. ರಾಗವನ್ನು ಅಭ್ಯಾಸ ಮಾಡಿದವರನ್ನು ನಾನು ಬೇಕಾದಷ್ಟು ಜನರನ್ನು ನೋಡಿದ್ದೇನೆ, ಆದರೆ ಧನಂಜಯನ ಸಂಗೀತ ಜ್ಞಾನದ ಆಳವನ್ನು ನಮ್ಮವರ ನಡುವೆ ಬದುಕುವವರಲ್ಲಿ ಬೇರೆಲ್ಲೂ ನೋಡಿಲ್ಲ. ಹೀಗೆ ಧನಂಜಯ ನನ್ನ ಕಾಲೇಜಿನ ದಿನಗಳಲ್ಲಿ ಸಾಕಷ್ಟು ಓದುವುದರ ಬಗ್ಗೆ, ಬಹಳಷ್ಟು ವಿಷಯಗಳ ಬಗ್ಗೆ ಕುತೂಹಲವನ್ನು ಹುಟ್ಟಿಸಿದ್ದ. ನಾನು ಚಾರ್ಜ್ ಕಳೆದುಕೊಂಡ ಬ್ಯಾಟರಿ ರೀ ಚಾರ್ಜ್ ಆಗಲು ಅದರ ಬೇಸ್ ಅನ್ನು ಹುಡುಕಿಕೊಂಡು ಬರುವಂತೆ ಸಾಗರದ ಕಾಲೇಜಿನಲ್ಲಿ ಓದುವಷ್ಟು ದಿನವೂ ಸಮಯ ಸಿಕ್ಕಾಗಲೆಲ್ಲ ಇಡುವಾಣಿಗೆ ಭೇಟಿಕೊಡುತ್ತಿದ್ದೆ. ಮುಂದೆ ನಾನು ಅಲ್ಲಿ-ಇಲ್ಲಿ ಅಲೆದಾಡಿ ಇಲ್ಲಿಗೆ ಬಂದರೂ ಧನಂಜಯನ ಹಾಗೆ ಸದಾನಂದನ ಹಾಗೆ ಮತ್ಯಾರೂ ಸಿಕ್ಕಿಲ್ಲ.

ಈ ಬಾರಿಯಾದರೂ ಊರಿಗೆ ಹೋದಾಗ ಧನಂಜಯ-ಸದಾನಂದರ ಭೇಟಿಯಾಗಬೇಕು ಅನ್ನೋ ಆಸೆ ಬರಿ ಯೋಜನೆಯಲ್ಲೇ ಉಳಿದುಹೋಗದಿರಲಿ ಅನ್ನೋದು ಆ ದೊಡ್ಡ ಶಕ್ತಿಗೆ ಈ ತಂಪಿನ ಹೊತ್ತಿನಲ್ಲಿ ನಾನಿಡುತ್ತಿರುವ ಮೊರೆ!

1 comment:

pradeep said...

I happend to see this articl some how, I think I have seen you too when I was kid, I am a friend of Dinesh (Sadananda's brother).

Nice to read something about people from my village.

I am interested to read the other article some time when i get some time.

Prdeepa.