ವಿಶ್ವ ಕನ್ನಡ ಸಮ್ಮೇಳನ ೨೦೦೬ - ಭಾಗ ೧
ವಿಶ್ವ ಕನ್ನಡ ಸಮ್ಮೇಳನಕ್ಕೆ ಹೋಗಬೇಕು ಎನ್ನುವುದಕ್ಕೆ ಬುಧವಾರದಿಂದಲೇ ತಯಾರಿ ನಡೆಸಿದರೂ ಕೊನೆಯಲ್ಲಿ ತರಾತುರಿ ಆಗುವುದು ತಪ್ಪಲಿಲ್ಲ - ವಾರಕ್ಕಿಂತ ಮೊದಲೇ ಹವಾಮಾನ ವರದಿಗಳನ್ನು ನೋಡಿ ಈ ಬಾರಿ ಹೇಗಿರುತ್ತೋ ಎಂದುಕೊಂಡವನಿಗೆ ಅಕ್ಕ ಸಮ್ಮೇಳನಕ್ಕೂ-ಮಳೆಗೂ ಎಲ್ಲೋ ಹೊಂದಿಕೆಯಾದಂತೆ ಕಂಡುಬರುವಂತೆ ಎರಡು ವರ್ಷದ ಹಿಂದೆ ಆರ್‌ಲ್ಯಾಂಡೋದಲ್ಲಿ ಆದಷ್ಟು ಜೋರಾಗಿ ಅಲ್ಲದಿದ್ದರೂ ಈ ಸಾರಿ ಸಾಕಷ್ಟು ಬಿದ್ದ ವರ್ಷಧಾರೆ, ಈ ಲೇಬರ್ ಡೇ ವೀಕೆಂಡ್ ಪೂರ್ತಿ ಆಕಾಶವನ್ನು ಕವಚಿಕೊಂಡಿರೋ ಹಾಗೆ ಒಪ್ಪಂದ ಮಾಡಿಕೊಂಡಿರೋ ಹಾಗಿನ ಕಪ್ಪು ಮೋಡಗಳು ಇವೆಲ್ಲಾ ಸೇರಿಕೊಂಡು ಬೇಕಾದಷ್ಟು ತೊಂದರೆಗಳನ್ನು ತೂರಿಸುತ್ತಿದ್ದವು.
ಸಾವಿರಾರು ಜನ ಕನ್ನಡಿಗರನ್ನು ದೂರದಲ್ಲಿ ಒಮ್ಮೆಲೇ ನೋಡಿದರೆ ಏನನ್ನಿಸಬಹುದು? ನಾವು ಅಪರೂಪಕ್ಕೊಮ್ಮೆ ಎಲ್ಲಾದರೂ ಶಾಪ್ಪಿಂಗ್ ಮಾಡುತ್ತಿದ್ದಾಗ ಯಾರಾದರೂ ಕನ್ನಡ ಮಾತನಾಡುತ್ತಿದ್ದುದನ್ನು ಕೇಳಿದರೇ ನಮಗೆ ಎಷ್ಟೊಂದು ಖುಷಿಯಾಗುತ್ತದೆ, ಅಂತಹದರಲ್ಲಿ ಸಾವಿರಾರು ಜನರನ್ನು ಒಂದು ದೊಡ್ಡ ಕನ್‌ವೆನ್ಷನ್‌ನಲ್ಲಿ ನೋಡಿದಾಗ ಹಿಂದೆಂದೂ ಆಗಿರದ ಮಹಾನ್ ಅನುಭವವಾಗುತ್ತದೆ. ಅಲ್ಲಿ ಯಾರನ್ನು ನೋಡಿದರೂ 'ನಿಮಗೆ ಕನ್ನಡಾ ಬರುತ್ತಾ?' ಎಂದೇನೂ ಕೇಳಿಕೊಳ್ಳಬೇಕೆಂದೇನೂ ಇಲ್ಲ, ಯಾರ ಜೊತೆಯಲ್ಲಿ ಬೇಕಾದರೂ ಒಂದು ಮುಗುಳ್ನಗೆಯನ್ನು ಎಸೆದು ಮನಪೂರ್ತಿ ಕನ್ನಡವನ್ನು ಮಾತನಾಡಬಹುದು! ಅದರಲ್ಲೂ ನಮ್ಮ ಕನ್ನಡ ಜನರ ನಡೆ-ನುಡಿಗಳೇ ಚೆಂದ, ಉಳಿದೆಲ್ಲ ಭಾಷೆಗಳಲ್ಲಿ ಹೇಗಿವೆಯೋ ಯಾರಿಗೆ ಗೊತ್ತು, ನಮ್ಮ ಕನ್ನಡದ ಬಳಕೆಯಲ್ಲಂತೂ ಹಲವಾರು ಥರವಿದೆ, ಎರಡು ವರ್ಷಕ್ಕೊಮ್ಮೆ ಬರುವ ಈ ರೀತಿಯ ಸಮ್ಮೇಳನಗಳು ನನ್ನಂಥವರನ್ನು ನಮ್ಮ ನಾಡಿಗೆ ಸ್ವಲ್ಪ ಹತ್ತಿರ ಕೊಂಡೊಯ್ದಂತೆ ಕಂಡುಬರುತ್ತವೆ.
ಇದು ನಾಲ್ಕನೇ ವಿಶ್ವ ಕನ್ನಡ ಸಮ್ಮೇಳನ. ನಾನು ೨೦೦೦ ದಲ್ಲಿ ಹ್ಯೂಸ್ಟನ್‌ನಲ್ಲಿ ನಡೆದ ಮೊದಲನೇ ಸಮ್ಮೇಳನಕ್ಕೆ ಹೋಗಿದ್ದನ್ನು ಬಿಟ್ಟರೆ ಇದು ನನಗೆ ಎರಡನೇ ಸಮ್ಮೇಳನ. ಡೆಟ್ರಾಯಿಟ್ ಸಮ್ಮೇಳನ ಸದ್ದಿಲ್ಲದೇ ಬಂದು ಹೋದಂತಾದರೂ ಅದರ ಬಗ್ಗೆ ಬಹಳ ಸುದ್ದಿಯನ್ನು ಅಲ್ಲಲ್ಲಿ ಓದಿದ್ದೆ. ಚಂಡಮಾರುತಕ್ಕೆ ಹೆದರಿಯೋ ಮತ್ಯಾವುದೋ ಕಾರಣಗಳಿಂದಾಗಿ ಆರ್‌ಲಾಂಡೋ ಸಮ್ಮೇಳನಕ್ಕೆ ಹೋಗಿರಲಾಗಲಿಲ್ಲ. I-95 ನಲ್ಲಿ ಯಾವತ್ತೂ ಹಾದು ಹೋಗುವ ಪುಟಾಣಿ ನಗರ ಬಾಲ್ಟಿಮೋರ್ ಇಂದು ಕನ್ನಡ ಸಮ್ಮೇಳನವನ್ನು ಅಯೋಜಿಸಿಕೊಳ್ಳುವುದರೊಂದಿಗೆ ದೊಡ್ಡದಾಗಿದೆ. ಸಮ್ಮೇಳನಕ್ಕೆ ಎಲ್ಲೆಲ್ಲಿಂದಲೋ ಬಂದ ಕನ್ನಡಿಗರನ್ನು ಸ್ವಾಗತಿಸಲು ನಗರವೇನೂ ಸಿದ್ಧವಾಗಿದ್ದಂತೆ ಕಂಡುಬಂದಿರಲಿಲ್ಲ, ಸುಮಾರು ಹೊತ್ತಿನಿಂದಲೂ ಜಿಟಿಪಿಟಿ ಸುರಿಯುತ್ತಿದ್ದ ಮಳೆಯಿಂದ ಬಿಡುಗಡೆಗೆ ಕಾದಿರುವಂತೆ ಕಂಡುಬಂತು. ಜೊತೆಗೆ ಕನ್ನಡದ ಕಂಪನ್ನು ಸ್ವಲ್ಪ ಜೋರಾಗೇ ಪಸರಿಸಿರಿ ಎಂದು ಹುಮ್ಮಸ್ಸು ಕೊಡುತ್ತಿರುವಂತೆ ಬೀಸುತ್ತಿದ್ದ ಗಾಳಿ ಬೇರೆ. ಹೀಗೆ ತೊಂದರೆ ಕೊಡುತ್ತಿದ್ದ ಮಳೆಯ ನಡುವೆ ಜನರು ಕನ್‍ವೆನ್‍ಷನ್ ಸೆಂಟರ್‌ಗೆ ದೌಡಾಯಿಸುತ್ತುರಿವುದು ಯಾವುದೋ ಕೋಟೆಯನ್ನು ರಕ್ಷಿಸುವ ಸೈನಿಕರ ಗುಂಪಿನಂತೆ ಕಂಡುಬಂತು.
ಮೆಟ್ಟುಲು ಏರಿ ಬರುತ್ತಿದ್ದಂತೆ ರಿಜಿಸ್ಟ್ರೇಷನ್ ಡೆಸ್ಕ್‌ಗಳನ್ನು ಅಮೇರಿಕೆಯ ರಾಜ್ಯಾವಾರು ವಿಂಗಡನೆ ಮಾಡಿ ಬಂದವರಿಗೆ ತಮ್ಮ ಹೆಸರಿನ ಬ್ಯಾಡ್ಜು, ಕೂಪನ್ನು, ಸ್ಮರಣ ಸಂಚಿಕೆ ಇತ್ಯಾದಿ ವಿವರಗಳಿದ್ದ ಒಂದು ಬ್ಯಾಗನ್ನು ಕೊಡುವುದು ಅಯೋಜಕರು ಪಟ್ಟ ಶ್ರಮವನ್ನು ಪ್ರತಿಬಿಂಬಿಸುತ್ತಿತ್ತು, ಈ ರೀತಿ ಮಾಡಿದ್ದು ಬಹಳ ಒಳ್ಳೆಯದಾಯಿತು. ನಾವು ಆರು ಘಂಟೆಯ ಹೊತ್ತಿಗೆ ಹೋಗುವಾಗ ಮುಖ್ಯವೇದಿಕೆಯಲ್ಲಿ ಕಾರ್ಯಕ್ರಮಗಳು ಅದಾಗಲೇ ಪ್ರಾರಂಭವಾಗಿದ್ದವು, ಮುಖ್ಯವೇದಿಕೆಯಲ್ಲಿ ಉಪ ಮುಖ್ಯಮಂತ್ರಿ ಎಡೆಯೂರಪ್ಪ, ಕವಿ ಚನ್ನವೀರಕಣವಿ, ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಮುಂತಾದವರಾಗಲೇ ಉಪಸ್ಥಿತರಿದ್ದು, ಕೆಲವು ನಿಮಿಷಗಳಲ್ಲಿ ಸಮ್ಮೇಳನವನ್ನು ವೇದಿಕೆಯಲ್ಲಿನ ಮುಖ್ಯಸ್ಥರು ದೀಪ ಹಚ್ಚುವುದರ ಮೂಲಕ ಆರಂಭಿಸಲಾಯಿತು. ಮುಂದೆ ಎಡೆಯೂರಪ್ಪನವರು ಮಾತನಾಡಿದನಂತರ ಕರ್ನಾಟಕದಿಂದಲೇ ಕುಮಾರಸ್ವಾಮಿ ಅವರು ಶುಭ ಕೋರಿದ ವಿಡಿಯೋವನ್ನು ತೋರಿಸಲಾಯಿತು. ಅಷ್ಟೊತ್ತಿಗೆ ಆಗಲೇ ಊಟಕ್ಕೆ ತಡವಾಗಬಹುದು ಎಂದು ಯಾರೋ ಸೂಚಿಸಿದ್ದರಿಂದ ಊಟಕ್ಕೆ ಹೊರಟೆವು - ಆದರೆ ನಮಗೆ ಆಶ್ಚರ್ಯವಾಗುವಂತೆ ಕನ್‍ವೆನ್‍ಷನ್ ಸೆಂಟರ್‍ನಲ್ಲೇ ಊಟಕ್ಕೆ ವ್ವವಸ್ಥೆ ಮಾಡದೇ ಅಲ್ಲೇ ಹತ್ತಿರದ ವಿಂಡಮ್ ಹೋಟೇಲಿನಲ್ಲಿ ಊಟಕ್ಕೆ ವ್ವವಸ್ಥೆ ಮಾಡಿದ್ದಾರೆ ಎಂದು ಗೊತ್ತಾಯಿತು. ಬೆಳಿಗ್ಗೆ ತಿಂಡಿ, ಮಧ್ಯಾಹ್ನ ಹಾಗೂ ಸಂಜೆ ಊಟಗಳಿಗೆ ಸಾವಿರಾರು ಜನ ಈ ಮಳೆಯಲ್ಲಿ ಅದು ಹೇಗೆ ಹೋಗಿ ಬರುತ್ತಾರೋ ಎಂದು ಖೇದವಾಯಿತು. ಮುಖ್ಯವಾಗಿ ನಾವು ಊಟಕ್ಕೆ ಹೋಗಿ ಬರಲು ಸುಮಾರು ೨ ಘಂಟೆಗಳಿಗೂ ಮೇಲ್ಪಟ್ಟು ಹಿಡಿಯಿತು - ದಿನದ ಕಾರ್ಯಕ್ರಮ ನಿಲ್ಲದೆ ನಡೆಯುತ್ತಿದ್ದಾರಿಂದ ಮೊದಲ ದಿನ ಹೆಚ್ಚು ಕಾರ್ಯಕ್ರಮಗಳನ್ನು ನೋಡಲಾಗಲಿಲ್ಲ. ಸುಮಾರು ಹತ್ತು ಘಂಟೆಯಿಂದ ಮಧ್ಯರಾತ್ರಿವರೆಗೆ ನೃತ್ಯ, ಹಾಗೂ ಸಂಗೀತ ಕಾರ್ಯಕ್ರಮಗಳಿದ್ದವು. ನಾವು ದಿನದ ಕಾರ್ಯಕ್ರಮದ ಕೊನೆವರೆಗೂ ಇದ್ದೆವು - ಕೊನೆಯಲ್ಲಿ ೭೦ ಹಾಗೂ ೮೦ ರ ದಶಕ ಸಿನಿಮಾ ಹಾಡುಗಳು ಪ್ರೇಕ್ಷರನ್ನು ರಂಜಿಸಿದವು. ದೊಡ್ಡ ಕನ್‌ವೆನ್‌ಷನ್ ಸೆಂಟರ್‌ನ ಹಾಲ್ ನಲ್ಲಿ ಎಲ್ಲಿ ಕುಳಿತರೂ ದೊಡ್ಡ ಪರದೆಯ ಮೇಲೆ ಕಾರ್ಯಕ್ರಮವನ್ನು ಸೈಮಲ್‌ಕ್ಯಾಸ್ಟ್ ಮಾಡುತ್ತಿದ್ದುರಿಂದ ಕಾರ್ಯಕ್ರಮವನ್ನು ನೋಡು/ಕೇಳುವಲ್ಲಿ ಯಾರಿಗೂ ಏನೂ ತೊಂದರೆ ಆದಂತಿರಲಿಲ್ಲ - ಕನ್‌ವೆನ್‌ಷನ್ ಹಾಲ್‌ನ ಆರ್ಕಿಟೆಕ್ಚರ್‌ನ್ನು ಹೊಗಳಿಬರೆಯುವುದಕ್ಕೆ ಒಂದು ಬರಹ ಸಾಲದು - ಬಹಳ ಭವ್ಯವಾಗಿದೆ.
ನನಗಂತೂ ಮೊದಲ ದಿನದ ಕಾರ್ಯಕ್ರಮಗಳು ಮುದ ನೀಡಿದವು. ಈ ರೀತಿಯ ಸಮ್ಮೇಳನ ಎಲ್ಲಿದ್ದರೂ ಹೋಗಬೇಕೆನ್ನುವ ಆಸೆ ಮತ್ತಷ್ಟು ಬಲವಾಯಿತು.
***
ನಮ್ಮ ಕನ್ನಡಿಗರ ಭಾಷೆ, ಭಾವ, ಮಾತು, ಮನಸ್ಸು, ಔದಾರ್ಯ ಇವುಗಳು ಬಹಳ ವಿಶೇಷವಾದದ್ದು. ದೂರದಿಂದ ಬಂದವರಿಗೆ ಸ್ಥಳೀಯರು ಸಹಾಯ ಮಾಡುತ್ತಿದ್ದುದು, ಎಲ್ಲರೂ ಎಲ್ಲರ ಜೊತೆಯಲ್ಲಿ ಕಲೆತು ಬೆರೆಯುತ್ತಿದ್ದುದು ನನಗಂತೂ ಹೊಸ ಉತ್ಸಾಹವನ್ನು ತುಂಬಿತು.
3 comments:
ಸತೀಶ್ ಅವರೆ,
ಹೊರ ದೇಶಗಳಲ್ಲಿ ನಡೆಯುವ ಕನ್ನಡ ಸಮ್ಮೇಳನಗಳಿಗೆ ಎಲ್ಲಿಯೂ ಇಲ್ಲದ ಮಹತ್ವ ಇರುತ್ತದೆ ಮತ್ತು ಅದು ಹೆಚ್ಚು ಪ್ರಚಾರವನ್ನೂ ಪಡೆಯುತ್ತದೆ.
ಇದಕ್ಕೆ ಕಾರಣ, ಹೊರ ದೇಶದಲ್ಲಿರುವವರಿಗೆ ಕನ್ನಡದ ಮೇಲಿರುವ ಅಭಿಮಾನ ಮತ್ತು ತಾಯ್ನಾಡಿನ ಅನುಭೂತಿ ದೊರೆಯುವ ಸಂಭ್ರಮ-ಸಡಗರ.
ಆದರೆ ಕರ್ನಾಟಕದಲ್ಲಿ ಇಂಥ ಸಮಾರಂಭಗಳು ಆದರೆ ಅವೆಲ್ಲಾ ಕೇವಲ ರಾಜಕೀಯ ವೇದಿಕೆಯಾಗುವುದು, ಮಂತ್ರಿ ಮಾಗಧರು ತಕರಾರು ಮಾಡುವುದು ಎಲ್ಲಾ ಇರುತ್ತದೆ...
ಆ ಊರಿನಲ್ಲಿ ಕನ್ನಡ ಕಂಪು ಪಸರಿಸುವ ಯತ್ನ ಮತ್ತು ಇಚ್ಛಾಶಕ್ತಿಗೆ ಶರಣು.
ಅನ್ವೇಷಿಗಳೇ,
ನಿಜ, ನನಗಂತೂ ನಮ್ಮ ಕನ್ನಡದ ಬೆಲೆ ನಾನು ನಮ್ಮ ನಾಡನ್ನು ಬಿಟ್ಟು ದೂರ ಬಂದ ಮೇಲೆಯೇ ತಿಳಿದದ್ದು.
ನಮ್ಮ ಕನ್ನಡಿಗರಿದ್ದಲ್ಲಿ ಜಾತಿಯೂ, ರಾಜಕೀಯವೂ ಇರುತ್ತದೆ. ನಾನು ನೋಡಿದಂತೆ ಕರ್ನಾಟಕದಲ್ಲಾಗಲೀ, ಇಲ್ಲಿಯೇ ಆಗಲಿ ಜನರ ಮನೋಭಾವನೆಗಳಲ್ಲಿ ಯಾವುದೇ ವ್ಯತ್ಯಾಸವಿಲ್ಲ!
ಕನ್ನಡಕ್ಕೆ ನಮ್ಮ ಅಗತ್ಯಕ್ಕಿಂತ ನಮಗೆ ಕನ್ನಡ ಅಗತ್ಯವಿರುವುದೇ ನಾವು ಇಲ್ಲೇನಾದರೂ ಮಾಡುತ್ತಿರುವುದರ ಗುಟ್ಟು :-)
ನಾನು ಸಮ್ಮೇಳನ್ನಕ್ಕೆ ಬರದಿದ್ದರೂ ಈ ವರದಿ ನನ್ನ ಮೈಯಲ್ಲಿ ಪುಳಕವನ್ನೆಬ್ಬಿಸಿತು ! - ೨ ಮತ್ತು ೩ನೆಯ ಭಾಗಗಳನ್ನು ಈಗಲೇ ಓದಬೇಕು !
Post a Comment