ಏನೋ ಓದಿ ಮತ್ತಿನ್ನೇನನ್ನೋ ಮಾಡೋ ಪರಿಸ್ಥಿತಿ
ನೀವೆಲ್ಲಾ ಹೈ ಸ್ಕೂಲು ಮುಗಿಸುವಾಗ ಪರಿಸ್ಥಿತಿ ಹೇಗಿತ್ತೋ ಗೊತ್ತಿಲ್ಲ, ನಾನು ಹೈ ಸ್ಕೂಲು ಮುಗಿಸುವ ಎಂಭತ್ತರ ದಶಕದ ಕೊನೆಯ ಹೊತ್ತಿಗೆ ಹತ್ತನೇ ತರಗತಿಯಲ್ಲಿ ಫಸ್ಟ್ ಕ್ಲಾಸಿನಲ್ಲಿ ಪಾಸಾದರೆ ಪಿ.ಯು.ಸಿ. ಯಲ್ಲಿ ಸೈನ್ಸ್; ಸೆಕೆಂಡ್ ಕ್ಲಾಸಿನಲ್ಲಿ ಪಾಸಾದರೆ ಪಿ.ಯು.ಸಿ. ಕಾಮರ್ಸ್ ಹಾಗೂ ಥರ್ಡ್ ಕ್ಲಾಸ್ ಪಾಸಾದರೆ ಪಿ.ಯು.ಸಿ.ಯಲ್ಲಿ ಆರ್ಟ್ಸ್ ತೆಗೆದುಕೊಳ್ಳಬೇಕು ಎನ್ನುವುದು ಬಹಳ ಜನರ ಮಟ್ಟಿಗೆ ನಿರ್ಧಾರ ಮಾಡಲು ಮಾನದಂಡವಾಗಿತ್ತು. ನನ್ನ ಬ್ಯಾಚಿನಲ್ಲಾಗಲೀ ಅಥವಾ ನಾನು ನೋಡಿದಂತೆ ಹತ್ತನೇ ತರಗತಿಯಲ್ಲಿ ಹೆಚ್ಚಿನ ಅಂಕಗಳನ್ನು ಪಡೆದೂ ಸ್ವ ಇಚ್ಛೆಯಿಂದ ಕಲಾ ವಿಭಾಗವನ್ನು ಆರಿಸಿಕೊಂಡವರನ್ನೂ ನೋಡಿದ್ದೇನೆ ಅಂತಹವರ ಸಂಖ್ಯೆ ಕಡಿಮೆ ಎಂದೇ ಹೇಳಬೇಕು. ಪರಿಸ್ಥಿತಿ ಈಗ ಹೇಗಿದೆಯೋ ಗೊತ್ತಿಲ್ಲ, ಆಗಂತೂ ಎಲ್ಲ ತಂದೆ ತಾಯಿಯರು ತಮ್ಮ ಮಕ್ಕಳನ್ನು ಒಂದೇ ಡಾಕ್ಟರ್ ಅಥವಾ ಇಂಜಿನಿಯರರನ್ನಾಗಿ ಮಾಡಬೇಕು ಎಂದು ಪರದಾಡುತ್ತಿದ್ದುದನ್ನು ನಾನು ಬೇಕಾದಷ್ಟು ಸಾರಿ ನೋಡಿದ್ದೇನೆ. ಇನ್ನೇನಾದರೂ ರ್ಯಾಂಕ್ ಬಂದ ವಿದ್ಯಾರ್ಥಿಗಳೇನಾದರೂ ಕಲಾ ವಿಭಾಗವನ್ನು ಆರಿಸಿಕೊಂಡಿದ್ದಿದೆಯೆಂದಾದರೆ ಅದನ್ನು ನಂಬಲೂ ಕಷ್ಟವಾಗುತ್ತಿತ್ತು.
ಹತ್ತನೇ ತರಗತಿಯಲ್ಲಿ ತೆಗೆದ ಅಂಕಗಳನ್ನು ಬಹಳಷ್ಟು ಕಡೆ ಒಂದು ಅಳತೆಗೋಲಾಗಿ ಬಳಸಲ್ಪಡುತ್ತಿತ್ತು. ಒಂದರಿಂದ ಒಂಭತ್ತನೇ ತರಗತಿಯವರೆಗೆ ಇರದ ಪಬ್ಲಿಕ್ ಪರೀಕ್ಷೆಗಳು ಹತ್ತನೇ ತರಗತಿಯಲ್ಲಿ ರಾಜ್ಯದ ಎಲ್ಲ ವಿದ್ಯಾರ್ಥಿಗಳಿಗೂ ಒಂದೇ ಮಟ್ಟದ ಪರೀಕ್ಷಾ ಪತ್ರಿಕೆಗಳನ್ನು ನೀಡಿ ಅದರಿಂದ ಪ್ರತಿಯೊಬ್ಬರ ಬುದ್ಧಿಮತ್ತೆಯನ್ನು ಅಳತೆ ಮಾಡಲಾಗುತ್ತಿತ್ತು. ಪಟ್ಟಣದಲ್ಲಿ ಓದಿದವರಿಗೆ ಫಸ್ಟ್ ಕ್ಲಾಸ್ ಬಂದರೆ ಅದೇನೂ ಅಂತಹ ಆಶ್ಚರ್ಯವನ್ನು ತರದಿರಬಹುದು ಆದರೆ ನಮ್ಮ ಹಳ್ಳಿಗಳಲ್ಲಿ ಫಸ್ಟ ಕ್ಲಾಸ್ ಬರುತ್ತಿದ್ದ ವಿದ್ಯಾರ್ಥಿಗಳ ಸಂಖ್ಯೆ ಅತಿ ಕಡಿಮೆ, ಹೆಚ್ಚಿನವರು ಫೇಲ್ ಆಗುತ್ತಿದ್ದರೆ, ಒಂದು ಹೈಸ್ಕೂಲಿಗೆ ಒಬ್ಬರೋ ಇಬ್ಬರೋ ಅರವತ್ತು ಪರ್ಸೆಂಟ್ ಅಂಕಗಳಿಗಿಂತ ಹೆಚ್ಚು ಅಂಕಗಳಿಸಿ ಫಸ್ ಕ್ಲಾಸ್ ವಿದ್ಯಾರ್ಥಿಗಳು ಎನ್ನಿಸಿಕೊಳ್ಳುತ್ತಿದ್ದರು. ಒಮ್ಮೆ ಫೇಲಾದ ವಿದ್ಯಾರ್ಥಿಗಳು 'ಕೆರೆ'ಯ ಅಥವಾ 'ಬಾವಿ'ಯ ಮೊರೆ ಹೋಗುತ್ತಿದ್ದರು...ಅಂದರೆ 'ಹಿರೇಕೆರೆ' (ಹಿರೇಕೇರೂರು) ಹಾಗೂ ಹಂಸಬಾವಿ ಇವೆರಡೂ ನಮ್ಮೂರಿನಿಂದ ಕೆಲವೇ ಮೈಲುಗಳ ದೂರದಲ್ಲಿರುವ ಧಾರವಾಡ ಜಿಲ್ಲೆಯಲ್ಲಿದ್ದ ಸೆಂಟರುಗಳು, ಅಲ್ಲಿ ಪರೀಕ್ಷೆಗಳಲ್ಲಿ ಕಾಪಿ ಹೊಡೆಸುವುದು ಎಲ್ಲರಿಗೂ ಗೊತ್ತಿದ್ದರಿಂದ ನಮ್ಮ ಊರಿನಲ್ಲಿ ಯಾರಾದರೂ ಫೇಲ್ ಆದರೆ 'ಅವನಿಗೇನು, ಒಂದೇ ಕೆರೇನೋ ಇಲ್ಲಾ ಬಾವೀನೋ ನೋಡಿಕೊಂಡರಾಯಿತು!' ಎಂದು ತಮಾಷೆ ಮಾಡುತ್ತಿದ್ದುದು ನೆನಪಿಗೆ ಬಂತು. ಆದರೆ ಕಾಪಿ ಹೊಡೆಸುತ್ತಾರೆ ಎಂದು ಹೋಗಿ ಎಷ್ಟೋ ಜನ ಡಿಬಾರ್ ಸ್ಕ್ವಾಡ್‌ಗಳಿಗೆ ಸಿಕ್ಕಿಬಿದ್ದ ಘಟನೆಗಳಿಗೇನೂ ಕಡಿಮೆ ಇಲ್ಲ - ಕಾಪಿ ಹೊಡೆಯುವ ಹಲವಾರು ವಿಧಾನಗಳ ಬಗ್ಗೆ ಬರೆದರೆ ಅದು ದೊಡ್ಡ ಲೇಖನವಾಗುವ ಹೆದರಿಕೆ ಇದೆ, ಜೊತೆಯಲ್ಲಿ ನಾನು ನನ್ನ ಪರೀಕ್ಷೆಗಳನ್ನು ಹೇಗೆ ಪಾಸು ಮಾಡಿರಬಹುದು ಎಂಬ ಅನುಮಾನ ನಿಮ್ಮ ಮನಸ್ಸಿನಲ್ಲಿ ಹುಟ್ಟೋ ಸಾಧ್ಯತೆ ಇರೋದರಿಂದ ಅದರ ಬಗ್ಗೆ ಇನ್ನೊಮ್ಮೆ ಬರೆದರಾಯಿತು!
ಹೀಗೆ ಕನ್ನಡ ಮೀಡಿಯಂ ನಲ್ಲಿ ಫಸ್ಟ್ ಕ್ಲಾಸ್ ಪಾಸಾಗಿ ಮುಂದೆ ಹೋಗ ಬಯಸೋ ವಿದ್ಯಾರ್ಥಿಗಳಿಗೆ ಎರಡು ಮಾರ್ಗಗಳನ್ನು ಸೂಚಿಸಲಾಗುತ್ತಿತ್ತು, ಒಂದೇ ಡಿಪ್ಲೋಮಾ (ಪ್ಲಾಲಿಟೆಕ್ನಿಕ್) ಮಾಡುವುದು ಅಥವಾ ಪಿಯುಸಿ ಸೈನ್ಸ್ ವಿಭಾಗವನ್ನು ಸೇರಿಕೊಳ್ಳುವುದು - ಅದರಲ್ಲೂ ಪಿ.ಸಿ.ಎಮ್.ಬಿ. (ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಹಾಗೂ ಜೀವಶಾಸ್ತ್ರ) ಕಾಂಬಿನೇಶನ್‌ಗೆ ಮುಗಿಬೀಳುತ್ತಿದ್ದವರು ಹೆಚ್ಚು. ಹೆಚ್ಚು ಜನ ಕನ್ನಡ ಮೀಡಿಯಂ ನಿಂದ ಹೋಗಿ ಪ್ರಥಮ ಪಿಯುಸಿಯನ್ನು ಪಾಸು ಮಾಡಲಾಗದೇ ಬಂದು ಮನೆ ಸೇರುತ್ತಿದ್ದ ನಿದರ್ಶನಗಳು ಹಲವಾರು. ಎಷ್ಟೋ ಅಡೆತಡೆಗಳ ನಡುವೆ ಪಿಯುಸಿ ಪಾಸಾದರೂ, ಆಗಷ್ಟೇ ಆರಂಭಿಸಿದ್ದ ಸಿ.ಇ.ಟಿ. (ಕಾಮನ್ ಎಂಟ್ರನ್ಸ್ ಟೆಸ್ಟ್) ಮುಗಿಸಿ ಅದರಲ್ಲಿ ಇಂಜಿನಿಯರಿಂಗ್ ಅಥವಾ ಮೆಡಿಕಲ್ ಲಿಸ್ಟ್‌ನಲ್ಲಿ ಹೆಸರು ಕಾಣಿಸಿಕೊಳ್ಳುವಂತೆ ಮಾಡುವಷ್ಟರಲ್ಲಿ ಹಳ್ಳಿ ಕಡೆಗಳಿಂದ ಬಂದವರಲ್ಲಿ ಮತ್ತೊಂದಿಷ್ಟು ಜನ ಉದುರಿಹೋಗುತ್ತಿದ್ದರು. ಅಕಸ್ಮಾತ್ ಹಾಗೇನಾದರೂ ಉತ್ತಮ ಅಂಕಗಳು ಬಂದೂ ಸರ್ಕಾರಿ ಸೀಟು ಸಿಗದೇ ಹೋದರೆ ಖಾಸಗೀ ಅಥವಾ ಅರೆ ಖಾಸಗೀ ಸಂಸ್ಥೆಗಳಲ್ಲಿ ಇಂಜಿನಿಯರಿಂಗ್, ಮೆಡಿಕಲ್ ಅಥವಾ ಡೆಂಟಲ್ ಕೋರ್ಸುಗಳನ್ನು ತೆಗೆದುಕೊಂಡು ಅದಕ್ಕೆ ತಕ್ಕ ಶುಲ್ಕ (ಫೀ) ವನ್ನು ಕಟ್ಟಲು ಸಾಮರ್ಥ್ಯ ಇರದವರು ಒಂದಿಷ್ಟು ಜನ ಬಿ.ಎಸ್ಸಿ.,ಗೋ ಮತ್ತೊಂದಕ್ಕೋ ತೃಪ್ತಿ ಪಟ್ಟುಕೊಳ್ಳಬೇಕಾಗಿತ್ತು. ಸರಿಯಾದ ಮಾರ್ಗದರ್ಶನವಿರದೆಯೋ ಅಥವಾ ಬೇಕಾದ ಸೀಟುಗಳು ಸಿಗದೆಯೋ ಯಾವುದೋ ವಿಭಾಗದಲ್ಲಿ ಇಂಜಿನಿಯರಿಂಗ್ ಮಾಡಲು ಇಚ್ಛೆ ಇದ್ದಂತಹವರು ಇನ್ಯಾವುದೋ ವಿಭಾಗದಲ್ಲಿ ಸೇರಿಕೊಂಡಿದ್ದನ್ನು ನೋಡಿದ್ದೇನೆ. ಮೊದಲ ವರ್ಷದ ನಂತರ ಬದಲಾಯಿಸಬಹುದು ಎಂದುಕೊಂಡರೂ ಹಾಗೆ ಬದಲಾಯಿಸುವವರು ಕಡಿಮೆ ಎನ್ನೋದು ಮತ್ತೊಂದು ವಿಷಯ. ಒಬ್ಬ ವಿದ್ಯಾರ್ಥಿ ಕೆಮಿಕಲ್ ಇಂಜಿನಿಯರಿಂಗ್ ಅನ್ನು ಆಸೆ ಪಟ್ಟು ತೆಗೆದುಕೊಂಡು ಓದುವುದಕ್ಕೂ ಇನ್ಯಾವುದೂ ಸಿಗದೇ ಸಿಕ್ಕಿದ್ದನ್ನು ಆರಿಸಿಕೊಂಡರಾಯಿತು ಎಂದು ವಿಷಯ-ವಿಭಾಗಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎನ್ನುವುದನ್ನು ಹೇಳಲು ಈ ಮಾತನ್ನು ಹೇಳಬೇಕಾಯಿತು. ಹೀಗೆ ಪಾಲಿಟೆಕ್ನಿಕ್, ಪಿಯುಸಿ, ಇಂಜಿನಿಯರಿಂಗ್, ಮೆಡಿಕಲ್, ಬಿಎಸ್ಸಿ ಇತರ ಸೈನ್ಸ್ ಆಧಾರಿತ ಕೋರ್ಸುಗಳನ್ನು ಹಿಡಿದು ಹೊರಟವರದು ಒಂದು ಕಥೆಯಾದರೆ, ಕಾಮರ್ಸ್ ತೆಗೆದುಕೊಂಡು ಸಿ.ಎ. ಮಾಡುತ್ತೇವೆ ಎನ್ನುವವರ ಕಥೆಗಳಾಗಲೀ, ಆರ್ಟ್ಸ್ ತೆಗೆದುಕೊಂಡು ಎಮ್.ಎ., ಬಿ.ಎಡ್., ಮಾಡುತ್ತೇನೆ ಎನ್ನುವವರದು ಮತ್ತೊಂದು ಕಥೆ.
ನನ್ನ ಬ್ಯಾಚಿನ ಒಬ್ಬ ಹುಡುಗ ೧೫ ವರ್ಷಕ್ಕೆ ಹತ್ತನೇ ತರಗತಿಯನ್ನು ಮುಗಿಸಿ ೨೧-೨೨ ವರ್ಷಕ್ಕೆ ಪದವಿಯೊಂದನ್ನು ಗಳಿಸುತ್ತಾನೆ ಎನ್ನುವುದನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಎಷ್ಟೊಂದು ಅಂಶಗಳು ಪರಿಣಾಮ ಬೀರುತ್ತವೆ ಎನ್ನುವುದನ್ನು ಹೀಗೆ ವಿವರಿಸಬೇಕಾಯಿತು. ನಮ್ಮ ಆಫೀಸಿನಲ್ಲಿ ಔಟ್‌ಸೋರ್ಸಿಂಗ್ ವಿಷಯಗಳು ಚಲಾವಣೆಗೆ ಬಂದಂತೆಲ್ಲಾ 'ನಿಮ್ಮ ದೇಶದಲ್ಲೇನು ಬೇಕಾದಷ್ಟು ಜನ ಇಂಜಿನಿಯರುಗಳು ಪ್ರತಿವರ್ಷ ಹೊರಗೆ ಬರುತ್ತಾರೆ!' ಎನ್ನುವ ಆಶ್ಚರ್ಯಸೂಚಕ ಮಾತುಗಳಿಗೆ ನಾನು 'ಅಲ್ವಾ?' ಅನ್ನೋ ಥರಾ ಮುಖ ಮಾಡಿ ನಕ್ಕು ಬಿಡುತ್ತೇನೆ. ನನ್ನ ಮನಸ್ಸಿನಲ್ಲಿರೋ ದ್ವಂದ್ವ ಎಂದರೆ ಒಬ್ಬ ಡಾಕ್ಟರ್ ಅನ್ನು ತೆಗೆದುಕೊಂಡರೆ ಆ ವೃತ್ತಿಗೆ ತಕ್ಕ ತರಬೇತಿ, ಅಧ್ಯಯನವನ್ನು ನಿರಂತರವಾಗಿ ಮಾಡಿ ಎಷ್ಟೋ ವರ್ಷಗಳ ನಂತರ ಒಂದು ಕಡೆ ಪ್ರಾಕ್ಟೀಸ್ ಮಾಡುವುದಕ್ಕೆ ಆಸ್ಪದವಿರುತ್ತದೆ. ಆದರೆ ಒಬ್ಬ ಕೆಮಿಕಲ್, ಏರೋನಾಟಿಕಲ್ಸ್, ಮೆಕ್ಯಾನಿಕಲ್, ಇತ್ಯಾದಿ ಇಂಜಿನಿಯರಿಂಗ್ ತರಬೇತಿ/ಅಧ್ಯಯನವನ್ನು ಮುಗಿಸಿದವರನ್ನು ವೈಲ್ಡ್ ಕಾರ್ಡ್ ಆಗಿ ಬಳಸಲಾಗುತ್ತಿದೆ. ಇಲ್ಲಿ ಹೀಗಾದಾಗ ಹಲವಾರು ಅಂಶಗಳನ್ನು ಗಮನಿಸುತ್ತೇನೆ: ಇಂಜಿನಿಯರಿಂಗ್ ಮುಗಿಸಿದ ವ್ಯಕ್ತಿ ನಿರ್ಧಿಷ್ಟ ಗುರಿಯನ್ನೇನೂ ಇಟ್ಟುಕೊಳ್ಳದೆ 'ಯಾವುದೋ ಒಂದು' ಇಂಜಿನಿಯರಿಂಗ್ ಮುಗಿಸಿದನೆಂದೋ, ಅಥವಾ ಆತನ ಆಶೋತ್ತರಗಳನ್ನು ಗಂಭೀರವಾಗಿ ಪರಿಗಣಿಸಲಾಗದ ಪರಿಸ್ಥಿತಿ ನಿರ್ಮಾಣವಾಗುವುದೆಂದೋ, ಅಥವಾ ಪ್ರತಿಯೊಬ್ಬ ಇಂಜಿನಿಯರ್‌ಗೆ ತನ್ನತನ್ನ ಕ್ಷೇತ್ರದಲ್ಲಿ ಉದ್ಯೋಗವನ್ನು ಹುಡುಕಲು/ಸೃಷ್ಟಿಸಿಕೊಳ್ಳಲಾಗದೆಂದೋ; ಅಥವಾ ನಮ್ಮಲ್ಲಿನ ಮಿನಿಮಮ್ ಅಥವಾ ಬೇಸಿಕ್ ಎಜುಕೇಶನ್ ಮಟ್ಟ ಅಂದರೇ ಇಂಜಿನಿಯರಿಂಗ್ ಆಗಿದೆಯೆಂದೋ; ವೃತ್ತಿಪರ ಕೋರ್ಸುಗಳನ್ನು ಹೆಚ್ಚು ಹೆಚ್ಚು ಆಗಿ ಕಲಿಸೋದರ ಹಿಂದೆ ಬರೀ ಒಬ್ಬ 'ಪದವೀಧರ'ನನ್ನು ಸೃಷ್ಟಿಸುವ ಅನಿವಾರ್ಯತೆ ಇದೆಯೆಂದೋ; ಇವೆಲ್ಲವನ್ನೂ ಮೀರಿ 'ಒಂದು ನಿರ್ಧಿಷ್ಟ ಕ್ಷೇತ್ರದಲ್ಲೇ ನಾನು ಓದಿ, ದುಡಿಯುತ್ತೇನೆ' ಎಂದು ಗುರಿ ಅಥವಾ ಯೋಜನೆ ಇರದವರೇ ಹೆಚ್ಚಿದ್ದಾರೇನೋ ಎಂದು ಬೇಕಾದಷ್ಟು ಆಲೋಚನೆಗಳು ಬರತೊಡಗುತ್ತವೆ.
ನನಗ್ಗೊತ್ತು ಈ ಬರವಣಿಗೆಯಲ್ಲಿ ನನ್ನ ಆಲೋಚನೆಗಳು ಔಟ್ ಡೇಟೆಡ್ ಆಗಿವೆಯೆಂದು ಆದರೆ ನಾನು ಮುಖ್ಯವಾಗಿ ಚರ್ಚಿಸಲು ಹೊರಟ ಕೆಲವು ವಿಚಾರಗಳೆಂದರೆ:
- ಕೇವಲ ಅಂಕಗಳ ಆಧಾರಿತವಾಗಿ ಸೀಟುಗಳ ಹಂಚಿಕೆ
- ಪದೇ-ಪದೇ ಬದಲಾಗುವ ವೈಯುಕ್ತಿಕ ಗುರಿಗಳು ಅಥವಾ ನಿರ್ಧಿಷ್ಟ ಗುರಿ ಅನ್ನೋದಿರದೇ ಕಲೆಕ್ಟಿವ್ ಗುರಿ ಎಲ್ಲರ ಗುರಿಯಾಗಿ ಮಾರ್ಪಡುವುದು
- ಏನನ್ನೋ ಓದಿ, ಇನ್ನೇನನ್ನೋ ವೃತ್ತಿಯನ್ನಾಗಿ ಆರಿಸಿಕೊಳ್ಳುವುದು
- ಹ್ಯುಮಾನಿಟೀಸ್, ಭಾಷೆ, ಮುಂತಾದ ವಿಷಯಗಳನ್ನು ಆಯ್ಕೆಯಿಂದ ಆರಿಸಿಕೊಂಡವರಿರದೇ ಪರಿಸ್ಥಿತಿಯ ಒತ್ತಡ ಅಥವಾ ಕೈಗೊಂಬೆಯಾಗಿ ಆಯ್ದುಕೊಳ್ಳುವುದು
- ಸರಿಯಾದ ಸಮಯಕ್ಕೆ ಸಿಗದ ಮಾರ್ಗದರ್ಶನ
ಹೀಗೆ ಹಲವಾರು ವಿಷಯಗಳು ಕಣ್ಣ ಮುಂದೆ ಬಂದು ಹೋದವು. ಇವುಗಳನ್ನೆಲ್ಲ ಹೇಗೆ ನಿರೂಪಿಸಿದ್ದೇನೋ ಗೊತ್ತಿಲ್ಲ, ಒಟ್ಟಿನಲ್ಲಿ ಸ್ಥೂಲವಾಗಿ ನನ್ನ ಮನದ ವ್ಯಾಪಾರ ನಿಮಗೆ ಅರ್ಥವಾದರೆ ಸಾಕು!
1 comment:
ನನಗೆ ಅನ್ನಿಸೋ ತರ ಏನೋ ಓದಿ ಮತ್ತಿನ್ನೇನನ್ನೋ ಮಾಡೋ ಪರಿಸ್ಥಿತಿಯ ಮತ್ತೊಂದು ಮುಖ ಮಧ್ಯ ವಯಸ್ಸಿನಲ್ಲಿ ಬರೊ ಬರ್ನ್-ಔಟ್ ಖಾಯಿಲೆ. ಮಾಡೊ ಕೆಲ್ಸ ಖುಷಿ ಕೊಟ್ರೆ ಬಹುಶಃ ಬದುಕು ಸಹ ಆಸಕ್ತಿಯಿಂದ ಕೂಡಿರುತ್ತದೆ. ಬಹಳ ಮಂದಿ ೫೦-೫೫ ವರ್ಷ ಆದ ನಂತರ ಇನ್ನಿಲ್ಲದಂತೆ ಆಧ್ಯಾತ್ಮದ ಮೊರೆ ಹೋಗುವುದು ಕೆಲಸದಲ್ಲಿ ತಮ್ಮ ಕಾಣ್ಕೆಯನ್ನು ಕಾಣಲಿಕ್ಕೆ ಆಗದಿದ್ದಕ್ಕೆನೋ?
-ಸಂತೋಷ
Post a Comment