Tuesday, September 05, 2006

ವಿಶ್ವ ಕನ್ನಡ ಸಮ್ಮೇಳನ ೨೦೦೬ - ಭಾಗ ೩

ಶನಿವಾರದ ಕಾರ್ಯಕ್ರಮಗಳು ಎಸ್.ಪಿ.ಬಾಲಸುಬ್ರಮಣ್ಯಂ ಅವರ ಕಾರ್ಯಕ್ರಮದೊಂದಿಗೆ ಮುಕ್ತಾಯವಾಗುವಾಗ ಭಾನುವಾರವಾಗಲೇ ಬಂದಿತ್ತು. ಭಾನುವಾರ ಮುಖ್ಯ ವೇದಿಕೆಯ ಮೇಲೆ ಏನೇ ಕಾರ್ಯಕ್ರಮಗಳಿದ್ದರು ದಿನವಿಡೀ ಸಾಹಿತ್ಯಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ನೋಡುವುದರಲ್ಲೇ ಕಾಲಕಳೆಯಬಹುದಾಗಿತ್ತು. ಮೊದಲು ಕನ್ನಡದಲ್ಲಿ ತಾಂತ್ರಿಕ ಮತ್ತು ವೈಜ್ಞಾನಿಕ ಬರವಣಿಗೆಯ ಬಗ್ಗೆ ವಿಚಾರ ಸಂಕಿರಣ, ನಂತರ ಬಿಡುಗಡೆಯಾದ ಪುಸ್ತಕಗಳ ಕುರಿತು ಆಯ್ದ ಭಾಷಣಕಾರರು ಮಂಡಿಸಿದ ಕಿರು ಪರಿಚಯ ಅಥವಾ ಅನಿಸಿಕೆ, ಮಧ್ಯಾಹ್ನ ಕಾದಂಬರಿಕಾರ ಭೈರಪ್ಪನವರೊಂದಿಗೆ ಸಂವಾದ, ಇವೆಲ್ಲವೂ ಮನಸ್ಸಿನಲ್ಲಿದ್ದುದರಿಂದ ನನ್ನಂತೆ ಬೇಕಾದಷ್ಟು ಜನರಿಗೆ ಉಳಿದ ಕಾರ್ಯಕ್ರಮಗಳಿಗೆ ಹೋಗುವುದೋ ಬೇಡವೋ ಅನ್ನಿಸಿರಲಿಕ್ಕೂ ಸಾಕು.

ಭೈರಪ್ಪನವರೊಂದಿಗಿನ ಸಂವಾದವನ್ನು ಹೊರತುಪಡಿಸಿ ಮಿಕ್ಕೆಲ್ಲ ಸಾಹಿತ್ಯ ಸಂಬಂಧಿ ಕಾರ್ಯಕ್ರಮಗಳಿಗೆ ಬಹಳ ಕಡಿಮೆ ಜನರು ಸೇರಿದ್ದರು ಎಂಬುದು ಅತಿಶಯೋಕ್ತಿಯೇನಲ್ಲ. ಹಿಂದಿನ ದಿನದ ಹಾಸ್ಯ ಸಂಬಂಧಿ ಕಾರ್ಯಕ್ರಮಗಳಿಗೆ ಸಭಾಂಗಣ ಕಿಕ್ಕಿರಿದು ತುಂಬಿದ್ದರೆ ಸಾಹಿತ್ಯ ಸಮಾರಂಭಗಳು ಸೊರಗಿದಂತೆ ಕಂಡುಬರುತ್ತಿದ್ದವು, ಎಷ್ಟೋ ಕಾರ್ಯಕ್ರಮಗಳಲ್ಲಿ ಸೇರಿದವರೆಲ್ಲ ಒಂದಲ್ಲ ಒಂದು ರೀತಿಯಲ್ಲಿ ಕಾರ್ಯಕ್ರಮಕ್ಕೆ ನೇರವಾಗಿ ಸಂಬಂಧಿಸಿದವರೇ ಆಗಿದ್ದರು. ಸಮನಾಂತರ ವೇದಿಕೆಯ ಮೇಲೆ ನಿರಂತರವಾಗಿ ನಡೆಯುತ್ತಿದ್ದ ಕಾರ್ಯಕ್ರಮಗಳು ಹಾಗೂ ನಮ್ಮ ಜನರ ಅಭಿರುಚಿ ಇವೆರಡೂ ಕಾರಣವಾಗಿರಬಹುದು. ಏನೇ ಹೇಳಿ, ಪುತ್ತೂರಾಯರ ಹಾಗೂ ಅ.ರಾ.ಮಿತ್ರರ ಹಾಸ್ಯಗೋಷ್ಠಿಯಲ್ಲಿ ಜನರು ಪ್ರತಿಯೊಂದು ಜೋಕಿಗೂ ಪ್ರತಿಕ್ರಿಯಿಸಿದ ರೀತಿ ವಿಶೇಷವಾಗಿತ್ತು. ಕನ್ನಡದಲ್ಲಿ ಸ್ಟ್ಯಾಂಡ್‌ಅಪ್ ಕಾಮಿಡಿಯನ್ನು ಇದೇ ಮೊದಲ ಸಲ ಹತ್ತಿರದಿಂದ ನೋಡಿದ ನನಗೆ, ನವಿರಾದ ಹಾಸ್ಯವನ್ನು ವಿಶೇಷವಾಗಿ ಹೇಳುವ ಅವರ ಶೈಲಿ ಹಲವಾರು ಜನರನ್ನು ಅಯಸ್ಕಾಂತದಂತೆ ಆಕರ್ಷಿಸುವ ಸಮೂಹ ಸನ್ನಿಯಂತೆ ಕಂಡುಬಂತು. ಪುತ್ತೂರಾಯರು ಹಾಗೂ ಮಿತ್ರರು ಈ ದಿಸೆಯಲ್ಲಿ ಬಹಳ ಕೌಶಲಪೂರ್ಣರೆಂದೇ ಹೇಳಬೇಕು.

ನಾನು ಇದೇ ಸಮ್ಮೇಳನದಲ್ಲಿ ಮೊಟ್ಟಮೊದಲ ಬಾರಿಗೆ ಭೈರಪ್ಪನವರನ್ನು ನೋಡುತ್ತಿರುವುದು. ಮೊಟ್ಟ ಮೊದಲು ನೋಡಿದಾಗ ಈ ಮನುಷ್ಯನಿಗೆ ನಗುವುದೇ ಗೊತ್ತಿಲ್ಲವೇ ಎನ್ನಿಸಿ ಬಿಟ್ಟಿತ್ತು, mostly ಜೀವನದ ಗಹನವಾದ ಸಮಸ್ಯೆಗಳಿಗೆ ಕಾದಂಬರಿಯ ರೂಪವನ್ನು ಕೊಡುವುದರಲ್ಲಿ ತಮ್ಮ ಮುಗುಳ್ನಗೆಯನ್ನೇ ಕಳೆದುಕೊಂಡುಬಿಟ್ಟರೇನೋ ಎಂದು ಅನುಮಾನವೂ ಆಗಿತ್ತು, ಆದರೆ ಸಂವಾದದಲ್ಲಿ ಕೆಲವು ಪ್ರಶ್ನೆಗಳಿಗೆ ಅವರು ನಕ್ಕು ಉತ್ತರಿಸುತ್ತಿದ್ದುದರಿಂದ ನನ್ನ ಅನುಮಾನ ತೊರೆದುಹೋಯಿತು. ಭೈರಪ್ಪನವರಿಗೆ 'ನಮಸ್ಕಾರ, ಚೆನ್ನಾಗಿದೀರ' ಎಂದು ಪರಿಚಯ ಹೇಳಿಕೊಂಡು ಮಾತನಾಡಿಸಿದಾಗ ಭೈರಪ್ಪನವರ ಪ್ರತಿಕ್ರಿಯೆ ಇತ್ತೀಚೆಗೆ ಅಮೇರಿಕಕ್ಕೆ ಬಂದ ಕನ್ನಡಿಗನೊಬ್ಬ ವಿಮಾನ ನಿಲ್ದಾಣದಲ್ಲಿ ಯಾರೋ ಒಬ್ಬರು ಕನ್ನಡಿಗರಂತೆ ಕಂಡುಬಂದರೆಂದು ಕನ್ನಡದಲ್ಲಿ ಮಾತನಾಡಿಸಿದಾಗ ಎದುರಿನವರು so what? ಎಂದು look ಕೊಟ್ಟ ಹಾಗೆ ಇತ್ತು! ಕಣವಿಯವರನ್ನಾಗಲೀ, ಚಂಪಾ, ಅಮೂರ, ಭಟ್ಟರನ್ನಾಗಲೀ ನನ್ನಂತಹ ಸಾಮಾನ್ಯರು ಮಾತನಾಡಿಸಿದಾಗ ಸಾಮಾನ್ಯರು ಕೊಡಬಹುದಾದ ಮುಗಳ್ನಗೆಯ ಉತ್ತರವೇ ಬಂತು.

ಭೈರಪ್ಪನವರ ಸಂವಾದದ ಬಗ್ಗೆ ಹಿಂದೆಲ್ಲೋ ಓದಿದ್ದೆ, ಆದರೆ ನನ್ನ ನಿರೀಕ್ಷೆಗೆ ಮೀರಿ ಭೈರಪ್ಪನವರ ವಾಗ್ಝರಿ ಸುಮಾರು ೯೦ ನಿಮಿಷಗಳಿಗಿಂತಲೂ ಮೀರಿ ಹರಿದಿತ್ತು. ಜನರು ತಮ್ಮೆಡೆಗೆ ಎಸೆದ ಪ್ರತಿಯೊಂದು ಪ್ರಶ್ನೆಯನ್ನೂ ನಿಧಾನವಾಗಿ ಕೇಳಿಕೊಂಡು ಅದಕ್ಕೆ ತಕ್ಕಂತೆ ಹಾಗೂ ಅದನ್ನು ವಿಸ್ತರಿಸಿ ಉತ್ತರವನ್ನು ಕೊಡುತ್ತಿದ್ದರು. ತಮ್ಮೆಲ್ಲ ಕಾದಂಬರಿಯ ಪಾತ್ರ, ನಿಲುವುಗಳನ್ನು ಸಮರ್ಥವಾಗಿ ವಿವರಿಸಿ ಪ್ರತಿಯೊಂದನ್ನು ವಿವರವಾಗಿ ತಿಳಿಸಿಕೊಡುತ್ತಿದ್ದ ರೀತಿ ಬಹಳ ಸೊಗಸಾಗಿತ್ತು. ಹಿಂದೆ ಎಷ್ಟೋ ವರ್ಷಗಳ ಹಿಂದೆ ಬಾಂಬೆಯಲ್ಲಿ ಭೈರಪ್ಪನವರಿಗೆ ಪ್ರಶ್ನೆಗಳನ್ನು ಎದುರಿಸೋದಕ್ಕೆ ಬರೋದಿಲ್ಲ ಎಂದು ಯಾರೋ ಬರೆದದ್ದನ್ನು ಓದಿ ಇನ್ನೇನನ್ನೋ ಅಂದುಕೊಂಡಿದ್ದ ನನ್ನ ಊಹೆ ಸುಳ್ಳಾಯಿತು. ಧರ್ಮಶ್ರೀಯಿಂದ ಹಿಡಿದು, ಮಂದ್ರದವರೆಗೆ ಸುಮಾರು ಇಪ್ಪತ್ತಕ್ಕೂ ಹೆಚ್ಚು ಕಾದಂಬರಿಗಳನ್ನು ಬರೆಯುವುದರ ಮೂಲಕ ಕನ್ನಡಿಗರಿಗೆ ಚಿರಪರಿಚಿತವಾಗಿರುವ ಭೈರಪ್ಪನವರು ತಮ್ಮ ಹಲವಾರು ಗುಟ್ಟುಗಳನ್ನು ಹಂಚಿಕೊಂಡರು - ಭೈರಪ್ಪನವರು ಹಿರಿಯರು ಹೇಳಿದ 'ದೇಶವನ್ನು ನೋಡು, ಕೋಶವನ್ನು ಓದು' ಎಂಬ ಮಾತಿನಲ್ಲಿ ಅಕ್ಷರಷಃ ನಂಬಿಕೆಯುಳ್ಳವರು - ಅವರೇ ಈ ಸಂವಾದದಲ್ಲಿ ತಿಳಿಸಿದ ಹಾಗೆ ಸುಮಾರು ಹನ್ನೊಂದು ಬಾರಿ ಅಮೇರಿಕೆಗೆ ಬಂದುಹೋಗಿದ್ದಾರೆ, ಯೂರೋಪು, ಏಷ್ಯಾಗಳಲ್ಲಿ ಹೆಚ್ಚಾಗಿ ಪ್ರವಾಸಿ ತಿರುಗಾಡಿದ ಅವರು ದೂರದ ಅಂಟಾರ್ಟಿಕಾಕ್ಕೂ ಹೋಗಿಬಂದಿದ್ದಾರೆ ಎಂಬುದು ಎಷ್ಟೋ ಜನರಿಗೆ ಗೊತ್ತಿರಲಾರದು. ಜೊತೆಯಲ್ಲಿ ಅವರು ಸಾಕಷ್ಟು ಪುಸ್ತಕಗಳನ್ನು ಓದಿದ್ದಾರೆ - ಸಂಶೋಧಕನಾಗಿ, ವಿದ್ಯಾರ್ಥಿಯಾಗಿ, ಸಾಹಿತ್ಯಾರಾಧಕನಾಗಿ ಹಾಗೂ ಪ್ರವಾಸಿಯಾಗಿ ಅವರು ಓದಿದ ಪುಸ್ತಕಗಳನ್ನು ಮಾತು-ಮಾತಿಗೆ ಉದಾಹರಣೆಯಾಗಿ ನೀಡುತ್ತಿದ್ದರು. ಕೆಲವೊಂದು ಪುಸ್ತಕಗಳ ಬಗ್ಗೆ ಅದರ ಪ್ರಕಾಶಕರ ವಿಳಾಸವನ್ನು ತಿಳಿಸುವ ಮೂಲಕ ಪ್ರೇಕ್ಷಕರಲ್ಲಿ ಕೆಲವರನ್ನು ಬೆರಗುಗೊಳಿಸಿದರು.

ಇನ್ನು ಪ್ರಶ್ನೋತ್ತರಗಳಲ್ಲೂ ಸಹ ಲವಲವಿಕೆಯಿಂದ ಮಾತನಾಡಿದರು. ಧರ್ಮಶ್ರೀಯಿಂದ ಹಿಡಿದು ಮಂದ್ರದವರೆಗೆ ತಮ್ಮ ಕಾದಂಬರಿಗಳಲ್ಲಿ ಬರುವ ಪಾತ್ರಗಳ ಲೈಂಗಿಕತೆಯ ಬೆಳವಣಿಗೆಯ ಕುರಿತು ಪ್ರಶ್ನೆಯೊಂದನ್ನು ಉತ್ತರಿಸುತ್ತಾ ಸಂದರ್ಬೋಚಿತವಾಗಿ ಪಾತ್ರಗಳಿಗೆ ತಕ್ಕಂತೆ ಲೈಂಗಿಕತೆಯನ್ನು ಬಳಸಿದ್ದೇನೆಯೇ ಹೊರತು ಅದನ್ನು ಬಲವಂತವಾಗೆಲ್ಲೂ ಹೇರಿಲ್ಲ ಎಂದು ಸಾಧಿಸಿಕೊಂಡರು. ರಾಮಾಯಣದ ಬಗ್ಗೆ ತಾವೇಕೆ ಬರೆದಿಲ್ಲ ಎಂಬುದಕ್ಕೆ ಉತ್ತರವಾಗಿ ಮಹಾಭಾರತ ಇತಿಹಾಸವಿದ್ದ ಹಾಗೆ, ಆದರೆ ರಾಮಾಯಣ ಒಂದು ಮಹಾಕಾವ್ಯ, ಅದನ್ನು ಮರುಸೃಷ್ಟಿ ಮಾಡುವುದನ್ನು ಬಿಟ್ಟು ಹೆಚ್ಚಿನದೇನನ್ನೂ ಸಾಧಿಸಾಗುವುದಿಲ್ಲ, ಮಹಾಭಾರತದಲ್ಲಿನ ಪಾತ್ರಗಳಲ್ಲಿ ತಿರುಚಲು ಬೇಕಾದಷ್ಟು ಅವಕಾಶವಿದೆ ಎಂದರು.

ಧರ್ಮದಂತಹ ಕಟ್ಟುಪಾಡುಗಳು ಹುಟ್ಟಿಸಿದ ಹೊಯ್ದಾಟವನ್ನು ಭೈರಪ್ಪನವರು ವಿವರಿಸುವಾಗ ಮುಸ್ಲಿಮ್, ಕ್ರಿಶ್ಚಿಯನ್ ಧರ್ಮಗಳ ಬಗ್ಗೆ ಓದಿಕೊಂಡು, ಅದರ ವಿಸ್ತಾರವನ್ನು ತಿಳಿದುಕೊಂಡು ಮಾತನಾಡುತ್ತಿದ್ದರೂ ವಿಗ್ರಹ, ದೇವಸ್ಥಾನಗಳನ್ನು ಧ್ವಂಸಮಾಡುವುದರ ಬಗ್ಗೆ, ಹಿಂಸೆಯ ಬಗ್ಗೆ ಅವರ ಧರ್ಮಗಳಲ್ಲೇ ಹಾಗೆ ಹೇಳಿದೆ ಎಂದು ದೊಡ್ಡ ಹೇಳಿಕೆಯನ್ನು ನೀಡಿದ್ದು ನನ್ನಂತಹ ಕೆಲವರಿಗೆ ಅಷ್ಟು ರುಚಿಸಲಿಲ್ಲ. ಅವರು ಹೇಳಿದ ಹೇಳಿಕೆಗಳು ಹೇಗಿದ್ದವೆಂದರೆ ಭಾರತದಲ್ಲೇನಾದರೂ ಈ ರೀತಿ ಹೇಳಿದ್ದರೆ ಅದು ಕಮ್ಯೂನಲ್ ಹಿಂಸೆಯನ್ನು ಸೃಷ್ಟಿಸುವ ಹಾಗಿತ್ತು. ಕೆಲವೊಂದು ಪ್ರಚೋದನಕಾರಿ ಹೇಳಿಕೆಗಳಲ್ಲಿ ಅವರು ಮತಾಂತರಗೊಳಿಸುವ ತಂತ್ರ, ಹೆಣ್ಣುಮಕ್ಕಳಿಗೆ ಸಮಾಜದಲ್ಲಿ ಕೊಡುವ ಸ್ಥಾನಮಾನ ಹಾಗೂ ಒಂದು ದೇಶದವರು ಮತ್ತೊಂದು ದೇಶವನ್ನು ಧಾಳಿಮಾಡಿದಾಗ ಆಗಿಹೋಗುವ ವಿಷಯಗಳನ್ನು ಒಂದು ಜೆನರಲ್ ವ್ಯಾಖ್ಯಾನದಿಂದ ನೋಡಿದಂತಿತ್ತು. ಅವರು ಕುರ್ ಆನ್ ಅನ್ನು ಸಾಕಷ್ಟು ಅಧ್ಯಯನ ಮಾಡಿಕೊಂಡೂ ಪದೇ ಪದೇ 'ಅವರ ಧರ್ಮವೇ ಹಾಗೆ ಹೇಳುತ್ತೆ' ಎನ್ನುವ ವಿಚಾರದಲ್ಲಿ ನನಗೆ ಅವರೊಬ್ಬ ವಾದ ಮಾಡುವ ಹೈ ಸ್ಕೂಲ್ ವಿದ್ಯಾರ್ಥಿಯಂತೆ ಕಂಡುಬಂದರು. ಸಾಕಷ್ಟು ಸಾರಿ ಅಮೇರಿಕವನ್ನು ಪ್ರವಾಸಿಯಾಗಿ ನೋಡಿದ ಅವರಿಗೆ ಕಂಡ ಹಾಗೆ ಇಲ್ಲಿನ ಕಪ್ಪು ಜನರನ್ನು ಇಸ್ಲಾಮಿಗೆ ಮತಾಂತರ ಮಾಡಿಕೊಳ್ಳುವ ಹುನ್ನಾರ ನನಗೆ ತಿಳಿದಿಲ್ಲ, ಅದು ನನ್ನ ಮಿತಿ ಇದ್ದಿರಬಹುದು.

ಇನ್ನು ಪ್ರಶ್ನೆ ಕೇಳಿದ ಹೆಚ್ಚಿನವರು ಭೈರಪ್ಪನವರ ಕಾದಂಬರಿಗಳನ್ನು ವಿವರವಾಗಿ ಓದಿಕೊಂಡಿದ್ದು, ಹಲವಾರು ಪಾತ್ರ ಹಾಗೂ ಸನ್ನಿವೇಶಗಳನ್ನು ಮನನ ಮಾಡಿಕೊಂಡು ಆಸಕ್ತಿಕರವಾಗಿ ಉತ್ತಮವಾದ ಪ್ರಶ್ನೆಗಳನ್ನು ಕೇಳಿದ್ದು ನನಗೆ ಬಹಳ ಇಷ್ಟವಾಯಿತು.

***

ಭೈರಪ್ಪನವರ ಎಲ್ಲಾ ಕಾದಂಬರಿಗಳನ್ನು ನೀವು ಓದಿದ್ದರೂ ನಿಮ್ಮ ಓದು "ಅಪೂರ್ಣ"ವಾಗಿರಬಹುದು ಎಂದು ನಿನ್ನೆ ಹೇಳಿದ್ದೆ - ಭೈರಪ್ಪನವರು ತಮ್ಮ ಸೀನಿಯರ್ ಇಂಟರ್‌ಮೀಡಿಯೆಟ್ ದಿನಗಳಲ್ಲಿ ಭೀಮಕಾಯ ಎನ್ನುವ ಕಾದಂಬರಿಯನ್ನು ಬರೆದು ಪ್ರಕಟಿಸಿದ್ದಾರಂತೆ. ಇದರ ಪ್ರತಿಯನ್ನು ನಾನೆಲ್ಲೂ ನೋಡಿಲ್ಲ, ಇದನ್ನು ಓದಿ ಮುಗಿಸುವವರೆಗೆ ನೀವು ಅವರ ಎಲ್ಲಾ ಕಾದಂಬರಿಗಳನ್ನೂ ಓದಿದಂತಾಗದು...ಆದ್ದರಿಂದಲೇ ನಿಮ್ಮ ಓದು "ಅಪೂರ್ಣ"ವಾಗಿದ್ದಿರಬಹುದು ಎಂದಿದ್ದು - ಭೀಮಕಾಯವನ್ನು ಓದುವುದರ ಜೊತೆಗೆ ಭೈರಪ್ಪನವರ ನಗು ಇರುವ ಫೋಟೋವನ್ನು ನೀವೆಲ್ಲಾದರೂ ನೋಡಿದ್ದರೆ ಅಲ್ಲಿಗೆ ನಿಮ್ಮ ಓದು "ಸಂಪೂರ್ಣ"ಎಂದುಕೊಳ್ಳಿ!

***

ಸಂಜೆ ಹತ್ತು ಘಂಟೆಗೆಲ್ಲಾ ಆರಂಭವಾಗಬೇಕಾಗಿದ್ದ ಗುರುಕಿರಣ್ ಸಂಗೀತಸಂಜೆ ರಾತ್ರಿ ಹನ್ನೊಂದಾದರೂ ಆರಂಭವಾಗದಿದ್ದುದು ಬಹಳ ಜನರಿಗೆ ನಿರಾಶೆ ಉಂಟುಮಾಡಿತ್ತು. ಸಮಯ ಕಡಿಮೆಯಾದ ಗಡಿಬಿಡಿಯಲ್ಲಿ ಭಾನುವಾರ ರಾತ್ರಿ ಒಂಭತ್ತರ ನಂತರದ ಕಾರ್ಯಕ್ರಮಗಳೆಲ್ಲಾ ಏರುಪೇರಾಗಿದ್ದವು. ರಾತ್ರಿ ಹನ್ನೊಂದು ಘಂಟೆಯಿಂದ ಬೆಳಗ್ಗಿನ ಜಾವ ಒಂದು ಘಂಟೆಯವರೆಗೆ ಗುರುಕಿರಣ್ ತಂಡದವರಿಂದ ಮನೋರಂಜನಾ ಕಾರ್ಯಕ್ರಮ ಸೊಗಸಾಗಿತ್ತು. ಕೆಲವು ಹಳೆಯ ಹಾಗೂ ಹೊಸ ಹಾಡುಗಳು ಪ್ರೇಕ್ಷಕರನ್ನು ರಂಜಿಸಿದವು - ಸಂಗೀತಾ ಕಟ್ಟಿ, ಪಲ್ಲವಿ, ಮಾಲ್ಗುಡಿ, ಮುಂತಾದವರೊಂದಿಗೆ ಗುರುಕಿರಣ್ ಯಾವುದೇ ತೊಂದರೆಯಿಲ್ಲದೇ ಕಾರ್ಯಕ್ರಮ ಪ್ರಸ್ತುತಪಡಿಸಿದರು.

***

ನನ್ನ ಅನಿಸಿಕೆಯಂತೆ ಮುಂಬರುವ ಕನ್ನಡ ಸಮ್ಮೇಳನಗಳಲ್ಲಿ ಸಾಕಷ್ಟು ಬದಲಾವಣೆಗಳಾಗುವುದು ಒಳ್ಳೆಯದು. ಸಮಯ ಪರಿಪಾಲನೆಯಂತಹ ಸರಳ ವಿಷಯವಿದ್ದಿರಬಹುದು, ಸುಮಾರು ನಾಲ್ಕು ಸಾವಿರ ಜನಕ್ಕೆ ಊಟ-ತಿಂಡಿ ಬಡಿಸುವುದಿರಬಹುದು, ಎಲ್ಲದಕ್ಕೂ ಒಂದು ದೂರದೃಷ್ಟಿ, ಯೋಜನೆ ಹಾಗೂ ಶಿಸ್ತು ಬಹಳ ಮುಖ್ಯ. ಈ ವರ್ಷದ ಸಮ್ಮೇಳನದಲ್ಲಿ ಇವುಗಳಿಗೆ ಕೊರತೆ ಇರಲಿಲ್ಲವೆಂದಲ್ಲ, ಆದರೂ ಮುಂದೆ ಹೇಗೆ ನಾವು ಸುಧಾರಿಸಬಹುದು ಎಂಬುದಕ್ಕೆ ನನ್ನ ಕೆಲವು ಅನಿಸಿಕೆಗಳು:

- ಲೇಬರ್ ಡೇ (ಸೆಪ್ಟೆಂಬರ್) ವೀಕೆಂಡ್‌ಗಿಂತಲೂ ಮೆಮೋರಿಯಲ್ ಡೇ (ಮೇ) ವೀಕೆಂಡ್‌ನಲ್ಲಿ ಸಮ್ಮೇಳನವನ್ನಿಟ್ಟುಕೊಂಡರೆ ಮುಂಬರುವ ಚಂಡಮಾರುತಗಳಿಂದ ತಪ್ಪಿಸಿಕೊಳ್ಳಬಹುದು
- ಪ್ಯಾರಲಲ್ ವೇದಿಕೆಯನ್ನು ನಿರ್ಮಿಸಲಿ, ಆದರೆ ಎರಡು ಹೆಚ್ಚೆಂದರೆ ಮೂರಕ್ಕಿಂತ ಹೆಚ್ಚು ವೇದಿಕೆಗಳನ್ನು ನಿರ್ಮಿಸಿ ಹಲವಾರು ಕಾರ್ಯಕ್ರಮಗಳನ್ನು ಒಟ್ಟೊಟ್ಟಿಗೇ ನಡೆಸಿದರೆ ಪ್ರೇಕ್ಷಕರು ತಮ್ಮನ್ನು ತಾವು ಕಳೆದುಕೊಳ್ಳುವುದೇ ಹೆಚ್ಚು
- ಸುಮಾರು ನಾಲ್ಕು-ಐದು ಸಾವಿರ ಜನರು ಸೇರುವಲ್ಲಿ ಕಾರ್ಯಕ್ರಮಗಳನ್ನು ಆಸ್ವಾದಿಸುವುದರ ಜೊತೆಗೆ socialization ಮಾಡಿಕೊಳ್ಳುವುದಕ್ಕೂ ಆಸ್ಪದವಿರಲಿ, ಅಥವಾ ಬ್ಯಾಕ್ ಟು ಬ್ಯಾಕ್ ಪ್ರೋಗ್ರಾಮ್ ಇಟ್ಟು ಜನರು ಬೆರೆಯದೇ ಇರುವಂತಾಗದಿರಲಿ
- ಕನ್‌ವೆನ್‌ಷನ್ ಸೆಂಟರ್ ಇರುವಲ್ಲಿಯೇ ಊಟ-ಉಪಚಾರದ ವ್ಯವಸ್ಥೆ ಇರಲಿ, ನಾಲ್ಕು ಸಾವಿರ ಜನ ಬೇರೆ ಕಡೆಗೆ ಊಟಕ್ಕೆ ಹೋಗಿ-ಬಂದು ಮಾಡುವುದು ಅನವಶ್ಯಕವಾಗಿ ಜನರ ಸಮಯವನ್ನು ಹಾಳುಮಾಡುತ್ತದೆ
- ಮುಂದಿನ ಸಮ್ಮೇಳನ ಎಲ್ಲಾದರೂ ನಡೆಯಲಿ ಅದಕ್ಕಿಂತ ಮೊದಲು ಊಟ-ತಿಂಡಿ ವ್ಯವಸ್ಥೆ ಮಾಡುವವರು ಬಂದು ಹೋಗುವ ಜನರನ್ನು triage ಮಾಡಿ, ಒಬ್ಬೊಬ್ಬ ವ್ಯಕ್ತಿ ಊಟ ಬಡಿಸಿಕೊಂಡು, ಊಟ ಮುಗಿಸಿ ಹೋಗುವುದಕ್ಕೆ ಎಷ್ಟು ಸಮಯವಾಗುತ್ತದೆ ಎನ್ನುವ dry run ಅಭ್ಯಾಸ ಮಾಡಿಕೊಂಡು ಅದಕ್ಕೆ ತಕ್ಕಂತೆ ಆಹಾರ, ಮೇಜು, ಖುರ್ಚಿ, ನೀರು-ನಿಡಿಗಳನ್ನು ಹೊಂದಿಸಿಕೊಳ್ಳಲಿ
- ಸ್ಥಳೀಯ ಪೋಲೀಸ್ presence ಇರಲಿ, ಜನರಿಗೆ ಅದರಿಂದ ನೆಮ್ಮದಿ ಇರುತ್ತದೆ, ಸಾವಿರಾರು ಜನರು ಸೇರುವಲ್ಲಿ ಹೊರಗಿನ ಒಂದಿಷ್ಟು ಕಣ್ಣುಗಳು ಜನರ ಸುರಕ್ಷತೆಯನ್ನು ಕಾಯ್ದುಕೊಂಡಿರಲಿ
- ಎಲ್ಲಾ ತರಹದ ಕಾರ್ಯಕ್ರಮಗಳಿಗೂ ಸರಿಯಾದ representation ಸಿಗಲಿ, ನಾಟ್ಯ, ಯಕ್ಷಗಾನ, ಸಂಗೀತ, ಇತ್ಯಾದಿಗಳಿಗೆ ಸಮನಾದ ಅವಕಾಶ ಸಿಗಲಿ
- ಯಾವುದೇ ಕಾರಣಕ್ಕೂ ಆಹಾರ ಪದಾರ್ಥಗಳನ್ನು ವೇಷ್ಟ್ ಮಾಡದಿರುವಂತೆ ನೋಡಿಕೊಳ್ಳಲಿ, ನಾನು ನೋಡಿದಂತೆ ೨೦೦೬ ರ ವಿಶ್ವ ಕನ್ನಡ ಸಮ್ಮೇಳನದಲ್ಲಿ ಮಾಂಸಾಹಾರಿ ಖಾದ್ಯಗಳನ್ನು ಹೆಚ್ಚು ಜನರು ಬಡಿಸಿಕೊಳ್ಳುತ್ತಿರಲಿಲ್ಲ
- ಕರ್ನಾಟಕದಿಂದ ಬಂದ ಕಲಾವಿದರನ್ನು ಮುಖ್ಯ ವೇದಿಕೆಯಲ್ಲಿ ಕರೆದು ಪರಿಚಯಿಸಿ, ಸನ್ಮಾನಿಸುವ ಸೌಜನ್ಯವಿರಲಿ
- ಒಂದು ಕಾರ್ಯಕ್ರಮ ಸಮಯವನ್ನು ಮೀರಿ ನಡೆದರೆ ಅದಕ್ಕೆ ಶಿಕ್ಷೆ ಕೊಡಬೇಕೇ ವಿನಾ ಮುಂದಿನ ಕಾರ್ಯಕ್ರಮಗಳನ್ನು ಮೊಟಕುಗೊಳಿಸುವುದು ಸರಿಯಲ್ಲ
- ಹಗಲೂ-ರಾತ್ರಿ ದುಡಿಯುವ ಕಾರ್ಯಕರ್ತರಿಗೆ ಒಳ್ಳೆಯ ಸಪೋರ್ಟ್ ವ್ಯವಸ್ಥೆ ಇರಲಿ, ಇಲ್ಲವೆಂದಾದರೆ ದುಡಿಯುವವರು ದುಡಿಯುತ್ತಲೇ ಇರಬೇಕಾದೀತು.
- ತಿಂಡಿ, ಊಟಗಳನ್ನು ಬಿಟ್ಟು ಮಧ್ಯೆ ಅಂದರೆ ಮುಂಜಾನೆ ಊಟದ ಸ್ವಲ್ಪ ಹೊತ್ತಿನ ಮೊದಲು (ಸುಮಾರು ಹನ್ನೊಂದು ಘಂಟೆ ಹೊತ್ತಿಗೆ), ಮಧ್ಯಾಹ್ನ ಊಟದ ನಂತರ (ಸಂಜೆ ನಾಲ್ಕು ಅಥವಾ ಐದು ಘಂಟೆಯ ಹೊತ್ತಿಗೆ) ಲಘು ಪಾನೀಯ (ಕಾಫಿ, ಟೀ) ಸರಬರಾಜು ಆಗಲಿ
- ವೇದಿಕೆಯ ಮೇಲೆ ಒಬ್ಬರು ಮಾತನಾಡುತ್ತಾ ನಿಂತಿದ್ದರೆ ಅವರ ಪಕ್ಕದಲ್ಲಿ ಜನರು ಸುಮ್ಮನೇ ನಿಲ್ಲುವುದು ತಪ್ಪಲಿ

***

ಹೀಗೆ ಸೆಪ್ಟೆಂಬರ್ ಒಂದರಿಂದ ಮೂರರವರೆಗೆ ನಡೆದ ೨೦೦೬ ರ ಕಾರ್ಯಕ್ರಮಗಳು ನನಗಂತು ಖುಷಿಯನ್ನು ತಂದುಕೊಟ್ಟಿವೆ, ಹಲವಾರು ಸ್ನೇಹಿತರನ್ನು ಮಾಡಿಕೊಟ್ಟಿವೆ, ಮುಖ್ಯವಾಗಿ ಒಂದಿಷ್ಟು ಕನ್ನಡತನವನ್ನು ಬೆಳೆಸಿವೆ. ಮುಂಬರುವ ಸಮ್ಮೇಳನಗಳಲ್ಲಿ ಕನ್ನಡಿಗರ ಉದಾರತೆ, ನಿಪುಣತೆ ಹಾಗೂ ದೂರದೃಷ್ಟಿಗಳ ಧ್ಯೋತಕವಾದ ಯಶಸ್ವೀ ಕಾರ್ಯಕ್ರಮವನ್ನು ಎದುರು ನೋಡುತ್ತಿರುತ್ತೇನೆ. ೨೦೦೬ ಸಮ್ಮೇಳನವನ್ನು ಅದ್ದೂರಿಯಾಗಿ ನೆರವೇರಿಸಿ, ಪೂರೈಸಿದ ಕಾವೇರಿ-ಅಕ್ಕಾದ ಪದಾಧಿಕಾರಿಗಳಿಗೆ, ಕಾರ್ಯಕರ್ತರಿಗೆ ನನ್ನ ಅಭಿನಂದನೆಗಳು.

13 comments:

Shrilatha Puthi said...

'ಭೀಮಕಾಯ' ತುಂಬಾ ವರ್ಷಗಳ ಹಿಂದೆ 'ತರಂಗ'ದಲ್ಲಿ ಧಾರಾವಾಹಿಯಾಗಿ ಬಂದಿತ್ತು. ನೀವು ಓದಿಲ್ವಾ?

'ಅವರ ಧರ್ಮವೇ ಹಾಗೆ ಹೇಳುತ್ತೆ' ಅಂತ SLB ಹೇಳಿದ್ದು ಸರಿ. ನಾನು ಇಲ್ಲಿ ಇತ್ತೀಚೆಗೆ trek ಹೋಗಿದ್ದಾಗ guide ಜೊತೆ ಹಿಂದೂ & ಇಸ್ಲಾಮ್ ಧರ್ಮಗಳ ಬಗ್ಗೆ ಮಾತಾಡಿದ್ವಿ. He told me that he had stidied Islamic mythology in school. Quoting him 'Quran talks about violence more than love'.

ಈ ಧರ್ಮಗಳು ಬೇರೆ ಧರ್ಮಗಳನ್ನು ಕೀಳಾಗಿ ನೋಡುತ್ತವೆ, 'ನಿನ್ನ ಧರ್ಮವನ್ನು ಪ್ರಚಾರ ಮಾಡು' ಅನ್ನೋದು ಅವರ one-line agenda.

'I am the way' ಅಂತ ನಮ್ಮ ಗೀತಾಚಾರ್ಯ ಹೇಳಿದ, 'I am the ONLY way' ಅಂತ ಬೇರೆ ಧರ್ಮಗಳು ಹೇಳುತ್ವೆ. THAT makes the difference.

Shrilatha Puthi said...

ಕೇಳೋದು ಮರೆತೆ, ಅವ್ರ ಹೆಚ್ಚಿನ ಪುಸ್ತಕಗಳು ಯಾಕೆ out-of-print ಆಗಿವೆ ಅಂತ ಯಾರೂ SLBನ ಕೇಳ್ಳಿಲ್ವಾ?

sritri said...

"ಅವರು ಹೇಳಿದ ಹೇಳಿಕೆಗಳು ಹೇಗಿದ್ದವೆಂದರೆ ಭಾರತದಲ್ಲೇನಾದರೂ ಈ ರೀತಿ ಹೇಳಿದ್ದರೆ ಅದು ಕಮ್ಯೂನಲ್ ಹಿಂಸೆಯನ್ನು ಸೃಷ್ಟಿಸುವ ಹಾಗಿತ್ತು." - ಎಂದಿದ್ದೀರಿ.ಭೈರಪ್ಪನವರು ಈ ರೀತಿಯ ಮಾತುಗಳನ್ನು ಭಾರತದಲ್ಲೂ ಹೇಳಿದ್ದಾರೆ. ಕಮ್ಯೂನಲ್ ಹಿಂಸೆಯೇನೂ ಆಗಲಿಲ್ಲ. ಭೈರಪ್ಪನವರಿಗೆ ಕೋಮುವಾದಿ, ಸನಾತನವಾದಿಯೆಂಬ ಹಣೆಪಟ್ಟಿ ಬಂತು ಅಷ್ಟೆ. :)

ಈಚೆಗೆ ಪತ್ರಿಕೆಯೊಂದರಲ್ಲಿ ಅಂಕಣಕಾರರೊಬ್ಬರು (ವಿಜಯ ಕರ್ನಾಟಕ) ಗಾಂಧಿ,ನೆಹರು ಕುರಿತು ಭೈರಪ್ಪನವರು ಹೇಳಿದರೆನ್ನಲಾದ ಮಾತುಗಳನ್ನು ಬರೆದಿದ್ದರು. ಅದನ್ನು ಓದಿದ್ದರೆ ನೀವೆನನ್ನುತ್ತೀರೋ?

ಹಿಂದೂ ಧರ್ಮ, ಸಂಸ್ಕೃತಿಯನ್ನು ಹಳಿದು ತಾವು ದೊಡ್ಡವರೆನ್ನಿಸಿಕೊಳ್ಳುತ್ತಿರುವ ಇತರ ಸಾಹಿತಿಗಳ ನಡುವೆ ನಿಷ್ಟುರ ಸತ್ಯವನ್ನು ಧೈರ್ಯವಾಗಿ ಹೇಳುವ ಭೈರಪ್ಪನವರ ನೇರವಂತಿಕೆ ನನಗಂತೂ ಬಹಳ ಮೆಚ್ಚಿಕೆಯಾಗುತ್ತದೆ.

ಶ್ರೀಲತಾ, ತರಂಗದಲ್ಲಿ ಬರುತ್ತಿದ್ದ "ಭೀಮಕಾಯ" -ನೆನಪಿದೆ. ಓದಿದೆನೋ ಇಲ್ಲವೋ ನೆನಪಾಗುತ್ತಿಲ್ಲ. (ಚಿತ್ರಗಳು ಮಾತ್ರ ನೆನಪಿದೆ)

ಸತೀಶ್, ಭೀಮಕಾಯ ಓದಿದ್ದರೂ, ಓದಿರದಿದ್ದರೂ ನೀವಂದಂತೆ ನನ್ನ ಓದು ಅಪೂರ್ಣವೇ!

Satish said...

ಶ್ರೀ ಅವರೇ, ನಾನಿನ್ನೂ 'ಭೀಮಕಾಯ' ಓದಿಲ್ಲ.
ಭೈರಪ್ಪನವರು ಹೇಳಿದ ಕೆಲವೊಂದು ಪುಸ್ತಕವನ್ನು ಓದದೇ ನಾನೇನು ಹೇಳಲಾರೆ - ಒಂದು ಧರ್ಮದ ಬಗ್ಗೆ ಅವರು ಪದೇಪದೇ ಹೀಗೆ ಹೇಳ್ತಾ ಇರೋವಾಗ ಹಾಗೂ ಇದ್ದಿರಬಾರದೇಕೆ ಎನ್ನಿಸಿದುದ್ದು ನಿಜ, ಆದರೆ ನಾನು ಬಲ್ಲ ಇಸ್ಲಾಂ ಬೇರೆ, ನನಗೆ ಗೊತ್ತಿರೋ ಇನ್ಯಾರನ್ನಾದ್ರೂ ಕೇಳಿ ನೋಡ್ತೇನೆ.

ಇಲ್ಲ, ಯಾರೂ ಪ್ರಿಂಟ್ ಬಗ್ಗೆ ಕೇಳ್ಲಿಲ್ಲ, ನೀವು ಮೊದ್ಲೇ ಹಿಂಟ್ ಕೊಟ್ಟಿದ್ರೆ ನಾನಾದ್ರೂ ಕೇಳ್ತಿದ್ದೆ!

sritri ಅವರೇ, ಭೈರಪ್ಪನವರು ಮನಸ್ಸು ಬಿಚ್ಚಿ ಮಾತನಾಡಿದ್ದು ನನಗೂ ಇಷ್ಟವಾಯಿತು. ಅಷ್ಟೊಂದು ದೊಡ್ಡ ಹೇಳಿಕೆಯನ್ನು ಅವರು ನೀಡುವಾಗ ಅವರಿಗೆ ಅದರ ಬಗ್ಗೆ ಚೆನ್ನಾಗಿ ತಿಳಿದಿರಲೇ ಬೇಕು. 'ಧರ್ಮಶ್ರೀ' ಬಗ್ಗೆ ಮಾತನಾಡುವಾಗ ಈ ಮಾತನ್ನು ಹೇಳಿದ್ರು, ಅವರು ಧರ್ಮಗಳ ಬಗ್ಗೆ ಬೇಕಾದಷ್ಟನ್ನು ಓದಿಕೊಂಡಿದ್ದಾರೆ.

ನೀವು ಹೇಳಿದ ಅಂಕಣವನ್ನು ಸಮಯ ಸಿಕ್ಕಾಗ ಓದುತ್ತೇನೆ.

Avi said...

ಅಂತೂ ಅಲ್ಲೇನು ನಡೆಯುತ್ತಿದೆ ಅನ್ನುವುದನ್ನು ನಮ್ಮ ಕಣ್ಣಲ್ಲಿ ಇಟ್ಟು ತೋರಿಸಿದ್ದೀರಿ...

ತುಂಬಾ ಧನ್ಯವಾದ ಸತೀಶ್.

ವಿಶ್ವ said...

ಭೈರಪ್ಪನವರು ಯಾವುದೇ ಮುಚ್ಚುಮರೆ ಇಲ್ಲದೆ ತಮಗನಿಸಿದ್ದನ್ನು ನೇರವಾಗಿ ಹೇಳುವ ಎದೆಗಾರಿಕೆ ಉಳ್ಳ ಬೆರಳೆಣಿಕೆಯ ಕನ್ನಡ ಸಾಹಿತಿಗಳಲ್ಲಿ (ತೇಜಸ್ವಿ, ರವಿ ಬೆಳಗೆರೆ...) ಒಬ್ಬರು. ಆದರೆ 'ಖಂಡಿತವಾದಿ ಲೋಕವಿರೋಧಿ' ಎಂಬ ಮಾತಿನಂತೆ ಸತ್ಯವನ್ನು ಅರಗಿಸಿಕೊಳ್ಳುವ ಶಕ್ತಿ ಇರುವವರು ಈ ಲೋಕದಲ್ಲಿ ಕಡಿಮೆ. ಸುಳ್ಳಿನ ಭ್ರಮಾಲೋಕದಲ್ಲಿ ಜೀವಿಸುವುದೇ ಸುಲಭಮಾರ್ಗ. ಈಗಾಗಲೇ ಭೈರಪ್ಪನವರಿಗೆ ತಮ್ಮ ಬಿಚ್ಚುಮನಸ್ಸಿನ ಹೇಳಿಕೆಗಳಿಂದಾಗಿ 'ಕೋಮುವಾದಿ' ಅವಾರ್ಡ್ ಬಂದಿದೆ! ಆದ್ದರಿಂದ ಅವರಿಗೆ ಜ್ಞಾನಪೀಠ ಬರುವುದು ಸಂದೇಹವೇ.

ಭೈರಪ್ಪನವರ ಮಾತಿನಲ್ಲಿ ಅಪನಂಬಿಕೆ ಉಳ್ಳವರು ಈ ಕೆಳಗಿನದನ್ನು ಓದಿಕೊಳ್ಳಬಹುದು.

[Its evident that the christian churches particularly, the vatican, had embarked on a mission to convert the whole of this world in to a christian faith. And it has been openly declared by the POPE john paul in 1998, when he visited india. He said, "The first millenium, we brought the whole of europe under christianity. In the second millenium, we brought the whole of america and africa under christianity. In the third millenum, we have to bring the whole of Asia under christianity"]

ಈ ಕೆಳಗಿನ ವೀಡಿಯೋಗಳಲ್ಲಿ ಕ್ರೈಸ್ತ ಮತಾಂತರಿಗಳ ಕಾರ್ಯಾಚರಣೆಯ ಬಗ್ಗೆ ವಿವರಣೆಗಳಿವೆ.

In English:
http://video.yahoo.com/video/play?vid=3c13e5d869a1ccff0620b77daf703c92.703761

ಕನ್ನಡದಲ್ಲಿ:
http://video.yahoo.com/video/play?vid=3c13e5d869a1ccff0620b77daf703c92.704124

ವಿಶ್ವ said...

ಇದೇ ವಿಷಯದ ಬಗ್ಗೆ ಕೆಳಗಿನ ಲಿಂಕ್‌ ನೋಡಿ:

http://pratikriye.blogspot.com/2006/08/blog-post_115524312783598933.html

ಮತಾಂತರದ ವೀಡಿಯೋವನ್ನು ನೀವು ೨೦ ನಿಮಿಷಕ್ಕಿಂತ ಹೆಚ್ಚಿಗೆ ನೋಡಲಾಗುವುದಿಲ್ಲ. ಅಷ್ಟು ಸಂಕಟವಾಗುತ್ತೆ.

Satish said...

ಅವಿ ಅವರೇ, ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು, 'ಅಂತರಂಗ'ದ ಖಾಯಂ ಓದುಗರಾದ ನಿಮ್ಮ ಪ್ರತಿಕ್ರಿಯೆಗೆ ಯಾವತ್ತೂ ಸ್ವಾಗತ.

ವಿಶ್ವ ಅವರೇ, ಒಳ್ಳೆಯ ಲಿಂಕ್‌ಗಳನ್ನು ಕೊಟ್ಟು ಹಾಗೂ ಧೀರ್ಘವಾದ ಕಾಮೆಂಟನ್ನು ಬಿಟ್ಟು ಬಹಳ ಉಪಕಾರ ಮಾಡಿದ್ದೀರಿ. ನಾನು ಧರ್ಮದಲ್ಲಿ ಹಾಗೆ ಹೇಳಿದೆಯೋ ಅಥವಾ ಅದನ್ನು ಹಾಗೆ ಹೇಳಿದೆಯೆಂದು ಯಾವೊದೋ ನಿರ್ಧಿಷ್ಟ ಅಜೆಂಡಾದ ಅಡಿಯಲ್ಲಿ ಆ ರೀತಿ ಬಿಂಬಿಸಲಾಗುತ್ತಿದೆಯೋ ಎಂದು ಜಿಜ್ಞಾಸೆಯಲ್ಲಿ ತೊಡಗಿದ್ದೆ. ನಾನು ಕಂಡಂತೆ ಇಸ್ಲಾಂ‌ನ ರೀತಿ-ನೀತಿಗಳಲ್ಲಿ ಬದುಕುವ ಕೆಲವರು ಬ್ಯಾಂಕುಗಳಿಂದ ಬಡ್ಡಿಯನ್ನು ತೆಗೆದುಕೊಳ್ಳುವುದಿಲ್ಲ, ದಿನಕ್ಕೈದು ಬಾರಿ ಪ್ರಾರ್ಥನೆಗಳನ್ನು ಸಲ್ಲಿಸುತ್ತಾರೆ, ಹಿಂಸೆ ಹಾಗೂ ಮತಾಂತರಗಳಿಗೆ ಅವರದ್ದು ಯಾವತ್ತಿದ್ದರೂ ವಿರೋಧವಿದೆ.

'ಸಾಹಿತಿಯಿಂದ ಸಮಾಜ ಸುಧಾರಣೆಯಾಗೋದಿಲ್ಲ' ಎನ್ನುವುದನ್ನೂ ಭೈರಪ್ಪನವರು ಸಂವಾದದಲ್ಲಿ ಹೇಳಿದ್ದಾರಾದ್ದರಿಂದ ಅವರ ನಿಲುವುಗಳಲ್ಲಿ ಕೋಮುವಾದಿತನವೇನಾದರೂ ಇದ್ದರೆ ಅದರಿಂದ ಅವರಿಗೆ ಆ ರೀತಿ ಹಣೆಪಟ್ಟಿ ಬರುತ್ತದೆಯೇ ವಿನಾ ಮತ್ತೇನೂ ಆಗಲಿಕ್ಕಿಲ್ಲ.

Seshadri said...

Dear Satish,

I haven't read any of SLB's books. I also do not know what exactly he said in AKKA conference and in what context.

Based on what you have written (and what I read in one of the links provided above), I find it is refreshing that a respected literary figure holds an opinion that's different from most of our so called intellectuals and more importantly he expresses that opinion freely. It is good that there still are men like SLB who express opinions that are not p.c. among their class. (I do hope there are such figures when it comes to topics like Globalization, Liberalisation, Capitalism, etc too!)

I do not, however, agree with SLB's opinions. All the major religions of today have complex histories. Not just complex but also thousands of years old. They have been practised by millions of people and are being practised by millions more. In such a situation, to make any generalization about a religion based on the actions of some or even what is written in a particular scripture is simply incorrect.

People who do not like Koran will sure point out many verses in it that one can read as intolerant or even inciting violence. However, they fail to note that Allah himself says, "Let there be no compulsion in religion".

People who mention about the destruction of Buddha statues in Bamian under Taliban regime, fail to mention that they remained there for centuries under Muslim regimes.

If you look at some of our (Hindu) scriptures, I am sure you can find a lot of hurtful things. (In fact, many anti-Hindu Hindus, Muslims, Christians and others do that on a regular basis.) However, are those writings -- however holy they may be -- representative of our religion as practised by most of us today? Are the criminals who killed innocent Muslims in Gujarat true representatives of Hinduism? If not, why should Taliban be representative of Islam?

It is true that Islam and Christianity are proselytizing religions unlike most of Hinduism. (I write "most of" because, we too have ISKCON etc. who actively try to proselytize.) However, I find nothing wrong in it. If you believe yours is the only way to salvation why not share that with others?

BTW, I am not defending forced conversions. I also do not believe Pope John Paul was advocating forced conversions.

Recently there's a lot written about Tirupati. Many assertions seem to have no basis in fact. After a great bit of hue and cry, here is what yesterday's Indian Express said: "Vishwesha Swamiji said that he would not want to discuss about the ‘fact finding committee’ reports about the allegations on TTD. He said that the situation was dicy and there are some issues that are true and some, which are not true."

This is something that was claimed to be happening NOW. A "fact finding committee" was even formed by the Swamiji himself. In spite of this, now it is said that some issues are "true" and some are "not true". It truly is mind boggling.

In my opinion, the way we need to look at religions should be based on how it is being practised by most of its followers, not on what is written in their holy books and most definitely not on the actions of a few zealots. As a Hindu, I really do not see any cause to worry about Islam or Christianity.

You write about SLB's scholarship. Sometimes, our scholarship, instead of broadening our views deepens our preexisting convictions. I hope that's not the case with SLB.

Regards,

Seshadri

PS: I apologize for writing this in English.

hpn said...

Shrilatha,

"I am *the* way" ಎಂದರೂ ಒಂದೇ ದಾರಿ ಎಂಬ ಅರ್ಥ ಬರುತ್ತದೆ. ಆದ್ದರಿಂದ ನಿಮ್ಮ comparision ಸರಿ ಇಲ್ಲ :P

Satish said...

ಪ್ರಿಯ ಶೇಷಾದ್ರಿ,

ವಿವರವಾದ ಕಾಮೆಂಟನ್ನು ಬಿಟ್ಟು ಬಹಳ ಉಪಕಾರ ಮಾಡಿದ್ದೀರಿ, ಧನ್ಯವಾದಗಳು. ಭೈರಪ್ಪನವರ ಅನಿಸಿಕೆಗಳಿಗೆ ಮತ್ತೊಂದು ಹೊಸ ಮುಖವನ್ನು ತೋರಿಸಿಕೊಟ್ಟಿದ್ದೀರಿ.

ಧರ್ಮವನ್ನು ಈಗಿರುವ ಹಾಗೆ ನೋಡಬೇಕು, ಹಾಗೂ ಅದನ್ನು ಹೆಚ್ಚು ಜನರು ಹೇಗೆ ಆಚರಿಸುತ್ತಾರೆ ಎನ್ನುವುದನ್ನು ಗಮನಿಸಬೇಕು ಎನ್ನುವ ಮಾತುಗಳು ಬಹಳ ಇಷ್ಟವಾದವು.

ಬುದ್ಧನ ಪ್ರತಿಮೆಯನ್ನು ಒಡೆದ ಗಾಂಧಾರ ದೇಶದಲ್ಲಿ ಶತಮಾನಗಳ ಕಾಲ ಬುದ್ದಮತದವರು ಇದ್ದರು ಎನ್ನುವುದು ಸತ್ಯ, ಜೊತೆಗೆ "...Allah himself says, "Let there be no compulsion in religion" " ಎನ್ನುವುದು ಬಹಳ ಸ್ವಾರಸ್ಯಕರವಾಗಿದೆ.

ದಯವಿಟ್ಟು ಹೀಗೇ ಬರೆಯುತ್ತಿರಿ!

***
ಪ್ರಿಯ ನಾಡಿಗ್, ನಿಮ್ಮ ಕಾಮೆಂಟಿಗೆ ಶ್ರೀ ಅವರ ಉತ್ತರವನ್ನು ನಿರೀಕ್ಷಿಸೋಣ, ನಿಮ್ಮ ಕಾಮೆಂಟನ್ನು ಬರೆದದ್ದಕ್ಕೆ ಧನ್ಯವಾದಗಳು.

ದಯವಿಟ್ಟು ಹೀಗೇ ಬರೆಯುತ್ತಿರಿ!

mastmaker said...

It is a given that THERE IS NO GOD. There is no possible arguments on that. How did I reach this conclusion?

Don't you find it interesting that ALL THE RELIGIONS (with no exception) have finetuned GOD to the point where it is NOT POSSIBLE to prove that GOD exists and it is NOT POSSIBLE to prove that GOD doesn't exist? They manage to plug every possible loophole.

Now, even with the assertion that God doesn't exist, I am deeply interested in religion because I wish to understand the ways in which religion survived and excelled for thousands of years. The most important use of religion is to enslave a man, especially his thoughts. This exploitation has gone on for centuries and will continue for centuries more, since organized religion has brainwashed man into believing that it is indispensable.

If this looks like a rant, please ignore it.

Anonymous said...

ಅಲ್ಲೊಂದು ಇಲ್ಲೊಂದು ಸ್ವಯಂಪ್ರೇರಿತವಾಗಿ ನಡೆಯುವ ಮತಾಂತರಕ್ಕೆ ಯಾರ ವಿರೋಧವೂ ಇರುವುದಿಲ್ಲ. ಆದರೆ ಇಂದು ನಡೆಯುತ್ತಿರುವ ಮತಾಂತರಗಳೆಲ್ಲಾ ೯೯% ಲೌಕಿಕ ಆಮಿಷಗಳಿಂದ, ಮತ್ತು ಪರಧರ್ಮ ನಿಂದನೆಯಿಂದ ನಡೆಯುತ್ತಿರುವುದಾಗಿದೆ. ಹಣ, ನೌಕರಿ, ಸೈಕಲ್ಲು, ದನ-ಕರುಗಳು ಗಳನ್ನು ನೀಡಿ ಮತಾಂತರಕ್ಕೆ ಪುಸಲಾಯಿಸುವ ಕ್ರೈಸ್ತ ಮಿಷನರಿಗಳಿಗೂ, ಚುನಾವಣೆಗಳಲ್ಲಿ ಸೀರೆ, ಕುಪ್ಪಸ, ಹೆಂಡ, ಹಣ ನೀಡಿ ಓಟು ದಕ್ಕಿಸಿಕೊಳ್ಳುವ ಭ್ರಷ್ಟ ರಾಜಕಾರಣಿಗಳಿಗೂ ಯಾವ ವ್ಯತ್ಯಾಸವೂ ಇಲ್ಲ.

ಅಂದಹಾಗೆ ಪೋಪ್ ಜಾನ್ ಪಾಲ್ ಹೇಳಿದ್ದೆನ್ನಲಾದ ಈ ಮೇಲೆ ನೀಡಿರುವ ಹೇಳಿಕೆ ಎಷ್ಟು ನಿಜವೋ ಸುಳ್ಳೋ ಗೊತ್ತಿಲ್ಲ. ಪೋಪರು ಬಲಾತ್ಕಾರದ ಮತಾಂತರವನ್ನು ಒಪ್ಪಿದ್ದರೋ ಬಿಟ್ಟಿದ್ದರೋ ಗೊತ್ತಿಲ್ಲ. ಆದರೆ ಅವರ ಶಿಷ್ಯರಂತೂ ಅದನ್ನು ಯಾವುದೇ ಮುಲಾಜಿಲ್ಲದೆ ಭಾರತದಲ್ಲಿ ಮಾಡುತ್ತಿದ್ದಾರೆಂಬುದು ಅಕ್ಷರಸಃ ಸತ್ಯ. ಈ ಕೃತ್ಯಕ್ಕೆ ದೊಡ್ಡವರ ಸಹಕಾರ, ಸಹಮತಿ ಇಲ್ಲವೆನ್ನುವುದನ್ನು ಒಪ್ಪಿಕೊಳ್ಳುವುದು ಸ್ವಲ್ಪ ಕಷ್ಟವೇ.

ಅಷ್ಟಕ್ಕೂ ಒಂದು ಧರ್ಮವನ್ನು ಹೇಗಾದರೂ ಮಾಡಿ ಪ್ರಪಂಚಕ್ಕೆಲ್ಲಾ ಹರಡಬೇಕೆನ್ನುವ ದುರಾಸೆ ಏಕೆ? ಸಣ್ಣಪುಟ್ಟ ಕಂಪನಿಗಳನ್ನು ನುಂಗಿ ದೈತ್ಯವಾಗಿ ಬೆಳೆಯುವ ಪಾಶ್ಚಾತ್ಯ ಜಗತ್ತಿನ ಕಾರ್ಪೊರೇಟ್ ಮನೋಭಾವ ಧಾರ್ಮಿಕ ಜಗತ್ತನ್ನೂ ಆಕ್ರಮಿಸಬೇಕೆ? ಒಂದು ಧರ್ಮದ ಬಗ್ಗೆ ಪ್ರಪಂಚದಲ್ಲೆಲ್ಲಾ ಪ್ರಚಾರ ಮಾಡಿ ತಿಳುವಳಿಕೆ ನೀಡುವುದರಲ್ಲಿ ಯಾವ ತಪ್ಪೂ ಇಲ್ಲ. ಹಿಂದೆ ಬೌದ್ಧ ಧರ್ಮವೂ ಭಾರತದಲ್ಲಿ ಜನಿಸಿ ನಂತರ ಪ್ರಪಂಚದಾದ್ಯಂತ ಪ್ರಸಾರವಾಯಿತಲ್ಲವೇ. ಆದರೆ ಈ ರೀತಿ ಪ್ರಸಾರ ಮಾಡುವಾಗ ಆಮಿಷ ಒಡ್ಡುವುದು, ಇನ್ನೊಂದು ಧರ್ಮವನ್ನು ಹೀಯಾಳಿಸುವಷ್ಟು ಕೀಳು ಮನೋಭಾವನೆ ಬೇಡ. ಈ ಅನೈತಿಕ ಮತಾಂತರದ ಜೊತೆಗೆ "ನಿಮ್ಮ ರಾಮ ಕೈಲಾಗದ ದೇವರು. ತನ್ನ ಹೆಂಡತಿಯನ್ನು ಕಾಪಾಡಲು ಕಪಿಗಳ ಸಹಾಯ ಬೇಕಾಯ್ತು"(ಮೈಸೂರಿನಲ್ಲಿ ನಡೆದ ಮತಾಂತರ ಪ್ರಸಂಗ), "ವಿಗ್ರಹಾರಾಧನೆ ಸೂಳೆಗಾರಿಕೆಗೆ ಸಮ" (ಬೆಂಗಳೂರಿನಲ್ಲಿ ನಡೆದ ಬೆನ್ನಿಹಿಂ ಸಭೆ) ಇಂತಹ ಅಪಪ್ರಚಾರವನ್ನು ಹಿಂದೂಗಳು ಸಹಿಸಿಕೊಳ್ಳಬೇಕಾಗಿದೆ. "ದೇವರೊಬ್ಬ ನಾಮ ಹಲವು", "ಅನೇಕ ನದಿಗಳು ಸಾಗರವನ್ನು ಸೇರುವಂತೆ, ಎಲ್ಲಾ ಧರ್ಮಗಳೂ ದೇವರನ್ನು ಸೇರಲು ಇರುವ ಮಾರ್ಗಗಳಾಗಿವೆ". ಈ ಅಂಶವನ್ನು ಕ್ರೈಸ್ತ, ಇಸ್ಲಾಂ ಧರ್ಮಗಳು ಒಪ್ಪಿಕೊಳ್ಳುವವರೆಗೂ ಕೋಮುವಾರು ಗಲಭೆಗಳು, ಭಯೋತ್ಪಾದನೆ ಆತಂಕ ಇದ್ದೇ ಇರುತ್ತದೆ.

ಇದರ ಜೊತೆಗೆ ನಮ್ಮ ಹಿಂದೂಗಳಲ್ಲಿರುವ ಕೆಲವು ಅಶ್ಪೃಷ್ಯತೆ, ಬಡತನ, ಅಜ್ಞಾನ, ವಿವಿಧ ಜಾತಿಗಳ ಸಂಘರ್ಷ, ಮೂಢ ಆಚರಣೆಗಳು ಮತಾಂತರಿಗಳಿಗೆ ತಮ್ಮ ಕಾರ್ಯ ಸಾಧಿಸಲು ಅನುಕೂಲಕರವಾಗಿದೆ. ನಮ್ಮಲ್ಲೂ ನೂನ್ಯತೆಗಳಿವೆ ನಿಜ. ಆದರೆ ಮಿಷನರಿಗಳ ನಡವಳಿಕೆ ಉರಿಯುತ್ತಿರುವ ಮನೆಯಲ್ಲಿ ಬೀಡಿ ಅಂಟಿಸಿಕೊಳ್ಳುವಷ್ಟು ಹೇಯಕರವಾದದ್ದು.

ಎಲ್ಲಾಧರ್ಮದ ಸಂಸ್ಥಾಪಕರೂ ದೈವಮಾನವರೆಂಬುದರಲ್ಲಿ ಸಂದೇಹವಿಲ್ಲ. ಕೃಷ್ಣ, ಬುದ್ದ, ಕ್ರಿಸ್ತ, ಮಹಮ್ಮದ್, ಅವರಲ್ಲಿ ದೈವತ್ವ ಇರದಿದ್ದರೆ, ಅವರ ಉಪದೇಶಗಳಲ್ಲಿ ಮಾನವೀಯತೆ ಇರದಿದ್ದರೆ, ಇಂದು ಕೋಟ್ಯಾಂತರ ಮಂದಿ ಅವರ ಅನುಯಾಯಿಗಳು ಇರುತ್ತಿರಲಿಲ್ಲ. ಪ್ರತಿಯೊಂದು ಧರ್ಮದ ಜನಾಂಗದಲ್ಲೂ ಇರುವ ಕೋಟ್ಯಾಂತರ ಮುಗ್ದ ಮನಸ್ಸುಗಳು ಇರುತ್ತಿರಲಿಲ್ಲ. ದೇವರು ಹೇಳಿದಲೆನ್ನಲಾದ ಮಾತುಗಳನ್ನು ಪುಸ್ತಕರೂಪದಲ್ಲಿ ಬರೆದಿಟ್ಟವನು ಮನುಷ್ಯ ತಾನೆ!

ಮತಾಂತರ ನೋಡಿ: http://en.wikipedia.org/wiki/Religious_conversion

-ಅನಾಮಧೇಯ