Wednesday, May 24, 2006

ಹಳೆಯ ಆಫೀಸೂ, ಫ್ಯಾಶನ್ ಸೂಪೂ!

ದಿನ ಹಳೆಯ ಆಫೀಸಿಗೆ ಕಾರಣಾಂತರಗಳಿಂದ ಹೋಗಿದ್ದೆ - ಆದಷ್ಟು ಬೇಗಬೇಗ ಕೆಲಸಗಳನ್ನು ಮುಗಿಸಿ ಸಂಜೆ ಬಿಗ್ ಬ್ರದರ್ಸ್ ಬಿಗ್ ಸಿಸ್ಟರ್ಸ್ ಪ್ರೋಗ್ರಾಮ್ ಆಡಿಯಲ್ಲಿ ನನಗೆ ಅಸೈನ್ ಮಾಡಿದ ಹೈ ಸ್ಕೂಲು ಹುಡುಗನನ್ನು ಮಾತನಾಡಿಸಿದ ಹಾಗೂ ಆಯಿತು, ಹಾಗೂ ಕೆಲವು ವಾರಗಳಿಂದ ಹೋಗಿರದ ಮುಂಜಾವಿನ ನ್ಯೂ ಯಾರ್ಕ್ ಸಿಟಿಯನ್ನು ನೋಡಿಕೊಂಡು ಬಂದರಾಯಿತು ಎಂದು. ನಮ್ಮ ಆಫೀಸಿನ ಕಟ್ಟಡವನ್ನು ಈಗಾಗಲೇ ಯಾರೋ ಖರೀದಿಸಿರೋದರಿಂದ ಒಂದು ಕಾಲದಲ್ಲಿ ದೊಡ್ಡ ಕಂಪನಿಯೊಂದರ ಹೆಡ್ ಆಫೀಸಾದ ೪೧ ಮಹಡಿಗಳ ಕಟ್ಟಡ ಕೆಲವೇ ವಾರಗಳಲ್ಲಿ ಒಡೆಯುವವರ ಕೈಗೆ ಸಿಕ್ಕು ತನ್ನ ಗತ್ತನ್ನೆಲ್ಲ ಕಳೆದುಕೊಂಡು ಒಂದು ಕಾಲದಲ್ಲಿ ಮೆರೆದ ಊರಿನ ಗೌಡ ಮುದುಕನಾದ ಹಾಗಿತ್ತು. ಸುಮಾರು ಮೂವತ್ತು ವರ್ಷಕ್ಕಿಂತಲೂ ಹಳೆಯದಾದ ಈ ಕಟ್ಟಡದಲ್ಲಿ ಅಲ್ಲಲ್ಲಿ ಹಾಕಿದ್ದ ಅಮೃತಶಿಲೆ ಸ್ಲ್ಯಾಬುಗಳನ್ನು ಹೇಗೆಬೇಕೋ ಹಾಗೆ ಒಡೆದು ಹಾಕಿದ್ದರು, ಮುಖ್ಯದ್ವಾರವನ್ನು ಮುಚ್ಚಿ ಎಲ್ಲೋ ಬದಿಯ ದ್ವಾರದಿಂದ ಕೆಲಸಗಾರರನ್ನು ಒಳಗೆ ಬಿಡುತ್ತಿದ್ದರು. 'ಇನ್ನೆಷ್ಟು ದಿನ ಇಲ್ಲಿ ಹೀಗೆ ಒಳಗೆ ಬಿಡುತ್ತಾರೆ?' ಎಂದು ಎಲಿವೇಟರ್‌ನ ಒಳಗೆ ಒಂದು ಕಾಲನ್ನು ಇಟ್ಟು ಕೈಯಿಂದ ಬಾಗಿಲನ್ನು ಹಿಡಿದುಕೊಂಡು ಅಲ್ಲೇ ನಿಂತಿದ್ದ ಸೆಕ್ಯುರಿಟಿಯವನನ್ನು ಕೇಳಿದ್ದಕ್ಕೆ 'ಈ ಶುಕ್ರವಾರವೇ ಕಡೆ ಅಂತ ಕಾಣ್ಸುತ್ತೆ, ಆದರೂ ಆಮೇಲೆ ಜನರನ್ನ ಬಿಟ್ಟರೂ ಬಿಡಬಹುದು' ಎಂದ. ಸರಿ ಎಂದು ಯಾವಾಗಲೂ ಬರುವಂತೆ ಹದಿನಾರನೇ ಮಹಡಿಗೆ ಬಂದೆ, ಯಾವಾಗಲೂ ಮುಚ್ಚಿರುತ್ತಿದ್ದ ಫೈರ್ ಡೋರುಗಳು ಅಪರೂಪಕ್ಕೆ ಬಂದವನನ್ನು ಸ್ವಾಗತಿಸಲೋ ಎಂಬಂತೆ ಪೂರ್ತಿ ತೆರೆದುಕೊಂಡು ಹಲ್ಲುಗಿಂಜುತ್ತಿದ್ದವಂತೆ ಕಂಡುಬಂದವು. ಮುಖ್ಯ ದ್ವಾರದಿಂದ ಒಳಗೆ ಬಂದು ನೋಡುತ್ತೇನೆ ಎಲ್ಲವೂ ಬಟಾಬಯಲು, ಹಿಂದೆ ಅಲ್ಲಿ ಎಷ್ಟೊಂದು ಜನರು ಕೆಲಸ ಮಾಡುತ್ತಿದ್ದರು, ಈಗ ಅವರ ‍ಯಾರ ಸುಳಿವೂ ಇರಲಿಲ್ಲ, ಅಲ್ಲೆಲ್ಲ ಕತ್ತಲು ತಾಂಡವಾಡುತ್ತಿದ್ದು, ನಾನು ಸ್ವಿಚ್ ಅದುಮಿದೊಡನೆಯೇ ಇವನೊಬ್ಬ ಬಂದ ಎಂದು ಬೈದುಕೊಂಡು ಅದೆಲ್ಲೋ ಮರೆಯಾಯಿತು.

ನನ್ನ ಹಳೆ ಮೇಜಿನ ಮೇಲೆ ಫೋನೂ ಇರಲಿಲ್ಲ, ನಾನು ಉಪಯೋಗಿಸುತ್ತಿದ್ದ ಖುರ್ಚಿಯೂ ಇದ್ದ ಜಾಗದಲ್ಲಿ ಇರಲಿಲ್ಲ. ಲ್ಯಾಪ್‌ಟಾಪ್ ಕನೆಕ್ಷನ್ ಕೊಟ್ಟು ಎಲ್ಲಿಂದಲೋ ಖುರ್ಚಿ ಫೋನುಗಳನ್ನು ಎಳೆತಂದು ಇನ್ನೇನು ಲಾಗಿನ್ ಆಗಬೇಕು ಎನ್ನುವಷ್ಟರಲ್ಲಿ ದಿಢೀರನೆ ಎರಡು ಸೀನುಗಳು ಒಂದರ ಮುಂದೊಂದು ಬಂದು ಧೂಳಿನ ಜೊತೆಗೆ ಗೆಳೆತನ ಬೆಳೆಸದೆ ಬೇರೆ ವಿಧಿಯಿಲ್ಲ ಎಂದು ಅಣಕಾವಾದಿದಂತೆ ಕಂಡುಬಂತು. ಅಲ್ಲಲ್ಲಿ ಇದ್ದ ಟಿಷ್ಯೂ ಪೇಪರುಗಳನ್ನು ತೆಗೆದುಕೊಂಡು ಮೇಜನ್ನು ಎಷ್ಟು ಸಾಧ್ಯವೋ ಅಷ್ಟು ಸ್ವಚ್ಛ ಮಾಡಿಕೊಂಡು ಹದಿನೈದು ಇಂಚಿನ ಡೆಲ್ ಪರದೆಯಲ್ಲಿ ಮುಖ ಹುದುಗಿಸಿದೆ. ಮೊದಲೆಲ್ಲಾ ಆದರೆ ಯಾರು ಯಾರು ಬಂದು ಕಾಫಿಗೆ ಕರೆಯುತ್ತಿದ್ದರು, ಏನೇನೋ ಕೇಳುತ್ತಿದ್ದರು, ಕೊನೇಪಕ್ಷ ಹಾಲ್‌ವೇಗೆ ಮುಖ ಮಾಡಿ ಕುಳಿತ ನಾನು ಪ್ರತಿದಿನ ಅದೆಷ್ಟೋ ಸಾರಿ ಮಂತ್ರದಂತೆ ಗುಡ್‌ಮಾರ್ನಿಂಗ್, ಹೌ ಆರ್ ಯೂ ಗಳನ್ನು ಹೇಳಬೇಕಿತ್ತು, ಆಗೆಲ್ಲ ಮುಂಜಾನೆ ಜನಗಳು ಅದೂ-ಇದೂ ಮಾತನಾಡಿಕೊಂಡು, ಅವರು ಬಂದು ಇವರು ಹೋಗಿ ಎಲ್ಲರ ಕಾಫಿ ತಿಂಡಿ ಆಗುವಷ್ಟರಲ್ಲಿ ಹತ್ತು ಘಂಟೆಯಾಗಿಹೋಗುತ್ತಿತ್ತು, ಆದರೆ ಈ ದಿನ ಅದೆಷ್ಟೋ ದಿನಗಳನಂತರ ನಾನೊಬ್ಬನೇ ತುಂಬಾ ಹೊತ್ತು ಯಾರ ಜೊತೆಯಲ್ಲೂ ಮಾತನಾಡದೇ, ಮಧ್ಯೆ-ಮಧ್ಯೆ ಇನ್ಸ್ಟಂಟ್ ಮೆಸ್ಸೇಜುಗಳನ್ನು ಕಳಿಸಿದವರಿಗೆ ಸಮಾಧಾನ ಮಾಡುತ್ತಾ ಯಾವುದೋ ಸ್ಪ್ರೆಡ್‌ಶೀಟನ್ನು ತಿದ್ದುತ್ತಾ ಕುಳಿತೆ, ಅದು ಹೇಗೆ ಹನ್ನೊಂದು ಘಂಟೆಯಾಯಿತೋ ಗೊತ್ತಾಗಲಿಲ್ಲ. ಬೆಳಿಗ್ಗೆ ಪಾವ್‌ಬಾಜಿ ಬ್ರೆಡ್ಡಿಗೆ ನಿನ್ನೆಯ ಚಟ್ನಿಯನ್ನು ಹಚ್ಚಿ ತಿಂದುಕೊಂಡು, ಒಂದು ಲೋಟಾ ಕಾಫಿ ಕುಡಿದುಕೊಂಡು ಓಡಿದವನಿಗೆ ಹೊಟ್ಟೆಯಲ್ಲಿ ಆತ್ಮೀಯರರೊಬ್ಬರನ್ನು ನಿರ್ಲಕ್ಷಿಸುತ್ತಿರುವ ತಳಮಳ ಶುರುವಾಗಿ ಹನ್ನೊಂದರಿಂದ ಹನ್ನೆರಡು ಘಂಟೆಗಳವರೆಗೆ ಒಂದು ಹತ್ತು ಬಾರಿಯಾದರೂ ಗಡಿಯಾರವನ್ನು ನೋಡಿಕೊಂಡು ಹನ್ನೆರಡು ಹೊಡೆಯುವುದನ್ನೆ ಕಾಯುತ್ತಾ ಇರುವ ಕಾರ್ಖಾನೆ ಕೆಲಸಗಾರನ ಹಾಗೆ ಹೊರಗೆ ದೊಡ್ಡ ಸದ್ದು ಮಾಡಿಯೂ ಒಳಗೆ ಕೇಳಿಸದ ಸೈರನ್ ಧ್ವನಿಯಿಂದ ಬೆಳಗ್ಗಿನ ಪಾಳಿ ಮುಗಿಯುವ ಸೂಚನೆಗಳು ಸಿಕ್ಕವು.

ನ್ಯೂ ಯಾರ್ಕ್ ನಗರದಲ್ಲೇನು ರೆಸ್ಟೋರೆಂಟುಗಳಿಗೆ ಬರ - ಒಂದು ಸ್ಲೈಸ್ ಪೀಡ್ಜಾದಿಂದ ಹಿಡಿದು ಒಳ್ಳೊಳ್ಳೆಯ ಹೋಟೇಲುಗಳೆಲ್ಲವೂ ಕೂಗಳತೆಯಲ್ಲಿದ್ದುದರಿಂದ ಊಟ ತರೋಣವೆಂದು ಹೊರಗೆ ಹೋದಾಗಲೆಲ್ಲ ಎಲ್ಲಿ ಹೋಗುವುದು ಎಂಬ ಪ್ರಶ್ನೆ ಯಾವಾಗಲೂ ಕಾಡುತ್ತಿತ್ತು, ಆದರೆ ಎಲಿವೇಟರ್‌ನಲ್ಲಿ ಬಂದು ಹೊರಗಡೆಯ ಗಾಳಿಯನ್ನು ಕುಡಿದ ಕೆಲವೇ ಕ್ಷಣಗಳಲ್ಲಿ ಅದಕ್ಕುತ್ತರ ಸಿಕ್ಕು ಕೈಕಾಲುಗಳು ತಮ್ಮ ತಮ್ಮ ಕೆಲಸಗಳನ್ನು ಮಾಡುತ್ತಿದ್ದವು. ಆದರೆ ಈ ದಿನ ಹಾಗಾಗಲಿಲ್ಲ, ಹೊರಗಡೆ ಬಂದರೂ ಎಲ್ಲಿ ಹೋಗುವುದು ಎನ್ನುವದಕ್ಕೆ ಉತ್ತರ ಸಿಗಲಿಲ್ಲ, ಆದರೂ ೪೧ನೇ ಸ್ಟ್ರೀಟ್‌ನಲ್ಲಿರುವ ಸಬ್‌ವೇ ಗೆ ಹೋಗಿ ಒಂದು ಸ್ಯಾಂಡ್‌ವಿಚ್ ತಂದರಾಯಿತು ಎಂದು ಹೊರಟೆ. ಸಬ್ ವೇಗೆ ಹತ್ತಿಕೊಂಡಂತೆಯೇ ಒಂದು ಸೂಪ್ ಅಂಗಡಿ ಇದೆ, ಅದರ ಮುಂದೆ ಬಣ್ಣ-ಬಣ್ಣದ ಸೀಮೇಸುಣ್ಣದಲ್ಲಿ ಪ್ರತೀದಿನವೂ ಮೆನ್ಯುಗಳನ್ನು ಬರೆದಿರುತ್ತಾರಾದರೂ ನಾನು ಅದನ್ನು ಯಾವತ್ತೂ ನೋಡುವ ಗೌಜಿಗೇ ಹೋದವನಲ್ಲ, ಆದರೆ ಈ ದಿನ, ಸೈಡ್ ವಾಕ್‌ನಲ್ಲಿ ಹೆಚ್ಚು ಜನರಿರದಿದ್ದುದರಿಂದಲೋ ಅಥವಾ ಅದೇ ತಾನೆ ಹನ್ನೆರಡು ಹೊಡೆದು ಇನ್ನೂ ಲಂಚ್ ಅವರ್ ಶುರುವಾಗುತ್ತಾ ಇದ್ದುದರಿಂದಲೋ ಸೂಪ್ ಶಾಪ್‌ನಲ್ಲೂ, ಅದರ ಮುಂದಿನ ಸೈಡ್ ವಾಕ್‌ನಲ್ಲೂ ಯಾರೂ ಇರಲಿಲ್ಲ. ಅಂಗಡಿಯ ಹೆಸರನ್ನು ನೋಡಿದೆ 'ಫ್ಯಾಶನ್ ಸೂಪ್' ಎಂದು ದೊಡ್ಡ ಅಕ್ಷರಗಳಲ್ಲಿ ಬರೆದಿದ್ದರು. ಈ ಅಂಗಡಿಯನ್ನು ಎಷ್ಟೋ ಬಾರಿ ನೋಡಿ ಒಳಗೆ ಹೋಗಬೇಕು ಎಂದು ಮನಸ್ಸಾಗಿದ್ದರೂ ಎಂದೂ ಹೋಗಿರಲಿಲ್ಲ, ಆದರೆ ಇಂದು ಹಿಂದಿನಿಂದ ಯಾರೋ ತಳ್ಳಿದ ಅನುಭವವಾಯಿತು. ಒಳಗೆ ಕೌಂಟರಿನ ಹಿಂದೆ ಒಬ್ಬ ಕಪ್ಪು ದೈತ್ಯ ಮೈಮೇಲೆ ಏಪ್ರನ್ ಕಟ್ಟಿಕೊಂಡು ಥರಥರನ ಬಿಸಿಯಾದ ಸೂಪು ಇದ್ದಂತಹ ಕೊಳಗಂತಹ ಪಾತ್ರೆಗಳಲ್ಲಿ ಚಮಚೆಯಿಂದ ಕಲಕುತ್ತಿದ್ದವನು 'ಹೇಗಿದ್ದೀರಾ ಸಾರ್' ಎಂದ, ಕ್ಯಾಷ್ ರಿಜಿಷ್ಟರಿನ ಹಿಂದೆ ನಿಂತಿದ್ದ ಬಿಳಿ ಚೆಲುವೆ ಸುಮ್ಮನೇ ಮುಗುಳ್ನಕ್ಕಳು. ನಾನು 'ಇಲ್ಲಿ ವೆಜಿಟೇರಿಯನ್ ಸೂಪ್' ಸಿಗುತ್ತದೆಯೇ ಎಂದೆ, ಅವನು 'ಖಂಡಿತವಾಗಿ' ಎಂದು ನನ್ನ ಮುಂದೆ ಇದ್ದ ಆರೇಳು ಸೂಪುಗಳಲ್ಲಿ ಮೂರು ನಾಲ್ಕು ವೆಜಿಟೇರಿಯನ್ ಸೂಪುಗಳನ್ನು ಪರಿಚಯಿಸಿದ, ನನ್ನ ಹಿಂದೆಯಾಗಲೀ ಮುಂದೆಯಾಗಲೀ ಯಾರೂ ಜನರಿಲ್ಲದಿದ್ದರಿಂದ ಆತ ಏನು ಪ್ರಶ್ನೆ ಬೇಕಾದರೂ ಕೇಳು ಎನ್ನುವಂತೆ ಶಾಂತಚಿತ್ತನಾಗಿದ್ದ. ನಾನು 'ಬ್ರಾಥ್ ಏನೂ ಉಪಯೋಗಿಸುವುದಿಲ್ಲವೇ ವೆಜಿಟೇರಿಯನ್ ಸೂಪ್ ಮಾಡಲು' ಎಂದದ್ದಕ್ಕೆ ಅವನು 'ಇಲ್ಲ, ನಾವು ಬಳಸೋಲ್ಲ' ಎಂದ. ನಾನು ಇದ್ದ ಚಿಕ್ಕ ಕಪ್‌ನಲ್ಲಿ ಲೆಂಥಿಲ್ ಸೂಪ್ ತೆಗೆದುಕೊಂಡೆ, ಅವನು ಸೂಪ್ ಜೊತೆಗೆ ಬ್ರೆಡ್ ಅಥವಾ ಚಿಪ್ಸ್ ಬರುತ್ತದೆ ಯಾವುದು ಬೇಕು ಎಂದ, ಬ್ರೆಡ್ ಎಂದೆ, ಆತ ಸೂಪ್ ಮತ್ತು ಬ್ರೆಡ್ ಅನ್ನು ಬ್ರೌನ್‌ಬ್ಯಾಗ್‌ನಲ್ಲಿ ಇಟ್ಟು, ಸೂಪು ಕುಡಿಯೋದಕ್ಕೆ ಗುಂಡಿ ಇರುವ ಸಣ್ಣ ಪ್ಲಾಸ್ಟಿಕ್ ಚಮಚೆ ಹಾಗೂ ನ್ಯಾಪ್‌ಕಿನ್ ಇರುವ ಒಂದು ಪ್ಲಾಸ್ಟಿಕ್ ಕವರನ್ನೂ ಇಟ್ಟು, ಕ್ಯಾಷ್ ರೆಜಿಸ್ಟರಿನ ಹಿಂದಿದ್ದ ಚೆಲುವೆಗೆ ನಾನು ತೆಗೆದುಕೊಂಡ ಸೂಪಿನ ಬಗ್ಗೆ ಹೇಳಿದ. ಸೂಪಿನ ಜೊತೆಯಲ್ಲಿ ಒಂದು ಹಣ್ಣು ಸಹಾ ಬರುತ್ತದೆ - ಬಾಳೆಹಣ್ಣು, ಪಿಯರ್ ಅಥವಾ ಸೇಬುಗಳಲ್ಲಿ ಯಾವುದೊಂದನ್ನಾದರೂ ಆರಿಸಿಕೋ ಎಂದ, ನಾನು ಬಾಳೆಹಣ್ಣನ್ನು ತೆಗೆದುಕೊಂಡು 'ಎಷ್ಟಾಯಿತು' ಎಂದೆ, ಅವನು ಅಲ್ಲಿದ್ದ ಬೋರ್ಡನ್ನು ತೋರಿಸಿ, ಇದಕ್ಕೆ ಕೇವಲ ಮೂರು ಡಾಲರ್ ಎಪ್ಪತ್ತೈದು ಸೆಂಟ್, ಟ್ಯಾಕ್ಸ್ ಸೇರಿ ನಾಲ್ಕೂ ಚಿಲ್ಲರೆಯಾಗುತ್ತದೆ ಎಂದ, ನನಗೆ ಇಷ್ಟು ಕಡಿಮೆ ಬೆಲೆಗೆ ಅಷ್ಟೆಲ್ಲಾ ವಸ್ತುಗಳು ದೊರೆತಿದ್ದು ನೋಡಿ ಆಶ್ಚರ್ಯವಾಯಿತು. ನಾಲ್ಕು ಡಾಲರ್ ಹನ್ನೊಂದು ಸೆಂಟ್ ಕೊಟ್ಟು, ಚಿಲ್ಲರೆ ಪಡೆದು ಹೊರಬಂದೆ. ಇಷ್ಟು ಕಡಿಮೆ ಬೆಲೆಯಲ್ಲಿ, ಅದೂ ಟೈಮ್ಸ್ ಸ್ಕ್ವಯರ್‌ಗೆ ಕೂಗಳತೆ ದೂರದಲ್ಲಿ ಇಷ್ಟೊಂದು ವಸ್ತುಗಳು ಬಂದದ್ದನ್ನು ನೋಡಿ ನನಗೆ ಸೂಪಿನ ಕ್ವಾಲಿಟಿ ಬಗ್ಗೆ ಅನುಮಾನವಾಯಿತು. ಹೊರಗಡೆ ಇದ್ದ ನ್ಯೂಸ್ ಸ್ಟ್ಯಾಂಡಿನಲ್ಲಿ ಜ್ಯೂಸ್ ಒಂದನ್ನು ಕೊಂಡುಕೊಂಡು ಹೊಟ್ಟೆ ಚುರುಗುಟ್ಟುತ್ತಿದ್ದರಿಂದ ಲಗುಬಗೆಯಿಂದ ನನ್ನ ಅಫೀಸಿಗೆ ಬಂದೆ. ನನಗೆ ಖುಷಿಯಾಗುವಂತೆ ಸೂಪಿನ ಗುಣಮಟ್ಟ ಚೆನ್ನಾಗಿದ್ದುದೂ ಅಲ್ಲದೇ, ಬ್ರೆಡ್ಡಿನ ಜೊತೆಯಲ್ಲಿ ಅವನು ಒಂದು ಕುಕ್ಕೀಯನ್ನೂ ಇಟ್ಟಿದ್ದು ಬಹಳ ಇಷ್ಟವಾಯಿತು, ಇಷ್ಟು ದಿನ ಈ ಅಂಗಡಿಗೆ ಹೋಗದೇ ಇದ್ದುದಕ್ಕೆ ಕೈ-ಕೈ ಹಿಸುಕಿಕೊಂಡೆ!

ನಾನು ಇಲ್ಲಿಗೆ ಬರುವ ಮೊದಲು ಆಗೆಲ್ಲ ಇಲ್ಲಿ ಬಂದು ಎಮ್.ಎಸ್. ಮಾಡಿ ಬಹಳ ಕಷ್ಟಪಟ್ಟು ಮುಂದೆ ಬಂದ ನನ್ನ ಸಹೋದ್ಯೋಗಿಗಳು ನಾನು ಒಂದು ಕಾಲದಲ್ಲಿ ಉಪ್ಪಿಟ್ಟು ತಿಂದ ಹಾಗೆ ಅವರು ತಾವು ಕುಡಿದ ಸೂಪುಗಳ ಹಾಗೂ ತಿಂದ ಬ್ರೆಡ್ಡುಗಳ ಬಗ್ಗೆ ಬಹಳ ಹೆದರಿಸಿದ್ದರಾದರೂ ಫುಡ್ ನೆಟ್‌ವರ್ಕಿನ ದೆಸೆಯಿಂದಾಗಿ ನನಗಂತೂ ಸೂಪು ಎಂದರೆ ಪಂಚಪ್ರಾಣ, ಒಂದೆರಡು ಡಾಲರ್ ಕೊಟ್ಟರೆ ನಮ್ಮ ಕೆಫೆಟೇರಿಯಾದಲ್ಲಿ ದಿನಕ್ಕೊಂದು ಸೂಪನ್ನು ಕುಡಿಯಬಹುದು, ಸೂಪು ಎಂದರೆ ಸುಮ್ಮನೇ ನೀರಲ್ಲ, ಅದರಲ್ಲಿ ಏನೇನೋ ಮಹತ್ವವಿದೆ ಎಂದು ಗೊತ್ತಾದದ್ದು ಆಲ್ಟನ್ ಬ್ರೌನ್, ಎಮರಿಲ್ ಲಗಾಸಿ ಹಾಗೂ ನನ್ನ ಎರಡನೇ ಹೆಂಡತಿ ಎಂದು ನಾನು ಜಂಭದಿಂದ ಹೇಳಿಕೊಳ್ಳುವ ರೇಚಲ್ ರೇ ಯರಿಂದಾಗಿ - ಅವರು ತೋರಿಸಿದ ಅಡುಗೆಗಳನ್ನು ಮಾಡಿ ತಿನ್ನದ್ದಿದ್ದರೇನಂತೆ, ಕಣ್ತುಂಬ ನೋಡಲೇನೂ ಆಡ್ಡಿಯಿಲ್ಲ ಅಲ್ಲವೇ?

***

ನಾಲ್ಕೂ ಕಾಲರವರೆಗೆ ಕಮಕ್-ಕಿಮಕ್ ಎನ್ನದೇ ಕೆಲಸ ಮಾಡಿಕೊಂಡು, ನಾಲ್ಕೂ ಇಪ್ಪತ್ತಕ್ಕೆ ಆಫೀಸನ್ನು ಬಿಟ್ಟು (ಇನ್ನು ಇಲ್ಲಿಗೆ ಬರುತ್ತೇನೋ ಇಲ್ಲವೋ ಎಂದು ಯಾರೂ ಇಲ್ಲದ ಮೂಕ ಜಾಗಕ್ಕೆ ಗುಡ್ ಬೈ ಹೇಳಿ) ನಮ್ಮ ಕಡೆ ಬ್ಯಾಣ ನುಗ್ಗಿದೆಯೆಂದು ತುಡುಗು ದನಕ್ಕೆ ಕೊರಳಿನಲ್ಲಿ ದೊಣ್ಣೆ ಕಟ್ಟಿದಾಗ ಕಾಲನ್ನು ಎಳೆದುಕೊಂಡು ಓಡಾಡುವ ಹಾಗೆ ನಾನು ಬಗಲಿನಲ್ಲಿ ಲ್ಯಾಪ್‌ಟಾಪ್ ತುಂಬಿದ್ದ ಭಾರವಾದ ಚೀಲವನ್ನು ಹೆಗಲಿನಲ್ಲಿ ಆಗಾಗ್ಗೆ ಬದಲಾಯಿಸಿಕೊಂಡು ಬ್ರಯಾಂಟ್ ಪಾರ್ಕಿನಲ್ಲಿ ಈ ಹಿಂದೆಂದೂ ಬಿಸಿಲನ್ನೇ ನೋಡಿಲ್ಲ ಎಂದು ಮೈ ಚೆಲ್ಲಿ ಮಲಗಿದವರೆನ್ನೆಲ್ಲ ನನ್ನ ಕಪ್ಪು ಕನ್ನಡಕದ ಅಂಚಿನಲ್ಲಿ ನೋಡಿಕೊಂಡು ನಾಲ್ಕು ಸ್ಟ್ರೀಟ್‌‌ಗಳನ್ನೂ, ಐದು ಅವೆನ್ಯೂಗಳನ್ನೂ ದಾಟಿ ನನ್ನ ಮೆಂಟಿಯನ್ನು (ಹೈ ಸ್ಕೂಲು ಹುಡುಗ) ಭೇಟಿಯಾಗೋಣವೆಂದು ನಮ್ಮ ಮತ್ತೊಂದು ಆಫೀಸಿಗೆ ಬಂದೆ.

ಇಂದಿನ ಆಟದಲ್ಲಿ ಅಲ್ಲಿ ಸೇರಿದ್ದ ಬಿಗ್ ಮತ್ತು ಲಿಟ್ಲ್ ಗಳಿಗೆ ತಲಾ ಅವರವರ ಜೋಡಿಯಾಕ್ ಸೈನ್ (ರಾಶಿ), ಶೂ ಸೈಜ್, ಎತ್ತರ, ಬದುಕಿನಲ್ಲಿ ಅತ್ಯಂತ ಸಂತಸದ ಘಳಿಗೆ ಹಾಗೂ ಬದುಕಿನ ಅತಿ ದೊಡ್ಡ ಭಯವನ್ನು ಒಬ್ಬೊಬ್ಬರಾಗಿಯೇ ಚೀಟಿಯಲ್ಲಿ ಬರೆಯುವಂತೆ ಸೂಚಿಸಿದರು. ಹೀಗೆ ಬರೆದುದ್ದನ್ನು ಮಡಿಕೆಗಳನ್ನಾಗಿ ಮಡಚಿ ಒಂದು ದಬ್ಬದಲ್ಲಿ ಹಾಕಿ ಪ್ರತಿಯೊಬ್ಬರೂ ತಮಗೆ ಬಂದ ಚೀಟಿಯನ್ನು ಎಲ್ಲರಿಗೂ ಕೇಳುವಂತೆ ಗಟ್ಟಿಯಾಗಿ ಓದಿ, ಹಾಗೆ ಬರೆದವರು ಯಾರು ಕಂಡುಹಿಡಿಯುವ ಆಟ ಅದಾಗಿತ್ತು. ಸನ್ ಸೈನ್, ಶೂ ಸೈಜ್, ಎತ್ತರಗಳನ್ನು ಬರೆದ ನನಗೆ ಬದುಕಿನ ಸಂತಸದ ಘಳಿಗೆಯ ಬಗ್ಗೆ ಒಂದು ಕ್ಷಣ ಯೋಚಿಸುವಂತಾಯಿತು, ಹಲವಾರು ಅಭ್ಯರ್ಥಿಗಳು ಮನದಲ್ಲಿ ಬಂದರೂ 'ನನ್ನ ಮಗಳು ಹುಟ್ಟಿದ ಕ್ಷಣ' ಎಂದು ಬರೆದೆ, ಆದರೆ ಬದುಕಿನ ದೊಡ್ಡ ಭಯಕ್ಕೆ ಏನು ಬರೆಯಬೇಕೆಂಬುದಕ್ಕೆ ತಿಳಿಯದೇ ಒದ್ದಾಡುತ್ತಿದ್ದಾಗ, ಇದಕ್ಕೂ 'ಕೆಲಸ ಕಳೆದುಕೊಳ್ಳುವುದು', 'ಆಕ್ಸಿಡೆಂಟ್ ಆಗುವುದು' ಎಂದು ಒಂದೆರಡು ಅಭ್ಯರ್ಥಿಗಳು ಸಿಕ್ಕಿದರೂ ಕೊನೆಯಲ್ಲಿ 'ಸಾವು' ಎಂದು ಬರೆದುಕೊಟ್ಟೆ.

ಬರೆದೇನೋ ಕೊಟ್ಟೆ, ಆದರೆ ಒಮ್ಮೆಗೇ ದಿಗಿಲಾಯಿತು, ನಾನು ಸಾಯುವುದಕ್ಕೆ ಏಕೆ ಹೆದರುತ್ತೇನೆ, ಅದೇ ನನ್ನ ಬದುಕಿನ ಮಹಾ ಭಯವೇ ಎಂಬ ಧ್ವನಿಯೂ, ನಾನು ಇನ್ನೂ ಸಾಯಲು ಸಿದ್ಧನಿಲ್ಲ, ಅದೇನನ್ನೋ ಕಡಿದು ಹಾಕುವುದಕ್ಕೆ ಇನ್ನೂ ಬಾಕಿಯಿದೆ ಎಂಬ ಸಮಜಾಯಷಿಯೂ ಒಂದೇ ಸಮಯಕ್ಕೆ ಮನಸ್ಸಿನಲ್ಲಿ ನುಗ್ಗಿದವು. ಉಳಿದವರ ಕೆಟ್ಟ ಭಯಗಳೇನೇನಿರಬಹುದು ಎಂದು ಮುಂದಾಗಿಯೇ ಯೋಚಿಸುವ ಪೀಕಲಾಟದ ಜೋಕಾಲಿಗೆ ಮನಸ್ಸು ತೂಗತೊಡಗಿತು. ಆದರೆ ನನಗೆ ಆಶ್ಚರ್ಯವಾಗುವಂತೆ ಅಲ್ಲಿ ಸೇರಿದ್ದ ಹೈ ಸ್ಕೂಲಿನ ಮಕ್ಕಳು ವಾಟರ್ ಬಗ್, ಪಾರಿವಾಳ, ಕಾಕ್‍ರೋಚ್, ಮುಂತಾದವುಗಳನ್ನು ಬರೆದಿದ್ದರೆ, ದೊಡ್ಡವರಲ್ಲಿ ಸುಮಾರು ಜನ 'ಸಾವಿನ' ಪ್ರಸ್ತಾಪವನ್ನು ಮಾಡಿದ್ದರು, ಒಂದೆರಡು ಜನ ನನ್ನ ಹಾಗೇ 'ಸಾವು' ಎಂದು ನೇರವಾಗಿ ಬರೆದಿದ್ದರೆ, ಇನ್ನು ಕೆಲವರು 'ಅಮ್ಮನ ಸಾವು', 'ಕುಟುಂಬದಲ್ಲಿ ಯಾರದ್ದಾದರೂ ಸಾವು', 'ಪ್ರೀತಿ ಪಾತ್ರರನ್ನು ಕಳೆದುಕೊಳ್ಳುವುದು' ಮುಂತಾಗಿ ಬರೆದಿದ್ದರು - ಅವನ್ನೆಲ್ಲ ಕೇಳಿ ನನ್ನ ವ್ಯಗ್ರ ಮನಸ್ಸಿಗೆ ಒಮ್ಮೆಲೆ ಬಹಳ ಖುಷಿಯಾದರೂ, ಆ ಖುಷಿ ಬಹಳ ಕಾಲ ನಿಲ್ಲದೇ 'ಅವರೆಲ್ಲರೂ ಹೀಗೇಕೆ ಬರೆದಿರಬಹುದು?' ಎಂದು ಮತ್ತೆ ಮನದಲ್ಲಿ ಮಂಡಿಗೆ ತಿನ್ನತೊಡಗಿದೆ. ಅಲ್ಲಿ ಸೇರಿದ ಹದಿನೈದು ಜನರಲ್ಲಿ ನನ್ನನ್ನು ಬಿಟ್ಟು ಬೇರೇ ಯಾರೂ ಕ್ಯಾಪ್ರಿಕಾರ್ನ್ ಜನರಿರಲಿಲ್ಲ!

ಪ್ರಾಂಕಿ ಎನ್ನುವ ಒಬ್ಬ ಹೈ ಸ್ಕೂಲು ಹುಡುಗ ಕೇಳಿಯೇ ಬಿಟ್ಟ - 'ಸಾವಿನಲ್ಲಿ ಅಂತದ್ದೇನಿದೆ? ತುಂಬಾ ಜನ ಸಾವು ಎಂದು ಬರೆದಿದ್ದಾರಲ್ಲಾ...' ಎಂದು, ಅವನ ಪ್ರಶ್ನೆಯನ್ನು ಕೇಳುವಾಗ ಮಾತ್ರ ಇದ್ದ ನಿಶ್ಶಬ್ದ ಮುಂದೆ ಅವರಿವರು ಅದೇನೇನೋ ಮಾತಿಗೆ ತೊಡಗಿ ಗದ್ದಲವಾಯಿತೇ ವಿನಾ ಆ ಹುಡುಗನ ಪ್ರಶ್ನೆಗೆ ಯಾರೂ ಉತ್ತರಿಸುವ ಗೋಜಿಗೆ ಹೋಗಲಿಲ್ಲ, 'ದೊಡ್ಡವರ ವಿಚಾರ ನನಗೇಕೆ...' ಎಂದು ಪ್ರಾಂಕಿ ತನ್ನನ್ನು ತಾನೇ ಸಮಾಧಾನ ಮಾಡಿಕೊಳ್ಳುವವನಂತೆ ಕಂಡುಬಂದ.

Tuesday, May 23, 2006

ಗ್ರ್ಯಾನ್‌ವಿಲ್ಲ್ ಪ್ರಸಂಗ

ಒಂದೆರಡು ವಾರಗಳ ಹಿಂದೆ ನಮ್ಮ ಕಂಪನಿಯವರು ನಡೆಸಿಕೊಟ್ಟ ಲೀಡರ್‌ಶಿಪ್ ತರಗತಿಯೊಂದರಲ್ಲಿ ಇದ್ದ ಹದಿನಾಲ್ಕು ಜನರಲ್ಲಿ ನಾನು ಮತ್ತು ರಮೇಶ್ ಮಾತ್ರ ಭಾರತೀಯರು ಎಂದುಕೊಂಡಿದ್ದೆ, ಆದರೆ ನನ್ನ ಲೆಕ್ಕ ತಪ್ಪು ಎಂದು ಗೊತ್ತಾಗಿದ್ದು ಅದರ ಮುಂದಿನವಾರವೇ. ಅದೇ ತರಗತಿಯಲ್ಲಿ ಗ್ರ್ಯಾನ್‌ವಿಲ್ಲ್ (Granville - ಮೊದಲ ಹೆಸರು) ಎಂಬುವವರೂ ಇದ್ದರು, ಸುಮಾರು ನಲವತ್ತೈದರ ಆಸುಪಾಸಿನ ಇವರು ಸೂಟಿನಲ್ಲಿ ಕಂಗೊಳಿಸುತ್ತಿದ್ದರು, ನಾವೆಲ್ಲರೂ ಎಂದಿನಂತೆ ಬ್ಯುಸಿನೆಸ್ ಕ್ಯಾಷುವಲ್‌ನಲ್ಲಿ ಇದ್ದೆವು. ತರಗತಿಯಲ್ಲಿ ಆಶ್ಚರ್ಯಕರವೆನ್ನುವಂತೆ ಗ್ರ್ಯಾನ್‌ವಿಲ್ಲ್ ಎಲ್ಲ ಚರ್ಚೆಗಳಲ್ಲೂ ಪೂರ್ಣವಾಗಿ ತಮ್ಮನ್ನು ತೊಡಗಿಸಿಕೊಂಡು, ಕ್ಲಾಸನ್ನು ಅದೆಷ್ಟೋ ವರ್ಷಗಳಿಂದ ನಡೆಸುತ್ತಿರುವ ಇನ್ಸ್ಟ್ರಕ್ಟರ್‌ಗೂ ಗೊತ್ತಿರದ ಎಷ್ಟೋ ವಿಷಯಗಳಿಗೆ ಉತ್ತರಗಳನ್ನು ಹೇಳುತ್ತಿದ್ದರು, ಅಲ್ಲದೇ ಕ್ಲಾಸಿನಲ್ಲಿ ಬಹಳ ಚಟುವಟಿಕೆಯಿಂದಲೂ ಇದ್ದರು. ಅವರು ನನಗಿಂತ ಸ್ವಲ್ಪ ದೂರದಲ್ಲಿ ಕುಳಿತದ್ದರಿಂದ ಕ್ಲಾಸಿನಲ್ಲಿ ಒಂದೆರಡು ಮಾತುಗಳನ್ನು ಆಡಿಕೊಂಡಿದ್ದು ಬಿಟ್ಟರೆ ಮತ್ತಿನ್ಯಾವ ಚರ್ಚೆಯೂ ನಮ್ಮ ನಡುವೆ ನಡೆದಿರಲಿಲ್ಲ.

ಈ ಕ್ಲಾಸು ಮುಗಿದು ಒಂದು ವಾರದ ನಂತರ ಆಫೀಸಿನಲ್ಲಿ ಇದೇ ಗ್ರ್ಯಾನ್‌ವಿಲ್ಲ್ ದರ್ಶನವಾಯಿತು, ನಾವಿಬ್ಬರೂ 'Hello, Hi...''ಕ್ಲಾಸು ಹಾಗಿತ್ತು, ಹೀಗಿತ್ತು...' ಎಂದು ಉಭಯಕುಶಲೋಪರಿಯಾದ ಮೇಲೆ ನಮ್ಮ ನಮ್ಮ ಪಾಡಿಗೆ ಹೊರಟುಹೋದೆವು, ಗ್ರ್ಯಾನ್‌ವಿಲ್ಲ್ ಈ ದಿನವೂ ಸೂಟು ಧರಿಸಿದ್ದರು, ಆದರೆ ಈ ದಿನ ಬಹಳ ಹತ್ತಿರದಿಂದ ನೋಡಿದ ಮೇಲೆ ಗ್ರ್ಯಾನ್‌ವಿಲ್ಲ್ ಭಾರತೀಯನಿರಬಹುದು ಎಂಬ ಬಲವಾದ ಅನುವಾದ ಮೂಡಿತು, ಅವರನ್ನು ಸರಿಯಾಗಿ ನೋಡಿದಾಗ ನಮ್ಮೂರಿನಲ್ಲಿರುವ ಪುರೋಹಿತರೊಬ್ಬರ ನೆನಪು ಬಂತು - ಎತ್ತರವಾದ ನಿಲುವು, ಗೌರವರ್ಣ, ಸ್ವಲ್ಪ ನೆತ್ತಿ ಕಾಣುತ್ತಿತ್ತೇನೋ ಎನ್ನುವಂತೆ ತೆಳ್ಳಗಾದ ಅದೇ ಸುಮಾರು ಹಣ್ಣಾದ ಬಿಳಿ ಕೂದಲುಗಳು, ಸಾಕಷ್ಟು ಓದಿಕೊಂಡಿದ್ದಂತೆ ಕಂಡುಬಂದ ಆಳವಾದ ಕಣ್ಣುಗಳು, ಹಣೆಯ ಮೇಲೆ ಹರಡಿಕೊಂಡ ಉದ್ದುದ್ದ ಗೆರೆಗಳು ಇವುಗಳೆಲ್ಲವೂ ನನಗೆ ಗ್ರ್ಯಾನ್‌ವಿಲ್ಲ್ ಮೇಲೆ ಒಂದು ರೀತಿಯ ಗೌರವ ಭಾವನೆಯನ್ನು ಮೂಡಿಸಿದವು, ನಾನು ಲಗುಬಗೆಯಲ್ಲಿ ಇದ್ದುದರಿಂದ ಮತ್ತೆ ಹೆಚ್ಚೇನನ್ನೂ ಮಾತನಾಡಲಿಲ್ಲ, ಆದರೆ ಗ್ರ್ಯಾನ್‌ವಿಲ್ಲ್ ಗೆ ಯಾವುದೇ ಅರ್ಜೆಂಟಿಲ್ಲದಿದ್ದರೂ ನಾನೇ ಅವರ ಮಾತುಗಳನ್ನು ಮಧ್ಯದಲ್ಲಿ ತುಂಡು ಮಾಡಿ ಓಡಿಹೋದಂತೆನಿಸಿತು.

ಅದೇ ದಿನ ಸಂಜೆ ಆಶ್ಚರ್ಯವೆನ್ನುವಂತೆ ನಾಲ್ಕೂವರೆಗೆಲ್ಲಾ ಎಲ್ಲೋ ಅರ್ಜೆಂಟಾಗಿ ಹೋಗಬೇಕು ಎಂದು ಓಡಿಹೋಗುತ್ತಿದ್ದ ನನಗೆ ಅಷ್ಟೇ ಗಡಿಬಿಡಿಯಲ್ಲಿ ಮನೆಗೆ ಹೊರಟ ಗ್ರ್ಯಾನ್‌ವಿಲ್ಲ್ ಕಣ್ಣಿಗೆ ಬೀಳಬೇಕೆ - ಅದೂ ಎಲಿವೇಟರ್ ಹತ್ತಿರ? ಸರಿ, ಮತ್ತೆ ಹಾಯ್‌ಗಳ ವಿನಿಮಯವಾಯಿತು, ಎಲಿವೇಟರ್‌ನಲ್ಲಿ ನಾವಿಬ್ಬರೇ ಇದ್ದವರು, ನಾನು ಧೈರ್ಯ ಮಾಡಿ ಕೇಳಿ ಬಿಟ್ಟೆ - 'By any chance are you from India?!' ಈ ಪ್ರಶ್ನೆಗೆ ಗ್ರ್ಯಾನ್‌ವಿಲ್ಲ್ ಹೌದು ಎಂದು ಉತ್ತರಕೊಟ್ಟು, ನನ್ನನ್ನು ಭಾರತೀಯನೇ? ಎಂದದಕ್ಕೆ ಹೌದು ಎಂದಾಗ, ಭಾರತದಲ್ಲಿ ಎಲ್ಲಿ? ಎಂದರು, ನಾನು ಕರ್ನಾಟಕದವನು ಎಂದೆ, ಕರ್ನಾಟಕದಲ್ಲಿ ಎಲ್ಲಿ ಎನ್ನಬೇಕೆ? ನಾನು ಶಿವಮೊಗ್ಗದವನು ಎಂದೆ...ಮುಂದೆ ನಾನು ಅವರನ್ನು ಭಾರತದಲ್ಲಿ ಎಲ್ಲಿ? ಎಂದು ಕೇಳಿದಾಗ ನನಗೆ ಆಶ್ಚರ್ಯವಾಗುವಂತೆ 'ಮಂಗಳೂರಿನವನು' ಎಂದು ಇಂಗ್ಲೀಷಿನಲ್ಲೇ ಉತ್ತರ ಕೊಟ್ಟರು - ನಾನು 'ಹಾಗಾದರೆ ಕನ್ನಡ ಬರುತ್ತೆ ನಿಮಗೆ' ಎಂದೆ, ಅವರು 'ಖಂಡಿತವಾಗಿ...' ಎಂದು ಹೇಳಿ ಮತ್ತೆ ಸಿಗೋಣ ಎಂದು ಹೇಳಿಕೊಂಡು ಇಬ್ಬರೂ ಅರ್ಜೆಂಟಿನಲ್ಲಿದ್ದುದರಿಂದ ನಮ್ಮ ನಮ್ಮ ದಾರಿ ಹಿಡಿದೆವು, ಅಂದಿನಿಂದ ಇಲ್ಲಿಯವರೆಗೂ ಗ್ರ್ಯಾನ್‌ವಿಲ್ಲ್ ಎಲ್ಲೂ ಸಿಕ್ಕಿಲ್ಲ, ಸಿಕ್ಕಿದರೆ ಕನ್ನಡದಲ್ಲೇ ಮಾತನಾಡುವ ಇರಾದೆ ಇದೆ.

***

ನನ್ನ ಸ್ನೇಹಿತರೊಬ್ಬರ ಹತ್ತಿರ ಮಾತನಾಡುತ್ತಾ ಗ್ರ್ಯಾನ್‌ವಿಲ್ಲ್ ಪ್ರಸಂಗವನ್ನು ವಿವರಿಸಿದೆ - ಅವರು ಭಾರತೀಯರು ಅನ್ನೋ ಅನುಮಾನ ಇದ್ದಿತಾದರೂ ಅವರ ಹೆಸರಿನಿಂದ ನನಗೆ ಕನ್ನಡಿಗರು ಎಂದು ಗೊತ್ತಾಗುವ ಸಾಧ್ಯತೆಗಳೇ ಇರಲಿಲ್ಲ. ಅದಕ್ಕೆ ನನ್ನ ಸ್ನೇಹಿತರು ಒಂದು ಕಾಲದಲ್ಲಿ ಮಂಗಳೂರು-ಗೋವಾ ಕಡೆಯಲ್ಲಿನ ಬ್ರಾಹ್ಮಣರು ಕ್ರಿಶ್ಚಿಯನ್ನರಾಗಿ ಪರಿವರ್ತಿತಗೊಂಡಿದ್ದೂ, ಮುಂದೆ ಟಿಪ್ಪೂಸುಲ್ತಾನನ ಕಾಲದಲ್ಲಿ ಸಾವಿರಾರು ಜನರನ್ನು ಮಂಗಳೂರಿನಿಂದ ಶ್ರೀರಂಗ ಪಟ್ಟಣದವರೆಗೆ ನಡೆಸಿ, ಸಾಕಷ್ಟು ಸಂಖ್ಯೆಯಲ್ಲಿ ಸಾವುನೋವಿಗೆ ಕಾರಣವಾಗಿದ್ದೂ ಅಲ್ಲದೆ ಸುಮಾರು ಜನರನ್ನು ಬಲವಂತವಾಗಿ ಮುಸಲ್ಮಾನರನ್ನಾಗಿ ಪರಿವರ್ತಿತರನ್ನಾಗಿ ಮಾಡಿದ್ದೂ, ಹಾಗೆ ಮಾಡಿಯೂ ಎಲ್ಲ ಕಷ್ಟಗಳಿಗೆ ಹೆದರದೆಯೂ ಕೆಚ್ಚೆದೆಯಿಂದ ಮುಂದೆ ಬಿಡುಗಡೆಯಾಗಿ ಮಂಗಳೂರಿಗೆ ಹೋದ ಕ್ರಿಶ್ಚಿಯನ್ನರಿಗೆ ಬಹಳ ಬೆಲೆ ಇದೆ, ಅವರನ್ನು ಆಯಾ ಸಮುದಾಯಗಳಲ್ಲಿ ಬಹಳ ಗೌರವಪೂರ್ವಕವಾಗಿ ನೋಡಿಕೊಳ್ಳುತ್ತಾರೆಂತಲೂ ಕಥೆಗಳನ್ನು ಹೇಳಿದರು - ಅವರು ಹಾಗೆ ಹೇಳಿದ್ದನ್ನು ನಾನು ವಿಶ್ವಾಸಪೂರ್ವಕವಾಗಿ ನಂಬುತ್ತೇನಾದರೂ ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಪ್ರಯತ್ನಿಸಲಿಲ್ಲವಾದ್ದರಿಂದ 'ಕಥೆ' ಎಂದು ಕರೆಯಬೇಕಾಯಿತು.

ಇದೇ ಮಾತುಗಳ ಮಧ್ಯೆ, ಸರಸ್ವತೀ ನದಿ ಮೂಲದ ಒಂದು ಪರಂಪರೆಯ ಬಗ್ಗೆ ಮಾತು ಬಂದಿತು - ಎಷ್ಟೋ ಜನರು ಸರಸ್ವತಿ ನದಿಯು ಬತ್ತಿ ಹೋಗಿಲ್ಲ ಅಥವಾ ಅದೃಶ್ಯವಾಗಿಲ್ಲ ಎಂದು ನಂಬಿಕೊಂಡಿದ್ದಾರಂತೆ, ಅಂದರೆ ಭಗೀರಥನ ಪ್ರಯತ್ನದಲ್ಲಿ ಸ್ವೇಚ್ಛಳಾಗಿ ಹರಿಯುತ್ತಿದ್ದ ಸರಸ್ವತಿಯ ಪಾತ್ರವನ್ನು ಬದಲಿಸಿ ಗಂಗೆಯನ್ನಾಗಿ ಪರಿವರ್ತಿಸಲಾಯಿತು - ಗಂಗೆ ನಿಜವಾಗಿಯೂ ಮೂಲ ನದಿಯಲ್ಲ ಎನ್ನುವ ಮಾತೂ ಕೇಳಿಬಂತು. ಅದೆಷ್ಟೋ ಸಾವಿರ ವರ್ಷಗಳ ಹಿಂದೆ ಗಂಗಾವತರಣ ಮಾಡಿದ ಭಗೀರಥನ ಪ್ರಯತ್ನ ನದಿಯ ಪಾತ್ರವನ್ನು ಬದಲಿಸಿ ನೀರು ಕೊಂಡೊಯ್ದು ತನ್ನ ಪೂರ್ವಿಕರಿಗೆ ಮೋಕ್ಷ ಕೊಡಿಸುವ ಒಂದು ಯೋಜನೆಯಾಗಿ ಕಂಡುಬಂದಿತು. ಹಾಗೇ ಮಾತುಗಳು ಋಗ್ವೇದದ ಕಡೆಗೆ ಹೊರಳಿದಾಗ ನಮ್ಮ ಈಗಿನ ಗೋವಾ-ಮಂಗಳೂರು ಪ್ರಾಂತ್ಯದ ಎಷ್ಟೋ ಜನ ಕ್ರಿಶ್ಚಿಯನ್ನರು ವೇದಗಳ ಬಗ್ಗೆ ಬ್ರಾಹ್ಮಣರಿಗಿಂತ ಹೆಚ್ಚು ತಿಳಿದುಕೊಂಡಿರುವ ಪ್ರಸ್ತಾವವೂ ಬಂತು - ಆಗಿನ ಕಾಲದಲ್ಲಿ ಸಮಾಜದಲ್ಲಿ ಹೆಚ್ಚಿನ ಸ್ಥಾನಮಾನದಲ್ಲಿದ್ದ ಬ್ರಾಹ್ಮಣರನ್ನು ಮತಾಂತರಗೊಳಿಸಲು ಮುಸ್ಲಿಮ್ ಹಾಗೂ ಕ್ರಿಶ್ಚಿಯನ್ನರಲ್ಲಿ ಮಹಾ ಪೈಪೋಟಿ ಇದ್ದಿರಬಹುದು, ಏಕೆಂದರೆ ಬ್ರಾಹ್ಮಣರನ್ನು ಒಲಿಸಿಕೊಂಡರೆ ಉಳಿದ ವರ್ಗದವರನ್ನು ಒಲಿಸಿಕೊಳ್ಳುವುದು ಸುಲಭ ಎಂಬುದು ಅಂದಿನ ಆಲೋಚನೆ ಇದ್ದಿರಬಹುದು.

ಈ ಎರಡು ವಾರಗಳಲ್ಲಿ ವೇದಗಳ ಕುರಿತು ಯೋಚನೆ ಮಾಡುವಂತಹ ಹಲವಾರು ಅವಕಾಶಗಳು ಕಾಕತಾಳೀಯವೆಂಬಂತೆ 'ಗ್ರ್ಯಾನ್‌ವಿಲ್ಲ್' ಪ್ರಸಂಗದ ಜೊತೆಗೆ ಥಳುಕು ಹಾಕಿಕೊಂಡಿದ್ದರಿಂದ ಈ ಬರಹವನ್ನು ಬರೆಯಬೇಕಾಗಿ ಬಂತೇ ವಿನಾ ಮತ್ಯಾವುದೇ ulterior motivation ನನಲ್ಲಿಲ್ಲ.

***

ನಾನು ಗ್ರ್ಯಾನ್‌ವಿಲ್ಲ್ ಜೊತೆಯಲ್ಲಿ ಮತ್ತಿನ್ನೆಲ್ಲಾದರೂ ಬಿಡುವಿನಲ್ಲಿ ಸಿಕ್ಕರೆ ಮಾತನಾಡುತ್ತೇನೆ, ಅವರ ಬಗ್ಗೆ ಗೆರೆಯನ್ನು ದಾಟದೇ ಎಷ್ಟು ತಿಳಿದುಕೊಳ್ಳಬೇಕೋ ಅಷ್ಟನ್ನು ತಿಳಿದುಕೊಳ್ಳುತ್ತೇನೆ, ಅವರು ಮಾತಿಗೆ ತೊಡಗುತ್ತಾರೆಂದರೆ ಮಾತಿಗೆ ಇಳಿಯಲು ನನಗೇನು ಹೆದರಿಕೆ? ಗ್ರ್ಯಾನ್‌ವಿಲ್ ಹೆಸರೋ, ಅವರು ಹಾಕಿಕೊಂಡ ಬಟ್ಟೆಯೋ, ಮಾತನಾಡುವ ವಿಧಿಯೋ, ಅಥವಾ ಮತ್ತಿನ್ಯಾವುದೋ ನನಗೆ ಅವರನ್ನು ಭಾರತೀಯರು ಎಂದು ನೋಡಿದ ಕೂಡಲೇ ಕಂಡು ಹಿಡಿಯದಂತೆ ಮಾಡಿದ್ದು ಸತ್ಯ, ಆದರೆ ಅದರ ಹಿಂದೆಯೇ ನಾನೂ ಕೂಡ ಅವರಂತೆಯೇ ಎಲ್ಲಿ ಬದಲಾಗಿಬಿಟ್ಟಿದ್ದೇನೋ ಎಂದು ಭಯವಾಗುತ್ತದೆ, ಇಲ್ಲವೆಂದಾದರೆ Are you from India? ಎಂದು ನನ್ನನ್ನೇಕೆ ಅವರು ಕೇಳುತ್ತಿದ್ದರು?

Monday, May 22, 2006

ನ್ಯೂ ಯಾರ್ಕ್ ನಗರದ ಕೆಲವು ನೆನಪುಗಳು





ಇತ್ತೀಚೆಗೆ ನ್ಯೂ ಯಾರ್ಕ್ ನಗರದಿಂದ ಹೊರವಲಯಕ್ಕೆ ನಮ್ಮ ಅಫೀಸು ಸ್ಥಳಾಂತರವಾಯಿತು. ೨೦೦೩ ರಿಂದ ೨೦೦೬ ರ ಏಪ್ರಿಲ್‌ವರೆಗೆ ನ್ಯೂ ಯಾರ್ಕ್ ನಗರದಲ್ಲಿ ಕೆಲಸ ಮಾಡಿ ಛಳಿ, ಮಳೆ, ಹಿಮ, ಹಾಗೂ ಬಿಸಿಲಿನಲ್ಲಿ ಈ ಮಹಾನಗರಿ ಹಲವು ರೀತಿಯಲ್ಲಿ ಕಂಡಿದೆ, ಹಾಗೆ ಕಂಡು ಬಂದ ಕೆಲವು ಅಂಶಗಳನ್ನು ಇಲ್ಲಿ ಪಟ್ಟಿ ಮಾಡಿದರೆ ಹೇಗೆ ಎನಿಸಿತು.

***

ನಾನು ಇಲ್ಲಿಗೆ ಬರುವ ಮುನ್ನ ಬಾಂಬೆಯಲ್ಲಿ ಮೂರ್ನಾಲ್ಕು ತಿಂಗಳು ಇದ್ದವನು, ಅಲ್ಲಿಯ ಜನಸಂದಣಿ, ವ್ಯಸ್ತ ಜೀವನ, ಆಧುನಿಕತೆ ಇವುಗಳಿಗೆಲ್ಲ ಆಗಲೇ ಪರಿಚಯವಾಗಿ 'ಓಹ್' ಎನ್ನುವಂತಾಗಿತ್ತು. ಆದರೂ ಬಾಂಬೆ ಮಹಾನಗರಿಯಷ್ಟು ನಿಗೂಢವಾಗಿ ನನಗೆ ನ್ಯೂ ಯಾರ್ಕ್ ಎಂದಿಗೂ ಕಂಡದ್ದಿಲ್ಲ. ಅಲ್ಲಿಯ ಚರ್ಚ್ ಗೇಟ್, ಬೀಚು ಏರಿಯಾಗಳಲ್ಲಿ ತಿರುಗಾಡಿ ಸ್ನೇಹಿತರೊಡನೆ ಹರಟೆ ಹೊಡೆದಿದ್ದಿದೆ, ಚಿತ್ತಾಲರು ಇದನ್ನೇ ನೋಡಿ ಬರೆದಿದ್ದೇನೋ ಎಂದು ಹಲವು ಪ್ರತಿಮೆಗಳನ್ನು ಊಹಿಸಿಕೊಂಡಿದ್ದಿದೆ, ಆಗಿನ ನೂರು-ನೂರೈವತ್ತು ರೂಪಾಯಿ ಕೊಟ್ಟು ಒಂದು ಸಿನಿಮಾ ನೋಡುವ ಗತ್ತೂ, ಇಪ್ಪತ್ತೈದು ರೂಪಾಯಿ ಕೊಟ್ಟು ಒಂದು ಪ್ಲೇಟು ಇಡ್ಲಿ ತಿನ್ನುವ ಗಮ್ಮತ್ತೂ ಈ ನ್ಯೂ ಯಾರ್ಕ್ ನಗರದಲ್ಲಿ ನನಗೆಂದೂ ಬಂದಿದ್ದಿಲ್ಲ. ಆದರೆ, ನ್ಯೂ ಯಾರ್ಕ್ ನಗರ ತನ್ನದೇ ಆದ ವಿಶೇಷ ರೀತಿಯಲ್ಲಿ ನಾನು ಇನ್ನೆಂದೂ ಮರೆಯಲಾರದಂತೆ ನನ್ನ ಮನಸ್ಸಿನಲ್ಲಿ ಛಾಪು ಒತ್ತಿ ಬಿಟ್ಟಿದೆ - ಹೇಳಿಕೊಳ್ಳುವಂತಹ ಯಾವ ಒಳ್ಳೆಯ ಹಾಗೂ ಕೆಟ್ಟ ಅನುಭವಗಳು ಇಲ್ಲದಿದ್ದರೂ, ನನ್ನ ಇಂದಿನ ಪ್ರಬುದ್ಧತೆಯಲ್ಲಿ ಈ ಮಹಾನಗರಿಯಿಂದ ಕಲಿತದ್ದು ಬಹಳ.



ನನ್ನ ಸ್ನೇಹಿತ ಗಾರ್‌ಫೀಲ್ಡ್ ನ್ಯೂ ಯಾರ್ಕ್ ನಗರವನ್ನು ಹಗಲೂ ಮತ್ತು ರಾತ್ರೆಯೂ ಕಂಡವನು, ಅವನು ಹೇಳೋ ಪ್ರಕಾರ 'ಮಧ್ಯ ರಾತ್ರಿಯಿಂದ ಮುಂಜಾನೆ ವರೆಗೆ ಈ ನಗರ ಹಲವಾರು ಟ್ರಾನ್ಸ್‌ಫರ್ಮೇಷನ್ ಗೊಳಪಡುತ್ತೆ' ಎನ್ನುವುದನ್ನು ಹಲವಾರು ಸ್ವಾರಸ್ಯಕರವಾದ ನಿದರ್ಶನಗಳ ಮೂಲಕ ನನ್ನಲ್ಲಿ ಹಂಚಿಕೊಂಡಿದ್ದಾನೆ, ಆತನಿಗೆ ನಮ್ಮ ಕಂಪನಿಯಲ್ಲಿ ಕೆಲವು ವರ್ಷಗಳ ಹಿಂದೆ ರಾತ್ರಿ ಪಾಳಿಯಲ್ಲಿ ಕೆಲಸ ಮಾಡಬೇಕಾಗಿ ಬಂದಿದ್ದರಿಂದ ಅವನು 'ರಾತ್ರಿ ಬೇರೆ ಮುಖವನ್ನು ಹೊತ್ತುಕೊಳ್ಳುವ' ನಾನು ಕಾಣದ ನ್ಯೂ ಯಾರ್ಕ್ ನಗರವನ್ನು ಕಂಡಿದ್ದಾನೆ. ಅವನ ಜೊತೆಯಲ್ಲಿ ಕಾರಿನಲ್ಲಿ ಕುಳಿತು ಎಷ್ಟೋ ಬಾರಿ ಆಫೀಸಿಗೆ ಹೋಗಿ ಬಂದ ಸಂದರ್ಭಗಳಲ್ಲಿ 'ನಿನಗೆ ಗೊತ್ತೇ, ನಾವು ಈ ದೊಡ್ಡ ನಗರದಲ್ಲಿ ಸಣ್ಣ ಧೂಳಿನ ಕಣಕ್ಕಿಂತಲೂ ಚಿಕ್ಕವರು!' ಎಂದು ಈ ನಗರದಲ್ಲಿ ಬೆಳೆದು ಶಾಲೆಗೆ ಹೋಗಿ ಮುಂದೆ ಇಲ್ಲೇ ಕೆಲಸಕ್ಕೆ ಸೇರಿಕೊಂಡರೂ ಈಗಷ್ಟೇ ನ್ಯೂ ಯಾರ್ಕಿಗೆ ಬಂದವನೇನೋ ಎಂಬಂತೆ - ಮೋಡವಿರದ ರಾತ್ರಿಯಲ್ಲಿ ಮೇಲೆ ಕಾಣುವ ನಕ್ಷತ್ರಗಳನ್ನು ಅಣಗಿಸುವಂತೆ ಅಲ್ಲಲ್ಲಿ ಕಾಣುವ ಪ್ರಜ್ವಲಿಸುವ ನಿಯಾನ್ ದೀಪಗಳನ್ನೂ, ಹುಚ್ಚಿಯಂತೆ ಸದಾ ತಲೆಯನ್ನು ಕೆದರಿಕೊಂಡೇ ಇರುವ ಟೈಮ್ಸ್ ಸ್ಕ್ವಯರನ್ನೂ ಕಂಡು ಸಂತಸಪಡುತ್ತಾನೆ.


ನ್ಯೂ ಯಾರ್ಕ್ ನಗರದಲ್ಲಿ ಈಗಿರುವ ಬಿಲ್ಡಿಂಗುಗಳಲ್ಲಿ ಅತಿ ಎತ್ತರವಾದದ್ದು ಎಂಪೈರ್ ಸ್ಟೇಟ್ ಬಿಲ್ಡಿಂಗ್, ನಮ್ಮ ಆಫೀಸಿನಲ್ಲಿ ಮೂವತ್ತ ಮೂರನೇ ಫ್ಲೋರಿನಲ್ಲಿರುವ ಕ್ಯಾಫೆಟೇರಿಯಾದಿಂದ ಈ ಕಟ್ಟಡದ ಅತ್ಯಂತ ಸುಂದರವಾದ ಚಿತ್ರ ಸಿಗುತ್ತದೆ, ನಾನು ಪ್ರತೀ ಸಾರಿ ಟ್ರೈನ್ ನಿಲ್ದಾಣದಿಂದ ಹೊರಕ್ಕೆ ಬಂದವನೇ ಈ ಕಟ್ಟಡವನ್ನು ತಲೆ ಎತ್ತಿ ನೋಡುತ್ತೇನೆ, ಅದು ತನ್ನದೇ ಆದ ಗಂಭೀರತೆಯಲ್ಲಿ ತನ್ನ ಮೈ ಮೇಲೆ ಬಿದ್ದ ಸೂರ್ಯನ ಕಿರಣಗಳನ್ನು ಪ್ರತಿಫಲಿಸುವುದರ ಮೂಲಕ ಇಂದಿನ ಹವಾಮಾನ ಮುನ್ಸೂಚನೆಯನ್ನು ಸೂಕ್ಷ್ಮವಾಗಿ ನೀಡಿದರೂ ಅವರವರ ಭಾವಕ್ಕೆ ತಕ್ಕಂತೆ ಒಂದಲ್ಲ ಒಂದು ರೀತಿಯ ಅರ್ಥಗಳಿಗೆ - ಕೆಲವೊಮ್ಮೆ ಸರಳವಾಗಿಯೂ ಹಾಗೂ ಅಷ್ಟೇ ನಿಗೂಢವಾಗಿಯೂ ತನ್ನನ್ನು ತಾನು ತೋರಿಸಿಕೊಳ್ಳುತ್ತದೆ. ಹೆರಾಲ್ಡ್ ಸ್ಕ್ವಯರ್‌ನ ಸುತ್ತಮುತ್ತಲೂ ಎಷ್ಟು ಹೊತ್ತಿಗೆ ಹೋದರೂ ಒಬ್ಬರಲ್ಲ ಒಬ್ಬರು ಈ ಕಟ್ಟಡದ ಫೋಟೋ ತೆಗೆಯುತ್ತಿರುತ್ತಾರೆ, ಇಂಥಹ ಕಟ್ಟಡದ ದಿವ್ಯ ನಿಲುವು ನೋಡುಗರ ಕಣ್ಣುಗಳಲ್ಲಿ ಪ್ರತಿಫಲಿಸಿ, ಅವರ ಅರಳುವ ಮುಖಗಳನ್ನು ಕಾಣುವ ನನ್ನ ಭಾಗ್ಯ ಇನ್ನಿಲ್ಲವಲ್ಲಾ ಎಂದು ಎಷ್ಟೋ ಸಾರಿ ಬೇಸರವಾಗಿದೆ. ಒಂದೆರಡು ತಿಂಗಳುಗಳ ಹಿಂದೆ ಕ್ಯಾಫೆಟೇರಿಯಾವನ್ನು ಇನ್ನೇನು ಮುಚ್ಚಿ ಬಿಡುತ್ತಾರೆ ಎಂದು ನಾವೆಲ್ಲರೂ ಕಾಫಿ ಕುಡಿಯುತ್ತಾ ಕುಳಿತಿದ್ದೆವು, ಎಲ್ಲರೂ ಅವರವರಿಗೆ ಬೇಕಾದ ದಿಕ್ಕಿನಲ್ಲಿ ಕುಳಿತು ಹೊರಗಡೆ ನೋಡುತ್ತಾ ಮಾತಿಗೆ ಶುರುಮಾಡಿಕೊಂಡಿದ್ದೆವು, ನಾನು ಎಂಪೈರ್ ಸ್ಟೇಟ್ ಬಿಲ್ಡಿಂಗಿನ ಕಡೆಗೆ ನೋಡಿದೆ, ನಾನಿದ್ದ ಮೂವತ್ತ ಮೂರನೇ ಮಹಡಿಯಿಂದ ಈ ಕಟ್ಟಡವನ್ನು ನನ್ನ ಕಣ್ಣಿನ ನೇರದಲ್ಲಿ ನೋಡಿದಾಗ ನಾನು ಆ ಕಟ್ಟಡದ ಕಾಲು ಭಾಗಕ್ಕೂ ಬರುತ್ತಿರಲಿಲ್ಲ, ದಿನವೂ ರಸ್ತೆಯಲ್ಲಿ ಕಾಣುತ್ತಿದ್ದ ಆ ನೋಟಕ್ಕೂ, ಮೂವತ್ತ ಮೂರನೇ ಮಹಡಿಯ ಈ ನೋಟಕ್ಕೂ ಬಹಳ ವ್ಯತ್ಯಾಸವಿತ್ತು, ನನ್ನ ಜೊತೆಯವರಿಗೆಲ್ಲ ತೋರಿಸಿದೆ, ಅವರೆಲ್ಲರೂ ಹೌದುಹೌದೆಂದರು. ಅಲ್ಲದೇ ಐದು ಅಥವಾ ಆರನೇ ಅವೆನ್ಯೂಗಳ ಆಜೂಬಾಜಿನಲ್ಲಿ ನಿಂತು ನೋಡಿದರೆ ಈ ಕಟ್ಟಡ ಅತಿ ಎತ್ತರವಾದದ್ದು ಎಂದು ಅನ್ನಿಸುವುದೇ ಇಲ್ಲ - ಅಂದರೆ ನಮ್ಮ ನಡುವಿನಲ್ಲಿದ್ದ ಎತ್ತರವಾದದ್ದನ್ನು ನಾವು ಕಂಡು ಅನುಭವಿಸುವಾಗ ಒಂದೇ ಅದರಿಂದ ಕೊಂಚ ದೂರವಿದ್ದೋ, ಇಲ್ಲಾ ಎಷ್ಟು ಸಾಧ್ಯವೋ ಅಷ್ಟು ಎತ್ತರಕ್ಕೆ ಏರಿಯೋ ನೋಡಿದರೆ ಅಷ್ಟು ಒಳ್ಳೆಯದು ಎಂದುಕೊಂಡೆ.

***



ನಮ್ಮ ಊರಿನಲ್ಲಿ ದೇವಸ್ಥಾನಕ್ಕೆ ಹೂವು ಕೊಟ್ಟು ಬರುತ್ತಿರುವಾಗಲೋ, ಬಾವಿಗೆ ಹೋಗಿ ನೀರು ತರುತ್ತಿರುವಾಗಲೋ ಹಾಡುಗಳನ್ನು ಗುನುಗಿಕೊಂಡೇ ಓಡಾಡುತ್ತಿದ್ದವನು ನಾನು. ಪ್ರತೀ ದಿನ ನ್ಯೂ ಯಾರ್ಕ್ ನಗರದಲ್ಲಿ ಆಫೀಸಿನಿಂದ ಮನೆಗೆ ಬರುವಾಗ ಹತ್ತು ನಿಮಿಷದ ಹಾದಿ ನಡೆಯುವುದಕ್ಕಿತ್ತು - ಆರನೇ ಅವೆನ್ಯೂವಿನಲ್ಲಿ ಬ್ರಯಾಂಟ್ ಪಾರ್ಕಿನ ಮುಂದೆ ೪೨ನೇ ರಸ್ತೆಯಿಂದ ಶುರುಮಾಡಿ ೩೩ರವರೆಗೆ ನಡೆಯುವ ಈ ಹಾದಿಯಲ್ಲಿ, ನನ್ನ ಸುತ್ತ ಮುತ್ತಲೂ ಸಮರೋಪಾದಿಯಲ್ಲಿ ಜನರು ನಡೆಯುತ್ತಿದ್ದರೂ, ಅಲ್ಲಲ್ಲಿ ಟ್ರಾಫಿಕ್ ಸಿಗ್ನಲ್‌ಗಳಿಗೆ ಕಾಯುತ್ತಾ ನಡೆಯುವವರ ಮಧ್ಯೆ ನಿಂತಿರುತ್ತಿದ್ದರೂ ಮನದಲ್ಲಿ ಸದಾ ಯಾವುದಾದರೊಂದು ಹಾಡು ಗುನುಗುತ್ತಿದ್ದೆ, ಮೂಡಿಗೆ ತಕ್ಕಂತೆ, ವಾತಾವರಣಕ್ಕೆ ತಕ್ಕಂತೆ, ಆಫೀಸು ಬಿಡುವುದಕ್ಕಿಂತ ಮುಂಚೆ ಓದಿದ ವಿಷಯಗಳು ನನ್ನ ಮೇಲೆ ಮಾಡಿದ ಪರಿಣಾಮಕ್ಕೆ ತಕ್ಕಂತೆ ಯಾವುದಾದರೊಂದು ಸಿನಿಮಾ ಹಾಡೋ, ಭಾವಗೀತೆಯೋ, ಕೆಲವು ಜನಪದಗೀತೆಗಳೋ ಮನದಲ್ಲಿ ಬಂದು, ೧೦ ಬ್ಲಾಕುಗಳನ್ನು ದಾಟುವವರೆಗೆ ಮನದಲ್ಲಿ ಮೂಡಿ ಮರೆಯಾಗುತ್ತಿದ್ದವು. ಅಪರೂಪಕ್ಕೊಮ್ಮೆ ಯಾವ ಭಾಷೆಯಲ್ಲಿನ ಹಾಡೂ ಬರದೆ ಬರೀ ಆಲಾಪನೆ ಬಂದದ್ದಿದೆ, ಕೆಲವೊಮ್ಮೆ ಯಾವ ಸದ್ದೂ ಬರದೆ 'ನಾಳೆಯ ಚಿಂತೆ' ಮುತ್ತಿಕೊಂಡಿದ್ದಿದೆ. ನಾನು ಹಾಡು ಗುನುಗಿಕೊಂಡು ಹತ್ತು ಬ್ಲಾಕುಗಳನ್ನು ಕ್ರಮಿಸುವ ದೂರದಷ್ಟು ಸಮಯ, ಸುಮಾರು ೮ ರಿಂದ ೧೦ ನಿಮಿಷಗಳ ಕಾಲ ನನ್ನದೊಂದು ಪ್ರಪಂಚವೇ ತೆರೆದುಕೊಳ್ಳುತ್ತಿತ್ತು, ಹೀಗೆ ಎಲ್ಲೇ ಹೋದರೂ ಎಲ್ಲೇ ಬಂದರೂ ನನ್ನದೊಂದು ಪ್ರಪಂಚದಲ್ಲಿ ಮುಳುಗಿಕೊಳ್ಳಲು ಹಾಡುಗಳು ನನಗೆ ನೆರವಾಗಿವೆ, ಈಗಂತೂ ಆಫೀಸಿನಿಂದ ಮನೆಗೆ ಡ್ರೈವ್ ಮಾಡುತ್ತೇನಾದ್ದರಿಂದ ಮಧ್ಯೆ-ಮಧ್ಯೆ ಟ್ರಾಫಿಕ್ಕಿನಿಂದ ತಲೆ ಚಿಟ್ಟುಹಿಡಿದರೂ ನನ್ನ ಪ್ರಪಂಚ ಸ್ವಲ್ಪ ವಿಸ್ತಾರಗೊಂಡಿದೆ - ಆದರೂ ನ್ಯೂ ಯಾರ್ಕ್ ನಗರದಲ್ಲಿ ಹಾಡನ್ನು ಗುನುಗಿಕೊಂಡು ಓಡಾಡುತ್ತಿದ್ದ ದಿನಗಳು ಇನ್ನಿಲ್ಲವಲ್ಲ ಎಂದೂ ಬೇಸರವಾಗುತ್ತದೆ. ಆದರೆ ಒಂದು ಆಶ್ಚರ್ಯವೆಂದರೆ ಹೀಗೆ ನಡೆಯುವಾಗ ಗುನುಗಿಕೊಳ್ಳುತ್ತಿದ್ದ ಹಾಡುಗಳು ನಾನು ಟ್ರೈನನ್ನು ಹತ್ತಿ ಮನೆಗೆ ಬಂದ ಮೇಲೆ ಅಷ್ಟು ಸುಲಭವಾಗಿ ನೆನಪಿಗೆ ಬರುವುದಿಲ್ಲ, ಬಂದರೂ ಅವು ಬಂದಷ್ಟು ವೇಗದಲ್ಲೇ ಹಾರಿ ಹೋಗಿ ಬಿಡುತ್ತವೆ!

***

ವರ್ಲ್ಡ್ ಟ್ರೇಡ್ ಸೆಂಟರ್ ಇದ್ದ ಜಾಗಕ್ಕೆ ಆಗಾಗ್ಗೆ ನಮ್ಮ ಮನೆಗೆ ಬಂದ ಅತಿಥಿಗಳನ್ನು ಕರೆದುಕೊಂಡು ಹೋಗುತ್ತಿರುತ್ತೇನೆ, ನಾನು ಮೊಟ್ಟ ಮೊದಲ ಸಲ ಬರಿದಾದ ಸ್ಥಳವನ್ನು ನೋಡಿದಾಗ ಒಂದು ರೀತಿಯ ಡಿಪ್ಪ್ರೆಷನ್ನಿಗೆ ಒಳಗಾಗಿದ್ದೆ, ಅಂದಿನಿಂದ ಯಾರೇ ಬಂದರೂ 'ನೀವೆ ಹೋಗಿ ನೋಡಿಕೊಂಡು ಬನ್ನಿ' ಎಂದು ನಾನು ದೂರವೇ ಉಳಿಯುತ್ತೇನೆ. ಹೋದವಾರ ಈ ಸ್ಥಳಕ್ಕೆ ಅಂಟಿಕೊಂಡೇ ಇರುವ ವೆಷ್ಟ್ ಸ್ಟ್ರೀಟ್‌ನಲ್ಲಿರುವ ನಮ್ಮ ಕಂಪನಿಯ ಮತ್ತೊಂದು ಆಫೀಸಿಗೆ ಹೋಗುವ ಅವಕಾಶ ಬಂದಿತ್ತು, ಆಗ ಬೇರೆ ಯಾವುದೇ ಮಾರ್ಗವಿರದೇ ಈಗ ಕಾಣುವ ದೊಡ್ಡ ಗುಂಡಿಯ ಹತ್ತಿರವೇ ಹೋಗಿ ಅದನ್ನು ಹತ್ತಿರದಿಂದ ನೋಡುವ ಅವಕಾಶ ಸಿಕ್ಕಿತ್ತು, ನಾನು ಹತ್ತೊಂಬತ್ತನೇ ಮಹಡಿಯಿಂದ ಈ ಅವಶೇಷ, ಅಲ್ಲಿ ಮತ್ತೊಂದು ಹೊಸ ಕಟ್ಟಡವನ್ನು ಕಟ್ಟುತ್ತಿರುವುದನೆಲ್ಲಾ ನೋಡಿ, ನ್ಯೂ ಯಾರ್ಕಿನಲ್ಲಿ ದಶಕಗಳಿಂದ ಕೆಲಸ ಮಾಡುತ್ತಿದ್ದ ನನ್ನ ಸಹೋದ್ಯೋಗಿಯೊಬ್ಬನಿಗೆ 'ಇದನ್ನೆಲ್ಲ ನೋಡಿ ಏನನ್ನಿಸುತ್ತೆ' ಎಂದೆ, ಅವನು ನನ್ನ ಮಾತನ್ನು ಹೇಗೆ ಅರ್ಥ ಮಾಡಿಕೊಂಡನೋ ಏನೋ, 'ಎಲ್ಲರನ್ನೂ ಮೆಚ್ಚಿಸುತ್ತೇನೆ ಎನ್ನುವ ಪಟಾಕಿಯಲ್ಲಿ (George Pataki) ನನಗೆ ಯಾವತ್ತೂ ವಿಶ್ವಾಸವಿರಲಿಲ್ಲ, ೯/೧೧ ಆಗಿ ಐದು ವರ್ಷಗಳು ಕಳೆಯುತ್ತಾ ಬಂದಿದ್ದರೂ ಇಲ್ಲಿ ಇನ್ನೂ ಹೀಗೆ ಗುಂಡಿ ಇರುವುದು ನಮ್ಮ ದೌರ್ಭಾಗ್ಯ' ಎಂದ. ನಾನು ಅಲ್ಲಲ್ಲಿ ಓದಿ-ಕೇಳಿದಂತೆ ಈ ವರ್ಲ್ಡ್ ಟ್ರೇಡ್ ಸೆಂಟರ್ ಕಟ್ಟಡ ಕಟ್ಟುವ ಪ್ರಕ್ರಿಯೆ, ಅದರ ಜೊತೆಯಲ್ಲೆ ಮೆಮೋರಿಯಲನ್ನು ಕಟ್ಟುವ ಚರ್ಚೆಗಳು ಬಹಳ ದಿನಗಳಿಂದ ಪ್ರಚಲಿತದಲ್ಲಿದ್ದು, ಯಾರಿಗೂ ತೃಪ್ತಿಯಾದಂತೆ ಕಂಡು ಬಂದಿಲ್ಲ, ಆದರೆ ಒಂದಂತೂ ಸತ್ಯ, ನ್ಯೂ ಯಾರ್ಕಿನಲ್ಲಿ ಯಾವುದಾದರೊಂದು ಇಂಥ ಪಬ್ಲಿಕ್ ಪ್ರಾಜೆಕ್ಟ್ ಮಾಡಿ ಗೆಲ್ಲುವುದಿದೆ ನೋಡಿ ಅದಕ್ಕಿಂತ ಮಹತ್ವದ ಗೆಲುವು ಮತ್ತೊಂದಿಲ್ಲ, ಏಕೆಂದರೆ ನ್ಯೂ ಯಾರ್ಕಿನವರನ್ನು ತೃಪ್ತಿ ಪಡಿಸಿದಿರೆಂದರೆ ಪ್ರಪಂಚದ ಯಾರನ್ನು ಬೇಕಾದರೂ ಸಂತೈಸಬಹುದಾದ ಶಕ್ತಿ ನಿಮ್ಮಲ್ಲಿ ತನ್ನಿಂದ ತಾನೇ ಬಂದು ಬಿಡುತ್ತದೆ.

***

ಈ ನಗರದ ಜೀವನ ಯಾಂತ್ರಿಕವಾದದ್ದು ಎಂದು ಕೆಲವರು ಹೇಳಿದ್ದನ್ನು ನಾನು ಕೇಳಿದ್ದೇನೆ, ಎಲ್ಲಿ ಹೋದರೂ ಸುತ್ತಲೂ ಜನಗಳಿರುವ ನ್ಯೂ ಯಾರ್ಕ್ ನಗರ ನಾನು ಕಳೆದುಕೊಂಡ 'ಗಿಜಿಗಿಜಿ' ಪ್ರಪಂಚವನ್ನು ಆಗಾಗ್ಗೆ ನೆನಪಿಗೆ ತರುವುದೂ ಅಲ್ಲದೆ, ಇಲ್ಲಿಯ ವೈವಿಧ್ಯತೆ ನನ್ನನ್ನು 'ಅಮೇರಿಕದಲ್ಲಿ ಇಲ್ಲದಂತೆ' ಮಾಡುವಲ್ಲಿ ಸಫಲವಾಗಿದೆ.

Sunday, May 21, 2006

'ಅಲ್ಲಿ-ಇಲ್ಲಿ'ನ ಪಕ್ಷಿನೋಟ

ನನ್ನನ್ನು 'ಪಾಪಿಷ್ಟ' ಎಂದು ಕರೆದುಕೊಂಡು 'ಅನಿವಾಸಿ ಭಾರತೀಯ ಎಂಬುದಕ್ಕೆ ಸಮನಾರ್ಥಕ ಪದ' ಎಂದು ವಿವರಣೆಯನ್ನು ಪ್ರೊಫೈಲಿನಲ್ಲಿ ಕೊಟ್ಟುಕೊಂಡಿರುವುದು ನನ್ನ ಅನಿವಾಸಿತನಕ್ಕೆ ಅಪಮಾನಮಾಡುವುದಕ್ಕಂತೂ ಅಲ್ಲ. ಈ ಅನಿವಾಸಿ ಸ್ಥಿತಿಯ ಜೊತೆಯಲ್ಲಿ ಬರುವ ನೋವು-ನಲಿವುಗಳನ್ನು ಅವಲೋಕಿಸುವುದಕ್ಕಿಂತ ಮೊದಲು ಒಂದೆರಡು ಹೇಳಿಕೆಗಳನ್ನು ಘಂಟಾಘೋಷವಾಗಿ ದಾಖಲಿಸುವುದು, ಸದಾ 'ಅತ್ತಿಂದಿತ್ತ' ತೂಗುವ ನನ್ನ ಮನಸ್ಸಿಗೆ ಸಮಾಧಾನವನ್ನು ತರಬಹುದು ಎಂಬ ಆಶಯದಿಂದ. ನಾನು ಭಾರತೀಯನೂ, ಭಾವನಾಜೀವಿಯೂ ಹಾಗೂ ಭಾರವಾದ ಮನಸ್ಸುಳ್ಳವನೂ (ಹಲವಾರು ಸರಕುಗಳನ್ನು ತುಂಬಿಕೊಂಡು) ಆದ್ದರಿಂದ ಭಾರತದಲ್ಲಿ ನನ್ನ ವ್ಯಕ್ತಿತ್ವದ ಬುನಾದಿಯನ್ನು ಹಾಕಿದ ಇಪ್ಪತ್ತೈದು ವರ್ಷಗಳು, ನಾನು ಬೆಳೆದ ಪರಿಸರ, ಊರು-ಕೇರಿ-ಶಾಲೆ-ಪಡಸಾಲೆಗಳು ಸುಮ್ಮನೇ ಕೊಡವಿಕೊಂಡು ಬಿಡುವಷ್ಟು ಹಗುರವೂ ಅಲ್ಲ - ಇವುಗಳನ್ನು ನನ್ನಿಂದ ಬೇರ್ಪಡಿಸಿದರೆ ನನ್ನ ಅಸ್ತಿತ್ವದಲ್ಲಿ ಹೆಚ್ಚೇನೂ ಉಳಿಯುವುದಿಲ್ಲವಾದ್ದರಿಂದ ಒಂದಲ್ಲ ಒಂದು ರೀತಿಯಲ್ಲಿ ಇವುಗಳ ಕಡೆಗೆ ಮನಸ್ಸು ತೊನೆಯುತ್ತದೆ.

***

ಈಗ ಒಂದು ದಶಕ ಹಿಂದಕ್ಕೆ ಹೋಗಿ ನನಗೆ ಮತ್ತೆ ಅಮೇರಿಕೆಗೆ ಬಂದು ಈಗ ಬದುಕುವ ಹಾಗೆ ಮತ್ತೊಂದು ಅವಕಾಶ ಸಿಕ್ಕಿದರೆ ನಾನು ಖಂಡಿತವಾಗಿ ಅದೇ ನಿರ್ಧಾರವನ್ನು ಕೈಗೊಂಡು ಮತ್ತೆ ಇಲ್ಲಿಗೆ ಬರುತ್ತೇನೆ. ಹಾಗಿದ್ದ ಮೇಲೆ ನನ್ನ ಇಲ್ಲಿನ ಅಸ್ತಿತ್ವವನ್ನು ಖಂಡಿತವಾಗಿ ಮೆಚ್ಚುತ್ತೇನೆ: ಆದರೆ ಯುದ್ಧ, ವಿದೇಶಾಂಗ ನೀತಿಯಂತಹ ಹಲವು ದೊಡ್ಡ ವಿಷಯಗಳಲ್ಲಿ ಭಿನ್ನಾಬಿಪ್ರಾಯವಿದ್ದರೂ, ದಿನ ನಿತ್ಯದ ಒಡನಾಟ, ಆಟ-ಓಟ ಮುಂತಾದ ಅಷ್ಟೊಂದು ದೊಡ್ಡದಲ್ಲದ ವಿಷಯಗಳಲ್ಲಿ ವ್ಯತ್ಯಾಸವಿದ್ದರೂ ಇಲ್ಲಿಗೆ ಬಂದು ನೆಲೆಸಿದ ಮೇಲೆ ಆಗಿರುವ ಅನುಕೂಲಗಳು ಅನಾನುಕೂಲಗಳನ್ನು ಹೆಚ್ಚಿನ ಅನುಪಾತದಲ್ಲಿ ಗೆಲ್ಲುವುದರಿಂದ ನಾವೆಲ್ಲರೂ ಈದಿನ ಇಲ್ಲಿದ್ದೇವೆ, ಇನ್ನು ಮುಂದೆಯೂ ಹೀಗೇ ಇರುತ್ತೇವೆ. ಒಂದು ಯಾವುದೋ ಘಳಿಗೆಯಲ್ಲಿ 'ಸಾಕು' ಎನ್ನಿಸಿದಾದ ಕಿತ್ತುಕೊಂಡು ಹೋದರಾಯಿತು, ಹಾಗೆ ಎಷ್ಟೋ ಜನ ಯಾವು ಯಾವುದೋ ಹಂತದಲ್ಲಿ ಹೋಗಿದ್ದಾರೆ, ಹೋಗಬಹುದು.

ನಾನು ಬೆಂಗಳೂರಿನಲ್ಲಿದ್ದರೆ ಕನ್ನಡ ನಾಟಕಗಳನ್ನು ನೋಡುತ್ತಿದ್ದೆ, ಸಿನಿಮಾಗಳನ್ನು ನೋಡುತ್ತಿದ್ದೆ, ಕಂಡಕಂಡಲ್ಲಿ ನಿರ್ಭಿಡೆಯಿಂದ ಓಡಾಡುತ್ತಿದ್ದೆ, ವರ್ಷದ ಆರು ತಿಂಗಳ ಛಳಿಯಲ್ಲಿ ಕೊರಗಬೇಕಾಗುತ್ತಿರಲಿಲ್ಲ, ನನ್ನ ಸಪೋರ್ಟು ನೆಟ್‌ವರ್ಕ್‌ನ್ನು ಹಿಗ್ಗಿಸಿಕೊಳ್ಳಬಹುದಿತ್ತು, ಕಂಡಿದ್ದನ್ನೆಲ್ಲ ತಿನ್ನಬಹುದಿತ್ತು, ನನಗೆ ಬೇಕಾದ ಪರಿಸರವನ್ನು ಸೃಷ್ಟಿಸಿಕೊಳ್ಳಬಹುದಿತ್ತು, ನನ್ನದೇ ಆದ ರೀತಿಯಲ್ಲಿ ಸಮಾಜದಲ್ಲಿ ಬೆರೆಯಬಹುದಿತ್ತು, ಸಾಮಾಜಿಕವಾಗಿ-ರಾಜಕೀಯವಾಗಿ-ಸಾಂಸ್ಕೃತಿಕವಾಗಿ ನನ್ನ ಧ್ವನಿಯಲ್ಲಿ ಏರಿಳಿತವನ್ನು ಕಾಣಬಹುದಿತ್ತು, 'ಪ್ರತಿಭಾ ಪಲಾಯನ'ದ ಶಾಪದಿಂದ ಹೊರಬಂದು ನನ್ನ ಋಣವನ್ನು ತೀರಿಸಬಹುದಿತ್ತು ಎಂದೆಲ್ಲಾ ಯೋಚಿಸಿಕೊಂಡಾಗ ಯಾವುದೋ ಕರ್ಮದ ಫಲವೆಂದು ಇಲ್ಲಿಯ ನೀರು ಕುಡಿಯಬೇಕಾಗಿ ಬಂದಿದ್ದರಿಂದ 'ಪಾಪಿಷ್ಟ' ಎಂದು ನನ್ನನ್ನು ಕರೆದುಕೊಳ್ಳುವಂತಾಗುತ್ತದೆ.

ಅದೇ ಇಲ್ಲಿಗೆ ಬರದೇ ಹೋದರೆ ಲಂಚ, ಅಸತ್ಯಗಳಂತಹ ದೊಡ್ಡ ವಿಷಯಗಳನ್ನೂ, ಮಾಡುವ ಪ್ರತಿಯೊಂದು ಕೆಲಸದಲ್ಲಿಯೂ, ಕೊಂಡ ಪ್ರತಿಯೊಂದು ವಸ್ತುವಿನಲ್ಲಿಯೂ ಉತ್ಕೃಷ್ಟತೆಯನ್ನು ನೋಡುವ ಮತ್ತೊಂದು ದೃಷ್ಟಿಕೋನ ಹುಟ್ಟಿಕೊಳ್ಳುತ್ತಿರಲಿಲ್ಲ, 'ಹೀಗೂ ಬದುಕಬಹುದು' ಎನ್ನಿಸುತ್ತಿರಲಿಲ್ಲ, ಸಾಮಾಜಿಕವಾಗಿ-ಆರ್ಥಿಕವಾಗಿ ಸ್ವಾಯುತ್ತತೆಯನ್ನು ಪಡೆಯಲಾಗುತ್ತಿರಲಿಲ್ಲ. ಸಾಗರದ ತಳವನ್ನು ಶೋಧಿಸಲೂ ಅದೆಷ್ಟೋ ಮೈಲು ಎತ್ತರದಲ್ಲಿ ನಭದಲ್ಲಿ ಹಾರಿಬಿಟ್ಟ ಉಪಗ್ರಹಗಳನ್ನು ಬಳಸುತ್ತಾರಂತೆ - ನನಗೆ ನಮ್ಮ ಬಗ್ಗೆ ಭಾರತದಲ್ಲಿ ಗೊತ್ತಿರದ ಎಷ್ಟೋ ವಿಷಯಗಳು ಇಲ್ಲಿಗೆ ಬಂದ ಮೇಲೇ ಗೊತ್ತಾಗಿದ್ದು.

***

ನಾನು ಪ್ರತೀವಾರವೂ ಭಾರತದಲ್ಲಿರುವ ನಮ್ಮ ಮನೆಯವರೊಡನೆ ಮಾತನಾಡುತ್ತೇನೆ, ಇಲ್ಲಿ ನನ್ನ ಮನೆಯಲ್ಲಿರುವ ಕಂಪ್ಯೂಟರುಗಳಲ್ಲಿ 'ಕನ್ನಡ ಪ್ರಭ' ಹೋಮ್ ಪೇಜ್ ಆಗಿದೆ - ಇಲ್ಲವೆಂದರೆ ರಾಜ್‌ಕುಮಾರ್ ನಮ್ಮನ್ನಗಲಿದ ಸುದ್ದಿ ನನ್ನ ಕಣ್ಣಿಗೆ ಸ್ವಲ್ಪ ತಡವಾಗಿ ಬೀಳುತ್ತಿತ್ತು. ನಾನು ಕನ್ನಡದಲ್ಲಿ ಓದುವ ವಿಷಯಗಳಲ್ಲಿ ಹೆಚ್ಚಿನವು ನಮ್ಮ ದೇಶಕ್ಕೆ ಸಂಬಂಧಿಸಿದವೇ. ಅಂತರ್ಜಾಲದಲ್ಲೂ ಸಹ ದಿನ ನಿತ್ಯದ ವ್ಯವಹಾರಗಳಿಗೆ ಸಂಬಂಧಿಸಿದ ವಿಷಯ, ಸುದ್ದಿ, ವರದಿಗಳನ್ನು ಹೊರತುಪಡಿಸಿ ನಾನು ಓದುವುದೇನಿದ್ದರೂ ಕನ್ನಡದಲ್ಲಿ ಬರೆದುದ್ದನ್ನೇ. ಅಲ್ಲಿನ ಸಾಮಾಜಿಕ-ರಾಜಕೀಯ ವಿದ್ಯಮಾನಗಳಿಗೆ ಇಲ್ಲಿನವುಗಳಿಗಿಂತ ಹೆಚ್ಚಾಗಿ ಸ್ಪಂದಿಸುತ್ತೇನೆ. ಇವೆಲ್ಲ ನನ್ನ ಹೆಚ್ಚುಗಾರಿಕೆಯೇ ಎಂದು ಪ್ರಶ್ನಿಸಿಕೊಂಡರೆ 'ಇಲ್ಲ' ಎನ್ನುವ ಉತ್ತರ ಹೊರಬರುತ್ತದೆ, ಕನ್ನಡದಲ್ಲಿ ಬರೆದದ್ದನ್ನು ಓದುವುದು ಒಂದು ವೀಕ್‌ನೆಸ್ ಆಗಿ ಕಾಣುತ್ತದೆ. ಇಂಗ್ಲೀಷಿನಲ್ಲಿ ಬರೆದ ಸುಂದರಾತಿ ಸುಂದರ ಅನಾಲಿಸೀಸ್ಸುಗಳನ್ನು ಬೇಕಾದಷ್ಟು ಓದಿದ್ದೇನೆ, ತಾರಿ (ಬ್ಲಾಗು) ಗಳನ್ನು ನೋಡಿದ್ದೇನೆ ಅದರೂ ಕನ್ನಡದಲ್ಲಿ ಬರೆದುದನ್ನು ಓದಿದಾಗ, ನೋಡಿದಾಗ, ಕೇಳಿದಾಗ ಆಗುವ ಅನುಭವಕ್ಕೂ ಇತರ ಭಾಷೆಗಳಲ್ಲಿ ಅವೇ ವಸ್ತುಗಳನ್ನು ಗ್ರಹಿಸಿದಾಗ ಆಗುವ ಅನುಭವಕ್ಕೂ ವ್ಯತ್ಯಾಸವಿದೆ, ಎಲ್ಲಕ್ಕಿಂತ ಮುಖ್ಯವಾಗಿ ಕನ್ನಡದಲ್ಲಿ ಬರೆದದ್ದನ್ನ ಪುಟದಿಂದ ಪುಟಕ್ಕೆ ಓದಿದರೆ, ಬೇರೆ ಭಾಷೆಯಲ್ಲಿ ಬರೆದದ್ದನ್ನ ಸಾಲಿನಿಂದ ಸಾಲಿಗೆ ಓದಿಕೊಂಡು ಹೋಗುತ್ತೇನೆ - ಇವೆಲ್ಲವೂ ನನ್ನ ಮಿತಿಗಳೆಂದು ಮಾತ್ರ ಪರಿಗಣಿಸಬೇಕೇ ವಿನಾ ಎಲ್ಲಾ ಅನಿವಾಸಿಗಳೂ ಈ ರೀತಿ ಇರಲೇಬೇಕೆಂದೇನೂ ಇಲ್ಲ - ನಾನು ಭಿನ್ನನಾದುದರಿಂದಲೇ ಇಷ್ಟು ಹೊತ್ತಿಗೆ ಇದನ್ನು ಕುಟ್ಟುತಿರುವುದು, ಇಲ್ಲವೆಂದರೆ 'ಉಪಯೋಗಕ್ಕೆ ಬರುವ' ಬೇರೇನನ್ನೋ ಮಾಡಿಕೊಂಡಿರಬಹುದಿತ್ತು!

ಕೊನೇ ಪಕ್ಷ ಅಲ್ಲಿಂದ ಇಲ್ಲಿಗೆ ಬರುವಾಗ ಯಾವ ಪ್ರಬುದ್ಧತೆ, ಸ್ಪರ್ಧೆ, ಹಸಿವುಗಳಿದ್ದವೋ ಅವು ಈಗಂತೂ ಇಲ್ಲ, (ಯಾವತ್ತಾದರೂ ಒಂದು ದಿನ) ಮುಂದೆ ಇಲ್ಲಿಂದ ಗುಡಚಾಪೆ ಕಟ್ಟೋದಾದರೂ ಸ್ವಲ್ಪ ಸಮಾಧಾನವಾಗಿ ಯೋಚಿಸುವ ಮನಸ್ಸಿರುತ್ತದೆ, ನಾನೊಬ್ಬನೇ ಅಲ್ಲದೇ ಉಳಿದವರೂ, ಅವರವರ ಅಸ್ತಿತ್ವಗಳೂ ನನ್ನ ನಿರ್ಣಯದಲ್ಲಿ ಭಾಗಿಯಾಗಿರುತ್ತವೆ, ಇಲ್ಲಿಗೆ ಬರುವಾಗ ಇದ್ದ 'unknown factor' ಗಳು ಇಲ್ಲಿಂದ ಅಲ್ಲಿಗೆ ಹೋಗುವಾಗ ಕಡಿಮೆಯಾಗಿರುತ್ತವೆ. ಆದರೆ, ನನ್ನ ನೆನಪಿನಲ್ಲಿರುವ ಎಪ್ಪತ್ತರ, ಎಂಭತ್ತರ, ಅರ್ಧಭಾಗ ತೊಂಭತ್ತರ ದಶಕಗಳ ಮುಂದೆ ದೊಡ್ಡದೊಂದು ಹಳ್ಳ ಕಾಣತೊಡಗುತ್ತದೆ, ನಾನು ಇಲ್ಲಿ ಇದ್ದಷ್ಟು ವರ್ಷಗಳ ಮೇಲೆ ಆ ಹಳ್ಳದ ಆಳ-ಅಗಲಗಳು ನಿರ್ಧಾರಿತಗೊಳ್ಳಬಲ್ಲವು. ಈ ಹಳ್ಳವನ್ನು ನಾನು ಬೇರೆ ವಿಚಾರಧಾರೆಗಳಿಂದ ತುಂಬಿಕೊಂಡಿದ್ದರೂ, ಅಲ್ಲಿ ಮಹತ್ವಪೂರ್ಣ ಬದಲಾವಣೆಗಳಾದ ಹಲವು ವರ್ಷಗಳನ್ನು ಕಳೆದುಕೊಂಡಿದ್ದು ಮುಂದೆ ನಾನು ಅಲ್ಲಿ ಹೋಗಿ ಬದುಕಿದ ಮೇಲೆ ಒಂದಲ್ಲ ಒಂದು ದಿನ ಸತಾಯಿಸುತ್ತೆ ಎನ್ನುವುದು ಗ್ಯಾರಂಟಿ. ಏನಿಲ್ಲವೆಂದರೂ ಅಲ್ಲಿನ ಈಗಿನ ಬದಲಾದ ಜಗತ್ತಿಗೆ ಹೊಂದಿಕೊಳ್ಳುವುದು ಮೊದಮೊದಲು ಕಷ್ಟವಾದರೂ ನನಗಂತೂ ಅಲ್ಲಿ ಹೊಂದಿಕೊಂಡು ಬದುಕುತ್ತೇನೆ ಎನ್ನುವುದರಲ್ಲಿ ಲವಲೇಶವೂ ಸಂಶಯವಿಲ್ಲ.

***

ಹೀಗೆ - ನನ್ನ ಇಲ್ಲಿನ ಅಸ್ತಿತ್ವವನ್ನು ಸಮರ್ಥಿಸಿಕೊಳ್ಳುತ್ತೇನೆ, ಇಲ್ಲಿ ಇರುವ ಅಗತ್ಯ, ಹಂಬಲ ಎಲ್ಲಿಯವರೆಗೆ ಇರುತ್ತವೆಯೋ ಅಲ್ಲಿಯವರೆಗೆ ಇರುತ್ತೇನೆ, ಅದು ಬದಲಾದ ಕ್ಷಣದಲ್ಲಿ ಇಲ್ಲಿಂದ ಕಂಬಿ ಕೀಳುತ್ತೇನೆ - ಆ ಕ್ಷಣ ಯಾವಾಗ ಬರಬಹುದು ಎಂಬ ಕಾತರತೆಯಿದ್ದರೂ 'ಅದು ಎಷ್ಟು ಬೇಗ ಬರುವುದೋ ಅಷ್ಟು ಒಳ್ಳೆಯದು' ಎಂದು ಪದಗಳಿಗೆ ನಿಲುಕದ ಯಾವುದೋ ಒಂದು ಧ್ವನಿ ಹೇಳುತ್ತದೆಯಾದ್ದರಿಂದ ಅಂತಹ ಘಳಿಗೆ ಆದಷ್ಟು ಬೇಗನೆ ಬರಲಿ ಎಂದು ಆರ್ತನಾಗುತ್ತೇನೆ.

ಅಂತಹ ಕ್ಷಣ ಬರುವವರೆಗೆ ವರ್ತಮಾನದಲ್ಲಿ ಬದುಕುವುದೇ ಜಾಣತನ, ಅದಕ್ಕಾಗಿಯೇ ವರ್ತಮಾನಕ್ಕೆ ಗೌರವ ಕೊಡುವ ಇಲ್ಲಿಯ ಪರಂಪರೆಯನ್ನು ಮೆಚ್ಚಿಕೊಂಡಿದ್ದು, ಅತಿಯಾಗಿ ಹಚ್ಚಿಕೊಂಡಿದ್ದು!

Saturday, May 20, 2006

ಹಲವು ಸಂದಿಗ್ಧಗಳು

'ಅಂತರಂಗ'ದಲ್ಲಿ ಹಾಗೂ-ಹೀಗೂ, ಅದೂ-ಇದನ್ನು ಬರೆದು ತುಂಬಿಸಿದ್ದಾಯಿತು, ಇವತ್ತಿಗೆ ಇದು ಐವತ್ತನೇ ಬರಹ, ಈ ಮೈಲಿಗಲ್ಲನ್ನು ತಲುಪಿದ್ದೇನೆಂದು ನನ್ನ ಬೆನ್ನನ್ನು ನಾನೇ ತಟ್ಟಿಕೊಳ್ಳುವ ಮುನ್ನ ಈ ಬರಹಗಳನ್ನು ಬರೆಯುವ ಪ್ರಕ್ರಿಯೆಯಲ್ಲಿ ನನ್ನಲ್ಲಿ ಮೂಡಿದ ಹಲವು ಸಂದಿಗ್ಧಗಳಲ್ಲಿಯೂ ಓದುಗರನ್ನು ಸಹಭಾಗಿಗಳನ್ನಾಗಿ ಮಾಡಿದರೆ ಹೇಗೆ ಎಂಬ ಕುಹಕ ಮನದಲ್ಲಿ ಮೂಡಿದ್ದೇ ತಡ ಹೀಗೆ ಕುಟ್ಟಲು ಮೊದಲು ಮಾಡಿಕೊಂಡೆ.

***

'ಅಂತರಂಗ'ದ ಬರಹಗಳಿಗೆ ಕೆಲವು ಖಾಯಂ ಓದುಗರೂ, ಇನ್ನು ಕೆಲವು ವೀಕ್ಷಕರು, ಹಾಗೂ ಕೆಲವರು ಹಿತೈಷಿಗಳು ಸಮಯದಿಂದ ಸಮಯಕ್ಕೆ ಭೇಟಿಕೊಡುತ್ತಲೆ ಇದ್ದಾರೆ. ಇವರಲ್ಲಿ ಕೆಲವರು ತಮ್ಮ ನಿಜನಾಮದಲ್ಲಿ ಅನಿಸಿಕೆಗಳನ್ನು ಸಾರ್ವಜನಿಕವಾಗಿ ಹಂಚಿಕೊಂಡರೆ, ಇನ್ನು ಕೆಲವರು ಅನಾಮಿಕರಾಗಿ ಉಳಿದರು, ಮತ್ತೂ ಕೆಲವರು ತಮ್ಮ ನಿಜನಾಮದಲ್ಲಿ ಬರೀ ಇ-ಮೇಲ್‌ಗಳ ಮೂಲಕ ಮಾತ್ರ ನನಗೆ ಬರೆಯುತ್ತಾರಾದ್ದರಿಂದ ಪ್ರತಿಯೊಂದಕ್ಕೂ ಒಂದು ಸರ್ಕಲ್ ಹುಟ್ಟುವ ಹಾಗೆ ಈ ಬರಹಗಳಿಗೂ ಅದರದ್ದೆ ಆದ ಒಂದು ಬೇಸ್ ಹುಟ್ಟಿದ್ದರಲ್ಲಿ ಯಾವ ಆಶ್ಚರ್ಯವೂ ಇಲ್ಲ, ಹೆಚ್ಚುಗಾರಿಕೆಯೂ ಇಲ್ಲ.

ಆದರೆ, ನಾನು ಈ ಬರಹಗಳಿಗೆ ಎಷ್ಟು ಸಮಯವನ್ನು ವ್ಯಯಿಸುತ್ತೇನೆ, ಅವುಗಳನ್ನು ಯಾವಾಗ ಕುಟ್ಟುತ್ತೇನೆ, ಈ ಬರಹಗಳಲ್ಲಿ ಏನೇನನ್ನು ಬರೆಯಬಹುದು, ಬರೆದಿದ್ದೇನೆ, ಬರೆಯಬಲ್ಲೆ ಎಂದು ಆಲೋಚಿಸಿಕೊಂಡಂತೆಲ್ಲಾ ದೊಡ್ಡ ಕಂಪದ ಭೂಮಿಯಲ್ಲಿ ಸ್ವಲ್ಪಸ್ವಲ್ಪವೇ ಹುದುಗಿದ ಅನುಭವವಾಗತೊಡಗುತ್ತದೆ. ಸದ್ಯಕ್ಕೆ ನನ್ನ ಮುಂದಿರುವ ಸಂಕಷ್ಟಗಳು ಇವು:

೧) ನಾನು ಈವರೆಗಿನ ಬರಹಗಳಲ್ಲಿ ನನ್ನ ವೈಯುಕ್ತಿಕ ವಿಷಯಗಳನ್ನು ಪ್ರಥಮ ವ್ಯಕ್ತಿಯ ಮೂಲಕ ಸಾರ್ವಜನಿಕಗೊಳಿಸುತ್ತಿರುವುದು ಓದುಗರಲ್ಲಿ ಕೆಲವರಿಗೆ ಮೆಚ್ಚುಗೆಯಾದರೂ ನನ್ನ ಮನೆಯವರಿಗೆ (ನನ್ನ ಹೆಂಡತಿ ಹಾಗೂ ಇನ್ನು ನಾಲ್ಕು ದಿನಗಳಲ್ಲಿ ಭಾರತಕ್ಕೆ ಹಿಂತಿರುಗುತ್ತಿರುವ ನನ್ನ ಅತ್ತೆಯವರಿಗೆ) ಅದು ಖಂಡಿತವಾಗಿ ಇಷ್ಟವಿಲ್ಲದ ಮಾತು. ನಾನೇನಾದರೂ ಹಾಗೆ ಬರೆಯುತ್ತಾ ಹೋದರೆ 'ಎಲ್ಲರೂ ನನ್ನ ಹಲ್ಲುಗಳನ್ನು ಎಣಿಸಿಕೊಂಡುಬಿಡುತ್ತಾರೆ' ಎಂಬುದು ಅವರ ವಾದ ಹಾಗೂ ನಮ್ಮ-ನಮ್ಮ ವಿಷಯಗಳು ನಮ್ಮಲ್ಲೇ ಇರಲಿ ಎಂಬುದು ಅವರ ತತ್ವ. ಹಾಗೇನಾದರೂ ನನಗೆ ನನ್ನ ಬಗ್ಗೆ ಬರೆಯಲೇ ಬೇಕಾಯಿತೆನ್ನಿಸಿದರೆ 'ಮೊದಲು ದೊಡ್ಡ ಮನುಷ್ಯನಾಗಿ ಐವತ್ತು ವರ್ಷ ಆದ ಮೇಲೆ ಆತ್ಮ ಚರಿತ್ರೆ ಬರೆ' ಎನ್ನುವುದು ಅವರ ಕಿವಿಮಾತು.

'ಅಂತರಂಗಿ'ಯನ್ನು ಎಷ್ಟು ಸಾಧ್ಯವೋ ಅಷ್ಟು ಗೋಪ್ಯವಾಗಿ ಇಡೋಣವೆಂದುಕೊಂಡರೆ ನನ್ನ ಬರವಣಿಗೆಯ ಶೈಲಿ, ಅದರಲ್ಲಿ ಬರುವ ವಿಷಯಗಳು ಹಾಗೂ 'ಅಂತರಂಗ' ನಿನ್ನದಾ ಎಂದು ಕೇಳಿದವರಿಗೆ ನಾನು ಸುಳ್ಳು ಹೇಳದೇ ಇದ್ದುದು ಎಲ್ಲವೂ ಸೇರಿಕೊಂಡು ಒಬ್ಬರಿಂದ ಇಬ್ಬರಿಗೆ, ಇಬ್ಬರಿಂದ ನಾಲ್ವರಿಗೆ ಗೊತ್ತಾಗಿ ಈಗ ಕೊನೇ ಪಕ್ಷ ಏನಿಲ್ಲವೆಂದರೂ ಒಂದು ಹತ್ತು-ಹದಿನೈದು ಜನರಿಗೆ ನಾನ್ಯಾರೆಂದು ಗೊತ್ತಾಗಿ ಬಿಟ್ಟಿದೆ!

೨) ಎರಡನೆಯದಾಗಿ ಆಫೀಸಿನ ಸಮಯದಲ್ಲಿ ವೈಯುಕ್ತಿಕ ಕೆಲಸಗಳನ್ನು ಮಾಡಬಾರದೆಂಬ ನನ್ನ ನಿಯಮ, ಕಂಪನಿಯ ಪಾಲಿಸಿ ಹಾಗೂ ನನಗೆ ಕೊಡುವ ಸಂಬಳಕ್ಕೆ ತಕ್ಕನಾಗಿ ದುಡಿಯಬೇಕೆಂದು ಸದಾ ಗೊಣಗುವ ಅಂತರಾತ್ಮ. ಈಗ ಉದಾಹರಣೆಗೆ (ಸುಮ್ಮನೇ ಲೆಕ್ಕಕ್ಕೆಂದು ಹೇಳುತ್ತಿದ್ದೇನೆ, ಎನ್.ಆರ್.ಐ. ಒಬ್ಬ ಇಷ್ಟು ದುಡಿಯುತ್ತಿದ್ದಾನೆಂದು ದಿಢೀರನೆ ನಿರ್ಣಯಕ್ಕೆ ಬರಬೇಡಿ) ನನ್ನ ಕೆಲಸಕ್ಕೆ ನಮ್ಮ ಕಂಪನಿಯವರು ಘಂಟೆಗೆ ಅರವತ್ತು ಡಾಲರ್‌ನ್ನು ಕೊಡುತ್ತಾರೆ ಎಂದುಕೊಳ್ಳೋಣ, ಹಾಗಿದ್ದ ಪಕ್ಷದಲ್ಲಿ ನಿಮಿಷಕ್ಕೆ ಒಂದು ಡಾಲರ್ ಆಯಿತಲ್ಲವೇ? ನಿನ್ನೆ (ಶುಕ್ರವಾರ) ನಾನು ಆಫೀಸಿನಲ್ಲಿ 'ಅಂತರಂಗ'ದ ಸಲುವಾಗಿ, ಅದರಲ್ಲಿ ಬರೆದಿರುವ ಕಾಮೆಂಟನ್ನು ಓದುವುದಕ್ಕೆ, ಅದಕ್ಕೆ ಉತ್ತರಕೊಡುವುದಕ್ಕೆ, ಅಲ್ಲಿ ಬಳಸಿದ ವಿಷಯ ವಸ್ತುಗಳ ಕುರಿತು ಚಾಟ್ ಮಾಡುವುದಕ್ಕೆ ಏನಿಲ್ಲವೆಂದರೂ ಒಂದು ಘಂಟೆಯನ್ನಾದರೂ ವ್ಯಯಿಸಿದ್ದೇನೆ. ದಿನದಲ್ಲಿ ಎಂಟು ಘಂಟೆ ಕೆಲಸ ಮಾಡಬೇಕಾದ ಅಗತ್ಯವಿರುವ ನನಗೆ ನಾನು ಕೊನೇಪಕ್ಷ ಏನಿಲ್ಲವೆಂದರೂ (ಮಧ್ಯಾಹ್ನ ಊಟ, ಇತರ ಬ್ರೇಕ್‌ಗಳನ್ನೂ ಸೇರಿ) ಕೊನೇ ಪಕ್ಷ ಹತ್ತು ಘಂಟೆಗಳಾದರೂ ಕೆಲಸ ಮಾಡುತ್ತೇನೆ. ಆದರೂ ಸಹ, ಕಂಪನಿಯ ಸಂಪನ್ಮೂಲಗಳನ್ನು ವ್ಯವಹಾರಕ್ಕೆ ಸಂಬಂಧಿಸದ ಕಾರ್ಯಗಳಲ್ಲಿ ಬಳಸುವುದು ತಪ್ಪು ಹಾಗು ಅದು ನೀತಿ, ನಿಯಮಗಳಿಗೆ ವಿರುದ್ಧವಾದುದು ಎಂದು ನನಗೆ ಚೆನ್ನಾಗಿ ಗೊತ್ತಿರುವುದರಿಂದ ಇಲ್ಲಿ ಸಂದಿಗ್ಧ ಹುಟ್ಟುತ್ತದೆ.

ಅಲ್ಲದೇ ಪ್ರತೀ ಪೋಸ್ಟ್ ಹಾಗೂ ಅದರ ಫಾಲ್ಲೋ ಅಪ್ ಎಲ್ಲವೂ ಸೇರಿ ದಿನಕ್ಕೆ ಒಂದೆರಡು ಘಂಟೆ ವ್ಯಯಿಸುವ ನಾನು, (ಬೇರೆ ಯಾರೂ ಹಾಗೆ ಮಾಡುತ್ತಿಲ್ಲವಾದ್ದರಿಂದ, ಅಥವಾ ಹಾಗೆ ಮಾಡುವವರು ಕಡಿಮೆ ಇರುವುದರಿಂದ), ಮನೆ, ಮಕ್ಕಳು, ಸಂಸಾರ, ಕೆಲಸ, ಕಮ್ಮ್ಯೂಟು ಇವುಗಳು ಬೇಡುವ ಅಟೆನ್ಷನ್ ಕೊಟ್ಟು ನ್ಯಾಯ ಒದಗಿಸಬಲ್ಲೆನೇ? ಹಾಗೆ ಮಾಡಿದರೂ ಮುಂದಿನ ವಾರ ನಮ್ಮ ಅತ್ತೆಯವರು ಭಾರತಕ್ಕೆ ಹಿಂತಿರುಗಿದ ಮೇಲೆ ಉಪವಾಸವಂತೂ ಕೂರಲು ಸಾಧ್ಯವಿಲ್ಲ, ಅಡುಗೆ ಯಾವಾಗ ಮಾಡುವುದು, ಊಟ ಯಾವಾಗ ಮಾಡುವುದು, ನಿದ್ರೆ ಯಾವಾಗ ಮಾಡುವುದು, ಒಂದೋ ಎರಡೋ...

ಅನಿವಾಸಿಗಳ ಸಂಕಷ್ಟ ಭಾರತದಲ್ಲಿ ಕುಳಿತವರಿಗೋ, ಭಾರತದಿಂದ ಆರು ತಿಂಗಳ ಪ್ರವಾಸೀ ವೀಸಾದಲ್ಲಿ ಬರುವಂತಹವರಿಗೋ ಗೊತ್ತಾಗೋಲ್ಲ, ಸುಮ್ಮನೇ ಅವರಿಗನ್ನಿಸಿದ್ದನ್ನು ಗೊಣಗುತ್ತಾರಷ್ಟೇ - ನನ್ನ ಅತ್ತೆಯವರು ನಮ್ಮ ಬಗ್ಗೆ ಮರುಕಪಡುತ್ತಾರೆ, ಇಲ್ಲಿ ಬಂದು ನಮ್ಮನ್ನು 'ನೋಡಿದ' ಮೇಲೆ ನೀವು 'ಹೀಗೆ' ಬದುಕುತ್ತಿದ್ದೀರಿ ಎಂದು ಗೊತ್ತಿರಲಿಲ್ಲ ಎನ್ನುತ್ತಾರೆ. ಅವರು ನನ್ನ ತರಹ ಪುಸ್ತಕ ಬರೆಯೋದಿಲ್ಲವಾದರೂ ಇದ್ದದ್ದನ್ನ ಇದ್ದ ಹಾಗೇ ಹೇಳುವ ಕರುಣಾಮಯಿ!

೩) ಹೀಗೇ ನನ್ನ ಹಳವಂಡವನ್ನೆಲ್ಲ ಕೆದಕಿ ಆನವಟ್ಟಿಯಿಂದ ಇಲ್ಲಿಯವರೆಗೆ ಬರೆಯುತ್ತಾ ಹೋದರೆ ಸುಮಾರು ಐನೂರು ಪೋಸ್ಟ್‌ಗಳನ್ನು ಬರೆಯುವಷ್ಟು ಸರಕು ನನ್ನಲ್ಲಿದೆ - ಕೆಲವು ಕೆಟ್ಟವು, ಕೆಲವು ಒಳ್ಳೆಯವು, ಎಲ್ಲಾ ಥರದ ಅನುಭವಗಳನ್ನೂ ಹೀಗೆ ಬರೆಯಬಹುದು. ಆದರೆ ಹೀಗೆ ಬರೆಯುವುದರ ಗುರಿ ಏನು, ಯಾವ 'ಗುಡ್ಡಾ ಕಡಿಯೋದಕ್ಕೆ' ಹೀಗೆ ಬರೆಯಬೇಕು? ಒಂದು ಕಥೆಯನ್ನೋ ಕಾದಂಬರಿಯನ್ನೂ ವಿಮರ್ಶಿಸಿ ಬರೆದರೆ ಅದು ಒಂದು ಥರಾ, ಒಂದು ನನ್ನದೇ ಆದ ಕಥೆಯನ್ನೋ ಕಾವ್ಯವನ್ನೋ ಪ್ರಕಟಿಸಿದರೆ ಇನ್ನೊಂದು ಥರಾ, ಇಲ್ಲಾ ಹಾಸ್ಯದ ಶೈಲಿಯಲ್ಲಿ ಬರೆದು ಕೊನೆಗೆ ಏನೋ ಒಂದು ಸಂದೇಶವನ್ನು ಸಾರಿದರೆ ಮತ್ತೊಂದು ಥರಾ - ಚೂರುಪಾರು ಬರೆದಿದ್ದನ್ನೂ 'ಸಗಣೀ ತಿನ್ನೋರಿಗೆ ಮೀಸೆ ತಿಕ್ಕೋರ್ ಹದಿನಾರ್ ಜನ' ಅನ್ನೋ ಹಾಗೆ - ಬರೆದಿದ್ದನ್ನೆಲ್ಲ ಈ ಅಳಲು, ವಿಸ್ಮಯ, ನೋಟ, ವೈಯುಕ್ತಿಕ ಇತ್ಯಾದಿ ಮಣ್ಣೂ-ಮಸಿಗಳೆಂದು ವರ್ಗೀಕರಣ ಮಾಡಿ ತೆರೆದಿಟ್ಟದ್ದನ್ನ ಕೇಳುವವರು ‍ಯಾರು, ಹೇಳುವವರು ‍ಯಾರು? ಅಲ್ಲದೆ ನನ್ನಲ್ಲಿ ಹಳವಂಡ ಅಡಗಿದೆಯೆಂದಾಕ್ಷಣ ಪೂರ್ಣವಾಗಿ ಎಲ್ಲವನ್ನೂ ಬರೆಯಲು ಸಾಧ್ಯವಿದೆ ಎಂಬ ಮಾತು ಅಷ್ಟೊಂದು ನಿಜವಾದುದಲ್ಲ - ನನಗೆ ಬರೆಯಲು ಮುಖ್ಯವಾಗಿ ಮೂರು ರೀತಿಯಲ್ಲಿ ಪ್ರೇರಣೆ ಸಿಗುತ್ತದೆ - ನನಗೆ ಬೇಕಾದ ಆತ್ಮೀಯರಲ್ಲಿ ಒಂದೇ ದೂರವಾಣಿಯ ಮೂಲಕವೋ ಇಲ್ಲಾ ಮುಖತಃ ಭೇಟಿಯಲ್ಲೋ ಮಾತನಾಡಿ ವಿಚಾರ ವಿನಿಮಯ ಮಾಡಿಕೊಳ್ಳುವುದು, ನಾನು ಎಲ್ಲಾದರೂ ಪ್ರಯಾಣ ಮಾಡುವುದು, ಹಾಗೂ ಪುಸ್ತಕಗಳಲ್ಲೋ, ಅಂತರ್ಜಾಲದಲ್ಲೋ ಯಾವುದಾದರೊಂದು ವಿಷಯ, ವಸ್ತುವನ್ನು ಓದುವುದು. ನನ್ನೊಳಗಿನ ಹಳವಂಡಗಳಿಗೆ ರೂಪಕೊಡುವಂತೆ ಬರೆಯುವ ಒಂದೊಂದು ಸಾಲಿಗೂ ಕನಿಷ್ಟ ಹತ್ತು ಸಾಲುಗಳನ್ನಾದರೂ ಓದಬೇಕು, ಹತ್ತು ಪಟ್ಟು ಮಾತನಾಡಬೇಕು ಇಲ್ಲಾ ಹತ್ತು ಪಟ್ಟು ತಿರುಗಾಡಬೇಕು, ಇವೆಲ್ಲವೂ ಎಲ್ಲಿ ಸಾಧ್ಯ?

***

ಸಾಧ್ಯವಾದಾಗ ಬರೆಯಬೇಕು ಎನ್ನುವುದಾಗಲೀ, ಎಷ್ಟು ಸಾಧ್ಯವೋ ಅಷ್ಟನ್ನು ಬರೆದು ಬದುಕುತ್ತಿರುವವರೆಲ್ಲರೂ ಬುದ್ಧಿವಂತರು. ಆದರೆ ನನಗೆ ಬರೆಯುವ ಚಟ ಬೆಳೆಯದೇ ಹೋದರೆ ನಾನು ಮತ್ತೆಂದೂ ಬರೆಯುವವನಲ್ಲ. ನಮ್ಮ ನಡುವೆ ಒಳ್ಳೆಯ ಪ್ರಕ್ರಿಯೆಗಳಿಗೆ ಕುಮ್ಮಕ್ಕು ಸಿಗುವುದಕ್ಕಿಂತಲೂ 'ಸೊಫಾಕ್ಕೆ ಅಂಟಿಕೊಂಡೇ ಇಡೀ ಸಂಜೆಯನ್ನು ಕಳೆಯುವ' ಪರಿಣಾಮ, ಅವಕಾಶಗಳೇ ಹೆಚ್ಚು. ಈ ನಿಟ್ಟಿನಲ್ಲಿ ಕೊನೇ ಪಕ್ಷ ದಿನಕ್ಕೊಂದಿಷ್ಟಾದರೂ ನಿಗದಿತ ಸಮಯದಲ್ಲಿ ಕೆಲವು ಸಾಲುಗಳನ್ನು ಗೀಚದಿದ್ದರೆ ಅದು ಒಂದು ಹವ್ಯಾಸವಾಗುವುದಾದರೂ ಹೇಗೆ? ಇನ್ನು ವಾರಕ್ಕೊಮ್ಮೆ ಬರೆಯಬಹುದಲ್ಲವೇ ಎಂಬ ಮಾತಿಗೆ ಅಮೇರಿಕದಲ್ಲಿ ಈಗಾಗಲೇ ಎಲ್ಲವೂ 'ವಾರಮಯ'ವಾಗಿರುವಾಗ ನನ್ನ ಬದುಕು-ಬರವಣಿಗೆಯಾದರೂ ವರ್ತಮಾನವೆಂಬ ಹೀಗೆ ಬಂದು ಹಾಗೆ ಹೋಗುವ ಜೀವವುಳ್ಳ ಸರಕಾಗಲೀ ಎಂದುಕೊಂಡೆ, ಬರೆಯಲು-ಓದಲು ಬೇಕಾದಷ್ಟಿರುವಾಗ ವಾರಕ್ಕೊಮ್ಮೆಯ ಸ್ಪಂದನ ಎಲ್ಲಿಯ ಲೆಕ್ಕ? ಆದರೆ... ಪ್ರಸಕ್ತ ವಿದ್ಯಮಾನಗಳ ಮೇಲಾಗಲೀ, ರಾಜಕೀಯ ಸ್ಥಿತಿಗತಿಗಳ ಕುರಿತಾಗಲೀ, ವ್ಯಾಪಾರ-ವಾಣಿಜ್ಯ-ವಿದ್ಯಮಾನಗಳ ಕುರಿತೋ ಬರೆದರೆ ಅದರಿಂದ ಲೋಕಕಲ್ಯಾಣವಾಗದಿದ್ದರೂ ಲೋಕದಲ್ಲಿರುವವರನ್ನು ನೇರವಾಗಿ ತಟ್ಟಬಹುದಾಗಿತ್ತು, ಇನ್ನು ಆಗುವಾಗ ಅನುಭವಿಸುವಾಗ ತಾಜಾ ಕಬ್ಬಿನಹಾಲಿನಂತಿದ್ದು ಮುಂದೆ ಕೊಳೆತು ಹುಳಿಹೆಂಡವಾದ ನನ್ನ ಸರಕುಗಳನ್ನು ಎಷ್ಟು ಜನರಿಗೆ ಹೇಗೆ ಉಣಬಡಿಸುವುದು ಅದರಿಂದ ಏನಾದೀತು ಎನ್ನುವ ಪ್ರಶ್ನೆಯೂ ಅಲ್ಲಲ್ಲಿ ಬಂದಿದೆ. ಸರೀ, ಈ ಬ್ಲಾಗುಗಳಲ್ಲಿ (ಬ್ಲಾಗಿಗೆ 'ತಾರಿ' ಎಂದು ನಾನೊಂದು ಹೊಸಪದವನ್ನು ಪರಿಚಯಿಸಿದರೆ ಹೇಗೆ? ತಾಣದಲ್ಲಿ ಬರೆದ ದಿನಚರಿ - ಎಂಬುದರ ಮೊದಲ ಹಾಗು ಕೊನೆಯ ಅಕ್ಷರ - ತಾರಿ), ಅಲ್ಲ ತಾರಿಗಳಲ್ಲಿ ಯಾರು ಯಾರು ಏನೇನು ಬರೆದಿದ್ದಾರೆ ಎಂದು ನೋಡಿಕೊಂಡು ಬಂದೆ, ಕನ್ನಡ-ಇಂಗ್ಲೀಷು ಭಾಷೆಗಳಲ್ಲಿ ಎಷ್ಟು ಸಾಧ್ಯವೋ ಅಷ್ಟನ್ನು ಓದಿದವನಿಗೆ ಕೆಲವರು ಇದ್ದದ್ದನ್ನು ತಮ್ಮ ನಿಲುವಿನಲ್ಲಿ ಬರೆದಂತೆಯೂ, ಇನ್ನು ಕೆಲವರು ಇದ್ದದ್ದನ್ನು ತಿರುಚಿ ಬರೆದಂತೆಯೂ, ಮತ್ತೆ ಕೆಲವರು ಶುದ್ಧ ಮನೋರಂಜನೆಯನ್ನೇ ಉದ್ದೇಶವಾಗಿಟ್ಟುಕೊಂಡು ಸೂಕ್ಷ್ಮವಾಗಿ ನೋಡಿದಾಗ 'ಸುತ್ತಿ ಹೊಡೆದವರಂತೆ' ಕಂಡು ಬಂದರು. ಇದ್ದದ್ದನ್ನ ಇದ್ದಹಾಗೇ ಬರೆಯುವ (ಕೊನೇಪಕ್ಷ ಆ ಉದ್ದೇಶವನ್ನು ಹೊಂದಿರುವ) ಹಲವಾರು ಮಾಧ್ಯಮಗಳಿರುವಾಗ, ತಮ್ಮ-ತಮ್ಮ ನಿಲುವುಗಳನ್ನು ತಮಗೆ ತೋಚಿದ ರೀತಿಯಲ್ಲಿ ಹೇಳುವ ಘಟಾನುಘಟಿಗಳಿರುವಾಗ, ಹಾಸ್ಯ-ಮನೋರಂಜನೆಗೆ ಪ್ರತಿಭಾವಂತ ದಿಗ್ಗಜರಿರುವಾಗ ಇವರೆಲ್ಲರ ನಡುವೆ ನನ್ನ ಹಳವಂಡದ ಬರಹಗಳು ಎಷ್ಟರ ಮಟ್ಟಿಗೆ ಎಲ್ಲಿ ಸಲ್ಲುತ್ತವೆ ಎಂದು ಒಮ್ಮೆ ಅವಲೋಕಿಸಬೇಕಾಗಿ ಬಂದಿತು - ಅದರ ಫಲಿತಾಂಶ ದಿಗಿಲನ್ನೂ ಹುಟ್ಟಿಸಿತು!

***

ಹೀಗೆ ಸಂದಿಗ್ಧಗಳ ಬಗೆಗೆ ಬರೆದರೆ ಅದೇ ಒಂದು ಬರಹವಾಯಿತು, ನೋಡು ನೋಡುತ್ತಿದ್ದಂತೇ ಪುಟ ತುಂಬಿತು. ನನ್ನ ಹಿಂದಿನ ಪೋಸ್ಟ್‌ಗಳಲ್ಲಿ ಹೇಳುವುದನ್ನೂ ಇನ್ನೂ ಮುಗಿಸದೇ 'ಭಾಗ-೧' ಎಂದು ಶೀರ್ಷಿಕೆಯಲ್ಲೇ ತೋರಿಸುವ ನೀಚ ಹಾಗೂ ಭಂಡತನಕ್ಕೆ ಇಳಿದುಬಿಟ್ಟಿದ್ದೇನೆ ಎನ್ನಿಸುತ್ತದೆ. 'ಅಂತರಂಗ'ವನ್ನು ಓದಿದವರು after all, 'ಅಂತರಂಗಿ' ಯಾವೊಬ್ಬ ದೊಡ್ಡ ಮಹಾತ್ಮನೂ ಅಲ್ಲ, ಒಬ್ಬ ಸಾಮಾನ್ಯ ಮನುಷ್ಯನೇ ಹೀಗೆ ಬರೆಯುತ್ತಾನಲ್ಲ, ತಾನೊಬ್ಬನೇ ಬದುಕನ್ನು ಅನುಭವಿಸಿದ ಹಾಗೆ ಆಡುತ್ತಾನಲ್ಲ, ಅಬ್ಬಾ ಇವನ ಸೊಕ್ಕೇ!' ಎಂದು ನನಗೆ ಹಿಡಿಶಾಪವನ್ನು ಹಾಕುತ್ತಾರೆಂದು ನನಗೆ ಚೆನ್ನಾಗಿ ಗೊತ್ತಿದೆ.

'ವಾರಕ್ಕೆ ಮೂರು ಬಾರಿಯಾದರೂ ಜಿಮ್‌ಗೆ ಹೋಗಿ' ಎನ್ನುವ ನನ್ನ ಡಾಕ್ಟರರ ಧ್ವನಿಯೂ, 'ಇವೆಲ್ಲಾ ಬರೆಯೋದರಿಂದ ಏನೂ ಪ್ರಯೋಜನ ಇಲ್ಲಾರೀ...' ಎನ್ನುವ ನಮ್ಮ ಅತ್ತೆಯವರ ಮಾತೂ, ಆಫೀಸಿನ ಸಂಪನ್ಮೂಲಗಳನ್ನು ವೈಯುಕ್ತಿಕ ಪ್ರಯೋಜನಕ್ಕೆ ಬಳಸಬಾರದೆಂಬ ನನ್ನ ನೀತಿಯೂ, ನನ್ನ ಬರಹಗಳಿಗೆ ಉತ್ತರಕೊಟ್ಟ, ಪ್ರೈವೇಟ್ ಆಗಿ ಇ-ಮೇಲ್ ಮಾಡಿದ ವರ್ಚುವಲ್ ಪ್ರಪಂಚದ ಮುಖಗಳೂ ನನ್ನನ್ನು ಸುತ್ತುವರಿಯತೊಡಗುತ್ತವೆ. ಸ್ವಾಗತ ದಲ್ಲಿ ಬರೆದಂತೆ ಡಜನ್‌ಗಟ್ಟಲೆ ವಿಷಯಗಳು ಮುತ್ತಿ ನನ್ನ ಸುತ್ತಲೂ ನರ್ತನವಾಡತೊಡಗುತ್ತವೆ, ಇಷ್ಟು ದಿನ ಹತ್ತಿರದಿಂದ ಕೇಳಿ ಬರುತ್ತಿದ್ದ 'ನೋಡೋಣ ಇದು ಎಲ್ಲೀವರೆಗೆ ಬರುತ್ತೋ ಅಂತ' ಎನ್ನುವ ಧ್ವನಿ ಈಗ ಅದೆಲ್ಲೋ ದೂರದಿಂದ ಕೇಳಿಬರುತ್ತಿರುವಂತೆ ಕ್ಷೀಣವಾಗುತ್ತದೆ - ನನ್ನೊಳಗಿನ ನಾನನ್ನು ಇನ್ನೂ ಸಂಪೂರ್ಣವಾಗಿ ಬಿಚ್ಚಿಕೊಂಡೇ ಇಲ್ಲ, ಆಗಲೇ ಬಾಗಿಲುಗಳು ಮುಚ್ಚಿಕೊಂಡಂತೆ ಅನ್ನಿಸಿ, ನನಗೇನಾದರೂ 'ಖಾಯಿಲೆ' ಬಂದು ಬಿಟ್ಟಿದೆಯೇ ಎಂದು ಒಮ್ಮೆಲೇ ಭಯವಾಗತೊಡಗುತ್ತದೆ.

Friday, May 19, 2006

ಅವಕಾಶವಾದಿ ಹಾಡುಹಗಲೇ ಸಿಕ್ಕಿಬಿದ್ದ ಘಳಿಗೆ

ನಿಮಗೆ ಗೊತ್ತಿಲ್ಲದಿರಬಹುದು, ೧೯೯೫ ರಲ್ಲಿ ಟೆಕ್ನಾಲಜಿ ಬ್ಯಾಂಡ್ ವ್ಯಾಗನ್‌ನ್ನು ಹತ್ತಲು ನಮ್ಮಲ್ಲಿ ಇದ್ದ ಪೈಪೋಟಿ ಹಾಗೂ ಹುರುಪು. ಆಗ ಸಿಕ್ಕ ಅವಕಾಶಗಳು ವಿಪುಲವಾಗಿದ್ದರೂ ಸರಿಯಾದ ನಿರ್ಣಯವನ್ನು ಸಮಯಕ್ಕೆ ತಕ್ಕಂತೆ ತೆಗೆದುಕೊಳ್ಳದವರು ಕೊನೆಗೆ ಒಂದಲ್ಲ ಒಂದು ರೀತಿಯಲ್ಲಿ ಬೆಲೆತೆತ್ತರು. ಆಗ ಬೆಳಿಗ್ಗೆಗೊಂದು, ಸಂಜೆಗೊಂದು ಎಂದು ವಿಶ್ವ ಮಾರುಕಟ್ಟೆಯಲ್ಲಿ ಸಿಗುತ್ತಿದ್ದ ಕೆಲಸಗಳೂ, ಯಾವುದನ್ನು ತೆಗೆದುಕೊಳ್ಳಬೇಕು ಯಾವುದನ್ನು ಬಿಡಬೇಕು ಎಂದು ಯೋಚಿಸಲು ವ್ಯವಧಾನವೂ ಇಲ್ಲದ ನಮ್ಮ ಪರಿಸ್ಥಿತಿ ಒಂದು ಸೀಜನ್‌ನಲ್ಲಿ ನೀರಿನಿಂದ ಮೇಲೆ ಹಾರುವ ಸ್ಯಾಲ್ಮನ್‌ನ್ನು ಹಿಡಿಯುವ ಕರಡಿಗಳಂತಾಗಿತ್ತು.

***

ಮದ್ರಾಸಿನ ಪೆಂಟಾಫೋರ್‌ ಮೊಟ್ಟ ಮೊದಲ ಬಾರಿಗೆ ತರಬೇತಿಯನ್ನೂ, ಕೆಲಸವನ್ನೂ ಕೊಟ್ಟು ನನ್ನ ಜೀವವನ್ನು ಉಳಿಸಿದ ಕಂಪನಿಯದು. ನಾನು ಕೈಯಲ್ಲಿದ್ದ ಕಾಸನ್ನೂ ಖರ್ಚು ಮಾಡಿಕೊಂಡು ಇನ್ನೆಲ್ಲೂ ಕೆಲಸವು ಸಿಗದೇ ಹೋದರೆ ಎಲ್ಲಾದರೂ ಹಗ್ಗ ಹುಡುಕುವ ಸ್ಥಿತಿಯಲ್ಲಿದ್ದಾಗ ಕೊನೆಗೂ ಬಹಳ ನಿರೀಕ್ಷೆಯಂತೆ ಸಿಕ್ಕಿದ ಕೆಲಸ ಬದುಕುವ ಉತ್ಸಾಹವನ್ನು ಮರಳಿಸಿತ್ತು. ಆದರೆ ನನ್ನ ಜೊತೆಯವರಿಗೆಲ್ಲ ಕೆಲಸದ ಆರ್ಡರು ಇಂದು ಸಿಕ್ಕಿದರೆ ನನಗೆ ಸಿಕ್ಕಿದ್ದು ಒಂದು ವಾರದ ನಂತರವೇ...ಎಲ್ಲಿ ಹೋದರೂ ಪ್ರತಿಯೊಂದನ್ನೂ ಹೋರಾಡಿಯೇ ಪಡೆಯಬೇಕೆಂಬ ವಿಧಿ ನನ್ನನ್ನು ಇಲ್ಲಿಯೂ ಬಿಡಲಿಲ್ಲ. ನಾನು ಮದ್ರಾಸಿನಲ್ಲಿ ಕೋರ್ಸುಗಳನ್ನು ಮುಗಿಸಿಕೊಂಡು ಒಂದು ವಾರದ ರಜೆಯ ಮಟ್ಟಿಗೆ ಊರಿಗೆ ಹೋಗಿ ಬರೋಣವೆಂದುಕೊಂಡರೆ ಆಗಿದ್ದೇ ಬೇರೆ - ನನ್ನ ಸಂದರ್ಶನವು ತುಂಬಾ ಚೆನ್ನಾಗಿ ಆಗಿತ್ತು, ಇನ್ನೇನು ಕೆಲಸವೂ ಸಿಗುತ್ತದೆ ಎಂಬ ಸಂತೋಷದಲ್ಲಿ ನಾನು ನನ್ನ ಸರಕು ಸಾಮಾನುಗಳನ್ನೆಲ್ಲ ಯಾರದೋ ಕೋಣೆಯಲ್ಲಿಟ್ಟು ಊರಿಗೆ ಹೋಗಿಬರೋಣವೆಂದುಕೊಂಡೆ, ಆದರೆ ಕೆಲಸದ ಆರ್ಡರುಗಳನ್ನು ಇವರು ಕೊರಿಯರ್‌ನಲ್ಲಿ ಕಳಿಸುತ್ತಾರೆಂದು ಯಾರಿಗೆ ಗೊತ್ತಿತ್ತು, ನಾನು ಎಷ್ಟು ಕಾದರೂ ಬರಲೇ ಇಲ್ಲ. ಒಂದು ದಿನ ಬಹಳ ನಿರಾಶೆಯಿಂದ ಇನ್ನೇನು ಕೆಲಸ ಸಿಗಲೇ ಇಲ್ಲವೆಂದುಕೊಂಡು ಸತ್ತಮುಖವನ್ನು ಹೊತ್ತುಕೊಂಡು ಕೇಳಂಬಾಕ್ಕಂನ ಸಾಫ್ಟ್‌ವೇರ್ ಪಾರ್ಕಿಗೆ ಬಂದೆ, ನನ್ನ ಬ್ಯಾಚಿನವರೆಲ್ಲ ಆಗಲೇ ಕೆಲಸಕ್ಕೆ ಸೇರಿಕೊಂಡು ಒಂದು ವಾರವಾಗಿತ್ತು, ಅವರೆಲ್ಲ ಕಂಠ ಕೌಪೀನವನ್ನು (ಟೈ) ಕಟ್ಟಿಕೊಂಡು ಉತ್ಸಾಹದ ಬುಗ್ಗೆಗಳಾಗಿ ಪುಟಿಯುತ್ತಿದ್ದರು, ನಾನು ಯಾವುದೋ ಟಿ ಶರ್ಟೊಂದನ್ನು ಸಿಗಿಸಿಕೊಂಡು ಹೋದವನಿಗೆ ಬೆಳಗ್ಗೆ ಹನ್ನೊಂದು ಘಂಟೆಗೆ ಕಾಫೀ ಬ್ರೇಕ್‌ನಲ್ಲಿದ್ದ ನನ್ನ ಜೊತೆಯವರೆಲ್ಲ ಸಿಕ್ಕು ಕರುಳು ಕಿವುಚಿಕೊಂಡ ಹಾಗಾಯಿತು. 'ಏನೋ, ನಿನಗಿನ್ನೂ ಕೆಲ್ಸಾ ಸಿಗ್ಲಿಲ್ವಾ?' ಎಂದು ಕಿರಣನೋ ಸತ್ಯಬಾಬೂನೋ ಕೇಳಿದ ನೆನಪು, ಅವರೆಲ್ಲ ಕಾಫೀಗೆ ಕರೆದ್ರೂ ನಾನು ಹೋಗಲಿಲ್ಲ. ನಾನು ಮ್ಯಾನೇಜರ್ ಅರುಳಕುಮಾರನ್ ಕಂಡು ಮಾತಾಡಿಹೋಗಬೇಕೆಂದು ಬಂದವನು, ಅಷ್ಟು ಮಾಡಿದ್ದರೆ ಸಾಕು ಎನ್ನುವ ಸ್ಥಿತಿಯಲ್ಲಿದ್ದೆ.

ಕೊನೆಗೂ ಅರುಳಕುಮಾರನ ದರ್ಶನವಾಯಿತು, 'ನೋಡಿ, ನಿಮ್ಮಲ್ಲಿ ನನ್ನದೊಂದೇ ಪ್ರಶ್ನೆ ಇದೆ, ನೇರವಾಗಿ ಹೇಳಿಬಿಡಿ, ನನಗೆ ಇಲ್ಲಿ ಕೆಲಸ ಸಿಗುತ್ತದೆಯೋ ಇಲ್ಲವೋ' ಎಂದು ಪ್ರಶ್ನೆ ಕೇಳಿದೆನೋ ಅಥವಾ ಮೈಯನ್ನು ಹಿಡಿಯಷ್ಟು ಮಾಡಿಕೊಂಡೆನೋ ಯಾರಿಗೆ ಗೊತ್ತು, ನನ್ನ ಪ್ರಶ್ನೆಗೆ ಉತ್ತರವಾಗಿ ಅರುಳಕುಮಾರನ್ ನಕ್ಕು ಬಿಟ್ಟರು, 'ಆಗಲೇ ಆರ್ಡರ್ ಕಳಿಸಿದ್ದೇವಲ್ಲ, ಇನ್ನೂ ಸಿಕ್ಕಿಲ್ಲವೇ!' ಎಂದರು, ನನಗೆ ಹೋದ ಜೀವ ಬಂದಂತಾಯಿತು, 'ಹೋಗಿ, ಕೋಡಂ‌ಬಾಕ್ಕಂ ಆಫೀಸಿನಲ್ಲಿ ಕೇಳಿ ನೋಡಿ, ಯಾವ ಅಡ್ರಸ್ಸಿಗೆ ಕಳಿಸಿದ್ದಾರೋ...' ಎಂದುದೇ ತಡ, ನನಗೆ ಮನೋವೇಗದಲ್ಲಿ ಕೇಳಂಬಾಕ್ಕಂನಿಂದ ಕೋಡಂಬಾಕ್ಕಂಗೆ ಹೋಗಬೇಕೆನ್ನಿಸಿದರೂ, ಸುಮಾರು ಇಪ್ಪತ್ತು ಮೈಲಿ ಇದ್ದ ಆ ದೂರವನ್ನು ಕ್ರಮಿಸಲು ಎರಡು ಘಂಟೆಗಳೇ ಬೇಕಾದವು.

ಮಧ್ಯಾಹ್ನ ಒಂದೂವರೆಯ ಹೊತ್ತಿಗೆ ಕೋಡಂಬಾಕ್ಕಂ ಆಫೀಸಿಗೆ ಬಂದು ಏರ್‌ಕಂಡೀಷನ್ಡ್ ರಿಸೆಪ್ಶನಿಷ್ಟ್ ಕೊಠಡಿಯಲ್ಲಿ ಒಂದು ನಿಮಿಷ ತಲೆಯನ್ನು ತಣ್ಣಗಾಗಿಸಿಕೊಂಡು ಹೇಮಾ ಗಣೇಶನ್ ಎನ್ನುವವರ ಹತ್ತಿರ ಹೋಗಿ ನನಗಿನ್ನೂ ಕೆಲಸದ ಆರ್ಡರ್ ಸಿಕ್ಕಿಲ್ಲ ಎಂದು ತೋಡಿಕೊಂಡೆ, ಆಕೆ ಅಲ್ಲಿಯೇ ಹತ್ತಿರದಲ್ಲಿದ್ದ ಕೊರಿಯರ್ ಅಂಗಡಿಯಲ್ಲಿ ವಿಚಾರಿಸಿ ಎಂದು ವಿಳಾಸಕೊಟ್ಟರು. ಅಲ್ಲಿಯೇ ಹತ್ತಿರವಿದ್ದ ಅಂಗಡಿಗೆ ಲಗುಬಗೆಯಿಂದ ನಡೆದರೆ ಅಲ್ಲಿನ ಕ್ಲರ್ಕುಗಳಿಗೆ ನಾನು ಯಾವ ಭಾಷೆಯಲ್ಲಿ ಹೇಳಲಿ, ನನಗೆ ತಮಿಳು ಬಾರದು, ಅವರಿಗೆ ಬೇರೆಯೇನೂ ತಿಳಿಯದು...ಕೊನೆಗೆ ಇದ್ದವರಲ್ಲೇ ನನ್ನ ಮಾತನ್ನು ಲಕ್ಷ್ಯ ಕೊಟ್ಟು ಕೇಳುತ್ತಿದ್ದ ಮತಿವಣ್ಣನ್‌ಗೆ ಸ್ವಲ್ಪ ಸ್ವಲ್ಪ ಇಂಗ್ಲೀಷಿನಲ್ಲೇ ನಿಧಾನವಾಗಿ ಬರೆದು ವಿವರಿಸಿದಾಗ 'ಓ, ಅದಾ...ಗಾಜಿಯಾಬಾದಿಗೆ ಹೋಗಿ ಬಿಟ್ಟಿದೆ!' ಎಂದು ಬಿಟ್ಟ. ಎತ್ತಣ ಆನವಟ್ಟಿ, ಎತ್ತಣ ಗಾಜಿಯಾಬಾದ್? ನಾನು ಉತ್ತರಪ್ರದೇಶದ ಬನಾರಸ್‌ನಲ್ಲೇನೋ ಇದ್ದವನು, ಆದರೆ ಗಾಜಿಯಾಬಾದಿಗೂ ನನಗೂ ಸಂಬಂಧವಿಲ್ಲವೆಂದುಕೊಂಡು ಮುಖ ಸಣ್ಣಗೆ ಮಾಡಿಕೊಂಡಾಗ, ಮತಿವಣ್ಣನು 'ಫೋನ್ ಮಾಡಿ ಕೇಳುತ್ತೇನೆ...' ಎಂದು ಹೇಳಿಬಿಟ್ಟ. ನಾನು ಏನಾದರೂ ಇನ್‌ಫರ್‌ಮೇಷನ್ ಸಿಕ್ಕಿದರೆ ಹೇಮಾಗಣೇಶನ್‌ಗೆ ಹೇಳು ಎಂದು ಆಕೆಯ ನಂಬರ್ ಕೊಟ್ಟು ಪುನಃ ಹೆಡ್ ಆಫೀಸಿಗೆ ಬಂದೆ. ಒಳಗಿನ ಎ.ಸಿ. ಗಾಳಿಗೂ ನನ್ನ ಮನಸ್ಸನ್ನು ತಣ್ಣಗೆ ಮಾಡಲಾಗಲಿಲ್ಲ, ಭಾಷೆ ಬರದ, ಇತರರ ಬವಣೆಯನ್ನು ಕೇಳಲು ಪುರುಸೊತ್ತಿರದ ಯಾರಿಗೂ ನನ್ನ ಕಷ್ಟವನ್ನೂ ಹೇಳಿಕೊಳ್ಳಲಿಲ್ಲ, ಕೋಡಂಬಾಕ್ಕಂ ಆಫೀಸಿನ ಪಕ್ಕದಲ್ಲಿದ್ದ ಥಿಯೇಟರ್‌ನಲ್ಲಿ ಪ್ರದರ್ಶನಕ್ಕಿದ್ದ 'ಟಾಟ್ಟಾ ಬಿರ್ಲಾ' ಚಿತ್ರದ ಮಾರ್ನಿಂಗ್ ಶೋ ಮುಗಿದು ಚಿತ್ರ ಮಂದಿರದ ಮುಂದಿದ್ದ ರಸ್ತೆ ಸ್ವಲ್ಪ ಹೊತ್ತು ಜಾತ್ರೆಯ ಸಂಭ್ರಮವನ್ನುಭವಿಸಿ ಮತ್ತೆ ಖಾಲಿಯಾಯಿತು, ನಾನು ಹೊರಗಡೆಯೇ ಸುಮ್ಮನೇ ನಿಂತು, ಕೂತು, ಸ್ವಲ್ಪ ಹೊತ್ತು ಟೈಂ ಪಾಸು ಮಾಡಲು ನೋಡಿದೆ, ವಾಚಿನಲ್ಲಿದ್ದ ಸೆಕೆಂಡ್ ಮುಳ್ಳು ಎಂದಿಗಿಂತಲೂ ನಿಧಾನವಾಗಿ ಚಲಿಸುವಂತೆ ಕಂಡು ಬಂದಿತು.

ಮಧ್ಯಾಹ್ನ ಎರಡೂವರೆ ಆಗುತ್ತಲೇ ರಿಯಾಲಿಟಿ ಕಿಕ್ ಕೊಡತೊಡಗಿತು, ಬೆಳಿಗ್ಗೆ ಶಾಸ್ತ್ರಕ್ಕೆ ತಿಂಡಿ ತಿಂದಂತೆ ಮಾಡಿ ಕೇಳಂಬಾಕ್ಕಂಗೆ ಓಡಿದವನು ಎರಡೂವರೆವರೆಗೆ ಒಂದು ತೊಟ್ಟು ನೀರನ್ನೂ ಬಾಯಲ್ಲಿಟ್ಟಿರಲಿಲ್ಲ, ಇನ್ನು ರಾತ್ರಿ ಇಲ್ಲೆ ಉಳಿಯಬೇಕೆಂದರೇ ಒಂದೇ ಕೇಳಂಬಾಕ್ಕಂಗೆ ಹೋಗಿ ಅಲ್ಲಿ ಈಗಾಗಲೇ ಕೆಲಸಕ್ಕೆ ಸೇರಿರುವ ಯಾರದ್ದಾದರೂ ಜೊತೆಯಲ್ಲಿ ಅತಿಥಿಯಾಗಿ ನೆಲದ ಮೇಲೆ ಮುದುರಿಕೊಳ್ಳಬೇಕು ಇಲ್ಲಾ ಮದ್ರಾಸು ನಗರದ ಹೊರ ಪ್ರಾಂತ್ಯದಲ್ಲಿರುವ ಪುಳಿಚೆಲ್ಲೂರಿನಲ್ಲಿರುವ ನನ್ನ ಸ್ನೇಹಿತ ಪ್ರಕಾಶನ ಮನೆಗೆ ಹೋಗಬೇಕು, ಹೊರಗಡೆ ರೂಮು ಮಾಡೋಣವೆಂದರೆ ಕೈಯಲ್ಲಿ ಹೇಳಿಕೊಳ್ಳುವಷ್ಟೇನೂ ಕಾಸಿಲ್ಲ. ಕೇಳಂಬಾಕ್ಕಂಗೆ ಅಥವಾ ಪ್ರಕಾಶನ ಮನೆಗೆ ಹೋದರೆ ಅಲ್ಲಿರುವವರಿಗೆಲ್ಲ ನನ್ನ ಕೆಲಸವಿಲ್ಲದ ಪೆಚ್ಚುಮೋರೆಯನ್ನು ತೋರಿಸಿ ಕಥೆಯನ್ನು ಹೇಳಬೇಕಾಗುತ್ತದೆ, ಹೊರಗೆ ಹೋಟೇಲಿನಲ್ಲಿದ್ದರೆ ಕೈಲಿದ್ದ ದುಡ್ಡು ಎಷ್ಟು ದಿನ ಬಂದೀತು, ಇನ್ನೇನು ಮಾಡುವುದು ಎಂದು ಕಳವಳವಾಗತೊಡಗಿತು. ಸುಮಾರು ಮೂರು ಘಂಟೆಯಾಗುತ್ತಿದ್ದಂತೆಯೇ, ಮತಿವಣ್ಣನ್ ನನ್ನನ್ನು ಹುಡುಕಿಕೊಂಡು ಓಡೋಡಿ ಬಂದ 'ಶಾರ್ (ಅವನ ಸರ್ ಉಚ್ಚಾರ), ಸಿಕ್ಕಿತು!' ಎಂದ. ಅವನ ಕೈಯಲ್ಲಿ ನನ್ನ ಕಳೆದುಹೋದ ಆರ್ಡರ್ 'ಹೇಗೆ ಸತಾಯಿಸಿದೆ!' ಎಂದು ನನ್ನನ್ನು ಅಣಕಿಸಿ ನಗುತ್ತಿತ್ತು. ಅವನ ಪ್ರಕಾರ ಆನವಟ್ಟಿಗೆ ಕಳಿಸಿದ ಕೊರಿಯರ್ ಶಿವಮೊಗ್ಗದ ವರೆಗೆ ಹೋಗಿ ಅಲ್ಲಿಂದ ಮುಂದೆ ಕೊರಿಯಲ್ ಸರ್ವೀಸ್ ಇಲ್ಲ ಎಂದು ಹಣೆಯ ಮೇಲೆ ಬರೆಸಿಕೊಂಡು ವಾಪಾಸು ಮದ್ರಾಸಿಗೆ ಬಂದು ಯಾವುದೋ ಅದೃಶ್ಯ ಶಕ್ತಿಯ ಬಲಕ್ಕೊಳಗಾಗಿ ಉತ್ತರ ಪ್ರದೇಶದ ಗಾಜಿಯಾಬಾದಿಗೆ ಹೋಗಿ ಅಲ್ಲಿ ಪುನಃ ಡೆಲಿವರಿಯಾಗದೇ ಮತ್ತೆ ಮದ್ರಾಸಿಗೆ ಬಂದು ಮತಿವಣ್ಣನ ಕೈಗೆ ಸಿಕ್ಕಿತ್ತು, ನಾನು ವಿಳಾಸವನ್ನು ನೋಡಿದೆ ಎಲ್ಲವೂ ಸರಿಯಾಗೇ ಇತ್ತು! ನಾನಂತೂ ಅವನ ಕೈಯನ್ನು ಹಿಡಿದುಕೊಂಡು ನನಗೆ ಬಂದ ಭಾಷೆಗಳಲ್ಲಿ ಥ್ಯಾಂಕ್ಯೂ ಎಂದಿದ್ದೇ ಎಂದಿದ್ದು, ಅವನಿಗೂ ಖುಷಿಯಾಗಿತ್ತು - ನನ್ನಿಂದ ಹಣವನ್ನು ನಿರೀಕ್ಷಿಸಲೂ ಇಲ್ಲ, ನಾನು ಅವೆಲ್ಲ ಫಾರ್ಮಾಲಿಟಿಗಳನ್ನು ಮೀರಿ ಜೊಳ್ಳು ಮುಖದಲ್ಲಿ ನಗೆಯನ್ನು ಸೂಸಲು ಪ್ರಯತ್ನ ಪಡುತ್ತಿದ್ದೆ. ನನ್ನ ಕೈಗೆ ಕೆಲಸದ ಆರ್ಡರ್ ಸಿಗುತ್ತಲೂ ನಾನು ಒಬ್ಬ ಅಫೀಷಿಯಲ್ ಆಗಿ ಹೋಗಿದ್ದೆ, ಕಂಪನಿಯ ಷಟಲ್, ಫೋನು ಮತ್ತಿತರ ಸವಲತ್ತುಗಳನ್ನು ಬಳಸಿಕೊಳ್ಳುವಲ್ಲಿ ಯಾವ ಮುಜುಗರವೂ ಇರಲಿಲ್ಲ!

***

ಹೀಗೆ ಕೆಲಸಕ್ಕೆ ಸೇರಿ ಮೂರು ನಾಲ್ಕು ತಿಂಗಳುಗಳಲ್ಲಿ ಅಟ್ಟ ಹತ್ತಿದ ಮೇಲೆ ಏಣಿಯನ್ನು ನಿರ್ಲಕ್ಷಿಸುವ ಪ್ರಕ್ರಿಯೆ ನಮ್ಮಲ್ಲಿ ಶುರುವಾಗಿತ್ತು. ಪೆಂಟಾಫೋರ್‌ನಲ್ಲಿ ಅಮೇರಿಕಕ್ಕೆ ಕಳಿಸುವುದಿಲ್ಲವೆಂತಲೂ, ಕಳಿಸಿದರೂ ಮೂರು ವರ್ಷಗಳ ಮಹಾ ಬಾಂಡೊಂದನ್ನು ಸೈನ್ ಮಾಡಬೇಕೆಂತಲೂ, ಜಪಾನು, ಥೈಲಾಂಡಿಗೆ ಹೋಗಬಹುದೆಂತಲೂ ಒಂದಿಷ್ಟು ಸುದ್ದಿಗಳು, ಒಂದಿಷ್ಟು ಗಾಳಿ ಮಾತುಗಳು ಅಲ್ಲಲ್ಲಿ ಅನುರಣಿಸತೊಡಗಿದವು. ನಾನು ನನ್ನ ಆಫೀಸಿನ ಚೀಲದಲ್ಲಿ ನನ್ನ ರೆಸ್ಯೂಮೆಯ ಹತ್ತಾರು ಪ್ರತಿಗಳನ್ನೂ, ಒಂದೈವತ್ತು ಬಿಳಿ ಲಕೋಟೆಗಳನ್ನೂ, ಹಲವಾರು ಗಾಂಧೀಮುಖವಿರುವ ಎರಡು ರೂಪಾಯಿ ಸ್ಟ್ಯಾಂಪುಗಳನ್ನು ಇಟ್ಟುಕೊಂಡು ಓಡಾಡತೊಡಗಿದೆ - ಪ್ರತೀ ದಿನ ರಾತ್ರಿ ರೆಸ್ಯೂಮೆ ತಿದ್ದುವುದು, ಪ್ರಿಂಟ್ ಹಾಕುವುದು, 'ಎಕ್ಸ್‌ಪ್ರೆಸ್ ಕಂಪ್ಯೂಟರ್' ಹಾಗೂ 'ಡೇಟಾಕ್ವೆಸ್ಟ್' ಮ್ಯಾಗಜೀನುಗಳಲ್ಲಿ ಬಂದ ಪ್ರತಿಯೊಂದು ಕೆಲಸಕ್ಕೂ ಅಪ್ಲೈ ಮಾಡತೊಡಗಿದೆ, ಅದಕ್ಕುತ್ತರವಾಗಿ ಎನ್ನುವಂತೆ ದಿನಕ್ಕೆರಡು ಪ್ರಿ ಇಂಟರ್‌ವ್ಯೂವ್ ಕರೆಗಳು ಬರತೊಡಗಿದವು - ಲೈಬ್ರರಿಯಲ್ಲಿ ಕೆಲಸ ಮಾಡುತ್ತಿದ್ದ ರೋಸಲಿನ್‌ಳೂ, ಫ್ರಂಟ್ ಡೆಸ್ಕ್‌ನಲ್ಲಿ ಕೆಲಸಮಾಡುತ್ತಿದ್ದ - ಮುಖ ನೆನಪಿಗೆ ಬಂದು ಹೆಸರು ನೆನಪಿಗೆ ಬರದ - ಮತ್ತೊಂದು ಹುಡುಗಿಯೂ ನನ್ನ ಅಗದೀ ಗೆಳೆಯರಾದರು!

ಇವಕ್ಕೆಲ್ಲ ಉತ್ತರವೆನ್ನುವಂತೆ ಒಂದು ದಿನ ಆಫೀಸಿನ ಸಮಯದಲ್ಲೇ ಹನ್ನೊಂದು ಘಂಟೆಯ ಕಾಫೀ ಬ್ರೇಕ್‌‌ನಲ್ಲಿ ಅಟ್ಲಾಂಟಾದ ಒಂದು ಕಂಪನಿ ನನ್ನನ್ನು ಇಂಟರ್‌ವ್ಯೂವ್ ಮಾಡಿತು. ರೋಸಲಿನ್‌ಳ ಕೃಪೆಯಿಂದ ನಾನು ಈ ಕಾಲೊಂದನ್ನು ಯಾರೂ ಹೆಚ್ಚು ಓಡಾಡದ ಮೂಲೆಯ ಕೊಠಡಿಯೊಂದರಲ್ಲಿ ತೆಗೆದುಕೊಳ್ಳುವಂತಾಯಿತು, ಇಂಟರ್‌ವ್ಯೂವ್ ಮಾಡಿ ನನಗೆ ಆ ಕ್ಷಣದಲ್ಲೇ ಕೆಲಸವನ್ನೂ ಆಫರ್ ಮಾಡಿ ಆರ್ಡರ್ ಕಳಿಸುತ್ತೇವೆ ಎಂದು ಬಿಟ್ಟರು, ನನಗಂತೂ ಅಮೇರಿಕೆಗೆ ಹಾರಿದಷ್ಟೇ ಸಂತೋಷವಾಯಿತು, ಆದರೆ ಆ ಸಂತೋಷ ಹೆಚ್ಚು ಹೊತ್ತು ಇರಲಿಲ್ಲ.

ಆಟ್ಲಾಂಟಾ ಕಂಪನಿಯವರು ಅಪಾಯಿಂಟ್‌ಮೆಂಟ್ ಆರ್ಡರನ್ನು ಫ್ಯಾಕ್ಸ್ ಕಳಿಸುತ್ತೇವೆ ಎಂದು ಹೇಳಿದ್ದರಿಂದ (ಸದ್ಯ ಕೊರಿಯರ್ ಅಲ್ಲ), ನಾನು ಪೆಂಟಾಪೋರಿನ ಫ್ಯಾಕ್ಸ್ ನಂಬರ್‌ನ್ನು ಕೊಟ್ಟು ಭಾರತದ ಸಮಯ ಸಂಜೆ ಏಳೂವರೆಯ ಮೇಲೆ ಫ್ಯಾಕ್ಸ್ ಮಾಡಿ ಎಂದು ಹೇಳಿದ್ದರೆ, ನಾನು ಎಷ್ಟು ಕಾದರೂ ಆ ಸಂಜೆ ಫ್ಯಾಕ್ಸ್ ಬರದೇ ಹೋಯಿತು! ಹೀಗೆ ಏನಾದರೊಂದು ತೊಂದರೆಯಿಲ್ಲದಿದ್ದರೆ ಹೇಗೆ - ರಾತ್ರಿ ಬರುವ ಫ್ಯಾಕ್ಸ್ ಮುಂಜಾನೆ ಎಂಟೂವರೆಗೆ ಬಂದು ನಮ್ಮ ಎಚ್.ಆರ್. ಅಧಿಕಾರಿಗೇ ಸಿಗಬೇಕೆ? ಅಲ್ಲಿಂದ ಶುರುವಾಯಿತು ನೋಡಿ ನನ್ನ ಕಷ್ಟ - ನನಗೆ ಅಟ್ಲಾಂಟಾದಿಂದ ಕೆಲಸ ಆರ್ಡರು ಹಾಡು ಹಗಲೇ ಅಫೀಸಿಗೆ ಬರುವುದು ಎಂದರೇನು, ಅದು ಹ್ಯೂಮನ್ ರಿಸೋರ್ಸ್ ಮುಖ್ಯಸ್ಥನಿಗೆ ಸಿಗುವುದು ಎಂದರೇನು, ನನ್ನ ಬಣ್ಣವೆಲ್ಲ ಬಟಾ ಬಯಲಾಯಿತು, ಇನ್ನೇನು ನನ್ನ ಕಥೆ ಮುಗಿಯಿತು ಎಂದುಕೊಂಡೆ - ಮೊದಲೇ ನನ್ನ ಪೇಪರುಗಳನ್ನೆಲ್ಲ ಪೆಂಟಾಫೋರ್‌ನವರು ತೆಗೆದುಕೊಂಡಿದ್ದರು, ಎಲ್ಲಾದರೂ ಕಳಿಸುತ್ತೇವೆ, ಬಾಂಡಿಗೂ ಸಹಿ ಮಾಡಿರೆಂದು ಅದಕ್ಕೂ ಸಹಿ ಹಾಕಿಸಿಕೊಂಡಿದ್ದರು, ನನ್ನನ್ನು ಮೆಚ್ಚಿಕೊಂಡಿದ್ದವರೆಲ್ಲ, ತಮ್ಮ ನೋಟದಲ್ಲೇ ಚುಚ್ಚುವಂತಾದರು - ಇಷ್ಟೆಲ್ಲಾ ಆದರೂ ನನ್ನ ಹೆಸರಿಗೆ ಬಂದ ಅಪಾಯಿಂಟ್‌ಮೆಂಟ್ ಆರ್ಡರನ್ನು ನನಗೇ ಕೊಟ್ಟಿದ್ದರು, ಅದನ್ನು ತೆಗೆದುಕೊಂಡು ಏನು ಮಾಡುವುದು ಬಿಡುವುದೂ ಗೊತ್ತಾಗಲಿಲ್ಲ. ಅದರಲ್ಲಿ ಮುದ್ರಿಸಿಕೊಂಡ H1b ಹಾಗೂ $41,000 ವರ್ಷದ ಸಂಬಳ ಇನ್ನೂ ಕಣ್ಣ ಮುಂದೆಯೇ ಇದ್ದಂತಿದೆ.

***

ಪೆಂಟಾಫೋರಿನ ಮ್ಯಾನೇಜಿಂಗ್ ಡೈರೆಕ್ಟರ್ ಚಂದ್ರಶೇಖರ್ ಮಹಾ ಒಳ್ಳೆಯ ಮನುಷ್ಯ, ಆದರೆ ಕೇಳಂಬಾಕ್ಕಂನಲ್ಲಿ ಅವರ ಸೆಕ್ರೆಟರಿ ಇದ್ದಾನಲ್ಲ ಅವನು ಒಂಥರಾ ಮುಸುರಿ ಕೃಷ್ಣಮೂರ್ತಿಯ ಸ್ವಭಾವದವನು. ದೇವರು ಕೊಟ್ಟರೂ ಪೂಜಾರಿ ಕೊಡ ಎಂಬಂತೆ ಚಂದ್ರಶೇಖರ್ ನಮ್ಮನ್ನು ನೋಡಿ ನಕ್ಕರೂ ಈ ಮನುಷ್ಯ ನಗುವುದಿಲ್ಲ - ಎಲ್ಲಿ ಬಾಯಿ ತುಂಬಿಕೊಂಡ ಹಲ್ಲುಗಳು ಉದುರಿಬಿಡುತ್ತವೋ ಎಂಬಂತೆ ಯಾವಾಗಲೂ ಮುಖವನ್ನು ಗಂಟು ಹಾಕೇ ಇರುತ್ತಿದ್ದ. ನಾನು ಬಹಳ ಸಮಾಲೋಚನೆ ಮಾಡಿ ಈ ಸಂಕಷ್ಟದಿಂದ ಹೊರಬರಲು ಉಪಾಯವೊಂದನ್ನು ರೂಪಿಸಿದೆ, ಅದರ ಪ್ರಕಾರ ನನ್ನ ಫ್ಯಾಕ್ಸ್‌ನಲ್ಲಿ ಬಂದಿದ್ದ ಆರ್ಡರ್‌ನ್ನು ಹಿಡಿದುಕೊಂಡು ಮಾರನೇ ದಿನವೆ ಕಂಪನಿಯ ಷಟಲ್‌ನ್ನು ಹತ್ತಿ ಕೋಡಂಬಾಕ್ಕಂ ಆಫೀಸಿಗೆ ಬಂದೆ. ಹೆಡ್ ಅಫೀಸಿನಲ್ಲಿ ಚಂದ್ರಶೇಖರ್ ಅವರ ಸೆಕ್ರೆಟರಿ ನನ್ನನ್ನು ಏನು ಮಾಡಿದರೂ ಅಪಾಯಿಂಟ್‌ಮೆಂಟ್ ಕೊಡಲೊಲ್ಲಳು - ಅವಳಿಗೆ ಕಾಲಿಗೆ ಬೀಳುವಂತೆ ಬೇಡಿಕೊಂಡರೂ ಜುಪ್ಪಯ್ಯಾ ಎನ್ನಲಿಲ್ಲ, 'ಎರಡೇ ನಿಮಿಷ ಅವರ ಹತ್ತಿರ ಮಾತನಾಡಿ ಹೊರಬರುತ್ತೇನೆ' ಎಂದು ದೈನ್ಯದಿಂದ ಕೇಳಿದರೂ ಆಕೆ ಒಪ್ಪಲೇ ಇಲ್ಲ, ಅದೇ ಸಮಯಕ್ಕೆ ಎಲ್ಲಿಗೋ ಹೊರಟುನಿಂತಂತೆ ಕಂಡು ಬಂದ ಚಂದ್ರಶೇಖರ್ ಅವರೇ ತಮ್ಮ ಆಫೀಸಿನಿಂದ ಹೊರಗೆ ಬಂದರು, ನಾನು ಸ್ಯಾಲ್ಮನ್‌ಗೆ ಕಾಯುತ್ತಿದ್ದ ಕರಡಿಯಂತೆ ಬಂದ ಅವಕಾಶವನ್ನು ಗಪ್ಪನೆ ಹಿಡಿದುಕೊಂಡು, 'ನಿಮ್ಮಲ್ಲಿ ಒಂದು ಮುಖ್ಯ ವಿಷಯವನ್ನು ಮಾತನಾಡಬೇಕು, ಒಂದು ನಿಮಿಷ ಸಮಯವಿದೇಯೇ?' ಎಂದು ಬಿಟ್ಟೆ, ಇದ್ದುದರಲ್ಲಿಯೇ ಬೆಳ್ಳಗಿದ್ದ ನನ್ನ ಬಿಳಿ ಅಂಗಿಯೋ, ಮುಖದ ಮೇಲೆ ಮನೆ ಮಾಡಿದ್ದ ಕಾತರತೆಯೋ ಮತ್ತೇನೋ ಕ್ಲಿಕ್ ಆಗಿ 'ಸರಿ' ಎಂದು ಬಿಟ್ಟರು, ನಾನು ಅವರ ಜೊತೆಯಲ್ಲಿ ಒಳಗೆ ಹೋದವನು,

'ನಿಮ್ಮಲ್ಲಿ ಮೂರು ವಿಷಯಗಳನ್ನು ಹೇಳುವುದಕ್ಕಿದೆ:
- ನನ್ನ ತಂದೆಯವರು ತೀರಿಕೊಂಡಿದ್ದಾರೆ, ನನಗೆ ಮನೆಯಲ್ಲಿ ತುಂಬಾ ಜವಾಬ್ದಾರಿಯಿದೆ
- ನನ್ನ ಕೈಯಲ್ಲಿ ಅಟ್ಲಾಂಟಾದಿಂದ ಕೆಲಸಕ್ಕೆ ಬಂದು ಸೇರಿಕೊಳ್ಳುವಂತೆ ಅಪಾಯಿಂಟ್‌ಮೆಂಟ್ ಆರ್ಡರು ಕಳಿಸಿರುವುದಿದೆ ನೀವೇ ನೋಡಿ (ಎಂದು ಮುದುರಿರುವ ಪತ್ರವನ್ನು ಅವರಿಗೆ ಕೊಟ್ಟು)
- ಕೇಳಂಬಾಕ್ಕಂನಲ್ಲಿ ನನ್ನ ಪೇಪರುಗಳನ್ನು ಕೊಡುತ್ತಿಲ್ಲ' ಎಂದೆ.

ಚಂದ್ರಶೇಖರ್ ಅವರು ಒಂದೆರಡು ಚಿಕ್ಕ ಪ್ರಶ್ನೆಗಳನ್ನು ಕೇಳಿದರೇ ಹೊರತು ಮತ್ತೆನನ್ನೂ ಮಾತನಾಡಲಿಲ್ಲ, ಆ ಅಪಾಯಿಂಟ್‌ಮೆಂಟ್ ಪತ್ರವನ್ನು ಒಮ್ಮೆ ಓದಿ, ಅದರ ಮಗ್ಗುಲನ್ನು ತಿರುಗಿಸಿ 'ಇವರ ಪೇಪರುಗಳನ್ನು ರಿಲೀಸ್ ಮಾಡಿ' ಎಂದು ಕೇಳಂಬಾಕ್ಕಂ ಕ್ಲರ್ಕಿನ ಹೆಸರಿಗೆ ಷರಾ ಬರೆದುಬಿಟ್ಟರು! ನಾನು ಮತ್ತೆ-ಮತ್ತೆ ಥ್ಯಾಂಕ್ಯೂಗಳನ್ನು ಹೇಳಿ ಅಲ್ಲಿಂದ ಹೊರಬಂದೆ. ಸೆಕ್ರೆಟರಿ 'ಏನೋ ನಡೆಯಬಾರದು ನಡೆದುಹೋಯಿತೋ' ಎನ್ನುವಂತೆ ನನ್ನ ಸಂಭ್ರಮವನ್ನು ನೋಡಿ ಕಣ್ಣನ್ನು ಕಿರಿದುಮಾಡಿಕೊಂಡಳು.

***

ಕೇಳಂಬಾಕ್ಕಂ ಷಟಲ್ ಬಸ್ಸು ಹತ್ತಿದ ನನ್ನ ಸಂತೋಷ ಹೇಳತೀರದು - ಯಾರೊಡನೆಯೂ ಈ ವಿಷಯವನ್ನು ಹೇಳದೇ ದಾರಿಯುದ್ದಕ್ಕೂ ಇಲ್ಲಿನ ಕ್ಲರ್ಕ್‌ಗೆ ಹೇಗೆ ಮಾತನಾಡಿಸಬೇಕು ಎಂದುಕೊಳ್ಳುತ್ತಲೇ ಬಂದೆ, ಚಂದ್ರಶೇಖರ್ ಅವರು ಷರಾ ಬರೆದುಕೊಟ್ಟ ಪತ್ರದ ಫೋಟೋಕಾಪಿಯೊಂದನ್ನು ತೆಗೆದು ನನ್ನ ಬಳಿ ಇಟ್ಟುಕೊಂಡು, ಬಂದು ಸ್ವಲ್ಪ ಹೊತ್ತಿನಲ್ಲಿ ಅವನ ಕಛೇರಿಗೆ ನುಗ್ಗಿ, ಒರಿಜಿನಲ್ ಅನ್ನು ಆ ಕ್ಲರ್ಕಿನ ಮುಂದೆ ತೋರಿಸಿದೆ, ಅವನು ಅದನ್ನು ಎರಡು ಮೂರು ಬಾರಿ ತಿರುತಿರುಗಿಸಿ ನೋಡಿದವನು ಮುಖದ ಬಣ್ಣವನ್ನೇ ಬದಲಾಯಿಸಿಕೊಂಡು ತೀರಾ ಸಪ್ಪಗಾಗಿ ಬಿಟ್ಟ, ಇನ್ನೂ ಹುಡುಗನಾಗಿದ್ದುದರಿಂದ ಹಾರ್ಟ್ ಅಟ್ಯಾಕ್ ಆಗಲಿಲ್ಲ (ನನ್ನ ಪುಣ್ಯ), ಸುಮಾರು ಹೊತ್ತು ಮೌನವಾಗಿ ಯೋಚಿಸಿದವನೇ ಏನೂ ಮಾತನ್ನಾಡದೇ ನನ್ನ ಪೇಪರುಗಳನ್ನೂ, ಮೊದಲೇ ಸಹಿ ಹಾಕಿಸಿಕೊಂಡ ಬಾಂಡಿನ ನಕಲನ್ನು ತಾನಿಟ್ಟುಕೊಂಡು ಒರಿಜಿನಲ್ ಅನ್ನು ನನಗೆ ಕೊಟ್ಟ. 'ಯಾರಿಗೂ ಹೇಳಬೇಡ' ಎಂದು ಹೆದರಿಕೆಯ ಎಚ್ಚರಿಕೆಯನ್ನು ನೀಡುವುದು ಮರೆಯಲಿಲ್ಲ.

ಹೀಗೆ ಮದ್ರಾಸಿನಿಂದ ಬಿಡುಗಡೆ ನೀಡಿದ ಅಟ್ಲಾಂಟ ಕಂಪನಿಯನ್ನು ನಾನು ಸೇರಿಕೊಳ್ಳಲಿಲ್ಲ, ಇನ್ನೂ ಒಂದೆರಡು ದಿನಗಳನ್ನು ಕಳೆದರೆ ಮತ್ತೇನಾದರೂ ಆಫರ್ ಬರುತ್ತವೇನೋ ಎಂದು ನಿರೀಕ್ಷಿಸುತ್ತಿದ್ದವನಿಗೆ ಬಾಂಬೆಯ ಡೇಟಾ ಮ್ಯಾಟಿಕ್ಸ್ ಕಂಪನಿಯನ್ನು ಸೇರಿ ಬಾಂಬೆಯ ಬದುಕನ್ನು ನೋಡುವಂತಾಯಿತು - ಅದರ ಬಗ್ಗೆ ಮುಂದೆಲ್ಲಾದರೂ ಬರೆಯುತ್ತೇನೆ.

***

ನನ್ನಲ್ಲಿಯ ಈ ಅವಕಾಶವಾದಿತನ, ಸುತ್ತಲನ್ನು ಸ್ವಂತದ ಉಪಯೋಗಕ್ಕೆ ಬಗ್ಗಿಸಿಬಿಡುವ ಬುದ್ಧಿ ಎಲ್ಲಿಂದ ಬಂದಿತೋ ಎಂದು ಎಷ್ಟು ತಲೆ ತುರಿಸಿಕೊಂಡರೂ ಇಂದಿಗೂ ತಿಳಿದಿಲ್ಲ - ಆದರೆ, ಇವುಗಳೆಲ್ಲದರ ಹಿಂದೆ ತಂದೆಯನ್ನು ಚಿಕ್ಕ ವಯಸ್ಸಿನಲ್ಲೆ ಕಳೆದುಕೊಂಡಿದ್ದೂ, ಬಡತನದ ಬೇಗೆಯಲ್ಲಿ ಬೆಂದಿದ್ದೂ ಇವೆಲ್ಲವೂ ಸಾಕಷ್ಟು ಪರಿಣಾಮವನ್ನಂತೂ ಬೀರಿವೆ.

Thursday, May 18, 2006

ಬನಾರಸ್ಸಿನ ಬದುಕು - ಭಾಗ ೧

ನಮ್ಮೂರು ಆನವಟ್ಟಿಯನ್ನು ಬಿಟ್ಟರೆ, ನನಗೆ ಬದುಕಿನಲ್ಲಿ ಹಲವು ದರ್ಶನಗಳನ್ನು ಮಾಡಿಸಿದ ಊರು ಬನಾರಸ್, ಅಲ್ಲಿದ್ದದ್ದು ಕೇವಲ ಹನ್ನೆರಡೇ ತಿಂಗಳಾದರೂ ಅದು ನನ್ನ ಮಟ್ಟಿಗೆ ಬಹಳ ದೊಡ್ಡದು. ಶಿವಮೊಗ್ಗದಿಂದ ಕಣ್ಣಿನಲ್ಲಿ ಹಲವು ಆದರ್ಶಗಳನ್ನು ತುಂಬಿಕೊಂಡು ಬೆನ್ನಿನ ಮೂಟೆಯ ತುಂಬಾ ಸಂಶೋಧನೆ ನಡೆಸಬೇಕು ಎನ್ನುವ ಉತ್ಸಾಹ ಹೇರಿಕೊಂಡು ಮುಗಿಲಿಗೆ ಮುಖ ಮಾಡಿಕೊಂಡಿದ್ದ ನನ್ನನ್ನು ಭೂಮಿಗೆ ತಂದಿದ್ದೇ ಬನಾರಸ್ಸಿನ ಬದುಕು. ಅಲ್ಲಿ ಸಿಕ್ಕ ಹೊಸ ಚೇತನ, ಹುರುಪು ಹಾಗೂ ನಾನು ಬೇರೆಯವರನ್ನು ನೋಡುವ ರೀತಿ ಹಾಗೂ ನನ್ನನ್ನು ಬೇರೆಯವರು ನೋಡುವ ಬಗೆ ಎಲ್ಲವೂ ಬದಲಾದವು.

***

ನಾನು ಅಲ್ಲಿ ಮೊದಲು ಎದುರಿಸಿದ ಸಂಕಷ್ಟವೆಂದರೆ ಇರುವುದಕ್ಕೊಂದು ಹಾಸ್ಟೆಲ್ ಸೀಟನ್ನು ಪಡೆದುಕೊಳ್ಳುವುದು. ಅಲ್ಲಿ ಹಾಸ್ಟೆಲ್ ಸೀಟುಗಳನ್ನು ಎಂ. ಎಸ್ಸಿ.ಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ತೀರ್ಮಾನಿಸುತ್ತಿದ್ದರು. ಆದಿನ ನಾನು ನಮ್ಮ ಡಿಪಾರ್ಟ್‌ಮೆಂಟಿನಲ್ಲಿ ಪ್ರಕಟವಾದ ಪಟ್ಟಿಯಲ್ಲಿ ನನ್ನ ಹೆಸರು ಇರಲಿಲ್ಲವಾದ್ದರಿಂದ - ಏನೋ ಕಣ್ದೋಷದಿಂದಾಗಿ ತಪ್ಪಾಗಿರಬಹುದೇನೋ ಎಂದು ಹೆಡ್‌ಕ್ಲರ್ಕ್ ತಿವಾರಿಯವರನ್ನು ಕೇಳಿದ್ದಕ್ಕೆ ಅವರನ್ನು ಕೇಳಿ ಎಂದು ಮೂಲೆಯಲ್ಲಿ ಮೂಗಿನ ಮೇಲೆ ಕನ್ನಡಕವನ್ನಿರಿಸಿ ಯಾವುದೋ ಫೈಲಿನಲ್ಲಿ ತಲ್ಲೀನರಾದ ಶ್ರೀವಾತ್ಸವನನ್ನು ತೋರಿಸಿದ್ದರು. ಶ್ರೀವಾತ್ಸವ 'ಕಾಹೋ' ಎಂದು ನನ್ನನ್ನು ನೋಡಿ, ಹಾಸ್ಟೆಲ್ ನಲ್ಲಿ ಸೀಟು ಸಿಗದ ನನ್ನ ಹೆಸರನ್ನು ಹುಡುಕತೊಡಗಿದರು, ಸ್ವಲ್ಪ ಹೊತ್ತು ಹುಡುಕಿದ ಮೇಲೆ ಅವರು ನನ್ನ ಅಂಕಗಳು ಕಡಿಮೆ ಇರುವುದರಿಂದ ನನಗೆ ಹಾಸ್ಟೆಲ್ ಸೀಟು ಸಿಕ್ಕಿಲ್ಲವೆಂದು ಹೇಳಿದರು. ನಾನು ಕುತೂಹಲಕ್ಕೆ ಯಾರು ಯಾರಿಗೆ ಸೀಟು ಎಷ್ಟು ಅಂಕಗಳಿಗೆ ಸಿಕ್ಕಿದೆ ಎಂದು ನೋಡಲು ಹೋದರೆ ಏನಾಶ್ಚರ್ಯ - ಆ ಪಟ್ಟಿಯಲ್ಲಿ ಅತ್ಯಂತ ಕಡಿಮೆ ಅಂಕ ತೆಗೆದವನೂ ಎಂಭತ್ತು ಪರ್ಸೆಂಟುಗಳಿಗಿಂತ ಹೆಚ್ಚಿಗೆ ತೆಗೆದಿದ್ದ - ಉತ್ತರ-ದಕ್ಷಿಣಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ನನಗೆ ಆದ ಮೊದಲ ಪಾಠ. ನಮ್ಮ ಮೈಸೂರು ವಿಶ್ವ ವಿದ್ಯಾನಿಲಯದಲ್ಲಿ ನನ್ನ ಬ್ಯಾಚಿನಲ್ಲಿ ಮೊದಲ ರ್‍ಯಾಂಕು ೬೫ ಪರ್ಸೆಂಟಿಗೆ ಬಂದಿತ್ತು, ನನ್ನದು ಅದರಿಂದ ಕೆಲವು ಅಂಕಗಳು ಕಡಿಮೆ ಅಷ್ಟೇ. ಅಂದರೆ ಬನಾರಸ್ಸಿನ ನಿಯಮದ ಪ್ರಕಾರ ನನ್ನ ಮೈಸೂರಿನಲ್ಲಿ ಮೊದಲ ರ್‍ಯಾಂಕ್ ತೆಗೆದವರಿಗೂ ಸೀಟು ಸಿಗುವುದಿಲ್ಲ, ಇದು ಯಾವ ನ್ಯಾಯ? ಅಲ್ಲದೇ ಅಲ್ಲಿಯ ಜೋನ್‌ಪುರ, ಬಾಗಲ್‌ಪುರ ಮುಂತಾದ ಕಡೆಗಳಿಗಿಂತ ಬಂದ ವಿದ್ಯಾರ್ಥಿಗಳಿಗಿಂತಲೂ ಶಿವಮೊಗ್ಗದಿಂದ ಒಬ್ಬನೇ ಹೋದ ನನಗೆ ಹಾಸ್ಟೆಲ್ ರೂಮಿನ ಅಗತ್ಯ ಹೆಚ್ಚಿತ್ತು. ಆದರೆ ಪರಿಸ್ಥಿತಿ ಹೀಗಿರುವಾಗ ತಿವಾರಿಯಾಗಲಿ, ಶ್ರೀವಾಸ್ತವರಾಗಲೀ ಏನೂ ಮಾಡಲು ಸಾಧ್ಯವಿರಲಿಲ್ಲ.

ಸರಿ, ಕನ್ನಡ ಚಲನಚಿತ್ರಗಳಲ್ಲಿ ಹೀರೋ-ಹೀರೋಯಿನ್ ಉತ್ತರ ಭಾರತಕ್ಕೆ ಪ್ರವಾಸಕ್ಕೆ ಹೋದಾಗಲೆಲ್ಲ ಕನ್ನಡ ಮಾತನಾಡುವವರು ಸಿಗುವಂತೆ ನನಗೂ ಬನಾರಸ್ಸಿನ ಕನ್ನಡ ಪೀಠದಲ್ಲಿ ಸಂಶೋಧನೆ ಮಾಡುತ್ತಿದ್ದ ಆಯನೂರಿನ ಹತ್ತಿರದ ಮುದ್ದೇನಹಳ್ಳಿಯ ಕುಮಾರ್‌ರ ಪರಿಚಯವಾಯಿತು. ಅವರು ಕ್ಯಾಂಪಸ್ಸಿನಿಂದ ಹೊರಗೆ ಸ್ವಲ್ಪ ದೂರದಲ್ಲೇ ಒಂದು ಸಣ್ಣ ಕೊಠಡಿಯನ್ನು ಬಾಡಿಗೆಗೆ ಹಿಡಿದಿದ್ದರು, ಹಾಸ್ಟೆಲ್ ಸೀಟು ಸಿಗುವವರೆಗೆ ಅವರ ಜೊತೆಯಲ್ಲಿ ನಾನಿರಲು ಅವರು ಒಪ್ಪಿಗೆ ಕೊಟ್ಟಿದ್ದು ಎಂದೂ ಮರೆಯಲಾರದಂತಹ ಸಂಗತಿ. ಕುಮಾರ್ ಅವರ ಒಡನಾಟದಲ್ಲಿ ಇನ್ನುಳಿದ ಕನ್ನಡಿಗರ ಪರಿಚಯವೂ ಆಯಿತು, ಹಾಗೇ ಬನಾರಸ್ಸಿನ ಒಳ್ಳೆಯ-ಕೆಟ್ಟ ವಿಷಯ-ವಸ್ತುಗಳಿಗೆಲ್ಲ ಒಂದು ಕ್ರಾಷ್ ಕೋರ್ಸ್ ಸಿಕ್ಕಹಾಗಾಯಿತು.

***

ಬನಾರಸ್ಸಿನ ವಿಷಯ ಹೇಳಿ ಬಿಹಾರಿಗಳ ಬಗ್ಗೆ ಬರೆಯದಿದ್ದರೆ ರಾಮಾಯಣದಲ್ಲಿ ರಾಮನನ್ನೇ ಬಿಟ್ಟಂತೆ, ನನ್ನ ಪ್ರಕಾರ ಬಿಹಾರಿಗಳಲ್ಲಿ ಕೇವಲ ಎರಡೇ ಎರಡು ತರಹದ ಜನಗಳು - ಅವರು ಒಂದೇ ಶುದ್ಧ ಶೂನ್ಯರು ಅಥವಾ ನೂರಕ್ಕೆ ನೂರು! ನನ್ನ ಜೊತೆಯಲ್ಲಿ ಸಂಶೋಧನೆಗಳಲ್ಲಿ ತೊಡಗಿದವರೆಲ್ಲ ಮಹಾ ಬುದ್ಧಿವಂತರೆಂದೇ ಹೇಳಬೇಕು - ಬಿಹಾರಿಗಳನ್ನು ಬಡವರು ಎಂದು ತಿಳಿದುಕೊಂಡಿದ್ದರೆ ನೀವು ಅದರ ಬಗ್ಗೆ ಮತ್ತೊಮ್ಮೆ ಯೋಚಿಸಿ ಏಕೆಂದರೆ ನಾನು ನೋಡಿದ ಬಿಹಾರಿಗಳಲ್ಲಿ ಕೆಲವರು ಹೆಚ್ಚೂ ಕಡಿಮೆ ಶಿವಮೊಗ್ಗವನ್ನೇ ಖರೀದಿಮಾಡಬಲ್ಲಂತಹವರಿದ್ದರು.

ಬನಾರಸ್ಸಿನ ಮೊದಲ ಕೆಲಸದ ದಿನವೇ ಸತ್ಯದ ದರ್ಶನವಾಯಿತು - ನಮ್ಮ ಪ್ರೊಫೆಸರ್, ಯಶವಂತ ಸಿಂಗ್, ಪಾಲಿಮರ್ ಥಿಯರಿಯಲ್ಲಿ ಜಗತ್ತಿನಾದ್ಯಂತ ಹೆಸರು ಗಳಿಸಿದ ಮನುಷ್ಯ, ಕೋಟಿ ರೂಪಾಯಿಕೊಟ್ಟರೂ ಬಗ್ಗದಂತವರು - ಅವರು ನನ್ನನ್ನು ಕೋಣೆಗೆ ಕರೆದು ಹೇಳಿದರು - 'ನೋಡು, ಸಂಶೋಧನೆ ಮಾಡುವುದೂ-ಬಿಡುವುದೂ ನಿನ್ನ ಕೈಯಲ್ಲೇ ಇರೋದು, ನಿನಗೇನಾದರೂ ಐಡಿಯಾಗಳಿದ್ದರೆ ಅದಕ್ಕೆ ನಾನು ಮಾರ್ಗದರ್ಶನ ಮಾಡುತ್ತೆನೇ ವಿನಾ ನೀನು ನನ್ನ ಬಳಿ ಇದ್ದ ಮಾತ್ರಕ್ಕೆ ನಿನ್ನ ಪಿ.ಎಚ್.ಡಿ. ಆಗುತ್ತದೆ ಎಂಬ ಭ್ರಮೆಯನ್ನು ಮಾತ್ರ ಇಟ್ಟುಕೊಳ್ಳಬೇಡ!' ಆದರಲ್ಲಿ ಅವರ ತಪ್ಪೆನೂ ಇಲ್ಲ, ಅವರನ್ನು ತಪ್ಪಾಗಿ ಅರ್ಥೈಸಿಕೊಂಡ ರಾಮ್‌ಸಿಂಗ್‌ನಂಥವರಿಗೆ ಪಿ.ಎಚ್.ಡಿ. ಮುಗಿಸಲು ಸುಮಾರು ಎಂಟು ವರ್ಷದ ಮೇಲೇ ಬೇಕಾಯಿತು. ನಾನು ಕೆಲಸಕ್ಕೆ ವರದಿ ಮಾಡಿಕೊಂಡ ಮೊದಲನೇ ದಿನವೇ ಹೀಗೆ ಕೇಳಬೇಕಾಯಿತಾದ್ದರಿಂದ, ನಾನು ಆ ಕೂಡಲೇ 'ಇಲ್ಲಾ ನಾನು ವಾಪಾಸ್ಸು ಹೊರಡುತ್ತೇನೆ' ಎಂದು ಹೊರಡಲು ಸಾಧ್ಯವಿರದಿದ್ದುದರಿಂದ ಅಲ್ಲೇ ಉಳಿದು ಸಂಶೋಧನೆಯನ್ನು ಮುಂದುವರಿಸದೇ ಬೇರೆ ವಿಧಿ ಇರಲಿಲ್ಲ.

ಆದರೆ ಇದ್ಯಾವ ನ್ಯಾಯ, ನನ್ನ ಜೊತೆಯಲ್ಲಿ ಇರೋ ಸಂಶೋಧಕ ರಾಮನ್, ಪ್ರೊ. ಶ್ರೀವಾಸ್ತವ ಅವರ ಜೊತೆ ಸಂಶೋಧನೆ ಮಾಡಿದರೆ ವರ್ಷಕ್ಕೊಂದು ಪೇಪರ್ ಪಬ್ಲಿಷ್ ಮಾಡಿ ನಾಲ್ಕು ವರ್ಷಕ್ಕೆಲ್ಲ ಸಂಶೋಧನೆ ಮುಗಿಸಿ ಥೀಸೀಸ್ ಸಬ್‌ಮಿಟ್ ಮಾಡುಬಹುದಾಗಿತ್ತು, ಆದರೆ ರಾಮ್‌ಸಿಂಗ್ ಲೆಕ್ಕಕ್ಕೆ ಹೋಲಿಸಿದರೆ ನಾನು ಎಂಟು ವರ್ಷವಾದರೂ ಥೀಸೀಸ್ ಇರಲಿ ಮೂರು ಪೇಪರ್ ಅನ್ನೂ ಪಬ್ಲಿಷ್ ಮಾಡಲಾಗುವುದಿಲ್ಲವಲ್ಲಾ? ಹೀಗೆ ನಾನು ಶಿವಮೊಗ್ಗದಿಂದ ಹೊತ್ತುಕೊಂಡು ಹೋದ ಕನಸುಗಳು ನುಚ್ಚುನೂರಾದವು, ಬನಾರಸ್ಸಿನಲ್ಲಿ ಒಮ್ಮೆ ಒಬ್ಬ ಪ್ರೊಫೆಸರರ ಅಡಿ (ಅದೂ ಯಶವಂತ್ ಸಿಂಗರ ಜೊತೆ) ಸೇರಿದರೆ ಮತ್ಯಾರೂ ತೆಗೆದುಕೊಳ್ಳುತ್ತಿರದಿದ್ದುದರಿಂದಲೂ, ನನಗೆ ಕಂಪ್ಯೂಟರ್ ಸಿಮಿಲೇಷನ್‌ನಲ್ಲಿ ಸಂಶೋಧನಾ ಮಟ್ಟದ ಐಡಿಯಾಗಳು ಇರದಿದ್ದುದರಿಂದಲೂ, 'ಛೇ, ಬನಾರಸ್ಸಿಗೆ ಬಂದು ತಪ್ಪು ಮಾಡಿದೆನೇ..., ಈಗ ಏನು ಮಾಡುವುದು' ಎಂದು ಎಷ್ಟೋ ರಾತ್ರಿಗಳನ್ನು ಯೋಚಿಸುತ್ತಾ ಕಳೆದಿದ್ದೇನೆ. ಮೊಟ್ಟ ಮೊದಲನೇ ಬಾರಿಗೆ ನಾನು ಶಿವಮೊಗ್ಗದಲ್ಲಿ ಬಿಟ್ಟು ಬಂದ ಅರೆಕಾಲಿಕ ಉಪನ್ಯಾಸಕನ ಕೆಲಸಗಳು ಬಹಳ ಅಪ್ಯಾಯಮಾನವಾಗಿ ಕಂಡುಬಂದವು. ಭಾರತ ಸರ್ಕಾರದ ಡಿಪಾರ್ಟ್‌ಮೆಂಟ್ ಆಫ್ ಸೈನ್ಸ್ ಎಂಡ್ ಟೆಕ್ನಾಲಜಿಯಲ್ಲಿ ಸಂಶೋಧನೆಗೆ ಸೇರಿಕೊಂಡಿದ್ದೇನೆಂದು ಅದ್ದೂರಿಯಾಗಿ ಬಿಟ್ಟುಬಂದವನಿಗೆ ಶಿವಮೊಗ್ಗಕ್ಕಾಗಲೀ, ಬೆಂಗಳೂರು-ಮೈಸೂರಿಗಾಗಲೀ ಹಿಂತಿರುಗಿ ಹೋಗುವ ಯಾವ ಆಲೋಚನೆಗಳು ಬಂದರೂ ಅವು ಬಂದಷ್ಟೇ ವೇಗದಲ್ಲಿ ಮಾಯವಾಗುತ್ತಿದ್ದವು.

***

ಭಾರತದಲ್ಲಿ ಪ್ರತಿವರ್ಷ ಸಿವಿಲ್ ಸರ್ವೀಸ್ ಪರೀಕ್ಷೆಯಲ್ಲಿ ತೇರ್ಗಡೆಹೊಂದುವವರಲ್ಲಿ ಹೆಚ್ಚಿನ ಪಾಲು ಉತ್ತರ ಪ್ರದೇಶ ಹಾಗು ಬಿಹಾರಿನವರದ್ದು. ಅಲ್ಲದೇ ನಮ್ಮ ದೇಶಕ್ಕೆ ಉತ್ತರಪ್ರದೇಶ ಹಾಗೂ ಬಿಹಾರಿಗಳು ನೀಡಿರುವಷ್ಟು ದೇವ-ದೇವತೆಗಳನ್ನೂ, ರಾಜಕಾರಣಿಗಳನ್ನೂ ಮತ್ಯಾವ ರಾಜ್ಯವೂ ನೀಡಿಲ್ಲ. ಸಿವಿಲ್ ಸರ್ವೀಸ್ ಪರೀಕ್ಷೆಯಲ್ಲಿ ಬಿಹಾರಿಗಳು ಏಕೆ ಹೆಚ್ಚು ಜನ ಪಾಸಾಗುತ್ತಾರೆ ಎಂದು ಪ್ರಶ್ನಿಸಿಕೊಂಡರೆ ಅದಕ್ಕುತ್ತರವಾಗಿ 'ಅವರು ಕ್ರಮಬದ್ಧವಾಗಿ ಅಭ್ಯಾಸ ಮಾಡುತ್ತಾರೆ ಹಾಗೂ ಕಷ್ಟ ಪಡುತ್ತಾರೆ' ಎಂದು ಹೇಳಬಹುದು.

ನನ್ನ ಜೊತೆ ಇದ್ದ ಬಿಹಾರಿಗಳು ಎಲ್ಲರೂ ಒಂದಲ್ಲ ಒಂದು ವಿಷಯದಲ್ಲಿ ಪದವೀದರರೇ, ಪದವಿಯಾದ ತರುವಾಯ ಸ್ನಾತಕ್ಕೋತ್ತರ ಪದವಿಗಳಿಗೆ (ಎಮ್.ಎ., ಎಂ.ಎಸ್ಸಿ. ಇತ್ಯಾದಿ) ಬನಾರಸ್ಸಿನ ವಿಶ್ವವಿದ್ಯಾನಿಲಯದಲ್ಲಿ ಅರ್ಜಿ ಗುಜರಾಯಿಸುತ್ತಿದ್ದರು - ನಾನು ತಿಳಿದ ಮಟ್ಟಿಗೆ ಬಿಹಾರ ಅಥವಾ ಒರಿಸ್ಸಾದಲ್ಲಿ ತರಗತಿಯ ಅತಿ ಹೆಚ್ಚಿನ ಅಂಕ ತೆಗೆದವರು ೯೯ ರ ಆಸುಪಾಸಿನಲ್ಲಿದ್ದರೆ, ಅತಿಕಡಿಮೆ ಅಂಕ ತೆಗೆದವರು ೯೦ ರ ಹತ್ತಿರಹತ್ತಿರವಿರುತ್ತಿದ್ದರು (ಇಂಥವರ ನಡುವೆ ಮೈಸೂರಿನ ಪದವೀದರರು ಸುಳಿದು ಬಿಡಲೂ ಯೋಗ್ಯರಲ್ಲ - ಇನ್ನು ಹಾಸ್ಟೆಲ್ ಸೀಟು ಹೇಗೆ ಸಿಕ್ಕೀತು). ನನಗೆ ಆಶ್ಚರ್ಯವಾಗುವಂತೆ ಪ್ರತಿಯೊಬ್ಬ ಬಿಹಾರಿಯೂ (ಉತ್ತರಪ್ರದೇಶದವರೂ ಸಹಾ) ಸ್ನಾತಕ್ಕೋತ್ತರ ವಿಭಾಗಕ್ಕೆ ಸೇರಲು ಆಯ್ದುಕೊಳ್ಳುತ್ತಿದ್ದುದು ಸುಲಭವಾದ ವಿಷಯಗಳಾದ ಗಾಂಧೀಯನ್ ಸ್ಟಡೀಸ್, ಕ್ರಿಶ್ಚಿಯಾನಿಟಿ, ಸಮಾಜಶಾಸ್ತ್ರ, ಇತ್ಯಾದಿ...ಅವರು ಹಾಗೆ ಮಾಡುತ್ತಿದ್ದುದು ಕೇವಲ ಹಾಸ್ಟೆಲಿನ ಸೀಟನ್ನು ಗಳಿಸುವುದಕ್ಕಾಗಿ ಮಾತ್ರ. ಒಮ್ಮೆ ಹಾಸ್ಟೆಲ್ ಸೀಟು ಸಿಕ್ಕ ನಂತರ ಈ ವಿದ್ಯಾರ್ಥಿಗಳಲ್ಲಿ ಎರಡು ಭಾಗಗಳಾಗುತ್ತಿದ್ದವು - ಒಂದು ಗುಂಪು ಬ್ಯಾಂಕು, ಮತ್ತಿತರ ಸುಲಭ ಪರೀಕ್ಷಗಳನ್ನು ಪಾಸು ಮಾಡುವುದಕ್ಕೆ ಗಮನ ಹರಿಸಿದರೆ, ಇನ್ನು ಎರಡನೆಯ ಗುಂಪು ಸಿವಿಲ್ ಸರ್ವೀಸ್ (ಮುಖ್ಯವಾಗಿ ಐ.ಎ.ಎಸ್.) ಪರೀಕ್ಷೆಗಳತ್ತ ಗಮನ ಹರಿಸುತ್ತಿತ್ತು. ಇನ್ನು ಇವರ ಪದವಿ ಬ್ಯಾಕ್‌ಗ್ರೌಂಡ್ ಯಾವುದೇ ಇದ್ದರೂ ಇವರು ಐ.ಎ.ಎಸ್. ಪರೀಕ್ಷೆಯಲ್ಲಿ ಆಯ್ದುಕೊಳ್ಳುತ್ತಿದ್ದ ವಿಷಯ ಭೂಗೋಳ, ಇತಿಹಾಸ, ಅರ್ಥಶಾಸ್ತ್ರ, ಸಮಾಜಶಾಸ್ತ್ರ, ಇತ್ಯಾದಿ...ಗಣಿತ, ಭೌತಶಾಸ್ತ್ರ, ರಸಾಯನಶಾಸ್ತ್ರಗಳು ಕಡಿಮೆ. ಹೀಗೆ ಐ.ಎ.ಎಸ್. ಪಾಸು ಮಾಡುವ ಹಠ ತೊಟ್ಟ ಗುಂಪು ಮಾಡುತ್ತಿದ್ದ ಮುಖ್ಯ ಕೆಲಸಗಳು ಇಷ್ಟು:

- ತಮ್ಮ ಹಳ್ಳಿಗಳಿಂದ ಒಬ್ಬ ಅಡುಗೆ ಮಾಡುವನನ್ನೂ, ಅವನ ಸಹಾಯಕನನ್ನೂ ತಂದು ಹಾಸ್ಟೆಲ್‌ನಲ್ಲಿ ಇಟ್ಟುಕೊಳ್ಳುವುದು
- ಪರೀಕ್ಷೆ ಕಟ್ಟಿದ ಹುಡುಗರೆಲ್ಲರೂ ತಮ್ಮ-ತಮ್ಮ ತಲೆಗಳನ್ನು ನುಣ್ಣಗೆ ಬೋಳಿಸಿಕೊಳ್ಳುವುದು
- ಒಂದು ದಿನ ದೆಹಲಿಗೆ ಹೋಗಿ ತಮಗೆ ಬೇಕಾದ ಪುಸ್ತಕಗಳ ಕಂತೆಯನ್ನು ಹೊತ್ತು ತರುವುದು

ತಾವು ತಲೆ ಬೋಳಿಸಿಕೊಂಡರೆ (ಒಂದು ರೀತಿಯಲ್ಲಿ ಮಿಲಿಟರಿಯಲ್ಲಿ ಮಾಡಿದ ಹಾಗೆ) ಸ್ವಯಂ ದಂಡನೆಗೆ ಸುಲಭವಾಗುತ್ತೆಂತಲೋ ಏನೋ (ಬನಾರಸ್ಸಿನಲ್ಲಿ ನೀವು ಒಂದು ಸೀಜನ್‌ನಲ್ಲಿ ಎಲ್ಲಿ ಹೋದರೂ ತಲೆಬೋಳಿಸಿಕೊಂಡವರು ಕಾಣಸಿಗುತ್ತಾರೆ) ಐ.ಎ.ಎಸ್. ಪರೀಕ್ಷಾರ್ಥಿಗಳು ಮಾಡುವ ಮೊಟ್ಟ ಮೊದಲ ಕೆಲಸ ಅದಾಗಿತ್ತು. ದೆಹಲಿಗೆ ಹೋಗುವ ಉದ್ದೇಶ ಇಷ್ಟು, ಅಲ್ಲಿ ನೀವು ಐ.ಎ.ಎಸ್. ಪರೀಕ್ಷೆಗೆ ಆಯ್ದುಕೊಂಡ ವಿಷಯಗಳನ್ನು ತಿಳಿಸಿದರೆ ಸಾಕು ಸ್ಪೆಷಲೈಸ್ಡ್ ಪುಸ್ತಕದ ಅಂಗಡಿಗಳು ಸಿಗುತ್ತವೆ. ಇಂತಿಂಥ ಪುಸ್ತಕಗಳನ್ನೆ ತೆಗೆದುಕೊಂಡು ಓದಿ ಎನ್ನುವುದರೆ ಜೊತೆಗೆ ೯೮ ರಲ್ಲಿ ಈ ಪ್ರಶ್ನೆ ಬಂದಿತ್ತು, ೯೬ ರಲ್ಲಿ ಈ ಪ್ರಶ್ನೆಯನ್ನು ಕೇಳಿದ್ದರು, ೯೯ ರಲ್ಲಿ ಗ್ಯಾರಂಟಿ ಈ ಪ್ರಶ್ನೆಯನ್ನು ಕೊಟ್ಟೇ ಕೊಡುತ್ತಾರೆ ಎನ್ನುವ ಅನಾಲಿಸೀಸೂ ಸಿಗುತ್ತಿತ್ತು. ಹೀಗೆ ಹೋದ ಹುಡುಗರ ಗುಂಪು ಅವರು ಕಷ್ಟ ಪಟ್ಟು ಹೊತ್ತರೂ ಹೊರಲಾರದಷ್ಟು ಪುಸ್ತಕಗಳನ್ನು ತಂದು ರೂಮಿನಲ್ಲಿ ಸೇರಿಕೊಂಡರೆ ತಿಂಗಳಿಗೊಮ್ಮೆಯೂ ಸೂರ್ಯನಿಗೆ ಮುಖ ತೋರಿಸುತ್ತಿರಲಿಲ್ಲ. ರಾತ್ರೀ-ಹಗಲೂ ಓದಿ-ಓದೀ, ಐ.ಎ.ಎಸ್. ಪರೀಕ್ಷೆಯೇನು ಯಾವ ಪರೀಕ್ಷೆಯನ್ನಾದರೂ ಸುಲಭವಾಗಿ ಪಾಸು ಮಾಡಬಲ್ಲವರಾಗುತ್ತಿದ್ದರು. ಊಟ ತಿಂಡಿಗೆ ಮಹರಾಜ್ (ಅಡುಗೆಯವ) ಹಾಗೂ ಅವನ ಸೇವಕ ಸಹಾಯ ಮಾಡುತ್ತಿದ್ದರು, ದೇಹ ತೀಟೆಗೆ ಗಾಂಜಾ, ಅಫೀಮೂ ದೊರೆಯುತ್ತಿತ್ತು, ಹೆಣ್ಣುಗಳೂ ಬಂದು ಹೋಗುತ್ತಿದ್ದವು, ರೂಮಿನೊಳಗಡೆ ಏನೇನು ಆಗುತ್ತಿತ್ತೋ ಬಿಡುತ್ತಿತ್ತೋ, ಕೊನೆಗೆ ಹೀಗೆ ತಲೆ ಬೋಳಿಸಿ ದೀಕ್ಷೆ ತೆಗೆದುಕೊಂಡವರಲ್ಲಿ ಹೆಚ್ಚಿನ ಜನರಿಗೆ ಇಂಟರ್‌ವ್ಯೂವ್ ಬಂದೇ ಬರುತ್ತಿತ್ತು. ಈ ಸಂದರ್ಶನದ ಹಂತವೇ ಹೆಚ್ಚಿನವರಿಗೆ ಕಬ್ಬಿಣದ ಕಡಲೆಯಾಗುತ್ತಿತ್ತು, ರಾತ್ರೀ-ಹಗಲು ಯಾವ ರ್‍ಯಾಪಿಡೆಕ್ಸ್ ಇಂಗ್ಲೀಷ್ ಸ್ಪೀಕಿಂಗ್ ಕೋರ್ಸ್ ತೆಗೆದುಕೊಂಡರೂ, ಸಂದರ್ಶನದಲ್ಲಿ ಕೇಳಿದ ಪ್ರಶ್ನೆಗಳಿಗೆ ನಿರರ್ಗಳವಾಗಿ ಉತ್ತರಿಸಲು ಇವರಿಗೆಲ್ಲ ಬಹಳ ಸಮಯ ಹಿಡಿಯುತ್ತಿತ್ತು - ಇಂಥಾ ಸಮಯದಲ್ಲಿ ನನ್ನಂತ ದಕ್ಷಿಣದವರ ಸಹವಾಸಕ್ಕೆ ಹೆಚ್ಚು ಜನರು ಮುಗಿಬೀಳುತ್ತಿದ್ದರು ಏಕೆಂದರೆ ನಾವು ಹೇಗೇ ಇದ್ದರೂ ಇಂಗ್ಲೀಷನ್ನಂತೂ ಸುಮಾರಾಗಿ ಮಾತನಾಡುತ್ತಿದ್ದೆವು!

***

ಈ ಬಿಹಾರಿಗಳೆಲ್ಲ ಹೀಗೆ ಐ.ಎ.ಎಸ್. ಎಂದು ಕಷ್ಟ ಪಡುತ್ತಿದ್ದುದಕ್ಕೂ ಒಂದು ಕಾರಣ ಇದೆ - ಐ.ಎ.ಎಸ್. ಪಾಸು ಮಾಡಿದಾಕ್ಷಣ ರಾತ್ರೋ ರಾತ್ರಿ ಹೆಚ್ಚಾಗುತ್ತಿದ್ದ ಅವರ ಬೆಲೆ. ನೀವು ಉತ್ತರ ಭಾರತದ ಮದುವೆಗಳನ್ನು ನೋಡಿದರೆ ಗೊತ್ತಾಗುತ್ತದೆ, ಅವರಲ್ಲಿ ವರದಕ್ಷಿಣೆ ಬಹಳ - ಒಬ್ಬ ಐ.ಎ.ಎಸ್. ಪರೀಕ್ಷೆಯನ್ನು ಕಟ್ಟಿದ ವಿದ್ಯಾರ್ಥಿಯ ಬೆಲೆ ಮೂರು ಕಾಸು, ಅದೇ ಐ.ಎ.ಎಸ್. ಪಾಸಾದರೆ ಮೂರು ಕೋಟಿ! ಹೀಗೆ ಐ.ಎ.ಎಸ್. ಪಾಸಾದವರೆಲ್ಲರೂ ನಗರಗಳಲ್ಲಿರಲು ಇಷ್ಟ ಪಡುತ್ತಿದ್ದುದು ಕಡಿಮೆ, ಏಕೆಂದರೆ ಹಳ್ಳಿಯ ಕಡೆಗೆ ಜಿಲ್ಲಾಧಿಕಾರಿಯಾಗಿ ಹೋದರೆ ರಾಜರ ತರಹ ಇರಬಹುದು ಎಂದು.

ಹೀಗೆ ನನ್ನಲ್ಲಿ ಮನೆ ಮಾಡಿದ ಶಿವಮೊಗ್ಗದ ನಯವನ್ನು ಒರಿಸಿ ಅದರಲ್ಲಿ ಬಿಹಾರಿಗಳ ನಾಜೂಕನ್ನು ತುಂಬಲು ಭೂಮಿಕೆಯಾಗಿದ್ದೇ ಬನಾರಸ್ಸು, ಹುಟ್ಟೂರಿನಲ್ಲಿ ಕಲಿಯದ ಬುದ್ಧಿಯನ್ನು ಬದುಕು ಇಲ್ಲಿ ಕಲಿಸಿದೆ, ಹಾಗೂ ಅಲ್ಲಿ ದೊರೆತ ದರ್ಶನದ ಬೆಳಕು ಇನ್ನೂ ನನ್ನ ಕಣ್ಣಲ್ಲಿದೆ. ಇಂಥ ಬಿಹಾರಿಗಳ ನಡುವೆ ಇದ್ದವನಾಗಿ ನಾನೇಕೆ ಐ.ಎ.ಎಸ್. ಓದಲಿಲ್ಲ ಎಂದು ನನಗೇ ಅನ್ನಿಸಿದೆ - ಅದಕ್ಕುತ್ತರ ಸಿಕ್ಕಿದೆ, ಅದನ್ನು ಮುಂದೆ ಎಲ್ಲಾದರೂ ಬರೆಯುತ್ತೇನೆ.

***

ನಾವು ದಕ್ಷಿಣ ಭಾರತದವರು ಸುಖಾ ಇಲ್ಲ, ಬಿಹಾರಿಗಳ ಅರ್ಧದಷ್ಟು ನಾವೇನಾದರೂ 'ಕಷ್ಟ' ಪಟ್ಟಿದ್ದರೆ ಅದರ ಕಥೆಯೇ ಬೇರೆ!

Wednesday, May 17, 2006

ಜ್ಞಾನಪೀಠ ಎಂದರೆ ಸುಮ್ಮನೆಯೇ?

೧೯೯೮ ರಲ್ಲಿ ಕಾರ್ನಾಡರಿಗೆ ಜ್ಞಾನಪೀಠ ಪ್ರಶಸ್ತಿ ಬಂದಾಗ ನನ್ನ ಇ-ಮೇಲ್ ಅಡ್ರೆಸ್ ಪುಸ್ತಕದಲ್ಲಿರುವ ಕನ್ನಡಿಗ ಹಾಗೂ ಕನ್ನಡಿಗರಲ್ಲದ ಸ್ನೇಹಿತರಲ್ಲಿ ನಾನು ಈ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದೆ. ಕೆಲವರು ಶಬಾಷ್ ಎಂದರೆ ಇನ್ನು ಕೆಲವರು 'ಜ್ಞಾನಪೀಠದ ಮೌಲ್ಯವೇ ದೊಡ್ಡದೇ ಹಾಗಾದರೆ...' ಎಂದು ಪ್ರಶ್ನಿಸಿದ್ದರು. ನಮ್ಮ ಕನ್ನಡದ ಪರಂಪರೆಯಲ್ಲಿ ಕೆಲವರಿಗೆ ಈ ಪ್ರಶಸ್ತಿ ಸಿಗಬೇಕೆಂದು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಲಾಬ್ಬಿಯಿಂಗ್ ನಡೆದಿದೆ ಎಂದೂ, ಜ್ಞಾನಪೀಠ ಪ್ರಶಸ್ತಿಗೆ ಹಿಂದಿದ್ದ ಮೌಲ್ಯಗಳಿಲ್ಲ ಎಂತಲೂ ಬೇಕಾದಷ್ಟು ಕಡೆ ಓದಿದ್ದೇನೆ ಆದರೂ ನಮ್ಮಲ್ಲಿಯ ಕವಿ-ಸಾಹಿತಿಗಳನ್ನು ಬಲವಾಗಿ ಮೆಚ್ಚಿಕೊಳ್ಳುವ ನಾನು, ನಮ್ಮ ಸಾಹಿತ್ಯದ ಮಟ್ಟ ಕಡಿಮೆ ಎಂದು ಯಾರೂ ದೂರಿದ್ದನ್ನು ಈವರೆಗೂ ಕೇಳಿಲ್ಲ.

***

ಬೇಂದ್ರೆ, ಕುವೆಂಪುರವರನ್ನು ವ್ಯಕ್ತಿಗತ ಭೇಟಿಯಾಗಿ ಮಾತನಾಡಿಸುವಷ್ಟು ನಾನು ಬೆಳೆದಿರಲಿಲ್ಲ, ಬೇಂದ್ರೆಯವರು ತೀರಿಕೊಂಡಾಗ ಆಗಿನ್ನೂ 'ನಾದಲೀಲೆ'ಯ ಗುಂಗಿಗೆ ಬೀಳುತ್ತಿದ್ದವನು ನಾನು. ನನ್ನ ಅಣ್ಣ ಎಲ್.ಬಿ.ಕಾಲೇಜಿನಲ್ಲಿ ಕನ್ನಡ ಮೇಜರ್ ಓದಿದವನು, ಹಾಗೂ ನನ್ನ ಅಕ್ಕಂದಿರೂ ತಕ್ಕ ಮಟ್ಟಿಗೆ ಕನ್ನಡ ಸಾಹಿತ್ಯವನ್ನು ಓದುತ್ತಿದ್ದವರಾದ್ದರಿಂದ ಪುಸ್ತಕಗಳ ಒಡನಾಟ ನನಗೆ ಸಹಜವಾಗೇ ಇತ್ತು. ನನ್ನ ಅಣ್ಣ ಎಲ್.ಬಿ.ಕಾಲೇಜಿನ ಇಬ್ಬರು ಕನ್ನಡ ಉಪನ್ಯಾಸಕರನ್ನೂ ಬಹಳ ಹಚ್ಚಿಕೊಂಡಿದ್ದ - 'ರ್‍ಏಣುಕಪ್ಪ ಗೌಡರ ಕೈಯಲ್ಲಿ ನಾದಲೀಲೆ ಕೇಳಬೇಕು ಅದರ ಮಜಾನೇ ಬೇರೆ', ಅಥವಾ 'ಪ್ರಭುಸ್ವಾಮಿ ಮಠ್ ಅವರು ಸಖಿಗೀತ ಬಾಳ ಚೆನ್ನಾಗಿ ಮಾಡ್ತಾರೆ' ಅಂತ ಆವಾಗಾವಾಗ್ಗೆ ಹೇಳುತ್ತಲೇ ಇರ್ತಿದ್ದನಾದ್ದರಿಂದ ನನಗೆ ಈ ಪುಸ್ತಗಳಲ್ಲಿ 'ಅಂಥಾದ್ದೇನೈತಿ' ಎಂದು ಕುತೂಹಲ ಮೂಡಿ ಅದನ್ನು ಓದುತ್ತಿದ್ದುದು, ನನ್ನ ಅಣ್ಣನ ನೋಟ್ಸುಗಳನ್ನು ನೋಡುತ್ತಿದ್ದುದು ಇನ್ನೂ ಚೆನ್ನಾಗಿ ನೆನಪಿದೆ.

'ಎಲ್.ಬಿ.ಕಾಲೇಜಿನಲ್ಲಿ ನಾನು ಓದಬೇಕು' ಅನ್ನೋದು ನನ್ನ ಅಣ್ಣ ನನ್ನ ಮೇಲೆ ಇಟ್ಟಿದ್ದ ಆಸೆಗಳಲ್ಲಿ ಒಂದು - ಮುಂದೆ ಗವಾಸ್ಕರ್ ಥರಾ ಆಡಬೇಕು ಎಂದು ಕ್ರಿಕೇಟಿನ ಬಗ್ಗೆ ಎಡಬಿಡದೇ ಕೋಚಿಂಗ್ ನೀಡಿದ್ದೂ ಅಲ್ಲದೇ ಶಾಲೆಯ ಟೂರ್ನಮೆಂಟ್ ಕ್ರಿಕೇಟ್ ಮ್ಯಾಚ್ ಒಂದರಲ್ಲಿ ನಾನು ಬೌಂಡರಿ ಹೊಡೆದರೂ 'ಆ ಬಾಲನ್ನ ಹಂಗ್ ಆಡ್ತಾರಾ?' ಅಂಥ ನನಗೇ ಕಪಾಳಕ್ಕೆ ಬಾರಿಸಿದ ಮನುಷ್ಯಾ ಅವನು! ಫಸ್ಟ್ ಪಿ.ಯು.ಸಿ.ಗೆ ಸೇರಿಸುವಾಗ ನನಗೆ ಮೊದಲ ಭಾಷೆ ಕನ್ನಡ, ಎರಡನೇ ಭಾಷೆ ಇಂಗ್ಲೀಷು ಎಂದೇ ಸೇರಿಸಿದ್ದವನನ್ನು ನಾನು ನನ್ನ ಮೈಸೂರು ಹಿಂದೀ ಪ್ರಚಾರ ಪರಿಷತ್ತಿನ ಪರೀಕ್ಷೆಗಳಿಗೆ ಓದಿ ಹಿಂದಿ ಕಲಿತದ್ದೆಲ್ಲಾ ವೇಷ್ಟ್ ಆಗುತ್ತದೆ ಎಂದು ಹತ್ತಾರು ಬಾರಿ ಬೇಡಿಕೊಂಡ ಮೇಲೆ ಕನ್ನಡದ ಬದಲಿಗೆ ಹಿಂದಿಯನ್ನು ಪ್ರಥಮ ಭಾಷೆಯಾಗಿ ತೆಗೆದುಕೊಳ್ಳುವ ಪರ್ಮಿಷನ್ ಕೊಟ್ಟಿದ್ದ. ಆದರೆ ರ್‍ಏಣುಕಪ್ಪ ಗೌಡರ ಕನ್ನಡ ಪಾಠದ ಮೇಲೆ ಕುತೂಹಲವಿದ್ದ ನಾನು ಎಷ್ಟೋ ಸಾರಿ ಅವರ ಕನ್ನಡ ತರಗತಿಗಳಲ್ಲಿ 'ಹೊರಗಿನವ'ನಾಗಿ ಕುಳಿತು ಕೇಳಿದ್ದಿದೆ - ಮುಂದೆ ಪ್ರಭುಸ್ವಾಮಿ ಮಠರೂ ಹಾಗೂ ರೇಣುಕಪ್ಪ ಗೌಡರೂ ನನಗೆ ಅಲ್ಲಲ್ಲಿ ಸಹಾಯ ಮಾಡುತ್ತಿದ್ದರು - ನಾನು ನನ್ನ ಕವನಗಳ ಕಟ್ಟೊಂದನ್ನು ಪ್ರಭುಸ್ವಾಮಿ ಮಠರ ಮನೆಗೆ ತೆಗೆದುಕೊಂಡು ಹೋಗಿ ಕೊಟ್ಟಿದ್ದೆ, ಅದನ್ನು ಅವರು ಓದಿ ಕವನಗಳಲ್ಲಿ ಮೆಚ್ಚಿದ ಹಾಗೂ ಮೆಚ್ಚದ ಅಂಶಗಳನ್ನು ವಿವರವಾಗಿ ಹೇಳಿದ್ದರು. ಅಲ್ಲದೇ, ರೇಣುಕಪ್ಪ ಗೌಡರು 'ದೇವರ ಭಯವೇ ಜ್ಞಾನದ ಆರಂಭ' ಎಂದು ಯಾವುದೋ ತರಗತಿಯಲ್ಲಿ ಹೇಳಿದ್ದನ್ನು ನಾನು ಅವರ ಸ್ಟಾಫ್ ರೂಮಿನಲ್ಲಿ ಪ್ರಶ್ನಿಸಿ ಅವರಿಂದ ಧೀರ್ಘವಾದ ಉತ್ತರಗಳನ್ನು, ವಿವರಣೆಗಳನ್ನು ಪಡೆದಿದ್ದೆ. ಮೊದಲನೇ ಭಾಷೆಯಾಗಿ ಹಿಂದಿ ಕಲಿಕೆಯನ್ನು ಮುಂದುವರೆಸಿದ್ದು ಎಲ್ಲೂ ನನಗೆ ತೊಂದರೆಕೊಡಲಿಲ್ಲ - ಶಾರ್ಟ್ ಟರ್ಮ್‌ನಲ್ಲಿ ಯೂನಿವರ್ಸಿಟಿಗೆ ಹೆಚ್ಚು ಅಂಕ ಪಡೆದವನೆಂದು ಸಾವಿರಾರು ರೂಪಾಯಿ ವಿದ್ಯಾರ್ಥಿವೇತನ ಬಂದು ಆಗಿನ ಕಾಲದಲ್ಲಿ ಬಹಳ ಅನುಕೂಲವಾಗಿದ್ದೂ ಅಲ್ಲದೇ ಲಾಂಗ್ ಟರ್ಮ್‌ನಲ್ಲಿ ಹಿಂದೀ ಪಾಠ ಮಾಡುತ್ತಿದ್ದ ಸಂಸ್ಕೃತ ಪಂಡಿತರಾದ ವಿ.ಎಮ್. ಶರ್ಮರು ಲೈಫ್ ಲಾಂಗ್ ಮಿತ್ರರಾದರು.

ನಾನು ಸೈನ್ಸ್ ಓದುವುದರ ಬದಲಿಗೆ ಭಾಷೆಯನ್ನೇ ಇನ್ನಷ್ಟು ಓದಿದ್ದರೆ ಎಂದು ಎಷ್ಟೋ ಸಾರಿ ಅನ್ನಿಸಿದೆ, ಏಕೆಂದರೆ ನಾನು ಎಲ್.ಬಿ.ಕಾಲೇಜಿನಲ್ಲಿ ಕಳೆದ ಐದು ವರ್ಷಗಳನ್ನು ನೆನಪಿಗೆ ತಂದುಕೊಂಡಂತೆಲ್ಲ, ರೇಣುಕಪ್ಪ ಗೌಡರು, ಪ್ರಭುಸ್ವಾಮಿ ಮಠರು, ಶರ್ಮರಷ್ಟೆ ನೆನಪಿಗೆ ಬರೋದಲ್ದೇ ಇಂಗ್ಲೀಷ್ ಡಿಪಾರ್ಟ್‌ಮೆಂಟಿನ ಟಿ.ಪಿ.ಅಶೋಕ, ಜಶವಂತ ಜಾದವ್ ಹಾಗೂ ಗುರುರಾವ್ ಬಾಪಟ್ ಇವರೂ ಕೂಡ ಬಹಳ ಹತ್ತಿರದವರಾಗಿ ಕಂಡುಬರುತ್ತಾರೆ. ಟಿ.ಪಿ.ಅಶೋಕ್ ಅವರು ಪರೀಕ್ಷೆಯ ಉತ್ತರ ಪತ್ರಿಕೆಗಳನ್ನು ತಿದ್ದಿ 'ಎಷ್ಟು ಕೆಟ್ಟದಾಗಿ ಬರೆದಿದ್ದೀಯೆ' ಎಂದು ತೋರಿಸಿದ್ದೂ ಅಲ್ಲದೇ ನಾನು ಯಾವುದೋ ಪ್ರಬಂಧದಲ್ಲಿ 'ಸತ್ಯಕ್ಕೆ ಸನ್ನಿಹಿತವಾದ' ಎಂದು ಬರೆಯುವುದರ ಬದಲಿಗೆ 'ಸತ್ಯಕ್ಕೆ ಹತ್ತಿರವಾದ' ಎಂದು ಬರೆದರೆ ಏನಾಗುತ್ತದೆ ಎಂದು ತಮ್ಮ ಕನ್ನಡಕದೊಳಗಿಂದ ಪಿಳಿಪಿಳಿ ಕಣ್ಣನ್ನು ಬಿಟ್ಟು ಪ್ರಶ್ನೆಯನ್ನು ಕೇಳಿದ್ದರು, ಆಗ ಅದಕ್ಕೆ ನನ್ನ ಬಳಿ ಯಾವುದೇ ಉತ್ತರವಿರಲಿಲ್ಲವಾದರೂ ಅಂದು ಸಾಧಿಸಿಕೊಂಡಿದ್ದು ನನಗೆ ಚೆನ್ನಾಗಿ ನೆನಪಿದೆ.

ಇಂಗ್ಲೀಷಿನ ಜಾದವ್ ಅವರ ಸಹವಾಸದಿಂದ ಫಿಲಂ ಕ್ಲಬ್ ಮೆಂಬರ್ ಆಗಿ ಪ್ರಪಂಚದ ನಾನಾ ಭಾಷೆಗಳ ಚಿತ್ರಗಳನ್ನು ನೋಡಿ ಚರ್ಚಿಸಿದ್ದೂ ಅಲ್ಲದೇ ಆಗಾಗ್ಗೆ ಹೆಗ್ಗೋಡಿನ ನೀನಾಸಂ ಗೂ ಹೋಗಿ ಬರುತ್ತಿದ್ದೆವು. ನನ್ನ ಸಹಪಾಟಿ ವಾಸುದೇವನ ತಂದೆ ಹುಚ್ಚಪ್ಪ ಮಾಸ್ತರರು ಜಾನಪದ ಅಕಾಡೆಮಿಯ ಸದಸ್ಯರಾದ್ದರಿಂದ ವಾಸು ಹಾಗೂ ವಾಸುವಿನ ಕುಟುಂಬದವರೆಲ್ಲರಿಗೂ ನಾಟಕಗಳನ್ನು ಆಡುವ ಹಾಗೂ ನೋಡುವ ಹುಚ್ಚು ಇತ್ತು. ನಾನು ಕಾಲೇಜಿನ ಎಷ್ಟೋ ರಜಾದಿನಗಳನ್ನು ವಾಸುವಿನ ಮನೆಯಲ್ಲಿ ಕಳೆದದ್ದಿದೆ - ಕನ್ನಡದ ಹಲವು ನಿಯತಕಾಲಿಕಗಳಾದ ಕಸ್ತೂರಿ, ಶೂದ್ರ, ಇತ್ಯಾದಿಗಳ ಪ್ರತಿಯೊಂದು ಪ್ರತಿಯೂ ಲಭ್ಯವಿರುತ್ತಿದ್ದುದಷ್ಟೇ ಅಲ್ಲದೇ ಅವರ ಮನೆಯಲ್ಲಿ ಒಂದು ಚಿಕ್ಕ ಲೈಬ್ರರಿಯೇ ಇತ್ತು. ರೇಣುಕಪ್ಪ ಗೌಡರು ಯಾವಾಗಲೂ ಹೇಳುತ್ತಿದ್ದರು - ಪುಸ್ತಕಗಳನ್ನು ಹೇಗೆ ಓದಬೇಕು ಎಂದರೆ ಜಾನುವಾರು ಬ್ಯಾಣದಲ್ಲಿ ಹುಲ್ಲನ್ನು ಮೆಂದಹಾಗಿರಬೇಕು ಎಂದು. ಹೀಗೆ ಆಗಾಗ್ಗೆ ನೀನಾಸಂ ಗೆ ಹೋಗಿ ಬರುತ್ತಿದ್ದಾಗ, ವಾಸುವಿನ ಜೊತೆ ಒಡನಾಡಿಕೊಂಡಿದ್ದಾಗಲೆ ನನಗೆ ಚಂದ್ರಶೇಖರ ಕಂಬಾರರ ದರ್ಶನವಾದದ್ದು. ಮುಂದೆ ಅವರ ಸಮಗ್ರ ಬರಹಗಳನ್ನು ಓದಿದೆನಾದರೂ ಮೊದಮೊದಲಿಗೆ ಅವರ ಪರಿಚಯವಿರಲಿಲ್ಲ, ವಾಸುವಿನ ತಂದೆ ಮತ್ತು ಸಂಗಡಿಗರು ಜೈಸಿದನಾಯ್ಕ, ಜೋಕುಮಾರ ಸ್ವಾಮಿ, ಸಂಗ್ಯಾ-ಬಾಳ್ಯಾ ಮುಂತಾದ ನಾಟಕಗಳನ್ನು ದೇಶಾದ್ಯಂತ ಆಡುತ್ತಾ, ಕಂಬಾರರ ಪದಗಳನ್ನು ಹಾಡುತ್ತ ಕಂಠಪಾಠ ಮಾಡಿಕೊಂಡಿದ್ದರು - ವಾಸು ಮತ್ತು ವಾಸುವಿನ ಅಣ್ಣ ಜಯರಾಮ ನನಗೆ ಕಂಬಾರರ 'ಅಂಜೂರಿ ಬನದಾಗಾs ನಾ ಹ್ಯಾಂಗಾs ಇರಲೇ' ಹಾಡನ್ನು ಹೇಳಿಕೊಟ್ಟು ಮುಂದೆ ಅದಕ್ಕೆ ನಮ್ಮ ವಿಶ್ವವಿದ್ಯಾನಿಲಯದ ಮಟ್ಟದಲ್ಲಿ ಬಹುಮಾನಗಳಿಸುವಂತೆಯೂ ಮಾಡಿದ್ದರು.

ನನ್ನ ಎರಡನೇ ಅಣ್ಣನಿಗೂ ಸಹ ಯಾವುದೋ ಒಂದು ತರಗತಿಯಲ್ಲಿ ಜೈಸಿದನಾಯ್ಕ ನಾಟಕವಿತ್ತು - ಅದರಲ್ಲಿನ ಬೆಳಗಾವಿ ಕನ್ನಡ, ಪಾತ್ರಗಳ ಮೂಲಕ ಹುಟ್ಟುವ ಪರಿಸರ ಹಾಗೂ ಆಡು ಮಾತುಗಳಲ್ಲಿನ ನೈಜತೆ ಇವೆಲ್ಲವೂ ನನ್ನನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದವು, ಮುಂದೆ ಈ ಮೆಚ್ಚುಗೆಯೇ ಕುತೂಹಲವಾಗಿ 'ಇನ್ನೇನಿದೆ ನೋಡೋಣ' ಎನ್ನುವಂತೆ ಕಂಬಾರರ ಲಭ್ಯವಿದ್ದ ಎಲ್ಲ ಪುಸ್ತಕಗಳನ್ನೂ ಓದಿಸಿ, ಅವುಗಳ ಬಗ್ಗೆ ಅಲ್ಲಲ್ಲಿ ಚರ್ಚಿಸುವಂತಾಗಿತ್ತು. ವಾಸು ನನಗಿಂತಲೂ ಚೆನ್ನಾಗಿ ಹಾಡುತ್ತಿದ್ದ, ಆದರೆ ಅವನು ತನ್ನ ಕಂಠವನ್ನು ಎಲ್ಲೂ ಬಹುಮಾನ ಗೆಲ್ಲುವ ಸ್ವರ್ಧೆಗಳಲ್ಲಿ ಬಳಸಿಕೊಂಡಿದ್ದನ್ನು ನಾನು ನೋಡಲಿಲ್ಲ - ಅವನ ಬಾಯಿಂದ 'ಅಪ್ಪಾ ಸೂತ್ರಧಾರ ಕೇಳ...', 'ಮರೆತೇನೆಂದರೆ ಮರೇಲಿ ಹೇಂಗs', 'ಅಗಲೀ ಇರಲಾರೆನೋ ನಿನ್ನನ್ನಾ...' ಮುಂತಾದ ಹಾಡುಗಳನ್ನು ಕೇಳಬೇಕು, ಕಂಬಾರರ ಆ ಹಾಡುಗಳಿಗೆ ಒಂದು ಹೊಸ ಅರ್ಥವೇ ಹುಟ್ಟಿಕೊಳ್ಳುತ್ತಿತ್ತು.

***

ಒಮ್ಮೆ ಜ್ಞಾನಪೀಠ ಪ್ರಶಸ್ತಿಯನ್ನು ಪಡೆದ ಭಾಷೆಗೆ ಮತ್ತೆ ಅದೆಷ್ಟೋ (ಐದು ಇರಬೇಕು) ವರ್ಷಗಳ ನಂತರವೆ ಕನ್ಸಿಡರ್ ಮಾಡುತ್ತಾರೆಂತಲೂ, ಮೊದಲಿನ ಹಾಗೆ 'ನಾಕು-ತಂತಿ', 'ಚಿಕವೀರ ರಾಜೇಂದ್ರ' ಮುಂತಾದ ಏಕಕೃತಿಗಳ ಮೇಲೆ ಪ್ರಶಸ್ತಿಯನ್ನು ಕೊಡದೇ, ಕವಿ ಅಥವಾ ಬರಹಗಾರರ ಸಮಗ್ರ ಕೊಡುಗೆಯನ್ನು ಗಮನಿಸಿ ಪ್ರಶಸ್ತಿಯನ್ನು ಕೊಡುವಂತೆ ಕಟ್ಟಳೆಯನ್ನು ಬದಲಾಯಿಸಿದ್ದಾರೆಂತಲೂ ಕೇಳಿದ್ದೇನೆ. ಈ ಯಾವ ನಿಟ್ಟಿನಿಂದ ನೋಡಿದರೂ ಕನ್ನಡದಲ್ಲಿ ಅಗ್ರಮಾನ್ಯರಾಗಿ ನನ್ನ ಕಣ್ಣಿಗೆ ಕಂಡುಬರುವವರು ಕಂಬಾರರೇ, ಆದ್ದರಿಂದಲೇ ಮುಂದೆ ಕನ್ನಡಕ್ಕೆ ಮತ್ತೊಂದು ಜ್ಞಾನಪೀಠದ ಗರಿ ಮೂಡಿತೆಂದರೆ ಕಂಬಾರಿಂದಲೇ ಎಂದು ನಂಬಿಕೊಂಡಿರುವವ ನಾನು. ಮೈಸೂರು-ಮಂಗಳೂರಿನವರಿಗೆ ಅವರ ಭಾಷೆ ಮೇಲ್ನೋಟಕ್ಕೆ ಸ್ವಲ್ಪ ಒರಟು, ಕಷ್ಟವೆಂದು ಕಂಡು ಬಂದರೂ ಒಮ್ಮೆ ಅವರ ಬರಹದ ಸವಿ ಹತ್ತಿತೆಂದರೆ ಒಂದು ರೀತಿ ಜೋನಿ ಬೆಲ್ಲವನ್ನು ತಿಂದರೆ ಇನ್ನೂ ತಿನ್ನಬೇಕು ಎಂಬಂತೆ ಆಗುವ ಹಾಗೆ ಆಗುತ್ತದೆ. ನಿಮಗೆ ನನ್ನ ಮೇಲೆ ನಂಬಿಕೆ ಇರದಿದ್ದರೆ ನಾನು ಹೇಳಿದೆನೆಂದು ಅವರ ಕಾಡುಕುದುರೆಯನ್ನು ಎರಡು ಸಾರಿ ಓದಿ ನೋಡಿ ನಿಮಗೇ ಗೊತ್ತಾಗುತ್ತದೆ. ಇನ್ನು ಕಂಬಾರರ ಹಾಡುಗಳನ್ನು ಅವರ ಬಾಯಿಂದಲೇ ಕೇಳುವ ಭಾಗ್ಯವೇನಾದರೂ ನಿಮಗೆ ಲಭಿಸಿದರೆ ಅದನ್ನು ಯಾವ ಕಾರ್‍ಅಣಕ್ಕೂ ತಪ್ಪಿಸಿಕೊಳ್ಳಬೇಡಿ - ಕಂಬಾರರ ಹಾಡುಗಳಲ್ಲಿನ ವಸ್ತುಗಳನ್ನು ಎಸ್.ಪಿ. ಬಾಲಸುಬ್ರಮಣ್ಯಂ (no offense) ಕಂಠದಲ್ಲಿ ಕೇಳಿದಾಗ ಪೇಟೇ ಹುಡುಗ ಹಳ್ಳಿಯಲ್ಲಿ ಕಳೆದುಕೊಂಡ ಹಾಗಾಗುತ್ತದೆ, ಬೇಕಾದರೆ ನೀವೇ 'ಕಾಡು ಕಾಡೆಂದರೆ' ಕೇಳಿ ನೋಡಿ.

***

ನಾನು ಇತರ ಭಾರತೀಯ ಭಾಷೆಗಳಲ್ಲಿನ ಸಾಹಿತ್ಯದ ಬಗ್ಗೆ ಅಲ್ಲಲ್ಲಿ ಕೇಳಿದ್ದೇನೆ, ಅನುವಾದವಾದವುಗಳನ್ನು ಶಕ್ತ್ಯಾನುಸಾರ ಓದಿದ್ದೇನೆ, ಹಾಗೂ ಮಲಯಾಳಂ, ಬೆಂಗಾಲೀ ಮತ್ತು ಹಿಂದೀ ಭಾಷೆಯಲ್ಲಿ ಹುಟ್ಟಿರಬಹುದಾದ ಸಾಹಿತ್ಯವನ್ನು ಕನ್ನಡದ ಬೆಳವಣಿಗೆಗೆ ಹೋಲಿಸಿಕೊಂಡು ಕೆಲವು ಸಾರಿ ತಲೆಕೆಡಿಸಿಕೊಂಡಿದ್ದೇನೆ. ಇವೆಲ್ಲ ಮಿತಿ ಅಥವಾ ಅನುಭವಗಳಿಂದ ಹೇಳುವುದಾದರೆ ನಮ್ಮ ಕನ್ನಡದ ಸಾಹಿತ್ಯ ಬಹಳ ಅಗಾಧವಾದುದು ಹಾಗು ವಿಸ್ತೃತವಾದದ್ದು, ಈ ನಿಟ್ಟಿನಲ್ಲಿಯೇ ಕನ್ನಡಕ್ಕೆ ಏಳೇನು ಎಪ್ಪತ್ತು ಜ್ಞಾನಪೀಠ ಬಂದರೂ ಕಡಿಮೆಯೇ ಎನ್ನುವವ ನಾನು. ಹೀಗೆ ಹೇಳುವ ಸಮಯದಲ್ಲಿಯೇ ಬಾಪು ಅಂಥವರಿಗೆ ಯಾವ ನೊಬೆಲ್ ಶಾಂತಿ ಪಾರಿತೋಷಕವೂ ಬರಲಿಲ್ಲ ಎನ್ನುವ ವಾಸ್ತವವನ್ನು ಕಂಡು ನನ್ನ ಮೂರ್ಖ ನಿಲುವಿಗೆ ನಿಲುಕಲಾರದ ಸಾಹಿತ್ಯ ಉಳಿದ ಭಾಷೆಗಳಲ್ಲಿ ಇರಲೂಬಹುದು ಎಂಬುದನ್ನೂ ಒಪ್ಪಿಕೊಳ್ಳುತ್ತೇನೆ. ಬೇಂದ್ರೆ-ಕಂಬಾರರಂತಹವರನ್ನು 'ಅನುವಾದಕರಿಗೆ ಸೆಡ್ಡು ಹೊಡೆಯುವವರು' ಎಂದು ಕರೆಯುತ್ತೇನೆ, ಎಂಥ ಇಂಗ್ಲೀಷ್ ಬಲ್ಲ ನಿಪುಣನಿಗೂ ಕಂಬಾರರ ಬರಹಗಳನ್ನು ಇಂಗ್ಲೀಷಿಗೆ ತರುವ ಮಾತು ಸಾಧ್ಯವಿಲ್ಲದ್ದು - ಕನ್ನಡಿಗರಿಗೆ ಅದು ಬಹಳ ಹೆಚ್ಚುಗಾರಿಕೆಯಾದದ್ದಾದರೆ, ಕನ್ನಡೇತರರು ಏನನ್ನು ಕಳೆದುಕೊಂಡಿದ್ದಾರೆಂತಲೇ ಅವರಿಗೆ ಗೊತ್ತಿಲ್ಲ! (they don't know what they don't know ಎನ್ನುವ ಅರ್ಥದಲ್ಲಿ).

Tuesday, May 16, 2006

ನಾನು ಮತ್ತು 'ಅವರು'

ಅವರು: ನೋಡಿ, ನೀವು ಈಗಷ್ಟೇ ಪೋಸ್ಟ್ ಆಫೀಸಿನಲ್ಲಿ ಮನಿ ಆರ್ಡರ್ ಫಾರಂ ಭರ್ತಿ ಮಾಡೋದಕ್ಕೆ ನಿರಾಕರಿಸಿದಿರಲ್ಲಾ ಆ ಮನುಷ್ಯ ಯಾರು ಗೊತ್ತೇ?

ನಾನು: ಇಲ್ಲ, ಯಾರವರು?

ಅವರು: ಅವರೇ, ನಿಮ್ಮನ್ನು ಇಲ್ಲೀವರೆಗೆ ಓದಿಸಿದ ಪುಣ್ಯಾತ್ಮರಲ್ಲಿ ಒಬ್ಬರು!...

ನಾನು: (ಅವರ ಮಾತುಗಳನ್ನು ಮಧ್ಯದಲ್ಲೇ ತಡೆದು) ಏನ್ಸಾರ್, ತಮಾಷೆ ಮಾಡ್ತಾ ಇಲ್ಲಾ ತಾನೇ? ಅವರಿಗೂ ನಾನು ಓದಿದ್ದಕ್ಕೂ ಯಾವುದೇ ಸಂಬಂಧವಿಲ್ಲವಲ್ಲಾ?

ಅವರು: ಏಕಿಲ್ಲ, ಚೆನ್ನಾಗಿ ಯೋಚ್ನೇ ಮಾಡಿ, ನಿಮಗೇ ತಿಳಿಯುತ್ತೆ.

ನಾನು: ಆ...

ಅವರು: ನಾನೇ ಸ್ವಲ್ಪ ಬಿಡಿಸಿ ಹೇಳ್ತೀನಿ ಬಿಡಿ (ಸ್ವಗತ: ಈಗಿನ ಕಾಲದ ಹುಡುಗರಿಗೆ ಇಷ್ಟೂ ಗೊತ್ತಾಗೋಲ್ಲ ಅಂದ್ರೇನು?) ಈಗ ನೀವು ಏನು ಓದಿದಿರಾ, ಅಂದ್ರೆ ಯಾವ ಡಿಗ್ರಿ ಎಲ್ಲಿ ಮಾಡಿದ್ದು ಹೇಳಿ...

ನಾನು: ಅದೇ, (ಹೆಮ್ಮೆಯಿಂದ) ಸ್ನಾತಕ್ಕೋತ್ತರ ಪದವಿ, ಮೈಸೂರಿನ ಮಾನಸಗಂಗೋತ್ರಿಯಲ್ಲಿ ಮಾಡಿದ್ದು.

ಅವರು: ಈ ಡಿಗ್ರಿಗಳ ಬಗ್ಗೆ ನನಗೆ ಗೊತ್ತಿಲ್ಲಪ್ಪಾ, ಅದು ಎಷ್ಟು ವರ್ಷಗಳ ಕೋರ್ಸೂ?

ನಾನು: ಕೇವಲ ಎರಡೇ ವರ್ಷ...

ಅವರು: ಓಹ್, ಹೌದಾ...ನೋಡಿ...ಈಗ ಆ ಕೋರ್ಸಿಗೆ ನೀವು ಫೀಜು, ವಗೈರೆ ಅಂತ ಎಷ್ಟು ದುಡ್ಡು ಖರ್ಚು ಮಾಡಿರಬಹುದು, ಎರಡು ವರ್ಷಕ್ಕೆ?

ನಾನು: ಸುಮಾರು...ಎರಡೂ, ಎರಡು ನಾಲ್ಕು, ಏಳು, ಒಂಭತ್ತು..., ಹನ್ನೊಂದು ಸಾವಿರ ರೂಪಾಯ್.

ಅವರು: ಬರೀ ಹನ್ನೊಂದೇ ಸಾವಿರಾನೇ...ಅಂಥಾ ಯೂನಿವರ್ಸಿಟಿಯಲ್ಲಿ ಇಂಥಾ ಡಿಗ್ರಿ ಮಾಡೋಕೆ?!

ನಾನು: ಹೌದು ಸಾರ್, ಸ್ವಲ್ಪ ಹೆಚ್ಚು ಕಡಿಮೆ ಇದ್ರೂ ಇರಬಹುದು, ಆದರೆ ಹದಿನೈದು ಸಾವ್ರಕ್ಕಿಂತ ಜುಪ್ಪಯ್ಯಾ ಅಂದ್ರೂ ಮೇಲಕ್ ಹೋಗೋಲ್ಲ.

ಅವರು: ನಿಮ್ಮ ಟ್ಯೂಷನ್ ಫೀ ಎಷ್ಟಿತ್ತು, ಯೂನಿವರ್ಸಿಟಿಗೆ ಬರೀ ಈ ಕೋರ್ಸಿಗೆ ಸಂಬಂಧಿಸಿದಂತೆ ಎಷ್ಟು ಹಣ ಕೊಟ್ಟಿರಬಹುದು, ಅಂದಾಜೇ ಹೇಳಿ ಪರವಾಗಿಲ್ಲ.

ನಾನು: ಲ್ಯಾಬ್ ಫೀ, ಟ್ಯೂಷನ್ ಫೀ ಅಂತ ಎರಡು ವರ್ಷಕ್ಕೆ ಸುಮಾರು ಒಂದ್ ಸಾವಿರ ಕೊಟ್ಟಿರಬಹುದು ನೋಡಿ.

ಅವರು: ಏನೂ, ಒಂದೇ ಸಾವ್ರಾನೇ? ಅಲ್ಲೇ ಇರೋದು ನೋಡಿ ವಿಷ್ಯಾ...ಏನು ಅಂದ್ರೆ, ಯೂನಿವರ್ಸಿಟಿವತಿಯಿಂದ ಲೆಕ್ಕ ಹಾಕಿದ್ರೆ, ನೀವು ಟ್ಯೂಷನ್ ಫೀ, ಲ್ಯಾಬ್ ಫೀ, ಅಂತ ಯೂನಿವರ್ಸಿಟಿಗೆ ಕೊಟ್ಟಿರೋದು ಕೇವಲ ಒಂದು ಸಾವಿರ ರೂಪಾಯ್, ಇನ್ನುಳಿದ ದುಡ್ಡೆಲ್ಲಾ ನಿಮ್ಮ ಹಾಸ್ಟೆಲ್ಲು, ಪುಸ್ತಕ, ಬಟ್ಟೇ-ಬರೀ ಅಂತ ಖರ್ಚು ಮಾಡಿದ್ದೀರಿ ತಾನೆ?

ನಾನು: ಹೌದು, ಹೌದು, ಯೂನಿವರ್ಸಿಟಿಗೆ ಫೀಜು ಅಂತ ಕೊಟ್ಟ ದುಡ್ಡು ತುಂಬಾ ನಾಮಿನಲ್ಲು, ಈಗಿನ ಕಾಲದಲ್ಲೂ ಅಷ್ಟು ಕಡಿಮೆ ಬೆಲೆಗೆ ಟ್ಯೂಷನ್ ಹೇಳ್ತಾರಲ್ಲ ಅಂತ ನನಗೆ ಎಷ್ಟೋ ಸಾರಿ ಆಶ್ಚರ್ಯ ಆಗಿದೆ.

ಅವರು: ಆದ್ರೆ, ನಿಮ್ಮ ವಿದ್ಯಾಭ್ಯಾಸಕ್ಕೆ ಟ್ಯೂಷನ್, ಲ್ಯಾಬು, ಆ ಮೇಷ್ಟ್ರುಗಳಿಗೆ ಕೊಡೋ ಸಂಬಳ ಅಂತ ಯೂನಿವರ್ಸಿಟಿಗೆ ಅದಕ್ಕಿಂತ ಹೆಚ್ಚು ದುಡ್ಡು ಖರ್ಚಾಗುತ್ತೋ ಇಲ್ವೋ? ಅದೆಲ್ಲ ಸೇರಿದ್ರೆ, ನಿಮ್ಮ ವಿದ್ಯಾಭ್ಯಾಸಕ್ಕೆ ಎಷ್ಟು ಆಗಬಹುದು ಅಂತ ಊಹಿಸಿಕೊಳ್ಳಿ.

ನಾನು: ಸುಮಾರೇ ಆಗುತ್ತೆ, ಆ ಮೇಷ್ಟ್ರುಗಳಿಗೆ ಸಂಬಳವೂ ವಿಪರೀತ, ಇನ್ನು ಲ್ಯಾಬ್ ಖರ್ಚು, ಲೈಬ್ರರಿ, ಡಿಪಾರ್‍ಟ್‌ಮೆಂಟಿನ ಉಳಿದ ಸಿಬ್ಬಂದಿಯೋರಿಗೂ ಹಣ ಕೊಡಬೇಡವೆ?

ಅವರು: ಹಾಗಿದ್ದ ಮೇಲೆ ನೀವು ಕೊಟ್ಟಿರೋ ಟ್ಯೂಷನ್ ಫೀ ಯಾವ ಲೆಕ್ಕಕ್ಕೂ ಇಲ್ಲ ಅಲ್ವೇ, ಒಂಥರಾ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಇಟ್ಟ ಹಾಗೆ!

ನನು: ಹೌದು, ಹೌದು...

ಅವರು: (ನನ್ನ ಮಾತನ್ನು ಮಧ್ಯದಲ್ಲಿಯೇ ತಡೆದು) ಮಿಕ್ಕಿದ್ದೆಲ್ಲ ದುಡ್ಡು ಮೈಸೂರು ಯೂನಿವರ್ಸಿಟಿಗೆ ಎಲ್ಲಿಂದ ಬಂತು ಎಂದುಕೊಂಡಿರಿ?

ನಾನು: ಅದೇ ಯೂನಿವರ್ಸಿಟಿ ಅನುದಾನ ಅಂತ ಬಂದಿರಬಹುದು...

ಅವರು: ಅದೇ ಎಲ್ಲಿಂದ?

ನಾನು: ಕೇಂದ್ರ ಸರ್ಕಾರ ಇಷ್ಟು, ರಾಜ್ಯ ಸರ್ಕಾರ ಇಷ್ಟು ಅಂತ ಕೊಟ್ಟಿರಬಹುದು.

ಅವರು: ಈ ಸರ್ಕಾರಕ್ಕೆ ದುಡ್ಡು ಎಲ್ಲಿಂದ ಬಂತು?

ನಾನು: ಒಳ್ಳೇ ಕಥೆಯಾಯ್ತಲ್ಲಪ್ಪಾ, ನಿಮ್ದೂ...ಅದೇ ನಾವು ಟ್ಯಾಕ್ಸೂ, ಕಂದಾಯ ಅಂತ ಕಟ್ಟೋಲ್ವೇ ಅದರಿಂದ.

ಅವರು: ಟ್ಯಾಕ್ಸು ಕಟ್ಟೋ ಜನಗಳು ಯಾರು ಅಂತ?

ನಾನು: ಯಾರು ಅಂದ್ರೆ?

ಅವರು: ಅದೇ, ನಮ್ಮ ದೇಶದಲ್ಲಿ ಟ್ಯಾಕ್ಸ್ ಕಟ್ಟೋರು ಯಾರೂ ಅಂತ?

ನಾನು: ಎಲ್ಲರೂ ಕಟ್‌ತಾರೆ, ಅದರಲ್ಲೇನಂತೆ?

ಅವರು: ಅದರಲ್ಲೇ ಇರೋದು ವಿಶೇಷ...ಪ್ರತಿಯೊಬ್ರೂ ಟ್ಯಾಕ್ಸ್ ಕಟ್ತಾರೆ, ದೊಡ್ಡ ವ್ಯವಹಾರಸ್ತರೂ ಕಟ್ತಾರೆ, ಈ ಕಟ್ಟಿಗೆ ಒಡೆಯೋರು ಕಟ್ತಾರೆ - ಈಗ ಒಂದು ಸೋಪ್ ಕೊಂಡರೂ ಅದರಲ್ಲಿ All taxes included ಅಂಥ ಬರೆದಿರೋಲ್ವೇ? ನೀವೊಂದು ಬೆಂಕಿ ಪೊಟ್ನ ತಗೋಂಡ್ರೂ ಅದರಲ್ಲಿ Excise ಎಂದು ಬರೆದಿರೋ ಚೀಟಿ ಹರಿಯದಿದ್ರೆ ಅದರಿಂದ ಕಡ್ಡೀನೇ ಹೊರಗೆ ಬರೋದಿಲ್ಲ!

ನಾನು: ಅಂದ್ರೆ...

ಅವರು: ಅಂದ್ರೆ...ಈ ಸರ್ಕಾರಕ್ಕೆ ಎಲ್ಲರೂ ತೆರಿಗೆ ಕೋಡೋದರಿಂದ ಹಣ ಬರುತ್ತೆ, ಆದ್ರೆ, ನಮ್ ದೇಶದಲ್ಲಿ ಇಂಥಾ ತೆರಿಗೆ ಕೋಡೋ ಜನರಲ್ಲಿ ನೂರಕ್ಕೆ ಐವತ್ತು ಜನಕ್ಕೆ ತಮ್ಮ ಹೆಸರನ್ನೂ ಬರೆಯೋಕೆ ಬರೋದಿಲ್ವೇ...ಏನ್ ಮಾಡೋದು? ತಿಳುವಳಿಕೆ ಇರ್‍ಲೀ, ಇಲ್ಲದಿರ್‍ಲೀ, ಗೊತ್ತಿರ್‍ಲೀ, ಗೊತ್ತಿಲ್ಲದಿರ್‍ಲೀ ಟ್ಯಾಕ್ಸಂತೂ ಕಟ್ಟಲೇ ಬೇಕಾ? ಅಂದ್ರೆ ನೀವು ಓದಿರೋ ಯೂನಿವರ್ಸಿಟಿಗೆ ಸರ್ಕಾರದಿಂದ ಬಂದಿರೋ ಹಣದಲ್ಲಿ ಈ ಅನಕ್ಷರಸ್ಥರ ಪಾಲೂ ಇದೆ ಅಂತ ಆಯ್ತು, ಅಲ್ವಾ?

ನಾನು: ಸರಿಯಾಗೇ ಹೇಳಿದ್ರಿ...ಅದರೆ ಅದರ ರೆಲೆವೆನ್ಸ್ ಏನೂ ಅಂತ ಗೊತ್ತಾಗಲಿಲ್ಲ...

ಅವರು: ಆ ಹಾ! ಏನ್ರೀ ಇದೂ ಇಷ್ಟೊಂದು ಓದೀದೀನಿ ಅಂತೀರಾ, ನಾವು ಸ್ವಲ್ಪ ಹೊತ್ತು ಮುಂಚೆ ಮಾತನಾಡಿದ್ದನ್ನೇ ಮರೆತು ಬಿಟ್ರಲ್ಲಾ! ಅದೇ ಆ ಮನುಷ್ಯಾ, ಅಲ್ಲಿ ಮನಿ ಆರ್ಡರ್ ಫಾರಂ ತುಂಬಲಾರದೇ ಅಸಹಾಯಕತೆಯಿಂದ ನಿಂತಿದ್ದಾನೆ ನೋಡಿ...ಅವನೂ ನಿಮ್ಮನ್ನು ಇಲ್ಲೀವರೆಗೆ ಓದಿಸಿದ ಪುಣ್ಯಾತ್ಮರಲ್ಲಿ ಒಬ್ಬ...ಹೋಗಿ, ಸಿಕ್ಕಿದ್ದೇ ಅವಕಾಶ ಅಂಥ ಸೇವೆ ಮಾಡಿ ಋಣಾ ತೀರ್‍ಸಿ! ಹೋಗ್ ಹೋಗಿ.

***

ಏನ್ರೀ ಘಂಟೆ ಏಳಾದ್ರೂ ಇನ್ನೂ ಎದ್ದೇ ಇಲ್ಲವಲ್ಲಾ ನೀವು? ಯಾವ್ದಾದ್ರೂ ಕನ್ಸೇನಾದ್ರೂ ಬಿದ್ದಿತ್ತಾ 'ನಾನು ಮನಿ ಆರ್ಡರ್ ಫಾರಂ ತುಂಬಿಕೊಡ್ತೀನಿ, ನಾನೇ ತುಂಬ್ತೀನಿ...' ಅಂತ ಒಂದೇ ಸಮ ಕೂಗ್ ಕೊಳ್ತಾ ಇದ್ರಲ್ಲ, ಯಾರಿಗಾದ್ರೂ ದುಡ್ಡು ಕಳಿಸೋದೇನಾದ್ರೂ ಇದೆಯಾ?!

Monday, May 15, 2006

ಒಂದು sticking up ಸನ್ನಿವೇಶ

ಇವತ್ತು ಬೆಳಿಗ್ಗೆಯಿಂದ ಬರೀ ಗಡಿಬಿಡಿ, ಈ ಕಡೆ ಬಂದೂ ಸರಿಯಾಗಿ ಬಾರದೇ ಅಲ್ಲಲ್ಲಿ ತೊಂದರೆಕೊಡುವ ಮಳೆ, ಈ ಮಳೆ ಬಿದ್ದ ಕೂಡಲೇ ಪ್ರಪಂಚದಲ್ಲಿರೋ ಸಮಯವೆಲ್ಲ ತಮ್ಮದು ಎನ್ನುವಂತೆ ನಿಧಾನವಾಗಿ ರಸ್ತೆಯಲ್ಲಿ ಸಾಗೋ ಫೆಲೋ ಡ್ರೈವರುಗಳು, ಹೋದಲ್ಲಿ ಬಂದಲ್ಲೆಲ್ಲಾ ನಿರೀಕ್ಷೆಗಿಂತ ಮೀರಿ ಹಿಡಿಯೋ ಸಮಯ ಈ ಎಲ್ಲವೂ ಸೇರಿ ನನ್ನ ವ್ಯಸ್ತ ಮನಸ್ಸಿಗೆ ಕಿರಿಕಿರಿಯನ್ನುಂಟು ಮಾಡುತ್ತಿದ್ದವು. ಹೇಳೀ-ಕೇಳಿ ಸೋಮವಾರ ಬೇರೆ, 'ಮೊದಲೇ ಗೊಲ್ಲಿ, ಈಗಂತೂ ಹಡದಾಳೇ' ಅನ್ನೋ ಹಾಗೆ ಮನಸ್ಸಲ್ಲಿ ಎಲ್ಲವೂ ಅಸ್ತವ್ಯಸ್ತವಾಗಿರುವಾಗ ಈ ದಿನ ಯಾರೊಡನೆಯಾದರೂ ಜಗಳವಾಡುತ್ತೇನೆ ಅಥವಾ ಯಾರಿಂದಲಾದರೂ ಸಮಾ ಉಗಿಸಿಕೊಳ್ಳುತ್ತೇನೆ ಎಂದು ಕೊಂಡಿದ್ದೆ, ಆದರೆ ಆಫೀಸಿನ ಕೆಲಸ ಮುಗಿದರೂ ಹಾಗೇನೂ ಆಗಲಿಲ್ಲ. ಒಳಗಿದ್ದ ಬಿಸಿಯನ್ನು ಹೊರಕ್ಕೆ ಕಳಿಸಲಾರದೇ ಒಳಗೇ ಇಟ್ಟುಕೊಂಡಿರುವ ಪರಿಣಾಮವೋ ಎಂಬಂತೆ ಸುಮಾರು ನಾಲ್ಕೂವರೆ ಹೊತ್ತಿಗೆ ಸರಿಯಾಗಿ ತಲೆನೋವು ಬೇರೆ ಶುರುವಾಯಿತು, ಅದರ ಹಿಂದೆ ಹೇಳಿ ಮಾಡಿಸಿದಂತೆ ಒಂದೆರಡು ಸೀನುಗಳೂ, ಹಾಗೂ ಅಲ್ಲಲ್ಲಿ ಮೂಗು ಸುರಿಯುವುದೂ ಶುರುವಾಯಿತು. ಅಯ್ಯೋ ಇನ್ನೇನು ನನಗೂ ಫ್ಲೂ ತಾಗಿಕೊಂಡಿತು ಎಂದು ಆಫೀಸಿನಲ್ಲಿ ಕೈ ಸರಿಯಾಗಿ ತೊಳೆಯದೇ ಅಲ್ಲಲ್ಲಿ ಮುಟ್ಟಿದ್ದಕ್ಕೆ ನನ್ನನ್ನೇ ಹುಡುಕಿಕೊಂಡು ಬಂದ ಫ್ಲೂ ವೈರಸ್ಸುಗಳು ಎಲ್ಲೆಲ್ಲೂ ಕಾಣತೊಡಗಿದಂತೆ ಒಮ್ಮೆ ಅನ್ನಿಸಿತು. ಆದರೆ, ನನ್ನ ಪುಣ್ಯಕ್ಕೆ ತಲೆನೋವು ಒಂದು ಬಿಟ್ಟು ಮಿಕ್ಕೆಲ್ಲ ಹೋಗಿ ದೊಡ್ಡ ಸಮಾಧಾನವಾದರೂ ಈ ಹಾಳು ತಲೆನೋವೊಂದು ಮಾತ್ರ ಇವತ್ತು ನಿನ್ನನ್ನು ಬಿಡುವುದಿಲ್ಲ ಎಂದು ಪಟ್ಟುಹಿಡಿದು ಕುಳಿತುಬಿಟ್ಟಿತ್ತು.

***

ಆರು ಘಂಟೆಯ ಹೊತ್ತಿಗೆ ಮನೆಗೆ ಬಂದವನೇ ಈ ಹಾಳು ನೋವಿಗೆ ಕಾಫೀನಾದರೂ ಸಹಾಯವಾಗಲಿ ಎಂದುಕೊಂಡು ಒಂದು ಬಿಸಿಬಿಸಿ ಟೇಸ್ಟರ್‍ಸ್ ಚಾಯ್ಸ್ ಮಾಡಿಕುಡಿದೆ, ಡಾರ್ಕ್ ರೋಸ್ಟ್ ನಿಧಾನವಾಗಿ ಸುಡುತ್ತಲೇ ಗಂಟಲಲ್ಲಿ ಇಳಿಯಿತೇ ವಿನಾ ತಲೆನೋವಿನ ಜೊತೆ ಸಂಧಿಯನ್ನು ಮಾಡಿಕೊಂಡಂತೆ ಕಂಡುಬಂದು ಅದರ ಮೇಲೆ ಯಾವ ಪರಿಣಾಮವನ್ನೂ ಬೀರಲಿಲ್ಲ. ಸಂಜೆ ಶಾಪ್ಪಿಂಗ್‌ಗೆ ಹೋಗೋಣವೆಂದು ಮೊದಲೇ ನನ್ನ ಹೆಂಡತಿಯೊಂದಿಗೆ ಮಾತನಾಡಿಕೊಂಡಿದ್ದರಿಂದ ಬಟ್ಟೆಯನ್ನೂ ಬದಲಿಸದೇ ಆಕೆಯ ಬರವನ್ನು ಕಾಯುತ್ತಾ ಕಂಪ್ಯೂಟರಿನಲ್ಲಿ ಏನೇನನ್ನೋ ಓದುತ್ತಾ ಕುಳಿತೆ - ಥೂ ಅವೇ ಹಳಸಲು ಸುದ್ಧಿಗಳು ಎಂದು ನಾನೋದುವ ಕನ್ನಡಪ್ರಭ, ಪ್ರಜಾವಾಣಿಗಳಿಗೆಲ್ಲ ಒಂದು ಹಿಡಿ ಶಾಪ ಹಾಕಿದೆ, ಮಧ್ಯೆ ಅಲ್ಲಲ್ಲಿ ಜೋರಾಗಿ ಬಂದು, ಆಗಾಗ ನಿಂತು ಹೋಗುವ ಮಳೆ ಕಣ್ಣಾ ಮುಚ್ಚಾಲೆ ಆಡುತ್ತಿದ್ದ ಮಕ್ಕಳಂತೆ ಕಂಡುಬಂತು, ಅದರಿಂದ ಡಿಸ್ಟರ್ಬ್ ಆದ್ದರಿಂದ ಅದಕ್ಕೂ ಒಂದು ಹಿಡಿ ಶಾಪ ಹಾಕಿದೆ.

ನನಗೇನಾದರೂ ಸಣ್ಣ ಖಾಯಿಲೆ ಬಂದರೆ ನಾನು 'ಊರೆಲ್ಲ ಒಂದು ಮಾಡುತ್ತೇನೆ' ಎನ್ನುವುದು ನನ್ನನ್ನು ಹತ್ತಿರದಿಂದ ಬಲ್ಲವರ ಅಂಬೋಣ - ಹೌದು, ಅದನ್ನು ನಾನು ಸಾಧಿಸಿಕೊಳ್ಳುತ್ತೇನೆ, ಏಕೆಂದರೆ ಐದು ವರ್ಷಗಳಿಗೆ ಒಮ್ಮೆಯೂ ನನಗೆ ಜ್ವರ ಬರುವುದಿಲ್ಲ, ಹಾಗಿದ್ದ ಮೇಲೆ ಒಮ್ಮೆಗೇ ಧಿಡೀರ್ ಎಂದು ಬಂದರೆ ನನಗೆ ಹಿಂದಿನ ಅನುಭವ ಯಾವುದೂ ನೆನಪಿನಲ್ಲಿ ಅಷ್ಟು ಸರಿಯಾಗಿ ಇಲ್ಲದಿರುವುದರಿಂದ ಅದೇ ಒಂದು ದೊಡ್ಡ ಎಪಿಸೋಡ್ ಆಗಿ ಕಾಣಿಸುತ್ತದೆ. ಮೊದಲೇ ಸೂಕ್ಷ್ಮ ಮನಸ್ಸಿನ ನನಗೆ ಪ್ರಪಂಚವೆಲ್ಲಾ ನನ್ನ ಸುತ್ತಲೇ ತಿರುಗೋದು ಎಂಬ ಬಲವಾದ ಹುಂಬ ನಂಬಿಕೆ ಇರೋದರಿಂದ 'ನನ್ನನ್ನು ನೋಡಿಕೊಳ್ಳೋರು ಯಾರೂ ಇಲ್ಲ' ಎಂದು ಸುತ್ತಲಿದ್ದವರನ್ನು ರೇಗಿದರೆ ನನ್ನದೇನೂ ತಪ್ಪಿಲ್ಲ, ಅಲ್ಲವೇ?

ಸರಿ ಆ ತಲೆನೋವಿನಲ್ಲೇ, ಮಾತು ಕೊಟ್ಟಂತೆ ಶಾಪ್ಪಿಂಗ್‌ಗೆ ಹೊರಟೆ - ಕಲ್ವರ್ ರಸ್ತೆಯ ಬಳಿ ಸಿಗ್ನಲ್‌ಗೆ ಕಾಯುತ್ತಿದ್ದಾಗ ಎಡಬದಿ ಹೊರಳಿ ನೋಡಿದೆ, ನಮ್ಮೂರಿನ ಮುನಿಸಿಪಾಲಿಟಿ ಆಫೀಸಿನ ಹಿಂದೆ ಸೂರ್ಯ ಮುಕ್ಕಾಲು ಮುಳುಗಿ, ಮಕ್ಕಳ ಬಾಯಲ್ಲಿ ಕರಗೋ ದುಂಡನೆ ಕಿತ್ತಳೆ ಚಾಕಲೇಟಿನಂತೆ ಕಂಡು ಬರುತ್ತಿದ್ದ, ಸೂರ್ಯ ಹೋದ ದಿಕ್ಕಿನಲ್ಲಿ ಚಾಕಲೇಟಿನಿಂದ ಕೆಂಪಾದ ಬಾಯಿ ಹಾಗೂ ನಾಲಿಗೆಯ ತರಹ ಮೋಡಗಳು ಚೆಲ್ಲಿಕೊಂಡಿದ್ದವು. ಕಾರಿನಲ್ಲಿ ಗಡಿಯಾರವನ್ನು ನೋಡಿದರೆ ಸರಿ ಎಂಟು ಘಂಟೆಯನ್ನು ತೋರಿಸುತ್ತಿತ್ತು - ಯಾವುದಾದರೂ ಒಳ್ಳೆಯ ಸಂಗೀತ ಬರುತ್ತೇನೋ ಎಂದು ೯೬.೩ ಸ್ಟೇಷನ್ ಹಾಕಿ ನೋಡಿದೆ, ದಿನವೂ ಇಂಪಾಗಿ ಕೇಳಿಸೋ ಪಿಟೀಲು, ಹಾರ್ಮೋನಿಯಮ್ ಧ್ವನಿ ಈ ದಿನ 'ಕುಯ್ಯೋ-ಕುಯ್ಯೋ' ರಾಗವಾಗಿ ಕೇಳಿ ಬಂತು.

***

ಇಲ್ಲಿನ ಹೋಲ್‌ಸೇಲ್ ಅಂಗಡಿಯೊಂದರಲ್ಲಿ ನಮಗೆ ಬೇಕಾದ ಸಾಮಾನುಗಳನ್ನು ತುಂಬಿಸಿಕೊಂಡು ನಾನೂ ನನ್ನ ಹೆಂಡತಿ ಸಾಲಿನಲ್ಲಿ ಚೆಕ್‌ಔಟ್ ಮಾಡಲೆಂದು ಮುಂದಿದ್ದ ಓರಿಯಂಟಲ್ ಕಪಲ್ ಹಿಂದೆ ನಿಂತೆವು, ನಾನೇ ಕೈಯಲ್ಲಿ ಶಾಪ್ಪಿಂಗ್ ಕಾರ್ಟ್ ಅನ್ನು ಹಿಡಿದುಕೊಂಡು ನಿಂತಿದ್ದೆ. ಅದೇ ಸಮಯಕ್ಕೆ ಒಬ್ಬಳು ಸುಮಾರು ಇಪ್ಪತ್ತು ವರ್ಷ ವಯಸ್ಸಿನ ಆಫ್ರಿಕನ್ ಅಮೇರಿಕನ್ ಹುಡುಗಿಯೊಬ್ಬಳು ನಾನು ಹಾಗೂ ನನ್ನ ಮುಂದಿರುವವರ ನಡುವೆ ತನ್ನ ಗಾಡಿಯನ್ನು ತೂರಿಸಿದಳು. ಒಂದು ಕಡೆ ತಲೆ ಬೇರೆ ಸಿಡಿಯುತ್ತಲೇ ಇತ್ತು, ಅಂಥದ್ದರಲ್ಲಿಯೂ ಸಮಾಧಾನವಾಗಿ 'ನೋಡು, ನಾನು ನಿನಗಿಂತ ಮುಂಚೆ ಲೈನಿನಲ್ಲಿ ಇದ್ದವನು' ಎಂದೆ. ಆದರೆ ಆಕಡೆಯಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ - ಅದಕ್ಕೆ ಬದಲಾಗಿ ತನ್ನ ಕಾರ್ಟನ್ನು ಇನ್ನೂ ಮುಂದೆ-ಮುಂದೆ ತಳ್ಳುವ ಹಾಗೆ ಕಂಡು ಬಂದಳು. ನಿಜ ಹೇಳಬೇಕೆಂದರೆ, ಸಾಮಾನ್ಯವಾಗಿ, ಇಂಥ ಸಂದರ್ಭಗಳಲ್ಲಿ ನನ್ನ ಹೆಂಡತಿಗೆ ನನಗಿಂತಲೂ ಹೆಚ್ಚು ಸಿಟ್ಟು ಬರುತ್ತದೆ, ನಾನು ಅವಳನ್ನು ಸಮಾಧಾನಪಡಿಸುತ್ತಿರುತ್ತೇನೆ, ಆದರೆ ಇಂದು ನನ್ನ ಕಣ್ಣಮುಂದೇ ಹೀಗಾಗಿದ್ದಕ್ಕೆ ಅವಳಿಗಿಂತಲೂ ನನಗೇ ಹೆಚ್ಚು ಸಿಟ್ಟು ಬಂದಿತ್ತು, ನನ್ನ ಮಾತಿಗೆ ಉತ್ತರ ಕೊಡದೇ ತನ್ನನ್ನು ಹೀಗೆ ನೂಕಿಕೊಂಡು ಕಾಲುಕೆರೆದು ಜಗಳವಾಡುವವಳನ್ನು ಏನೆಂದು ಹೇಳಲಿ, ನನ್ನ ಹೆಂಡತಿಗೆ ನಮ್ಮ ಸಾಮಾನುಗಳನ್ನು ತೆಗೆದು ಕೌಂಟರಿನ ಮೇಲೆ ಇಡಲು ಹೇಳಿದೆ, ಅವಳು ಒಂದೊಂದಾಗೆ ಸಾಮಾನನ್ನು ಇಡುತ್ತಾ ಬಂದಳು. ಈ ಮಧ್ಯೆ ಆ ಕಪ್ಪು ಹುಡುಗಿಯ ಕಡೆಯವರು ಮೂರು ಜನರಾದರು, ನಾನು ಬಹಳ ದಿನಗಳ ನಂತರ ಜಗಳವಾಡಲು ಅವಕಾಶವೊಂದು ಸಿಕ್ಕಿತೆಂದು ಯೋಚಿಸಿ ಹೇಗೆ ಶುರುಮಾಡಲಿ ಎಂದು ಮೇಲೆ ನೋಡತೊಡಗಿದೆ.

ಇನ್ನೇನು ನಾವು ಸಾಮಾನುಗಳನ್ನು ಕೌಂಟರಿನ ಹಿಂದಿರುವವಳಿಗೆ ತೋರಿಸಿ ತೆಗೆದುಕೊಳ್ಳಬೇಕು ಅಷ್ಟರಲ್ಲಿ, ನನ್ನ ಮುಂದೆಯೇ ಸಾಲಿನಲ್ಲಿ ನುಗ್ಗಿದ ರೀತಿಯಲ್ಲೇ ಆ ಹುಡುಗಿ ತನ್ನ ಸಾಮಾನುಗಳನ್ನು ತನ್ನ ಕಾರ್ಟಿನಿಂದ ತೆಗೆದು ನನ್ನ ಸಾಮಾನುಗಳ ಮುಂದೆ ಇಟ್ಟಿದ್ದೂ ಅಲ್ಲದೇ 'ನಾನು ನಿನಗಿಂತ ಸಾಲಿನಲ್ಲಿ ಮೊದಲಿದ್ದೆ' ಎನ್ನುವಂತೆ ಗಟ್ಟಿಯಾಗಿ ಕೂಗಿಕೊಳ್ಳತೊಡಗಿದಳು, ಅವಳ ಜೊತೆಯಲ್ಲಿದ್ದ ಒಬ್ಬಳು ಹಿರಿಯ ಹೆಂಗಸು ನನ್ನನ್ನುದ್ದೇಶಿಸಿ 'she says, she was before you in the line.' ಎಂದಳು. ನಾನು 'That is not true' ಎಂದು ಆಕೆಯ ಉತ್ತರಕ್ಕೂ ಕಾಯದೇ ಕೌಂಟರಿನಲ್ಲಿ ಕೆಲಸ ಮಾಡುತ್ತಿದ್ದಾಕೆಗೆ ನಾನು ಸಾಲಿನಲ್ಲಿ ಮೊದಲಿದ್ದೇನಂತಲೂ, ನನ್ನ ಸಾಮಾನುಗಳನ್ನು ಮೊದಲು ತೆಗೆದುಕೊಳ್ಳುವಂತೆಯೂ ಹೇಳಿದೆ, ಆಕೆ ತನ್ನ ಅಸಹಾಯಕತೆಯನ್ನು ಹೇಳಿಕೊಂಡಳು - ನಾವಿಬ್ಬರೂ ಸ್ಟೋರ್ ಮ್ಯಾನೇಜರನ್ನು ಕರೆಯುವಂತೆ ತಾಕೀತು ಮಾಡಿದೆವು. ನಾವು ಒಬ್ಬರನ್ನು ಕರೆದರೆ ಇಬ್ಬರು ಮ್ಯಾನೇಜರರು ಬಂದರು - ಅವರಲ್ಲಿ ಒಬ್ಬ ಬಿಳಿಯ ಮತ್ತೊಬ್ಬ ಭಾರತೀಯ. ಈ ಕಪ್ಪು ಜನರು ಯಾರ ಮಾತನ್ನೂ ಕೇಳುವವರ ಹಾಗಿರಲಿಲ್ಲವೆಂದು ಅವರಿಗೂ ಚೆನ್ನಾಗಿ ಗೊತ್ತಿತ್ತೆಂದು ಕಾಣುತ್ತದೆ ಅವರು ನಮಗೇ ತಿಳಿಸಿ ಹೇಳಲು ನೋಡಿದರು - 'ನೋಡಿ ನೀವು ಹೀಗೆ ಮಾಡಿದರೆ ನಿಮಗೂ, ಮತ್ತೆಲ್ಲರಿಗೂ ತಡವಾಗುತ್ತದೆ' ಎಂದು ಕೌಂಟರಿನ ಕ್ಲರ್ಕ್‌ನ್ನು 'ನೀನು, ಯಾರು ಮೊದಲು ಸಾಲಿನಲ್ಲಿದ್ದದ್ದೆಂದು ನೋಡಿದ್ದೀಯೇನು?' ಎಂದು ಕೇಳಿದರು, ಅವಳು 'ನನಗೆ ಗೊತ್ತಿಲ್ಲ' ಎಂದು ಕೈ ಚೆಲ್ಲಿದಳು. ನಾನು ನನ್ನ ಮುಂದಿದ್ದ ಓರಿಯೆಂಟಲ್ ದಂಪತಿಗಳ ಕಡೆಗೆ ನೋಡಿದೆ, ಅವರು ನಮಗೂ ಇದಕ್ಕೂ ಸಂಬಂಧವಿಲ್ಲವೆಂಬಂತೆ ಮುಖ ತಿರುಗಿಸಿಕೊಂಡರು. ಉದ್ದವಾಗಿ ಬೆಳೆಯುತ್ತಿದ್ದ ಸಾಲಿನಲ್ಲಿ ಜನಗಳಿಗೆ ಪುಕ್ಕಟೆ ಮನರಂಜನೆಯೂ ಹಾಗೂ ಅವರಲ್ಲಿ ತರಾತುರಿಯಿಂದಿದ್ದವರ ಅಸಹನೆಯೂ ಗೋಚರವಾಗತೊಡಗಿತು. ನನ್ನ ಹೆಂಡತಿ ಇದು ಬಗೆ ಹರಿಯುವವರೆಗೂ ನಾವಿಲ್ಲಿಂದ ಕದಲುವುದು ಬೇಡವೆಂದು ನನಗೆ ಕನ್ನಡದಲ್ಲಿ ಹೇಳಿದಳು, ಇದಕ್ಕೆಲ್ಲ ತಾನೇ ಉತ್ತರ ಕಂಡುಹಿಡಿದುಕೊಂಡವಳಂತೆ ಕೌಂಟರಿನ ಕ್ಲರ್ಕ್ ನಮ್ಮ ಮುಂದೆ ಅಸಭ್ಯವಾಗಿ ನಡೆದುಕೊಂಡು, ಅವರ ಸಾಮಾನುಗಳನ್ನು ನಮ್ಮ ಮುಂದೆ ಬಲವಂತವಾಗಿ ತಳ್ಳಿದವರ ಕಡೆಗೆ ಅವರ ಸಾಮಾನುಗಳನ್ನು ಸ್ಕ್ಯಾನು ಮಾಡುವುದರ ಮೂಲಕ ನ್ಯಾಯ ಘೋಷಿಸಿಬಿಟ್ಟಳು. ನನಗೆ ಅದೆಲ್ಲಿಂದ ಸಿಟ್ಟು ಬಂತೋ ಗೊತ್ತಿಲ್ಲ ಆ ಕರಿಯರ ಕಡೆಗೆ ತಿರುಗಿ ಸಾಧ್ಯವಾದಷ್ಟು ದೊಡ್ಡ ಧ್ವನಿಯಲ್ಲಿ'You will never learn' ಎಂದೆ, ಹಾಗೂ ಬಂದಿದ್ದ ಆ ಮ್ಯಾನೇಜರುಗಳ ಕಡೆಗೆ ತಿರುಗಿ 'Look, I don't mind the delay, it is a matter of principle, someday someone will have to bring it home to them' ಎಂದು ದೊಡ್ಡದಾಗಿ ಶ್ವಾಸವನ್ನು ಬಿಟ್ಟೆ. ಗಾಯದ ಮೇಲೆ ಉಪ್ಪು ಸುರಿಯೋರ ಹಾಗೆ ನಮ್ಮ ನಡುವೆ ನುಗ್ಗಿ ನಮಗಿಂತ ಮೊದಲು ಸಾಮಾನುಗಳನ್ನು ತೆಗೆದುಕೊಂಡ ಹುಡುಗಿ 'ನಿನ್ನನ್ನು ಸೋಲಿಸಿಬಿಟ್ಟೆ ನೋಡು!' ಎಂಬ ಭಾವದಲ್ಲಿ ಪಕಪಕನೆ ನಕ್ಕು ಬಿಟ್ಟಳು - ನಾನು ಭಾರತದಲ್ಲಿ ಬಿಡೋ ಹಾಗೆ ನನ್ನ ಕೆಂಪು ಕಣ್ಣುಗಳನ್ನು ಸಾಧ್ಯವಾದಷ್ಟು ದೊಡ್ಡದು ಮಾಡಿ ಅವಳೆಡೆಗೆ ದುರುಗುಟ್ಟಿದೆ, ಅವಳು ಸುಮ್ಮನಾದದ್ದು ಮತ್ತೇನೂ ಅನಾಹುತವಾಗದ ಹಾಗೆ ನನ್ನನ್ನು ಕಾಪಾಡಿತು.

***

ಒಂಭತ್ತು ಘಂಟೆಯಾಯಿತೆಂದು ನಾವಿಬ್ಬರೂ ಲಗುಬಗೆಯಿಂದ ಮನೆಯ ಕಡೆಗೆ ಹೊರಟೆವು - ಆ ಕಪ್ಪು ಜನರ ಹಿಂಡು ಅದೇ ಅಂಗಡಿಯಲ್ಲಿರುವ ಫಾಸ್ಟ್‌ಫುಡ್ ವಿಭಾಗಕ್ಕೆ ತೆರಳಿ ಅಲ್ಲೇ ಕುಳಿತುಕೊಳ್ಳುವ ಹುನ್ನಾರ ನಡೆಸುವುದು ಕಂಡುಬಂದಿತು. ಹಠಮಾರಿತನದಲ್ಲಿ ಸಾಮಾನುಗಳನ್ನು ಅಲ್ಲೇ ಬಿಟ್ಟುಬರಬಹುದಿತ್ತು, ಅಥವಾ ಕ್ಯಾಮೆರಾ ರೀವೈಂಡ್ ಮಾಡಿ ನೋಡಿ ಎಂದು ಮ್ಯಾನೇಜರುಗಳಿಗೆ ಹೇಳಬಹುದಿತ್ತು, ತನ್ನ ವಂಶಸ್ಥರಿಗೆ ನ್ಯಾಯ ನೀಡಿದ ಆ ಕೌಂಟರ್ ಕ್ಲರ್ಕ್‌ನ್ನು ತರಾಟೆಗೆ ತೆಗೆದುಕೊಳ್ಳಬಹುದಿತ್ತು. ಆದರೆ ನಾವಿಬ್ಬರೂ ಗಟ್ಟಿ ಧ್ವನಿಯಲ್ಲಿ ಮಾತನಾಡಿ ನಮ್ಮ ನಿಲುವನ್ನು stick up ಮಾಡಿದ್ದೇ ಒಳ್ಳೆಯದಾಯಿತು, ಅದರಿಂದ ಇನ್ನೇನಾಗದಿದ್ದರೂ ಮುಂದೆ ಆ ಹುಡುಗಿ ಭಾರತೀಯರು ನರಸತ್ತವರು ಎಂದುಕೊಳ್ಳುವುದಕ್ಕಿಂತ ಮುಂಚೆ ಒಮ್ಮೆ ಯೋಚಿಸುವುದಂತೂ ಗ್ಯಾರಂಟಿ.

ಆದರೆ, ಈ ಕಪ್ಪು ಜನರ ಬಾಯಿಂದ ಕೈಯಿಂದ ಯಾವಾಗ ಏನೇನು ಬರುತ್ತದೆ ಎನ್ನುವುದು ಯಾರಿಗೂ ಗೊತ್ತಿಲ್ಲ, ಅವರು ನಮ್ಮನ್ನು ಹಿಂಬಾಲಿಸಿಕೊಂಡು ಪಾರ್ಕಿಂಗ್ ಲಾಟಿನವರೆಗೂ ಬಂದಿದ್ದರೆ ಎನ್ನುವ ಹೆದರಿಕೆ ನನ್ನಲ್ಲಿತ್ತು.

***

ಒಂದು ನೋವು ಅಥವಾ ಸಂಕಟ ಸಡನ್ ಆಗಿ ಮಾಯವಾಗಬೇಕೆಂದರೆ ಅದಕ್ಕಿಂತ ಬಲವಾದ ಮತ್ತೊಂದು ನೋವು ಅಥವಾ ಸಂಕಟವಾಗಬೇಕಂತೆ - ಈ ಗೊಂದಲದಲ್ಲಿ ನನ್ನ ತಲೆನೋವು ಯಾವಾಗಲೋ ಹಾರಿಹೋಗಿತ್ತು!

Sunday, May 14, 2006

ದೇಶದ್ರೋಹ ಮತ್ತು ದೇಶಪ್ರೇಮಗಳ ನಡುವಿನ ಸಣ್ಣ ಗೆರೆ

ಇಂದಿನ ಮಾಹಿತಿ ಯುಗದಲ್ಲಿ ನಾವು ಹಲವಾರು ಮೂಲಗಳಿಂದ ವಿಷಯಗಳನ್ನು ಗ್ರಹಿಸುತ್ತೇವೆ, ಸಂಗ್ರಹಿಸುತ್ತೇವೆ. ಆದರೆ ಪತ್ರಿಕೆಗಳು, ಅಂತರ್ಜಾಲ ತಾಣಗಳು, ರೇಡಿಯೋ, ಟಿವಿ. ಇತ್ಯಾದಿಗಳು ಸುದ್ದಿ, ವಿಚಾರಗಳ ಮಹಾಪೂರವನ್ನೇ ಹರಿಸುತ್ತಿರುವಾಗ ಕೆಲವೊಂದಿಷ್ಟನ್ನು ಕಳೆದುಕೊಳ್ಳಬೇಕಾಗುತ್ತದೆ, ಈ ಕಳೆದುಕೊಳ್ಳುವುದರ ಹಿಂದೆ ಹಲವಾರು (ಕ್ವಾಲಿಟಿ, ಕಂಟೆಂಟ್, ವರದಿಗಳ ಸ್ವಾರಸ್ಯ, ಮೌಲ್ಯ, ಪಕ್ಷಪಾತ, ಏಕಪಕ್ಷೀಯ ನಿಲುವು, ಇತ್ಯಾದಿ) ಕಾರಣಗಳಿರಬಹುದಾದರೂ ಕೆಲವೊಮ್ಮೆ ಭಾವನೆಗಳೂ, ನಮ್ಮ ನಂಬಿಕೆಗಳೂ ಕಾರಣವಾಗುತ್ತವೆ. ಈ ದಿನ NPR ನ Weekend editionನಲ್ಲಿ ಇರಾಕಿನ ಮಾಜೀ ಯೋಧನೊಬ್ಬನನ್ನು ದೊಡ್ಡ ಹೀರೋನನ್ನಾಗಿ ಚಿತ್ರಿಸಿದ ಅವತರಣಿಕೆಯೊಂದು ಬಿತ್ತರವಾಯಿತು - ತನ್ನ ದೇಶವನ್ನು ಅಂದು ಜೋಪಾನ ಮಾಡಿಕೊಳ್ಳುವ ಮನಸ್ಸಿರದವನು ಅಮೇರಿಕದ ನೀರು ಕುಡಿದ ಕೆಲವೇ ದಿನಗಳಲ್ಲಿ "...I have a very big, huge faith in the future..." ಎಂದದ್ದು ನನಗಂತೂ ಬಾಲಿಶವಾಗಿ ಕಾಣಿಸಿತು.

***

NPR ನ Weekend Editionನಲ್ಲಿ ಇರಾಕೀ ಮಿಲಿಟರಿಯನ್ನು ಅಮೇರಿಕದವರು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಮೈಲಿಗಲ್ಲೊಂದನ್ನು ಮುಟ್ಟಲಾಗಿದೆ ಎಂಬ ವರದಿ ಇಂದು ಮುಂಜಾನೆ ಪ್ರಕಟವಾಯಿತು. ಈ ವರದಿಯಲ್ಲಿ ೨೮ ವರ್ಷ ವಯಸ್ಸಿನ ಆರ್ಕನ್ ಎನ್ನೋ ಇರಾಕೀ ಆರ್ಮೀ ಕ್ಯಾಪ್ಟನ್ ಒಬ್ಬನು ಅಮೇರಿಕದ ಎಲೈಟ್ ಸೈನಿಕರು ಮಾತ್ರ ಮುಗಿಸಬಹುದಾದ ರೇಂಜರ್ ಟ್ರೈನಿಂಗ್‌ನ್ನು ಫೋರ್ಟ್ ಬೆನ್ನಿಂಗ್, ಜಾರ್ಜಿಯಾ ದಲ್ಲಿ ಮುಗಿಸಿದನೆಂದೂ, ಯಶಸ್ವಿಯಾಗಿ ತರಬೇತಿ ಮುಗಿಸಿದ ಉಳಿದ ೧೮೬ ಜನರಲ್ಲಿ ಆರ್ಕನ್ ಕೂಡಾ ಒಬ್ಬನೆಂದೂ ಹಾಗೂ ತನ್ನ ದಿನ ನಿತ್ಯದ ಚಟುವಟಿಕೆಳಲ್ಲಿ ಆದಷ್ಟು 'ಅಮೇರಿಕನ್' ಶೈಲಿಯನ್ನು ಬಳಸುತ್ತಾನೆಂದೂ ಆರ್ಕನ್‌ನ್ನು ಪರಿಚಯಿಸಿದರು. ಇರಾಕಿನಲ್ಲಿ ಅಮೇರಿಕನ್ ಮಾದರಿಯ ಆರ್ಮಿಯನ್ನು ಸ್ಥಾಪಿಸುವುದು ಇವೆಲ್ಲದರ ಉದ್ದೇಶ, ಆದರೆ ಅದು ಎಷ್ಟರ ಮಟ್ಟಿಗೆ ಸಫಲವಾಗುತ್ತೋ ಅನ್ನೋದು ಸ್ಟೋರಿಯ ಹಿನ್ನೆಲೆಯಾದರೂ ವರದಿಗಾತ್ರಿ ಡೆಬ್ರಾ ಏಮೋಸ್ (Deborah Amos) ಉತ್ತರವನ್ನಾಗಲೇ ಕಂಡುಕೊಂಡ ಹಾಗಿತ್ತು.

ಇರಾಕ್‌ನಲ್ಲಿ ಅಳಿದುಳಿದ ಯುವಕರನ್ನು ಮಿಲಿಟರಿಗೆ ಸೇರಿಸಿಕೊಂಡು ಅವರಲ್ಲಿ ಆಯ್ದ ಕೆಲವರನ್ನು ಅಮೇರಿಕಕ್ಕೂ ಕರೆದುಕೊಂಡು ಬಂದು, ಅಮೇರಿಕದ ಫ್ಲೋರಿಡಾ ಹಾಗೂ ಜಾರ್ಜಿಯಾದ ಮಿಲಿಟರಿ ಕ್ಯಾಂಪ್‌ಗಳಲ್ಲಿ ಬೂಟ್‌ಕ್ಯಾಂಪ್‌ಗಿಂತಲೂ ಹೆಚ್ಚು ಇಂಟೆನ್ಸ್ ಆಗಿ ತರಬೇತಿಯನ್ನು ಕೊಟ್ಟು ಅವರನ್ನು ತಮ್ಮ ತಾಯ್ನಾಡಿಗೆ ಕಳಿಸಿ ಮಿಲಿಟರಿಯಲ್ಲಿ ಹೆಚ್ಚಿನ ಸ್ಥಾನವನ್ನು ಕೊಟ್ಟರೆ... ಎಂಬುದು ಅಮೇರಿಕನ್‌ರ ತರ್ಕ. ಈ ತರಬೇತಿ ಎಷ್ಟು ತೀಕ್ಷ್ಣವಾಗಿರುತ್ತದೆ ಎಂದರೆ ಸುಮಾರು ಅರ್ಧಕರ್ಧ ಜನ ಮಧ್ಯದಲ್ಲಿಯೇ ಬಿಡುತ್ತಾರೆಂತಲೂ, ತರಬೇತಿಯನ್ನು ಯಶಸ್ವಿಯಾಗಿ ಪೂರೈಸುವರು ದಿನವಿಡೀ ತಮ್ಮ ದೇಹ ಹಾಗೂ ಮನಸ್ಸನ್ನು ಕಾಂಬ್ಯಾಟ್ ಸಿಚುವೇಷನ್‌ಗೆ ಒಡ್ಡಿಕೊಂಡು ತಮ್ಮನ್ನು 'ಗಟ್ಟಿ'ಮಾಡಿಕೊಳ್ಳುತ್ತಾರೆಂತಲೂ ಕೇಳಿದೆ.

ಈ ವರದಿಯಲ್ಲಿ ಆರ್ಕನ್ ಎಂಬ ಹಳೆಯ ಸದ್ದಾಮ್ ಸರ್ಕಾರದ ಸಮಯದಲ್ಲಿ ಎಲೈಟ್ ಫೋರ್ಸ್ ನಲ್ಲಿದ್ದ ಆರ್ಮಿಯವನ ಕಥೆಯನ್ನು ಬಣ್ಣಿಸಿದರು - ಕಥೆಯ ಮೊದಲಿಗೆ ಆತ ಸದ್ದಾಮನ ಆಡಳಿತದಲ್ಲಿ ಒಳ್ಳೆಯ ಹುದ್ದೆಯಲ್ಲಿದ್ದವನೆಂದೂ, ೨೦೦೩ ರಲ್ಲಿ ಅಮೇರಿಕನ್ ಮಿಲಿಟರಿ ಬಾಗ್ದಾದ್ ಅನ್ನು ಪ್ರವೇಶಿಸಿದ ತಕ್ಷಣ ಈತ ತನ್ನ ಹುದ್ದೆಯನ್ನು ತ್ಯಜಿಸಿ ಈಗ ಅಮೇರಿಕನ್ನರ ಆಡಳಿತದಡಿಯಲ್ಲಿ ಮತ್ತೆ ಮಿಲಿಟರಿಗೆ ಸೇರಿಕೊಂಡು 'ಮೇಲೆ'ಬರುವ ಕನಸುಗಳನ್ನು ಇಟ್ಟುಕೊಂಡಿದ್ದಾನೆಂತಲೂ ಕೇಳಿದೆ.

ಈ ಮೇಲಿನ ಒಂದು ಸಾಲನ್ನು ಬರೆದು ಓದಿದ ಡೆಬ್ರಾ ಯಾವ ಭಾವನೆಯೂ ಇಲ್ಲದೇ ಓದಿ ಬಿಟ್ಟಳು ಆದರೆ ನಾವು ಅದನ್ನು ಕುರಿತು ಒಂದು ಕ್ಷಣ ಯೋಚಿಸೋಣ - ಈತ ತನ್ನ ದೇಶದ ಮಿಲಿಟರಿಯಲ್ಲಿ ಕೆಲಸಮಾಡುತ್ತಿದ್ದವ, 'ವೈರಿ'ಪಡೆ ಬಂದ ತಕ್ಷಣವೇ ಕಂಬಿ ಕಿತ್ತವನು, ಇಂಥವನು ದೇಶದ್ರೋಹಿಯಾಗೋದಿಲ್ಲವೇ? ಯುದ್ಧದಲ್ಲಿ ತೊಡಗಿದ ಆರ್ಕನ್‌ಗೆ ಅಮೇರಿಕದ ಸೈನ್ಯ ಬಾಗ್ದಾದ್ ತಲುಪಿದ ತಕ್ಷಣ ಕೈ ಚೆಲ್ಲುವಂತೆ ಹಿಂದೆ ತರಬೇತಿ ನೀಡಲಾಗಿತ್ತೇ? ಅಥವಾ ತನ್ನ ದೇಶದ ಅಧ್ಯಕ್ಷನ ಆಡಳಿತದ ಮೇಲೆ ಮೊದಲಿಂದಲೂ ಅಸಮಧಾನ ಇದ್ದು ಅದನ್ನು ತನ್ನ ಸದುಪಯೋಗಕ್ಕೆ ಬಳಸಿಕೊಂಡು 'ವೈರಿ'ಪಡೆಯನ್ನು ಸೇರುವ ಯೋಜನೆ ಆತನ ಮನಸ್ಸಿನಲ್ಲಿತ್ತೇ? ಆದರೆ ಇದೇ ವರದಿಯಲ್ಲಿ ಆರ್ಕನ್ ತನ್ನ ದೇಶದವರ ಬಗ್ಗೆ ಹೆಮ್ಮೆಯಿಂದ ಮಾತನಾಡಿದ್ದನ್ನೂ ಕೇಳಿದೆ - ಆಕ್ರಮಣಕಾರರನ್ನು ಹೊರಗಿನವರು ಎಂದು ಕರೆದವನು, ಅವರನ್ನು ಹುಟ್ಟು ಹಾಕಿದ್ದು ಯಾರು ಎಂದು ಯೋಚಿಸಿದ್ದರೆ ಒಳ್ಳೆಯದಿತ್ತು. ಯುದ್ಧ ಸರಿಯೋ ತಪ್ಪೋ, ಅದು ಯಾವ ಕಾರಣಕ್ಕೆ ಆಗುತ್ತದೆ, ಬಿಡುತ್ತದೆ ಎನ್ನುವುದು ಒಂದು ಸೈನ್ಯದಲ್ಲಿ ಕೆಲಸಮಾಡುತ್ತಿರುವವರಿಗಿಂತ ಮಿಗಿಲಾದುದು (ಮುಖ್ಯವಾಗಿ ಪ್ರತಿ ಯುದ್ಧದ ಹಿಂದೆ ಅಂತಹ ವಿವೇಚನೆ ಇದ್ದರೆ ಯುದ್ಧವಾದರೂ ಏಕೆ ಆಗುತ್ತಿತ್ತು). ಸರಿ, ಇಂಥವನನ್ನು ತಂದು ಅಮೇರಿಕನ್ನರು ತರಬೇತಿ ಕೊಟ್ಟ ಮಾತ್ರಕ್ಕೆ ನಾಳೆ ತನ್ನ ದೇಶವನ್ನು ಈತ ರಕ್ಷಿಸುತ್ತಾನೆ ಎನ್ನುವುದಕ್ಕೆ ಏನು ಗ್ಯಾರಂಟಿ ಇದೆ? ಸದ್ದಾಮನ ಸರ್ಕಾರದ ವಿರುದ್ಧ ಸಾವಿರ ಅಲಿಗೇಷನ್‌ಗಳಿರಬಹುದು (ಅವನು ತಪ್ಪನ್ನು ಮಾಡಿಲ್ಲ ಎನ್ನುವುದು ನನ್ನ ನಿಲುವಲ್ಲ) ಆದರೆ ಅಮೇರಿಕದವರು ಸುಳ್ಳಿನ ಸರಮಾಲೆಯನ್ನು ಸೃಷ್ಟಿಸಿ, ನೆಟ್ಟಗಿದ್ದ ದೇಶವನ್ನು ಕಲಕಿ, ಈಗ ಅದರಿಂದ ಹೊರಬರಲು ಪ್ರಯತ್ನಿಸುತ್ತಾ 'ಇಂಥ' ಸಮಯಸಾಧಕರನ್ನು ಮೇಲೆ ತರುವ ಪ್ರಕ್ರಿಯೆ ಇದೆ ನೋಡಿ ಅದು ಬಹಳ ದೂರ ಬರಲಾರದು. ಆರ್ಮಿ ರಿಸರ್ವ್ ಅಥವಾ ಮಿಲಿಟರಿ ಸೇವೆಗಳಲ್ಲಿ ತಮ್ಮನ್ನು ನೋಂದಾವಣೆ ಮಾಡಿಕೊಂಡ ಎಷ್ಟೋ ಜನ ಯುವಕ-ಯುವತಿಯರನ್ನು ಅಮೇರಿಕ ದುಡಿಸಿಕೊಳ್ಳುತ್ತಿದೆ, ಇಲ್ಲಿ ತಮ್ಮನ್ನು ತಾವು ಭರ್ತಿಮಾಡಿಕೊಂಡವರಿಗೆ, ತಾವು ಕೊಟ್ಟ ಮಾತಿನಂತೆ ಇಷ್ಟವಿರಲೀ ಇಲ್ಲದಿರಲೀ, ಕೆಲಸಕ್ಕೆ ನಿಯೋಜಿಸಿದಾಗ ಹೋಗಲೇ ಬೇಕು, ಇಲ್ಲಾ ಎಂದರೆ ದಂಡನೆಗೆ ಗುರಿಯಾಗಬೇಕಾಗುತ್ತದೆ, ಅದೇ ಬೇರೊಂದು ದೇಶದಲ್ಲಿ ತನ್ನ ಅದೇ ಜವಾಬ್ದಾರಿಯನ್ನು ಕೈತೊಳೆದುಕೊಂಡ ವ್ಯಕ್ತಿಯೊಬ್ಬನನ್ನು ಇಲ್ಲಿ ಮನ್ನಿಸಲಾಗುತ್ತದೆ, ಯಾವ ನ್ಯಾಯ?

ನಮ್ಮ ಸ್ವಾತಂತ್ರ್ಯ ಸಂಗ್ರಾಮವನ್ನು ನೆನಪಿಗೆ ತಂದುಕೊಳ್ಳಿ...ಅದರಲ್ಲಿ ವಿಶ್ವದ ಐಶಾರಾಮಗಳನ್ನು ಮನಸ್ಸು ಮಾಡಿದ್ದರೆ ಪಡೆದುಕೊಳ್ಳಬಹುದಾಗಿದ್ದರೂ ಅವುಗಳನ್ನೆಲ್ಲ ಧಿಕ್ಕರಿಸಿ ಸರಳ ಬದುಕನ್ನು ತಾವೂ ರೂಢಿಸಿಕೊಳ್ಳುವುದೂ ಅಲ್ಲದೇ ವಿಶ್ವಕ್ಕೇ ಆದರ್ಶಮಯವಾಗಿದ್ದ ಬಾಪು ಅಂಥವರೂ ಇದ್ದರು, ಅವರ ಸತ್ಯಾಗ್ರಹಗಳಲ್ಲಿ ದೇಶಕ್ಕಾಗಿ 'ಮಾಡು ಇಲ್ಲವೇ ಮಡಿ' ಎಂಬ ಅಂದೋಳನಗಳಲ್ಲಿ ಜೀವವನ್ನು ತೊರೆಯುವ ಮುಗ್ಧ ದೇಶಭಕ್ತರೂ ಇದ್ದರು. ನಿಮಗೆ ನೆನಪಿರಬಹುದು ೧೯೯೯ರಲ್ಲಿ ಕಾರ್ಗಿಲ್ ಯುದ್ಧವಾದಾಗ ಜೈಲಿನಲ್ಲಿ ಮರಣ ದಂಡನೆಗೊಳಪಟ್ಟ ಕೆಲವು ಖೈದಿಗಳೂ ತಮ್ಮನ್ನು 'ಮಾನವ ಬಾಂಬ'ನ್ನಾಗಿ ಬಳಸಿಕೊಳ್ಳಿ ಎಂದು ಕೇಳಿಕೊಂಡಿದ್ದರಂತೆ - ಇಂದು ನಮ್ಮ ದೇಶವನ್ನು ಯಾರಾದರೂ ಆಕ್ರಮಿಸಿಕೊಳ್ಳುತ್ತಾರೆಂದರೆ ಮಣ್ಣಿನ ಮಹತ್ವ ಹಾಗೂ ಋಣವನ್ನು ಬಲ್ಲ ಯಾವೊಬ್ಬ ಸೈನಿಕನೂ ಪಲಾಯನಗೊಳ್ಳುವುದಿಲ್ಲ - ಇಂದಿನ ಸರ್ಕಾರದ ರೀತಿ ರಿವಾಜುಗಳು ಏನೇ ಇರಬಹುದು, ದೇಶಭಕ್ತಿ ಬಹಳ ದೊಡ್ಡದು, ಅದು ಹಣದ ಹಂಬಲ, ವಿದೇಶೀ ವ್ಯಾಮೋಹ, ಅಧಿಕಾರದ ಆಮಿಷ ಮುಂತಾದ ರಾಗಗಳನ್ನು ಸುಲಭವಾಗಿ ಜಯಿಸಬಲ್ಲದು, ಇಲ್ಲವೆಂದಾದರೆ ಅದರಲ್ಲಿ ಏನೋ ಕುಂದಿದೆಯೆಂದೇ ಅರ್ಥ.

ಅಷ್ಟೇ ಅಲ್ಲದೇ ನಾವು ಯಾವ ದೇಶವನ್ನು ಅನ್ಯಾಯವಾಗಿ ಆಕ್ರಮಿಸಿಕೊಳ್ಳಲಿಲ್ಲ ಎನ್ನುವ ಆತ್ಮಸ್ಥೈರ್ಯವೇ ಸಾಕು ನಮ್ಮನ್ನು ಬಹಳ ಎತ್ತರದಲ್ಲಿಡುತ್ತದೆ. ಅಮೇರಿಕದಲ್ಲಿ ಸೈನ್ಯಕ್ಕೆ ಸೇರಿ ಯಾವುದೋ ಕಣ್ಣು ಕಾಣದ ದೇಶದಲ್ಲಿ ಯಾರೋ ಮಾಡಿದ ತಪ್ಪಿಗೆ ಜೀವ ತೆರುವುದು ಇದೆ ನೋಡಿ ಅದು ಬಹಳ ದುರ್ಭರವಾದುದು. ಹಿಂದೆ ನಡೆದ ಎಲ್ಲ ಯುದ್ಧಗಳಲ್ಲೂ, ಒಂದು ರೀತಿ-ನೀತಿ ಎನ್ನುವುದೊಂದಿತ್ತು, ಆದರೆ ಇಂದಿನ ಇರಾಕ್ ಪರಿಸ್ಥಿತಿಯಲ್ಲಿ ಅಮೇರಿಕದವರು ಇನ್ನೇನು ಯುದ್ಧ ಮುಗಿಯಿತು ಎಂದು ಶ್ವಾಸವನ್ನು ಹೊರಗೆ ಬಿಡುವ ಪ್ರಯತ್ನಮಾಡಿದಂತೆಲ್ಲಾ ರಸ್ತೆ ಬದಿಯಲ್ಲಿ ಮತ್ತೊಂದು ಬಾಂಬು ಸಿಡಿಯುತ್ತದೆ, ಮತ್ತಿನ್ನಷ್ಟು ಕ್ಯಾಷುವಾಲಿಟಿಯಾಗುತ್ತದೆ. ನಾನು ಆಗಾಗ್ಗೆ ಕ್ಯಾಷುವಾಲಿಟಿಯ ಈ ಸೈಟುಗಳಿಗೆ ಭೇಟಿ ಕೊಡುತ್ತಿರುತ್ತೇನೆ, ನೀವು ಅದನ್ನು ಇಲ್ಲಿ, ಇಲ್ಲಿ ನೋಡಬಹುದು. ಸತ್ತವರು, ಸತ್ತು ಬದುಕಿದವರು ಯಾರ ಕಡೆಯವರೇ ಆಗಲಿ ನನ್ನ ಮೇಲೆ ಒಂದೇ ರೀತಿಯ ಪರಿಣಾಮ ಉಂಟಾಗುತ್ತದೆ.

ಇರಾಕ್‌ನಲ್ಲಿ ಹಿಂದೆ ನಿಜವಾಗಿ ಸೈನಿಕರಾಗಿದ್ದವರೆಲ್ಲ ಈಗಿಲ್ಲ. ಈಗ ಇರುವವರಲ್ಲಿ ಒಂದೇ ಹಿಂದಿನ ಸೈನ್ಯದಿಂದ ಕಂಬಿಕಿತ್ತ ಅವಕಾಶವಾದಿಗಳು ಅಥವಾ ಇನ್ನೂ ಏನನ್ನೂ ಅರಿಯದ ಹಾಗೂ ಹಲವು ಕನ್‌ಫ್ಯೂಷನ್ ಗೆ ಸಿಕ್ಕಿಕೊಂಡ ಮುಗ್ಧ ಯುವಕರು, ಒಳಗಿದ್ದುಕೊಂಡೇ ಶಕುನಿ ತಂತ್ರವನ್ನನುಸರಿಸೋ ಕುತಂತ್ರಿಗಳು ಹಾಗೂ ದಂಗೆಕೋರರು ಬೇಡವೆಂದು ಬಿಟ್ಟುಹೋದ ಹಲವು ತಬ್ಬಲಿಗಳು. ತಮ್ಮನ್ನೇ ತಾವು 'ರಕ್ಷಿಸಿ'ಕೊಳ್ಳದ ಇಂಥ ಸೈನಿಕರನ್ನು ಯಾವ ದೇಶದವರೇ ತರಬೇತಿಕೊಡಲಿ ಅವರಲ್ಲಿ ತಮ್ಮ ದೇಶಕ್ಕಾಗಿ ಹೋರಾಡುವ ಕೆಚ್ಚನ್ನು ಮೂಡಿಸಲು ಸಾಧ್ಯವಿಲ್ಲ. ದಿನವೂ ಬದಲಾಗುವ ಸಿವಿಲ್ ವಾರ್‌ನ್ನು ಎದುರಿಸುವ ಕಾನೂನು ಕಟ್ಟಳೆಗಳಲ್ಲಿ ತಮ್ಮನ್ನು ತಮ್ಮ ಕುಟುಂಬವನ್ನು ರಕ್ಷಿಸಿಕೊಂಡರೆ ಹೆಚ್ಚು, ಆದರೆ ವ್ಯಕ್ತಿಯ ಮಟ್ಟದಲ್ಲಿ ದೊರೆತು, ಬೆಳೆಯುವ ಅವರ ತರಬೇತಿ, ಸಮೂಹ ಮಟ್ಟದಲ್ಲಿ ಯಾವ ಪರಿಣಾಮವನ್ನೂ ಬೀರಲಾರದು. ದಿನವೂ ರಸ್ತೆ ಬದಿಯಲ್ಲಿ ಸಿಡಿಯುವ ಬಾಂಬುಗಳಿಗೆ ತರಕಾರಿ ಮಾರುವವ ಹಾಗೂ ಅಮೇರಿಕದಿಂದ ತರಬೇತಿ ಪಡೆದ ಎಲೈಟ್ ಸೈನಿಕನೆಂಬ ಪಕ್ಷಪಾತವಿರುವುದಿಲ್ಲ ನೋಡಿ ಅದಕ್ಕೆ. ನನ್ನ ದೃಷ್ಟಿಯಲ್ಲಿ ಟೆಕ್ನಾಲಜಿ ಹೆವಿ ಅಮೇರಿಕನ್ ಮಿಲಿಟರಿ ವ್ಯವಸ್ಥೆಗಳಿಗೆ ಇಂಥ ಸ್ಪಂದನಗಳು ಕಾಣುವುದಿಲ್ಲ, ಕಂಡರೂ ಕುರುಡಾಗಿರುತ್ತವೆ, ಇಲ್ಲವೆಂದಾಗಿದ್ದರೆ ಆಕ್ರಮಣಕ್ಕೆ ಮೂರು ದಿನ, ಅಲ್ಲಿಂದ ಹೊರಬರುವುದಕ್ಕೆ ಮೂರು ವರ್ಷಗಳಿಗಿಂತ ಹೆಚ್ಚು ಹಿಡಿಯುತ್ತಿರಲಿಲ್ಲ.

***

ಸ್ಟ್ರಾಟೀಜಿಕ್ ನೆಲೆಗಟ್ಟು ಎಂದು ವಿಶ್ವದ ತುಂಬೆಲ್ಲಾ ಕಂಡ ಕಂಡಲ್ಲಿ ಮಿಲಿಟರಿ ಬೇಸುಗಳನ್ನು ಸ್ಥಾಪಿಸಿರುವ, ವೈಯುಕ್ತಿಕ ಅನುಕೂಲಗಳಿಗೋಸ್ಕರ ಹಾಡು ಹಗಲೇ ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣವನ್ನು ಹಾಕುವ ಹಾಗೂ ತನ್ನ ಅಗತ್ಯಕ್ಕೆ ತಕ್ಕಂತೆ ರಾಜಾರೋಷವಾಗಿ ಸುಳ್ಳನ್ನು ಹೇಳಿ ಮುಂದೆ ಅದನ್ನು ಸಾಧಿಸಿಕೊಳ್ಳುವ ಅಮೇರಿಕದ ಅರ್ಹತೆ ಮತ್ತು ಅಧಿಕಾರವನ್ನು ಪ್ರಶ್ನಿಸುವ ಮನಸ್ಥಿತಿಗಳನ್ನು ದೇಶದ್ರೋಹಿಗಳೆಂದು ಇಲ್ಲಿನ ಬುದ್ಧಿವಂತರೆಲ್ಲ ತೆಗಳುವುದು ಏಕೋ? ವಿಶ್ವವನ್ನೇ 'ಅಮೇರಿಕನ್' ಮಯ ಮಾಡುವ ಹುನ್ನಾರ ಎಂದು ನಿಲ್ಲುತ್ತದೆಯೋ?

Saturday, May 13, 2006

ಮೂವರು 'ರಘು'ಗಳು

ಹೆಚ್ಚಿನ ನನ್ನ ಶಕ್ತಿಯೆಲ್ಲಾ ಎಲ್ಲಿ ವ್ಯಯವಾಗುತ್ತದೆಯೆಂದು ನನಗೆ ಚೆನ್ನಾಗಿ ಗೊತ್ತು: ಉಳಿದವರಿಗೆ ಬೇಡದ ಆಗದ ಹೋಗದ ವಿವರಗಳನ್ನು ನೆನಪಿಡುವಲ್ಲಿ. ಈ ಪ್ರಪಂಚದಲ್ಲಿ ಮನುಷ್ಯರ ಮನಸ್ಥಿತಿಯನ್ನು ಇಷ್ಟಪಡುವಷ್ಟು ಬೇರೇನನ್ನು ಇಷ್ಟಪಟ್ಟಿರಲಾರೆ - ಮನುಷ್ಯ ಸಂಘಜೀವಿಯಾಗಿ ಬೆಳೆದು ಬಂದದ್ದೂ ಅಲ್ಲದೇ, ಉಳಿದ ಪ್ರಾಣಿಸಂಕುಲದಲ್ಲಿ ಭಿನ್ನವಾಗಿರಲು ಈ ಮನಸ್ಸೇ ಮೂಲಕಾರಣ - ಬೇರೆ ಜೀವಿಗಳಿಗೂ ಮನಸ್ಸೆಂಬುದು ಇದೆ, ಆದರೆ ನಮ್ಮಷ್ಟು ವಿಸ್ತಾರ ರೂಪವನ್ನು ತಾಳಿಲ್ಲ ಎನ್ನುವುದು ನನ್ನ ನಂಬಿಕೆ, ಈ ವಿಶ್ವದಲ್ಲಿ ತೃಣ ಮಾತ್ರವಾದದ್ದು ಮಾನವ ಪ್ರಪಂಚ, ಅದರಲ್ಲಿ ಕೂದಲೆಳೆಯ ಸಾವಿರದೊಂದು ಭಾಗದ ಸಾವಿರದನೇ ಒಂದು ತುಂಡಿನ ಸಾವಿರದ ಒಂದನೇ ಭಾಗ ನಾನು, ನನ್ನ 'ನಂಬಿಕೆ'ಯಲ್ಲಿ ತಪ್ಪಿರಬಹುದು ಎನ್ನುವ ಕಲ್ಪನೆ ನನಗಿದ್ದರೂ, ಬಲವಾದ ನಂಬಿಕೆ ಹಾಗೂ ವಿಶ್ವಾಸಗಳು ನನ್ನ ವಾದವನ್ನು ಗೆಲ್ಲಿಸುತ್ತೇವೆಂದು ಮಾತುಕೊಟ್ಟಿರುವುದರಿಂದ ನಾನು ನನ್ನಲ್ಲಿ ವಿಶ್ವಾಸವನ್ನಿಟ್ಟುಕೊಳ್ಳುತ್ತೇನೆ!

***

ನಾನು ಈವರೆಗೆ ಹಲವಾರು 'ರಘು' ಎನ್ನುವ ಹೆಸರಿನ ವ್ಯಕ್ತಿಗಳನ್ನು ಮಾತನಾಡಿಸಿರಬಹುದು, ಅವರ ಜೊತೆಯಲ್ಲಿ ಕೆಲಸಮಾಡಿರಬಹುದು ಆದರೆ ಅಮೇರಿಕದಲ್ಲಿ ನನ್ನ ಸಹೋದ್ಯೋಗಿಗಳಾಗಿ ನಾನು ಹತ್ತಿರದಿಂದ ಬಲ್ಲ ಈ ಮೂವರು ರಘುಗಳ ಬಗ್ಗೆ ಬರೆಯಲೇ ಬೇಕಾಗುತ್ತದೆ. ಇತ್ತೀಚೆಗೆ ನನಗೆ ಆಫೀಸ್ ಸ್ಥಳಾಂತರವಾಗಿ ಹೊಸ ಆಫೀಸಿಗೆ ಹೋಗುವ ಸನ್ನಿವೇಶ ಬಂತು, ಮೊದಲನೇ ದಿನ ನನ್ನ ಹೊಸ ಕ್ಯೂಬಿಕಲ್ ಸುತ್ತಲೂ ಯಾರು ಯಾರು ಇದ್ದಾರೆ ಎಂದು ನೋಡುತ್ತಿದ್ದಾಗ ನನ್ನ ಹತ್ತಿರದಲ್ಲೇ ಕೂರುವ 'ರಘು' ಎನ್ನುವ ತೆಲುಗಿನವನು ಬಹಳ ಹತ್ತಿರದ ಸ್ನೇಹಿತನಂತೆ ಕಂಡು ಬಂದದ್ದೂ ಅಲ್ಲದೇ ಮುಂದೆ ಬಹಳ ದಿನಗಳವರೆಗೆ ಉತ್ತಮ ಗೆಳೆಯನಾಗುವ ಮುನ್ಸೂಚನೆಗಳನ್ನು ನೀಡಿದ - ಆತನ ನಡತೆ, ಮಾತುಕತೆ, ಇಲ್ಲಿನವರಲ್ಲಿ ಹೊಂದುಕೊಂಡ ರೀತಿ ಇವುಗಳು ನಾನು ಇದುವರೆಗೆ ನೋಡಿರುವ ತೆಲುಗು ಜನರೆಲ್ಲರ ಇಮೇಜನ್ನು ಮತ್ತೆ ಮತ್ತೆ ಪ್ರಶ್ನಿಸಿಕೊಳ್ಳುವಂತಿದ್ದವು, ಹಾಗೂ ಆತ ತೋರಿದ ಆದರ, ಸಹೃದಯತೆಗಳು ಅವನ ಮೇಲಿನ ಗೌರವವನ್ನು ಹೆಚ್ಚು ಮಾಡಿದವು. ಅದೇ ವಾರ Diversity training ನಲ್ಲಿ ಹೇಳಿಕೊಟ್ಟ "We individualize the good behavior and generalize the bad behavior" ನೆನಪಿಗೆ ಬಂತು. ಅದರ ಸಾರ ಇಷ್ಟೇ: ನಾನೇನಾದರೂ ಒಳ್ಳೆಯ ನಡತೆಯನ್ನು ತೋರಿಸಿದರೆ ಅದು ನನ್ನ ಮಟ್ಟಿಗೇ ಸೀಮಿತವಾಗುತ್ತದೆ, ಆದೇ ನಾನೇನಾದರೂ ಕೆಟ್ಟದಾಗಿ ನಡೆದುಕೊಂಡರೆ 'ಈ ಭಾರತೀಯರೆಲ್ಲಾ ಹೀಗೇ' ಎನ್ನುವ ಜೆನರಲೈಸೇಷನ್ ಆಗುವುದು ಸ್ವಾಭಾವಿಕವಾದ್ದರಿಂದ ಈ ದೇಶದಲ್ಲಿ ನಮ್ಮ ಹೆಗಲುಗಳ ಮೇಲೆ ಯಾವಾಗಲೂ ಒಳ್ಳೆಯದಾಗೇ ನಡೆದುಕೊಳ್ಳುವ ಅದೃಶ್ಯವಾದ ಒತ್ತಡವೊಂದು ಇದ್ದೇ ಇರುತ್ತೆ.

ಇನ್ನು ಎರಡನೇ ರಘು, ನಾಲ್ಕು ವರ್ಷಗಳ ಹಿಂದೆ ನಮ್ಮ ಆಫೀಸಿನಲ್ಲೇ ಕಾಂಟ್ರಾಕ್ಟರ್ ಆಗಿ ಕೆಲಸ ಮಾಡುತ್ತಿದ್ದವನು. ಈತನ ಒಂದು ವಿಶೇಷವೆಂದರೆ, ಅವನು ಈ ದೇಶದಲ್ಲಿ ಎಷ್ಟು ವರ್ಷದಿಂದ ಇದ್ದವನೋ ಬಿಟ್ಟವನೋ, ಆದರೆ ಅವನ ನಡೆ-ನುಡಿ ಎಲ್ಲವೂ ಸಂಪೂರ್ಣ ಅಮೇರಿಕನ್ ಮಯವಾಗಿತ್ತು. ಆದರೆ ಒಂದು ಮುಖ್ಯವಾದ ವಿಷಯವೆಂದರೆ ಈತ ಟೆಕ್ನಿಕಲ್ ವಿಷಯದಲ್ಲಿ ಎಷ್ಟು ಪಾರಾಂಗತನೋ, ಬಿಸಿನೆಸ್ ವಿಷಯದಲ್ಲೂ ಅಷ್ಟೇ ನಿಪುಣನಾಗಿದ್ದ, ಎಷ್ಟೋ ಸಾರಿ ನನಗೆ ಅವನು ಬೇರೆ ಯಾರಿಗೂ ಗೊತ್ತಿರದ ಕಷ್ಟವಾದ ಪ್ರಾಡಕ್ಟಿನ ವಿವರಗಳನ್ನು ಹೇಳಿಕೊಟ್ಟಿದ್ದಿದೆ. ಒಂದು ದಿನ ಹೀಗೇ ಹರಟೆ ಹೊಡೆಯುತ್ತಿದ್ದಾಗ ಅವನೂ ಸಹ ಕರ್ನಾಟಕದವನೆಂದು ತಿಳಿಯಿತು. ನನ್ನ ಮೇಜಿನ ಮೇಲೆ ಸಿ.ಅಶ್ವಥ್‌ರ 'ನೂಪುರ' ಸಿ.ಡಿ. ಬಿದ್ದುಕೊಂಡಿತ್ತು (ಅಶ್ವಥ್ ಇಲ್ಲಿಗೆ ಬಂದಾಗ ಎಲ್ಲ ಹಾಡುಗಳನ್ನು ಅವರೇ ಹಾಡಿದ 'ನೂಪುರ' ಎನ್ನುವ ಸಿ.ಡಿ.ಯನ್ನು ಮಾರಿದ್ದರು, ಮುಂದೆ ಅದನ್ನೇ 'ಹುಣ್ಣಿಮೆ' ಎಂದು ಪ್ರಕಟಿಸಿ ಹಾಡುಗಳನ್ನು ಹೇಮಂತ್, ಸಂಗೀತಾ ಕುಲಕರ್ಣಿ, ಹಾಗೂ ಅಶ್ವಥ್ ಹಾಡಿದ್ದರು), ಆತನಿಗೆ ಹಾಡುಗಳನ್ನು ಕೇಳುವುದೂ ಇಷ್ಟವೆಂದು ತಿಳಿದು ಆ ಸಿ.ಡಿ.ಯನ್ನು ನಾನೇ ಅವನಿಗೆ ಕೇಳಿ ಕೊಡುವಂತೆ ಕೊಟ್ಟಿದ್ದೆ. ಅವನು ಕೆಲವು ದಿನಗಳ ನಂತರ ಸಿ.ಡಿ.ಯನ್ನು ಹಿಂತಿರುಗಿಸಿದ, ನಾನು 'ಯಾವ ಹಾಡು ಇಷ್ಟವಾಯಿತು, ಇವುಗಳಲ್ಲಿ' ಎಂದೆ, ಅವನು - '"ಬಾಳೀನ ದಾರಿಯಲಿ..." ಹಾಡು ಪರವಾಗಿಲ್ಲ, ಉಳಿದವುಗಳು ಅಷ್ಟಕಷ್ಟೇ' ಎಂದ.

ಈ ರಘು ನನ್ನ ಮನಸ್ಸಿನ್ನಲ್ಲಿ ಬಹಳ ಕಾಲ ನಿಲ್ಲುತ್ತಾನೆ. ಆತನ ಬಿಸಿನೆಸ್ಸಿನ ತಿಳುವಳಿಕೆಯೂ, ಸಂಪೂರ್ಣವಾಗಿ ಅಮೇರಿಕನ್‍ಮಯವಾದ ಇಂಗ್ಲೀಷೂ, ಹಾಗೂ ಉತ್ತಮ ಕೆಲಸವನ್ನು ಮಾಡಿ ಎಲ್ಲರಿಂದಲೂ ಮೆಚ್ಚುಗೆಗಳಿಸುತ್ತಿದ್ದುದೂ ನನಗಿನ್ನೂ ನೆನಪಿದೆ - ಒಬ್ಬ ರೋಲ್ ಮಾಡೆಲ್ ಆಗಿ ಇರಬಹುದಾದಂತ ವ್ಯಕ್ತಿತ್ವ ಆತನಲ್ಲಿತ್ತು.

***

ಇನ್ನು ಮೂರನೆಯವನಾಗಿ ಈ ರಘು - ೧೯೯೭ರಲ್ಲಿ ನಾನು ಐ.ಬಿ.ಎಮ್.ನಲ್ಲಿ ಕೆಲಸ ಮಾಡುತ್ತಿರುವಾಗ ಈತ ನನ್ನ ಜೊತೆ ನಮ್ಮ ಟೀಮಿನಲ್ಲೇ ಇದ್ದ. ಕನ್ಸಲ್‌ಟಿಂಗ್ ಕೆಲಸ ಮಾಡಿಕೊಂಡೂ, ನ್ಯೂಯಾರ್ಕ್ ಯೂನಿವರ್ಸಿಟಿಯಲ್ಲಿ ಎಮ್.ಬಿ.ಎ. ಮಾಡಿಕೊಂಡು ಟೀಮ್ ಲೀಡರ್ ಆಗಿ ಕೆಲಸ ಮಾಡುತ್ತಿದ್ದ. ಈತ ನನ್ನ ನೆನಪಿನಲ್ಲಿ ಉಳಿಯೋದು ಎರಡೇ ಎರಡು ಕಾರಣಗಳಿಗಾಗಿ - ಒಂದು ಆತನ ಸೀರಿಯಸ್ಸಾದ ಮುಖದಲ್ಲಿ ಹುಟ್ಟುತ್ತಿದ್ದ ಹಾಸ್ಯ ಹಾಗೂ ಇನ್ನೂ ಜೀವನವನ್ನು ಕಣ್ಬಿಟ್ಟು ನೋಡುವುದರ ಮೊದಲೇ ಆತ ಅನುಭವಿಸಬೇಕಾದ ದುರಂತ.

ನಾವೆಲ್ಲರೂ, ಅಂದರೆ ದೇಸಿ ಜನರು ಮಧ್ಯಾಹ್ನ ಊಟದ ಸಮಯದಲ್ಲಿ ಒಟ್ಟಿಗೇ ಕುಳಿತು ಹರಟೆ ಹೊಡೆಯುತ್ತಿದ್ದೆವು - ಅರುಣ್, ರಾಜೀವ್, ವಿದ್ಯಾ, ಕಲ್ಪೇಶ್, ಶ್ರೀಧರ್, ಅಬ್ದುಲ್, ರಘು, ಮಲ್ಲಿ, ಸುರೇಶ್, ಇನ್ನೂ ಮೂರ್ನಾಲ್ಕು (ಮುಖ ನೆನಪಿಗೆ ಬಂದು ಹೆಸರು ನೆನಪಿಗೆ ಬರದ) ಜನರೆಲ್ಲ ಸೇರಿ, ಪ್ರತಿ ದಿನ ಮಧ್ಯಾಹ್ನ ಊಟಕ್ಕೆ ಏನಿಲ್ಲ ಎಂದರೂ ಒಂದು ಎಂಟು ಜನರಾದರೂ ಸೇರಿಕೊಂಡು ಊಟದ ಟೇಬಲ್ಲನ್ನು 'ಮಿನಿ ಇಂಡಿಯಾ'ವನ್ನಾಗಿ ಪರಿವರ್ತಿಸಿಕೊಳ್ಳುತ್ತಿದ್ದೆವು - ಆಗೆಲ್ಲ ಬಿ.ಪಿ.ಓ. ಗಳ ಗೊಂದಲವಿರಲಿಲ್ಲ, ರಘುವನ್ನು ಬಿಟ್ಟು ನಮಗ್ಯಾರಿಗೂ ಇನ್ನೂ ಮದುವೆಯೂ ಆಗಿರದಿದ್ದುದರಿಂದ ಆಫೀಸಿನ ಬಾಸನ್ನು ಬಿಟ್ಟರೆ ಉಳಿದ ಸಮಯದಲ್ಲೆಲ್ಲಾ ನಾವೇ ನಮ್ಮ ಬಾಸುಗಳು ಎನ್ನುವಂತಿದ್ದೆವು. ಇವರಿಷ್ಟು ಜನರಲ್ಲಿ ರಘುವಿನ ಪಕ್ಕದ ಕ್ಯೂಬಿನಲ್ಲಿ ಕುಳಿತುಕೊಳ್ಳುವ ನನಗೆ ರಘುವಿನ ಆಕ್ಸೆಸ್ ಹೆಚ್ಚಿಗೆ ಇತ್ತು. ನನ್ನ ಮತ್ತು ರಘುವಿನ ಮಾತುಗಳು ಅಮೇರಿಕದಲ್ಲಿ ಡೇಟ್ ಮಾಡುವ ವಿಷಯದತ್ತ ಹೊರಳಿದಾಗೆಲ್ಲ ಆತ ನನಗೆ 'ಆ ಹೆಲ್ಪ್ ಡೆಸ್ಕಿನ ಡೊರೋತಿಯನ್ನು 'ಬರ್ತೀಯಾ' ಎಂದು ಕೇಳಿನೋಡು' ಎಂದು ಚುಚ್ಚುತ್ತಿದ್ದ, ಅದಕ್ಕೆ ನಾನು ಗಟ್ಟಿಯಾಗಿ ನಕ್ಕು ಬಿಡುತ್ತಿದ್ದೆ - ಡರೋತಿ ಎನ್ನುವವಳು ಒಬ್ಬಳು ಧಡೂತಿ ಕಪ್ಪು ಹೆಂಗಸು, ಉಳಿದವರೆಲ್ಲರಿಗಿಂತಲೂ ನನ್ನ ಮೇಲೆ ಅವಳಿಗೆ ವಿಶೇಷ ಪ್ರೀತಿ ಇತ್ತು/ಇದೆ ಎನ್ನುವುದು ರಘುವಿನ ಇಂಗಿತ. ರಘುವಿನ ಹಲವಾರು ಮಾತುಗಳನ್ನು ನಂಬಿದವನಿಗೆ ಡೊರೋತಿಯ ವಿಷಯದಲ್ಲಿ ಅವನು ಹೇಳಿದ್ದು ಯಾವಾಗಲೂ ಹಾಸ್ಯವಾಗೇ ಕಾಣುತ್ತಿತ್ತು, ನಾನು ಅದನ್ನು ಅಲ್ಲಿಗೇ ಬಿಡುತ್ತಿದ್ದೆ.

ಹೀಗಿರುವಲ್ಲಿ, ರಘುಗೆ ಹಸಿರು ಕಾರ್ಡು ದೊರೆತು ಸುಮಾರು ವರ್ಷವೇ ಆಗುತ್ತ ಬಂದಿದ್ದರಿಂದ ಆತ ನಮ್ಮ ಕಂಪನಿಯನ್ನು ಬಿಟ್ಟು ಮತ್ಯಾವುದೋ ಕಂಪನಿಯನ್ನು ಸೇರಿಕೊಂಡ, ಹ್ಯಾಪ್ಪಿ ಅವರು, 'ಹಾಯ್-ಬಾಯ್' ಎಲ್ಲಾ ಆಗಿ, ಮೂರ್ನಾಲ್ಕು ತಿಂಗಳುಗಳೂ ಆದವು. ಒಂದು ದಿನ ಇದ್ದಕ್ಕಿದ್ದಂತೇ ರಘುವಿನ ಹಳೆಯ ಕಂಪನಿಯ ಮ್ಯಾನೇಜರ್ ಅಂದರೆ ನನ್ನ ಆಗಿನ ಕಂಪನಿಯ ಮ್ಯಾನೇಜರ್ ನನ್ನನ್ನು ಹುಡುಕಿಕೊಂಡು ಬಂದ - 'ನಿನ್ನಲ್ಲಿ ರಘುವಿನ ಅಡ್ರಸ್ಸು ಇದೆಯೇ, ತುಂಬಾ ಅರ್ಜೆಂಟು, ಫ್ಯಾಮಿಲಿ ಎಮರ್ಜೆನ್ಸಿ...' ಎಂದು ಹೇಳಿ ನಡುಗುತ್ತಿದ್ದ ಧ್ವನಿ ನನಗೆ ಈಗಲೂ ನೆನಪಿದೆ. ಆದದ್ದು ಇಷ್ಟು - ಅದೇ ದಿನ ಮುಂಜಾನೆ, ಕನೆಕ್ಟಿಕಟ್ ಹತ್ತಿರವಿರುವ ಯಾವುದೋ ಊರಿಗೆ ಪರೀಕ್ಷೆ ಬರೆಯಲು ಡ್ರೈವ್ ಮಾಡಿಕೊಂಡು ಹೋಗುತ್ತಿದ್ದ ರಘುವಿನ ಹೆಂಡತಿ, ಅಪರ್ಣಾಳ ಕಾರು ಅಪಘಾತಕ್ಕೀಡಾಗಿ ಆಕೆ ಸ್ಥಳದಲ್ಲೇ ಇಹಲೋಕವನ್ನು ತ್ಯಜಿಸಿದ್ದಳು. ಅಪರ್ಣಾ ಒಬ್ಬ ಮೆಡಿಕಲ್ ರೆಸಿಡೆಂಟ್ ಆಗಿ ರೆಸಿಡೆನ್ಸಿ ಮಾಡುತ್ತಿದ್ದವಳು, 'ಅಲ್ಲೇ ಹೋಗಿ ರೂಮು ಮಾಡೋಣ' ಎಂದು ಹೇಳಿದ ರಘುವನ್ನೂ ಕೇಳದೇ ಬೆಳಗ್ಗೆ ಐದು ಘಂಟೆಗೆಲ್ಲಾ ಮನೆಬಿಟ್ಟು ಹೊರಟು, ಟ್ಯಾಪೆನ್ ಝೀ ಬ್ರಿಜ್ಜಿಗೆ ಟೋಲ್ ಕೊಟ್ಟು ಎಂಟು ಮೈಲು ಹೋಗುವುದರೊಳಗೆ ನಿದ್ರೆ ಬಂದು - ರಸ್ತೆ ಬದಿಯ ಮರವೊಂದಕ್ಕೆ ಆಕೆಯ ನಿಸ್ಸಾನ್ ಕ್ವೆಸ್ಟ್ ಮಿನಿವ್ಯಾನ್ ಗುದ್ದಿದ ಹೊಡೆತಕ್ಕೆ, ಸ್ಥಳದಲ್ಲೇ ಕಾರಿಗೆ ಬೆಂಕಿ ಹೊತ್ತಿಕೊಂಡು, ಆಕೆಯ ಯಾವ ಅವಶೇಷವೂ ಇರದಂತೆ ಸುಟ್ಟು ಕರಕಲಾಗಿ ಹೋಗಿದ್ದಳು. ಅದೇ ದಿನ ರಘುವಿನ ಮನೆಯಲ್ಲಿ ನಾವೆಲ್ಲರೂ ಅವನನ್ನು ನೋಡಲು ಹೋಗಿದ್ದೆವು - ಆತ ಶಾಕ್‌ಗೆ ಒಳಗಾಗಿದ್ದರೂ ಮುಖದ ಮೇಲೆ ಯಾವುದೇ ಭಾವನೆಯನ್ನು ತೋರಿಸಿಕೊಳ್ಳುತ್ತಿರಲಿಲ್ಲ - ನಾವೆಲ್ಲ ಲಿವಿಂಗ್ ರೂಮಿನಲ್ಲಿ ಕುಳಿತಿದ್ದಂತೆಯೇ, ಟೇಬಲ್ಲಿನ ಮೇಲೆ 'This is all that they recovered from her' ಎಂದು ಸುಟ್ಟುಹೋದ ತಾಳಿಯ ಸರವನ್ನೂ ಹಾಗೂ ಆಕೆಯ ವಾಚನ್ನೂ ಹರವಿದ. ನಮ್ಮೆಲ್ಲರಿಗೂ ಎದೆ ಒಮ್ಮೆ ಧಸಕ್ ಎಂದಿತು, ಎದೆಗುಂದಿದ ಇವನನ್ನು ಹೀಗೆ ಒಬ್ಬನೇ ಬಿಡಬಾರದೆಂದು ನಾವೆಲ್ಲ ಥರಾವರಿ ಸಮಾಧಾನ ಹೇಳಿದೆವು, ನಮ್ಮಲ್ಲಿ ಕೆಲವರು ಅವನ ಜೊತೆಯಲ್ಲಿ ಒಂದೆರಡು ದಿನಗಳ ಮಟ್ಟಿಗೂ ಇದ್ದೆವು.

ಈ ಸಂದರ್ಭದಲ್ಲಿ ರಘು ಹೇಳಿದ ಇನ್ನೊಂದೆರಡು ಮಾತುಗಳನ್ನು ಹೇಳಿದರೆ ಒಳ್ಳೆಯದು:
ಅಫಘಾತವಾದ ದಿನ ಮುಂಜಾನೆ ಅಪರ್ಣಾ 'ಹೋಗಿ ಬರುತ್ತೇನೆ' ಎಂದು ಹೇಳಿದಾಗ ರಘು ನಿದ್ದೆ ಕಣ್ಣಿನಲ್ಲೇ ಕಳಿಸಿಕೊಟ್ಟಿದ್ದನಂತೆ. ಸ್ವಲ್ಪ ಹೊತ್ತಿನಲ್ಲಿ ಅವನು ಎದ್ದು ತಯಾರಾಗಿ ಆಫೀಸಿಗೆ ಹೊರಟು ಬರುತ್ತಿರುವಾಗ ಮೆಟ್ಟಿಲು ಜಾರಿ ಬಿದ್ದನಂತೆ, ಅದೇ ಸಮಯಕ್ಕೇ ಅಪಫಾತವಾಗಿದ್ದು ಎಂದು ಅವನು ಬಹಳ ನೊಂದುಕೊಂಡಿದ್ದ.

ರಘು ಹೇಳಿದಂತೆ - 'ಅಪರ್ಣಾಳನ್ನು ಕಳೆದುಕೊಂಡ ಮೇಲೆ, ನನಗೆ ಅತ್ಯಂತ ಕಷ್ಟಕರವಾದ ಸಂದರ್ಭ ಎಂದರೆ ಆಕೆಯ ತಂದೆಗೆ ಫೋನಿನಲ್ಲಿ ಈ ವಿಷಯ ಹೇಳಬೇಕಾಗಿ ಬಂದಿದ್ದು'. ಅದು ನಿಜವೂ ಹೌದು ಸಪೋರ್ಟು ನೆಟ್‌ವರ್ಕ್ ಇರದ ಇಲ್ಲಿ ಎಲ್ಲವನ್ನೂ ಅವರವರೇ ಮಾಡಬೇಕೆನ್ನುವುದು ಕಹಿಯಾದ ಸತ್ಯಗಳಲ್ಲೊಂದು.

ಮುಂದೆ ರಘು ತನ್ನ ಮನೆಯನ್ನು ಮಾರಿ ಎಲ್ಲೋ 'ದೇಶಾಂತರ' ಹೋಗುವುದಾಗಿ ತೀರ್ಮಾನ ಮಾಡಿದ - ಮಾರುವ ಹಿಂದಿನ ದಿನ ನಮ್ಮೆಲ್ಲರನ್ನು ಕರೆದು ಸೀರಿಯಸ್ಸಾಗಿ ನಿಮಗೇನು ಬೇಕೋ ಅದನ್ನೆಲ್ಲ ತೆಗೆದುಕೊಂಡು ಹೋಗಿ ಎಂದು ಬಹಳ ಒತ್ತಾಯ ಮಾಡಿದ, ನಾನು ಗೋಡೆ ಗಡಿಯಾರವೊಂದನ್ನು ತೆಗೆದುಕೊಂಡು ಬಂದೆ.

ಇದಾದ ಒಂದೆರಡು ವರ್ಷಗಳ ನಂತರ ಅಬ್ದುಲ್ ರಘುವಿನ ಜೊತೆ ಮಾತನಾಡಿದ್ದಾಗಿ ಹೇಳಿದ, ರಘು ಈಗ ಬ್ಯುಸಿನೆಸ್ ಕನ್ಸಲ್‌ಟಿಂಗ್ ಮಾಡಿಕೊಂಡು ಅದೆಲ್ಲೋ ಕ್ಯಾಲಿಫೋರ್ನಿಯಾದಲ್ಲಿದ್ದಾನೆ, ಈಗ ಪೂರ್ತಿ ರಿಕವರ್ ಆಗಿದ್ದಾನೆ ಎಂದು - ಮುಂದೆ ಅವನು ಮತ್ತೊಂದು ಮದುವೆಯನ್ನೂ ಆದ ಎಂದು ಕೇಳಿದ್ದೆ.

***

ನಮ್ಮ ಮನೆಯಲ್ಲಿ ರಘು ಕೊಟ್ಟ ಗೋಡೆ ಗಡಿಯಾರ ಇನ್ನೂ ನಡೆಯುತ್ತಿದೆ, ನಿನ್ನೆ ಬ್ಯಾಟರಿಯನ್ನು ಬದಲಾಯಿಸಿ ಅದರ ಸಮಯವನ್ನು ಸರಿ ಮಾಡಿ ಇಟ್ಟಿದ್ದೇನೆ - ಇನ್ನು ಹಲವು ತಿಂಗಳುಗಳವರೆಗೆ ಆ ಗಡಿಯಾರ ಓಡುತ್ತಲೇ ಇರುತ್ತದೆ, ಓಡಲೇ ಬೇಕು ಇಲ್ಲದಿದ್ದರೆ ನಿಷ್ಪ್ರಯೋಜಕ ಎಂದು ತಿಪ್ಪೆಗೆ ಬಿಸಾಡಬೇಕಾದೀತು, ಇಲ್ಲಿ ಯಾರೂ ರಿಪೇರಿಯನ್ನು ಮಾಡುವುದಿಲ್ಲ, ಮಾಡಿದರೂ ರಿಪೇರಿಗೆ ಹೆಚ್ಚಿನ ಮೌಲ್ಯ ತೆರಬೇಕಾಗಿ ಬಂದು ವಸ್ತುವಿನ ಹಿಂದಿನ ಭಾವನೆಗಳನ್ನು ಒಮ್ಮೆ ತೂಗಿ ನೋಡುವ ಸಂಭವ ಹೆಚ್ಚು!

Friday, May 12, 2006

"ನಿಮ್ಮವ"ನ ಪುರಾಣ - "ಅಂತರಂಗಿ"ಯ ಉದಯ

ಅದ್ಯಾವ ಕಾರಣಕ್ಕೆ ನಾನು "ನಿಮ್ಮವ" ಎನ್ನುವ ಅಕೌಂಟನ್ನು ೧೯೯೯ರಲ್ಲಿ ತೆರೆದೆನೋ ಗೊತ್ತಿಲ್ಲ, ಇಂಗ್ಲೀಷ್‌ನಲ್ಲಿ Yours ಎಂದು ಬರೆಯೋ ಹಾಗೆ ನಾನು 'ನಿಮ್ಮವ' ಎಂದು ಬರೆದು ನಿಮ್ಮಿಂದ ಮರೆಯಲ್ಲಿರೋಣ ಎಂದು ಆಲೋಚಿಸಿದ್ದೆ. ಆದರೆ, ನನ್ನ ಪೋಸ್ಟ್‌ಗಳಿಗೆ ಪ್ರತಿಕ್ರಿಯಿಸುವವರು 'ನಿಮ್ಮವ' ನನ್ನು "ನಿಮ್ಮವ, ನಿಮ್ಮವನೇ, ನಿಮ್ಮವರೇ, ನಮ್ಮವ, ನಮ್ಮವರೇ, ನಮ್ಮವನೇ..." ಇತ್ಯಾದಿ ಸಂಬೋಧನೆಗಳನ್ನು ಉಪಯೋಗಿಸಿ ಕೊಸರಾಡುತ್ತಿದ್ದುದನ್ನು ನೋಡಿ, ಹಾಗೂ "ನಿಮ್ಮವ" ಯಾರವನೂ ಆಗಬೇಕಾದುದಿಲ್ಲ ಎಂಬ ಇಂಗಿತವನ್ನು ಹಲವರು ವ್ಯಕ್ತಪಡಿಸಿದ್ದರಿಂದ "ನಿಮ್ಮವ"ನನ್ನು "ಅಂತರಂಗಿ"ಯಾಗಿ ಬದಲಾಯಿಸಿಕೊಳ್ಳಬೇಕಾಯಿತು.

ಎಲ್ಲರೂ ಬ್ಲಾಗುಗಳನ್ನು ತೆರೆದುಕೊಂಡು ಕನ್ನಡ ಜಾಲ ಪ್ರಪಂಚವೆಂಬ ಸಣ್ಣ ಹಳ್ಳಿಯಲ್ಲಿ ತಮ್ಮ-ತಮ್ಮ ಮನೆಗಳನ್ನು ಸ್ಥಾಪಿಸಿಕೊಳ್ಳುತ್ತಿರುವುದನ್ನು (ಒಂದು ರೀತಿ ಬೆಂಗಳೂರಿನಲ್ಲಿ ನಿವೇಶನವನ್ನು ಖರೀದಿಸಿ ಮನೆ ಕಟ್ಟಿದ ಹಾಗೆ) ಆವಾಗಾವಾಗ ಮೇಲಿಂದ ಮೇಲೆ ನೋಡುತ್ತಿದ್ದೆನಾದರೂ, ಬ್ಲಾಗು ನನಗಲ್ಲ ಎಂದು ನಿರ್ಲಿಪ್ತತೆಯಿಂದ ಇದ್ದವನಿಗೆ, ನವೆಂಬರ್ ೨೨ರಂದು ಅದು ಏನಾಯಿತೋ ಗೊತ್ತಿಲ್ಲ - ಬ್ಲಾಗ್‌ಪೋಸ್ಟ್‌ನಲ್ಲಿ "ನಿಮ್ಮಾಂತರಂಗ" ಎಂದು ನಾನೂ ಒಂದು ಅಕೌಂಟನ್ನು ಸೃಷ್ಟಿಸಿ, ಒಂದು ಸಾಲನ್ನೂ ಬರೆದು ಬಿಸಾಡಿದೆ - ಆಗ ತುಂಗಾಳ ನೀರನ್ನು ಇನ್ನೂ ಕುಡಿದಿರಲಿಲ್ಲ, ಮಲ್ಲಿಗೆ, ಕೇದಗೆ, ಸಂಪಿಗೆಗಳ ಪರಿಮಳದ ಆಸ್ವಾದನೆಯೂ ಇರಲಿಲ್ಲ. ಚಿಕ್ಕದಾಗಿ, ಚೊಕ್ಕದಾಗಿ 'ನಿಮ್ಮಾಂತರಂಗಕ್ಕೆ ಸ್ವಾಗತ - ನಿಮ್ಮ ಬಹಿರಂಗವನ್ನೂ ತನ್ನಿ!' ಎಂದು ಕಂಗ್ಲೀಷಿನಲ್ಲೇ ಬರೆದು ಪ್ರಕಟಿಸಿದ್ದೆ. ಅನಂತರ ಧೀರ್ಘ ನಿದ್ರೆಗೆ ಶರಣುಹೋದ ನಾನು ಎಚ್ಚೆತ್ತಿದ್ದು ನನ್ನ ಸಹೋದ್ಯೋಗಿ, ಮಿತ್ರ ಹಾಗೂ ನಾನು ಓದಿದ ಕಾಲೇಜಿನವನೇ ಆದ ..ಶ ಚುಚ್ಚಿದ ಮೇಲೆಯೇ! ಅವನು ಯಾವುದೋ ಒಂದು ಬ್ಲಾಗನ್ನು ಇನ್ಸ್ಟಂಟ್ ಮೆಸ್ಸೇಜಿನ ಮೂಲಕ ಕಳಿಸಿ, ಇದನ್ನು ನೋಡು ಎಂದ, ನಾನು ಅದಕ್ಕುತ್ತರವಾಗಿ ನನ್ನದೂ ಒಂದು ಬ್ಲಾಗು ಅಕೌಂಟಿದೆ ನೋಡು ಎಂದು ಕೊಂಡಿ ಕಳಿಸಿದೆ - ಅದರಲ್ಲಿ ಒಂದು ಸಾಲನ್ನು ಬಿಟ್ಟು ಬೇರೇನೂ ಇರಲಿಲ್ಲವೆಂದು ಮೊದಲೇ ಹೇಳಿದ್ದೇನೆ - ಅದನ್ನು ನೋಡಿದ ಈ ಮಿತ್ರ, ತಕ್ಷಣ ಬರೆದ - 'ಏನಯ್ಯಾ, ಒಂದು ಟೆಂಪ್ಲೇಟ್ ಓಪನ್ ಮಾಡಿಟ್ಟುಕೊಂಡು, ದೊಡ್ಡದಾಗಿ ಬ್ಲಾಗು ಅಂತ ಕಳಿಸಿದ್ದೀಯಾ!', ಇಂತಹ ಮಾತುಗಳು ನಿಜವಾಗಲೂ ನನ್ನನ್ನು ಚುಚ್ಚುತ್ತವೆ ಎಂದು ಅವನಿಗೂ ಗೊತ್ತಿರಬೇಕು - ಅದಕ್ಕುತ್ತರವಾಗಿ ನಾನು ಬರೆದೆ 'ಆಗಾಗ್ಗೆ ನೋಡ್ತಾ ಇರು, ಮುಂದೆ ಬರೀತೀನಿ!'. ನನ್ನ ಮೇಲಿನ ಮಾತಿನಲ್ಲಿ ನಂಬಿಕೆ ಇರದಿದ್ದುದರಿಂದಲೋ ಏನೋ ಅವನು ಮುಂದೆ ಮತ್ತೊಮ್ಮೆ ನಾನು ಹೇಳುವವರೆಗೆ ನನ್ನ so called ಬ್ಲಾಗನ್ನು ನೋಡುವ ಗೋಜಿಗೇ ಹೋಗಲಿಲ್ಲ!

ಮಾರ್ಚ್ ೧೬ ರಿಂದ ಯಾವಾಗ ಎಷ್ಟು ಸಾಧ್ಯವೋ ಅಷ್ಟನ್ನು ಬರೆದು, ಹೀಗೇ ಏಪ್ರಿಲ್‌ನ ಮಧ್ಯದಲ್ಲಿ ಮತ್ತೆ ಅವನಿಗೆ ಮೆಸ್ಸೇಜ್ ಕಳಿಸಿದೆ - ನನ್ನ ಬ್ಲಾಗನ್ನು ಪುರುಸೊತ್ತು ಇದ್ದಾಗ ನೋಡು ಎಂದು. ಅವನಿಗೆ ಆಶ್ಚರ್ಯವಾಗುವಂತೆ ಎಂಟೊಂಭತ್ತು ಪೋಸ್ಟ್‌ಗಳು ಆಗಲೇ ಪೋಣಿಸಲ್ಪಟ್ಟಿದ್ದವು, ಹಾಗೂ ಪ್ರೊಫ಼ೈಲೂ ಕೂಡ ಅಪ್‌ಡೇಟ್ ಆಗಿತ್ತು. ಅವನು 'ಹೇ, ನಾನು ತಮಾಷೆಗೆ ಹೇಳಿದ್ದನ್ನ ಸೀರಿಯಸ್ಸಾಗೇ ತೆಗೆದುಕೊಂಡು ಚೆನ್ನಾಗೇ ಬರೆದಿದ್ದೀಯಲ್ಲಯ್ಯಾ!' ಎಂದ...ನಾನು 'ಸುಮ್ನೇ ಚೆನ್ನಾಗಿದೆ ಅಂತ ಹೇಳಬೇಡವೋ...' ಎಂದೆ, ಅವನು 'ಇಲ್ಲಾ, ಸೀರಿಯಸ್ಸಾಗಿ, ಚೆನ್ನಾಗಿದೆ, ನಾನು ಸುಮ್ ಸುಮ್ನೇ ಚೆನ್ನಾಗಿದೆ ಅಂತ ಹೇಳೋಲ್ಲ' ಎಂದು ಸರ್ಟಿಫಿಕೇಟ್ ಕೊಟ್ಟ. ಆಗಲೇ ನನಗೆ ಸ್ವಲ್ಪ ಧೈರ್ಯ ಬಂದಿದ್ದು. ಈ ಬ್ಲಾಗನ್ನು ಬರೆಯುವಂತೆ ಚುಚ್ಚಿದವನೇ 'ನಿಮ್ಮಾಂತರಂಗ' ಅನ್ನೋ ಹೆಸರು ಸರಿ ಇಲ್ಲ, ಅದರ ಬದಲಿಗೆ ಬೇರೆ ಏನಾದ್ರೂ ಸಿಕ್ರೆ ನೋಡು' ಎಂದ, ನಾನು 'ಅಂತರಂಗ' ಎಂದು ಇಟ್ಟೆ - thank goodness, it was available!

ಹೀಗೆ 'ನಿಮ್ಮಾಂತರಂಗ' ಇದ್ದದ್ದು 'ಅಂತರಂಗ'ವಾಯ್ತು, ಅದರ ಬೆನ್ನಿಗೇ 'ನಿಮ್ಮವ'ನನ್ನೂ 'ಅಂತರಂಗಿ' ಎಂದು ಬದಲಾಯಿಸುವಂತಾಯ್ತು. "ಅಂತರಂಗಿ"ಯ ಜೊತೆಗೆ ಸ್ಪರ್ಧೆಗೆ ನಿಂತ ಇತರ ಹೆಸರುಗಳಲ್ಲಿ "ಅಪರಂಜಿ, ಜೀವನಪ್ರೇಮಿ, ಅಭ್ಯಾಗತ, ಕಲರವಿ, ಮಲೆನಾಡಿಗ, ಪಯಣಿಗ, ವಿಕಟಕವಿ", ಎನ್ನುವ ಒಳ್ಳೆಯ ಹೆಸರುಗಳೂ, "ಅಳುಮುಂಜಿ, ಕೊರಕ, ಕೋಡಂಗಿ, ಅಲ್ಪಜ್ಞ, ಅಂತರ್ಮುಖಿ" ಮುಂತಾದ not so ಒಳ್ಳೆಯ ಹೆಸರುಗಳನ್ನೂ ಪರಿಗಣನೆಗೆ ತಂದುಕೊಂಡರೂ ಕೊನೆಯಲ್ಲಿ "ಅಂತರಂಗಿ"ಗೆ ವಿಜಯವಾಯಿತು.

ನೀವೂ ಬ್ಲಾಗಿನಾಟದಲ್ಲಿ ಭಾಗಿಗಳೇ? ಅಂದ್ರೆ ನಿಮಗೂ ಒಂದು ಬ್ಲಾಗೂ ಅಂಥ ಇದೆಯೇ? ಇಲ್ಲವಾದರೆ ಮತ್ತೇಕೆ ತಡ, ನೀವು ಒಂದನ್ನು ಏಕೆ ಶುರುಮಾಡಬಾರದು? ನೀವು ಶುರು ಮಾಡಿ ಇನ್ನೂ ಹೆಚ್ಚು ಬರೆಯದಿದ್ದರೆ ನನಗೆ ತಿಳಿಸಿ, ನನಗೆ ಚುಚ್ಚಿದವನನ್ನು ನಿಮ್ಮ ಹಿಂದೆ ಬಿಡುತ್ತೇನೆ, ಆಗ ನೋಡಿ ಏನಾಗುತ್ತೇ ಅಂತ!

ಕೊನೆಯಲ್ಲಿ, ಏಕೆ ಹೀಗೆ "ಅಂತರಂಗಿ"ಯಾಗಿ ಅಡಗಿಕೊಳ್ಳಬೇಕು ಎಂದು ಹಲವಾರು ಬಾರಿ ಅನ್ನಿಸಿದೆ, ಆದರೂ ಇಲ್ಲಿ ನಾನೇನೋ ಬರೆದು ಕೊನೆಗೆ ಜನಗಳು ಎದಿರು ಸಿಕ್ಕರೆ ಕಲ್ಲು ಹೊಡೆಯಬಾರದು ನೋಡಿ, ಅದರಿಂದ ತಪ್ಪಿಸಿಕೊಳ್ಳೋಣವೆಂದು ಈ ಮರೆ ಅಷ್ಟೇ! ಅಲ್ಲದೇ ಹೀಗೆ ಮರೆಯಲ್ಲಿರೋದರಿಂದ 'ಕ್ಯಾಂಡಿಡ್' ಆಗಿ ಇರೋ ವಿಷಯವನ್ನು ಇದ್ದಹಾಗೇ ಬರೆಯಬೇಕು ಎನ್ನಿಸಿದರೂ, ಈ ವರೆಗಿನ ಅನಿಸಿಕೆಗಳ ವಿನಿಮಯದ ಮೂಲಕ ಈ ವರ್ಚುವಲ್ ಪ್ರಪ್ರಂಚದಲ್ಲೇ ಒಂದು ರೀತಿ ಅವಿನಾಭಾವ ಸಂಬಂಧಗಳು ಹುಟ್ಟಿಕೊಳ್ಳೋದರಿಂದ ಒಂದು ಕಡೇ ಸ್ವಾರಸ್ಯಕರವಾಗಿ ಬರೆಯುವುದಕ್ಕೆ ಉತ್ತೇಜನ ಸಿಕ್ಕುವುದೂ, ನನ್ನ ವಿಷಯಗಳಿಗೆ ಹೊರಗಿನವರ ಅಭಿಪ್ರಾಯ ದೊರೆಯುವುದೂ ಅಲ್ಲದೇ, ಮತ್ತೊಂದು ಕಡೇ ಅವೇ ಸಂಬಂಧಗಳು ಬರೆಯುವ ಮುನ್ನ, ಬರೆಯುವಾಗ ವಿಷಯಗಳ ಮೌಲ್ಯಮಾಪಕರಂತೆ ಮನದಲ್ಲಿ ಮೂಡಿ ಬರುವುದು ಒಳ್ಳೆಯದೂ ಹೌದು, ಕೆಟ್ಟದ್ದೂ ಹೌದು. ಆದರೆ ಹೀಗೆ ಬರೆಯುತ್ತಿರುವುದೂ, ಅವುಗಳಿಗೆ ಸ್ವೀಕರಿಸಿದ ಓದುಗರ ಸಂವೇದನೆಗಳೂ ನನಗಂತೂ ಬಹಳ ಒಳ್ಳೆಯದನ್ನೇ ಮಾಡಿವೆ - ಬರೆಯುವ ಪ್ರಕ್ರಿಯೆ ಮನಸ್ಸನ್ನು ಹಗರ ಮಾಡಿದರೆ, ನಂತರದ ಅನಿಸಿಕೆ-ಪ್ರತಿಕ್ರಿಯೆಗಳು ಒಂದು ರೀತಿಯ ಮುದವನ್ನು ನೀಡುತ್ತವೆ - ಆದರೆ, ನನಗೆ ಬರಿ ಎನ್ನುವವರೂ ಯಾರೂ ಇಲ್ಲ, ಅವರಿಗೆ ಓದಿ, ಓದಿ ಪ್ರತಿಕ್ರಿಯಿಸಿ ಎನ್ನುವವರೂ ಯಾರಿಲ್ಲ - ಎಲ್ಲವೂ ಯಾವುದೋ ಒಂದು 'ಇದ್ದರೂ ಇರದ' ಸಂಬಂಧದ ಪ್ರತೀಕವಾಗಿ ನಡೆದುಹೋಗುತ್ತಿದೆ.

ಮೊನ್ನೆ 'ಸಂಜಯ'ರನ್ನು ಭೇಟಿಯಾದಾಗ ಅವರು ಹೇಳಿದ್ದರು - 'ಮಜಾವಾಣಿಗೆ ಪ್ರತಿದಿನವೂ (ಪ್ರಪಂಚದ ಯಾವ್ಯಾವುದೋ ಮೂಲೆಗಳಿಂದ) ಕೊನೇಪಕ್ಷ ಒಂದು ನೂರು ಜನರಾದರೂ ಭೇಟಿಕೊಡುತ್ತಾರೆ' ಎಂದು, ಹಾಗಿದ್ದ ಮೇಲೆ ಓದುಗರನ್ನು ನಿರಾಸೆಗೊಳಿಸಲು ಯಾರಿಗೆ ತಾನೇ ಮನಸ್ಸು ಬರುತ್ತದೆ ನೀವೇ ಹೇಳಿ.

***

ಆದರೆ ಒಂದಂತೂ ಸತ್ಯ, ಇಲ್ಲಿ ಒಂದು ಸಾಲು ಬರೆಯಬೇಕಾದರೆ ಕೊನೇಪಕ್ಷ ಹತ್ತು ಸಾಲನ್ನಾದರೂ ಓದಬೇಕು (ಕಟ್ಟಿಕೊಂಡ ಬುತ್ತಿ ಎಷ್ಟು ಹೊತ್ತು ಬಂದೀತು?), ಅದರಿಂದ ನನಗೂ ಸುಖ, ಎಲ್ಲರಿಗೂ ಸುಖ!

Thursday, May 11, 2006

ಎರಡು ದೊಡ್ಡ ಸೋಲುಗಳು

ಇಷ್ಟೊಂದು ಹಾರಾಡುವ ನಾನು ಎರಡು ಬಾರಿ ನೆಲಕಚ್ಚಿ ಸೋತದ್ದಿದೆ - ಬರೀ ಮೂಗಷ್ಟೇ ನೆಲಕ್ಕೆ ತಾಗುವ ಹಾಗಲ್ಲ, ಮೂಗು ನೆಲದ ಒಳಗೆ ಹುದುಗಿ-ಜಜ್ಜಿ ಹೋಗುವ ಹಾಗೆ, ಅಂದು ಹೊಡೆತ ತಿಂದು ಮೂಗಿನಿಂದ ಸೋರುತ್ತಿರುವ ರಕ್ತ ಎಂದೂ ನಿಲ್ಲದ ಹಾಗೆ. ಹಲವಾರು ಬಾರಿ ಸೋತು-ಗೆಲ್ಲುವ ಬದುಕನ್ನು ಎಲ್ಲರಂತೆ ನಾನೂ ಈ ವರೆಗೆ ಬದುಕಿದ್ದೇನಾದರೂ ಈ ಎರಡು ಸೋಲುಗಳ ಬಗ್ಗೆ ಯೋಚನೆ ಮಾಡಿದಷ್ಟೂ ಅಷ್ಟೇ ಗಾಢವಾಗತೊಡಗುತ್ತವೆ.

***

ಸೋಲು ೧: ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸಂದರ್ಶನಕ್ಕೆ ಹೋದಾಗ ಅವಮಾನಿತನಾಗಿದ್ದು.

ಆಗ (೧೯೯೩-೯೪) ನಾನು ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಅತಿಥಿ ಉಪನ್ಯಾಸಕನಾಗಿದ್ದೆ (guest lecturer). ಬರೀ ಅದರ ಹಿಂದಿನ ವರ್ಷವೇ ಮೈಸೂರಿನಲ್ಲಿ ಎಂ.ಎಸ್ಸಿ., ಮುಗಿಸಿಕೊಂಡು ಬಂದು, ಸಹ್ಯಾದ್ರಿ ಹಾಗೂ ಡಿ.ವಿ.ಎಸ್. ಕಾಲೇಜುಗಳಲ್ಲಿ ಅರೆಕಾಲಿಕ ಉಪನ್ಯಾಸಕನಾಗಿ ಪಾಠಮಾಡಿಕೊಂಡು ನನ್ನಷ್ಟಕ್ಕೆ ನಾನೇ ಇದ್ದವನಿಗೆ ಕುವೆಂಪು ವಿಶ್ವವಿದ್ಯಾನಿಲಯದ ಎಮ್.ಎಸ್ಸಿ., ವಿದ್ಯಾರ್ಥಿಗಳಿಗೂ ಪಾಠ ಮಾಡುವಂತೆ ಬುಲಾವು ಬಂತು: ಆಗಿನ್ನೂ ವಿಶ್ವವಿದ್ಯಾನಿಲಯದ ಕಟ್ಟಡಗಳು ಇನ್ನೂ ತಯಾರಿರದಿದ್ದ ಕಾರಣ ಹೆಚ್ಚಿನ ಪಾಠ ಪ್ರವಚನಗಳೆಲ್ಲ ಸಹ್ಯಾದ್ರಿ ಕಾಲೇಜಿನ ಆವರಣದಲ್ಲೇ ನಡೆಯುತ್ತಿದ್ದವು. ಅಲ್ಲದೆ ಸಹ್ಯಾದ್ರಿ ಕಾಲೇಜಿನ ಉಳಿದ ಉಪನ್ಯಾಸಕರೂ ಸ್ನಾತಕೋತ್ತರ ತರಗತಿಗಳಿಗೆ ಪಾಠ ಮಾಡುತ್ತಿದ್ದರು, ಆದರೆ ಅಲ್ಲಿ ಹೊಸದಾಗಿ ಸೇರಿದ್ದ ಅರೆಕಾಲಿಕ ಉಪನ್ಯಾಸಕರಲ್ಲಿ ಎಲ್ಲರನ್ನೂ ಬಿಟ್ಟು ಈ ಕೆಲಸ ನನ್ನನ್ನೇ ಬಂದು ಸುತ್ತಿಕೊಳ್ಳುವುದೇ? ಮೊದಮೊದಲು ವಿಪರೀತ ಕಷ್ಟವಾಗುತ್ತಿತ್ತು, ಬರೀ ಪ್ರಾಕ್ಟಿಕಲ್ ತರಗತಿಗಳಿಗೆ ಹೇಳಿಕೊಡಿ ಎಂದು ಕೆಲಸಕ್ಕೆ ತೆಗೆದುಕೊಂಡವರು ಮುಂದೆ ಥಿಯರಿ ಕ್ಲಾಸಿಗೂ ಪಾಠ ಮಾಡಿ ಎಂದು ಗಂಟು ಬಿದ್ದರು.

ಹೀಗೆ ಎಲ್ಲವೂ ಬಂಗಾರವಿದ್ದಂತಹ ಒಂದು ಅಮೃತಘಳಿಗೆಯಲ್ಲಿ ಸುಮ್ಮನಿರಲಾರದ ನಾನು, Solid State Electronics ನಲ್ಲಿ ಯಾವುದೋ ಭಯಂಕರ ರಿಸರ್ಚ್ ಪ್ರಾಜೆಕ್ಟ್ ಒಂದರಿಂದ ಮೋಹಿತನಾಗಿ ಮಂಗಳೂರು ವಿಶ್ವವಿದ್ಯಾಲಯದಲ್ಲಿ ರಿಸರ್ಚ್ ಫೆಲೋ ಆಗಿ ಕೆಲಸ ಮಾಡಲು ಅರ್ಜಿ ಗುಜರಾಯಿಸಿದೆ. ನನ್ನ ಅನುಭವವನ್ನು ನೋಡಿ ನನಗೂ ಮಂಗಳೂರು ವಿಶ್ವವಿದ್ಯಾನಿಲಯದಿಂದ ಸಂದರ್ಶನಕ್ಕೆ ಬುಲಾವು ಬಂದಿತು.

ನಾನು ಈ ಸಂದರ್ಶನಕ್ಕೆ ಹಿಂದಿನ ದಿನವೇ ಮಂಗಳೂರಿಗೆ ಹೋಗಿ ಯಾವುದಾದರೂ ಲಾಜಿಂಗ್‌ನಲ್ಲಿ ಉಳಿದುಕೊಂಡು ಮರುದಿನ ವಿಶ್ವವಿದ್ಯಾನಿಲಯಕ್ಕೆ ಹೋಗಿದ್ದರೆ ಬುದ್ದಿವಂತನಾಗುತ್ತಿದ್ದೆ, ಆದರೆ ಆಗ ನನ್ನ ಬುದ್ಧಿ ಇನ್ನೂ ಸ್ಥಿಮಿತದಲ್ಲಿರದಿದ್ದುದರಿಂದ 'ಬೇಕಾದ್ದು ಆಗಲಿ, ಒಂದು ಕೈ ನೋಡೋಣ'ವೆಂದುಕೊಂಡು ಮುಂಜಾನೆ ಎರಡೂವರೆಗೋ-ಮೂರು ಘಂಟೆಗೋ ಶಿವಮೂಗ್ಗ ಬಿಟ್ಟು ಮಂಗಳೂರನ್ನು ಸೇರುವ ಬಸ್ಸನ್ನು ಹತ್ತಿ ಬೆಳಗ್ಗೆ ಎಂಟು ಘಂಟೆಗೆಲ್ಲ ಮಂಗಳಗಂಗೋತ್ರಿಯನ್ನು ತಲುಪುವ ಹೊತ್ತಿಗೆ ಹಣ್ಣುಗಾಯಿ-ನೀರುಗಾಯಿ ಆಗಿ ಹೋಗಿತ್ತು. ಅಲ್ಲಿ ಸ್ಥಳೀಯ ಅಭ್ಯರ್ಥಿಗಳು ಮೂರು ಜನರಿದ್ದರು, ನಾನೊಬ್ಬನೇ ಹೊರಗಿನಿಂದ ಬಂದವನು - ಮೈಸೂರಿನಲ್ಲಿ ಓದಿ, ಕುವೆಂಪುನಲ್ಲಿ ಪಾಠ ಮಾಡಿ ಸಂದರ್ಶನಕ್ಕೆ ಬಂದಿದ್ದೇನೆ ಎಂದು ನನಗೆ ಪ್ರಾಶಸ್ತ್ಯವನ್ನು ನೀಡಲಾಗಿತ್ತು.

ಸರಿ, ಎಲ್ಲರಿಗಿಂತ ಮೊದಲೇ ನನಗೆ ಒಳಗೆ ಬರುವಂತೆ ಕರೆ ಬಂದಿತು, ನಾನು ಹೋದೆ, ಒಂದು ಲೆಕ್ಚರ್ ಹಾಲ್ ನ ಕಟ್ಟೆಯ ಮೇಲೆ, ಮೇಜಿನ ಹಿಂದೆ ನಾಲ್ಕು ಜನ ಪ್ರೊಫ಼ೆಸರ್‌ಗಳು ಕುಳಿತಿದ್ದರು, ಅನಂತರ ಸಂದರ್ಶನದ ಮಧ್ಯೆ ಮತ್ತಿಬ್ಬರು ಬಂದು ಸೇರಿಕೊಂಡರು:

ಶುರುವಾಯಿತು ನೋಡಿ ಪ್ರಶ್ನೆಗಳ ಮೋಡಿ - ಸುಮಾರು ಒಂದು ಘಂಟೆ ನಡೆದಿದ್ದ ಸಂದರ್ಶನದಲ್ಲಿ ನನ್ನ ಜನ್ಮವನ್ನೇ ಜಾಲಾಡಿ ಬಿಟ್ಟರು! ಅಣು, ಪರಮಾಣು, ವಿಕಿರಣ, ಗುರುತ್ವಾಕರ್ಷಣೆ, ವಸ್ತುವಿನ ಹಲವು ಸ್ಥಿತಿಗಳ ಬಗ್ಗೆ, ಅದ್ಯಾವ್ಯಾವೋ ಫಾರ್ಮುಲಾಗಳು, ಸೂತ್ರಗಳು, ಲಾಗಳು, ಥೇರಮ್‌ಗಳು, ಒಂದೇ ಎರಡೇ - ನಾನು ಓದಿದ ಮೈಸೂರಿನ ಪಠ್ಯಕ್ರಮವನ್ನೇ ದೂರುವಂತಹ, ಎಲ್ಲ ಅಬ್ಸ್ಟ್ರಾಕ್ಟ್ ಪ್ರಶ್ನೆಗೂ ರಿಯಲ್ ಉತ್ತರವನ್ನು ಬುಡದಿಂದ ಕೇಳುತ್ತಾ ತಮ್ಮಳೊಗಿದ್ದ ಯಾವುದೋ ಜನ್ಮದ ವೈರವನ್ನೆಲ್ಲ ನನ್ನ ಮೇಲೆ ಕಾರತೊಡಗಿದರು. ಅವರು ಪ್ರಶ್ನೆಗಳನ್ನು ಕೇಳೋದು, ನಾನು ನನಗೆ ಬಂದ ಉತ್ತರವನ್ನು ಕೊಡೋದು, ಆ ಉತ್ತರಗಳ ಮೇಲೆ ಮತ್ತೆ ಪ್ರಶ್ನೆಗಳನ್ನ ಕೇಳೋರು, ನಾನು ಮತ್ತೆ ಉತ್ತರವನ್ನು ಕೊಡೋದು, ಹೀಗೆ ಮಾಡಿ-ಮಾಡಿ ಅವರೆಲ್ಲರೂ ಸುಸ್ತಾಗಿ ಹೋದರು, ನನ್ನ ಕಥೆಯಂತೂ 'ಇನ್ನು ಮಂಗಳೂರಿನ ಕಡಲಿಗೆ ಬಿದ್ದು ಬಿಡೋಣ, ಶಿವಮೊಗ್ಗಕ್ಕೆ ಹಿಂತಿರುಗಿ ಹೋಗುವುದೇ ಬೇಡ' ಎನ್ನಿಸುವಂತಾಗಿ ಹೋಗಿತ್ತು.

ಎಣಿಸಿದಂತೆ ನಾನು ಸಂದರ್ಶನದಲ್ಲಿ ನಪಾಸಾಗಿದ್ದೆ, ಅದಕ್ಕೆ ಮಂಗಳೂರಿನ ಸೆಕೆ ವಾತಾವರಣವಿದ್ದಿರಬಹುದು, ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ಬಿಟ್ಟು ಮಜಾ ತೆಗೆದುಕೊಂಡು ನಕ್ಕ ಆ ಪ್ರೊಫೆಸರ್‌ಗಳ ಕುಹಕವಿದ್ದಿರಬಹುದು, ಅಥವಾ ಎಮ್.ಎಸ್ಸಿ., ಮುಗಿಸಿಯೂ, ಅಲ್ಲಲ್ಲಿ ಪಾಠ ಮಾಡಿಯೂ ತಲೆಯಲ್ಲಿ ಏನನ್ನೂ ತುಂಬಿಕೊಳ್ಳದ ನನ್ನ ಬುದ್ಧಿವಂತಿಕೆಯೂ ಇರಬಹುದು, ಅಥವಾ ಯಾರೂ ಹೋಗಲಾರದ ಮಂಗಳೂರು ವಿಶ್ವವಿದ್ಯಾನಿಲಯದ ಸಂದರ್ಶನಕ್ಕೆ ಹೋಗಿದ್ದೇ ತಪ್ಪಾಗಿರಬಹುದು.

ಆ ದೇವರಿಗೆ ದೊಡ್ಡ ನಮಸ್ಕಾರ, ಅಂದು ನನ್ನನ್ನು ಸಂದರ್ಶನದಲ್ಲಿ ಫೇಲ್ ಆಗುವಂತೆ ಮಾಡಿದ್ದಕ್ಕೆ!

ಅಂದು ಅವರೆಲ್ಲರೂ ಮಾಡಿದ ವಿಚಿತ್ರ ಸಂದರ್ಶನ, ಅದರ ಅಸಫಲತೆ ತಂದ ನೋವು ನನ್ನನ್ನು ಬಲವಾಗಿ ಕಾಡಿತ್ತು, ಅದು ನನ್ನನ್ನು ಎಷ್ಟು ಮಾನಸಿಕವಾಗಿ ಹಿಂಸಿಸಿತ್ತೆಂದರೆ ಬಹಳ ದಿನಗಳ ಕಾಲ ಒಂದು ರೀತಿ ರೋಗಬಂದವನಂತೆ ನಡೆದುಕೊಳ್ಳಲಾರಂಭಿಸಿದ್ದೆ. ಇವತ್ತಿನ ತಿಳುವಳಿಕೆಯೇನಾದರೂ ಇದ್ದಿದ್ದರೆ ಎಲ್ಲಾದರೂ ಮನೋವೈದ್ಯರ ಬಳಿ ತೋರಿಸಿ counseling ಪಡೆದುಕೊಳ್ಳುತ್ತಿದ್ದೆನೋ ಏನೋ.

ಅಂದು ನನ್ನನ್ನು ಹಿಂಸಿಸಿ ಮಜಾ ತೆಗೆದುಕೊಂಡ ಪ್ರೊಫೆಸರುಗಳಿಗೆ ನನ್ನ ಧಿಕ್ಕಾರವಿರಲಿ, ಅವರುಗಳು ಇವತ್ತೇನಾದರೂ ನನ್ನ ಕೈಗೆ ಸಿಕ್ಕಿದರೆ ಒಂದು ಕೈ ನೋಡಿಕೊಳ್ಳುತ್ತೇನೆ, ಸದಾ ಯೂನಿವರ್ಸಿಟಿಯಲ್ಲಿ ಪಾಠ ಹೇಳಿಕೊಂಡು ಯೂನಿವರ್ಸನ್ನೇ ಕೊಂಡುಕೊಂಡಂತೆ ಆಡುವ ಅವರ ಕೊಬ್ಬನ್ನು ಇಳಿಸುವುದು ಹೇಗೆ ಎಂದು ನನಗೆ ಚೆನ್ನಾಗಿ ಗೊತ್ತು!


ಸೋಲು ೨: ನಾನು ಅಮೇರಿಕೆಗೆ ಬಂದು ಇಷ್ಟೊಂದು ವರ್ಷವಾದರೂ ನನ್ನ ಕಡೆಯಿಂದ ಯಾರೂ ಅಮೇರಿಕೆಗೆ ಬಾರದಿದ್ದುದು.

೨೦೦೧ ರಲ್ಲಿ ಅಮೇರಿಕದ ಮೇಲೆ ಭಯೋತ್ಪಾದಕರ ಧಾಳಿಯಾಗುತ್ತೆ, ಮುಂದೆ ಇರಾಕ್ ಯುದ್ಧವಾಗುತ್ತೆ, ಇಮಿಗ್ರೇಷನ್ ಲಾ ಗಳು ರಾತ್ರೋ ರಾತ್ರಿ ಬದಲಾಗುತ್ತವೆ ಎಂದು ಯಾರಿಗೆ ತಾನೇ ಗೊತ್ತಿತ್ತು? ೯೮ ರಲ್ಲಿ ನಾನು ಭಾರತಕ್ಕೆ ಹೋದಾಗ ಆದಷ್ಟು ಬೇಗ ವೀಸಾ ಪೇಪರುಗಳನ್ನು ರೆಡಿ ಮಾಡಿಕೊಂಡು ಅಮೇರಿಕದಿಂದಲೇ ನನ್ನ ಅಮ್ಮನಿಗೆ ವಿಸಿಟರ್ ವೀಸಾಕ್ಕೆ ಅರ್ಜಿ ಗುಜರಾಯಿಸುತ್ತೇನೆ ಎಂದು ಮಾತು ಕೊಟ್ಟು ಬಂದವನು - ಯಾವ್ಯಾವ ಕಾರಣಕ್ಕೋ ಏನೋ ೨೦೦೧ ರವರೆಗೂ ಅರ್ಜಿಯನ್ನೇ ಹಾಕಲಿಲ್ಲ. ಆಗೆಲ್ಲ ಬೆಂಗಳೂರಿನಲ್ಲೇ ಡ್ರಾಪ್ ಬಾಕ್ಸ್ ವ್ಯವಸ್ಥೆ ಇತ್ತು, ಕೊನೆಗೆ ಆ ಡ್ರಾಪ್ ಬಾಕ್ಸ್ ವ್ಯವಸ್ಥೆಯನ್ನು ಇನ್ನೇನು ಮುಚ್ಚಿ ಬಿಡುತ್ತಾರೆ ಎಂದು ಗೊತ್ತಾದ ತಕ್ಷಣ ನಾನು ಪರೀಕ್ಷೆಗೆ ಲಗುಬಗೆಯಿಂದ ತಯಾರಿಯಾಗುವ ವಿದ್ಯಾರ್ಥಿಯಂತೆ ಕೊನೆಯ ಕ್ಷಣದಲ್ಲಿ ನನ್ನ ಅಮ್ಮ ಹಾಗೂ ಅಣ್ಣನಿಗೆ ವಿಸಿಟರ್ ವೀಸಾಕ್ಕೆ ಅರ್ಜಿ ಹಾಕಿದೆ. ಆದರೆ ನನ್ನ ದುರಾದೃಷ್ಟಕ್ಕೋ ಏನೋ ವೀಸಾ ನಿರಾಕರಣೆಯಾಗಿ, ಅಮ್ಮ ಹಾಗೂ ಅಣ್ಣನಿಗೆ ಮದ್ರಾಸಿಗೆ ಬರುವಂತೆ ಬುಲಾವು ಬಂದಿತು. ನನಗಿಲ್ಲಿ ಹಸಿರು ಕಾರ್ಡು ಇದ್ದುದಕ್ಕೋ, ಅಥವಾ ನನ್ನ ಅಣ್ಣನ ಕಲ್ಲೀ ಮೀಸೆಗೆ ಹೆದರಿಯೋ, ಅಥವಾ ನನ್ನ ಅಮ್ಮನಿಗೆ ಮಂಡಿ ನೋವಿನಿಂದ ಹೆಚ್ಚು-ಹೆಚ್ಚು ಓಡಾಡಲು ಬರದ ಅಸಹಾಯಕತೆಯಿಂದಲೋ, ನನ್ನ ಪೆಚ್ಚು ಮೋರೆಯನ್ನು ಇನ್ನಷ್ಟು ಪೆಚ್ಚು ಮಾಡುವುದಕ್ಕೋ - ಮೊದಲ ಬಾರಿ ವೀಸಾವನ್ನು ನಿರಾಕರಿಸಿದರು.

ಸರಿ, ೨೦೦೧ ರಲ್ಲಿ ಸಿಗದೇ ಹೋದರೂ ಪರವಾಗಿಲ್ಲ, ಮತ್ತೊಮ್ಮೆ ಪ್ರಯತ್ನಿಸೋಣ ಎಂದು ೨೦೦೩ ರಲ್ಲಿ ಮತ್ತೆ ಅರ್ಜಿಯನ್ನು ಗುಜರಾಯಿಸಿದೆ - ಈ ಬಾರಿ ನನ್ನ ಅಮ್ಮನಿಗೆ ಮಾತ್ರ ಹಾಕಿದ್ದೆ, ಹಾಗಾದರೂ ಕೊಡಲಿ ಎಂಬ ಉದ್ದೇಶದಿಂದ. ಬ್ಯಾಂಕಿನ ದಾಖಲೆ ಪತ್ರಗಳನ್ನು ಎರಡೆರಡು ಬಾರಿ ಪರೀಕ್ಷಿಸಿದ್ದಾಯ್ತು, ಅವರು ಕೇಳಿದ್ದಕ್ಕಿಂತ ಹೆಚ್ಚು ದಾಖಲೆಗಳನ್ನು ತೆಗೆದುಕೊಂಡು ಹೊದರೂ, ಮತ್ತೆ ಯಾವುದೋ ಕ್ಷುಲ್ಲಕ ಕಾರಣಗಳಿಗೆ ವೀಸಾವನ್ನು ನಿರಾಕರಿಸಿದರು. ನನ್ನ ಅಣ್ಣನಿಗೆ ವೀಸಾಕ್ಕೆ ಅರ್ಜಿ ಹಾಕಿರದಿದ್ದರೂ ಅವನೇ ಅಮ್ಮನನ್ನು ಮದ್ರಾಸಿನವರೆಗೆ ಕರೆದುಕೊಂಡು ಹೋಗಿದ್ದ. ಆನವಟ್ಟಿಯಿಂದ ಬೆಂಗಳೂರಿಗೆ ಸುಮಾರು ೧೦ ಘಂಟೆ ಪ್ರಯಾಣ, ಅಲ್ಲಿಂದ ಮದ್ರಾಸಿಗೆ ಮತ್ತೆ ಹತ್ತು ಘಂಟೆ. ಮಂಡಿ ನೋವಿನಿಂದ ಹೆಚ್ಚು ಓಡಾಡಲಾಗದ ಅಮ್ಮ ಪ್ರತೀ ಸಾರಿ ಮದ್ರಾಸಿಗೆ ಹೋಗಿ ಬಂದಾಗಲು 'ಇನ್ನೊಮ್ಮೆ ಜೀವ ಹೋದ್ರೂ ಹೋಗೋದಿಲ್ಲಪ್ಪಾ' ಎಂದು ಹೇಳುತ್ತಿದ್ದಳು - ನನ್ನ ಅಣ್ಣನೂ ಎರಡು-ಮೂರು ದಿನಗಳ ಮಟ್ಟಿಗೆ ತನ್ನ ಕೆಲಸ ಕಾರ್ಯಗಳನ್ನು ಬಿಟ್ಟು ಮದ್ರಾಸಿಗೆ ಹೋಗಿ 'ವೀಸಾ ಸಿಗಲಿಲ್ಲ'ವೆಂದು ಹಿಂತಿರುಗಿ ಬರುವುದರ ಜೊತೆಗೆ ತನ್ನ ಕೈಯಲ್ಲಿನ ಕಾಸನ್ನೂ ಖಾಲಿ ಮಾಡಿಕೊಳ್ಳುತ್ತಿದ್ದ.

ಸರಿ, ಎರಡು ಸರಿಯಾಯಿತು, ಏನಾದರೂ ಮಾಡಿ ಮೂರನೇ ಸಾರಿಯಾದರೂ ಅರ್ಜಿ ಹಾಕೋಣ ಕೊಡುತ್ತಾರೆ ಎಂದರೆ ನನ್ನ ಅಮ್ಮ ಕೇಳುತ್ತಲೇ ಇರಲಿಲ್ಲ, ಸರಿ ಅವಳನ್ನು ಅವಳಷ್ಟಕ್ಕೇ ಬಿಟ್ಟು, ಮುಂದೆ ಪ್ರಯತ್ನಿಸೋಣವೆಂದು ೨೦೦೫ರಲ್ಲಿ ಮತ್ತೆ ಅರ್ಜಿ ಗುಜರಾಯಿಸಿದೆ. ಈ ಸಾರಿ ಬೆಂಗಳೂರಿನಿಂದ ಮದ್ರಾಸಿಗೆ ವಿಮಾನ ಟಿಕೇಟನ್ನು ತೆಗೆದುಕೊಟ್ಟು (ಆ ಪ್ರಯಾಣದ ದೆಸೆಯಿಂದಲಾದರೂ ಅಮ್ಮ ಮದ್ರಾಸಿಗೆ ಹೋಗಲಿ ಎಂಬ ಆಸೆಯಿಂದ), ಅಂತರ್ಜಾಲದಲ್ಲಿ ಇದ್ದ ವಿವರಗಳನ್ನೆಲ್ಲ ತಡಕಾಡಿ, ಬೆಂಗಳೂರಿನ ಚಾರ್‍ಟೆಡ್ ಅಕೌಂಟೆಂಟ್‌ರೊಬ್ಬರಿಂದ ಆಸ್ತಿ ಪಾಸ್ತಿ ಎಲ್ಲವನ್ನೂ ಸರ್ಟಿಫಿಕೇಟ್ ಮಾಡಿಸಿಕೊಂಡು, ನನ್ನ ಕೈಯಲ್ಲಿ ಆಗಬಹುದಾದ ಎಲ್ಲ ತಯಾರಿಯನ್ನೂ ಮಾಡಿಸಿ, ಹೇಳಬೇಕಾದ ಬುದ್ಧಿಮಾತನ್ನೂ ಹೇಳಿ ಅಮ್ಮನನ್ನು ವೀಸಾಕ್ಕೆ ಕಳುಹಿಸಿದರೆ, ಮೂರನೇ ಸಾರಿಯೂ ರಿಜೆಕ್ಟ್ ಮಾಡಿಬಿಟ್ಟರು. ನನ್ನ ಅಮ್ಮ ಇನ್ನು ಬದುಕಿದ್ದರೆ ಮದ್ರಾಸಿಗೆ ಹೋಗುವುದಿಲ್ಲವೆಂದು ಅಲ್ಲೆ ಶಪಥಮಾಡಿದಳೆಂದು ಕಾಣುತ್ತೆ, ವೀಸಾದ ವಿಷಯ ಬಂದಾಗಲೆಲ್ಲ ಫೋನಿನಲ್ಲಿ ಆಕೆ ಮಾತನಾಡುವುದನ್ನೇ ನಿಲ್ಲಿಸುತ್ತಾಳೆ. ನನಗಂತೂ ಅಸಹಾಯಕತೆಯಿಂದ ಮೈ ಪರಚಿಕೊಳ್ಳುವಷ್ಟು ಸಿಟ್ಟು ಬರುತ್ತೆ, ಏನು ಮಾಡುವುದಕ್ಕೂ ತೋರುವುದಿಲ್ಲ.

ಇತ್ತೀಚೆಗೆ ನನ್ನ ಅಮ್ಮನಿಗೆ ಮಂಡಿಯ ನೋವು ಉಲ್ಬಣಗೊಂಡು ಆಸ್ಪತ್ರೆಗೆ ಸೇರಿಸಿದ್ದರು, ಅವಳು ನಡೆಯುವ ದೂರ ಈಗಂತೂ ಬಹಳಷ್ಟು ಕಡಿಮೆಯಾಗಿದೆ. ಸುಮಾರು ಎಪ್ಪತ್ತರ ವಯಸ್ಸಿನ ನನ್ನ ಅಮ್ಮನಂತಹವರಿಗೆ ಕೇವಲ ಒಂದೇ ಒಂದು ತಿಂಗಳ ಮಟ್ಟಿಗೆ ವೀಸಾ ಕೊಡಿ ಎಂದು ನಾನು ಬರೆದಿದ್ದ ಪತ್ರವನ್ನೂ ಓದಿಯೂ ವೀಸಾ ಕೊಡಲು ನಿರಾಕರಿಸಿದ ಮದ್ರಾಸಿನ ಕನ್ಸಲೇಟಿನ ಆಫೀಸರರಿಗೆ ಧಿಕ್ಕಾರವಿರಲಿ. ನನ್ನ ಅಮ್ಮ ಯಾವತ್ತೂ ಅಮೇರಿಕೆಗೆ ಬರುವುದೇ ಇಲ್ಲ, ವಿದೇಶ ನೋಡುವ ಅವಳಾಸೆ ಪೂರೈಸುವುದೇ ಇಲ್ಲವೆಂದು ಗೊತ್ತಾದಾಗಲೆಲ್ಲ ಬಹಳಷ್ಟು ಬೇಸರವಾಗುತ್ತದೆ.

ನಾನು ಈ ವರ್ಷದ ಅಕ್ಟೋಬರ್‌ನಲ್ಲಿ ಭಾರತಕ್ಕೆ ಹೋದಾಗ ನಾಲ್ಕನೇ ಹಾಗೂ ಕಡೇ ಬಾರಿ ಪ್ರಯತ್ನಿಸಲೋ ಎಂದು ಯೋಚಿಸುತ್ತೇನೆ. ಆದರೆ ನಾನೇ ಕರೆದುಕೊಂಡು ಹೋಗಲಿ, ಇನ್ಯಾರೇ ಕರೆದುಕೊಂಡು ಹೋಗಲಿ ಒಳಗೆ ಬಿಡುವುದು ನನ್ನ ಅಮ್ಮನನ್ನು ಮಾತ್ರ - ಅದರಿಂದ ಬಹಳಷ್ಟೇನೂ ವ್ಯತ್ಯಾಸವಾಗದಿದ್ದರೂ ನನ್ನ ಅಣ್ಣನಿಗೆ ತೊಂದರೆಯಾಗುವುದು ತಪ್ಪುತ್ತದೆ. ಅಥವಾ ಯಾವುದಾದರೂ ಲಾಯರ್ ಹಿಡಿದು ಕೇಳಿ ನೋಡಿದರೆ ಹೇಗೆ, ಅಥವಾ ಕೌನ್ಸಲರ್ ಆಫೀಸರರಿಗೆ ಈಗಿನಿಂದಲೇ, ಇಲ್ಲಿಂದಲೇ ತಿವಿಯುತ್ತ ಬಂದರೆ ಹೇಗೆ...ಇನ್ನೂ ನಾನಾ ರೀತಿಯ ಆಲೊಚನೆಗಳಲ್ಲಿ ಮುಳುಗಿ ಹೋಗುತ್ತೇನೆ.

***

ಏನೂ ಮಾಡಲಾಗದ ಅಸಹಾಯಕತೆ ಬಲು ದೊಡ್ಡದು - ಅದು ಎಂಥವನನ್ನೂ ನೆಲಕ್ಕೆ ಹಚ್ಚಿ ಬಿಡಬಲ್ಲದು. ಈ ಸೋಲುಗಳಿಂದ ಆಗುವ ಪರಿಣಾಮ ಬಹಳ ಗಂಭೀರವಾದದ್ದಾದರೂ, ಪ್ರತೀ ಸಾರಿ ಇಂತಹ ಸೋಲಿಗೆ ಸಿಕ್ಕಾಗಲೆಲ್ಲ, ಪುಟಿಯುವ ಚೆಂಡಿನಂತೆ ಸೋಲಿಗೆ ಕಾರಣವಾದ ವ್ಯವಸ್ಥೆಯನ್ನು ಧಿಕ್ಕರಿಸಿ ಬದುಕುವ ಧ್ವನಿಯೂ ಮೂಡಿ ಬರುತ್ತದೆ - ನಾನು ಇದನ್ನು ಆಶಾವೇದನೆ ಎಂದು ಕರೆಯುತ್ತೇನೆ.

Wednesday, May 10, 2006

Mind what you hate!

ನಾನು ಕನ್ನಡವನ್ನ ಪ್ರೀತಿಸತೊಡಗಿದ್ದು ಕರ್ನಾಟಕವನ್ನು ಬಿಟ್ಟ ಮೇಲೆಯೇ ಎಂದೇ ಹೇಳಬಹುದು, ಏಕೆಂದರೆ ನಾನು ಕರ್ನಾಟಕದಲ್ಲಿದ್ದಾಗ ನಮ್ಮವರ ನಡುವೆ ಇರುವ ಬೆಲೆ ಏನೆಂದು ನನಗೆ ಗೊತ್ತಾಗಿದ್ದೇ ನಮ್ಮವರನ್ನು ಬಿಟ್ಟು ದೂರಕ್ಕೆ ಹೋದಮೇಲೆ. ಇದು ಒಂದು ರೀತಿಯ ವಿಪರ್ಯಾಸವೇ ಅಲ್ಲವೇ - ಯಾವುದಾದರೂ ಒಂದು ವಸ್ತು ಅಥವಾ ವಿಷಯದ ನಿಜವಾದ ಮೌಲ್ಯವನ್ನು ಅರ್ಥ ಮಾಡಿಕೊಳ್ಳಬೇಕೆಂದರೆ ಅದರಿಂದ ದೂರವಿರಬೇಕಾದದ್ದು!

***

೧) ಸುಮಾರು ಹದಿನೈದು ವರ್ಷಗಳ ಹಿಂದಿನ ಮಾತು - ಒಂದು ದಿನ ಹೀಗೇ ತರಗತಿಗಳನ್ನು ಮುಗಿಸಿ ಎಲ್.ಬಿ.ಕಾಲೇಜಿನ ಮುಂದೆ ಬಸ್ಸಿಗೆ ಕಾಯುತ್ತಿದ್ದೆವು, ಅದ್ಯಾವುದೋ ವಿಷಯಕ್ಕೆ ಸಂಬಂಧಿಸಿದಂತೆ ಶ್ರೀಧರನಾಯ್ಕ ಮತ್ತು ಜಗದೀಶಗೌಡ ಇಬ್ಬರು ಬಂದು ನನ್ನನ್ನು ಅದೇನನ್ನೋ ಕೇಳಿದರು - ನಾನು ನನಗೇ ಅರಿವಿಲ್ಲದಂತೆ 'ತೆರಿಯಾದು' ಎಂದು ಬಿಟ್ಟೆ, ನಾನು ಹೇಳಿದ್ದು ಅವರಿಗೆ ಅರ್ಥವಾಯಿತೋ ಬಿಟ್ಟಿತೋ, ಆದರೆ ನಾನು ಹೀಗೇಕೆ ಅಂದೆನೆಂದು ಬಹಳಷ್ಟು ಯೋಚಿಸಿದರೂ ನನ್ನ ಮನಸ್ಸಿನೊಳಗಿನ ಈ ಪದದ ಮೂಲ ನನಗೆ ಇವತ್ತಿಗೂ ತಿಳಿದಿಲ್ಲ. ನಾನು ತಿಳಿದಂತೆ ನನಗೆ ಯಾವ ರೀತಿಯ ತಮಿಳಿನ ಇನ್‌ಫ್ಲೂಯೆನ್ಸ್ ಇಲ್ಲದಿದ್ದರೂ ಆ ಪದವನ್ನು ಆ ಸಮಯದಲ್ಲಿ ನಾನು ಹೇಗೆ ಉಪಯೋಗಿಸಿದೆನೆಂಬುದು ಸೋಜಿಗದ ವಿಷಯವೇ. ಮುಂದೆ ಮೈಸೂರು ಶಿವಮೊಗ್ಗಗಳಲ್ಲಿ ನನ್ನ ತಿಳುವಳಿಕೆಯ ವ್ಯಾಪ್ತಿಯನ್ನು ವಿಸ್ತರಿಸಿದಂತೆ ತಮಿಳನ್ನು, ತಮಿಳು ಮಾತನಾಡುವವರನ್ನು ಬಹಳಷ್ಟು ದ್ವೇಷಿಸಲಾರಂಭಿಸಿದೆ - ಆ ದ್ವೇಷಕ್ಕೆ ಪ್ರತೀಕಾರವೆಂಬಂತೆ ನನಗೆ ಮೊದಲು ಕೆಲಸ ಸಿಕ್ಕಿದ್ದು ಮದ್ರಾಸಿನಲ್ಲಿಯೇ, ಅಲ್ಲಿ ಸುಮಾರು ಹನ್ನೆರಡು ತಿಂಗಳು ಇದ್ದು ಅನ್ನ-ನೀರಿನ ಋಣವನ್ನು ತೀರಿಸಿದ್ದೂ ಅಲ್ಲದೇ ನನಗೆ ಬಹಳವಾಗಿ ಬೇಕಾಗುವ ಸ್ನೇಹಿತರಲ್ಲಿ ಹಾಗೂ ಇವತ್ತಿಗೆ ನಾನೂ ಒಬ್ಬ ಮನುಷ್ಯನೆಂದು ಆಗಿರುವುದರ ಹಿಂದೆ ಇರುವವರಲ್ಲಿ ಹೆಚ್ಚಿವರು ತಮಿಳರೇ. ಆದರೆ ತಮಿಳಿನ ಮೇಲೆ ಇದ್ದಷ್ಟೆ ದ್ವೇಷಕ್ಕೆ ಪ್ರತಿಯಾಗಿ ಕನ್ನಡದ ಮೇಲೆ ಇಮ್ಮಡಿ ಪ್ರೀತಿ ಇಟ್ಟುಕೊಂಡರೂ ಇವತ್ತಿಗೂ ಒಂದು ದಿನವೂ ಸಹ ನಾನು ಬೆಂಗಳೂರಿನಲ್ಲಾಗಲೀ-ಕರ್ನಾಟಕದಲ್ಲಾಗಲೀ, ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಯಾವ ಕೆಲಸವನ್ನೂ ಮಾಡಿಲ್ಲ!

೨) ನನಗೆ ಹಿಡಿಸದ ಮತ್ತೊಂದು ಭಾಷೆಯೆಂದರೆ ಇಂಗ್ಲೀಷು - ನಾನು ಐದನೆ ತರಗತಿಯಿಂದ ಇಂಗ್ಲೀಷನ್ನು ಕಲಿತವನು, ಹಾಗೂ ಹತ್ತನೇ ತರಗತಿಯವವರೆಗೆ ಕನ್ನಡ ಮಾಧ್ಯಮದಲ್ಲೇ ಓದಿದವನು - ಆದರೆ ಕಾಲೇಜು ಮುಗಿಸಿ, ಮುಂದೆ ಕೆಲಸಕ್ಕೆ ಸೇರುವವರೆಗೂ ಇಂಗ್ಲೀಷು ನನ್ನನ್ನು ಅತಿಯಾಗಿ ಹೆದರಿಸಿದೆ. ಹೈಸ್ಕೂಲು, ಮಿಡ್ಲುಸ್ಕೂಲುಗಳಲ್ಲಿ ನಾಮಕಾವಸ್ತೆಗೆ ಪಾಠವೆನ್ನುವಂತೆ ಇಂಗ್ಲೀಷಿನ ಪಾಠಗಳನ್ನು ಮಾಡುತ್ತಿದ್ದರು, ಆಗೆಲ್ಲ ಇಂಗ್ಲೀಷ್ Detail, Non-Detail ಎಂಬ ಎರಡು ಪಠ್ಯಪುಸ್ತಕಗಳಿರುತ್ತಿದ್ದವು. ಯಾವುದೇ ಇಂಗ್ಲೀಷ್ ಪದ್ಯವೇ ಇರಲಿ, ಗದ್ಯವೇ ಇರಲಿ - ಡಿಕ್ಷನರಿ ನೋಡಿ, ಕ್ಲಿಷ್ಟಕರವಾದ ಪದಗಳ ಮೇಲೆ ಕನ್ನಡದಲ್ಲಿ ಅವುಗಳ ಅರ್ಥಗಳನ್ನು ಬರೆದು - ಆ ಸಾಲುಗಳಲ್ಲಿ ತೋರಿಸಿರುವ ಯಾವುದೋ ಅರ್ಥವನ್ನು ತಿಳಿದುಕೊಳ್ಳುವ ಹವಣಿಕೆ ನಡೆಯುತ್ತಿತ್ತು. ನಮ್ಮಲ್ಲಿನ ಇಂಗ್ಲೀಷ್ ಮೇಷ್ಟ್ರುಗಳಿಗೆ ಮೋಕ್ಷ ತೋರಿಸಿದ ಶೆಲ್ಲಿ, ಕೀಟ್ಸ್, ವರ್ಡ್ಸ್‌ವರ್ಥ್ ಗಳಿರಲಿ, ಕೊನೆಗೆ ರಾಮಾನುಜನ್‌ರ "The rich will make temple for siva, what shall I a poor man do..." ("ಉಳ್ಳವರು ಶಿವಾಲಯವ ಮಾಡುವರು, ನಾನೇನು ಮಾಡಲಯ್ಯಾ, ಬಡವನಯ್ಯಾ..." ವಚನದ ಅನುವಾದ) ಪದ್ಯವೂ ಕಷ್ಟವನ್ನು ಕೊಡುತ್ತಿತ್ತು! ಹೀಗೆ ಇಂಗ್ಲೀಷ್ ಮೇಲೆ ಅತಿಯಾದ ಹೆದರಿಕೆ, ಅದರಿಂದ ಹುಟ್ಟಿದ ದ್ವೇಷ ಹಾಗೂ ತಿರಸ್ಕಾರಗಳ ನಡುವೆ ಬೆಳೆದು ಬಂದವನಿಗೆ, ನೋಡಿ, ಎಲ್ಲಿ ಬಂದು ಯಾರ ಮಧ್ಯೆ ಬದುಕಬೇಕಾದ ಸಂಕಷ್ಟ ಒದಗಿ ಬಂದಿದೆ!

೩) ಸುಮಾರು ಆರೇಳು-ವರ್ಷಗಳ ಹಿಂದೆ, ಅಮೇರಿಕದಲ್ಲಿ ನನ್ನ ರೂಮ್ಮೇಟ್‌ಗಳಾದ ರಾಮಮೂರ್ತಿ, ರವಿ ಗೆ ಸಿಟ್ಟುಬಂದಾಗಲೆಲ್ಲ - 'ನಿನಗೆ ಬೆಂಗಳೂರಿನ ಹೆಣ್ಣು ಸಿಗಲಿ' - ಎಂದು ಶಾಪ ಹಾಕುತ್ತಿದ್ದೆ. ಆಗೆಲ್ಲ ನಗೆಚಾಟಲಿಗೆ ಹೇಳುತ್ತಿದ್ದ ಮಾತದು, ಆದರೂ ನನಗೆ, ಬೆಂಗಳೂರಿನಲ್ಲಿ ಹುಟ್ಟಿ-ಬೆಳೆದೂ 'I don't know Kannada' ಎಂದು ವಯ್ಯಾರದಿಂದ ಮಾತನಾಡುವವರನ್ನು ಕಂಡರೆ ಒಳಗೊಳಗೇ ಮೈಯುರಿಯುತ್ತದೆ. ಒಂದು ಸಭೆಯಲ್ಲಿ ಶಿವರುದ್ರಪ್ಪನವರು ಹೇಳಿದಂತೆ ಅವರಿಗೆಲ್ಲ ಮೊದಮೊದಲು ಬೇಂದ್ರೆಯವರ 'ನೀ ಹೀಂಗs ನೋಡಬ್ಯಾಡಾ ನನ್ನ' ಎಂದರೆ ಏನು ಎಂಬುದೇ ಅರ್ಥವಾಗುತ್ತಿರಲಿಲ್ಲವಂತೆ! (ಈ ಮಾತನ್ನು ಕೇಳಿಸಿಕೊಂಡು ಬಹಳ ದಿನಗಳವರೆಗೆ ಶಿವರುದ್ರಪ್ಪನವರನ್ನೂ ನಾನು 'ಬೆಂಗಳೂರಿನ ಕನ್ನಡಿಗ'ರನ್ನಾಗಿ ಮಾಡಿಬಿಟ್ಟಿದ್ದೆ). ಇನ್ನು ಸಾಮಾನ್ಯವಾಗಿ ಪೇಟೆಯವರು, ಅದರಲ್ಲಿ ಬೆಂಗಳೂರಿನವರು ಹೇಳುವಂತಾ 'ನಮ್ಮ ಬದರ್ರು, ನಮ್ಮ ಸಿಸ್ಟರ್ರು, ಮಮ್ಮೀ, ಡ್ಯಾಡೀ...' ಮುಂತಾದ ಪದಗಳು ಇಂದಿಗೂ ಬಹಳ ಮುಜುಗರವನ್ನುಂಟುಮಾಡುತ್ತವೆ. ಒಟ್ಟಿನಲ್ಲಿ, ಇಂದಿಗೂ ಸಹ ಎಲ್ಲಾದರೂ ನನಗೆ ಬೆಂಗಳೂರಿನವರೆಂದು ಯಾರಾದರೂ ಪರಿಚಯಿಸಿಕೊಂಡರೆ ಪಕ್ಕನೆ ಕನ್ನಡದಲ್ಲಿ ಮಾತನಾಡಲೂ ಹಿಂದೆ-ಮುಂದೆ ನೋಡುತ್ತೇನೆ - ಅವರು ಕನ್ನಡೇತರು ಎಂದಲ್ಲ, ಕನ್ನಡಿಗರೇ ಕನ್ನಡವನ್ನು ಮಾತನಾಡದವರು ಎಂಬ ಭಾವನೆಯಿಂದ. ಹೀಗೆ ರಾಮಮೂರ್ತಿ-ರವಿಗೆ ಶಾಪ ಹಾಕಿದ್ದು ಹೆಚ್ಚಾಯಿತೋ ಎನ್ನುವಂತೆ ಕೊನೆಗೆ ನಾನು ಮದುವೆಯಾಗಿದ್ದೂ ಒಬ್ಬ ಬೆಂಗಳೂರಿನ ಹುಡುಗಿಯನ್ನೇ! (ಪಾಪ, ನನ್ನ ಹೆಂಡತಿಗೆ ಚೆನ್ನಾಗೆ ಕನ್ನಡ ಬರುತ್ತೆ, ಅದರಲ್ಲಿ ಯಾವ ಉತ್ಪ್ರೇಕ್ಷೆಯೂ ಇಲ್ಲ, ಆದರೆ ಆಕೆ ಬೆಂಗಳೂರಿನವಳೆಂಬುದು ಮಾತ್ರ ಸತ್ಯ).

***

ಹೀಗೆ ಒಂದಲ್ಲ, ಎರಡಲ್ಲಾ, ಮೂರು ಮಹಾ ಉದಾಹರಣೆಗಳ ನಂತರ ನಾನು ಇವತ್ತಿಗೂ ಯಾವುದಾದರೊಂದನ್ನು ಅತಿಯಾಗಿ ದ್ವೇಷಿಸುವ ಮೊದಲು ಒಮ್ಮೆ ಯೋಚಿಸುತ್ತೇನೆ, ಒಂದುವೇಳೆ ಈ ಅತೀ ದ್ವೇಷವೇ ಅತೀ ಪ್ರೀತಿಯಾಗಿ ಮಾರ್ಪಾಟು ಹೊಂದಿಬಿಟ್ಟರೆ ಎಂದು ಕಸಿವಿಸಿಗೊಳ್ಳುತ್ತೇನೆ. ಇಂತಹ ದೊಂಬರಾಟದಲ್ಲಿ ಸಿಲುಕಿಕೊಂಡ ಮನಸ್ಸಿಗೆ ಯಾವುದನ್ನಾದರೂ 'ನನ್ನದೆಂದು' ಅತಿಯಾಗಿ ಪ್ರೀತಿಸುವುದಿರಲಿ, 'ನನ್ನದಲ್ಲದೆಂದು' ಸ್ವಲ್ಪವೂ ದ್ವೇಷಿಸುವ ಸ್ವಾತಂತ್ರ್ಯವೂ ಇಲ್ಲದಾಯಿತೇ, ಅಕಟಕಟಾ!

Pick your battle, but be ready to work for the enemy!