Tuesday, May 09, 2006

ಉಪ್ಪಿಟ್ಟಿನಲ್ಲಿ ಬಲವಿದೆ!

ಎಸ್.ಎಸ್.ಎಲ್.ಸಿ ಪಾಸಾದ ನಂತರ ಸಾಗರದ ಚಳಿಗೆ (ತಣ್ಣೀರು ಸ್ನಾನ ಮಾಡಬೇಕಲ್ಲ ಎಂದು) ಹೆದರಿಕೊಂಡು, ನಾನೇ ಅಡುಗೆ ಮಾಡಿಕೊಂಡು ತಿನ್ನಬೇಕಲ್ಲಪ್ಪಾ ಎಂಬ ಚಿಂತೆಯಿಂದ ಮನೆಬಿಟ್ಟು ಬಂದವನಿಗೆ ಇದ್ದಲಿ ಒಲೆ, ಸೀಮೆ ಎಣ್ಣೆ ಒಲೆ ಹಾಗೂ ನಾನು ತಂದ ಒಂದಿಷ್ಟು ಪಾತ್ರೆ, ತಟ್ಟೆ, ಲೋಟಾಗಳು ಬಹಳ ವರ್ಷಗಳವರೆಗೆ ಬಂದವು. ಸಾಗರದಲ್ಲಿ ಕಳೆದ ಐದು ವರ್ಷಗಳಲ್ಲಿ ಕ್ರಮೇಣ ಅಡುಗೆ ಮಾಡುವುದನ್ನು ಕಲಿತೆನಾದರೂ, ಇವತ್ತಿಗೂ ಹಲವಾರು ಫುಡ್ ನೆಟ್‌ವರ್ಕ್ಸ ಕಾರ್ಯಕ್ರಮಗಳನ್ನು ಲಾಗಾಯ್ತಿನಿಂದ ಬಾಯಿಬಿಟ್ಟುಕೊಂಡು ನೋಡುತ್ತಾ ಬಂದಿದ್ದರೂ, ನನಗೆ ಅಡುಗೆ ಮಾಡುವುದು ಹಾಗೂ ತಿನ್ನುವುದು ಎಂದರೆ ಅಷ್ಟಕಷ್ಟೇ. ಕೆಲವರಿಗೆ ಆಗುವಂತೆ ನನ್ನ ಕನಸಿನಲ್ಲಿಯೂ ಯಾವತ್ತೂ ಅಂತದ್ದನ್ನು ತಿನ್ನಬೇಕು, ಇಂತದ್ದನ್ನು ತಿನ್ನಬೇಕು ಎಂದೆನಿಸಿದ್ದಿಲ್ಲ. ಎಣಗಾಯಿ-ರೊಟ್ಟಿ ನನ್ ಮೆಚ್ಚಿನ ತಿಂಡಿಯಾದ್ರೂ ಅದು ನನಗೆ ವರ್ಷಕ್ಕೊಮ್ಮೆಯೂ ಸಿಗೋದಿಲ್ಲ. ಹಾಗಂತ ನಾನು ಉಪವಾಸ ಮಲಗೋದಿಲ್ಲ, ಎಲ್ಲೇ ಹೋಗಲಿ ಬರಲಿ, ಊಟವಂತೂ ನನಗೆ ಕಟ್ಟಿಟ್ಟ ಬುತ್ತಿ, ಹೇಗಾದರೂ ಮಾಡಿ ಅವತ್ತಿನ ಊಟ-ತಿಂಡಿ ದೊರೆತೇ ತೀರುತ್ತಾದ್ದರಿಂದ ನಾನು ಊಟ-ತಿಂಡಿಗಳನ್ನು ಉಪಚರಿಸುವುದಕ್ಕಿಂತಲೂ ಅವೇ ನನ್ನನ್ನು ಚೆನ್ನಾಗಿ ನೋಡಿಕೊಂಡಿವೆ. ಬೇಕಾದರೆ ಇವತ್ತಿನ ಉದಾಹರಣೆಯನ್ನೇ ತೆಗೆದುಕೊಳ್ಳಿ - ನಾನು ಆಫೀಸಿನಲ್ಲಿ ತಿಂಡಿ ತಿಂದರಾಯಿತು ಎಂದು ಹೊರಟೆ, ನನ್ನ ಸಹೋದ್ಯೋಗಿಯೊಬ್ಬ ತಾನು ತಿನ್ನಬೇಕೆಂದುಕೊಂಡು ಕ್ಯಾಫೆಟೇರಿಯಾದಿಂದ ಮಫಿನ್ ಒಂದನ್ನು ತಂದವನು ಅದನ್ನು ತಾನು ತಿನ್ನದೆ ನನಗೇ ಕೊಟ್ಟ! ಹೀಗೆ ಹಲವಾರು ವರ್ಷಗಳಿಂದ ಎಲ್ಲೆಲ್ಲಿ ಎಷ್ಟು ಸಿಗಬೇಕೋ ಅಷ್ಟಷ್ಟು ತಿನ್ನಲು ಸಿಗುತ್ತಿರುವುದರಿಂದ ಕಳೆದ ಹತ್ತು-ಹದಿನೈದು ವರ್ಷಗಳಲ್ಲಿ ನನ್ನ ತೂಕದಲ್ಲಿ ಬಹಳಷ್ಟು ವ್ಯತ್ಯಾಸವೇನೂ ಆಗಿಲ್ಲ.

ಊಟ ತಿಂಡಿಯ ವಿಷಯ ಹೇಳಿ ಉಪ್ಪಿಟ್ಟಿನ ಬಗೆಗೆ ಹೇಳದಿದ್ದರೆ ಈ ಬರಹವೇ ಅಪೂರ್ಣ: ಏಕೆಂದರೆ ನಾನು ಕೆಲವರು ಅನ್ನವನ್ನು ತಿನ್ನುವುದಕ್ಕಿಂತಲೂ ಹೆಚ್ಚಾಗಿ ಉಪ್ಪಿಟ್ಟನ್ನು ತಿಂದಿದ್ದೇನೆ - ಈ ಉಪ್ಪಿಟ್ಟನ್ನು ಹಲವಾರು ರೀತಿಯಲ್ಲಿ ಅವಲೋಕನ ಮಾಡಿಕೊಂಡಿದ್ದೇನೆ - ಆದ್ದರಿಂದಲೇ ಉಪ್ಪಿಟ್ಟು ನಾನು ದ್ವೇಷಿಸುವ ತಿಂಡಿಗಳಲ್ಲೊಂದು. ಸಾಗರದಲ್ಲಿ ಅಪರೂಪಕ್ಕೊಮ್ಮೆ ಹೊಟೇಲಿನಲ್ಲಿ ತಿಂಡಿ ತಿನ್ನುತ್ತಿದ್ದವನಿಗೆ ನನ್ನ ರೂಮಿನಲ್ಲಿ ಮಾಡುತ್ತಿದ್ದ ತಿಂಡಿಗಳೆಂದರೆ ಮೂರ್‍ಏ ಮೂರು - ಅವಲಕ್ಕಿ, ಉಪ್ಪಿಟ್ಟು ಅಥವಾ ಚಿತ್ರಾನ್ನ. ನನ್ನ ರೂಮಿನ ಮೆನ್ಯು ತುಂಬಾ ಸಿಂಪಲ್ಲು, ಸೋಮವಾರ ಬೆಳಗ್ಗೆ ಉಪ್ಪಿಟ್ಟಾದರೆ, ಮಂಗಳವಾರವೂ ಉಪ್ಪಿಟ್ಟೇ, ಬುಧವಾರ-ಗುರುವಾರಗಳೆರಡರೊಂದರಲ್ಲಿ ಅವಲಕ್ಕಿ ಸೇರಿಕೊಂಡರೆ, ಶುಕ್ರವಾರ-ಶನಿವಾರ-ಭಾನುವಾರಗಳಲ್ಲೂ ಉಪ್ಪಿಟ್ಟಿನ ಮಹಿಮೆಯೇ ಹೆಚ್ಚು. ಈ ಅವಲಕ್ಕಿಯನ್ನು ಹಲವು ತರಗಳಲ್ಲಿ ಮಾಡಿದಂತೆ ಉಪ್ಪಿಟ್ಟನ್ನಾಗಲೀ-ಚಿತ್ರನ್ನವನ್ನಾಗಲಿ ಹೆಚ್ಚು ವಿಧದಿಂದ ಮಾಡಲಾಗದು - ಹೆಚ್ಚೆಂದರೆ ಒಂದಿಷ್ಟು ಮಾವಿನಕಾಯಿಯ ತುರಿಯನ್ನು ಹಾಕಬಹುದು, ಅಥವಾ ಪೇಟೆಗಳಲ್ಲಿ ಮಾಡುವಂತೆ ಅನಾನಸ್ಸಿನ ತುಂಡುಗಳನ್ನು ಸೇರಿಸಬಹುದು, ಅದಿಲ್ಲವಾದರೆ ವಿಧಾನ ಬಹಳ ಸುಲಭ: ಮೀಡಿಯಂ ರವೆಯನ್ನು ಬಂಗಾರದ ಬಣ್ಣ ಬರುವವರೆಗೆ ಹುರಿದು, ಒಗ್ಗರಣೆಯನ್ನು ಶಾಸ್ತ್ರೋಕ್ತವಾಗಿ ಹಾಕಿ, ರವೆಗೆ ತಕ್ಕಷ್ಟು ನೀರನ್ನು ಒಗ್ಗರಣೆಯೊಂದಿಗೆ ಕುದಿಸಿ, ಅದಕ್ಕೆ ರವೆಯನ್ನು ಸುರಿಯುತ್ತಾ ಹಾಗೇ ಚಮಚೆಯಿಂದ ಎಲ್ಲೂ ಗಟ್ಟಿಯಾಗದಂತೆ ತಿರುವುತ್ತಾ ಬಂದರೆ ಹೊರಬರುವ ಎಂಡ್ ಪ್ರಾಡಕ್ಟ್ ಏನಿದೆಯೋ ಅದನ್ನೇ ಉಪ್ಪಿಟ್ಟು ಎಂದು ನಾನು ಕರೆಯುವುದು (ನಾನೇನು ಆಲ್ಟನ್ ಬ್ರೌನ್ ಕೆಟ್ಟೋದ್ನೇ ವೈಜ್ಞಾನಿಕವಾಗಿ ವಿವರಿಸೋಕೆ!). ನೀವು ನನಗೆ ರವೆಯನ್ನು ತೋರಿಸಿ, ನಾನು ಅದರಿಂದ ಇಂತದ್ದೇ ಉಪ್ಪಿಟ್ಟು ಆಗುತ್ತದೆ ಎಂದು ಹೇಳುತ್ತೇನೆ. ಇದೇ ಉಪ್ಪಿಟ್ಟನ್ನು ವಿಧವಿಧವಾದ ಆಡುಗೆ ಪದಾರ್ಥಗಳಿಂದ ಮಾಡಿಯೂ ಗೊತ್ತು, ಏನೂ ಇಲ್ಲದೇ ಬರೀ ಎಣ್ಣೆ, ಉಪ್ಪು, ಈರುಳ್ಳಿ, ರವೆಯಿಂದ ಮಾಡಿಯೂ ಗೊತ್ತು. ಹೀಗೆ ನಾನು ಮಾಡುತ್ತಿದ್ದ ಉಪ್ಪಿಟ್ಟನ್ನು ನನ್ನ ಬದಿಯ ರೂಮಿನವರಿಗೂ ಕೊಡುತ್ತಿದ್ದೆ, ಒಮ್ಮೆ ತಿಂಡಿಯ ಸಮಯಕ್ಕೆ ನನ್ನ ರೂಮಿಗೆ ಬಂದವರು ಮತ್ತೊಮ್ಮೆ ಆ ಕಡೆ ತಲೆಹಾಕಿ ಮಲಗುತ್ತಲೂ ಇರದುದ್ದರಿಂದ 'ಮಾಡಿದ್ದುಣ್ಣೋ ಮಹರಾಯ' ಎಂಬಂತೆ ನಾನು ಮಾಡಿದ್ದನ್ನು ನಾನೇ ತಿಂದುಕೊಂಡು ಮಾಡಿನೆಡೆಗೆ ನೋಡುತ್ತಾ ಕನಸು ಕಾಣಲು ಬಹಳಷ್ಟು ಸಮಯ ಸಿಗುತ್ತಿತ್ತು. ಎಷ್ಟೋ ಸಾರಿ, ನನ್ನ ಬಾಯಿಗೆ ಹೆದರಿ, ನನ್ನ ಕೈ ರುಚಿಯನ್ನು ಪ್ರಶ್ನಿಸುವ ಧೈರ್ಯ ಯಾರಿಗೂ ಬಂದಿದ್ದಿಲ್ಲ - ನನ್ನ ಎರಡನೇ ಅಕ್ಕ ನನ್ನನ್ನು 'ವೇದಾಂತಿ' ಎಂದು ಅಡ್ಡ ಹೆಸರಿನಿಂದ ಕರೆಯುತ್ತಿದ್ದುದೂ ಇದೇ ಕಾರಣಕ್ಕೆ - ಯಾವುದೇ ಒಂದು ವಿಷಯವನ್ನಾದರೂ ಕೊಡಿ, ಅದನ್ನು ಸಿದ್ಧಾಂತವನ್ನಾಗಿ ಮಾಡಿಬಿಡುತ್ತೇನೆ (ಅರ್ಥಾಥ್ ಕೊರೆಯುತ್ತೇನೆ), ಇನ್ನು ನಾನು ಮಾಡಿದ ಉಪ್ಪಿಟ್ಟನ್ನು ಹೀಯಾಳಿಸಿದರೆ ಸುಮ್ಮನೇ ಬಿಟ್ಟು ಬಿಡುತ್ತೇನೆಯೇ?

ಈ ರೀತಿ ತಿಂದ ಉಪ್ಪಿಟ್ಟೇ ನನಗೆ ಕಷ್ಟವನ್ನು ಸಹಿಸಿಕೊಳ್ಳೋ ಗುಣವನ್ನು ತಂದುಕೊಟ್ಟಿದೆ - ಬಾಯಿಗೆ ಇಟ್ಟಕೂಡಲೇ ಆಹಾರದ ನಿಜ ಬುದ್ದಿ ತಿಳಿಯುತ್ತದಾದರೂ ನಾನು ಈವರೆಗೆ ಯಾರಿಗೂ 'ಕೆಟ್ಟದಾಗಿ ಅಡುಗೆ ಮಾಡಿದ್ದೀರಿ' ಎಂದು ದೂರಿಲ್ಲ - ರೆಸ್ಟೋರಂಟ್‌ಗಳಲ್ಲಿ ಧಾರಾಳವಾಗಿ ಕ್ವಾಲಿಟಿ ನಿರೀಕ್ಷಿಸಿದಷ್ಟಿಲ್ಲವೆಂದು ಕಂಪ್ಲೇಂಟ್ ಮಾಡಿದ್ದೇನೆ!

ಮುಂದೆ ಸಾಗರ ಬಿಟ್ಟು ಮೈಸೂರು ಸೇರಿದರೆ ಅಲ್ಲೂ ಉಪ್ಪಿಟ್ಟೇ ಗಂಟು ಬೀಳುವುದೇ? ಕೆಲವು ತಿಂಗಳು ಹಾಸ್ಟೆಲಿನಲ್ಲಿ ಇದ್ದುದನ್ನು ಬಿಟ್ಟರೆ, ಇನ್ನು ಮಿಕ್ಕುಳಿದ ಸಮಯದಲ್ಲಿ ಗಂಗೋತ್ರಿಯ ಕ್ಯಾಂಟೀನಿನಲ್ಲಿ ನನ್ನ ಗೆಳೆಯ ರಾಜೇಶ 'ಕಾಂಕ್ರೀಟು' ಎಂದು ಕರೆಯುತ್ತಿದ್ದ ಉಪ್ಪಿಟ್ಟು-ಕೇಸರಿಬಾತ್ ಎರಡರ ಸಹವಾಸ ಆರಂಭವಾಯಿತು. ಆಗಲೇ ನನಗೆ ಮದುವೆ ಮನೆಗಳಲ್ಲಿ ಉಪ್ಪಿಟ್ಟು-ಕೇಸರಿಬಾತನ್ನು ಜೊತೆಯಾಗಿ ಏಕೆ ಕೊಡುತ್ತಾರೆ ಎಂದು ತಿಳಿದದ್ದು - ಒಮ್ಮೆ ತಿಂದರೆ ಕಾಂಕ್ರೀಟಿನೋಪಾದಿಯಲ್ಲಿ ಹೊಟ್ಟೆಯನ್ನು ಆವರಿಸಿಕೊಳ್ಳುವುದರಿಂದ ಕೊನೆಗೆ ಮಧ್ಯಾಹ್ನ ಜನ ಊಟ ಕಡಿಮೆ ಮಾಡಲಿ ಎಂದಿದ್ದಿರಬಹುದು!

***

ಹೀಗೆ ಉಪ್ಪಿಟ್ಟಿಗೆ ಸಂದ ಕೀರ್ತಿಯ ಬಹುಪಾಲು ನನ್ನ ಭುಜಗಳ ಮೇಲೆ ದಶಕಗಳಿಂದ ಮನೆಮಾಡಿರೋ ಸೋಮಾರಿತನ ಹಾಗೂ ಮೈಗಳ್ಳತನಗಳಿಗೆ ಸೇರಬೇಕು, ಇಂತಹ ಸೋಂಬೇರಿತನದ ದೆಸೆಯಿಂದ ಕೈಗೆ ಸಿಕ್ಕಿದ್ದನ್ನು ತಿಂದು 'ಬದುಕುವುದಕ್ಕಾಗಿ ತಿನ್ನಬೇಕು' ಎಂದು ವಾದ ಬದಲಾಯಿಸಿ ಬಡಪಾಯಿಕೊಚ್ಚುವ ನನ್ನ 'ವೇದಾಂತಿ'ತನಕ್ಕೂ ಅದರ ಕ್ರೆಡಿಟ್ಟು ದೊರೆಯಬೇಕು. ಹೈಸ್ಕೂಲು-ಕಾಲೇಜುಗಳಲ್ಲಿ ಬರೀ ಪ್ರೈಜ್‌ಗಳಿಸುವುದಕ್ಕೆಂದೇ ಚರ್ಚಾಸ್ಪರ್ಧೆಯಲ್ಲಿಟ್ಟಿದ್ದ ವಿಷಯಗಳ ಪರ ಅಥವಾ ವಿರೋಧವಾಗಿ ವಾದ ಮಾಡಿ ಮಾತನಾಡುವ ಅಭ್ಯಾಸ ಬದುಕಿನುದ್ದಕ್ಕೂ ಹೀಗೆ ಬರಬಾರದಿತ್ತು - ಮನುಷ್ಯನಾದವನು ಸರಿಯೋ-ತಪ್ಪೋ, ಒಳ್ಳೆಯದೋ-ಕೆಟ್ಟದ್ದೋ, ಪರವೋ-ವಿರೋಧವೋ ಎಂಬ ತರ್ಕಕ್ಕೆ ತನ್ನನ್ನು ಮೊದಲು ತೊಡಗಿಸಿಕೊಂಡು ಯಾವುದಾದರೊಂದನ್ನು ಹಚ್ಚಿಕೊಳ್ಳುತ್ತಾನೋ, ಅಥವಾ ಮೊದಲೇ ವಿಷಯವನ್ನು ಮನಸ್ಸಿಗೆ ತಂದುಕೊಂಡು ಕೊನೆಗೆ ಅದನ್ನು ಇಷ್ಟಪಟ್ಟಿದ್ದಕ್ಕೆ ಕಾರಣಗಳನ್ನು ಹುಡುಕುತ್ತಾನೋ ಎನ್ನುವ ಪ್ರಶ್ನೆಯ ಉತ್ತರವನ್ನು ನನಗಿಂತ ದೊಡ್ಡ 'ವೇದಾಂತಿ'ಗಳಿಗೆ ಬಿಡುತ್ತೇನೆ. ಎಲ್ಲಿಯವರೆಗೆ ಚರ್ಚಾಸ್ಪರ್ಧೆಯಲ್ಲಿ ಬಹುಮಾನಗಳಿಸುವುದು ಗುರಿಯಾಗುತ್ತದೆಯೋ, ಎಲ್ಲಿಯವರೆಗೆ ಮಾಡಿದ್ದನ್ನು ಸಾಧಿಸಿಕೊಳ್ಳುವ ಅಥವಾ ಅದಕ್ಕೊಂದು ವಿವರಣೆಯನ್ನು ಹೊಂಚಿಹಾಕುವ ಕುಹಕತನವಿರುತ್ತದೆಯೋ ಅಲ್ಲಿಯವರೆಗೆ ದಿನವೂ ಉಪ್ಪಿಟ್ಟು ತಿನ್ನುವ ಕಾಯಕ ಶಿಕ್ಷೆಯಾಗಲಿ!

***

ಬೋಲೋ ಬ್ಯಾಚೆಲರ್ ಲೈಫ್ ಕೀ...ಜೈ...ಉಪ್ಪಿಟ್ಟಿನಲ್ಲಿ ಬಲವಿದೆ! (ನಾವು ಶಾಲಾ ದಿನಗಳಲ್ಲಿ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ದಿನಗಳಂದು ಪ್ರಭಾತ್‌ಪೇರಿ ಹೋಗುತ್ತಿದ್ದಾಗ ಕೂಗುತ್ತಿದ್ದ 'ಬೋಲೋ ಭಾರತ್ ಮಾತಾ ಕೀ...ಜೈ...ಒಗ್ಗಟ್ಟಿನಲ್ಲಿ ಬಲವಿದೆ!' ಎಂಬುದನ್ನು ಅನುಕರಣೆ ಮಾಡುತ್ತಾ...)

Monday, May 08, 2006

ವಾಸನೆಯ ಸಂಸ್ಕಾರ ಹಾಗೂ ಮಣ್ಣಿನ ಗುಣ

ನೀವು ಭಾರತಕ್ಕೆ ಹೋದಾಗ ಏರ್‌ಪೋರ್ಟಿನಲ್ಲಿ ಕಾಲಿಡುತ್ತಿದ್ದಂತೆಯೇ ಮೂಗಿಗೆ ಫಿನೈಲ್ ವಾಸನೆ ಅಡರಿಕೊಳ್ಳೋದನ್ನ ಗಮನಿಸಿರಬಹುದು. ಈ ಒಂದು ವಾಸನೆಯೇ ಸಾಕು, ನಮ್ಮಲ್ಲಿನ ಒಳ್ಳೆಯ ಹಾಗೂ ಕೆಟ್ಟವುಗಳ ದರ್ಶನವನ್ನು ನೆನಪಿಸುವುದಕ್ಕೆ! ಈ ವಾಸನೆಯ ಸಂಸ್ಕಾರ ದೂರ ದೇಶಗಳಿಗೆ ಹೋದರೂ ಮಾಸುವುದಿಲ್ಲ, ಹೊಸ ವಾಸನೆಗಳ ಸಂಸ್ಕಾರ ಸಿಕ್ಕಿದೊಡನೆ ಹಳೆಯದು ಕಳೆದು ಹೋಗುವುದಿಲ್ಲ. ಅಮ್ಮನ ಬೆಚ್ಚನೆ ಸೀರೆ ನಿರಿಗೆಳಲ್ಲಿ ತಮ್ಮ ಮುಖ ಮುಚ್ಚಿಕೊಂಡು ಬೆಳೆದು ದೊಡ್ಡವರಾದ ಎಲ್ಲರಿಗೂ ನಾನು ಹೇಳುವುದೇನೆಂದು ಗೊತ್ತು. ಇದೇ ರೀತಿಯ ಸಂಸ್ಕಾರದ ಜಾತಿಗೆ ಸೇರಿರೋದು ಮಣ್ಣಿನ ಒಡನಾಟ: ನೀವು ಹೊಲಗದ್ದೆಗಳಲ್ಲಿ ಕೆಲಸ ಮಾಡಿದ್ದರೆ, ನಿಮ್ಮ ಮನೆಯ ಅಂಗಳವನ್ನು ಗುಡಿಸಿ ಸಾರಿಸಿ ಬಳಿದಿದ್ದರೆ, ಅಲ್ಲಲ್ಲಿ ಬಿದ್ದ ಸೆಗಣಿಯನ್ನು ಹೆಕ್ಕಿ ತಂದು ತಿಪ್ಪೆ ತುಂಬಿಸಿದ್ದರೆ, ಮನೆಯ ಹಿತ್ತಲಿನಲ್ಲಿ ಹೂ-ತರಕಾರಿ ಗಿಡಗಳನ್ನು ನೆಟ್ಟಿದ್ದರೆ ಇವೆಲ್ಲವೂ ಕಣ್ಣ ಮುಂದೆ ಯಾವಾಗ ಬೇಕಂದರೂ ಬಂದು ನಿಲ್ಲುತ್ತವೆ.

***

ಭಾರತೀಯರು ಅಮೇರಿಕೆಯಲ್ಲಿ ಕಮ್ಮ್ಯೂನಿಟಿಯ ಕೆಲಸ ಕಾರ್ಯಗಳಲ್ಲಿ ಅಷ್ಟೊಂದು ಭಾಗವಹಿಸುವುದಿಲ್ಲ ಎಂಬ ಅಬ್ಸರ್‌ವೇಷನ್ ಅಲ್ಲಲ್ಲಿ ಕಾಣಸಿಗುತ್ತದೆ - ಇವುಗಳಿಗೆಲ್ಲ ನನ್ನ ಒಂದೇ ಉತ್ತರವೆಂದರೆ - ಮಣ್ಣಿನೊಡನಾಟ. ಎಲ್ಲಿಯವರೆಗೆ ಈ ಮಣ್ಣಿನಲ್ಲಿ ಆಡುವುದಿಲ್ಲವೋ, ಓಡುವುದಿಲ್ಲವೋ; ಎಲ್ಲಿಯವರೆಗೆ ಈ ಮಣ್ಣಿನಿಂದ ದೂರವೇ ಇರುತ್ತೇವೋ ಅಲ್ಲಿಯವರೆಗೆ ನಾವು ಇಲ್ಲಿಯವರೊಳಗೆ ಒಂದಾಗುವುದಿಲ್ಲ. ಈ ಕ್ಷಣದಲ್ಲಿ ಅನಿವಾಸಿ ಭಾರತೀಯ ಮನಸ್ಸುಗಳ ಸಮೀಕ್ಷೆಯನ್ನೇನಾದರೂ ನಡೆಸಿದರೆ ಸತ್ತ ಮೇಲೆ 'ಈ' ಮಣ್ಣನ್ನು ಸೇರಬಯಸುವವರ ಸಂಖ್ಯೆ ಕಡಿಮೆ ಎಂದೇ ಹೇಳಬೇಕು. ಬೇಕು ಬೇಕಾದ ಐಶಾರಾಮಗಳಿಗೆ "ಈ" ಮಣ್ಣು, ಸತ್ತಾಗ, ಸತ್ತ ಮೇಲೆ ಬೇಕಾದ ಸಂಸ್ಕಾರಗಳಿಗೆ "ಆ" ಮಣ್ಣು - ಇಲ್ಲಿನ ಪೋಟೋಮ್ಯಾಕ್ ಅಥವಾ ಹಡ್ಸನ್ ನದಿಯಲ್ಲಿ ಬೂದಿಯನ್ನು ಸೇರಿಸಿಬಿಡಿ ಎನ್ನುವುದಕ್ಕೂ ಗಂಗೆಯಲ್ಲಿ ಕಲಸಿ ಹಾಕಿ ಎನ್ನುವುದಕ್ಕೂ ಬಹಳ ವ್ಯತ್ಯಾಸವಿದೆ.

ಆದರೆ "ಈ" ಮಣ್ಣಿನ ಋಣಾನುಬಂಧ ಬಹಳ ಅಪರೂಪವಾದದ್ದು - ಇವತ್ತು ಚಾಟ್ ಮಾಡುವಾಗ ಭಾರತದ ನನ್ನ ಸ್ನೇಹಿತರೊಬ್ಬರು ನೆನಪಿಸಿಕೊಟ್ಟಂತೆ ಈ ಮಣ್ಣು ನನಗೆ ಏನೇನೆಲ್ಲ ಅನುಕೂಲ ಮಾಡಿಕೊಟ್ಟಿದೆ ಎಂದು ದಾರಿಯ ಉದ್ದಕ್ಕೂ ಪಟ್ಟಿ ಮಾಡುತ್ತಾ ಬಂದೆ - ಈ ಮಣ್ಣಿನ ಮೊಟ್ಟ ಮೊದಲ ಇಷ್ಟವಾದ ಗುಣವೆಂದರೆ ನಾನು ದೈನಂದಿನ ಬದುಕಿನಲ್ಲಿ, ವ್ಯವಹಾರದಲ್ಲಿ ಸುಳ್ಳನ್ನು ಹೇಳದೇ ಇರೋದು - ಒಂದು ನಿಮಿಷ ಈ ವಾಕ್ಯವನ್ನು ಕುರಿತು ಯೋಚಿಸುತ್ತೇನೆ - ಹೌದು, ಸುಳ್ಳು ಹೇಳುವ, ಒಂದರ ಮೇಲೆ ಮತ್ತೊಂದನ್ನು ಸೇರಿಸಿ ಅದನ್ನು ಸಾಧಿಸುವ ಅಭ್ಯಾಸ ಇದೆಯಲ್ಲಾ ಅದೇ ನಮ್ಮ ಅಧಃಪತನಕ್ಕೆ ಕಾರಣವಾಗಲಿಕ್ಕೂ ಸಾಕು. ಏರ್‌ಪೋರ್ಟಿನಲ್ಲಿ ಮೂಗಿಗೆ ಅಡರಿಕೊಳ್ಳುವ ಫಿನೈಲ್ ವಾಸನೆ 'ಪ್ಯಾವ್ಲೋವ್ ನಾಯಿ'ಗೆ ಬಂದ ಹಾಗೆ ನನಗೆ ಸುಂಕದ ಅಧಿಕಾರಿಗಳ ಲಂಚಕೋರತನವನ್ನೂ, ತಮ್ಮ-ತಮ್ಮ ಕರ್ತವ್ಯಗಳನ್ನು ಸರಿಯಾಗಿ ನಿರ್ವಹಿಸದ ಏರ್‌ಪೋರ್ಟ್ ಅಧಿಕಾರಿಗಳನ್ನೂ, ಜೇಬಿನಿಂದ ಇಪ್ಪತ್ತು ಡಾಲರುಗಳ ನೋಟನ್ನು ಈಗ ತೆಗೆಯಬಹುದು, ಆಗ ತೆಗೆಯಬಹುದು ಎಂದು ಹಸಿದ ಕಣ್ಣುಗಳಲ್ಲಿ ನೋಡುವ ಕೆಲಸಗಾರರನ್ನು ನೆನಪಿಗೆ ತರುತ್ತದೆ. "ಈ" ಮಣ್ಣಿನಲ್ಲಿ ಬದುಕಿದ ಲಂಚ-ಸುಳ್ಳು ರಹಿತ ಬದುಕನ್ನೆಲ್ಲ ಒಂದೇ ಹೊಡೆತದಲ್ಲಿ ಹೆದರಿಸಿಬಿಡುವಂತಹ ಪರಿಸ್ಥಿತಿಗಳು ಆರಂಭವಾಗೋದೂ ಏರ್‌ಪೋರ್ಟಿನಲ್ಲೇ. ಹೇಗೆ ಹೇಳಬೇಕೋ, ಹಂಚಿಕೊಳ್ಳಬೇಕೋ ಗೊತ್ತಾಗುತ್ತಿಲ್ಲ - ಅಗ್ನಿಸಾಕ್ಷಿಯಾಗಿ ತಾಳಿ ಕಟ್ಟಿಯೂ, ರಿಜಿಸ್ಟ್ರ್‍ಆರ್‌ಗೆ ಕೊಡಬೇಕಾದ ಎಲ್ಲ ದಾಖಲೆಗಳನ್ನು ಕೊಟ್ಟೂ, ಮ್ಯಾರೇಜ್ ಸರ್ಟಿಫಿಕೇಟ್ ಪಡೆಯಲು ಅದರ ಮೇಲೆ ಐನೂರು ರೂಪಾಯಿ ಲಂಚ ಕೊಟ್ಟವ ನಾನು, ನನ್ನ ಕಷ್ಟ ನನಗೇ ಗೊತ್ತು, ಇದು ಆದದ್ದು ಬೇರೆಲ್ಲೂ ಅಲ್ಲ, ನಮ್ಮ ಶಿವಮೊಗ್ಗದಲ್ಲಿಯೇ. ಈ ಲಂಚದ ಹಿಂದೆ ಬಹಳ ಉದ್ದವಾದ ಕಥೆಗಳನ್ನು ಬರೆಯಬಹುದು, ಆದರೆ ಇಂಥ ಒಂದೊಂದು ಅನುಭವವೂ ನನ್ನಂಥವರ ಮನಸ್ಸನ್ನು ಮುದುಡಿಬಿಡುತ್ತದೆ, ಶಿವಮೊಗ್ಗದ ಮೇಲಿನ ನನ್ನ ಪ್ರೀತಿಯೆಲ್ಲ ಈ ಅನುಭವದ ನೆನಪಾದಾಗಲೆಲ್ಲ ಹೊಳೆ ನೀರಿನಲ್ಲಿ ಕೊಚ್ಚಿ ಹೋಗುವ ಮಣ್ಣಿನಂತಾಗುತ್ತದೆ. ಕೇವಲ ಮೂರು-ನಾಲ್ಕು ವಾರಗಳಲ್ಲಿ ಮದುವೆಯಾಗಿ ಕೆಲಸಕ್ಕೆ ಹಿಂತಿರುಗಿ ಹೋಗುವುದು ನನ್ನ ಆಯ್ಕೆ ಆದರೆ "ಆ" ಮಣ್ಣಿನ ಕೆಟ್ಟ ಗುಣಲಕ್ಷಣಗಳನ್ನು ಹೆಜ್ಜೆ-ಹೆಜ್ಜೆಗೂ ವಿರೋಧಿಸದೆ ಸಹಿಸಿಕೊಂಡು, ಅನುಸರಿಸಿಕೊಂಡು ಹೋಗುವುದು ನನ್ನ ಪರಂಪರೆ. ಆ ದಿನ ಪುಣ್ಯಕ್ಕೆ ನನ್ನ ಅಣ್ಣ ನನ್ನ ಜೊತೆಯಲ್ಲಿದ್ದ, ಇಲ್ಲವಾದರೆ ನನಗೆ ಬಂದ ಸಿಟ್ಟಿನಲ್ಲಿ ಮದುವೆ ಅನ್ನೋ ಮಹಾ ಅನುಭವ, ಸಿಟ್ಟಿನ ಕೈಯಲ್ಲಿ ಬುದ್ಧಿಕೊಟ್ಟು ರಿಜಿಸ್ಟ್ರ್‍ಆರ್‌ರಿಂದ ಸರ್ಟಿಫಿಕೇಟ್ ಪಡೆಯದೇ, ನನ್ನ ಹೆಂಡತಿಯ ವೀಸಾಕ್ಕೆ ಅರ್ಜಿ ಹಾಕುವುದಕ್ಕೆ ಅನಿರ್ಧಿಷ್ಟಕಾಲ ತಡವಾಗುವುದರ ಮೂಲಕ ಇನ್ನೂ ಕೆಟ್ಟ ಅಂತ್ಯವನ್ನು ಪಡೆದುಕೊಳ್ಳುತ್ತಿತ್ತು. ಹನ್ನೆರಡು-ಹದಿಮೂರು ಡಾಲರಿನ ಪ್ರಶ್ನೆ ಅಲ್ಲ, ತಲತಲಾಂತರದಿಂದ ಮನೆಯೋ-ಸೈಟೋ-ವಾಹನವನ್ನೋ ನೋಂದಾವಣಿ ಮಾಡುವಲ್ಲಿ ನನಗೆ ಗೊತ್ತಿರೋ ಹಾಗೆ ಇದ್ದ ಲಂಚವನ್ನು ನಾನು "ಈ" ಮಣ್ಣಿನ ದೃಷ್ಟಿಕೋನದಲ್ಲಿ ನೋಡಿದಾಗ ಉಂಟಾದ ಸಣ್ಣ ಪ್ರತಿಕ್ರಿಯೆ ಅದು.

ನಾನು ಈ ಹಿಂದೆಂದೂ ಲಂಚದ ವಾತಾವರಣದ ಅರಿವೇ ಇರದವನೆಂದು ಆಡಿಕೊಳ್ಳುತ್ತಿಲ್ಲ, ನನಗೆ "ಈ" ಮಣ್ಣು ಇನ್ನು ಮುಂದೆ ನಾನು ಬೀಳಬಹುದಾದ ಲಂಚದ ಬಲೆಯನ್ನು ನೇಯ್ದ ದಾರಗಳನ್ನು ನೋಡುವ ಒಂದು ಹೊಸ ದೃಷ್ಟಿಕೋನವನ್ನು ರೂಢಿಸಿಕೊಟ್ಟಿದೆ, ಈ ರೂಢಿ ಮುಂದೆ ನಾನೆಲ್ಲಿದ್ದರೂ ನನ್ನ ಜೊತೆಯಲ್ಲೇ ಇರುತ್ತೆ. ಕ್ಯಾಪಿಟಲಿಷ್ಟ್ ಪ್ರಪಂಚದಲ್ಲಿದ್ದುಕೊಂಡು, ಕಾರ್ಪೋರ್‍ಏಟ್ ಏಣಿಯ ಮೆಟ್ಟಿಲುಗಳಲ್ಲಿ ಒಬ್ಬನಾಗಿದ್ದುಕೊಂಡು ಜಗತ್ತನ್ನು ಒಳ್ಳೆಯ ಸ್ಥಳವಾಗಿ ಪರಿವರ್ತಿಸಬಹುದಾದ ಕನಸನ್ನು ಕಾಣುವ ಹುಂಬ ಎಂದು ನನ್ನ ಸ್ನೇಹಿತರು ನನ್ನ ಎದುರೇ ಆಡಿಕೊಳ್ಳುತ್ತಾರೆ, ಆದರೆ ಸಮಾಜವಾದದ ಹಿನ್ನೆಲೆಯಲ್ಲಿ ಗೋಪಾಲಗೌಡ, ಜೆಪಿಯಂತಹವರ ಹೆಸರಿನಲ್ಲಿ ಇಡೀ ಊರಿಗೆ ಬೇಲಿ ಹಾಕಿಕೊಂಡು ಕೋಟ್ಯಾಂತರ ರೂಪಾಯಿಗಳ ಆಸ್ತಿಯನ್ನು ಮಾಡಿರುವ ಧುರೀಣರನ್ನು ನಾನು ಬಲ್ಲೆ, ಅದಕ್ಕೇನೆನ್ನುತ್ತೀರಿ ಎಂದರೆ ಅವರ ಬಳಿ ಯಾವುದೇ ಉತ್ತರವಿರೋದಿಲ್ಲ. ಕೈಕೇಯಿ-ಮಂಥರೆ, ಗಾಂಧಾರಿ-ಶಕುನಿ ಮುಂತಾದ ಪಾತ್ರಗಳನ್ನು ಪುರಾಣದಲ್ಲಿ ಸೃಷ್ಟಿಸಿ, ಅಲ್ಲಲ್ಲಿ ಕಥೆಯನ್ನು ಹಿಂಜುವ ಅನನುಭವಿ ನಿರ್ದೇಶಕರಂತೆ ವೈಭವೀಕರಿಸಿ ಪರಂಪರಾನುಗತವಾಗಿ ನಮ್ಮನ್ನು "ಆ" ದೃಷ್ಟಿಕೋನದಲ್ಲಿ ನೋಡುವುದನ್ನು ಹೇಳಿಕೊಟ್ಟಿದ್ದಾರೇನೋ ಎಂದು ಅನುಮಾನವಾಗುತ್ತದೆ. "ಆ"ಮಣ್ಣಿನ ಮೇಲೆ ನಿಂತಾಗ "ಈ" ಮಣ್ಣಿನಲ್ಲಿ ಕೇಳಬಹುದಾದ 'ಇದೇಕೆ ಹೀಗೆ?' ಎಂದು ಪ್ರಶ್ನೆಗಳನ್ನು ಕೇಳಬೇಕೆನಿಸುತ್ತದೆ - ಹಾಗೆ ಯಾವುದಾದರೊಂದು ತಲೆಮಾರಿನಲ್ಲಿ ನಾವು ಮಾಡಿದ್ದೇ ಆದರೆ ನಮಗಂಟಿದ (ಅಡ್ಜಸ್ಟು ಮಾಡಿಕೊಂಡು ಹೋಗುವ) ಶಾಪ ಅರ್ಧ ಕಡಿಮೆಯಾಗುತ್ತದೆ.

***

ಇಲ್ಲಿ ಬದುಕಲು ಕಲಿಸಿದ "ಆ" ಮಣ್ಣನ್ನು ತೆಗಳಿ ಬರೆಯುತ್ತಿಲ್ಲ, ಅಲ್ಲಿ ಹೀಗೂ ಬದುಕಬಹುದು ಎಂಬ ಹೊಸ ದೃಷ್ಟಿಕೋನವನ್ನು ನೀಡಿದ "ಈ" ಮಣ್ಣನ್ನು ಗೌರವಿಸುತ್ತಿದ್ದೇನೆ ಅಷ್ಟೇ.

Sunday, May 07, 2006

ನೆನಪಿರಲಿ...

ನಿನ್ನೆ ನೆನಪಿರಲಿ ಸಿನಿಮಾವನ್ನು ನೋಡಿದೆ - ೨೦೦೫ ರಲ್ಲಿ ಬಿಡುಗಡೆಯಾದರೂ ನನ್ನ ಅದೃಷ್ಟಕ್ಕೆ ಹಲವು ತಿಂಗಳು ಅಥವಾ ವರ್ಷದ ನಂತರ ನೋಡುವ ಅವಕಾಶ ಸಿಕ್ಕಿದ್ದೇ ಹೆಚ್ಚು. ಶುಕ್ರವಾರ ರಾತ್ರಿ ತಡವಾಗಿ ಮಲಗಿದ್ದಕ್ಕೋ ಏನೋ ಶನಿವಾರ ಬೆಳಗ್ಗೆ ಎದ್ದು ಸೂರ್ಯನ ಮುಖ ನೋಡೋ ಹೊತ್ತಿಗೆ ಅವನು ಹೈಸ್ಕೂಲು ಮುಗಿಸಿ ಕಾಲೇಜು ಮೆಟ್ಟಿಲು ಹತ್ತೋ ಹುಡುಗರ ಥರಾ ಆಗಿ ಹೋಗಿದ್ದ. ವಾರದ ದಿನಗಳಲ್ಲಿ ಮನೆಯಲ್ಲಿ ಬೆಳಕು ಬಿದ್ದು ಪ್ರತಿಫಲಿಸುವುದನ್ನು ನೋಡದ ನನಗೆ ಶನಿವಾರ ಮುಂಜಾನೆ ಕಣ್ಣು ಬಿಟ್ಟೊಡನೆ ಮನೆಯ ಗೋಡೆಗಳೆಲ್ಲ ಬೆಳಕಿನಲ್ಲಿ ಹೊಳೆದು ವಾರಾಂತ್ಯ ಬಂತು ಎಂದು ಸಂತಸ ಸೂಚಿಸುತ್ತಿದ್ದವು. ಈ ಸಿನಿಮಾವನ್ನು ನೋಡಬೇಕು ಎಂದು ಯಾಹೂ ಕ್ಯಾಲೆಂಡರಿನಲ್ಲಿ ರಿಮೈಂಡರ್ ಹಾಕಿಕೊಂಡಿದ್ದರೂ ಇರುವ ಹಲವಾರು ಇ-ಮೇಲ್, ಮೆಸ್ಸೇಜಿಂಗ್ ಅಕೌಂಟುಗಳು, ಕ್ಯಾಲೆಂಡರುಗಳು, ಆಫೀಸಿನ ಲೋಟಸ್ ನೋಟ್ಸೂ, ಕೈಯಲ್ಲಿನ ಪಾಮ್ ಪೈಲೆಟ್ಟೂ, ಸೆಲ್ ಫೋನಿನಲ್ಲಿರೋ ಹಲವಾರು ರಿಮೈಂಡರುಗಳು, ಪುಸ್ತಕದಲ್ಲಿ ಅಲ್ಲಲ್ಲಿ ಬರೆದ ನೋಟ್ಸೂ ಅಲ್ಲದೆ ಏನಾದರೊಂದನ್ನು ನೆನಪಿಸಿ ಆವಾಗಾವಾಗ ತಿವಿಯೋ ಮನೆಯವರ ಮಧ್ಯೆ ಎಲ್ಲವೂ ಕಲಸು ಮೇಲೋಗರವಾದಂತಾಗಿ 'ಅಂತರಂಗ'ವನ್ನು ಪ್ರತಿಬಿಂಬಿಸುತ್ತಿದ್ದವು.

ಸಿನಿಮಾ ಆಯೋಜಕರು ಥಿಯೇಟರ್ ಬದಲಾವಣೆ ಕುರಿತು ತಮ್ಮ ಇ-ಮೇಲ್‌ನಲ್ಲಿ ಬರೆದಿದ್ದರೂ ಚಿತ್ರದ ಹೆಸರು, ದಿನಾಂಕ ಮತ್ತು ಸಮಯವನ್ನು ಬಿಟ್ಟು ಬೇರೇನನ್ನೂ ನೋಡದೆ ಎಂದಿನಂತೆ ಸಮಯಕ್ಕೆ ಸರಿಯಾಗಿ ಹಳೆಯ ಥಿಯೇಟರ್‌ಗೆ ಹೋದವನಿಗೆ ಆಶ್ಚರ್ಯ ಕಾದಿತ್ತು, ಥಿಯೇಟರ್ ಸ್ಥಳಾಂತರವಾದ ಬಗ್ಗೆ ಮನಸ್ಸಿನ್ನಲ್ಲೇ ಹಿಡಿಶಾಪ ಹಾಕುತ್ತಾ ಸ್ಟಿಯರಿಂಗ್ ವ್ಹೀಲ್ ಮೇಲೆ ಕುಟ್ಟಿ, ಶನಿವಾರ ಶಾಪ್ಪಿಂಗ್ ತರಾತುರಿಯ ನಡುವೆ ಸಂಭ್ರಮದಲ್ಲಿರುವವರನ್ನೆಲ್ಲ ಹಳಿಯುತ್ತಾ ಅಂತೂ-ಇಂತೂ ಹೊಸ ಥಿಯೇಟರ್ ಇರುವಲ್ಲಿ ಬರುವ ಹೊತ್ತಿಗೆ ಹದಿನೈದು ನಿಮಿಷ ತಡವಾಗಿತ್ತು. 'ಥೂ, ಒಂದ್ ಸಿನಿಮಾನ್ನು ನೆಟ್ಟಗೆ ನೋಡೋಕಾಗಲ್ಲಪ್ಪಾ' ಎಂದು ಸ್ವಯಂ ಶಾಪ ಹಾಕಿಕೊಳ್ಳುತ್ತಿದ್ದವನನ್ನು ನನ್ನ ಹೆಂಡತಿ ಸಮಾಧಾನ ಪಡಿಸುವ ಗೋಜಿಗೂ ಹೋಗದೇ 'ದಿನಾ ಸಾಯೋರಿಗೆ ಆಳೋರ್‍ಯಾರು' ಎಂಬಂತೆ ನಿರ್ಲಿಪ್ತ ಮುಖವನ್ನು ತೋರಿಸಿಕೊಂಡಿದ್ದಳು.

ಬೆಳ್ಳಂ ಬೆಳಕಿನ, ಬಿಸಿಲಿನ ವಾತಾವರಣದಿಂದ ಕತ್ತಲಿನಲ್ಲಿ ಕಥೆಯೊಂದನ್ನು ಹೇಳುತ್ತೇವೆಂದು ಸೆಡ್ಡು ಹೊಡೆದು ನಿಂತ ಥಿಯೇಟರ್ ಅನ್ನು ಹೊಕ್ಕಾಗ ಕಥೆಯನ್ನು ಕೇಳುವ ಕುತೂಹಲವನ್ನು ಅಭಿವ್ಯಕ್ತ ಪಡಿಸುವಂತೆ ಕಣ್ಣುಗಳು ಕಿರಿದಾದವು. ನನ್ನ ಅದೃಷ್ಟಕ್ಕೆ ಸಿನಿಮಾ ಅದೇ ತಾನೆ ಶುರುವಾಗಿ ಹೆಸರುಗಳನ್ನು ತೋರಿಸುತ್ತಿದ್ದರು. ಹೆಸರುಗಳನ್ನು ನೋಡುವಾಗ ಕಣ್ಣಿಗೆ ಕಂಡ ಅಂಶಗಳು ಇಷ್ಟು:

೧) 'ಸಂಗೀತ ಸಾಗರ - ಸಾಹಿತ್ಯ ಸರೋವರ' (ಯಾರಿಟ್ಟರೀ ಬಿರುದು?) ಹಂಸಲೇಖಾರ ಸಾಹಿತ್ಯ ಹಾಗೂ ಸಂಗೀತ 'ನೆನಪಿರಲಿ'ಯನ್ನು ಹಾಡುಗಳ ಗುಚ್ಛವನ್ನಾಗಿ ಪರಿಚಯಿಸಿತು.
೨) ಕೈಯ ಬೆರಳುಗಳಲ್ಲಿ ಎಣಿಸುವುದಕ್ಕೂ ಹೆಚ್ಚಾಗಿದ್ದ ಹಿನ್ನೆಲೆ ಗಾಯಕರ ಪಟ್ಟಿಯೂ ಮೇಲಿನ ಅಂಶಕ್ಕೆ ಪೂರಕವಾಗಿತ್ತು.

ಹೆಸರು ತೋರಿಸುವ ಹೊತ್ತಿಗೆಲ್ಲಾ ಚಿತ್ರದಲ್ಲಿ ಸಂಭಾಷಣೆ ಆರಂಭವಾಗಿರುತ್ತದೆ. ಮೊದಲ ಅರ್ಧದ ನಾಯಕಿ ತನ್ನ ಪ್ರಿಯತಮನ ಜೊತೆಯಲ್ಲಿ ಫೋನಿನಲ್ಲಿ ಮಾತನಾಡುತ್ತಾ ಆತನ ಹುಟ್ಟುಹಬ್ಬವನ್ನು ನೆನಪಿಸುವುದು ಬೆಂಗಳೂರಿನಲ್ಲಿ ವ್ಯವಹಾರದಲ್ಲಿ ವ್ಯಸ್ತನಾದ ಎಕ್ಸಿಕ್ಯೂಟೀವ್ ಒಬ್ಬನ ಬಗ್ಗೆ ಹಿಂಟ್ ನೀಡುತ್ತದೆ.

ನೀವು ಇಲ್ಲಿಯವರೆಗೆ 'ನೆನಪಿರಲಿ'ಯನ್ನು ನೋಡಿಲ್ಲವಾದರೆ - ಇದೊಂದು ಮಾಮೂಲಿ ಲವ್ ಸ್ಟೋರಿ, ಅಥವಾ ತ್ರಿಕೋನ ಪ್ರೇಮ ಕಥೆ ಎಂದು ರೀಲಿಗಿಂತಲೂ ವೇಗವಾಗಿ ಓಡುವ ಮನಸ್ಸಿನವರನ್ನು ಅಲ್ಲಲ್ಲಿ ನಿಲ್ಲಿಸುವಂತೆ ಚಿತ್ರದ ಉದ್ದಕ್ಕೂ ಶಾಕ್ ಕೊಡಲಾಗಿದೆಯಾದ್ದರಿಂದ ಚಿತ್ರವನ್ನು ಅವರು ತೋರಿಸಿದ ಹಾಗೆ ನೋಡಿಕೊಂಡು ನಿಮ್ಮ ಆಲೋಚನೆಗಳನ್ನೆಲ್ಲಾ ಕೊನೆಯಲ್ಲಿ ಇಟ್ಟುಕೊಳ್ಳುವಂತೆ ಕೇಳಿಕೊಳ್ಳುತ್ತೇನೆ.

ಈ ಚಿತ್ರದಲ್ಲಿ ಹಾಡುಗಳು ಚೆನ್ನಾಗಿ ಮಿಳಿತಗೊಂಡಿವೆ. ಹಾಡುಗಳು ದಿಢೀರನೆ ಆರಂಭವಾಗಿ, ಎಲ್ಲೋ ಮುಕ್ತಾಯವಾಗಿ ತೊಂದರೆ ನೀಡುವುದರ ಬದಲಿಗೆ, ಚಿತ್ರದ ಕಥೆಗೆ ಪೂರಕವಾಗಿವೆ. ಹಾಡುಗಳು ಅಲ್ಲಲ್ಲಿ ನಿಂತು, ಮಧ್ಯೆ ಸಂಭಾಷಣೆಗಳು ಬಂದು, ಮತ್ತೆ ಹಾಡಿನಲ್ಲಿ ಕೊನೆಯಾಗುವ ಸನ್ನಿವೇಶಗಳು ಅನಗತ್ಯವೆನಿಸುವುದಿಲ್ಲ.

'ಕೂರಕ್ ಕುಕ್ರಳ್ಳಿಕೆರೆ' ಬಹಳ ಚೆನ್ನಾಗಿದೆ, ಚಿತ್ರದುದ್ದಕ್ಕೂ ಮೈಸೂರನ್ನು ನಾನಾ ಕೋನಗಳಲ್ಲಿ ಸೆರೆಹಿಡಿಯುತ್ತೇವೆಂದು ಹಠ ತೊಟ್ಟ ನಿರ್ದೇಶಕರ ಪ್ರಯತ್ನ ಸಫಲವಾಗಿದೆ:
...ಬನ್ರೀ, ನೋಡ್ರೀ, ನಾನು ಲವ್ ಮಾಡೋ ಸ್ಟೈಲ್ ಸ್ವಲ್ಪ ಕಲೀರಿ...
ಎಂದು ಆರಂಭವಾಗೋ ಹಾಡು, ಕೋರಸ್ ಇವುಗಳು ಮುಂಬರುವ ಅದ್ದೂರಿ ಗ್ರೂಪ್ ಸಾಂಗ್ ಹಿಂಟ್ ಕೊಡುತ್ತವೆ.
ಕಾಳಿದಾಸನೇ ಇಲ್ಲಿ ರಸ್ತೆ ಆಗವ್ನೇ, ಪ್ರೀತಿ ಮಾಡೋರ್‍ಗೆ ಸರಿ ದಾರಿ ತೋರ್‌ತವ್ನೇ
ದುಡ್ಡಿದ್ರೆ ಲಲಿತ ಮಹಲ್, ಇಲ್ದಿದ್ರೆ ಒಂಟಿಕೊಪ್ಪಲ್ ಈ ಲವ್ವಿಗೇ... ಎಂಬ ಪಂಕ್ತಿಗಳು ಜನರಿಂದ ಮೆಚ್ಚುಗೆ ಗಳಿಸುತ್ತವೆ. 'ಈ ಭಯಾ ಬಿಸಾಕಿ ಲವ್ ಮಾಡಿ, ಈ ದಿಗಿಲ್ ದಬಾಕಿ ಲವ್ ಮಾಡಿ' ಅನ್ನೋ ಪಂಕ್ತಿಗಳು ಈ ಹಿಂದೆ ಎಲ್ಲೋ ಕೇಳಿದ್ದೇನೆ ಎನಿಸಿದರೂ ಮೇಕ್ ಅಪ್ ಚಿತ್ರದ ರಾಜೇಶ ಹಾಡಿದ 'ಬೋಲ್ ರಾಜಾ' ಹಾಡನಲ್ಲಿರುವ ಸಂಭ್ರಮವನ್ನು ನೆನಪಿಸಿತು. ಪದಗಳು, ವಾಕ್ಯಗಳ ವಿಶೇಷಗಳನ್ನು ಹೊರತುಪಡಿಸಿ, ನಟನಿಗೆ ತಕ್ಕಂತೆ ಬದಲಾಗುವ ಎಸ್.ಪಿ.ಬಿ ಧ್ವನಿ ಮುದನೀಡಿತು. 'ನರಸಿಂಹ ಸ್ವಾಮಿ ಪದ್ಯ ಇದೆ, ಅನಂತ್ ಸ್ವಾಮಿ ವಾದ್ಯ ಇದೆ ಲವ್ವಿಗೇ, ಈ ಲವ್ವಿಗೇ' ಅನ್ನೋದು sure laugh.

'ನೆನಪಿರಲಿ' ಟೈಟಲ್ ಸಾಂಗ್ 'ಒಲವು ಒಂಟಿಲ್ಲ' ಎಂದು ಆರಂಭವಾಗಿ ಹಲವಾರು ಸಂದೇಶಗಳನ್ನು ಪದೇ-ಪದೇ 'ನೆನಪಿರಲಿ' ಎಂದು ಶೋತೃಗಳನ್ನು ಮರೆಯದಿರುವಂತೆ ಚುಚ್ಚುವ ಪ್ರಯತ್ನವನ್ನು ಮಾಡುತ್ತದೆ. ಆದರೆ ಸಿನಿಮಾಗಳಿಂದ ಏನನ್ನು ಕಲಿಯುವುದಿಲ್ಲ ಎಂದು ಸಿನಿಮಾ ಮುಗಿದ ಮೇಲೆ ಝಾಡಿಸಿಕೊಂಡು ಎದ್ದೇಳುವ ಪರಿಪಾಠವನ್ನು ಪ್ರೇಕ್ಷಕರು ಇ(ಲ್ಲೂ)ನ್ನೂ ಬಿಟ್ಟಿಲ್ಲ!
'ದ್ರೌಪದಿ, ಷಟ್ಪದಿ, ಚೌಪದಿ' ಹಾಡಿನಲ್ಲಿ ಬರುವ ಹಲವು ರೂಪಾಂತರಗಳು ಇಷ್ಟವಾದವು.

ಹೇ ಬೆಳದಿಂಗಳೇ ಹಾಡಿನ ಚಿತ್ರೀಕರಣ ಚೆನ್ನಾಗಿದೆ, ಹಾಡುಗಳನ್ನು ಸ್ವಾರಸ್ಯಕರವಾಗಿ ಬರೆದಿದ್ದು, ಮಧ್ಯೆ-ಮಧ್ಯೆ ಇಂಗ್ಲೀಷಿನ ನೋ, ಫೂಲ್ ಅನ್ನೋ ಪದಗಳು ಆಧುನಿಕ ನೆರೆಹೊರೆಯನ್ನು ಪ್ರತಿನಿಧಿಸುತ್ತವೆ. ಈ ಹಾಡಿನಲ್ಲಿ ಬೇರೆ ಯಾರೂ ಈ ಪಾತ್ರಗಳ ಸಮಸ್ಯೆಗೆ ಚಿತ್ರದುದ್ದಕ್ಕೂ ಸ್ಪಂದಿಸಿದರೂ ಫಲಕೊಡದ ಪ್ರಯತ್ನಗಳನ್ನು ಈ ಕೆಳಗಿನ ವಾಕ್ಯಗಳಲ್ಲಿ ಮನೋಜ್ಞವಾಗಿ ಸೆರೆ ಹಿಡಿಯಲಾಗಿದೆ:

ನಾವಾಗಲಿ
ನೀವಾಗಲಿ
ಗೆಳೆಯರಾಗಲಿ
ಬಳಗವಾಗಲಿ
ಗುರುಗಳಾಗಲಿ
ಋಷಿಗಳಾಗಲಿ
ದೇವರಾಗಲಿ
ದಿಂಡರಾಗಲಿ
ತಲೆ ತೂರಿಸೋ ಹಾಗಿಲ್ಲಾ!

because

ಇದು ಹೃದಯಗಳಾ ವಿಷಯಾ,
ಈ ವಿಷಯಾ ವಿಷ ವಿಷಯಾ.


ಈ ಚಿತ್ರದಲ್ಲಿ ನೀವು ಗಮನಿಸಬೇಕಾದ ಹಲವು ಅಂಶಗಳಲ್ಲಿ ಯುವ ನಿರ್ದೇಶಕ-ನಿರ್ಮಾಪಕರ ಜೋಡಿಯೂ ಒಂದು. ಮೈಸೂರಿನಲ್ಲಿ ಇಂಜಿನಿಯರಿಂಗ್ ಮಾಡಿಯೂ ಕೆ.ಎ.ಎಸ್. ಪರೀಕ್ಷೆಯಲ್ಲಿ ಸಫಲರಾಗಿಯೂ ಚಿತ್ರರಂಗಕ್ಕೆ ಬಂದು ಹಲವಾರು ಚಿತ್ರಗಳ ಸಹನಿರ್ದೇಶನವನ್ನು ಮಾಡಿ ತಮ್ಮ ಚೊಚಲ ನಿರ್ದೇಶನದಲ್ಲಿ ಈ ಚಿತ್ರವನ್ನು ನೀಡಿದ್ದು "ರತ್ನಜ" (ಪ್ರಕಾಶ್) ಅವರನ್ನು ಬಹಳ ಎತ್ತರದಲ್ಲಿ ನಿಲ್ಲಿಸುತ್ತದೆ. ತಮ್ಮ ಬಾಲ್ಯದ ಗೆಳೆಯನ ಮೇಲೆ ವಿಶ್ವಾಸವಿರಿಸಿ ಹಣ ಸುರಿದ ನಿರ್ಮಾಪಕ ಅಜಯ್ ಗೌಡ ಅವರ ಹೆಚ್ಚುಗಾರಿಕೆಯನ್ನು ಮೆಚ್ಚಲೇಬೇಕು.

ಇನ್ನು ಪಾತ್ರವರ್ಗದಲ್ಲಿ ಎಲ್ಲರೂ ಚೆನ್ನಾಗಿ ತಮ್ಮ-ತಮ್ಮ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಅನಂತ್ ನಾಗ್, ಜೈಜಗದೀಶ್, ವಿಜಯಲಕ್ಷೀ ಅವರು ಎಂದಿನ ಲವಲವಿಕೆಯಲ್ಲಿದ್ದರೆ, ಪ್ರೇಮ್, ವರ್ಷಾ, ವಿದ್ಯಾ ಅವರು ಹೊಸಬರಾದರೂ ಬಹಳ ಕಾಲದಿಂದ ನೋಡಿರದ ಸ್ನೇಹಿತರ ಹಾಗೆ ತೆರೆಯಲ್ಲಿ ಕಾಣಿಸಿಕೊಳ್ಳುತ್ತಾರೆ. ಈ ಯುವ ಕಲಾವಿದರಲ್ಲಿನ ಲವಲವಿಕೆ, ಗತ್ತು, ಗಾಂಭೀರ್ಯ ಅವರನ್ನೆಲ್ಲ ಬಹಳ ಮುಂದೆ ಕೊಂಡುಯುತ್ತದೆ.

ಅಲ್ಲಲ್ಲಿ ಅಮೇರಿಕನ್ ಮಕ್ಕಳ ಗಲಾಟೆಯ ನಡುವೆ (ಆಗಾಗ್ಗೆ ಬೈದುಕೊಂಡು) ಈ ಚಿತ್ರವನ್ನು ನೋಡಿರುವೆನಾದರೂ ನನ್ನ 'ಅಂತರಂಗ'ದಲ್ಲಿ 'ನೆನಪಿರಲಿ' ಚಿತ್ರಕ್ಕೆ ಉತ್ತಮ ಚಿತ್ರವೆಂದು ಮೂರೂವರೆ ಸ್ಟಾರ್ ರೇಟಿಂಗ್ ಕೊಡುತ್ತೇನಾದರೂ ಈ ಕೆಳಗಿನ ಅಂಶಗಳನ್ನು ಕುರಿತು ಇನ್ನೂ ಯೋಚಿಸುವುದಕ್ಕಿದೆ:
೧) ಚಿತ್ರದುದ್ದಕ್ಕೂ ಗಹನವಾದ ಸಂಭಾಷಣೆಗಳು ಒಂದೇ ಹಿಲ್‌ಟಾಪ್, ಅಥವಾ ಬೆಟ್ಟ-ಗುಡ್ಡಗಳಲ್ಲಿನ ಅತಿ ಎತ್ತರವಾದ ಸ್ಥಳದಲ್ಲಿ ನಡೆಯೋದು ನಿರ್ದೇಶಕರ ಎತ್ತರವಾದ ನಿರೀಕ್ಷೆಯ ಧ್ಯೋತಕವಿರಬಹುದಾದರೂ, 'ತಾನು ಕುಂಚ ಕಲಾವಿದೆ' ಎಂದು ಚಾಮುಂಡಿ ಬೆಟ್ಟಕ್ಕೆ ಹೋಗೋ ಇಂದುವಿನ ನೆಪ ಬಿಂದುವಿಗೆ ಅನ್ವಯವಾಗದು.
೨) ಚಿತ್ರದುದ್ದಕ್ಕೂ ಅನವಶ್ಯಕವಾಗಿ 'ನೆನಪಿರಲಿ'ಯನ್ನು ತುರುಕಿಲ್ಲ, ಆದರೆ ಚಿತ್ರದ ಟೈಟಲ್‌ಗೂ, ಕಥೆಗೂ, ಬರುವ ಹಾಡುಗಳಿಗೂ ಹೋಲಿಸಿದಾಗ ಪ್ರೇಕ್ಷನಿಗೆ ಹಾಗನ್ನಿಸುವುದರಲ್ಲಿ ತಪ್ಪೇನೂ ಇಲ್ಲ.
೩) ಕನ್ನಡ ಸಿನಿಮಾಗಳಿಂದ ರಿಸರ್ಚ್ ಮಾಡಿ 'ಪ್ರೇಮಿಸೋದು' ಹೇಗೆ ಎಂದು ಕಲಿಯುವ ಸನ್ನಿವೇಶ ಇಷ್ಟವಾಯಿತು, ಆದರೆ ರಿಸರ್ಚ್‌ನಲ್ಲಿ ಬಂದದ್ದು ಜೋಡಿ ಹಾಡುಗಳು, ಆದರೆ ನಾಯಕ ಅನುಸರಿಸೋದು ಗ್ರೂಪ್ ಸಾಂಗ್. ಅದೂ ಅಲ್ಲದೇ ಅದೇ ತಾನೇ ಪ್ರೀತಿಸೋದನ್ನ ಕಲಿತ ಹುಡುಗ 'ಬನ್ರೀ, ನೋಡ್ರೀ, ನಾನು ಲವ್ ಮಾಡೋ ಸ್ಟೈಲ್ ಸ್ವಲ್ಪ ಕಲೀರಿ' ಎಂದು ಹಾಡೋದು ಎಷ್ಟು ಸೂಕ್ತ?
೪) ಮೈಸೂರು, ಬೆಂಗಳೂರು ಹಾಗೂ ಮಂಗಳೂರಿನ ಬದುಕನ್ನು ನಾನು ಕಂಡ ನ್ಯೂ ಯಾರ್ಕ್ ನಗರದ ಬದುಕಿಗಿಂತಲು ಗಂಭೀರ ಹಾಗೂ ಗಹನವಾಗಿ ತೋರಿಸಿರುವುದು. ಆದರೆ ಚಿತ್ರದುದ್ದಕ್ಕೂ ಸಂಭಾಷಣೆ ಪ್ರಾಮುಖ್ಯ ಪಾತ್ರ ಪಡೆದು ಎಷ್ಟು ಬೇಕೋ ಅಷ್ಟಿರುವುದು.
೫) ತನ್ನ ಆತ್ಮೀಯ ಗೆಳೆಯನ ಸಾವಿನ ವಿಷಯ ಕೇಳಿದ ಕಿಶೋರನ ಮುಖವನ್ನು ಇನ್ನೂ ಚೆನ್ನಾಗಿ ತೋರಿಸಬೇಕಿತ್ತು. ಇಂಥ ದೃಶ್ಯಗಳನ್ನು ಸೆರೆಹಿಡಿಯುವುದಕ್ಕೆ ಮುಂಚೆ, ಅಭಿನಯಿಸುವುದಕ್ಕೆ ಮೊದಲು ಹಳೆಯ ರಾಜ್‌ಕುಮಾರ್ ಚಿತ್ರಗಳನ್ನು ಇನ್ನಷ್ಟು ನೋಡುವುದು ಒಳ್ಳೆಯದು.
೬) ತಂದೆಯಿಲ್ಲದೇ, ಕೆಲಸಕ್ಕೆ ಇನ್ನೂ ಸೇರಿರದ ಕಿಶೋರ್ ಮೊದಮೊದಲು ತೋರಿಸುವ ಐಶಾರಾಮಕ್ಕೆ ದುಡ್ಡೆಲ್ಲಿಂದ ಬಂತು ಎಂದು ಅನ್ನಿಸುವುದು.
೭) ಚಿತ್ರದ ಮಧ್ಯಂತರ ಮುಗಿಯುವವರೆಗೂ ದ್ವಿತೀಯಾರ್ಧದ ನಾಯಕಿಯ ಪರಿಚಯ ಮಾಡಿರದ ಹೊಸ ಪ್ರಯೋಗ.
೮) ಹಾಡುಗಳೆಲ್ಲ ಚೆನ್ನಾಗಿವೆ; ನಡು-ನಡುವೆ ಪ್ರಾಸಕ್ಕಾಗಿ ತಿಣುಕಿದಂತಿದೆ.
೯) ರಾಮಚಂದ್ರ ಅವರ ಛಾಯಾಗ್ರಹಣ ಬಹಳ ಚೆನ್ನಾಗಿದೆ, ಆದರೆ ಹಾಡಿನ ಚಿತ್ರೀಕರಣದ ನಡುವೆ ಅಲ್ಲಲ್ಲಿ ಬರುವ ಕ್ಯಾಮರಾ ಬದಲಾವಣೆಯಲ್ಲಿನ ಅವರ ಪ್ರಯೋಗ ಲೆನ್ಸ್ ಬದಲಾಯಿಸಲು ಮರೆತಿರುವಂತೆ ಕಂಡು ಬಂತು (ಅಥವಾ ಅದು ಈ ಥಿಯೇಟರ್‌ನ ಲಿಮಿಟೇಷನ್ ಇದ್ದರೂ ಇರಬಹುದು)
೧೦) ಚಿತ್ರದ ಅಂತ್ಯದಲ್ಲಿ ಬಳಸಿರುವ ತಂತ್ರದ ಬಗ್ಗೆ ಯೋಚಿಸಿದಾಗ ಬಹಳ ಸಮಯೋಚಿತವಾದ ನಿರ್ಧಾರವೆನಿಸಿತು.

ಈ ಚಿತ್ರವನ್ನು ನೋಡಿದರೆ ಬೆಂಗಳೂರು-ಮಂಗಳೂರಿಗಲ್ಲದಿದ್ದರೂ ಮೈಸೂರಿಗಂತೂ ಖಂಡಿತವಾಗಿ ಹೋಗಿಬಂದಂತಾಗುತ್ತದೆ. ಚಾಮುಂಡೀ ಬೆಟ್ಟವನ್ನು ಬಹಳ ಹತ್ತಿರದಿಂದ ತೋರಿಸಿಯೂ ಪಾತ್ರಗಳ ಮುಖಭಾವಕ್ಕೆ ಒತ್ತುಕೊಟ್ಟ ನಿರ್ದೇಶಕರ ಬಗ್ಗೆ ಮೆಚ್ಚುಗೆ ಬರುತ್ತದೆ. ಒಂದೇ ಮಾತಿನಲ್ಲಿ ಹೇಳುವುದಾದರೆ 'ನೆನಪಿರಲಿ' ಸಿನಿಮಾವನ್ನು ಸಹೃದಯ ಕನ್ನಡಿಗರು ನೋಡಬೇಕು, ನಾನು "ರತ್ನಜ" ಅವರ ಇನ್ನಷ್ಟು ಇಂತಹ ಚಿತ್ರಗಳನ್ನು ನಿರೀಕ್ಷಿಸುತ್ತೇನೆ.

Saturday, May 06, 2006

ಆ ಧ್ವನಿ - ಈ ಧ್ವನಿ: ಭಾಗ ೧

ಆ ಧ್ವನಿ: ನೀನ್ ಸುಮ್ಕೇ ತಲೆ ಕೆಡಿಸಿಕ್ಯಂತಾ ಕುಂತಿ ನೋಡ್ ತಮ್ಮಾ, ಇಷ್ಟು ಕಡ್ದ್ ಅಷ್ಟ್ ಕಡ್ದ್ ಅದ್ರಿಂದ್ ಈಗ ಏನಾತೂ ಅಂತs?

ಈ ಧ್ವನಿ: ಏನಾದ್ರೂ ಆಗ್ಲೀ ಅಂತಾನೇ ಎಲ್ಲಾನೂ ಮಾಡೋಕಾಗುತ್ತಾ, ನಮ್-ನಮ್‌ಗೆ ಏನ್ ಬೇಕೋ ಅದನ್ನ ಮಾಡ್‌ಬೇಕಪ್ಪಾ. ಪ್ರತಿಯೊಂದರಲ್ಲೂ ಒಂದಲ್ಲ ಒಂದು ಪ್ರತಿಫಲ ಇರ್‍ಲೇ ಬೇಕು ಅಂತ್ಲೇ ಈ ಪ್ರಪಂಚದಲ್ಲಿರೋದೆಲ್ಲ ನಡೆಯುತ್ತೇನು?

ಆ ಧ್ವನಿ: ಹಂಗಲ್ಲ, ನೀ ಹೇಳಿರೋ ಈ ಮಾತು ನಿಂಗ್ ನೆನ್‌ಪಿರ್‍ಲೀ, ವ್ಯವಹಾರ್‌ದಾಗ್ ಏನಿದ್ರೂ ನಿನ್ನ ಮಾತಾs ಮುಂದಪಾ, ಮಾಡೊ ಕೆಲಸ ಏನಿದ್ರೂ ತಲೆ ತೆಗಿಸಿ ಮಾಡೋನ್ ನಾನು ಅಂಥಾದ್ದರಾಗ ನನೀಗೆ ಹೇಳಾಕ್ ಬರ್ತೀಯಲಾ!

ಈ ಧ್ವನಿ: ನಿನ್ನಂಥಾ ಹಳ್ಳೀ ಜನಕ್ಕೆ ಆಧುನಿಕ ಬದುಕಿನ ಬಗ್ಗೆ ಗೊತ್ತಾಗಲ್ವೋ. ನಮ್ ಬದುಕಿನ ತುಮುಲಾನೇ ಬೇರೆ, ನಿನಗೆ ಅದರ ಆಯಾಮಗಳ ಅರಿವು ಸ್ವಲ್ಪಾನೂ ಆಗೋಲ್ಲ ಅಂತ್ಲೇ ಹೇಳ್ತೀನಿ - ನಿನಗ್ಗೊತ್ತಾಗಲ್ಲ, ಸುಮ್ನೇ ಬಿಟ್ ಬಿಡು.

ಆ ಧ್ವನಿ: ಏನ್ ನಿನ್ ಮಾತಿನ್ ಆರ್ಥಾ - ಹಳ್ಳೀ ಜನಾ ಅಂದ್ ಕೂಡ್ಲೇ ಜೀವಂತಾನೂ ಇರಲ್ಲಾ ಅಂತ ತಿಳಕಂಡೀಯೇನೂ? ನಿನ್ ಪಟ್ನದ್ ಉಸಾಬರೀನೆಲ್ಲಾ ತಗೊಂಡೋಗಿ ಕಾರಾ ಹಚ್ಚಿ ನೆಕ್ಕೋ - ಎನೋ ಪಾಪ ತಲೆಕೆಡಿಸಿಕ್ಯಂಡ್ ಕುಂತ್ಯಾನೇ ಅಂತ ತಿಳಿಹೇಳಾಕ್ ಬಂದ್ರೆ ನನೀಗೇ ಗೊತ್ತಿಲ್ಲಾ ಅಂತೀಯಲ! ನಮ್ಮೂರ್ ಹಳ್ಳೀನೇ ಇರಬೋದ್ ಬಿಡು, ನಮ್ ಹೃದಯಾ ನೀನ್ ನೋಡಿರೋ ಎಲ್ಲಾ ಪಟ್ನಕ್ಕಿಂತಾ ದೊಡ್ಡದೈತಿ.

ಈ ಧ್ವನಿ: ಹಾಗಿದ್ದ ಮೇಲೆ ಅವರವ್ರ ಕೆಲ್ಸ ನೋಡಿಕೊಂಡು ಸುಮ್ನಿರಬೇಕಪ್ಪ, ಇನ್ನೊಬ್ರ ವಿಷಯದಲ್ಲಿ ಮೂಗು ಯಾಕೆ ತೂರಿಸ್ತೀರಿ?

ಆ ಧ್ವನಿ: ಏ, ಯಾವ್ದೋ ದೆವ್ವ ಮೆಟಗಂಡಂಗ್ ಆಡ್‌ಬ್ಯಾಡಾ - ಆವಾಗೇ ಹೇಳ್ಳಿಲ್ಲೇನು, ನಮ್ ರೀತಿ ನೀತಿ ಅಂದ್ರೆ ನಮಿಗೆ ಬೇಕಾದೋರ್ ನಲಿವಷ್ಟೇ ಅಲ್ಲ, ನೋವೂ-ಸಂಕ್ಟಾನೂ ನಮೀಗ್ ಬೇಕು, ಒಂದೇ ಮಾತಲ್ಲಿ ಹೇಳೋದಾದ್ರೆ ನೀನು ಕಂಡಿರೋ ಎಲ್ಲಾ ಸುಖಾನೂ ಒಂಥರಾ ನೋವಲ್ಲೇ ಹುಟ್ತಾವಂತೆ, ತಿಳಕೋ!

ಈ ಧ್ವನಿ: ನೋಡೋ, ನಿನಗೆ ತಿಳೀ ಹೇಳೋಕೆ ನನ್ನಲ್ಲಿ ಸ್ವಲ್ಪಾನೂ ತಾಳ್ಮೆ ಉಳಿದಿಲ್ಲ, ನಿನಗೆ ಹೇಗೆ ಬೇಕೋ ಹಾಗೆ ಮಾಡು.

ಆ ಧ್ವನಿ: ತಡಿ, ತಡಿ. ಸಿಟ್ ಮಾಡಿಕ್ಯಾ ಬ್ಯಾಡಾ, ಬರೀ ನನ್ನ ಎರಡ್ ಮಾತ್ ಕೇಳಿ ಅದಕ್ಕುತ್ರ ಕೊಡೋಕೇ, ಮುಖಕ್-ಮುಖಾ ಕೊಟ್ಟು ಮಾತಾಡೋಕೂ ಆಗ್ದೇ ಇರೋ ಪ್ಯಾಟೇ ಮಂದಿ ಥರ್‍ಆ ಆಡಬ್ಯಾಡಾ - ಅದು ಏನ್ ಸಮಸ್ಯೇ ಐತೀ ಅಂತ ನನಿಗ್ ಹೇಳು, ಇರೋದ್ರಲ್ಲೇ ಒಳ್ಳೇ ಹಾದಿ ಹಿಡಿಯೋ ಹಾಂಗs ಒಂದು ಹೂಟಿ ಹೇಳಿಕೊಡ್ತೀನಿ!

ಈ ಧ್ವನಿ: ಹಾಗೇನಿಲ್ಲ, ಎಲ್ಲ ಸರಿಯಾಗೆ ಇದೆ, ಈ ನಮ್ ಪೇಟೇ ಜೀವನದಲ್ಲಿ ಎಲ್ಲಾ ಇದ್ರೂ ಏನೋ ಬೇಕು ಅಂತ ಅನ್ನಿಸ್ತಾನೇ ಇರತ್ತೆ. ಕಳಕೊಂಡಿದ್ದೇನು ಅಂತ ಗೊತ್ತಾದ್ರೇ ತಾನೇ ಹುಡುಕೋ ದಾರಿ ತಿಳಿಯೋದು?

ಆ ಧ್ವನಿ: ಆಷ್ಟೇನೋ, ಇನ್ನೇನಾದ್ರೂ ಐತೋ?

ಈ ಧ್ವನಿ: ಇನ್ನೇನು ಇಲ್ಲಾ, ಮೇಲೆ-ಮೇಲೆ ಬಂದಂತೆಲ್ಲಾ ಕೈಯಲ್ಲಿ ದುಡ್ಡೇ ನಿಲ್ಲಲ್ಲ, ದುಡ್ ನಿಲ್ಲಲಿ ಅಂತ ದುಡದಂಗೆಲ್ಲ ಕೆಲ್ಸಾ ನಿಲ್ಲಲ್ಲ - ಕೆಲ್ಸಾ ಮಾಡಿ, ದುಡ್ಡೂ ದುಡ್ದೂ ಅಷ್ಟೂ-ಇಷ್ಟೂ ಅಂತ ಕೂಡಿಹಾಕೋದ್ರೊಳಗೆ ಇನ್ನೇನೂ ಉಳಿಯೋದೇ ಇಲ್ಲಾ ಅನ್ನಿಸಿಬಿಟ್ಟಿದೆ.

ಆ ಧ್ವನಿ: ಹಂಗಾದ್ರೆ, ಗುಡಚಾಪೇ ಕಟ್ಟಿ ನಮ್ಮೂರಿಗ್ ಬಂದ್ ಬಿಡು, ಮತ್ಯಾಕ್ ತಡಾ?

ಈ ಧ್ವನಿ: ಅದಂತೂ ಇನ್ನೂ ಆಗದ ಮಾತು ಬಿಡು. ಒಂದು, ಇಲ್ಲಿಗೆ ಬಂದು ನಾನು ಮಾಡೋದಾದ್ರೂ ಏನು? ಎರಡನೇದಾಗಿ, ಅಲ್ಲಿ ನಾನು ಮೂಗಿನ ತನಕಾ ಹುಗಿದುಕೊಂಡು ಬಿಟ್ಟಿದ್ದೇನೆ, ಇತ್ಲಾಗೆ ಏಳೋಕೂ ಆಗಲ್ಲ, ಅತ್ಲಾಗೆ ಮುಳುಗೋಕೂ ಆಗಲ್ಲ ಅನ್ನೋ ರೀತಿ.

ಆ ಧ್ವನಿ: ಛೇ, ಛೇ, ಹಂಗೆಲ್ಲಾದ್ರೂ ಆಗ್‌ತೈತಾ - ನಮ್ಮದೇ ಒಂದ್ ಹತ್ತೆಕ್ರೆ ಜಮೀನ್ನ ಬಿಟ್ಟುಕೊಡ್ತೀನಂತೆ, ಒಂದ್ ರೀತಿ ಮೊದಲೇ ವಾನಪ್ರಸ್ಥಾ ಸೇರಿಕ್ಯಂಬಿಡು, ನಿನಗ್ಯಾವನೂ ಕ್ಯಾರೇ ಅನ್ನಂಗಿಲ್ಲ.

ಈ ಧ್ವನಿ: ಇಲ್ವೋ, ಆ ವಾನಪ್ರಸ್ಥದಲ್ಲಿ ಸಿಗಬೇಕಾದ ಸುಖಗಳನ್ನೆಲ್ಲ ಅಲ್ಲೇ ಅನುಭವಿಸೋಣಾ ಅಂಥ ಪ್ರತೀದಿನ ಯೋಗ, ಧ್ಯಾನಾ ಮಾಡ್ತೀನಿ - ಆದರೆ ಧ್ಯಾನದ ಮಧ್ಯೆ ಹಂಗೆ ಮಾಡಿದ್ರೆ ಹೆಂಗೆ, ಹಿಂಗೆ ಮಾಡಿದ್ರೆ ಹೆಂಗೆ ಅನ್ನೋ ಹಗಲ್‌ಗನಸ್ಗಳು ಶುರುವಾಗ್ತಾವೆ ನೋಡು.

ಆ ಧ್ವನಿ: ನೋಡಪಾ, ನನ್ ಕೈಲಿ ಏನಾಗ್ತೇತೋ ಅದನ್ನ ಹೇಳ್ದೆ. ನಾನೇನು ನಿನ್ನಂಗಾs ಹೆಚ್ಚಿಗಿ ಓದ್ದೋನೂ ಅಲ್ಲಾ, ಆದ್ರೂ ಒಂದೊಂದ್ ಸಲಿ ನಿನ್ನಂಥಾ ಓದ್ದೋರ್ ಆಡೋದ್ ನೋಡಿದ್ರೆ ಹಿಡ್ದು ಮೆಟ್ನ್ಯಾಗ್ ಹೊಡಿಬಕು ಅನ್ಸತಿ ನೋಡ್! ನನ್ನ್ ಜೋಡೀ ಸಾಲೀ ಬಿಟ್ಟು ಊರಿನ್ಯಾಗಾ ಇದ್ದಿದ್ರ ಹಿಂಗಾಗತಿತ್ತಾ ಮತ್ತಾs. ಈಗ ನೋಡು ಅದೈತಿ, ಇದೈತಿ ಎಲ್ಲಾನೂ ಐತಿ ಅಂತೀ ಸಮಾಧಾನ ಒಂದ್ ಬಿಟ್ಟು - ಮೈ ತುಂಬ ಸಾಲ ಮಾಡಿಕ್ಯಂಡ್ ಹಗಲೂ ರಾತ್ರೀ ಚಿಂತೀ ಮಾಡ್ಸೋ ಆ ಐಷಾರಾಮಾ ನಂಗ್ ಬ್ಯಾಡಾಪ್ಪೋ! ನನಿಗೋ ಹಂಗ್ ಉಂಡು ಹಿಂಗs ಬಿದ್ರ ಸಾಕ್ ನೋಡು, ನಿದ್ರೀ ಅನ್ನೋದು ಅವನೌನ್ ಎಲ್ಲಿರತತೋ ಏನೋ ಹುಡಿಕ್ಯಂಬಂದ್ ವಕ್ಕರ್‍ಸಕ್ಯಂತತಿ.

ಈ ಧ್ವನಿ: ನೀನೇ ಪುಣ್ಯವಂತ, ನನಗೂ ನಿದ್ರೆ ಬರುತ್ತೆ, ಇಲ್ಲಾ ಅಂತ ಏನಿಲ್ಲ. ನನ್ ಮುಖಾ ಸರಿಯಾಗಿ ನೋಡು, ನನಗೂ-ನಿನಗೂ ಒಂದೇ ವಯಸ್ಸಾದ್ರೂ ನನ್ನ ಹಣೇ ಮೇಲೆ ಆಗ್ಲೇ ಅದೆಷ್ಟೋ ನೆರಿಗೆಗಳು ಕಾಣೋಕೆ ಶುರು ಆಗಿದೆ, ತಲೆ ಕೂದ್ಲೆಲ್ಲಾ ಹಣ್ಣಾಗೋಕ್ ಶುರುವಾಗಿದೆ ನೋಡು - ನೀನಂತೂ ಕಲ್‌ಗುಂಡಿನಂಗೆ ಹೆಂಗಿದಿಯೋ ಹಂಗೇ ಇದೀಯ.

ಆ ಧ್ವನಿ: ಈಗ ನನ್ ಮ್ಯಾಲ ಕಣ್ ಹಾಕಬ್ಯಾಡಾ. ನಾನ್ ಅಂದೇ ಅಂತ ಮನೀ ಹಾದಿ ಹಿಡಿ, ಛೋಲೋತ್ನಾಗ್ ರೊಟ್ಟೀ, ಎಣ್ಣಗಾಯ್ ಮಾಡಿರ್ತಾರೆ, ಬಾ ಇಲ್ಲೇ ಸ್ವಲ್ಪ ಉಂಡ್‌ಕೋಂಡ್ ಹೋಗೋವಂತಿ. ಅದೆಷ್ಟೋ ದೂರದಿಂದ ಇಲ್ಲೀ ತಂಕಾ ಬಂದು, ಮಗನಾs ಒಂದು ತುತ್ತು ತಿನ್ನದೇ ಇದ್ರೆ ಹೆಂಗs?

ಈ ಧ್ವನಿ: ಇಲ್ಲ, ಯಾಕೋ ಹಸಿವೇನೇ ಇಲ್ಲ. ಅಲ್ಲೀ-ಇಲ್ಲೀ ತಿಂದೂ-ತಿಂದೂ ಊಟದ ಹೊತ್ತಾದ್ರೂ ಏನೂ ಸೇರೋದೇ ಇಲ್ಲ ನೋಡು, ಸೇರಿದ್ರೂ ಅರಗೋ ಮಾತೇ ಇಲ್ಲ.

ಆ ಧ್ವನಿ: ಸರಿ ಬಿಡಪ್ಪ, ನಮ್ಮಂತಾ ಬಡಬಗ್ಗರ ಮನ್ಯಾಗ ನಿನ್ನಂಥೋರು ಕೂತು ತಿಂದ್ರಾ ಇನ್ಯಾವ ರೋಗ ಬರ್‍ತೈತೋ ಅಂಥ ಯೋಚಿಸೋ ಮಂದಿ ನೀವು. ಇಲ್ಲಾಂದ್ರಾ ನೀರನ್ನೂ ಕೊಂಡ್‌ಕಂಡ್ ಯಾವನ್ನಾರಾ ಕುಡೀತಾನೇನು? ಮನುಷ್ಯರೊಳಗೆ ಮೋಸಾ ಇರಬೋದು, ಆ ಗಂಗವ್ವ್ ಏನ್ ಮಾಡ್ಯಾಳೋ? ಇದೇ ನೀರ್‍ನಾಗೆ ಹಿಂದೆ ಕುಪ್ಪಳಿಸಿ ಹಾರ್‍ತಾ ಇದ್ದೆ, ಈಗ ನಿನಗೆ ಅದೇ ದೂರ ಆಗೈತೇನು?

ಈ ಧ್ವನಿ: ಹೌದೋ, ಇಪ್ಪಂತ್ತೆಂಟು ಕಡೆ ನೀರು ಕುಡಿದ್ರೆ ಅದೂ-ಇದೂ ಖಾಯಿಲೆ ಬರುತ್ತೆ, ಮತ್ತೆ ಇನ್ನೊಂದೆರಡು ಮೂರು ದಿನದಲ್ಲಿ ಹಿಂತಿರುಗಿ ಹೋಗೋದೂ, ಕೆಲ್ಸಾ ಮಾಡೋದೂ ಇದ್ದೇ ಇರತ್ತಲ್ಲಾ...

ಆ ಧ್ವನಿ: ಇದೊಳ್ಳೇ ಛೋಲೋ ಆತ್ ನೋಡು, ಹಂಗಿದ್ದ ಮ್ಯಾಲ ಇಲ್ಲೀ ತಂಕಾ ಯಾತಕ್ ಬರ್‍ತೀರಿ? ಇಲ್ಲೀ ನೀರು-ನಿಡಿ ಕುಡಿಯೋಂಗಿಲ್ಲ, ಇಲ್ಲಿ ದಾರಿ ತುಳಿಯೋಂಗಿಲ್ಲ, ನಮ್ಮಂಥೋರ್ ಮನ್ಯಾಗ ಒಂದು ತುತ್ತು ರೊಟ್ಟಿ ತಿನ್ನಂಗಿಲ್ಲಾ, ಧೂಳ್ ಬಂದ್ರ ಹಾರಾಡ್ತೀರಿ, ಬಿಸ್ಲ ಬಂದ್ರೆ ಏಗಾಡ್ತೀರಿ - ನೀವಾತೂ ನಿಮ್ಮ ಪ್ರಪಂಚಾತೂ ನೋಡು. ಇಷ್ಟೊಂದು ರೊಕ್ಕಾ ಖರ್ಚ್ ಮಾಡಿ ಬರೋ ಬದ್ಲಿ ಅಲ್ಲೇ ಎಲ್ಲರಾ ಇದ್ದು ಬಿಡಬೇಕಪಾ.

ಈ ಧ್ವನಿ: ಹಾಗಲ್ಲ, ಊರು ಮಂದಿ ನೋಡೋದು ಬೇಡವೇನು, ಮನೇ ಮಂದೀನೆಲ್ಲ ಮಾತಾಡ್ಸೋದು ಬೇಡೇನೂ...

ಆ ಧ್ವನಿ: ತಥ್ ನಿನ್ನ, ಸ್ವಲ್ಪ ತಡಿ. ಹಾಂಗಂದ್ರ ಇಲ್ಲೀ ಮಂದಿ ಯಾವ್ದೋ ಕಾರ್‍ಣಕ್ಕೆ ನೆಗದು ಬಿದ್ರು ಅಂತ ತಿಳಕಾ ಹಂಗಂದ್ರ ನೀನು ಇಲ್ಲಿಗ್ ಬರಂಗಿಲ್ಲ ಮತ್ತಾ? ನೀನು ಅಂತೋನು ಇಂತೋನು ಅನಕೊಂಡಿದ್ದೆ, ಇವತ್ತ್ ಗೊತ್ತಾಯ್ತು ನೋಡ್ ನಿನ್ನ ಅಸಲೀ ಬಣ್ಣ.

ಈ ಧ್ವನಿ: ಏ, ಸುಮ್ನೇ ಏನೇನೋ ಹೇಳಿ ತಲೇ ತಿನ್ನ ಬೇಡವೋ... ಮತ್ತೇ ಮನೇ ಕಡೇ ಎಲ್ಲ ಹೆಂಗಿದಾರೆ, ಗದ್ದೇಲಿ ಈ ಸಾರಿ ಏನೇನು ಹಾಕೀರಿ ಹೇಳು.

ಆ ಧ್ವನಿ: ನೀನು ಸುಮ್-ಸುಮ್ನೇ ಮಾತ್ ಬದಲಾಯ್ಸ್ ಬ್ಯಾಡಾ...ನಾವ್ ಹಳ್ಳೀ ಮಂದೀಗೆ ನಿಮ್ ಥರಾ ನಯಾ ನಾಜೂಕ್ ಒಂದೂ ಗೊತ್ತಾಗಂಗಿಲ್ಲ, ಬಾಯಿಗ್ ಬಂದಿದ್ದು ಹೇಳಿಬಿಡ್ತೀವಪ್ಪಾ, ನೀನ್ ಬೇಜಾರ್ ಮಾಡಿಕೊಳ್ಳದಿದ್ರೆ ಅಷ್ಟೇ ಸಾಕು.

ಅದಿರ್ಲಿ ನೀನು ಅದೆಷ್ಟೋ ದಿನದ ಮ್ಯಾಲ ಈ ಕಡಿ ಬಂದೀದಿ, ನಮ್ ತ್ವಾಟದ್ ಕಡಿ ಹೋಗೋಣ್ ನಡಿ, ಆ ಕೆಂದಾಳ್ ಮರದ್ದು ಒಂದೆರಡು ಎಳ್‌ನಿರಾದ್ರೂ ಕುಡ್ದು ಒಂದಿಷ್ಟು ತಗೊಂಡ್ ಹೋಗುವಂತಿ, ಏನು?


ಈ ಧ್ವನಿ: ಸರಿ, ಹಾಗೇ ಮಾಡೋಣ, ನಡಿ.

Friday, May 05, 2006

Parenthesis Phobia ಅರ್ಥಾಥ್ ಆವರಣ (ಬಳಸುವ) ರೋಗ

ಬರೆಯುವವರಿಗೆ ಗೊತ್ತು, ತುಮುಲಗಳನ್ನು ಹತೋಟಿಯಲ್ಲಿಟ್ಟುಕೊಂಡು ಅತಿವೇಗವಾಗಿ ಓಡುವ ಮನಸ್ಸನ್ನೂ, ಅಷ್ಟೇ ನಿಧಾನವಾಗಿ ಓಡುವ ಕೈ ಬೆರಳುಗಳನ್ನೂ, ಒಂದನ್ನು ಹಿಂದಿಕ್ಕಿ ಮತ್ತೊಂದು ಎಂಬಂತೆ ಮುನ್ನುಗ್ಗುತ್ತಿರುವ ಹಲವು ಆಲೋಚನೆಗಳನ್ನೂ ಹಾಗೂ ಭಾಷೆಯೆಂಬ ಮಿತಿ ಇರಬಹುದಾದ, ಬರೀ ಹಲವು ಶಬ್ದಗಳಿಗೇ ಸೀಮಿತಗೊಳ್ಳುವ ಶಬ್ದಕೋಶವನ್ನೂ ಸೇರಿಸಿ ಈ ಎಲ್ಲವನ್ನೂ ಕಲೆಹಾಕಿ ಕೊನೆಯಲ್ಲಿ ಬರಹವೊಂದು ತಯಾರಾಗುತ್ತದೆ. ಹಾಗೆಯೇ ಬರೆಯುವವರ ಮನಸ್ಥಿತಿ ಅಥವಾ ಗೊಂದಲದಲ್ಲಿ ಅದೇ ಸಮಯಕ್ಕೆ ಓದುವವನ ಮನಸ್ಥಿತಿಯೂ ಸೇರಿ ಬರೆಯಬೇಕೆನ್ನುವ ವಸ್ತು ಕಲಸು ಮೇಲೋಗರವಾಗಲಿಕ್ಕೂ ಸಾಕು. ಅಲ್ಲದೇ ಒಂದೇ ಬರಹ ಅಥವಾ ವಾಕ್ಯದಲ್ಲಿ ಹಲವಾರು ಟೋನ್‌ಗಳು ಪ್ರತಿಬಿಂಬಿತವಾಗಬಹುದು, ಹಾಸ್ಯ, ಗಂಭೀರ ಎರಡೂ ಮಿಳಿತವಾಗಿರಬಹುದು - ಅಥವಾ ಬಳಸಿದ ಒಂದೇ ವಾಕ್ಯ, ಪದಕ್ಕೆ ಹಲವಾರು context sensitive ಅರ್ಥಗಳು ಹುಟ್ಟಿಕೊಳ್ಳಬಹುದು. ಇವೆಲ್ಲಕ್ಕೂ ನಾನು ಕಂಡುಹಿಡಿದುಕೊಂಡ ಅಥವಾ ಅಳವಡಿಸಿಕೊಂಡ ಸುಲಭ ಪರಿಹಾರವೆಂದರೆ ಆವರಣಗಳ (parenthesis) ಬಳಕೆ (ಅಥವಾ ಅದು ನನಗೆ ಅಂಟಿಕೊಂಡ irrational ರೋಗ).


ನನ್ನ ಹಳೆಯ ಪೋಸ್ಟ್‌ಗಳನ್ನ ನಾನೇ ಓದಿಕೊಂಡಾಗ ನನಗೇ ಒಮ್ಮೊಮ್ಮೆ ಅತಿಯಾಗಿ ಆವರಣಗಳನ್ನು ಬಳಸಿದ್ದೇನೇನೋ ಎಂದು ಮುಜುಗರವಾಗುತ್ತದೆ. ಆಫೀಸಿನ ಕೆಲಸಕ್ಕೆ ಸಂಬಂಧಿಸಿದ ಇ-ಮೇಲ್ ಹಾಗೂ ಇನ್ಸ್ಟಂಟ್ ಮೆಸ್ಸೇಜುಗಳಲ್ಲೂ ಈ ಆವರಣಗಳ ಕಾಟ ತಪ್ಪಿದ್ದಲ್ಲ - ಎಷ್ಟೋ ಬಾರಿ ಬೇರೆ-ಬೇರೆ ಸಂದೇಶವನ್ನೋ ಅಥವಾ ಅರ್ಥವನ್ನೋ ತಿಳಿಸಲು ನಾನು ಇವುಗಳ ಮೊರೆ ಹೋಗುವುದೇ ಹೆಚ್ಚು. ಅದೇ ರೀತಿ, ನನ್ನ ಎಲ್ಲ ಬರಹಗಳಲ್ಲೂ (ಕೆಲವೊಮ್ಮೆ ಕಣ್ಣಿಗೆ ಕಾಣದ) ಆವರಣಗಳು ದುತ್ತನೇ ಎದುರಾಗಿ ನಕ್ಕು ಬಿಡುತ್ತವೆ - 'ನಾವಿಲ್ಲದೇ ನಿನ್ನ ಬರಹ ಪೂರ್ಣವಾಗದು' ಎಂದು ಹಾಸ್ಯ ಮಾಡುತ್ತವೆ.


ನಾನೇಕೆ ಬರೆಯುತ್ತೇನೆ ಅನ್ನೋದು ಮತ್ತೊಂದು ದಿನದ (ವಾರದ, ತಿಂಗಳಿನ) ಮಾತಾಗಲಿ, ನಾನು ಹೇಗೆ ಬರೆಯುತ್ತೇನೆ ಅನ್ನೋದು ಇಲ್ಲಿ ಪ್ರಸ್ತುತ. ವಿಷಯ ಗಹನವಾಗಿದ್ದರೆ ಪೇಪರ್ರು-ಪೆನ್ನೂ ಹಿಡಿಯುತ್ತೇನೆ, ಇಲ್ಲವೆಂದಾದರೆ ಬರಹ ಪ್ಯಾಡ್ ಓಪನ್ ಮಾಡಿಕೊಂಡು, ಸುಮ್ಮನೇ ನೋಟ್‌ಪ್ಯಾಡ್‌ನಲ್ಲಿ ಬರೆದುಕೊಂಡು ಹೋಗುವ ಹಾಗೆ ಕುಟ್ಟಿಕೊಂಡು ಹೋಗುತ್ತೇನೆ (ಹೌದು, ನಾನು ಇತ್ತೀಚೆಗೆ ಹೆಚ್ಚು-ಹೆಚ್ಚು ಟೈಪ್ ಮಾಡುತ್ತಿರುವುದನ್ನು ನೋಡಿದ ನಮ್ಮ ಮನೆಯವರು ನಾನು ಬರೆಯುವ ಪ್ರಕ್ರಿಯೆಗೆ 'ಕುಟ್ಟುವಿಕೆ' ಎಂದು ಹೆಸರಿಟ್ಟಿದ್ದಾರೆ) - ಈ ಕುಟ್ಟುವಿಕೆಯ ಹಿಂದಿರೋ ಒಂದೇ ಹೆದರಿಕೆಯೆಂದರೆ ಇಲ್ಲಿ ಪ್ರತಿಯೊಂದು ಭಾವವೂ ಅಕ್ಷರ-ಅಕ್ಷರವಾಗಿ ತುಂಡು-ತುಂಡಾಗಿ ಬರುತ್ತದೆ, ಯಾವುದಾದರೂ ಗಹನವಾದ ವಿಷಯ ಇದ್ದರೆ - ಸರಿಯಾಗಿ ಮೂಡುವುದೇ ಇಲ್ಲ. ಅಲ್ಲದೇ ಈ ಕುಟ್ಟುವಿಕೆಯ ವೇಗಕ್ಕೆ ನನ್ನ ಆಲೋಚನೆಯ ವೇಗವೂ ಹೊಂದಿಕೊಂಡು ಬಿಟ್ಟಿದೆಯೇನೋ ಎಂದು ಒಮ್ಮೊಮ್ಮೆ ಹೆದರಿಕೆಯಾಗುತ್ತದೆ. ಕುಟ್ಟುವಿಕೆಯ ಅನುಕೂಲವೇನೆಂದರೆ ಬರೆದಿದ್ದನ್ನು ಸುಲಭವಾಗಿ maintain ಮಾಡಬಹುದು. ಒಂದೇ ಬರಹದಲ್ಲಿ ಹಲವು ಧ್ವನಿಗಳನ್ನು ಪ್ರತಿನಿಧಿಸಲು ಫಾಂಟುಗಳ ಬದಲಾವಣೆಗೆ ಮೊರೆ ಹೋಗಬಹುದು, ಅಕ್ಷರಗಳ ಗಾತ್ರ, ರಚನೆ, ಬಣ್ಣ ಹಾಗೂ ಮೋಡಿಯನ್ನು ಬದಲಾಯಿಸುವುದರಿಂದ ಹೇಳುವ ವಿಷಯದಲ್ಲಿ ವೈವಿಧ್ಯತೆಯನ್ನು ಮೂಡಿಸಬಹುದು ಆದರೆ ಇಲ್ಲಿರುವ ಹೆದರಿಕೆಯೆಂದರೆ ಇಂತಹ ಬಳಕೆ ಎಷ್ಟು ಸಾಧ್ಯವೋ ಅಷ್ಟರ ಮಟ್ಟಿಗೆ ವಿಶ್ವಮಾನ್ಯವಾಗಿರಬೇಕು ಅಲ್ಲದೇ ಬಳಸಿದ ಸ್ಟ್ಯಾಂಡರ್ಡಿಗೇ ಕಟ್ಟಿ ಬಿದ್ದು, ಓದುಗರಿಗೆ ಒಂದು ರೀತಿಯ ಹವ್ಯಾಸ ಹುಟ್ಟಬೇಕು, ಎಲ್ಲರಿಗೂ ಹೆಚ್ಚು ಅನ್ವಯವಾಗುವಂಥ ಸ್ಟ್ಯಾಂಡರ್ಡ್ ಅಥವಾ ಶೈಲಿಯನ್ನು ಕಂಡುಹಿಡಿಕೊಂಡು ಅದನ್ನೇ ಮುಂದುವರೆಸುವ ಪರಿಪಾಠ ಸಾಮಾನ್ಯದ್ದಲ್ಲ - ಇವೆಲ್ಲದರ ಜಂಜಾಟ ಬೇಡವೆಂದೇ ನಾನು ಆವರಣಗಳ ಮೊರೆ ಹೊಕ್ಕರೆ ಮೈ ಮೇಲೆ ಬಿದ್ದು ನನ್ನನ್ನೇ ಹೆದರಿಸುತ್ತಾವೆಂದರೆ?


ಈ ಆವರಣಗಳು ನನ್ನ ಕಣ್ಣಿಗೆ ಸರ್ಕಾರಿ ಅಧಿಕಾರಿಗಳ ಬಾಗಿಲ ಬಳಿ ಇರುವ ಕಾರಕೂನರಂತೆ ಕಂಡು ಬರುತ್ತವೆ, ಇವರನ್ನು ಮೆಚ್ಚಿಸದೇ ನಾನು ಕೈಗೊಂಡ ಯಾವ ಕಾರ್ಯವೂ ಸಂಪೂರ್ಣಗೊಳ್ಳದು. ದೇವರ ನಡುವಿನ ಸಂಭಾಷಣೆಗೆ ಸಹಾಯಮಾಡುವುದರಲ್ಲಿ ಸಿದ್ಧಹಸ್ತರಾದ ಇವುಗಳು ಸಮಯದಿಂದ ಸಮಯಕ್ಕೆ ತಮ್ಮದೇ ಆದ ವ್ಯಕ್ತಿತ್ವವೊಂದನ್ನು ಬೆಳೆಸಿಕೊಳ್ಳುವುದೂ ಅಲ್ಲದೇ ಕೂತಲ್ಲೇ ಕೂತು ಕಾರಕೂನಿಕೆ ಮಾಡೀ-ಮಾಡಿ ದೊಡ್ಡ ಹೊಟ್ಟೆಯನ್ನೂ ಬೆಳೆಸಿಕೊಳ್ಳುತ್ತವೆ. ಕೊನೆಕೊನೆಗೆ ಹೇಗಾಗುತ್ತದೆ ಎಂದರೆ ನಾನು ನೋಡಲು ಹೊರಟಿರುವ ಅಧಿಕಾರಿಗಿಂತಲೂ ಅವರ ಕಾರಕೂನ ಮುಖ್ಯವಾಗಿ ಕಂಡುಬರುತ್ತಾನೆ ಅಥವಾ ಹಾಗೆ ತೋರಿಸಿಕೊಳ್ಳುತ್ತಾನೆ. ಈ ಅರ್ಥದಲ್ಲಿಯೇ ನಾನು ಹಲವಾರು ಆವರಣಗಳನ್ನು ನಂಬಿಕೊಂಡಿರುವುದು - ನಂಬಿಕೆಟ್ಟವರಿಲ್ಲವೋ ಎಂದು ನನ್ನನ್ನು ಯಾವತ್ತೂ ಅವುಗಳು ಕೈ ಬಿಟ್ಟಿದ್ದಿಲ್ಲ. ಆವರಣಗಳಲ್ಲಿ ಹಲವಾರು ಬಗೆ ಇದ್ದು ( (), {}, [] ), ಕೊನೆಗೆ ನಾನು ಮೈನಸ್ ಅಥವಾ ಹೈಫನ್ ಎಂದು ಹಾಕಿಕೊಳ್ಳುತ್ತಿದ್ದ - ಒಂದು ಸಣ್ಣ ಗೆರೆಯೂ ರೇಖಾವರಣವಾಗಿ ಹೆದರಿಸಲು ಶುರುಮಾಡಿದೆ! ಈ ಹೆದರಿಕೆಯನ್ನೇ ನಾನು phobia ಎಂದಿದ್ದು, ಇದು ಒಂದು ರೀತಿಯ irrational ಹೆದರಿಕೆ, ಮನುಷ್ಯ ಸಂಬಂಧಿ (ಅಥವಾ ನನಗೆ ಗೊತ್ತಿರುವ) ಯಾವ ಮೌಲ್ಯಗಳಿಂದಲೂ ಅಳೆಯಲಾಗದಷ್ಟರ ಮಟ್ಟಿಗೆ ನನ್ನೊಳಗೊಂದಾಗಿದೆ.


'ದೇವರ ಭಯವೇ ಜ್ಞಾನದ ಆರಂಭ' ಎಂದು ಎಲ್ಲೋ ಓದಿದ್ದ ನೆನಪು, ಅದನ್ನು ಬದಲಾಯಿಸಿ 'ಆವರಣಗಳ ಭಯವೇ ಬರಹದ ಆರಂಭ' ಎಂದು ಬರೆದರೆ ಹೇಗೆ? ಮೊದಲೆಲ್ಲ ಸಂಭಾಷಣೆಗಳು ಮುಕ್ತವಾಗಿ ಹರಿದು ಹೇಳಬೇಕಾದ್ದನ್ನು ಹೇಳುವ ಅಗತ್ಯವಿತ್ತು ಆದರೆ ಈಗ ಆ ಸ್ಥಳವನ್ನು ಆವರಣಗಳು ಆಕ್ರಮಿಸಿಕೊಂಡಿವೆಯೆಂದರೆ ಅತಿಶಯೋಕ್ತಿಯಾಗುವುದೇ? ಸಂಭಾಷಣೆಗಳನ್ನು ಹೇಳಿಸಲು ಪಾತ್ರವನ್ನು ಸೃಷ್ಟಿ ಮಾಡಬೇಕಾಗುತ್ತದೆ, ಆದರೆ ಥರಾವರಿ ಆವರಣಗಳ ಸೃಷ್ಟಿಗೆ ಯಾವ ಜೀವದ ಹಂಗೂ ಬೇಕಿಲ್ಲ. ಆದರೆ... ಮೊದಮೊದಲು ವಾಕ್ಯದ ವಿಸ್ತಾರ ರೂಪವನ್ನು ತಾಳುತ್ತಿದ್ದ ಈ ಆವರಣಗಳು ಈಗೀಗ ತಮ್ಮಷ್ಟಕ್ಕೇ ತಾವೇ ಗೋಡೆಗಳಾಗಿಕೊಂಡು ತಮ್ಮೊಳಗಿನ ಅದೇನೋ ಅರ್ಥವನ್ನು ಓದುಗ ಕಂಡುಕೊಳ್ಳಲಿ ಎಂದು ಹಪಹಪಿಸುವ ವ್ಯಸ್ತ ಮನಸ್ಸಿನ ಏಕಾಂತವಾಸಿಗಳಾಗಿ ಕಂಡು ಬರುತ್ತಿವೆ, ಅಲ್ಲಲ್ಲ, 'ಕಂಸ, ಪುಷ್ಪ, ಚೌಕ, ಹಾಗೂ ರೇಖಾ'ವರಣಗಳೆಂದು ಹೆಸರಿಟ್ಟುಕೊಂಡ, ನನ್ನ ಸಹಪಾಠಿಗಳಂತೆ ನನ್ನ ಈ ಪ್ರಯಾಣದಲ್ಲಿ ಕೆಲಕಾಲವಾದರೂ ಜೊತೆಗಾರರಂತೆ ಮುಂದುವರೆಯುವ ಲಕ್ಷಣಗಳು ತೋರುತ್ತಿವೆ, ಅಲ್ಲಲ್ಲ, ಚದುರಂಗದ ಪಟ್ಟೆಯ ಮೇಲೆ ಯಾವುದೋ ಯುದ್ಧಕ್ಕೆ ಸನ್ನದ್ದರಾದಂತೆ ಕಂಡು ಬರುವ ಹಲವು ರೀತಿಯ ಕಾಯಿಗಳಾಗಿ ಕಂಡುಬರುತ್ತಿವೆ, ಎಂದರೆ ಸರಿ. ಆದರೆ ಒಂದಂತೂ ಗ್ಯಾರಂಟಿ, ಈ ಅಯೋಗ್ಯ ಹೆದರಿಕೆಯ ಹಿಂದೆ ಯಾವ ಕಾರಣಗಳೂ ಇಲ್ಲ, ಈ ಮಾತುಗಳನ್ನು ಬರೆಯುತ್ತಿದ್ದಂತೇ ಆವರಣಗಳು (ಇನ್ನೂ ಹತ್ತಿರ ಬಂದು) ನನ್ನ ಸ್ನೇಹಿತರಾಗತೊಡಗುತ್ತವೆ!


ಇಂದಿನ ಇನ್ಸ್ಟಂಟ್ ಮೆಸ್ಸೇಜುಗಳ ಯುಗದಲ್ಲಿ ನಗುವುದಕ್ಕೂ, ಅಳುವುದಕ್ಕೂ ಹಾಗೂ ಇತರ ಅದೆಷ್ಟೋ ಭಾವನೆಗಳನ್ನು ಬರೆಯಲು ಆವರಣಗಳನ್ನು ಬಳಸುವಂತೆ ಮೊದಲು ಶುರು ಮಾಡಿದ್ದು ನಾನಂತೂ ಅಲ್ಲ.

Thursday, May 04, 2006

ಬನಿಯನ್ ಚಹಾದ ಮಹಿಮೆ

ಭಾರತದಲ್ಲಿ ನಮ್ಮ ಸಂಬಂಧಿಕರ ಮನೆಗಳಿಗೆ ಹೋದಾಗ 'ಕುಡೀಲಿಕ್ಕೆ ಏನಾದ್ರೂ ತಗೋತೀರಾ?' ಅನ್ನೋ ಪ್ರಶ್ನೆಗೆ (ಕೆಲವೊಮ್ಮೆ ತಮಾಷೆಗೆ) 'ಒಂದು ಬನಿಯನ್ ಟೀ ಬರ್‍ಲಿ!' ಎನ್ನುತ್ತೇನೆ, ಅಗ ಅವರ ಮುಖದ ಮೇಲೆ ಈವರೆಗೆ ಎಲ್ಲೂ ಕಾಣದ ಒಂದು ನೋಟ ಬರುತ್ತೆ, ಅದು ಬಹಳ ವಿಶೇಷವಾಗಿರುತ್ತೆ, ಏಕೆ ಅಂದ್ರೆ 'ನಮಗೆ ಗೊತ್ತಿಲ್ಲದಿರುವುದೇನೋ ಇವನಿಗೆ ತಿಳಿದಿದೆ...' ಅನ್ನೋ ಭಲವಾದ ನಂಬಿಕೆ ಇದೆಯಲ್ಲಾ ಅದನ್ನು ನಾನೇನು ಕೇಳಿ ಪಡೆಯಲಿಲ್ಲ.

***

ಬ್ರೂಕ್ ಬಾಂಡ್ ಚಹಾದ ಟಿವಿ ಕಮರ್ಷಿಯಲ್ ನೋಡಿದವರಿಗೆ ಚೆನ್ನಾಗಿ ಗೊತ್ತು - ಒಬ್ಬ ಪೋಲೀಸ್ ಇನ್ಸ್‌ಪೆಕ್ಟರ್ ಯಾವುದೋ ಒಂದು ಹೊಡೆದಾಟದಲ್ಲಿ ತೊಡಗಿ ಅದೇ ತಾನೆ ರೌಡಿಗಳನ್ನು ಸೆದೆ ಬಡಿದಿರುತ್ತಾನೆ, ಆ ಸಮಯಕ್ಕೆ ಒಬ್ಬ ಪುಟ್ಟ ಹುಡುಗನೊಬ್ಬ ಟೀ ಟ್ರೇ ನಲ್ಲಿ ಬಿಸಿಬಿಸಿಯಾದ ಚಹಾದ ಗ್ಲಾಸೊಂದನ್ನು ನೀಡುತ್ತಾನೆ, ಚಹಾದ ಅಹ್ಲಾದವನ್ನು ಆಸ್ವಾದಿಸಿದ ಇನ್ಸ್‌ಪೆಕ್ಟರ್ ಆ ಹುಡುಗನ ತಲೆಯ ಮೇಲೆ ತನ್ನ ಟೋಪಿಯನ್ನು ತೆಗೆದಿಟ್ಟು ಮುಗುಳ್ ನಗುತ್ತಾನೆ. ಇದರಲ್ಲಿ ಎರಡು ವಿಷಯಗಳನ್ನು ನಾನು ಗಮನಿಸುತ್ತೇನೆ: ಮೊದಲನೆಯದಾಗಿ, ಬಾಲ ಕಾರ್ಮಿಕರನ್ನು ಇಟ್ಟುಕೊಳ್ಳುವುದು ಕಾನೂನು ಪ್ರಕಾರ ಅಪರಾಧ, ಅಂಥಾದ್ದರಲ್ಲಿ ದೇಶದಾದ್ಯಂತ ಭಿತ್ತರಿಸೋ ಆ ಕಮರ್ಷಿಯಲ್ ಹೇಗೆ ಸೆನ್ಸಾರ್ ಮಂಡಳಿಯ ಅನುಮತಿಯನ್ನು ಪಡೆಯಿತು? ಎರಡನೆಯದಾಗಿ, ವಿಶ್ವದ ಬೇರೆಲ್ಲೂ ಕಾಣದ (ನನ್ನ ಅನುಮಾನ/ಅನಿಸಿಕೆ, ಫ಼್ಯಾಕ್ಟ್ ಅಲ್ಲದಿರಬಹುದು) ಭಾರತದಲ್ಲಿ ಗ್ಲಾಸ್‌ನಲ್ಲಿ ಚಹಾ ಕುಡಿದು ಅನುಭವಿಸುವ ಸುಖ - ಇದಕ್ಕೆ ಪೂರಕವೆಂಬಂತೆ ನಮ್ಮ ಮನೆಯಲ್ಲಿ ಆ ರೀತಿಯ ಎರಡು ಗ್ಲಾಸ್‌ಗಳಿವೆ, ನಮ್ಮ ಮನೆಗೆ ಭಾರತದಿಂದ ಬಂದ ಅತಿಥಿಯೊಬ್ಬರು, ಎಷ್ಟೇ ಒಳ್ಳೇ ಚೈನಾ ಇದ್ದರೂ, ಬೀಕರ್ ಇದ್ದರೂ ಅವುಗಳಲ್ಲಿ ಚಹಾ ಕುಡಿಯದೇ ಈ ಗ್ಲಾಸ್‌ಗೇ ಮೊರೆ ಹೋಗೋದು. ನಾನು ಯಾವಾಗಲೂ ಕಪ್ಪು-ಬಸಿಯಲ್ಲಿ ಚಹಾ ಕುಡಿಯುತ್ತೇನೆ, ಹಾಗು ಉಳಿದವರಿಗೂ ಹಾಗೇ ಮಾಡಿ ಅನ್ನುತ್ತೇನೆ - ಅವರು ಶಿಸ್ತನ್ನು ಕಲಿಯುತ್ತಾರೋ ಬಿಡುತ್ತಾರೋ, ಪ್ರತೀವಾರ ನಾನು ಸ್ವಚ್ಛಗೊಳಿಸಬೇಕಾಗಿರೋ ಓಟ್‌ಮೀಲ್ ಬಣ್ಣದ ಕಾರ್ಪೇಟ್ (ಅದ್ಯಾವ ಜನ್ಮದಲ್ಲಿ ಶತ್ರುವಾಗಿತ್ತೋ ಯಾರಿಗೆ ಗೊತ್ತು) ಮೇಲೆ ಚಹಾದ ಹನಿಗಳೇನಾದರೂ ಬಿದ್ದು ನಾನೆಲ್ಲಿ ಆ ಕಲೆಯನ್ನು ಹೋಗಲಾಡಿಸುವ ಭಗೀರಥ ಪ್ರಯತ್ನವನ್ನು ಹಮ್ಮಿಕೊಳ್ಳಬೇಕಾಗುವುದೋ ಎಂಬ ಸಂಕಷ್ಟದಿಂದ. ಈ ಸ್ವಚ್ಛತೆಯ ಪರಿಕಲ್ಪನೆ ಒಂದು ರೀತಿಯ ಭೂತವಿದ್ದಂತೆ, ಅದು ನನ್ನನ್ನು ಯಾವಾಗಲೋ ಮೆಟ್ಟಿಕೊಂಡಿದೆ, ಇನ್ನೇನು ಕೆಲವೇ ವರ್ಷಗಳಲ್ಲಿ ನಾನು Keeping Up Appearances ನ Hyacinth Bucket (ಬೂಕೇ) ಆಗುತ್ತೇನೋ ಅನ್ನೋ ಹೆದರಿಕೆಯೂ ಇಲ್ಲದಿಲ್ಲ. ನಮ್ಮ ಮನೆಗೆ ಬಂದೋರು ನಾನು 'ಸಾಸರ್'ಗೆ 'ಬಸಿ' ಅನ್ನೋದನ್ನ ಕಂಡು ನನ್ನನ್ನ ಯಾವುದೋ ಶಿಲಾಯುಗದ ಮಾನವನೆಂಬಂತೆ ಒಮ್ಮೆ ನೋಡುತ್ತಾರೆ, ಆದರೆ ನಮ್ಮ ಮನೆಯ ನೀರು ಕುಡಿದ ಕೆಲವೇ ದಿನಗಳಲ್ಲಿ ಅವರೂ ಸಹ 'ಬಸಿ' ಎನ್ನುತ್ತಾರೆ ಅನ್ನೋದು ನನ್ನ ಕೆಲವೇ ಕೆಲವು ಸಫಲತೆಗಳಲ್ಲೊಂದು. ಆದರೂ, ನನ್ನ ಅತಿಥಿಗಳು ಎಷ್ಟೋ ಸಾರಿ ಅಡಿಗೆಮನೆಯಲ್ಲಿ ನಿಂತುಕೊಂಡು ಆ ಗ್ಲಾಸ್‌ನಲ್ಲೇ 'ಸೊರ ಸೊರ' ಚಹಾ ಹೀರುವುದನ್ನು ನೋಡಿದರೂ ನೋಡದಂತಿರುತ್ತೇನೆ, ಗ್ಲಾಸ್‌ನಲ್ಲಿ ಚಹಾವನ್ನು ಅಹ್ಲಾದಿಸುವ ಸುಖ ಬೇರೆಯೇ ಇರಬಹುದು, ಅದಕ್ಕೇಕೆ ನಾನು ಅಡ್ಡಬರಲಿ.

***

ನಾನು ಮದ್ರಾಸ್‌ನಲ್ಲಿ ನಗರದ ಹೊರವಲಯದಿಂದ ಹೊರಗೆ ಇರುವ ಸಾಫ್ಟ್‌ವೇರ್ ಡೆವಲಪ್‌ಮೆಂಟ್ ಕಂಪನಿಯೊಂದರಲ್ಲಿ ಕೆಲಸ ಮಾಡುವಾಗ ಕಂಪನಿಯ ವ್ಯವಹಾರಕ್ಕೆ ಸಂಬಂಧಿಸಿದಂತೆ, ಹೆಚ್ಚಿನ ಬಾರಿ ವೈಯಕ್ತಿಕ ಕೆಲಸಗಳಿಗೋಸ್ಕರ ಆಗಾಗ್ಗೆ ಮದ್ರಾಸ್ ನಗರಕ್ಕೆ ಬಂದು ಹೋಗುತ್ತಿದ್ದೆ. ಕೆಲವೊಮ್ಮೆ ಮುಂಜಾನೆ ಬೇಗ ಹೊರಟು, ಕೆಲವೊಮ್ಮೆ ಮಧ್ಯಾಹ್ನವೇ ಹೋಗಿ ಮಾಡುವ ಕೆಲಸಗಳನ್ನು ಮುಗಿಸಿಕೊಂಡು ಬಂದಿದ್ದಿದೆ. ಇಂತಹ ಪ್ರಯಾಣಗಳಿಗೆಲ್ಲ ಕಂಪನಿಯ ಷಟಲ್ ಬಳಕೆಯಾಗುತ್ತಿತ್ತು. ಎರಡೋ ಮೂರೋ ಇದ್ದ ಷಟಲ್ ಬಸ್ಸುಗಳ ಡ್ರೈವರ್‌ಗಳ ಪರಿಚಯವೂ ತಕ್ಕ ಮಟ್ಟಿಗೆ ಆಗುತ್ತಿತ್ತು. ನನಗೆ ಅವರ ಭಾಷೆ ಅರ್ಥವಾಗದಿದ್ದರೂ ಒಂದು ಮಾತಂತೂ ನಿಜ - ದಾರಿಯಲ್ಲಿ ಸಿಗುವ ರಸ್ತೆ ಪಕ್ಕದ ಚಹಾ ಅಂಗಡಿಯಲ್ಲಿ ಒಂದು ಚಹಾ ಕುಡಿಯೋಣವೆಂದು ಆ ಡ್ರೈವರುಗಳೆಲ್ಲರೂ ಹಿಂದೆ ಯಾವುದೋ ಅಗ್ರಿಮೆಂಟಿಗೆ ಸಹಿ ಮಾಡಿದವರ ಹಾಗೆ ನಿರ್ಧಿಷ್ಟ ಪ್ರದೇಶವೊಂದರಲ್ಲಿ ವಾಹನವನ್ನು ನಿಲ್ಲಿಸುತ್ತಿದ್ದರು. ಎಷ್ಟೋ ಸಾರಿ ಇಂತಹ ಷಟಲ್‌ಗಳಲ್ಲಿ ಡೈವರ್ ಜೊತೆಗೆ ನಾನೊಬ್ಬನೇ ಪ್ರಯಾಣ ಮಾಡಿದ್ದಿದೆ. ವಿಶೇಷವೆಂದರೆ - ನನಗೆ ಅವರ ಭಾಷೆ ಬರೋದಿಲ್ಲವೆಂದು ಗೊತ್ತಿದ್ದರೂ ಅವರು - ಬೇರೆ ಭಾಷೆಯನ್ನು ಮಾತನಾಡುವ ಯಾವುದೇ ಪ್ರಯತ್ನವನ್ನೇ ಮಾಡದೇ ಹಟ ತೊಟ್ಟವರಂತೆ ಸಂಪೂರ್ಣವಾಗಿ ತಮಿಳಿನಲ್ಲೇ 'ಸಾರ್, ಇಲ್ಲಿ ಚಹಾ ಕುಡಿಯೋಣವೇ, ಬಹಳ ಸೊಗಸಾಗಿರುತ್ತೆ!' ಎಂದು ಹೇಳುತ್ತಿದ್ದರು, ನಾನು ಮತ್ತೇನನ್ನು ಮಾತನಾಡಲು ಗೊತ್ತಾಗದೇ - ಎರಡೋ, ನಾಲ್ಕೋ ರೂಪಾಯಿ ಹೋದರೆ ಹೋಗಲಿ ಎಂದುಕೊಂಡು 'ಓಕೆ' ಎನ್ನುತ್ತಿದ್ದೆ. ಇದೇ ದೃಶ್ಯ ನಮ್ಮ ಕರ್ನಾಟಕದಲ್ಲಿ ನಡೆದಿದ್ದರೆ ಇಂತಹ ಷಟಲ್ ಬಸ್ಸಿನ ಡ್ರೈವರುಗಳು ಒಂದೇ ಇಂಗ್ಲೀಷ್‌ನಲ್ಲೋ, ಹಿಂದಿಯಲ್ಲೋ ಅವರ ಭಾಷೆ ಬರದ ನನ್ನಂಥವರನ್ನು ಕೇಳುತ್ತಿದ್ದರು, ಇನ್ನೂ ವರ್ಸ್ಟ್ ಎಂದರೆ ಆ ಡ್ರೈವರುಗಳು ಪ್ಯಾಸೆಂಜರಿನ ಭಾಷೆಯಲ್ಲೇ ಮಾತನಾಡುವುದನ್ನೂ ನೋಡಿದರೂ ನನಗೆ ಆಶ್ಚರ್ಯವಾಗೋಲ್ಲ - ಭಾಷೆಯ ಬಳಕೆ, ಬದುಕು ಹಾಗೂ ಬೆಳವಣಿಗೆಯ ಬಗ್ಗೆ ಯೋಚಿಸಿದ್ದಕ್ಕೆ ಹೀಗೆ ಹೇಳಬೇಕಾಯಿತು. ಇನ್ನು ಚಹಾದ ವಿಷಯಕ್ಕೆ ಬರುತ್ತೇನೆ.

ನೆನಪಿರಲಿ ನಮ್ಮ ಷಟಲ್ ಡ್ರೈವರ್ 'ಇದೇ ಬೆಸ್ಟ್ ಚಹಾ' (the best ಅನ್ನೋ ಅರ್ಥದಲ್ಲಿ) ಹೇಳಿದನೆಂದೆನಲ್ಲವೇ? ಹೌದು, ಎಲ್ಲರೂ ಅವರವರ ಮೂಗಿನ ನೇರಕ್ಕೇ ಯೋಚಿಸೋ ಹಾಗೆ, ನನ್ನ ಅಣ್ಣನನ್ನು ನೀವು ಫೋನ್ ಮಾಡಿ 'ಇಲ್ಲಿ ಒಳ್ಳೇ ಇಡ್ಲಿ ಎಲ್ಲಿ ಸಿಗುತ್ತೇ' ಎಂದು ಕೇಳಿದಿರಾದರೆ '(ನಮ್ಮೂರಿನ) ಕೃಷ್ಣ ಭಟ್ಟರ ಹೋಟ್ಲಿನ ಇಡ್ಲಿ, ಪ್ರಪಂಚದಲ್ಲೇ ಬೆಸ್ಟ್!' ಅನ್ನೋ ಉತ್ತರ ಬರುತ್ತೆ. ಅವನ ಪ್ರಪಂಚದ ವ್ಯಾಪ್ತಿಯನ್ನು ನೀವು ಅರ್ಥ ಮಾಡಿಕೊಂಡರೆ ಎಲ್ಲವೂ ಸುಲಭ, ಒಂದು ರೀತಿ ನಮ್ಮ ಹಳ್ಳಿಯಲ್ಲಿ ನಡೆಯೋ 'ವಿಶ್ವ' ಕನ್ನಡ ಸಮ್ಮೇಳನವೋ, ಅಥವಾ 'ವಿಶ್ವ' ವೀರಶೈವ ಸಮ್ಮೇಳನವೋ ಇದ್ದ ಹಾಗೆ, ಅವರವರ ವಿಶ್ವದ ವ್ಯಾಪ್ತಿ ಅವರವರಿಗೆ, let us leave it there.

ಹೀಗೆ ಕೇಳಂಬಾಕ್ಕಂ‌ನ ರಸ್ತೆ ಬದಿಯ 'ಟೀ ಶಾಪ್' ಅನ್ನುವ ಅಂಗಡಿಯಲ್ಲಿ ನನಗೆ ಯಾವಾಗಲೋ ವಿಶ್ವರೂಪ ದರ್ಶನವಾಗಿದೆ. ಬೆಳ್ಳಂ ಬೆಳಗ್ಗೆ, ಹಣೆಯ ಮೇಲೆ ಬೆವರು ಹನಿ ಕಟ್ಟಲು ಶುರು ಮಾಡಿದ, ಮೈ ಮೇಲೆ ಬಟ್ಟೆ ಇಲ್ಲದ, ಅಲ್ಲಲ್ಲಿ ಬಿಳಿ, ಕಪ್ಪು ರೋಮದಿಂದ ಅಲಂಕೃತವಾದ ಎದೆಯ ಕೆಳಗೆ ಎಂಟು ತಿಂಗಳ ಬಸುರಿ ಹೆಂಗಸಿನ ಹೊಟ್ಟೆ, ಓನರ್ ಕಮ್ ಸರ್ವರ್ ಕಮ್ ಕ್ಲೀನರ್ ಅನ್ನುವ ಮಾನವಾಕೃತಿಗೆ ಅಂಟಿಕೊಂಡಿರುತ್ತದೆ. ನಾನು ನಮ್ಮ ಡ್ರೈವರ್ ಇಳಿದು ಹೋಗುತ್ತಲೇ 'ಎಷ್ಟು ಜನ ಸಾರ್' ಅನ್ನೋ ಪ್ರಶ್ನೆ ಬರುತ್ತೆ, ನಾವು 'ಇಬ್ಬರೇ' ಅನ್ನುತ್ತೇವೆ. ಎದುರು ಅದ್ಯಾವ ಮರದಿಂದ ಮಾಡಿದುದೋ ಏನೋ ಕಪ್ಪು ಕೊಳೆಹಿಡಿದ ಟೇಬಲ್ ಒಂದರ ಮೇಲೆ ಯಾವುದೋ ವಿಷಯದ ಮೇಲೆ ಯಾವಾಗಲೂ ಕೋಪ ಮಾಡಿಕೊಂಡಂತೆ 'ಬುರ್‍ರ್‍' ಎನ್ನುವ ಬದಿಯಲ್ಲಿ ಟ್ಯಾಂಕ್ ಇರುವ ಸೀಮೆಣ್ಣೆ ಸ್ಟೋವ್, ಅದರ ಮೇಲೆ ತೊಳೆದು ಯಾವುದೋ ಕಾಲವಾಗಿ, ತನ್ನ ಹೊರ ಮೈಯ ಬಣ್ಣವನ್ನು ಅಂಗಡಿಯವನಿಗೇ ಮಾರಿಕೊಂಡ ಪೇಚಿನ ಮುಖದ ಉದ್ದನೇ ಹಿಡಿಕೆ ಇರುವ ಒಂದು ಅಲ್ಯುಮಿನಮ್ ಪಾತ್ರೆ ಸುಡುತ್ತಿದ್ದೇನಲ್ಲಾ ಅನ್ನೋ ಚಿಂತೆಯ ಗೆರೆಗಳನ್ನ ತನ್ನ ಮಡಿಲ್ಲಲ್ಲಿ ಅಡಗಿಸಿಕೊಂಡಿರೋ ಚಹಾ ಎನ್ನುವ ದ್ರಾವಕದ ಮೋರೆಯ ಮೇಲೆ ತೋರಿಸಲು ಪ್ರಯತ್ನಿಸತೊಡಗುತ್ತೆ, 'ಯಾರದೋ ಉರಿಗೆ ಯಾರಿಗೆ ಶಿಕ್ಷೆ' ಅನ್ನೋ ಹಾಗೆ ಒಳಗಿನ ಚಹಾ ಕುದ್ದು ಇನ್ನೆನು ಮೇಲೆ ಬರುತ್ತಿದ್ದಂತೆ ಅದರ ಹಿಂದೆ ಆಗಾಗ್ಗೆ ಕೈ ಆಡಿಸುತ್ತಿದ್ದ ಮಾಲೀಕ ಉರಿಯುವ ಸ್ಟೋವ್‌ಗೆ ಯಾವ ಗೌರವವನ್ನೂ ಕೊಡದೆ ಪಾತ್ರೆಯಲ್ಲಿನ ಚಹಾವನ್ನು ಗಾಳಿಸತೊಡಗುತ್ತಾನೆ - ಇಲ್ಲೇ ಇರೋದು ಬನಿಯನ್ ಚಹಾದ ವಿಶೇಷ!

ಕೊತಕೊತನೆ ಕುದ್ದ ಚಹಾ ಮಾಲಿಕನ ಕೈಯಲ್ಲಿನ ಎರಡು ಪಾತ್ರೆಗಳಲ್ಲಿ ಒಂದು ಕೈಯಲ್ಲಿ ಅವನ ತಲೆಯಿಂದ ಎರಡು ಆಡಿ ಮೇಲಕ್ಕೆ ಹೋಗಿ, ಮತ್ತೊಂದು ಕೈಯಲ್ಲಿ ಅವನ ಮೊಳಕಾಲು ಮಂಡಿಯವರೆಗೆ 'ಬೆಂಕಿಯಲ್ಲಿ ಬೆರೆಯದಿದ್ದದ್ದು, ಗಾಳಿಯಲ್ಲಿ ಬೆರೆತಂತೆ' ಸುರ್‍ರ್‍ ಎಂದು ಸದ್ದು ಮಾಡುತ್ತಾ ಪಾತ್ರೆಯಿಂದ ಪಾತ್ರೆಗೆ ಎರಡು ಮೂರು ಬಾರಿ ಕೈ-ಕೈ ಬದಲಾಗುತ್ತದೆ - ಈ ಮಧ್ಯೆ ಅರ್ಧ ಕ್ಷಣಗಳ ಕಾಲ ಗಾಳಿಯಲ್ಲಿ ಕಾಣುವ ಮೂರ್ನಾಲ್ಕು ಆಡಿ ಎತ್ತರದ ಧಾರೆ 'ಗಂಗಾವತರಣ'ವನ್ನು ನೆನಪಿಗೆ ತರುತ್ತದೆ. ಮಾಲೀಕನ ತೃಪ್ತಿಗೆ ಚಹಾ ಬೆರೆತಿದೆ ಎಂದು ಅನ್ನಿಸಿದ ತಕ್ಷಣ ಮಾಲೀಕ ಟೇಬಲ್ ಮೇಲೆ ಎಲ್ಲೋ ಇದ್ದ, ಒಂದು ಕಾಲದಲ್ಲಿ ಯಾವತ್ತೋ ಬಿಳಿಯಾಗಿದ್ದು-ಇಂದು ಸಂಪೂರ್ಣವಾಗಿ ಚಹಾದ ಬಣ್ಣವನ್ನೇ ಹೋಲುವ ಬಟ್ಟೆಯಲ್ಲಿ ಚಹಾವನ್ನು ಸೋಸತೊಡಗುತ್ತಾನೆ, ನಾನು ಅಂದುಕೊಂಡ ಮಟ್ಟಿಗೆ ಅದು ಪಾಣಿ ಪಂಚೆಯೋ, ಅಥವಾ ಮತ್ಯಾವುದೂ ಅಲ್ಲ, ಅದು ಈ ಹಿಂದೆ ಉಪಯೋಗಿಸಿ ಬಿಟ್ಟ ಹಳೆಯ ಬನಿಯನ್ ಎಂದು (ವಾಷ್ ಮಾಡಿದ್ದಿರಬಹುದು, ಅದು ಬೇರೆ ವಿಷಯ). ನನ್ನ ಪ್ರಕಾರ, ಆ ಚಹಾಗೆ ಈ ಡ್ರೈವರುಗಳು ಅನುಭವಿಸುವ ಆ ವಿಶೇಷ ಸ್ವಾದ ಬರೋದು ಈ ಹಂತದಲ್ಲಿಯೇ ಎಂದು ಕಾಣುತ್ತೆ! ಅಲ್ಲದೇ ಬನಿಯನ್‌ನ ಯಾವ ಭಾಗದಿಂದ ಚಹಾ ಸೋಸಿಬಂದರೆ ಯಾವ ಸ್ವಾದ ಹೆಚ್ಚಾಗಬಹುದೂ ಎಂದು ಯೋಚಿಸಿದ್ದೇನೆ - ಉದಾಹರಣೆಗೆ ಎಷ್ಟು ಸೋಪು ಹಾಕಿ ತಿಕ್ಕಿ ತೊಳೆದರೂ ಹೋಗದ ಬನಿಯನ್‌ನ ಕಂಕುಳಿನ ಕೆಳಗಿನ ಭಾಗದಿಂದ ಚಹಾ ಸೋಸಿ ಬಂತೆಂದು ಅಂದುಕೊಳ್ಳಿ, ಅದರ ಸ್ವಾದ ಹೇಗಿರಬಹುದು ನೀವೆ ಊಹಿಸಿ. ಈ ರೀತಿ ವಿಶೇಷ ಸ್ವಾದ ಇರದೇ ಹೋದರೆ ರಿಪೀಟ್ ಕಸ್ಟಮರ್‌ಗಳಾಗಿ ಆ ಶಟಲ್ ಡ್ರೈವರ್‌ಗಳು ಕಂಪನಿಯ ಕ್ಯಾಂಟೀನ್‌ನಲ್ಲಿ ಸ್ವಲ್ಪ ಹೊತ್ತಿನ ಮುಂಚೆ ಚಹಾ ಕುಡಿದಿದ್ದರೂ ಮತ್ತೇಕೆ ಪ್ರಯಾಣದ ನಡುವೆ ನಿಲ್ಲಿಸಿ ಇಲ್ಲಿಗೇಕೆ ಬರುತ್ತಿದ್ದರು? ಆದರೆ ಒಂದು ವಿಷಯವಂತೂ ನಿಜ, ಈ ಮೇಲಿನ ಚಹಾದಲ್ಲಿ ನಿಮಗೆ ಬೇಕಾದ ಸ್ವಾದ, ಸತ್ವ ಇವುಗಳು ಯಥೇಚ್ಚವಾಗಿ ಸಿಗುವುದೂ ಅಲ್ಲದೇ, ಅಮೇರಿಕದಿಂದ 'ಜೀವ ನಿರೋಧಕ'ಗಳ ಕೊರತೆಯಲ್ಲಿ ಹೋಗುವ ನಿಮಗೆ ಒಂದು ಡೋಸ್ ವ್ಯಾಕ್ಸೀನ್ ಆಗಿಯೂ ದೊರೆಯಬಲ್ಲದು.

***

ನಮ್ಮ ಮನೆಯಲ್ಲಿ ನನ್ನ ಅಕ್ಕ ಅಥವಾ ತಂಗಿಗೆ 'ಏ ಒಂದ್ ಬನೀನ್ ಟೀ ಮಾಡೇ' ಅಂದಾಗೆಲ್ಲ ಅವರೆಲ್ಲರಿಗೂ ನಾನು ಏನು ಕೇಳುತ್ತೇನೆಂದು ಗೊತ್ತು, ಅವರು ಒಮ್ಮೆ ನಗುತ್ತಾರೆ, ಆದರೆ ನನ್ನ ಅಮ್ಮ ಇದ್ದಲ್ಲಿ ಇಂಥ ಮಾತುಗಳನ್ನು ಆಡಿದರೆ ಬೈಸಿಕೊಳ್ಳೋದು ಗ್ಯಾರಂಟಿ.

Wednesday, May 03, 2006

ಅತಿ ಸೂಕ್ಷ್ಮ'ವಾದ'ವನ ಹೀಗೊಂದು ಅಳಲು

ನೀವು ದೊಡ್ಡ ಮನುಷ್ಯರು ಮಾತನಾಡಿದಾಗಲೆಲ್ಲ 'sensitivity', 'sensible' ಅನ್ನೋ ಪದವನ್ನು ಕೇಳಿರಬೇಕಲ್ಲವೇ? ಒಂದು ಪದ್ಯ ಅಥವಾ ಕಥೆಯನ್ನ ಬರೆಯಲಿಕ್ಕೆ ಅಥವಾ ಒಂದು ಸನ್ನಿವೇಶವನ್ನ ಹಲವು ಮಗ್ಗುಲಲ್ಲಿ ಗಮನಿಸಿ, ಪರಿಗಣಿಸಿ ಆಯಾ ಪಾತ್ರಗಳ ಮುಖಾಂತರ ಯಥಾವತ್ತಾಗಿ ನಿರೂಪಿಸಬೇಕಾದಲ್ಲೆಲ್ಲ, ನಿಮ್ಮ ಮಿದುಳಿನ (ಅದ್ಯಾವುದೋ ಭಾಗದಲ್ಲಿರುವ) ಈ ಅತಿ ಸೂಕ್ಶ್ಮತೆ ಕೆಲಸ ಮಾಡಲೇ ಬೇಕಾಗುತ್ತದೆ. ನನ್ನ ಪ್ರಕಾರ, ಈ ಸೂಕ್ಷ್ಮ ಮತಿಯ ಹಲವು ಮುಖಗಳಾಗಿ ಸಂವೇದನೆ, ಆತ್ಮ ನಿವೇದನೆ, ಕೀಳರಿಮೆ, ಹೆಚ್ಚುಗಾರಿಕೆ, ವ್ಯಕ್ತಿ ಅಥವಾ ಮಾತುಗಳ ಹಿಂದಿನ ಮೌಲ್ಯವನ್ನು ಗ್ರಹಿಸುವ ಜಾಣತನ ಅಥವಾ ಅಂಥ 'ಕ್ಷುಲ್ಲಕ' ವಿಷಯಗಳಿಗೆ ಗಮನಕೊಡಬೇಕಾದ ಮೊಂಡುತನ ಇತ್ಯಾದಿಗಳು ಪ್ರಸ್ತುತವೆನಿಸುತ್ತವೆ. ಮನೋವಾದಿಗಳು ಈ ಸೂಕ್ಷ್ಮತೆಯನ್ನು ಒಂದು ರೀತಿಯ 'ಖಾಯಿಲೆ' ಎನ್ನಬಹುದು, ನನ್ನ ಕೆಲವು ಸ್ನೇಹಿತರು 'ಕೊರಗು' ಎನ್ನಬಹುದು, ನನ್ನಂಥವರನ್ನು ದೂರದಿಂದ ಬಲ್ಲವರು 'ಚಿಂತನೆ' ಎನ್ನಬಹುದು, ನನ್ನ ಹಿತೈಷಿಗಳು 'ಚಿಂತೆ' ಎನ್ನಬಹುದು, ನಿಮ್ಮಂಥ ಓದುಗರು 'ದೊಡ್ಡ ಕೊರೆತ' ಎನ್ನಬಹುದು, ಅಥವಾ ಇಲ್ಲಿ ಬರೆಯಲಾಗದ ಇನ್ಯಾವುದೋ 'ಪದ'ವೆಂದು ಹಣೆಪಟ್ಟಿ ನೀಡಬಹುದು! ಆದರೆ ನನ್ನಂಥವರು ಹಲವಾರು ಮಂದಿ ಇದ್ದಾರೆ, ಅಷ್ಟೂ ಇಲ್ಲದೇ ಹೋದರೆ ನಿಮ್ಮಲ್ಲಿ ಕೆಲವರು ಇಲ್ಲಿಯವರೆಗೆ ಇದನ್ನೂ ಓದುತ್ತಲೇ ಇರಲಿಲ್ಲ! (ಮಂದಗತಿಯ ಹೆಬ್ಬಾವಿನ ಪ್ರಸ್ತಾಪ ಹಿಂದೆ ಮಾಡಿದ್ದೆ, ಸದ್ಯಕ್ಕೆ ಇದನ್ನು ಕಪಿಮುಷ್ಟಿ ಎನ್ನೋಣ - ದಯವಿಟ್ಟು 'ಕಪಿಮುಷ್ಟಿ'ಯನ್ನು ಒಂದೇ ಪದವಾಗಿ ಬರೆದಿರೋದನ್ನ ಗಮನಿಸಿ).

***

ಬರೀ (ಕೇವಲ) ೨0 ವರ್ಷಗಳ ಹಿಂದೆ ನಾನು ಹೈ ಸ್ಕೂಲಿನಲ್ಲಿ ಚಿಗುರಿಕೊಂಡು ನನ್ನ ಅಸ್ತಿತ್ವವನ್ನು ಸಾಬೀತುಪಡಿಸಿಕೊಂಡು 'ಬಹಳ ಒಳ್ಳೆಯವ' ಎಂದು ಹಣೆಪಟ್ಟಿ, ಹಾಗೂ ಅತ್ತಿತ್ತ ನೋಡದಿರುವಂತೆ ಕಣ್ಪಟ್ಟಿಯನ್ನು ಕಟ್ಟಿಕೊಂಡು, ಜಟಕಾ ಕುದುರೆಯಂತೆ ಜೀಕುತ್ತಿರುವ ಸಂದರ್ಭದಲ್ಲಿ ಅದೇ ಮೊದಲ ಹಾಗೂ ಕೊನೆಯ ಬಾರಿಗೆ ಸಾರ್ವಜನಿಕವಾಗಿ ನಿಂದನೆಗೊಳಗಾದ ವಿಷಯ ನನ್ನನ್ನು ಇವತ್ತಿಗೂ ಕಾಡುತ್ತದೆಯೆಂದರೆ 'ನಾನೆಂಥವ'ನಿರಬೇಕೆಂದು ನಿಮಗೂ ಹೆದರಿಕೆಯಾಗಲಿಕ್ಕೆ ಸಾಕು! ನಾವೆಲ್ಲ ಮುಂಜಾನೆ ಪ್ರಾರ್ಥನೆಗೆ ನಿಂತಿದ್ದೆವು, ಎಂಟು, ಒಂಭತ್ತು ಹಾಗೂ ಹತ್ತನೇ ತರಗತಿಯವರು ಮೂರು ಸಾಲಿನಲ್ಲಿ ನಿಂತು ಪ್ರಾರ್ಥನೆಯನ್ನು ಹಾಡುವ ದಿನನಿತ್ಯದ ಕಾಯಕಗಳಲ್ಲಿ ಎಂದಿನಂತೆ ಮಗ್ನರಾಗಿದ್ದೆವು. ಆಗಿನ್ನು ನಾಡಗೀತೆಯ ಗೊಂದಲವಿನ್ನೂ ಇರಲಿಲ್ಲ. ಬರೀ ರಾಷ್ಟ್ರಗೀತೆಯನ್ನು ಹಾಡುತ್ತಿದ್ದೆವು, ಅದರ ನಂತರ ಪ್ರಿನ್ಸಿಪಾಲರು ಹುಡುಗರನ್ನು ಉದ್ದೇಶಿಸಿ ಏನಾದರೂ ಹೇಳುವುದಿದ್ದರೆ ಹೇಳುತ್ತಿದ್ದರು, ಇಲ್ಲವೆಂದಾದರೆ ನಾವು ಶಿಸ್ತಿನಲ್ಲಿ ನಮ್ಮ-ನಮ್ಮ ತರಗತಿಗಳಿಗೆ ಹೋಗುವುದು ನಿತ್ಯರೂಢಿಯಾಗಿತ್ತು.

ಹೀಗೇ ಒಂದು ದಿನ ಒಳ್ಳೆ ಚುರುಕಿನ ಬಿಸಿಲು ಇದ್ದ ಸಂದರ್ಭದಲ್ಲಿ, ನಮ್ಮ ದೈಹಿಕ ಶಿಕ್ಷಕರು 'ಸಾವಧಾನ್', 'ವಿಶ್ರ್‍ಆಮ್'ಗಳ ಆದೇಶವನ್ನು ಎಂದಿನ ಹುರುಪಿನಿಂದಲೇ ಕೊಡುತ್ತಿದ್ದರು. ಸುಮಾರು ಐದು ಅಡಿ ಎತ್ತರವಿದ್ದಿರಬಹುದಾದ (ಆಗ ಅವರು ನಮಗಿಂತ ಎತ್ತರವಿದ್ದರು) ಅವರು ಸದಾ ಶುಭ್ರವಾದ ಬಿಳಿ ಅಂಗಿ ಪ್ಯಾಂಟು ಧರಿಸಿದ ಶಿಸ್ತಿನ ಸಿಪಾಯಿ. ಪ್ರತೀ ಶನಿವಾರ ಒಂದೆರಡು ಘಂಟೆ ಬಿಸಿಲಿನಲ್ಲಿ ನಿಲ್ಲಿಸಿ 'ಏಕ್, ದೋ, ತೀನ್, ಚಾರ್' ಎಂದು ಹನ್ನೆರಡರವರೆಗೆ ಹೇಳಿ , ಮತ್ತೆ ಅದನ್ನು ಉಲ್ಟಾ ಹೇಳಿಕೊಂಡು ಬಂದು ಹೊಟ್ಟೆ ಹಸಿದು ಬೆನ್ನನ್ನು ತಿನ್ನಬೇಕೆಂದು ಹೊರಟಂಥ ಸಂದರ್ಭದಲ್ಲಿ ಅನಗತ್ಯವಾಗಿ ಗೋಳುಹೊಯ್ದುಕೊಳ್ಳುತ್ತಾರಲ್ಲ ಅನ್ನೋ ಸಂಕಟದಲ್ಲಿ ಇದ್ದವರಲ್ಲಿ ನಾನೂ ಒಬ್ಬ. ಆಗಿನ್ನೂ ನಾವು 'ಗುರು (ದೊಡ್ಡ) ದೇವೋಭವ' ಎನ್ನುವ ಮಾತನ್ನು ಅಕ್ಷರ ಸಹಿತವಾಗಿ ಪಾಲಿಸುತ್ತಿದ್ದುದರಿಂದ, 'ರೆಬೆಲ್' ಅನ್ನೋ ಪದ ನಮ್ಮ ಪದಕೋಶದಲ್ಲಿ ಇನ್ನೂ ಬಂದಿರಲಿಲ್ಲ, ಅದರಲ್ಲೂ ನಾನು ರೆಬೆಲ್ ಆಗುವುದೆಂದರೇನು? ಆ ರೀತಿ ಮುಖ್ಯವಾಹಿನಿಯಿಂದ ದೂರವಿರುವ ಯೋಚನೆ ಹಾಗೂ ಸನ್ನಡತೆಯಲ್ಲ ಎಂದು ಅನಿಸಿಕೊಳ್ಳುವ ವಿಚಾರ ಇವೆರಡೂ ನನ್ನನ್ನು ಚಿಂತೆಗೆ ಈಡು ಮಾಡುತ್ತಿದ್ದವು. ಆದ್ದರಿಂದ ನಾನು 'ಎಲ್ಲಾ ಸಮಯದಲ್ಲೂ ಉತ್ತಮ ಅಥವಾ ಆದರ್ಶ ವಿದ್ಯಾರ್ಥಿಯಾಗಿ' ಇರುವ ವಿಚಾರವೇ ನನ್ನ ತಲೆಯಲ್ಲಿತ್ತು, ನನ್ನ ಆ ಇಮೇಜ್ ಅನ್ನೋದು ಬಹಳ ದೊಡ್ಡ ವಿಷಯವಾಗಿತ್ತು.

ನಮ್ಮ ಪ್ರಾರ್ಥನೆ ಮುಗಿದು, ಪ್ರಾಂಶುಪಾಲರು ಹೇಳುವುದನ್ನೆಲ್ಲ ಹೇಳಿದ ಮೇಲೆ, ದೈಹಿಕ ಶಿಕ್ಷಕರು 'ಬಿಡ್ಲಾ ಸಾರ್' ಎಂದು ಪ್ರಾಂಶುಪಾಲರ ಆದೇಶವನ್ನು ಕೇಳಿಯೇ ನಮ್ಮನ್ನು ತರಗತಿಗಳಿಗೆ ಹೋಗಲು ಬಿಡುತ್ತಿದ್ದುದು.

ಆ ದಿನ ಹೀಗೆ ನಿತ್ತಾಗ, ಕೆ. ವೀರಪ್ಪನವರು (ದೈಹಿಕ ಶಿಕ್ಷಕ) 'ಬಿಡ್ಲಾ ಸಾರ್' ಎಂದರು.
ನಾನು ನನಗೆ ಆದೇನು ಅನ್ನಿಸಿತೋ, ಎಲ್ಲರಿಗೂ ಕೇಳುವಂತೆ ಗಟ್ಟಿಯಾಗಿ 'ಕಣೀ ಕೇಳಿ!' ಎಂದು ಬಿಟ್ಟೆ, 'ಮಾತು ಆಡಿದರೆ ಹೋಯ್ತು, ಮುತ್ತು ಒಡೆದರೆ ಹೋಯ್ತು' ಅನ್ನೋ ಹಾಗೆ ವೀರಪ್ಪನವರ ಪ್ರಕಾರ ದೊಡ್ಡ ಪ್ರಮಾದವೇ ಆಗಿ ಹೋಯ್ತು.
ಎಲ್ಲರ ಮುಂದೆ ಹೀಗೆ ಹೇಳಿದೆನಲ್ಲಾ ಅನ್ನೋ ಸಾರ್ವಜನಿಕ ಅವಹೇಳನಕ್ಕೆ ವೀರಪ್ಪನವರು ಉರಿದುಬಿದ್ದರು, ಅದರಲ್ಲೂ ನಾನು ನನ್ನ ಕಿರಿಯ ವಿದ್ಯಾರ್ಥಿಗಳ ಮುಂದೆ ಹೀಗೆ ಸಾರ್ವಜನಿಕವಾಗಿ ಅವಹೇಳನವನ್ನು ಮಾಡಿದ್ದರಿಂದ ಅವರಿಗೆ ತಮ್ಮ 'ಇಮೇಜ್' ಸಮಸ್ಯೆ ಬಾಧಿಸತೊಡಗಿತ್ತು ಎಂದು ಕಾಣುತ್ತೆ.

ವೀರಪ್ಪನವರು ಸಾಧ್ಯವಾದಷ್ಟು ದೊಡ್ಡ ಸ್ವರದಲ್ಲಿ 'ಏನಯ್ಯಾ, .... (ನನ್ನ ಹೆಸರು), ಹತ್ತನೇ ತರಗತಿ, 'ಬಿ' ವಿಭಾಗ, ಬಹಳ ಚಿಗುರಿಕೊಂಡಿರೋ ಹಾಗೆ ಕಾಣ್ಸುತ್ತೆ!', ಪ್ರಾಂಶುಪಾಲರನ್ನು ಉದ್ದೇಶಿಸಿ 'ನೋಡಿ ಸಾರ್! ಇವನ ಆಟ ನಾ, ಇವರಿಗೆಲ್ಲ ಸಮ್ಮ ಎರಡು ಬಾರ್ಸಿದ್ರೇನೆ ಬುದ್ಧಿ ಬರೋದು ಏನಂತೀರಿ?' ಎಂದು ಕಣ್ಣುಗಳಲ್ಲಿ ಕೆಂಡಕಾರತೊಡಗಿದರು, ಅವರ ದೇಹ, ಧ್ವನಿ ನಡುಗುತ್ತಿತ್ತು, ಅದೂ 'ನನ್ನಂಥಾ' ವಿದ್ಯಾರ್ಥಿಯಿಂದ ಆ ಮಾತನ್ನು ಕೇಳಬೇಕಾಗಿ ಬಂದಿದ್ದರಿಂದ ಆ ನೋವು ದ್ವಿಗುಣವಾಗಿತ್ತು ಎಂದರೂ ತಪ್ಪಾಗಲಾರದು.

ಆಶ್ಚರ್ಯವೆಂಬಂತೆ ಪ್ರ್‍ಆಂಶುಪಾಲರಾದ ಕೆದಲಾಯರು, ನಗುತ್ತಾ, ಎಂದಿನ ಮಂಗಳೂರಿನ ಶೈಲಿಯ ಅವರ ಮಾತುಗಳಲ್ಲಿ ನನ್ನ ರಕ್ಷಣೆಗೆ ಬಂದಿದ್ದರು - 'ವೀರಪ್ಪನವರೇ, ನೀವು ಹೀಗೆ ತುಂಬಾ ಹೊತ್ತು ಬಿಸಿಲಿನಲ್ಲಿ ನಿಲ್ಲಿಸಿದರೆ ತಲೆ ತಿರುಗಿ ಬೀಳುವುದಿಲ್ಲವೇ, ಹೋಗಲಿ ಬಿಡಿ!'

ಅದಾದ ಮೇಲೆ ವೀರಪ್ಪನವರು ನನ್ನನ್ನು ನೋಡುವಾಗಲೆಲ್ಲ ತಮ್ಮ ಕಣ್ಣಂಚಿನಲ್ಲಿ ದೃಷ್ಟಿಯನ್ನು ತೀವ್ರವಾಗಿ ಮಾಡುತ್ತಿದ್ದುದು ನನಗಿನ್ನೂ ಚೆನ್ನಾಗಿ ನೆನಪಿದೆ.

೯೮ರಲ್ಲಿ ಭಾರತಕ್ಕೆ ಹೋದಾಗ ದಾರಿಯಲ್ಲಿ ಸಿಕ್ಕ ಅವರನ್ನು 'ನಮಸ್ಕಾರ ಸಾರ್, ಚೆನ್ನಾಗಿದೀರಾ' ಎಂದು ನಕ್ಕು ಕೇಳಿದರೆ, 'ಓ, ... (ನನ್ನ ಹೆಸರು) ಅಲ್ವಾ, ಅಮೇರಿಕದಲ್ಲಿದ್ದೀಯಂತೆ, ಒಳ್ಳೇ ಕೆಲಸ ಮಾಡ್ದೇ ನೋಡ್, ಎಲ್ಲಾ ಆರ್‍ಆಮಾ' ಎಂದು ನಕ್ಕು ಮಾತನಾಡಿಸಿದ್ದರು. ಅವರ ಕಣ್ಣಿನಲ್ಲಿ ಯಾವ ನೋಟವೂ ಇರಲಿಲ್ಲ, ಆದರೆ ನನ್ನ ಮನದಲ್ಲಿ ಎಲ್ಲವೂ ಅಚ್ಚಳಿಯದೇ ನಿಂತಿತ್ತು, ಅವರು ಇನ್ನೂ ಅದೇ ಹೈ ಸ್ಕೂಲಿನಲ್ಲಿ ಅದೇ ವೃತ್ತಿಯಲ್ಲಿ ಕೆಲಸ ಮಾಡುತ್ತಿದ್ದರಾದ್ದರಿಂದ ಇನ್ನೂ ಬಿಳಿ ಅಂಗಿ, ಪ್ಯಾಂಟನ್ನೇ ಧರಿಸಿದ್ದರು, ಆದರೆ ಅವರ ಪ್ಯಾಂಟಿನ ಗೆರೆಗಳಲ್ಲಿ ಮೊದಲಿದ್ದ ಕಡಕ್‌ತನವಿರಲಿಲ್ಲ!

ನಾನು ಈ ಘಟನೆಯನ್ನು ಮನಸ್ಸಲ್ಲಿ ಇಟ್ಟುಕೊಂಡು ಕೊರಗೋದಿಲ್ಲ, ಆದರೆ 'ಬಹಳ ಒಳ್ಳೆಯ ಹುಡುಗನ ಒಂದು ಸಾರ್ವಜನಿಕ ಕೆಟ್ಟ ಕ್ಷಣ'ದ ಬಗ್ಗೆ ಗಾಢವಾಗಿ ಯೋಚಿಸಿದ್ದೇನೆ. 'ಕಣೀ ಕೇಳಿ' ಅನ್ನೋ ಮಾತು sponteneous ಆಗಿ ಬಂದಿದ್ದು ಹೇಗೆ ಎಂದು ಯೋಚಿಸಿದ್ದೇನೆ, ಅದಕ್ಕೆ ಉತ್ತರ ಸಿಕ್ಕೂ ಇದೆ: ನಾವು ರಜಾ ದಿನಗಳಲ್ಲಿ ಅಜ್ಜನ ಮನೆಗೆ ಹೋಗುತ್ತಿದ್ದೆವು, ಆನವಟ್ಟಿಯ ಅರೆ ಮಲೆನಾಡಿನ ವಾತಾವರಣದಲ್ಲಿ ಬೆಳೆದ ನಾವು ಮಲೆನಾಡಿನ ಒಂದು ಊರಿಗೆ ಹೋಗುತ್ತಿದ್ದೆವು (ಊರಿನ ಹೆಸರು ಹೇಳಿದರೆ ಎಲ್ಲಿ ನನ್ನ ಹೆಸರು ಬಹಿರಂಗವಾಗುವುದೋ ಎಂಬ ಕಾರಣದಿಂದ ಹೇಳಿಲ್ಲ), ಅಲ್ಲಿ ನಾನು ಪ್ರತೀ ಸೀಜನ್‌ಗೆ ಒಂದೋ ಎರಡೋ ಹೊಸ ಹೊಸ ಪದಗಳನ್ನು ಕಲಿತುಕೊಂಡು ಬರುತ್ತಿದ್ದೆ. 'ನೀನಿನ್ನು ಸಣ್ಣವ, ನಿನಗೆ ಗೊತ್ತಾಗಲ್ಲ ಬಿಡು' ಅನ್ನೋ ಮಾತುಗಳು ನನ್ನನ್ನು ಆದಷ್ಟು ಬೇಗನೆ ಬೆಳೆಯುವಂತೆ ಪ್ರಚೋದಿಸುತ್ತಿದ್ದವಾದ್ದರಿಂದ, ನನ್ನ ಅಣ್ಣ ಹಾಗೂ ಅವನ ಅಪಾರ ಸ್ನೇಹಿತರ ಬಳಗವನ್ನು ಅನುಕರಿಸಿದರೆ, ಅವರ ಮಾತು, ಹಾವಭಾವಗಳನ್ನು ನಾನೂ ಅನುಸರಿಸಿದರೆ 'ದೊಡ್ಡವ'ನಾಗುತ್ತೇನೆಂದು ಮೈಮನಗಳಲ್ಲಿ ಬರೆದುಕೊಂಡಿದ್ದರಿಂದ 'ಕಣೀ ಕೇಳು' ಎಂಬ ವಾಕ್ಯ, ಯಾರಾದರೂ ಏನೋ ಅಗತ್ಯವಾದ ಕೆಲಸವನ್ನೊಂದು ಮಾಡಲೇ ಎಂದು ಯಾರೋ ಕೇಳಿದಾಗ ದೊಡ್ಡವರು 'ಕಣೀ ಕೇಳು' ಎನ್ನುವ ಮಾತಿನ ಮೂಲಕ, by default, 'ಆ ಕೆಲಸವನ್ನು ಮಾಡು' ಎಂದು ಆದೇಶ ನೀಡುತ್ತಿದ್ದುದನ್ನು ನನ್ನ ಪುಟ್ಟ ಮಿದುಳು ಚೆನ್ನಾಗಿ ಗ್ರಹಿಸಿಕೊಂಡಿತ್ತೆಂದು ಕಾಣ್ಸುತ್ತೆ, ಅದು ನಾವೆಲ್ಲ ಹೈ ಸ್ಕೂಲಿನಲ್ಲಿ ಪ್ರಾರ್ಥನೆಗೆ ನಿತ್ತಾಗ ವೀರಪ್ಪನವರನ್ನು ಗೇಲಿ ಮಾಡುವ ನೆಪದಲ್ಲಿ ಹಾಗೂ ಯಾವಾಗಲೂ 'ನೀನು ಸಣ್ಣವ' ಎಂದು ನನ್ನ ಅಸ್ತಿತ್ವವನ್ನು ಹತ್ತಿಕ್ಕಿರುವುದನ್ನು ವಿರೋಧಿಸುವುದಕ್ಕೆಂದು ನನಗೆ ಅರಿವಿಲ್ಲದಂತೆಯೇ ಹೊರಗೆ ಬಂದಿರಬಹುದು ಎಂದು ನನ್ನ ಊಹೆ, ಅನುಮಾನ - ನಿಮಗೆ 'ಇವನೊಬ್ಬ ದೊಡ್ಡ ಹುಚ್ಚ' ಎಂದಲ್ಲದೇ ಮತ್ತೆ ಬೇರೆ ಏನಾದರೂ ಗೊತ್ತಾದರೆ/ಗೊತ್ತಿದ್ದರೆ ಖಂಡಿತ ತಿಳಿಸಿ.

ಇಂತಹ ಎಲ್ಲೂ ಹೇಳಿಕೊಳ್ಳದ, ಹೇಳಿಕೊಳ್ಳಲಾರದ 'ನೋವು'ಗಳು, ಹಲವಾರಿದೆ, ಅವುಗಳು ಒಂದೊಂದಾಗೇ ಸರತಿಯ ಮೇಲೆ ಬಂದು ತಿಂಗಳಿಗೋ, ವರ್ಷಕ್ಕೋ ಯಾವತ್ತೋ ಒಂದು ದಿನ ಹೀಗೆ ಮುಂಜಾವಿನ ಪ್ರಶಾಂತತೆಯಲ್ಲಿ ಕನ್ನಡಿ ನೋಡಿ ಶೇವ್ ಮಾಡುತ್ತಿರುವಾಗ ನನ್ನ ಹಾಗೂ ಕನ್ನಡಿಯಲ್ಲಿನ ಪ್ರತಿಬಿಂಬದ ನಡುವಿನ (ದ್ವಿಗುಣಗೊಂಡ ದೂರದಲ್ಲಿ) real ಮತ್ತು imaginary ಅವಕಾಶದಲ್ಲಿ (space ಎಂಬರ್ಥದಲ್ಲಿ) ತಾಲೀಮು ನಡೆಸತೊಡಗುತ್ತವೆ, ನನ್ನ ಯಾವ ಸುಡುಗಾಡು ಸಂಸ್ಕಾರದ ಕಾರಣವೋ ಏನೋ ಈ ರೀತಿ ಕುಣಿದು ಕುಪ್ಪಳಿಸುವ, ಹೈ ಸ್ಕೂಲು ಮಕ್ಕಳಂತೆ ಇನ್ನೂ ಬೆಳೆಯುತ್ತಿರುವ, ಈ ಆಲೋಚನೆಗಳಿಗೆ ವೀರಪ್ಪನವರ ಶೈಲಿಯಲ್ಲಿ ಗದರಿಸುವಂತೆ ನನ್ನ ಬಾಯಿಂದ 'ಶಿಟ್!' ಎನ್ನುವ ಪದ ತಂತಾನೆ ಹೊರಬೀಳುತ್ತದೆ, ಆ ಮೂಲಕ ನನಗೂ, ಕನ್ನಡಿಯಲ್ಲಿ ಕಾಣುವ ಪ್ರತಿಬಿಂಬಕ್ಕೂ, ಮಧ್ಯೆ ಇರುವ ರಂಗಶಾಲೆಯಲ್ಲಿ ತಾಲೀಮು ಮಾಡುವ ಆಲೋಚನೆಗಳಿಗೂ ತತ್ಕಾಲಕ್ಕೆ ಒಂದು ವಿರಾಮ ಸಿಗುತ್ತದೆ!

***

'ನಾನೇನೂ ತಪ್ಪನ್ನೂ ಮಾಡಿಲ್ಲ' ಎನ್ನುವ ಮಾತು ಬಹಳ ದೊಡ್ಡದು, ಆದರೆ ಸದಾ ತಪ್ಪನ್ನು ಮಾಡದೇ, ತಪ್ಪುಗಳಾಗದಂತೆ ಬದುಕುವ ಅನವರತ ಯಾತ್ರೆಯ ಧ್ಯೋತಕ ಇದೇ ನೋಡಿ ಅದೇ ತಪ್ಪು! ತಪ್ಪು ಮಾಡಿ ಅದನ್ನು ಜೀರ್ಣಿಸಿಕೊಳ್ಳುವವರಿಗಿಂತಲೂ ನಾನು ಏನು ಮಾಡಿದರೆ ತಪ್ಪಾಗುತ್ತೆ ಅನ್ನೋ ಬೃಹತ್ ಆಲದ ಮರದ ನೆರಳಿನಲ್ಲಿ ಮಲಗುವುದೋ ಅಥವಾ ಅದರ ಬಿಳಲುಗಳಿಗೆ ಜೋಕಾಲಿಯನ್ನು ಕಟ್ಟಿ ಆಡುವುದೋ ಇದೇ ನೋಡಿ, ಅದು dangerous!.

ಈ ಕಥೆಯನ್ನು ನಿಮ್ಮೊಡನೆ ಹಂಚಿಕೊಂಡಿದ್ದೇನಲ್ಲ ಅನ್ನೋ ಸಂತೋಷ, ನನ್ನ ಹಾಗೂ ಕನ್ನಡಿಯ ನಡುವಿನ ದ್ವಿಗುಣವಾದ ಅವಕಾಶದ ರಂಗಶಾಲೆಯಲ್ಲಿ ಸದಾ ಬರೀ ತಾಲೀಮನ್ನೇ ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬನನ್ನು ತರಗತಿಯಿಂದ ಎತ್ತಿ ಹೊರಹಾಕಿದೆ, ಆದರೆ Million Dollar Baby ಚಿತ್ರದಲ್ಲಿ ಸದಾ ಬರೀ ತಾಲೀಮನ್ನೇ ಮಾಡಿ ಕನಸುಗಳನ್ನು ಕಾಣುವ ಅಥವಾ ಹಟಮಾರಿ ಹುಡುಗನ ಹಾಗೆ, 'ಕಣಿ ಕೇಳುವ' ಈ ವಿದ್ಯಾರ್ಥಿ ಕಷ್ಟ ಪಟ್ಟೇ ತರಗತಿಯಿಂದ ಅಳುತ್ತಾ ನಿರ್ಗಮಿಸುತ್ತಾನೆ - ಅವನು ಬೇರೆ ಯಾವುದಾದರೂ ಶಾಲೆಯನ್ನು ಸೇರಿಕೊಳ್ಳುತ್ತಾನೋ ಬಿಡುತ್ತಾನೋ, ಮುಂದೆ ಹವ್ಯಾಸಿಯಿಂದ ವೃತ್ತಿಪರನಾಗುತ್ತಾನೋ ಬಿಡುತ್ತಾನೋ, ನನ್ನ ರಂಗಶಾಲೆಯಿಂದ ಹರದಾರಿ ದೂರ ಉಳಿದರೆ ಸಾಕು, ಉಳಿಯುತ್ತಾನೆ ಅನ್ನೋ ನಂಬಿಕೆ ನನ್ನದು.

Tuesday, May 02, 2006

ಮನೆ ಕಟ್ಸಿ ನೋಡು...ಕೆಲ್ಸಾ ಮಾಡ್ಸಿ ನೋಡು

ಮೊನ್ನೆ ನನ್ನ ಡೈರೆಕ್ಟರ್ ಒಬ್ಬರು ನನಗೆ 'ಭಾರತದಲ್ಲಿ ಕೆಲಸ ಮಾಡ್ತೀಯಾ' ಎಂದು ಕೇಳಿದ್ದಕ್ಕೆ, ನಾನು 'ಸದ್ಯದ ಮಟ್ಟಿಗೆ ಇಲ್ಲ' ಎಂದು ನಯವಾಗಿ ನಿರಾಕರಿಸಿದೆ. ಎಂಥಾ ವಿಶೇಷ ನೋಡಿ, ನನಗೆ ಇಲ್ಲಿ ಕುಳಿತುಕೊಂಡೇ, ಯಾವುದೋ ದೇಶದವರು ನಮ್ಮ ದೇಶದಲ್ಲಿ ಕೆಲಸ ಕೊಡೋ ಪರಿಸ್ಥಿತಿ ಬಂದಿದೆ! ಭಾರತದ ಕಂಪನಿಗಳಲ್ಲಿ ಕೆಲಸಕ್ಕೆ ಪ್ರತಿಭಾವಂತ ಯುವಕ-ಯುವತಿಯರನ್ನ ನೇಮಕ ಮಾಡಿ ಅವರೊಡನೆ ಒಡನಾಡಿದವರಿಗೆ ಒಂದು ವಿಷಯ ಚೆನ್ನಾಗಿ ಗೊತ್ತಿರುತ್ತೆ - ಇಂತಹ ಪ್ರತಿಭಾವಂತರನ್ನು ಒಂದೇ ಕಡೆ ಹಿಡಿದಿಡುವುದು ಬಹಳ ಕಷ್ಟದ ಕೆಲಸ ಎಂದು. ನನಗೆ ಗೊತ್ತಿರುವ ಅಲ್ಲಿನ ಯುವ ಸ್ನೇಹಿತರು ಒಂದೇ ಹೆಚ್ಚಿನ ವಿದ್ಯಾಭ್ಯಾಸಕ್ಕೆಂದೋ ಅಥವಾ ಕೆಲಸ ಸೇರಿಕೊಳ್ಳೋದಕ್ಕಾಗಿಯೋ ವಿದೇಶಕ್ಕೆ ಹೋಗಲು ಯಾವಾಗಲೂ ಹವಣಿಸುತ್ತಿರುತ್ತಾರೆ. ಒಬ್ಬ ವ್ಯಕ್ತಿ ಹೊಸದಾಗಿ ಕೆಲಸಕ್ಕೆ ಸೇರಿಕೊಂಡಿರಬಹುದು, ಅಥವಾ ಹಲವಾರು ವರ್ಷಗಳ ಅನುಭವದ ನಂತರ ಸೇರಿಕೊಂಡಿರಬಹುದು, ಒಂದು ಕಂಪನಿ ಇಂತಹ ವ್ಯಕ್ತಿಯನ್ನು ತಮ್ಮಲ್ಲೇ ನಿರಂತರವಾಗಿ (ಕೊನೇ ಪಕ್ಷ ಒಂದೈದು ವರ್ಷಗಳ ಮಟ್ಟಿಗಾದರೂ) ಕೆಲಸಕ್ಕೆ ಇಟ್ಟುಕೊಳ್ಳಬೇಕೆಂದರೆ ಬಹಳ ದೊಡ್ಡ ಸಾಹಸವನ್ನು ಮಾಡಬೇಕಾಗುತ್ತದೆ. ಹಾಗಿಲ್ಲದೇ ಹೋದಲ್ಲಿ ವಿದೇಶದ business analysis ಅನ್ನು ಸ್ಥಳೀಯರಿಗೆ ಅವರ ಭಾಷೆಯಲ್ಲೇ ವಿವರಿಸಿ ಅವರಿಂದ ಕೆಲಸ ತೆಗೆಯುವವರ್‍ಯಾರು? ಸ್ಥಳೀಯ ಕೆಲಸಗಳ ಕ್ವಾಲಿಟಿಯನ್ನು ಪರೀಕ್ಷಿಸುವವರ್‍ಯಾರು? ಭಾರತದಲ್ಲಿ ಒಬ್ಬ ಮ್ಯಾನೇಜರ್‌ನ ಕೆಳಗೆ ಸುಮಾರು ಇಪ್ಪತ್ತು ಜನರು ಕೆಲಸ ಮಾಡಬಹುದು, ಪ್ರತಿ ವಾರ, ಪ್ರತಿ ತಿಂಗಳೂ ಒಬ್ಬರಲ್ಲ ಒಬ್ಬರು ಬಸ್ಸನ್ನ ಹತ್ತಿ ಇಳಿಯುತ್ತಲೇ ಇದ್ದರೆ ಅಂತಹ ಟೀಮಿನ ಡೈನಮಿಕ್ಸ್ ಹೇಗಿರಬಹುದು ನೀವೆ ಊಹಿಸಿ. Hope, they took or derived good Human Resource policy and guidelines along with Company business! ಈ workforce management ಅನ್ನೋದನ್ನ ಸರಿಯಾಗಿ ಅರ್ಥ ಮಾಡಿಕೊಳ್ಳದ ಕಂಪನಿಗಳು ಖಂಡಿತವಾಗಿ ಸೋತು, ಹೊರದೇಶಕ್ಕೆ ಕೆಲಸಗಳನ್ನು ಕಳಿಸಿ ಡಾಲರ್ ಮೌಲ್ಯದಲ್ಲಿ ಲಾಭಗಳಿಸುವುದು ಮರೀಚಿಕೆಯಾಗೇ ಉಳಿಯುತ್ತದೆ.

ಹೆಚ್ಚಿನ ಕಂಪನಿಗಳು ಮಾಡಿದಂತೆ ಇಲ್ಲಿ ನಾನು ಕೆಲಸ ಮಾಡುತ್ತಿರುವ ಕಂಪನಿಯೂ ಆಫ್‌ಷೋರಿಂಗ್ ಅನ್ನೋ ಹೆಸರಿನಲ್ಲಿ ನಿಧಾನವಾಗಿ ಒಂದೊಂದೇ ಕೆಲಸವನ್ನು ಭಾರತಕ್ಕೆ ಕಳಿಸತೊಡಗಿತು. ಸುಮಾರು ೨೦೦೦ ದ ಹೊತ್ತಿಗೆಲ್ಲಾ ಆರಂಭವಾದ ಆಫ್‌ಷೋರಿಂಗ್ ಇಲ್ಲಿಯವರೆಗೂ ನಿರಾತಂಕವಾಗಿ ಇನ್ನೂ ಮುಂದುವರೆಯುತ್ತಿದೆ, ಅಲ್ಲಿ ಭಾರತದಲ್ಲಿ ನಮ್ಮ ಕಂಪನಿಯಲ್ಲಿ ದಿನೇ-ದಿನೇ ಕೆಲಸಮಾಡುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ನನಗೆ ಇತ್ತೀಚೆಗೆ ಒಬ್ಬರಲ್ಲಾ ಒಬ್ರು ಕಾಲ್ ಮಾಡಿ, 'We are leaving for good!' ಎಂದು ಹೇಳ್ತಾನೇ ಇರೋದನ್ನೇ ನೋಡಿದ್ರೆ, ನಮ್ಮ ದೇಶ ವೀಡಿಯೋಕಾನ್ ಸೇಲ್ಸ್ ಪಿಚ್‌ನಲ್ಲಿ Bring home the leader! ಎಂದು ಇಲ್ಲಿಗೆ ಎಂಭತ್ತರ, ತೊಂಭತ್ತರ ದಶಕದಲ್ಲಿ ಬಂದ ಅತಿರಥ-ಮಹಾರಥರನ್ನೆಲ್ಲ ವಾಪಾಸ್ಸು ಕರೆಸಿಕೊಳ್ಳುತ್ತಿದೆ, ಆದರೆ ಸದ್ಯಕ್ಕೆ ಇಲ್ಲೇ ಬಿದ್ದು ಕೊಳೆಯಬೇಕಾಗಿರುವ ನನ್ನ ದೃಷ್ಟಿಯಲ್ಲಿ ಇದು ಒಂಥರಾ - ಹೊಲದಲ್ಲಿ ಹಂದಿ ತಿಂದೂ ಹಾಳು, ಬಾಲ ಬಡ್ದೂ ಹಾಳು - ಅಂತಾರಲ್ಲ ಹಾಗೆ. ಇಲ್ಲಿಯ ಸಾಫ್ಟ್‌ವೇರ್ ಡೆವಲಪ್‌ಮೆಂಟ್ ಕೆಲಸಗಳೇನೋ ಒಂದೊಂದಾಗೇ ನಮ್ಮ ದೇಶದ ಹಾದಿ ಹಿಡಿದವು, ಜೊತೆಯಲ್ಲಿ ನನ್ನ ಫೋನ್ ಪುಸ್ತಕ ಕೂಡಾ ಖಾಲಿಯಾಗುತ್ತಿದೆ. ಹಾಳೂರಿಗೆ ಉಳಿದವನೇ ಗೌಡ ಅನ್ನೋ ರೀತಿಯಲ್ಲಿ ಇಲ್ಲಿ ನಾವಿರಬೇಕಾಗಿ ಬಂದಿರೋದರಿಂದ ಒಂದೇ ಬೇರೆ ಯಾವುದಾದರೂ ಇಂಡಷ್ಟ್ರಿ ಹಿಡೀ ಬೇಕು, ಇಲ್ಲಾ ಮತ್ತಿನ್ನೇನಾದರೂ ಮಾಡಬೇಕು - ಏಕೆಂದ್ರೆ ಮ್ಯಾನೇಜ್‌ಮೆಂಟ್ ಏಣಿಯಲ್ಲಿ ನನ್ನಂತೋರು ಮುಂದೆ ಹೋಗಬೇಕಾದ್ರೆ ಬಹಳ ಕಷ್ಟ ಇದೆ, ಹಾಗೇ ಇದ್ದ ಕೆಲಸವನ್ನು ಉಳಿಸಿಕೊಂಡು ಏಗ ಬೇಕೆಂದರೆ ಇನ್ನೂ ಕಷ್ಟ ಇದೆ.

***

ಈಗ ಹೇಗೋ ಗೊತ್ತಿಲ್ಲ, ಮೊದಲೆಲ್ಲಾ ಮೇಷ್ಟ್ರುಗಳಿಗೆ ಬಹಳಷ್ಟು ರಜಾದಿನಗಳು ಸಿಕ್ಕೋವು. ಬೇಸಿಗೆ ರಜೆ, ದಸರಾ ರಜೆ ಅಂತ ತಿಂಗಳುಗಟ್ಟಲೆ ಸಿಗೋದೂ ಅಲ್ದೇ, ಸರ್ಕಾರಿ, ಸ್ಥಳೀಯ ರಜೆಗಳಿಂದ ಹಿಡಿದು, ತಿಂಗಳಿಗೆ ಒಂದರಂತೆ ಸಿಗುತ್ತಿದ್ದ ಸಾಮಾನ್ಯ ರಜೆ ಹಾಗೂ ಪ್ರತೀವಾರ ಶನಿವಾರ ಅರ್ಧ ದಿನ ಮತ್ತು ಭಾನುವಾರ ರಜೆ ಸಿಗುತ್ತಿತ್ತು. ನನ್ನ ಅಪ್ಪಾ-ಅಮ್ಮಾ ಇಬ್ಬರೂ ಮೇಷ್ಟ್ರು, ಅವರ ಪರಂಪರೆ ಮುಂದುವರೀಲಿ ಅಂತ ಮನೆಯಲ್ಲಿ ನನ್ನ ಎರಡನೇ ಅಣ್ಣ ಹಾಗೂ ಒಬ್ಬಳು ಅಕ್ಕ ಅವರ ಹಾಗೇ ಮೇಷ್ಟ್ರಾಗಿದ್ದಾರೆ. ಇಷ್ಟೆಲ್ಲಾ ರಜಾ ದಿನಗಳು ಇದ್ದಾಗಲೂ ನನ್ನ ಅಣ್ಣ - ತುಂಬಾ ಕೆಲಸ, ಟೈಮೇ ಸಿಗಲ್ಲ ಅಂತ ಒದ್ದಾಡ್‌ತಿರ್‍ತಾನೆ! ಅವನಿಗೆ ತನ್ನ ಮಕ್ಕಳನ್ನೂ ನೋಡಿಕೊಂಡು, ಶಾಲೆಗೆ ಹೋಗಿ ಕೆಲಸ ಮಾಡಿ, ಇತ್ತೀಚೆಗೆ ಒಂದು ಮನೆಯನ್ನು ಕಟ್ಟಿಸಬೇಕೆಂದರೆ ಸಾಕು-ಸಾಕಾಯಿತಂತೆ, 'ಮನೆ ಕಟ್ಟಿ ನೋಡು-ಮದುವೆ ಮಾಡಿ ನೋಡು' ಅನ್ನೋದು ಅಲ್ಲಿ ಇನ್ನೂ ಅನ್ವಯವಾಗಬಹುದು ಬಿಡಿ, ಆದರೆ ಅವನಿಗೆ ಇದ್ದಂತಾ ಸಪೋರ್ಟ್ ನೆಟ್‌ವರ್ಕ್ ಯಾವನಿಗೂ ಇಲ್ಲ. ಕೈಗೊಬ್ಬರು ಕಾಲ್ಗೊಬ್ಬರು ಜನಾ ಸಿಗ್ತಾರೆ. ಅವನು ಎಲ್ಲಿ ಹೋದ್ರೂ ಎಲ್ಲಿ ಬಂದ್ರೂ ಬೇಬಿ ಸಿಟ್ಟಿಂಗ್‌ಗಾಗಿ ಒಂದ್ ದಿನವೂ ತಲೆ ಕೆಡಿಸಿಕೊಳ್ಳಲ್ಲ, ನಾನು ತಿಳಿದ ಮಟ್ಟಿಗೆ ಅವನು ಒಂದು ದಿನವೂ ಡೈಪರ್ ಚೇಂಜ್ ಮಾಡಿಯೂ ಇಲ್ಲಾ ಅಂತ ಕಾಣ್ಸುತ್ತೆ!

ಅಮ್ಮ ಅಂತಾಳೆ 'ಅವನಿಗೆ ಬಾರಿ ಕಷ್ಟಾ ಅಗುತ್ತೋ, ಮನೇ ಕಟ್ಟೋದು ಅಂದ್ರೆ ಸುಮ್ಮನೇನೆ?'

ನಾನು 'ಅಲ್ಲಮ್ಮಾ, ನಾನೂ ಇಲ್ಲಿ ಬಂದು ಮನೆ ಕಟ್ಟಿದ್ದೀನಿ, ನನ್ ಬಗ್ಗೆ ಒಂದು ದಿನವೂ ಆ ಮಾತನ್ನ ಹೇಳ್‌ಲಿಲ್ಲವಲ್ಲಾ ನೀನು!'.

'ನಿಂದೇನ್ ಬಿಡು, ದುಡ್ ಕೊಟ್ರೆ ಅವರೇ ಕಟ್ಟಿ ಕೊಡ್ತಾರೆ, ಇಲ್ಲಿ ಇವನಿಗಂತೂ ಟೈಮೇ ಸಿಗಲ್ಲ, ಬಾಳ ಕಷ್ಟ' ಅಂತ ಅಮ್ಮ ಅಣ್ಣನನ್ನೇ ಹೊತ್ತುಕೊಂಡು ಆಡ್ತಾಳೆ.

ನನಗೆ ಗೊತ್ತು, ಇಲ್ಲಿ ಮನೆ ಕಟ್ಟಿಸುವುದಕ್ಕೂ ಅಲ್ಲಿ ಕಟ್ಟಿಸುವುದಕ್ಕೂ ಏನು ವ್ಯತ್ಯಾಸ ಎಂದು, ಆದ್ರೂ ಅಮ್ಮ ಬರೀ 'ಅವನು ಮಾತ್ರ ತುಂಬಾ ಕೆಲ್ಸ ಇರೋನು, ಅವ್ನು ಮಾತ್ರ ಬಹಳ ಕಷ್ಟಾ ಪಟ್ಟೋನು...' ಅಂದಾಗೆಲ್ಲ ಎದೆ ಒಂದ್ ಸಾರಿ ಗವಕ್ ಅನ್ನುತ್ತೆ, sibling rivalry ಅಲ್ಲ, ಬೆಳಗ್ಗೆದ್ದು ಬ್ರೆಡ್ ತಿಂದ್ ಓಡೋ ನಮ್ ಪಡಿಪಾಟ್ಲೆ ಅಮ್ಮನಿಗೆ ಯಾವತ್ತೂ ಅರ್ಥ ಆಗಲ್ಲ ಅನ್ನೋ ದುಃಖಕ್ಕಾಗಿ.

ಮೊನ್ನೆ ಸುಮಾರು ಐದಾರು-ಸಾವಿರ ಜನರನ್ನ ಜಮಾಯಿಸಿ ಬಹಳ ಅದ್ದೂರಿಯಾಗಿ ಗೃಹಪ್ರವೇಶ ಮಾಡ್ಸಿದನಂತೆ, ಒಂದ್ ರಾತ್ರಿ ಒಂದ್ ಹಗಲು ಇದ್ದ ಕಾರ್ಯಕ್ರಮದಲ್ಲಿ ಆರು ಜನ ಪುರೋಹಿತರು ಬಂದು ಅದೇನೇನೋ ಮಂತ್ರಾ ಹೇಳಿ ಎಲ್ಲಾ ಅದ್ದೂರಿಯಾಗಿ ಆಯ್ತು ಅಂದ.

ಇಲ್ಲಿ ನಮ್ಮ ಹೊಸಮನೆ ಗೃಹಪ್ರವೇಶ ಮಾಡಿದಾಗ ನಾವು ಇದ್ದದ್ದು ಕೇವಲ ಆರೇ ಜನ, ಪುರೋಹಿತರನ್ನೂ ಸೇರಿ ಏಳು! ವಾರಾಂತ್ಯದಲ್ಲಿ ಮಾಡದೇ ಅದು ಯಾವ ಮಹೂರ್ತದಲ್ಲಿ ಬರುತ್ತೋ ಆಗಲೇ ಆಗಲಿ ಅನ್ನೋ ನನ್ನ ಹಠಕ್ಕೆ ನನ್ನ ಇಬ್ಬರು ಸ್ನೇಹಿತರು ಸಂಸಾರ ಸಮೇತರಾಗಿ ಗುರುವಾರ ದಿನ ಆಫೀಸಿಗೆ ರಜೆ ಹಾಕಿ ಸುಮಾರು ೨೫೦ (ಒಮ್ಮುಖ) ಮೈಲುಗಳನ್ನು ಡ್ರೈವ್ ಮಾಡಿಕೊಂಡು ಬಂದಿದ್ದರು!

ಆದ್ರೆ, ಅಲ್ಲಿ ಅವನು ಎಷ್ಟೇ ಕಷ್ಟಾ ಪಟ್ಟು ಮನೆ ಕಟ್ಟಿದ್ರೂ ನಮ್ಮೂರಿನ ಜನ ನನ್ನನ್ನೆಂದೂ ಕೈಬಿಟ್ಟಿದ್ದಿಲ್ಲ - ಬಂದೋರೆಲ್ಲ 'ಮೇಷ್ಟ್ರೇ, ನಿಮಗೇನ್ ಬಿಡ್ರಿ, ನಿಮ್ಮ ತಮ್ಮ ಅಮೇರಿಕದಲ್ಲಿರೋವಾಗ...' ಅಂತಾರಂತೆ, ಇವನು ಕೈ-ಕೈ ಹಿಸುಕಿಕೊಳ್ತಾನಂತೆ.

***

ನಿನ್ನೆ ಕಾರ್ಮಿಕರ ದಿನಾಚರಣೆ ಅಂತ ಭಾರತದಲ್ಲಿರೋ ನಮ್ ಕಂಪನಿಗೆ ರಜೆ ಕೊಟ್ಟಿದ್ರು, ಇಲ್ಲಿ ಅಮೇರಿಕದಾದ್ಯಂತ ವಲಸಿಗರು ಚಳುವಳಿ ನಡಿಸಿ ಹೆಚ್ಚು ಜನ ಕೆಲಸಕ್ಕೆ ಹೋಗದೇ ಇದ್ರು, ನಾನು ಇವು ಯಾವ್ದೂ ನನಗೆ ತಾಗಲ್ಲ ಎಂದು ಮಾಮೂಲಿನಂತೆ ಕೆಲಸಕ್ಕೆ ಹೋದೆ. ಅಲ್ಲಿ ನಮ್ಮ ಭಾರತೀಯ ಕಂಪನಿಗಳಿಗೆ ಇದ್ದ ರಜಾದಿನಗಳ ಲಿಸ್ಟ್ ನೋಡಿದಾಗ ಎದೆ ಧಸಕ್ ಎಂದಿತು. ಮೊದಲೆಲ್ಲ ಇದ್ದ ಎಲ್ಲಾ ರಜಾದಿನಗಳನ್ನು ತೆಗೆದು ಹಾಕಿ, ಮುಖ್ಯವಾದ ಒಂದಿಷ್ಟು ಹಬ್ಬ ಹರಿದಿನಗಳಿಗೆ ಮಾತ್ರ ರಜೆ! ಇದ್ದ ಎಲ್ಲಾ ರಜಾ ದಿನಗಳನ್ನು ಒಟ್ಟು ಗೂಡಿಸಿದರೆ ಇಲ್ಲಿಗಿಂತಲೂ ಕಡಿಮೆ, ನಂಬಲೇ ಆಗುತ್ತಿಲ್ಲ! ಇಲ್ಲಿಂದ business process ಗಳನ್ನು ತೆಗೆದುಕೊಂಡು ಹೋಗೋದರ ಜೊತೆಗೆ ಕೆಲಸ ಮಾಡುವ, ಮಾಡಿಸುವ ಪರಂಪರೆಯನ್ನೂ ತೆಗೆದುಕೊಂಡು ಹೋಗಿದ್ದಾರಲ್ಲ ಎಂದು 'ಖುಷಿ'ಯೂ ಆಯಿತು!

ಆದರೆ ಭಾವೈಕ್ಯ, ವೈವಿಧ್ಯತೆ, ಹಲವು ಧರ್ಮ ಸಮನ್ವಯವಾದ ನಮ್ಮ ನಾಡಿನಲ್ಲಿ ಎಲ್ಲಾ ಧರ್ಮೀಯರಿಗೂ ಒಂದಲ್ಲ ಒಂದು ರಜಾ ದಿನವಿದೆಯೆಲ್ಲ ಎಂದು ಸಮಾಧಾನವಾಯಿತು, ಅದೇ ಸಮಯಕ್ಕೆ ಗೂಗಲ್‌ನಲ್ಲಿ ಪಾಪ್ ಅಪ್ ಆದ ಕಾಶ್ಮೀರ ಹತ್ಯಾಖಾಂಡದ ಸುದ್ದಿ ಓದಿ ಖೇದವೂ ಆಯಿತು.

Monday, May 01, 2006

How do you say your name?

ನಾನು ಇಲ್ಲಿಗೆ ಬರುವವರೆಗೂ ಒಬ್ಬ ಮೆಜಾರಿಟಿ ಆಗಿ ಬದುಕಿದ್ದ ನನಗೆ ಮೈನಾರಿಟಿ ಆಗಿ ಬದುಕುವುದು ಹೇಗೆ ಎಂದು ಗೊತ್ತೇ ಇರಲಿಲ್ಲ, ಒಮ್ಮೆ ಇಲ್ಲಿಗೆ ಬಂದ ಮೇಲೆ ನೀರಿನಲ್ಲಿ ಮುಳುಗಿದೋನಿಗೆ ಚಳಿ ಏನ್ ಮಳೆ ಏನ್, ಅಂತಾರಲ್ಲ ಹಾಗೆ ಮೈನಾರಿಟಿಯ ಹಲವು ಬರ್ಡನ್‍ಗಳನ್ನು ಸಹಿಸಿಕೊಂಡು ಸಂತನಾದವರಲ್ಲಿ ನಾನೂ ಒಬ್ಬ - ನನ್ನ ಸಹೋದ್ಯೋಗಿಗಳು ನನಗೆ 'you have patience like a saint' ಅನ್ನೋದೂ ಉತ್ಪ್ರೇಕ್ಷೆಯಲ್ಲದಿದ್ದರೂ, ಅವರೊಂದಿಗೆ ಹಂಚಿಕೊಳ್ಳದ 'thanks to America!' ಅನ್ನೋ ರಹಸ್ಯವನ್ನ ನಿಮ್ಮೊಂದಿಗೆ ಹಂಚಿಕೊಳ್ಳಬೇಕಾಗುತ್ತೆ.

ಇವತ್ತು ಹೇಳೋ ವಿಷಯಾನಾ ಇವನೊಬ್ಬನ ಇನ್ನೊಂದು 'ಕೊರೆಯುವ' ಲೇಖನ ಎಂದು ಟ್ಯಾಗ್ ಮಾಡೊದಕ್ಕೆ ಮೊದಲು ಪೂರ್ತೀ ಓದಿ, ಏಕೆ ಅಂದ್ರೆ, ಇದು ಕೊನೆಯಲ್ಲಿ ನಿಮ್ಮನ್ನೂ ಸುತ್ತಿಕೊಳ್ಳೋ ಬಲವಾದ ಹೆಬ್ಬಾವಾಗುತ್ತೆ, ಮಂದಗತಿಯ ಚಲನೆ, ಆದರೆ ಒಮ್ಮೆ ಸುತ್ತಿಕೊಂಡ್ರೆ ಯಮ ಹಿಡಿತ!

***

ನನ್ನಂಥಾ ತಾಳ್ಮೆಯ ಮನುಷ್ಯನಿಗೂ ಸಿಟ್ಟು ಬರಿಸುವಂತಹ ವಿಷಯಗಳು ನಮ್ಮ ಸುತ್ತಲಿನಲ್ಲಿ ಹಲವಾರಿದೆ, ಅದರಲ್ಲೊಂದು ಎಂದರೆ - ನಾನು ಯಾವುದೇ ಭಾರತೀಯ ಮಕ್ಕಳನ್ನು 'ನಿನ್ನ ಹೆಸರೇನು?' ಎಂದು ಕೇಳಿದಾಗ ಅವರಿಂದ ಬರೋ ಉತ್ತರ. ಉದಾಹರಣೆಗೆ ಒಬ್ಬ ಮುರಳಿ ಅನ್ನೋ ಹುಡುಗ, ತನ್ನ ಹೆಸರನ್ನು 'ಮು ರ್‍ಯಾ ಲಿ' ಅನ್ನೋದೇಕೆ ಎಂದು ನನಗೆ ಈವರೆಗೂ ತಿಳಿದಿಲ್ಲ. ಹೋಗಲಿ 'ಮುರಳಿ' ಅನ್ನೋ ಬದಲಿಗೆ 'ಮುರಲಿ' ಅಂದ್ರೂ ಪರವಾಗಿಲ್ಲ, ಆದರೆ ಒಂದು proper noun ಅನ್ನು ಅಮೇರಿಕನ್ ಶೈಲಿಯಲ್ಲೇ ಏಕೆ ಹೇಳಬೇಕು? ಅಮೇರಿಕದಿಂದ ಅಫಘಾನಿಸ್ತಾನಕ್ಕೆ ಹೋದ ಮೈಕಲ್ 'ನಾನು ಅಮಿರಿಕಿಯಿಂದ ಬಂದಿದ್ದೇನೆ, ನನ್ನ ಹೆಸರು ಮೈಕಲ್ಲು' ಎಂದು ಹೇಳುತ್ತಾನೆಯೇ? NPR ನಲ್ಲಿ ಸುದ್ದಿ ಭಿತ್ತರಿಸುವ ಎಷ್ಟೋ ಜನ - ಲಕ್ಷೀ ಸಿಂಗ್, ಚಿತ್ರಾ ರಾಘವನ್, ಅರುಣ್ ವೇಣುಗೋಪಾಲ್ ಇವರೆಲ್ಲರ ಹೆಸರನ್ನು ಮತ್ತೆ-ಮತ್ತೆ ಕೇಳಿ, ಅವು ಏಕೆ ಅಮೇರಿಕನೈಸ್ಡ್ ಆಗುತ್ತವೆ ಎಂಬುದಕ್ಕೆ ನಿಮ್ಮಲ್ಲಿ ಯಾವುದಾದರೂ ಉತ್ತರವಿದ್ದರೆ ದಯವಿಟ್ಟು ತಿಳಿಸಿ. ಏಕೆಂದರೆ 'ಅರುಣ್' ಅಥವಾ 'ಅರುನ್' ಅನ್ನೋದು ಅತ್ಯಂತ ಸುಲಭವಾದ ಭಾರತೀಯ ಹೆಸರುಗಳಲ್ಲಿ ಒಂದು ಅದನ್ನ 'ಆ ರೂ ನ್' ಅನ್ನೋದು ನನಗೆ ಸ್ವಲ್ಪವೂ ಹಿಡಿಸಲಿಲ್ಲ, ಇದನ್ನೇ ಸ್ವಲ್ಪ ತಿರುಚಿ Aron ಮಾಡಿದ ಉದಾಹರಣೆಗಳು ಇಲ್ಲದಿಲ್ಲ. ಅದೇ ರೀತಿ 'ಮಂಜು-ಮ್ಯಾಂಜು', 'ಗಂಗಾ-ಗ್ಯಾಂಗ', 'ಪ್ರಿಯಾ - ಪ್ರೀಯ' ಇನ್ನು ಕೆಲವು ಉದಾಹರಣೆಗಳು. ನಾನು ಇಲ್ಲಿನವರು ನಮ್ಮ ಹೆಸರುಗಳಲ್ಲಿನ ಅಲ್ಪಪ್ರಾಣ-ಮಹಾಪ್ರಾಣವನ್ನಾಗಲೀ, "ಣ' ಕಾರ, "ಳ" ಕಾರವನ್ನಾಗಲೀ ಚಾಚೂ ತಪ್ಪದೇ ಗೌರವಿಸಬೇಕೆಂದು ಯಾಚಿಸುತ್ತಿಲ್ಲ, ಆದರೆ ನಮ್ಮ ಹೆಸರನ್ನು ನಾವೇ ಬೇರೆಯವರಿಗೆ ಸರಿಯಾಗಿ ಹೇಳಿಕೊಳ್ಳದೇ ಇದ್ದಲ್ಲಿ, ಅವರು ತಪ್ಪಾಗಿ ಉಚ್ಚಾರಿಸಿದಾಗ ಸರಿ ಪಡಿಸದಿದ್ದಲ್ಲಿ ಅದನ್ನು ತಪ್ಪು ಎನ್ನುತ್ತೇನೆ.

ಇದನ್ನೇ ಒಂದು ಸ್ವಲ್ಪ ವಿಷದವಾಗಿ ನೋಡೋಣ: ನಾನು ಗಮನಿಸಿದಂತೆ ಓರಿಯೆಂಟಲ್ ಜನರು ಅಮೇರಿಕಕ್ಕೆ ಬಂದು ಕುಡಿದ ನೀರು ಅರಗಿ ಮೈಸೇರುವುದರೊಳಗೇ ತಮ್ಮ-ತಮ್ಮ ಮೊದಲ ಹೆಸರನ್ನು ಬದಲಾಯಿಸುವುದು ನಿಮಗೆ ಗೊತ್ತಿರಲೇ ಬೇಕು, 'ಹ್ವಾಂಗ್ ಪಾಂಗ್ ಪೋ' ಇದ್ದದ್ದು 'ರಿಚರ್ಡ್ ಪೋ' ಆಗುವುದಕ್ಕೆ ಸ್ವಲ್ಪವೂ ತಡವಿಲ್ಲ. ಇನ್ನು ಎರಡನೇ ತಲೆಮಾರಿನವರಂತೂ ಹುಟ್ಟುತ್ತಲೇ ಡೇವಿಡ್, ಸಿಂಡಿಗಳಾಗುತ್ತಾರೆ. ಆದರೆ ನಮ್ಮ ಭಾರತೀಯರು ನಾನು ನೋಡಿದ ಮಟ್ಟಿಗೆ ತಮ್ಮಲ್ಲಿನ ಹೆಸರುಗಳನ್ನೇ ಚಿಕ್ಕದಾಗಿ ಚೊಕ್ಕದಾಗಿ ಇಡುತ್ತಾರೆ, ಇಟ್ಟುಕೊಳ್ಳುತ್ತಾರೆ. ಸರಿ, ನಮ್ಮ ಸಂಸ್ಕೃತಿಯನ್ನು ನಾವು ಅಷ್ಟರಮಟ್ಟಿಗೆ ಗೌರವಿಸುವ ಜನ ನಾಲ್ಕು ಜನ ಸೇರಿದಲ್ಲಿ ನಮ್ಮ ಹೆಸರನ್ನು ತಿರುಚುವುದೇಕೆ? ಇನ್ನೊಂದು ಮಗ್ಗುಲಿನಿಂದ ನೋಡಿದರೆ - ಇದೇ ಅಮೇರಿಕದಲ್ಲಿ Julio ಎಂದು ಬರೆದು ಹೂಲಿಯೋ ಎಂದೂ, Jose ಎಂದು ಬರೆದು ಹೋಸೇ ಎಂದು ಹೇಳುವ ಪರಿಪಾಠವನ್ನು ನಾವು ಕಲಿತಿಲ್ಲವೇ? ಹಾಗಿದ್ದರೆ ನಮ್ಮ ಹೆಸರನ್ನು ಇರುವಂತೆಯೇ ಉಚ್ಚರಿಸುವಂತೆ ನಾವೇಕೆ ತಾಕೀತು ಮಾಡುವುದಿಲ್ಲ. ನಿಮ್ಮ ಹೆಸರು 'ಕೆಂಡ್‌ಗಣ್ಣ ಸ್ವಾಮಿ' ಎಂದು ಇದ್ದುದಾದರೆ ಅದು ಬೇರೆ ವಿಷಯ, ಆದರೆ ನವೀನ್, ಚಂದ್ರ, ಇಂದ್ರ, ತಾರಾ, ಭಾಗ್ಯ ಎನ್ನುವ ಹೆಸರುಗಳ butchering ಗೆ ಯಾವ ಅಗತ್ಯವೂ ಇಲ್ಲ ಅಲ್ಲವೇ (ನನ್ನ ಅಣ್ಣನ ಸಹಪಾಠಿಯೊಬ್ಬನ ಹೆಸರು ಕೆಂಡ್‌ಗಣ್ಣ ಸ್ವಾಮಿ, hope he doesn't read this post. Even if he does, he will be, 'ಕೆಂಡ್' anyway!).

ಒಂದು ವಿಷಯವಂತೂ ಗ್ಯಾರಂಟಿ - ನಿಮ್ಮ ಹೆಸರನ್ನು ನೀವು ಎಷ್ಟೇ ತಿರುಚಿಕೊಳ್ಳಿ, ಇಲ್ಲಿನವರ ಅಗತ್ಯಗಳಿಗೆ ಸ್ವಂದಿಸಿ ಹೊಂದಿಸಿಕೊಳ್ಳಿ, ನಿಮ್ಮ ಚರ್ಮದ ಬಣ್ಣ ಹಾಗೂ ಧ್ವನಿಯ ಏರಿಳಿತ ಕೊನೇವರೆಗೂ ಭಾರತೀಯವಾಗೇ ಇರುತ್ತೆ. ಕನ್ನಡ ಹಾಡುಗಳನ್ನು ಉತ್ತರ ಭಾರತದವರ ಬಾಯಲ್ಲಿ ಕೇಳಿದವರಿಗೂ, ಜುಲೈ ೪ ರಂದು ವಾಷಿಂಗ್‌ಟನ್ ಡಿ.ಸಿ.ಗೆ ಹೋಗಿ ಫೈರ್‌ವರ್ಕ್ಸ್ ನೋಡಿದವರಿಗೂ (ನಾವು ಎಷ್ಟು ಚಿಕ್ಕ ಮೈನಾರಿಟಿ ಎಂಬರ್ಥದಲ್ಲಿ), ನಾನು ಹೇಳುತ್ತಿರುವುದೇನೆಂದು ತಟ್ಟನೆ ಗೊತ್ತಾಗುತ್ತದೆ. ಸೋನು ನಿಗಮ್ ಆಗಲಿ ಪಂಕಜ್ ಉದಾಸ್ ಆಗಲಿ ಎಷ್ಟೇ ಸ್ವಾರಸ್ಯಕರವಾಗಿ ಕನ್ನಡ ಹಾಡುಗಳು ಹಾಡಿದರೂ, ಅವರ ಧ್ವನಿ ದಕ್ಷಿಣದವರ ಧ್ವನಿಯಂತಿರೋಲ್ಲ, ನಿಮಗೆ ನನ್ನ ಮಾತುಗಳಲ್ಲಿ ನಂಬಿಕೆ ಇರದಿದ್ದರೆ ಉದಿತ್ ನಾರಾಯಣ್ ಹಾಡಿರೋ, 'ಕರಿಯಾ' ಚಿತ್ರದ 'ನನ್ನಲಿ ನಾನಿಲ್ಲ' ಹಾಡನ್ನು ನೀವೇ ಒಮ್ಮೆ ಕೇಳಿ ನೋಡಿ. ಅಶ್ವಥ್, ಗುರುರಾಜ ಹೊಸಕೋಟೆ, ಬಾಲಸುಬ್ರಮಣ್ಯಂ, ಅನುರಾಧಾ ಪೌದ್‌ವಾಲ್, ಗುರು ಕಿರಣ್, ಮುರಳಿ ಮೋಹನ್, ಶಮಿತಾ ಹಾಡಿದ ಇದೇ ಸಿನಿಮಾದ ಇತರೆ ಹಾಡುಗಳನ್ನೂ ಬೇಕಾದರೆ ಕೇಳಿನೋಡಿ. ನಮಗೆಷ್ಟು ವಿಶೇಷವಾದ ಧ್ವನಿ ಇದೆಯೋ, ಅಷ್ಟೇ ವಿಶಿಷ್ಟವಾಗಿ ನಮ್ಮ ಹೆಸರೂ ನಮ್ಮ ಸಂಸ್ಕೃತಿಯೂ ಇರಬಾರದೇಕೆ, ಅದರಲ್ಲಿ ತಪ್ಪೇನಿದೆ? Let me know if you disagree.

***

೨೦೦೩ ರಿಂದ ಇಲ್ಲೀವರೆಗೆ ಆಫೀಸ್‌ನಲ್ಲಿ ಅಮೇರಿಕದ ಉದ್ದಗಲದಲ್ಲೆಲ್ಲ ಹರಡಿರುವ ಗ್ರಾಹಕರ ಜೊತೆ ದಿನವೂ ಮಾತನಾಡುವ ಕಾಯಕವೂ ನನ್ನ ಕೆಲಸಗಳಲ್ಲೊಂದು. ಮೊದಮೊದಲು ನನ್ನ ಹೆಸರನ್ನು ಅವರೆಲ್ಲರೂ ಹೇಳಲು ಕಷ್ಟ ಹಾಗೂ ಸಂಕೋಚ ಪಡುತ್ತಿದ್ದರು, ಅಲ್ಲದೇ ಇದ್ದ ಹೆಸರನ್ನೇ ತುಂಡುಮಾಡಿಕೊಳ್ಳುವಂತೆ, ಅಥವಾ ಇನ್ಯಾವುದೋ ಹೆಸರನ್ನು ಜೋಡಿಸಿಕೊಳ್ಳುವಂತೆ ಮುಕ್ತ ಸಲಹೆಗಳು ಬಂದವು, ಆದರೆ ಇವುಗಳಿಗ್ಯಾವುದಕ್ಕೂ ಬಗ್ಗದ ನಾನು ನನ್ನ ಹೆಸರನ್ನು ಇದ್ದಂತೆಯೇ ಹೇಳುತ್ತಿದ್ದೆ, ಒಂದೆರೆಡು ಬಾರಿ ಅವರ ಜೊತೆ ಮಾತನಾಡಿದ ಮೇಲೆ ಅವರೆಲ್ಲರೂ ನನಗೆ ಆಶ್ಚರ್ಯವಾಗುವಂತೆ ಪಕ್ಕಾ ಭಾರತೀಯ ಉಚ್ಚಾರಣೆಯಲ್ಲಿಯೇ ನನ್ನ ಹೆಸರನ್ನು ಹೇಳುವುದನ್ನು ಕಲಿತರು. ಆ ಒಂದು ಆತ್ಮವಿಶ್ವಾಸದಿಂದ ಇಲ್ಲಿಯವರೆಗೂ ಯಾರೇ ನನ್ನ ಹೆಸರನ್ನು (ಮೀಟಿಂಗ್ ಅಥವಾ ಕಾನ್‌ಫರೆನ್ಸ್ ಕಾಲುಗಳಲ್ಲಿ) ತಪ್ಪು ಉಚ್ಚಾರಿಸಿದರೂ ನಾನು ನಿರ್ಭಿಡೆಯಿಂದ ಅವರನ್ನು 'ಹಾಗಲ್ಲ, ಹೀಗೆ' ಎಂದು ತಿದ್ದುತ್ತೇನೆ, ಅದೇ ತಪ್ಪನ್ನು ಎರಡು ಸಾರಿ ಮಾಡಿದವರ್‍ಯಾರು ಇನ್ನೂ ಸಿಕ್ಕಿಲ್ಲ!

***

ಈಗ ಇದನ್ನೆಲ್ಲ ಇಲ್ಲೀವರೆಗೆ ಶಾಂತಚಿತ್ತದಿಂದ ಓದಿದ ನಿಮಗೆಲ್ಲ ಒಂದು ಸಣ್ಣ ಪರೀಕ್ಷೆ (ನೀವು ನನ್ನಂತೆಯೇ 'ಪಾಪಿಷ್ಟ'ರಾದಲ್ಲಿ ನಿಮಗೆ ಇದು ಹೆಚ್ಚು ಅನ್ವಯವಾಗುತ್ತೆ).

Now, how do you say or pronouce your first name?
(seriously, please say it out loud)
(ಪರವಾಗಿಲ್ಲ ಹೇಳಿ)

...

Is there a difference in how others say it versus how you say it?

Or

Is there a difference in how your name is pronounced here versus back home?


If the answer is 'Yes', then you are in it!

Sunday, April 30, 2006

Susquehanna ಎಂಬ ನದಿ

ನನ್ನ ಸ್ನೇಹಿತರ ಜೊತೆ ನಾನು ತಮಾಷೆ ಮಾಡುವುದಿದೆ, 'I am an Indian but not a native American!' ಎಂದು.

ಆದರೆ ಇಲ್ಲಿನ ನೇಟಿವ್ ಅಮೇರಿಕನ್ನರ ಹಾಗೆ ನಮಗಿರೋ ಒಂದು ಸ್ವಭಾವವೆಂದರೆ ನೈಸರ್ಗಿಕ ಸಂಪನ್ಮೂಲಗಳನ್ನ ನಾವು ಭಾರತೀಯರು ಗೌರವಿಸೋದು. ನಾನು ಯಾರ ಜೊತೆಯಲ್ಲೇ ಕಾರಿನಲ್ಲಿ ಹೋಗುತ್ತಿರಲಿ, ಅವರೆಲ್ಲರೂ ದಾರಿಯಲ್ಲಿ ಬರುವ ನದಿ, creek ಮುಂತಾದವುಗಳನ್ನು ಗುರುತಿಸಿ 'ಓಹ್' ಎನ್ನುವ ಉದ್ಗಾರ ತೆಗೆಯುವುದನ್ನು ನೋಡಿದ್ದೇನೆ. ಕೆಲವೊಮ್ಮೆ, 'ಇದೇನಾ ಪೋಟೋಮ್ಯಾಕ್ ನದಿ', ಅಥವಾ 'ಈ ನದಿ ಎಷ್ಟೊಂದು ಚೆನ್ನಾಗಿದೆ!' ಅಥವಾ 'ತುಂಬಾ ಅಗಲವಾಗಿದೆಯಪ್ಪಾ!' ಅನ್ನೋ ಪ್ರಶಂಸೆಯ ಮಾತುಗಳು ಭಾರತದಿಂದ ಹೊಸದಾಗಿ ಬಂದಿರುವವರಿಂದ ಹಿಡಿದು, ಇಲ್ಲಿ ಎಷ್ಟೋ ವರ್ಷಗಳಿಂದ ಇದ್ದವರಿಂದಲೂ ಹೊರಬರುತ್ತೆ. 'ನಾವು ಪ್ರಕೃತಿಯ ಆರಾಧಕರು' ಅನ್ನೋದು ನನಗೆ ಹೆಮ್ಮೆಯ ವಿಷಯ.

***



ವಾಷಿಂಗ್‌ಟನ್ ಡಿಸಿ ಹಾಗೂ ನ್ಯೂ ಯಾರ್ಕ್ ಸಿಟಿಗಳ ಮಧ್ಯೆ ಪ್ರಯಾಣ ಮಾಡಿದವರಿಗೆ Susquehannaಳ ಪರಿಚಯ ಖಂಡಿತವಾಗಿ ಆಗಿರುತ್ತೆ. ಅಮೇರಿಕದ ಈಸ್ಟ್ ಕೋಸ್ಟ್‌ನಲ್ಲಿ ಅತ್ಯಂತ ಉದ್ದವಾದ ನದಿಗಳಲ್ಲಿ ಇದೂ ಒಂದು, ಸುಮಾರು ೪೪೦ ಮೈಲು ಹರಿಯುವ ಈ ನದಿಗೆ ಬಹಳಷ್ಟು ಐತಿಹಾಸಿಕ ಹಿನ್ನೆಲೆ ಇದೆ.

***

ಬಾಬ್ ಎರ್ಲಿಚ್ (Robert Ehrlich) ಮೇರಿಲ್ಯಾಂಡ್‌ನ ಗವರ್ನರ್ ಆದಮೇಲೆ ಸ್ಥಳೀಯ ಬ್ರಿಡ್ಜ್ ಹಾಗೂ ಟನಲ್‌ಗಳ ಟೋಲ್ ಹೆಚ್ಚು ಮಾಡಿದಾಗ ಅವನಿಗೆ ಹಿಡಿ ಶಾಪ ಹಾಕಿದವರಲ್ಲಿ ನಾನೂ ಒಬ್ಬ. ಬಾಲ್ಟಿಮೋರ್ ಟನಲ್‌ಗೆ ಒಂದು ಡಾಲರ್ ಇದ್ದುದ್ದನ್ನ ಎರಡು ಮಾಡಿದ, ನನ್ನ ಪ್ರೀತಿಯ ಸಸ್ಕ್ವೆಹಾನ್ನಾ ನದಿಗೆ ಕಟ್ಟಲಾದ ಸೇತುವೆಗಳ ಮೇಲೆ ಎರಡು ಅಥವಾ ಮೂರು ಡಾಲರ್ ಇದ್ದುದ್ದನ್ನ ಐದು ಡಾಲರ್‌ಗೆ ಹೆಚ್ಚಿಸಿ, ಈಸ್ಟ್ ಕೋಸ್ಟ್‌ನಲ್ಲೇ ಅತಿ ಹೆಚ್ಚು ಟೋಲ್ ಇರುವ ಬ್ರಿಜ್‌ಗಳಲ್ಲೊಂದನ್ನಾಗಿ ಮಾಡಿದ. ಯಾಕೆಂದರೆ ನ್ಯೂ ಯಾರ್ಕ್‌ಗೆ ಹೋಗೋವಾಗ ವಾಶಿಂಗ್ಟನ್ ಬ್ರಿಜ್‌ಗೆ ಕೇವಲ ಒಂದೇ ಮುಖವಾಗಿ ಆರು ಡಾಲರ್ ಕೊಟ್ಟರೆ ಇಲ್ಲಿ ಸಸ್ಕ್ವೆಹಾನ್ನಾಕ್ಕೆ ೯೫ ನಲ್ಲಿ ಹೋದಾಗ ಹೋಗಿ-ಬರುವಾಗ ಕೊಡುವ ಟೋಲ್ ಎಂಟು ಡಾಲರ್ ಆಗುತ್ತದೆ. ಆದರೆ ಎರ್ಲಿಚ್‌ಗೆ ಥ್ಯಾಂಕ್ಸ್ ಹೇಳಲೇ ಬೇಕು, ಏಕೆಂದರೆ ಅವನ ದೆಸೆಯಿಂದಾಗಿಯೇ ನಾನು ಸಸ್ಕ್ವೆಹಾನ್ನಾಳನ್ನು ಇನ್ನೂ ಹೆಚ್ಚು ತಿಳಿದುಕೊಳ್ಳುವಂತಾಗಿದ್ದು!



ನೂ ಯಾರ್ಕ್‌ನಿಂದ ವಾಶಿಂಗ್ಟನ್‌ಗೆ ಬರುವಾಗ ಡೆಲಾವೇರ್ ಸೇತುವೆ ದಾಟಿದ ನಂತರ ನಾನು ಎಲ್ಲರಂತೆ ೯೫ ನಲ್ಲಿ ಪ್ರಯಾಣ ಮುಂದುವರಿಸದೇ ಪಶ್ಚಿಮ ಮುಖಿ ರೂಟ್ ೪೦ ಅನ್ನು ಹಿಡಿಯುತ್ತೇನೆ. ಡೆಲಾವೇರ್‌ನ ತೆರಿಗೆ ಮುಕ್ತ ಅಂಗಡಿಗಳನ್ನು, ಹಾಗೂ ದಾರಿಯಲ್ಲಿ ಸಿಗುವ ಕೆಲವು ಉತ್ತಮ ರೆಸ್ಟೋರಂಟುಗಳನ್ನೋ ನೋಡಿಕೊಂಡು ಉದ್ದಾನುದ್ದ ರೂಟ್ ೪೦ರಲ್ಲಿ ಬರುತ್ತಲೇ ಮೇರಿಲ್ಯಾಂಡ್‌ನ ಸೆಸಿಲ್ ಕೌಂಟಿ ಸಿಗುತ್ತದೆ. ಇಲ್ಲಿಂದ ಸುಮಾರು ೨೦ ಮೈಲ್ ಪ್ರಯಾಣ ಮಾಡುತ್ತಿದ್ದಂತೆ Havre de Grace ಸಿಗುತ್ತೆ, ಹಾಗೇ ಮುಂದೆ ಹೋದರೆ ಅದೇ ಸಸ್ಕ್ವೆಹಾನ್ನಾಳ ಮೇಲೆ ಕಟ್ಟಿದ Hatem bridge ಸಿಗುತ್ತದೆ. ಇಲ್ಲಿ ಯಾವುದೇ ಟೋಲ್ ಕೊಡಬೇಕಾಗಿಲ್ಲ. ಈ ಸೇತುವೆ ದಾಟಿ ರೂಟ್ ೧೫೫ ರಲ್ಲಿ ಬಂದರೆ ಅದೇ ೯೫ ಮತ್ತೆ ಸಿಗುತ್ತೆ, ಮುಂದೆ ಬಾಲ್ಟಿಮೋರ್ ಸಿಗುವ ವರೆಗೆ ನೀವು ಯಾವುದೇ ಟೋಲ್ ಕೊಡಬೇಕಾಗಿಲ್ಲ. (ನ್ಯೂ ಜೆರ್ಸಿ ಹಾಗೂ ವಾಷಿಂಗ್ಟನ್ ನಡುವೆ ಕೇವಲ ಮೂರು ಅಥವಾ ಏಳು ಡಾಲರ್ ಟೋಲ್ ಕೊಟ್ಟು ಬಂದು ಹೋಗುವ ಮಾರ್ಗಗಳ ಅಗತ್ಯ ನಿಮಗಿದ್ದಲ್ಲಿ ಅವಶ್ಯವಾಗಿ ನನಗೆ ಬರೆಯಿರಿ, ನಾನು ನಿಮಗೆ ವಿವರಗಳನ್ನು ತಿಳಿಸಿ ಇ-ಮೇಲ್ ಕಳಿಸುತ್ತೇನೆ - again thanks to Ehrlich!). ಹೀಗೆ ಹಣ ಉಳಿಸುವುದಕ್ಕೋ ಅಥವಾ ಸಸ್ಕ್ವೆಹಾನ್ನಾಳ ಮೇಲಿನ ಪ್ರೀತಿಗೋ ಕಟ್ಟುಬಿದ್ದು ರೂಟ್ ೧ ರಲ್ಲಿ ಬರುವ Conowingo ಅಣೆಕಟ್ಟನ್ನೂ ನೋಡಿಕೊಂಡು ಬಂದಿದ್ದೇನೆ.

ನೀವು ಮಿಡ್-ಅಟ್ಲಾಂಟಿಕ್ ಪ್ರದೇಶದಲ್ಲಿದ್ದು ಸಸ್ಕ್ವೆಹಾನ್ನಾಳ ಹಲವಾರು ಪಾತ್ರಗಳನ್ನು ಹಾಗೂ ಸ್ಟೇಟ್ ಪಾರ್ಕ್‌ಗಳನ್ನೂ ನೋಡದೇ ಹೋದಲ್ಲಿ ಬಹಳ ಮಹತ್ವವಾದದನ್ನೇನೋ ಕಳೆದುಕೊಂಡಿದ್ದೀರೆಂದು ನಿಸ್ಸಂಶಯವಾಗಿ ಹೇಳಬಲ್ಲೆ.

***

ನನ್ನ ಸಹೋದ್ಯೋಗಿ ಎಡ್ ಕಾಲಿನ್ಸ್ ಮೀನು ಹಿಡಿಯುವುದರಲ್ಲಿ ನಿಸ್ಸೀಮ, ಅವನನ್ನು ಮಾತನಾಡಿಸಿದಾಗೆಲ್ಲ ಮೀನಿನ ಬಗ್ಗೆ ಕೇಳಿದರೆ ಅವನ ಕಣ್ಣುಗಳು ತಂತಾನೆ ಅಗಲವಾಗುತ್ತವೆ, ಕೆಲಸದಲ್ಲಿ ಎಷ್ಟೇ ವ್ಯಸ್ತನಾಗಿದ್ದರೂ ಮೀನು ಹಿಡಿಯುವುದರ ಬಗ್ಗೆ ಮಾತನಾಡಲು ಅವನಲ್ಲಿ ಸಮಯವಿರುತ್ತೆ! ಅವನು ಇಲ್ಲೇ Philadelphia ಏರಿಯಾದಲ್ಲಿ ಇರುತ್ತಾನಾದ್ದರಿಂದ ಸಸ್ಕ್ವೆಹಾನ್ನಾಳಿಗೂ ಹಲವಾರು ಬಾರಿ ಅಗತ್ಯವಾಗಿ ಭೇಟಿಕೊಟ್ಟಿದ್ದಾನೆ. ಅವನ ಜೊತೆ ಮಾತನಾಡಿದಾಗೆಲ್ಲ ನಾನೂ fishingಗೆ ಹೋಗಿದ್ದರೆ ಎಷ್ಟೊಂದು ಚೆನ್ನಿತ್ತು ಎಂದು ಅನ್ನಿಸಿದೆ.

ನಿಮಗೆ ಗೊತ್ತಿರೋ ಹಾಗೆ - ಫಿಷಿಂಗ್ ಅನ್ನೋದು ತಂದೆ ಮಗನಿಗೆ tricks of the trade ಹೇಳಿಕೊಡುವ, ಒಂದು ತಲೆಮಾರಿನ ಜಾಣತನವನ್ನು ಮತ್ತೊಂದು ತಲೆಮಾರಿಗೆ ದಾಟಿಸುವ ಒಂದು ಚೌಕಟ್ಟಾಗಿ ಇಲ್ಲಿ ನನಗೆ ಕಂಡಿದೆ. ನನಗೆ ಬಿಡುವಿದ್ದಾಗಲೆಲ್ಲ ಸಸ್ಕ್ವೆಹಾನ್ನಾ ನದಿಯ ಪಕ್ಕದ ಸ್ಟೇಟ್ ಪಾರ್ಕಿಗೆ ಹೊಗುತ್ತೇನೆ. ಅಲ್ಲಿ ಮೀನು ಹಿಡಿಯುವರನ್ನು ನಾನೇ ಮೈಮೇಲೆ ಬಿದ್ದು ಮಾತನಾಡಿಸುತ್ತೇನೆ, ಅವರು ಮೊದ ಮೊದಲು ಒಂದು ರೀತಿಯ ಪ್ರತಿರೋಧವನ್ನು ತೋರಿಸಿದರೂ, ಅವರನ್ನು ಮಾತನಾಡಿಸಲೆಂದೇ ಸಸ್ಕ್ವೆಹಾನ್ನಾ ನದಿಯಲ್ಲಿ ಸಿಗುವ White catfish, Shad, Smallmouth Bass ಮುಂತಾದ ಮೀನುಗಳ ಬಗ್ಗೆ ತಿಳಿದುಕೊಂಡು ಏನಾದರೊಂದು ಪ್ರಶ್ನೆ ಕೇಳಿ ಮಾತಿಗಿಳಿದರೆ ಅವರು ನನ್ನನ್ನೆಂದೂ ತಿರಸ್ಕರಿಸಿದ್ದಿಲ್ಲ.



'ನೀವೂ ನಿಮ್ಮ ಮಕ್ಕಳನ್ನು fishingಗೆ ಕರೆದುಕೊಂಡು ಹೋಗಿ' ಎಂದು ಅಮೇರಿಕದಲ್ಲಿ ಸುಮಾರು ಮೂವತ್ತು ವರ್ಷ ಇದ್ದಿರೋ ಕನ್ನಡಿಗ ಸ್ನೇಹಿತೆ ಒಬ್ಬರು ನನಗೆ ಸಲಹೆ ಮಾಡಿದ್ದರು, ಅವರು ಮೀನು ತಿನ್ನೋದಿಲ್ಲ, ಆದರೆ fishing ಆಗುವಾಗ ನಡೆಯೋ ಮೌನ ಸಂಭಾಷಣೆ ಹಾಗೂ ತಲೆಮಾರುಗಳ ಮಾಹಿತಿ ವಿನಿಮಯದ ಮಹತ್ವವನ್ನು ಅವರು ಚೆನ್ನಾಗೇ ಅರಿತಿದ್ದರು. ಆದ್ದರಿಂದಲೇ ಮೀನನ್ನು ಗಾಳ ಹಾಕಿ ಹಿಡಿದು ಮತ್ತೆ ನದಿಗೇ ಬಿಡುವ ಜನರನ್ನು ನೋಡಿದರೆ ನನಗೆ ಮೊದಲೆಲ್ಲ ಆಶ್ಚರ್ಯವಾದಂತೆ ಈಗೀಗ ಆಗೋದಿಲ್ಲ. ಮೀನು ಹಿಡಿಯುವ ಕ್ರಿಯೆಗಿಂತ, ಅದರ ಪ್ರಕ್ರಿಯೆ, ಅದರ ಹಿಂದಿನ ಯೋಚನಾ ಲಹರಿ, ಇಂದಿನ ವ್ಯಸ್ತ ದಿನಗಳಲ್ಲಿ ಅದು ನೀಡುವ ಪ್ರಕೃತಿಯ ಜೊತೆಗೆ ಒಡನಾಡುವ ಅವಕಾಶ ಇವೆಲ್ಲ ಮುಖ್ಯವಾಗಿ ಕಾಣುತ್ತದೆ.

***

ಇನ್ನು ಎಂದಾದರೂ ನನ್ನ ಕಾರಿನಲ್ಲಿ ಅಥವಾ ಮನೆಯಲ್ಲಿ fishing ರಾಡ್ ನೋಡಿದರೆ ನೀವು 'ಅಯ್ಯೋ ನೀವೂ ಮೀನು ತಿನ್ತೀರಾ' ಎಂದು ಪ್ರಶ್ನಿಸೋಲ್ಲ, ಅಕಸ್ಮಾತ್ ಹಾಗೆ ಕೇಳಿದರೂ ನಾನು ಅದನ್ನು ತಪ್ಪು ಎಂದುಕೊಳ್ಳೋದಿಲ್ಲ, ಆದರೆ ನನ್ನ ವಿವರಣೆ ಕೇಳುವುದಕ್ಕೆ ನಿಮ್ಮಲ್ಲಿ ವ್ಯವಧಾನವಿರಬೇಕಷ್ಟೇ!

Saturday, April 29, 2006

ಹಾಡು ಕಾಡುವ ಹೊತ್ತು

ನಿನಗೆಂದು ನಾನು ನನಗೆಂದು ನೀನು
ಕನಸಾಗಿ ಕಣ್ಣ ತುಂಬಿರೇ

ಒಡಲಾಳದಲ್ಲಿ ಹಿತವಾದ ನೋವು
ಅನುಕಂಪವಾಗಿ ಬೆಳೆದಿರೇ

ಹೊಸಹಾಡು ಉಕ್ಕಿ ಹೊನಲಾಗಿ ಹರಿದು
ಸುಧೆಯಾಗಿ ಪಯಣ ಬೆಳೆಸಿರೇ

ಮೂಡಣದ ಚೆಲುವು ಮೂಡುತಲಿ ಒಲವು
ನಗೆ ಸಂಭ್ರಮವ ಬಿತ್ತಿರೇ

ಈ ಸೃಷ್ಟಿಯ ಸಮಷ್ಟಿಯಲ್ಲಿ
ಜೊತೆಯಾಗಿ ನಿಂತ ಜೋಡಿಯೇ

ನನ್ನೆದೆಯ ಎದೆಗೆ ಸಿಂಚನದ ಕೊಡುಗೆ
ಹೊಸ ಬುಗ್ಗೆಯಾದ ಚೇತನಾ

ಬರಿಗಾಲಿನಲ್ಲಿ ಭುವಿಯನ್ನು ಸುತ್ತೋ
ಹೊಸ ಹುರುಪು ತಂದ ಭಾವವೇ

***

ಈಗ್ಗೆ ನಾಲ್ಕೈದು ತಿಂಗಳಿನಿಂದ ಈ ಹಾಡು ಮನಸ್ಸಿನಲ್ಲಿ ನಿಂತಿದೆ, ಯಾರಿಗಾದರೂ ಸಂಗೀತ ಬರುವವರಿಗೆ ಈ ಹಾಡನ್ನು ತೋರಿಸಿ ಒಂದು ರೂಪ ಕೊಡುವ ಉತ್ಸಾಹ ಒಮ್ಮೆ ಬಂದರೂ, who cares ಅನ್ನೋ ಸಿಂಚನ ಈ ಅಲೋಚನೆಗಳಿಗೆಲ್ಲ ತಣ್ಣಿರೆರಚಿಬಿಡುತ್ತದೆ. ಇಲ್ಲಿ ಬರೆದ ಹಲವು ಪಂಕ್ತಿಗಳ ಇತರ ವೇರಿಯೇಷನ್‌ಗಳನ್ನು ಬರೆದುಕೊಂಡು ಅಲ್ಲಲ್ಲಿ ಗೀಚಿದ್ದಾಯ್ತು, ತಿದ್ದಿದ್ದಾಯ್ತು. ಆಫೀಸಿನ ಸಮಯದಲ್ಲಿ ಬಿಡುವು ಸಿಕ್ಕಾಗ ಗುನುಗಿ ಕೊಂಡಾಯ್ತು, ಏನು ಮಾಡಿದರೂ ಈ ಹಾಡು ಕಾಡುವುದೊಂದನ್ನು ಬಿಟ್ಟು ಇನ್ನೇನನ್ನೂ ಮಾಡುತ್ತಿಲ್ಲ.

ಇದು ಯಾವ ರಾಗದಲ್ಲಿ ಹುಟ್ಟಿದೆಯೋ ಯಾರಿಗೆ ಗೊತ್ತು, ಸಂಗೀತ ಕಲಿಯುವುದಕ್ಕೆಂದು ಎರಡು ಬಾರಿ ಪ್ರಯತ್ನಿಸಿ ಅದಕ್ಕೆ ತಿಲಾಂಜಲಿ ಇಟ್ಟವನು ನಾನು, ನನ್ನಂತವರಿಗೆ ಅದು ಒದಗಿಬರಲಿಲ್ಲ. ಆದರೆ ಅಲ್ಲಲ್ಲಿ ಮಿಣುಕು ಹುಳದೋಪಾದಿಯಲ್ಲಿ ಯಾವುದೋ ಒಂದು ರಾಗದ ಯಾವುದೋ ಒಂದು ತುಣುಕು ಮನಸ್ಸಲ್ಲಿ ಅವತರಿಸಿ ತಣ್ಣಗೆ ಕೊರೆಯಲು ಶುರುಮಾಡುತ್ತದೆ, ಅದನ್ನು ಹೊರ ಹಾಕುವವರೆಗೆ ಸಮಾಧಾನವೇ ಆಗುವುದಿಲ್ಲ ಒಂದು ರೀತಿ ಸ್ನಾನ ಮಾಡಿದ ಮೇಲೆ ಕಿವಿಯ ಒಳಗೆ ನೀರು ಸೇರಿ ಹಿಂಸೆ ಆಗುವ ಹಾಗೆ. ನನ್ನ ಕೇಳಿದರೆ ಘಂಟೆಗಟ್ಟಲೇ ಯಾವ ಭಾಷೆಯ ಹಂಗೂ ಇಲ್ಲದೇ ಬರೀ ರಾಗಗಳ (ಅದರಲ್ಲೂ ಹಿಂದೂಸ್ಥಾನಿಯ) ಮೋಡಿಗೆ ಮಾರುಹೋಗುವ ಸುಖ ಇದೆ ನೋಡಿ, ಅದು ಭಯಂಕರವಾದುದು. ದೇವ ನಿರ್ಮಿತ ರಾಗಕ್ಕೆ ಮಾನವ ನಿರ್ಮಿತ ಭಾಷೆಯ ಬಂಧನವೇಕೆ? ಭಾಷೆಯ ಬಂಧನವಿದ್ದರೂ ಮೊನ್ನೆ ನಡೆದ ಜಸ್‌ರಾಜರ ಕಛೇರಿಯಲ್ಲಿ ತಲ್ಲೀನರಾದ ಹಲವರ ತೇವವಾದ ಕಣ್ಣುಗಳನ್ನು (ನನ್ನನ್ನೂ ಸೇರಿ) ವಿವರಿಸುವ ಬಗೆ ಎಂತು?

ಪಠ್ಯ ಪುಸ್ತಕದಲ್ಲಿ 'ವೀರ ರವಿಸುತನೊಂದು ದಿನ ಪರಿತೋಷಮಿಗೆ ಭಾಗೀರತಿ ತೀರದಲಿ...' ಎಂದು ಭಾಮಿನಿ ಷಟ್ಪದಿಯನ್ನು ಓದುತ್ತಿದ್ದಾಗ ಹೊಳೆದಿತ್ತು, ಆರು ಸಾಲಿನಲ್ಲಿರುವವೆಲ್ಲ ಷಟ್ಪದಿಗಳಲ್ಲ ಎಂದು - ಬರಿ ಸಾಲುಗಳ ಸಂಖ್ಯೆ ಅಷ್ಟೇ ಅಲ್ಲ, ಲಘು-ಗುರು ಗಳೂ ಲೆಕ್ಕಕ್ಕಿರಬೇಕು ಎಂದು ಹತ್ತನೇ ತರಗತಿಯಲ್ಲಿ ಮೇಷ್ಟ್ರು ಸ್ವಲ್ಪ ಹೆಚ್ಚಾಗೇ ತಿವಿದಿದ್ದರಿಂದಲೋ ಏನೋ ಇಂದಿಗೂ ಅವು ನನ್ನ ನೆನಪನ್ನು ಬಿಟ್ಟು ಹೋಗುತ್ತಿಲ್ಲ. ಮುಂದೆ ಹದಿನಾಲ್ಕು ಸಾಲಿರುವ ಪದ್ಯಗಳನ್ನು ಬರೆದವರೆಲ್ಲ ಶೇಕ್ಸ್‌ಪಿಯರ್ ಆಗುತ್ತಾರೆ ಎಂದುಕೊಂಡು ನಂಬಿ ಬರೀ ಹದಿನಾಲ್ಕು ಸಾಲಿನಲ್ಲಿ ಮುಗಿಯುವಂತೆ ಪದ್ಯವನ್ನು ಬರೆದು ಅದನ್ನು ಕಾಲೇಜಿನ ಮ್ಯಾಗಜೀನ್‌ನಲ್ಲಿ ಸಾನೆಟ್ ಎಂದು ಪ್ರಕಟಿಸಿದವನೂ ನಾನೆ ಎಂದು ಇಂದು ಯೋಚಿಸಿ ನಾಚಿಕೆಯಾಗುತ್ತದೆ.

***

ಜಸ್‌ರಾಜರ ಭೈರವ ಕೇಳುತ್ತಿದ್ದಂತೆ ಅನ್ನಿಸುತ್ತಿತ್ತು, ಯಾಕೋ ಪಕ್ಕ ವಾದ್ಯ ಸರಿಯಾಗಿ ಬರುತ್ತಿಲ್ಲ ಎಂದು, ಅಥವಾ ಸಾತ್‌ನಲ್ಲಿ ಏನೋ ಕೊರತೆ ಇದೆಯೋ, ಅಥವಾ ಭೈರವದ ಬಗ್ಗೆ ನನಗೆ ಅಂತದ್ದೇನು ಗೊತ್ತು? ಅದರಲ್ಲಿ ಎಷ್ಟು ಬಗೆ ಇದೆ, ಯಾವ ಹೊತ್ತಿಗೆ ಹಾಡುತ್ತಾರೆ, ಯಾವ ಭಾವದಲ್ಲಿ ಮೂಡುತ್ತೆ ಎಂದು. ಮನಸ್ಸು ಇನ್ನೇನು ರಾಗದ ಪದರಗಳಲ್ಲಿ ಹುದುಗಬೇಕು ಎಂದು ಕೊಂಡಾಗ ಒಂದು ಬದಿಯ ಸ್ಪೀಕರ್ ಕೆಲಸ ಮಾಡುವುದು ನಿಲ್ಲಿಸಿ, ಇಷ್ಟು ಹೊತ್ತಿನವರೆಗೆ ನನ್ನ ತಲೆಯ ಹಿಂದೆ ಬರುತ್ತಿದ್ದ ಧ್ವನಿ ಈಗ ಎಲ್ಲೋ ದೂರದಲ್ಲಿ ಕೇಳಿ ಬರುತ್ತಿದ್ದಂತೆ ಕಣ್ಣು ಬಿಟ್ಟು ನೋಡುವುದರೊಳಗೆ ದಿನವಿಡಿ ಕಾಡುವ problem resolution modeಗೆ ಮನಸ್ಸು ಒಂದು ನ್ಯಾನೋ ಸೆಕೆಂಡಿನಲ್ಲಿ ಬಂದು ಬಿಡುತ್ತದೆ. ಇಷ್ಟು ದೊಡ್ಡ ಆಡಿಟೋರಿಯಂ‌ನಲ್ಲೂ ಈ ಥರನ ಸಮಸ್ಯೆಯೇ, 'ಛೇ' ಅಂದುಕೊಳ್ಳುತ್ತೇನೆ, ಸಂಗೀತ ಕಛೇರಿ ನಡೆಯುತ್ತಿದ್ದಂತೆಯೇ ಆಡಿಟೋರಿಯಂ‌ನ ಟೆಕ್ನಿಷಿಯನ್ ಬಂದು ರಿಪೇರಿ ಮಾಡಿದಂತೆ ಮಾಡುವುದು, ಮತ್ತೆ ಕೆಡುವುದೂ ಹೀಗೆ ಒಂದೆರಡು ಬಾರಿ ನಡೆದು ಕೊನೆಗೆ ಸ್ಪೀಕರ್ ಸರಿ ಆಗುತ್ತದೆ, ಇಷ್ಟರಲ್ಲಿ ಭೈರವನ ಗತಿ ಭೈರವನಿಗೇ ಪ್ರೀತಿಯಾಗಿರುತ್ತದೆ! ಒಂದು ರೀತಿ - ರಸ್ತೆಯ ಒಂದು ಬದಿಯಲ್ಲಿ ಅಪಘಾತವಾದರೆ, ಅಪಘಾತಕ್ಕೆ ಯಾವುದೂ ಸಂಬಂಧವಿಲ್ಲದ ಮತ್ತೊಂದು ಕಡೆಯ ರಸ್ತೆಯಲ್ಲೂ ಟ್ಯಾಫಿಕ್ ಜಾಮ್ ಆಗುವ ಹಾಗೆ! ಇಂತಹ ಸ್ಪೀಕರ್ ದುರಸ್ತಿಯಾಗುತ್ತಿರುವ ಸಂದರ್ಭದಲ್ಲೋ, ಅಥವಾ ಎಲ್ಲೋ ನಡೆದ ಅಪಘಾತದ ಕಡೆಗೋ ಗಮನ ಕೊಡಬಾರದೆಂದು ಎಷ್ಟೇ ಪ್ರಯತ್ನಿಸಿದರೂ ಇಂದ್ರಿಯಗಳೆಲ್ಲ ಆಕಡೆಗೇ ತಿರುಗುವ ಪರಿಗೆ ಏನೆಂದು ಹೇಳಲಿ?

ನನಗೆ ಇನ್ನೂ ಚೆನ್ನಾಗಿ ನೆನಪಿದೆ: ೨೦೦೦ ಸೆಪ್ಟೆಂಬರ್‌ರಲ್ಲಿ ಹ್ಯೂಸ್ಟನ್‌ನಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನಕ್ಕೆ ನಾವೆಲ್ಲ ಹೋಗಿದ್ದೆವು, ಶುಕ್ರವಾರ ಸಂಜೆಯೇ ನೋಂದಾವಣೆ ಹಾಗೂ ಬಾಯುಪಚಾರ, ಊಟ ಎಂಬಂತೆ ಹಮ್ಮಿಕೊಂಡಿದ್ದ ಕಾರ್ಯಕ್ರಮಗಳಲ್ಲಿ ಎಲ್ಲರೂ ರಂಗುಗಳ ಪ್ರದರ್ಶನ ಮಾಡುತ್ತಿದ್ದರು. ಒಳಗೆ ಆಡಿಟೋರಿಯಂ‌ನಲ್ಲಿ ಬೆರಳೆಣಿಕೆಯಷ್ಟು ಜನರು ಕುಳಿತು ಅದ್ಯಾರೋ ಭಾರತದಿಂದ ಬಂದ ಪುಣ್ಯಾತ್ಮರ ಗಾನ ಸುಧೆಯನ್ನು ಸವಿಯುತ್ತಿದ್ದರು, ನಾನೂ ನೋಡೋಣವೆಂದು ಒಳಹೊಕ್ಕೆ, ಆಗ ಕೇಳಿದ 'ಕಂಗಳಿದ್ಯಾತಕೋ ಕಾವೇರಿ ರಂಗನ ನೋಡದಾs' ಹಾಡು, ಮುಖ್ಯವಾಗಿ ಅದರ ರಾಗ ಇಂದಿಗೂ ನನ್ನನ್ನು ಕಾಡುತ್ತದೆ. ನನಗೆ ಹಿಂದೂಸ್ಥಾನೀ ಹೇಳಿಕೊಟ್ಟ ಮೇಷ್ಟ್ರು ನೆನಪಿಗೆ ಬರುತ್ತಾರೆ, ನನ್ನ ಪ್ರಕಾರ ಹಿಂದೂಸ್ಥಾನಿ ಹಾಡುವವರಿಗೆ ಇಹಪರದ ಗತ್ತಿಲ್ಲ, ಸೊತ್ತೂ ಇಲ್ಲ, ಸರಳೆ-ಜಂಟಿ ಎಂದು ಸ್ವಿಮ್ಮಿಂಗ್ ಪೂಲ್‌ನಲ್ಲಿ ಈಜನ್ನು ಹೇಳಿಕೊಡದೇ 'ಈಜು ಮಗನೇ' ಎಂದು ಮಹಾ ಸಾಗರದಲ್ಲೇ ಬಿಸಾಡುವಂತೆ ತಲೆ ಮೇಲೆ ಕಟಿದು ದೊಡ್ಡ ರಾಗದಿಂದಲೇ ಆರಂಭಿಸುವ ಎಷ್ಟೋ ಕಥೆಗಳನ್ನು ಕೇಳಿದ್ದೇನೆ. ನಮ್ಮ ಮೇಷ್ಟ್ರು ಕೊಳೆಯಾದ ಬನಿಯನ್ ಮತ್ತು ಪಂಚೆ ಧರಿಸಿಯೇ ಹಾಡುತ್ತಿದ್ದರು, ರಾಗಗಳು ಅವರ ಜೀವಾಳವಾಗಿದ್ದವು, ಆದರೆ ನಾನು ಕೇಳಿದ ಕರ್ನಾಟಕ ಸಂಗೀತದ ಗುಂಗಿನ ಹಿಂದೆ ಗರಿ-ಗರಿಯಾದ ರೇಶಿಮೆ ಬಟ್ಟೆ, ಹಾಗೂ ಕೈಯಲ್ಲಿನ ಉಂಗುರಗಳ ಪ್ರದರ್ಶನವೂ ಉಳಿದು ನನ್ನನ್ನು ಅಲ್ಪನನ್ನಾಗಿ ಮಾಡುತ್ತವೆ. ಹಾಗೆಯೇ ಇಲ್ಲಿ ನಾನು ಕೇಳಬಹುದಾದ ಭಾರತೀಯ ಸಂಗೀತವನ್ನು ಹಾಡುವವರ ಹಿಂದಿರುವ ವೈಭವದ ಬೆಳಕಿನಲ್ಲಿ ನನ್ನ ಕಣ್ಣು ಕುರುಡಾಗುತ್ತದೆ, ಮನಸ್ಸು ತೆರೆದುಕೊಳ್ಳುವುದಿಲ್ಲ. ಮನಸ್ಸು, ಸಾಧನೆ, ಸಿದ್ಧಿ ಇವುಗಳಿಗೆ ಹತ್ತಿರವಾದ ಸಂಗೀತಕ್ಕೆ ನಮ್ಮ ಜೋಕಿ-ಶೋಕಿಯ ಮೆರುಗೇಕೆ? ಛೇ, ದಸರಾ ಸಮಯದಲ್ಲಿ ಮೈಸೂರು ಅರಮನೆಯ ಆವರಣದಲ್ಲಿ ಹಮ್ಮೂ ಬಿಮ್ಮೂ ಒಂದೂ ಇಲ್ಲದ ಹಲವಾರು ಸಂಜೆಗಳ ರಸದೂಟ ಸವಿಯುವ ಅವಕಾಶ ಮತ್ತೊಮ್ಮೆ ಸಿಗಬಾರದೇ?

***

ಈ ಹಾಡಿನಿಂದ ಏನು ಅನುಕೂಲವಾಗದಿದ್ದರೂ ಮುಂಜಾನೆ ನಾಲ್ಕೂವರೆಗೆಲ್ಲ ಏಳುವ ನನ್ನ ಮಗಳಂತೂ ಈ ಹಾಡನ್ನು ಕೇಳುತ್ತಲೇ ಪುನಃ ನಿದ್ದೆಗೆ ಶರಣು ಹೋಗುತ್ತಾಳೆ, ಹಾಡಿದ್ದನ್ನೇ ಹಾಡುವ ಕರ್ಮ ನನ್ನದು, ನಿದ್ರೆಯ ಮೋಡಿಗಾದರೂ ಜಾರಿ ನನ್ನ ಹಾಡನ್ನು ಕೇಳದಿರುವ ಮರ್ಮ ಅವಳದು!

Friday, April 28, 2006

ಹೀಗೊಂದು ಮುಂಜಾವು

ಇನ್ನೇನು ಶುಕ್ರವಾರ ಬಂತು ಎಂದು ಮೈ ಮುರಿದು ಏಳುತ್ತಿದ್ದ ಹಾಗೆ ಮಾಡಬೇಕಾದ ಮಾಡಬಹುದಾದ ಕೆಲಸಗಳೆಲ್ಲ ಕಣ್ಣಮುಂದೆ ದುತ್ತನೆ ಎದುರಾದವು, ಅವುಗಳಿಗೆಲ್ಲಾ ಸ್ವಲ್ಪ ತಡೆಯಿರಿ ಎಂದು ಹೇಳುವಂತೆ ಕಣ್ಣುಗಳನ್ನು ನೀವಿಕೊಳ್ಳುತ್ತಾ ಬಚ್ಚಲು ಮನೆಗೆ ನಡೆದಾಗ ಎಲ್ಲಿ ತಡವಾಗುತ್ತೊ ಅನ್ನೋ ಗಡಿಬಿಡಿ ತನ್ನಷ್ಟಕ್ಕೆ ತಾನೇ ನಾನು ಮಾಡುವ ಕೆಲಸಗಳಲ್ಲೆಲ್ಲ ಸುತ್ತಿಕೊಳ್ಳುವ ಪರಿಪಾಠವನ್ನು ಮುಂದುವರೆಸಿತು. ಸ್ನಾನ ಮಾಡಿ ಬಂದು ಮೈ ಒರೆಸಿಕೊಂಡು ದೇವರಿಗೆ ದೀಪ ಹಚ್ಚಿ ಇನ್ನೇನು ಹೊರಡಲನುವಾಗುವಾಗ ಇಂದು ಮನೆಯಲ್ಲಿಯೇ ತಿಂಡಿ ತಿಂದರೆ ಹೇಗೆ ಎಂದು ತಂಗಳು ಪೆಟ್ಟಿಗೆಯಲ್ಲಿನ ಹಾಲನ್ನು ತೆಗೆಯುವುದರ ಜೊತೆಗೆ ಕೈಗಳು ಅಲ್ಲೇನಾದರೂ ತಿನ್ನಲು ಸಿಗುತ್ತದೆಯೋ ಎಂದು ಹುಡುಕಾಡತೊಡಗಿದವು. ಕೈಗೆ ಸಿಕ್ಕಿದ್ದನ್ನು ತಿಂಡಿ ಎಂದು ತಿಂದು, ಬಿಸಿ ಚಹಾವನ್ನು ಕುಡಿದು ಬಾಗಿಲು ತೆಗೆದು ಕಾಲನ್ನು ಹೊರಗಿಟ್ಟಾಗ ಪ್ರಪಂಚದ ಕತ್ತಲೆಂಬ ಕೊಳೆಯನ್ನು ಇಂದು ಖಂಡಿತವಾಗಿ ಹೋಗಲಾಡಿಸುತ್ತೇವೆ ಎಂಬು ಬೀಗುವ ಸೂರ್ಯನ ಕಿರಣಗಳು ದಟ್ಟವಾದ ಕಪ್ಪು ಮೋಡದ ಮರೆಯಿಂದ ಇಣುಕಿ ನನ್ನ ಕಣ್ಣುಗಳನ್ನು ಕಿರಿದು ಮಾಡುವುದರ ಜೊತೆಗೆ ಸಂತಸವನ್ನೂ ಮೂಡಿಸಿದವು.

ಗಾಡಿಯಲ್ಲಿ ಕುಳಿತು ಹೊರಡಬೇಕೆನ್ನುವಾಗ ತೇವವಾದ ಗಾಳಿ ಸುಳಿದು ಎಂದಿಗಿಂತಲೂ ಸ್ವಲ್ಪ ಕಮ್ಮಿ ಬಿಸಿಲು ಬರಬಹುದಾದ ಮುನ್ಸೂಚನೆಯನ್ನು ನೀಡಿದವು, ನಾನು ಜೊತೆಯಲ್ಲಿ ಛತ್ರಿ ಇರುವುದನ್ನು ಧೃಡಪಡಿಸಿಕೊಂಡೆ. ಇನ್ನೇನು ವಾಹನ ಚಲಾವಣೆ ಮಾಡಬೇಕು ಎನ್ನುವಷ್ಟರಲ್ಲಿ ಅದೆಲ್ಲಿಂದಲೋ ಎರಡು ಪಾರಿವಾಳಗಳ ಗುಟುರುವಿಕೆ ಕಿವಿಗೆ ಬಿದ್ದು ಬೆಳ್ಳಂ ಬೆಳಗ್ಗೆ ನಡೆಯುವ ಅತ್ತೆ-ಸೊಸೆಯ ಜಗಳವನ್ನು ನೆನಪಿಗೆ ತಂದಿತು. ಇನ್ನೊಂದು ನಲವತ್ತು ನಿಮಿಷಗಳಲ್ಲೆಲ್ಲ ನಾನು ತಲುಪಬಹುದಾದ ಜಾಗವನ್ನು ತಲುಪುತ್ತೇನೆ ಎಂದು ದೇಹ ಹಾಗೂ ಮನಸ್ಸು ತಮ್ಮ ತಮ್ಮ ಕೆಲಸವನ್ನು ಮುಂದುವರೆಸಿದವು.

ಇನ್ನೇನು ಕತ್ತಲು ಸರಿದು ಬೆಳಕು ಮೂಡುವಷ್ಟರಲ್ಲಿ ತನ್ನ ಮೇಲೆ ಬಿದ್ದ ಬೆಳಕಿನ ಕಿರಣಗಳನ್ನು 'ನಾನು ಏನೇ ಮಾಡಿದರೂ ಪ್ರತಿಫಲಿಸುವುದಿಲ್ಲ' ಎಂದು ಹಠ ತೊಟ್ಟ ಮಗುವಿನಂತೆ ಮುಖಮಾಡಿಕೊಂಡು ಕರಿಯಾದ ರಸ್ತೆ ಮಲಗಿತ್ತು, ಅಲ್ಲಲ್ಲಿ ಇಬ್ಬನಿಯ ತೇವ ರಸ್ತೆ ಬದಿಯಲ್ಲಿ ನೀರಿನಂತೆ ಜಿನುಗಿದ್ದು ರಾತ್ರಿ ಹಾಲು ಕುಡಿದು ಮಲಗಿದ ಮಗುವಿನ ತುಟಿಯಿಂದ ಒಸರಿದ ಹಾಲು-ಜೊಲ್ಲಿನಂತೆ ಕಂಡು ಬರುತ್ತಿತ್ತು. ರಸ್ತೆ ಬದಿಯ ಮಡಗಿರಗಳು ನೀನು ಮುಂದೆ ಹೋಗು ಸಂಜೆ ಸಿಗುತ್ತೇವೆ ಎಂದು ಕೈ ಬೀಸಿ ಹಿಂದೆ ಸರಿಯುವಂತೆ ಅನ್ನಿಸಿತು.

ವೃತ್ತ ಪತ್ರಿಕೆಗಳಿಂದ ಹಿಡಿದು ಯಾವ ಮಾಧ್ಯಮವನ್ನು ತಳುಕು ಹಾಕಿಕೊಂಡರೂ ಅವೇ ಹಳಸಲು ಸುದ್ದಿಗಳು! ಕಗ್ಗತ್ತಲೆಯ ಖಂಡದ ಕೊಲೆ-ಸುಲಿಗೆ-ಅತ್ಯಾಚಾರ-ಅನಾಚಾರಗಳಿಂದ ಹಿಡಿದು ಮುಂದುವರೆದ ದೇಶಗಳ ಅವೇ ಸುದ್ದಿಗಳ ಮತ್ತೊಂದು ಮಗ್ಗುಲನ್ನು ಇಂದಿನ ಬೆಳವಣಿಗೆಯ ಯುಗದಲ್ಲಿ ತಾವು ಪ್ರತಿಸ್ಪಂದಿಸುತ್ತೇವೆ ಎಂದು ತಮ್ಮಷ್ಟಕ್ಕೆ ತಾವೇ ಎಲ್ಲ ಸುದ್ದಿಗಳನ್ನೂ ಹಿಡಿದು ವರದಿ ಒಪ್ಪಿಸಿದ ವರದಿಗಾರರೋಪಾದಿಯಲ್ಲಿ ತಿಣುಕುತ್ತಿದ್ದವು. ಈ ವರದಿಗಳು, ವರದಿಗಾರರು ಇವರೆಲ್ಲ ಶತ-ಶತಮಾನಗಳಿಂದ ಮಾಡಿದ್ದೇನು, ಮಾಡೋದೇನಿದೆ, ಅದರಿಂದ ಏನಾಯಿತು, ಎಂಬಿತ್ಯಾದಿ ಆಲೋಚನೆಗಳು ಸುಳಿಯತೊಡಗಿದವು, ಅವು ಬಂದಷ್ಟೇ ವೇಗದಲ್ಲಿ ಹಿಂದೆ ಸರಿದವು ಎಂದರೆ ಸರಿಯಾದೀತು. ಅಲ್ಲಲ್ಲಿ ಸ್ವಲ್ಪ ನಿಧಾನ, ಮಧ್ಯೆ ಎಳೆ ಬಿಸಿಲಿನಲ್ಲಿ ಮಿರುಗಿ ಬೀಗುವ ಕಪ್ಪು ರಸ್ತೆಯ ಕಪಾಲಗಳು ಕಂಡಲ್ಲೆಲ್ಲ ಸ್ವಲ್ಪ ವೇಗ, ಎಲ್ಲಿ ಯಾರಾದರೂ ಹಿಡಿದು ದಂಡ ವಿಧಿಸುತ್ತಾರೋ ಎಂಬ ಭಯದ ನೆರಳು - ಹಾಗೂ ತಲೆಯಲ್ಲಿ ಹತ್ತಾರು ಆಲೋಚನೆಗಳು, ಇವೆಲ್ಲದರ ಮಧ್ಯೆ ಪ್ರಯಾಣ ನಿರಾತಂಕವಾಗಿ ಸಾಗಿತ್ತು.

ಪ್ರತಿಯೊಂದು ಪ್ರಯಾಣಕ್ಕೂ ಎಲ್ಲೋ ಹೇಗೋ ಒಂದು ಕೊನೆ ಇರುವ ಹಾಗೆ ನನ್ನ ಈ ಚಿಕ್ಕ ಪ್ರಯಾಣವೂ ಕಛೇರಿಯನ್ನು (ಯಾವುದೇ ತೊಂದರೆಗಳಿಲ್ಲದೇ) ತಲುಪಿದ್ದರಿಂದ ಕೊನೆಯಾಗುತ್ತದೆ. ನಾನು ತಲುಪಿದೆನೆಂದು ನೆನಪಿಸುವ ನನ್ನ ಮುಖ ಪರಿಚಯ ಇರುವಂತೆ ಗಾಳಿಯ ಸಹಾಯದಿಂದ ತೊನೆಯುವ ಮರಗಿಡಗಳ ನಗೆಯಿಂದ ಪುಳಕಿತನಾಗುತ್ತೇನೆ - ಇತ್ತೀಚೆಗಷ್ಟೇ ಕಡು ಚಳಿಯಲ್ಲಿ ಬಳಲಿ ಚೈತ್ರಮಾಸದ ದೆಸೆಯಿಂದ ಈಗಷ್ಟೇ ಚಿಗುರಿ ಮೊಗ್ಗು, ಹೂವು, ಮಿಡಿ, ಹೀಚುಗಳನ್ನು ಬಿಡುತ್ತಿರುವ ಅವುಗಳ ಸಂತೋಷವನ್ನು ಕಂಡು ನಾನಾದರೂ ಏಕೆ ಕರುಬಬೇಕು? ವಾಹನವನ್ನು ಎಲ್ಲಿಡಬೇಕೋ ಅಲ್ಲಿಟ್ಟು, ಇನ್ನೇನು ಮೆಟ್ಟಿಲುಗಳನ್ನು ಹತ್ತಿ ಕಛೇರಿಯ ಆವರಣದಲ್ಲಿ ಕಾಲಿಟ್ಟೊಡನೆ ಒಂದು ರೀತಿಯ ಗಮಲು ವಾಸನೆ ಮೂಗಿಗೆ ಅಡರಿಕೊಂಡು - 'ಈಗ ಎಲ್ಲಿದ್ದೀಯಾ ಗೊತ್ತೇ!' ಎಂದು ಅಪಹಾಸ್ಯ ಮಾಡಿ ಕೇಕೆ ಹಾಕಿದಂತೆ ಕಂಡುಬಂತು. ಕಿಟಕಿಯ ಒಳಗಡೆ ಬರಲು ಹವಣಿಸುತ್ತಿದ್ದ ಸೂರ್ಯ ಕಿರಣಗಳು ಹೊರಗಿದ್ದನ್ನು ಬೆಳಗಿಯಾಯ್ತು, ಇನ್ನು ಅಂತರಂಗವನ್ನು ತೊಳೆಯಬೇಕಿದೆ, ದಾರಿ ಬಿಡು ಎಂದು, ನನ್ನ ಪ್ರತಿಕ್ರಿಯೆಗೂ ಕಾಯದೇ ಎಂದಿನ ವೇಗದಲ್ಲಿ ಮುನ್ನುಗ್ಗುತ್ತಿದ್ದವು. ನಾನು ಬಗಲಿನಿಂದ ಚೀಲವನ್ನಿಳಿಸಿ, ಆಗಲೇ ಉಸ್ ಎಂದು ಉಸಿರು ಬಿಟ್ಟು ಗಣಕ ಯಂತ್ರದ ಪರದೆಯ ಗುಂಡಿಯನ್ನುಮುಕಿದೆ, 'ಅದೇನು ಕಡಿದು ಹಾಕುತ್ತೀಯೋ, ಹಾಕು' ಎಂದು ಅಟ್ಟಹಾಸ ಬೀರುತ್ತಾ ಹತ್ತೊಂಬತ್ತು ಅಂಗುಲದ ಪರದೆಯ ಮಧ್ಯಭಾಗದಿಂದ ನೀಲಿ ಬಣ್ಣದ ಬೆಳಕೊಂದು ತೂರಿ ಬಂತು.

***

There is a difference in this post did you notice? Clue! This itself is a clue :-)

Thursday, April 27, 2006

ಸ್ನೇಹದ ಬೆಲೆ ನಾಲ್ಕು ಲಕ್ಷ ರೂಪಾಯ್!

"A true friend stabs you in the front."- Oscar Wilde

'ಇವನೇನಪ್ಪಾ ಬರೀ ಇಲ್ಲಿ ತನ್ನ ಪ್ಲಾಬ್ಲಮ್ ಬಗ್ಗೆ ಕೊರೀತಾನೆ' ಅಂದುಕೋತೀರೋ ಏನೋ, ಮತ್ತೆ ನಿಮ್ಮಂಥ ಸ್ನೇಹಿತರು ಇರೋದಾದ್ರೂ ಯಾಕೆ ಹೇಳಿ?
'ಅದೇನು ಸ್ನೇಹ ಮತ್ತು ಅದರ ಬೆಲೆ, ಅದರಲ್ಲೂ ನಾಕು ಲಕ್ಷ ರೂಪಾಯಿ, ಬೇಗ ಹೇಳಿ ಬಿಡು' ಎಂದಿರೋ, ಕ್ಷಮಿಸಿ - ಈ ಅಂತರಂಗವನ್ನು ನೀವು ಸ್ವಲ್ಪ ವ್ಯವಧಾನದಿಂದ ನೋಡಲಿ ಎನ್ನುವ ಆಸೆ ನನ್ನದು.

***

ಸಾಗರದಲ್ಲಿ ನನ್ನ ಜೊತೆ ಡ್ರೈವರ್, ಕಂಡಕ್ಟರುಗಳು ಜೊತೆಯಲ್ಲಿದ್ದರೆಂದು ಈ ಮೊದಲೇ ಬರೆದಿದ್ದೆ. ಅವರಲ್ಲೆಲ್ಲ ನನ್ನ ಮನಸ್ಸಿಗೆ ಅತ್ಯಂತ ಹತ್ತಿರವಾದ ವ್ಯಕ್ತಿಯೆಂದರೆ ಜಗದೀಶ. ಈತನ ಸಾಧು ಗುಣಗಳ ಜೊತೆಯಲ್ಲಿ ಹುದುಗಿರುವ ಹಾಸ್ಯ ಪ್ರವೃತ್ತಿಗಳ ದೆಸೆಯಿಂದ ಬಹಳಷ್ಟು ಸಾರಿ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದೇನೆ - ವೃತ್ತಿಯಲ್ಲಿ ಬಸ್ಸಿನ ಕಂಡಕ್ಟರಾದರೂ ಅವನ ಕೈ ಚಳಕ ಅದ್ಭುತವಾದದ್ದು. ಜಗದೀಶನ ಕೈಯಲ್ಲಿ ಬಸ್ಸನ್ನು ಕೊಟ್ಟು ಕಳಿಸಿದರೆ ಹಿಂತಿರುಗಿ ತಂದೇ ತರುತ್ತಾನೆ ಅನ್ನೋದು ಸಾಗರದ ಬಸ್ ಸ್ಟಾಂಡಿನಲ್ಲಿ ಜನಜನಿತವಾದ ಮಾತಾಗಿತ್ತು - ಈ ಮಾತು ಏಕೆ ಮುಖ್ಯವೆಂದರೆ, ಒಬ್ಬ ಖಾಸಗೀ ಬಸ್ ಮಾಲೀಕನ ಬಳಿ ಕೇವಲ ಒಂದು ಅಥವಾ ಎರಡು ಬಸ್‌ಗಳಿರಬಹುದು, ಅವು ಪ್ರತಿದಿನವೂ ತಮ್ಮ-ತಮ್ಮ ರೂಟ್‌ಗಳಲ್ಲಿ ಸರಿಯಾಗಿ ನಡೆಯದಿದ್ದರೆ ಅವರ ಬಂಡವಾಳಕ್ಕೆ ಸಂಚಕಾರ - ಮೇಲ್ನೋಟಕ್ಕೆ ಬಸ್ ಮಾಲೀಕರಾದರೂ 'ಇವತ್ತು ದುಡಿದು ಇವತ್ತು ತಿನ್ನುವ' ಬವಣೆ ತಪ್ಪಿದ್ದಿಲ್ಲ, ಏಕೆಂದರೆ ಬಂದ ಲಾಭಾಂಶದಲ್ಲಿ ಹೆಚ್ಚಿನಪಾಲು ಬ್ಯಾಂಕಿನ ಅಸಲು, ಬಡ್ಡಿಗೇ ಸೇರುತ್ತದೆ.

ಜಗದೀಶ ಮುಂದೆ ಡ್ರೈವಿಂಗ್‌ನ್ನು ಕಲಿತು, ತನ್ನ ತಮ್ಮಂದಿರೊಡಗೂಡಿ ಒಂದೆರಡು ಬಸ್ಸುಗಳನ್ನು ತಾನೇ ಇಟ್ಟುಕೊಂಡು ಅದರ ಮಾಲೀಕನೂ ಆದ. ಇತ್ತ ನಾನು ಭಾರತದ ಊರು-ಊರುಗಳನ್ನು ತಿರುಗಿ ಅಮೇರಿಕದ ಹಾದಿ ಹಿಡಿದೆ. ನನ್ನ ಮತ್ತು ಜಗದೀಶನ ಸುಮಾರು ೧೨ ವರ್ಷಗಳ ಗೆಳೆತನದಲ್ಲಿ (೧೯೮೮-೨೦೦೦), ನಾವಿಬ್ಬರೂ ಫ್ಯಾಮಿಲಿ ಸ್ನೇಹಿತರಾಗಿದ್ದೆವು, ನನ್ನ ಮದುವೆಗೆ ಅವನ ಮನೆಯವರೆಲ್ಲರೂ ಬಂದಿದ್ದರು, ಅವನ ಮನೆಗೆ ನಾನು ಹೋಗಿದ್ದಿದೆ, ಅವನೂ ನಮ್ಮ ಮನೆಗೆ ಬಂದಿದ್ದಾನೆ.

***

ನಾನು ೧೯೯೮ ರಲ್ಲಿ ಭಾರತಕ್ಕೆ ಹೋದಾಗ ಜಗದೀಶ (ಆಗಲೇ ತಾನು ಬಸ್ಸಿನ ಮಾಲಿಕನಾಗಿ ಸ್ವಯಂ ಭಡ್ತಿ ಪಡೆದಿದ್ದವ), ನನ್ನಲ್ಲಿ ತನ್ನ ಬಸ್ಸುಗಳನ್ನು ವಿಸ್ತರಿಸಿಕೊಳ್ಳುವ ಪ್ರಸ್ತಾವ ಮಾಡಿದ, ಅದಕ್ಕಾಗಿ ಹಣಕಾಸಿನ ಸಹಾಯವನ್ನೂ ಕೇಳಿದ - ತಾನು ತೆಗೆದುಕೊಂಡ ಹಣವನ್ನು ನ್ಯಾಯವಾಗಿ ಹಿಂತಿರುಗಿಸುತ್ತೇನೆಂತಲೂ, ಮತ್ತೆಲ್ಲ ಭರವಸೆಗಳನ್ನೂ ನೀಡಿದ - ನಾನು ಸ್ನೇಹದ ಕಟ್ಟಿಗೆ ಬಿದ್ದು ಹಾಗೂ ಪ್ರಪಂಚವನ್ನೂ ಇನ್ನೂ ಸರಿಯಾಗಿ ನೋಡಿರದ ನನ್ನ ಮೌಢ್ಯತೆಗೆ ಮಣಿದು 'ಸರಿ, ನಾಲ್ಕು ಲಕ್ಷ ರೂಪಾಯಿಗಳನ್ನು ಕಂತಿನಲ್ಲಿ ಕೊಡುತ್ತೇನೆ' ಎಂದು ಒಪ್ಪಿಕೊಂಡು ಮೊದಲನೇ ಕಂತಿನಲ್ಲಿ ಐವತ್ತು ಸಾವಿರ ರೂಪಾಯಿಗಳಿಗೆ ಒಂದು ಚೆಕ್ ಕೊಟ್ಟೆ. ಆಗ ನನ್ನ ಅಕ್ಕ ನನಗೆ ಬುದ್ಧಿ ಹೇಳಲು ಪ್ರಯತ್ನಿಸಿದ್ದಳು, ಆದರೂ ನಾನೂ ಯಾವ ಮಾತನ್ನೂ ಕೇಳದ ಕಿವುಡನಾಗಿದ್ದೆ.

ಮುಂದೆ ರಜೆ ಮುಗಿಸಿ ಹಿಂತಿರುಗಿದ ಮೇಲೆ ಜಗದೀಶ ಮೇಲಿಂದ ಮೇಲೆ ಕರೆಗಳನ್ನು ಮಾಡುತ್ತಿದ್ದ, ಪತ್ರವನ್ನೂ ಬರೆಯುತ್ತಿದ್ದ. ನಾನು ಮುಂದಿನ ಕಂತಾಗಿ ಒಂದೂವರೆ ಲಕ್ಷ ರೂಪಾಯಿಗಳನ್ನು ೨೦೦೦ ದಲ್ಲಿ ಕೊಟ್ಟೆ. ಹಾಗೂ ಮುಂದೆ ಮದುವೆಯಾದ ಮೇಲೆ ನನ್ನ ಹೆಂಡತಿ ಬೇಡವೆಂದರೂ, ಕೊಟ್ಟ ಮಾತಿಗೆ ತಪ್ಪಿ ನಡೆಯಬಾರದೆಂಬ ಒಂದೇ ತತ್ವಕ್ಕೆ ಮಣಿದು, ಇನ್ನುಳಿದ ಎರಡು ಲಕ್ಷ ರೂಪಾಯಿಗಳನ್ನೂ ಕೊಟ್ಟೆ.

ಈ ಹಣವನ್ನು ಪಡೆದ ಮೇಲೆ ಜಗದೀಶನ ನಡತೆಯಲ್ಲಿ ಬಹಳಷ್ಟು ಬದಲಾವಣೆಗಳಾದವು. ನನ್ನ ಕರೆಗೆ ತಪ್ಪಿಸಿಕೊಂಡು ಓಡಾಡುವ ಅವನ ಜೊಳ್ಳನ್ನು ಕಂಡು ಹಿಡಿಯಲು ನನಗೆ ಬಹಳ ಹೊತ್ತು ಬೇಕಾಗಲಿಲ್ಲ - ಮುಂದೆ ೨೦೦೩ ರ ಹೊತ್ತಿಗೆ ಅವನ ಬಸ್ಸಿನ ವ್ಯವಹಾರವೆಲ್ಲ ನಿಚ್ಚಳವಾಗಿ ನಷ್ಟದಲ್ಲಿತ್ತು, ನನಗೆ ಹಣ ಹಿಂದೆ ಬರುವ ಯಾವುದೇ ಲಕ್ಷಣಗಳು ಈ ವರೆಗೂ ತೋರುತ್ತಿಲ್ಲ.

ನಾನು ೨೦೦೩ ರಲ್ಲಿ ಭಾರತಕ್ಕೆ ಹೋದಾಗ ನನ್ನನ್ನು ನೋಡಲು ನಮ್ಮ ಮನೆಗೆ ಬಂದಿದ್ದ (ಅಥವಾ ಕರೆಸಿದ್ದೆ), ಅವನು ನನ್ನನ್ನು ಮುಖ ಎತ್ತಿ ನೋಡುವ ಆತ್ಮ ಸ್ಥೈರ್ಯವನ್ನೂ ಉಳಿಸಿಕೊಂಡಿರಲಿಲ್ಲವೆಂದು ಕಾಣುತ್ತಿತ್ತು. ಮೊದಲೇ ಬರೆದಂತೆ ಸಾಧು ಸ್ವಭಾವದ ಅವನಿಗೆ ತಾನು ಮಾಡಿದ್ದು ಮೋಸ ಎನ್ನುವುದು ತಿಳಿಯಲು ಬಹಳ ಹೊತ್ತು ಬೇಕಾಗಲಿಲ್ಲ. ಆ ದಿನ ಅವನೇ ಹೇಳಿದಂತೆ ೨೦೦೩ ರ ಸೆಪ್ಟೆಂಬರ್ ಒಳಗೆ ಸ್ವಲ್ಪ ಹಣ ಹಿಂತಿರುಗಿಸುತ್ತೇನೆ ಎಂದವನು ಇವತ್ತಿಗೂ ಒಂದು ಪೈಸೆಯನ್ನೂ ಕೊಟ್ಟಿಲ್ಲ - ನಾನು ಅವನನ್ನು ಮಾತನಾಡಿಸಬೇಕೆಂದು ಹಲವಾರು ಪ್ರಯತ್ನಗಳನ್ನು ಮಾಡಿದ್ದೇನೆ, ಅವನು ಯಾವತ್ತೂ 'ಮನೆಯಲ್ಲಿರೋಲ್ಲ'. ನನ್ನ ಎರಡನೇ ಅಣ್ಣನನ್ನೂ ಅವನ ಮನೆಗೆ ಕಳಿಸಿದ್ದೇನೆ, ಆದರೂ ಸಿಕ್ಕಿಲ್ಲ.

***

'ಅಣ್ಣಾ, ಏನಪ್ಪಾ ಮಾಡೋದೀಗ?' ಎಂದು ಯಾವತ್ತೋ ಫೋನಿನಲ್ಲಿ ನನ್ನ ಅಣ್ಣನನ್ನು ಕೇಳಿದ್ದೆ.'ಕೊಟ್ಟೋನ್ ಕೋಡಂಗಿ, ಇಸಗಂಡೋನ್ ಈರಭದ್ರ, ಈಗ ಹಣೆ ಮುಟ್ಟಿಕೋ, ಮತ್ತೇನ್ ಮಾಡ್ತೀ?' ಎಂದು ಉತ್ತರ ಬಂತು.

ಬೆಂಗಳೂರಿನ ಹಿತೈಷಿಗಳನ್ನು ಕೇಳಿದ್ದಕ್ಕೆ 'ಒಂದೇ ಕಾನೂನ್ ಪ್ರಕಾರ ಕೋರ್ಟಿಗೆ ಎಳೀರಿ, ಇಲ್ಲಾ ಗೂಂಡಾಗಳನ್ನು ಬಿಡಿ' ಎನ್ನುವ ಸಲಹೆ ಬಂತು.

ನನ್ನ ಅಮ್ಮ 'ಒಡ ಹುಟ್ದೋರಿಗೆ ದುಡ್ಡ್ ಕೊಟ್ಟಿದ್ರೆ ಅವರಾದ್ರೂ ನಿನ್ನ ಹೆಸರ್ ಹೇಳಿ ಉದ್ದಾರಾಗ್ತಾ ಇದ್ರು, ಅಲ್ವೋ ಇಷ್ಟೊಂದ್ ತಿಳುವಳಿಕೇ ಇರೋ ನೀನೇ ಹಿಂಗ್ ಮಾಡಿದ್ರೆ ಹೆಂಗೆ' ಎನ್ನುತ್ತಾಳೆ ಅಲ್ಲದೇ ನಾನು ಅವಳೊಟ್ಟಿಗೆ ಮಾತನಾಡಿದ ಹೆಚ್ಚಿನ ಕಾಲ್‌ಗಳು 'ಆ ಜಗದೀಶನ ಹತ್ರ ದುಡ್ಡು ಕೇಳೋ' ಎಂದು ಕೊನೆಯಾಗುತ್ತೆ, ನಾನು 'ಆಯ್ತು' ಅಂತೀನಿ.

ಇಲ್ಲಿ, ನಮ್ಮ ಮನೆಯಲ್ಲಿ ನನ್ನ ಹೆಂಡತಿ ಅವಾಗಾವಾಗ ತಿವಿತಾನೆ ಇರ್ತಾಳೆ.

ಒಟ್ಟಿನಲ್ಲಿ ಎಲ್ಲದರಲ್ಲೂ ಸರಿಯಾಗಿದ್ದ ನಾನು, ನನ್ನ ಸ್ನೇಹಿತನೊಬ್ಬನಿಗೆ ಮಾತಿಗೆ ತಪ್ಪದಂತೆ ಹಣ ಕೊಟ್ಟು, 'ಗಂಡ ಸತ್ತ ದುಕ್ಕ ಒಂದ್ ಕಡೇ, ಬಡ್ ಕೂಪಿನ ಉರಿ ಮತ್ತೊಂದ್ ಕಡೇ' ಅನ್ನೋ ಹಾಗೆ ನಾಲ್ಕು ಲಕ್ಷ ಕಳಕೊಳ್ಳ ಸ್ಥಿತಿಗೆ ಬಂದಿದ್ದೂ ಅಲ್ದೇ, 'ಎಲ್ಲದರಲ್ಲೂ ಸರಿಯಾದ ಮನುಷ್ಯ ಇದೊಂದರಲ್ಲಿ ಎಡವಿದ' ಎಂದು ಜನರಿಂದ ಅನ್ನಿಸಿಕೊಂಡೂ, ನಾಲ್ಕು ಜನ ರೌಡಿಗಳನ್ನು ಬಿಟ್ಟು ಕಾಲು ಮುರಿಸಿದರೆ ಹೆಂಗೆ ಎಂದು ನೈತಿಕವಾಗಿ ಹೀನ ಯೋಚನೆಗಳಲ್ಲಿ ತೊಡಗಿಕೊಳ್ಳೂದೂ ಅಲ್ಲದೇ, ಅಥವಾ ಒಬ್ಬ ಸ್ನೇಹಿತನಾದವನ್ನು ಕೋರ್ಟಿಗೆ ಎಳೆಯಬೇಕಾಗುತ್ತಲ್ಲಾ ಅನ್ನೋ ಜಂಜಾಟದಲ್ಲಿ ಮುಳುಗಿದ್ದೇನೆ.

***

ಈ ಸಾರಿ ಭಾರತಕ್ಕೆ ಹೋದಾಗ ಜಗದೀಶನನ್ನು ಮತ್ತೆ ಮನೆಗೆ ಬರುವಂತೆ ಹೇಳುತ್ತೇನೆ. ಒಬ್ಬ ಲಾಯರ್‌ಗೆ ಒಂದು ಲಕ್ಷ ರೂಪಾಯಿ ಹಣವನ್ನು ಕೊಟ್ಟರೂ ಪರವಾಗಿಲ್ಲ, ನನ್ನ ಹಣ ನನಗೆ ಬೇಕು, ಅದರ ಈಗಿನ ಮೌಲ್ಯ ಸುಮಾರು ಒಂಭತ್ತು ಸಾವಿರ ಡಾಲರ್ ಮೊತ್ತಕ್ಕಿಂತಲೂ ನಾನು ಮಾತಿಗೆ ತಕ್ಕಂತೆ ಕೊಟ್ಟ ಹಣವನ್ನು ಮಾತಿಗೆ ತಕ್ಕಂತೆ ಪಡೆದೇ ಪಡೆಯುತ್ತೇನೆ ಹಾಗೂ ನನ್ನ ವ್ಯಕ್ತಿತ್ವಕ್ಕಂಟಿದ ಕಪ್ಪು ಚುಕ್ಕೆಯನ್ನು ಹೋಗಲಾಡಿಸುತ್ತೇನೆ ಎಂಬ ಛಲದಿಂದ.

ಜಗದೀಶನ ಈ ಸಾಲದ ಪ್ರಹಸನದಿಂದ ಒಂದತ್ತೂ ಒಳ್ಳೆಯದಾಗಿದೆ, ನಾನು ಯಾರಿಗೂ ಇತ್ತೀಚೆಗೆ ಹಣವನ್ನು ಕೊಟ್ಟಿಲ್ಲ, ಕೊಟ್ಟರೂ ಅದನ್ನು ದಾನದ ಅಥವಾ ಸಹಾಯದ ರೂಪದಲ್ಲಿ ನೀಡಿರೋದರಿಂದ ನನಗೆ ಹಣಕಾಸಿಗೆ ಸಂಬಂಧಿಸಿದ ಇನ್ಯಾವ ನೋವುಗಳೂ ಇಲ್ಲ.

Wednesday, April 26, 2006

ಪ್ರತಿಭಾನ್ವಿತರು ಬೇಕಾಗಿದ್ದಾರೆ!


ಪ್ರತೀ ಮಂಗಳವಾರ ಕನ್ನಡಪ್ರಭದಲ್ಲಿ ಬರೋ ಪಾರ್ವತಮ್ಮನವರ ಅಂಕಣಕ್ಕೆ ನಾನೂ ಆಗಾಗ್ಗೆ ಭೇಟಿಕೊಡುತ್ತಿರುತ್ತೇನೆ (ಈ ಲೇಖನಗಳನ್ನು ಇಂಗ್ಲೀಷ್‌ನಲ್ಲೂ ಭಾಷಾಂತರ ಮಾಡಿ ಚಿತ್ರಲೋಕದಲ್ಲಿ ಪ್ರಕಟಿಸಲಾಗುತ್ತಿದೆ, ಅಡಿಯಲ್ಲಿ "For Earlier Writeups" ಎನ್ನುವ ಕೊಂಡಿಯನ್ನು ನೋಡಿ). ಕನ್ನಡ ಸಿನಿಮಾರಂಗದ ಬಗ್ಗೆ ಅವರಿಗಿರುವ ಅಪಾರ ಅನುಭವ ಓದುಗರನ್ನು ಕಂತು-ಕಂತುಗಳಲ್ಲಿ ತಲುಪುತ್ತಿರುವುದು ಓದುಗರ ಭಾಗ್ಯ ಎಂದೇ ಹೇಳಬೇಕು - ಹಳೆಯ ಕಥೆಗಳನ್ನು ಹೇಳಲು ಹೆಚ್ಚು ಜನ ಸಿಗುವುದು ವಿರಳ, ಸಿಕ್ಕರೂ ಹೀಗೆ ಪ್ರತೀವಾರ ಬರೆದು ಓದುಗರನ್ನು ತಲುಪುವುದು ವಿಶೇಷವೆಂದೇ ಹೇಳಬೇಕು. ಪಾರ್ವತಮ್ಮ ಒಬ್ಬ ನಿರ್ಮಾಪಕಿಯಾಗಿ, ಒಬ್ಬ ಮಹಾನ್ ನಟನ ಹೆಂಡತಿಯಾಗಿ ಹಾಗೂ ಕನ್ನಡ ಸಿನಿಮಾ ರಂಗ ಕಂಡ ಏಕೈಕ ಮಹಿಳಾ administrator ಆಗಿ ಓದುಗರಲ್ಲಿ ಹಂಚಿಕೊಳ್ಳುವುದು ಬಹಳಷ್ಟಿದೆ, ಅಲ್ಲಲ್ಲಿ ಭಾವಪೂರ್ಣವಾಗಿ ಬರೆಯುತ್ತಾರಾದರೂ ಅವರ ಬರವಣಿಗೆಯ ಸೀಕ್ವೆನ್ಸಿಂಗ್ ನನಗಿಷ್ಟ.

***

ಕನ್ನಡ ಚಿತ್ರರಂಗ ಕಂಡ ಪ್ರತಿಭಾನ್ವಿತರಲ್ಲಿ ಚಿ.ಉದಯಶಂಕರ್ ಕೂಡಾ ಒಬ್ಬರು - ಒಬ್ಬ ಬರಹಗಾರರಾಗಿ ಚಿತ್ರಕಥೆ ಹಾಗೂ ಹಾಡುಗಳಲ್ಲಿ ಅವರದ್ದೇ ಆದ ನೈಪುಣ್ಯತೆ ಇತ್ತು. ಸರಳ ಕನ್ನಡ ಹಾಡುಗಳಾಗಿಯೂ ಅರ್ಥಗರ್ಭಿತವಾದ ಹಾಡುಗಳು ಇಂದಿಗೂ ಜನಜನಿತವಾಗಿವೆ (ಸುಮ್ಮನೇ ರ್‍ಯಾಂಡಮ್ಮಾಗಿ ಹುಡುಕಿದಾಗ ಇಷ್ಟೊಂದು ಹಾಡುಗಳು ಸಿಕ್ಕವು).

ಜನವರಿ ೧೦ರ ಅಂಕಣದಲ್ಲಿ "ಎಲ್ಲವನ್ನೂ ನಾನೇ ಮಾಡ್ತೀನಿ ಅಂದ್ರೆ ಹೀಗೇ ಆಗೋದು" ಎಂಬ ಲೇಖನದಲ್ಲಿ ಪಾರ್ವತಮ್ಮನವರು ಚಿ.ಉದಯಶಂಕರ್‌ರವರನ್ನು ವಿಶೇಷವಾಗಿ ನೆನೆಸಿಕೊಂಡಿದ್ದಾರೆ:



"...ಆಗ ರಾಜ್‌ಕುಮಾರ್ ಜೊತೆ ಯಾವಾಗ್ಲೂ ಉದಯಶಂಕರ್ ಇರ್ತಾ ಇದ್ರು. ಉದಯಶಂಕರ್ ಹೋದಮೇಲೆ ರಾಜ್‌ಕುಮಾರ್ ಸಿನಿಮಾ ಮಾಡೋದು ಕಮ್ಮಿ ಮಾಡಿದ್ರು. ಯಾರು ಬರೆದರೂ ಉದಯಶಂಕರ್ ಬರೆದ ಹಾಗೆ ಆಗ್ತಿರಲಿಲ್ಲ. ಅವರಿಲ್ಲದೆ ಒಂದು 'ಶಬ್ದವೇಧಿ' ಮಾಡಬೇಕಾದ್ರೇ ಸಾಕಾಗಿ ಹೋಯ್ತು. ಇವತ್ತಿಗೂ ಅವರಿಗೆ ಅದು ತೃಪ್ತಿ ಕೊಟ್ಟಿಲ್ಲ."

ರಾಜ್, ಉದಯಶಂಕರ್ ಇವರನ್ನೆಲ್ಲ ಗೌರವಿಸಿ ಇವರ ಬಗ್ಗೆ ಓದಿ ಬರೆಯುವ ಹೊತ್ತಿಗೆ ನಾನು ಒಂದಿಷ್ಟು ವಿಷಯಗಳನ್ನು ಕುರಿತು ಯೋಚಿಸುತ್ತೇನೆ:
೧) ಉದಯಶಂಕರ್ ತೀರಿಕೊಂಡಿದ್ದು ಅಥವಾ ಅವರ ಸಾವಿಗೆ ಕಾರಣವಾಗಿದ್ದು ಅವರ ಒಬ್ಬನೇ ಪುತ್ರ ರವಿಶಂಕರ್ ತೀರಿಕೊಂಡಿದ್ದರಿಂದ ('ಇನ್ನೂ ಗ್ಯಾರಂಟಿ ನಂಜುಂಡೀ ಕಲ್ಯಾಣ...' ಹಾಡಿನಲ್ಲಿ ಹಾಗೂ ಆ ಚಿತ್ರದಲ್ಲಿ ಸಿಕ್ಕ ಪಾತ್ರದಲ್ಲಿ ರವಿ ಮನೋಜ್ಞ ಅಭಿನಯ ನೀಡಿದ್ದನ್ನು ನಾನಿನ್ನೂ ಮರೆತಿಲ್ಲ). ಉದಯಶಂಕರ್ ಸಾವು ರಾಜ್‌ಕುಮಾರ್‌ಗೆ ಅರ್ಧ ಸಾವನ್ನು ತಂದುಕೊಟ್ಟಿತೆಂದೂ, ಮುಂದೆ ಸೋದರ ವರದರಾಜನ ಸಾವು ಅವರ ಆರೋಗ್ಯವನ್ನು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿಸಿತ್ತೆಂದೂ ನಾನು ಓದಿದ್ದೇನೆ.

೨) ಉದಯಶಂಕರ್ ನಂತರ ಕನ್ನಡದಲ್ಲಿ ಬರಹಗಾರರು ಅವರಷ್ಟು ಎತ್ತರಕ್ಕೆ ಏರಿಲ್ಲ ಎನ್ನುವ ನನ್ನ ಅನಿಸಿಕೆ (ನನಗ್ಗೊತ್ತು, ವಿಚಾರ ಎಂದು ಬರೆದರೆ ನಿಮಗೆ ಇಷ್ಟವಾಗದಿರಬಹುದು ಎಂದು). ನಿಮಗೆ ಹಂಸಲೇಖ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು ನೆನಪಿರಬಹುದು - ಚೆನ್ನರಾಯಪಟ್ಟಣದ ಆಚೀಚೆ ಕೆಲಸವಿಲ್ಲದೇ ಸುತ್ತುತ್ತಿರುವವರನ್ನು ರವಿಚಂದ್ರನ್ ಗುರುತಿಸಿದರು, ಹಾಗೂ ಮೇಲಕ್ಕೂ ತಂದರು. ಹಂಸಲೇಖ ಹಾಡು, ಸಂಗೀತ ನಿಮಗೆ ರುಚಿಸುವುದಿಲ್ಲ ಎಂದು ನೀವು ಒಂದೇ ಮಾತಿನಲ್ಲಿ ತಳ್ಳಿ ಹಾಕಬಹುದು, ಆದರೆ ಹಾಗೆ conclude ಮಾಡುವುದಕ್ಕಿಂತ ಮುಂಚೆ ಒಂದು ಕ್ಷಣ ತಡೆಯಿರಿ - ಕನ್ನಡ ಸಿನಿಮಾಗಳಲ್ಲಿ ಹಾಡುಗಳು ಇನ್ನೇನು ತಮ್ಮ ಮಹತ್ವವನ್ನೇ ಕಳೆದುಕೊಳ್ಳುತ್ತಿವೆ ಎನ್ನುವಾಗ 'ಪ್ರೇಮಲೋಕ'ದಲ್ಲಿ 'ಈ ನಿಂಬೇ ಹಣ್ಣಿನ ಹುಡುಗಿ'ಯಿಂದ ಆರಂಭಿಸಿ ಒಟ್ಟಾರೆ ಹತ್ತು ಹಾಡುಗಳಿರುವ ಆ ಚಿತ್ರದಲ್ಲಿ ಹಂಸಲೇಖರವರ ಪ್ರತಿಭೆಯನ್ನು ಎಲ್ಲರೂ ಕೊಂಡಾಡುವವರೇ, ಹದಿನಾರು ರೀಲುಗಳಿರುವ 'ಪ್ರೇಮಲೋಕದಲ್ಲಿ' ಪ್ರತೀ ಹದಿನೈದು ನಿಮಿಷಕ್ಕೊಂದು ಹಾಡು ಬರುವುದೂ, ಹಾಗೆ ಬಂದ ಹಾಡುಗಳು ಕನ್ನಡ ಚಿತ್ರ ಪ್ರೇಮಿಗಳನ್ನು ಒಂದು ಕ್ಷಣ 'ಮಾಯಾ ಬಜಾರ್'ನ ಕಾಲಕ್ಕೆ ಕೊಂಡೊಯ್ದಿರಲೂ ಸಾಕು! ನಾನು ಉದಯಶಂಕರ್ ಅಂತೆಯೇ ಹಂಸಲೇಖಾರ ಅಭಿಮಾನಿ ಕೂಡಾ - ಅವರ ಒಳ್ಳೆಯ ಹಾಗೂ ಕೆಟ್ಟ ಹಾಡುಗಳು ಬೇಕಾದಲ್ಲಿ ನನಗೆ ತಿಳಿಸಿ.




ಆಗಲೇ ನೋಡಿ, ಎಲ್ಲರೂ ಹಂಸಲೇಖಾರ ಬರಹ, ಸಂಗೀತಕ್ಕೆ ಮುಗಿಬಿದ್ದದ್ದು - ಎಲ್ಲ ನಿರ್ದೇಶಕ, ನಿರ್ಮಾಪಕರಿಗೂ ಹಂಸಲೇಖರು ಅಂದು ಬೇಕಾಗಿದ್ದರು, ಪಾರ್ವತಮ್ಮನವರ ವಜ್ರೇಶ್ವರಿ ಕಂಬೈನ್ಸ್‌ನವರೂ ಸೇರಿ! ಆಗಲೇ (೧೯೮೮ ರಲ್ಲಿ) ಶಿವರಾಜ್‌ಕುಮಾರ್‌ರ 'ರಣರಂಗ'ಕ್ಕೆ 'ಜಗವೇ ಒಂದು ರಣರಂಗ' ಎಂದು ಹಂಸಲೇಖಾ ಹಾಡುಬರೆದಿದ್ದರು. ನನಗೆ ಎಲ್ಲಿಯೋ ರಾಜ್ ಪರಂಪರೆ ತಮ್ಮ ಜೀವನಾಡಿಯಾದ ಉದಯಶಂಕರ್‌ರವರನ್ನು ಈ ಸಂದರ್ಭದಲ್ಲಿ ಉಪೇಕ್ಷಿಸಿದ್ದರು ಎಂದು ಓದಿದ್ದ ನೆನಪು - rumor ಇದ್ದರೂ ಇರಬಹುದು. ಅಕಸ್ಮಾತ್ ಆ ಸುದ್ದಿ ನಿಜವೆಂದೇ ಆದರೆ ಪಾರ್ವತಮ್ಮನವರು ಉದಯಶಂಕರ್‌ನಂತವರನ್ನು ಹೀಗೆ ಉಪೇಕ್ಷಿಸಿದ್ದು ಸರಿಯೇ?

***

ಇಲ್ಲಿದೆ ನೋಡಿ ನನ್ನ ನಿಜವಾದ ತೊಳಲಾಟ: ನೀವು ಪಾರ್ವತಮ್ಮನವರ ಲೇಖನಗಳನ್ನು ಓದುತ್ತಾ ಬಂದಂತೆ ಕನ್ನಡದಲ್ಲಿ 'ಸತ್ವಪೂರ್ಣ' ಬರಹಗಾರರ ಕೊರತೆ ಇದೆ ಎನ್ನುವ ಸತ್ಯ ದುತ್ತನೆ ಎದುರಾಗುತ್ತದೆ. ಚಿತ್ರ ಮಾಧ್ಯಮ ಅನ್ನೋದು ಹಲವಾರು ಜನರನ್ನು ತಲುಪುವಂತಹ ಮಹಾ ಮಾಧ್ಯಮ, ಅದರಲ್ಲಿ ಪ್ರತಿಭೆಗಳ ಕೊರತೆ ಇದ್ದು, ಕನ್ನಡಿಗರು mediocre ಬರಹಗಾರ, ಸಂಗೀತಗಾರರನ್ನೇ ಅನುಭವಿಸುತ್ತಾ ಬಂದಲ್ಲಿ ಚಿತ್ರರಂಗದ ಮೇಲಿನ ನಂಬಿಕೆ ಹಾಗೂ ಭರವಸೆಗಳು ಕ್ರಮೇಣ ಕಡಿಮೆಯಾಗತೊಡಗುತ್ತೆ. ಪ್ರತಿಭೆ ಇದ್ದು, ಅದರ ಮೇಲೆ ಪಟ್ಟ ಪರಿಶ್ರಮದಿಂದ, ತಮ್ಮ ಅನುಭವಗಳಿಂದ ಜನರಿಗೆ ಉತ್ತಮ ಕಥೆ, ಹಾಡುಗಳನ್ನು ನೀಡಬೇಕಾದವರಿಗೆ ದೊಡ್ಡ ಡಿಮ್ಯಾಂಡಿದೆ, ಹೀಗಿರುವಾಗ 'ನಾನೂ ಚಿತ್ರಕಥೆ ಬರೆಯುವವನಾಗುತ್ತೇನೆ' ಎಂದು ಕನಸ್ಸನ್ನಿಟ್ಟುಕೊಂಡು ಕೆಲಸ ಮಾಡುವವರ ಸಂಖ್ಯೆ ಹೆಚ್ಚಾದರೆ...ಎಂದು ಹಲವಾರು 'ರೆ'ಗಳನ್ನಿಟ್ಟುಕೊಂಡು ಯೋಚಿಸುತ್ತೇನೆ.

***

ನನ್ನ ಸ್ನೇಹಿತರೊಬ್ಬರು ಮಾತಿನ ಮಧ್ಯೆ '...ಎ.ಆರ್. ರೆಹಮಾನ್‌ನ ಶೈಲಿಯಲ್ಲಿ ಈ ಟ್ಯೂನ್ ಇದೆ, ಕಳಿಸ್ತೇನೆ ನೋಡಿ...' ಎಂದರು.
'ಹೌದಾ, ಎ. ಆರ್. ರೆಹಮಾನೇ ಅಲ್ಲಿಂದ ಇಲ್ಲಿಂದ ಹಾಡು ಹಗಲೇ ಕದ್ದು ತರ್‍ತಾನಂತೆ, ಅವನನ್ನ ಯಾಕೆ ಜನ್ರು ಅನುಕರಿಸ್ತಾರೋ, ಅದರ ಬದಲಿಗೆ ಅವನ ಗುರು ಇಳಯರಾಜಾನೋ, ಅಥವಾ ಅವರ ಗುರು ಜಿ.ಕೆ.ವೆಂಕಟೇಶ್‌ರನ್ನೋ ಅನುಕರಿಸಿದ್ದರೆ ಎಷ್ಟೋ ಚೆನ್ನಾಗಿತ್ತು!' ಎಂದೆ.

ನನ್ನ ಸ್ನೇಹಿತರು ಜೋರಾಗಿ ನಕ್ಕು ಬಿಟ್ಟರು.

Tuesday, April 25, 2006

ಸುಗಮ ಸಂಗೀತ ಸುಲಭ ಸಾಧನೆಯೇ?

ಜೂನ್ ೧೨, ೨೦೦೫ರ ಪ್ರಜಾವಾಣಿಯಲ್ಲಿ 'ನವ್ಯ ಸಾಹಿತ್ಯದ ಅಬ್ಬರದ ಸಂದರ್ಭದಲ್ಲಿ ನವೋದಯ ಸಾಹಿತ್ಯಕ್ಕೆ ಸುಗಮ ಸಂಗೀತ ಸ್ಥಾನ ಕಲ್ಪಿಸಿತು' ಎಂದು ಹಿರಿಯ ಕವಿ ಶಿವರುದ್ರಪ್ಪನವರು ಹೇಳಿದರೆಂದು ವರದಿಯಾಗಿತ್ತು. ಅದಕ್ಕೆ ಪ್ರತಿಕ್ರಿಯಿಸಿ ಜೂನ್ ೧೭ನೇ ತಾರೀಖು ವಾಚಕರವಾಣಿಯಲ್ಲಿ ಡಿ.ಎ.ಶಂಕರ್ ಅವರು ನೊಂದು ಬರೆದಿದ್ದರು - 'ಸಾಹಿತ್ಯದಿಂದ ಸುಗಮಸಂಗೀತವೇ ಹೊರತು, ಸುಗಮ ಸಂಗೀತದಿಂದ ಸಾಹಿತ್ಯವಲ್ಲ. ಸುಗಮ ಸಂಗೀತವೆನ್ನುವುದು ಕಷ್ಟ ಪಟ್ಟು ಸಾಧನೆ ಮಾಡದವರು ಆಯ್ದುಕೊಳ್ಳುವ ಮಾರ್ಗ' ಎಂಬುದಾಗಿ (ಕಾರಣಾಂತರಗಳಿಂದ ಪ್ರಜಾವಾಣಿಯಲ್ಲಿ ಈ ಹಳೆಯ ಕೊಂಡಿ ಕಳಚಿಕೊಂಡಿದೆಯಾದ್ದರಿಂದ ನಿಮ್ಮ ಪರಾಮರ್ಶೆಗೆ ಪೂರ್ಣ ವಿಷಯವನ್ನು ಕೊಡಲಾಗಲಿಲ್ಲ). ಮುಂದೆ ಜೂನ್ ೨೦ರ ವಾಚಕರವಾಣಿಯಲ್ಲಿ ಶಿವರುದ್ರಪ್ಪನವರು ನಾನು ಆ ರೀತಿ ಹೇಳಿಲ್ಲ ಎಂದು ವಿವರಣೆ ನೀಡಿದರು. ಹೇಳಿದ್ದಾರೆ-ಹೇಳಿಲ್ಲ ಎನ್ನುವ ವ್ಯತಿರಿಕ್ತ ಮಾತುಗಳು ಅಚ್ಚಾಯಿತೇ ವಿನಾ ಪತ್ರಿಕೆಯವರು ಯಾವುದಕ್ಕೂ ಸ್ಪಷ್ಟೀಕರಣ ನೀಡದಿದ್ದುದನ್ನು ನೋಡಿ ಇತ್ತೀಚೆಗೆ ನನ್ನ ಸ್ನೇಹಿತರೊಬ್ಬರಿಗೆ ಕನ್ನಡ ಪತ್ರಿಕೆಯ ಸಂಪಾದಕರೊಬ್ಬರು ಹೇಳಿದ 'ಕನ್ನಡ ಓದುಗರು ಅಷ್ಟೊಂದ್ mature ಇಲ್ಲಾ ರೀ' ಅನ್ನೋ ಮಾತು ನಿಜವಿರಬಹುದೇನೋ ಎಂದು ಒಮ್ಮೆ ದಿಗಿಲಾಯಿತು.

ಶಂಕರ್ ಅವರ ವಾಚಕರವಾಣಿಯ ಬರಹ ನನ್ನನ್ನು ಹಲವು ಯೋಚನೆಗಳಿಗೆ ಒಡ್ಡಿತ್ತು:

೧) ಪಕ್ಕಾ ಶಾಸ್ತ್ರೀಯ ಸಂಗೀತಕ್ಕೆ ಮಾರು ಹೋದವರಿಗೆ ಸುಗಮ ಸಂಗೀತ ರುಚಿಸಿರಲಾರದು, ಅಲ್ಲದೇ ಶಾಸ್ತ್ರೀಯ ಸಂಗೀತಕ್ಕೆ ಕಠಿಣ ಅಭ್ಯಾಸ ಮುಖ್ಯವೂ ಹೌದು, ಮೂಲವೂ ಹೌದು. ಆದರೆ ಸುಗಮ ಸಂಗೀತವನ್ನು ಹಾಡುವವರು ಹಾಗೂ (ಸುಗಮ ಸಂಗೀತಕ್ಕಾಗಿಯೆಂದೇ) ಅಂತಹ ಹಾಡುಗಳನ್ನು ಬರೆಯುವವರು 'ಮೈಗಳ್ಳರು' ಅಥವಾ 'ಕಠಿಣ ಪರಿಶ್ರಮ ಮಾಡದವರು' ಎಂದು ಯೋಚಿಸುವಂತೆ ಈ ಹಿಂದೆ ಹಲವಾರು ಸಾರಿ ನನಗೆ ಅನ್ನಿಸಿದೆ. ನಿಮಗೆ ಗೊತ್ತಿರಬೇಕು, ಲಂಕೇಶ್ ಕೆಲವರನ್ನು 'ಕ್ಯಾಸೆಟ್ ಕವಿಗಳು' ಎಂದು ಲೇವಡಿ ಮಾಡಿರೋ ವಿಚಾರ.

೨) ಕನ್ನಡದ ಕವನಗಳನ್ನು ಯಾವುದೋ ಒಂದು ರಾಗಕ್ಕೆ ಅಳವಡಿಸಿ ಅದರ ಮಹತ್ವವನ್ನೇ ಹಾಳು ಮಾಡುವ ವಿಚಾರ - ಉದಾಹರಣೆಗೆ ಬೇಂದ್ರೆಯವರ 'ಕುರುಡು ಕಾಂಚಾಣ'ವನ್ನು ಕೇಳಿದಾಗ ಯಾಕಾದಾರೂ ಕಷ್ಟ ಪಟ್ಟು ಹಾಡಿ ಕ್ಯಾಸೆಟ್ಟಿನಲ್ಲಿ ತುರುಕುತ್ತಾರೋ ಎಂದೆನಿಸಿದೆ, ಅದರ ಭಾಷೆ, ಅರ್ಥ, ಮಹತ್ವ ಎಲ್ಲವೂ ಯಾವುದೋ 'ಎದ್ದೋಡಿ' ರಾಗದಲ್ಲಿ ಲಯವಿಲ್ಲದೆ ಮೂಡಿ ಬರುವಾಗ ನನಗರಿವಿಲ್ಲದೇ ಫಾಸ್ಟ್ ಫಾರ್‌ವರ್ಡ್ ಗುಂಡಿ ಒತ್ತಬೇಕಾಗುತ್ತದೆ, ಇದೇ ಸಾಲಿಗೆ ಬರೋ ಮತ್ತೊಂದು ಉದಾಹರಣೆಯೆಂದರೆ 'ನಾಕು ತಂತಿ', ನಾನು ಹೇಳಿದೆನೆಂದು 'ನಾಕು ತಂತಿ'ಯನ್ನು ಒಮ್ಮೆ ಓದಿ ನೋಡಿ ಹಾಗೂ ಕೇಳಿ ನೋಡಿ ನಿಮಗೇ ಗೊತ್ತಾಗುತ್ತದೆ.

೩) ಹಾಡಿನ ರೂಪದಲ್ಲಿದ್ದಾಗ ಜನ ಸಾಮಾನ್ಯರನ್ನು ಸುಲಭವಾಗಿ ತಲುಪುತ್ತದೆ ಹಾಗೂ ಹೆಚ್ಚು ದಿನ ನೆನಪಿನಲ್ಲುಳಿಯುತ್ತದೆ ಎನ್ನುವುದು ಎಲ್ಲರಿಗೂ ಗೊತ್ತಿರೋ ವಿಚಾರ. ಆದರೆ ಆಧುನಿಕ ಕನ್ನಡ ಕಾವ್ಯ, ಕವನ ಈ ಹಾಡಿನ, ಪ್ರಾಸದ ರೂಪದಿಂದ ಬಹಳಷ್ಟು ಮೇಲೆ ಬಂದಿದೆ. ನಾನು ಇತ್ತೀಚೆಗೆ ಓದಿದ ಅದೆಷ್ಟೋ ಕವಿತೆಗಳು ತಮ್ಮಲ್ಲಿ ಯಾವುದೆ ಪ್ರಾಸವಿಲ್ಲದೇ ಚೆನ್ನಾಗೇ ಓದಿಸಿಕೊಂಡು ಹೋಗುತ್ತವೆ, ಹಾಗೂ ಅವುಗಳಲ್ಲಿ ಬದುಕಿನ ಬೇಕಾದಷ್ಟು ಮುಖಗಳ ಪರಿಚಯವಾಗುತ್ತದೆ.

***

ನಾನೂ ಸುಗಮ ಸಂಗೀತವನ್ನು ಆಲಿಸುತ್ತೇನೆ, ಕೆಲವನ್ನು ಇಷ್ಟ ಪಟ್ಟಿದ್ದೇನೆ, ಹೆಚ್ಚಿನವುಗಳನ್ನು ಮತ್ತೆ ಕೇಳಲು ಹೋಗಿಲ್ಲ. ನನ್ನ ಪ್ರಶ್ನೆ ಇಷ್ಟೇ: ಸುಗಮ ಸಂಗೀತದ ಹಾದಿ ಹಿಡಿಯುವುದು ಸುಲಭ ಮಾರ್ಗವೇ, ಸುಗಮ ಸಂಗೀತಕ್ಕೆ ಅಳವಡಿಸಲು ಕವಿತೆಗಳನ್ನು ತಿರುಚುವುದು ಸರಿಯೇ? ಸುಗಮ ಸಂಗೀತದಲ್ಲಿ ಯಾವುದಕ್ಕೆ ಪ್ರಾಧಾನ್ಯತೆ ಹೆಚ್ಚು - ರಾಗಕ್ಕೋ, ಭಾವಕ್ಕೋ ಅಥವಾ ಅಕ್ಷರಗಳಿಗೋ?

***

ಇಲ್ಲಿಗೆ ಬಂದ ಮೇಲೆ ಕೆಲವು ಹೆವಿಮೆಟಲ್ ಬ್ಯಾಂಡ್‌ಗಳಿಂದ ಹಿಡಿದು, ಪಾಪ್ ಸಂಗೀತದ ಕೆಲವರನ್ನು ಹಾಗೂ ಕಂಟ್ರೀ ಮ್ಯೂಸಿಕ್‌ನಲ್ಲಿ ಇನ್ನು ಕೆಲವರನ್ನು ಕೇಳಲು ಶುರು ಮಾಡಿದೆ. ನನ್ನ ಅದೃಷ್ಟಕ್ಕೆ ಎಂಬಂತೆ ಸುಮಾರು ಆರು ತಿಂಗಳುಗಳ ಕಾಲ ಪ್ರತೀ ವಾರಾಂತ್ಯದಲ್ಲಿ ಸುಮಾರು ೫೦೦ ಮೈಲಿಗಳ ಡ್ರೈವ್ ಮಾಡುವುದು ಅನಿವಾರ್ಯವಾಗಿತ್ತು. ಆ ಸಮಯದಲ್ಲೇ ನಾನು ಇಲ್ಲಿನ ಬಹಳಷ್ಟು ಸಂಗೀತವನ್ನು ಕೇಳಿದ್ದು - ದಾರಿಯಲ್ಲಿ ಸಿಗುವ ಥರಾವರಿ ಎ.ಎಮ್., ಎಫ಼್.ಎಮ್. ಸ್ಟೇಷನ್‌ಗಳನ್ನು ಹಾಕಿಕೊಂಡು ಅಂತೂ ಇಂತೂ ಆರು ತಿಂಗಳು ಮುಗಿಯುವುದರೊಳಗೆ ಹಲವಾರು ಹಾಡುಗಳು ನನ್ನ ನಾಲಿಗೆಯ ಮೇಲೆ ನಲಿದಾಡತೊಡಗಿತು. ಇಲ್ಲಿನ ಬ್ಯಾಂಡ್‌ಗಳು ಇಂಗ್ಲೀಷ್‌ನಲ್ಲಿ ಹಾಡಿದ ಹಾಡುಗಳನ್ನು ನಾನು ನನ್ನ ಸ್ವರದಲ್ಲಿ ಹೇಳಿದರೆ ಅದು 'ಕನ್ನಡದ' ಉಚ್ಚಾರಣೆಯಲ್ಲಿ ಹಾಡಿದ ಹಾಡಿನಂತೆ ನನಗೇ ಕೇಳಿಸಿ ಮತ್ತೆ ಯಾರಾದರೂ ಕೇಳಿಯಾರೆಂಬ ಸಂಕೋಚಕ್ಕೆ ಒಳಒಳಗೇ ಹೇಳಿಕೊಳ್ಳುವಂತಾಯಿತು! ಈ ಪರಿಯಾಗಿ ಹಾಡುಗಳನ್ನು ಕೇಳಿದ್ದರಿಂದ ಒಂದಂತೂ ಅನುಕೂಲವಾಯಿತು - ಮೊದಮೊದಲು ರ್‍ಯಾಪ್‌ನ ಒಂದು ಪದವು ಅರ್ಥವಾಗದಿದ್ದುದು, ಕೊನೆಕೊನೆಗೆ ಸುಮಾರಾಗಿ ಅರ್ಥವಾಗತೊಡಗಿತು!

ಒಂದು ದಿನ ಆಫೀಸ್‌ನಲ್ಲಿ ಇದ್ದಾಗಲೇ Spice Girls ಹಾಡಿರೋ Wannabe ಹಾಡುಗಳನ್ನ ಓದುತ್ತಾ ಇದ್ದೆ. ನನ್ನ ಕೆನೆಡಿಯನ್ ಸಹೋದ್ಯೋಗಿ ಹತ್ತಿರ ಬಂದು ನೋಡಿ 'ಏನು ಮಾಡ್ತಾ ಇದ್ದೀಯಾ?' ಎಂದ, ನಾನು Spice Girls lyrics ಓದ್ತಾ ಇದ್ದೇನೆ ಎಂದೆ, ಅದಕ್ಕವನು ತಲೆಗೆ ತಿವಿದು 'ಅಯ್ಯೋ ಅದನ್ನೆಲ್ಲ ಯಾರು ಓದ್ತಾರೆ, ಸಂಜೆ ಮನೇಗೆ ಹೋದ್ ಮೇಲೆ ಕೈಯಲ್ಲಿ ಒಂದು ಬಿಯರ್ ಹಿಡಿದುಕೊಂಡು ಈ ಹಾಡುಗಳನ್ನು ಕೇಳಿದ್ರೆ ಏನಾದ್ರೂ ಸುಖ ಸಿಗಬಹುದು ನೋಡು!' ಎಂದು ನಕ್ಕ.

ಇನ್ನೂ ಇಲ್ಲಿನ ಹಾಡುಗಳನ್ನು ಓದುವ ಪರಿಪಾಠವನ್ನು ನಾನು ಬಿಟ್ಟಿಲ್ಲ - ಹಾಗೆ ಮಾಡದಿದ್ದರೆ ನನಗೆ ಪೂರ್ತಿ ಹಾಡಿನ ಅರ್ಥವಾಗುವುದಿಲ್ಲ, ಹಾಗೂ ಈ ಹಾಡುಗಳಲ್ಲಿನ ಭಾಷೆಯ ಬಳಕೆಗೂ, ಅದನ್ನು ಹಾಡುವ ರೀತಿಗೂ ಬಹಳಷ್ಟು ವ್ಯತ್ಯಾಸಗಳಿರೋದರಿಂದ ಹಾಡುಗಳನ್ನು ಕೇಳುವಾಗ ರಾಗಕ್ಕೋ, ರಿದಂ‌ಗೋ ಗಮನಕೊಟ್ಟರೆ, ಹಾಡುಗಳನ್ನು ಓದುವಾಗ ಅದರ ಉಳಿದ ಅರ್ಥ, ಹಿನ್ನೆಲೆಗಳನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಿದಂತಾಗುತ್ತದೆ.

***
ಒಟ್ಟಿನಲ್ಲಿ ಎಲ್ಲಾದರೂ ಕೀರ್ತಿ ಒಬ್ಬ ಕಲಾವಿದನನ್ನು ಹುಡುಕಿಕೊಂಡು ಬರಬೇಕು ಎಂದರೆ ಅದರ ಹಿಂದೆ ಅವಿರತ ಪರಿಶ್ರಮವಂತೂ ಖಂಡಿತವಾಗಿರುತ್ತದೆ. ಪ್ರತಿಭೆ ಇದ್ದರೂ, ಇಲ್ಲದಿದ್ದರೂ ಯಶಸ್ಸಿನ ಉತ್ತುಂಗದಲ್ಲಿ ನಿಲ್ಲಬೇಕೆಂದರೆ ಅದು ಸುಲಭ ಸಾಧ್ಯವೇನಲ್ಲ. ಸುಗಮ ಸಂಗೀತವೋ, ಶಾಸ್ತ್ರೀಯ ಸಂಗೀತವೋ - ಎಲ್ಲೂ 'ಕಠಿಣ ಪರಿಶ್ರಮ'ವಿಲ್ಲದೇ ಅದು ಹೇಗಾದರೂ ಜನರು ಮುಂದೆ ಬರುತ್ತಾರ್‍ಓ? ಈ ನಿಟ್ಟಿನಲ್ಲಿ ಶಂಕರ್ ಅಂತವರೊಬ್ಬರಾದರೂ ಉರಿದುಕೊಂಡು ಬರೆದರಲ್ಲಾ ಎಂದು ಸಂತೋಷವಾಯಿತು, ಕನ್ನಡದ ಓದುಗರು ಪ್ರಬುದ್ಧರಲ್ಲ ಎಂದು ಹಗುರವಾಗಿ ಮಾತನಾಡಿದ ಆ ಸಂಪಾದಕರ ಹೇಳಿಕೆ ಸುಳ್ಳಾಗಲಿ.