...ತುಂಬಿದವುಗಳು ತುಳುಕೋದಕ್ಕೆ ಸಾಧ್ಯವೇ?
ಕಳೆದ ವಾರ ಆಫೀಸಿನಲ್ಲಿ ನೀರಿನ ಬಾಟಲಿಯೊಂದಿಗೆ ಆಡುತ್ತಿದ್ದಾಗ ಒಂದು ಹೊಸ ಅನುಭವವಾಯಿತು. ಅದೊಂದು ಸಾಮಾನ್ಯವಾದ ೫೦೦ ಮಿಲೀ ನೀರಿರೋ ಪ್ಲಾಸ್ಟಿಕ್ ಬಾಟಲ್, ಎಲ್ಲರೂ ನೀರು ಕುಡಿಯೋ ಹಾಗೆ ನಾನೂ ನೀರು ಕುಡಿಯುತ್ತೇನಾದ್ದರಿಂದ ಅದರಲ್ಲೇನೂ ವಿಶೇಷವಿಲ್ಲ! ಅರ್ಧ ನೀರು ಕುಡಿದ ಬಾಟಲಿ ಮುಚ್ಚುಳ ಹಾಕಿ ಬದಿಗೆ ಇಡುವಾಗ ಕಂಪ್ಯೂಟರ್ ಕೀ ಬೋರ್ಡ್ ಪಕ್ಕ ನನಗೆ ಅಡ್ಡವಾಗಿ (horizontal) ಬಿದ್ದಿತು, ಅದನ್ನು ಅಲ್ಲಿಂದಲೇ ಕೇರಮ್ ಬೋರ್ಡ್ ಸ್ಟ್ರೈಕರ್‌ಗೆ ಹೊಡೆದ ಹಾಗೆ ಅದರ ಸ್ಥಳಕ್ಕೆ ಹೋಗುವಂತೆ ಅದರ ಬುಡಕ್ಕೆ ಬೆರಳಿನಿಂದ ಹಗುರವಾಗಿ ತಳ್ಳಿದೆ. ಏನಾಶ್ಚರ್ಯ, ನಾನು ಒಮ್ಮೆ ತಳ್ಳಿದರೆ ಅದು ಎರಡು ಬಾರಿ ಮುಂದೆ ಹೋಯಿತು! ಹೀಗೆ ಮತ್ತೆ ಮತ್ತೆ ಮಾಡಿದಾಗಲೂ ನಾನು ಒಮ್ಮೆ ತಳ್ಳಿದ್ದಕ್ಕೆ ಅದು ಒಂದು ರೀತಿಯ ಜರ್ಕೀ ಮೋಷನ್‌ನಲ್ಲಿ ಒಟ್ಟು ದೂರವನ್ನು ಎರಡು ಸಮನಾದ ಇಂಟರ್‌ವಲ್‌ನಲ್ಲಿ ಕ್ರಮಿಸತೊಡಗಿತು.
ಇದೇ ಪ್ರಯೋಗವನ್ನು ನಾನು ಖಾಲೀ ಹಾಗೂ ತುಂಬಿದ ನೀರಿನ ಬಾಟಲಿಗಳೊಂದಿಗೆ ಮಾಡಿದಾಗ ಅವು ಕೇವಲ ಒಂದೇ ಬಾರಿ ಮುಂದೆ ಹೋಗುತ್ತಿದ್ದವು. ಖಾಲಿ ಇದ್ದ ಬಾಟಲಿ ಸ್ವಲ್ಪ ಹೆಚ್ಚು ದೂರ ಹೋಗುವಂತೆ ಕಂಡುಬಂದರೂ, ದೂರದಲ್ಲಿ ಅಂತಹ ವ್ಯತ್ಯಾಸವೇನೂ ಇರಲಿಲ್ಲ. ಅದೇ ತುಂಬಿದ ಬಾಟಲಿ ತನ್ನ ಭಾರಕ್ಕೆ ಹೆಚ್ಚು ದೂರ ಹೋಗಲಿಲ್ಲ, ಅದನ್ನು ಸ್ಥಳಾಂತರ ಮಾಡುವುದಕ್ಕೆ ಹೆಚ್ಚು ಶಕ್ತಿಯ ಅವಶ್ಯಕತೆ ಸಹಜವಾಗಿ ಇತ್ತು.
ಈ ಅರ್ಧ ತುಂಬಿದ ಬಾಟಲಿಯ ಕಥೆ ಬೇರೆ - ನಾನು ಒಮ್ಮೆ ಕೊಟ್ಟ ಜರ್ಕಿಗೆ ಅದು ಎಷ್ಟು ದೂರವನ್ನು ಕ್ರಮಿಸುತ್ತಿತ್ತೋ, ಅಷ್ಟೇ ದೂರವನ್ನು ಅದರ ಒಳಗಿರುವ ನೀರು ಕೊಟ್ಟ ಜರ್ಕಿಗೆ ಕ್ರಮಿಸುತ್ತಿತ್ತು. ಆ ಬಾಟಲಿಯಲ್ಲಿ ದೆವ್ವವೇನೂ ಇರಲಿಲ್ಲ! ನಾನು ಪ್ರತೀಸಾರಿ ಪುಶ್ ಕೊಟ್ಟಾಗಲೂ ಅದು ಎರಡು ರೀತಿಯಲ್ಲಿ ಕೆಲಸ ಮಾಡುತ್ತಿತ್ತು, ಒಂದು ಇಡಿಯ ಬಾಟಲಿಯನ್ನು ಸ್ಥಳಾಂತರ ಮಾಡುವುದು, ಮತ್ತೊಂದು ಅದರೊಳಗಿನ ಅರ್ಧ ತುಂಬಿದ ನೀರನ್ನು ಸ್ವತಂತ್ರವಾಗಿ ಸ್ಥಳಾಂತರ ಮಾಡುವುದು. ಹೀಗೆ ಸ್ವತಂತ್ರವಾಗಿ ಸ್ಥಳಾಂತರಗೊಂಡ ನೀರಿನ 'ಅಲೆ'ಯ ಹೊಡೆತ ಬಾಟಲಿಯ ಎರಡನೇ ಚಲನೆಗೆ ಕಾರಣವಾಗಿತ್ತು.
ಅಂದರೆ, ಬಾಟಲಿಯ ನೀರಿನ ಚಲನಶಕ್ತಿ (kinetic energy) ಹೊರಗಿನಿಂದ ನೋಡಿದಾಗ ಅಥವಾ ಒಟ್ಟಿನಲ್ಲಿ ಬಾಟಲಿಯ ಪ್ರಚನ್ನ ಶಕ್ತಿಯಾಗಿ (potential energy) ಕಂಡು ಬಂದಿದ್ದೂ ಅಲ್ಲದೇ ಒಂದು ಸಣ್ಣ ಪುಶ್ (ಅವಕಾಶ) ಅನ್ನು ಬಳಸಿಕೊಂಡು ಅದು ಅದೇ ನೇರದಲ್ಲಿ ದುಪ್ಪಟ್ಟು ಮುಂದೆ ಹೋಗಿದ್ದನ್ನು ನೋಡಿ 'ಎಲೇ, ಅವಕಾಶವಾದಿ ಅರ್ಧ ತುಂಬಿದ ಬಾಟಲಿಯೇ!' ಎಂದು ನಾನು ಮೂಗಿನ ಮೇಲೆ ಬೆರಳಿಡುವಂತಾಯಿತು. ಖಾಲಿ ಬಾಟಲಿಗಳು ಹಾಗೂ ತುಂಬಿದ ಬಾಟಲಿಗಳ ಸ್ಥಿತಿ ನೋಡಿ ಸ್ವಲ್ಪ ತಕ್ಕಮಟ್ಟಿಗೆ ಬೇಸರವೂ ಆಯಿತು.
***
ಬಾಟಲಿಗಳಾಗಲೀ, ಕೊಡಗಳಾಗಲೀ 'ತುಂಬೋ'ದಕ್ಕೆ ಬಹಳ ಸಮಯಬೇಕು, ಒಮ್ಮೆ ತುಂಬಿದ ಮೇಲೆ ಅವುಗಳು ಒಂದು ರೀತಿ ದೊಡ್ಡ ಸಂಶೋಧನೆ ಮಾಡಿದವರ ಹಾಗೆ - ಕಡಿಮೆ ವಿಷಯಗಳ ಬಗ್ಗೆ ಹೆಚ್ಚು ಗೊತ್ತು, ಹೆಚ್ಚಿನ ವಿಷಯಗಳ ಬಗ್ಗೆ ಕಡಿಮೆ ಗೊತ್ತು ಅನ್ನೋ ಹಾಗೆ. ಅದೇ ಅರ್ಧ ತುಂಬಿದ ಕೊಡಗಳ ಕಥೆಯೇ ಬೇರೆ, ಅವುಗಳು ಯಾವಾಗಲೂ ಗೊಣಗುತ್ತಲೇ ಇರುತ್ತವೆ, ತಮ್ಮ ಅವಕಾಶ (space) ಕೇವಲ ಅರ್ಧವಷ್ಟೇ ತುಂಬಿರೋದರಿಂದ ಎಷ್ಟು ಹೊತ್ತಿಗೂ ಏನನ್ನು ಬೇಕಾದರೆ ಅದನ್ನು 'ತುಂಬಿ'ಕೊಳ್ಳುವುದಕ್ಕೂ ಸೈ ಎನ್ನುವ ಮನೋಭಾವನೆಯನ್ನು ಪ್ರದರ್ಶಿಸಿ ಒಂದು ರೀತಿ ಕೆಟ್ಟ ನಗುವನ್ನು ತುಟಿಗಳ ಮೇಲೆ ಲೇಪಿಸಿಕೊಂಡಿರುತ್ತವೆ. ಒಮ್ಮೊಮ್ಮೆ ನಮ್ಮೂರಿನ ಅವಕಾಶವಾದೀ ಪುಡಾರಿಗಳಂತೆ ಅವು ಕಂಡು ಬಂದರೂ, ಅವುಗಳ ಅರ್ಧ ತುಂಬಿದ ಸ್ಥಿತಿಯ ಮಟ್ಟಿಗೆ ನನಗೆ ಕನಿಕರವಿದೆ. ಅವುಗಳ ಕಂಠ ಪಟ್ಟಿಯ ಮೇಲೆ ಇನ್ನರ್ಧವನ್ನು ಏಕೆ, ಯಾವುದರಿಂದ ತುಂಬಿಕೊಳ್ಳಲಾಗಲಿಲ್ಲ ಎನ್ನುವ ಸದಾ ತೆರೆದ ಸವಾಲಿದೆ. ತುಂಬಿದ ಕೊಡವನ್ನು ಬಳಸಿದಾಗ ಖಾಲಿ ಆಗಿ ಅರ್ಧವಾಗಿ ಕಂಡು ಬಂದ ಕೊಡಗಳಿಗಿಂತಲೂ ತಮ್ಮ ಜಾಯಮಾನದಲ್ಲಿ ಅರ್ಧಕ್ಕಿಂತಲೂ ಹೆಚ್ಚು ತುಂಬದ ಕೊಡಗಳ ಮೇಲೆಯೇ ನನಗೆ ಮಮಕಾರ ಹೆಚ್ಚು. ನೀವು ಮಾನಕ ವಿಚಲನೆ (standard deviation) ಯನ್ನು ಲೆಕ್ಕ ಹಾಕಿ ನೋಡಿದರೆ ಅರ್ಧ ತುಂಬಿದವುಗಳೇ ಹೆಚ್ಚು ಇದ್ದಂತೆ ಕಾಣಿಸುತ್ತವೆ. ಹೀಗೆ ಅರ್ಧ ತುಂಬಿಕೊಂಡ, ಅರ್ಧವಾದ, ಎಂದೂ ತುಂಬದ ಕೊಡ ಬಾಟಲಿ ಇತ್ಯಾದಿ container ಗಳ ಸ್ಥಿತಿಗತಿಯ ಬಗ್ಗೆ ನನಗೆ ಸ್ವಲ್ಪ ಹೆಚ್ಚು ಕನಿಕರ ಕೂಡಾ.
***
ಹೀಗೆ ಅರ್ಧ ತುಂಬಿದ ಬಾಟಲಿಯ ಪ್ರಯೋಗದ ಮಾತು ಎಲ್ಲೆಲ್ಲಿಗೋ ಹೋಯಿತು - ಈ ಪ್ರಯೋಗದ ನಿಷ್ಪತ್ತಿ (inference) ಏನೂ ಅಂದರೆ ಅರ್ಧ ತುಂಬಿದ ಬಾಟಲಿಗಳು ಒಂದು ರೀತಿ 'ಸು ಅಂದ್ರೆ ಸುಕ್ಕಿನುಂಡೆ...' ಅನ್ನೋ ಜಾಯಮಾನದವು, ಒಂದು ಸಾರಿ ಹೇಳಿದ ಮಾತನ್ನು ಚಾಚೂ ತಪ್ಪದೇ ಪಾಲಿಸುವಂತಹವು, ಸ್ವಲ್ಪ ಪುಶ್ ಕೊಟ್ಟಿದ್ದನ್ನು ಮನನ ಮಾಡಿಕೊಂಡು ತಮ್ಮ ಶಕ್ತ್ಯಾನುಸಾರ ಕಷ್ಟ ಪಡುವಂತಹವು. ನನಗೆ ತೂಕವಾಗಿದ್ದುಕೊಂಡು ಚಲನೆಗೆ, ಬದಲಾವಣೆಗೆ ಆಷ್ಟೊಂದು ಮನಸ್ಸು ಮಾಡದ ತುಂಬಿದವುಗಳಿಗಿಂತ, ಬದಲಾವಣೆಗೆ ತಮ್ಮನ್ನು ಯಾವಾಗಲೂ ತೆರೆದಿಟ್ಟುಕೊಂಡ ಅರ್ಧ ತುಂಬಿದವುಗಳು ಹಾಗೂ ಅವುಗಳ ಒಡನಾಟ ಹೆಚ್ಚು ಇಷ್ಟವಾಯಿತು ಎಂದು ಹೇಳುವುದಕ್ಕೆ ಹೀಗೆ ಬರೆಯಬೇಕಾಯಿತು!
ಅರ್ಧ ತುಂಬಿದವುಗಳಲ್ಲದೇ, ತುಂಬಿದವುಗಳು ತುಳುಕೋದಕ್ಕೆ ಸಾಧ್ಯವೇ?
3 comments:
iga gothyathu office nalli enu amdthera antha :P
Was Just searching for kannada blog and came across ur s ... :) Nice read...chennagi bareetheera ... Eega swalpa busy ideeni, matte bandu oduteeni ...
chennagide nimma lekhana
Post a Comment