ಜ್ಞಾನಪೀಠ ಎಂದರೆ ಸುಮ್ಮನೆಯೇ?
೧೯೯೮ ರಲ್ಲಿ ಕಾರ್ನಾಡರಿಗೆ ಜ್ಞಾನಪೀಠ ಪ್ರಶಸ್ತಿ ಬಂದಾಗ ನನ್ನ ಇ-ಮೇಲ್ ಅಡ್ರೆಸ್ ಪುಸ್ತಕದಲ್ಲಿರುವ ಕನ್ನಡಿಗ ಹಾಗೂ ಕನ್ನಡಿಗರಲ್ಲದ ಸ್ನೇಹಿತರಲ್ಲಿ ನಾನು ಈ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದೆ. ಕೆಲವರು ಶಬಾಷ್ ಎಂದರೆ ಇನ್ನು ಕೆಲವರು 'ಜ್ಞಾನಪೀಠದ ಮೌಲ್ಯವೇ ದೊಡ್ಡದೇ ಹಾಗಾದರೆ...' ಎಂದು ಪ್ರಶ್ನಿಸಿದ್ದರು. ನಮ್ಮ ಕನ್ನಡದ ಪರಂಪರೆಯಲ್ಲಿ ಕೆಲವರಿಗೆ ಈ ಪ್ರಶಸ್ತಿ ಸಿಗಬೇಕೆಂದು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಲಾಬ್ಬಿಯಿಂಗ್ ನಡೆದಿದೆ ಎಂದೂ, ಜ್ಞಾನಪೀಠ ಪ್ರಶಸ್ತಿಗೆ ಹಿಂದಿದ್ದ ಮೌಲ್ಯಗಳಿಲ್ಲ ಎಂತಲೂ ಬೇಕಾದಷ್ಟು ಕಡೆ ಓದಿದ್ದೇನೆ ಆದರೂ ನಮ್ಮಲ್ಲಿಯ ಕವಿ-ಸಾಹಿತಿಗಳನ್ನು ಬಲವಾಗಿ ಮೆಚ್ಚಿಕೊಳ್ಳುವ ನಾನು, ನಮ್ಮ ಸಾಹಿತ್ಯದ ಮಟ್ಟ ಕಡಿಮೆ ಎಂದು ಯಾರೂ ದೂರಿದ್ದನ್ನು ಈವರೆಗೂ ಕೇಳಿಲ್ಲ.
***
ಬೇಂದ್ರೆ, ಕುವೆಂಪುರವರನ್ನು ವ್ಯಕ್ತಿಗತ ಭೇಟಿಯಾಗಿ ಮಾತನಾಡಿಸುವಷ್ಟು ನಾನು ಬೆಳೆದಿರಲಿಲ್ಲ, ಬೇಂದ್ರೆಯವರು ತೀರಿಕೊಂಡಾಗ ಆಗಿನ್ನೂ 'ನಾದಲೀಲೆ'ಯ ಗುಂಗಿಗೆ ಬೀಳುತ್ತಿದ್ದವನು ನಾನು. ನನ್ನ ಅಣ್ಣ ಎಲ್.ಬಿ.ಕಾಲೇಜಿನಲ್ಲಿ ಕನ್ನಡ ಮೇಜರ್ ಓದಿದವನು, ಹಾಗೂ ನನ್ನ ಅಕ್ಕಂದಿರೂ ತಕ್ಕ ಮಟ್ಟಿಗೆ ಕನ್ನಡ ಸಾಹಿತ್ಯವನ್ನು ಓದುತ್ತಿದ್ದವರಾದ್ದರಿಂದ ಪುಸ್ತಕಗಳ ಒಡನಾಟ ನನಗೆ ಸಹಜವಾಗೇ ಇತ್ತು. ನನ್ನ ಅಣ್ಣ ಎಲ್.ಬಿ.ಕಾಲೇಜಿನ ಇಬ್ಬರು ಕನ್ನಡ ಉಪನ್ಯಾಸಕರನ್ನೂ ಬಹಳ ಹಚ್ಚಿಕೊಂಡಿದ್ದ - 'ರ್ಏಣುಕಪ್ಪ ಗೌಡರ ಕೈಯಲ್ಲಿ ನಾದಲೀಲೆ ಕೇಳಬೇಕು ಅದರ ಮಜಾನೇ ಬೇರೆ', ಅಥವಾ 'ಪ್ರಭುಸ್ವಾಮಿ ಮಠ್ ಅವರು ಸಖಿಗೀತ ಬಾಳ ಚೆನ್ನಾಗಿ ಮಾಡ್ತಾರೆ' ಅಂತ ಆವಾಗಾವಾಗ್ಗೆ ಹೇಳುತ್ತಲೇ ಇರ್ತಿದ್ದನಾದ್ದರಿಂದ ನನಗೆ ಈ ಪುಸ್ತಗಳಲ್ಲಿ 'ಅಂಥಾದ್ದೇನೈತಿ' ಎಂದು ಕುತೂಹಲ ಮೂಡಿ ಅದನ್ನು ಓದುತ್ತಿದ್ದುದು, ನನ್ನ ಅಣ್ಣನ ನೋಟ್ಸುಗಳನ್ನು ನೋಡುತ್ತಿದ್ದುದು ಇನ್ನೂ ಚೆನ್ನಾಗಿ ನೆನಪಿದೆ.
'ಎಲ್.ಬಿ.ಕಾಲೇಜಿನಲ್ಲಿ ನಾನು ಓದಬೇಕು' ಅನ್ನೋದು ನನ್ನ ಅಣ್ಣ ನನ್ನ ಮೇಲೆ ಇಟ್ಟಿದ್ದ ಆಸೆಗಳಲ್ಲಿ ಒಂದು - ಮುಂದೆ ಗವಾಸ್ಕರ್ ಥರಾ ಆಡಬೇಕು ಎಂದು ಕ್ರಿಕೇಟಿನ ಬಗ್ಗೆ ಎಡಬಿಡದೇ ಕೋಚಿಂಗ್ ನೀಡಿದ್ದೂ ಅಲ್ಲದೇ ಶಾಲೆಯ ಟೂರ್ನಮೆಂಟ್ ಕ್ರಿಕೇಟ್ ಮ್ಯಾಚ್ ಒಂದರಲ್ಲಿ ನಾನು ಬೌಂಡರಿ ಹೊಡೆದರೂ 'ಆ ಬಾಲನ್ನ ಹಂಗ್ ಆಡ್ತಾರಾ?' ಅಂಥ ನನಗೇ ಕಪಾಳಕ್ಕೆ ಬಾರಿಸಿದ ಮನುಷ್ಯಾ ಅವನು! ಫಸ್ಟ್ ಪಿ.ಯು.ಸಿ.ಗೆ ಸೇರಿಸುವಾಗ ನನಗೆ ಮೊದಲ ಭಾಷೆ ಕನ್ನಡ, ಎರಡನೇ ಭಾಷೆ ಇಂಗ್ಲೀಷು ಎಂದೇ ಸೇರಿಸಿದ್ದವನನ್ನು ನಾನು ನನ್ನ ಮೈಸೂರು ಹಿಂದೀ ಪ್ರಚಾರ ಪರಿಷತ್ತಿನ ಪರೀಕ್ಷೆಗಳಿಗೆ ಓದಿ ಹಿಂದಿ ಕಲಿತದ್ದೆಲ್ಲಾ ವೇಷ್ಟ್ ಆಗುತ್ತದೆ ಎಂದು ಹತ್ತಾರು ಬಾರಿ ಬೇಡಿಕೊಂಡ ಮೇಲೆ ಕನ್ನಡದ ಬದಲಿಗೆ ಹಿಂದಿಯನ್ನು ಪ್ರಥಮ ಭಾಷೆಯಾಗಿ ತೆಗೆದುಕೊಳ್ಳುವ ಪರ್ಮಿಷನ್ ಕೊಟ್ಟಿದ್ದ. ಆದರೆ ರ್ಏಣುಕಪ್ಪ ಗೌಡರ ಕನ್ನಡ ಪಾಠದ ಮೇಲೆ ಕುತೂಹಲವಿದ್ದ ನಾನು ಎಷ್ಟೋ ಸಾರಿ ಅವರ ಕನ್ನಡ ತರಗತಿಗಳಲ್ಲಿ 'ಹೊರಗಿನವ'ನಾಗಿ ಕುಳಿತು ಕೇಳಿದ್ದಿದೆ - ಮುಂದೆ ಪ್ರಭುಸ್ವಾಮಿ ಮಠರೂ ಹಾಗೂ ರೇಣುಕಪ್ಪ ಗೌಡರೂ ನನಗೆ ಅಲ್ಲಲ್ಲಿ ಸಹಾಯ ಮಾಡುತ್ತಿದ್ದರು - ನಾನು ನನ್ನ ಕವನಗಳ ಕಟ್ಟೊಂದನ್ನು ಪ್ರಭುಸ್ವಾಮಿ ಮಠರ ಮನೆಗೆ ತೆಗೆದುಕೊಂಡು ಹೋಗಿ ಕೊಟ್ಟಿದ್ದೆ, ಅದನ್ನು ಅವರು ಓದಿ ಕವನಗಳಲ್ಲಿ ಮೆಚ್ಚಿದ ಹಾಗೂ ಮೆಚ್ಚದ ಅಂಶಗಳನ್ನು ವಿವರವಾಗಿ ಹೇಳಿದ್ದರು. ಅಲ್ಲದೇ, ರೇಣುಕಪ್ಪ ಗೌಡರು 'ದೇವರ ಭಯವೇ ಜ್ಞಾನದ ಆರಂಭ' ಎಂದು ಯಾವುದೋ ತರಗತಿಯಲ್ಲಿ ಹೇಳಿದ್ದನ್ನು ನಾನು ಅವರ ಸ್ಟಾಫ್ ರೂಮಿನಲ್ಲಿ ಪ್ರಶ್ನಿಸಿ ಅವರಿಂದ ಧೀರ್ಘವಾದ ಉತ್ತರಗಳನ್ನು, ವಿವರಣೆಗಳನ್ನು ಪಡೆದಿದ್ದೆ. ಮೊದಲನೇ ಭಾಷೆಯಾಗಿ ಹಿಂದಿ ಕಲಿಕೆಯನ್ನು ಮುಂದುವರೆಸಿದ್ದು ಎಲ್ಲೂ ನನಗೆ ತೊಂದರೆಕೊಡಲಿಲ್ಲ - ಶಾರ್ಟ್ ಟರ್ಮ್ನಲ್ಲಿ ಯೂನಿವರ್ಸಿಟಿಗೆ ಹೆಚ್ಚು ಅಂಕ ಪಡೆದವನೆಂದು ಸಾವಿರಾರು ರೂಪಾಯಿ ವಿದ್ಯಾರ್ಥಿವೇತನ ಬಂದು ಆಗಿನ ಕಾಲದಲ್ಲಿ ಬಹಳ ಅನುಕೂಲವಾಗಿದ್ದೂ ಅಲ್ಲದೇ ಲಾಂಗ್ ಟರ್ಮ್ನಲ್ಲಿ ಹಿಂದೀ ಪಾಠ ಮಾಡುತ್ತಿದ್ದ ಸಂಸ್ಕೃತ ಪಂಡಿತರಾದ ವಿ.ಎಮ್. ಶರ್ಮರು ಲೈಫ್ ಲಾಂಗ್ ಮಿತ್ರರಾದರು.
ನಾನು ಸೈನ್ಸ್ ಓದುವುದರ ಬದಲಿಗೆ ಭಾಷೆಯನ್ನೇ ಇನ್ನಷ್ಟು ಓದಿದ್ದರೆ ಎಂದು ಎಷ್ಟೋ ಸಾರಿ ಅನ್ನಿಸಿದೆ, ಏಕೆಂದರೆ ನಾನು ಎಲ್.ಬಿ.ಕಾಲೇಜಿನಲ್ಲಿ ಕಳೆದ ಐದು ವರ್ಷಗಳನ್ನು ನೆನಪಿಗೆ ತಂದುಕೊಂಡಂತೆಲ್ಲ, ರೇಣುಕಪ್ಪ ಗೌಡರು, ಪ್ರಭುಸ್ವಾಮಿ ಮಠರು, ಶರ್ಮರಷ್ಟೆ ನೆನಪಿಗೆ ಬರೋದಲ್ದೇ ಇಂಗ್ಲೀಷ್ ಡಿಪಾರ್ಟ್ಮೆಂಟಿನ ಟಿ.ಪಿ.ಅಶೋಕ, ಜಶವಂತ ಜಾದವ್ ಹಾಗೂ ಗುರುರಾವ್ ಬಾಪಟ್ ಇವರೂ ಕೂಡ ಬಹಳ ಹತ್ತಿರದವರಾಗಿ ಕಂಡುಬರುತ್ತಾರೆ. ಟಿ.ಪಿ.ಅಶೋಕ್ ಅವರು ಪರೀಕ್ಷೆಯ ಉತ್ತರ ಪತ್ರಿಕೆಗಳನ್ನು ತಿದ್ದಿ 'ಎಷ್ಟು ಕೆಟ್ಟದಾಗಿ ಬರೆದಿದ್ದೀಯೆ' ಎಂದು ತೋರಿಸಿದ್ದೂ ಅಲ್ಲದೇ ನಾನು ಯಾವುದೋ ಪ್ರಬಂಧದಲ್ಲಿ 'ಸತ್ಯಕ್ಕೆ ಸನ್ನಿಹಿತವಾದ' ಎಂದು ಬರೆಯುವುದರ ಬದಲಿಗೆ 'ಸತ್ಯಕ್ಕೆ ಹತ್ತಿರವಾದ' ಎಂದು ಬರೆದರೆ ಏನಾಗುತ್ತದೆ ಎಂದು ತಮ್ಮ ಕನ್ನಡಕದೊಳಗಿಂದ ಪಿಳಿಪಿಳಿ ಕಣ್ಣನ್ನು ಬಿಟ್ಟು ಪ್ರಶ್ನೆಯನ್ನು ಕೇಳಿದ್ದರು, ಆಗ ಅದಕ್ಕೆ ನನ್ನ ಬಳಿ ಯಾವುದೇ ಉತ್ತರವಿರಲಿಲ್ಲವಾದರೂ ಅಂದು ಸಾಧಿಸಿಕೊಂಡಿದ್ದು ನನಗೆ ಚೆನ್ನಾಗಿ ನೆನಪಿದೆ.
ಇಂಗ್ಲೀಷಿನ ಜಾದವ್ ಅವರ ಸಹವಾಸದಿಂದ ಫಿಲಂ ಕ್ಲಬ್ ಮೆಂಬರ್ ಆಗಿ ಪ್ರಪಂಚದ ನಾನಾ ಭಾಷೆಗಳ ಚಿತ್ರಗಳನ್ನು ನೋಡಿ ಚರ್ಚಿಸಿದ್ದೂ ಅಲ್ಲದೇ ಆಗಾಗ್ಗೆ ಹೆಗ್ಗೋಡಿನ ನೀನಾಸಂ ಗೂ ಹೋಗಿ ಬರುತ್ತಿದ್ದೆವು. ನನ್ನ ಸಹಪಾಟಿ ವಾಸುದೇವನ ತಂದೆ ಹುಚ್ಚಪ್ಪ ಮಾಸ್ತರರು ಜಾನಪದ ಅಕಾಡೆಮಿಯ ಸದಸ್ಯರಾದ್ದರಿಂದ ವಾಸು ಹಾಗೂ ವಾಸುವಿನ ಕುಟುಂಬದವರೆಲ್ಲರಿಗೂ ನಾಟಕಗಳನ್ನು ಆಡುವ ಹಾಗೂ ನೋಡುವ ಹುಚ್ಚು ಇತ್ತು. ನಾನು ಕಾಲೇಜಿನ ಎಷ್ಟೋ ರಜಾದಿನಗಳನ್ನು ವಾಸುವಿನ ಮನೆಯಲ್ಲಿ ಕಳೆದದ್ದಿದೆ - ಕನ್ನಡದ ಹಲವು ನಿಯತಕಾಲಿಕಗಳಾದ ಕಸ್ತೂರಿ, ಶೂದ್ರ, ಇತ್ಯಾದಿಗಳ ಪ್ರತಿಯೊಂದು ಪ್ರತಿಯೂ ಲಭ್ಯವಿರುತ್ತಿದ್ದುದಷ್ಟೇ ಅಲ್ಲದೇ ಅವರ ಮನೆಯಲ್ಲಿ ಒಂದು ಚಿಕ್ಕ ಲೈಬ್ರರಿಯೇ ಇತ್ತು. ರೇಣುಕಪ್ಪ ಗೌಡರು ಯಾವಾಗಲೂ ಹೇಳುತ್ತಿದ್ದರು - ಪುಸ್ತಕಗಳನ್ನು ಹೇಗೆ ಓದಬೇಕು ಎಂದರೆ ಜಾನುವಾರು ಬ್ಯಾಣದಲ್ಲಿ ಹುಲ್ಲನ್ನು ಮೆಂದಹಾಗಿರಬೇಕು ಎಂದು. ಹೀಗೆ ಆಗಾಗ್ಗೆ ನೀನಾಸಂ ಗೆ ಹೋಗಿ ಬರುತ್ತಿದ್ದಾಗ, ವಾಸುವಿನ ಜೊತೆ ಒಡನಾಡಿಕೊಂಡಿದ್ದಾಗಲೆ ನನಗೆ ಚಂದ್ರಶೇಖರ ಕಂಬಾರರ ದರ್ಶನವಾದದ್ದು. ಮುಂದೆ ಅವರ ಸಮಗ್ರ ಬರಹಗಳನ್ನು ಓದಿದೆನಾದರೂ ಮೊದಮೊದಲಿಗೆ ಅವರ ಪರಿಚಯವಿರಲಿಲ್ಲ, ವಾಸುವಿನ ತಂದೆ ಮತ್ತು ಸಂಗಡಿಗರು ಜೈಸಿದನಾಯ್ಕ, ಜೋಕುಮಾರ ಸ್ವಾಮಿ, ಸಂಗ್ಯಾ-ಬಾಳ್ಯಾ ಮುಂತಾದ ನಾಟಕಗಳನ್ನು ದೇಶಾದ್ಯಂತ ಆಡುತ್ತಾ, ಕಂಬಾರರ ಪದಗಳನ್ನು ಹಾಡುತ್ತ ಕಂಠಪಾಠ ಮಾಡಿಕೊಂಡಿದ್ದರು - ವಾಸು ಮತ್ತು ವಾಸುವಿನ ಅಣ್ಣ ಜಯರಾಮ ನನಗೆ ಕಂಬಾರರ 'ಅಂಜೂರಿ ಬನದಾಗಾs ನಾ ಹ್ಯಾಂಗಾs ಇರಲೇ' ಹಾಡನ್ನು ಹೇಳಿಕೊಟ್ಟು ಮುಂದೆ ಅದಕ್ಕೆ ನಮ್ಮ ವಿಶ್ವವಿದ್ಯಾನಿಲಯದ ಮಟ್ಟದಲ್ಲಿ ಬಹುಮಾನಗಳಿಸುವಂತೆಯೂ ಮಾಡಿದ್ದರು.
ನನ್ನ ಎರಡನೇ ಅಣ್ಣನಿಗೂ ಸಹ ಯಾವುದೋ ಒಂದು ತರಗತಿಯಲ್ಲಿ ಜೈಸಿದನಾಯ್ಕ ನಾಟಕವಿತ್ತು - ಅದರಲ್ಲಿನ ಬೆಳಗಾವಿ ಕನ್ನಡ, ಪಾತ್ರಗಳ ಮೂಲಕ ಹುಟ್ಟುವ ಪರಿಸರ ಹಾಗೂ ಆಡು ಮಾತುಗಳಲ್ಲಿನ ನೈಜತೆ ಇವೆಲ್ಲವೂ ನನ್ನನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದವು, ಮುಂದೆ ಈ ಮೆಚ್ಚುಗೆಯೇ ಕುತೂಹಲವಾಗಿ 'ಇನ್ನೇನಿದೆ ನೋಡೋಣ' ಎನ್ನುವಂತೆ ಕಂಬಾರರ ಲಭ್ಯವಿದ್ದ ಎಲ್ಲ ಪುಸ್ತಕಗಳನ್ನೂ ಓದಿಸಿ, ಅವುಗಳ ಬಗ್ಗೆ ಅಲ್ಲಲ್ಲಿ ಚರ್ಚಿಸುವಂತಾಗಿತ್ತು. ವಾಸು ನನಗಿಂತಲೂ ಚೆನ್ನಾಗಿ ಹಾಡುತ್ತಿದ್ದ, ಆದರೆ ಅವನು ತನ್ನ ಕಂಠವನ್ನು ಎಲ್ಲೂ ಬಹುಮಾನ ಗೆಲ್ಲುವ ಸ್ವರ್ಧೆಗಳಲ್ಲಿ ಬಳಸಿಕೊಂಡಿದ್ದನ್ನು ನಾನು ನೋಡಲಿಲ್ಲ - ಅವನ ಬಾಯಿಂದ 'ಅಪ್ಪಾ ಸೂತ್ರಧಾರ ಕೇಳ...', 'ಮರೆತೇನೆಂದರೆ ಮರೇಲಿ ಹೇಂಗs', 'ಅಗಲೀ ಇರಲಾರೆನೋ ನಿನ್ನನ್ನಾ...' ಮುಂತಾದ ಹಾಡುಗಳನ್ನು ಕೇಳಬೇಕು, ಕಂಬಾರರ ಆ ಹಾಡುಗಳಿಗೆ ಒಂದು ಹೊಸ ಅರ್ಥವೇ ಹುಟ್ಟಿಕೊಳ್ಳುತ್ತಿತ್ತು.
***
ಒಮ್ಮೆ ಜ್ಞಾನಪೀಠ ಪ್ರಶಸ್ತಿಯನ್ನು ಪಡೆದ ಭಾಷೆಗೆ ಮತ್ತೆ ಅದೆಷ್ಟೋ (ಐದು ಇರಬೇಕು) ವರ್ಷಗಳ ನಂತರವೆ ಕನ್ಸಿಡರ್ ಮಾಡುತ್ತಾರೆಂತಲೂ, ಮೊದಲಿನ ಹಾಗೆ 'ನಾಕು-ತಂತಿ', 'ಚಿಕವೀರ ರಾಜೇಂದ್ರ' ಮುಂತಾದ ಏಕಕೃತಿಗಳ ಮೇಲೆ ಪ್ರಶಸ್ತಿಯನ್ನು ಕೊಡದೇ, ಕವಿ ಅಥವಾ ಬರಹಗಾರರ ಸಮಗ್ರ ಕೊಡುಗೆಯನ್ನು ಗಮನಿಸಿ ಪ್ರಶಸ್ತಿಯನ್ನು ಕೊಡುವಂತೆ ಕಟ್ಟಳೆಯನ್ನು ಬದಲಾಯಿಸಿದ್ದಾರೆಂತಲೂ ಕೇಳಿದ್ದೇನೆ. ಈ ಯಾವ ನಿಟ್ಟಿನಿಂದ ನೋಡಿದರೂ ಕನ್ನಡದಲ್ಲಿ ಅಗ್ರಮಾನ್ಯರಾಗಿ ನನ್ನ ಕಣ್ಣಿಗೆ ಕಂಡುಬರುವವರು ಕಂಬಾರರೇ, ಆದ್ದರಿಂದಲೇ ಮುಂದೆ ಕನ್ನಡಕ್ಕೆ ಮತ್ತೊಂದು ಜ್ಞಾನಪೀಠದ ಗರಿ ಮೂಡಿತೆಂದರೆ ಕಂಬಾರಿಂದಲೇ ಎಂದು ನಂಬಿಕೊಂಡಿರುವವ ನಾನು. ಮೈಸೂರು-ಮಂಗಳೂರಿನವರಿಗೆ ಅವರ ಭಾಷೆ ಮೇಲ್ನೋಟಕ್ಕೆ ಸ್ವಲ್ಪ ಒರಟು, ಕಷ್ಟವೆಂದು ಕಂಡು ಬಂದರೂ ಒಮ್ಮೆ ಅವರ ಬರಹದ ಸವಿ ಹತ್ತಿತೆಂದರೆ ಒಂದು ರೀತಿ ಜೋನಿ ಬೆಲ್ಲವನ್ನು ತಿಂದರೆ ಇನ್ನೂ ತಿನ್ನಬೇಕು ಎಂಬಂತೆ ಆಗುವ ಹಾಗೆ ಆಗುತ್ತದೆ. ನಿಮಗೆ ನನ್ನ ಮೇಲೆ ನಂಬಿಕೆ ಇರದಿದ್ದರೆ ನಾನು ಹೇಳಿದೆನೆಂದು ಅವರ ಕಾಡುಕುದುರೆಯನ್ನು ಎರಡು ಸಾರಿ ಓದಿ ನೋಡಿ ನಿಮಗೇ ಗೊತ್ತಾಗುತ್ತದೆ. ಇನ್ನು ಕಂಬಾರರ ಹಾಡುಗಳನ್ನು ಅವರ ಬಾಯಿಂದಲೇ ಕೇಳುವ ಭಾಗ್ಯವೇನಾದರೂ ನಿಮಗೆ ಲಭಿಸಿದರೆ ಅದನ್ನು ಯಾವ ಕಾರ್ಅಣಕ್ಕೂ ತಪ್ಪಿಸಿಕೊಳ್ಳಬೇಡಿ - ಕಂಬಾರರ ಹಾಡುಗಳಲ್ಲಿನ ವಸ್ತುಗಳನ್ನು ಎಸ್.ಪಿ. ಬಾಲಸುಬ್ರಮಣ್ಯಂ (no offense) ಕಂಠದಲ್ಲಿ ಕೇಳಿದಾಗ ಪೇಟೇ ಹುಡುಗ ಹಳ್ಳಿಯಲ್ಲಿ ಕಳೆದುಕೊಂಡ ಹಾಗಾಗುತ್ತದೆ, ಬೇಕಾದರೆ ನೀವೇ 'ಕಾಡು ಕಾಡೆಂದರೆ' ಕೇಳಿ ನೋಡಿ.
***
ನಾನು ಇತರ ಭಾರತೀಯ ಭಾಷೆಗಳಲ್ಲಿನ ಸಾಹಿತ್ಯದ ಬಗ್ಗೆ ಅಲ್ಲಲ್ಲಿ ಕೇಳಿದ್ದೇನೆ, ಅನುವಾದವಾದವುಗಳನ್ನು ಶಕ್ತ್ಯಾನುಸಾರ ಓದಿದ್ದೇನೆ, ಹಾಗೂ ಮಲಯಾಳಂ, ಬೆಂಗಾಲೀ ಮತ್ತು ಹಿಂದೀ ಭಾಷೆಯಲ್ಲಿ ಹುಟ್ಟಿರಬಹುದಾದ ಸಾಹಿತ್ಯವನ್ನು ಕನ್ನಡದ ಬೆಳವಣಿಗೆಗೆ ಹೋಲಿಸಿಕೊಂಡು ಕೆಲವು ಸಾರಿ ತಲೆಕೆಡಿಸಿಕೊಂಡಿದ್ದೇನೆ. ಇವೆಲ್ಲ ಮಿತಿ ಅಥವಾ ಅನುಭವಗಳಿಂದ ಹೇಳುವುದಾದರೆ ನಮ್ಮ ಕನ್ನಡದ ಸಾಹಿತ್ಯ ಬಹಳ ಅಗಾಧವಾದುದು ಹಾಗು ವಿಸ್ತೃತವಾದದ್ದು, ಈ ನಿಟ್ಟಿನಲ್ಲಿಯೇ ಕನ್ನಡಕ್ಕೆ ಏಳೇನು ಎಪ್ಪತ್ತು ಜ್ಞಾನಪೀಠ ಬಂದರೂ ಕಡಿಮೆಯೇ ಎನ್ನುವವ ನಾನು. ಹೀಗೆ ಹೇಳುವ ಸಮಯದಲ್ಲಿಯೇ ಬಾಪು ಅಂಥವರಿಗೆ ಯಾವ ನೊಬೆಲ್ ಶಾಂತಿ ಪಾರಿತೋಷಕವೂ ಬರಲಿಲ್ಲ ಎನ್ನುವ ವಾಸ್ತವವನ್ನು ಕಂಡು ನನ್ನ ಮೂರ್ಖ ನಿಲುವಿಗೆ ನಿಲುಕಲಾರದ ಸಾಹಿತ್ಯ ಉಳಿದ ಭಾಷೆಗಳಲ್ಲಿ ಇರಲೂಬಹುದು ಎಂಬುದನ್ನೂ ಒಪ್ಪಿಕೊಳ್ಳುತ್ತೇನೆ. ಬೇಂದ್ರೆ-ಕಂಬಾರರಂತಹವರನ್ನು 'ಅನುವಾದಕರಿಗೆ ಸೆಡ್ಡು ಹೊಡೆಯುವವರು' ಎಂದು ಕರೆಯುತ್ತೇನೆ, ಎಂಥ ಇಂಗ್ಲೀಷ್ ಬಲ್ಲ ನಿಪುಣನಿಗೂ ಕಂಬಾರರ ಬರಹಗಳನ್ನು ಇಂಗ್ಲೀಷಿಗೆ ತರುವ ಮಾತು ಸಾಧ್ಯವಿಲ್ಲದ್ದು - ಕನ್ನಡಿಗರಿಗೆ ಅದು ಬಹಳ ಹೆಚ್ಚುಗಾರಿಕೆಯಾದದ್ದಾದರೆ, ಕನ್ನಡೇತರರು ಏನನ್ನು ಕಳೆದುಕೊಂಡಿದ್ದಾರೆಂತಲೇ ಅವರಿಗೆ ಗೊತ್ತಿಲ್ಲ! (they don't know what they don't know ಎನ್ನುವ ಅರ್ಥದಲ್ಲಿ).