ಭುಟ್ಟೋ ಬಂದಳು ಶಾಂತಿ ತಂದಳು!
ಎಂಟು ವರ್ಷದ ಅಜ್ಞಾತವಾಸದ ಬಳಿಕ ಮರಳಿ ಬಂದ ಬೆನಜೀರ್ ತಾವು ತಮ್ಮ ಪ್ರಯಾಣದುದ್ದಕ್ಕೂ ಶಾಂತಿಯ ಕನಸನ್ನು ಕಾಣುತ್ತಿದ್ದರೆ ಅವರು ಕಾಲಿಟ್ಟ ದಿನ ಪಾಕಿಸ್ತಾನದಲ್ಲಿ ಆದದ್ದೇ ಬೇರೆ. ನೂರಾರು ಜನರು ಅಮಾಯಕರು ತಮ್ಮ ಪ್ರಾಣ ಕಳೆದುಕೊಂಡುದಿರಲಿ ಸ್ವತಃ ತಾವೇ ಸ್ವಲ್ಪದರಲ್ಲಿ ಪಾರಾದುದು ಆಶ್ಚರ್ಯದ ಸಂಗತಿ. ಪಾಕಿಸ್ತಾನ ಇತ್ತೀಚಿನ ದಿನಗಳಲ್ಲಿ ನಿಜವಾಗಿಯೂ ಬೇರೆಯೇ ಆದ ದೇಶ, ಅಲ್ಲಿನ ಸುಪ್ರೀಮ್ ಕೋರ್ಟ್ ಪ್ರೆಸಿಡೆಂಟ್ ಮುಷಾರಫ್ ಅವರ ಮೇಲೇ ತಿರುಗಿ ಬಿದ್ದುದೂ, ಮತ್ತೊಬ್ಬ ಮಾಜಿ ಪ್ರಧಾನಿ ನವಾಜ್ ಶರೀಫ್ ಅವರನ್ನು ದೇಶಕ್ಕೆ ಹೊಕ್ಕಿಸದೇ ಹಿಂತಿರುಗಿ ಕಳಿಸಿದ್ದುದೂ ಇತ್ತೀಚಿನ ಬೆಳವಣಿಗೆಗಳಲ್ಲಿ ಒಂದು.
ಅಮೇರಿಕದ ದೃಷ್ಟಿಯಲ್ಲಿ ಪಾಕಿಸ್ತಾನ ಭಯೋತ್ಪಾದಕತೆಯ ಅಲೆಯನ್ನು ಹುಟ್ಟಗಿಸುವ ಪ್ರಯತ್ನದಲ್ಲಿನ ಬಹುಮುಖ್ಯ ಆಟಗಾರ. ಇಂಥ ಒಂದು ನೋಷನ್ಗೆ ವಿರುದ್ಧವಾಗಿ ಭಾರತ ಹಾಗೂ ಉಳಿದ ದೇಶಗಳು ಪಾಕಿಸ್ತಾನದ ವಿರುದ್ಧ ಏನೇ ಹೇಳುತ್ತ ಬಂದಿದ್ದರೂ ಹಾಲೀ ಅಮೇರಿಕದ ಸರ್ಕಾರದ ಸವಾಲುಗಳು ಪಾಕಿಸ್ತಾನವನ್ನು ಪುರಸ್ಕರಿಸುವತ್ತಲೇ ಸಮಯ ವ್ಯಯಿಸುತ್ತಿದೆಯೇ ವಿನಾ ಬೇರೆ ಯಾರ ಮಾತನ್ನೂ ಕೇಳಿಸಿಕೊಳ್ಳುವ ಹಾಗೆ ಕಾಣಿಸುತ್ತಿಲ್ಲ. ಮುಷಾರಫ್ ರಕ್ತ ರಹಿತ ಕ್ರಾಂತಿ ಕಳೆದ ಏಳೆಂಟು ವರ್ಷಗಳಲ್ಲಿ ಬೇಕಾದಷ್ಟನ್ನು ಸಾಧಿಸಿದ್ದರೂ ತಮ್ಮ ದೇಶದ ಜನ ತಮ್ಮ ವಿರುದ್ಧವೇ ತಿರುಗಿ ಬೀಳುವುದನ್ನು ಕನಸು ಮನಸಿನಲ್ಲೂ ಯೋಚಿಸಿರಲಾರದ ಮುಷಾರಫ್ಗೆ ಅಮೇರಿಕ ಹಾಗೂ ಉಳಿದ ಹಿತೈಷಿಗಳ ಮಾತನ್ನು ಕೇಳಿ ಬೆನಜೀರ್ ಅವರನ್ನು ದೇಶದೊಳಕ್ಕೆ ಬಿಟ್ಟುಕೊಂಡು ಒಂದು ರೀತಿಯ ಒಪ್ಪಂದಕ್ಕೆ ಬರದೇ ಬೇರೆ ಗತ್ಯಂತರವಿರದ ಪರಿಸ್ಥಿತಿ ನಿರ್ಮಾಣವಾಗಿತ್ತು. ಪಾಕಿಸ್ತಾನದ ಪ್ರಧಾನಮಂತ್ರಿ ಎನ್ನುವ ಸ್ಥಾನ ರಾಜಕೀಯದ ಉತ್ತುಂಗವನ್ನು ವ್ಯಕ್ತಿಯೊಬ್ಬರಿಗೆ ಕೊಡಿಸಿದರೆ ಅಲ್ಲಿನ ಅಧ್ಯಕ್ಷ ಸ್ಥಾನವಾಗಲೀ, ಮಿಲಿಟರಿ ನಾಯಕತ್ವವಾಗಲೀ ಮತ್ತೊಂದು ಮಹತ್ವದ ಸ್ಥಾನವೇ. ಇಂತಹ ಎರಡು ಬಣಗಳಿಗೆ ಸೇರದೇ ತನ್ನದೇ ಆದ ಪ್ರಾಬಲ್ಯವನ್ನು ಮೆರೆದದ್ದು ಇತ್ತೀಚಿನ ಸುಪ್ರೀಮ್ ಕೋರ್ಟ್ ಬೆಳವಣಿಗೆ. ಪ್ರಜಾಪ್ರಭುತ್ವವಿರದ ದೇಶದಲ್ಲಿ ಸುಪ್ರೀಮ್ ಕೋರ್ಟ್ಗೆ ಒಂದು ಧ್ವನಿಯೆಂಬುದು ಹುಟ್ಟಿದ್ದು ಬಹಳಷ್ಟು ಜನರಿಗೆ ಆಶ್ಚರ್ಯ ಮೂಡಿಸಿದರೂ ಮುಷಾರಫ್ ಬೇರೇನನ್ನು ಮಾಡದೇ ಸುಮ್ಮನೇ ಇದ್ದರೆ ದೇಶಾದ್ಯಂತ ಕ್ರಾಂತಿ ಹುಟ್ಟುವ ಸನ್ನಿವೇಶ ನಿರ್ಮಾಣವಾಗಲು ಇನ್ನು ಹೆಚ್ಚು ದಿನಗಳು ಇದ್ದಂತೆ ಕಂಡು ಬರುತ್ತಿರಲಿಲ್ಲ. ಮುಷಾರಫ್ ಯಾವುದೇ ಎಲೆಕ್ಷನ್ ಮತಗಳನ್ನು ಎಷ್ಟೇ ತಿದ್ದಿ ತನ್ನ ಖುರ್ಚಿಯನ್ನು ಉಳಿಸಿಕೊಂಡರೂ ದೇಶದಾದ್ಯಂತ ಅಮೇರಿಕದ ಗುಲಾಮನನ್ನಾಗಿ ಮುಷಾರಫ್ ಅವರನ್ನು ಜನ ನೋಡುವುದೇ ಅವರ ಮೇಜರ್ ವೀಕ್ನೆಸ್ ಆಗಿ ಕಂಡು ಬರುತ್ತಿತ್ತು. ಇಂತಹ ಸಂದರ್ಭದಲ್ಲಿ ಮುತ್ಸದ್ದಿ ಮುಷಾರಫ್ಗೆ ಬೆನಜೀರ್ ಬಣದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳದೇ ವಿಧಿ ಇರಲಿಲ್ಲ ಎನ್ನುವುದು ಹಲವರ ಅಂಬೋಣ.
ಪಾಕಿಸ್ತಾನ ಪೀಪಲ್ಸ್ ಪಕ್ಷದ ನೇತಾರೆ ಬೆನಜೀರ್ ಭುಟ್ಟೋ ಭ್ರಷ್ಟಾಚಾರದ ಅರೋಪದಲ್ಲಿ ಸಿಕ್ಕಿರುವುದು, ಅವುಗಳ ವಿಚಾರಣೆಗೆ ತೊಡಗಿಕೊಂಡರೆ ಇನ್ನೆಂದೂ ರಾಜಕೀಯ ಆಶೋತ್ತರಗಳಿಗೆ ನೀರು ಹಾಕದ ಪರಿಸ್ಥಿತಿ ನಿರ್ಮಾಣವಾಗುವ ಹಂತ ಒಂದು ಕಡೆ. ಜೊತೆಗೆ ಈಗಾಗಲೇ ತಾವು ಎರಡು ಭಾರಿ ಪ್ರಧಾನಿಯಾಗಿರುವುದರಿಂದ ಮೂರನೇ ಭಾರಿ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಚುಕ್ಕಾಣಿ ಹಿಡಿಯಬೇಕಾಗಿ ಬಂದರೆ ಅಲ್ಲಿ ಕಾನೂನನ್ನು ತಿದ್ದುವ ಅನಿವಾರ್ಯತೆ. ಎಲ್ಲಕ್ಕಿಂತ ಮುಖ್ಯವಾಗಿ ಸಾಮಾನ್ಯ ಜನರ ಮನದಲ್ಲಿನ ಪೀಡೆ ಮುಷಾರಫ್ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ದೇಶದಲ್ಲಿ ಕಾಲಿಡುತ್ತ ಮುಷಾರಫ್ ವಿರುದ್ಧವೇ ಇವತ್ತಲ್ಲ ನಾಳೆ ಎದ್ದು ನಿಲ್ಲಬೇಕಾದ ವಿಪರ್ಯಾಸ ಬೇರೆ.
ಬೆನಜೀರ್ ಭುಟ್ಟೋ ತನ್ನ ರಾಜಕೀಯ ರ್ಯಾಲಿಗಳಲ್ಲಿ ಯಾರನ್ನು ಕುರಿತು ಹೊಗಳುತ್ತಾರೆ ತೆಗಳುತ್ತಾರೆ ಎಂಬುದನ್ನು ಕಾದು ನೋಡಬೇಕು. ಏಳೆಂಟು ವರ್ಷಗಳನ್ನು ಆಳಿದ ಮುಷಾರಫ್ ವಿರುದ್ಧದ ಅಲೆಯನ್ನು ನಾಜೂಕಾಗಿ ಹೇಗೆ ಎತ್ತಿಕೊಂಡು ಜನರ ಮತ ಹಾಗೂ ವಿಶ್ವಾಸವನ್ನು ಗಳಿಸುತ್ತಾರೆ ಎನ್ನುವುದು ದಿನದಿನವೂ ರೋಚಕವಾಗುತ್ತಿದೆ. ಒಂದು ವೇಳೆ ಅಲ್ಲಿ ಮರಳಿ ಪ್ರಜಾಪ್ರಭುತ್ವ ವ್ಯವಸ್ಥೆ ನಿರ್ಮಾಣಗೊಂಡರೆ ಪಕ್ಕದ ಭಾರತದಂತಹ ದೇಶಗಳಿಗೆ ಒಂದು ರೀತಿಯ ಸಮಾಧಾನವಾದರೂ ದೂರದ ಅಮೇರಿಕಕ್ಕೆ ಕಷ್ಟವೇ ಆಗಬಹುದು ತಮ್ಮ ನಿರ್ಣಯಗಳನ್ನು ಮುಂದುವರಿಸಲು. ಭಯೋತ್ಪಾದನೆಯನ್ನು ಹತ್ತಿಕ್ಕುವುದು ಬೆನಜೀರ್ ಅವರಿಗೆ ಬೇಕೋ ಬೇಡವೋ ಅವರ ಪ್ರಣಾಳಿಕೆಯ ಪುಟದ ಹಿನ್ನೆಲೆ. ಪ್ರಪಂಚದ ಅರ್ಥ ವ್ಯವಸ್ಥೆಯೆಲ್ಲ ಏರು ದಿಕ್ಕಿನಲ್ಲಿ ಮುಂದುವರೆಯುತ್ತಿರುವಾಗ ಪಾಕಿಸ್ತಾನ ಹಿಂದುಳಿಯದಂತೆ ಬೆನಜೀರ್ ತನ್ನ ದೇಶವನ್ನು ಮುಂದುವರಿಸುತ್ತಾರೆಯೇ ಎನ್ನುವುದನ್ನು ಕಾದು ನೋಡಬೇಕು. ಎಲ್ಲಕ್ಕಿಂತ ಮುಖ್ಯವಾಗಿ ತಮ್ಮ ರಾಜಕೀಯ ರ್ಯಾಲಿಗಳಲ್ಲಿ ಯಾರೂ ತಮ್ಮ ಮೇಲೆ ಆಕ್ರಮಣ ನಡೆಸದಂತೆ ಬಿಗಿಭದ್ರತೆಯನ್ನು ಮಾಡಿಕೊಳ್ಳುವುದೂ ಅಷ್ಟೇ ಮುಖ್ಯವಾದುದು.
ಪಾಕಿಸ್ತಾನದಲ್ಲಿ ಪ್ರಜಾಪ್ರಭುತ್ವ ಮರುಕಳಿಸಿದಂತೆ ಮುಷಾರಫ್ ಹಿನ್ನೆಲೆಗೆ ಸರಿಯುತ್ತಾರೆ. ಅಲ್ಲಿನ ಯುವ ರಾಜಕೀಯ ಶಕ್ತಿಗಳಿಗೆ ಚಾಲನೆ ದೊರೆಯುತ್ತದೆ. ಇವತ್ತಲ್ಲ ನಾಳೆ ತಾನೂ ಹಿಂತಿರುಗಿ ಮುಖ್ಯವಾಹಿನಿಯಲ್ಲಿ ತೊಡಗಿಕೊಳ್ಳುತ್ತೇನೆ ಎಂದು ಕನಸು ಕಾಣುವ ನವಾಜ್ ಶರೀಫ್ ಅವರಿಗಿಂತಲೂ ಸುಮಾರು ಒಂದು ದಶಕಗಳಲ್ಲಿ ತಮ್ಮ ಹಿತಾಸಕ್ತಿಗಳನ್ನು ಅಂತರಂಗದಲ್ಲಿ ಒತ್ತಿಕೊಂಡ ಅನೇಕ ಯುವ ಮುಖಂಡರುಗಳಿಗೆ ಬೆನಜೀರ್ ಆಗಮನ ಬಹಳಷ್ಟು ಸಹಾಯ ಮಾಡಿದೆ. ಪಾಕಿಸ್ತಾನದಲ್ಲೂ ನಾಯಕರಿದ್ದಾರೆ, ನಡೆಸುವವರಿದ್ದಾರೆ. ಅಲ್ಲೂ ಹೊಸ ಬೆಳಕು ಮೂಡುತ್ತಿದೆ ಎನ್ನುವುದನ್ನು ಯಾರೂ ಅಲ್ಲಗಳೆಯಲಾರರು. ಇತ್ತೀಚಿನ ದಿನಗಳಲ್ಲಿ ಬಹಳಷ್ಟು ನೊಂದ ದೇಶಕ್ಕೆ ಶಾಂತಿಧೂತಳಾಗಿ ಬಂದ ಬೆನಜೀರ್ ಅಧ್ಯಾಯವನ್ನು ಮತ್ತೆ ತೆರೆದುದು ರಕ್ತದೋಕುಳಿಯಿಂದಲೇ ಎನ್ನುವುದು ಮತ್ತೊಂದು ವಿಪರ್ಯಾಸವಲ್ಲದೇ ಇನ್ನೆನು?