ಕೂದಲು ಕತ್ತರಿಸೋರೂ ಪ್ರಶ್ನೆ ಕೇಳ್ತಾರೆ ಅಂದ್ರೆ...
'Was your marriage arranged or you picked your wife?' ಎಂದು ಮೊನ್ನೆ ನೇರ ಮುಖದ ಪ್ರಶ್ನೆಯನ್ನು ಕೇಳಿದ್ದು ಬೇರೆ ಯಾರೂ ಅಲ್ಲ, ನನ್ನ ಸಬ್ಸ್ಟಿಟ್ಯೂಟ್ ಹೇರ್ ಡ್ರೆಸ್ಸರ್ರ್ ಡೆಬಿ. ಭಾನುವಾರ ಬೆಳಿಗ್ಗೆ ಇನ್ನೂ ಕಾಫಿ ಬೀಳದ ನರಮಂಡಲದ ವ್ಯವಸ್ಥೆಯಲ್ಲಿ ಇಂಥ ಪ್ರಶ್ನೆಗೆ ನಾನಂತೂ ತಯಾರಿರಲಿಲ್ಲ. ಒಡನೆಯೇ ನನ್ನ ಮುಖ ಅಚಾನಕ್ ಆಗಿ ಕಷ್ಟದ ಟಾಪಿಕ್ ಅನ್ನು ಎತ್ತಿಕೊಂಡ ವರದಿಗಾರನನ್ನು ಎದುರಿಸುವ ಪ್ರೆಸಿಡೆಂಟ್ ಬುಷ್ ಥರ ಆಗಿ ಹೋಗಿತ್ತು. ನನ್ನ ಮಾಮೂಲಿ ಹೇರ್ ಕಟ್ ಮಾಡುವವಳು ಡಾಲಿ ಎನ್ನುವ ಗುಜರಾತಿ ಹೆಂಗಸು. ಆಕೆ ಯಾವ ಲಂಗು ಲಗಾಮಿಲ್ಲದೇ ಬಿಳಿ-ಕಪ್ಪು-ಕಂದು ಬಣ್ಣದ ಜನರ ಮಾತನಾಡುವುದು ನನಗಿಷ್ಟವಾದರೂ ವೃತ್ತಿಯಲ್ಲಿ ಒಬ್ಬ ಕೂದಲು ಕತ್ತರಿಸುವವಳಾಗಿ ಆಕೆಗೆ ಅವಳ ಮಿತಿ ಇರುವುದು ಮೊದಲ ದಿನದಿಂದಲೇ ಸ್ಪಷ್ಟವಾದ್ದರಿಂದ ನಾನು ಆಕೆಯ ಮಾತುಗಳನ್ನು ಬಹಳ ಮಟ್ಟಿಗೆ ಒಂದು ಕಿವಿಯಿಂದ ಕೇಳಿ ಮತ್ತೊಂದು ಕಿವಿಯಿಂದ ಬಿಟ್ಟರೂ ಎಷ್ಟೋ ಸಾರಿ ಆಕೆಯ ಸ್ಪಷ್ಟವಾದ ನೋಟ ಇಷ್ಟವಾಗಿರೋದು ನಿಜ. ಕೂದಲು ಕತ್ತರಿಸುವವ, ಬಟ್ಟೆ ಇಸ್ತ್ರಿ ಮಾಡಿಕೊಡುವವ, ತರಕಾರಿ ಮಾರುವವ ಹಾಗೂ ಅವರ ಗಿರಾಕಿಯ ನಡುವೆ ಭಾರತದಲ್ಲಿ ಒಂದು ಅನ್ಯೋನ್ಯ ಸಂಬಂಧವಿರುತ್ತದೆ, ಅವರು ಎಷ್ಟೋ ಜನ ಗಿರಾಕಿಗಳ ಜೊತೆ ನಡೆದುಕೊಂಡು ಅವರದ್ದೇ ಆದ ಒಂದು ಮಾತಿನ ವರಸೆಯನ್ನು ಕಂಡುಕೊಂಡಿರುವುದೂ ಅದರಲ್ಲಿ ಕೆಲವೊಮ್ಮೆ ಗಮನ ಸೆಳೆಯುವ ಅಂಶಗಳು ಹೊರ ಬರುವುದನ್ನು ನಾನು ಗಮನಿಸಿದ್ದೆ. ಆದರೆ ಇಲ್ಲಿ ನನ್ನ ಮತ್ತು ನನ್ನ ಕೂದಲು ಕತ್ತರಿಸುವವಳ ಸಂಬಂಧ ಭಾರತದ ಅಂತಹ ಸಂಬಂಧದ ಒಂದು ಸಣ್ಣ ಎಳೆ ಅಷ್ಟೇ, ಅದನ್ನು ಬಿಟ್ಟರೆ ವ್ಯಾಪಾರಿ-ಗ್ರಾಹಕ ಸಂಬಂಧದಲ್ಲಿ ಬೇರೆ ಯಾರು ’ಮನಬಿಚ್ಚಿ’ ಮಾತನಾಡಿದ್ದನ್ನು ನಾನು ಈ ವರೆಗೂ ನೋಡಿಲ್ಲ.
ಕೂದಲು ಕತ್ತರಿಸುವ ವ್ಯಕ್ತಿ ಎಂದರೆ ಕೃತಕವಾದೀತು, ಹಜಾಮ ಎನ್ನೋಣ, ನಾಪಿಗ ಎನ್ನೋಣ - ಹಜಾಮ ಎನ್ನುವುದು ಹಾರ್ಶ್ ಆದರೆ, ನಾಪಿಗ ಎನ್ನುವುದು ತೀರಾ ನುಣುಪಾದೀತು, ಕ್ಷೌರ ಮಾಡುವವನು ಎಂದರೆ ಗ್ರಾಂಥಿಕವಾದೀತು! ಇವೆಲ್ಲ ಬಳಕೆಯಲ್ಲಿ ನೀವು ಬರೀ ಪುಲ್ಲಿಂಗದ ಬಳಕೆಯನ್ನು ಗಮನಿಸಿರಬಹುದು. ಹಜಾಮೆ, ನಾಪಿಗಿತ್ತಿ ಎನ್ನುವ ಪದಗಳು ಇದ್ದಂತೆ ನನಗೆ ತೋರದು. ಅಂದರೆ ಭಾರತದಲ್ಲಿ ಕ್ಷೌರ ಮಾಡುವುದು ಗಂಡಸರು ಮಾಡುವ ಕೆಲಸವೇ ಸರಿ, ಇತ್ತೀಚಿನ ಬ್ಯೂಟಿ ಪಾರ್ಲರ್ಗಳಲ್ಲಿ ಹೆಂಗಸರು ಅದೇನೇನೆಲ್ಲವನ್ನು ಮಾಡಿ ಬೆಚ್ಚಗಿನ ಏರ್ ಕಂಡೀಷನ್ಡ್ ಕೋಣೆಗಳಲ್ಲಿ ಬಹಳಷ್ಟು ಹಣವನ್ನು ಸುಲಿಯುವುದು ನಿಜವಾದರೂ ನನ್ನ ಮತ್ತು ನಮ್ಮೂರಿನ ಹಜಾಮನ ಸಂಬಂಧ ಬಹಳ ಅನ್ಯೋನ್ಯವಾದದ್ದೇ. ಊರಿನಲ್ಲಿ ನಡೆಯುವ ಪ್ರತಿಯೊಂದು ಬದಲಾವಣೆಗಳಿಗೂ ಆತ ಒಂದು ರೀತಿಯ ತೆರೆದ ಕಣ್ಣಿನ ವರದಿಗಾರನಿದ್ದ ಹಾಗೆ. ನೀವು ಯಾವುದೇ ಊರಿನ ಇತಿಹಾಸವನ್ನು ಹುಡುಕಿ ಹೋದರೂ ಆಯಾ ಊರಿನ ಹಜಾಮನ ಬಳಿ ಇರಬಹುದಾದ ಮಾಹಿತಿಗಳು ನಿಮಗೆ ಅಲ್ಲಿನ ಗ್ರಂಥಾಲಯಗಳಲ್ಲಿಯೂ ದೊರೆಯಲಾರವು. ಹೀಗೆ ಒಂದು ಊರಿನ ಸವಿತಾ ಸಮಾಜಕ್ಕೆ ಅವರದ್ದೇ ಆದ ಒಂದು ಕಾಯಕವಿದೆ, ಅದು ಊರಿನ ಇತಿಹಾಸ, ವರ್ತಮಾನವನ್ನು ಯಾವಾಗಲೂ ತಮ್ಮ ಡೇಟಾಬೇಸ್ಗಳಲ್ಲಿ ಅಪ್ಡೇಟ್ ಮಾಡಿಕೊಂಡು ಹೋಗುವುದು.
ಅಮೇರಿಕಕ್ಕೆ ಬಂದವರ ಪಾಡಿನಲ್ಲಿ ಇಲ್ಲಿ ಮೊದಲ ದಿನದಿಂದಲೇ ಮಹಿಳಾ ಕ್ಷೌರಿಕರ ಜೊತೆ ಹೊಂದಿಕೊಳ್ಳುವ ಅನಿವಾರ್ಯತೆ. ನಿಮಗೆಲ್ಲ ಹೇಗೋ ಏನೋ ಗೊತ್ತಿಲ್ಲ, ನನಗಂತೂ ಒಬ್ಬ ಒಳ್ಳೆಯ ಕ್ಷೌರಿಕನನ್ನು ಕಂಡುಕೊಳ್ಳುವುದು ಒಂದು ಒಳ್ಳೆಯ ದಿನಸಿ ಅಂಗಡಿಯನ್ನು ಕಂಡುಕೊಳ್ಳುವಷ್ಟೇ ಮುಖ್ಯ. ಮೊದಮೊದಲ ನಾಚಿಕೆ, ಬಿಂಕ ನನಗಂತೂ ಇಲ್ಲ - ಒಂದು ರೀತಿ ಕರ್ನಾಟಕದ ಜನರು ಬಸ್ಸುಗಳಲ್ಲಿ ಮಹಿಳಾ ಕಂಡಕ್ಟರುಗಳನ್ನು ಸ್ವೀಕರಿಸಿದ ಹಾಗೆ, ಮಹಿಳಾ ಆಟೋ ಡ್ರೈವರುಗಳನ್ನು ಗೌರವಿಸುವ ಹಾಗೇ ನಾನೂ ಹೊಂದಿಕೊಂಡು ಬಿಟ್ಟಿದ್ದೇನೆ. ಕೂದಲು ಕತ್ತರಿಸುವ ವಾತಾವರಣ ಬಹಳ ಮುಖ್ಯವಾದದ್ದು. ನಿಮ್ಮ ಮುಖವನ್ನು ಎಲ್ಲ ಬೆಳಕುಗಳಲ್ಲಿ ತೋರಿಸುವ ಕನ್ನಡಿ ನಿಮ್ಮ ಮುಂದೇ ಇರುತ್ತದೆ, ಜೊತೆಗೆ ಬಹಳಷ್ಟು ಸಾರಿ ಕ್ಷೌರ ಮಾಡುವವರು ನಿಮ್ಮನ್ನುದ್ದೇಶಿಸಿ ಮಾತನಾಡುವಾಗ ನಿಮ್ಮ ಕನ್ನಡಿಯ ಬಿಂಬವನ್ನು ನೋಡುತ್ತಿರುತ್ತಾರೆ ಎಂಬುದೂ ಸ್ಪಷ್ಟ. ಆದ್ದರಿಂದ ಅವರು ಕೇಳುವ ಪ್ರಶ್ನೆಗೆ ನೀವು ಯಾವ ಉತ್ತರ ಕೊಡುತ್ತೀರಿ, ಆ ಉತ್ತರಕ್ಕೆ ತಕ್ಕಂತೆ ನಿಮ್ಮ ಮುಖಭಾವ ಹೇಗೆ ಬದಲಾಗುತ್ತದೆ, ನೀವು ಸುಳ್ಳು ಹೇಳುತ್ತಿದ್ದೀರೋ ಇಲ್ಲವೋ ಎನ್ನುವುದನ್ನು ನಿಮಗೂ ಸ್ಪಷ್ಟ ಪಡಿಸುವ ಒಂದು ಸ್ವಚ್ಛ ಕನ್ನಡಿ ಇರೋದರಿಂದ ನೀವು ಎಷ್ಟು ಸಾಧ್ಯವೋ ಅಷ್ಟು ಸತ್ಯವಂತರಾಗದೇ ಬೇರೆ ದಾರಿಯೇ ಇರೋದಿಲ್ಲ. ನಿಮಗೆ ಗೊತ್ತಿರೋ ಹಾಗೆ ನಿಮ್ಮ ಹಾಗೂ ಕನ್ನಡಿಯಲ್ಲಿನ ನಿಮ್ಮ ಬಿಂಬದ ನಡುವೆ ಒಂದು ಅವಕಾಶವಿರುತ್ತದೆ (space), ಆ ವರ್ಚುವಲ್ ಇಮೇಜ್ ನಿಮ್ಮ ಹಾಗೂ ಕನ್ನಡಿಯ ನಡುವಿನ ಅಂತರದ ಎರಡು ಪಟ್ಟು ದೂರದಲ್ಲಿರುತ್ತದೆ. ಈ ರಿಯಲ್ ಹಾಗೂ ವರ್ಚುವಲ್ ಅವಕಾಶ ಒಂದು ರೀತಿಯ ರಂಗಪ್ರದೇಶವನ್ನು ಅನುಗೊಳಿಸಿ ನೀವು ಹಾಗೂ ನಿಮ್ಮ ನಡತೆ, ಹಾವಭಾವ, ಆಚಾರ-ವಿಚಾರ ಇವುಗಳಿಗೆಲ್ಲಕ್ಕೂ ಬೆಳಕು ತೋರಿ ನಿಮ್ಮನ್ನು ನೀವು ಬೇಡವೆಂದರೂ ಇಬ್ಬಂದಿಗೆ ಸಿಲುಕಿಸಬಲ್ಲದು.
ಸಬ್ಸ್ಟಿಟ್ಯೂಟ್ ಹೇರ್ ಡ್ರೆಸ್ಸರ್ ಡೆಬಿ ಕೇಳಿದ ಪ್ರಶ್ನೆಗೆ ಇಲ್ಲಿನ ರಾಜಕಾರಣಿಗಳು ಹೇಳುವಂತೆ ಸುತ್ತಿ ಬಳಸಿ ಉದ್ದವಾದ ಉತ್ತರವನ್ನು ಕೊಡಬಹುದಿತ್ತು, ಆದರೆ ಹೇರ್ ಸೆಲೂನ್ನಲ್ಲಿ ಅಂತಹ beating around the bush ಮುಮೆಂಟ್ಗಳಿಗೆ ಅವಕಾಶವೇ ಬರೋದಿಲ್ಲ. ನನ್ನ ಮಾಮೂಲಿ ಹೇರ್ ಡ್ರೆಸ್ಸರ್ ಡಾಲಿ ಇರದಿದ್ದುದು ಒಂದು ಬದಲಾವಣೆ, ಅಂತಹ ಬದಲಾವಣೆಯನ್ನು ನಾನೂ ಫೈಟ್ ಮಾಡಬೇಕಾಗುತ್ತದೆ ಹಲವಾರು ವಿಚಾರಗಳಲ್ಲಿ - ಕೂದಲು ಕತ್ತರಿಸುವ ಆಕೆಯ ಕೈಚಳಕ ಹೇಗೋ ಏನೋ ಎನ್ನುವ ಮೂಲಭೂತ ಪ್ರಶ್ನೆಯಿಂದ ಹಿಡಿದು ಆಕೆಯ ಪೊಲಿಟಿಕಲ್, ಧಾರ್ಮಿಕ, ಸಾಂಸ್ಕೃತಿಕ ನೆಲೆಗಟ್ಟಿನ ಹಿನ್ನೆಲೆಯನ್ನು ಅರಿತು ಅಥವಾ ಅದಕ್ಕೆ ಸೆನ್ಸಿಟಿವ್ ಆಗಿದ್ದುಕೊಂಡು ನಾನು ಆಕೆಯೊಡನೆ ಮಾತನಾಡಬೇಕಾಗುತ್ತದೆ. ಇರೋ ಕೆಲವೇ ನಿಮಿಷಗಳಲ್ಲಿ ಆಕೆ ತನ್ನ ಬಗ್ಗೆ ಬಹಳಷ್ಟು ಹೇಳಿ ಬಿಟ್ಟಿದ್ದಳಾದ್ದರಿಂದ ಆಕೆಯೊಡನೆ ವ್ಯವಹರಿಸಲು ನನಗೆ ಯಾವ ಕಷ್ಟವೂ ಆಗಲಿಲ್ಲ. ಇಲ್ಲೇ ನಾವಿರುವ ಊರಿನ ಹತ್ತಿರದಲ್ಲಿಯೇ ಒಂದು ಅಪಾರ್ಟ್ಮೆಂಟ್ ಕಾಂಪ್ಲೆಕ್ಸುಗಳಲ್ಲಿ ನೆಲೆಸಿ ಬಹಳಷ್ಟು ಭಾರತೀಯರೊಡನೆ ಈಗಾಗಲೇ ಸಾಕಷ್ಟು ಒಡನಾಡಿರುವ ಒಮ್ಮೆ ಮದುವೆಯಾಗಿ ಈಗ ಡೈವೋರ್ಸ್ ಪಡೆದಿರುವ ನಲವತ್ತರ ನಡುವಿನ ಪ್ರಾಯದಲ್ಲಿರುವ ಆಕೆಯ ಪ್ರಶ್ನೆಗಳು ಹಾಗೂ ಉತ್ತರ ನೇರವಾದದ್ದೇ. ಅಂತಹ ತಾತ್ಕಾಲಿಕ ಸಂಬಂಧ ಅದೇ ರೀತಿಯ ಸಂವಾದವನ್ನು ಬಳಸುತ್ತದೆ ಹಾಗೂ ಬೆಳಸುತ್ತದೆ. ಆಕೆ ಕೇಳುವ ಪ್ರಶ್ನೆಗಳಿಗೆ Its none of your business ಎನ್ನುವ ಪ್ರಮೇಯವೇ ಬರೋದಿಲ್ಲ! ಆದ್ದರಿಂದಲೇ ಆಕೆಗೆ ನನ್ನ ಉತ್ತರ - ’No and yes. Was I free to pick anyone as my wife? No. Did I pick or chose my wife? Yes.'
ನಿಮಗೇನಾದರೂ ಇದೇ ರೀತಿಯ ಸಂದಿಗ್ಧ ಒದಗಿ ಬಂದಿದೆಯೇ? ಹಾಗೇನಾದರೂ ಆದಲ್ಲಿ ನಾನು ಆಗಾಗ್ಗೆ ಬಳಸುವ ಭಾರತೀಯರನ್ನು ವಿಸ್ತಾರವಾಗಿ ಕವರ್ ಮಾಡುವ ಈ ಕೆಳಗಿನ ಹೇಳಿಕೆಯೊಂದನ್ನು ಬಳಸಿ ನೋಡಿ ನಿಮ್ಮ ಕಷ್ಟ ಸ್ವಲ್ಪ ಕಡಿಮೆಯಾಗಬಹುದು - It varies (in India)...there are one billion people over there and as many cultures!