ನಿಮಗೆ ಗೊತ್ತಿಲ್ಲದಿರಬಹುದು, ೧೯೯೫ ರಲ್ಲಿ ಟೆಕ್ನಾಲಜಿ ಬ್ಯಾಂಡ್ ವ್ಯಾಗನ್‌ನ್ನು ಹತ್ತಲು ನಮ್ಮಲ್ಲಿ ಇದ್ದ ಪೈಪೋಟಿ ಹಾಗೂ ಹುರುಪು. ಆಗ ಸಿಕ್ಕ ಅವಕಾಶಗಳು ವಿಪುಲವಾಗಿದ್ದರೂ ಸರಿಯಾದ ನಿರ್ಣಯವನ್ನು ಸಮಯಕ್ಕೆ ತಕ್ಕಂತೆ ತೆಗೆದುಕೊಳ್ಳದವರು ಕೊನೆಗೆ ಒಂದಲ್ಲ ಒಂದು ರೀತಿಯಲ್ಲಿ ಬೆಲೆತೆತ್ತರು. ಆಗ ಬೆಳಿಗ್ಗೆಗೊಂದು, ಸಂಜೆಗೊಂದು ಎಂದು ವಿಶ್ವ ಮಾರುಕಟ್ಟೆಯಲ್ಲಿ ಸಿಗುತ್ತಿದ್ದ ಕೆಲಸಗಳೂ, ಯಾವುದನ್ನು ತೆಗೆದುಕೊಳ್ಳಬೇಕು ಯಾವುದನ್ನು ಬಿಡಬೇಕು ಎಂದು ಯೋಚಿಸಲು ವ್ಯವಧಾನವೂ ಇಲ್ಲದ ನಮ್ಮ ಪರಿಸ್ಥಿತಿ ಒಂದು ಸೀಜನ್‌ನಲ್ಲಿ ನೀರಿನಿಂದ ಮೇಲೆ ಹಾರುವ ಸ್ಯಾಲ್ಮನ್‌ನ್ನು ಹಿಡಿಯುವ ಕರಡಿಗಳಂತಾಗಿತ್ತು.
***
ಮದ್ರಾಸಿನ ಪೆಂಟಾಫೋರ್ ಮೊಟ್ಟ ಮೊದಲ ಬಾರಿಗೆ ತರಬೇತಿಯನ್ನೂ, ಕೆಲಸವನ್ನೂ ಕೊಟ್ಟು ನನ್ನ ಜೀವವನ್ನು ಉಳಿಸಿದ ಕಂಪನಿಯದು. ನಾನು ಕೈಯಲ್ಲಿದ್ದ ಕಾಸನ್ನೂ ಖರ್ಚು ಮಾಡಿಕೊಂಡು ಇನ್ನೆಲ್ಲೂ ಕೆಲಸವು ಸಿಗದೇ ಹೋದರೆ ಎಲ್ಲಾದರೂ ಹಗ್ಗ ಹುಡುಕುವ ಸ್ಥಿತಿಯಲ್ಲಿದ್ದಾಗ ಕೊನೆಗೂ ಬಹಳ ನಿರೀಕ್ಷೆಯಂತೆ ಸಿಕ್ಕಿದ ಕೆಲಸ ಬದುಕುವ ಉತ್ಸಾಹವನ್ನು ಮರಳಿಸಿತ್ತು. ಆದರೆ ನನ್ನ ಜೊತೆಯವರಿಗೆಲ್ಲ ಕೆಲಸದ ಆರ್ಡರು ಇಂದು ಸಿಕ್ಕಿದರೆ ನನಗೆ ಸಿಕ್ಕಿದ್ದು ಒಂದು ವಾರದ ನಂತರವೇ...ಎಲ್ಲಿ ಹೋದರೂ ಪ್ರತಿಯೊಂದನ್ನೂ ಹೋರಾಡಿಯೇ ಪಡೆಯಬೇಕೆಂಬ ವಿಧಿ ನನ್ನನ್ನು ಇಲ್ಲಿಯೂ ಬಿಡಲಿಲ್ಲ. ನಾನು ಮದ್ರಾಸಿನಲ್ಲಿ ಕೋರ್ಸುಗಳನ್ನು ಮುಗಿಸಿಕೊಂಡು ಒಂದು ವಾರದ ರಜೆಯ ಮಟ್ಟಿಗೆ ಊರಿಗೆ ಹೋಗಿ ಬರೋಣವೆಂದುಕೊಂಡರೆ ಆಗಿದ್ದೇ ಬೇರೆ - ನನ್ನ ಸಂದರ್ಶನವು ತುಂಬಾ ಚೆನ್ನಾಗಿ ಆಗಿತ್ತು, ಇನ್ನೇನು ಕೆಲಸವೂ ಸಿಗುತ್ತದೆ ಎಂಬ ಸಂತೋಷದಲ್ಲಿ ನಾನು ನನ್ನ ಸರಕು ಸಾಮಾನುಗಳನ್ನೆಲ್ಲ ಯಾರದೋ ಕೋಣೆಯಲ್ಲಿಟ್ಟು ಊರಿಗೆ ಹೋಗಿಬರೋಣವೆಂದುಕೊಂಡೆ, ಆದರೆ ಕೆಲಸದ ಆರ್ಡರುಗಳನ್ನು ಇವರು ಕೊರಿಯರ್‌ನಲ್ಲಿ ಕಳಿಸುತ್ತಾರೆಂದು ಯಾರಿಗೆ ಗೊತ್ತಿತ್ತು, ನಾನು ಎಷ್ಟು ಕಾದರೂ ಬರಲೇ ಇಲ್ಲ. ಒಂದು ದಿನ ಬಹಳ ನಿರಾಶೆಯಿಂದ ಇನ್ನೇನು ಕೆಲಸ ಸಿಗಲೇ ಇಲ್ಲವೆಂದುಕೊಂಡು ಸತ್ತಮುಖವನ್ನು ಹೊತ್ತುಕೊಂಡು ಕೇಳಂಬಾಕ್ಕಂನ ಸಾಫ್ಟ್‌ವೇರ್ ಪಾರ್ಕಿಗೆ ಬಂದೆ, ನನ್ನ ಬ್ಯಾಚಿನವರೆಲ್ಲ ಆಗಲೇ ಕೆಲಸಕ್ಕೆ ಸೇರಿಕೊಂಡು ಒಂದು ವಾರವಾಗಿತ್ತು, ಅವರೆಲ್ಲ ಕಂಠ ಕೌಪೀನವನ್ನು (ಟೈ) ಕಟ್ಟಿಕೊಂಡು ಉತ್ಸಾಹದ ಬುಗ್ಗೆಗಳಾಗಿ ಪುಟಿಯುತ್ತಿದ್ದರು, ನಾನು ಯಾವುದೋ ಟಿ ಶರ್ಟೊಂದನ್ನು ಸಿಗಿಸಿಕೊಂಡು ಹೋದವನಿಗೆ ಬೆಳಗ್ಗೆ ಹನ್ನೊಂದು ಘಂಟೆಗೆ ಕಾಫೀ ಬ್ರೇಕ್‌ನಲ್ಲಿದ್ದ ನನ್ನ ಜೊತೆಯವರೆಲ್ಲ ಸಿಕ್ಕು ಕರುಳು ಕಿವುಚಿಕೊಂಡ ಹಾಗಾಯಿತು. 'ಏನೋ, ನಿನಗಿನ್ನೂ ಕೆಲ್ಸಾ ಸಿಗ್ಲಿಲ್ವಾ?' ಎಂದು ಕಿರಣನೋ ಸತ್ಯಬಾಬೂನೋ ಕೇಳಿದ ನೆನಪು, ಅವರೆಲ್ಲ ಕಾಫೀಗೆ ಕರೆದ್ರೂ ನಾನು ಹೋಗಲಿಲ್ಲ. ನಾನು ಮ್ಯಾನೇಜರ್ ಅರುಳಕುಮಾರನ್ ಕಂಡು ಮಾತಾಡಿಹೋಗಬೇಕೆಂದು ಬಂದವನು, ಅಷ್ಟು ಮಾಡಿದ್ದರೆ ಸಾಕು ಎನ್ನುವ ಸ್ಥಿತಿಯಲ್ಲಿದ್ದೆ.
ಕೊನೆಗೂ ಅರುಳಕುಮಾರನ ದರ್ಶನವಾಯಿತು, 'ನೋಡಿ, ನಿಮ್ಮಲ್ಲಿ ನನ್ನದೊಂದೇ ಪ್ರಶ್ನೆ ಇದೆ, ನೇರವಾಗಿ ಹೇಳಿಬಿಡಿ, ನನಗೆ ಇಲ್ಲಿ ಕೆಲಸ ಸಿಗುತ್ತದೆಯೋ ಇಲ್ಲವೋ' ಎಂದು ಪ್ರಶ್ನೆ ಕೇಳಿದೆನೋ ಅಥವಾ ಮೈಯನ್ನು ಹಿಡಿಯಷ್ಟು ಮಾಡಿಕೊಂಡೆನೋ ಯಾರಿಗೆ ಗೊತ್ತು, ನನ್ನ ಪ್ರಶ್ನೆಗೆ ಉತ್ತರವಾಗಿ ಅರುಳಕುಮಾರನ್ ನಕ್ಕು ಬಿಟ್ಟರು, 'ಆಗಲೇ ಆರ್ಡರ್ ಕಳಿಸಿದ್ದೇವಲ್ಲ, ಇನ್ನೂ ಸಿಕ್ಕಿಲ್ಲವೇ!' ಎಂದರು, ನನಗೆ ಹೋದ ಜೀವ ಬಂದಂತಾಯಿತು, 'ಹೋಗಿ, ಕೋಡಂಬಾಕ್ಕಂ ಆಫೀಸಿನಲ್ಲಿ ಕೇಳಿ ನೋಡಿ, ಯಾವ ಅಡ್ರಸ್ಸಿಗೆ ಕಳಿಸಿದ್ದಾರೋ...' ಎಂದುದೇ ತಡ, ನನಗೆ ಮನೋವೇಗದಲ್ಲಿ ಕೇಳಂಬಾಕ್ಕಂನಿಂದ ಕೋಡಂಬಾಕ್ಕಂಗೆ ಹೋಗಬೇಕೆನ್ನಿಸಿದರೂ, ಸುಮಾರು ಇಪ್ಪತ್ತು ಮೈಲಿ ಇದ್ದ ಆ ದೂರವನ್ನು ಕ್ರಮಿಸಲು ಎರಡು ಘಂಟೆಗಳೇ ಬೇಕಾದವು.
ಮಧ್ಯಾಹ್ನ ಒಂದೂವರೆಯ ಹೊತ್ತಿಗೆ ಕೋಡಂಬಾಕ್ಕಂ ಆಫೀಸಿಗೆ ಬಂದು ಏರ್‌ಕಂಡೀಷನ್ಡ್ ರಿಸೆಪ್ಶನಿಷ್ಟ್ ಕೊಠಡಿಯಲ್ಲಿ ಒಂದು ನಿಮಿಷ ತಲೆಯನ್ನು ತಣ್ಣಗಾಗಿಸಿಕೊಂಡು ಹೇಮಾ ಗಣೇಶನ್ ಎನ್ನುವವರ ಹತ್ತಿರ ಹೋಗಿ ನನಗಿನ್ನೂ ಕೆಲಸದ ಆರ್ಡರ್ ಸಿಕ್ಕಿಲ್ಲ ಎಂದು ತೋಡಿಕೊಂಡೆ, ಆಕೆ ಅಲ್ಲಿಯೇ ಹತ್ತಿರದಲ್ಲಿದ್ದ ಕೊರಿಯರ್ ಅಂಗಡಿಯಲ್ಲಿ ವಿಚಾರಿಸಿ ಎಂದು ವಿಳಾಸಕೊಟ್ಟರು. ಅಲ್ಲಿಯೇ ಹತ್ತಿರವಿದ್ದ ಅಂಗಡಿಗೆ ಲಗುಬಗೆಯಿಂದ ನಡೆದರೆ ಅಲ್ಲಿನ ಕ್ಲರ್ಕುಗಳಿಗೆ ನಾನು ಯಾವ ಭಾಷೆಯಲ್ಲಿ ಹೇಳಲಿ, ನನಗೆ ತಮಿಳು ಬಾರದು, ಅವರಿಗೆ ಬೇರೆಯೇನೂ ತಿಳಿಯದು...ಕೊನೆಗೆ ಇದ್ದವರಲ್ಲೇ ನನ್ನ ಮಾತನ್ನು ಲಕ್ಷ್ಯ ಕೊಟ್ಟು ಕೇಳುತ್ತಿದ್ದ ಮತಿವಣ್ಣನ್‌ಗೆ ಸ್ವಲ್ಪ ಸ್ವಲ್ಪ ಇಂಗ್ಲೀಷಿನಲ್ಲೇ ನಿಧಾನವಾಗಿ ಬರೆದು ವಿವರಿಸಿದಾಗ 'ಓ, ಅದಾ...ಗಾಜಿಯಾಬಾದಿಗೆ ಹೋಗಿ ಬಿಟ್ಟಿದೆ!' ಎಂದು ಬಿಟ್ಟ. ಎತ್ತಣ ಆನವಟ್ಟಿ, ಎತ್ತಣ ಗಾಜಿಯಾಬಾದ್? ನಾನು ಉತ್ತರಪ್ರದೇಶದ ಬನಾರಸ್‌ನಲ್ಲೇನೋ ಇದ್ದವನು, ಆದರೆ ಗಾಜಿಯಾಬಾದಿಗೂ ನನಗೂ ಸಂಬಂಧವಿಲ್ಲವೆಂದುಕೊಂಡು ಮುಖ ಸಣ್ಣಗೆ ಮಾಡಿಕೊಂಡಾಗ, ಮತಿವಣ್ಣನು 'ಫೋನ್ ಮಾಡಿ ಕೇಳುತ್ತೇನೆ...' ಎಂದು ಹೇಳಿಬಿಟ್ಟ. ನಾನು ಏನಾದರೂ ಇನ್‌ಫರ್‌ಮೇಷನ್ ಸಿಕ್ಕಿದರೆ ಹೇಮಾಗಣೇಶನ್‌ಗೆ ಹೇಳು ಎಂದು ಆಕೆಯ ನಂಬರ್ ಕೊಟ್ಟು ಪುನಃ ಹೆಡ್ ಆಫೀಸಿಗೆ ಬಂದೆ. ಒಳಗಿನ ಎ.ಸಿ. ಗಾಳಿಗೂ ನನ್ನ ಮನಸ್ಸನ್ನು ತಣ್ಣಗೆ ಮಾಡಲಾಗಲಿಲ್ಲ, ಭಾಷೆ ಬರದ, ಇತರರ ಬವಣೆಯನ್ನು ಕೇಳಲು ಪುರುಸೊತ್ತಿರದ ಯಾರಿಗೂ ನನ್ನ ಕಷ್ಟವನ್ನೂ ಹೇಳಿಕೊಳ್ಳಲಿಲ್ಲ, ಕೋಡಂಬಾಕ್ಕಂ ಆಫೀಸಿನ ಪಕ್ಕದಲ್ಲಿದ್ದ ಥಿಯೇಟರ್‌ನಲ್ಲಿ ಪ್ರದರ್ಶನಕ್ಕಿದ್ದ 'ಟಾಟ್ಟಾ ಬಿರ್ಲಾ' ಚಿತ್ರದ ಮಾರ್ನಿಂಗ್ ಶೋ ಮುಗಿದು ಚಿತ್ರ ಮಂದಿರದ ಮುಂದಿದ್ದ ರಸ್ತೆ ಸ್ವಲ್ಪ ಹೊತ್ತು ಜಾತ್ರೆಯ ಸಂಭ್ರಮವನ್ನುಭವಿಸಿ ಮತ್ತೆ ಖಾಲಿಯಾಯಿತು, ನಾನು ಹೊರಗಡೆಯೇ ಸುಮ್ಮನೇ ನಿಂತು, ಕೂತು, ಸ್ವಲ್ಪ ಹೊತ್ತು ಟೈಂ ಪಾಸು ಮಾಡಲು ನೋಡಿದೆ, ವಾಚಿನಲ್ಲಿದ್ದ ಸೆಕೆಂಡ್ ಮುಳ್ಳು ಎಂದಿಗಿಂತಲೂ ನಿಧಾನವಾಗಿ ಚಲಿಸುವಂತೆ ಕಂಡು ಬಂದಿತು.
ಮಧ್ಯಾಹ್ನ ಎರಡೂವರೆ ಆಗುತ್ತಲೇ ರಿಯಾಲಿಟಿ ಕಿಕ್ ಕೊಡತೊಡಗಿತು, ಬೆಳಿಗ್ಗೆ ಶಾಸ್ತ್ರಕ್ಕೆ ತಿಂಡಿ ತಿಂದಂತೆ ಮಾಡಿ ಕೇಳಂಬಾಕ್ಕಂಗೆ ಓಡಿದವನು ಎರಡೂವರೆವರೆಗೆ ಒಂದು ತೊಟ್ಟು ನೀರನ್ನೂ ಬಾಯಲ್ಲಿಟ್ಟಿರಲಿಲ್ಲ, ಇನ್ನು ರಾತ್ರಿ ಇಲ್ಲೆ ಉಳಿಯಬೇಕೆಂದರೇ ಒಂದೇ ಕೇಳಂಬಾಕ್ಕಂಗೆ ಹೋಗಿ ಅಲ್ಲಿ ಈಗಾಗಲೇ ಕೆಲಸಕ್ಕೆ ಸೇರಿರುವ ಯಾರದ್ದಾದರೂ ಜೊತೆಯಲ್ಲಿ ಅತಿಥಿಯಾಗಿ ನೆಲದ ಮೇಲೆ ಮುದುರಿಕೊಳ್ಳಬೇಕು ಇಲ್ಲಾ ಮದ್ರಾಸು ನಗರದ ಹೊರ ಪ್ರಾಂತ್ಯದಲ್ಲಿರುವ ಪುಳಿಚೆಲ್ಲೂರಿನಲ್ಲಿರುವ ನನ್ನ ಸ್ನೇಹಿತ ಪ್ರಕಾಶನ ಮನೆಗೆ ಹೋಗಬೇಕು, ಹೊರಗಡೆ ರೂಮು ಮಾಡೋಣವೆಂದರೆ ಕೈಯಲ್ಲಿ ಹೇಳಿಕೊಳ್ಳುವಷ್ಟೇನೂ ಕಾಸಿಲ್ಲ. ಕೇಳಂಬಾಕ್ಕಂಗೆ ಅಥವಾ ಪ್ರಕಾಶನ ಮನೆಗೆ ಹೋದರೆ ಅಲ್ಲಿರುವವರಿಗೆಲ್ಲ ನನ್ನ ಕೆಲಸವಿಲ್ಲದ ಪೆಚ್ಚುಮೋರೆಯನ್ನು ತೋರಿಸಿ ಕಥೆಯನ್ನು ಹೇಳಬೇಕಾಗುತ್ತದೆ, ಹೊರಗೆ ಹೋಟೇಲಿನಲ್ಲಿದ್ದರೆ ಕೈಲಿದ್ದ ದುಡ್ಡು ಎಷ್ಟು ದಿನ ಬಂದೀತು, ಇನ್ನೇನು ಮಾಡುವುದು ಎಂದು ಕಳವಳವಾಗತೊಡಗಿತು. ಸುಮಾರು ಮೂರು ಘಂಟೆಯಾಗುತ್ತಿದ್ದಂತೆಯೇ, ಮತಿವಣ್ಣನ್ ನನ್ನನ್ನು ಹುಡುಕಿಕೊಂಡು ಓಡೋಡಿ ಬಂದ 'ಶಾರ್ (ಅವನ ಸರ್ ಉಚ್ಚಾರ), ಸಿಕ್ಕಿತು!' ಎಂದ. ಅವನ ಕೈಯಲ್ಲಿ ನನ್ನ ಕಳೆದುಹೋದ ಆರ್ಡರ್ 'ಹೇಗೆ ಸತಾಯಿಸಿದೆ!' ಎಂದು ನನ್ನನ್ನು ಅಣಕಿಸಿ ನಗುತ್ತಿತ್ತು. ಅವನ ಪ್ರಕಾರ ಆನವಟ್ಟಿಗೆ ಕಳಿಸಿದ ಕೊರಿಯರ್ ಶಿವಮೊಗ್ಗದ ವರೆಗೆ ಹೋಗಿ ಅಲ್ಲಿಂದ ಮುಂದೆ ಕೊರಿಯಲ್ ಸರ್ವೀಸ್ ಇಲ್ಲ ಎಂದು ಹಣೆಯ ಮೇಲೆ ಬರೆಸಿಕೊಂಡು ವಾಪಾಸು ಮದ್ರಾಸಿಗೆ ಬಂದು ಯಾವುದೋ ಅದೃಶ್ಯ ಶಕ್ತಿಯ ಬಲಕ್ಕೊಳಗಾಗಿ ಉತ್ತರ ಪ್ರದೇಶದ ಗಾಜಿಯಾಬಾದಿಗೆ ಹೋಗಿ ಅಲ್ಲಿ ಪುನಃ ಡೆಲಿವರಿಯಾಗದೇ ಮತ್ತೆ ಮದ್ರಾಸಿಗೆ ಬಂದು ಮತಿವಣ್ಣನ ಕೈಗೆ ಸಿಕ್ಕಿತ್ತು, ನಾನು ವಿಳಾಸವನ್ನು ನೋಡಿದೆ ಎಲ್ಲವೂ ಸರಿಯಾಗೇ ಇತ್ತು! ನಾನಂತೂ ಅವನ ಕೈಯನ್ನು ಹಿಡಿದುಕೊಂಡು ನನಗೆ ಬಂದ ಭಾಷೆಗಳಲ್ಲಿ ಥ್ಯಾಂಕ್ಯೂ ಎಂದಿದ್ದೇ ಎಂದಿದ್ದು, ಅವನಿಗೂ ಖುಷಿಯಾಗಿತ್ತು - ನನ್ನಿಂದ ಹಣವನ್ನು ನಿರೀಕ್ಷಿಸಲೂ ಇಲ್ಲ, ನಾನು ಅವೆಲ್ಲ ಫಾರ್ಮಾಲಿಟಿಗಳನ್ನು ಮೀರಿ ಜೊಳ್ಳು ಮುಖದಲ್ಲಿ ನಗೆಯನ್ನು ಸೂಸಲು ಪ್ರಯತ್ನ ಪಡುತ್ತಿದ್ದೆ. ನನ್ನ ಕೈಗೆ ಕೆಲಸದ ಆರ್ಡರ್ ಸಿಗುತ್ತಲೂ ನಾನು ಒಬ್ಬ ಅಫೀಷಿಯಲ್ ಆಗಿ ಹೋಗಿದ್ದೆ, ಕಂಪನಿಯ ಷಟಲ್, ಫೋನು ಮತ್ತಿತರ ಸವಲತ್ತುಗಳನ್ನು ಬಳಸಿಕೊಳ್ಳುವಲ್ಲಿ ಯಾವ ಮುಜುಗರವೂ ಇರಲಿಲ್ಲ!
***
ಹೀಗೆ ಕೆಲಸಕ್ಕೆ ಸೇರಿ ಮೂರು ನಾಲ್ಕು ತಿಂಗಳುಗಳಲ್ಲಿ ಅಟ್ಟ ಹತ್ತಿದ ಮೇಲೆ ಏಣಿಯನ್ನು ನಿರ್ಲಕ್ಷಿಸುವ ಪ್ರಕ್ರಿಯೆ ನಮ್ಮಲ್ಲಿ ಶುರುವಾಗಿತ್ತು. ಪೆಂಟಾಫೋರ್‌ನಲ್ಲಿ ಅಮೇರಿಕಕ್ಕೆ ಕಳಿಸುವುದಿಲ್ಲವೆಂತಲೂ, ಕಳಿಸಿದರೂ ಮೂರು ವರ್ಷಗಳ ಮಹಾ ಬಾಂಡೊಂದನ್ನು ಸೈನ್ ಮಾಡಬೇಕೆಂತಲೂ, ಜಪಾನು, ಥೈಲಾಂಡಿಗೆ ಹೋಗಬಹುದೆಂತಲೂ ಒಂದಿಷ್ಟು ಸುದ್ದಿಗಳು, ಒಂದಿಷ್ಟು ಗಾಳಿ ಮಾತುಗಳು ಅಲ್ಲಲ್ಲಿ ಅನುರಣಿಸತೊಡಗಿದವು. ನಾನು ನನ್ನ ಆಫೀಸಿನ ಚೀಲದಲ್ಲಿ ನನ್ನ ರೆಸ್ಯೂಮೆಯ ಹತ್ತಾರು ಪ್ರತಿಗಳನ್ನೂ, ಒಂದೈವತ್ತು ಬಿಳಿ ಲಕೋಟೆಗಳನ್ನೂ, ಹಲವಾರು ಗಾಂಧೀಮುಖವಿರುವ ಎರಡು ರೂಪಾಯಿ ಸ್ಟ್ಯಾಂಪುಗಳನ್ನು ಇಟ್ಟುಕೊಂಡು ಓಡಾಡತೊಡಗಿದೆ - ಪ್ರತೀ ದಿನ ರಾತ್ರಿ ರೆಸ್ಯೂಮೆ ತಿದ್ದುವುದು, ಪ್ರಿಂಟ್ ಹಾಕುವುದು, 'ಎಕ್ಸ್‌ಪ್ರೆಸ್ ಕಂಪ್ಯೂಟರ್' ಹಾಗೂ 'ಡೇಟಾಕ್ವೆಸ್ಟ್' ಮ್ಯಾಗಜೀನುಗಳಲ್ಲಿ ಬಂದ ಪ್ರತಿಯೊಂದು ಕೆಲಸಕ್ಕೂ ಅಪ್ಲೈ ಮಾಡತೊಡಗಿದೆ, ಅದಕ್ಕುತ್ತರವಾಗಿ ಎನ್ನುವಂತೆ ದಿನಕ್ಕೆರಡು ಪ್ರಿ ಇಂಟರ್‌ವ್ಯೂವ್ ಕರೆಗಳು ಬರತೊಡಗಿದವು - ಲೈಬ್ರರಿಯಲ್ಲಿ ಕೆಲಸ ಮಾಡುತ್ತಿದ್ದ ರೋಸಲಿನ್‌ಳೂ, ಫ್ರಂಟ್ ಡೆಸ್ಕ್‌ನಲ್ಲಿ ಕೆಲಸಮಾಡುತ್ತಿದ್ದ - ಮುಖ ನೆನಪಿಗೆ ಬಂದು ಹೆಸರು ನೆನಪಿಗೆ ಬರದ - ಮತ್ತೊಂದು ಹುಡುಗಿಯೂ ನನ್ನ ಅಗದೀ ಗೆಳೆಯರಾದರು!
ಇವಕ್ಕೆಲ್ಲ ಉತ್ತರವೆನ್ನುವಂತೆ ಒಂದು ದಿನ ಆಫೀಸಿನ ಸಮಯದಲ್ಲೇ ಹನ್ನೊಂದು ಘಂಟೆಯ ಕಾಫೀ ಬ್ರೇಕ್‌ನಲ್ಲಿ ಅಟ್ಲಾಂಟಾದ ಒಂದು ಕಂಪನಿ ನನ್ನನ್ನು ಇಂಟರ್‌ವ್ಯೂವ್ ಮಾಡಿತು. ರೋಸಲಿನ್‌ಳ ಕೃಪೆಯಿಂದ ನಾನು ಈ ಕಾಲೊಂದನ್ನು ಯಾರೂ ಹೆಚ್ಚು ಓಡಾಡದ ಮೂಲೆಯ ಕೊಠಡಿಯೊಂದರಲ್ಲಿ ತೆಗೆದುಕೊಳ್ಳುವಂತಾಯಿತು, ಇಂಟರ್‌ವ್ಯೂವ್ ಮಾಡಿ ನನಗೆ ಆ ಕ್ಷಣದಲ್ಲೇ ಕೆಲಸವನ್ನೂ ಆಫರ್ ಮಾಡಿ ಆರ್ಡರ್ ಕಳಿಸುತ್ತೇವೆ ಎಂದು ಬಿಟ್ಟರು, ನನಗಂತೂ ಅಮೇರಿಕೆಗೆ ಹಾರಿದಷ್ಟೇ ಸಂತೋಷವಾಯಿತು, ಆದರೆ ಆ ಸಂತೋಷ ಹೆಚ್ಚು ಹೊತ್ತು ಇರಲಿಲ್ಲ.
ಆಟ್ಲಾಂಟಾ ಕಂಪನಿಯವರು ಅಪಾಯಿಂಟ್‌ಮೆಂಟ್ ಆರ್ಡರನ್ನು ಫ್ಯಾಕ್ಸ್ ಕಳಿಸುತ್ತೇವೆ ಎಂದು ಹೇಳಿದ್ದರಿಂದ (ಸದ್ಯ ಕೊರಿಯರ್ ಅಲ್ಲ), ನಾನು ಪೆಂಟಾಪೋರಿನ ಫ್ಯಾಕ್ಸ್ ನಂಬರ್‌ನ್ನು ಕೊಟ್ಟು ಭಾರತದ ಸಮಯ ಸಂಜೆ ಏಳೂವರೆಯ ಮೇಲೆ ಫ್ಯಾಕ್ಸ್ ಮಾಡಿ ಎಂದು ಹೇಳಿದ್ದರೆ, ನಾನು ಎಷ್ಟು ಕಾದರೂ ಆ ಸಂಜೆ ಫ್ಯಾಕ್ಸ್ ಬರದೇ ಹೋಯಿತು! ಹೀಗೆ ಏನಾದರೊಂದು ತೊಂದರೆಯಿಲ್ಲದಿದ್ದರೆ ಹೇಗೆ - ರಾತ್ರಿ ಬರುವ ಫ್ಯಾಕ್ಸ್ ಮುಂಜಾನೆ ಎಂಟೂವರೆಗೆ ಬಂದು ನಮ್ಮ ಎಚ್.ಆರ್. ಅಧಿಕಾರಿಗೇ ಸಿಗಬೇಕೆ? ಅಲ್ಲಿಂದ ಶುರುವಾಯಿತು ನೋಡಿ ನನ್ನ ಕಷ್ಟ - ನನಗೆ ಅಟ್ಲಾಂಟಾದಿಂದ ಕೆಲಸ ಆರ್ಡರು ಹಾಡು ಹಗಲೇ ಅಫೀಸಿಗೆ ಬರುವುದು ಎಂದರೇನು, ಅದು ಹ್ಯೂಮನ್ ರಿಸೋರ್ಸ್ ಮುಖ್ಯಸ್ಥನಿಗೆ ಸಿಗುವುದು ಎಂದರೇನು, ನನ್ನ ಬಣ್ಣವೆಲ್ಲ ಬಟಾ ಬಯಲಾಯಿತು, ಇನ್ನೇನು ನನ್ನ ಕಥೆ ಮುಗಿಯಿತು ಎಂದುಕೊಂಡೆ - ಮೊದಲೇ ನನ್ನ ಪೇಪರುಗಳನ್ನೆಲ್ಲ ಪೆಂಟಾಫೋರ್‌ನವರು ತೆಗೆದುಕೊಂಡಿದ್ದರು, ಎಲ್ಲಾದರೂ ಕಳಿಸುತ್ತೇವೆ, ಬಾಂಡಿಗೂ ಸಹಿ ಮಾಡಿರೆಂದು ಅದಕ್ಕೂ ಸಹಿ ಹಾಕಿಸಿಕೊಂಡಿದ್ದರು, ನನ್ನನ್ನು ಮೆಚ್ಚಿಕೊಂಡಿದ್ದವರೆಲ್ಲ, ತಮ್ಮ ನೋಟದಲ್ಲೇ ಚುಚ್ಚುವಂತಾದರು - ಇಷ್ಟೆಲ್ಲಾ ಆದರೂ ನನ್ನ ಹೆಸರಿಗೆ ಬಂದ ಅಪಾಯಿಂಟ್‌ಮೆಂಟ್ ಆರ್ಡರನ್ನು ನನಗೇ ಕೊಟ್ಟಿದ್ದರು, ಅದನ್ನು ತೆಗೆದುಕೊಂಡು ಏನು ಮಾಡುವುದು ಬಿಡುವುದೂ ಗೊತ್ತಾಗಲಿಲ್ಲ. ಅದರಲ್ಲಿ ಮುದ್ರಿಸಿಕೊಂಡ H1b ಹಾಗೂ $41,000 ವರ್ಷದ ಸಂಬಳ ಇನ್ನೂ ಕಣ್ಣ ಮುಂದೆಯೇ ಇದ್ದಂತಿದೆ.
***
ಪೆಂಟಾಫೋರಿನ ಮ್ಯಾನೇಜಿಂಗ್ ಡೈರೆಕ್ಟರ್ ಚಂದ್ರಶೇಖರ್ ಮಹಾ ಒಳ್ಳೆಯ ಮನುಷ್ಯ, ಆದರೆ ಕೇಳಂಬಾಕ್ಕಂನಲ್ಲಿ ಅವರ ಸೆಕ್ರೆಟರಿ ಇದ್ದಾನಲ್ಲ ಅವನು ಒಂಥರಾ ಮುಸುರಿ ಕೃಷ್ಣಮೂರ್ತಿಯ ಸ್ವಭಾವದವನು. ದೇವರು ಕೊಟ್ಟರೂ ಪೂಜಾರಿ ಕೊಡ ಎಂಬಂತೆ ಚಂದ್ರಶೇಖರ್ ನಮ್ಮನ್ನು ನೋಡಿ ನಕ್ಕರೂ ಈ ಮನುಷ್ಯ ನಗುವುದಿಲ್ಲ - ಎಲ್ಲಿ ಬಾಯಿ ತುಂಬಿಕೊಂಡ ಹಲ್ಲುಗಳು ಉದುರಿಬಿಡುತ್ತವೋ ಎಂಬಂತೆ ಯಾವಾಗಲೂ ಮುಖವನ್ನು ಗಂಟು ಹಾಕೇ ಇರುತ್ತಿದ್ದ. ನಾನು ಬಹಳ ಸಮಾಲೋಚನೆ ಮಾಡಿ ಈ ಸಂಕಷ್ಟದಿಂದ ಹೊರಬರಲು ಉಪಾಯವೊಂದನ್ನು ರೂಪಿಸಿದೆ, ಅದರ ಪ್ರಕಾರ ನನ್ನ ಫ್ಯಾಕ್ಸ್‌ನಲ್ಲಿ ಬಂದಿದ್ದ ಆರ್ಡರ್‌ನ್ನು ಹಿಡಿದುಕೊಂಡು ಮಾರನೇ ದಿನವೆ ಕಂಪನಿಯ ಷಟಲ್‌ನ್ನು ಹತ್ತಿ ಕೋಡಂಬಾಕ್ಕಂ ಆಫೀಸಿಗೆ ಬಂದೆ. ಹೆಡ್ ಅಫೀಸಿನಲ್ಲಿ ಚಂದ್ರಶೇಖರ್ ಅವರ ಸೆಕ್ರೆಟರಿ ನನ್ನನ್ನು ಏನು ಮಾಡಿದರೂ ಅಪಾಯಿಂಟ್‌ಮೆಂಟ್ ಕೊಡಲೊಲ್ಲಳು - ಅವಳಿಗೆ ಕಾಲಿಗೆ ಬೀಳುವಂತೆ ಬೇಡಿಕೊಂಡರೂ ಜುಪ್ಪಯ್ಯಾ ಎನ್ನಲಿಲ್ಲ, 'ಎರಡೇ ನಿಮಿಷ ಅವರ ಹತ್ತಿರ ಮಾತನಾಡಿ ಹೊರಬರುತ್ತೇನೆ' ಎಂದು ದೈನ್ಯದಿಂದ ಕೇಳಿದರೂ ಆಕೆ ಒಪ್ಪಲೇ ಇಲ್ಲ, ಅದೇ ಸಮಯಕ್ಕೆ ಎಲ್ಲಿಗೋ ಹೊರಟುನಿಂತಂತೆ ಕಂಡು ಬಂದ ಚಂದ್ರಶೇಖರ್ ಅವರೇ ತಮ್ಮ ಆಫೀಸಿನಿಂದ ಹೊರಗೆ ಬಂದರು, ನಾನು ಸ್ಯಾಲ್ಮನ್‌ಗೆ ಕಾಯುತ್ತಿದ್ದ ಕರಡಿಯಂತೆ ಬಂದ ಅವಕಾಶವನ್ನು ಗಪ್ಪನೆ ಹಿಡಿದುಕೊಂಡು, 'ನಿಮ್ಮಲ್ಲಿ ಒಂದು ಮುಖ್ಯ ವಿಷಯವನ್ನು ಮಾತನಾಡಬೇಕು, ಒಂದು ನಿಮಿಷ ಸಮಯವಿದೇಯೇ?' ಎಂದು ಬಿಟ್ಟೆ, ಇದ್ದುದರಲ್ಲಿಯೇ ಬೆಳ್ಳಗಿದ್ದ ನನ್ನ ಬಿಳಿ ಅಂಗಿಯೋ, ಮುಖದ ಮೇಲೆ ಮನೆ ಮಾಡಿದ್ದ ಕಾತರತೆಯೋ ಮತ್ತೇನೋ ಕ್ಲಿಕ್ ಆಗಿ 'ಸರಿ' ಎಂದು ಬಿಟ್ಟರು, ನಾನು ಅವರ ಜೊತೆಯಲ್ಲಿ ಒಳಗೆ ಹೋದವನು,
'ನಿಮ್ಮಲ್ಲಿ ಮೂರು ವಿಷಯಗಳನ್ನು ಹೇಳುವುದಕ್ಕಿದೆ:
- ನನ್ನ ತಂದೆಯವರು ತೀರಿಕೊಂಡಿದ್ದಾರೆ, ನನಗೆ ಮನೆಯಲ್ಲಿ ತುಂಬಾ ಜವಾಬ್ದಾರಿಯಿದೆ
- ನನ್ನ ಕೈಯಲ್ಲಿ ಅಟ್ಲಾಂಟಾದಿಂದ ಕೆಲಸಕ್ಕೆ ಬಂದು ಸೇರಿಕೊಳ್ಳುವಂತೆ ಅಪಾಯಿಂಟ್‌ಮೆಂಟ್ ಆರ್ಡರು ಕಳಿಸಿರುವುದಿದೆ ನೀವೇ ನೋಡಿ (ಎಂದು ಮುದುರಿರುವ ಪತ್ರವನ್ನು ಅವರಿಗೆ ಕೊಟ್ಟು)
- ಕೇಳಂಬಾಕ್ಕಂನಲ್ಲಿ ನನ್ನ ಪೇಪರುಗಳನ್ನು ಕೊಡುತ್ತಿಲ್ಲ' ಎಂದೆ.
ಚಂದ್ರಶೇಖರ್ ಅವರು ಒಂದೆರಡು ಚಿಕ್ಕ ಪ್ರಶ್ನೆಗಳನ್ನು ಕೇಳಿದರೇ ಹೊರತು ಮತ್ತೆನನ್ನೂ ಮಾತನಾಡಲಿಲ್ಲ, ಆ ಅಪಾಯಿಂಟ್‌ಮೆಂಟ್ ಪತ್ರವನ್ನು ಒಮ್ಮೆ ಓದಿ, ಅದರ ಮಗ್ಗುಲನ್ನು ತಿರುಗಿಸಿ 'ಇವರ ಪೇಪರುಗಳನ್ನು ರಿಲೀಸ್ ಮಾಡಿ' ಎಂದು ಕೇಳಂಬಾಕ್ಕಂ ಕ್ಲರ್ಕಿನ ಹೆಸರಿಗೆ ಷರಾ ಬರೆದುಬಿಟ್ಟರು! ನಾನು ಮತ್ತೆ-ಮತ್ತೆ ಥ್ಯಾಂಕ್ಯೂಗಳನ್ನು ಹೇಳಿ ಅಲ್ಲಿಂದ ಹೊರಬಂದೆ. ಸೆಕ್ರೆಟರಿ 'ಏನೋ ನಡೆಯಬಾರದು ನಡೆದುಹೋಯಿತೋ' ಎನ್ನುವಂತೆ ನನ್ನ ಸಂಭ್ರಮವನ್ನು ನೋಡಿ ಕಣ್ಣನ್ನು ಕಿರಿದುಮಾಡಿಕೊಂಡಳು.
***
ಕೇಳಂಬಾಕ್ಕಂ ಷಟಲ್ ಬಸ್ಸು ಹತ್ತಿದ ನನ್ನ ಸಂತೋಷ ಹೇಳತೀರದು - ಯಾರೊಡನೆಯೂ ಈ ವಿಷಯವನ್ನು ಹೇಳದೇ ದಾರಿಯುದ್ದಕ್ಕೂ ಇಲ್ಲಿನ ಕ್ಲರ್ಕ್‌ಗೆ ಹೇಗೆ ಮಾತನಾಡಿಸಬೇಕು ಎಂದುಕೊಳ್ಳುತ್ತಲೇ ಬಂದೆ, ಚಂದ್ರಶೇಖರ್ ಅವರು ಷರಾ ಬರೆದುಕೊಟ್ಟ ಪತ್ರದ ಫೋಟೋಕಾಪಿಯೊಂದನ್ನು ತೆಗೆದು ನನ್ನ ಬಳಿ ಇಟ್ಟುಕೊಂಡು, ಬಂದು ಸ್ವಲ್ಪ ಹೊತ್ತಿನಲ್ಲಿ ಅವನ ಕಛೇರಿಗೆ ನುಗ್ಗಿ, ಒರಿಜಿನಲ್ ಅನ್ನು ಆ ಕ್ಲರ್ಕಿನ ಮುಂದೆ ತೋರಿಸಿದೆ, ಅವನು ಅದನ್ನು ಎರಡು ಮೂರು ಬಾರಿ ತಿರುತಿರುಗಿಸಿ ನೋಡಿದವನು ಮುಖದ ಬಣ್ಣವನ್ನೇ ಬದಲಾಯಿಸಿಕೊಂಡು ತೀರಾ ಸಪ್ಪಗಾಗಿ ಬಿಟ್ಟ, ಇನ್ನೂ ಹುಡುಗನಾಗಿದ್ದುದರಿಂದ ಹಾರ್ಟ್ ಅಟ್ಯಾಕ್ ಆಗಲಿಲ್ಲ (ನನ್ನ ಪುಣ್ಯ), ಸುಮಾರು ಹೊತ್ತು ಮೌನವಾಗಿ ಯೋಚಿಸಿದವನೇ ಏನೂ ಮಾತನ್ನಾಡದೇ ನನ್ನ ಪೇಪರುಗಳನ್ನೂ, ಮೊದಲೇ ಸಹಿ ಹಾಕಿಸಿಕೊಂಡ ಬಾಂಡಿನ ನಕಲನ್ನು ತಾನಿಟ್ಟುಕೊಂಡು ಒರಿಜಿನಲ್ ಅನ್ನು ನನಗೆ ಕೊಟ್ಟ. 'ಯಾರಿಗೂ ಹೇಳಬೇಡ' ಎಂದು ಹೆದರಿಕೆಯ ಎಚ್ಚರಿಕೆಯನ್ನು ನೀಡುವುದು ಮರೆಯಲಿಲ್ಲ.
ಹೀಗೆ ಮದ್ರಾಸಿನಿಂದ ಬಿಡುಗಡೆ ನೀಡಿದ ಅಟ್ಲಾಂಟ ಕಂಪನಿಯನ್ನು ನಾನು ಸೇರಿಕೊಳ್ಳಲಿಲ್ಲ, ಇನ್ನೂ ಒಂದೆರಡು ದಿನಗಳನ್ನು ಕಳೆದರೆ ಮತ್ತೇನಾದರೂ ಆಫರ್ ಬರುತ್ತವೇನೋ ಎಂದು ನಿರೀಕ್ಷಿಸುತ್ತಿದ್ದವನಿಗೆ ಬಾಂಬೆಯ ಡೇಟಾ ಮ್ಯಾಟಿಕ್ಸ್ ಕಂಪನಿಯನ್ನು ಸೇರಿ ಬಾಂಬೆಯ ಬದುಕನ್ನು ನೋಡುವಂತಾಯಿತು - ಅದರ ಬಗ್ಗೆ ಮುಂದೆಲ್ಲಾದರೂ ಬರೆಯುತ್ತೇನೆ.
***
ನನ್ನಲ್ಲಿಯ ಈ ಅವಕಾಶವಾದಿತನ, ಸುತ್ತಲನ್ನು ಸ್ವಂತದ ಉಪಯೋಗಕ್ಕೆ ಬಗ್ಗಿಸಿಬಿಡುವ ಬುದ್ಧಿ ಎಲ್ಲಿಂದ ಬಂದಿತೋ ಎಂದು ಎಷ್ಟು ತಲೆ ತುರಿಸಿಕೊಂಡರೂ ಇಂದಿಗೂ ತಿಳಿದಿಲ್ಲ - ಆದರೆ, ಇವುಗಳೆಲ್ಲದರ ಹಿಂದೆ ತಂದೆಯನ್ನು ಚಿಕ್ಕ ವಯಸ್ಸಿನಲ್ಲೆ ಕಳೆದುಕೊಂಡಿದ್ದೂ, ಬಡತನದ ಬೇಗೆಯಲ್ಲಿ ಬೆಂದಿದ್ದೂ ಇವೆಲ್ಲವೂ ಸಾಕಷ್ಟು ಪರಿಣಾಮವನ್ನಂತೂ ಬೀರಿವೆ.