Monday, August 21, 2006

ಗೂಗಲ್ ಏಜ್ - ನಿಮಿಗೆಷ್ಟು ವಯಸ್ಸು, ನನಗೆ ೨೫೦ ವರ್ಷ!

ತಮ್ಮ ಮೈಗ್ರೇಷನ್ ಅವಾಂತರದಲ್ಲಿ 'ಅಂತರಂಗ'ವನ್ನು ಗುಡಿಸಿ, ಸಗಣಿ ಹಾಕಿ ಸಾರಿಸಿ ಪ್ರಪಂಚದಲ್ಲಿರುವ ಜಂಕ್ ಕ್ಯಾರೆಕ್ಟರ್‌ಗಳನ್ನೆಲ್ಲ ಸೈಟ್‌ನಲ್ಲಿ ತುಂಬಿ ನನ್ನ ತಲೆಯಲ್ಲಿ ನಡೆಯುವ ಆಲೋಚನೆಗಳಿಗೆ ಕನ್ನಡಿ ಹಿಡಿಯುವಂತೆ ಮಾಡಿತೋರಿಸಲು ಪ್ರಯತ್ನಿಸಿದ ಗೂಗಲ್-ಬ್ಲಾಗರ್ ನವರಿಗೆ ಶಾಪ ಹಾಕಿಕೊಂಡು ಸೈಟನ್ನು ತಿದ್ದಲು ಹೋದ ನನಗೆ ಆಶ್ಚರ್ಯ ಕಾದಿತ್ತು - ಸೈಟಿಗೆ ಈ ರೀತಿಯಾಗಿದೆ ಇನ್ನು ಪ್ರೊಪೈಲ್‌ಗೆ ಏನು ಗತಿಯಾಗಿದೆ ಎಂದು ನೋಡುತ್ತಿರುವಾಗ ದುತ್ತನೆ ಕಣ್ಣಿಗೆ ಬಿದ್ದದ್ದು 'Age: 250'!

ಇದರ ಪ್ರಕಾರ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕೋದಿರಲಿ, ಅಮೇರಿಕಕ್ಕೆ ಸ್ವಾತಂತ್ರ್ಯ ಸಿಗೋದಕ್ಕೆ ಮೊದಲೇ ನಾನು ಹುಟ್ಟಿ ಎರಡೂವರೆ ಶತಮಾನಗಳನ್ನು ಕಳೆದುಬಿಟ್ಟಿದ್ದೇನಲ್ಲಾ ಎಂದು ದಿಢೀರನೆ ತುಂಬಾ ವಯಸ್ಸಾದವರಿಗೆ ಆಗುವಂತೆ ಕೈಕಾಲುಗಳು ಕಂಪಿಸತೊಡಗಿದವು. ಅಥವ 'ಅಂತರಂಗ'ವನ್ನು ಬರೆದೂ ಬರೆದೂ ಇಷ್ಟೊಂದು ಕೃಷವಾಗಿ ಹೋದೆನೆ ಎನ್ನಿಸಿಯೂ ಪಿಚ್ಚೆನಿಸಿತು. ನನಗೇ ಹೀಗಾದರೆ ನನ್ನ ಕಲಸುಮೇಲೋಗರವನ್ನು ತಾಳ್ಮೆಯಿಂದ ಓದಿಕೊಂಡು ಬರುತ್ತಿರುವ ಓದುಗರ ಗತಿ ಏನಾಗಿರಬೇಡ, ಗೂಗಲ್ ನಂಬರ್ ಸಿಸ್ಟಂ‌ನಲ್ಲಿ ಉಳಿದ ಓದಿ ಬರೆಯುವವರೆಲ್ಲರಿಗೆ ಎಷ್ಟೆಷ್ಟು ವಯಸ್ಸಾಗಿದೆ ಎಂದು ಕುತೂಹಲವೂ ಹುಟ್ಟಿತು.

ಅಂತರಜಾಲದಲ್ಲಿ ಅತ್ಯಂತ ವಯಸ್ಸಾದ ಓದುಗ/ಬರಹಗಾರ ಎನ್ನುವ ಕುಖ್ಯಾತಿ ನನ್ನದಾಗಿ ಬಹಳ ದಿನಗಳ ಕಾಲ ನಿಲ್ಲದಿರಲಿ, ಇವರು ನನಗಿಷ್ಟು ವಯಸ್ಸಾಗಿದೆ ಎಂದು ಹೆದರಿಸಿ ಈ ೨೫೦ ಅನ್ನು ಹೇಗೆ ಡಿರೈವ್ ಮಾಡಿದರು ಎಂಬುದನ್ನು ಹುಡುಕುವುದಕ್ಕೂ ಚೈತನ್ಯವಿಲ್ಲದ ಹಾಗೆ ಮಾಡಿಬಿಟ್ಟಿದ್ದಾರೆ. ಇನ್ನು ನಿಜವಾಗಿಯೂ ನನಗೆ ಅಷ್ಟೊಂದು ವಯಸ್ಸಾಗಿ ಜೀವಂತವಾಗೇನಾದರೂ ಇದ್ದರೆ ಹೇಗಿರುತ್ತೇನೋ ಎಂದು ಮೈ ನಡುಕವನ್ನೂ ಹುಟ್ಟಿಸಿಬಿಟ್ಟಿದ್ದಾರೆ. ಏನೋ ಒಂದು ಅರವತ್ ಎಪ್ಪತ್ ವರ್ಷ ಬದುಕ್‌ತೀನಿ ಎಂದುಕೊಂಡವನಿಗೆ ಮೂಗಿನ ಮೇಲೆ ತುಪ್ಪ ಸವರಿ ೨೫೦ ರ ಜಾಕ್‌ಪಾಟನ್ನು ಹೊಡೆಸಿಬಿಟ್ಟಿದ್ದಾರೆ.

'ಅಂತರಂಗ'ವನ್ನು ಸ್ವಚ್ಛಗೊಳಿಸೋದಕ್ಕೆ ಸಾಕಷ್ಟು ಸಮಯಬೇಕು, ನನ್ನ ಹಳೆಯ ಕೊಂಡಿಗಳೆಲ್ಲವೂ ಕೆಲಸಮಾಡುತ್ತಾವೆಂದೇನೂ ಗ್ಯಾರಂಟಿ ಇಲ್ಲವಾದ್ದರಿಂದ ಪ್ರತಿಯೊಂದನ್ನೂ ಪರೀಕ್ಷಿಸಬೇಕು. ಬೇರೆ ಯಾವುದಾದರೂ ವಿಧಾನದಿಂದ ಒಂದೇ ಪಟ್ಟಿಗೆ ಹಳೆಯ ಡಿಸೈನ್‌ಗೆ ಹಿಂತಿರುಗುವ ಹಾಗಿದ್ದರೆ ಎಷ್ಟೋ ಚೆನ್ನಾಗಿತ್ತು. ಸುಮ್ಮನೇ ಅವರ ಟೆಂಪ್ಲೇಟ್‌ಗಳನ್ನು ಇದ್ದ ಹಾಗೇ ಬಳಸಿದ್ದರೆ ಇಷ್ಟೊಂದು ಕಷ್ಟವಾಗುತ್ತಿರಲಿಲ್ಲ, ಈಗ ಸುಮ್ಮನೇ ಆಡುವ ಹಾಗಿಲ್ಲ, ಅನುಭವಿಸುವ ಹಾಗಿಲ್ಲವಾಗಿದೆ - ಈ ರೀತಿ ದೂರುಗಳನ್ನು ಹೇಳಿಕೊಳ್ಳುತ್ತೇನೆಂದೇ ನನಗೆ old school ಎನ್ನುವ ಪಟ್ಟವನ್ನು ಪರ್ಯಾಯವಾಗಿ ಕೊಡುವ ಹಾಗೆ ನನ್ನ ವಯಸ್ಸನ್ನು ೨೫೦ ವರ್ಷಗಳನ್ನಾಗಿ ಮಾಡಿದ್ದಾರೆ! ಇವರ ಪ್ರಕಾರ ೧೭೫೬ ನಾನು ಹುಟ್ಟಿದ ವರ್ಷವಂತೆ!

3 comments:

Anonymous said...

ಬರೆಯೋದರಿಂದ ಆಯಸ್ಸು ಹೆಚ್ಚಾಗತ್ತೆ ಅಂತ ಪ್ರೂವ್ ಮಾಡಿದ್ರಿ :)

ಕೊಡೋದು ಕೊಟ್ರು, ಇನ್ನೂ ಒಂದೈವತ್ತು ಹೆಚ್ಚೇ ಕೊಡಬಾರದಿತ್ತಾ?

bhadra said...

ಅಜ್ಜ, ೨೫೦ ವರ್ಷಗಳ ನಿಮ್ಮ ಅನುಭವದ ಕಥೆ ಹೇಳ್ತೀರಾ? ನಾನು ಬರೆದುಕೊಳ್ತೀನಿ :P

ಅಲ್ಲ ಇಂತಹ ಪ್ರಮಾದ ಹೇಗಾಯ್ತು? ಎಲ್ಲರ ಪ್ರೊಫೈಲ್‍ಗಳಲ್ಲೂ ಹೀಗೆಯೇ ಆಗಿದೆಯಾ? ಸದ್ಯ ವಯಸ್ಸು ಮಾತ್ರ ತಪ್ಪಾಗಿದ್ದರೆ ಪರವಾಗಿಲ್ಲ, ಅದೇ ಗಂಡನ್ನು ಹೆಣ್ಣು, ಮತ್ತು ಹೆಣ್ಣನ್ನು ಗಂಡು ಅಂತ ಮಾಡಿಬಿಟ್ರೆ ಬಹಳ ಕಷ್ಟ.

Satish said...

sritri ಅವರೇ,

ಕೊನೆಗೆ ತ್ರಿಶತಮಾನವನ್ನು ಆಚರಿಸುವ ಹಾಗಾದ್ರೆ ಕಷ್ಟ, ಬೇಡಪ್ಪಾ ಬೇಡ ೨೫೦ ಸಾಕು!


ಮಾವಿನಯನಸ ರೇ,

ನಾನು ಒಂದು ರೀತಿ ಅಜ್ಜನ ಅಜ್ಜ!
ಇನ್ಯಾರ ಪ್ರೊಫೈಲ್‌ನಲ್ಲಿ ಏನನ್ನು ಬದಲಾಯಿಸಿದ್ದಾರೆ ಅನ್ನೋದನ್ನ ವರದಿಮಾಡಲು ಅನ್ವೇಷಿಗಳ ಬ್ಯೂರೋಗೆ ತಿಳಿಸಿದ್ದೇನೆ, ಕಾಯಬೇಕು ಅಷ್ಟೇ.